ಕೃಷ್ಣವಿವರ: ಪರಮ ಸುಂದರ ಸೃಷ್ಟಿ

“ನಿಸರ್ಗದ ಅಧ್ಯಯನ ಮಾಡಲು ವಿಜ್ಞಾನಿಗೆ ಪ್ರೇರಣೆ ಹೇಗೆ ಬರುತ್ತದೆ?”

“ಮೂಲತಃ ಆತ ಸೌಂದರ್ಯಾರಾಧಕ. ಇನ್ನು ನಿಸರ್ಗ? ಅದು ಸೌಂದರ್ಯದ ಖನಿ. ಸೌಂದರ್ಯಾನುಶೀಲನೆಯೇ ಆತನ ಪ್ರೇರಕ ಬಲ.”

“ಸೌಂದರ್ಯದ ವ್ಯಾಖ್ಯೆ?”

“ಭಾಗಗಳ ಸುಸಂಗತ ಮೇಳನದಿಂದ ಲಭಿಸುವ ಮತ್ತು ಪರಿಶುದ್ಧ ಪ್ರತಿಭೆಗೆ ಗ್ರಾಹ್ಯವಾಗುವ ದಿವ್ಯ ಗಹನ ಅನುಭವವದು. ಉದಾಹರಣೆಗೆ ಚಂದ್ರರಹಿತ ನಿರಭ್ರ ರಾತ್ರಿಯ ಗಗನದಲ್ಲಿ ಪ್ರಕಟವಾಗುವ ನಕ್ಷತ್ರವೈಭವ.”

“ಹಾಗಾದರೆ ನಿಸರ್ಗದಲ್ಲಿ ಪರಮಸುಂದರ ನಿರ್ಮಿತಿ ಯಾವುದು? ಪರಮಾಣು. ನಕ್ಷತ್ರ, ಬ್ರಹ್ಮಾಂಡ, ನೀಹಾರಿಕೆ”

“ಕೃಷ್ಣವಿವರಗಳು – ಸಂದೇಹಾತೀತವಾಗಿ!”

“ಆದರೆ ವೀಕ್ಷಣೆ ಅವುಗಳ ಅಸ್ತಿತ್ವವನ್ನು ಇನ್ನೂ ಸ್ಥಿರೀಕರಿಸಿಲ್ಲ? (1990ರ ದಶಕ)

ತುಸು ಉತ್ತೇಜಿತರಾಗಿ ಖಚಿತವಾಣಿಯಲ್ಲಿ ನುಡಿದರು. “ವೀಕ್ಷಣತಂತ್ರ ಮತ್ತು ಮಾಪನೋಪಕರಣ ಇನ್ನಷ್ಟು ಪರಿಷ್ಕರಣಗೊಂಡಂತೆ ಅವುಗಳ ಪತ್ತೆ ಆಗಿಯೇ ಆಗುತ್ತದೆ. ಏಕೆಂದರೆ ಕೃಷ್ಣವಿವರದ ತಳ ಪರಿಕಲ್ಪನೆ ಬಲು ಸರಳ ಮತ್ತು ಅಷ್ಟೇ ನಿರ್ದಿಷ್ಟ ವಿಶ್ವದ ವಿಶಾಲ ವ್ಯಾಪ್ತಿಯಲ್ಲಿ ಅದರ ಬೆಳೆ ಹುಲುಸೆಂದು ಭಾವಿಸಲು ಸಾಕಷ್ಟು ಪರೋಕ್ಷ ಪುರಾವೆ ಉಂಟು.”

“ಅಂದ ಮೇಲೆ ನೀವು ನೊಬೆಲ್ ಪ್ರಶಸ್ತಿ ಸ್ವೀಕರಿಸಿದಾಗ (1983) ಮಾಡಿದ ಭಾಷಣದಲ್ಲಿ ಉಲ್ಲೇಖಿಸಿರುವ ಸೂಕ್ತಿಗಳಿಗೆ ಕೃಷ್ಣವಿವರ ಪರಮೋತ್ಕೃಷ್ಟ ನಿದರ್ಶನವಾಗಲಿದೆ: ಋತದ ಪರಿಮುದ್ರೆ ಸರಳತೆ. ಮತ್ತು ಸತ್ಯದ ಪರಿವೇಷ ಸೌಂದರ್ಯ!” (The simple is the seal of the true, and Beauty is the splendour of truth).

ಅವರ ಪ್ರಶಾಂತ ವದನದಲ್ಲಿ “ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ!” (ಬೇಂದ್ರೆ)

ಈ ಮೇಲಿನ ಮಾತುಕತೆ ನಡೆದದ್ದು ಸುಬ್ರಹ್ಮಣ್ಯನ್ ಚಂದ್ರಶೇಖರ್ (1910 – 95) ಮತ್ತು ನನ್ನ (1926) ನಡುವೆ – ಅವರ ನೆಲ ಶಿಕಾಗೋ ವಿಶ್ವವಿದ್ಯಾಲಯದಲ್ಲಿ 1995 ಜೂನ್ 22 ಮತ್ತು 23ರಂದು.

ಅದೇ ಆಗಸ್ಟ್ 22ರಂದು ಅವರು ‘ಕೃಷ್ಣವಿವರ’ವಾದರು. ಈ ಯುಗ ಪ್ರವರ್ತಕ ಖಭೌತವಿಜ್ಞಾನಿಯ (astrophysicist) ಸ್ಮರಣಾರ್ಥ ಅಮೆರಿಕದ ನಾಸಾ ಸಂಸ್ಥೆ ‘ಚಂದ್ರ’ ಹೆಸರಿನ ಗಗನ ನೇತ್ರವನ್ನು (ಕೃತಕ ಉಪಗ್ರಹ) ಕಕ್ಷೆಗೆ ಉಡಾಯಿಸಿತು. (23 ಜುಲೈ 1999). ಆಗಲೇ ಈ ನೇತ್ರ ಕೃಷ್ಣವಿವರಗಳ ಅಸ್ತಿತ್ವಕ್ಕೆ ಪರೋಕ್ಷ ಪುರಾವೆ ಒದಗಿಸಿ ಚಂದ್ರಶೇಖರರ ಭವಿಷ್ಯವಾಣಿಯನ್ನು ಸ್ಥಿರೀಕರಿಸಿತು. ಕವಿ ಜಾನ್ ಕೀಟ್ಸ್ (1795 – 1821) ಎಂದೋ ಉದ್ಗರಿಸಿದ್ದಾರೆ. “ಕಲ್ಪನೆ ಯಾವುದನ್ನು ಸೌಂದರ್ಯ ಎಂದು ಎತ್ತಿ ಹಿಡಿಯುವುದೋ ಅದು ಸತ್ಯವೇ ಆಗಿರಬೇಕು – ಅದು ಹಿಂದೆ ಇರಲಿಲ್ಲವೋ ಎಂಬುದು ಅಪ್ರಸ್ತುತ.”

ವಿಮೋಚನೆ ವೇಗ

ಎರಡು ಆಕಾಶಕಾಯಗಳ ನಡುವೆ ವರ್ತಿಸುವ ಗುರುತ್ವಾಕರ್ಷಣ ಬಲವನ್ನು ಗಣಿಸಲು ಐಸಾಕ್ ನ್ಯೂಟನ್ (1642 – 1727) ಒಂದು ಗಣಿತ ಸೂತ್ರ ನೀಡಿದ್ದಾರೆ. (1666): GMm ÷ R2 ಇಲ್ಲಿ G ವಿಶ್ವಗುರುತ್ವಾಕರ್ಷಣ ಸ್ಥಿರಾಂಕ. ಇದರ ಬೆಲೆಯನ್ನು ಗಣಿಸಲಾಗಿದೆ. M ಮತ್ತು m ಆ ಕಾಯಗಳ ರಾಶಿಗಳು (masses). R ಅವುಗಳ ನಡುವಿನ ಅಂತರ.

ಯಾವುದೇ ಆಕಾಶಕಾಯದ ಸಮಸ್ತ ಚಲನ ಘಟಕಗಳೂ ಅದರ ಗುರುತ್ವಾಕರ್ಷಣ ಕ್ಷೇತ್ರದೊಳಗೆ ಬಂಧಿತವಾಗಿರುತ್ತದೆ. ಉದಾಹರಣೆ ಚಂದ್ರ ಭೂಗುರುತ್ವಾಕರ್ಷಣ ಕ್ಷೇತ್ರದೊಳಗಿದೆ. ಎಂದೇ ಇದು ಭೂಮಿಯನ್ನು ಪರಿಭ್ರಮಿಸುವುದಾಗಿದೆ. ಮೇಲೆಸೆದ ಕಲ್ಲು. ಗುಂಡು ಬಡಿದ ಹಕ್ಕಿ, ಆಯ ತಪ್ಪಿದ ವಿಮಾನ, ಪಥ ವಿಚಲಿತ ಉಲ್ಕೆ ಮುಂತಾದವು ಭೂಮಿಗೆ ಕೆಡೆಯುವುದು ಈ ಕಾರಣದಿಂದಲೇ,

ಈಗ, ಎತ್ತರಕ್ಕೆ ಬೀರಿದ ಕ್ಷಿಪಣಿ ಭೂಗುರುತ್ವದ ಸೆಳೆತ ಮೀರಿ ವಿಶಾಲಾಕಾಶವಿಹಾರಿ ಆಗುವುದು ಸಾಧ್ಯವಾದೀತೇ? ನ್ಯೂಟನ್ – ಸೂತ್ರದ ಪ್ರಕಾರ ಹೌದು! ನೆಲದಿಂದ ನೇರ ಮೇಲಕ್ಕೆ ಸೆಕೆಂಡಿಗೆ 11.12 ಕಿಮೀ ಅಥವಾ ಅಧಿಕ ವೇಗದಿಂದ ಕವಣೆಬೀರಿದ ಕಲ್ಲು ಭೂಗುರುತ್ವಾಲಿಂಗನದಿಂದ ವಿಮೋಚಿತವಾಗುತ್ತದೆ. ಎಂದೇ ಈ ಕನಿಷ್ಠ ಆರಂಭಿಕ ಉಡಾವಣವೇಗಕ್ಕೆ ವಿಮೋಚನವೇಗವೆಂದು (escape veiocity) ಹೆಸರು. ಇದನ್ನು ಗಣಿಸಲು ಸಾರ್ವತ್ರಿಕ ಸೂತ್ರ Ö2GM / R) ಇಲ್ಲಿ M ಆಕಾಶಕಾಯದ ರಾಶಿ ಮತ್ತು R ತ್ರಿಜ್ಯ. ಸೌರವ್ಯೂಹದ ಬೃಹತ್ ಗ್ರಹವಾದ ಗುರುವಿನ ವಿಮೋಚನವೇಗ ಸೆಕೆಂಡಿಗೆ 57.5 ಕಿಮೀ. ಇನ್ನು ಸೂರ್ಯನದು ಕೇವಲ 618 ವಿಮೋಚನವೇಗದ ಸೂತ್ರ ‘ಓದಿ’ದರೆ ಎರಡು ಸಂಗತಿಗಳು ಹೊಳೆಯುತ್ತವೆ: ರಾಶಿ (M) ವೃದ್ಧಿಸಿದಾಗ, ಅಂತೆಯೇ ತ್ರಿಜ್ಯ (R) ಕ್ಷಯಿಸಿದಾಗ ವಿಮೋಚನವೇಗ ವರ್ಧಿಸುತ್ತದೆ.

ಬೆಳಕಿನ ವೇಗ

ಗೆಲಿಲಿಯೋ ಗೆಲಿಲೀ (1564 – 1642) ಆಗಮನದ ತನಕ ಬೆಳಕಿನ ವೇಗ ಅನಂತ ಎಂದು (ತಪ್ಪಾಗಿ) ಭಾವಿಸಲಾಗಿತ್ತು. ಈತನ ನಿಶಿತಮತಿ ಇದನ್ನು ಒಪ್ಪಲಿಲ್ಲ. ಆದರೆ ಬೆಳಕಿನ ವೇಗ ಅಳೆಯಲು ಈತ ಕೈಗೊಂಡ ಪ್ರಯೋಗಗಳು ವಿಫಲವಾದುವು – ತಾತ್ತ್ವಿಕ ದೋಷವಲ್ಲ, ಭೂಚೌಕಟ್ಟಿನ ಸೀಮಿತತೆ ಮತ್ತು ಬೆಳಕಿನ ಅತಿ ಚಟುಲತೆ, ಮುಂದೆ ಓಲಾಸ್ ರೋಮರ್ (1644 – 1710) ಗೆಲಿಲಿಯೋ –ತಂತ್ರವನ್ನು ಸೌರವ್ಯೂಹದ ವಿಸ್ತಾರ ಚೌಕಟ್ಟಿಗೆ ಅನ್ವಯಿಸಿ ಬೆಳಕಿನ ವೇಗವನ್ನು ಶೋಧಿಸಿದಃ ಸೆಕೆಂಡಿಗೆ 227.000 ಕಿಮೀ (1676). ಇಂದಿನ ಪರಿಷ್ಕೃತ ಬೆಲೆ 299792458. ಪ್ರತೀಕ c.

ನ್ಯೂಟನ್ನನ ಮಹಾಪ್ರತಿಭೆ ಬೆಳಕನ್ನು ಅನಂತಾಲ್ಪ ದ್ಯುತಿಕಣಗಳ ಸಂತತ ಪ್ರವಾಹ ಎಂದು ಪ್ರಾಯೋಗಿಕವಾಗಿ ದರ್ಶಿಸಿತು. ಹೀಗೆ ನ್ಯೂಟನ್ ಮತ್ತು ರೋಮರ್ ಅವರ ಪ್ರಯೋಗ – ಚಿಂತನೆ ಫಲವಾಗಿ ಬೆಳಕಿನ ಭೌತ ಅಸ್ತಿತ್ವ ಮತ್ತು ಚಲನವೇಗ ಸ್ಥಿರೀಕೃತವಾದುವು.

ಆದ್ದರಿಂದ ಯಾವುದೇ ನಕ್ಷತ್ರ, ತಾತ್ತ್ವಿಕವಾಗಿ, ದ್ಯುತಿಕಣಗಳನ್ನು ಸೆಕೆಂಡಿಗೆ 227.000 ಕಿಮೀ ವೇಗದಲ್ಲಿ ಪುಂಖಾನುಪುಂಖವಾಗಿ ಎರಚುವ ಆಕರ ಎನ್ನಬಹುದು. (17ನೆಯ ಶತಮಾನ). ಅಂದ ಮೇಲೆ, ನಕ್ಷತ್ರವೊಂದರ ವಿಮೋಚನವೇಗ ಸಾಕ್ಷಾತ್ ಬೆಳಕಿನ ವೇಗವನ್ನೇ ಮೀರುವ ಬೃಹತ್ಸಂಖ್ಯೆ ಆಗುವುದು ಸಾಧ್ಯವೇ? ಈ ತೆರನಾಗಿ ಚಿಂತನೆಯ ಚುಂಚವನ್ನು ಆಚೆಗೆ ಚಾಚಿದಾತ ಪಿಯರೆ ಸೈಮನ್ ಲಾಪ್ಲಾಸ್ (1749 – 1827).

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ!

“ಭೂಸಾಂದ್ರತೆಯಷ್ಟು ಸಾಂದ್ರತೆಯೂ ಸೌರವ್ಯಾಸದ 250 ಮಡಿ ವ್ಯಾಸವೂ ಇರುವ ಒಂದು ಮಿನುಗು ತಾರೆ ಸ್ವಂತಾಕರ್ಷಣೆಯ ಕಾರಣವಾಗಿ ತನ್ನ ಇನಿತು ಕಿರಣವನ್ನೂ ಹೊರಜಿನುಗಬಿಡದು. ವಿಶ್ವದ ಬಲುದೊಡ್ಡ ಮಿನುಗು ಕಾಯಗಳು ಈ ಕಾರಣದಿಂದ ನಮಗೆ ಕಾದಿರುವ ಸಾಧ್ಯತೆ ಉಂಟು.” ಈ “ಕಲ್ಪನಾ ವಿಲಾಸಾ” ಲಾಪ್ಲಾಸನಿಗೆ ಮಿಂಚಿದ್ದು ಆತ ವಿಮೋಚನವೇಗವೆಂಬ “ಭೃಂಗದ ಬೆನ್ನೇರಿ” ಬಾನಿನ ಎತ್ತರ ಬಿತ್ತರ ಮಹತ್ತರಗಳಿಗೆ ಜಿಗಿದಾಗ (1799).

ಭೂಸಾಂದ್ರತೆಯೂ ಸೌರವ್ಯಾಸವೂ ತಿಳಿದಿರುವುದರಿಂದ ಲಾಪ್ಲಾಸನ ಕಾಲ್ಪನಿಕ ಮಿನುಗು ತಾರೆಯ ವಿಮೋಚನವೇಗವನ್ನು ಗಣಿಸಬಹುದು. ಇದರ ಬೆಲೆ ಬೆಳಕಿನ ವೇಗಕ್ಕಿಂತ ತುಸುವೇ ಜಾಸ್ತಿ! ಅರ್ಥ ಏನು? ಈ ಕಾಯದಿಂದ ಹೊರಜಿಗಿದ ದ್ಯುತಿ ಕಣಗಳು ಇದರ ವಿಮೋಚನವೇಗದ ಬೇಲಿ ಹಾರಲಾಗದೇ ಅಲ್ಲಿಯೇ ಉಳಿಯುತ್ತವೆ – ಅರ್ಥಾತ್ ಬಾಹ್ಯ ಲೋಕಕ್ಕೆ ಕಾಯದ ಇರವಿನ ಅರಿವು ಬರದು. ಇದೊಂದು ವಿಚಿತ್ರ ಕಾಯ: ಇದೆ, ಆದರೆ ಇರುವುದು ಇತರರಿಗೆ ತಿಳಿಯದ್ದರಿಂದ ಇಲ್ಲ! “ಇರಬೇಕು ಇರಬೇಕು ಇರದಿರಬೇಕು.” ಎಂಬ ಪುರಂದರವಾಣಿಗೆ ದಿವ್ಯ ಭೌತ ನಿದರ್ಶನ.

ಲಾಪ್ಲಾಸನ ಫಲವಂತ ಚಿಂತನೆ ವಿಮೋಚನವೇಗದ ಸೂತ್ರದಲ್ಲಿ ಅಂಶವನ್ನು (M) ವೃದ್ಧಿಸುವ ದಿಶೆಯಲ್ಲಿ ಮಾತ್ರ ಹರಿಯಿತು. ಛೇದವನ್ನು (R) ಕ್ಷಯಿಸುವ ದಿಶೆಯಲ್ಲಿ ಚಾಚಲಿಲ್ಲ ಏಕೆ? ಕಾಲವಿನ್ನೂ ಪಕ್ವವಾಗಿರಲಿಲ್ಲ.

ಖಭೌತವಿಜ್ಞಾನ

ಖಗೋಳಕಾಯಗಳಿಗೆ ಭೌತವಿಜ್ಞಾನದ ತತ್ತ್ವಗಳನ್ನು ಅನ್ವಯಿಸಿ ಬೆಳೆಸಿದ ಚಿಂತನಪ್ರಕಾರವಿದು. ಆ ಕಾಯಗಳಿಂದ ಲಭಿಸುವ ಭೌತಮಾಹಿತಿಗಳನ್ನು ಭೌತವಿಜ್ಞಾನದ ಭೂಮಿಕೆಯಲ್ಲಿ ಅಭ್ಯಸಿಸಿ ಅವುಗಳ ಸ್ಥಿತಿ ಗತಿ ವಿಕಾಸ ಮುಂತಾದವನ್ನು ವ್ಯಾಖ್ಯಾನಿಸುವುದು ಇದರ ವಸ್ತು. ಇದು 20ನೆಯ ಶತಮಾನದಲ್ಲಿ ವಿಶೇಷವಾಗಿ ಅಭಿವರ್ಧಿಸಿತು, ಕಾರಣ? ಕಾಲ ಆಗ ತಾನೇ ಪಕ್ವವಾಗುತ್ತಿತ್ತು.

ನ್ಯೂಟನ್ ಪ್ರವರ್ತಿಸಿದ ಭೌತವಿಜ್ಞಾನ 10ನೆಯ ಶತಮಾನಾಂತ್ಯದ ತನಕ ವಿಜೃಂಭಿಸಿತು. ಇಂದ್ರಿಯಗ್ರಾಹ್ಯ ಮತ್ತು ದೂರದರ್ಶಕಲಭ್ಯ ಸಮಸ್ತ ಮಾಹಿತಿಗಳನ್ನೂ ಇದು ಖಗೋಳವಿಜ್ಞಾನದ ಚೌಕಟ್ಟಿನೊಳಗೆ ಸಂದೇಹಾತೀತವಾಗಿ ವಿವರಿಸಲು ಶಕ್ತವಾಯಿತು. ಇದನ್ನು ಅಭಿಜಾತ ಭೌತವಿಜ್ಞಾನ (classical physics) ಎಂದು ಕರೆಯುವುದು ರೂಢಿ.

19 – 20ನೆಯ ಶತಮಾನಗಳ ಸಂಧಿಕಾಲದಲ್ಲಿ ಪರಮಾಣು ಮತ್ತು ನಕ್ಷತ್ರಗಳ ಅಂತರಂಗ ವ್ಯವಹಾರ ಕುರಿತು ಸಾಕಷ್ಟು ಭೌತಮಾಹಿತಿಗಳು ಸಂಗ್ರಹವಾಗತೊಡಗಿದುವು. ಇವನ್ನು ಸಮರ್ಥವಾಗಿಯೂ ಸಮರ್ಪಕವಾಗಿಯೂ ವ್ಯಾಖ್ಯಾನಿಸುವಲ್ಲಿ ಅಭಿಜಾತ ಭೌತವಿಜ್ಞಾನ ಯಶಸ್ಸು ಗಳಿಸಲಿಲ್ಲ. ಆಗ ಮೈದಳೆದ ಮೂರು ಮುಖ್ಯ ನೂತನ ಚಿಂತನಪ್ರಕಾರಗಳು ಶಕಲ ಸಿದ್ಧಾಂತ (1990. Quantum theory). ವಿಶೇಷ ಮತ್ತು ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಂತಗಳು (1905 ಮತ್ತು 1915, Special and General theories of Relativity), ಮತ್ತು ಪರಮಾಣುವಿನ ಭೌತಪ್ರತಿರೂಪ (1914 – 16). ಇವು ಪರಸ್ಪರ ಪೂರಕ ಪೋಷಕವಾಗಿ ಪ್ರವರ್ಧಿಸಿ ವಿಶ್ವದ ಬಗ್ಗೆ ನವದೃಷ್ಟಿಯನ್ನೇ ಒದಗಿಸಿದುವು. ಒಟ್ಟಾಗಿ ಇವುಗಳ ಹೆಸರು ನವಜಾತು ಭೌತವಿಜ್ಞಾನ (modern physics). ನವಜಾತ ಭೌತವಿಜ್ಞಾನ ನೀಡಿದ ವಿಶ್ವದೃಷ್ಟಿಯ ಫಲವಾಗಿ ನಕ್ಷತ್ರಗಳ ಜನನ, ವಿಕಾಸ ಮತ್ತು ಶಕ್ತಿ ರಹಸ್ಯ ಕುರಿತು ವಿಶೇಷ ಒಳನೋಟ ಲಭಿಸಿದೆ.

ನಕ್ಷತ್ರಗಳ ತೊಟ್ಟಿಲು ನೀಹಾರಿಕೆ (nebula). ಇದು ಪ್ರೋಟಾನ್. ನ್ಯೂಟ್ರಾನ್. ಎಲೆಕ್ಟ್ರಾನ್ ಮುಂತಾದ ಮೂಲಕಣಗಳ ಮಹಾವ್ಯಾಪ್ತಿ ಮಳೆ ಮೋಡದಲ್ಲಿ ನೀರಹನಿಗಳು ಮೈದಳೆಯುವಂತೆ ನೀಹಾರಿಕೆಯಲ್ಲಿ ಆದಿಮ ನಕ್ಷತ್ರಗಳು (ಅಂದರೆ ಮೂಲಕಣಪುಂಜಗಳು) ಹೆಪ್ಪುಗಟ್ಟುತ್ತವೆ.

ಆದಿಮ ನಕ್ಷತ್ರದಲ್ಲಿ ಮೂಲಕಣಗಳು ಸಂಯೋಜಿಸಿ ಹೈಡ್ರೊಜನ್ ಬೀಜಗಳಾಗುತ್ತವೆ. ಈ ನಕ್ಷತ್ರ ತನ್ನ ಭಾರಕ್ಕೆ ತಾನೇ ಮಣಿದು ಕೇಂದ್ರಾಭಿಮುಖವಾಗಿ ಸಂಕೋಚಿಸಲಾರಂಭಿಸುತ್ತದೆ. ಆಗ ಸಹಜವಾಗಿ ಇದರ ಗರ್ಭದಲ್ಲಿ ಸಂಮರ್ದ ಮತ್ತು ಉಷ್ಣತೆ ಮೇರೆ ಇರದೇ ವರ್ಧಿಸುತ್ತವೆ. ಇವು ಒಂದು ಅವಧಿಕ (critical) ಘಟ್ಟ ದಾಟುವಾಗ ಅಲ್ಲಿ ಬೈಜಿಕಾಗ್ನಿ (nuclear fire) ಪ್ರಜ್ವಲಿಸಿ ಹೈಡ್ರೊಜನ್ ಬೀಜಗಳ ಸಂಲಯನ (fusion) ಆರಂಭವಾಗುತ್ತದೆ. ಇದೊಂದು ತೆರನಾದ ದಹನ. ವಿಮೋಚನೆಗೊಂಡು ವಿಶ್ವದ ಮಹಾಗರ್ತಕ್ಕೆ ವಿಸರ್ಜಿತವಾಗುತ್ತದೆ. ನಕ್ಷತ್ರ ಜನನ ಪ್ರಕ್ರಿಯೆ ಇದು. ದಹನಶೇಷ ಹೀಲಿಯಮ್ ಬೀಜಗಳು. ಇವು ನಕ್ಷತ್ರದ ಒಡಲಲ್ಲೇ ಶೇಖರಣೆಗೊಳ್ಳುತ್ತವೆ.

ನಕ್ಷತ್ರವಿಕಾಸದ ಪ್ರಥಮ ಹಂತವಿದು. ಇದರಲ್ಲಿ ಬೈಜಿಕ ಕುಲುಮೆಗೆ ಇಂಧನ ಹೈಡ್ರೊಜನ್. ಎಂದೇ ಇದರ ಹೆಸರು ಹೈಡ್ರೊಜನ್ ತಾರೆ. ನಮ್ಮ ಸೂರ್ಯ ಒಂದು ಉದಾಹರಣೆ. ಸೂರ್ಯನ ವಯಸ್ಸು ಸುಮಾರು 5 ಬಿಲಿಯನ್ ವರ್ಷಗಳು (1 ಬಿಲಿಯನ್ = 1,000,000,000 = 100 ಕೋಟಿ). ಇನ್ನು 15 ಬಿಲಿಯನ್ ವರ್ಷಗಳು ಸಲ್ಲುವಾಗ ಸೂರ್ಯನಲ್ಲಿಯ ಹೈಡ್ರೊಜನ್ ಇಂಧನ ಮುಗಿಯಲಿದೆ. ಆಗ ಅದು ಬಹುತೇಕ ಹೀಲಿಯಮ್‌ಮಯವಾಗಿರುವುದು.

ಸಾಧಾರಣ ನಕ್ಷತ್ರದಲ್ಲಿ ಒಂದು ಜೊತೆ ವಿರುದ್ಧ ಬಲಗಳು ಏಕಕಾಲಿಕವಾಗಿ ವರ್ತಿಸುತ್ತಿರುವುವು: ಗುರುತ್ವದ ಸಂಕೋಚನಶೀಲಬಲ, ವಿಕಿರಣದ ವ್ಯಾಕೋಚನಶೀಲ ಬಲ. ತಾರೆಯಲ್ಲಿ ಸಂಚಿತವಾಗಿರುವ ರಾಶಿಯ ಕಾರಣವಾಗಿ ಎರಡನೆಯದೂ ಕ್ರಿಯಾಶೀಲವಾಗಿರುತ್ತವೆ. ಇವು ಸಮತೋಲನದಲ್ಲಿರುವ ತನಕ ನಕ್ಷತ್ರ ಏಕಸ್ಥಿತಿಯಲ್ಲಿರುತ್ತದೆ. ಆದರೆ ಇದೇನೂ ಶಾಶ್ವತ ಸ್ಥಿತಿ ಅಲ್ಲ. ಎಣ್ಣೆ ಇರುವತನಕ ಹಣತೆ ಉರಿಯುತ್ತದೆ, ಅಲ್ಲವೇ?

ರಕ್ತದೈತ್ಯಗಳು ಶ್ವೇತಕುಬ್ಜಗಳು

ಹೈಡ್ರೊಜನ್ ನಕ್ಷತ್ರದ ಅವಸಾನ ದಿನಗಳಲ್ಲಿ ಅದರ ಉಷ್ಣತೆ ಮತ್ತು ವಿಕಿರಣೋತ್ಪಾಟನೆ ಎರಡೂ ಗರಿಷ್ಠಕ್ಕೆ ಜಿಗಿದಿರುತ್ತವೆ. ಆದರೆ ರಾಶಿ ಮಾತ್ರ ಕನಿಷ್ಠಕ್ಕೆ ಕುಸಿದಿರುತ್ತದೆ. ಅಂದರೆ ಗುರುತ್ವದ ಸಂಕೋಚನಶೀಲಬಲವನ್ನು ಮೀರಿ ವಿಕಿರಣದ ವ್ಯಾಕೋಚನಶೀಲಬಲ ಮೇಲುಗೈ ಸಾಧಿಸಿರುತ್ತದೆ. ವಿಕಾಸಪಥದಲ್ಲಿ ಎರಡನೆಯ ಹಂತ ಪ್ರವೇಸಿಸುತ್ತಿರುವ ಈ ನಕ್ಷತ್ರ ದೈತ್ಯಗಾತ್ರಕ್ಕೆ ಉಬ್ಬುತ್ತದೆ. ಆಗ ಇದರ ಉಷ್ಣತೆ ತಗ್ಗಿ ಬಣ್ಣ ಕೆಂಪಾಗುತ್ತದೆ. ರಕ್ತದೈತ್ಯ (Red Giant) ಎಂಬುದು ಇದರ ಅನ್ವರ್ಥಕನಾಮ. ಇದು ಹೀಲಿಯಮ್‌ಭರಿತವಾಗಿರುವುದರಿಂದ ಹೀಲಿಯಮ್ ತಾರೆಯೂ ಹೌದು.

ಮತ್ತೆ ಗುರುತ್ವದ ಗಾಣ ಕ್ರಿಯಾಶೀಲವಾಗುತ್ತದೆ. ಗರ್ಭದಲ್ಲಿ ಬೈಜಿಕ ಕುಲುಮೆ ಪ್ರಜ್ವಲಿಸುತ್ತದೆ. ಈಗ ಇಂಧನ ಹೀಲಿಯಮ್ ದಹನಫಲ (ವಿಕಿರಣ) ಸೋರಿ ಹೋಗುತ್ತದೆ. ಶೇಷ ಕಾರ್ಬನ್ ಅಲ್ಲೇ ಜಮಾಯಿಸುತ್ತದೆ. ರಕ್ತದೈತ್ಯದ ಗಾತ್ರ ಕ್ರಮೇಣ ಸಂಕೋಚಿಸುತ್ತದೆ. ಒಡಲು ಕಾರ್ಬನ್‌ಭರಿತವಾಗುತ್ತದೆ. ಕುಬ್ಜಗಾತ್ರ ಇದಕ್ಕೆ ಹೊಂದದ ಅತ್ಯುಷ್ಣತೆ ಅಥವಾ ಬಿಳಿಗಾವು ಎಂದೇ ಇದರ ಅನ್ವರ್ಥಕನಾಮ ಶ್ವೇತಕುಬ್ಜ (WhiteDwarf). ಇದು ಕಾರ್ಬನ್ ತಾರೆಯೂ ಹೌದು. ನಕ್ಷತ್ರ ವಿಕಾಸದ ಮೂರನೆಯ ಹಂತವಿದು.

ರೋಹಿಣಿ, ಆರ್ದ್ರಾ ಮತ್ತು ಜ್ಯೇಷ್ಠಾ ಎಂಬ ಮೂರು ರಕ್ತದೈತ್ಯಗಳು (ಹೀಲಿಯಮ್ ನಕ್ಷತ್ರಗಳು) ಮನುಕುಲದ ನಿತ್ಯಸಂಗಾತಿಗಳಾಗಿ ಬೆಳೆದು ಬಂದಿವೆ. ಮೊದಲ ಶ್ವೇತಕುಬ್ಜ 1868ರಲ್ಲೇ ಪತ್ತೆ ಆಗಿದ್ದರೂ 1915ರ ತನಕ ಅದರ ಒಗಟಿಗೆ ಒಡಪು ಲಭಿಸಿರಲಿಲ್ಲ. ತದನಂತರ ಶ್ವೇತಕುಬ್ಜಗಳ ಹುಲುಸು ಬೆಳೆಯೇ ದೊರೆತಿದೆ. ಈ ವಿಚಿತ್ರ ಕಾಯಗಳ ಜೀವನವೃತ್ತಾಂತವನ್ನು ಆರ್ಥರ್ ಎಡಿಂಗ್ಟನ್ (1882 – 1944) ಅಭಿಜಾತದ ಚೌಕಟ್ಟಿನೊಳಗೆ ಅಭ್ಯಸಿಸಿ ಸಿದ್ಧಾಂತ ಮಂಡಿಸಿದರು (1921 – 30ರ ದಶಕ): ಕಾರ್ಬನ್ (ಶ್ವೇತಕುಬ್ಜ) ಹಂತಕ್ಕೆ ಅಭಿವರ್ಧಿಸಿದ ನಕ್ಷತ್ರ ಮುಂದೆ ಶಾಶ್ವತವಾಗಿ ಅದೇ ಸ್ಥಿತಿಯಲ್ಲಿ ಉಳಿದಿರುತ್ತದೆ! ಅಂದ ಮೇಲೆ ಸುದೂರದ ಭವಿಷ್ಯದಲ್ಲಿ ವಿಶ್ವಸರ್ವತ್ರ ಶ್ವೇತಕುಬ್ಜಗಳು ತುಂಬಿರಬೇಕು, ಅಲ್ಲವೇ?

ಹೂರಣವು ಸಿದ್ಧವಿದೆ ತೋರಣವದೆಲ್ಲಿಹುದೊ?
ಕಾರಣವು ತಿಳಿದಿಹುದು ಕಾರ್ಯವಡಗಿಹುದೆಲ್ಲಿ?
ಧಾರಿಣಿಯು ಚೆಲುವಿಹುದು, ನೇತ್ರ? ದ್ವಂದ್ವದ ನಿ
ವಾರಕನೆ ದ್ರಷ್ಟಾರ ಯುಗಪುರುಷ ಅತ್ರಿಸೂನು ||

ಚಂದ್ರಶೇಖರ ಸಮಿತಿ

ಇಸವಿ 1930. ಖಭೌತವಿಜ್ಞಾನದ ಅರುಣೋದಯಕಾಲ. ಈ ಹೊಸ ಹುಲುಸು ಹಸುರಿನಲ್ಲಿ ನವ ಸಂಶೋಧನೆಗೈಯಬೇಕೆಂಬುದು ಯುವ ಚೇತನ ಚಂದ್ರಶೇಖರರ ಉತ್ಕಟ ಅಭಿಲಾಷೆ. ಇಪ್ಪತ್ತರ ಹರೆಯದ ಈ ಮಹಾಪ್ರತಿಭೆ ಅದೇ ತರುಣದಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಎಂಎ (ಭೌತವಿಜ್ಞಾನ) ಪದವಿಗಳಿಸಿದ್ದರು.

ಅವರು ಇಂಗ್ಲೆಂಡಿಗೆ ಕಡಲಯಾನ ತೊಡಗಿದ್ದಾರೆ. ಆಗ ಅವರ ಸೌಂದರ್ಯ ಪ್ರಜ್ಞೆಗೆ ಹಿರಿ ಸವಾಲಾಗಿದ್ದುದು “ಶ್ವೇತಕುಬ್ಜದ ಶಾಶ್ವತತೆ” ಎಂಬ ಎಡಿಂಗ್ಟನ್ – ತೀರ್ಮಾನ: ಇದೊಂದು ವಿರೋಧಾಭಾಸವಲ್ಲವೇ? ಭೌತವಿಶ್ವದಲ್ಲಿ ಸಮಸ್ತವೂ ನಶ್ವರ ಎಂಬುದು ಸೌಂದರ್ಯದೃಷ್ಟಿಗೂ ತತ್ತ್ವಶಾಸ್ತ್ರ ಚಿಂತನೆಗೂ ಸಮ್ಮತ. ಇಲ್ಲಿ ಶ್ವೇತಕುಬ್ಜ ಅಪವಾದವಾಗುವುದು ಹೇಗೆ? ಸೃಷ್ಟಿಕರ್ತ ಎಡಹಿದನೇ? ಎಡಿಂಗ್ಟನ್ ಆತನ ಬರಹವನ್ನು ತಪ್ಪಾಗಿ ಓದಿದರೇ ಮೊದಲನೆಯದು ಅಸಾಧ್ಯ. ಎರಡನೆಯದು? ಶಸ್ತ್ರಕ್ರಿಯೆ ಯಶಸ್ವಿ, ರೋಗಿ ಮಾತ್ರ ಗತಜೀವಿ!

ಆಗ ಚಂದ್ರಶೇಖರರ ಪ್ರಖರ ಪ್ರತಿಭಾನದಲ್ಲಿ (intuition) ಹೊಸ ಹೊಳಹು ಮಿಂಚಿತು: ವಾಸ್ತವವಾಗಿ ಶ್ವೇತಕುಬ್ಜದ ಶಾಶ್ವತತೆ ಎನ್ನುವುದು ನಕ್ಷತ್ರಲೋಕದಲ್ಲಿಯ ಸಮಸ್ಯೆ. ಅದರ ಪರಿಹಾರಕ್ಕೆ ನಿಯೋಜಿಸಬೇಕಾದದ್ದು ನವಜಾತ ಭೌತವಿಜ್ಞಾನವನ್ನೇ ಹೊರತು ಅಭಿಜಾತವನ್ನಲ್ಲ. ಹಳೆ ದೇಹಕ್ಕೆ ಹಳೆ ಉಡುಪು ಸರಿ. ಹೊಸ ಗೇಹಕ್ಕೋ? ಹೊಸ ತೊಡಪು!

ನವಜಾತ ಮಾರ್ಗದಲ್ಲಿ ಪರಿಕ್ರಮಿಸಿದ ಚಂದ್ರಸೇಖರ್ ಆವಿಷ್ಕರಿಸಿದ್ದು. ತರುವಾಯದ ವರ್ಷಗಳಲ್ಲಿ ಅವರ ಹೆಸರಿನಿಂದಲೇ ಪ್ರಸಿದ್ಧವಾದ, ಮೂಲಭೂತ ವಿಶ್ವಸ್ಥಿರಾಂಕವನ್ನು: 1.4 x ಸೌರರಾಶಿ. ಇದರ ಹೆಸರು ಚಂದ್ರಶೇಖರ್ ಪರಿಮಿತಿ. ಇದಕ್ಕಿಂತ ಕಡಿಮೆ ಇರುವ ಕಾರ್ಬನ್‌ತಾರೆ ಮಾತ್ರ ಶ್ವೇತಕುಬ್ಜ ಆಗಬಲ್ಲದು. ಹೆಚ್ಚು ಇರುವಂಥದ್ದು ಏನಾಗುತ್ತದೆ!

ಅವರು ಇಂಗ್ಲೆಂಡಿನಲ್ಲಿದ್ದ ಸುಮಾರು 5 ವರ್ಷ ಪರ್ಯಂತ ತಮ್ಮ ಸಿದ್ಧಾಂತವನ್ನು ನೇರ್ಪುಗೊಳಿಸಿದರು: ಶ್ವೇತಕುಬ್ಜದಲ್ಲಿ ಬೈಜಿಕ ಕುಲುಮೆಯನ್ನು ಕ್ರಿಯಾಶೀಲವಾಗಿಸಲು ಬೇಕಾಗುವ ಗುರುತ್ವ ಬಲವಿಲ್ಲ. ಎಂದೇ ಇದು ಕ್ರಮೇಣ ವಿಕಿರಣನಷ್ಟದಿಂದ ನಂದಿ ಮೃತ ನಕ್ಷತ್ರವಾಗುವುದು.

ಇಸವಿ 1935. ಯುವ ಚಂದ್ರಶೇಖರರ ನವಯುಗಪ್ರವರ್ತಕ ಸಂಶೋಧನ ಪ್ರಬಂಧಕ್ಕೆ ವಿಜ್ಞಾನಿಗಳ ತಾಂತ್ರಿಕ ಸಮಾವೇಶದಲ್ಲಿ ದೊರೆತದ್ದು ತಿರಸ್ಕಾರ! ದಕ್ಷಯಜ್ಞದ ಪುನರಾವರ್ತನೆ. ಸಾಕ್ಷಾತ್ ಎಡಿಂಗ್ಟನ್ನರೇ ‘ದಕ್ಷ’ ಏಕೆ? ವ್ಯಕ್ತಿಯ ರಾಗಭಾವಪ್ರಪಂಚದ ನಡವಳಿಕೆಯೇ ಹಾಗೆ: “ನಾನು ಕಂಡದ್ದು ಮಾತ್ರ ಸತ್ಯ.”

ಕೃಷ್ಣ ವಿವರದೆಡೆಗಿನ ರಾಜಪಥ

ಅದೇ ವರ್ಷದ ನವಂಬರಿನಲ್ಲಿ ಚಂದ್ರಶೇಖರ್ ಇಂಗ್ಲೆಂಡ್ ತೊರೆದರು. ಅಮೆರಿಕ (ಚಿಕಾಗೊ ವಿಶ್ವವಿದ್ಯಾಲಯ) ಸೇರಿದರು.

ಅಂದಿನ (1935) ತನಕ ವೀಕ್ಷಣೆಗೆ ಲಭಿಸಿದ್ದ ಎಲ್ಲ ಶ್ವೇತಕುಬ್ಜಗಳ ರಾಶಿಗಳೂ ಚಂದ್ರಶೇಖರ್ ಪರಿಮಿತಿಯೊಳಗಿದ್ದುವು. ಹಾಗಾದರೆ ಇದನ್ನು ಮೀರುವ ಕಾರ್ಬನ್ ತಾರೆಗಳ ಭವಿಷ್ಯ ಏನು? ಇಂಥವುಗಳ ಭೌತ ಅಸ್ತಿತ್ವ ಆಗ ಇನ್ನೂ ಸ್ಥಿರೀಕೃತವಾಗಿರಲಿಲ್ಲ. ಸೈದ್ಧಾಂತಿಕ ವಿಜ್ಞಾನಿಗಳು (ಚಂದ್ರಶೇಖರ್ ಈ ವರ್ಗದವರು) ಈ ನಿಟ್ಟಿನಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಪಂಚಾದ್ಯಂತ ಅಧಿಕ ಆಸಕ್ತಿಯಿಂದ ಮುಂದುವರಿಸಿದರು: ಹೊನ್ನಿನ ಬೆಳೆಯನು ಕೊಡಲಿಹ ಊಹಾಕ್ಷೇತ್ರಾನ್ವೇಷಣೆಗೆ! 1960ರ ವೇಳೆಗೆ ಹೊಮ್ಮಿದ ಸಮಗ್ರ ಸೈದ್ಧಾಂತಿಕ ಚಿತ್ರವನ್ನು ಸೂತ್ರ ರೂಪದಲ್ಲಿ ಹೀಗೆ ನಿರೂಪಿಸಬಹುದು:

ಕಾರ್ಬನ್‌ತಾರೆ ® ಆಕ್ಸಿಜನ್ ತಾರೆ + ವಿಕಿರಣ ­
ಆಕ್ಸಿಜನ್‌ತಾರೆ ® ನೀಯಾನ್ ತಾರೆ + ವಿಕಿರಣ ­
ನೀಯಾನ್‌ತಾರೆ ® ಸಿಲಿಕಾನ್ ತಾರೆ + ವಿಕಿರಣ ­
ಸಿಲಿಕಾನ್ ತಾರೆ ® ಕಬ್ಬಿಣ ತಾರೆ + ವಿಕಿರಣ ­

ಎಡಗಡೆ ಕಾಣಿಸಿರುವ ಪ್ರತಿಯೊಂದು ಹಂತದಲ್ಲಿಯೂ ಗುರುತ್ವದ ಗಾಣ (ಸಂಕೋಚನಶೀಲ ಬಲ) ಆ ತಾರೆಯನ್ನು ಹಿಂಡುತ್ತದೆ. ಫಲವಾಗಿ ವಿಕಿರಣ ಉತ್ಪಾಟನೆಗೊಂಡು ಸೋರಿಹೋಗುತ್ತದೆ. ಶೇಷ ಅಲ್ಲೇ ಜಮೆ ಆಗುತ್ತದೆ.

ಕಬ್ಬಿಣ ಹಂತಕ್ಕೆ ಏರಿದ ನಕ್ಷತ್ರದಲ್ಲಿ ಪರಿಸ್ಥಿತಿ ವಿಷಮಿಸುತ್ತದೆ: ಗುರುತ್ವದ ಗಾಣಕ್ಕೆ ಕಬ್ಬಿಣದ ಬೀಜಗಳು ಮಣಿಯುವುದಿಲ್ಲ; ಆಕುಂಚನ – ಪ್ರತಿರೋಧ ತೀವ್ರಾತಿತೀವ್ರವಾದಂತೆ ತಾರೆ ಮರಣಾಂತಿಕ ಆಸ್ಫೋಟನೆಗೀಡಾಗುತ್ತದೆ. ಇದು ಸೂಪರ್ನೋವಾ ಆಸ್ಫೋಟನೆ ಆಗ ಸಂಜನಿಸುವ ಅಗಾಧ ಉಷ್ಣತೆ ಮತ್ತು ಅಪಾರ ಸಂಮರ್ದಗಳ ಹಠಾತ್ ಉತ್ಸರ್ಜನೆಯಲ್ಲಿ ಆವರ್ತಕೋಷ್ಟಕದ (periodic table) 92 ನೈಸರ್ಗಿಕ ರಾಸಾಯನಿಕ ಧಾತುಗಳೂ (elements) ಪಾಕಗೊಂಡು ವಿಶ್ವದ ಮಹಾವಿಸ್ತಾರಕ್ಕೆ ಎರಚಿ ಹೋಗುತ್ತವೆ.

ಸೂಪರ್ನೋವಾ ಹರಾಕಿರಿಯಲ್ಲಿ ಆ ನಕ್ಷತ್ರ ಸರ್ವನಾಶಗೊಳ್ಳಬಹುದು, ಅಥವಾ ಬೃಹನಕ್ಷತ್ರಗಳ (ಸೌರರಾಶಿಯ 100 ಮಡಿ ಮತ್ತು ಅಧಿಕ) ಸಂದರ್ಭದಲ್ಲಿ ಅತಿ ದೃಡ ಮತ್ತು ಭದ್ರ ತಿರುಳು ಉಳಿಯಬಹುದು. ಇದು ನ್ಯೂಟ್ರಾನ್ ಕಣಗಳ ಬಲು ನಿಬಿಡ ಮುದ್ದೆ – ನ್ಯೂಟ್ರಾನ್ ನಕ್ಷತ್ರ ಎಂದು ಹೆಸರು.

ಸಿದ್ಧಾಂತ ಹೀಗೆ ಜಿಗಿದೋಡುತ್ತಿದ್ದಾಗ ವೀಕ್ಷಣೆ (ಅಂದರೆ ‘ಕಾರ್ಯ’ದ ಶೋಧನೆ) ಏನೂ ತೀರ ಹಿಂದೆ ಕುಂಟುತ್ತಿರಲಿಲ್ಲ: 1957ರಲ್ಲಿ ಆಕಾಶಯುಗ (space age) ಆರಂಭವಾಗಿ ವಿಶ್ವರೂಪದರ್ಶನಕ್ಕೆ ನೂತನ ಆಯಾಮ ಒದಗಿತು. 1964ರಲ್ಲಿ, ಅಂದಿಗೆ ಆಕಾಶ ದೀಪಸ್ತಂಭವೆಂದು ಪರಿಗಣಿತವಾದ. ಪಲ್ಸರ್ ಪ್ರಥಮ ಬಾರಿಗೆ ಪತ್ತೆ ಆದಾಗ, “ನಾನೇ ಅದು!” ಎಂದು ಬೀರಿತು ಮಂದಹಾಸ ನ್ಯೂಟ್ರಾನ್ ತಾರೆ!

ಗತಯುಗಗಳಲ್ಲಿ ಸಂಭವಿಸುವ ಹಲವಾರು “ನಡುಹಗಲ ನವಸೂರ್ಯ” ಕುರಿತ ಐತಿಹಾಸಿಕ ಸಂಶೋಧನೆ ಹೊರಗೆಡಹಿದ್ದು, ಪ್ರಾಯಶಃ ಅವೆಲ್ಲವೂ ಸೂಪರ್ನೋವಾಗಳೆಂಬ ನೂತನ ವಿಸ್ಮಯವನ್ನು ಹಾಗಾದರೆ ಅವು ಪ್ರಕಟವಾದವೆಂದು ಭಾವಿಸಲಾಗುವ ಪ್ರದೇಶಗಳಲ್ಲಿ ಅವಶೇಷಗಳಾಗಿ ಇಂದು ಪಲ್ಸರುಗಳಿರಬೇಕಷ್ಟೆ? ವೀಕ್ಷಣೆಗಳೂ ಶೋಧನೆಗಳೂ ಈ ಊಹೆಯನ್ನು ಸಮರ್ಥಿಸಿದುವು. 1987ರಲ್ಲಿ 20ನೆಯ ಶತಮಾನದ ಮೊದಲ (ಮತ್ತು ಕೊನೆಯ ಕೂಡ) ಸೂಪರ್ನೋವಾ ಪ್ರತ್ಯಕ್ಷ ವೀಕ್ಷಣೆಗೆ ಲಭಿಸಿದಾಗ ಸಿದ್ಧಾಂತವನ್ನು ನಿಸರ್ಗ (ವಾಸ್ತವತೆ) “ಮೆಚ್ಚಿ ಅಹುದು. ಅಹುದು” ಎಂದಿತು!

ನ್ಯೂಟ್ರಾನ್ ತಾರೆಯ ಭವಿಷ್ಯವೇನು? ಸಿದ್ಧಾಂತದ ಪ್ರಕಾರ ಇದರಲ್ಲಿಯೂ ಗುರುತ್ವಗಾಣದ ಆಕುಂಚನ ಎಡೆತಡೆ ಇರದೆ ಮುಂದುವರಿಯುತ್ತದೆ. ಇದನ್ನು ಪ್ರತಿರೋಧಿಸುವ ಯಾವ ಬಲವೂ ಪ್ರಕ್ರಿಯೆಯೂ ನಕ್ಷತ್ರದಲ್ಲಿ ಪ್ರಕಟವಾಗುವುದಿಲ್ಲ. ನಕ್ಷತ್ರಗಾತ್ರ ಕ್ರಮೇಣ ಸಂಕೋಚಿಸುತ್ತದೆ. ಈ ಪ್ರಕ್ರಿಯೆಗೆ ಸಂತತ ಗುರತ್ವ ನಿಪತನ (continuous gravitational collapse) ಎಂದು ಹೆಸರು.

ಇಂಥ ಒಂದು ತಾರೆಯಲ್ಲಿ ರಾಶಿ (M) ಬದಲಾಗದು. ಆದರೆ ತ್ರಿಜ್ಯ (R) ಮಾತ್ರ ಕಿರಿದು ಕಿರಿದು ಆಗುತ್ತದೆ. ಆಗ ಇದರ ವಿಮೋಚನವೇಗ (Ö2GM / R) ಮೇರೆ ಇರದೇ ವರ್ಧಿಸುವುದು. ಅಂಶ ಸ್ಥಿರವಾಗಿದ್ದು ಛೇದ ಶೂನ್ಯಗಾಮಿಯಾದಂತೆ ಭಿನ್ನರಾಶಿಯ ಬೆಲೆ ಅನಂತಗಾಮಿಯಾಗುವುದು. ಯಾವುದೋ ಹಂತದಲ್ಲಿ ವಿಮೋಚನವೇಗ ಬೆಳಕಿನ ವೇಗಕ್ಕೇ ಸಮವಾಗುತ್ತದೆ:

C2 = 2GM/R ಅಥವಾ R = 2GM/c2

ಇದರ ಅರ್ಥ: ನಕ್ಷತ್ರ ತ್ರಿಜ್ಯ R, ಅಥವಾ ಕಡಿಮೆ, ಆದಾಗ ಆ ನಕ್ಷತ್ರದಿಂದ ಬಾಹ್ಯಲೋಕಕ್ಕೆ ವಿಕಿರಣ ಪ್ರಸಾರ ಕೈದು! (ಲಾಪ್ಲಾಸನ ಊಹೆ ತಾತ್ತ್ವಿಕವಾಗಿ ಸರಿಯಾಗಿದ್ದರೂ ವಿವರದಲ್ಲಿ ತಪ್ಪಾಗಿತ್ತು ಎಂಬುದನ್ನು ಗಮನಿಸಬೇಕು.)

ಇಂಥ ಒಂದು ಸೈದ್ಧಾಂತಿಕ ವೈಚಿತ್ರ್ಯಕ್ಕೆ ಜಾನ್ ಆರ್ಚಿಬಾಲ್ಡ್ ವ್ಹೀಲರ್ (1911 – 2008) Black Hole ಎಂಬ ಅನ್ವರ್ಥಕ ಮತ್ತು ಸ್ವಾರಸ್ಯಕರ ನಾಮ ಸೂಚಿಸಿದರು (1968). ಎಲ್ಲವನ್ನೂ ಕಬಳಿಸುವ ಆದರೆ ಏನನ್ನೂ ಬಿಡದಿರುವ ಮಹಾಗಗನ ಗರ್ತವಿದು. ಪರೋಕ್ಷ ಪುರಾವೆಗಳಿಂದ ಮಾತ್ರ ಇದರ ವಾಸ್ತವ ಅಸ್ತಿತ್ವವನ್ನು ಸ್ಥಿರೀಕರಿಸಬೇಕು. 199ರಿಂದ ಈಚೆಗೆ ಅದೂ ಸಿದ್ಧಿಸಿದೆ.

ನಮ್ಮ ರಾಷ್ಟ್ರದ ಖಭೌತವಿಜ್ಞಾನಿ ಜಯಂತ್ ವಿಷ್ಣು ನಾರ್ಲೀಕರ್ (1938) Black Holeಗೆ ‘ಕೃಷ್ಣವಿವರ’ ಎಂಬ ಸಂವಾದೀ ಪದವನ್ನು ಟಂಕಿಸಿದ್ದಾರೆ. ‘ಕೃಷ್ಣ’ ಅಂದರೆ ಕಪ್ಪು, ‘ವಿವರ’ ಅಂದರೆ ರಂಧ್ರ ಅಥವಾ ಕುಳಿ.

ಕೃಷ್ಣವಿವರವಾಗಿ ಅಂತರ್ಧಾನಿಸಿದ ತಾರೆಯ ಭವಿಷ್ಯವೇನು? ಸಂಶೋಧನೆಗೆ ವಸ್ತು ಸಿದ್ಧವಾಗಿದೆ. ಪಥ? ಪಥಿಕ?

ದಾರಿಗಾ! ಪಥದತ್ತವಾಗಿಲ್ಲ. ನೀನಡೆದು
ತೋರು ನವದೃಶ್ಯವನುಎಲ್ಲಿಯೂ ನಿಲ್ಲದಿರು.
ಯಾರಿಗೂ ಬಾಗದಿರು, ಬದ್ಧನಾಗಿರು ಋತಕೆ
ಹಾರಲಾಗದ ಕಮರಿಯೇ ಇರದು ಅತ್ರಿಸೂನು||

(ಓದಿ ಇದೇ ಲೇಖಕನ ‘ಕೃಷ್ಣ ವಿವರಗಳು’ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಮತ್ತು ‘ಸಪ್ತ ಸಾಗರದಾಚೆಯಲ್ಲೋ…’)

ಎಲ್ಲ ಅನಿಶ್ಚಯ
ಒಂದೆ ಸುನಿಶ್ಯಯ
ನಿನ್ನ ಅಬೆಯ್ಯ ಅಪಾರ ದಯಾ
ದುಃಖ ಹಿರಣ್ಯನ ಸುಖನಖ ಕೃಪೆಯಿಂ
ಸೀಳ್ವನೃಸಿಂಹನ ಮುಖದ ದಯಾ!
ಎಲ್ಲ ಸುಚಂಚಲ! ಒಂದೆ ಅಚಂಚಲ!
ನಿನ್ನ ಚರಣತಲ ಭಕ್ತಿ ಬಲ!
ಎಲ್ಲ ಬಲಗಳಿಗೆ ತಾ ಮೂಲದಬಲ,
ಸಕಲ ತಪೋತರು ಪರಮ ಫಲ!
ಕುವೆಂಪು.

* ‘ಕರ್ತಾರನ ಕಮ್ಮಟ’ ಎಂದರೆ ಭೌತ ವಿಶ್ವಃ ‘ಕೃಷ್ಣವಿವರ’ ಎಂದರೆ Black Hole