ನೈಸರ್ಗಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿರುವ ನಿಯಮಗಳನ್ನು ಮಾನವ ಗ್ರಹಿಸಿ ನಿರೂಪಿಸಿದಾಗ ವಿಜ್ಞಾನವೂ (science) ಈ ನಿಯಮಗಳ ಆಧಾರದಿಂದ ಹೊಸ ಸರಕು ಸೇವೆ ರೂಪಿಸಿದಾಗ ತಂತ್ರವಿದ್ಯೆಯೂ (technology) ಮೈದಳೆದುವು. ನಾಗರಿಕ ಯುಗದ ಆರಂಭವಿದು. ಈ ಮಜಲು ತಲುಪುವ ಮೊದಲು ಮಾನವ ವನ್ಯಮೃಗಜೀವನ ಯುಗ, ಶಿಲಾಯುಗ ಮುಂತಾದ ವಿಕಾಸ ಹಂತಗಳನ್ನು ದಾಟಬೇಕಾಗುತ್ತದೆ.

ಭಾರತದಲ್ಲಿ ನಾಗರಿಕಯುಗ ಕ್ರಿಸ್ತಪೂರ್ವ ಸುಮಾರು 2300ರಿಂದ 1750ರ ತನಕ ವಿಜೃಂಭಿಸಿದ್ದ ಹರಪ್ಪ ಸಂಸ್ಕೃತಿಯ ದಿನಗಳಂದೇ ಪ್ರವರ್ಧಿಸಿತ್ತು. ಮುಂದೆ ಕ್ರಿಸ್ತಪೂರ್ವ ಸುಮಾರು 2000ದಲ್ಲಿ ತೊಡಗಿ ಐದುನೂರು ವರ್ಷಪರ್ಯಂತ ಆರಳಿದ ವೇದಕಾಲದಲ್ಲಿ ನಾಗರಿಕಯುಗ ಇನ್ನಷ್ಟು ಪ್ರಜ್ವಲಿಸಿತು. ವೇದಗಳಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ. ವೇದಪೂರ್ವಕಾಲದ ಸಾಹಿತ್ಯಕ ಉಲ್ಲೇಖಗಳು ಯಾವವು ಲಭ್ಯವಿಲ್ಲ.

ಅಂದು ಚಿಂತನಶೀಲರಿಗೆ ಪ್ರೇರಣೆ ಒದಗಿಸಿದ ನೈಸರ್ಗಿಕ ವ್ಯಾಪಾರಗಳು ಮುಖ್ಯವಾಗಿ ಮೂರು: ಸೃಷ್ಟಿಯ ಸ್ಥತಿಗತಿಗಳನ್ನು ಇಷ್ಟೊಂದು ವ್ಯವಸ್ಥಿತವಾಗಿ ನಿಯಂತ್ರಿಸುತ್ತಿರುವ ವ್ಯಕ್ತಿ ಅಥವಾ ಶಕ್ತಿ ಯಾರು? ಈ ನೆಲದಲ್ಲಿ ಬದುಕನ್ನು ಆರೋಗ್ಯಸಹಿತ ಶಕ್ತಿಪೂರ್ವಕವಾಗಿ ಬಾಳುವುದೆ ಹೇಗೆ? ಆಕಾಶದಲ್ಲಿಯ ಘಟನೆಗಳಿಗೂ ನಿಸರ್ಗದಲ್ಲಿಯ ವಿದ್ಯಮಾನಗಳಿಗೂ ನಡುವೆ ಎದ್ದುಕಾಣುವ ನಿಕಟ ಸಂಬಂಧದ ರಹಸ್ಯವೇನು?

ಮೊದಲನೆಯ ಪ್ರಶ್ನೆಗೆ ಉತ್ತರವಾಗಿ ದೇವರು – ಮತಧರ್ಮ ಎಂಬ ಅಮೂರ್ತ ಭಾವನೆಗಳೂ ಎರಡನಡಯದಕ್ಕೆ ಆಯುರ್ವೇದವೂ ಮೂರನೆಯದಕ್ಕೆ ಜ್ಯೋತಿಷವೂ ಮೈದಳೆದವು. ಅಲ್ಲಿಯ ತನಕ ಅನುಭವಜನ್ಯ ಜ್ಞಾನವಾಗಿ ಮಾನವನ ಜೊತೆ ಹರಿದು ಬಂದಿದ್ದ ಅಸಂಖ್ಯ ಕಿರುತೊರೆ ಊಟೆಗಳು ಆಗ ಸಂಗಮಿಸಿ ಈ ಚಿಂತನಪ್ರಕಾರಗಳು ಪ್ರಟಕವಾದುವು ಎಂದರ್ಥ.

ಅಂದ ಮಾತ್ರಕ್ಕೆ ಇಂದು ನಾವು ವಿಜ್ಞಾನದ ವಿವಿಧ ವಿಭಾಗಗಳನ್ನು ಬೊಟ್ಟು ಮಾಡಿ ತೋರಿಸುವಂತೆ ವೇದಗಳಲ್ಲಿ ಆಯುರ್ವೇದ ಮತ್ತು ಜ್ಯೋತಿಷ ಎಂಬ ಎರಡು ಶಾಖೆಗಳನ್ನು ವಿಭೇದೀಕರಿಸಿ ತೋರಿಸುವುದು ಸಾಧ್ಯವಾಗದು. ಪ್ರಾಚೀನ ನಂಬಿಕೆಗಳು, ಅನುಭಾವಿಕ ಸ್ಫುರಣಗಳು, ಪೌರಾಣಿಕ ರೂಪಕಗಳು, ಧಾರ್ಮಿಕ ಚಿಂತನೆಗಳು ಎಲ್ಲವೂ ವಿಭಿನ್ನ ಪ್ರಮಾಣಗಳಲ್ಲಿ ಬೆಸುಗೊಂಡು ಸ್ಫೂರ್ತಿಯುತ ಸಾಹಿತ್ಯವಾಗಿ ಹೊರಹೊಮ್ಮಿದ ವೇದ ವಾಙ್ಮಯದಿಂದ ಪರಿಕಲ್ಪನೆಗಳನ್ನು ಹೆಕ್ಕಿ ತೆಗೆಯಬೇಕಾಗುತ್ತದೆ.

ಕಾರಣವೇನು? ಜ್ಞಾನದ ಯಾವ ಶಾಖೆಯೂ ಪಠ್ಯಪುಸ್ತಕಗಳಲ್ಲಿ ಕಂಡುಬರುವ ಅಚ್ಚುಕಟ್ಟು ಕ್ರಮದಲ್ಲಿ ಪ್ರಟಕವಾಗುವುದಿಲ್ಲ. ಉದಾಹರಣೆಗೆ, ಇಂದಿನ ತನಕ ನಮಗೆ ತಿಳಿದಿರದ ಒಂದು ನೈಸರ್ಗಿಕ ಘಟನೆ ಫಕ್ಕನೆ ಗೋಚರಿಸಿದ್ದಾದರೆ ನಾವು ತಳೆಯುವ ನಿಲವೇನು? ಯಾವುದೋ ಅಜ್ಞಾತದೈವಿಕಶಕ್ತಿಯ ಪ್ರಭಾವವನ್ನು ಅದರ ಹಿನ್ನೆಲೆಯಲ್ಲಿ ಕಾಣುವುದು! ಎಂದೇ ಪ್ರಾಚೀನ ದಿನಗಳಂದು ಚಿಂತನಶೀಲರು ನೀಡಿದ ಪ್ರತಿಯೊಂದು ವಿವರಣೆಯೂ ಧಾರ್ಮಿಕ – ಪೌರಾಣಿಕ – ಮಾಂತ್ರಿಕ – ರೂಪಕ ಪೋಷಾಕನ್ನು ಪಡೆದದ್ದು ಸಹಜವೇ.

ಈಗ ಆಯುರ್ವೇದದ ವಿಕಾಸಪಥವನ್ನು ಸಮೀಕ್ಷಿಸೋಣ.

ವ್ಯಕ್ತಿಗೆ ತನ್ನ ದೇಹವನ್ನು ಪೋಷಿಸಿ ರಕ್ಷಿಸಿಕೊಳ್ಳಬೇಕು ಎಂಬುದು ಸ್ವಭಾವಸಿದ್ಧ ಬಯಕೆ. ಎಂದೇ ಆರೋಗ್ಯಪಾಲನೆಯ ಮರ್ಮ ಅನುಭವಜನ್ಯ ಜ್ಞಾನವಾಗಿ ಮಾನವನ ಜೊತೆ ಬೆಳೆದುಬಂದಿದೆ. ಇಲ್ಲಿ ಕಾರ್ಯ – ಕಾರಣ ಸಂಬಂಧದ – ಈ ಕಾರ್ಯದ ಕಾರಣ ಇದು ಎಂಬ ಖಚಿತ ಸಂಬಂಧ ಗುರುತಿಸುವ – ತಾರ್ತಿಕವಿಧಾನ ಇಲ್ಲ. ಆದ್ದರಿಂದ ಇಂಥ ತಿಳಿವಳಿಕೆಯಲ್ಲಿ ಸಾಕಷ್ಟು ಕುರುಡು ನಂಬಿಕೆಗಳೂ ಸೇರಿರುವುದು ವಿರಳವಲ್ಲ.

ವೇದಗಳನ್ನು ರಚಿಸಿದ ಋಷಿಗಳು ಈ ಎಲ್ಲ ಮೂಲಭಾವನೆಗಳನ್ನೂ ಸಂಗ್ರಹಿಸಿ ವಿಶ್ಲೇಷಿಸಿದರು. ಜಳ್ಳನ್ನು ತೂರಿ ಕಾಳನ್ನು ಒಟ್ಟಗೂಡಿಸಿ ಆಯುರ್ವೇದದ ಅಂಗವಾಗಿ ಸ್ವೀಕರಿಸಿದರು. ಋಗ್ವೇದದ ಮತ್ತು ಅಥರ್ವವೇದದ ಶ್ಲೋಕಗಳಲ್ಲಿ ಈ ತಾರ್ತಿಕ ಚಿಂತನೆ ಹರಳುಗಟ್ಟಿದೆ. ಅಲ್ಲಿಯ ತನಕ ದೈವವ್ಯಪಾಶ್ರಯಭೇಷಜ ಎನಿಸಿಕೊಂಡಿದ್ದ ಆಯುರ್ವೇದ ಮುಂದೆ ಯುಕ್ತಿವ್ಯಪಾಶ್ರಯಭೇಷಜವಾಗಿ ರೂಪಪರಿವರ್ತನೆಗೊಂಡಿತು. ಅಂದರೆ ಅದು ತನ್ನ ಅಸ್ತಿತ್ವಕ್ಕೆ ದೈವವನ್ನು ಅವಲಂಬಿಸುವುದರ ಬದಲು ಕಾರ್ಯ – ಕಾರಣಸಂಬಂಧ ಅನ್ವೇಷಿಸುವ ವೈಜ್ಞಾನಿಕ ವಿಧಾನವನ್ನು ಅವಲಂಬಿಸಿತು. ರೋಗನಿವಾರಣೆ ಮತ್ತು ಆರೋಗ್ಯಪಾಲನೆ ಹರಕೆ ಪೂಜೆಗಳಿಂದಲ್ಲ, ಔಷಧಿ ಶುಶ್ರೋಷೆಗಳಿಂದ ಮಾತ್ರ ಸಾಧ್ಯ ಎಂಬುದು ಇದರ ಅರ್ಥ. ಇದೊಂದು ಕ್ರಾಂತಿಕ್ರಾರೀ ಪರಿವರ್ತನೆ. ಈ ನೆಲದಲ್ಲಿಯ ಸಮಸ್ಯೆಗೆ ಇಲ್ಲಿಯೇ ಪರಿಹಾರ ಅರಸಬೇಕು, ಎಲ್ಲಿಯೋ ಇರಬಹುದಾದ ಅಜ್ಞಾತ ದೈವದಲ್ಲಿ ಅಲ್ಲ ಎಂಬ ವೈಜ್ಞಾನಿಕ ಮನೋಧರ್ಮದ ಆಗಮನ.

ಆಯುರ್ವೇದದ ಮುಖ್ಯ ಆಕರ ಗ್ರಂಥಗಳು ಚರಕಸಂಹಿತೆ ಮತ್ತು ಸುಶ್ರುತ ಸಂಹಿತೆ ವೈದ್ಯಕೀಯದ ವಿಧಿ ವಿಧಾನಗಳೂ ಸೂತ್ರ ನಿಯಮಗಳೂ ಇವುಗಳಲ್ಲಿ ವ್ಯವಸ್ಥಿತವಾಗಿ ಕ್ರೋಡೀಕರಿಸಲ್ಪಟ್ಟಿವೆ. ಇವು ಸಂಕಲಿತವಾದ ಅವಧಿ ಕ್ರಿಸ್ತಪೂರ್ವ ಸುಮಾರು ನಾಲ್ಕನೆಯ ಶತಮಾನದಿಂದ ಕ್ರಿಸ್ತಶಕ ಸುಮಾರು ಒಂದನೆಯ ಶತಮಾನದ ತನಕ ಸಂದ ಸುಮಾರು ಐದುನೂರು ವರ್ಷಗಳು.

ಚರಕಸಂಹಿತೆಯಲ್ಲಿ ಬರೆದಿದೆ, “ಗುಣಪಡಿಸಲಾಗುವ ಮತ್ತು ಗುಣಪಡಿಸಲಾಗದ ರೋಗಗಳ ನಡುವಿನ ವ್ಯತ್ಯಾಸಗಳ ಅರಿವಿರುವ ಒಬ್ಬ ತಜ್ಞ ವೈದ್ಯ ಸಕಾಲದಲ್ಲಿ ಯುಕ್ತ ಚಿಕಿತ್ಯೆ ತೊಡಗಿದ್ದಾದರೆ ಆತನಿಗೆ ಯಶಸ್ಸು ಶತಸ್ಸಿದ್ಧ.”

ಕ್ರಿಸ್ತಪೂರ್ವ ಆರನೆಯ ಶತಮಾನದಿಂದ ನಾಲ್ಕನೆಯ ಶತಮಾನದ ತನಕ ಆಯುರ್ವೇದ ಪ್ರವಧಿಸುತ್ತಿದ್ದ ವೈಜ್ಞಾನಿಕ ಹವೆಯಲ್ಲಿ, ಭೌತವಿಶ್ವ ಕುರಿತಂತೆ ಹಲವಾರು ಮೂಲಭೂತ ಪರಿಕಲ್ಪನೆಗಳು ಮೈದುಳೆದುವು. ಇವುಗಳ ಪೈಕಿ ಹೆಸರಿಸಬೇಕಾದವು ಮುಖ್ಯವಾಗಿ ನಾಲ್ಕು.

ಮೊದಲನೆಯದು, ಪಂಚಭೂತ ಪರಿಕಲ್ಪನೆ. ಇದರ ಪ್ರಕಾರ ವಿಶ್ವದ ಅನಂತವೈವಿಧ್ಯ ಅದರ ಘಟಕಗಳಾದ ಮಣ್ಣು, ನೀರು ಗಾಳಿ, ಬೆಳಕು ಮತ್ತು ಆಕಾಶ ಎನ್ನುವ ಪಂಚಭೂತಗಳ ವಿವಿಧ ಸಂಯೋಜನೆಗಳ ಫಲ, ಈ ಸಂಯೋಜನೆ ಸಂಗತವಾಗಿರುವಾಗ ಸುಸ್ಥಿತಿ, ಇಲ್ಲದಾಗ ಏರುಪೇರು. ಉದಾಹರಣೆಗೆ ಆಹಾರದಲ್ಲಿಯ ಪಂಚಭೂತಗಳ ಸಂಯೋಜನೆ ದೇಹದಲ್ಲಿಯ ಅದೇ ಸಂಯೋಜನೆಯೊಂದಿಗೆ ಹೊಂದದಾಗ ವ್ಯಕ್ತಿ ರೋಗಗ್ರಸ್ತನಾಗುತ್ತಾನೆ. ಆದ್ದರಿಂದ ವೈದ್ಯ ಮಾಡಬೇಕಾದದ್ದು ಈ ಸಾಂಗತ್ಯದ ಪುನಸ್ಸ್ಥಾಪನೆ.

ಎರಡನೆಯದು ಪರಮಾಣು ಪರಿಕಲ್ಪನೆ. ಇದರ ಪ್ರಕಾರ ಸಮಸ್ತ ವಿಶ್ವವೂ ಪರಮಾಣುಗಳಿಂದ ರಚಿತವಾಗಿದೆ. ದ್ರವ್ಯದ ಸೂಕ್ಷ್ಮಾತಿಸೂಕ್ಷ್ಮ ಕಣವೇ ಪರಮಾಣು (ಇಂದಿನ ಪರಿಭಾಷೆಯಲ್ಲಿ ಇದು ಅಣು, molecule). ಪರಮಾಣುಗಳಲ್ಲಿರುವ ಗುಣವೈವಿಧ್ಯದ ಕಾರಣವಾಗಿ ವಸ್ತುಗಳಲ್ಲಿ ವಿಭಿನ್ನ ಲಕ್ಷಣಗಳು ಪ್ರಕಟವಾಗುತ್ತವೆ. ಕಾಲ, ಚಲನೆ, ಭಾರ ಶಬ್ದ ಮುಂತಾದ ಮೂಲಭೂತ ಭೌತಪರಿಕಲ್ಪನೆಗಳ ಬುನಾದಿಯನ್ನು ಇಲ್ಲಿ ಕಾಣುತ್ತೇವೆ.

ಮೂರನೆಯದು, ಗಣಿತದ ಅಭಿವರ್ಧನೆ. ವೈದಿಕ ಕರ್ಮಗಳಲ್ಲಿ ಹೋಮ, ಯಜ್ಞ ಮುಂತಾದ ಅಗ್ನಿಕಾರ್ಯಗಳಿಗೆ ವಿಶೇಷ ಪ್ರಾಮುಖ್ಯವಿತ್ತು. ಅಂದಮೇಲೆ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಒಂದು ಸಂಹಿತೆ ಇರಲೇಬೇಕಷ್ಟೆ. ರೇಖಾಗಣಿತ, ಅಂಕಗಣಿತ ಮುಂತಾದ ಗಣಿತ ವಿಭಾಗಗಳು ಹೀಗೆ ಜನಿಸಿದುವು. ಇವೆಲ್ಲವೂ ಶುಲ್ವಸೂತ್ರಗಳು ಎಂಬ ಗಣಿತ ಸಂಹಿತೆಯಲ್ಲಿ ಸಂಗ್ರಹವಾಗಿವೆ. ಯಾವುದೇ ವೃತ್ತದ ಕ್ಷೇತ್ರಫಲಕ್ಕೆ ಸಮಕ್ಷೇತ್ರಫಲವಿರುವ ಚೌಕವನ್ನು ರಚಿಸುವುದು ಸಾಧ್ಯವೇ ಎಂಬ ಸಮಸ್ಯೆ ಅವರಿಗೆ ಎದುರಾಗಿತ್ತು. ಇದಕ್ಕೆ ಅವರು ಪ್ರಾಯೋಗಿಕ ಪರಿಹಾರ ಕಂಡುಕೊಂಡಿದ್ದರು. ಇಂದಿನ ಗಣಿತ ಪರಿಭಾಷೆಯಲ್ಲಿ ಇದನ್ನು ವೃತ್ತದ ಚೌಕೀಕರಣ (Squaring the circle) ಎನ್ನುತ್ತೇವೆ. ಲಂಬಕೋನ ತ್ರಿಭುಜದಲ್ಲಿ ಕರ್ಣಕ್ಕೂ ಉಳಿದೆರಡು ಭುಜಗಳಿಗೂ ನಡುವೆ ಇರುವ ಸಂದಂಧವೇನು? ಪೈಥಾಗೊರಸನ ಪ್ರಮೇಯವೆಂದು ಗ್ರೀಕರಿಂದ ಬಹುಕಾಲಾನಂತರದಲ್ಲಿ ಪುನಶ್ಶೋಧಿಸಲ್ಪಟ್ಟ ಈ ಸಂಬಂಧ ಶುಲ್ವಸೂತ್ರಕಾರರಿಗೆ ಅಂದೇ ತಿಳಿದಿತ್ತು. ಸೊನ್ನೆಯ ಉಪಜ್ಞೆ (invention) ಮತ್ತು ಉಪಯೋಗ ಬೆಳಕಿಗೆ ಬಂದದ್ದು ಈ ಸುಮಾರಿಗೆ. ಇದೊಂದು ಮಹತ್ತರವಾದ ಶೋಧ – ಚಕ್ರದ ಶೋಧ ತಂತ್ರವಿದ್ಯೆಯ ಮುನ್ನಡೆಗೆ ಹೇಗೊ ಸೊನ್ನೆಯ ಶೋಧ ವಿಜ್ಞಾನದ ಮುನ್ನಡೆಗೆ ಹಾಗೆ ನಡೆಹಾಸಿತ್ತು. ಸಂಖ್ಯಾಪ್ರಪಂಚದ ಋಣ ಹಾಗೂ ಧನ ಪಾರ್ಶ್ವಗಳ ನಡುವಿನ ದೀಪಸ್ತಂಭವೇ ಸೊನ್ನೆ.

ನಾಲ್ಕನೆಯದು, ವೇದಾಂಗ ಜ್ಯೋತಿಷ. ಆಕಾಶದ ಸ್ಥಿರ ನಕ್ಷತ್ರ ಪುಂಜಗಳ ಮುನ್ನೆಲೆಯಲ್ಲಿ ಸೂರ್ಯಚಂದ್ರೆ ಚಲನೆ, ಗ್ರಹಣ, ಕಾಲವನ್ನು ದಿವಸ – ತಿಂಗಳು – ವರ್ಷಗಳಾಗಿ ವಿಭಾಗಿಸುವ ಕ್ರಮ ಮುಂತಾದವು ಋಗ್ವೇದದಲ್ಲಿ ದಾಖಲಿಸಲ್ಪಟ್ಟಿವೆ. ಆದರೆ ಗ್ರಹಗಳ ಬಗ್ಗೆ ಅಲ್ಲಿ ಉಲ್ಲೇಖವಿಲ್ಲ. ಅಂದಿನ ವಿಜ್ಞಾನಿಗಳು ಗ್ರಹಗಳನ್ನು ಗುರುತಿಸಿರಲಿಲ್ಲವೆಂದು ಇದರ ಅರ್ಥ ಅಲ್ಲ. ಚಂದ್ರನ ಮಾಸಿಕ ಕಕ್ಷೆಯ ಹಿನ್ನೆಯಲ್ಲಿ ಅಭಿಜಿನ್ನಕ್ಷತ್ರವನ್ನೂ ಒಳಗೊಂಡಂತೆ ಅಶ್ವಿನಿಯಿಂದ ರೇವತಿವರೆಗಿನ 28 ನಕ್ಷತ್ರಗಳನ್ನು ಪತ್ತೆ ಹಚ್ಚಿದರು. ಯಜುರ್ವೇದದಲ್ಲಿ ಇವುಗಳ ಬಗ್ಗೆ ಉಲ್ಲೇಖವಿದೆ. ಸೂರ್ಯನ ವಾರ್ಷಿಕ ಕಕ್ಷೆ, ಅಂದರೆ ಕ್ರಾಂತಿವೃತ್ತ (ecliptic) ಕುರಿತ ಋಗ್ವೇದದಲ್ಲಿ ವಿವರಣೆ ಉಂಟು: ಇವೆರಡೂ ಕಕ್ಷೆಗಳನ್ನು ಒಳಗೊಂಡಿರುವ ನಾಕ್ಷತ್ರಿಕಪಟ್ಟಿಗೆ ರಾಶಿಚಕ್ರವೆಂದು (zodiac) ಹೆಸರು. ಈ ಚಕ್ರದ ಆರಂಭಬಿಂದುವಾಗಿ ಯಾವ ನಕ್ಷತ್ರವನ್ನು ಆಯಬೇಕು? ಇದಕ್ಕೆ ಉತ್ತರವನ್ನು ಅವರು ಸೂರ್ಯನ ವಾರ್ಷಿಕ ಆಂದೋಳನದಿಂದ ನಿಗಮಿಸಿರುವಂತೆ (deduce) ತೋರುತ್ತದೆ. ಸೂರ್ಯನ ದೈನಂದಿನ ಉದಯಾಸ್ತಬಿಂದುಗಳು ನಿಯತಕಾಲಿಕವಾಗಿ ಉತ್ತರಕ್ಕೂ ದಕ್ಷಿಣಕ್ಕೂ ತೊನೆಯುತ್ತಿದ್ದುದು ಅವರ ಲಕ್ಷ್ಯಕ್ಕೆ ಬಂದಿತು. ಪರಿಣಾಮವಾಗಿ ಹಗಲಿರುಳುಗಳ ಅವಧಿಗಳಲ್ಲಿ ಏರಿಳಿತಗಳು ಪ್ರಕಟವಾಗುತ್ತಿದ್ದುವು. ಸೂರ್ಯ ಕೃತ್ತಿಕಾನಕ್ಷತ್ರದಲ್ಲಿದ್ದಾಗ ಈ ಅವಧಿಗಳು ಸಮವಾಗಿದ್ದುವು. ಅಂದು ಸೂರ್ಯ ಪೂರ್ವಬಿಂದುವಿನಲ್ಲಿ ಮೂಡಿ ಪಶ್ವಿಮ ಬಿಂದುವಿನಲ್ಲಿ ಕಂತುತ್ತಿತ್ತು, ಮತ್ತು ಅಂದಿನಿಂದ ಮುಂದಕ್ಕೆ ಹಗಲಿನ ಅವಧಿ ಇರುಳಿನದ್ದಕ್ಕಿಂತ ದೀರ್ಘತರವಾಗುತ್ತ ಹೋಗುತ್ತಿತ್ತು. ಹೀಗೆ ಸರ್ವಪ್ರಶಸ್ತವೂ ಶುಭಕರವೂ ಆದ ಕೃತ್ತಿಕಾನಕ್ಷತ್ರವನ್ನು ಆರಂಭಬಿಂದುವೆಂದು ಅವರು ಆಯ್ದರು. ಮುಂದೆ ಕ್ರಿಸ್ತಶಕ ಆರನೆಯ ಶತಮಾನದಲ್ಲಿ ‘ಸೂರ್ಯಸಿದ್ಧಾಂತ’ ಪ್ರಕಟವಾಗುವ ವೇಳೆಗೆ, ಅಂದರೆ ಸುಮಾರು 1600 ವರ್ಷಗಳ ದೀರ್ಘಾವಧಿಯಲ್ಲಿ, ಸೂರ್ಯ ಅಶ್ವಿನೀ ನಕ್ಷತ್ರಕ್ಕೆ ಬಂದಾಗ – ಕೃತಿಕಾಕ್ಕೆ ಅಲ್ಲ – ಮೇಲೆ ವಿವರಿಸಿದ ಲಕ್ಷಣಗಳು ಪ್ರಕಟವಾಗುತ್ತಿದ್ದುವು. ಎಂದೇ ಸೂರ್ಯಸಿದ್ಧಾಂತಕಾರರು ರಾಶಿಚಕ್ರದ ಆರಂಭಬಿಂದು ಆಶ್ವಿನಿಯೆಂದು ತಿದ್ದುಪಡಿಮಾಡಿದರು. ಹೀಗೆ ಪ್ರಾಚೀನಕಾಲದಲ್ಲಾಗಲೀ ತದನಂತರದ ಸೂರ್ಯಸಿದ್ಧಾಂತದ ಕಾಲದಲ್ಲಾಗಲೀ ಜ್ಯೋತಿಷಿಗಳು ಆಕಾಶವನ್ನು ಚಿಕಿತ್ಸಕವಾಗಿ ವೀಕ್ಷಿಸಿ ಮಾಹಿತಿಗಳನ್ನು ಕಲೆಹಾಕಿ ತಾರ್ಕಿಕ ದೃಷ್ಟಿ ಹರಿಸಿ ಸರಿಯಾದ ಫಲಿತಾಂಶ ಪಡೆದಿದ್ದರು. ಇಲ್ಲಿ ವೈಜ್ಞಾನಿಕ ಮನೋಧಮ ಪ್ರಕಟವಾಗುವುದನ್ನು ಕಾಣುತ್ತೇವೆ.

ಆಯುರ್ವೇದ, ಯಜ್ಞಗಣಿತ ಮತ್ತು ಜ್ಯೋತಿಶಾಸ್ತ್ರ ಈ ಮೂರು ಮುಖ್ಯ ವಿಜ್ಞಾನ ಪ್ರಕಾರಗಳು ಪ್ರಾಚೀನ ಭಾರತದಲ್ಲಿ. ಅಂದರೆ ವೇದಕಾಲದಲ್ಲಿ ಸುಪುಷ್ಟವಾಗಿ ಬೆಳೆದು ತದನಂತರದ ವರ್ಷಗಳಲ್ಲಿ ಅಭಿವರ್ಧಿಸಿದುವು. ಈ ಅಭಿವರ್ಧನೆಯ ಅಂಗವಾಗಿ ಸಸ್ಯ ಪ್ರಾಣಿ ಭೂಮಿ ಜಲ ವಾಯು ಜೀವಿ ಅಜೀವಿ ಮುಂತಾದವುಗಳ ವ್ಯವಸ್ಥಿತ ಅಧ್ಯಯನ ಆರಂಭವಾಯಿತು. ಆಗ ಲಭಿಸಿದ ನಿಯಮ ‘ತತ್ತ್ವ’ ಸೂತ್ರ ಮುಂತಾದವರನ್ನು ನಿಸರ್ಗಕ್ಕೆ ಅನ್ವಯಿಸಿ ಜೀವನೋಪಯುಕ್ತ ಸರಕುಗಳನ್ನೂ ಸೇವೆಗಳನ್ನೂ ಅಂದಿನವರು ಪಡೆದಿದ್ದರು. ಇದು ತಂತ್ರವಿದ್ಯೆಯ (technology) ಕ್ಷೇತ್ರ.

ಕೆಲವು ಉದಾಹರಣೆಗಳು

  • ಸಂಖ್ಯೆ 1ರ ಬಲಕ್ಕೆ ಹನ್ನೆರಡು ಸೊನ್ನೆ ಬರೆದಾಗ ದೊರೆಯುವ ಬೃಹತ್ಸಂಖ್ಯೆ ವೇದಕಾಲದವರಿಗೆ ತಿಳಿದಿತ್ತು. ಇದರ ಹೆಸರು ಶಂಖ, ಇಂದಿನ ಪರಿಭಾಷೆಯಲ್ಲಿ ಇದು 1012. ರಾಮಾಯಣ ಕಾವ್ಯದಲ್ಲಿ 1050ರ ಉಲ್ಲೇಖವಿದೆ. ಇದರ ಹೆಸರು ಸಮುದ್ರ.
  • ಸಸ್ಯ ಹಾಗೂ ಪ್ರಾಣಿಗಳನ್ನು ಅವುಗಳ ಗುಣಲಕ್ಷಣಾನುಸಾರ ವರ್ಗೀಕರಿಸಿ ಅಧ್ಯಯನಗೈಯಲಾಗಿತ್ತು.
  • ಅದುರಿನಿಂದ ಕಬ್ಬಿಣವನ್ನು ಸಂಸ್ಕರಿಸಿ ಉಪಯೋಗಿಸುವ ತಂತ್ರವಿದ್ಯೆ ವೇದಕಾಲದಲ್ಲೇ ಕರಗತವಾಗಿತ್ತು.
  • ತದನಂತರದ ದಿನಗಳಲ್ಲಿ ವೈದ್ಯವಿಜ್ಞಾನದ ಅಂಗವಾಗಿ ಶಸ್ತ್ರಚಿಕಿತ್ಸೆ ಕೂಡ ಬಳಕೆಗೆ ಬಂದಿತು. ಕೃತಕ ಕಿವಿ ಮತ್ತು ಮೂಗು ಜೋಡಿಸುವ ಕಲೆ ತಿಳಿದಿತ್ತು.
  • ಪಾದರಸದ ಉಪಯೋಗ ವ್ಯಾಪಕವಾಗಿತ್ತು. ಸರಳ ರಾಸಾಯನಿಕಗಳ ಯುಕ್ತ ಪಾಕದಿಂದ ಸಂಕೀರ್ಣ ಪದಾರ್ಥಗಳನ್ನು ತಯಾರಿಸುವ ವಿಧಾನ ಗೊತ್ತಿತ್ತು.
  • ಇಂದಿನ ಸಿಮೆಂಟನ್ನು ಹೋಲುವ ವಜ್ರಗಾರೆಯನ್ನು ಏಳನೆಯ ಶತಮಾನದ ಹೊತ್ತಿಗೆ ಶೋಧಿಸಲಾಗಿತ್ತು.

ಈ ಪಟ್ಟಿಯಲ್ಲಿ ಹೀಗೆಯೇ ಬೆಳೆಸಬಹುದು. ಆದರೆ ವಿಜ್ಞಾನದ ಹಾದಿ ಎಂದೂ ಸುಗಮವಾಗಿರಲಿಲ್ಲ. ವಿಜ್ಞಾನ ಆರೋಗ್ಯಕರವಾಗಿ ವಿಕಸಿಸಬೇಕಾದರೆ ದೇಶ ಸ್ವತಂತ್ರವಾಗಿದ್ದು ಬಾಹ್ಯ ಬಾಧೆಗಳಿಂದ ಮುಕ್ತವಾಗಿರಬೇಕು. ದೇಶದೊಳಗೆ ಶಾಂತಿ ನೆಲಸಿರಬೇಕು. ವಿಜ್ಞಾನದ ಜ್ಞೇಯನಿಷ್ಠ (objective) ಚಿಂತನಕ್ಷೇತ್ರವನ್ನು ಜ್ಞಾತೃನಿಷ್ಠ (subjective) ಪ್ರಭಾವಗಳು ಪೀಡಿಸಬಾರದು. ಇಂಥ ಆದರ್ಶ ಸನ್ನಿವೇಶ ಪ್ರಪಂಚದಲ್ಲಿ ಎಲ್ಲಿಯೂ ಎಂದೂ ಇರಲಿಲ್ಲ. ಭಾರತದಲ್ಲಿ ಏನಾಯಿತು ಗೊತ್ತೇ?

ವೈದಿಕ ಕ್ರಿಯೆಗಳ ಅಂಗವಾಗಿ ಗಣಿತವೂ ಜ್ಯೋತಿಷವೂ ಬೆಳೆದದ್ದರಿಂದ ಧುರೀಣತ್ವ ರಾಜ ಮತ್ತು ಪುರೋಹಿತ ವರ್ಗದಲ್ಲಿ ನೆಲಸಿತು. ವಿಜ್ಞಾನಿಗಳಲ್ಲಿ ಅಲ್ಲ. ಗ್ರಹಣಗಳಾಗಲೀ ಸೂರ್ಯಚಂದ್ರರ ಚಲನವಲನಗಳಾಗಲೀ ಧೂಮಕೇತು ದರ್ಶನವಾಗಲೀ ರಾಜರ ಇಚ್ಛೆ ಅರಿತು ವರ್ತಿಸಬೇಕಾದರೆ ಜ್ಯೋತಿಶ್ಶಾಸ್ತ್ರ ಗತಿ ಏನು, ಪಥ ಏನು? ಈ ಶಾಸ್ತ್ರದ ನೈಜಸ್ಥಾನವನ್ನು ಫಲಜ್ಯೋತಿಷ (astrology) ಎಂಬ ವಂಚಕವಾಙ್ಮಯ ಆಕ್ರಮಿಸಿತು. ಇನ್ನು ಆಯುರ್ವೇದದ ಅವಸ್ಥೆ? ಇದು ಪ್ರಭುಗಳ ವಿಶೇಷ ವಕ್ರದೃಷ್ಟಿಗೆ ಈಡಾಯಿತು. ಏಕೆಂದರೆ ವೈದ್ಯನಿಗೆ ಖಚಿತವಾಗಿ ತಿಳಿಯುತ್ತದೆ ರಾಜನೂ ಒಬ್ಬ ಮನುಷ್ಯನೇ, ನಿಸರ್ಗ ‘ಇವ ಕುಲೀನ ವಂಶಜ ಅವ ಹೀನವಂಶಜ’ ಎಂಬ ವಿಭೇದೀಕರಣ ಮಾಡುವುದಿಲ್ಲ. ಇತ್ಯಾದಿ. ಈ ಸತ್ಯದರ್ಶನ ಆಡಳಿತ ಸಂಯಂತ್ರಕ್ಕೆ ಅಪಥ್ಯ ನಿದರ್ಶನಾರ್ಥ ಮುಂದಿನ ಮೂರು ಸೂತ್ರಗಳನ್ನು ಗಮನಿಸಿ :

ಚರಕಸಂಹಿತೆಯಲ್ಲಿರುವ ವಿಜ್ಞಾನವಾಣಿ : ತರ್ಕರಹಿತವಾಗಿ ಪಡೆದ ಯಾವುದೇ ಯಶಸ್ಸು ಕೇವಲ ಆಕಸ್ಮಿಕ.

ಕಠೋಪನಿಷತ್ತಿನಲ್ಲಿರುವ ಧರ್ಮವಾಣಿ : ಈ ಪರಮಾಂತಿಮ ಜ್ಞಾನ ಸಿದ್ಧಿಸುವುದು ತರ್ಕದಿಂದಲ್ಲ.

ಹೀಗೆ ವಿಜ್ಞಾನ ಕಾರ್ಯ – ಕಾರಣ ಸಂಬಂಧ ಅನ್ವೇಷಿಸುವ ಜ್ಞೇಯನಿಷ್ಠ ಮಾರ್ಗಾವಲಂಬನೆಯನ್ನು ವಿಧಿಸಿದರೆ ಧರ್ಮ ಮತ್ತು ಪ್ರಭುತ್ವ ಅದನ್ನು ನಿರಾಕರಿಸಿದುವು. ಕಾರಣ? ವೈಯಕ್ತಿಕ ಸ್ವಾರ್ಥ.

ವೇದೋಪನಿಷತ್ತುಗಳು ಕಾಲದ ಪ್ರಾಚೀನ ಭಾರತದಲ್ಲಿ ವಿಜ್ಞಾನ ಚೆನ್ನಾಗಿ ಬೇರುಬಿಟ್ಟು, ನಳನಳಿಸತೊಡಗಿದರೂ ತರುವಾಯದ ಶತಮಾನಗಳಲ್ಲಿ ಈ ವೃಕ್ಷ ನಿರೀಕ್ಷಿತ ಬೆಳವಣಿಗೆ ಪ್ರದರ್ಶಿಸದಿರಲು ನೀಡಬಹುದಾದ ಮುಖ್ಯಕಾರಣಗಳು ಎರಡು: ಧರ್ಮ ಮತ್ತು ಪ್ರಭುತ್ವ ಒಟ್ಟಾಗಿ ಪ್ರತ್ಯೇಕವಾಗಿ ಸೃಷ್ಟಿಸಿದ ಶ್ವಾಸಬಂಧಕ ಪರಿಸರ, ಮತ್ತು ದೇಶದ ಸ್ವಾತಂತ್ರ್ಯ ಹರಣ.

ಇಂದಿನ (2002) ಸ್ವತಂತ್ರ ಭಾರತದಲ್ಲಾದರೂ ಪರಿಸ್ಥಿತಿ ಸುಧಾರಿಸಿದೆಯೇ?

ಸಂಶಯದ ಕಲ್ಲಿಂದ ಕಟ್ಟಿರುವ ಸೌಧದಲಿ
ಕಂಸಹೃದಯದ ಶಕುನಿ ಮಾರೀಚ ಮಾವರನು
ಸಂಸ್ಥಾಪಿಸಿದೊಡಲ್ಲಿ ದ್ವೇಷಧಗಧಗಿಸಿ ಜನ
ಧ್ವಂಸವಾಗುವುದು ಸರ್ವತ್ರ ದಿಟ ಅತ್ರಿಸೂನು ||

ಅತಿ ರಿಕ್ತ, ಶ್ರೀಮಂತ ಬೀಗವಿಕ್ಕಿಹ ಎರಡು
ಸಂದೂಕಗಳು ಕೀಲಿಯೊಂದರದು ಇನ್ನೊಂದು
ರೊಳಗಡಗಿ ಕೊಂಡಿಹುದು: ಬೀಗವನು ತೆರೆವಾತ
ಧೀಮಂತ, ಯುಗಪುರುಷ, ದ್ರಷ್ಟಾರ ಅತ್ರಿಸೂನು ||

ಋತ ಶೋಧನಾರ್ಥ ವಿಜ್ಞಾನ ನಡೆ ಹಿಡಿದನವ
ಸತ್ಯ ದರ್ಶನಕೆಂದು ಧರ್ಮಪಥದಲಿವ,
ಪ್ರಭುತ್ವ ಮಾರ್ಗದಲಿನ್ನುಳಿದವ ತೆರಳಿದರುಕಲಾ
ರಿತ್ತವರ ಹಾದಿಗಳು ಶೃಂಗದಲಿ ಅತ್ರಿಸೂನು ||
(೨೦೦೨)