ಸಂದ ಹಲವು ದಶಕಗಳ ಅವಧಿಯಲ್ಲಿ ಪ್ರಕಟವಾದ ನನ್ನ ಸುಮಾರು ೬೦ ಜನಪ್ರಿಯ ವಿಜ್ಞಾನ ಕೃತಿಗಳಿಂದ ಆಯ್ದ ಇಪ್ಪತ್ತೊಂಬತ್ತು ಕನ್ನಡ ಲೇಖನಗಳ ಸಂಕಲನ ‘ವಿಜ್ಞಾನ ವರ್ತಮಾನ’. ಇದು ವಿಜ್ಞಾನದ ವರ್ತಮಾನವಲ್ಲ, ಬದಲು ಕನ್ನಡದ ಒಬ್ಬ ವಿಜ್ಞಾನ ಲೇಖಕ ತನ್ನ ಕ್ರಿಯಾಶೀಲ ದಿನಗಳಂದು ನಡೆದು ರೂಪಿಸಿದ ಹಾದಿ ಮೇಲಿನ ಕೆಲವು ಗುರುತುಗಲ್ಲುಗಳು ಮಾತ್ರ.

ಇಂಥ ಒಂದು ‘ದುಸ್ಸಾಹಸ’ಕ್ಕೆ ನನ್ನ ಇಂದಿನ ಇಳಿಹರೆಯದಲ್ಲಿ (ಜನನ ೧೯೨೬) ಮತ್ತು ಆರೋಗ್ಯದ ಸ್ಥಿತಿಯಲ್ಲಿ ದುಮುಕಲು ಪ್ರೇರಣೆ ಕೊಟ್ಟದ್ದು ಎರಡು ಪ್ರಬಲ ಮತ್ತು ನಿರಾಕರಿಸಲಾಗದ ಬಾಹ್ಯ ಪ್ರಭಾವಗಳು ಅಥವಾ ಪ್ರೀತಿಯ ಒತ್ತಾಯಗಳು. ನ್ಯೂಟನ್‌ನ ಮೂರು ಚಲನ ನಿಯಮಗಳ ಪೈಕಿ ಮೊದಲನೆಯದನ್ನು ಇಲ್ಲಿ ಉಲ್ಲೇಖಿಸುವುದು ಯುಕ್ತವಾಗಿದೆ: “ಬಾಹ್ಯಬಲ ಪ್ರಯುಕ್ತವಾದ ವಿನಾ ವಸ್ತುವಿನ ಮೂಲ ಸ್ಥಿತಿಯಲ್ಲಿ ವ್ಯತ್ಯಯ ಸಂಭವಿಸದು.” ವ್ಯಕ್ತಿಗಳಿಗೆ ಕೂಡ ಅನ್ವಯವಾಗುವ ಜೀವನ ನಿಯಮವಿದು: “ಬಾಹ್ಯ ಪ್ರೇರಣೆ ಪ್ರಯುಕ್ತವಾದ ಹೊರತು ವ್ಯಕ್ತಿ ಕಾರ್ಯೋನ್ಮುಖನಾಗುವುದಿಲ್ಲ”.

ನನ್ನ ಮೇಲೆ ಪ್ರಯುಕ್ತವಾದ ಆ ಎರಡು ಬಾಹ್ಯಬಲಗಳಿವು:

೧. ಮೊದಲನೆಯದು, ಇದೇ ಫೆಬ್ರವರಿ ತಿಂಗಳಿನಲ್ಲಿ ಅಯಾಚಿತವಾಗಿ ಮತ್ತು ಅನಿರೀಕ್ಷಿತವಾಗಿ ನನ್ನ ಮೇಲೆ ‘ಪ್ರಹಾರ’ವಾಯಿತು. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಇವರು ನಮ್ಮ ಮನೆಗೆ ಬಂದು ನಮ್ಮ ಈ ಯೋಜನೆಯನ್ನು ವಿವರಿಸಿದರು: ಕನ್ನಡದ ಹಿರಿಯ ಲೇಖಕರ ಕೃತಿಗಳಿಂದ ಆಯ್ದ ಕೆಲವು ಮಾದರಿ ಲೇಖನಗಳ ಸಂಕಲನಮಾಲಿಕೆಯ ಪ್ರಕಟಣೆ; ಈ ಯಾದಿಗೆ ಅವರು ನನ್ನನ್ನೂ ಸೇರಿಸಿದ್ದರು.

ವೈಯಕ್ತಿಕವಾಗಿ ಇದು ಎಷ್ಟೇ ಆಕರ್ಷಕ ಆಹ್ವಾನವಾಗಿದ್ದರೂ ನನ್ನ ಮೂರು ಸಮಸ್ಯೆಗಳನ್ನು ಅವರಿಗೆ ವಿವರಿಸಿ ಇವು ಅಪರಿಹಾರ್ಯ, ಆದ್ದರಿಂದ ಈ ಯಾದಿಯಿಂದ ನನ್ನನ್ನು ಕೈಬಿಡಬೇಕೆಂದು ವಿನಂತಿಸಿದೆ:

(ಅ) ನನ್ನ ಕೃತಿ ಅಥವಾ ಲೇಖನಗಳನ್ನು ರಚಿಸುತ್ತಿದ್ದಾಗ ನನಗೆ ಲಭಿಸಿದ ಆನಂದದಿಂದಾಚೆಗೆ ಅವುಗಳ ಬಗ್ಗೆ ಯಾವ ವ್ಯಾಮೋಹವೂ ನನಗಿಲ್ಲ.

(ಆ) ಯದ್ವಾ ತದ್ವಾ ಹರಡಿಕೊಂಡಿರುವ, ಹೆಚ್ಚಿನವು ಕಳೆದೇ ಹೋಗಿರುವ, ನನ್ನ ಬರಹಗಳಿಂದ ವರ್ತಮಾನದಲ್ಲಿ ಪ್ರಸ್ತುತವಾಗಬಹುದಾದವನ್ನು ಆಯ್ದು ಸಂಕಲಿಸುವ ವ್ಯವಧಾನ ಅಥವಾ ತ್ರಾಣ ನನಗಿಲ್ಲ.

(ಇ) ಕನ್ನಡದ ಒಬ್ಬ ಪ್ರಸಿದ್ಧ ಲೇಖಕ ನಾನೆಂಬ ಭ್ರಮೆ ಎಂದೂ ನನ್ನನ್ನು ಬಾಧಿಸಿಲ್ಲ.

ಆದರೆ ಮಲ್ಲೇಪುರಂ ತಮ್ಮ ಉಡಹಿಡಿತವನ್ನು ಸಡಿಲಿಸಲೇ ಇಲ್ಲ. ಕೊನೆಗೆ ಅನ್ಯಮಾರ್ಗವಿಲ್ಲದೇ ನಾನವರಿಗೆ ಮಣಿದೆ: “ಪ್ರಯತ್ನಿಸಿ ಒಂದು ವಾರದ ಒಳಗೆ ನಿಮಗೆ ತಿಳಿಸುತ್ತೇನೆ.” ಈ ಅಸ್ಪಷ್ಟ ಆಶ್ವಾಸನೆ ನನ್ನನ್ನು ಸದ್ಯದ ಗಂಡಾಂತರದಿಂದ ಪಾರು ಮಾಡಿತು!

೨. ಎರಡನೆಯದು, ಆಶ್ವಾಸನೆಯನ್ನು ಹೇಗೆ ಈಡೇರಿಸಲಿ? ನಮ್ಮ ಹಿರಿಯ ಮಗ ಅಶೋಕನ (ಜಿ. ಎನ್‌. ಅಶೋಕವರ್ಧನ, ಅತ್ರಿ ಬುಕ್‌ಸೆಂಟರ್‌, ಮಂಗಳೂರು – ಇವನೊಬ್ಬ ಹವ್ಯಾಸೀ ಲೇಖಕ) ಸಲಹೆ ಕೇಳಿದೆ. “ಆಯ್ಕೆ ಕೆಲಸಕ್ಕೆ ನಮ್ಮ ರಾಧಾ ಸರಿಯಾದ ಜನ” ಎಂಬ ಸೂಚನೆ ನೀಡಿದ. (ಈ ರಾಧಾ ನನ್ನ ಸೋದರ ಭಾವನ ಮಗ ಡಾಕ್ಟರ್‌ಎ. ಪಿ. ರಾಧಾಕೃಷ್ಣ, ಭೌತವಿಜ್ಞಾನ ಪ್ರಾಧ್ಯಾಪಕರು, ವಿವೇಕಾನಂದ ಕಾಲೇಜ್‌, ಪುತ್ತೂರು – ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿರುವ ಒಬ್ಬ ಯುವ ಪ್ರತಿಭಾನ್ವಿತ ಲೇಖಕ ಕೂಡ.) ಕೇವಲ ಒಂದು ವಾರದ ಅವಧಿಯಲ್ಲಿ ಇವನು ಆಯ್ಕೆ ಕೆಲಸವನ್ನು ಸಮರ್ಥವಾಗಿಯೂ ಚಿಕಿತ್ಸಕವಾಗಿಯೂ ನಿರ್ವಹಿಸಿ ಸುಮಾರು ೩೦೦ ಪುಟಗಳ ಝರಾಕ್ಸ್‌ಹೊತ್ತಿಗೆಯನ್ನು ನನಗೆ ಕಳಿಸಿಕೊಟ್ಟ.

ಪ್ರಸ್ತುತ ಸಂಕಲನಕ್ಕೆ ‘ವಿಜ್ಞಾನ ವರ್ತಮಾನ’ ಎಂಬ ಧ್ವನಿಯುಕ್ತ ತಿಲಕವಿಟ್ಟವರು ಪ್ರೊ. ಮಲ್ಲೇಪುರಂ ಅವರು. ಇತ್ತ ಇವರು ಶ್ರೀಮತಿ ಎಂ. ಡಿ. ಶೈಲಜಾ, ಉದಯ ಗ್ರಾಫಿಕ್ಸ್‌, ಬೆಂಗಳೂರು ಇವರ ಜೊತೆ ಅಧಿಕೃತವಾಗಿ ವ್ಯವಹರಿಸಿ ಇದರ ಡಿಟಿಪಿ ಮುದ್ರಣಕ್ಕೆ ಸಮರ್ಪಕ ವೇದಿಕೆ ಒದಗಿಸಿದರು. ಶೈಲಜಾ ಅವರು ಈ ಹೊಣೆಯನ್ನು ಅತ್ಯಂತ ಶ್ರದ್ಧೆಯಿಂದ ಪೂರೈಸಿದ್ದಾರೆ.

ಹೀಗೆ, ಹಲವಾರು ಅನುಕಂಪಶೀಲ ಹೃದಯಗಳು ಪರಸ್ಪರ ಪೂರಕವಾಗಿ ಸಹಕರಿಸಿ ಈ ಕೃತಿ ಹೊರಬಂದಿದೆ. ಇವರೆಲ್ಲರಿಗೂ ನನ್ನ ಹಾರ್ದಿಕ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡಕ್ಕಾಗಿ ಕೈ ಎತ್ತಿದರೆ ಅದು ಕಲ್ಪವೃಕ್ಷವಾಗುತ್ತದೆಂಬ ಕವಿವಾಣಿ ದಿಟ!

ಪಂಪ ಕುವೆಂಪು ವರೇಣ್ಯರ
ಪೆಂಪಿನ ನುಡಿಗಳ ನಿವಾಸ ಕನ್ನಡ ದೇಶಂ
ಕಂಪಿಂ ಕತ್ತುರಿಯಾಗಿಹು
ದಿಂಪಿಂ ಪಿರದುಲಿಯಿದು ಸಿರಿಗನ್ನಡ ಗೆಲ್ಗೇ

ಜಿ. ಟಿ. ನಾರಾಯಣರಾವ್‌
೨೪ – ೫ – ೨೦೦೮