ಯಾವುದೇ ಗುರುತ್ವಾಕರ್ಷಣವಲಯಕ್ಕೆ ಸೀಮಿತವಾಗಿರುವ ಅಸಂಖ್ಯಾತ ನಕ್ಷತ್ರಗಳ ಮತ್ತು ಧೂಳು ಹಾಗೂ ಅನಿಲರಾಶಿಯ ಸಮುದಾಯಕ್ಕೆ ಒಟ್ಟಾಗಿ ಬ್ರಹ್ಮಾಂಡವೆಂದು (galaxy) ಹೆಸರು. ಎಣಿಕೆಗೆ ನಿಲುಕದಷ್ಟು ಬೇರೆ ಬೇರೆ ಬ್ರಹ್ಮಾಂಡಗಳು ವಿಶ್ವದಲ್ಲಿವೆ (universe). ನಮ್ಮ ಖಾಸಾ ನಕ್ಷತ್ರವಾದ ಸೂರ್ಯ ಸದಸ್ಯ ಆಗಿರುವ ಬ್ರಹ್ಮಾಂಡಕ್ಕೆ ಆಕಾಶಗಂಗೆ ಎಂದು ಹೆಸರು. ಚಂದ್ರನಿಲ್ಲದ ಸೂರ್ಯ ರಾತ್ರಿಯ ಸ್ವಚ್ಛಾಕಾಶದಲ್ಲಿ ಮಸಕು ಬಿಳಿ. ಹೊನಲು ದಕ್ಷಿಣೋತ್ತರವಾಗಿ ಹಬ್ಬಿರುವುದನ್ನು ಬರಿಗಣ್ಣುಗಳಿಂದ ಕಾಣಬಹುದು. ಅದೇ ಆಕಾಶಗಂಗೆ. ಬಾನ್ದೊರೆ, ಕ್ಷೀರಪಥ ಪರ್ಯಾಯ ಪದಗಳು. ಕೋಟ್ಯಂತರ ಸೂರ್ಯರು ಆಕಾಶಗಂಗೆಯಲ್ಲಿ, ನಿಬಿಡವಾಗಿ ದಟ್ಟೈಸಿರುವಂತೆ ಭಾಸವಾಗುವುದರಿಂದ, ಆ ಬೆಳಕಿನ ಹೊನಲಿಗೆ ಅಖಂಡತೆ ಪ್ರಾಪ್ತವಾಗಿದೆ. ಅಷ್ಟೆ. ವಿದ್ಯುದ್ದೀಪಾಲಂಕೃತ ನಗರದಿಂದ ದೂರ ಸಾಗಿ ಎತ್ತರದ ನೆಲೆಯಲ್ಲಿ ನಿಂತು ನೋಡಿದಾಗ ಬೆಳಕಿನ ಅಖಂಡತೆಯ ಮಸಕು ಚಿತ್ರ ಮೂಡುವುದಿಲ್ಲವೇ, ಹಾಗೆ.

ವಾಸ್ತವವಾಗಿ ಆಕಾಶಗಂಗೆ ಬಿಡಿ ನಕ್ಷತ್ರಗಳ ನಡುವಿನ ಅಂತರ ನಮ್ಮ ದೈನಂದಿನ ಅನುಭವದ ಮಿತಿಯಲ್ಲಿ ಊಹಾತೀತವಾಗಿದೆ. ಒಂದು ಸೆಕೆಂಡಿನಲ್ಲಿ ಸುಮಾರು ಮೂರು ಲಕ್ಷ ಕಿಲೊಮೀಟರ್ ದೂರ ಧಾವಿಸಬಲ್ಲ ಬೆಳಕು ಒಂದು ವರ್ಷ ಕಾಲ ಕ್ರಮಿಸುವ ದೂರಕ್ಕೆ ಜ್ಯೋತಿರ್ವರ್ಷವೆಂದು (light – year) ಹೆಸರು. ಈ ಮಾನಕದ ಪ್ರಕಾರ ಆಕಾಶಗಂಗೆಯ ಎರಡು ನೆರೆ ನಕ್ಷತ್ರಗಳ ನಡುವಿನ ಕನಿಷ್ಠ ಅಂತರ ನಾಲ್ಕೈದು ಜ್ಯೋತಿರ್ವರ್ಷಗಳೇ ಇವೆ. ಇನ್ನು ಆಕಾಶಗಂಗೆಯ ವ್ಯಾಸ – ಒಂದು ಅಂಚಿನಿಂದ ತೊಡಗಿ ಕೇಂದ್ರದ ಮೂಲಕ ಹಾದು ಎದುರಿನ ಅಂಚು ಕ್ರಮಿಸಲು ಗಮನಿಸಬೇಕಾದ ದೂರ – ಎಷ್ಟು ಗೊತ್ತೇ? ಸುಮಾರು ಒಂದು ಲಕ್ಷ ಜ್ಯೋತಿರ್ವರ್ಷಗಳು.

ವಿಶ್ವದಲ್ಲಿರುವ ಅಸಂಖ್ಯಾತ ಬ್ರಹ್ಮಾಂಡಗಳ ನಡುವಿನ ಅಂತರವಾದರೂ ಹೀಗೆಯೇ, ಬವಳಿ ಬರಿಸುವಂತೆಯೇ ಇದೆ. ಯಾವುವೇ ಎರಡು ಒತ್ತೊತ್ತಿನ ಬ್ರಹ್ಮಾಂಡಗಳ ನಡುವಿನ ಸರಾಸರಿ ಅಂತರ 50 ಲಕ್ಷ ಜ್ಯೋತಿರ್ವರ್ಷಗಳು. ನಮ್ಮಿಂದ ಅಷ್ಟೊಂದು ಅಗಾಧ ಊಹಾತೀತ ದೂರಗಳಲ್ಲಿರುವ ಈ ಪ್ರತ್ಯೇಕ ದ್ವೀಪವಿಶ್ವಗಳು ಅತಿ ಸಮರ್ಥ ದೂರದರ್ಶಕಗಳಿಗೆ ಮಾತ್ರ ತೀರ ಮಸಕು ಮಚ್ಚೆಗಳಾಗಿ ಗೋಚರಿಸುವುದು, ಅಷ್ಟೆ ಇವನ್ನು ಪತ್ತೆಹಚ್ಚಿ ವಿಶ್ಲೇಷಿಸಬಲ್ಲ ಪ್ರಬಲ ಹಾಗೂ ಸೂಕ್ಷ್ಮಾಯುಧಗಳು ಇಂದು ಖಗೋಳವಿಜ್ಞಾನಿಗಳ ಬತ್ತಳಿಕೆಗೆ ಜಮೆಯಾಗಿವೆ.

ನಮ್ಮ ದೃಷ್ಟಿಯಿಂದ ಸೂರ್ಯ ಸುಮಾರು 12 ಲಕ್ಷ ಭೂಮಿಗಳನ್ನು ಕಬಳಿಸಬಲ್ಲ ಬಕಾಸುರ ನಿಜ. ಆದರೆ ವಿಶ್ವದ ಅಸಂಖ್ಯಾತ ನಕ್ಷತ್ರಗಳ ಪೈಕಿ ಸೂರ್ಯನ ಸ್ಥಾನ ತೀರ ಸಾಧಾರಣ ಮಟ್ಟದ್ದು. ಉದಾಹರಣೆಗೆ ಮಹಾವ್ಯಾಧ ನಕ್ಷತ್ರಪುಂಜದಲ್ಲಿ ಉಜ್ಜ್ವಲ ರಕ್ತವರ್ಣದಿಂದ ಹೊಳೆಯುತ್ತಿರುವ ಆರ್ದ್ರಾ ನಕ್ಷತ್ರವನ್ನು ಪರಿಶೀಲಿಸಬಹುದು. ಬರಿಗಣ್ಣಿಗೆ ಬೆಳಕಿನ ಹುಡಿಯಂತೆ ಕಾಣುವ ಇದರ ದೂರ ನಮ್ಮಿಂದ ಸುಮಾರು 300 ಜ್ಯೋತಿರ್ವರ್ಷಗಳು. ಆರ್ದ್ರಾ ನಕ್ಷತ್ರವನ್ನು ಕಿತ್ತು ತಂದು ಸೂರ್ಯ ಇರುವಲ್ಲಿ ಪ್ರತಿಷ್ಠಾಪಿಸಿದರೆ ಸೂರ್ಯನಿಗೆ ಇದರ ಕೇಂದ್ರದಲ್ಲಿ ಕೇವಲ ಒಂದು ಕಣದ ಸ್ಥಾನ ಪ್ರಾಪ್ತವಾದೀತು. ಅಷ್ಟೆ ಇನ್ನು ಇದರ ಬೆಚ್ಚಗಿನ ಒಡಲೊಳಗೆ ಬುಧ, ಶುಕ್ರ, ಭೂಮಿ, ಮಂಗಳಗಳೆಲ್ಲವೂ ತಮ್ಮ ತಮ್ಮ ನಿಖರ ಕಕ್ಷೆಗಳಲ್ಲಿ ಅಗೋಚರ ಎಲೆಕ್ಟ್ರಾನುಗಳ ತೆರದಲ್ಲಿ ಪರಿಭ್ರಮಿಸುತ್ತಿರುವುವು !

ನಕ್ಷತ್ರವೊಂದು ಉರಿಯುತ್ತಿರುವ ಅಗ್ನಿಗೋಳ, ತಪ್ತ ಸ್ಥಿತಿಯಲ್ಲಿರುವ ಪ್ಲಾಸ್ಮಾರಾಶಿ ವಸ್ತುವಿನ ಸ್ಥಿತಿ ಮೂರು ಬಗೆಗಳಲ್ಲಿರಬಹುದು: ಘನ – ಕಲ್ಲಿನಂತೆ; ದ್ರವ – ನೀರಿನಂತೆ; ಅನಿಲ – ವಾಯುವಿನಂತೆ. ಉಷ್ಣದ ಪೂರೈಕೆಯಿಂದ ಘನ ಕರಗಿ ದ್ರವವಾಗಿ ಬಿಸಿಗೊಂಡು ಅನಿಲವಾಗಿ ಸ್ಥಿತ್ಯಂತರಗಳು ಉಂಟಾಗುತ್ತವೆ. ಆದ್ದರಿಂದ ಮೂರನೆಯ ಸ್ಥಿತಿಯಾದ ಅನಿಲ ಉಳಿದೆರಡು ಸ್ಥಿತಿಗಳಿಗಿಂತ ಅಧಿಕ ಉಷ್ಣವನ್ನು ಒಳಗೊಂಡಿರುವುದು. ಈ ಅನಿಲಕ್ಕೆ ಇನ್ನಷ್ಟು ಕಾವನ್ನು, ಸಾಧಾರಣವಾಗಿ ಭೂಮಿಯಲ್ಲಿ ಉಂಟುಮಾಡಲಾಗದಷ್ಟು ಅಧಿಕೋಷ್ಣವನ್ನು ಊಡಿದರೆ ಅದರ ಬಿಡಿ ಪರಮಾಣುಗಳು ತಮ್ಮ ಎಲೆಕ್ಟ್ರಾನ್‌ಮುಸುಕುಗಳನ್ನು ಕಳೆದುಕೊಂಡು ಬೆತ್ತಲೆ ಪ್ರೋಟಾನ್ ನ್ಯೂಟ್ರಾನ್ ಕಣಗಳ ಮುದ್ದೆಗಳಾಗಿ ನಿರಂತರ ಕ್ಷೋಭೆಯಲ್ಲಿರುವ ಅಂತರಪಿಶಾಚಿಗಳಾಗುವುವು. ಇದು ವಸ್ತುವಿನ ಚತುರ್ಥ ಸ್ಥಿತಿ – ಪ್ಲಾಸ್ಮಾರಾಶಿ ನಕ್ಷತ್ರಗಳಲ್ಲಿ ವಸ್ತು ಈ ಸ್ಥಿತಿಯಲ್ಲಿರುವುದು.

ಹಾಗಾದರೆ ನಕ್ಷತ್ರಕ್ಕೆ ಉಷ್ಣ ಪೂರೈಕೆ ಮಾಡುವ ಕುಲುಮೆ ಯಾವುದು? ಇದರ ಉತ್ತರವನ್ನು ತಿಳಿಯಲು ನಕ್ಷತ್ರದ ಉಗಮ ಹೇಗಾಗುತ್ತದೆ ಎಂಬುದನ್ನು ತಿಳಿಯಬೇಕು. ವಿಶ್ವದಲ್ಲಿ ಬೇಕಾಬಿಟ್ಟಿ ಹರಡಿಹೋಗಿರುವ ಮೇಘಗಳು ವಿಪುಲ ಸಂಖ್ಯೆಗಳಲ್ಲಿವೆ. ಇವುಗಳಿಗೆ ನೀಹಾರಿಕೆಗಳೆಂದು (nebula) ಹೆಸರು. ನಕ್ಷತ್ರಗಳ ತವರುಗಳಿವು. ಇಂಥ ಒಂದು ನೀಹಾರಿಕೆಯಲ್ಲಿ ವಿಭಿನ್ನ ಗಾತ್ರಗಳ ಅಸಂಖ್ಯ ನಕ್ಷತ್ರಗಳು ಹುಟ್ಟುತ್ತವೆ – ಮಳೆ ಮೋಡದಲ್ಲಿ ನೀರ ಹನಿಗಳು ಮೈದಳೆಯುವಂತೆ. ಅವೆಲ್ಲವೂ ಹೈಡ್ರೊಜನ್ ಅನಿಲದ ಉಂಡೆಗಳು. ಪ್ರತಿಯೊಂದು ನಕ್ಷತ್ರಕ್ಕೂ ಅದರಲ್ಲಿ ಸಂಚಿತವಾಗಿರುವ ದ್ರವ್ಯವನ್ನು ಅವಲಂಬಿಸಿ ನಿರ್ದಿಷ್ಟ ರಾಶಿ ಅಂದರೆ ಭಾರ ಇರುವುದು. ಇದರ ಪರಿಣಾಮವಾಗಿ ನಕ್ಷತ್ರ ಇತರ ಎಲ್ಲ ಪದಾರ್ಥಗಳನ್ನೂ ತನ್ನ ಕೇಂದ್ರದೆಡೆಗೆ ಆಕರ್ಷಿಸುವುದು. ಇದೇ ಗುರುತ್ವ ಬಲ. ನಕ್ಷತ್ರದ ಸಕಲ ಕಣಗಳೂ ಸ್ವತಃ ಅದೇ ನಕ್ಷತ್ರದ ಗುರುತ್ವ ಬಲದಿಂದ ಕೇಂದ್ರದೆಡೆಗೆ ಸೆಳೆಯಲ್ಪಡುತ್ತವೆ. ಆದ್ದರಿಂದ ಗುರುತ್ವಬಲ ನಕ್ಷತ್ರವನ್ನು ಒಳ ಕುಸಿಯುವಂತ ಅಥವಾ ಸಂಕೋಚಿಸುವಂತೆ ಮಾಡುವುದೆಂದಾಯಿತು. ಅನಿಲರಾಶಿಯನ್ನು ಸಂಕೋಚಿಸಿದಾಗ ಅದರ ಒತ್ತಡ ಹಾಗೂ ಉಷ್ಣತೆ ಏರುವುವೆಂದು ನಮಗೆ ತಿಳಿದಿದೆ. ನಕ್ಷತ್ರದಲ್ಲಾದರೂ ಹೀಗೆಯೇ ಆಗುವುದು. ಏರುತ್ತಿರುವ ಉಷ್ಣತೆ ಒಂದು ಮಿತಿಯನ್ನು ದಾಟಿದಾಗ ನಕ್ಷತ್ರಗರ್ಭದಲ್ಲಿ ಅಗ್ನಿ ಪ್ರಜ್ವಲಿಸುತತದೆ. ಅದೆಂಥ ಅಗ್ನಿ? ಹೈಡ್ರೊಜನ್ ಪರಮಾಣುಗಳನ್ನು ಸುಲಿದು ಅವುಗಳ ಬೀಜಗಳನ್ನು ಒಂದುಗೂಡಿಸಿ ಹೀಲಿಯಮ್ ಪರಮಾಣುಗಳಾಗಿ ದ್ರವ್ಯಾಂತರಣಗೊಳಿಸುವ (transmutation) ಪ್ರಳಯಾಗ್ನಿ. ರೂಢಿಯ ಮಾತಿನಲ್ಲಿ ಹೇಳುವುದಾದರೆ ಅಲ್ಲಿ ಹೈಡ್ರೋಜನ್ ಬಾಂಬುಗಳ ಮಾಲೆಯೇ ಅಸ್ಫೋಟಿಸುತ್ತಿರುವುದು. ನಕ್ಷತ್ರ ಗರ್ಭದಲ್ಲಿಯ ಕುಲುಮೆಗೆ ಇಂಧನ ಹೈಡ್ರೊಜನ್. ಅದರಿಂದ ಹೊರಬರುವ ಶಕ್ತಿಯ ವಿವಿಧ ರೂಪಗಳು ಬೆಳಕು, ಉಷ್ಣ ಮುಂತಾದ ವಿದ್ಯುತ್ಕಾಂತ ವಿಕರಣಗಳು: ಉಳಿಯುವ ಬೂದಿ ಹೀಲಿಯಮ್, ಇದು ಹೈಡ್ರೊಜನ್ನಿಗಿಂತ ಭಾರತರ ಧಾತು.

ನಕ್ಷತ್ರದಲ್ಲಿ ಈ ತೆರನಾಗಿ ಉಷ್ಣೋತ್ಪತ್ತಿ ಆದೊಡನೆ ಆ ಉಷ್ಣ ತನ್ನ ಪ್ರವೃತ್ತಿಗೆ ಅನುಗುಣವಾಗಿ ನಕ್ಷತ್ರದಿಂದ ಹೊರಸಿಡಿದು ಸಾಗಲು ಧಾವಿಸುತ್ತದೆ. ಇದರಿಂದಾಗಿ ನಕ್ಷತ್ರ ಹಿಗ್ಗಲು ಅಥವಾ ವ್ಯಾಕೋಚಿಸಲು ತೊಡಗುವುದು. ಹೀಗೆ ಉಷ್ಣಶಕ್ತಿ ನಕ್ಷತ್ರದ ಮೇಲೆ ವ್ಯಾಕೋಚನ ಬಲಗಳನ್ನು ಪ್ರಯೋಗಿಸುತ್ತದೆ. ಅಲ್ಲಿಗೆ ನಕ್ಷತ್ರ ಏಕಕಾಲದಲ್ಲಿ ಎರಡು ವಿರುದ್ಧ ಬಲಗಳಿಗೆ – ರಾಶಿಯ ಪರಿಣಾಮವಾದ ಸಂಕೋಚನಬಲ (ಗುರುತ್ವಬಲ) ಮತ್ತು ಉಷ್ಣದ ಪರಿಣಾಮವಾದ ವ್ಯಾಕೋಚನ ಬಲ – ಈಡಾಗುವುದೆಂದಾಯಿತು: ಎರಡು ಎದುರಾಳಿ ತಂಡಗಳ ನಡುವಿನ ಹಗ್ಗ ಜಗ್ಗಾಟದಂತೆ ಯಾವುದೋ ಒಂದು ಹಂತದಲ್ಲಿ (ಮುಖ್ಯವಾಗಿ ಇದು ನಕ್ಷತ್ರ ಜನ್ಮತಃ ಪಡೆದುಕೊಂಡು ಬಂದಿರುವ ಹೈಡ್ರೊಜನ್ ಪಾಥೇಯವನ್ನು ಅವಲಂಬಿಸಿದೆ) ಇವೆರಡು ಬಲಗಳ ನಡುವೆ ಸಮತೋಲ ಏರ್ಪಡುತ್ತದೆ. ಈ ಸ್ಥಿತಿಗೆ ಗತೀಯ ಸಮತೋಲವೆಂದು ಹೆಸರು. ಸೂರ್ಯನನ್ನೂ ಒಳಗೊಂಡಂತೆ ಸಮಸ್ತ ನಕ್ಷತ್ರಗಳೂ ಗತೀಯ ಸಮತೋಲದಲ್ಲಿರುವ ಪ್ಲಾಸ್ಮಾರಾಶಿಗಳು. ಈ ಸ್ಥಿತಿ ಏನೂ ಶಾಶ್ವತವಲ್ಲ. ಉದಾಹರಣೆಗೆ ಈಗ ಸುಮಾರು 450 ಕೋಟಿ ವರ್ಷ ವಯಸ್ಸಾಗಿರುವ ಸೂರ್ಯನ ಉಗ್ರಾಣದಲ್ಲಿ ಇನ್ನೂ 1100 ಕೋಟಿ ವರ್ಷಗಳಿಗೆ ಸಾಕಾಗುವಷ್ಟು ಹೈಡ್ರೊಜನ್ ಇಂಧನದ ದಾಸ್ತಾನುಂಟು. ಈ “ಎಣ್ಣೆ” ತೀರಿದ ಬಳಿಕ ಆ ಹಣತೆಯ ಪಾಡೇನು? ಆಗ ನಕ್ಷತ್ರ ತೀವ್ರವಾದ ಶಕ್ತಿ ಬಿಕ್ಕಟ್ಟನ್ನು ಎದುರಿಸಬೇಕಾಗುವುದು. ಇದನ್ನು ಪರಿಹರಿಸುವ ಮಾರ್ಗ ಆಯಾ ನಕ್ಷತ್ರದ ಗಾತ್ರ, ಉಷ್ಣತೆ ಮೊದಲಾದವನ್ನು ಅವಲಂಬಿಸಿದೆ. ಅಂತಿಮ ಯಾತ್ರೆಗೆ ಸಿದ್ಧವಾಗುವ ಇಂಥ ಒಂದು ನಕ್ಷತ್ರ ತೀವ್ರವಾಗಿ ಕುಗ್ಗಿ ಕುಸಿದು ಆ ಕಾರಣದಿಂದ ಅದರ ಪ್ರಕಾಶ, ಉಷ್ಣತೆ ಹಾಗೂ ಒತ್ತಡ ಅತಿಯಾಗಿ ಏರಿ ಅವನ್ನು ತಾಳಿಕೊಳ್ಳಲಾಗದೆ ಹಠಾತ್ ಮಹಾಸ್ಫೋಟನೆಗೆ ಬಲಿಯಾಗಬಹುದು. ಆಕಾಶದ ತೋರ್ಕೆ ಸ್ಥಿರ ನಕ್ಷತ್ರ ಚಿತ್ರದ ಮುನ್ನೆಲೆಯಲ್ಲಿ ಇದು ಅಲ್ಪಕಾಲ ಉಜ್ಜ್ವಲ ಪ್ರಕಾಶ ಬೀರಿ ಮಾಯವಾಗುವುದು ಸಾಧ್ಯ. ಹೊಸತಾಗಿ ಕಾಣಿಸಿಕೊಂಡ ಈ ನಕ್ಷತ್ರಕ್ಕೆ ಪ್ರಾಚೀನರು ನೋವಾ ಅಂದರೆ ನೂತನ ಅಥವಾ ನವ್ಯ ನಕ್ಷತ್ರವೆಂದು ನಾಮಕರಿಸಿದರು. ಉಲ್ಕೆ, ಧೂಮಕೇತುಗಳ ತೆರದಲ್ಲಿಯೇ ನೋವಾಗಳು ಕೂಡ ಆಕಾಶದಲ್ಲಿ ಅನುನಿತ್ಯದ ಘಟನೆಗಳು ಎಂದು ವಿಜ್ಞಾನದ ಗಣನೆ ಹಾಗೂ ಸೂಕ್ಷ್ಮ ವೀಕ್ಷಣೆಗಳಿಂದ ತಿಳಿದಿದೆ. ಆದರೆ ಆಕಾಶದ ಮೇರೆ ಅರಿಯದ ಅಗಾಧ ಆಳಗಳಲ್ಲಿ ಇವು ಸಂಭವಿಸುವುದರಿಂದ ಸ್ಥಳೀಯವಾಗಿ ಇವುಗಳ ಪ್ರಕಾಶ ಎಷ್ಟೇ ಉಜ್ಜ್ವಲ ನೋವಾಗಳು ಮಾತ್ರ ಕಾಣಿಸಿಕೊಳ್ಳಬಹುದು. ಅಷ್ಟೆ. 20ನೆಯ ಶತಮಾನದಲ್ಲಿ 1960ರ ತನಕ ಆರು ನೋವಾಗಳನ್ನು ಮಾತ್ರ ನೋಡಿ ಗುರುತಿಸಲಾಗಿದೆ: 1901, 1918, 1925, 1934, 1942 ಮತ್ತು 1957ರಲ್ಲಿ. ಎಡೆಬಿಡದೆ ಬಾನನ್ನು ನೋಡುತ್ತ ಅಲ್ಲಿಯ ಎಲ್ಲ ಸೂಕ್ಷ್ಮ ವಿದ್ಯಮಾನಗಳನ್ನು ಗಮನಿಸುತ್ತಿರುವ ಖಗೋಳವೀಕ್ಷಕನಿಗೆ ಧೂಮಕೇತುಗಳೋಪಾದಿಯಲ್ಲಿ ಆದರೆ ಇನ್ನೂ ವಿರಳವಾಗಿ ದೊರೆಯುವ ಬೋನಸುಗಳಿವು.

ಸೂಪರ್ನೊವಾಗಳು, ಹೆಸರೇ ಸೂಚಿಸುವಂತೆ, ನೋವಾಗಳಿಗಿಂತ ಎಲ್ಲ ಗುಣಗಳಲ್ಲಿಯೂ ಮಹಾಗಳೇ. ಮಹಾನಕ್ಷತ್ರವೊಂದು ತನ್ನ ಶ್ಮಶಾನ ಯಾತ್ರೆಯ ವೇಳೆ ತೀವ್ರ ಆಂತರಿಕ ಕ್ಷೋಭೆಗೆ ಅಥವಾ ಹರಾಕಿರಿಗೆ ತುತ್ತಾಗಿ ಸಿಡಿದಾಗ ಆ ಕಾಂತಿ ಕೋಟಿ ಸೂರ್ಯಪ್ರಭೆಗಿಂತ ಎಷ್ಟೊ ಪಟ್ಟು ಮಿಗಿಲಾಗಿ ಹಲವಾರು ತಿಂಗಳುಗಳ ಕಾಲ ಬೆಳಕು ಕಾವು ಮುಂತಾದ ವಿಕಿರಣಗಳ ಹೊನಲನ್ನೇ ಹರಿಸುತ್ತಿರುವುದು. ಇದು ಅತ್ಯುಜ್ಜ್ವಲವಾಗಿರುವ ಕ್ಷಣದಲ್ಲಿ ಉತ್ಸರ್ಜಿಸುವ ಶಕ್ತಿ ಆ ಬ್ರಹ್ಮಾಂಡದ ಸಮಸ್ತ ನಕ್ಷತ್ರಗಳೂ ಉತ್ಸರ್ಜಿಸುವ ಒಟ್ಟು ಶಕ್ತಿಗೆ ಸಮವಾದೀತು!

ಸೂಪರ್ನೋವಾಗಳು ಅದ್ಭುತ. ಆಕರ್ಷಕ ಆಕಾಶಕಾಯಗಳು. ಅವು ಅತ್ಯಂತ ಪ್ರೇಕ್ಷಣೀಯ ನಾಕ್ಷತ್ರಿಕ ಘಟನೆಗಳಾಗಿರುವುದೊಂದೇ ಇದರ ಕಾರಣವಲ್ಲ. ಈ ತೆರನಾದ ಆಸ್ಫೋಟನೆಗಳ ಅವಶೇಷಗಳು ಮತ್ತು ಹೊಮ್ಮಿಕೆಗಳು ಇಂದು ಭೌತವಿಜ್ಞಾನ ತಿಳಿದಿರುವ ವಸ್ತುಗಳ ಪೈಕಿ ತೀರ ಅಸಾಧಾರಣವಾದವು. ಸೂಪರ್ನೋವಾಸ್ಫೋಟನೆಗಳ ಫಲವಾಗಿ ಪಲ್ಸಾರುಗಳು, ಕೃಷ್ಣವಿವರಗಳು (Black Holes). ಉನ್ನತಶಕ್ತಿ ವಿಶ್ವಕಿರಣಗಳು, ಭಾರಧಾತುಗಳು, ಕೆಲ ಬಗೆಯ ವ್ಯಾಕೋಚಿಸುವ ನೀಹಾರಿಗಳು, ವಿಸ್ತೃತ ರೇಡಿಯೊ ಉತ್ಸರ್ಜಕ ಆಕರಗಳು. ಗಂಟೆಗೆ 16.09.000 ಕಿಲೊಮೀಟರ್ ವರೆಗೂ ಏರುವ ವೇಗದಿಂದ ಆಕಾಶಗಂಗೆಯ ಮೂಲಕ ಧಾವಿಸುವ ಓಡುಕುಳಿ ನಕ್ಷತ್ರಗಳು, ಸಾಧ್ಯತಃ ಗುರುತ್ವಾತ್ಮಕ ವಿಕಿರಣ ಮತ್ತು ಸಂಭಾವ್ಯತಃ ಬ್ರಹ್ಮಾಂಡದಲ್ಲಿಯ ಹೆಚ್ಚಿನ ಎಕ್ಸ್‌ಕಿರಣಾಕರಗಳು ತಲೆದೋರುವುವೆಂದು ಭಾವಿಸಲಾಗಿದೆ.

ಇತರ ಬ್ರಹ್ಮಾಂಡಗಳಲ್ಲಿಯ ಸೂಪರ್ನೋವಾಸ್ಫೊಟನೆಗಳನ್ನು ವೀಕ್ಷಿಸಿ ಈ ತೆರನಾದ ಸರ್ವನಾಶಾತ್ಮಕ ಅಸ್ಫೋಟನೆಗಳು ನೋವಾಗಳಷ್ಟು ಅಲ್ಲದಿದ್ದರೂ ಸಾಪೇಕ್ಷವಾಗಿ ಪದೇ ಪದೇ ಸಂಭವಿಸುವುವು ಎಂಬ ಅಂಶ ಈಗ ತಿಳಿದಿದೆ. ಉದಾಹರಣೆಗೆ ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯಂಥದರಲ್ಲಿ ಪ್ರತಿ ಶತಮಾನಕ್ಕೆ ಎರಡರಂತೆ ಬ್ರಹ್ಮಾಂಡದ ಕೇಂದ್ರೀಯ ಸಮತಲದಲ್ಲಿ ಇಂಥ ಆಸ್ಫೋಟನೆಗಳು ಸಂಭವಿಸುವ ಪ್ರವೃತ್ತಿ ಜಾಸ್ತಿ ಕಂಡುಬಂದಿದೆ. ಆದರೆ ಆಕಾಶಗಂಗೆಯ ಕೇಂದ್ರೀಯ ಸಮತಲದಲ್ಲಿ ದೃಷ್ಟಿ ಮಬ್ಬಾಗಿಸುವ ಧೂಳು ದಟ್ಟಯಿಸಿರುವುದರಿಂದ ಅಲ್ಲಿ ಸಂಭವಿಸುವ ಸೂಪರ್ನೋವಾಗಳನ್ನು ನೋಡುವುದು ನಮಗೆ ಬಲು ಕಷ್ಟ. ಹೀಗಾಗಿ ದಾಖಲೆ ಆಗಿರುವ ಇತಿಹಾಸದ ಹರವಿನಲ್ಲಿ ಹೆಚ್ಚಿನ ಸೂಪರ್ನೋವಾಗಳೇನೂ ಆಕಾಶಗಂಗೆಯಲ್ಲಿ ಕಂಡದ್ದು ವರದಿ ಆಗಿಲ್ಲ. ದಾಖಲೆ ಪ್ರಕಾರ ಅಲ್ಲಿ ಕಂಡ ತೀರ ಈಚೆಗಿನದು ಕ್ರಿ.ಶ. 1604ರದು. ಇದು ಮಾನವ (ಗೆಲಿಲಿಯೊ) ಮೊತ್ತಮೊದಲ ಬಾರಿಗೆ ತನ್ನ ದೂರದರ್ಶಕವನ್ನು ಗಗನದತ್ತ ಗುರಿಹಿಡಿದದ್ದಕ್ಕಿಂತ ಐದು ವರ್ಷಗಳಷ್ಟು ಹಿಂದೆ. ಹೀಗೆ ಸಾಕ್ಷಾತ್ ಆಕಾಶಗಂಗೆಯಲ್ಲಿ ಸಂಭವಿಸಿದ ಸೂಪರ್ನೋವಾಸ್ಫೋಟನೆಗಳನ್ನು ಕುರಿತಂತೆ ಕೂಡ ದೂರದರ್ಶಕ ವೀಕ್ಷಣೆಗಳು ಅಲಭ್ಯವಾಗಿರುವುದರಿಂದ ಐತಿಹಾಸಿಕ ಉಲ್ಲೇಖಗಳನ್ನು ತಪಾಸಣೆ ಮಾಡುವುದೊಂದೇ ಸದ್ಯ ಉಳಿದಿರುವ ಹಾದಿ.

ಈ ತೆರನಾಗಿ ಕೂಲಂಕಷಾಧ್ಯಯನಕ್ಕೆ ಒಳಪಟ್ಟ ಪ್ರಾಚೀನ ದಾಖಲೆಗಳು ಗ್ರೀಸ್‌, ಚೀತನ, ಅರೇಬಿಯ, ಈಜಿಪ್ತ್ ಮತ್ತು ಯೂರೊಪಿನ ಕೆಲವು ದೇಶಗಳಿಗೆ ಸಂಬಂಧಿಸಿದಂಥವು ಮಾತ್ರ ಈ ರಾಷ್ಟ್ರಗಳು ನಾಗರಿಕತೆಯ ಶಿಖರದಲ್ಲಿದ್ದ ದಿನಗಳಂದೇ ಅಥವಾ ಇನ್ನೂ ಹಿಂದೆಯೇ ಭಾರತದ ನಾಗರಿಕತೆಯೂ ಉನ್ನತ ಮಟ್ಟದಲ್ಲಿತ್ತು. ಭಾರತೀಯ ಖಗೋಳವಿಜ್ಞಾನ ಸಾಕಷ್ಟು ಪ್ರಗತಿಯನ್ನು ಹೊಂದಿತ್ತು ಕೂಡ. ಆದರೆ ಭಾರತೀಯ ಐತಿಹಾಸಿಕ ದಾಖಲೆಗಳನ್ನು ಸೂಪರ್ನೋವಾ ನಕ್ಷತ್ರಗಳ ವಿವರಗಳಿಗಾಗಿ ಈತನಕ ಶೋಧನೆ (1990) ಮಾಡಿರುವಂತೆ ತೋರುವುದಿಲ್ಲ. ಇಲ್ಲೊಂದು ನವಕ್ಷೇತ್ರ ಸಂಶೋಧಕರಿಗೆ ಪಂಥಾಹ್ವಾನವೀಯುತ್ತಿದೆ.

ಲಭ್ಯ ಐತಿಹಾಸಿಕ ಸೂಪರ್ನೋವಾಗಳ ಸಂಖ್ಯೆ ಏಳು. ಅವನ್ನು ಚೀನ, ಜಪಾನ್, ಕೊರಿಯಾ ದೇಶಗಳಲ್ಲಿ ದೊರೆತ ದಾಖಲೆಗಳಿಂದ ಪತ್ತೆ ಮಾಡಿ ಈಜಿಪ್ತ್, ಗ್ರೀಸ್, ಅರೇಬಿಯಾ ಯೂರೊಪ್ ಮೊದಲಾದೆಡೆಗಳಲ್ಲಿ ದೊರೆತ ತತ್ಸಂಬಂಧ ವರದಿಗಳೊಡನೆ ಹೊಂದಿಸಿ ಹೆಕ್ಕಲಾಗಿದೆ. ಹೀಗೆ ನಿರ್ಧರಿತವಾದ ಖಗೋಳೀಯ ಸ್ಥಾನಗಳನ್ನು ಆಧುನಿಕ ವಿಜ್ಞಾನದ ಸೂಕ್ಷ್ಮ ವೀಕ್ಷಣೆ ಹಾಗೂ ವಿಶ್ಲೇಷಣೆಗಳಿಗೆ ಒಳಪಡಿಸಿ ಅಲ್ಲಿ ಅವುಗಳ ಸೂಪರ್ನೋವಾ ಅವಶೇಷಗಳನ್ನು ಪತ್ತೆಮಾಡಲಾಗಿದೆ. ಈ ಏಳು ಐತಿಹಾಸಿಕ ಸೂಪರ್ನೋವಾಗಳ ಕೆಲವು ವಿವರಗಳು ಹೀಗಿವೆ: ಕ್ರಿಸ್ತಶಕ 185ರಲ್ಲಿ ಕಾಣಿಸಿಕೊಂಡದ್ದು ಸೂಪರ್ನೋವಾ ಸೆಂಟಾರಸ್ (ಕಿನ್ನರ) ಪುಂಜದಲ್ಲಿತ್ತು. ಅದು ಇಪ್ಪತ್ತು ತಿಂಗಳ ಕಾಲ ಅತ್ಯುಜ್ಜ್ವಲವಾಗಿತ್ತು. ಮುಂದೆ ಕ್ರಿಸ್ತಶಕ 393ರಲ್ಲಿ ಕಾಣಿಸಿಕೊಂಡದ್ದು ವೃಶ್ಚಿಕ ರಾಶಿಯಲ್ಲಿ ಎಂಟು ತಿಂಗಳ ಕಾಲವೂ 1006ರಲ್ಲಿಯದು ಲೂಪಸ್ (ವೃಕ) ಪುಂಜದಲ್ಲಿಯದು ಆರು ತಿಂಗಳ ಕಾಲವೂ 1054ರಲ್ಲಿಯದು ವೃಷಭ ರಾಶಿಯಲ್ಲಿ ಇಪ್ಪತ್ತೆರಡು ತಿಂಗಳ ಕಾಲವೂ 1181ರಲ್ಲಿಯದು ಕೆಸೀಯೊಪೀಯ (ಕುಂತೀ) ಪುಂಜದಲ್ಲಿಯದು ಆರು ತಿಂಗಳ ಕಾಲವೂ 1572ರಲ್ಲಿಯದು ಕೆಸೀಯೊಪೀಯ ಪುಂಜದಲ್ಲಿ ಹದಿನೆಂಟು ತಿಂಗಳ ಕಾಲವೂ 1604ರದು ಆಫೀಯೂಕಸ್ (ಉರಗಧರ) ಪುಂಜದಲ್ಲಿ ಹನ್ನೆರಡು ತಿಂಗಳ ಕಾಲವೂ ಉಜ್ಜ್ವಲವಾಗಿ ಪ್ರಕಾಶಿಸುತ್ತಿದ್ದುವು. ಕ್ರಿಸ್ತಶಕ 1054ರಲ್ಲಿ ವೃಷಭ ರಾಶಿಯಲ್ಲಿ ಗೋಚರವಾದ ಸೂಪರ್ನೋವಾ ಕ್ರ್ಯಾಬ್ ನೀಹಾರಿಕೆಯಲ್ಲಿದೆ. ದೂರದರ್ಶಕದಿಂದ ಈ ನೀಹಾರಿಕೆಯನ್ನು ನೋಡಿದರೆ ಏಡಿ ನೀಹಾರಿಕೆ ಅಥವಾ ಕ್ರ್ಯಾಬ್ ನೆಬ್ಯುಲ ಎಂಬ ಹೆಸರು. ಸೂಪರ್ನೋವಾವೊಂದರ ಭಗ್ನಾವಶೇಷಕ್ಕೆ ಇದು ಉತ್ಕೃಷ್ಟ ನಿದರ್ಶನ. 1987ರ ಆದಿಯಲ್ಲಿ ಗೋಚರಿಸಿದ ಸೂಪರ್ನೋವಾದ (SN 1987A ಎಂದು ಇದರ ತಾಂತ್ರಿಕ ನಾಮ ) ಬಗ್ಗೆ ಇದೇ ಲೇಖಕನ ‘ಸೂಪರ್ನೋವಾ’ ಗ್ರಂಥದಲ್ಲಿ ವಿವರಗಳು ಲಭ್ಯವಿದೆ.

ಆಧುನಿಕ ತಂತ್ರವಿದ್ಯೆಯ ನೆರವಿನಿಂದ ಕಳೆದ ತೊಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 400 ಸೂಪರ್ನೋವಾಗಳನ್ನು ಗುರುತಿಸಲಾಗಿದೆ. ವಿಶ್ವದ ಗರಡಿ ಮನೆಯಲ್ಲಿ ಉರುಳುವ ಕುಸ್ತಿಪಟುಗಳು ಇನ್ನೆಷ್ಟು ಮಂದಿ ಇರುವರೋ! ಹೊಸ ದೃಷ್ಟಿ ಹೊಸ ಜ್ಞಾನ ಏನೇನನ್ನೆಲ್ಲ ಹೊರಗೆಡಹಲಿವೆಯೋ! ಕಾಲವೊಂದೇ ಆರುಹಬಲ್ಲದು, ಅಷ್ಟೆ.

(1990)