ಆಧುನಿಕ ವಿಜ್ಞಾನದ ಸ್ಫೋಟ ಪಾಶ್ಚಾತ್ಯ ದೇಶಗಳಲ್ಲಿ ಘಟಿಸಿತು (19 – 20ನೆಯ ಶತಮಾನ). ಸಹಜವಾಗಿ ಅಲ್ಲಿಯ ಪರಂಪರೆಗೆ ಅನುಸಾರವಾಗಿ ಆಯಾ ಭಾಷೆಗಳೂ ವಿಜ್ಞಾನಸಂವಹನಮಾಧ್ಯಮಗಳಾಗಿ ಅರಳಿದ್ದುವು. ಹೀಗೆ ವೈಜ್ಞಾನಿಕ ಚಿಂತನೆ ಮತ್ತು ಪರಿಕಲ್ಪನೆ ಅವಶ್ಯಕತಾನುಸಾರ ಸಮಸಮವಾಗಿಯೇ ಬೆಳೆದವು. ಅಂದರೆ, ಸಾಹಿತ್ಯ – ವಿಜ್ಞಾನ ನಡುವೆ ಕೊಡು – ಕೊಳು ಪ್ರಕ್ರಿಯೆ ಸಂಸರ್ಭೋಚಿತವಾಗಿ ನಡೆಯಿತು. ಮತ್ತು ಉಭಯ ಪ್ರಕಾರಗಳೂ ನಳನಳಿಸಿದುವು.

ವಿಜ್ಞಾನ ಎಂದರೇನು ವ್ಯಕ್ತಿಯ ಕುತೂಹಲಭರಿತಮತಿ ನಿಸರ್ಗದ ಯಾವುದೋ ವಿದ್ಯಮಾನ ಅಥವಾ ಘಟನೆಯಿಂದ ಆಕರ್ಷಿತವಾಗುತ್ತದೆ. ಇದು ಕಾರ್ಯ, ಇದನ್ನು ಆಗಗೊಳಿಸುವ ಹಿನ್ನಲೆ – ಕಾರಣವೊಂದಿರಬೇಕು, ಅದನ್ನು ತಾನು ಶೋಧಿಸಬೇಕು, ತನ್ಮೂಲಕ ನಿಸರ್ಗಯಂತ್ರ ಕುರಿತು ಕಿಂಚಿತ್ತಾದರೂ ಒಳನೋಟ ಗಳಿಸಬೇಕು ಮುಂತಾದ ಪ್ರೇರಣೆಗಳು ಆತನಲ್ಲಿ ಮೊಳೆಯುತ್ತವೆ. ಈ ಧಾಟಿಯಲ್ಲಿ ಮುನ್ನಡೆದು ಆ ಘಟನೆ ಬಗ್ಗೆ ಕಾರ್ಯ – ಕಾರಣ ಸಂಬಂಧ ಪತ್ತೆ ಮಾಡಿದಾಗ ಆತನಲ್ಲಿ ಮಿನುಗುವ ಅರಿವೇ ವಿಜ್ಞಾನ.

ಇದರ ಪ್ರಯೋಜನವೇನು? ಮೊದಲನೆಯದು ಆನಂದ. ಬಳಿಕ ಈ ಅರಿವನ್ನು ಪುನಃ ನಿಸರ್ಗಕ್ಕೆ ಅನ್ವಯಿಸಿ ಬದುಕನ್ನು ಸುಗಮಗೊಳಿಸಬಹುದು. ವಿಜ್ಞಾನದ ಈ ಅನ್ವಿತ ಮುಖಕ್ಕೆ ತಂತ್ರವಿದ್ಯೆ (ಟೆಕ್ನಾಲಜಿ) ಎಂದು ಹೆಸರು. ಸರಳ ಸಂಚಾರಸಾಧನಗಳಾದ ಎತ್ತಿನಗಾಡಿ, ಸೈಕಲ್ ಮತ್ತು ಬಸ್, ಮನೆ ಬೆಳಗುವ ವಿದ್ಯುತ್ತು, ಮುದ್ರಣಯಂತ್ರ, ಗಣಕ, ಆಕಾಶಯಾನ ಎಲ್ಲವೂ ತಂತ್ರವಿದ್ಯೆ ನಮಗೆ ಒದಗಿಸಿರುವ ಸೌಕರ್ಯದ ಫಲಗಳು. ತಂತ್ರವಿದ್ಯಾರಹಿತ ಜೀವನವನ್ನು ಇಂದು ಊಹಿಸಲು ಸಾಧ್ಯವಾಗದು.

ಅಂದ ಮೇಲೆ ಜನಸಾಮಾನ್ಯರ ಮನ ಮನೆಗಳಲ್ಲಿ ವಿಜ್ಞಾನದ – ಅದಕ್ಕಿಂತ ಮಿಗಿಲಾಗಿ ತಂತ್ರವಿದ್ಯೆಯ – ರೋಚಕ ಸಾಹಸ, ಉಲ್ಕಾಸದೃಶ ಅಭಿವೃದ್ಧಿ, ಮಾರಕ ಅಪಾಯಗಳು, ಭವಿಷ್ಯಸಾಧ್ಯತೆಗಳು ಮುಂತಾದವನ್ನು ತಾವು ತಿಳಿದು, ಸಾಧ್ಯವಾದರೆ, ಕೆಲವನ್ನಾದರೂ ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಆಶಯ ಕೊನರುವುದು ಸಹಜ. ವಿಜ್ಞಾನದ ತಾಂತ್ರಿಕ ಪರಿಭಾಷೆಯಾಗಲೀ ಸಮೀಕರಣ ಅಲೇಖಗಳಾಗಲೀ ಜಟಿಲ ಗಣನೆಗಳಾಗಲೀ ಕಲಿತಿರದ ಇಂಥ ನೈಜ ಆಸಕ್ತರಿಗೆ ಅದರ ವರಗಳನ್ನು ಶ್ರುತಪಡಿಸುವುದು ಹೇಗೆ? ಇದು ಸಮಾಜದ ಕರ್ತವ್ಯವಲ್ಲವೇ?

ಹೌದು. ಏಕೆಂದರೆ ಜ್ಞಾನ – ವಿಜ್ಞಾನ ನಿಂತ ನೀರಾಗಬಾರದು:

ಹಳೆನೀರು ಹೊರಹರಿದು ಹೊಸನೀರು ಬರಬೇಕು
ಕೊಳೆಕಳೆದ ಎಳೆಜೀವ ನಳನಳಿಸುತಿರಬೇಕು
ಕಳವಳವ ನೀಗಿ ಹರಿಸದಲಿ ಸಾಗಲು ಸದಾ
ಇಳೆಯ ತತ್ತ್ವವನರಿತು ಮುನ್ನಡೆಯೊ ಅತ್ರಿಸೂನು ||

ವಿಜ್ಞಾನದ ಕೆಲವು ಸಾಧನೆಗಳನ್ನು ಗಮನಿಸಬಹುದು: ವಿಶ್ವವೆಂದರೆ ನಾವಿರುವ ಭೂಮಿ ಮಾತ್ರವಲ್ಲ, ಭೂಮಿ ಸದಸ್ಯಗ್ರಹವಾಗಿರುವ ಸೌರವ್ಯೂಹವಲ್ಲ, ಸೂರ್ಯನ ನೆಲೆಯಾದ ಆಕಾಶಗಂಗೆಯೂ ಅಲ್ಲ, ಇವೆಲ್ಲವೂ ಮತ್ತು ಇವನ್ನು ಮೀರುವ ಅಸಮಖ್ಯ ಅಜ್ಞಾತ ಸಂಗತಿಗಳೂ ಸೇರಿರುವ ಒಕ್ಕೂಟವದು. ಈ ಚಿಂತನೆ ಸಕಲ ವಿಜ್ಞಾನಗಳ ಮಾತೃ ಎಂಬ ಗೌರವಕ್ಕೆ ಸಕಾರಣವಾಗಿಯೇ ಭಾಜನವಾಗಿರುವ ಖಗೋಳವಿಜ್ಞಾನದ ಕೊಡುಗೆ. ಇಂಥ ಬೃಹದ್ವಿಶ್ವವನ್ನು ನಿಯಂತ್ರಿಸುವ ಆಂತರಿಕ ವಿಧಿನಿಯಮಗಳೇನಾದರೂ ಇವೆಯೇ? ತೋರ್ಕೆಗೆ ತೀರ ಸರಳವಾದ ಈ ಪ್ರಶ್ನೆಗೆ ಕಾಲದಿಂದ ಕಾಲಕ್ಕೆ ಲಭಿಸಿರುವ ಉತ್ತರಗಳು ವಿಜ್ಞಾನದ ವಿವಿಧ ವಿಭಾಗಗಳ ಜನನಕ್ಕೆ ಕಾರಣವಾಗಿವೆ: ಭೌತ – ಜೀವವಿಜ್ಞಾನಗಳು, ವೈದ್ಯಕೀಯ, ಆಕಾಶಯಾನ, ಗಣಕವಿಜ್ಞಾನ ಇತ್ಯಾದಿ. ನಿಸರ್ಗ ಎಂದೂ ಯಾರಿಗೂ ಎಲ್ಲಿಯೂ ಅಳತೆಗೆಟುಕದ ಆನೆ, ಇತ್ತ ಮನುಕುಲದ ಆದಿಯಿಂದ ಈ ತನಕ ಬಂದಿರುವ ಹಾಗೂ ಭವಿಷ್ಯದಲ್ಲಿ ಬರಲಿರುವ ಸಮಸ್ತ ವಿಜ್ಞಾನಿಗಳೂ ಜನ್ಮಾಂಧರು ಈ ಕುರುಡರಿಗೆ ಆನೆಯ ಸಮ್ಯಗ್ದರ್ಶನ ಎಂದೂ ಸಿದ್ಧಿಸದು:

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದೆನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರಾ ||

ಯಾವ ವಿಜ್ಞಾನಿಯೂ ನಿರ್ವಾತದಲ್ಲಿ ಕೆಲಸವೆಸಗಾರ. ಮೊದಲು ತನ್ನ ಆವಿಷ್ಕಾರಗಳು (discoveris) ಸಮಾನಮನಸ್ಕರಲ್ಲಿ ಏನು ಪ್ರತಿಕ್ರಿಯೆ ಉಂಟುಮಾಡುತ್ತವೆ ಎಂದು ತಿಳಿಯುವ ಬಯಕೆ ಆತನಿಗುಂಟು. ಸಂಶೋಧನ ಪ್ರಬಂಧಗಳ ಮೂಲಕ ಈ ಕ್ರಿಯೆ ನಡೆಯುತ್ತದೆ. ಇಲ್ಲಿ ಒಪ್ಪಿಗೆ ಪಡೆದವನ್ನು ಜನಸಾಮಾನ್ಯರಿಗೆ ತಿಳಿಸಬೇಕೆಂಬ ಸಹಜ ಕುತೂಹಲ ಆತನಲ್ಲಿ ಅಥವಾ ಆತನ ಅನುಚರರಲ್ಲಿ ಮೊಳೆಯುತ್ತದೆ. ಇಲ್ಲಿಯ ಸಂವಹನಮಾಧ್ಯಮ ಜನಪ್ರಿಯ ಭಾಷೆಯಾಗಬೇಕೇ ವಿನಾ ತಾಂತ್ರಿಕ ಪರಿಭಾಷೆಯಲ್ಲ. ಹೀಗೆ ಅವಶ್ಯಕತೆ ಅನಿವಾರ್ಯ ಶಿಶುವಾಗಿ ಜನಪ್ರಿಯವಿಜ್ಞಾನವಾಙ್ಮಯ ರೂಪುಗೊಳ್ಳುತ್ತದೆ.

20ನೆಯ ಶತಮಾನದ ಪೂರ್ವಾರ್ಧದ ಪರ್ವದಿನಗಳಂದು ಇಂಗ್ಲೆಂಡ್ ಮತ್ತು ಯೂರೊಪ್‌ಖಂಡದ ವಿವಿಧ ದೇಶಗಳಲ್ಲಿ ಮೂಲಭೂತ ಸಂಶೋಧನೆಗಳ ಮಹಾಪೂರವೇ ಹರಿದು ವಿಜ್ಞಾನದಿಗಂತ ಊಹಾತೀತವಾಗಿ ವಿಸ್ತರಣೆಗೊಂಡಿತು. ಗತಯುಗಗಳ ಕಲ್ಪನಾವಿಲಾಸಗಳನ್ನು ಮೀರಿ ವರ್ತಮಾನಕಾಲದ ವಾಸ್ತವಸಾಧನೆಗಳು ದಿನದಿನ ಎಂಬಂತೆ ಹೊಸ ಬೆರಗನ್ನು ಬೀರಿದುವು. ಇವೆಲ್ಲವುಗಳ ಸಾರವಾಗಿ ವಿಜ್ಞಾನಸೌಧದ ಮೂರು ಆಧಾರಸ್ತಂಭಗಳು (ಆದ್ಯುಕ್ತಿಗಳು axioms) ಸ್ಪಷ್ಟವಾದುವು:

  1. ನಿಸರ್ಗದಲ್ಲಿ ಕ್ರಮವಿದೆ.
  2. ಈ ಕ್ರಮವನ್ನು ಗುರುತಿಸಿ ಅರಿತು. ಅರ್ಥವಿಸಿ, ವ್ಯಾಖ್ಯಾನಿಸುವ ಸಾಮರ್ಥ್ಯ ಮಾನವಮತಿಗಿದೆ.
  3. “ಭಗವಂತ ಎಂದೂ ದಾಳ ಒಗೆಯುವುದಿಲ್ಲ.”

ಮೂರನೆಯ ಆದ್ಯುಕ್ತಿ ಆಲ್ಬರ್ಟ್‌ಐನ್‌ಸ್ಟೈನ್ (1879 – 1955) ಅವರ ಉದ್ಗಾರ. ಇಲ್ಲಿಯ ರೂಪಕಭಾಷೆಯಲ್ಲಿ “ಭಗವಂತ” ನಿಸರ್ಗವನ್ನೂ “ದಾಳ” ಜೂಜು ಅಥವಾ ಕಪಟದ್ಯೂತವನ್ನೂ (ಪ್ರಕೃತ ಸಂದರ್ಭದಲ್ಲಿ ಸಂಭಾವೃತಾ ಸಿದ್ಧಾಂತವನ್ನು theory of probability) ಪ್ರತೀಕಿಸುತ್ತವೆ. ಸಾರಾಂಶವಿಷ್ಟು: ನಿಸರ್ಗದ ಶಿಶುವಾದ ಮನುಷ್ಯ ತನ್ನ ತಾಯಿಯೊಂದಿಗೆ ಆಡುವ ಆಟವೇ ವಿಜ್ಞಾನ; ಇದರಲ್ಲಿ ನಿಸರ್ಗದ ಪಾತ್ರ ಪೂರ್ತಿ ನಿರ್ವಿಕಾರ, ನಿರಪೇಕ್ಷ ಮತ್ತು ನಿಷ್ಕಪಟ; ಮುಪ್ಪಿನ ಷಡಕ್ಷರಿ ಹಾಡಿರುವಂತೆ….

ಅವರವರ ದರುಶನಕೆ ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ! ||

ಈ “ಅವರವರ” ಸಾಲಿನಲ್ಲಿಯ ಅಗ್ರಮಾನ್ಯರು ಜೀನ್ಸ್, ರಸಲ್, ಎಡಿಂಗ್ಟನ್ ಮತ್ತು ಲೇಖಕರು ಕಾಲ್ಡರ್, ಗ್ಯಾಮೋ, ವೆಲ್ಸ್, ಆಸಿಮಾವ್ ಮೊದಲಾದ ಶ್ರೇಷ್ಠ ಸಂಶೋಧಕರು. ಐನ್‌ಸ್ಟೈನ್ ಕೂಡ ಸೇರಿದ್ದಾರೆ. ಮುಖ್ಯವಾಗಿ ಇಂಗ್ಲಿಷಿನಲ್ಲಿ ಜನಪ್ರಿಯ ವಿಜ್ಞಾನವಾಙ್ಮಯ ರಚಿಸಿ (1940ರ ದಶಕ) ಆ ಭಾಷೆಗೆ ನೂತನ ಆಯಾಮ ನೀಡಿದ ಹಿರಿಯರಿವರು. ಇವರೆಲ್ಲರೂ ನೂತನ ಸಂಶೋಧನೆಗಳ ಸಾರಸರ್ವಸ್ವವನ್ನು ತಾಂತ್ರಿಕ ಪರಿಭಾಷೆಯಲ್ಲಿ ಸ್ವಾಂಗೀಕರಿಸಿ ಜನಪ್ರಿಯ ಭಾಷೆಯಲ್ಲಿ ಅದನ್ನು ಪುನಾರೂಪಿಸಿದ ಸೃಜನಶೀಲ ಲೇಖಕರು. ಮತ್ತು ಇಂಥ ಒಂದು ಜನಕೈಂಕರ್ಯದ ಬಗ್ಗೆ ಅಪಾರ ವಿಶ್ವಾಸ ತಳೆದಿದ್ದವರು.

ವಿಜ್ಞಾನದ ಜಟಿಲ ಪರಿಕಲ್ಪನೆಗಳನ್ನು ಜನಪ್ರಿಯ ಶೈಲಿಯಲ್ಲಿ ನಿರೂಪಿಸಲು ಒಬ್ಬ ಲೇಖಕನಿಗೆ ಸಾಹಿತ್ಯ ಕುರಿತಂತೆ ಸೃಜನಶೀಲ ಪ್ರಭುತ್ವ ಅಗತ್ಯ. ನಿಜಕ್ಕೂ ಒಬ್ಬ ಸಾಹಿತಿಗಿಂತ ಹೆಚ್ಚಿನದು ಇದಾಗಿರಬೇಕು.

ಸೂತ್ರರೂಪದಲ್ಲಿ ಹೇಳುವುದಾದರೆ ಒಬ್ಬ ಜನಪ್ರಿಯವಿಜ್ಞಾನ ಲೇಖಕ ಚತುರ್ಥಾಂಶಗಳ ಸಂಕೀರ್ಣ ಸಂಯುಕ್ತವಾಗಿರಬೇಕು : 1. ವಿಷಯಪ್ರಾವೀಣ್ಯ – ಆತ ತಾಕತ್ತಿನ ತಾಣದಿಂದ ಬರೆಯತಕ್ಕದ್ದು. 2. ಭಾಷಾಪ್ರಭುತ್ವ – ಭಾಷೆಯ ಸಾಧ್ಯತೆ ಸೀಮಿತತೆಗಳನ್ನು ನಿರಪೇಕ್ಷವಾಗಿ ಗ್ರಹಿಸಿ ಅದರ ಜಾಯಮಾನಕ್ಕೆ ಒಪ್ಪುವಂತೆ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ಭಾಷೆಗೆ ಹೊಸ ಆಯಾಮ ನೀಡಲು ಆತ ಶಕ್ತನಾಗಿರತಕ್ಕದ್ದು. 3. ಪರಿಪೂರ್ಣ ನಿಷ್ಠೆ – ತಾಣು ಕೈಗೊಂಡ ಕರ್ತವ್ಯ ಕುರಿತು ಉತ್ಸಾಹ – ಉಲ್ಲಾಸಗಳ ಸಾಕಾರ ಮೂರ್ತಿ ಆತನಾಗಿರತಕ್ಕದ್ದು. 4. ಸಮಕಾಲೀನ ಪ್ರಜ್ಞೆ – ಆತನಿಗೆ ವರ್ತಮಾನ ವಿಜ್ಞಾನ ಮತ್ತು ಸಾಹಿತ್ಯಗಳ ಸ್ಥಿತಿ – ಗತಿ ಬಗ್ಗೆ ಅರಿವು ಇರತಕ್ಕದ್ದು.

ಈ ಯಾವುದೇ ಒಂದರಲ್ಲಿ ಭರವಸೆ ಇಲ್ಲದಾತ ಜನಪ್ರಿಯವಿಜ್ಞಾನ ನಿರ್ಮಾಣ ಕಾರ್ಯದಿಂದ ದೂರವಿರುವುದು ಸರ್ವಕ್ಷೇಮ. ಆದರೆ ವಾಸ್ತವದಲ್ಲಿ ಹೀಗಾಗುತ್ತಿಲ್ಲ: ಅಗ್ಗದ ಇಂಗ್ಲಿಷ್ ಪುಸ್ತಕ ಅಥವಾ ಪಾಕ್ಷಿಕಗಳಿಂದ, ಇಲ್ಲವೇ ಅಂತರಜಾಲದಿಂದ ನೇರ ಕದ್ದು ಅರೆಬೆಂದ ಭಾವನೆಗಳನ್ನು ಅಪರಿಪೂರ್ಣ ಗ್ರಹಿಸಿ, ತಮ್ಮ ಸೀಮಿತ ಕನ್ನಡ ಜ್ಞಾನದ ಮಿತಿಯೊಳಗೆ ಅವನ್ನು ಮನಬಂದಂತೆ ಹೊಸೆದು, ಬೇಕಾಬಿಟ್ಟಿ ಮುದ್ರಿಸಿ “ಕನ್ನಡ ಸೇವೆ” ಒಪ್ಪಿಸುವುದೇ ನಿಯಮವಾಗಿದೆ! ಉದ್ದೇಶ? ಪ್ರಚಾರ, ಪ್ರಶಸ್ತಿ, ಬಡ್ತಿ, ವಿದೇಶಯಾನ ಇತ್ಯಾದಿ. ಇವು ಕಲ್ಪನಾವಿಲಾಸಗಳಲ್ಲ, ಬದಲು 1945ರಿಂದಲೂ ವಿಜ್ಞಾನ ಬೋಧನೆ – ವಾಙ್ಮಯ – ನಿರ್ಮಾಣಕ್ರಿಯೆಯಲ್ಲಿ ಪ್ರತ್ಯಕ್ಷ ಭಾಗಿಯಾಗುತ್ತಿರುವ ನನ್ನ ಪ್ರತ್ಯಕ್ಷ ಅನುಭವದಿಂದ ಆಯ್ದ ಕೆಲವೇ ಹರಳುಗಳು.

ಇಂಥ “ಸೇವೆಗಳ” ದುಷ್ಫಲ ಐದು ಬಗೆಯದು: 1. ಕಪ್ಪುಹಣ ಬಿಳಿಹಣವನ್ನು ವಿಸ್ಥಾಪಿಸುತ್ತದೆ (ಗ್ರೆಷಾಮನ್ ನಿಯಮ); 2. ಶುದ್ಧವಾಙ್ಮಯ ಜನಪ್ರಿಯವಾಗದೇ ಸೊರಗುತ್ತದೆ; 3. ಕನ್ನಡ ಭಾಷೆ ತನ್ನ ನಿಖರತೆಯನ್ನು ಕಳೆದುಕೊಳ್ಳುತ್ತದೆ; 4. ಅನ್ಯಭಾಷೆಗಳಲ್ಲಿ ಪ್ರಕಟವಾಗುವ ಉತ್ಕೃಷ್ಟ ಗ್ರಂಥಗಳ ಕನ್ನಡಾನುವಾದಗಳು ತೀರ ಪೇಲವ ಮತ್ತು ಕೃತಕವಾಗಿರುತ್ತವೆ; 5. ನವಲೇಖಕರು ಈ ಕ್ಷೇತ್ರಕ್ಕೆ ಕಾಲಿಡಲು ಅಂಜುತ್ತಾರೆ.

ಕನ್ನಡಜನಪ್ರಿಯ ವಿಜ್ಞಾನವಾಙ್ಮಯದ ಹರಿಕಾರರಾಗಿದ್ದು ಹೊಸ ಹಾದಿ ನಡೆದು ರೂಪಿಸಿದ ಆರ್.ಎಲ್.ನರಸಿಂಹಯ್ಯ (1902 – 69), ಸಿ.ಎನ್.ಶ್ರೀನಿವಾಸ ಅಯ್ಯಂಗಾರ್ (1901 – 72) ಮೊಲದಾದವರ ಹೆಸರು ಮತ್ತು ಕೃತಿ ಇಂದಿನ ಬಹುತೇಕ ತಾರಾಮೌಲ್ಯಯುತ (ಸ್ಟಾರ್ವೇಲ್ಯೂ ಇರುವ) ಲೇಖಕರಿಗೆ ತೀರ ಅಪರಿಚಿತ, ಆ ಮಹನೀಯರು ಮಾಡಿದ ಪ್ರಯೋಗಗಳು ಅನುಪಯುಕ್ತ, ಸ್ವಂತ ಪ್ರಯೋಗ ಮಾಡಲು ವ್ಯವಧಾನವಿಲ್ಲ! ಏಕೆಂದರೆ (ಸರ್ವಜ್ಞನ ಕ್ಷಮೆ ಕೋರಿ) –

ಅಚ್ಚುಸಾಲೆಗಳುಂಟು ವೆಚ್ಚಕ್ಕೆ ಹೊನ್ನುಂಟು
ಮೆಚ್ಚಿ ಹೊಗಳುವ ವಂದಿಮಾಗಧರ ದಂಡುಂಟು
ಕಿಚ್ಚು ಹಚ್ಚೆಂದ ಸ್ವರ್ಗಕ್ಕೆ ಸರ್ವಜ್ಞ

ನನ್ನ ವೃತ್ತಿ ಜೀವನದ ವೇಳೆ ಇಬ್ಬರು ಭಾರತೀಯ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳನ್ನು ಅವರವರ ನೆಲಗಳಲ್ಲೇ ಬೇರೆಬೇರೆಯಾಗಿ ಭೇಟಿ ಮಾಡಿ ಸುದೀರ್ಘ ಸಂದರ್ಶನ ಪಡೆಯುವ ಸುಯೋಗ ನನಗೊದಗಿತ್ತು: ಚಂದ್ರಶೇಖರ ವೆಂಕಟರಾಮನ್ (1888 – 1970) – ಬೆಂಗಳೂರಿನಲ್ಲಿ (1968); ಮತ್ತು ಸುಬ್ರಹ್ಮಣ್ಯನ್ ಚಂದ್ರಶೇಖರ್ (1910 – 95) – ಚಿಕಾಗೋದಲ್ಲಿ (1995); ಇಬ್ಬರ ಮಾತೃಭಾಷೆಯೂ ತಮಿಳು. ನಮ್ಮ ಮಾತುಕಥೆ ವೇಳೆ ನಾನು ಉಭಯರನ್ನೂ ಪ್ರತ್ಯೇಕವಾಗಿ ಕೇಳಿದ ಒಂದು ಪ್ರಶ್ನೆ: “ಪಾಶ್ಚಾತ್ಯ ಮಹಾವಿಜ್ಞಾನಿಗಳು ಕಲಿತದ್ದು, ಚಿಂತಿಸಿದ್ದು ಮತ್ತು ತಮ್ಮ ಸಂಶೋಧನನಿಬಂಧಗಳನ್ನು ರಚಿಸಿದ್ದು ಅವರವರ ತಾಯಿನುಡಿಗಳಲ್ಲಿ ಅಥವಾ ಅಲ್ಲಲ್ಲೇ ಅರಳಿದ್ದ ಗ್ರೀಕ್, ಲ್ಯಾಟಿನ್ ಮುಂತಾದ ಅಭಿಜಾತ ಭಾಷೆಗಳಲ್ಲಿ ನೀವಾದರೋ ಇಂಥ ಸೃಜನಶೀಲ ಶೋಧನೆ ಮಾಡಿದ್ದು ಪರಭಾಷೆ ಇಂಗ್ಲಿಷಿನಲ್ಲಿ. ಈ ಪರಕೀಯ ಮಾಧ್ಯಮದ ಕಾರಣವಾಗಿ ನಿಮ್ಮ ಪ್ರತಿಭಾವಿಕಾಸಕ್ಕೆ ಏನಾದರೂ ಅಡಚಣೆ ಉಂಟಾಯಿತೇ? ನಿಮ್ಮ ಮಾತೃಭಾಷೆಯಲ್ಲೇ ಓದಿ ಸಂಶೋಧನೆಗೈದಿದ್ದರೆ ಇನ್ನಷ್ಟು ಅಧಿಕ ಸೇವೆ ಸಲ್ಲಿಸಬಹುದಿತ್ತು ಎಂಬ ಭಾವನೆ ನಿಮಗೆಂದಾದರೂ ಬಂದುದುಂಟೇ?”

ರಾಮನ್ ನುಡಿದರು. “ತಾತ್ತ್ವಿಕವಾಗಿ ನಿಮ್ಮ ಪ್ರಶ್ನೆ ಸರಿಯಾಗಿದೆ. ಆದರೆ ನನ್ನ ಓರಗೆಯವರಿಗೆ, ಅಂದಿನ ದಾಸರಾಷ್ಟ್ರ ಭಾರತದಲ್ಲಿ, ಬೇರೆಯ ಆಯ್ಕೆ ಇರಲಿಲ್ಲ. ಈಚೆಗಿನ ವರ್ಷಗಳಲ್ಲಿ [1950ರ ದಶಕದಿಂದೀಚೆಗೆ], ವಿಶೇಷವಾಗಿ, ನನ್ನ ಸುತ್ತಮುತ್ತಲಿನ ಸಾಮಾನ್ಯ ಮಂದಿಯೊಂದಿಗೆ ವಿಜ್ಞಾನವಿಷಯಗಳನ್ನು ಕುರಿತು ಮಾತಾಡುವಾಗ, ಮತ್ತು ಪಾಶ್ಚಾತ್ಯರಿಗೆ ತಮ್ಮ ಭಾಷೆ ಬಗ್ಗೆ ಇರುವ ಅಭಿಮಾನ ಗಮನಿಸುವಾಗ, ತಮಿಳಿನಲ್ಲೋ ಕನ್ನಡದಲ್ಲೋ ನಾನು ಕಲಿತು ಮಾತಾಡಿ ಪ್ರಕಟಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನ್ನಿಸಿದ್ದುಂಟು.”

ಚಂದ್ರಶೇಖರ್, “ಹೌದು, ಮೈಖೇಲ್ ಫ್ಯಾರಡೇ (1791 – 1867) ಇಂಗ್ಲೆಂಡಿಗ, ಬಡವ, ಅಂದಿನ ಬೋಧನಮಾಧ್ಯಮವಾದ ಲ್ಯಾಟಿನ್ ಭಾಷೆ ಆತನಿಗೆ ಅಪ್ರವೇಶ್ಯ. ಅವನ ವೃತ್ತಿ ವೇಳೆ ಅವನಿಗೆ ಇಂಗ್ಲಿಷಿನಲ್ಲಿ ಮುದ್ರಣಗೊಂಡಿದ್ದ ಒಂದು ವಿಜ್ಞಾನಲೇಖನ ಅಕಸ್ಮಾತ್ತಾಗಿ ದೊರೆಯಿತು! ಓದಿದ, ಗ್ರಹಿಸಿದ, ಮಿಕ್ಕುದು ಈಗ ಇತಿಹಾಸ! ನಾನು ಮದ್ರಾಸಿನಲ್ಲಿ ಓದುತ್ತಿದ್ದಾಗ ಎಲ್ಲವೂ ಇಂಗ್ಲಿಷ್‌ಮಯ. ಬ್ರಿಟಿಷ್ ಆಧಿಪತ್ಯ ಜನ ಒಪ್ಪಿದರು. ವಿದ್ಯಾರ್ಥಿಗಳಾದ ನಾವು ಈ ನಿಲುವನ್ನು ಪ್ರಶ್ನಿಸಲೇ ಇಲ್ಲ. ಸೈದ್ಧಾಂತಿಕವಾಗಿ ಮಾತೃಭಾಷೆಯೇ ಸರ್ವಶ್ರೇಷ್ಠ ಎಂಬುದನ್ನು ರಶ್ಯಾ, ಜಪಾನ್ ಮೊದಲಾದ ದೇಶಗಳು ತೋರಿಸಿಕೊಟ್ಟಿವೆ. ಐತಿಹಾಸಿಕ ಕಾರಣಗಳಿಂದಾಗಿ ಇಂಗ್ಲಿಷಿಗೆ ಅತಿಶಯ ಪ್ರಾಮುಖ್ಯ ಬಂದಿದೆಯೇ ವಿನಾ ಅದರ ಯಾವುದೇ ಆಂತರಿಕ ತ್ರಾಣದಿಂದ ಅಲ್ಲ.”

ಈ ಕೊನೆಯ ಭಾವನೆಯನ್ನು ಗಮನಿಸಬೇಕು: ಯಾವುದೇ ಭಾಷೆಯ ತ್ರಾಣ ಅದನ್ನು ಬಳಸುವ ಜನರಿಂದ ಅದಕ್ಕೆ ಒದಗುತ್ತದೆ, ಹೊರತು, ಅದರಲ್ಲಿ ನಿಹಿತವಾಗಿರುವ ವಿಶಿಷ್ಟಗುಣದಿಂದ ಅಲ್ಲ.

ಚಂದ್ರಶೇಖರ್ ಸ್ವಹಸ್ತದಲ್ಲಿ ಬರೆದ ಒಂದು ಇಂಗ್ಲಿಷ್ ಸಂದೇಶವನ್ನು ನನಗೆ ಕೊಟ್ಟರು. ಅದರ ಪೂರ್ಣ ಪಾಠ: “The pursuit of science has often been compared to the scaling of mountains, high and not so high. But who amongst us can hope, even in imagination, to scale the Everest and reach its summit when the sky is blue and the air is still, and in the stillness of the air, survey the entire Himalayan range in the dazzling white of the snow stretching to infinity? None of us can hope for a comparable vision of Nature and of the Universe around us. But there is nothing mean of lowly in standing in the valley below and awaiting the sun to rise over Kanchenjunga.”

ಇದರ ಕನ್ನಡಾನುವಾದ : “ವಿಜ್ಞಾನಾನುಶೀಲನೆಯನ್ನು ಹೆಚ್ಚಾಗಿ ಪರ್ವತಾರೋಹಣಕ್ಕೆ ಹೋಲಿಸುವುದುಂಟು – ಸಾಕಷ್ಟು ಎತ್ತರದ ಬೆಟ್ಟಗಳನ್ನೂ ಅಷ್ಟೇನು ಎತ್ತರದವಲ್ಲದ ಗುಡ್ಡಗಳನ್ನೂ ಹತ್ತುವುದು. ಆದರೆ ನಮ್ಮ ಪೈಕಿ ಯಾರು ತಾನೇ ಆಕಾಶ ನೀಲವಾಗಿದ್ದು, ಮಾರುತ ನಿಸ್ಪಂದವಾಗಿರುವಾಗ, ಹಿಮಾಲಯ ಏರಿ, ಶಿಖರ ತಲಪಿ, ಅನಂತಕ್ಕೆ ವ್ಯಾಪಿಸಿಕೊಂಡಿರುವ ಮಂಜಿನ ಜ್ವಲಂತ ಪರಿಶುಭ್ರತೆಯಲ್ಲಿ, ಸಮಗ್ರ ಹಿಮಾಲಯಶ್ರೇಣಿಯನ್ನೇ ಸರ್ವೇಕ್ಷಿಸಲು ಕಲ್ಪನೆಯಲ್ಲಾದರೂ ಹವಣಿಸಿಯಾನು? ನಿಸರ್ಗ ಮತ್ತು ನಮ್ಮ ಸುತ್ತಲಿನ ವಿಶ್ವ ಕುರಿತಂತೆ ತತ್ಸದೃಶ ದರ್ಶನ ಲಭಿಸೀತೆಂದು ನಾವು ಯಾರೂ ಆಶಿಸಲಾರೆವು. ಆದರೆ ತಳದ ಕಣಿವೆಯಲ್ಲಿ ನಿಂತು, ಕಾಂಚನಜುಂಗಾಶೃಂಗಕ್ಕೆ ಆರೋಹಿಸುತ್ತ ಬರುವ ಸೂರ್ಯನನ್ನು ಪ್ರತೀಕ್ಷಿಸುವುದರಲ್ಲಿ ಹೀನವಾದುದಾಗಲೀ ದೀನವಾದುದಾಗಲೀ ಏನೂ ಇಲ್ಲ.”

ಈಗ (2004) ಕನ್ನಡನಾಡಿನಲ್ಲಿ ಆಗಬೇಕಾದದ್ದೇನು? . ಕರ್ನಾಟಕದಲ್ಲಿ ಸರ್ವಶಿಕ್ಷಣ ಮತ್ತು ಸಮಗ್ರ ಆಡಳಿತ ಮಾಧ್ಯಮ ಕನ್ನಡವಾಗತಕ್ಕದ್ದು. 2. ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಕನ್ನಡದಲ್ಲಿ ಆಗ ವಿಜ್ಞಾನವನ್ನೂ ಒಳಗೊಂಡಂತೆ ಪಠ್ಯಪುಸ್ತಕ, ಆಕರಗ್ರಂಥ, ಅನುವಾದಕೃತಿ, ತಾಂತ್ರಿಕ ನಿಯತಕಾಲಿಕೆ ಮುಂತಾದವು ಪ್ರಕಟವಾಗುತ್ತವೆ. ಮತ್ತು ಅವುಗಳಿಗೆ ಸ್ತಿಮಿತ ಬೇಡಿಕೆ ಇರುತ್ತದೆ. 3. ವಿಜ್ಞಾನಲೇಖನ ಕ್ರಿಯೆಗೆ ಪ್ರೀತಿಯಿಂದ ಮುಂಬರುವವರಿಗೆ –ಇವರು ವಿಜ್ಞಾನದ ವಿದ್ಯಾರ್ಥಿಗಳಾಗಿರಲೇಬೇಕು, ಸಾಹಿತ್ಯವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗದು – ಅಭಿಜಾತ ಕನ್ನಡದಲ್ಲಿ ಸಮರ್ಪಕ ಶಿಕ್ಷಣ ನೀಡಬೇಕು. ಕೇವಲ ಕನ್ನಡದ ವಿದ್ಯಾರ್ಥಿ ಅಥವಾ ಮಾತೃಭಾಷೆ ಕನ್ನಡ ಎಂಬ ಕಾರಣದಿಂದ ಈ ಸಾಮರ್ಥ್ಯ ಒದಗುವುದಿಲ್ಲ. 4. ಇಂಥ ಒಂದು ಸರಸ್ವತೀಕೈಂಕರ್ಯದಲ್ಲಿ ಯೋಗ್ಯತೆ, ನಿಷ್ಠೆ ಮತ್ತು ನಂಬಿಕೆ ಇರುವವರನ್ನು ಮಾತ್ರ ಇದಕ್ಕೆ ಆಯಬೇಕು. 5. ಮೇಲಿನ ನಾಲ್ಕು ಮುಖ್ಯ ಅವಶ್ಯಕತೆಗಳ ಜೊತೆಗೆ, ಲೇಖನಕ್ರಿಯೆಯ ವೇಳೆ ತಾವು ಅನುಭವಿಸಿದ ಆನಂದವನ್ನು ಸಮಾಜಕ್ಕೆ ಹಿಂತಿರುಗಿಸುವುದು ತಮ್ಮ ಕರ್ತವ್ಯ ಎಂಬ ಪ್ರಜ್ಞೆ ಇರುವವರು ಮಾತ್ರ ಈ ಕೆಲಸ ನಿರ್ವಹಿಸಲು ಶಕ್ತರು.

ಚಿಕ್ಕಂದಿನಿಂದಲೇ ಸಾಹಿತ್ಯ – ಸಂಗೀತ – ವಿಜ್ಞಾನತ್ರಯವನ್ನು ಪ್ರೀತಿಯಿಂದ ಅಭ್ಯಸಿಸಿ (ನಾನು ಗಣಿತ ಎಂಎ ಪದವೀಧರ) ಕಾಲೇಜು ಉಪನ್ಯಾಸಕನಾಗಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಗಣಿತ ಮತ್ತು ಖಗೋಳವಿಜ್ಞಾನಗಳನ್ನು ಬೋಧಿಸಿದ್ದೇನೆ. ಉಭಯ ಮಾಧ್ಯಮಗಳಲ್ಲಿಯೂ ಜನಪ್ರಿಯ ಮತ್ತು ತಾಂತ್ರಿಕ ಕೃತಿಗಳನ್ನು ರಚಿಸಿದ್ದೇನೆ. ರಚಿಸುತ್ತಲೂ ಇದ್ದೇನೆ. ಇಂಗ್ಲಿಷಿನಿಂದ ಕನ್ನಡಕ್ಕೆ ವಿಜ್ಞಾನಕೃತಿಗಳನ್ನು ಅನುವಾದಿಸಿದ್ದೇನೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ವಿಜ್ಞಾನಸಂಪಾದಕನಾಗಿದ್ದೆ (1969 – 86), ನವಕರ್ನಾಟಕ ಇಂಗ್ಲಿಷ್ – ಕನ್ನಡ ಪದವಿವರಣಕೋಶದ (ಪ್ರಕಟಣೆ 2001) ಪ್ರಧಾನ ಸಂಪಾದಕನಾಗಿದ್ದೆ. ನನ್ನ ಖಚಿತ ಅನುಭವ ಮತ್ತು ನಂಬಿಕೆ ಇದು: ನಮ್ಯತೆ – ನವ್ಯತೆ – ಭವ್ಯತೆಗಳಲ್ಲಿ (flexibility, novelty, grandeur) ಪ್ರಪಂಚದ ಯಾವ ಭಾಷೆಯ ಮುಂದೆಯೂ ಕನ್ನಡ ತಲೆ ತಗ್ಗಿಸಬೇಕಾಗಿಲ್ಲ. ಇದನ್ನು ಅನೂಭವದಿಂದ ಕಂಡುಕೊಂಡು ಅನುಷ್ಠಾನಿಸುವ ಅಸ್ಮಿತೆ ನಮಗಿರಬೇಕು ಮಾತ್ರ ನನ್ನ ಸ್ಪಷ್ಟ ಅಭಿಪ್ರಾಯವನ್ನು ಮುಂದಿನ ಸೂತ್ರವಾಕ್ಯ ಬಿಂತಿಸುತ್ತದೆ: ಸಾಹಿತ್ಯರಹಿತ ವಿಜ್ಞಾನ ಕುಂಟು, ವಿಜ್ಞಾನರಹಿತ ಸಾಹಿತ್ಯ ಕುರುಡು. ಸಾಹಿತ್ಯ – ವಿಜ್ಞಾನ ಸಾಮರಸ್ಯವೇ ಋಜುಜೀವನದ ಭದ್ರಬುನಾದಿ.

(2004)

ನೋಡಿ (ಇದೇ ಲೇಖಕ ಬರೆದಿರುವ) ಐನ್‌ಸ್ಟೈನ್ ಬಾಳಿದರಿಲ್ಲಿ, ಸುಬ್ರಹ್ಮಣ್ಯನ್ ಚಂದ್ರಶೇಖರ್, ಸಪ್ತ ಸಾಗರದಾಚೆಯೆಲ್ಲೋ………., ವಿಜ್ಞಾನ ಸಪ್ತರ್ಷಿಗಳು, ನಿಈಲಾನ್ ಪರ್ನಿಕನ್ ಮುಂತಾದ ಕನ್ನಡ ಕೃತಿಗಳು ಮತ್ತು With the great Minds ಎಂಬ ಇಂಗ್ಲಿಷ್ ಪುಸ್ತಕ.