ರೇಡಿಯೊ ಆಕರಗಳ ಅಧ್ಯಯನ

ಆಕಾಶಕಾಯಗಳಿಂದ ಹೊರಸೂಸುವ ಶಕ್ತಿ ಪ್ರಕಾರಕ್ಕೆ ವಿಕಿರಣವೆಂದು (radiation) ಹೆಸರು. ಮಾನವನ ದೃಗಿಂದ್ರಿಯವನ್ನು (ಕಣ್ಣು) ಕುರಿತು ಇದರಲ್ಲಿ ಎರಡು ಬಗೆಗಳಿವೆ: ಗೋಚರ ವಿಕಿರಣ, ಆಗೋಚರ ವಿಕಿರಣ, ಮೊದಲನೆಯದು ರೂಢಿಯ ಮಾತಿನಲ್ಲಿ ಬೆಳಕು.

ವಿಕಿರಣವನ್ನು ವಿಶ್ಲೇಷಿಸಿದಾಗ ಅದು ವಿವಿಧ ಅಲೆಯುದ್ಧಗಳ ಶಕ್ತಿ ಪ್ರವಾಹವೆಂದು ತಿಳಿಯುತ್ತದೆ. ಬೆಳಕಿನ (ಗೋಚರ ವಿಕಿರಣ) ಅಲೆಯುದ್ಧವನ್ನು (wavelength) ಶಿಷ್ಟ ಅಲೆಯುದ್ಧವೆಂದು ಪರಿಗಣಿಸಿದರೆ ಆಗ ಅಗೋಚರ ಬಗೆಯಲ್ಲಿ ಎರಡು ವಿಭಾಗಗಳು ಏರ್ಪಡುತ್ತವೆ: ಬೆಳಕಿನ ಅಲೆಯುದ್ಧಕ್ಕಿಂತ ದೀರ್ಘಕಾಲ ಅಲೆಯುದ್ಧವಿರುವ ವಿಭಾಗ, ಹ್ರಸ್ವತರ ಅಲೆಯುದ್ಧವಿರುವ ವಿಭಾಗ. ಹೀಗೆ ವಿಕಿರಣದಲ್ಲಿ ಮೂರು ವಿಭಾಗ ಉಂಟು: ದೀರ್ಘ ಅಲೆಯುದ್ಧ ಬೆಳಕು, ಹ್ರಸ್ವ ಅಲೆಯುದ್ಧ, ಆಕಾಶಕಾಯಗಳಿಂದ ಉತ್ಸರ್ಜಿತವಾಗುವ (emission)ಈ ವಿಭಾಗಗಳು, ಅಂದರೆ ಸಮಗ್ರ ವಿಕಿರಣ, ನಿರ್ದ್ರವ್ಯತೆಯಲ್ಲಿ (vacunm) ಬೆಳಕಿನ ವೇಗದಿಂದ (ಸೆಕೆಂಡಿಗೆ ಸುಮಾರು 300,000 ಕಿ. ಮೀ.) ಧಾವಿಸುತ್ತವೆ.

ಮುಖ್ಯವಾಗಿ ದೀರ್ಘ ಅಲೆಯುದ್ದ ವಿಭಾಗದಲ್ಲಿ ರೇಡಿಯೊತರಂಗಗಳೂ ಹ್ರಸ್ವ ಅಲೆಯುದ್ಧ ವಿಭಾಗದಲ್ಲಿ ಎಕ್ಸ್‌ಕಿರಣಗಳೂ ಸೇರಿವೆ. ಖಗೋಳವಿಜ್ಞಾನ, ವ್ಯಾಪಕವಾಗಿ ಖಭೌತವಿಜ್ಞಾನ (astrophysics), ಆಕಾಶಕಾಯಗಳಿಂದ ಉತ್ಸರ್ಜಿತವಾಗುವ ವಿಕಿರಣದ ಅಧ್ಯಯನ. ಆದ್ದರಿಂದ ಇದರಲ್ಲಿ ಮೇಲಿನ ವಿತರಣೆಯ ಪ್ರಕಾರ ಮೂರು ವಿಭಾಗಗಳು ಏರ್ಪಡುತ್ತವೆ: ರೇಡಿಯೊ ಖಗೋಳವಿಜ್ಞಾನ, ಗೋಚರ ಖಗೋಳವಿಜ್ಞಾನ. ಎಕ್ಸ್‌ಕಿರಣ ಖಗೋಳವಿಜ್ಞಾನ.

ದೂರವಾಣಿಯಿಂದ ಆಕಾಶವಾಣಿಗೆ

ಕಾರ್ಲ್‌ಗುತ್ತೆ ಜಾನ್ಸ್ಕಿ, (1905 – 50) ಅಮೆರಿಕದ ರೇಡಿಯೊ ಇಂಜಿನಿಯರ್‌. ಅಲ್ಲಿಯ ಪ್ರಸಿದ್ಧ ಬೆಲ್‌ದೂರವಾಣಿ ಕಂಪನಿಯಲ್ಲಿ ಇವನೊಬ್ಬ ತಂತ್ರಕುಶಲಿ. ಆಗ ತಾನೇ ಕಾಲೇಜಿನಲ್ಲಿ ಹೊರಬಂದಿದ್ದ ಈ ಕೃಶಾಂಗನನ್ನು ಕಂಪೆನಿಯು ಗ್ರಾಹಕರ ದೂರವಾಣಿ ಮತ್ತು ರೇಡಿಯೊ ಉಪಕರಣಗಳಲ್ಲಿ ಗಲಭೆ ಉಂಟಾಗುವುದರ ಕಾರಣ ಮತ್ತು ನಿವಾರಣೆ ಶೋಧಿಸಲು ನಿಯೋಜಿಸಿತು (1932).

ಜಾನ್ಸ್ಕಿ ದೂರದ ಒಂದು ಹಳ್ಳಿಗೆ ಹೋದ. ಅಲ್ಲಿ 30 ಮೀಟರ್‌ಉದ್ದ ಗ್ರಾಹಕ ತಂತು (aeriel) ಸ್ಥಾಪಿಸಿ ಅದು ಸಂಗ್ರಹಿಸಿದ ಅಲೆಗಳನ್ನು ರೇಡಿಯೊ ಉಪಕರಣದ ಮೂಲಕ ಧ್ವನಿಯಾಗಿ ಪರಿವರ್ತಿಸಿ ಆಲಿಸತೊಡಗಿದ. ಮಿಂಚು ಉಲ್ಕೆ ಮುಂತಾದ ನೈಸರ್ಗಿಕ ಕಾರಕಗಳಿಂದಲೂ ಮನೆ ಮನೆಗಳ ವಿದ್ಯುದುಪಕರಣಗಳು, ವಿಮಾನಗಳ ಹಾರಾಟಗಳು ಮಾನವಕೃತ ಕಾರಕಗಳಿಂದಲೂ ಜನಿಸಿದ ರೇಡಿಯೊ ಗಲಭೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ವಿಶ್ಲೇಷಿಸಲು ಹೂಟೆಹೂಡಿದ. ಈ ಆಧ್ಯಯನವನ್ನು ಆಧರಿಸಿ ಕಂಪಿನಿ ದೂರವಾಣಿಯಲ್ಲಿಯೂ ರೇಡಿಯೊದಲ್ಲಿಯೂ ಹಲವಾರು ಸುಧಾರಣೆಗಳನ್ನು ರೂಪಿಸಿತು.

ಆದರೆ ಜಾನ್ಸ್ಕಿಗೆ ಅರ್ಥವಾಗದ ಒಂದು ನೂತನ ಸಮಸ್ಯೆ ಜೊತೆಯಲ್ಲೇ ಸೆಟೆದು ನಿಂತಿತು. ಅದು ಅವನ ರೇಡಿಯೊದಿಂದ ನಿರಂತರವಾಗಿ ಹೊಮ್ಮುತ್ತಿದ್ದ ಹಿಸ್‌ನಾದ. ನಿಮ್ಮರೇಡಿಯೊದ ಇಲ್ಲವೇ ಟಿವಿಯ ಗುಂಡಿ ಒತ್ತಿದ ಅಥವಾ ತಿರುಗಿಸಿದ ಒಡನೆ ಅದರಿಂದ ವಿದ್ಯುತ್ತು ಸದ್ದು ಮಾಡುತ್ತ ಹರಿಯುತ್ತಿದೆಯೋ ಎನ್ನುವಂಥ ಆಸ್ಪಷ್ಟನಾದ ಬಿತ್ತರವಾಗುವುದು ಸರಿಯಷ್ಟೆ. ಇದರ ನಿಜಕಾರಣ ರೇಡಿಯೊ ರಚನೆಯಲ್ಲಿಯ ಅಸಮರ್ಪಕತೆ. ಜಾನ್ಸ್ಕಿ ಮೊದಲ ಹೀಗೆಯೇ ಊಹಿಸಿದ. ತನ್ನ ಉಪಕರಣಗಳನ್ನು ಪರಿಶೀಲಿಸಿದ. ಪರಿಷ್ಕರಿಸಿದ. ಆದರೂ ಮಲೆನಾಡಿನ ನೀರವವನದಲ್ಲಿ ದೂರದ ತೊರೆ ಹರಿಯುವಾಗ ಉಂಟಾಗುವಂಥ ಹಿಸ್ನಾದ ಮಾಸಲಿಲ್ಲ. ಇದು ತನ್ನ ಪರಿಸರದಲ್ಲಿಯ ಯಾವುದೇ ವಿಧವಾದ ವಿದ್ಯತ್‌ಕ್ಷೋಭೆಯಿಂದಲೂ ಉಂಟಾದದ್ದಲ್ಲವೆಂದು ಖಚಿತಪಡಿಸಿಕೊಂಡ.

ಅದೇ ವೇಳೆ ಇನ್ನೊಂದು ಆಶ್ಚರ್ಯಕರ ಸಂಗತಿ ಅವನ ಲಕ್ಷ್ಯ ಸೆಳೆಯಿತು: ಹಿಸ್‌ನಾದದ ಉಗಮಸ್ಥಾನ ಆಕಾಶದಲ್ಲಿ ಚಲಿಸುತ್ತಿದೆ. ಸೂರ್ಯನೊಡನೆ ಮೂಡಿ ಮೇಲೇರಿ ಕೆಳಗಿಳಿದು ಕಂತುತ್ತಿದೆ! ಸಹಜವಾಗಿ ಜಾನ್ಸ್ಕಿ ತೀರ್ಮಾನಿಸಿದ ಸೂರ್ಯನೇ ಈ ‘ರೇಡಿಯೊ ಸಂಗೀತ’ದ ಆಕರ ಎಂದು. ಆದರೆ ನಿಸರ್ಗ ಇವನ ಜೊತೆ ಕಣ್ಣಮುಚ್ಚಾಲೆ ಆಟ ಆಡತೊಡಗಿತು. ದಿನಗಳೆದಂತೆ ಹಿಸ್‌ನಾದದ ಆಕರ ಸೂರ್ಯನ ಜೊತೆ ತಪ್ಪು ಕಾಲು ಇಡುತ್ತಿತ್ತು. ಅದು ಸೂರ್ಯನಿಗಿಂತ ಮೊದಲು ಮೂಡಿ ಮೊದಲು ಕಂತುತ್ತಿತ್ತು. ವಾಸ್ತವವಾಗಿ ಇಲ್ಲಿ ಸೂರ್ಯನೇ ತಪ್ಪುಗಾರ. ಅತಿದೂರದ ಸ್ಥಿರ ನಕ್ಷತ್ರ ಚಿತ್ರಗಳನ್ನು ಕುರಿತಂತೆ ಸೂರ್ಯ ದಿನದಿಂದ ದಿನಕ್ಕೆ 4 ಮಿನಿಟುಗಳಷ್ಟು ನಿಧಾನವಾಗಿ ಮೂಡಿ ಕಂತುತ್ತದೆ. ಅಂದ ಮೇಲೆ ಹಿಸ್‌ನಾದ ಮೂಲವು ಸ್ಥಿರನಕ್ಷತ್ರ ವಲಯದಲ್ಲಿ – ನಿರ್ದಿಷ್ಟವಾಗಿ ಆಕಾಶಗಂಗೆಯಲ್ಲಿ – ಇದೆಯೆಂದು ಜಾನ್ಸ್ಕಿ ನಿಗಮಿಸಿದ (deduced). ಆಕಾಶಗಂಗೆಯ ಅಸಂಖ್ಯಾತ (4×1011) ನಕ್ಷತ್ರಗಳ ಸಾಮೂಹಿಕ ಗಾನವೇ ಈ ಹಿಸ್‌ನಾದ. ಹೀಗೆ ಆರಂಭವಾಯಿತು ರೇಡಿಯೊ ಖಗೋಳವಿಜ್ಞಾನ (1932 – 33). ನಕ್ಷತ್ರವನ್ನು ಕಾಣುವುದು ಮಾತ್ರವಲ್ಲ, ಕೇಳುವುದು ಕೂಡ ಸಾಧ್ಯವಿದೆ ಎಂದು ಆಗ ವೇಧ್ಯವಾಯಿತು!

ಗೋಚರ ನಕ್ಷತ್ರಗಳು ಪ್ರಸರಿಸುವ ಬೆಳಕನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ದೃಗ್ದೂರದರ್ಶಕ. ಇದು ಆಕಾಶವನ್ನು ನೋಡುವ ಕಣ್ಣು! ಅಂತೆಯೇ ಅಗೋಚರ ರೇಡಿಯೊ ನಕ್ಷತ್ರಗಳು ಪ್ರಸರಿಸುವ ರೇಡಿಯೊ ಅಲೆಗಳನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ರೇಡಿಯೊ ದೂರದರ್ಶಕ. ಇದು ಆಕಾಶಕ್ಕೆ ತೆರೆದ ಕಿವಿ!

ರೇಡಿಯೊ ಖಗೋಳವಿಜ್ಞಾನದ ಕಾರಣಪುರುಷ ಜಾನ್ಸ್ಕಿ. ಆದರೆ ಅತ ಈ ಕ್ಷೇತ್ರದಲ್ಲಿ ಮುಂದಕ್ಕೆ ಏನೂ ವ್ಯವಸಾಯ ಮಾಡಲಿಲ್ಲ. ತರುವಾಯದ ಅಭಿವರ್ಧನೆಗಳನ್ನು ಸಾಧಿಸಿದವರು ಖಭೌತವಿಜ್ಞಾನಿಗಳು.

ಆಕಾಶದ ರೇಡಿಯೊ ಚಿತ್ರ

ಪ್ರಬಲ ಮತ್ತು ಸೂಕ್ಷ್ಮಗ್ರಾಹಿ ರೇಡಿಯೊ ದೂರದರ್ಶಕಗಳನ್ನು ಭೂಮಿಯ ವಿವಿಧ ಭಾಗಗಳಿಂದ ಆಕಾಶದ ವಿವಿಧ ವಲಯಗಳೆಡೆಗೆ ಗುರಿ ಹಿಡಿದು ಅಲ್ಲಿಯ ರೇಡಿಯೊ ಆಕರಗಳ ಸರ್ವೇಕ್ಷಣೆ ಮಾಡಲಾಗಿದೆ. ರೇಡಿಯೊ ಸೂರ್ಯ ಎಂದರೆ ಸೂರ್ಯನ ರೇಡಿಯೊ ಪ್ರಸಾರ ಸಾಮರ್ಥ್ಯ ಎಂದರ್ಥ. ಗೋಚರ ಸೂರ್ಯ ದೈತ್ಯಕಾಯ. ಆದರೆ ರೇಡಿಯೊ ಸೂರ್ಯ ತೀರ ಸಾಮಾನ್ಯ ನಕ್ಷತ್ರ . ಉದಾಹರಣೆಗೆ ಆಕಾಶವಾಣಿ ಬೆಂಗಳೂರು ಕೇಂದ್ರ. ಆದರ ಸಮೀಪದಲ್ಲಿ ನಿಂತವನಿಗೆ ಅದು ಬಲಿಷ್ಠವಾಗಿ ಕೇಳಿದರೂ ಲಂಡನ್ನಿನಲ್ಲಿಯ ಶ್ರೋತೃವಿಗೆ ಹೇಗೆ ಬಲಹೀನವಾಗಿ ಕೇಳಿಸಬಹುದೊ ಹಾಗೆ. ಹಲವಾರು ಮಸಕು ನಕ್ಷತ್ರಗಳು, ನಮ್ಮ ದೃಷ್ಟಿಯಲ್ಲಿ ಸೂರ್ಯನ ಮುಂದೆ ಕಿರಿಮರಿ ಸೊಡರುಗಳು. ಆದರೆ ಇವು ಬಲಿಷ್ಠ ರೇಡಿಯೊ ಆಕರಗಳೆಂದು ತಿಳಿದಿದೆ. ಆಕಾಶದ ಈ ರೇಡಿಯೊ ಚಿತ್ರವನ್ನು ಗೋಚರ ಚಿತ್ರದೊಂದಿಗೆ ಹೊಂದಿಸಿ ಗೋಚರ ನಕ್ಷತ್ರಗಳ ರೇಡಿಯೊ ಸಾಮರ್ಥ್ಯವೇನು ಎಂಬುದನ್ನು ಶೋಧಿಸಲಾಗಿದೆ. ದೈತ್ಯಗಾತ್ರದ ಪುರುಷನ ಸ್ವರ ತೀರ ಕೀರಲಾಗಿರಬಹುದು; ಅಂತೆಯೇ ಕುಬ್ಜನ ಸ್ವರ ಗುಡುಗಿನಂತೆ ಮೊಳಗಬಹುದು. ವ್ಯಕ್ತಿಗಳಲ್ಲಿಯ ಈ ಗಾತ್ರ – ಸ್ವರ ವೈದೃಶ್ಯದಂತೆ ನಕ್ಷತ್ರಗಳಲ್ಲಿಯೂ ಗಾತ್ರ – ಸ್ವರ ಅಂದರೆ ಗೋಚರ ರೂಪ ಮತ್ತು ರೇಡಿಯೊ ಸಾಮರ್ಥ್ಯ ವೈದೃಶ್ಯವಿರುವುದುಂಟು. ದೈತ್ಯ ನಕ್ಷತ್ರಗಳು ದುರ್ಬಲ ರೇಡಿಯೊ ಆಕರಗಳಾಗಿ ಇರುವುದೂ ಕುಬ್ಜ ನಕ್ಷತ್ರಗಳು ಬಲಿಷ್ಠ ರೇಡಿಯೊ ಆಕರಗಳಾಗಿರುವುದೂ ವಿರಳವಲ್ಲ. ಆಕಾಶದ ಅವೆಷ್ಟೂ ಭಾಗಗಳಿಂದ ರೇಡಿಯೊ ‘ಸದ್ದು’ ಮಾತ್ರ ಕೇಳಿಸುತ್ತದೆ. ಆದರೆ ಏನೂ ಕಾಣಿಸದು. ಕೇಳುವ ನಕ್ಷತ್ರಗಳೆಲ್ಲವೂ ಕಾಣಬೇಕೆಂದಿಲ್ಲ, ಕಾಣುವ ನಕ್ಷತ್ರಗಳೆಲ್ಲವೂ ಕೇಳಬೇಕೆಂದೂ ಇಲ್ಲ.

ಕ್ಯಾಸೀಯೊಪೀಯಾದಲ್ಲಿ (ಕುಂತಿ) ಅತಿ ಪ್ರಬಲ ರೇಡಿಯೊ ನಕ್ಷತ್ರ ಉಂಟು. ಇನ್ನೊಂದು ಬಲಿಷ್ಠ ರೇಡಿಯೊ ಆಕರದ ನೆಲೆ ವೃಷಭರಾಶಿ. ಹಲವು ಕೋಟಿ ಜ್ಯೋತಿರ್ವಷಗಳಷ್ಟು ದೂರದವರೆಗೆ ರೇಡಿಯೊ ದೂರದರ್ಶಕ ತನ್ನ ಕಿವಿ ಒಡ್ಡಿ ಅಲ್ಲಿಂದ ಬರುವ ರೇಡಿಯೊ ತರಂಗಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಆಕಾಶದ ಬಗ್ಗೆ ಸಾಕಷ್ಟು ಖಚಿತ ಮಾಹಿತಿ ನೀಡಿದೆ. ಆದರೆ ಇಲ್ಲಿ ಅಂತ್ಯ ಎಂಬುದೇ ಇಲ್ಲ; ನಮ್ಮ ಉಪಕರಣ ಎಷ್ಟೆಷ್ಟು ಬಲಯುತವೂ ಸೂಕ್ಷ್ಮಗ್ರಾಹಿಯೂ ಆಗುವುದೊ ಲಭ್ಯ ಮಾಹಿತಿ ಅಷ್ಟೆಷ್ಟು ವ್ಯಾಪಕವೂ ವೈವಿಧ್ಯಮಯವೂ ಆಗುತ್ತದೆ.

ರೇಡಿಯೊ ನಕ್ಷತ್ರಗಳು, ರೇಡಿಯೊ ಬ್ರಹ್ಮಾಂಡಗಳು, ರೇಡಿಯೊ ನೀಹಾರಿಕೆಗಳು (nebulae) ಮುಂತಾದವುಗಳ ಸಮೃದ್ಧಿಯಿಂದ ವಿಶ್ವ ತುಂಬಿತುಳುಕುತ್ತಿದೆ. 1960ರಿಂದ ಈಚೆಗೆ ವಿಶೇಷವಾಗಿ ಪ್ರವರ್ಧಿಸುವ ರೇಡಿಯೊ ಖಗೋಳವಿಜ್ಞಾನ ಇಂದು (2002) ಸಂಶೋಧಕರಿಗೆ ಅತ್ಯಂತ ಫಲವತ್ತಾದ ಕ್ಷೇತ್ರವಾಗಿದೆ ಕರೆಯುತಿದೆ ಕೈಬೀಸಿ ಹೊಸಗಾಳಿ ಹೊಸ ಹಸುರು!

* ಇದೇ ಲೇಖಕ ಬರೆದಿರುವ ಸೂಪರ್ನೋವಾ, ಸುಬ್ರಹ್ಮಣ್ಯನ್‌ಚಂದ್ರಶೇಖರ್‌ಮತ್ತು ಸಪ್ತಸಾಗರದಾಚೆಲ್ಲೋ ……ಕೃತಿಗಳನ್ನು ಗಮನಿಸಬಹುದು.

ಸೂಜಿಗಲ್ಲು ತಿರುಗತಿತ್ತೋ ಹೊಳಿಮ್ಯಾಗ
ಸೂಜಿಯೊಂದು
ತೇಲತಿತ್ತೋ ಹೊಳಿಯಾಗ ||
ತುಂಬಿಯೊಂದು
ಹಾಡತಿತ್ತೋ ಹೊಳಿಮ್ಯಾಗ
ತಾವರ್ಯೊಂದು
ಬಾಯ್ಬಿಡತಿತ್ತೋ ಹೊಳಿಯಾಗ ||
– ಬೇಂದ್ರೆ
(2004)