ಬೆಳಕು ಫೋಟಾನ್‌ಎಂಬ ಅನಂತಸೂಕ್ಷ್ಮ ಕಣಗಳ ನಿರಂತರ ಪ್ರವಾಹ. ಸರಳ ರೇಖೆಯ ಮೇಲೆ ಸೆಕೆಂಡಿಗೆ ಸುಮಾರು 300,000 ಕಿಲೋಮೀಟರ್‌ವೇಗದಿಂದ ಧಾವಿಸುವುದು ಇವುಗಳ ಧರ್ಮ. ಬೆಳಕಿನ ಕಿರಣ ನೇರ ಸಲಾಕಿಯಾಗಿ ಪ್ರಕಟವಾಗುತ್ತದೆ. ಎಂದೇ ಈ ಗಳಿಗೆ ಕಾಣುವ ಯಾವುದೇ ನಕ್ಷತ್ರ ಆ ಚುಕ್ಕಿಗೆ ನಮ್ಮ ಕಣ್ಣನ್ನು ಜೋಡಿಸುವ ನೇರ ಗೆರೆ ಮೇಲಿದೆಯೆಂದು ಭಾವಿಸುತ್ತೇವೆ. ಗೆರೆಯನ್ನು ಅಂದರೆ ನಕ್ಷತ್ರ ಕಿರಣವನ್ನು – ಅದರ ಪಥಮಧ್ಯೆ ಬಗ್ಗಿಸಿದರೆ ಏನಾದೀತು? ನಮಗೆ ಕಾಣುವಂತೆ ನಕ್ಷತ್ರ ಸ್ವಸ್ಥಾನದಿಂದ ವಿಚಲನೆಗೊಂಡಿರುತ್ತದೆ. ಈ ಎರಡನೆಯ ಸ್ಥಾನದಲ್ಲಿ ಕಾಣುವುದು ವಾಸ್ತವ ನಕ್ಷತ್ರದ ಪ್ರತಿಬಿಂಬ.

ನಕ್ಷತ್ರಕಿರಣದ ಪಥವನ್ನು ಬಗ್ಗಿಸಬಲ್ಲ ಅಂತರಿಕ್ಷ ಸಿಂಹಿಕೆ ಆಕಾಶದ ಅಪರಿಮಿತ ಶೂನ್ಯದಲ್ಲಿರುವುದು ಸಾಧ್ಯವೆ? ಕರ್ತಾರನ ಕಮ್ಮಟದಲ್ಲಿ, ಅಂದರೆ ವಿಶ್ವದ ಪ್ರಯೋಗ ಮಂದಿರದಲ್ಲಿ, ಯಾವುದೂ ಅಸಾಧ್ಯವಲ್ಲ. ನಕ್ಷತ್ರವೊಂದರ ಕಿರಣ ನಮ್ಮೆಡೆಗೆ ಬರುವ ಹಾದಿಯ ಪಕ್ಕದಲ್ಲಿ ಇನ್ನೊಂದು ನಕ್ಷತ್ರವಿದೆಯೆಂದು ಭಾವಿಸೋಣ. ಇದರ ಗುರುತ್ವ ಕ್ಷೇತ್ರ ಆ ಕಿರಣವನ್ನು ತನ್ನತ್ತ ಆಕರ್ಷಿಸುತ್ತದೆ. ಪರಿಣಾಮವಾಗಿ ಕಿರಣಪಥ ಬಗ್ಗುತ್ತದೆ. ಈ ಸಂದರ್ಭದಲ್ಲಿ ನಾವು ನೋಡುವುದು ವಾಸ್ತವ ನಕ್ಷತ್ರವನ್ನಲ್ಲ, ಅದರ ಪ್ರತಿಬಿಂಬವನ್ನು.

ಪ್ರಬಲ ಗುರುತ್ವಕ್ಷೇತ್ರ ಕಿರಣವನ್ನು ಬಗ್ಗಿಸುತ್ತದೆಂಬ ವಾದವನ್ನು ಆಲ್ಬರ್ಟ್‌ಐನ್‌ಸ್ಟೈನ್‌1915ರಲ್ಲಿ ಮಂಡಿಸಿದರು. ಇದನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಲು ಕಾಲ ಕೂಡಿ ಬಂದದ್ದು 1919ರಲ್ಲಿ ಮಂಡಿಸಿದರು. ಇದನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಲು ಕಾಲ ಕೂಡಿ ಬಂದದ್ದು 1919ರಲ್ಲಿ. ಆಗ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಹಿನ್ನೆಲೆ ನಕ್ಷತ್ರಗಳ ಛಾಯಾಚಿತ್ರಗಳನ್ನು ಒಡ್ಡಲಾಯಿತು. ಆ ನಕ್ಷತ್ರ ಕಿರಣಗಳನ್ನು ಸೌರಗುರುತ್ವ ಕ್ಷೇತ್ರ ಬಗ್ಗಿಸಿದ್ದುದರಿಂದ ಛಾಯಾಚಿತ್ರದಲ್ಲಿ ಪಡಿಮೂಡಿದ್ದು ನಕ್ಷತ್ರಗಳ ವಿಚಲಿತ ಸ್ಥಾನಗಳು ಅಥವಾ ಪ್ರತಿಬಿಂಬಗಳು. ಅವೇ ನಕ್ಷತ್ರಗಳ ವಾಸ್ತವ ಸ್ಥಾನಗಳು ಅನ್ಯತ್ರ ನಿಷ್ಕೃಷ್ಟವಾಗಿ ತಿಳಿದಿದ್ದುದರಿಂದ ವಿಚಲನೆಯ ಮೊತ್ತವನ್ನು ಅಳೆದು ಐನ್‌ಸ್ಟೈನ್‌ನಿರೂಪಿಸಿದ ಗಣನೆಯನ್ನು ಒರೆಗೆ ಹಚ್ಚಲಾಯಿತು. ವೀಕ್ಷಣೆಯಿಂದ ಲಭಿಸಿದ ಬೆಲೆ ಗಣನೆಯಿಂದ ದೊರೆತ ಬೆಲೆಗೆ ತೀರ ಸನ್ನಿಹತವಾಗಿತ್ತು. ಅಲ್ಲಿ ವಿಶ್ವ ಐನ್‌ಸ್ಟೈನರ ಭಾಷ್ಯವನ್ನು ಒಪ್ಪಿಕೊಂಡಿತ್ತೆಂದಾಯಿತು. (ಇದೇ ಲೇಖಕನ ‘ಐನ್‌ಸ್ಟೈನ್‌ಬಾಳಿದರಿಲ್ಲಿ’ ಪುಸ್ತಕದಲ್ಲಿ ವಿವರಗಳಿವೆ.)

ವಿಶ್ವದ ಸೀಮಾತೀತ ಆಳಗಳಲ್ಲಿ ಸಮೀಪದ ಒಂದು ನಕ್ಷತ್ರ ದೂರದ ಒಂದು ನಕ್ಷತ್ರಕಿರಣಪಥದ ಹತ್ತಿರ ಬರುವುದು ಅಸಂಭಾವ್ಯವಲ್ಲ, ವಿರಳವೂ ಅಲ್ಲ. ಅಂದ ಮೇಲೆ ಆದರೆ ಅಲ್ಲೆಲ್ಲ ವಿಚಲನೆಯ ಮೊತ್ತ ಮಾಪನೆಗೆ ಸಿಕ್ಕದಷ್ಟು ಅನಂತಾಲ್ಪವಾಗಿರುತ್ತದೆ. ಉದಾಹರಣೆಗೆ ನಮ್ಮ ನೆರೆ ನಕ್ಷತ್ರ ಸೂರ್ಯನನ್ನು ಕುರಿತಂತೆ ಇದೆಷ್ಟು ಗೊತ್ತೇ ಕೇವಲ 1.75 ಕೋನ – ಸೆಕೆಂಡ್‌. ಅತ್ಯಂತ ನಾಜೂಕಾದ ಉಪಕರಣ ಮಾತ್ರ ಇಷ್ಟೊಂದು ಸೂಕ್ಷ್ಮ ಮೊತ್ತವನ್ನು ಗುರುತಿಸಿತು. ಅಷ್ಟೆ.

ಈ ಸನ್ನಿವೇಶವನ್ನು ಐನ್‌ಸ್ಟೈನ್‌ಸೈದ್ಧಾಂತಿಕವಾಗಿ ಪರಿಶೀಲಿಸಿ ಕಿರಣಪಥ ಮಧ್ಯದ ಗುರುತ್ವಕ್ಷೇತ್ರಗಳ ಕಾರಣವಾಗಿ ನಕ್ಷತ್ರಗಳು ವಿಚಲನೆಗೊಂಡಂತೆ ಕಾಣುವುದರ ಜೊತೆಗೆ ಈ ವಿಚಲಿತ ಸ್ಥಾನಗಳ ಪ್ರತಿಬಿಂಬಗಳು ಕೂಡ ಮೈದಳೆಯುವುದು ಸಾಧ್ಯವೆಂದು ಮುನ್ನುಡಿದರು. ದೀಪದ ಎದುರು ವಿವಿಧ ಕೋನಗಳಲ್ಲಿ ಹಲವು ಕನ್ನಡಿಗಳನ್ನಿಟ್ಟರೆ ದೀಪದ ಪ್ರತಿಬಿಂಬಗಳೂ ಇವುಗಳ ಪ್ರತಿಬಿಂಬಗಳೂ ಕಾಣುವುದಿಲ್ಲವೇ, ಹಾಗೆ. 1937ರಲ್ಲಿ ಅವರು ಈ ಊಹೆಯನ್ನು ಮಂಡಿಸಿದಾಗ ಇಂಥ ಒಂದು ವಿದ್ಯಮಾನ ಮಾತ್ರ ನಮ್ಮ ವೀಕ್ಷಣೆಯ ಅಳವಿಗೆ ಒಳಪಡುವ ಸಂಭಾವ್ಯತೆ ಅತ್ಯಲ್ಪವೆಂದಿದ್ದರು. ಆದರೆ ಮುಂದಿನ ಕೇವಲ ನಲವತ್ತೆರಡುವರ್ಷಗಳಲ್ಲೇ. 1979, ವಿಶ್ವ ನೂತನ ವಿಸ್ಮಯವೊಂದನ್ನು ಪ್ರದರ್ಶಿಸಿ ಖಗೋಳಪಂಡಿತರೆದುರು ಹೊಸ ಸವಾಲನ್ನು ಎಸೆದೇಬಿಟ್ಟಿತು. ಇದೇನೆಂದು ತಿಳಿಯುವ ಮೊದಲು ಕ್ವೇಸಾರುಗಳ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ.

ಸಾಧಾರಣ ನಕ್ಷತ್ರದ ಕೆಲವು ಮುಖ್ಯ ಲಕ್ಷಣಗಳಿವು. ಅದು ರೇಡಿಯೊ ತರಂಗಗಳು, ಶಾಖ, ಎಕ್ಸ್‌ಕಿರಣಗಳು ಮುಂತಾದ ದೃಗಗೋಚರ ಶಕ್ತಿಪ್ರಕಾರವನ್ನೂ ಬೆಳಕು ಎಂಬ ದೃಗ್ಗೋಚರ ಶಕ್ತಿ ಪ್ರಕಾರವನ್ನೂ ಪ್ರಸರಿಸುವ ಶಕ್ತಿಮೂಲ. ಇವೆಲ್ಲ ಶಕ್ತಿಗಳಿಗೆ ಒಟ್ಟಾಗಿ ವಿದ್ಯುತ್ಕಾಂತ ವಿಕಿರಣವೆಂದು ಹೆಸರು. ನಕ್ಷತ್ರದ ಗಾತ್ರ, ಅದರಿಂದ ಪ್ರಸಾರವಾಗುವ ವಿಕಿರಣ, ಅದರ ಚಲನವೇಗ ಮತ್ತು ದಿಶೆ ಮುಂತಾದವನ್ನು ಬೆಸೆಯುವ ಗಣಿತಸೂತ್ರಗಳಿವೆ. ನೂತನ ಕಾಯವೊಂದು ಆಕಾಶದಲ್ಲಿ ಗೋಚರವಾದಾಗ ಈ ಸೂತ್ರವನ್ನು ಅದಕ್ಕೆ ಅನ್ವಯಿಸಿ ಅದು ನಕ್ಷತ್ರವೇ ಅಲ್ಲವೇ ಎಂದು ನಿರ್ಧರಿಸಬಹುದು.

1960ರಲ್ಲಿ ಹೊಸತೊಂದು ಆಕಾಶಕಾಯ ಪತ್ತೆ ಆಯಿತು. ಅದು ಅತಿ ದೂರದಲ್ಲಿತ್ತು. ಅಂದರೆ ನಮ್ಮ ಉಪಕರಣಗಳು ಆ ತನಕ ಶೋಧಿಸಿದ್ದ ಜ್ಞಾತ ವಿಶ್ವದ ಪರಿಧಿ ಅದರ ನೆಲೆ. ಗಾತ್ರದಲ್ಲಿ ಅದೊಂದು ಕುಬ್ಜಕಾಯ – ಸೂರ್ಯನಿಗಿಂತ ಎಷ್ಟೋ ಅಂಶ ಚಿಕ್ಕದು, ಆದರೆ ಅದರಿಂದ ಪ್ರಸಾರವಾಗುತ್ತಿದ್ದ ವಿಕಿರಣ ಅತ್ಯಗಾಧ. ಎಷ್ಟೆಂದರೆ ಸೂರ್ಯ ಸದಸ್ಯ ಆಗಿರುವ ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯ ಸಮಗ್ರ ವಿಕಿರಣದಷ್ಟು! ಆಕಾಶಗಂಗೆಯಲ್ಲಿ ಅಂದಾಜು ನಲವತ್ತು ಸಾವಿರ ಕೋಟಿ ಸೂರ್ಯಸದೃಶ ನಕ್ಷತ್ರಗಳಿವೆ ಎಂಬುದು ನೆನಪಿನಲ್ಲಿರಲಿ. ಅನ್ನು ಆ ನೂತನ ಕಾಯದ ಚಲನವೇಗವೆಷ್ಟು ಗೊತ್ತೆ? ಸೆಕೆಂಡಿಗೆ ಸುಮಾರು 20! ಆ ವಿಚಿತ್ರಕಾಯ ನಮ್ಮಿಂದ ದೂರ ದೂರ ಧಾವಿಸುತ್ತ ಜ್ಞಾತವಿಶ್ವದ ಸೀಮೆಯನ್ನೇ ವಿಸ್ತರಿಸುತ್ತಿದ್ದಂತೆ ತೋರುತ್ತಿತ್ತು. ನಕ್ಷತ್ರಪರೀಕಷಕ ಸೂತ್ರಗಳಿಗೆ ಒಳಪಡದಿದ್ದ, ಆದರೂ ಹಲವಾರು ನಕ್ಷತ್ರಸದೃಶ ಲಕ್ಷಣಗಳನ್ನು ಹೊಂದಿದ್ದ, ಆ ಆಗಂತಕ ವೈಚಿತ್ರ್ಯಕ್ಕೆ ಖಗೋಳವಿಜ್ಞಾನಿಗಳು quasisteller source ಎಂಬ ಹೆಸರಿತ್ತರು. ಇದರ ಹ್ರಸ್ವರೂಪವೇ quasar, ನಕ್ಷತ್ರಸದೃಶ ಅಥವಾ ನಕ್ಷತ್ರರೂಪದ ಆಕರವೆಂದರ್ಥ.

ಕ್ವೇಸಾರ್‌ಬಗ್ಗೆ ವಿವರ ಸಂಗ್ರಹಣೆಗೆ ಖಗೋಳವಿದರು ಸಮರಸಜ್ಜಿತರಾದರು. 1960ರ ತರುವಾಯದ ದಶಕಗಳಲ್ಲಿ ಕ್ವೇಸಾರುಗಳ ಸುಗ್ಗಿ ಕೊಯ್ಲೇ ಅವರ ಗಳಿಕೆಯಾಯಿತು. 1979ರ ವೇಳೆಗೆ ಸುಮಾರು 1500 ಕ್ವೇಸಾರುಗಳು ಅವರ ಕಣಜ ಸೇರಿದ್ದುವು. ಅವುಗಳ ವಿತರಣೆಯಲ್ಲಿ ನಮಗೆ ಕಾಣುವಂತೆ ಯಾವ ಪ್ರರೂಪವೂ ಇರಲಿಲ್ಲ. ಅವು ದೂರ ದೂರ ಎಡ್ಡತಿಡ್ಡ ಹರಡಿಹೋಗಿದ್ದುವು – ಸರಾಸರಿಯಲ್ಲಿ ಪ್ರತಿ 30 ಚದರ ಡಿಗ್ರಿ ವಲಯಕ್ಕೆ 1 ರಂತೆ. ಸಪ್ತರ್ಷಿ ಮಂಡಲದಲ್ಲಿ (Ursa Major) ಪಶ್ಚಿಮದ ನಾಲ್ಕು ನಕ್ಷತ್ರಗಳು ಸೌಟಿನ ಗುಂಡಿಯಂಥ ಅಥವಾ ಪ್ರಶ್ನಾರ್ಥಕ ಚಿಹ್ನೆಯ ಡೊಂಕು ತಲೆಯಂಥ ಚಿತ್ರ ಪ್ರದರ್ಶಿಸುವುದು ಸರಿಯಷ್ಟೆ. ಇವುಗಳ ವ್ಯಾಪ್ತಿ 30 ಚದರ ಡಿಗ್ರಿ.

1979 ಮಾರ್ಚ್‌29ರ ಇರುಳು. ಗಗನ ವೀಕ್ಷಕರು ವಿವಿಧ ವೇಧಶಾಲೆಗಳಲ್ಲಿ ಎಂದಿನಂತೆ ಕಾರ್ಯಮಗ್ನರಾಗಿದ್ದಾರೆ. ಇವರ ಪೈಕಿ ಅಮೆರಿಕದ ಕಿಟ್‌ಪೀಕ್‌ವೇಧಶಾಲೆಯ ಡೆನಿಸ್‌ವಾಲ್ಶ್‌, ರಾಬರ್ಟ್‌ಕಾರ್ಸ್ವೆಲ್‌ಮತ್ತು ರೇ ವೈಮನ್‌ಕೂಡ ಇದ್ದಾರೆ. 2.3 ಮೀಟರ್‌ದೂರದರ್ಶಕದ ನೆರವಿನಿಂದ ಇವರು ಆಕಾಶಶೋಧನೆ ಮಾಡುತ್ತಿದ್ದಾರೆ. ಇವರೆದುರು ಅಲ್ಲೊಂದು ನೂತನ ದೃಶ್ಯ ಅನಾವರಣಗೊಂಡಿದೆ. ಬಾನಿದು ಬರಿ ಬರಡಲ್ಲೋ ಎಂಬ ಉದ್ಗಾರ ಹೊರಡಿಸುವಂಥ ವಿಸ್ಮಯ! ಒಂದು ಜೊತೆ ಕ್ವೇಸಾರುಗಳು ಅಲ್ಲಿವೆ. ಅವು ಸಯಾಮೀ ಅವಳಿಗಳಂತೆ ಪರಸ್ಪರ ಸನ್ನಿಕಟವಾಗಿವೆ. ಮೂಲ ಕ್ವೇಸಾರೊಂದರ ಪ್ರತಿಬಿಂಬಗಳಂತೆ ಎರಡೂ ಎಲ್ಲ ವಿವರಗಳಲ್ಲೂ ಸರ್ವಸಮವಾಗಿವೆ – ಗಾತ್ರ, ಸ್ವರೂಪ, ಗುಣ, ಲಕ್ಷಣ. ಚಲನವೇಗ ಒಂದೊಂದರಲ್ಲೂ ಅವು ಅಷ್ಟೊಂದು ಅಭಿನ್ನ. ಕಲ್ಪನಾಲೋಕದ ಹುಚ್ಚು ಕನಸನ್ನೂ ಮೀರಿ ಜಿಗಿದಿದೆ ಈ ವಾಸ್ತವದೃಶ್ಯ. ತದ್ರೂಪಿಗಳ ಈ ಚಿದ್ರೂಪದ ಧ್ಯನ್ಯರ್ಥವೇನು?

ಕೇವಲ ಆರು ಕೋನ ಸೆಕೆಂಡುಗಳ ಅಂತರದಲ್ಲಿ ಒಂದು ಜೊತೆ ತದ್ವತ್ತು ಕ್ವೇಸಾರುಗಳು ಪತ್ತೆ ಆಗಿದ್ದುವು. ಕೋನದ 1 ಡಿಗ್ರಿ 3600 ಕೋನ ಸೆಕೆಂಡುಗಳಿಗೆ ಸಮವೆಂದ ಮೇಲೆ ಸಾಯುಜ್ಯವೇ ಎನ್ನಬಹುದಾದ ಸಾಮೀಪ್ಯ ಸ್ಥಿತಿ ಇದು ಕ್ವೇಸಾರುಗಳ ವಿತರಣ ನಿಯಮವನ್ನಿವು ಉಲ್ಲಂಘಿಸಿದ್ದುವು. ಇಷ್ಟೇ ಅಲ್ಲ. ಯಾವ ಎರಡು ಕ್ವೇಸಾರುಗಳೂ ಸರ್ವಸಮವಾಗಿರುವುದು ಅಸಂಭವ್ಯ. ಎಲ್ಲ ನಕ್ಷತ್ರಗಳಿಗೆ ವಸ್ತುಗಳಿಗೂ ಜೀವಿಗಳಿಗೂ ಅನ್ವಯವಾಗುವ ವಿಶ್ವನಿಯಮವಿದು. ಹೀಗಿದ್ದರೂ ಈ ಕ್ವೇಸಾರುಗಳು ತದ್ವತ್ತು ಪ್ರತಿಬಿಂಬಗಳಾಗಿದ್ದುವು. ಇವು ಏನು? ಹೀಗೇಕೆ?

ಇಂಥ ಅನಿರೀಕ್ಷಿತ ವಿಸ್ಮಮಯವೆದುರಾದಾಗ ವಿಜ್ಞಾನಿಗೆ ಮುನ್ನಡೆಯಲು ಶಿಷ್ಟಮಾರ್ಗ ಒಂದುಂಟು. ವೀಕ್ಷಣೆಯಿಂದ ಲಭಿಸಿದ ಮಾಹಿತಿಗಳಿಗೆ ಹೊಂದುವ ಒಂದು ಸೈದ್ಧಾಂತಿಕ ಪ್ರತಿರೂಪವನ್ನು ಆತ ನಿರ್ಮಿಸುತ್ತಾನೆ. ಪ್ರಸಕ್ತ ಸಮಸ್ಯೆ ಹೀಗಿರಬಹುದು ಎಂಬ ಅಂದಾಜಿನ ಭಾವನಾತ್ಮಕ ರೂಪವಿದು. ಇದು ವಿಜ್ಞಾನದ ಪರಿಭಾಷೆಯಲ್ಲಿರುತ್ತದೆ. ಇದನ್ನು ವಾಸ್ತವ ಸನ್ನಿವೇಶಕ್ಕೆ ಅನ್ವಯಿಸಿದಾಗ ಎಲ್ಲವೂ ಸರಿಹೊಂದಿದರೆ ಸಮಸ್ಯೆ ಅಲ್ಲಿಗೇ ಪರಿಹಾರಗೊಳ್ಳುತ್ತದೆ. ಹೀಗಲ್ಲದೆ ತೊಡಕುಗಳು ಎದ್ದು ನಿಂತರೆ ಮತ್ತೆ ಪ್ರತಿರೂಪದ ಮಂಡನೆ. ಅಂತಿಮ ಪರಿಹಾರ ದೊರೆಯುವತನಕವೂ ಈ ಪ್ರಯತ್ನ – ವೈಫಲ್ಯ ಚಕ್ರ ಮುಂದುವರಿದಿರುತ್ತದೆ.

ತದ್ವತ್ತು ಕ್ವೇಸಾರುಗಳ ಸಮಸ್ಯಾಪರಿಹಾರಕ್ಕೆ ಮುಖ್ಯವಾಗಿ ಎರಡು ಸೈದ್ಧಾಂತಿಕ ಪ್ರತಿರೂಪಗಳನ್ನು ಮಂಡಿಸಲಾಯಿತು. ಮೊದಲನೆಯದು ಯಮಳ ಕ್ವೇಸಾರುಗಳ ಪ್ರತಿರೂಪ. ಒಂದೇ ವಿಶ್ವಮೇಘದಿಂದಅಂದರೆ ನೀಹಾರಿಕೆಯಿಂದ – ಒಮ್ಮೆಗೆ ರೂಪುಗೊಂಡ ಅವಳಿ ಕ್ವೇಸಾರುಗಳಿವಾಗಿರಬೇಕು. ಎಂದೇ ಇವುಗಳಲ್ಲಿ ಇಷ್ಟೊಂದು ಸಾದೃಶ್ಯ ಮತ್ತು ಸಾಮೀಪ್ಯ ಎಂಬುದು ಈ ಪ್ರತಿರೂಪದ ಸಾರ. ಆದರೆ ಇದನ್ನು ವಿಶ್ವಕ್ಕೆ ಅನ್ವಯಿಸಿದಾಗ ಹಲವಾರು ನೂತನ ಅಪರಿಹಾರ್ಯ ಸಮಸ್ಯೆಗಳು ಉದ್ಭವಿಸಿದುವು. ಅಲ್ಲಿಗೆ ಇದನ್ನು ತಿರಸ್ಕರಿಸಿತೆಂದಾಯಿತು.

ಎರಡನೆಯದು ಅಂತರಬ್ರಹ್ಮಾಂಡ ಗುರುತ್ವ ಮಸೂರದ ಪ್ರತಿರೂಪ. ಮಕ್ಕಳು ಆಡುವ ಭೂತಗನ್ನಡಿ ಇದೆಯಷ್ಟೆ. ಇದನ್ನು ಸೂರ್ಯನಿಗೆ ಎದುರಾಗಿ ಹಿಡಿದು ನೆಲದ ಮೇಲೆ ಉಜ್ಜ್ವಲ ಪ್ರಭೆ ಮತ್ತು ತೀಕ್ಷ್ಣ ಶಾಖ ಸಾಂದ್ರೀಕರಿಸುವ ಬಿಂದುವನ್ನು ಅಂದರೆ ಮಿನಿಸೂರ್ಯನನ್ನು, ರಚಿಸಿ ಇದರಿಂದ ಹತ್ತಿಯನ್ನೊ ಕಾಗದವನ್ನೊ ಸುಡುವುದು ಮಕ್ಕಳಿಗೆ ಇಷ್ಟವಾದ ಮೋಜು. ಭೂತಗನ್ನಡಿಯು ಬೆಳಕಿಗೆ ಅನ್ವಯವಾಗುವ ಸಾಧನ. ಇದಕ್ಕೆ ದ್ಯುತಿಮಸೂರವೆಂದು (optical lens) ಹೆಸರು. ಬೆಳಕು ಮತ್ತು ಶಾಖ ವಿದ್ಯುತ್ಕಾಂತ ವಿಕಿರಣದ ನಿರ್ದಿಷ್ಟ ಬಗೆಗಳು. ದ್ಯುತಿಮಸೂರ ಇವನ್ನು ಬಗ್ಗಿಸಿ ಸೂರ್ಯನ ಬಿಂದು ಪ್ರತಿಬಿಂಬವನ್ನು ರಚಿಸಿತು. ಹಾಗಾದರೆ ಯಾವುದೇ ನಕ್ಷತ್ರದಿಂದ ಬರುವ ಸಮಗ್ರ ವಿದ್ಯುತ್ಕಾಂತ ವಿಕಿರಣವನ್ನು ಬಗ್ಗಿಸಿ ಕೇಂದ್ರಿಕರಿಸಿ ಅದರ ಬಿಂದು ಪ್ರತಿಬಿಂಬವನ್ನು ರಚಿಸಬಲ್ಲ ಮಸೂರ ಇರುವುದು ಸಾಧ್ಯವೇ? ಸಹಜವಾಗಿ ಈ ಚಿಂತನೆ ವಿಜ್ಞಾನಿಗಳನ್ನು 1915ರಲ್ಲಿ ಐನ್‌ಸ್ಟೈನ್‌ರಿಂದ ಮಂಡಿಸಲ್ಪಟ್ಟ ಮತ್ತು 1919ರಲ್ಲಿ ವೀಕ್ಷಣೆಯಿಂದ ಸ್ಥಿರೀಕರಿಸಲ್ಪಟ್ಟ ‘ಬೆಳಕು ಬಗ್ಗುವಿಕೆ’ ವಿದ್ಯಮಾನದತ್ತ ಕೊಂಡೊಯ್ದಿತು. ಅಲ್ಲಿ ಆದದ್ದೇನು? ನಕ್ಷತ್ರಗಳಿಂದ ಬರುತ್ತಿದ್ದ ವಿದ್ಯುತ್ಕಾಂತ ವಿಕಿರಣವನ್ನು ಸೂರ್ಯನ ಗುರುತ್ವಕ್ಷೇತ್ರ ಬಗ್ಗಿಸಿತ್ತು. ಈ ಸನ್ನಿವೇಶದಲ್ಲಿ ಸೂರ್ಯ ಅಂತರನಾಕ್ಷತ್ರಿಕ ಗುರುತ್ವಮಸೂರದಂತೆ ವರ್ತಿಸಿತ್ತು. ಅಂದಮೇಲೆ ಕ್ವೇಸಾರಿನಿಂದ ಬರುವ ವಿಕಿರಣವನ್ನು ಬಗ್ಗಿಸಬಲ್ಲ ಗುರುತ್ವಮಸೂರ ಆಕಾಶದಲ್ಲಿ ಇರಬಹುದೇ? ಇದರ ಕಾರಣವಾಗಿ ನಿಜ ಕ್ವೇಸಾರಿನ ಪ್ರತಿಬಿಂಬಗಳು ಮೈದಳೆದು ಇವು ನಮಗೆ ಗೋಚರವಾಗುವುದಾಗಿರಬಹುದೇ?

ಗುರುತ್ವಮಸೂರದ ಪ್ರತಿರೂಪವನ್ನು ಅಂಗೀಕರಿಸಿದ್ದಾದರೆ ವೀಕ್ಷಣೆಯಿಂದ ಸ್ಥಿರೀಕರಿಸಬೇಕಾಗಿದ್ದ ಮುಖ್ಯಾಂಶಗಳು ಮೂರು: ಒಂದು, ಗುರುತ್ವಮಸೂರ ಅಸ್ತಿತ್ವ: ಎರಡು. ನಿಜಕ್ವೇಸಾರಿನ ಅಸ್ತಿತ್ವ; ಮೂರು ನಿಜಕ್ವೇಸಾರ್‌, ಗುರುತ್ವಮಸೂರ ಮತ್ತು ತದ್ವತ್ತು ಕ್ವೇಸಾರುಗಳು ಖಚಿತ ಸಂಬಂಧ.

ಸೈದ್ಧಾಂತಿಕ ಗಣನೆಗಳು ಗುರುತ್ವಮಸೂರದ ಗುಣಲಕ್ಷಣಗಳ ಬಗ್ಗೆ ಕೆಲವು ಸುಳುಹುಗಳನ್ನು ನೀಡಿದುವು. ಒಂದೆರಡು ಅಥವಾ ಹಲವು ಸಾವಿರ ನಕ್ಷತ್ರಗಳ ಸಂಯುಕ್ತ ಗುರುತ್ವಕ್ಷೇತ್ರವೂ ಪ್ರಸಕ್ತ ಸಮಸ್ಯೆಗೆ ಪರಿಹಾರ ಒದಗಿಸದು. ಇಡೀ ಬ್ರಹ್ಮಾಂಡವೇ ಗುರುತ್ವ ಮಸೂರದಂತೆ ವರ್ತಿಸಬೇಕಾದೀತು. ವಿಶ್ವ ಅಸಂಖ್ಯಾತ ಬ್ರಹ್ಮಾಂಡಗಳ ಸಮುದಾಯ. ಹೀಗಿದದ್ದರೂ ವಿಶ್ವದ ಬಹುಭಾಗ ಖಾಲೀಯೇ ಆದ್ದರಿಂದಲೇ ಜ್ಞಾತವಿಶ್ವದ ಪರಿಧಿಯಲ್ಲಿರುವ ಕ್ವೇಸಾರುಗಳೂ ಅವುಗಳ ಪ್ರತಿಬಿಂಬಗಳೂ ನಡುವೆ ಯಾವುದೇ ಬ್ರಹ್ಮಾಂಡದಿಂದಾಗಲಿ ನಕ್ಷತ್ರದಿಂದಾಗಲಿ ಮರೆಮಾಡಲ್ಪಡದೆ ನಮಗೆ ಕಾಣುವುದಾಗಿದೆ.

ಈಗ, ನಿಜಕ್ವೇಸಾರಿಗೂ ನಮಗೂ ನಡುವೆ ಯಾವುದೋ ಒಂದು ಅನುಕೂಲ ಅಂತರದಲ್ಲಿ ಮತ್ತು ಅನುಕೂಲ ಭಂಗಿಯಲ್ಲಿ ಅನುಕೂಲ ಗುರುತ್ವ ಸಾಮರ್ಥ್ಯದ ಒಂದು ಬ್ರಹ್ಮಾಂಡವಿರುವುದಾದ ಪಕ್ಷ ಅದು ಅಂತರಬ್ರಹ್ಮಾಂಡ ಗುರುತ್ವಮಸೂರದಂತೆ ವರ್ತಿಸಿ ನಿಜಕ್ವೇಸಾರಿನ ಪ್ರತಿಬಿಂಬಗಳನ್ನು ಸೃಷ್ಟಿಸಬಹುದು. ಖಗೋಳವಿಜ್ಞಾನಿಗಳು ತಮಗೆ ಕಂಡ ತದ್ವತ್ತು ಕ್ವೇಸಾರುಗಳು ಒದಗಿಸಿದ ಮಾಹಿತಿಯನ್ನು ಆಧರಿಸಿ ಅಂತರಬ್ರಹ್ಮಾಂಡ ಗುರುತ್ವಮಸೂರವನ್ನು ನೆಲೆಗೊಳಿಸಿದರು. ಎಂದರೆ ಅದರ ಸಾಮರ್ಥ್ಯವೆಷ್ಟಿರಬೇಕು, ಅದು ಎಲ್ಲಿ ಯಾವ ಭಂಗಿಯಲ್ಲಿ ನೆಲೆಗೊಂಡಿರಬೇಕು ಎಂಬ ವಿವರಗಳ ನಿರ್ಣಯ. ಅದು ಅಲ್ಲಯೇ ಇದೆ. ಇರಬೇಕಾದಂತೆಯೇ ಇದೆ ಎಂದು ವೀಕ್ಷಣೆಯಿಂದ ಸಾಬೀತುಗೊಳಿಸಬೇಕಾದದ್ದು ಮುಂದಿನ ಹೆಜ್ಜೆ.

ತದ್ವತ್ತು ಕ್ವೇಸಾರುಗಳ ವಲಯವನ್ನು ವಿದ್ಯುತ್ಕಾಂತ ವಿಕಿರಣದ ರೇಡಿಯೊ ತರಂಗಳ ವಿಭಾಗದಲ್ಲೂ (ಈ ಅಧ್ಯಯನ ರೇಡಿಯೊ ಖಗೋಳವಿಜ್ಞಾನದ ವಸ್ತು) ದೃಗ್ವಿಭಾಗದಲ್ಲೂ (ಈ ಅಧ್ಯಯನ ದೃಗ್ಗೋಚರ ಖಗೋಳವಿಜ್ಞಾನದ ವಸ್ತು) ತಪಾಸನೆ ಮಾಡಿ ಅಧಿಕ ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕಿದಾಗ ಗುರುತ್ವಮಸೂರದ ಅಸ್ತಿತ್ವ ಸ್ಥಿರೀಕೃತವಾಯಿತು. ಆದರೆ ಇದೊಂದು ಮಹಾವಿಜಯವೆಂದು ವಿಜೃಂಭಿಸುವಂತಿರಲಿಲ್ಲ. ಕಾರಣ ಈ ಗುರುತ್ವಮಸೂರ ನಿಜಕ್ಕೂ ಮೂರು ಪ್ರತಿಬಿಂಬಗಳನ್ನೂ ಮೂಡಿಸಬೇಕೆಂದು ಗಣನೆಯಿಂದ ತಿಳಿಯಿತು. ಆದರೆ ಕಂಡಿರುವುದು ಎರಡು ಮಾತ್ರ. ಮೂರನೆಯದು ಪತ್ತೆಯಾಗಿ ಅದು ಉಂಟೆಂದು ಸ್ಥಿರೀಕೃತವಾದಾಗ ಮಾತ್ರ ತದ್ವತ್ತು ಕ್ವೇಸಾರುಗಳ ಯಮಳ ಪ್ರಶ್ನೆಗೆ ಉತ್ತರ ಒದಗುವುದಾಗಿತ್ತು.

1979 ನವೆಂಬರ್‌15ರ ರಾತ್ರಿ. ಅದೊಂದು ನಿರ್ಣಾಯಕ ಇರುಳು. ಸಿದ್ಧಾರ್ಥ ಬುದ್ಧನಾಗುವ ರಾತ್ರಿ! ಆಕಾಶ ನಿರಭ್ರ. ಮಾನವಕೃತ ಕಲ್ಮಷಗಳಿರಲಿಲ್ಲ. ನೈಸರ್ಗಿಕ ಅಡೆತಡೆಗಳೂ ಇರಲಿಲ್ಲ. ಖಗೋಳವೀಕ್ಷಣೆಗೆ ಪ್ರಶಸ್ತ ಸನ್ನಿವೇಶ. ವಿಶೇಷವಾಗಿ ನಿರ್ಮಿಸಿದ್ದ ಸೂಕ್ಷೋಪಕರಣಗಳ ನೆರವಿನಿಂದ ಗಗನಶೋಧಕರು ಎರಡು ಗಂಟೆಗಳ ಕಾಲ ತದ್ವತ್ತು ಕ್ವೇಸಾರುಗಳ ರೇಡಿಯೊ ಹಾಗೂ ದೃಕ್‌ಚಿತ್ರಗಳನ್ನು ಸೆರೆಹಿಡಿದರು. ಅಮೆರಿಕದ ಹೇಲ್‌ವೇಧಶಾಲೆಯ ಪೀಟರ್‌ಯಂಗ್‌, ಜೇಮ್ಸ್‌ಗನ್‌, ಜೆರೊಮ್‌ಕ್ರಿಶ್ಚಿಯನ್‌, ಬೆವರ್ಲಿ ಓಕ್‌ಮತ್ತು ಜೇಮ್ಸ್‌ವೆಸ್ಟ್‌ಫಾಲ್‌ಈ ಪರಿಣತರು. ಹವಾಯ್‌ವಿಶ್ವವಿದ್ಯಾಲಯದ ಅಲನ್‌ಸ್ಟಾಕ್‌ಟನ್‌ನವೆಂಬರ್‌28 ರಂದು ಬೇರೆಯೇ ಚಿತ್ರಗಳನ್ನು ಸ್ವತಂತ್ರವಾಗಿ ಪಡೆದರು. ಇವೆಲ್ಲವನ್ನೂ ಕೂಲಂಕಷವಾಗಿ ಅವಲೋಕಿಸಿ ಸಮನ್ವಯಿಸಿದಾಗ ತದ್ವತ್ತು ಕ್ವೇಸಾರುಗಳ ಹೂರಣ ಹೊರಬಿತ್ತು: ವಿಶ್ವ ಒಲಿದಿತ್ತು! ಆ ಎರಡು ಪ್ರತಿಬಿಂಬಗಳ ಸಮುಚ್ಚಯ ಸ್ಥೂಲವೀಕ್ಷಣೆಗೆ ಒಂದೇ ಆಗಿ ಬೆಸೆದುಕೊಂಡಿದ್ದಂತೆ ಕಾಣುತ್ತಿತ್ತು ಅಷ್ಟೆ.

ಅಂತಿಮ ವಾಸ್ತವ ಚಿತ್ರವಿದು. ನಿಜ ಕ್ವೇಸಾರ್‌ಒಂದು ದೃಗ್ಬಿಂದು ಮಾತ್ರ. ಅಂದರೆ ಬೆಳಕನ್ನು ಬೀರುವ ಒಂಟಿ ಆಕರ. ಇದಕ್ಕೂಆಕಾಶಗಂಗೆಗೂ ನಡುವೆ ಸುಮಾರು ಅರ್ಧದಷ್ಟು ಅಂತರದಲ್ಲಿ, ಕ್ವೇಸಾರಿನಿಂದ ನಮಗೆಳೆದ ಗೆರೆಯ ತುಸು ದಕ್ಷಿಣಕ್ಕೆ, ದೀರ್ಘವೃತ್ತಾಕಾರದ (ellipse – shaped) ಒಂದು ಬ್ರಹ್ಮಾಂಡ ವಿಶಿಷ್ಟ ಭಂಗಿಯಲ್ಲಿ ನೆಲೆಗೊಂಡಿದೆ. ಕ್ವೇಸಾರಿನಿಂದ ನಮ್ಮೆಡೆಗೆ ಬರುವ ವಿಕಿರಣವನ್ನು ಇದು ಬಗ್ಗಿಸುತ್ತದೆ – ಉತ್ತರ ಪಾರ್ಶ್ವದಲ್ಲಿ ತುಸು ಕಡಿಮೆ, ದಕ್ಷಿಣ ಜಾಸ್ತಿ. ಹೀಗಾಗಿ ಉತ್ತರದಲ್ಲಿ ಒಂದು ಪ್ರತಿಬಿಂಬವೂ ದಕ್ಷಿಣದಲ್ಲಿ ಎರಡು ಪ್ರತಿಬಿಂಬಗಳೂ ಪಡಿಮೂಡಿವೆ.

ಕಾಲದಲ್ಲೂ ದೇಶದಲ್ಲೂ ವಿಶ್ವ ಅಗಾಧವಾದದ್ದು, ಮಾನವನ ಊಹೆಗೂ ನಿಲುಕದ್ದು. ವಿಶ್ವದ ಇತಿಹಾಸವನ್ನು ವರ್ತಮಾನಕಾಲದ ತನಕ ವಿವರಿಸುವ ಮಹಾಗ್ರಂಥದಲ್ಲಿ ಮಾನವನ ಸಾಧನೆ ಸಿದ್ಧಿಗಳಿಗೆ ಕೊನೆಯ ಪುಟದ ಕೊನೆಯ ಸಲಿನ ಕೊನೆಯ ಪದದ ಕೊನೆಯ ಅಕ್ಷರದಷ್ಟು ಎಡೆದೊರೆತರೂ ಹೆಚ್ಚು. ಅಂದ ಮೇಲೆ ವಿಶ್ವ ಎಳೆಯುವ ಸವಾಲುಗಳಿಗೆ ಯುಕ್ತ ಜವಾಬು ಒದಗಿಸಲು ಮಾನವನಿಗೆ ಹಲವು ನೂರು ಸಾವಿರ ವರ್ಷಗಳೇ ಬೇಕಾಗುವುದು ಆಶ್ವರ್ಯವೇನೂ ಅಲ್ಲ. ಹೀಗಿರುವಾಗ ಕ್ವೇಸಾರ್‌ಪ್ರತಿಬಿಂಬಗಳ ಸಮಸ್ಯೆ ಕೇವಲ ಎಂಟು ತಿಂಗಳ ಅನಂತಾಲ್ಪ ಅವಧಿಯಲ್ಲಿ ಪರಿಹಾರವಾದದ್ದು ನಿಜಕ್ಕೂ ಪ್ರಚಂಡ ದಿಗ್ವಿಜಯವೇ ಸರಿ. ಭಗವಂತದಾಳ ಒಗೆಯುವುದಿಲ್ಲ (God does not play dice)ಎನ್ನುವ ಐನ್‌ಸ್ಟೈನ್‌- ಉಕ್ತಿಗೆ ಇದು ಇನ್ನೂ ಒಂದು ನಿದರ್ಶನ. ಅಂದ ಹಾಗೆ 1979 ಐನ್‌ಸ್ಟೈನ್‌ಅವರ ಜನ್ಮ ಶತಮಾನೋತ್ಸವ ಇಸವಿ:

ಕ್ವೇಸಾರ್‌! ಗೋಚರ ಲೋಕದ ಗಡಿಕಾಯ
ಆಕಾಶಾಂತರ
ರಾಶಿ ಸಮುಚ್ಚಯ
ಪ್ರಚಂಡ
ಸಾಂದ್ರತೆ ವಾಮನ ಗಾತ್ರ
ಅತಿಶಯ
ವಿಕಿರಣ ಪರಮಚಂದ್ರ
1980.