ಸಾಹಿತ್ಯ ಮತ್ತು ವಿಜ್ಞಾನಗಳು ಮಾನವ ಚಟುವಟಿಕೆಗಳ ಫಲ. ಹೀಗಾಗಿ ಅವು ಎಲ್ಲ ಮಾನವರಿಗೂ ಸೇರಿದ್ದು. `ಬೆಲೆಯಿಂದಂ ಕೃತಿಯಕ್ಕುಮೇ? ಭುವನದಾ ಭಾಗ್ಯದಿನಕ್ಕುಮ್‘ – ಎಂದು ಕನ್ನಡ ಲಾಕ್ಷಣಿಕ ಹೇಳಿದ್ದು ಸಾಹಿತ್ಯ ಮತ್ತು ವಿಜ್ಞಾನ ಎರಡಕ್ಕೂ ಅನ್ವಯಿಸುತ್ತದೆ. ಸಾಹಿತ್ಯವು ಜನಜೀವನದ ವಿವರಣೆ, ವಿಮರ್ಶೆ, ಕನಸುಗಾರಿಕೆ ಮತ್ತು ಹತಾಶೆಗಳನ್ನು ಬಿಂಬಿಸುವುದು. ಬದುಕಿನ ನೇರ ಅನುಭವಗಳಿಗೆ ಸಂಬಂಧಿಸಿದ್ದು. ಆದ್ದರಿಂದ ಜನರಿಗೆ ಆತ್ಮೀಯವಾಗುವಂತಹದು. ಆದರೂ ವಿಜ್ಞಾನವು ಸಾಹಿತ್ಯ ನಿರೀಕ್ಷಿಸಿದ ಮಟ್ಟದಲ್ಲಿ ಜನಜೀವನವನ್ನು ಮುಟ್ಟಿಲ್ಲ ಎಂಬ ಅಭಿಪ್ರಾಯಕ್ಕೆ ಇಂತಹ ಸಮ್ಮೇಳನಗಳ ಅಗತ್ಯ ಬೀಳುವುದೇ ಸಾಕ್ಷಿ. ಸಾಹಿತ್ಯದ ಜನಪ್ರಿಯತೆಗೆ ಮುಖ್ಯ ಅಡ್ಡಿ – ಅಭಿವ್ಯಕ್ತಿಗೊಳಿಸುವ ವಿಧಾನದ ಸಂವಹನ ಸಮಸ್ಯೆ. ಜನರ ಗ್ರಹಿಕೆಯ ಭಾಷೆಗೂ, ಸಾಹಿತಿಯ ಅಭಿವ್ಯಕ್ತಿ ಭಾಷೆಗೂ ಇರುವ ಕಂದರ.

ಆದರೆ ವಿಜ್ಞಾನದಲ್ಲಿ ಚರ್ಚಿತವಾಗುವ ವಿಷಯ ನಿಸರ್ಗಕ್ಕೆ ಸಂಬಂಧಿಸಿದ್ದು. ಮಾನವ ಬದುಕಿಗೆ ವಿಜ್ಞಾನದ ಸಂಬಂಧವನ್ನು ಅನಂತರ ಅರಿಯಬೇಕಾಗುತ್ತದೆ. ವಿಜ್ಞಾನದಲ್ಲಿ ಮಾಹಿತಿಯ ಹಂತ ಹಾಗೂ ಜ್ಞಾನಾರ್ಜನೆಯ ಹಂತಗಳು ಶುದ್ಧ ಬೌದ್ದಿಕ ಚಟುವಟಿಕೆಗಳು. ಜ್ಞಾನದ ಪರಿಣಾಮ ಜನಜೀವನದ ಮೇಲೆ ಪ್ರಭಾವ ಬೀರುವಂತಹದು. ಬಸ್ಸಿನಲ್ಲಿ ಪ್ರಯಾಣವನ್ನು ಆನಂದಿಸುವ ಮನುಷ್ಯ ಯಂತ್ರದ ಬಗ್ಗೆ, ಯಂತ್ರ ತಯಾರಿಕಾ ಲೋಹದ ಬಗ್ಗೆ ಕುತೂಹಲ ತಳೆಯಲಾರ. ಬಸ್‌ನ ಯಂತ್ರ ತಯಾರಿಕೆಗೆ ಈ ಲೋಹವನ್ನೇ ಏಕೆ ಬಳಕೆಮಾಡುತ್ತಾರೆ? ಈ ಆಕೃತಿಯನ್ನೇ ಬಸ್ಸಿಗೆ ನೀಡಿರುವುದೇಕೆ? ಮೊದಲಾದ ಪ್ರಶ್ನೆಗಳು ನಮ್ಮನ್ನೆಂದಾದರೂ ಬಾಧಿಸಿವೆಯೇ? ಸಹಜೀವಿಗಳ ಆಲೋಚನೆ, ಜೀವನ ಶೈಲಿಯ ಬಗ್ಗೆ ಇರುವ ಸಹಜ ಕುತೂಹಲ ಮಾನವ ಪರಿಸರದಲ್ಲಿ ನಡೆಯುತ್ತಿರುವ ನೈಸರ್ಗಿಕ ಪ್ರಕ್ರಿಯೆಯ ಬಗ್ಗೆ, ಕೃತಕ ಸಾಧನಗಳ ಕಾರ್ಯ ಮತ್ತು ರಚನೆಯ ಬಗ್ಗೆ ಉಂಟಾಗುವುದಿಲ್ಲ. ಇದನ್ನು ಜನಪ್ರಿಯ ವಿಜ್ಞಾನ ಬರೆವಣಿಗೆಕಾರರು ಮಾಡಬೇಕಾಗುತ್ತದೆ. ವಿಜ್ಞಾನದ ಪುಸ್ತಕಗಳು ವರ್ಗೀಕೃತವಾದ ಮಾಹಿತಿಯ ಸಂಗ್ರಹಗಳು. ಜನಪ್ರಿಯ ವಿಜ್ಞಾನವು ಸರಳ ಪ್ರಶ್ನೆಗಳಿಂದ ಜನರಲ್ಲಿ ಅಚ್ಚರಿಮೂಡಿಸಿ ಕುತೂಹಲ ತಣಿಸುವ ಪ್ರಯತ್ನ. ಜನಪ್ರಿಯ ವಿಜ್ಞಾನದ ಮೊದಲ ಹಂತವಾದ ಕುತೂಹಲವನ್ನು ಕೆರಳಿಸುವ ಕಾರ್ಯ ವಿಫಲವಾದರೆ ಉಳಿದ ಮಾಹಿತಿಗಳು ಎಷ್ಟೇ ಉಪಯುಕ್ತವಾದರೂ ಜನರನ್ನು ತಲುಪಲಾರವು. ಸ್ವಾರಸ್ಯಕರ ಪ್ರಶ್ನೆಯ ಮಿಂಚಿನ ಸಂಚಾರವಾಗದೆ ರಸ ರೋಮಾಂಚನವಾಗದು. ವೈಯಕ್ತಿಕ ಕಳವಳಗಳನ್ನು ಮರೆಸಿ ಸಾರ್ವತ್ರಿಕ ಕುತೂಹಲಗಳನ್ನು ಮೆರೆಸುವುದು. ಜನಪ್ರಿಯ ವಿಜ್ಞಾನ ಬರೆವಣಿಗೆಯ ಉದ್ದೇಶಗಳಲ್ಲೊಂದು.

ಆದಿಮಾನವ ತನ್ನ ಪರಿಸರದ ಬಗ್ಗೆ ಅಜ್ಞಾನಿಯಾಗಿದ್ದ. ನಿಸರ್ಗದ ಬಗ್ಗೆ ಹೆದರಿ ದೂರವಿರುತ್ತಿದ್ದ. ಇದರ ಪರಿಣಾಮವಾಗಿ ನಿಸರ್ಗವು ಸುರಕ್ಷಿತವಾಗಿತ್ತು. ಆದರೆ ನಿಸರ್ಗ ಪ್ರಕೋಪಗಳಿಗೆ ಗುರಿಯಾಗುತ್ತಿದ್ದ ನಿಸರ್ಗವನ್ನು ಅರಿತು ಆನಂದಿಸುವುದಾಗಲಿ, ನೈಸರ್ಗಿಕ ಸಂಪನ್ಮೂಲವನ್ನು ಕಿತ್ತು ಪ್ರತ್ಯೇಕಿಸಿ ಉಪಯೋಗಿಸಿಕೊಳ್ಳುವುದಾಗಲಿ ಮಾನವನಿಂದ ಆಗುತ್ತಿರಲಿಲ್ಲ. ಆಗ ವಿಜ್ಞಾನ ಈ ಎರಡೂ ಸೌಲಭ್ಯಗಳನ್ನು ಒದಗಿಸಿದ ಕತೆ ಇಂದಿಗೂ ರೋಚಕವಾಗಬಲ್ಲದು. ನಿಸರ್ಗದೆದುರು ಅಸಹಾಯಕನಾಗಿ ನಡುಗುತ್ತಿದ್ದ ಮಾನವ ನಿಸರ್ಗವನ್ನು ಅಸಹಾಯಕ ಸ್ಥಿತಿಗೆ ದೂಡುವ ಅಸಹಾಯ ಶೂರನಾಗಿ ಬೆಳೆದ ಸಾಹಸ ಕತೆ ಅತ್ಯಂತ ಸ್ವಾರಸ್ಯವಾದದ್ದು. ಈ ಬೌದ್ದಿಕ ಸಾಹಸ ಸರಣಿಯನ್ನು ಪತ್ತೆದಾರಿ ಕಾದಂಬರಿಗಿಂತಲೂ ಸ್ವಾರಸ್ಯಕರವಾಗಿ ಹೇಳುವುದು ಶಕ್ಯವಿದ್ದರೂ ಪಠ್ಯಪುಸ್ತಕದ ಮಾದರಿಯ ನೀರಸ ನಿರೂಪಣೆ. ಜನರನ್ನು ವಿಜ್ಞಾನದ ವಿಸ್ಮಯಗಳಿಂದ ವಿಮುಖಗೊಳಿಸಿದೆ. ಈ ಪ್ರವೃತ್ತಿಯನ್ನು ಅದಲು ಬದಲು ಮಾಡುವುದು ಜನಪ್ರಿಯ ವಿಜ್ಞಾನ ಬರವಣಿಗೆಗಾರನ ವೈಶಿಷ್ಟ್ಯ.

ವಿಜ್ಞಾನದ ಅತಿ ಮುಖ್ಯವಾದ ಭಾಗ – ವೈಜ್ಞಾನಿಕ ವಿಧಾನ. ಅತಿ ಹೆಚ್ಚು ಸಂಖ್ಯೆಯ ವಿಜ್ಞಾನ ಪದಧರರು ಹೊರಬರುವ ಈ ದೇಶದಲ್ಲಿ ಅತಿ ಹೆಚ್ಚು ಮೂಢನಂಬಿಕೆಗಳೂ ಇರುವುದು ವಿಚಿತ್ರವೆನಿಸಿದರೂ ನಿಜ. ಇದಕ್ಕೆ ಕಾರಣಗಳು ಹಲವಾರು. ಸದ್ಯದ ಪ್ರಶ್ನೆಯೇನೆಂದರೆ ಈ ದಿಸೆಯಲ್ಲಿ ಜನಪ್ರಿಯ ವಿಜ್ಞಾನ ಲೇಖಕ ಮಾಡಬಹುದಾದದ್ದೇನು? ಲೇಖಕರು ಯಾವುದೇ ವಿಚಾರದಲ್ಲಿ ಬರೆಯಲಿ ಅದನ್ನು ಸಮಸ್ಯೆ – ಪರಿಹಾರದ ರೀತಿಯಲ್ಲಿ ಬರೆಯುವ ಕಲೆ ರೂಢಿಸಿಕೊಳ್ಳುವುದು. ಒಂದು ಸಮಸ್ಯೆಯನ್ನು ಹೇಗೆ ವಿಜ್ಞಾನಿಗಳು ವೈಜ್ಞಾನಿಕ ವಿಧಾನದಿಂದ ವಿಶ್ಲೇಷಿಸುವರೋ / ಪರಿಹರಿಸುವರೋ ಅದೇ ಕ್ರಮದಲ್ಲಿ ನಿರೂಪಿಸುವುದು ಸಾಧ್ಯ. ಇದು ಸ್ವಾರಸ್ಯಕರ ಬರೆವಣಿಗೆ ಆಗುವುದಲ್ಲದೆ ಜನರು ತಮಗರಿವಿಲ್ಲದೆ ವೈಜ್ಞಾನಿಕ ವಿಧಾನವನ್ನು ತಮ್ಮದಾಗಿಸಿಕೊಳ್ಳುವರು. ಇಂತಹ ಬರವಣಿಗೆಗಳಲ್ಲಿ ಸಮಸ್ಯೆಯನ್ನು ರೂಪಿಸುವ ಕಲೆ, ಸಮಸ್ಯೆಗೆ ಕಾರಣವಾದ ಅಂಶಗಳ ಪಟ್ಟಿ ಮಾಡುವಿಕೆ, ಮೇಲುನೋಟದ ಆಲೋಚನೆಗಿಂತ ಭಿನ್ನವಾದ ಪೂರ್ವಗ್ರಹಿಕೆಗಳಾಚೆಗಿನ ಕಾರಣಗಳನ್ನು ಗುರುತಿಸುವ ಕಲೆ, ಅದಕ್ಕೆ ಪರಿಹಾರದ ಸೂಚನೆಯ ಕಲೆ – ಎಲ್ಲವೂ ಮುಖ್ಯವಾದದ್ದೇ.

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಜೀವನ ಶೈಲಿ ರಭಸವಾಗಿ ಬದಲಾಗುತ್ತಿರುವ ಕಾಲ ಇದು. ಇಂತಹ ಸಂದರ್ಭಗಳಲ್ಲಿ ಶ್ರೀಸಾಮಾನ್ಯರು ವಿವೇಚನೆಯಿಲ್ಲದೆ ಹೊಸದನ್ನು ಒಪ್ಪಿಕೊಳ್ಳುವಂತೆ ಮಾಡಲು ಜಾಹಿರಾತುಗಳ ಮಹಾಪೂರವೇ ಇದೆ. ಇಂತಹ ಸಂದರ್ಭದಲ್ಲಿ ಗ್ರಾಹಕ ಸಾಮಗ್ರಿಗಳನ್ನು ಎಷ್ಟು ಬಳಕೆ ಮಾಡಿಕೊಳ್ಳಬೇಕು, ಯಾವುದನ್ನು ಬಳಕೆಮಾಡಿಕೊಳ್ಳಬೇಕು, ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವಾಗ ಕೇವಲ ಆಸೆ, ಆಮಿಷ ಜಾಹೀರಾತಿನ ಮಾಹಿತಿಗಿಂತ ಈ ಬಳಕೆಯಿಂದಾಗುವ ಪರಿಸರ ಹಾನಿ, ಮಾಲಿನ್ಯಗಳಂತಹ ಅಪಾಯಗಳನ್ನು ಹಾಗೂ ಆರ್ಥಿಕ, ಸಾಮಾಜಿಕ ಆರೋಗ್ಯ ಸ್ಥಿತಿಗಳ ಮೇಲೆ ಆಗುವ ಪರಿಣಾಮಗಳನ್ನು ಹೊಣೆಯರಿತ ಗ್ರಾಹಕರಾಗಿ ನಾವು ತಿಳಿಯಬೇಕಾದದ್ದಗತ್ಯ. ಪ್ರತಿಯೊಂದು ಬದಲಾವಣೆಯ ಸಾಧಕಬಾಧಕಗಳ ಚರ್ಚೆಯನ್ನು ಪರಿಣತರಿಗೆ ಬಿಟ್ಟು ಕೈಚೆಲ್ಲಿ ಕೂಡುವಂತಿಲ್ಲ. ಸಾಮಾನ್ಯ ಜನರಿಗೆ ಈ ಬಗ್ಗೆ ಜಾಗ್ರತಿ ಮೂಡಿಸಬೇಕಾದ ಕಾರ್ಯ ಆಗತ್ಯವಾಗಿ ಆಗಬೇಕಾಗಿದೆ.

ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ವೈಯಕ್ತಿಕ ಮಟ್ಟದ ನಿರ್ಧಾರಗಳೇ ಅಲ್ಲದೆ ರಾಷ್ಟ್ರ ಮಟ್ಟದ ನಿರ್ಧಾರಗಳ ಬಗ್ಗೆ ಸಾರ್ವಜನಿಕರು ಸ್ಪಷ್ಟ ನಿಲುವು ತಳೆದು ಆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸಿಕೊಳ್ಳುವಂತೆ ಮಾಡಬೇಕಾದ ಅಗತ್ಯವಿದೆ. ಭಾರತ ಪರಮಾಣು ಬಾಂಬು ತಯಾರಿಸಬೇಕೇ ಬೇಡವೇ? ನ್ಯೂಕ್ಲೀಯ ಶಕ್ತಿಯ ಬಳಕೆಯಿಂದ ವಿದ್ಯುದುತ್ಪಾದನೆ ಮಾಡಬೇಕೇ ಬೇಡವೇ? ಮೊದಲಾದ ಅಂಶಗಳ ಸಾಧಕಬಾಧಕಗಳ ಬಗ್ಗೆ ಜನರಿಗೆ ತಿಳಿಯಹೇಳಿ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ಸರ್ಕಾರವೊಂದೇ ಸಾಲದು, ಸಂಘಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ವಿಜ್ಞಾನ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು. ಒಟ್ಟಿನಲ್ಲಿ ಪ್ರಜೆಯು ದೇಶದ ಆಗುಹೋಗುಗಳಲ್ಲಿ ಸಕ್ರಿಯ ಪಾಲುದಾರ, ಭಾಗವಹಿಸುವಾತ ಆಗಬೇಕಾದರೆ ಜನಪ್ರಿಯ ವಿಜ್ಞಾನ ಬರೆವಣಿಗೆಗಾರರ ಔಚಿತ್ಯದ ಬಗ್ಗೆ ಬೇರೆಹೇಳಬೇಕಾಗಿಲ್ಲ. ಸೃಜನಶೀಲ ಸಾಹಿತ್ಯದಲ್ಲೂ ಪ್ರಾಸಂಗಿಕವಾಗಿ ಇಂತಹ ಚರ್ಚಾಸ್ಪದ ವಿಷಯ ಬಂದರೆ ಇನ್ನೂ ಚೆನ್ನ. ಇದಕ್ಕಾಗಿ ಸಾಹಿತಿಗಳು ಜನಪ್ರಿಯ ವಿಜ್ಞಾನ ಲೇಖಕರು ಒಟ್ಟಿಗೆ ಶ್ರಮಿಸಲು ಅವಕಾಶವಿದೆ. ಮಾನವನ ಅನುಭವದ ಲೋಕ ವಿಸ್ತಾರವಾದದ್ದು. ಅನೇಕ ವೇಳೆ ಆ ಅನುಭವದ ಪರಿಪೂರ್ಣತೆಯುಂಟಾಗುವುದು ಅನುಭವದ ಹಿಂದಿನ ತರ್ಕ ಗ್ರಹಿಸಿದಾಗ ಮಾತ್ರ. ಅನೇಕ ಗಾದೆ, ಒಗಟು, ಸಾಹಿತ್ಯದ ಉದ್ಗಾರಗಳು ಮತ್ತು ಅನುಭವವಾಣಿಗಳು ಬದುಕಿನ ತರ್ಕಕ್ಕೆ ರೂಪಕವಾಗುತ್ತವೆ. ಆದರೆ ಆ ಮಾತುಗಳ ಹಿಂದಿನ ವೈಜ್ಞಾನಿಕತೆ ಸ್ಪಷ್ಟವಾಗಿ ಆಗುವುದಿಲ್ಲ. “ಉಪ್ಪು ತಿಂದವರು ನೀರು ಕುಡಿಯಲೇ ಬೇಕು‘’ – ಎಂಬ ಗಾದೆಯನ್ನೇ ತೆಗೆದುಕೊಳ್ಳಿರಿ. ತಪ್ಪು ಮಾಡಿದವರಿಗೆ ಪ್ರಾಯಶ್ಚಿತ್ತ ಅನಿವಾರ್ಯ ಎಂಬ ಮಥಿಥಾರ್ಥ ಎಲ್ಲರಿಗೂ ತಿಳಿದದ್ದೇ. ಆದರೆ ಉಪ್ಪು ತಿಂದಾಗ ನೀರು ಕುಡಿಯಬೇಕಾಗುವುದಾದರೂ ಏಕೆ? ಈ ಬಗ್ಗೆ ಆಲೋಚನೆಗೆ ನಮ್ಮ ಮನಸ್ಸು ತೊಡಗುವುದೇ ಇಲ್ಲ. ಇಂತಹ ವಿಚಾರವಂತಿಕೆಯ ಓಯಸಿಸ್‌ಗಳನ್ನು ಜನಪ್ರಿಯ ವಿಜ್ಞಾನ ಲೇಖಕರು ಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಕನ್ನಡದಲ್ಲಿ ಈ ಬಗೆಯ ಬರವಣಿಗೆ ನಗಣ್ಯವೆನಿಸುವಷ್ಟು ಕಡಿಮೆ. ಆದ್ದರಿಂದ ಈ ದಿಸೆಯಲ್ಲಿ ಪ್ರಯತ್ನಪಡಲು ವಿಪುಲಾವಕಾಶ ಇದೆ.

ವಿಜ್ಞಾನದ ಪರಕೀಯತೆಯನ್ನು ಹೋಗಲಾಡಿಸಲು ಇಷ್ಟೆಲ್ಲಾ ಶ್ರಮವಹಿಸಿದರೂ ಸಾಧ್ಯವಾಗುತ್ತಿಲ್ಲ. ಜನಜೀವನದೊಂದಿಗೆ ವಿಜ್ಞಾನವನ್ನು ಮಿಳಿತಗೊಳಿಸಲು ನಾವು ಗಂಭೀರವಾಗಿ ಪ್ರಯತ್ನಿಸಬೇಕಾಗಿದೆ. ಅಮೂರ್ತ ಧಾರ್ಮಿಕ ನಂಬಿಕೆಗಳು ಮತ್ತು ತಾತ್ತ್ವಿಕ ಆಚರಣೆಗಳು ಜನಜೀವನದಲ್ಲಿ ರೂಢಿಗತ ಸಾಂಸ್ಕೃತಿಕ ಆಚರಣೆಗಳಾಗಿ ಚಿರಂತನತೆಯನ್ನು ಸ್ಥಾಪಿಸಿಕೊಂಡಿವೆ. ಆದರೆ ವಿಜ್ಞಾನದ ನಂಬಿಕೆಗಳನ್ನಾಧರಿಸಿದ ಅಭ್ಯಾಸಗಳು ಜಾರಿಗೆ ಬಂದಿಲ್ಲ. ಗಂಡು ಹೆಣ್ಣುಗಳನ್ನು ನೋಡುವಾಗ ಒಂದೇ ಸಂಬಂಧದಲ್ಲಿ ತರದಿರುವುದು ವಾಸಿ; ರಕ್ತದ ಗುಂಪುಗಳನ್ನು ತಾಳೆ ನೋಡುವುದು ವಾಸಿ ಎಂಬ ಅಭಿಪ್ರಾಯಕ್ಕೆ ಬೆಂಬಲವಿದ್ದರೂ ಈಗಲೂ ಜಾತಕಗಳನ್ನಷ್ಟೇ ತಾಳೆ ನೋಡಲಾಗುತ್ತಿದೆ. ಆದ್ದರಿಂದ ಸೂಚಿಸಬಹುದಾದ ಪರಿಹಾರವೆಂದರೆ

1. ವಿಜ್ಞಾನದ ಪರಿಜ್ಞಾನವನ್ನು ಆಧರಿಸಿ ಈಗಿರುವ ಧಾರ್ಮಿಕ ನಂಬಿಕೆ / ಆಚರಣೆಗಳನ್ನು ಪರಿಜ್ಞಾನವನ್ನು ಆಧರಿಸಿ ವಿವೇಚಿಸುವುದು / ಬದಲಾಯಿಸುವುದು/ಕೈಬಿಡುವುದು

2. ವೈಜ್ಞಾನಿಕ ಚಿಂತನೆಯನ್ನು ಆಧರಿಸಿದ ರೂಢಿಗಳನ್ನು ಜಾರಿಗೆ ತರುವುದು

3. ಸಾಂಸ್ಕೃತಿಕ ಕಾರ್ಯದ ಹೆಸರಿನಲ್ಲಿ ಆಗುತ್ತಿರುವ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವುದು.

ದೇವರು ಸರ್ವವ್ಯಾಪಿಯೆಂದು ಹೇಳಲಾಗುವುದಾದರೂ ದೇವರ ಸರ್ವವ್ಯಾಪಿತ್ವವನ್ನು ಕಲ್ಪಿಸಿಕೊಳ್ಳಬಹುದೇ ವಿನಾ ಗುರುತಿಸಿ ಆನಂದಿಸುವುದು, ಉಪಯೋಗ ಮಾಡಿಕೊಳ್ಳುವುದು ಕಠಿಣ. ಆದರೆ ಅಷ್ಟೇ ಸರ್ವವ್ಯಾಪಿಯಾದ ಇನ್ನೊಂದು ಅಂಶವೆಂದರೆ – ನಿಸರ್ಗದ ನಿಯಮಗಳು. ಆದ್ದರಿಂದ ಇವುಗಳ ಸರ್ವವ್ಯಾಪಿತೆಯನ್ನು ಗುರುತಿಸುವ, ಅನುಭವಿಸುವ ಮತ್ತು ಆನಂದಿಸುವ ಕೆಲಸವನ್ನು ಜನಪ್ರಿಯ ವಿಜ್ಞಾನಕಾರರು ಕೈಗೊಳ್ಳಬಹುದಾಗಿದೆ. ಇದರಿಂದಾಗಿ ವಿಜ್ಞಾನವು ಪ್ರಯೋಗಾಲಯದ ಸೆರೆಯಿಂದ ಹೊರಬಂದು ಜಗದ್ವ್ಯಾಪಿಯಾಗುವುದು. ವಿಜ್ಞಾನದ ಬಗ್ಗೆ ಇರುವ ಪರಕೀಯ ಪ್ರಜ್ಞೆ ಹೋಗಿ ಅದು ಜನಜೀವನದ ಹಾಸು ಹೊಕ್ಕಾಗುವುದು. ಇದನ್ನೇ ವೈಜ್ಞಾನಿಕ ಸಾಕ್ಷರತೆ ಎಂದು ಹೇಳಲಾಗುತ್ತದೆ. ಮೌಖಿಕ ಸಂವಹನದ ಮೂಲಕ ವೈಜ್ಞಾನಿಕ ಸಾಕ್ಷರತೆಯನ್ನು ಸಾಕ್ಷರತಾ ಕಾರ್ಯಕ್ರಮದೊಂದಿಗೆ ಕೈಗೊಂಡಿದ್ದರೆ – ಸಾಕ್ಷರತೆ ಮತ್ತು ವೈಜ್ಞಾನಿಕ ಸಾಕ್ಷರತೆಗಳೆರಡೂ ಯಶಸ್ವಿಯಾಗಿ ಜಾರಿಗೆ ಬರುತ್ತಿದ್ದವೇನೋ!

ವಿಜ್ಞಾನ ಮತ್ತು ತಂತ್ರಜ್ಞಾನ ಬದುಕಿನೊಂದಿಗೆ, ಬದುಕಿನ ವಿವಿಧ ಕ್ರಿಯೆಗಳೊಂದಿಗೆ ಮುಖಾಮುಖಿಯಾದಾಗ ಏಳುವ ಸಮಸ್ಯೆಗಳು ಹಲವಾರು. ಚಿತ್ರ ಬರೆಯುವುದರ ಬದಲು ಕಂಪ್ಯೂಟರ್ ಗ್ರಾಫಿಕ್ಸ್, ಸಂUತಕ್ಕೆ ವಿದ್ಯುದಾಧಾರಿತ ಪಕ್ಕವಾದ್ಯಗಳು ಮೊದಲಾದವು ಕಲೆಗೆ ಪೂರಕವಾದ ಸಾಧನಗಳು. ಕ್ಯಾಸೆಟ್‌ಗಳ ಸುಲಭ ಲಭ್ಯತೆಯಿಂದಾಗಿ ಸ್ಥಳೀಯ ಪ್ರತಿಭೆಗಳನ್ನು ಕಡೆಗಾಣಿಸುವ ಸಾಧ್ಯತೆ. ನೆರಳಚ್ಚು ಪ್ರತಿಯಿಂದಾಗಿ ಪುಸ್ತಕ ಉದ್ಯಮಕ್ಕೆ ಕೊಡಲಿಯೇಟು ನಕಾರಾತ್ಮಕ ಮತ್ತು ಕಲೆಗೆ ಮಾರಕವಾದ ಅಂಶಗಳು. ಇವನ್ನೆಲ್ಲಾ ನೋಡಿದಾಗ, ಥೊರೋ ಹೇಳಿದ ಮಾತು ನೆನಪಾಗುತ್ತದೆ. `ಮಾನವ ತನ್ನ ಉಪಕರಣಗಳಿಗೆ ತಾನೇ ಉಪಕರಣವಾಗಿದ್ದಾನೆ‘ ಎಂದಾತ ಬರೆದಿದ್ದಾನೆ. ಮಾನವ ತನ್ನ ಅಗತ್ಯಕ್ಕನುಗುಣವಾಗಿ ಕಂಪ್ಯೂಟರ್‌ನ್ನು ರೂಪಿಸಿದ. ಆದರೆ ಈಗ ಕಂಪ್ಯೂಟರಿಗನುಗುಣವಾಗಿ ವಿದ್ಯಾಭ್ಯಾಸ ಪದ್ಧತಿ ರೂಪಿಸಬೇಕಾಗಿದೆ! ಮಗ್ಗಿಯನ್ನು ವಿಶೇಷ ಶ್ರಮ ವಹಿಸಿ ಮಕ್ಕಳು ನೆನಪಿಟ್ಟುಕೊಳ್ಳುತ್ತಾ ತಮ್ಮ ಪ್ರತಿಭೆ ಮೆರೆಸುತ್ತಿದ್ದರು. ಈಗ ಆ ಕೆಲಸದ ಬೆಲೆ ಕೆಲವು ನೂರು ರೂ.ಗಳಿಗೆ ದೊರಕುವ ಗಣಕಯಂತ್ರ ಅರ್ಥಾತ್ ಕ್ಯಾಲ್‌ಕ್ಯುಲೇಟರ್. ಹೀಗಾಗಿ ಬದುಕಿನಲ್ಲಿ ಮಾನವನ ಸ್ಥಾನವನ್ನು ಮರುಪರಿಶೀಲಿಸಬೇಕಾಗಿದೆ. ಬದುಕಿನ ಹೋರಾಟಕ್ಕೆ ಮಾನವರನ್ನು ವಿಭಿನ್ನ ರೀತಿಯಿಂದ ಸಜ್ಜುಗೊಳಿಸಬೇಕಾಗಿದೆ. ಮುಂದಿನ ದಶಕದಲ್ಲಿ ಸಮಾಜದ ಸ್ಥಿತಿಗತಿ ಹೇಗಾಗುವುದೆಂದು ಊಹಿಸಿ ಮಕ್ಕಳ ವಿದ್ಯಾಭ್ಯಾಸವನ್ನು ನಿರ್ಧರಿಸಬೇಕಾಗಿದೆ. ಯಂತ್ರದೊಡನೆ ಹೋಲಿಸಿಕೊಂಡು ಮಾನವ ಬೆಳೆಸಿಕೊಳ್ಳುವ ಕೀಳರಿಮೆಯನ್ನು ಸಾಹಿತಿ ಹಾಗೂ ಜನಪ್ರಿಯ ವಿಜ್ಞಾನ ಸಾಹಿತಿಗಳಿಬ್ಬರೂ ಹೋಗಲಾಡಿಸ- ಬೇಕಾಗಿದೆ. ಆಧುನಿಕ ಬದುಕಿಗೆ ಹೊಸ ಹೊಸ ಆದರ್ಶನೀತಿ ನಿಯತ್ತುಗಳನ್ನು ರೂಪಿಸಬೇಕಾಗಿದೆ. ಒಟ್ಟಾರೆ ಹೇಳುವುದಾದರೆ ಜನಪ್ರಿಯ ವಿಜ್ಞಾನ ಸಾಹಿತಿ ಹೇಳುವ ಅಂಶಗಳು ಸಾಹಿತ್ಯದ ಇತರ ಪ್ರಕಾರಗಳಲ್ಲೂ ಕಾಣಿಸಿಕೊಳ್ಳುವಷ್ಟು ಜನಪ್ರಿಯ ವಿಜ್ಞಾನ ಲೇಖಕ ದುಡಿಯಬೇಕಾಗಿದೆ.

ಇದು ವಿಶೇಷಜ್ಞರ ಯುಗ. ಭೌತಶಾಸ್ತ್ರ ರಸಾಯನಶಾಸ್ತ್ರದಂತಹ ವಿಷಯಗಳು ಹಾಗಿರಲಿ. ಇಂತಹ ಒಂದೊಂದು ಕ್ಷೇತ್ರದಲ್ಲಿಯೇ ಪೂರ್ಣ ತಿಳಿಯಲು ಆಗದೆ ಇರುವಷ್ಟು ಬೆಳವಣಿಗೆಗಳು ಆಗಿಹೋಗಿವೆ. ಕಂಪ್ಯೂಟರ್ ಯಂತ್ರಾಂಶ (ಹಾರ್ಡ್‌ವೇರ್) ಅರಿತವರಿಗೆ ತಂತ್ರಾಂಶ (ಸಾಫ್ಟ್‌ವೇರ್) ತಿಳಿಯದು. ಹೀಗಾಗಿ ಸಮಗ್ರ ದರ್ಶನ ಪಡೆಯಲು ವಿಶೇಷಜ್ಞರಿಗೂ ಅಗತ್ಯವಿರುವ ಈ ಕಾಲದಲ್ಲಿ ಜನಪ್ರಿಯ ವಿಜ್ಞಾನಿಗಳು ಸಮಗ್ರ ವ್ಯಕ್ತಿತ್ವರೂಪಿಸಲು ಶ್ರಮಿಸಬೇಕಾದ ಅಗತ್ಯವಿದೆ.

ಅತ್ಯಂತ ಸೃಜನಶೀಲ ಮತ್ತು ಬುದ್ದಿಮತ್ತತೆ ಗರಿಷ್ಠ ಸ್ಥಿತಿ ತಲುಪಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ತನ್ನ ಕಲಿಕೆಯ ಸ್ಪೂರ್ತಿ ಪಠ್ಯ ವಿಜ್ಞಾನಕ್ಕಿಂತ ಜನಪ್ರಿಯ ವಿಜ್ಞಾನ ಬರೆವಣಿಗೆಗಳೇ ಆಗಿವೆ ಎಂದು ಹೇಳಿರುವಾಗ ಜನಪ್ರಿಯ ವಿಜ್ಞಾನಕ್ಕೆ ಇದಕ್ಕಿಂತ ಶಹಭಾಸ್‌ಗಿರಿ ಬೇಕೇ? ಅಷ್ಟೇ ಅಲ್ಲ ಗಣಿತದ ಗಂಧವಿಲ್ಲದವರಿಗೂ ಅರ್ಥವಾಗುವ ಹಾಗೆ ಭೌತಶಾಸ್ತ್ರದ ವಿಕಸನದ ಹೆಜ್ಜೆಗಳನ್ನು ಗುರುತಿಸಲು ಪ್ರಯತ್ನಿಸಿ ಜನಪ್ರಿಯ ವಿಜ್ಞಾನ ಬರವಣಿಗೆಯನ್ನು ಐನ್‌ಸ್ಟೀನ್ ಕೈಗೊಂಡಿದ್ದನ್ನು ನೆನಪಿಸಿಕೊಳ್ಳೋಣ. ಇದು ಜನಪ್ರಿಯ ವಿಜ್ಞಾನ ಬರವಣಿಗೆಯ ಘನತೆಯನ್ನು ಎತ್ತಿ ಹಿಡಿದಿದೆಯಲ್ಲದೆ ಜನಪ್ರಿಯ ವಿಜ್ಞಾನ ಬರವಣಿಗೆಗೆ ಅತ್ಯುತ್ತಮ ಮಾದರಿಯೂ ಆಗಿದೆ.

ಜನಪ್ರಿಯ ವಿಜ್ಞಾನ ಲೇಖಕರು ಈ ಅಂಶದಿಂದ ಸ್ಪೂರ್ತಿ ಪಡೆಯುವಂತಾಗಲಿ.