ಅನ್ಯಲೋಕಗಳಲ್ಲಿ ಧೀಶಕ್ತಿಯುತ ಜೀವಿಗಳಿವೆಯೇ? ಅಥವಾ ಸಮಸ್ತ ವಿಶ್ವದಲ್ಲಿ ಮಾನವ ಮಾತ್ರ ಏಕಮೇವಾದ್ವಿತೀಯ ಸೃಷ್ಟಿವೈಚಿತ್ರ್ಯವೇ? ಈ ಪ್ರಶ್ನೆಗಳು ಪ್ರಾಚೀನ ಮಾನವ ಕಣ್ತರೆದಂದೇ ಉದ್ಭವಿಸಿರಬೇಕು. ಇವುಗಳಿಗೆ ಆಯಾ ಯುಗದ ವಿಜ್ಞಾನ ಮತ್ತು ತಂತ್ರವಿದ್ಯೆಯ ಮಟ್ಟ ಅನುಸರಿಸಿ ಬೇರೆ ಬೇರೆ ಉತ್ತರಗಳು ಲಭಿಸಿವೆ. ವಿಶ್ವದಲ್ಲಿ ಮಾನವ ಏಕೈಕ ಧೀಮಂತ ಜೀವಿ ಅಲ್ಲ, ಮಾನವನಿಗೆ ಸಮವಾಗುವ ಮತ್ತು ಅವನನ್ನು ಮೀರಿಸುವ ಧೀಶಕ್ತಿಳು ಇರುವುದು ಅಸಂಭಾವ್ಯವಲ್ಲ ಎಂಬುದಾಗಿ ವಿಜ್ಞಾನಿಗಳು ನಂಬಿದ್ದಾರೆ.

ಧೀಶಕ್ತಿ ಎಂದರೇನು? ಭೂಮಿಯಿಂದ ಹೊರಗೆ, ಇನ್ನೂ ನಿಖರವಾಗಿ ಹೇಳುವುದಾದರೆ ಸೌರವ್ಯೂಹದಿಂದ ಆಚೆಗೆ, ಇರಬಹುದಾದ ಜೀವಿಗಳು, ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ಕನಿಷ್ಠ ಪಕ್ಷ ನಮ್ಮ ವರ್ತಮಾನ ಮಟ್ಟಕ್ಕಾದರೂ ಏರಿದ್ದರೆ ಅವನ್ನು ಧೀಮಂತ ಜೀವಿಗಳು ಎನ್ನುತ್ತೇವೆ. ಅವುಗಳಿಗೆ ಭೂಮ್ಯತೀತ ಧೀಮಂತ ಜೀವಿಗಳು ಅಥವಾ ಸಂಕ್ಷೇಪವಾಗಿ ಭೂಮ್ಯತೀತ ಧೀಶಕ್ತಿ (extraterrestrial intelligence) ಎಂದು ಹೆಸರು.

ಧೀಶಕ್ತಿಯ ಈ ವಿಶಿಷ್ಟ ಮಟ್ಟ ಅಥವಾ ಮಾನಕ ಏನು? ಇಂದು ನಾವು ರೇಡಿಯೊ ತರಂಗಗಳ ನೆರವಿನಿಂದ ಭೂಮಿಯ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಹೆಚ್ಚು ಕಡಿಮೆ ತಾತ್‌ಕ್ಷಣಿಕ ಸಂಪರ್ಕ ಪಡೆಯುತ್ತೇವೆ, ವಾಯುಮಂಡಲದಲ್ಲಿ ವಿಮಾನಸಂಚಾರ ಮಾಡುತ್ತೇವೆ, ಆಕಾಶಯಾನ ಸಾಧಿಸಿದ್ದೇವೆ. ಚಂದ್ರನ ಮೇಲೆ ನಮ್ಮ ಪ್ರತಿನಿಧಿಯನ್ನು ಇಳಿಸಿ ಹಿಂದಕ್ಕೆ ಬರಮಾಡಿಕೊಂಡಿದ್ದೇವೆ, ರೇಡಿಯೋ ತರಂಗಗಳನ್ನು ವಿಶ್ವದ ವಿವಿಧ ಭಾಗಗಳಿಗೆ ಪ್ರಸರಿಸಿ “ನಾವಿಲ್ಲಿದ್ದೇವೆ” ಎಂಬುದನ್ನು ಅರುಹಬಲ್ಲವರಾಗಿದ್ದೇವೆ. ಅದೇ ವೇಳೆ, ಆಕಾಶದಿಂದ ನಮ್ಮೆಡೆಗೆ ಬರುತ್ತಿರುವ ರೇಡಿಯೋ ತರಂಗ, ಬೆಳಕು, ಎಕ್ಸ್‌ಕಿರಣ ಮೊದಲಾದ ವಿದ್ಯುತ್ಕಾಂತ ವಿಕಿರಣ ಪ್ರಕಾರಗಳನ್ನು ಕಲೆಹಾಕಿ ವಿಶ್ಲೇಷಿಸಿ ವಿಶ್ವದ ಬಗ್ಗೆ ಹೊಸ ಮಾಹಿತಿಗಳನ್ನು ತಿಳಿಯಬಲ್ಲವರಾಗಿದ್ದೇವೆ. ಆದ್ದರಿಂದ “ಧೀಶಕ್ತಿ” ಪದದ ಅರ್ಥ ನಿರ್ಣಯವಿಷ್ಟು: ಅನ್ಯಲೋಕಗಳೊಡನೆ ಸಂಪರ್ಕ ಏರ್ಪಡಿಸಬಲ್ಲ ಪ್ರಬುದ್ಧ ತಂತ್ರವಿದ್ಯೆಯಲ್ಲಿ (technology) ಪರಿಣತಿ ಮತ್ತು ಆ ಪರಿಣತಿಗಳಿಸಿರುವ ಜೀವಿಸಮೂಹ. ಮಾನವ ಈ ತೆರನಾದ ಪರಿಣತಿ ಗಳಿಸಿದ್ದು 1930ರಿಂದ ಈಚೆಗೆ ಮಾತ್ರ. ಆದ್ದರಿಂದ ಧೀಶಕ್ತಿಯ ಮಾನಕದಲ್ಲಿ ಅವನಿನ್ನೂ ಕಣ್ಣು ಬಿಡುತ್ತಿರುವ ಹಸುಗೂಸು.

ಭೂಮ್ಯತೀತ ಧೀಶಕ್ತಿ ಇದೆ ಎಂಬುದನ್ನು ತಾತ್ತ್ವಿಕವಾಗಿ ಒಪ್ಪಿಕೊಂಡ ಬಳಿ ಅದಕ್ಕಾಗಿ ಶೋಧನೆ ನಡೆಸುವುದು ಮುಂದಿನ ಮಜಲು.

ಜೀವಿಯ ರೂಪ ಅಭಿವರ್ಧನೆ ಮುಂತಾದವು ಹೇಗೆಯೇ ಇದ್ದರೂ ಅದು ನಕ್ಷತ್ರದಲ್ಲಿ ಬದುಕಿ ಉಳಿದಿರಲಾರದು ಎಂಬುದು ಸ್ವತಸ್ಸಿದ್ಧ. ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಗ್ರಹದಲ್ಲಿ ಮಾತ್ರ ಇರಬಲ್ಲದು. ಹೀಗಾಗಿ ವಿಜ್ಞಾನಿಗಳ ಲಕ್ಷ ಮೊದಲು ಗ್ರಹಯುಕ್ತ ನಕ್ಷತ್ರಗಳ ಶೋಧನೆಯತ್ತ ಹರಿಯಿತು. ನಮ್ಮ ಸೂರ್ಯ ಸದಸ್ಯನಾಗಿರುವ ಆಕಾಶಗಂಗೆಯೊಂದರಲ್ಲೇ ಸುಮಾರು ನಲವತ್ತು ಸಾವಿರ ಕೋಟಿ ನಕ್ಷತ್ರಗಳಿವೆ. ಇವುಗಳ ಪೈಕಿ ಹತ್ತು ಲಕ್ಷ ನಕ್ಷತ್ರಗಳಿಗಾದರೂ ಗ್ರಹವಲಯಗಳಿರುವುದು ಸಂಭಾವ್ಯ. ಇನ್ನು ವಿಶ್ವದಲ್ಲಿರುವ ಒಟ್ಟು ಬ್ರಹ್ಮಾಂಡಗಳ ಸಂಖ್ಯೆ ಎಣಿಕೆಗೆ ನಿಲುಕಿಲ್ಲ. ಪರಿಸ್ಥಿತಿ ಹೀಗಿರುವಾಗ ಸಮಗ್ರವಾಗಿ ವಿಶ್ವದಲ್ಲಿ ಒಟ್ಟು ಎಷ್ಟು ಗ್ರಹಯುಕ್ತ ನಕ್ಷತ್ರಗಳಿರಬಹುದು ಎಂಬುದನ್ನು ಅಂದಾಜಿಸುವುದು ಕಷ್ಟ.

ನಕ್ಷತ್ರವೊಂದು ಗ್ರಹ ಪರಿವೇಷ್ಟಿತವಾಗಿದೆ ಎಂಬುದನ್ನು ಪ್ರಮಾಣೀಕರಿಸುವುದು ಹೇಗೆ? ಎಷ್ಟೇ ಪ್ರಬಲ ದೂರದರ್ಶಕದಿಂದಾದರೂ ನೇರ ದಿಟ್ಟಿಸಿ ಅಥವಾ ಛಾಯಾ ಚಿತ್ರೀಕರಿಸಿ ಇದನ್ನು ರುಜುವಾತಿಸುವುದು ಅಸಾಧ್ಯ. ಬಾನಿನಾಳದ ಆ ಕೊನೆಯಲ್ಲಿ, ಅರಿಲಿನ ಬೆಳಕಿನ ಹೊನಲಿನಲ್ಲಿ, ನಕ್ಷತ್ರವನ್ನು ಸುತ್ತುತ್ತಿರಬಹುದಾದ ಗ್ರಹಕಣಗಳು ಪ್ರತ್ಯೇಕವಾಗಿ ಗೋಚರಿಸುವುದೇ ಇಲ್ಲ. ಸಮೀಪತಮ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟಾರಿಯ (ಸಮೀಪತಮ ಕಿನ್ನರ) ದೂರವು 4.3 ಜ್ಯೋತಿರ್ವರ್ಷಗಳು (ಸೆಕೆಂಡಿಗೆ ಸುಮಾರು 3 ಲಕ್ಷ ಕಿ. ಮೀ. ದೂರ ಧಾವಿಸುವ ಬೆಳಕು ಒಂದು ವರ್ಷದ ಅವಧಿಯಲ್ಲಿ ಗಮಿಸುವ ದೂರ 1 ಜ್ಯೋತಿರ್ವರ್ಷ). ಇದರ ಅರ್ಥ ಇಂದು ನಮಗೆ ಕಾಣುತ್ತಿರುವ ಆ ನಕ್ಷತ್ರ ವಾಸ್ತವವಾಗಿ 4.3 ವರ್ಷಗಳಷ್ಟು ಗತಕಾಲದ್ದು, ಈಗ ಅದು ಹೇಗಿದೆ ಎಂದು ತಿಳಿಯಬೇಕಾದರೆ ಇಲ್ಲಿಯೇ ಇನ್ನೂ 4.3 ವರ್ಷಗಳತನಕ ಕಾದಿರಬೇಕು. ಸಮೀಪತಮ ನಕ್ಷತ್ರದ ಪಾಡೇ ಹೀಗಾದರೆ ನೂರು, ಸಾವಿರ, ಲಕ್ಷಜ್ಯೋತಿರ್ವರ್ಷ ದೂರಗಳಲ್ಲಿರುವ ನಕ್ಷತ್ರಗಳನ್ನು ಕುರಿತಂತೆ ವಿಜ್ಞಾನಿಗಳ ಸಮಸ್ಯೆ ಅದೆಷ್ಟು ಜಟಿಲವಾಗಿರಬೇಡ!

ಸದಾ ಚಲನಶೀಲವಾಗಿರುವ ನಕ್ಷತ್ರದಿಂದ ನಮಗೆ ಲಭಿಸುವ ಬೆಳಕು, ರೇಡಿಯೊ ತರಂಗ ಮುಂತಾದ ಶಕ್ತಿರೂಪಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಅದರ ಸೈದ್ಧಾಂತಿಕ ಪಥವನ್ನು ಗಣಿಸಿ ನಿರ್ಧರಿಸುವುದು ಸಾಧ್ಯವಿದೆ. ಇತ್ತ ಪ್ರತ್ಯೇಕ್ಷವಾಗಿ ಅದರ ವರ್ತನೆಯನ್ನು ಹಲವಾರು ವರ್ಷಕಾಲ ಅನುಶೀಲಿಸಿ ಅದು ರೇಖಿಸುವ ವಾಸ್ತವಿಕ ಪಥವನ್ನು ರೂಪಿಸುವುದು ಕೂಡ ಸಾಧ್ಯ. ಇವೆರಡು ಪಥಗಳ – ಸೈದ್ಧಾಂತಿಕ ಮತ್ತು ವಾಸ್ತವಿಕ – ನಡುವೆ ಹೊಂದಾಣಿಕೆ ಏರ್ಪಡದಿದ್ದರೆ, ಗಣನೆ ಮತ್ತು ವೀಕ್ಷಣೆಗಳ ನಡುವೆ ದೋಷವೇನೂ ನುಸುಳಿಲ್ಲವೆಂದು ಖಾತ್ರಿ ಮಾಡಿಕೊಂಡ ಬಳಿಕ, ನಕ್ಷತ್ರವು ಸೈದ್ಧಾಂತಿಕ ಪಥದಿಂದ ವಿಚಲಿತವಾಗಲು ಬಾಹ್ಯಪೀಡಕವೇನೋ ಇರಬೇಕೆಂದು ತೀರ್ಮಾನಿಸುವುದು ಸಹಜ. ವಿಚಲನೆಯ ಮೊತ್ತ ಆ ಅಜ್ಞಾತಪೀಡಕದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು – ಉದಾಹರಣೆಗೆ ಅದರ ರಾಶಿ, ನೆಲೆ, ಚಲನದಿಶೆ ಇತ್ಯಾದಿ – ಒದಗಿಸಬಲ್ಲದು. ಅತಿದೂರದ ನಕ್ಷತ್ರವೊಂದರ ಗ್ರಹದ ಮೇಲೆ ಕುಳಿತು ನಾವು ಸೂರ್ಯನ ವರ್ತನೆಯನ್ನು ಅಭ್ಯಸಿಸಿದ್ದಾದರೆ ಎಂಥ ಅನುಭವ ಮೂಡೀತು? ಸೂರ್ಯನೇ ಮಸಕು ಬೆಳಕಿನ ಹುಡಿಯಾಗಿ ಕಾಣುವ ಅಲ್ಲಿಗೆ, ಸೌರವ್ಯೂಹದ ಮಹಾದೈತ್ಯಗ್ರಹವಾದ ಗುರುವನ್ನೂ ಒಳಗೊಂಡಂತೆ, ಯಾವ ಗ್ರಹವೂ ಸುತರಾಂ ಗೋಚರಿಸದು. ಇನ್ನು ಸೂರ್ಯನ ಪಥ? ಸೈದ್ಧಾಂತಿಕ ಹಾಗೂ ವೀಕ್ಷಿತ ಪಥಗಳ ನಡುವೆ ವಿಚಲನೆ ಎದ್ದು ಕಾಣದಿರದು. ಇದರ ಕಾರಣ ಸೂರ್ಯನ ಮೇಲೆ ಗ್ರಹೋಪಗ್ರಹಗಳ, ವಿಶೇಷತಃ ದೈತ್ಯಗ್ರಹಗಳಾದ ಗುರು, ಶನಿ, ಯುರೇನೆಸ್‌, ನೆಪ್ಚೂನ್‌ಗಳ, ಗುರುತ್ವಾಕರ್ಷಣ ತಾಡನೆ ಎಂಬುದಾಗಿ ಆ ಧೀಮಂತಜೀವಿ ತೀರ್ಮಾನಿಸುವುದು ಅನಿವಾರ್ಯ. ಈಗ ಭೂಮಿಗೆ ಮರಳೋಣ. ಅತಿ ದೂರದ ನಕ್ಷತ್ರದ ಪಥವಿಚಲನೆಗೆ ಗೋಚರವಸ್ತು ಯಾವುದೂ ಕಾರಣವಲ್ಲವೆಂದು ಸಿದ್ಧವಾದರೆ ಆ ಅಜ್ಞಾತ ಕೃಷ್ಣಕಾಯ ಗ್ರಹಸಮುದಾಯ ಆಗಿರಬೇಕೆಂದು ತೀರ್ಮಾನಿಸುವುದು ಸಾಧುವಾಗಿದೆ.

ಬಾರ್ನಾರ್ಡನ ನಕ್ಷತ್ರ ಇಂಥ ಚಿಂತನೆಗೆ ವಿಶೇಷ ಕುಮ್ಮಕ್ಕು ನೀಡಿದೆ. ವೃಶ್ಚಿಕರಾಶಿಯ ಒತ್ತಿಗೆ ಉತ್ತರಭಾಗದಲ್ಲಿ ಉರಗಧರ (ಆಫೀಯೂಕಸ್‌) ಎಂಬ ನಕ್ಷತ್ರಪುಂಜದಲ್ಲಿರುವ ಮಸಕು ರಕ್ತಕುಬ್ಜ (red dwarf)ತಾರೆಯಿದು. ಬರಿಗಣ್ಣಿಗೆ ಕಾಣಿಸದು. ಸೂರ್ಯನಿಂದ ಇದರ ದೂರ ಸುಮಾರು 6 ಜ್ಯೋತಿರ್ವರ್ಷಗಳು. ನಲವತ್ತು ವರ್ಷಗಳಿಗೂ ಮಿಕ್ಕಿ ಇದನ್ನು ಛಾಯಾಚಿತ್ರೀಕರಿಸಿ ಇದರ ವರ್ತನೆಯನ್ನು ಅಭ್ಯಸಿಸಿರುವರು. ಈ ನಕ್ಷತ್ರವನ್ನು ಕನಿಷ್ಠ ಪಕ್ಷ ಎರಡು ಕಪ್ಪು ವಸ್ತುಗಳಾದರೂ ಸುತ್ತುತ್ತಿವೆಯೆಂದೂ ಒಂದೊಂದರ ರಾಶಿಯೂ ಗುರುವಿನದರಷ್ಟೇ ಇದೆಯೆಂದೂ ಈ ಅಧ್ಯಯನದಿಂದ ತಿಳಿದಿದೆ. ಇಷ್ಟೇ ಅಲ್ಲ, ಸೂರ್ಯನ ನೆರೆಯಲ್ಲಿರುವ ದ್ವಾದಶ ತಾರೆಗಳ ಪೈಕಿ ಸುಮಾರು ಅರ್ಧದವಷ್ಟಕ್ಕೆ, ಗುರುರಾಶಿಯ ಒಂದರಿಂದ ಹತ್ತರವರೆಗೆ ರಾಶಿಗಳಿರುವ ಕಪ್ಪು ಸಂಗಾತಿಗಳಿವೆ ಎಂದು ಕೂಡ ತಿಳಿದಿದೆ. ಇವೆಲ್ಲ ಕಾರಣಗಳಿಂದ ವಿಜ್ಞಾನಿಗಳು ವಿಶ್ವದಲ್ಲಿ ‘ಸೌರವ್ಯೂಹಗಳು’ ವಿಪುಳವಾಗಿ ಹರಡಿಹೋಗಿವೆ ಎಂದು ಹೇಳುತ್ತಾರೆ. ಲಕ್ಷ ಸಂಖ್ಯೆಯಲ್ಲಿ ನಿರ್ದಿಷ್ಟ ನಕ್ಷತ್ರಗಳನ್ನು ದೀರ್ಘಕಾಲ ಅಭ್ಯಸಿಸಿದಾಗ ಮಾತ್ರ ಏನಾದರೂ ಸುಳುಹು ದೊರೆತೀತು ಅಷ್ಟೆ. ಸದ್ಯ (2002) ಇಂಥ ವೀಕ್ಷಣೆ ಕೆಲವು ನಕ್ಷತ್ರಗಳಿಂದ ಆಚೆಗೆ ಸಾಗಿಲ್ಲ.

ಹೀಗೆ ಪ್ರಯೋಗ ತೆವಳುತ್ತ ಮುನ್ನಡೆಯುತ್ತಿರುವಾಗ ಚಿಂತನೆ ಮನೋವೇಗದಿಂದ ಮುಂಜಿಗಿದಿದೆ. ಜೀವಿಗಳ ಅಸ್ತಿತ್ವ ಕುರಿತ ಊಹಾಪೋಹಗಳು ಮುಂದಿನ ಹಂತ. ಭೂಮಿಯಲ್ಲಿ ಜೀವಿಗಳು ಮೈದಳೆದು ವಿಕಸಿಸಿರುವ ಬಗೆಯನ್ನು ಅಭ್ಯಸಿಸಿರುವ ವಿಜ್ಞಾನಿಗಳ ಪ್ರಕಾರ ಈ ವಿಕಾಸ ಆಕಸ್ಮಿಕ ಅಲ್ಲ, ವಿರಳ ವಿಚಿತ್ರ ಘಟನೆಯೂ ಅಲ್ಲ. ಯೋಗ್ಯ ಪರಿಸರ ಮತ್ತು ದೀರ್ಘ ಕಾಲಾವಧಿ ದೊರೆತಲ್ಲಿ ಇತರ ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳಲ್ಲಿಯೂ ಜೀವಿ ಮೊಳೆಯುವುದು ಸಹಜ ಪ್ರಕ್ರಿಯೆ. ಒಮ್ಮೆ ಒಂದು ಗ್ರಹದಲ್ಲಿ ಜೀವಿ ಉತ್ಪತ್ತಿ ಆಯಿತೋ ಮತ್ತೆ ಅಲ್ಲಿಯ ಪರಿಸರವನ್ನು ಅವಲಂಬಿಸಿ ನೈಸರ್ಗಿಕ ಆಯ್ಕೆ ಹಾಗೂ ಹೊಂದಾಣಿಕೆಯ ಪಥದ ಮೇಲೆ ವಿಕಾಸರಥ ಉರುಳಿಯೇ ಉರುಳುತ್ತದೆ. ಆದರೆ ಅದು ಭೂಮಿಯಲ್ಲಿಯ ಮಾರ್ಗವೇ ಆಗಬೇಕಾಗಿಲ್ಲ. ಅರ್ಥಾತ್‌ಅಲ್ಲಿಯ ಜೀವಿಗಳ ಆಕಾರ ರೂಪ ಇಲ್ಲಿಯ ಜೀವಿಗಳವಂತೆ ಇರಬೇಕಾಗಿಲ್ಲ. ಆದ್ದರಿಂದ ಅನ್ಯ ನಕ್ಷತ್ರವೊಂದರಲ್ಲಿ ಮಾನವನನ್ನು ಅಥವಾ ಭೂಮಿಯಲ್ಲಿರುವ ಇತರ ಪ್ರಾಣಿಗಳನ್ನು ನಿರೀಕ್ಷಿಸುವುದು ಸರಿ ಆಗದು. ಆದರೆ ಆ ಜೀವಿಗಳೂ ನಮ್ಮಲ್ಲಿರುವಂತೆ ವಿಶ್ವದ ವಿವಿಧ ಶಕ್ತಿ ಹಾಗೂ ಬಲಗಳಿಗೆ ಯೋಗ್ಯ ಅನುಕ್ರಿಯೆಗಳನ್ನು ವ್ಯಕ್ತಪಡಿಸುವಂಥ ಅಂಗೋಪಾಂಗಗಳನ್ನು ಪಡೆದಿರುವುದು ಖಂಡಿತ. ಅಂತೂ ವಿಶ್ವದಲ್ಲಿ ಮಾನವ ಏಕೈಕ ಧೀಮಂತ ಜೀವಿ ಅಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ.

ವಿಶ್ವದ ಸಮಸ್ತ ಜೀವಿಗಳೂ ವಿಕಾಸಪಥದಲ್ಲಿ ಮೂರು ಮುಖ್ಯ ಮಜಲುಗಳನ್ನು ಹಾಯುತ್ತವೆ: ನೈಸರ್ಗಿಕ ಸ್ಥಿತಿ, ಉದಾಹರಣೆಗೆ ಮೊದಲ ಮಾನವ; ಧೀಶಕ್ತಿಯ ಪ್ರೌಢರೂಪ. ಉದಾಹರಣೆಗೆ ತಂತ್ರವಿದ್ಯಾಪಾರಂಗತ ಆಧುನಿಕ ಮಾನವ. ಭೂಮಿಯಲ್ಲಿ ಜೀವಿವಿಕಾಸ ಸಾಕಷ್ಟು ಮುಂದುವರಿದು ತೀರ ಈಚೆಗೆ ನಿಖರವಾಗಿ 20ನೆಯ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ಮಜಲನ್ನು ಏರಿದೆ.

ಭೂಮ್ಯತೀತ ಧೀಶಕ್ತಿಗಳೊಡನೆ ಸಂಪರ್ಕ ಏರ್ಪಡಿಸುವುದು ಹೇಗೆ?

ವಿಶ್ವದ ವಯಸ್ಸು ಸುಮಾರು 1500 ಕೋಟಿ ವರ್ಷಗಳು. ವ್ಯಾಪ್ತಿ, ಕಾಲ ಎರಡರಲ್ಲಿಯೂ ಅಗಾಧವಾಗಿರುವ ಇದರಲ್ಲಿರಬಹುದಾದ ಸಮಸ್ತ ಧೀಶಕ್ತಿಗಳೂ ನಮ್ಮ ವರ್ತಮಾನ ಮಟ್ಟವನ್ನು ಐದಿವೆಯೆಂದು ಭಾಸಿಬೇಕಾಗಿಲ್ಲ. ಕೆಲವು ಇನ್ನೂ ಆದಿಮ ಸ್ಥಿತಿಯಲ್ಲಿದ್ದರೆ ಮತ್ತೆ ಕೆಲವು ನಮ್ಮ ಹೆಗಲೆಣೆಯಾಗಿ ಅಭಿವರ್ಧಿಸಿರಬಹುದು. ಇನ್ನು ಹಲವು ನಮಗಿಂತ ಎಷ್ಟೆಷ್ಟೊ ಮುಂದೆ ಸಾಗಿರಬಹುದು. ಅಂದರೆ ನಮ್ಮ 19ನೆಯ ಶತಮಾನದ ತಂತ್ರವಿದ್ಯೆಯ ಮಟ್ಟದವು ಕೆಲವು, ಪ್ರಸಕ್ತ ಮಟ್ಟದವು ಕೆಲವು, ಭಾವೀ 30ನೆಯ ಶತಮಾನದ ಮಟ್ಟದವು. ಕೆಲವು, ಇತ್ಯಾದಿ. ನಮ್ಮ ಮಟ್ಟದಲ್ಲಿಯೂ ನಮಗಿಂತ ಎತ್ತರದಲ್ಲಿಯೂ ಇರುವ ಧೀಶಕ್ತಿಗಳೊಡನೆ ನಾವು ತಾತ್ತ್ವಿಕವಾಗಿ ಸಂಪರ್ಕ ಏರ್ಪಡಿಸಿ ವಿಚಾರವಿನಿಮಯ ನಡೆಸುವುದು ಸಾಧ್ಯವಿದೆ.

ಇಂಥ ಸಂಪರ್ಕ ಏರ್ಪಡಿಸಲು ಎರಡು ಹಾದಿಗಳಿವೆ: ಆಕಾಶನೌಕೆಗಳ ಉಡ್ಡಯನ, ರೇಡಿಯೋ ಸ್ಪಂದಗಳ ಪ್ರೇಷಣ (transmission). ವಿಶ್ವದ ಮಹಾದೂರಗಳನ್ನು ಹೋಲಿಸುವಾಗ ಇಡೀ ಸೌರವ್ಯೂಹವೇ ಅಂಗೈ ಅಗಲಕ್ಕೆ ಕುಸಿಯುತ್ತದೆ. ಉದಾಹರಣೆಗೆ ಭೂಮಿ – ಸಮೀಪತಮಕಿನ್ನರ ದೂರ ಭೂಮಿ – ಸೂರ್ಯ ದೂರದ 2,82,510 ಮಡಿ ದೀರ್ಘತರ. ಭೂಮಿಯ ನೆರೆಗ್ರಹವಾದ ಮಂಗಳಕ್ಕೆ ತೆರಳಲು (ತೆವಳಲು?) ವೈಕಿಂಗ್‌ನೌಕೆಗೆ ಬೇಕಾದ ಅವಧಿ ಒಂದು ವರ್ಷಕ್ಕಿಂತ ಸ್ವಲ್ಪ ಕಡಿಮೆ. ಅಂದ ಮೇಲೆ ಆಕಾಶನೌಕೆಯ ಇರುವೆ ಸರಿತ, ನಮ್ಮ ದೃಷ್ಟಿಯಿಂದ ಎಷ್ಟೇ ಹಿರಿವೇಗವಾಗಿದ್ದರೂ (ಸೆಕೆಂಡಿಗೆ 12 ಮೀ) ವಿಶ್ವದಲ್ಲಿ ನಮ್ಮನ್ನು ಎಲ್ಲಿಗೂ ಒಯ್ಯದು. ಆದ್ದರಿಂದ ಅನ್ಯಲೋಕಗಳೊಡನೆ ಸಂಪರ್ಕ ಪಡೆಯಲು ಉಳಿದಿರುವ ಹಾದಿ ಎರಡನೆಯದು ಮಾತ್ರ: ರೇಡಿಯೋಸ್ಪಂದಗಳ ಪ್ರೇಷಣೆ. ವಿಶ್ವದಲ್ಲಿ ಗರಿಷ್ಠ ವೇಗ ಎಂದೆನ್ನಿಸಿರುವ ಬೆಳಕಿನ ವೇಗದಿಂದ ಈ ಸ್ಪಂದಗಳು ಧಾವಿಸುವುವು. ಇವು ಭೂಮಿ – ಸೂರ್ಯ ಅಂತರವನ್ನು ಕೇವಲ 8 ಮಿನಿಟುಗಳಲ್ಲಿ ಅಡ್ಡ ಹಾಯ್ದರ ಭೂಮಿ – ಸಮೀಪತಮ ಕಿನ್ನರ ಅಂತರವನ್ನು ಗಮಿಸಲು 4.3 ವರ್ಷಗಳನ್ನೇ ತೆಗೆದುಕೊಳ್ಳುತ್ತವೆ. ಇನ್ನೂ ದೂರ ದೂರದ ನಕ್ಷತ್ರಗಳನ್ನೂ ಅವನ್ನು ಸುತ್ತುತ್ತಿರಬಹುದಾದ ಗ್ರಹಗಳನ್ನೂ ತಲುಪಲು ಆಯಾ ಗುರಿಯ ದೂರವನ್ನು ಅನುಸರಿಸಿ ನೂರು, ಸಾವಿರ, ಲಕ್ಷ, ಕೋಟಿ ವರ್ಷಗಳೇ ಬೇಕಾಗುವುವು. ವಿಶ್ವದ ಅಗಾಧ ಆಳದೆದುರು ಇವು ದೊಡ್ಡ ಸಂಖ್ಯೆಗಳೇನೂ ಅಲ್ಲ. ಅಲ್ಲಿಗೆ ಈ ಗರಿಷ್ಠ ವೇಗವೂ, ವಿಶ್ವದ ಮುನ್ನೆಲೆಯಲ್ಲಿ, ಇರುವೆ ಸರಿತದ ಹೀನ ಸ್ಥಿತಿಗೆ ಕೆಡೆದುಹೋಗುವುದೆಂದಾಯಿತು. ಬೇರೆ ಯಾವ ಸಂದೇಶವಾಹಕ ದೂತನನ್ನೂ ರವಾನಿಸುವ ಸ್ಥಿತಿಯಲ್ಲಿ ಇಂದು (2002)ನಾವಿಲ್ಲ.

ನಮ್ಮ ನೆರೆ ಗ್ರಹವಲಯ ಪ್ರಾಯಶಃ ಬಾರ್ನಾರ್ಡನ ನಕ್ಷತ್ರದ ಸುತ್ತ ಇದೆ ಎಂದು ಹೇಳಿದ್ದು ಸರಿಯಷ್ಟೆ. ಅಲ್ಲಿಗಾದರೂ ರೇಡಿಯೊ ಸ್ಪಂದಗಳು ತಲುಪಲು ಆರು ವರ್ಷಗಳೇ ಬೇಕು, ಮತ್ತೆ ಹಿಂತಿರುಗಿ ಬರಲು ಅಷ್ಟೇ ಕಾಲಾವಕಾಶ ಅಗತ್ಯ. ಇನ್ನು ದೂರದೂರದ ಬುದ್ಧಿವಂತ ಲೋಕಗಳಿಗೆ ನಮ್ಮ ‘ಕಾಗದ’ ತಲುಪಿ ಅಲ್ಲಿಂದ ‘ಮಾರೋಲೆ’ ಬರಲು ಹಲವು ನೂರು ಸಾವಿರ ವರ್ಷಗಳೇ ಬೇಕಾಗುತ್ತವೆ. ನಮ್ಮ ಇಂದಿನ ಬಾಲಿಶ ತಂತ್ರವಿದ್ಯೆಯ ನೆರವಿನಿಂದ ವಿಶ್ವದ ಅಗಾಧತೆಯನ್ನು ತಿಳಿಯಲು ಹೊರಟರೆ ಅದು ಜಿಗಣೆ ಮೊಳಹಾಕಿ ಗೌರೀಶಂಕರವನ್ನು ಅಳೆಯಲು ಪ್ರಯತ್ನಿಸಿದಂತಾದೀತು – ಹಲವು ನೂರು ತಲೆಮಾರುಗಳ ತನಕ ಯಾವ ಗಮನಾರ್ಹ ಫಲಿತಾಂಶವೂ ಲಭಿಸದು! ನಮ್ಮಲ್ಲಿಂದ ಪ್ರೇಷಿತವಾದ ಯಾವ ಉದ್ದಿಷ್ಟ ರೇಡಿಯೋ ಸ್ಪಂದವೂ ಈಗ ಅಂದರೆ 2002ರಲ್ಲಿ ಎಪ್ಪತ್ತು ಜ್ಯೋತಿರ್ವರ್ಷಗಳಿಂದಾಚೆಗೆ ಹೋಗಿಲ್ಲ. ಇದನ್ನು ಚೆನ್ನಾಗಿ ಮನಗಂಡಿರುವ ವಿಜ್ಞಾನಿಗಳು ಈ ಜಟಿಲ ಸಮಸ್ಯೆಯನ್ನು ಇನ್ನೊಂದು ನಿಲವಿನಿಂದ ಅವಲೋಕಿಸಿದ್ದಾರೆ.

ತಂತ್ರವಿದ್ಯೆಯಲ್ಲಿ ಮತ್ತು ಆ ಕಾರಣದಿಂದ ಧೀಶಕ್ತಿಯಲ್ಲಿ ನಮಗಿಂತ ಎಷ್ಟೋ ಎತ್ತರದ ಮಜಲುಗಳನ್ನು ಏರಿರುವ ನಾಗರಿಕತೆಗಳು ವಿಶ್ವದ ವಿವಿಧ ಭಾಗಗಳಲ್ಲಿ ವಿಕಸಿಸಿರುವುವು ಎಂಬುದನ್ನು ಅಂಗೀಕರಿಸಿದ ಬಳಿಕ, ಅವು ಪರಮಾಣವಿಕ ಅಂತಃಕಲಹಗಳಿಂದ ಹರಾಕಿರಿಗೆ ಒಳಗಾಗದೆ ಶಾಂತಿಮಾರ್ಗಗಾಮಿಗಳಾಗಿ ಪ್ರಗತಿ ಸಾಧಿಸಿದ್ದೇ ಆದರೆ, ಈ ವೇಳೆಗೆ ಅನ್ಯಗ್ರಹಗಳಲ್ಲಿ ಧೀಶಕ್ತಿಗಾಗಿ ಶೋಧನೆ ನಡೆಸುವ ದಿಶೆಯಲ್ಲಿ ಸಾಕಷ್ಟು ಯಶಸ್ಸು ಗಳಿಸಿರುತ್ತವೆ ಎಂಬ ಅಂಶ ಸಹಜವಾಗಿ ಅನುಗತವಾಗುತ್ತದೆ. ಅರ್ಥಾತ್‌ಅವುಗಳಿಂದ ಜಗತ್ತಿನ ನಾನಾ ತಾಣಗಳ ಕಡೆಗೆ ಇಂಥ ಅನ್ವೇಷಣೆಗಾಗಿ ವಾಹನಗಳು ರವಾನೆಗೊಂಡಿರುವುದು ಕೂಡ ಸಂಭಾವ್ಯ. ಈ ರವಾನೆಯ ಆಧೋರಚನೆಯಾಗಿರುವ (infrastructun) ವಿಜ್ಞಾನ ಮತ್ತು ತಂತ್ರವಿದ್ಯೆ ಏನೆಂಬುದು ನಮಗೆ ಅರ್ಥವಾಗದು. ವಿಶ್ವದ ಭೌತವಿಜ್ಞಾನಿಯಮಗಳನ್ನೂ ಪದಾರ್ಥಗಳ ಗುಣಧರ್ಮಗಳನ್ನೂ ಚೆನ್ನಾಗಿ ಅರಿತಿರುವ ನಮ್ಮ ವಿಜ್ಞಾನಿಗಳ ಅಭಿಪ್ರಾಯದಲ್ಲಿ ಅತಿದೂರದ ಒಂದು ಗ್ರಹದಿಂದ ಯಾವುದೇ ವಾಹನ ಜೀವಿಸಹಿತವಾಗಿ ಅಥವಾ ಜೀವಿರಹಿತವಾಗಿ ಇಲ್ಲಿಯವರೆಗೆ ಬರುವುದು ತೀರ ಅಸಂಭಾವ್ಯ ಎಂದಿದೆ. ಆದ್ದರಿಂದ ಅವರ ಪ್ರಧಾನ ಲಕ್ಷ್ಯ ಸ್ಪಂದಗಳ ಶೋಧನೆಯತ್ತ ಹರಿದಿದೆ.

ಭೂಮ್ಯತೀತ ಧೀಶಕ್ತಿಗಳು ಈಗ ಹಲವು ಸಾವಿರ ವರ್ಷಗಳ ಹಿಂದಿನಿಂದಲೇ ವಿಶ್ವದಲ್ಲಿಯ ಇತರ ಬುದ್ಧಿವಂತಜೀವಿಗಳ ಅನ್ವೇಷಣೆಯಲ್ಲಿ ನಿರತವಾಗಿದ್ದು ನಿರ್ದಿಷ್ಟ ರೇಡಿಯೊಸ್ಪಂದಗಳನ್ನು ಉದ್ದಿಷ್ಟ ಲಕ್ಷ್ಯಗಳೆಡೆಗೆ ಪ್ರೇಷಿಸುತ್ತಿರಬಹುದು. ಈ ಲಕ್ಷ್ಯಗಳ ಪೈಕಿ ಸೌರವ್ಯೂಹ, ಅಂದರೆ ನಾವು, ಸೇರಿರುವುದು ಖಂಡಿತ ಶಕ್ಯ. ವಿವಿಧ ಆಕರಗಳಿಂದ ಆಗಮಿಸಿರುವ ರೇಡಿಯೊ ಸ್ಪಂದಗಳು ಈಗ ಭೂಮಿಯನ್ನು ಆವರಿಸಿರಬಹುದು. ಈ ಸ್ಪಂದಸಮುದ್ರದಿಂದ ಖಚಿತ ಮಾಹಿತಿಯನ್ನು ಹೆಕ್ಕಿ ಹೊರತೆಗೆದು ವಿಶ್ಲೇಷಿಸಿ ಅದು ಅನ್ಯ ಲೋಕಗಳ ಧೀಮಂತ ಜೀವಿಗಳ ಸ್ನೇಹವಾಣಿ, ಸಂಪರ್ಕ ಸೇತುವೆ ಎಂಬುದಾಗಿ ನಾವು ಸ್ಥಿರೀಕರಿಸಿದ್ದೇ ಆದರೆ, ಭೂಮ್ಯತೀತ ಧೀಶಕ್ತಿಗಾಗಿ ಶೋಧನೆ ನಡೆಸುವ ದಿಶೆಯಲ್ಲಿ, ಅದೊಂದು ಹನುಮಂತಲಂಘನವೇ (giant leap) ಆದೀತು. ಅದನ್ನು ಸಾಧಿಸಬಲ್ಲ ಮಟ್ಟಕ್ಕೆ ನಮ್ಮ ತಂತ್ರವಿದ್ಯೆ ಈಗ ಏರಿದೆ. ಜ್ಞಾನವೀಗ ಹೊಸ ಸೀಮೆಗೆ ಅಡ್ಡಹಾಯಲು ಹೊಸ್ತಿಲ ಬಳಿ ಬಂದು ನಿಂತಿದೆ – ದೆಹಲಿ ಉತ್ತರಣ ಎಂದೋ!

ಭೂಮ್ಯತೀತ ಧೀಶಕ್ತಿ ಎನ್ನುವುದು ಕವಿಕಲ್ಪನೆಯೇ ಅಥವಾ ವಿಜ್ಞಾನಿಚಿಂತನೆಯ ವ್ಯವಸ್ಥಿತ ಮುಂಚಾಚಿಕೆಯೇ ಎಂಬ ಅಂಶವನ್ನು ದೃಢಪಡಿಸಲೆಂದು ಅಮೆರಿಕದ ನಾಸಾ ಸಂಸ್ಥೆ ಹದಿನೈದು ಮಂದಿ ಪ್ರಸಿದ್ಧ ವಿಜ್ಞಾನಿಗಳ ತಂಡವನ್ನು ಇದರ ಅಧ್ಯಯನಕ್ಕಾಗಿ ನಿಯೋಜಿಸಿತು. ಆ ತಂಡ ಎರಡು ವರ್ಷಕಾಲ ಸಂಶೋಧನೆ ನಡೆಸಿ ಭೂಮ್ಯತೀತ ಧೀಶಕ್ತಿಗಾಗಿ ಶೋಧನೆ ನಡೆಸುವುದು ಈಗ ಶಕ್ಯ ಹಾಗೂ ಸಕಾಲಿಕ ಮತ್ತು ಸರ್ಕಾರ ಇದಕ್ಕಾಗಿ ಒಂದು ಯೋಜನೆಯನ್ನು ಪ್ರವರ್ತಿಸಬೇಕು ಎಂಬುದಾಗಿ 1976 ಡಿಸೆಂಬರಿನಲ್ಲಿ ಶಿಫಾರಸು ಮಾಡಿದೆ. 1983ರಲ್ಲಿ ಇದರ ಅನುಷ್ಠಾನಕ್ಕೆ ಹೆಚ್ಚಿನ ಕುಮ್ಮಕ್ಕು ಲಭಿಸಿದೆ.

ಅದೃಶ್ಯಲೋಕದ ಅಶರೀರವಾಣಿಯನ್ನು ಆಲಿಸಲು ಇಂದು ಯೋಜನೆಗಳು ಕಾರ್ಯರೂಪಕ್ಕೆ ಇಳಿದಿವೆ. ಬಾರ್ನಾರ್ಡನ ನಕ್ಷತ್ರ ಮೊದಲಾದ ನಿರ್ದಿಷ್ಟ ಲಕ್ಷ್ಯಗಳತ್ತ ವಿಶೇಷ ಗಮನ ಹರಿಸಲಾಗಿದೆ. ಪ್ರಸಕ್ತ ಶತಮಾನದಲ್ಲೇ (21) ಆ ವಾಣಿ ಅನುರಣಿಸಬಹುದು. ವಿಶ್ವದಲ್ಲಿ ಮಾನವ ಏಕಾಂಗಿ ಅಲ್ಲ ಎಂಬ ಊಹೆಯನ್ನು ಸ್ಥಿರೀಕರಿಸಬಹುದು. ವಿಶ್ವ ಬಾಂಧವ್ಯವನ್ನು ಬೆಸೆಯಬಹುದು.

ಆದೃಶ್ಯ ಲೋಕದ ಅನೂಹ್ಯ ರೂಪದ
ಅನಂತಕಾಲದ
ಯಾತ್ರಿಕರೇ
ಮಣ್ಣಿನ
ಮನದಲಿ ಹೊನ್ನನೆ ಬೆಳೆಯುವ
ಅಪೂರ್ವ
ತೇಜದ ಮಾಂತ್ರಿಕರೆ!
ಅತಿಥಿಗಳ
ನೀವೆಲ್ಲರು ಇಲ್ಲಿಗೆ
ನೆಲಸಲು
ಬಂದವರಲ್ಲ
ಒಂದೆಗಳಿಗೆ
ಆಮೋದಕೆ ಬರುವಿರಿ
ಬಂದರಗಳಿಗೆಯೊಳೇ
ಮೈಗೆರವಿರಿ
ವಿಜನ
ವಿಜನ ಮನವು
ಶೂನ್ಯ
ಶೂನ್ಯ ದಿನವು ||
ಗೋಪಾಲಕೃಷ್ಣ ಅಡಿಗ
(2002).