ಖಗೋಳವಿಜ್ಞಾನ

ಸೂರ್ಯ ಚಂದ್ರ, ಗ್ರಹಗಳು, ಉಲ್ಕೆಗಳು, ಧೂಮಕೇತುಗಳು, ನಕ್ಷತ್ರಗಳು, ಆಕಾಶಗಂಗೆ ಇವಿಷ್ಟು ನಮಗೆ ಕಾಣುವ ಆಕಾಶಕಾಯಗಳು. ಇವು ಪ್ರದರ್ಶಿಸುವ ಘಟನೆಗಳನ್ನು ಅಭ್ಯಸಿಸುವ ವಿಜ್ಞಾನವಿಭಾಗದ ಹೆಸರು ಖಗೋಳವಿಜ್ಞಾನ. ಮಾನವ ಕಣ್ತೆರೆದಾಗಲೇ ಇದರ ಆರಂಭ. ಜೀವನದ ಬಹು ಭಾಗ ಉದರನಿರ್ವಹಣೆ ಮತ್ತು ಆತ್ಮರಕ್ಷಣೆಗಳಿಗೆ ವ್ಯಯವಾಗುತ್ತಿದ್ದ ಆ ದಿವಸಗಳಂದು ಮಾನವನಿಗೆ ತನ್ನ ದೈನಂದಿನ ಚಟುವಟಿಕೆಗಳನ್ನು ಹೊಂದಿಸಿಕೊಳ್ಳಲು ಆಕಾಶದ ವಿದ್ಯಮಾನಗಳು ಸಹಕಾರಿ ಮತ್ತು ಅನಿವಾರ್ಯ ಆಗಿದ್ದುವು. ಆತನ ಪರಿಸರದೊಡನೆ ಅಕಾಶಕಾಯಗಳು ಸಹ ಎರಕಗೊಂಡಿದ್ದುದರಿಂದ ಗೊತ್ತಿರುವ ಯಾವ ದಾಖಲೆಗಳಿಂದಲೂ ಈ ಪ್ರಾಚೀನತಮವಾದ ಖಗೋಳವಿಜ್ಞಾನದ ಉಗಮವನ್ನು ಪತ್ತೆ ಹಚ್ಚುವಂತಿಲ್ಲ.

ಯಾವುದೇ ಆಕಾಶಕಾಯ ಬೀರಿದ ಬೆಳಕು ವ್ಯಕ್ತಿಯ ಕಣ್ಣನ್ನು ಸಂಧಿಸಿದಾಗ ಆ ಕಾಯದ ಇರವನ್ನು ಆತ ತಿಳಿಯುತ್ತಾನೆ. ಆದ್ದರಿಂದ ಖಗೋಳವಿಜ್ಞಾನದ ಬೆಳವಣಿಗೆ ಆದದ್ದು ಕಾಣುವುದರ ಮೂಲಕ ಮಾತ್ರ. ಕಣ್ಣಿನ ಭಾಷೆ ಬೆಳಕು. ವೈಜ್ಞಾನಿಕವಾಗಿ ಬೆಳಕು ಒಂದು ವಿಧವಾದ ಶಕ್ತಿ. ರೇಡಿಯೊ ಅಲೆಗಳು, ಉಷ್ಣ, ಬೆಳಕು, ಅತಿನೇರಿಳೆ ಕಿರಣಗಳು, ಎಕ್ಸ್ ಕಿರಣಗಳು, ಗ್ಯಾಮಕಿರಣಗಳು ಇವೆಲ್ಲವೂ ವಿಶಿಷ್ಟ ಸಮಾನಧರ್ಮವಿರುವ ಶಕ್ತಿ ಪ್ರಕಾರಗಳು. ವಿದ್ಯುತ್ಕಾಂತ ಅಲೆಗಳೆಂದು (electromaynetic waves) ಇವುಗಳ ಒಟ್ಟು ಹೆಸರು. ಕಬ್ಬಿಣದ ಸರಳನ್ನು ಬೆಂಕಿಗೆ ಹಾಕಿ ಕಾಸಿ, ಅದರ ಉಷ್ಣತೆ ಏರಿದಂತೆ ಅದು ಸ್ವತಃ ಉಷ್ಣದ ಅಲೆಗಳನ್ನು ವಿಕಿರಣಿಸ (radiate) ತೊಡಗುವುದು. ಮುಂದೆ ಆ ಸರಳು ಮಾಸಲು ಕೆಂಬಣ್ಣ ತಳೆದು ಕ್ರಮೇಣ ನೇರಿಳೆ ಬಣ್ಣಕ್ಕೆ ತಿರುಗುತ್ತದೆ. ಭೌತವಿಜ್ಞಾನದ ಭಾಷೆಯಲ್ಲಿ ಸರಳು ಮೊದಲು ವಿಕಿರಣಿಸಿದ್ದು ಉಷ್ಣದ ಅಲೆಗಳನ್ನು, ಉಷ್ಣತೆ ಹೆಚ್ಚಾದಂತೆ ಅದು ಬೆಳಕು ಮತ್ತು ಅತಿನೇರಿಳೆ ಕಿರಣಗಳನ್ನು ಕೂಡ ವಿಕಿರಣಿಸುತ್ತದೆ.

ಉಷ್ಣ ಒಂದು ವಿಧವಾದ ಚಲನಶಕ್ತಿ. ಇದರ ಪೂರೈಕೆಯಿಂದ ವಸ್ತು ಬಿಸಿಯಾಗುತ್ತದೆ. ಬಿಸಿಯ ಮಟ್ಟವನ್ನು ಅಳೆಯುವ ಮಾನ ಉಷ್ಣತೆ. ಗುಡಾಣ ಗಾತ್ರದ ಉಗುರು ಬೆಚ್ಚಗೆ ನೀರಿನಲ್ಲಿರುವ ಒಟ್ಟು ಉಷ್ಣ ಕುದಿಯುತ್ತಿರುವ ಲೋಟಾ ಗಾತ್ರದ ನೀರಿನಲ್ಲಿರುವ ಒಟ್ಟು ಉಷ್ಣಕ್ಕಿಂತ ಹೆಚ್ಚು; ಆದರೆ ಗುಡಾಣದ ಉಷ್ಣತೆ ಲೋಟಾದ ನೀರಿನ ಉಷ್ಣತೆಗಿಂತ ಬಲು ಕಡಿಮೆ. ಈಗ ಸರಳಿನ ಉದಾಹರಣೆಗೆ ಮರಳೋಣ. ಸರಳು ವಿಕಿರಣಿಸುವ ವಿದ್ಯುತ್ಕಾಂತ ಅಲೆಯ ಪ್ರಕಾರವನ್ನು ಅದರ ಉಷ್ಣತೆ ನಿರ್ಧರಿಸುತ್ತದೆ; ಅಂದರೆ, ಉಷ್ಣತೆ ಏರಿದಂತೆ ಸರಳು ವಿದ್ಯುತ್ಕಾಂತ ಅಲೆಗಳ ವಿವಿಧ ಪ್ರಕಾರಗಳನ್ನು (ಉಷ್ಣದಿಂದ ತೊಡಗಿ) ವಿಕಿರಣಿಸುವುದು.

ವಿದ್ಯುತ್ಕಾಂತ ಅಲೆಗಳ ಕೆಲವು ಮುಖ್ಯ ಸಾಮಾನ್ಯ ಗುಣಗಳು ಹೀಗಿವೆ: ಅವು ಶಕ್ತಿ ವಿಕಿರಣಗಳು (radiations); ರೇಡಿಯೊ ಮತ್ತು ಉಷ್ಣ ಅಲೆಗಳ ಶಕ್ತಿಮಟ್ಟ ಕಡಿಮೆ; ಬೆಳಕಿನದು ಇವುಗಳಿಗಿಂತ ಹೆಚ್ಚು; ಅತಿನೇರಿಳೆ, ಎಕ್ಸ್‌- ಮತ್ತು ಗ್ಯಾಮ – ಕಿರಣಗಳ ಶಕ್ತಿ ಮಟ್ಟ ಅತ್ಯಧಿಕ. ಇವೆಲ್ಲ ಅಲೆಗಳ ಚಲನ ವೇಗ ಒಂದೇ ಮತ್ತು ಅದು ಸ್ಥಿರವೂ ಹೌದು: ಅದರ ಬೆಲೆ ಸೆಕೆಂಡಿಗೆ 2.99 x 1010 ಸೆಂಟಿಮೀಟರುಗಳು; ಇವು ಆಕಾಶದ ಅಮಿತ ವಿಸ್ತಾರದಲ್ಲಿ ಎಲ್ಲೆಡೆಗೂ ಚಲಿಸಬಲ್ಲವು. (ಅಂದರೆ, ಇಅವುಗಳ ಚಲನೆಗೆ ಮಾಧ್ಯಮ ಬೇಡ; ಶಬ್ದ ಮತ್ತು ವಿದ್ಯುತ್ತು ಚಲಿಸಬೇಕಾದರೆ ಮಾಧ್ಯಮಗಳು ಬೇಕು.) ಅಲೆಯ ಹಾವು ಹರಿವಿನ ಆಕಾರದಲ್ಲಿ ಎರಡು ಅನುಕ್ರಮ ನೆತ್ತಿಗಳ (ಅಥವಾ ಗುಳಿಗಳ) ನಡುವಿನ ಅಂತರದ ಹೆಸರು ಅಲೆಯುದ್ಧ. ವಿವಿಧ ಪ್ರಕಾರಗಳ ಅಲೆಯುದ್ಧಗಳು ಮೀಟರುಗಳಲ್ಲಿ ಹೀಗಿವೆ: ರೇಡಿಯೊ 30 x 103 ರಿಂದ 3 x 10-3 ವರೆಗೆ; ಉಷ್ಣ 3 x 10– 6 ರಿಂದ 3 x 10-6ವರೆಗೆ; ಕೆಂಪಿನಿಂದ ನೇರಿಳೆವರೆಗಿನ ಬೆಳಕು 6 x 10-7 ರಿಂದ 3 x 10-7ರವರೆಗೆ; ಅತಿನೇರಳೆ, ಎಕ್ಸ್‌- ಮತ್ತು ಗ್ಯಾಮ – ಕಿರಣಗಳು 3 x 10-8 ರಿಂದ 3 x 10-14 ರವರೆಗೆ; (3 x 10-3 ಎಂದರೆ 3/10-3 ಎಂದರ್ಥ, ಇತ್ಯಾದಿ). ಸಂಖ್ಯೆಗಳ ಕಲ್ಪನೆ ಮೂಡಲು ಒಂದು ಉದಾಹರಣೆಯನ್ನು ಪರಿಶೀಲಿಸಬಹುದು. 3000 ಮೀಟರ್‌ಅಲೆಯುದ್ಧವಿರುವ ರೇಡಿಯೊ ಅಲೆಯನ್ನು 30 ಮೀಟರ್‌ಎತ್ತರವಿರುವ ಒಂದು ಗೋಪುರ ಪ್ರತಿನಿಧಿಸಿದರೆ 6 x 10-7 ಮೀಟರ್‌ಅಲೆಯುದ್ಧವಿರುವ ಕೆಂಪು ಬೆಳಕಿನ ತರಂಗವನ್ನು ಪ್ರತಿನಿಧಿಸುವ ಮರಿಗೋಪುರದ ಎತ್ತರ 0.000000006 ಮೀಟರ್‌. ಇದು ನಮ್ಮ ಕಣ್ಣಿಗೆ ಕಾಣಿಸುವುದಂತೂ ಇಲ್ಲವಷ್ಟೆ. ಪ್ರಬಲ ಸೂಕ್ಷ್ಮದರ್ಶಕವೂ ಇದನ್ನು ಗುರುತಿಸದು. ಇನ್ನು ಅತಿನೇರಿಳೆ ವಲಯದ ಪರಿಸ್ಥಿತಿ ‘ಅಗದಿ ಭಯಂಕರ.” ನಮ್ಮ ಅನುಭವದ ಮಿತಿಗೆ ನಿಲುಕದ ಹ್ರಸ್ವತರಂಗಗಳವು.

ಮೇಲಿನ ವಿವರಣೆಗಳ ಸಾರಾಂಶವಿಷ್ಟು. ವಿದ್ಯುತ್ಕಾಂತ ಅಲೆಗಳು ಶಕ್ತಿ ವಿಕಿರಣಗಳು, ಶಕ್ತಿ ಏರಿದಂತೆ ಅಲೆಯುದ್ಧ ಕಿರಿದಾಗುತ್ತ ರೇಡಿಯೊ, ಉಷ್ಣವೆಂಬ ನೀಳ ಅಲೆಗಳೂ ಬೆಳಕಿನ ಅಲೆಗಳೂ ಅತಿನೇರಿಳೆ ವಲಯದ ಗಿಡಡ ಅಲೆಗಳೂ ದೊರೆಯುತ್ತವೆ. ಆದ್ದರಿಂದ ನೀಳ ಅಲೆಗಳಲ್ಲಿ ಅತಿ ಕಡಿಮೆ ಶಕ್ತಿಯೂ ಗಿಡ್ಡ ಅಲೆಗಳಲ್ಲಿ ಅತ್ಯಧಿಕ ಶಕ್ತಿಯೂ ಬೆಳಕಿನ ಅಲೆಗಳಲ್ಲಿ ಇವೆರಡು ಮಟ್ಟಗಳ ನಡುವಿನ ಶಕ್ತಿಯೂ ನಿಹಿತವಾಗಿವೆ. ಇವೆಲ್ಲ ಅಲೆಗಳೂ ಚಲಿಸುವ ವೇಗ ಒಂದೇ.

ವಿದ್ಯುತ್ಕಾಂತ ಅಲೆಗಳ ವಿವಿಧ ಪ್ರಕಾರಗಳ ಒಟ್ಟು ಹೆಸರು ವಿದ್ಯುತ್ಕಾಂತರೋಹಿತ (electromagnetic spectrun). ಇದರಲ್ಲಿ ನಮ್ಮ ಕಣ್ಣಿನ ದೃಷ್ಟಿಯಿಂದ ಮೂರು ಮುಖ್ಯ ವಿಭಾಗಗಳಿವೆ: ನೀಳ ಅಲೆಗಳ (ಅಲ್ಪಶಕ್ತಿಯ) ವಿಭಾಗ, ಗಿಡ್ಡ ಅಲೆಗಳ (ಅಧಿಕಶಕ್ತಿಯ) ವಿಭಾಗ. ನೀಳ ಮತ್ತು ಗಿಡ್ಡ ಅಲೆಗಳ ವಿಕಿರಣ ನಮಗೆ ಕಾಣಿಸುವುದಿಲ್ಲ. ಬೆಳಕಿನ ವಿಕಿರಣ ಮಾತ್ರ ಕಾಣುತ್ತದೆ. ಹೀಗೆ ವಿದ್ಯುತ್ಕಾಂತ ರೋಹಿತದ ಒಂದು ಕಿಷ್ಕಿಂಧ ವಿಭಾಗಕ್ಕೆ ಮಾತ್ರ ನಮ್ಮ ಕಣ್ಣುಗಳು ಗ್ರಾಹಿಗಳಾಗಿವೆ. ಉಳಿದ ವಿಶಾಲ ವಿಸ್ತಾರಕ್ಕೆ ನಾವು ಕುರುಡರು, ಕಣ್ಣಿದ್ದೂ ಕಾಣದವರು! ರೋಹಿತದ ವ್ಯಾಪ್ತಿಯಲ್ಲಿ ಬೆಳಕಿನ ವಿಭಾಗ ತೀರ ಇಕ್ಕಟ್ಟು. ಆದ್ದರಿಂದ ಇದನ್ನು ಗೋಚರ ಕಿಂಡಿ ಅಥವಾ ಬೆಳಕಿನ ಕಿಂಡಿ ಎಂದು ಕರೆಯುವುದು ವಾಡಿಕೆ. ಕನಕನ ಕಿಂಡಿ, ನೀನಲ್ಲೇನನು ಕಂಡಿ?

ಖಗೋಳ ವಿಜ್ಞಾನ ಪದದ ವಿಸ್ತ್ರತಾರ್ಥ

ಈಗ ಹಳೆಯ ನಕ್ಷತ್ರದ ಹೊಸ ಕತೆಯನ್ನು ಪುನಃ ಬರೆಯಬಹುದು. ನಕ್ಷತ್ರವು ಗೋಚರಕಿಂಡಿಯನ್ನು (ಬೆಳಕು) ವಿಕಿರಣಿಸುತ್ತದೆ. ಬೆಳಕು ವಿಶ್ವದಲ್ಲಿ (ಈ ಹಿಂದೆ ಹೇಳಿರುವ ಅಪಾರ ವೇಗದಿಂದ) ಧಾವಿಸಿ ಭೂಮಿಯನ್ನು ತಲುಪುವುದು. ಅದನ್ನು ನಾವು ನೋಡಿ ನಕ್ಷತ್ರದ ಇವರನ್ನು ಅರಿಯುತ್ತೇವೆ. ನಕ್ಷತ್ರ ಅತ್ಯುಷ್ಣತೆಯಲ್ಲಿರುವ ಅನಿಲ ಮತ್ತು ಪ್ಲಾಸ್ಮಾ ರಾಶಿ. ಆದ್ದರಿಂದ ಅದು ವಿದ್ಯುತ್ಕಾಂತ ಅಲೆಗಳನ್ನು ವಿಕಿರಣಿಸುವ ಆಕರ. ನಕ್ಷತ್ರದ ಭೌತ ಮತ್ತು ರಾಸಾಯನಿಕ ಸ್ಥಿತಿಗಳನ್ನು ಅವಲಂಬಿಸಿ ಅದು ನೀಳ ಅಲೆಗಳನ್ನು ಮಾತ್ರ ವಿಕಿರಣಿಸುವ ಆಕರವಾಗಿರಬಹುದು; ಗೋಚರಕಿಂಡಿಯನ್ನೂ ಒಳಗೊಂಡಿರಬಹುದು; ಗಿಡ್ಡ ಅಲೆಗಳನ್ನು ಮಾತ್ರ ವಿಕಿರಣಿಸುತ್ತಿರಬಹುದು; ಇತ್ಯಾದಿ. ಇದು ಹೇಗೆಯೇ ಇರಲಿ. ಒಂದು ಆಕರ ಗೋಚರ ಕಿಂಡಿಯನ್ನು ವಿಕಿರಣಿಸದಿದ್ದರೆ ಅದು ನಮಗೆ ಕಾಣುವುದಿಲ್ಲ ಎನ್ನುವುದಂತೂ ಸ್ಪಷ್ಟ. ನಮ್ಮ ಕಣ್ಣುಗಳು ಇಂಥ ಆಕರಗಳಿಗೆ ಕುರುಡು. ಅಂದ ಮಾತ್ರಕ್ಕೆ ಅಂಥವು ಇಲ್ಲವೆಂದಾಗಲೀ ಅವನ್ನು ನಕ್ಷತ್ರಗಳೆಂದು ಕರೆಯಬಾರದೆಂದಾಗಲೀ ಹೇಳಲಾಗದು. ಆದ್ದರಿಂದ ಜ್ಞಾನ ಬೆಳೆದಂತೆ ನಕ್ಷತ್ರ ಎಂಬ ಪದ ಕಾಣುವವನ್ನೂ ಕಾಣದವನ್ನೂ ಒಳಗೊಂಡು ವ್ಯಾಪಕಾರ್ಥ ಪಡೆಯಿತು. ಅದೇ ರೀತಿ ಇವೆಲ್ಲವುಗಳ ಅಭ್ಯಾಸ ಖಗೋಳ ವಿಜ್ಞಾನವೆಂಬ ವ್ಯಾಪಕಾರ್ಥ ಈ ಪದಕ್ಕೂ ಬಂದಿತು. ಸ್ಪಷ್ಟ ವರ್ಗೀಕರಣ ಅವಶ್ಯಕವಾಗಿರುವಲ್ಲಿ ಕಾಣುವವನ್ನು (ದೈಕ್‌)ಗೋಚರ ಮತ್ತು ಕಾಣದವನ್ನು ದೃಕ್‌ಅಗೋಚರ ನಕ್ಷತ್ರಗಳೆಂದು ಕರೆಯುತ್ತೇವೆ. ಈ ವರ್ಗೀಕರಣವನ್ನು ಅನುಸರಿಸಿ ಗೋಚರ ಖಗೋಳವಿಜ್ಞಾನ ಮತ್ತು ಅಗೋಚರ ಖಗೋಳವಿಜ್ಞಾನಗಳೆಂದ ಎರಡು ಪ್ರಭೇದಗಳಿವೆ. ಅಗೋಚರ ಖಗೋಳವಿಜ್ಞಾನದಲ್ಲಿ ರೇಡಿಯೊ ಖಗೋಳವಿಜ್ಞಾನ ವಿದ್ಯುತ್ಕಾಂತ ರೋಹಿತದ ಅತಿರಕ್ತ ವಿಭಾಗವನ್ನೂ ಎಕ್ಸ್‌ಕಿರಣ ಖಗೋಳವಿಜ್ಞಾನ ರೋಹಿತದ ಅತಿ ನೇರಿಳೆ ವಿಭಾಗವನ್ನೂ ಕುರಿತ ಅಭ್ಯಾಸಗಳು. ರೇಡಿಯೊ ಖಗೋಳವಿಜ್ಞಾನದ ಮುಖ್ಯೋಪಕರಣ ರೇಡಿಯೊ ದೂರದರ್ಶಕ. ಇದು ಆಕಾಶಕ್ಕೆ ಮನುಷ್ಯ ಒಡ್ಡಿ ಇಟ್ಟಿರುವ ಮಹಾ “ಕರ್ಣ”. ನೀಲಗಿರಿಯ ಉದಕಮಂಡಲದಲ್ಲಿ ಪ್ರಬಲ ರೇಡಿಯೊ ದೂರದರ್ಶಕವನ್ನು ಸ್ಥಾಪಿಸಲಾಗಿದೆ.

ಎಕ್ಸ್ಕಿರಣ ಖಗೋಳವಿಜ್ಞಾನ

ಹಾಗಾದರೆ ಎಕ್ಸ್‌ಕಿರಣ ಖಗೋಳವಿಜ್ಞಾನದ ಉಪಕರಣ ಇಲ್ಲವೇ “ನೇತ್ರ” ಯಾವುದು?

ವಾಯುಮಂಡಲ ವಿಶಿಷ್ಟ ಬಲವದ್ಬಂಧನವನ್ನು ನಮ್ಮ ಮೇಲೆ ಹೇರಿದೆ. ಇದರ ಕಾರಣವಾಗಿ, ವಿಶ್ವದಿಂದ ಭೂಮಿಗೆ ಬರುವ ಯಾವ ಎಕ್ಸ್‌ಕಿರಣಗಳೂ ತಳ ತಲಪುವುದಿಲ್ಲ. ಆದ್ದರಿಂದ ಸಮಸ್ಯೆಯೇ ಇಲ್ಲದಂಥ ಪರಿಸ್ಥಿತಿ! ನೀಳ ಅಲೆಗಳಿಗೂ ಬೆಳಕಿನ ಅಲೆಗಳಿಗೂ ಸರಿಸುಮಾರಾಗಿ ಪಾರಕವಾಗಿರುವ (transparent, ಅಂದರೆ ಹಾದಿಬಿಡುವಂಥ) ವಾಯಮಂಡಲ ಗಿಡ್ಡ ಅಲೆಗಳಿಗೆ ಅಪಾರಕ (opaque, ಅಂದರೆ ಹಾದಿ ಬಿಡುವುದಿಲ್ಲ). ನೆಲದಿಂದ ಸುಮಾರು 16-48 ಕಿಲೋಮೀಟರ್‌ವಲಯದಲ್ಲಿರುವ ಓಝೋನ್‌ಗೋಳ ಮತ್ತು ಅದರಿಂದ ಮೇಲಿರುವ ಅಯಾನ್‌ಗೋಳ ಸುಮಾರು 150 ಸೆಂಟಿಮೀಟರ್‌ಸೆಂಟಿಮೀಟರ್‌ದಪ್ಪವಿರುವ ಸೀಸದ ಭದ್ರ ಕವಚವನ್ನೇ ನಮಗೆ ತೊಡಿಸಿದಂತಿವೆ. ವಿಶ್ವದ ಹಲವಾರು ಅಂಶಗಳನ್ನು ನಮ್ಮಿಂದ ಮುಚ್ಚಿಟ್ಟಿರುವ ಕೋಟೆ ಈ ಕವಚ. ಜೀವಿಗಳಿಗೆ ಅತ್ಯಪಾಯಕಾರಿಗಳಾದ ಅತಿನೇರಿಳೆ (ಗಿಡ್ಡ ಅಥವಾ ಅತ್ಯಧಿಕ ಶಕ್ತಿಯ) ಅಲೆಗಳನ್ನು ಇದು ಅಲ್ಲಿಯೇ ತಡೆ ಹಿಡಿಯುತ್ತದೆ. ಹೀಗೆ ನಮಗೆ ನೈಸರ್ಗಿಕವಾಗಿ ಒದಗುವ ರಕ್ಷಣೆಗೆ ಪ್ರತಿಯಾಗಿ ನಾವು ತರಬೇಕಾದ ದಂಡವೆಂದರೆ ಆಕಾಶದ ಅತಿನೇರಿಳೆ ವಲಯದ ವಿದ್ಯಮಾನಗಳನ್ನು ಕುರಿತ ನಮ್ಮ ಅಜ್ಞತೆ.

ಅತಿನೇರಿಳೆ ವಿಭಾಗದ ಅಲೆಗಳು ಮಾನವನಲ್ಲಿದ್ದಲ್ಲಿಗೆ ಬರದಿದ್ದರೆ ಮಾನವ (ಆತನ ಉಪಕರಣಗಳೂ ಆಗಬಹುದು) ಆ ಅಲೆಗಳ ತಡೆಕೋಟೆಯವರೆಗೆ ಹೋಗುವುದೇ ಯುಕ್ತ. ಪರಿಹಾರ. ರಾಕೆಟ್‌ಯಾನ ಪ್ರಾರಂಭವಾಗುವ ಮೊದಲು ಇಂಥ ಯಾವ ಪ್ರಯೋಗವು ಸಾಧ್ಯವಿರುತ್ತಿರಲಿಲ್ಲ.

ಎಕ್ಸ್‌ಕಿರಣಗಳನ್ನು ಕುರಿತು ಒಂದು ಮಾತು ಇಲ್ಲಿ ಅಗತ್ಯ. ಪ್ರಯೋಗಶಾಲೆಗಳಲ್ಲಿ ಇವನ್ನು 20ನೆಯ ಶತಮಾನದ ಪ್ರಾರಂಭದಲ್ಲಿಯೇ ಸೃಷ್ಟಿಸಲಾಗಿದೆ. ಇಂದು ಈ ಕಿರಣಗಳ ಅಗಾಧ ವೈದ್ಯಕೀಯ ಉಪಯೋಗಗಳ ಪರಿಣಾಮವಾಗಿ ಇವುಗಳ ಹೆಸರು (ಉದಾಹರಣೆಗೆ ಎಕ್ಸ್‌ರೇ ಫೋಟೋಗ್ರಾಫ್‌) ಸಾಮಾನ್ಯ ಜನರಿಗೂ ಅಪರಿಚಿತವಲ್ಲ. ಎಕ್ಸ್‌ಕಿರಣಗಳೆಂದರೆ ಅತಿ ಶಕ್ತಿಯುತ ಎಲೆಕ್ಟ್ರಾನ್‌ಕಣ ದೂಲಗಳು (electron beams). ದಾರಿಯಲ್ಲಿ ಅಡ್ಡಬರುವ ಸಾಮಾನ್ಯ ತಡೆಗಳನ್ನು ಲೆಕ್ಕಿಸದೆ ಕೊರೆದು ಮುನ್ನುಗ್ಗುವ ಸಾಮರ್ಥ್ಯ ಇವುಗಳಿಗುಂಟು. ಈ ಕಾರಣದಿಂದ ಮಾನವದೇಹದ ಕಂಕಾಲದ ಛಾಯಾಚಿತ್ರ ಒಡ್ಡುವಲ್ಲಿ (ಎಲುಬುಗಳು ಎಕ್ಸ್‌ಕಿರಣಗಳಿಗೆ ಅಪಾರಕ. ದೇಹದ ಉಳಿದ ಭಾಗಗಳು ಪಾರಕ) ಎಕ್ಸ್‌ಕಿರಣಗಳ ಉಪಯೋಗವಿದೆ. ಕಿರಣಗಳನ್ನು ಸಮರ್ಪಕವಾಗಿ ಚಿತ್ರಿಸುವ ಕ್ಯಾಮರಗಳು ಮತ್ತು ಛಾಯಾಫಲಕಗಳು ಇದ್ದರೆ ಸಾಕು. ಇವೇ ಎಕ್ಸ್‌ಕಿರಣಖಗೋಳವಿಜ್ಞಾನದ ಉಪಕರಣಗಳು.

ಎಕ್ಸ್‌ಕಿರಣಖಗೋಳ ವಿಜ್ಞಾನ ಇಪ್ಪತ್ತನೆಯ ಶತಮಾನದ ಕೂಸು. ಹಾಗಿದ್ದರೂ ಇದರ ಆರಂಭ ತೀರ ಮಸಕು. ಎರಡನೆಯ ಮಹಾಯುದ್ಧದ ಕೊನೆಯ ದಿನಗಳಲ್ಲಿ (1939 – 45) ಮಿತ್ರ ರಾಷ್ಟ್ರಗಳು ಜರ್ಮನರಿಂದ V2 ರಾಕೆಟುಗಳನ್ನು ವಶಪಡಿಸಿಕೊಂಡದ್ದು ಸರಿಯಷ್ಟೆ. ಇಂಥ ಒಂದು ನೂತನ ರಾಕೆಟಿನಲ್ಲಿ ಎಕ್ಸ್‌ಕಿರಣ ಕ್ಯಾಮರವನ್ನು ಅಳವಡಿಸಿ ಆಕಾಶಕ್ಕೆ ಹಾರಿಸಲಾಯಿತು (1948). ಸೂರ್ಯನಿಂದ ವಿಕಿರಣಿತವಾಗುತ್ತಿರುವ ಎಕ್ಸ್‌ಕಿರಣಗಳ ಇವರನ್ನು ಈ ಪ್ರಯೋಗ ದೃಢೀಕರಿಸಿತು. ಈ ಮಾದರಿಯ ಪ್ರಯೋಗದಲ್ಲಿ ಎದುರಾಗುವ ಸಮಸ್ಯೆಗಳು ಮುಖ್ಯವಾಗಿ ಮೂರು: ಆ ಎತ್ತರ ಏರುವುದು; ಯುಕ್ತ ವೇಳೆಯಲ್ಲಿ ಕ್ಯಾಮರ ಸೂರ್ಯನನ್ನು ನಾಭಿಸಿ (ದೃಷ್ಟಿಸಿ) ಮತ್ತು ಸ್ಪಂದಿಸಿ ಎಕ್ಸ್‌ಕಿರಣಗಳನ್ನು ಗ್ರಹಿಸುವುದು; ಭೂಮಿಗೆ ಉಪಕರಣದ ಸುರಕ್ಷಿತ ವಾಪಸಾತಿ.

ಸೂರ್ಯನಂತೆ ನಕ್ಷತ್ರಗಳಿಂದಲೂ ಎಕ್ಸ್‌ಕಿರಣ ಪ್ರಸಾರವಾಗುತ್ತಿರಬೇಕು ಎಂಬ ಊಹೆ ತಾರ್ಕಿಕವಾಗಿ ಸಾಧುವೇ ಆದರೂ ಇಂಥ ವಿಕಿರಣಗಳ ಜಾಡು ಹಿಡಿಯುವಾಗ ಎದುರಾಗುವ ಕೆಲವು ಕಠಿಣ ಸಮಸ್ಯೆಗಳನ್ನು ಮುಂದೆ ಹೇಳಿದೆ.

ಒಂದನೆಯದಾಗಿ, ನಕ್ಷತ್ರ – ಭೂಮಿ ಅಂತರ, ಎಕ್ಸ್‌ಕಿರಣಗಳ (ವಿದ್ಯುತ್ಕಾಂತ ಅಲೆಗಳ) ವೇಗ ನಮ್ಮ ದೃಷ್ಟಿಯಿಂದ ಅದೆಷ್ಟೇ, ಅಪಾರವಾಗಿದ್ದರೂ (ವಾಸ್ತವವಾಗಿ ಈ ವೇಗವನ್ನು ಸಮಾನಿಸುವ, ಮೀರುವುದಂತಿರಲಿ, ಬೇರೆ ವಸ್ತುಗಳಾಗಲೀ ಶಕ್ತಿಶಾಲಿಗಳಾಗಲೀ ನಮಗೆ ತಿಳಿದಿಲ್ಲ; ಮಿಂಚು ಗುಡುಗುಗಳು ಏಕಕಾಲಿಕ ಘಟನೆಗಳಾದರೂ ಮಿಂಚು ಕಾಣುವುದು ಮೊದಲು, ಗುಡುಗು ಕೇಳುವುದು ತರುವಾಯ ಈ ಕಾರಣದಿಂದ) ಕಿರಣಗಳು ಆಕರನಕ್ಷತ್ರದಿಂದ ಹೊರಟ ಬಳಿಕ ಭೂಮಿಗೆ ಚಲಿಸಬೇಕಾದ ದೂರ ಊಹಾತೀತವಾಗಿದೆ. ಲಕ್ಷಾಂತರ ವರ್ಷ ಚಲಿಸಿದಾಗಲೂ ವಿಶ್ವದ ಕಿರಿಯ ಅಂಶವನ್ನು ಮಾತ್ರ ಗಮನಿಸಬಹುದಷ್ಟೆ. ಆದ್ದರಿಂದ ಇಂಥ ಮಹಾವಿಶ್ವದಲ್ಲಿ ಯಾವುದೇ ಆಕರ ಭೂಮಿಯಿಂದ ಅತಿ ದೂರದಲ್ಲಿದ್ದರೆ ಅದರ ಎಕ್ಸ್‌ಕಿರಣ ಪ್ರತಿನಿಧಿ ನಮ್ಮನ್ನು ಇನ್ನೂ ತಲುಪಿಯೇ ಇರದು. ಈ ತೆರನಾದ ಅಕರಗಳನ್ನು ಗುರುತಿಸಲಾಗುವುದಿಲ್ಲ. (ಸೂರ್ಯನ ಆಚೆಗಿನ ಅತಿ ಸಮೀಪದ ನಕ್ಷತ್ರದ ದೂರ ಭೂಮಿ – ಸೂರ್ಯ ದೂರದ 2,82,000 ಪಾಲಿನಷ್ಟಿದೆ. ಇದು ವಿಶ್ವದಲ್ಲಿ ಒಂದಂಗುಲದ ಅನಂತಸೂಕ್ಷ್ಮಾಂಶ!)

ಎರಡನೆಯದಾಗಿ, ವಿಕಿರಣಿತ ಎಕ್ಸ್‌ಕಿರಣದ ತೀವ್ರತೆ. ಎರಡು ಜನ ಒಂದೇ ಶ್ರುತಿಯಲ್ಲಿ ಹಾಡುತ್ತಾರೆ; ಆದರೆ ಒಬ್ಬನದು “ಗಟ್ಟಿ” ಇನ್ನೊಬ್ಬನದು “ಮೆತ್ತಗೆ” ಧ್ವನಿ; ಪರಿಣಾಮವಾಗಿ ಮೊದಲನೆಯವನ ಹಾಡು ಹೆಚ್ಚು ದೂರ ಕೇಳಿಸುತ್ತದೆ, ಎರಡನೆಯವನದು ಹೀಗೆ ಕೇಳಿಸದು. ಎಂದರೇನಾಯಿತು? ಗಟ್ಟಿ ಧ್ವನಿಯವನ ಸಾಮರ್ಥ್ಯ ಮೆತ್ತಗೆ ಧ್ವನಿಯವನದಕ್ಕಿಂತ ಅಧಿಕ. ಎಕ್ಸ್‌ಕಿರಣ ವಿಕಿರಣದಲ್ಲಿಯೂ ಇಂಥ ಒಂದು ಪರಿಸ್ಥಿತಿ ತಲೆದೋರುವುದು. ಪ್ರಬಲ ಸಾಮರ್ಥ್ಯದ ಅಕರಗಳು ವಿಕಿರಣಿಸುವ ಎಕ್ಸ್‌ಕಿರಣಗಳ ತೀವ್ರತೆ ಹೆಚ್ಚು; ಇವು ಅಧಿಕ ದೂರವನ್ನು ಗಮಿಸಬಲ್ಲವು. ದುರ್ಬಲ ಸಾಮರ್ಥ್ಯದ ಆಕರಗಳ ವಿಕಿರಣಗಳು ಶಕ್ತಿಕ್ಷಯದಿಂದ ಪಥಮಧ್ಯೆ ನಶಿಸಿಹೋಗುತ್ತವೆ. ಆದ್ದರಿಂದ ಒಂದು ಆಕರ ಭೂಮಿಗೆ ಸಾಕಷ್ಟು ಸಮೀಪವಾಗಿಯೇ ಇದ್ದರೂ ಅದರಿಂದ ವಿಕಿರಣಿತವಾಗುವ ಕಿರಣಗಳು ಭೂಮಿಯನ್ನು ತಲುಪುವಷ್ಟು ಸಾಮರ್ಥ್ಯಯುತವಾಗಿಯೂ ಇರಬೇಕಾದುದು ಅವಶ್ಯವಾಗುತ್ತದೆ.

ಮೂರನೆಯದಾಗಿ, ಪಥಮಧ್ಯದ ಆತಂಕಗಳು. ಪಥದಲ್ಲಿ ಇತರ ಆಕಾಶಕಾಯಗಳಾಗಲೀ ಅವುಗಳ ಪ್ರಭಾವಗಳಾಗಲೀ ಅಡ್ಡ ಬಂದರೆ ಅವನ್ನು ನಿವಾರಿಸಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಎಕ್ಸ್‌ಕಿರಣಗಳು ಭೂಮಿಯನ್ನು ತಲುಪಲಾರವು. ಉದಾಹರಣೆಗೆ ಭೂಮಿ – ಸೂರ್ಯರೇಖೆಯನ್ನು ವಿಸ್ತರಿಸಿದ ದಿಶೆಯಲ್ಲಿ ಒಂದು ಆಕರವಿದ್ದರೆ ಅದರಿಂದ ವಿಕಿರಣಿತವಾಗುವ ಕಿರಣಗಳು ಸೌರ ಪ್ರಭಾವದಿಂದ ಕುಂಠಿತವಾಗುತ್ತವೆ.

ಇವೆಲ್ಲ ಆತಂಕಗಳನ್ನೂ ನಿವಾರಿಸಿಕೊಂಡು ಬರುವ ಕಿರಣಗಳು ಓಝೋನ್ – ಅಯಾನ್‌ಕೋಟೆಯ ಹೊರವಲಯದಲ್ಲಿ ‘ಕೈ ಮುಗಿದು’ ನಿಂತೇಬಿಡಬೇಕಾಗುತ್ತದೆ. ಒಳಗೆ ಬರುವಂತಿಲ್ಲ. ಅಲ್ಲಿಯವರೆಗಾದರೂ ನಮ್ಮ ಉಪಕರಣಗಳು (80 ಕಿ.ಮೀ. ಎತ್ತರ) ಹೋಗಿ ಆ ಕಿರಣಗಳನ್ನು ಗ್ರಹಿಸಬೇಕು. ಇಷ್ಟೆಲ್ಲ ಆದರೂ ಇವು ಬಲು ದುರ್ಬಲ. ಅತಿ ಪರಿಷ್ಕೃತ ಸೂಕ್ಷ್ಮೋಪಕರಣಗಳಿಂದ ಮಾತ್ರ ಇವನ್ನು ಗ್ರಹಿಸಬಹುದಷ್ಟೆ.

ಹೀಗೆ ಎಕ್ಸ್‌ಕಿರಣಖಗೋಳವಿಜ್ಞಾನದ ಬೆಳವಣಿಗೆ ರಾಕೆಟ್‌ಯಾನ ಮತ್ತು ಯುಕ್ತ ಉಪಕರಣಗಳ ಸಿದ್ಧತೆಗಳನ್ನು ಅವಲಂಬಿಸಿದೆ.

ಆರಂಭ

ಎಕ್ಸ್‌ಪ್ಲೋರರ್‌- II ಎಂಬ ಹೆಸರಿನ ವೈಜ್ಞಾನಿಕೋಪಗ್ರಹವನ್ನು ವಿಶ್ವದ ಎಕ್ಸ್‌ಕಿರಣ ವಿಕರಣವನ್ನು ಅನ್ವೇಷಿಸುವ ಉದ್ದೇಶದಿಂದ 1961 ಏಪ್ರಿಲ್‌27 ರಂದು ಉಡಾಯಿಸಲಾಯಿತು. ಆದ್ದರಿಂದ ಆ ದಿನ ಎಕ್ಸ್‌ಕಿರಣಖಗೋಳವಿಜ್ಞಾನದ ಅಧಿಕೃತ ಜನ್ಮದಿನ. ಪ್ರಯೋಗ ಸಾಧಿಸಿದ ಪರಿಮಿತ ವಿಜಯದಿಂದ ವಿಜ್ಞಾನಿಗಳು ಉತ್ತೇಜಿತರಾದರು. ಮರುವರ್ಷ (1962) ರಿಕಾರ್ಡೊ ಗಿಯಾಕೋನಿ ಮತ್ತು ಆತನ ಸಂಗಡಿಗರು (ನ್ಯೂ ಮೆಕ್ಸಿಕೋ) ಚಂದ್ರನಿಂದ ಪ್ರತಿಫಲಿತವಾಗುವ ಪ್ರತಿದೀಪ್ತಶೀಲ ವಿಕಿರಣವನ್ನು (fluorescent radiation) ಅಭ್ಯಸಿಸಲು ಪುಟ್ಟ ಏರೋಬೀರಾಕೆಟನ್ನು ಉಡಾಯಿಸಿದರು. ಚಂದ್ರನಿಂದ ಪ್ರತಿಫಲಿತವಾಗಿ ಬಂದ ಸೌರ ಎಕ್ಸ್‌ಕಿರಣಗಳ ಸುಳಿವೇನೂ ಈ ಪ್ರಯೋಗದಲ್ಲಿ ಲಭಿಸಲಿಲ್ಲ. ಬದಲು ಆಕಾಶಗಂಗೆಯ ಕೇಂದ್ರದಿಂದ ಅತ್ಯಾಚರ್ಯಕರವೆನಿಸುವಷ್ಟು ಪ್ರಬಲ ಎಕ್ಸ್‌ಕಿರಣ ಸಂಜ್ಞೆಗಳು ದೊರೆತವು. ಮರುವರ್ಷ (1963) ಹರ್ಬರ್ಟ್‌ಫ್ರೀಡ್‌ಮನ್‌ಮತ್ತು ಅನುಯಾಯಿಗಳು ನಡೆಸಿದ ಪ್ರಯೋಗದಲ್ಲಿ ಈ ವೀಕ್ಷಣೆ ದೃಢಪಟ್ಟದ್ದು ಮಾತ್ರವಲ್ಲ ಆಕರದ ಸ್ಥಾನವನ್ನು ನಿರ್ಧರಿಸುವುದೂ ಸಾಧ್ಯವಾಯಿತು. ಅದು ಆಕಾಶಗಂಗೆಯ (Milky Way) ಕೇಂದ್ರದಿಂದ ಸುಮಾರು 20 ಡಿಗ್ರಿ ದೂರದಲ್ಲಿರುವ ವೃಶ್ಚಿಕ ರಾಶಿಯಲ್ಲಿ ಇದೆಯೆಂದು ತಿಳಿಯಿತು. ವೃಶ್ಚಿಕರಾಶಿಯ ಪಾಶ್ಚಾತ್ಯನಾಮ Scorpius. ಆದ್ದರಿಂದ ಈ ಎಕ್ಸ್‌ಕಿರಣಾಕರವನ್ನು Sco X1 ಎಂದು ಹೆಸರಿಸಿದರು. ವೃಶ್ಚಿಕ ರಾಶಿಯಲ್ಲಿಯ (Sco) ಎಕ್ಸ್‌ಕಿರಣಾಕರ (x)ಮೊದಲು ಕಂಡ (1) ಎಂದರ್ಥ. (Sco X2 ಎಂದರೆ ವೃಶ್ಚಿಕರಾಶಿಯಲ್ಲಿರುವ ಎರಡನೆಯ ಎಕ್ಸ್‌ಕಿರಣಾಕರ ಎಂದರ್ಥ.) ಅಲ್ಲಿಂದೀಚೆಗೆ ಸಾಕಷ್ಟು ಎಕ್ಸ್‌ಕಿರಣಾಕರಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ಆವಿಷ್ಕರಿಸಲಾಗಿದೆ (discover).

ಇಂದು ತಿಳಿದಿರುವಂತೆ ಆಕಾಶಕಾಯಗಳ ವಿಕಾಸದ ಹಾದಿ ಹೀಗಿದೆ: ಅನಿಲದ ವಿರಳ ಮೋಡ ಕ್ರಮೇಣ ದಟ್ಟೈಸಿ ನೀಹಾರಿಕೆ (nebula) ಆಗುವುದು ಜೊತೆಯಲ್ಲೇ ಉಷ್ಣತೆ ಏರುತ್ತದೆ; ನೀಹಾರಿಕೆಯಲ್ಲಿ ಅನಿಲಗೋಳಗಳು ಜನಿಸುತ್ತವೆ; ಇವು ನಕ್ಷತ್ರಗಳು; ಇವುಗಳ ಉಷ್ಣತೆ ಏರಿದಂತೆ ಇವು ರೇಡಿಯೊ ನಕ್ಷತ್ರಗಳಾಗುವುವು. (ಅಂದರೆ ರೇಡಿಯೊ ಅಲೆಗಳನ್ನು ಮಾತ್ರ ವಿಕಿರಣಿಸುವ ನಕ್ಷತ್ರಗಳು. ಇವು ಗೋಚರಗಳಲ್ಲ.) ಮುಂದೆ ಇವು ಗೋಚರ ನಕ್ಷತ್ರಗಳಾಗಿ ರೂಪಾಂತರಗೊಂಡು ಉಷ್ಣ ಮತ್ತು ಬೆಳಕನ್ನು ವಿಕಿರಣಿಸುತ್ತವೆ. ಈ ಕ್ರಿಯೆಯಲ್ಲಿ ಶಕ್ತಿ ಕ್ಷಯ (ಆದ್ದರಿಂದ ದ್ರವ್ಯನಷ್ಟ) ಮಿತಿಮೀರಿ ನಡೆದು ನಕ್ಷತ್ರಗಳು ಸ್ಫೋಟಿಸಿ ನೋವಾ ಅಥವಾ ಸೂಪರ್ನೋವಾ ನಕ್ಷತ್ರಗಳಾಗಿ ನಾಶವಾಗಿ ಹೋಗಬಹುದು; ಅಂತಃಸ್ಫೋಟಗೊಂಡು (ಅಂದರೆ ನಕ್ಷತ್ರದ ಕೇಂದ್ರದ ದಿಕ್ಕಿಗೆ ಎಲ್ಲೆಡೆಗಳಿಂದಲೂ ಕುಸಿದು ಕುಗ್ಗಿ) ಅತಿ ಕಾಂತಿಯ, ಅತ್ಯುಷ್ಣತೆಯ ಆದರೆ ಅತ್ಯಲ್ಪ ಗಾತ್ರದ ಶ್ವೇತಕುಬ್ಜ ನಕ್ಷತ್ರಗಳಾಗಿ ಇನ್ನಷ್ಟು ಕಾಲ ಬಾಳಿ ಮುಮದೆ ಅತಿನೇರಿಳೆ ಕಿರಣಗಳನ್ನೇ ಪ್ರಧಾನವಾಗಿ ವಿಕಿರಣಿಸುವ ಎಕ್ಸ್‌ಕಿರಣ ನಕ್ಷತ್ರಗಳಾಗಬಹುದು; ಮುಂದೊಂದು ದಿವಸ ಇವೂ ಉರಿದು ನಾಶವಾಗಿ ಜಡವಸ್ತುಗಳಾಗಿ ಹೋಗುತ್ತವೆ. ಹೀಗೆ ನೀಹಾರಿಕೆಗಳಲ್ಲಿ ಹುದುಗಿರುವ ಆಕರಗಳು ಮತ್ತು ಕಣ್ಣಿಗೆ ಕಾಣಿಸದ ಇತರ ಆಕರಗಳು ಎಲ್ಲವೂ ಎಕ್ಸ್‌ಕಿರಣಗಳನ್ನು ವಿಕಿರಣಿಸುವುದು ಸಾಧ್ಯವಿದೆ. ಎಕ್ಸ್‌ಕಿರಣಖಗೋಳವಿಜ್ಞಾನ ವಿಶ್ವ ವಿಕಾಸದ ಬಗ್ಗೆ ಹೊಸ ಮಾಹಿತಿಗಳನ್ನು ಒದಗಿಸುವುದರಲ್ಲಿ ಸಂದೇಹವಿಲ್ಲ.

ವಿಜ್ಞಾನಿಗಳ ಮುಂದಿರುವ ಸದ್ಯದ (1978) ಸಮಸ್ಯೆ ಎಂದರೆ ಎಕ್ಸ್‌ಕಿರಣಾಕರದ ಗಾತ್ರ, ನಿರ್ದಿಷ್ಟಸ್ಥಾನ, ವಿಕಿರಣಸಾಮರ್ಥ್ಯ – ಇವುಗಳ ಖಚಿತ ನಿರ್ಧಾರ. ಈ ಮಾರ್ಗದಲ್ಲಿ ರೋಹಿತಗಳ (spectra) ವಿಶ್ಲೇಷಣೆ ಮತ್ತು ಅಭ್ಯಾಸ ಅತ್ಯುಪಯುಕ್ತ ವಿಧಾನ. ಸೂರ್ಯನ ಬೆಳಕಿನ ದೂಲವನ್ನು ಅಶ್ರಗದ (lens) ಒಂದು ಮುಖದ ಮೂಲಕ ಹಾಯಿಸಿದಾಗ ವಿರುದ್ಧ ದಿಶೆಯಲ್ಲಿ ಇಟ್ಟ ತೆರೆಯಮೇಲೆ ಪಾತವಾಗುವ ಏಳು ಬಣ್ಣಗಳ ಪಟ್ಟಿ ಇಂಥ ಒಂದು ರೋಹಿತ. ಇದರಿಂದ ದೊರೆವ ಪುರಾವೆಗಳ ಆಧಾರದಿಂದ 1029 ರಿಂದ 1030 ವಾಟ್‌ವರೆಗೆ ವಿಕಿರಣದರವಿರುವ ಆಕರಗಳು ಎಕ್ಸ್‌ಕಿರಣಗಳೆಂದು ನಿರ್ಧರಿಸಿದ್ದಾರೆ. ಈ ಮಾನಕದ ರೀತ್ಯ ಸೂರ್ಯ ಎಕ್ಸ್‌ಕಿರಣ ನಕ್ಷತ್ರವಲ್ಲ. ಸೂರ್ಯನಿಂದ ಎಕ್ಸ್‌ಕಿರಣಗಳು ಬರುವುವಾದರೂ ಅವು ಪ್ರಧಾನವಲ್ಲ. ಸೂರ್ಯನ ವಿಕಿರಣದರ ಸುಮಾರು 3.86 x 1026 ವಾಟುಗಳು.

ವಿಶ್ವದಲ್ಲಿ ಎಕ್ಸ್ಕಿರಣಗಳು

ವಿಶ್ವದ ಮಹಾ ವ್ಯಾಪ್ತಿಯಲ್ಲಿ ನಮ್ಮ ಭೂಮಿಯ ಅಸ್ತಿತ್ವವೇ ಅನಂತಸೂಕ್ಷ್ಮ. ಆದ್ದರಿಂದ ನಮ್ಮ ಉಪಕರಣಗಳು ಎಷ್ಟೇ ಪರಿಷ್ಕೃತವಾದವಾಗಿದ್ದರೂ ವಿಶ್ವದ ಎಲ್ಲ ಅಥವಾ ಬಹು ಭಾಗದಷ್ಟಾದರೂ ಎಕ್ಸ್‌ಕಿರಣಾಕರಗಳನ್ನು ಬಿಡಿ ಬಿಡಿಯಾಗಿ ನಿರ್ಧರಿಸುವುದು ಸಾಧ್ಯವಾಗದು. ಇಂಥ ಸಮಸ್ಯೆಗಳು ನಿತ್ಯ ಜೀವನದಲ್ಲಿಯೂ (ಬೇರೆ ಕಾರಣಗಳಿಂದ) ತಲೆದೋರುತ್ತವೆ. ಈ ಪುಸ್ತಕದಲ್ಲಿ ಬಳಸಿರುವ ಬಿಡಿ ಅಚ್ಚು ಮೊಳೆಗಳ ಸಂಖ್ಯೆ ಎಷ್ಟು? ಇಷ್ಟ ಬಂದ ಕೆಲವು ಪುಟಗಳಲ್ಲಿಯ ಮೊಳೆಗಳನ್ನು ಬಿಡಿ ಬಿಡಿಯಾಗಿ ಎಣಿಸಿ ಒಂದು ಪುಟದ ಸರಾಸರಿಯನ್ನು ನಿರ್ಧರಿಸಿ ಇದನ್ನು ಪುಸ್ತಕದ ಒಟ್ಟು ಪುಟಗಳ ಸಂಖ್ಯೆಯಿಂದ ಗುಣಿಸುವುದು ಒಂದು ವಿಧಾನ. ಪ್ರತ್ಯೇಕವಾದ ಬೇರೆಯೇ ಒಂದು ವಿಧಾನದಿಂದ ಈ ಒಟ್ಟು ಸಂಖ್ಯೆಯನ್ನು ಅಂದಾಜು ಮಾಡಿ ಎರಡು ಫಲಿತಾಂಶಗಳನ್ನೂ ತಾಳೆ ನೋಡಬಹುದು. ಸಂಖ್ಯಾಕಲನವಿಜ್ಞಾನದಲ್ಲಿ (statistics) ಇಂಥ ವಿಧಾನಗಳನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ. ವಿಶ್ವದ ಎಕ್ಸ್‌ಕಿರಣಾಕರಗಳ ಸಮಗ್ರ ವಿಕಿರಣವನ್ನು ಸಂಖ್ಯಾಕಲನವಿಜ್ಞಾನದ ವಿಧಾನಗಳಿಂದ ನಿರ್ಧರಿಸಲು ಪ್ರಯತ್ನಿಸಿದ್ದಾರೆ.

ಮೊದಲು ಆಕಾಶಗಂಗೆ ಅಥವಾ ಸ್ಥಳೀಯ ಬ್ರಹ್ಮಾಂಡ (local galaxy). ಇದು ನಮ್ಮ ಸೂರ್ಯನ ವಲಯ. ಆಕಾಶಗಂಗೆಯಲ್ಲಿರುವ ಎಕ್ಸ್‌ಕಿರಣಾಕರಗಳ ಒಟ್ಟು ವಿಕಿರಣ 1032 ವಾಟುಗಳಷ್ಟಿರಬಹುದು. ಇದು ನಮ್ಮ ಪ್ರದೇಶವಾಗಿರುವುದರಿಂದ ಆಕಾಶಗಂಗೆಗೆ ಪ್ರಾಧಾನ್ಯ ಲಭಿಸಿದೆಯೇ ವಿನಾ ವಿಶ್ವದ ದೃಷ್ಟಿಯಿಂದ ಇದೊಂದು ವಿಶೇಷವಾದದ್ದಲ್ಲ. ಆದ್ದರಿಂದ ಎಕ್ಸ್ ಕಿರಣಾಕರಗಳು ಇತರ ಬ್ರಹ್ಮಾಂಡಗಳಲ್ಲಿಯೂ ಸರಿಸುಮಾರಾಗಿ ಇದೇ ಪ್ರಮಾಣದಲ್ಲಿ ಇವೆ ಎಂದು ಭಾವಿಸುವುದು ಸರಿಯಾದ ಕ್ರಮ. ಈ ಪ್ರಕಾರ ಮುಂದುವರಿದು ವಿಶ್ವದ ಸಮಗ್ರ ಎಕ್ಸ್‌ಕಿರಣಕ್ಕೆ ಒಂದು ಅಂದಾಜು ಮಾಡಿದರು. ಬಿಡಿಯಿಂದ ಇಡಿಗೆ ಸಾಗುವ ವಿಧಾನವಿದು (ವ್ಯಷ್ಟಿಯಿಂದ ಸಮಷ್ಟಿಗೆ).

ಪ್ರತ್ಯೇಕವಾಗಿ ಇಡಿಯನ್ನೇ ಗಣಿಸುವ ವಿಧಾನವನ್ನೂ ಅನ್ವೇಷಿಸಿದರು. ಗೊಂಡಾರಣ್ಯದಲ್ಲಿ ಒಂದು ನಿರ್ದಿಷ್ಟ ಪ್ರಾಣಿಯ ಸದ್ದನ್ನು ಆಲಿಸಲು ನಾವು ಪ್ರಯತ್ನೀಸುತ್ತಿದ್ದೇವೆ ಎನ್ನೋಣ. ನಮಗೆ ಬೇಕಾಗಲಿ ಬೇಡವಾಗಲಿ, ಈ ಪ್ರಾಣಿಯ ಕ್ಷೀಣ ಸದ್ದಿನ ಹಿನ್ನೆಲೆಯಲ್ಲಿ ಗೊಂಡಾರಣ್ಯದ ಸಾಮೂಹಿಕ ಸದ್ದಿನ ಸಂತತತೆ ಇದ್ದೇ ಇದೆ. ಹಿನ್ನೆಲೆಯ ಸದ್ದು ಅಸಂಖ್ಯಾತ ಪ್ರಾಣಿಗಳ ಸಮಗ್ರ ಮೊತ್ತದ ಪರಿಣಾಮವೆಂದಾದರೆ ಬಿಡಿಸದ್ದುಗಳ ಒಟ್ಟು ಮೊತ್ತಕ್ಕೆ ಬೇರೆಯೇ ಒಂದು ಅಂದಾಜು ಲಭಿಸುವುದಷ್ಟೆ. ಆಕಾಶದಲ್ಲಿಯೂ ಇಂಥ ಒಂದು ಹಿನ್ನೆಲೆ ವಿಕಿರಣ ಇದೆ. ಒಂದೊಂದು ರೋಹಿತಾಭ್ಯಾಸ ಮಾಡುವಾಗಲೂ ವಿಕಿರಣದ ಕೊಡುಗೆ ಅದರಲ್ಲಿ ಅಸ್ಪಷ್ಟವಾಗಿ ಮೂಡುತ್ತಿತ್ತು. ಇಂಥ ಗಣನೆಗಳಿಂದ ವಿಶ್ವದ ಸಮಗ್ರ ಎಕ್ಸ್ ಕಿರಣ ವಿಕಿರಣಕ್ಕೆ ಬೇರೆಯೇ ಒಂದು ಅಂದಾಜನ್ನು ಮಾಡಿದರು (ಸಮಷ್ಟಿಯಿಂದ ವ್ಯಕ್ತಿಗೆ).

ಎರಡು ಅಂದಾಜುಗಳನ್ನೂ ತಾಳೆ ನೋಡುವಾಗ ಮೊದಲನೆಯದು ಎರಡನೆಯದಕ್ಕಿಂತ ಅದೆಷ್ಟೂ ಕಡಿಮೆಯಾಗಿತ್ತು. ಈ ಕೊರೆಯ ಕಾರಣವೇನು? ನಮಗೆ ವ್ಯಕ್ತವಾಗಿರದ ಅವೆಷ್ಟೋ ಆಕರಗಳು ಬ್ರಹ್ಮಾಂಡದಲ್ಲಿ ಹುದುಗಿರಬೇಕು: ಆದ್ದರಿಂದ ಇನ್ನಷ್ಟು ತೀವ್ರವಾಗಿ, ಸೂಕ್ಷ್ಮವಾಗಿ ಅನ್ವೇಷಣೆ ಮುಂದುವರಿಯಬೇಕು.

ಕೆಲವು ನಿರ್ದಿಷ್ಟ ಆಕರಗಳು

ವೃಷಭರಾಶಿಯಲ್ಲಿ ಖಗೋಳವಿಜ್ಞಾನಿಗಳಿಗೆ ಬಲು ಪ್ರಿಯವೂ ಸಮಸ್ಯಾತ್ಮಕವೂ ಆದ ಆಕಾಶಕಾಯವೊಂದಿದೆ. ದೂರದರ್ಶಕದಿಂದ ಮಾತ್ರ ಕಾಣುವ ಈ ತೆಳುಮೋಡದ ಆಕಾರ ಏಡಿಯಂತೆ (crab) ಉಂಟು. ಆದ್ದರಿಂದ ಇದಕ್ಕೆ ಕ್ರ್ಯಾಬ್‌ನೀಹಾರಿಕೆ ಎಂಬ ಹೆಸರು ಬಂದಿದೆ. ಇದರ ವ್ಯಾಸ ಸೆಕೆಂಡಿಗೆ ಸುಮಾರು 1600 ಕಿಲೋಮೀಟರುಗಳಷ್ಟು ಹಿಗ್ಗುತ್ತಿರುವುದೊಂದು ಸೋಜಿಗದ ಸಂಗತಿ. Tau Xl (Tausus ಎಂದರೆ ವೃಷಭರಾಶಿ) ಎಂಬ ಹೆಸರಿನ ಒಂದು ಪ್ರಬಲ ಬಿಡಿ ಎಕ್ಸ್‌ಕಿರಣಾಕರವನ್ನು ಕ್ರ್ಯಾಬ್‌ನೀಹಾರಿಕೆಯ ದಿಕ್ಕಿನಲ್ಲಿ ಗುರುತಿಸಲಾಯಿತು (1964). ಹಳೆಯ ಚೀನೀ ವರದಿಗಳ ಪ್ರಕಾರ (ಕ್ರಿಸ್ತ ಪಂಚಾಗದ ಗಣನೆಯಲ್ಲಿ) 1054 ಜುಲೈ 4ರಂದು ಹಲವಾರು ಸೆಂಟಿಮೀಟರುಗಳಷ್ಟು ಅಗಲದ ಒಂದು ಅಪೂರ್ವ ನಕ್ಷತ್ರ ವೃಷಭರಾಶಿಯಲ್ಲಿ ಕಾಣಿಸಿಕೊಂಡಿತಂತೆ. ಯಾವ ನಕ್ಷತ್ರವೂ ಎಂಥ ಪ್ರಬಲ ದೂರದರ್ಶಕದಿಂದ ನೋಡಿದಾಗಲೂ ಬಿಂಬವನ್ನು ಪ್ರದರ್ಶಿಸುವುದಿಲ್ಲ. ಪ್ರತಿಯೊಂದೂ ಬಿಂದುವೇ. ಹೀಗಿರುವಾಗ ಈ ಸೆಂಟಿಮೀಟರ್‌ಅಗಲದ ಬೆಳಕಿನ ಸೆಲೆ ಏನು ಎಂಬುದು ರಹಸ್ಯವಾಗಿಯೇ ಉಳಿದಿತ್ತು. ಚೀನೀ ವರದಿಗೆ ವಿವರಣೆ ನೀಡಲು ಈಗ (20 ನೆಯ ಶತಮಾನದ ಉತ್ತರಾರ್ಧ) ಸಾಧ್ಯವಾಗಿದೆ. ಆ ದೃಶ್ಯ ಒಂದು ನೋವಾ ಅಥವಾ ಸೂಪರ್ನೋವಾ ನಕ್ಷತ್ರ (ನಕ್ಷತ್ರದ ಆಸ್ಫೋಟನೆ); ಆದ್ದರಿಂದ ಅದರ ಬೆಳಕು ಹಠಾತ್ತನೆ ತೀವ್ರವಾಗಿ ಏರಿ ಅದರ ಗಾತ್ರ ವರ್ಧಿಸಿ ಚೀನಿ ವೀಕ್ಷಕರಿಗೆ ಅಪೂರ್ವ ನಕ್ಷತ್ರ ದರ್ಶನವಾಯಿತು. ಈ ನೋವಾದ ಅವಶೇಷವೇ ಕ್ರ್ಯಾಬ್‌ನೀಹಾರಿಕೆ. ಇದರ ಗಡಸು ತಿರುಳಿನಲ್ಲಿ ಆ ನಕ್ಷತ್ರದ ಕೇಂದ್ರವು ಶ್ವೇತಕುಬ್ಜವಾಗಿ (White Dwarf) ಉಳಿದಿರಬೇಕು. ಇದೇ Tau XI ಹೆಸರಿನ ಎಕ್ಸ್‌ಕಿರಣಾಕರ ಎಂದು ವಿಜ್ಞಾನಿಗಳ ಮತ. ಈ ಪ್ರಕಾರ Tau XIಕ್ಕೆ ಗಮನಾರ್ಹ (ಎಂದರೆ ಅಳೆಯಬಲ್ಲ) ಗಾತ್ರವಿರಬೇಕು. ಅದು ನಕ್ಷತ್ರಗಳಂತಲ್ಲ (ಬಿಂದುರೂಪಿಯಲ್ಲ) ಎಂದು ತರ್ಕಿಸಿದರು. ಇದನ್ನು ಪ್ರಾಯೋಗಿಕವಾಗಿ ಪರಿಶೀಲಿಸಲು ಯೋಗ್ಯ ಸನ್ನಿವೇಶ 1964 ಜುಲೈ 7 ರಂದು ಒದಗಿ ಬಂತು. ಪೂರ್ವ ಗಣನೆಯ ಪ್ರಕಾರ ಅಂದು ಚಂದ್ರಬಿಂಬ ಕ್ರ್ಯಾಬ್‌ನೀಹಾರಿಕೆಯನ್ನು ಅಡ್ಡಹಾಯುವುದರಲ್ಲಿತ್ತು, ಈ ಘಟನೆ ಕ್ರ್ಯಾಬ್‌ನೀಹಾರಿಕೆಯನ್ನು ಕುರಿತು ಚಂದ್ರಸಂಕ್ರಮಣ. ಸಂಕ್ರಮಣ ಕಾಲದಲ್ಲಿ Tau XIರ ವಿಕಿರಣವನ್ನು ಅಳೆದು ಪರಿಶೀಲಿಸಿದರು. ವಿಕಿರಣ ಕ್ರಮೇಣ ಮಾಸಿ ಮಸಕಾಗಿ ಪುನಃ ಮೊದಲಿನ ಮಟ್ಟಕ್ಕೇ ಮರಳಿತು. ಅದು ಹಠಾತ್ತನೆ ನಿಲ್ಲಲಿಲ್ಲ. Tau XI ಬಿಂದುರೂಪಿಯಾಗಿದ್ದರೆ ಸಂಕ್ರಮಣದ ಪ್ರಾರಂಭದಲ್ಲಿಯೇ ವಿಕಿರಣ ತುಂಡಾಗಿ ಬಿಡಬೇಕಾಗಿತ್ತು. ವಿಕಿರಣ ಹೀಗಾಗದೆ ಕ್ರಮೇಣ ಮಾಸಿದುದರಿಂದ Tau XIಕ್ಕೆ ಗಮನಾರ್ಹ ವ್ಯಾಪ್ತಿ ಇದೆ ಎಂದು ಸ್ಥಿರಪಟ್ಟಿತು. ಈ ವ್ಯಾಪ್ತಿ ಕೋನದ 1 ರಿಂದ 2 ಮಿನಿಟುಗಳಷ್ಟು ಇದು ನೀಹಾರಿಕೆ ನಮಗೆ ಪ್ರದರ್ಶಿಸುವ ವ್ಯಾಪ್ತಿಯ ಮೂರರಲ್ಲಿ ಒಂದಂಶ ಮಾತ್ರ. ಭೂಮಿಯಿಂದ ಕ್ರ್ಯಾಬ್‌ನೀಹಾರಿಕೆಯ ದೂರ ಸುಮಾರು 6000 ಜ್ಯೋತಿರ್ವರ್ಷಗಳು (1 ಜ್ಯೋತಿರ್ವರ್ಷ = 2.99 x 1010 ಸೆಂ.ಮೀ.) ಇಷ್ಟು ಅಗಾಧ ದೂರದಲ್ಲಿದ್ದರೂ Tau XIರ ಗಾತ್ರ ಪರಿಶೀಲನೆಗೆ ಲಭಿಸಿದ್ದು ಒಂದು ವಿಶಿಷ್ಟ ಪರಿಶೋಧನೆಯೇ ಸರಿ.

ಇತರ ಕೆಲವು ನಿರ್ದಿಷ್ಟ ಅಕರಗಳ ಹೆಸರುಗಳನ್ನು ಮಾತ್ರ ಇಲ್ಲಿ ಬರೆಯಬಹುದಷ್ಟೆ. ಕನ್ಯಾರಾಶಿಯಲ್ಲಿ Vir X1, ಕಿನ್ನರ ಪುಂಜದಲ್ಲಿ Cen X2, ವೃಶ್ಚಿಕರಾಶಿಯಲ್ಲಿ Sco X2, ScoX3, ಧನೂರಾಶಿಯಲ್ಲಿ Sgr X1, Sgr X2.

ಎಕ್ಸ್‌ಕಿರಣ ನಕ್ಷತ್ರವೊಂದರ ಗಾತ್ರ ಕಲ್ಕತ್ತ ನಗರದಷ್ಟು ಇದ್ದರೆ ಅದರಿಂದ ವಿಕಿರಣಗೊಳ್ಳುವ ಶಕ್ತಿ ಮಾತ್ರ ಸಾಕ್ಷಾತ್‌ಸೂರ್ಯನಿಂದ (ಭೂಮಿಯ 12 ಲಕಷ ಪಾಲು ದೊಡ್ಡದಿದೆ) ಉತ್ಸರ್ಜಿತವಾಗುವ ಶಕ್ತಿಯ ಅದೆಷ್ಟೂ ಸಾವಿರ ಪಟ್ಟು ಜಾಸ್ತಿ ಇರುವುದು! ಇಂಥ ಅಲ್ಪಗಾತ್ರದ ಆದರೆ ಮಹಾಸಾಮರ್ಥ್ಯದ ಒಂದು ಶಕ್ತಿಮೂಲ 1 ಸೆಕೆಂಡಿನಲ್ಲಿ ಕಾರುವ ಶಕ್ತಿ ನಮ್ಮ ಪ್ರಪಂಚದ ಸಮಸ್ತ ಸ್ವಯಂಚಲಿಗಳನ್ನೂ ದಿನವೊಂದಕ್ಕೆ ಸರಾಸರಿ 110 ಕಿಲೋಮೀಟರ್‌ದೂರ ಸತತವಾಗಿ ಮುಂದಿನ 1011 ವರ್ಷಗಳ ಕಾಲ ಚಾಲೂ ಮಾಡಲು ಯಥೇಚ್ಛವಾಯಿತು ಎಂದು ಅಂದಾಜು ಮಾಡಲಾಗಿದೆ.

ವೈಜ್ಞಾನಿಕ ಊಹೆಗಳು

ಲಭ್ಯ ಪುರಾವೆಗಳ ಆಧಾರದಿಂದ ಎಕ್ಸ್‌ಕಿರಣಾಕರಗಳನ್ನು ಕುರಿತು ನಾಲ್ಕು ವೈಜ್ಞಾನಿಕ ಊಹೆಗಳನ್ನು ಮಂಡಿಸಲಾಗಿದೆ.

ಒಂದನೆಯ ಊಹೆಯ ಪ್ರಕಾರ ಎಕ್ಸ್‌ಕಿರಣಾಕರಗಳೆಲ್ಲವೂ ನ್ಯೂಟ್ರಾನ್‌ನಕ್ಷತ್ರಗಳು. ಅತ್ಯಂತ ಸಾಂದ್ರವಾಗಿ ಪೇರಿಸಲ್ಪಟ್ಟ ನ್ಯೂಟ್ರಾನುಗಳ ಗೋಳವೇ ನ್ಯೂಟ್ರಾನ್‌ನಕ್ಷತ್ರ. ಇಂಥ ಒಂದು ನಕ್ಷತ್ರದ ಘನ ಸೆಂ.ಮೀ. ಗಾತ್ರ ದ್ರವ್ಯದ ತೂಕ 61 x 106 ಟನ್ನುಗಳಿರಬಹುದು. (ಸೂರ್ಯನಿಗೆ ಈ ಬೆಲೆ ಕೇವಲ 0.000012 ಟನ್‌). ಇದರ ಹೊರಮೈ ಉಷ್ಣತೆ 107 ಡಿಗ್ರಿ ಸೆಲ್ಸಿಯಸ್ಸಿಗಿಂತಲೂ ಹೆಚ್ಚು. (ಸೂರ್ಯನಿಗೆ ಈ ಬೆಲೆ 5.5 x 103 ಡಿಗ್ರಿ ಸೆ. ನೀರು 100 ಡಿಗ್ರಿ ಸೆಲ್ಸಿಯಸ್ಸಿನಲ್ಲಿ ಕುದಿಯುವುದು). ಈ ನಕ್ಷತ್ರದಿಂದ ಬೆಳಕು ಮತ್ತು ನೀಳ ಅಲೆಗಳು ವಿಕಿರಣಗೊಳ್ಳುವುದಿಲ್ಲ.

ಎರಡನೆಯ ಊಹೆಯ ಪ್ರಕಾರ ನೋವಾ, ಸೂಪರ್ನೋವಾ ನಕ್ಷತ್ರಾವಶೇಷಗಳೇ ಎಕ್ಸ್‌ಕಿರಣಾಕರಗಳು. ಇಂಥ ಒಂದು ನಕ್ಷತ್ರದ ಆಸ್ಫೋಟನೆಯಲ್ಲಿ ಉತ್ಪನ್ನವಾಗುವ ಬಲು ಪಾಲು ಶಕ್ತಿ ಅಂತಿಮವಾಗಿ ಉಷ್ಣ ರೂಪಕ್ಕೆ ಪರಿವರ್ತಿತವಾಗಬೇಕು. ಇದರಿಂದ ಎಕ್ಸ್‌ಕಿರಣಗಳ ವಿಕಿರಣಕ್ಕೆ ಅವಶ್ಯವಾಗುವ 103 ರಿಂದ 109 ವರೆಗಿನ ಡಿಗ್ರಿ ಸೆಲ್ಸಿಯಸ್‌ಉಷ್ಣತೆ ಉಂಟಾಗುತ್ತದೆ.

ಉಳಿದ ಊಹೆಗಳು ಬಲು ಕ್ಲಿಷ್ಟ ಮತ್ತು ಸಂಕೀರ್ಣ ಭೌತ ಪರಿಕಲ್ಪನೆಗಳು. ಮುಖ್ಯವಾಗಿ ಪ್ರಾಥಮಿಕ ಕಣಗಳ ಸ್ವೇಚ್ಛಾಚಲನೆ, ಈ ಚಲನೆಯಲ್ಲಿ ನಷ್ಟವಾಗುವ ಶಕ್ತಿ, ಇದರ ಎಕ್ಸ್‌ಕಿರಣ ರೂಪ ಇವನ್ನು ಅವಲಂಬಿಸಿವೆ.

ಭೌತವಾಗಿ ಎಕ್ಸ್‌ಕಿರಣ ನಕ್ಷತ್ರಗಳು ಏನೇ ಆಗಲಿ ಅವು ಒಂದು ವಿಶಿಷ್ಟ ಜಾತಿಗೆ ಸೇರಿದ ಆಕಾಶಕಾಯಗಳು. ಸೂರ್ಯನಿಂದ ವಿಕಿರಣಿಣಗೊಳ್ಳುವ ಎಕ್ಸ್‌ಕಿರಣರೋಹಿತದೊಡನೆ ಹೋಲಿಸುವಾಗ ಇವು ಗಮನಾರ್ಹವಾಗಿ ಭಿನ್ನವಾಗಿವೆ. Cen X2ನ್ನು (ಸೆಂಟಾರಸ್‌ಅಂದರೆ ಕಿನ್ನರ ಪುಂಜದಲ್ಲಿರುವ ಒಂದು ಆಕರ) 1967ರ ಏಪ್ರಿಲ್‌ನಲ್ಲಿ ಮೊದಲು ಗುರುತಿಸಲಾಗಿತು. ಆರು ವಾರಗಳ ತರುವಾಯ ನಡೆಸಿದ ಶೋಧನೆಯಲ್ಲಿ Cen X2ರ ವಿಕಿರಣ ಸಾಮರ್ಥ್ಯ ಆರು ಅಂಶಗಳಷ್ಟು ಕಡಿಮೆಯಾಗಿತ್ತು. ಮುಂದಿನ ಸೆಪ್ಟೆಂಬರಿನಲ್ಲಿ ಇದರ ಪತ್ತೆಯೇ ಆಗಲಿಲ್ಲ. ಅಂದರೆ ಆರು ತಿಂಗಳ ಕ್ಷಿಪ್ರಾವಧಿಯಲ್ಲಿ ಇದು ಪ್ರದರ್ಶಿಸಿದ ಇಳಿತ ತೀವ್ರವಾಗಿತ್ತು. ಮುಂದೆ ನವೆಂಬರ್‌1968ರಲ್ಲಿ ಭಾರತದಿಂದ ಉಡಾಯಿಸಿದ ರಾಕೆಟ್‌ಕ್ಯಾಮರಗಳು ಇದೇ ಆಕರವನ್ನು ಪುನಃ ಗುರುತಿಸಿದುವು. ಸೆಂಟಾರಸ್‌- ಲೂಪಸ್‌(ಕಿನ್ನರ – ವೃಕ)ಗಡಿಯಲ್ಲೂ ತೀವ್ರ ಆಂದೋಳನವಿರುವ ಇಂಥದೇ ಒಂದು ಆಕರವನ್ನು 1969ರ ಬೇಸಗೆಯಲ್ಲಿ ಶೋಧಿಸಿದ್ದಾರೆ. ಇಂಥವನ್ನು ಎಕ್ಸ್‌ಕಿರಣ ನೋವಾ ನಕ್ಷತ್ರಗಳೆಂದು ಹೆಸರಿಸಲಾಗಿದೆ. ಮೂರು ವರ್ಷಗಳಷ್ಟು ಕಡಿಮೆ ಅವಧಿಯಲ್ಲಿ ಇಂಥ ಎರಡು ವೈಪರೀತ್ಯಗಳ ಶೋಧನೆ ನಡೆದಿರುವುದನ್ನು ಗಮನಿಸಿ ಎಕ್ಸ್‌ಕಿರಣ ನೋವಾ ನಕ್ಷತ್ರಗಳು ವಿಶ್ವದ ಸಾಮಾನ್ಯ ಚಟುವಟಿಕೆಯೇ ಆಗಿರಲಾರವೇ ಎಂಬ ಸಂದೇಹವೂ ವಿಜ್ಞಾನಿಗಳಲ್ಲಿ ಮೂಡಿದೆ. ಒಂದು ಎಕ್ಸ್‌ಕಿರಣ ಬ್ರಾಹ್ಮಾಂಡವೇ (galaxy) ವಿಶ್ವದ (universe) ಗರ್ಭದಲ್ಲಿ ಹುದುಗಿರುವುದನ್ನು ಶೋಧಿಸಲಾಗಿದೆ. ಕನ್ಯಾದ (Virgo) ದಿಕ್ಕಿನಲ್ಲಿರುವ ಈ ಆಕರವನ್ನು 1965ರ ಅನಂತರ ಪದೇ ಪದೇ ವಿಶೇಷ ಸೂಕ್ಷ್ಮೋಪಕರಣಗಳ ನೆರವಿನಿಂದ ಪರಿಶೀಲಿಸಿ ವಿವರಗಳ ಸಂಗ್ರಹಣೆ ನಡೆದಿದೆ. ಇದರಿಂದ ಬರುವ ಎಕ್ಸ್‌ಕಿರಣ ಸಂಜ್ಞೆ ಬಲು ದುರ್ಬಲ, Sco X1ರ 200 ಅಂಶಗಳಲ್ಲಿ 1 ಮಾತ್ರ. ಈ ಆಕರದ ದೂರ 5 x 107 ಜ್ಯೋತಿರ್ವರ್ಷಗಳೆಂದು ಗಮನಿಸಿದರೆ ಇದರ ವಿಕಿರಣ ಸಾಮರ್ಥ್ಯ 1036 ವಾಟುಗಳಾಗುತ್ತದೆ. ಇಂಥ ಪ್ರಬಲ ವಿಕಿರಣ ಒಂದೆರಡು ಆಕರಗಳಿಂದ ಸಾಧ್ಯವಾಗದು. ಆಕರಗಳ ಸಮುದಾಯದಾದ ಎಕ್ಸ್‌ಕಿರಣ ಬ್ರಹ್ಮಾಂಡವೇ ಬೇಕಾದೀತು.

ಭವಿಷ್ಯ

ವಿದ್ಯುತ್ಕಾಂತ ಅಲೆಗಳ ರೋಹಿತದಲ್ಲಿ ಎಕ್ಸ್‌ಕಿರಣಗಳ ತರುವಾಯ ಗ್ಯಾಮಕಿರಣಗಳು ಬರುತ್ತವೆ. ಆದ್ದರಿಂದ ಗ್ಯಾಮಕಿರಣ ನಕ್ಷತ್ರಗಳಿವೆಯೇ ಮತ್ತು ಹ್ರಸ್ವ ಅಲೆ (ಅಧಿಕ ಶಕ್ತಿ) ವಿಕಿರಣಾಕರಗಳಿವೆಯೇ ಎಂಬ ದಿಶೆಗಳಲ್ಲಿಯೂ ಅನ್ವೇಷಣೆ ಮುಂದುವರಿದಿದೆ. ವಿಶ್ವದಲ್ಲಿ ಸೂರ್ಯನ ಹೊರತಾಗಿ ಬೇರೆ ಯಾವ ಆಕರದಿಂದಲೂ ಬರುವ ಗ್ಯಾಮಕಿರಣಗಳನ್ನು ಖಚಿತವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಎಕ್ಸ್‌ಕಿರಣ ಖಗೋಳವಿಜ್ಞಾನವೇ ಇನ್ನೂ ಎಳೆ ಹರೆಯದ ಅಣುಗ. ಆದ್ದರಿಂದ ಇದು ಪ್ರಾಯ ಪ್ರಬುದ್ಧವಾಗುವಾಗ ಗ್ಯಾಮಕಿರಣ ಖಗೋಳವಿಜ್ಞಾನಕ್ಕೆ ರಂಗ ಸಿದ್ಧವಾಗುವುದು. ಹೀಗೆ ಎಲ್ಲಿವರೆಗೆ? ಮಾನವನ ಮಿತಿ ಇದನ್ನು ನಿರ್ಧರಿಸುವುದೇ ವಿನಾ ವಿಶ್ವದ ಮಿತಿ ಅಲ್ಲ.

ನತುಮಾಂ ಶಕ್ಯಸೇ ದ್ರಷ್ಟುಂ ಆನೇನೈವ ಸ್ವಚಕ್ಷುಷಾ
ದಿವ್ಯಂ
ದದಾಮಿ ತೇ ಚಕ್ಷುಃ ಪಶ್ಯಮೇ ಯೋಗಮೈಶ್ವರಮ್‌||
ಶ್ರೀ ಮದ್ಭಗವದ್ಗೀತೆ (11 – 8)

ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ಅರ್ಜುನನಿಗೆ ಪ್ರದರ್ಶಿಸುತ್ತ ಹೇಳುತ್ತಾನೆ, “ಆದರೆ ನೀನು ನಿನ್ನ ಈ ಕಣ್ಣುಗಳಿಂದಲೇ ನನ್ನ ವ್ಯಾಪ್ತ ರೂಪವನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿನಗೆ ಅಲೌಕಿಕವಾದ ದರ್ಶನ ಶಕ್ತಿಯನ್ನು ಕೊಡುವೆನು. ಸರ್ವೇಶ್ವರನಾದ ನನ್ನ ಸಾಮರ್ಥ್ಯವನ್ನು ನೋಡು.” (ಡಿ. ವಾಸುದೇವಾ ಆರ್ಯ ರಚಿತ ‘ಗೀತಾ ಭಾವ.’) ಇಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಪದಗಳು ವಿಶ್ವವನ್ನೂ ಮಾನವನನ್ನೂ ಪ್ರತೀಕಿಸುತ್ತವೆ. ಇದು ನಮಗೆ ನೀಡುವ ಸಂದೇಶ “ಈ ಒಡಲಿಗೆ ಈ ಕಣ್ಣು ಮತ್ತು ಈ ದೃಶ್ಯ; ಇದರಿಂದ ಆಚೆಗಿನದು ಆದರೆ ಬೇರೆ ಒಡಲು ಮತ್ತು ಬೇರೆ ಕಣ್ಣು ಅಗತ್ಯ.”

(1994).

1994ರಲ್ಲಿಯ ಸ್ಥಿತಿ

ಯಾವ ಕಾಲದ ಮತ್ತು ಯಾವ ಮಟ್ಟದ ವಿಜ್ಞಾನಿಯೇ ಇರಬಹುದು. ಆತ ನಡೆಸುವ ಅನ್ವೇಷಣೆ (exploration). ಸಂಶೋಧನೆ (research). ತಪಾಸನೆ (verification). ಮತ್ತು ಅಂತಿಮವಾಗಿ ಮಾಡುವ ಆವಿಷ್ಕಾರ (discovery) ಅಥವಾ ಮಂಡಿಸುವ ಸಿದ್ಧಾಂತ (theory) ನವಯುಗ ಪ್ರವರ್ತಕವೇ ಆಗಿರಬಹುದು. ವಿಜ್ಞಾನ ಪ್ರವಾಹದಲ್ಲಿ ಆತನ ಪರಿಮುದ್ರೆ ಕೇವಲ ಐತಿಹಾಸಿಕವಾಗಿ ಅಲ್ಲ ವಾಸ್ತವವಾಗಿಯೂ ಅತಿ ದೀರ್ಘಕಾಲ ಪ್ರಸ್ತುತ (relevant) ಅಥವಾ ಸಂಗತ (consistent) ಆಗಿರಲೂಬಹುದು – ಆದರೆ ಋತದ ಸಮ್ಯಗ್ದರ್ಶನ ಎಂದೂ ಅವನಿಗೆ ಸಿದ್ಧಿಸಿರುವುದಿಲ್ಲ. ಇದೊಂದು ವೈಜ್ಞಾನಿಕ ಸತ್ಯ (ಅಂದಮಾತ್ರಕ್ಕೆ ದಾರ್ಶನಿಕರಿಗೆ, ಸಂತ, ಅನುಭಾವಿ ಮೊದಲಾದವರಿಗೆ ಸಿದ್ಧಿಸುವುದು ಎಂಬ ಜನಜನಿತ ಶ್ರದ್ಧೆ ಕೇವಲ ಪಲಾಯನವಾದ, ಅತಾರ್ಕಿಕ ನಿಲವು ಮತ್ತು ಕೊನೆಯದಾಗಿ ಕುರುಡು ನಂಬಿಕೆ.) ಪ್ರತಿಯೊಬ್ಬ ವಿಜ್ಞಾನಿಯ ಶೋಧನೆಯೂ ಋತದ ಅನಂತಾಲ್ಪಾಂಶವನ್ನು ಅನಾವರಣಗೊಳಿಸಿರುತ್ತದೆ. ಯಾವುದೋ ಒಂದು ಹಂತದಲ್ಲಿ ಈ ಅಂಶಗಳೆಲ್ಲವೂ ಛಿದ್ರಚಿತ್ರೊಗಟಿಗೆ (jigsaw puzzle) ಒಡಪು (ಪರಿಹಾರ Solution) ದೊರೆತಂತೆ ಪರಸ್ಪರ ಹೊಂದಿಕೊಂಡು ಋತ ಕುರಿತಂತೆ ಆ ಭಾಗದ ತುಸು ವಿಸ್ತೃತಚಿತ್ರ ಲಭಿಸುತ್ತದೆ. ಎಕ್ಸ್‌ಕಿರಣ ಖಗೋಳವಿಜ್ಞಾನವೂ ಹೀಗೆಯೇ ಮಹಾಬಾಜಣೆ ವಾದದ (Big Bang hypothesis) ಅವಿಭಾಜ್ಯ ಅಂಗವಾಗಿ ಇದು ಬೆಸೆದುಕೊಂಡಿದೆ. ಇನ್ನು ಋತಕ್ಕೂ (the trut) ಸತ್ಯಕ್ಕೂ (truth) ಅದೇ ರೀತಿ ಸುಂದರತೆಗೇ (the beautiful) ಸೌಂದರ್ಯಕ್ಕೂ (beauty) ಇರುವ ಸಂಬಂಧ ತಿಳಿಯಲು ನೋಡಿ ‘ಋಷಿವಾಕ್ಯ ವಿಜ್ಞಾನ ಕಲೆ’ ಅಧ್ಯಾಯ 9.