ಶೇಕ್‌ಸ್ಪಿಯರ್, ಕವಿ ‘ಜೂಲಿಯಸ್ ಸೀಸರ್’ ನಾಟಕದಲ್ಲಿ ಧೂಮಕೇತು ಪ್ರತಿಮೆಯನ್ನು ಬಳಸಿರುವ ಪರಿಗಮನಿಸಬಹುದು:

ಕಾಣಿಸವು ಧೂಮಕೇತುಗಳು ತಿರುಕರು ಸಾಯೆ
ಸಾಮ್ರಾಟರಂತ್ಯಮಂ ಬಾನೆ ತಾನುರಿದು ಬಿತ್ತರಿಸುವುದು

10
ನೆಯ್ದಾಳುತಿದೆ ಜಗವನೊಂದತಿವಿರಾಣ್ ಮನಂ
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛಿಯಾ ಸ್ವಾತಂತ್ರ್ಯ ಭಾವಮಂ
ನೀಡಿ                
(ಅ.ಸಂ. – 3, 131 – 134)

ಗುರುತ್ವಾಕರ್ಷಣ ನಿಯಮವನ್ನು ಈ ಸಾಲುಗಳು ಧ್ವನಿಸುತ್ತವೆ (ನೋಡಿ – 2). ಭೂಮಿಯ ಮೇಲೆ ನಾವು ಸ್ವೇಚ್ಛೆಯಂತೆ ಸಂಚರಿಸಬಲ್ಲೆವು ಎಂಬ ಭ್ರಾಂತಿ ನಮ್ಮಲ್ಲಿದೆ. ಕಡಿದಾದ ಚಡಾವು ಏರುವಾಗ ನಮ್ಮ ಸಂಚಾರಸ್ವಾತಂತ್ರ್ಯ ಅದೆಷ್ಟು ಸೀಮಿತ ಎಂಬುದು ಅರಿವಾಗುವುದು, ನಮ್ಮ ಪಾರತಂತ್ರ್ಯದ ಬಿಸಿ (ಹೊಡೆತ ಕೂಡ) ಚೆನ್ನಾಗಿ ತಟ್ಟುತ್ತದೆ. ಭೂಮಿಯ ಸಮೀಪತಮ ಆಕಾಶಕಾಯವಾದ ಚಂದ್ರನಲ್ಲಿಗೆ ಹೋಗಬೇಕಾದರೂ ನಾವು ಸಾಧಿಸಬೇಕಾದ ಮಹಾವೇಗ ಹಾಗೂ ತಾಂತ್ರಿಕ ಪ್ರಗತಿಯನ್ನು ಗಮನಿಸುವಾಗ ನಮ್ಮ ದಾಸ್ಯದ ಪೂರ್ಣ ಜ್ಞಾನ ನಮಗೆ ಗೊತ್ತಾಗುವುದು. ಹೀಗೆ ಗುರುತ್ವಾಕರ್ಷಣೆ ನಮಗೆ “ಇಚ್ಛೆಯಾ ಸ್ವಾತಂತ್ರ ಭಾವಮಂ ನೀಡಿ” ನಮ್ಮನ್ನು ಸೂಕ್ಷ್ಮಾತಿಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿ” ಹಾಕಿದೆ.

11
ಕಾಣ್ಪುದಸದಳಮಲಾ
ಮನುಜ ಮನದುತ್ತರಮುಖಿಗೆ ಬಿದಿಯ ಚಿರತಾರೆ!
(ಅ.ಸಂ – 4, 9 – 10)

“ಪಿರಿಯಂಗೆ ರಾಮಂಗೆ ಪಟ್ಟಂಗಟ್ಟಿ ಬೇಗದಿಂದಿರದೆ ತಾಂ ಪಾರಲೌಕಿಕದೆಡೆಗೆ ತನ್ನಾತ್ಮಮಂ ತಿರುಗಿಸಲ್ಕೆಳಸಿ”ದ ದಶರಥ ವಿಧಿಯ ಕೈಗೊಂಬೆಯಾಗಿ ಅದೇ ಪ್ರಿಯಪುತ್ರನಿಗೆ ವನವಾಸನಿರೂಪವನ್ನು ನೀಡುವಂತಾಗುತ್ತದೆ. ದೊರೆ ಮೂರ್ಛೆ ಹೊಂದಿದ್ದಾನೆ. ರಾಮ ವನಗಾಮಿಯಾಗಲು ಸ್ವಸಂತೋಷದಿಂದ ಮುಂದಾಗಿದ್ದಾನೆ. “ಕ್ಷಣಪೂರ್ವದೊಳ್ ಹರ್ಷದಾಗರಮಾಗಿ ನಲಿಯುತಿರ್ದ ಅಯೋಧ್ಯೆ ತಾಂ ಶೋಕಸಾಗರಮಾಯ್ತೆನಲ್. ಕಾಣ್ಬುದಸದಳಮಲಾ ಮನುಜ ಮನದುತ್ತರಮುಖಿಗೆ ಬಿದಿಯ ಚಿರತಾರೆ!” ಉತ್ತರಮುಖಿ ಅಥವಾ ದಿಕ್ಸೂಚಿ ಒಂದು ಉಪಕರಣ. ಇದರೊಳಗೊಂದು ಚಲನಶೀಲ ಕಾಂತಸೂಜಿ (magnetic needle). ಉಪಕರಣವನ್ನು ಬೇಕಾದಂತೆ ತಿರುಗಿಸಿ ಮಟ್ಟಸ ಸ್ಥಾನದಲ್ಲಿಟ್ಟಾಗ ಸೂಜಿ ಉತ್ತರ – ದಕ್ಷಿಣ ದಿಕ್ಕುಗಳಿಗೆ ಅಭಿಮುಖವಾದ ವಿನ್ಯಾಸವನ್ನು ತಳೆದು ನಿಶ್ಚಲವಾಗುತ್ತದೆ. ಸೂಜಿಯಲ್ಲಿ ಗುರುತಿಸಿರುವ ಉತ್ತರ ಕೊನೆ ಉತ್ತಕಾಂತೀಯ ಧ್ರುವನ್ನು (magnetic north) ಸೂಚಿಸುತ್ತದೆ. ಈಗ, ಸ್ಥಿರಧ್ರುವನಕ್ಷತ್ರ ದಿಕ್ಕು ಮತ್ತು ನಿಜ ಉತ್ತರ ದಿಕ್ಕು (true north), ಇವೆರಡೂ ಬೇರೆ ಬೇರೆ ಆದ್ದರಿಂದ ಉತ್ತರಮುಖಿಗೆ ಚಿರತಾರೆಯನ್ನು (ಧುವನಕ್ಷತ್ರ) “ಕಾಣ್ಬುದಸದಳ.”

12
ಮರ್ತ್ಯದಾಳ್ ಬಿದಿಯೊಡನೆ ತಾಂ ನಡೆಯುವನ್ನೆಗಂ
ಕಲಿ; ಬಿಂಕದಿಂ ಬಿದಿಗಿದಿರ್ ಮಲೆಯೆ ಬಲಿ                       
(ಅ.ಸಂ. – 4, 129 – 130)

13
ನಡುರಾತ್ರಿ
ತಾರಾಖಚಿತ ನೀಲಿಮೆಯನುಟ್ಟು ನಿಂದತ್ತು
ನೀರವಂ ತತ್ತಳಿಸಿ ನೋಡುತಿರ್ದರ್ದಂತೆ
ಪಜ್ಜಳಿಸುತರಿಲೊಂದು ಬಾನ್ಪಟದೊಳುರಿದುರಿದು
ಕರ್ಬಿತ್ತರಕೆ ಬೆಂಕೆಗೆರೆಯ ಚಿತ್ತಾರಮಂ
ಮೆತ್ತಿ ಬರೆದರಮನೆಯ ಕತ್ತಲೊಳ್ ಹುದುಗಿರ್ದ
ವಸ್ತಗಳ್ಗಿತ್ತು ನೆಳಲಂ, ಜವಂ ಜವದಿಂದೆ
ಮರೆಯಾಯ್ತು ಮುಳುಗಿ.             
(ಅ. ಸಂ. – 5, 82 – 89)

ಉಲ್ಕಾಪಾತವನ್ನು ಬಲು ಮನೋಹರವಾಗಿ ವರ್ಣಿಸುವ ಸಾಲುಗಳಿವು (ನೋಡಿ – 41)

14
ರವಿಯಾಕರ್ಷಣೆಯನುಳಿಯೆ
ನಿಚ್ಚನೇಮಂಗೆಟ್ಟು ಬಟ್ಟೆ ನಿಟ್ಟೆಗೆ ತಪ್ಪಿ
ತತ್ತರಿಸಿ, ನೀಲ ಶೂನ್ಯಕ್ಕುರುಳುರುಳುವಿಳೆಯಂತೆ            
(ಅ. ಸಂ. – 6, 73 – 75)

“ಮನುಜರೊಲ್ಮೆಯ ಸವಿಯನೊಂದಿನಿತುಮಂ ಕಾಣದೆ, ಮಿಗದ ತೆರದಿ ಮಿದುಳಿಲ್ಲದೆಯೆ ಬೆಳೆದು ಜಡತೆವೆತ್ತಿರ್ದಸೋಂಬೆ” ಮಂಥರೆ, ಕೇಕಯ ರಾಜ ಇವಳನ್ನು ತನ್ನ ಪ್ರಿಯಪುತ್ರಿ ಕೈಕೆಗೆ ದಾದಿಯಾಗಿ ನೇಮಿಸಿದಾಗ “ಮಂಥರೆಯ ಬಾಳ್ ನಿಶೆಗೆ ಶಶಿಯುದಿಸಿದಂತಾಯುತು.” ಮುಂದೆ ಕೈಕೆ ಭರತನನ್ನು ಬೆಸಲೆಯಾದಾಗ “ಮಂಥರೆಗೆ ಮೂರನೆಯ ಕಣ್ ಮೂಡಿದಂತಾಯ್ತು.” ಆಕೆ ಕೈಕೆ ಭರತರನ್ನು ಅದೆಷ್ಟು ನೆಚ್ಚಿಕೊಂಡಿದ್ದಳೆಂದರೆ “ನರರನ್ಯರಿಲ್ಲಾಯಿತ್ತು ಮಂಥರೆಯ ಲೋಕಕ್ಕೆ ಕೈಕೆ ಭರತರ್ ವಿನಾ……..ಭರತನಾಳ್ವಿಕೆಗಾಗಿ ಈ ಪೃಥಿವಿ!” ಮುಂದಿನ ಕತೆ ಗೊತ್ತೇ ಇದೆ. ರಾಮ, ಲಕ್ಷ್ಮಣ, ಸೀತೆಯರು ಅರಣ್ಯಕ್ಕೆ ತೆರಳಿದ್ದಾರೆ. ದಶರಥ ಸಾವನ್ನಪ್ಪಿದ್ದಾನೆ. ದುಃಖಮಲಿನ ಅಯೋಧ್ಯೆಗೆ ಭರತ ತನ್ನ ಮಾವನ ಮನೆಯಿಂದ ಆಗಮಿಸುತ್ತಾನೆ. “ಕೇಳ್ದು ಭರತಂ ಬಂದುದಂ ಮಂಥರೆಯ ಮನಂ ಕೇಗಿ ಕುಣಿದುದು, ಹೀಲಿಗರಿ ಗೆದರಿ.” ಭರತ ದೊರೆ ಆಗುತ್ತಾನೆ ಎಂಬ ಉತ್ಸಾಹ ಸಂಭ್ರಮಗಳಲ್ಲಿದ್ದವಳಿಗೆ ಮೊದಲು ದೊರೆತದ್ದು ಶತ್ರುಘ್ನನಿಂದ ತಾಡನೆ, “ಅಯ್ಯೋ ದಮ್ಮಯ್ಯ, ಬಾರಣ್ಣಯ್ಯ, ರಕ್ಷಿಸೋ” ಎಂದು ಅವಳು ಭರತನನ್ನು ಉದ್ದೇಶಿಸಿ ಹಲುಬಿ ಮೊರೆ ಇಟ್ಟಾಗ ಆತನಿಂದ ಲಭಿಸಿದ್ದು ಭರ್ತ್ಸನೆ, “ತೊಲಗೆಲೆ ಕುರೂಪಿ, ಓ, ತೊಲಗು, ಕಣ್ಬೋಲದಿಂದೆ ತೊಲಗಾಚೆ, ಪಾಪಿ, ಬಳಿಸಾರದಿರ್; ನಿಲ್ಲದಿರ್.” ಭರತನೆಂಬ ರವಿಯ ಆಕರ್ಷಣೆ ಒಂದರಿಂದಲೇ ನೆಲೆಪಡೆದಿದ್ದ ಮಂಥರೆಯ ಏಕೈಕ ಆಸರೆ ಈಗ ತುಂಡಾಗಿ ಹೋಗಿದೆ. ಇನ್ನವಳಿಗೆ ಮುಂಬಟ್ಟೆ ಸೊನ್ನೆ.

ಭೂಮಿ – ಸೂರ್ಯರ ಸಂಬಂಧವನ್ನು ಈಗ ಪರಿಶೀಲಿಸೋಣ. ಭೂಮಿ ನಿರಂತರವಾಗಿಯೂ ನಿಯಮಬದ್ಧವಾಗಿಯೂ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವುದು ಇವೆರಡರ ನಡುವಿನ ಪರಸ್ಪರಾಕರ್ಷಣೆಗಳ ಪರಿಣಾಮವಾಗಿ ಎಂಬುದು ಈಗ ಸುವಿದಿತ ಸಿದ್ಧಾಂತ. ಈ ಆಕರ್ಷಣೆಗಳಲ್ಲಿ ಭೂಮಕಾಯವಾದ ಸೂರ್ಯನ ಆಕರ್ಷಣಬಲ ಅಲ್ಪಕಾಯವಾದ ಭೂಮಿಯ ಆಕರ್ಷಣಬಲಕ್ಕಿಂತ ಅದೆಷ್ಟೂ ಪಟ್ಟು ಅಧಿಕ ಹೀಗಾಗಿ, ಮೊತ್ತದಲ್ಲಿ ಸೂರ್ಯಾಕರ್ಷಣಬಲವೇ ಭೂಕಕ್ಷೆಯನ್ನೂ ಕಕ್ಷಾವೇಗವನ್ನೂ ಕಕ್ಷಾವಧಿಯನ್ನೂ ನಿರ್ಧರಿಸುತ್ತದೆ. ಇಂಥ ಜೀವದಾಯಿನಿ ಆಕರ್ಷಣ ಬಳ್ಳಿಯನ್ನು ಭೂಮಿ ಕಡಿದು ಕೊಂಡದ್ದೇ ಆದರೆ ಅದಕ್ಕೆ ವಿಶಾಲ ವಿಶ್ವದ ಅನಂತ ಶೂನ್ಯತೆಯಲ್ಲಿ ವಿನಾಶವೊಂದೇ ಗತಿ – “ಜಲಮಂ ತಿರಸ್ಕರಿಸಿ ಪೊರಮಟ್ಟ ತಾವರೆಯೆರ್ದೆಗೆ ರವಿಯೆ ಗುರುವೈರಿ ತಾನೆಂತುಟಂತೆ.” (ನೋಡಿ – 21, 27)

15
ಚಿಂತೆಗೆ ಅತೀತಮಪ್ಪಾ ಸೃಷ್ಟಿಯ ರಹಸ್ಯಮಂ
ಚಿಂತಿಸುವ, ಚರ್ಚಿಸುವ, ಸಿದ್ಧಾಂತಗೊಳಿಸಿಯುಂ
ಸಂದೇಹಗೊಂಡದಂ ಮತ್ತೊಂದರಿಂ ತಿದ್ದಿ, ಮೇಣ್
ತತ್ತರಿಸುವನ್ನೆಗಂ ಬುದ್ಧಿ ಜಿಜ್ಞಾಸಿಸುತೆ
ಮುನ್ನಡೆವ ಸಾಹಸ                    
(ಅ. ಸಂ. – 7, 161 – 166)

ವೈಜ್ಞಾನಿಕ ವಿಧಾನವನ್ನು ಸೂತ್ರರೂಪದಲ್ಲಿ ಈ ಸಾಲುಗಳು ಹೇಳುತ್ತವೆ. ಇದರ ಮುಖ್ಯ ಹಂತಗಳು ಹೀಗಿವೆ: ಲಕ್ಷ್ಯದಲ್ಲಿರುವ ವಿದ್ಯಮಾನಕ್ಕೆ ಕಾರಣವಾಗುವ ಸಕಲ ಕಾರಕಗಳನ್ನೂ ಅನುಲಕ್ಷಿಸಿ ಒಂದು ಊಹೆಯ ಮಂಡನೆ; ಈ ಊಹೆಯನ್ನು ಅದೇ ವಿದ್ಯಮಾನದ ವಿವಿಧ ಮುಖಗಳಿಗೂ ಸನ್ನಿವೇಗಳಿಗೂ ಅನ್ವಯಿಸಿ, ಸಂದೇಹಿಸಿ, ವಿವರಗಳನ್ನು ಸಂಗ್ರಹಿಸಿ ಬಳಿಕ ಪರಿಷ್ಕೃತ ಊಹೆಯ ಮಂಡನೆ, ಹೀಗೆಯೇ ಮುಂದುವರಿದು ಪೂರ್ಣ ಸಿದ್ಧಾಂತದ ಸ್ಥಾಪನೆ.

16
ದೇವಾಸುರರ ಮಂದರದ ಮೇಣ್
ವಾಸುಕಿಯ ಮಥನ ದೈತ್ಯತೆಗಂತು ಮುನ್ನೊಮ್ಮೆ
. . . . . . . . . . . . . . . . .
. . . . . . . . . . . . . . . . . .
ಹುಟ್ಟು ಮೂಡಿಲ್ಲದುದರಿಂದೆಸೆವುದಾ ದೀವಿ
ಮೂಗುವಟ್ಟಂತೆವೋಲ್              
(ಅ. ಸಂ. – 9, 353 – 384)

ಇದೊಂದು ಮಹೋಪಮೆ. ವನವಾಸಿ ರಾಮನನ್ನು ಅಯೋಧ್ಯೆಗೆ ಕರೆತರಲು ಭರತ ಕಾಡಿಗೆ ಹೋಗಿದ್ದಾನೆ. ರಾಮನನ್ನು ಮೊದಲ ಬಾರಿಗೆ ಕಂಡಾಗ “ನುಗ್ಗಿ ಮುಂದೋಡಿದನ್ ಭರತನುನ್ಮಾದವೇರ್ದನೋಲ್…… ‘ಅಣ್ಣಯ್ಯ ಓ’ ಎಂದೊಂದೆ ಸೊಲ್ಲೊರಲ್ದಡಿಯನೆಯ್ದವ ಮುನ್ನಮೆ ಸಡಿಲ್ದು ದೊಪ್ಪನೆ ಕೆಡೆದನಿಳೆಗೆ, ತನ್ನ ಭಾರಕೆ ತಾನೆ ಬೇರು ಬಳಲಿದ ತರುಣತರು ಬೀಳುವಂತೆ” –ಇದು ಭರತನ ಮಾನಸಿಕ ಸ್ಥಿತಿ. ಆಗ ರಾಮನ ಮಾನಸಿಕ ಸ್ಥಿತಿ ಹೇಗಿತ್ತು? ಲಕ್ಷ್ಮಣನಿಗೆ ರಾಮ ಹೇಳುತ್ತಾನೆ “…ನಿನ್ನವೋಲೆನಗಾತನುಂ ಪ್ರಿಯಂ… ವತ್ಸ ಲಕ್ಷ್ಮಣ. ಅಯ್ಯೋ ಹನಿ ತುಂಬುತಿದೆ ಕಣ್ಗೆ. ಕಾರಣವನರಿಯೆನೇತಕೊ ಕಂಠಕೊದಗುತಿದೆ ಶಿಶುಗದ್ಗದಂ: ತಾಯಿ ತಂದೆಯರನಿನ್ನೊರ್ಮೆ ಕಾಣ್ಬೆವೆಂಬುಲ್ಲಾಸಮದೆ ದಿಟಂ ಕಾರಣಂ.” ತಂದೆಯ ಅಪಮೃತ್ಯುವಿನ ಸಂಗತಿ ರಾಮನಿಗೆ ಇನ್ನೂ ತಿಳಿದಿಲ್ಲ. ಆದರೆ ದಶರಥ ಎಲ್ಲೂ ಕಾಣುತ್ತಿಲ್ಲ. ಭರತನ ಜಟೆ, ಕಳೆಗುಂದಿದ ಮುಖ. ದುರ್ದರ್ಶ ದೀನಾಕೃತಿ ಅಮಂಗಳವನ್ನು ಸಾರುವಂತಿವೆ. “ತಂದೆಸುಖವೆ? ನೆಲಕೆ ಕಂಟಕವೆ? ನೆಮ್ಮದಿಯ ಕೇಡೆ ತಾಯಂದಿರಿಗೆ? ಬಾಧೆಯೇನಾದುದೇನೆಮ್ಮ ಕೋಸಲ ಜನಕೆ?” ಎಂಬುದಾಗಿ ರಾಮ ಭರತನನ್ನು ಕಾತರತೆಯಿಂದ ಪ್ರಶ್ನಿಸುತ್ತಾನೆ. ಇಂಥ ಮಾನಸಿಕ ಸ್ಥಿತಿಗಳ ಸಂಘರ್ಷದಲ್ಲಿ ಮೂರ್ಛೆ ತಳೆದ ಭರತ ರಾಮನ ಶಿಶಿರೋಪಾಚಾರಕ್ಕೆ ಕಣ್ದೆರೆದು “ಜನಕಜಾರಮಣ ಧೀರೋದಾತ್ತ ವಕ್ಷವಾರ್ಧಿಯ ನೀಲ ನಾವೆಯೊಳ್ ತೇಲಿದನು ಶಾಂತಿಯ ತುರೀಯಕೆ.” ಈ ಸನ್ನಿವೇಶವನ್ನು, ಮೇಲೆ ಉದಾಹರಿಸಿರುವ ಸಾಲುಗಳಲ್ಲಿ, ಒಂದು ಭೌತ ಘಟನೆಗೆ ಕವಿ ಹೋಲಿಸಿದ್ದಾರೆ. ಅಟ್ಲಾಂಟಿಕ್ ಹಾಗೂ ಫೆಸಿಫಿಕ್ ಮಹಾಸಾಗರಗಳು ಡಿಕ್ಕಿಗೊಂಡಾಗ ತಲೆ ಎತ್ತುವ ಪುಟ್ಟ ದ್ವೀಪ. ಕಾಲಾಂತರದಲ್ಲಿ ಆ ಬಂಜರಿನಲ್ಲಿ ನಳನಳಿಸಿ ನಗುವ ಜೀವರಾಶಿ – ಇದು ಆ ಘಟನೆ. ರಾಮ – ಭರತರ ಮಾನಸಿಕ ಕ್ಷೋಭೆಗಳ ಸಂಘರ್ಷದಿಂದ ಎಚ್ಚರ ತಪ್ಪಿ ಬಿದ್ದ ಭರತ ಅಣ್ಣನ ಶುಶ್ರೂಷೆಯಿಂದ ಎಚ್ಚರ ಪಡೆದು ಎದ್ದದ್ದನ್ನು ಈ ಘಟನೆಯ ಮೂಲಕ ಕವಿ ಪ್ರತಿಮಿಸಿದ್ದಾರೆ.

17
ಸಂಜೆ, ಪಡುವಲ್ ಪಣೆಯ ಮೇಲೆ, ಪನಿ
ಕಿಡಿಯಾದ ಮಾಳ್ಕೆಯಿಂ, ತಳತಳಿಸುತಿರೆ ಬೆಳ್ಳಿ
(ಅ. ಸಂ. – 10, 340 – 341)

ಬೆಳ್ಳಿ ಎನ್ನುವ ಪದವನ್ನು ಶುಕ್ರಗ್ರಹಕ್ಕೆ ಬಳಸುವುದು ವಾಡಿಕೆ. ಉಜ್ಜ್ವಲ ಬೆಳ್ಳಿಯ ಹೊಳಪಿನಿಂದ ಇದು ಶೋಭಿಸುವುದರಿಂದ ಈ ಹೆಸರು ಬಂದಿದೆ. ಭೂಮಿಯಲ್ಲಿರುವ ವೀಕ್ಷಕನಿಗೆ ಶುಕ್ರ ಒಂದೋ ಸಂಜೆ ಪಶ್ಚಿಮಾಕಾಶದಲ್ಲಿ ಸೂರ್ಯಾಸ್ತಮಾನದ ತರುವಾಯ ಇಲ್ಲವೇ ಮುಂಜಾನೆ ಪೂರ್ವಾಕಾಶದಲ್ಲಿ ಸೂರ್ಯೋದಯದ ಮುನ್ನ ಕಾಣಬಹುದಷ್ಟೆ. ಇನ್ನೇನು ಕತ್ತಲು ಕವಿಯಲಿದೆ ಅಥವಾ ಇನ್ನೇನು ಸೂರ್ಯ ಮೂಡಲಿದೆ ಎನ್ನುವುದನ್ನು ಬೆಳ್ಳಿಯ ಅಸ್ತಿತ್ವ ಪ್ರತೀಕಿಸುತ್ತದೆ. ಪ್ರಸಕ್ತ ಸಂದರ್ಭದಲ್ಲಿ ಕವಿ ಸಂಜೆಬೆಳ್ಳಿಯನ್ನು ಉಪಯೋಗಿಸಿಕೊಂಡು ಸೀತಾರಾಮಲಕ್ಷ್ಮಣರಿಗೆ ಮುಂದೆ ಬರಲಿರುವ ಕತ್ತಲೆಯ ದಿವಸಗಳ ಕಿರುರೇಖೆಯನ್ನು ಬಲು ಕಲಾತ್ಮಕವಾಗಿ ನೇಯ್ದಿದ್ದಾರೆ. (ನೋಡಿ – ಲಂ. ಸಂ. – 8, 10)

18
ಮಿಥ್ಯೆ ಬಿರಿಯಲ್ಕೆ
ಸತ್ಯಂ ಪ್ರತ್ಯಕ್ಷಮಪ್ಪಂತೆವೋಲ್
(ಕಿಷ್ಕಿಂಧಾ ಸಂಪುಟಂ – 2, 263 – 264)

ವಿಜ್ಞಾನರಂಗದಲ್ಲಿ ನಡೆದಿರುವ ಮತ್ತು ಮುಂದೆ ನಡೆಯಲಿರುವ ಒಂದೊಂದು ತತ್ತ್ವದ ಆವಿಷ್ಕಾರಕ್ಕೂ ಈ ಸಾಲುಗಳನ್ನು ಅನ್ವಯಿಸಬಹುದು. ಇಲ್ಲಿ “ಮಿಥ್ಯೆ” ಎಂದರೆ ಸುಳ್ಳು ಎಂದು ಅರ್ಥಮಾಡಬಾರದು – ಆವಿಷ್ಕರಣ ಕಾಲದ ತನಕ ಸಂಗೃಹೀತವಾದ ಸಕಲ ದತ್ತಾಂಶಗಳ ಸಂಕಲನವಿದು. ಸತ್ಯವನ್ನು ನಮ್ಮಿಂದ ಮರೆಮಾಡಿರುವ ಮುಸುಕಿದ ಈ “ನಶ್ವರದ ಹೃದಯಮಂ” ಭೇದಿಸಿ ವಿಜ್ಞಾನ ಸೀಮಾಪುರುಷ ಸತ್ಯವನ್ನು ಹೊರಗೆಡಹುತ್ತಾನೆ. ಅನಾವರಣಗೊಳಿಸುತ್ತಾನೆ. (ನೋಡಿ – 7)

19
ಪೃಥ್ವಿಗೆ ರಾಹು ಬೇರೆಯೇಂ
ತನ್ನ ನೆಳಲಲ್ಲದೆಯೆ?                  
(ಕಿ.ಸಂ. – 3, 85 – 86)

ಸೀತೆಯನ್ನು ಕಳೆದುಕೊಂಡ ರಾಮಲಕ್ಷ್ಮಣರು ಆಕೆಯನ್ನು ಅರಸುತ್ತ ಹೋಗುತ್ತಿದ್ದಾರೆ. ಕಬಂಧ ಎಂಬ “ಆಕಶೇರು ಕಶ್ಮಲ ಸರೀಸೃಪಂ” ರಾಮನನ್ನು ಹಿಡಿದು ಕಬಳಿಸಲು ಪ್ರಯತ್ನಿಸುತ್ತದೆ. “ತನ್ನಾ ನಿರಾಶೆಯ ತನಗೆ ಕಾಣಿಸಿತೆನಲ್ಕಾ ಕಬಂಧನಂ ಕಂಡೊಡನೆ ನಡುಗಿತು ತನು” ರಾಮನಿಗೆ ಮುಂದೆ ಕಬಂಧಬಾಹುಗಳನ್ನು ಲಕ್ಷ್ಮಣ ಛೇದಿಸಿ ರಾಮನನ್ನು ಸೆರೆ ಬಿಡಿಸುತ್ತಾನೆ. “ಬೆಮರ್ದು ನೆಗೆದೆಳ್ದನ್ ರಘೂದ್ವಹಂ ಕಣ್ದೆರೆದು ಮೈತಿಳಿದು ಭಯಮೂರ್ಛೆಯಿಂ.” ಲಕ್ಷ್ಮಣನಿಂದಾಗಿ ತಾನು ಬದುಕಿದೆನೆಂದು ರಾಜ ಸಹಜವಾಗಿ ಹೇಳುವಾಗ ಲಕ್ಷ್ಮಣ ಮರುನುಡಿಯುತ್ತಾನೆ. “ತಿಳಿದವಂ ತನ್ನ ನೆರಳಿಗೆ ತಾನೆ ಹೆದರುವನೆ?” ರಾಮನ ಉತ್ತರ “ತಿಳಿದವಂ! ತಿಳಿದ ಮೇಲಲ್ತೆ?” ಲಕ್ಷ್ಮಣನ ಮರುಸವಾಲು “ಪೃಥ್ವಿಗೆ ರಾಹು ಬೇರೆಯೇಂ ತನ್ನ ನೆಳಲಲ್ಲದೆಯೇ?” ಹೀಗೆಯೇ ಸಂವಾದ ಮುಂದುವರಿಯುತ್ತದೆ. ಖಗೋಳವೈಜ್ಞಾನಿಕವಾಗಿ ರಾಹು ಪದಕ್ಕೆ ಬೇರೆ ಅರ್ಥ ಉಂಟು. ಅಲ್ಲಿ ರಾಹುವಿಗೆ (ಅಂತೆಯೇ ಕೇತುವಿಗೂ) ಪ್ರತ್ಯಕ್ಷ (ಆದರೆ ಕಾಲ್ಪನಿಕ) ಅಸ್ತಿತ್ವ ಇರುವುದು. ಭೂಮಿಯ ಸುತ್ತ ಸೂರ್ಯ, ಸ್ಥಿರ ನಕ್ಷತ್ರಗಳ ಮುನ್ನೆಲೆಯಲ್ಲಿ, ವಾರ್ಷಿಕವಾಗಿ ಒಂದು ಪರಿಭ್ರಮಣೆ ಮುಗಿಸುತ್ತಿರುವಂತೆ ಭಾಸವಾಗುತ್ತದೆ. ಸೂರ್ಯನ ಈ ತೋರ್ಕೆ ಹಾದಿಗೆ ಕ್ರಾಂತಿವೃತ್ತ (ecliptic) ಎಂದು ಹೆಸರು. ಚಂದ್ರ ವಾಸ್ತವವಾಗಿ ಭೂಮಿಯ ಸುತ್ತ ಪರಿಭ್ರಮಿಸುತ್ತದೆ. ಚಾಂದ್ರಕಕ್ಷೆಯೂ ಕ್ರಾಂತಿವೃತ್ತವೂ ಎರಡು ಸ್ಥಿರ ಬಿಂದುಗಳಲ್ಲಿ ಸಂಧಿಸುವಂತೆ ಭಾಸವಾಗುತ್ತವೆ. ಇವೇ ರಾಹು ಮತ್ತು ಕೇತು. ಆದ್ದರಿಂದ ಇವುಗಳಿಗೆ ಭೂಮಿಯ ನೆರಳಿನಿಂದ ಪ್ರತ್ಯೇಕವಾದ ಅಸ್ತಿತ್ವ ಉಂಟು. ಇನ್ನೂ ಒಂದು ಸಂಗತಿ. ಸೂರ್ಯಗ್ರಹಣವೆಂದರೆ ಚಂದ್ರನ ನೆರಳಿಗೆ ಭೂಮಿಯಪ್ರವೇಶ; ಚಂದ್ರಗ್ರಹಣವೆಂದರೆ ಭೂಮಿಯ ನೆರಳಿಗೆ ಚಂದ್ರನ ಪ್ರವೇಶ. ಈ ಎರಡೂ ಘಟನೆಗಳೂ ಸಾಧ್ಯವಾಗುವುದು ರಾಹು ಇಲ್ಲವೇ ಕೇತು ಬಿಂದುವಿಗೆ ಸಾಕಷ್ಟು ಸಮೀಪದಲ್ಲಿ ಸೂರ್ಯನಿರುವಾಗ ಅಮಾವಾಸ್ಯೆ ಅಥವಾ ಹುಣ್ಣಿಮೆ ಸಂಭವಿಸಿದಾಗ ಮಾತ್ರ ಕುವೆಂಪು ಅವರೊಡನೆ ಈ ವಿಷಯ ಪ್ರಸ್ತಾವಿಸಿದಾದ ಪ್ರಸಕ್ತ ಸಂದರ್ಭದಲ್ಲಿ “ರಾಹು” ಪದವನ್ನು ರೂಢಿಯ ಅರ್ಥದಲ್ಲಿ (ಅಂದರೆ ಕವಿಸಮಯ) ಬಳಸಿರುವುದಾಗಿ ಹೇಳಿದರು. (ನೋಡಿ – ಲಂ. ಸಂ. – 10, 231, 232; ಶ್ರೀ ಸಂ – 2 377).

20
ಸಪ್ತರ್ಷಿಮಂಡಲಮೊಯ್ಯನೇಳ್ವುದಂ
ನೋಡುತಿರೆ       
(ಕಿ.ಸಂ. – 3, 328 – 329)

ಫೆಬ್ರವರಿ ತಿಂಗಳಿನಿಂದ ತೊಡಗಿ ಮುಂದೆ ಆರು ತಿಂಗಳ ಕಾಲ ಸಂಜೆ ಉತ್ತರಾಕಾಶದಲ್ಲಿ ಸ್ಪಷ್ಟವಾಗಿ ಕಾಣುವ ಏಳು ನಕ್ಷತ್ರಗಳ ಚಿತ್ರವೇ ಸಪ್ತರ್ಷಿಮಂಡಲ ಮೂಡುತ್ತಿರುವಾಗ ಬಲು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಂತೆಯೂ ಮಧ್ಯಾಹ್ನರೇಖೆಯ ಸಮೀಪ ಬಂದಾಗ ಕಿತ್ತೆಸೆ ರತ್ನಹಾರದಂತೆಯೂ ಕಂತುತ್ತಿರುವಾಗ ಹಿಡಿ ಮುರಿದ ಸೌಟು ಇಲ್ಲವೇ ಹಿರಿ ನೇಗಿಲಿನಂತೆಯೂ ಕಾಣುವ ಈ ಏಳು ನಕ್ಷತ್ರಗಳಿಗೆ ಪ್ರಾಚೀನ ಮಾನವ ಏಳು ಋಷಿಗಳ ಹೆಸರುಗಳನ್ನು ನೀಡಿದ್ದಾನೆ: ನೋಡಿ 6. ಪುಲಹ – ಕ್ರತು ರೇಖೆಯನ್ನು (ಇದು ಮೊದಲು ಮೂಡುತ್ತದೆ) ವೃದ್ಧಿಸಿದರೆ ತುಸು ದೂರದಲ್ಲಿ ಅದು ಸ್ಥಿರ ಧ್ರುವನಕ್ಷತ್ರವನ್ನು ಸಂಧಿಸುತ್ತದೆ. ರಾಮಲಕ್ಷ್ಮಣರು ಸೀತಾನ್ವೇಷಣೆಯ ಹಾದಿಯಲ್ಲಿ ಶಬರಿ ಆಶ್ರಮ ಸೇರಿದ್ದಾರೆ. ಆದರೆ ಅಲ್ಲಿ ರಾಮ ವಿಚಿತ್ರವಾದ ಮನೋರೋಗಕ್ಕೆ ಈಡಾಗಿ ದಿನ ದಿನ ಕೃಶನಾಗುತ್ತಾನೆ: “ತಾಳಲಾರದ ಶೋಕಭಾರದಿಂ ದಾಶರಥಿ ಏಳಲಾರದೆ ಶಯ್ಯೆಯಿಂ ಶಬರಿ ಶುಶ್ರೂಷೆಯಂ ಬೇಳ್ಪತಿಥಿಯಾದನ್.” ಇಂಥ ಸನ್ನಿವೇಶದಲ್ಲಿ ತೀರ ಖಿನ್ನಮನಸ್ಕನಾಗಿ “ಒರ್ದಿನಂ ಕರ್ದಿಂಗಳಿರುಳಲ್ಲಿ ಲಕ್ಷ್ಮಣನೊರ್ವನೆಯ ಹೊರಗೆ ನಡೆಯುತೊಂದರೆಯಗ್ರದೊಳ್ ಸುಯ್ದು ಸುಯ್ದಳ್ತಳ್ತು ಕುಳ್ತು” ಗಗನವನ್ನು ದಿಟ್ಟಿಸುತ್ತಾನೆ. ಆಗ ಸಪ್ತರ್ಷಿಮಂಡಲ ಮೂಡುವ ದೃಶ್ಯ ಗೋಚರಿಸುತ್ತದೆ. ಅದು ಧ್ರುವನಕ್ಷತ್ರಸೂಚಿಯಾಗಿದೆ ಎಂಬ ಖಗೋಳವೈಜ್ಞಾನಿಕಾಂಶ ಲಕ್ಷ್ಮಣನಿಗೆ (ಆದ್ದರಿಂದ ರಾಮನಿಗೆ) ಮುಂದೆ ಒದಗಲಿರುವ ಶುಭ ಸೂಚನೆಯ ಪ್ರತೀಕವೆಂಬುದು ಗಮನಾರ್ಹ. ಮುಂದಿನ ಸಾಲುಗಳನ್ನು (ಅದೇ – 329 – 353) ಓದಿದಾಗ ಈ ಅಂಶ ವೇದ್ಯವಾಗುತ್ತದೆ (ನೋಡಿ – 26)

21
ಗ್ರಹದ ನಿಷ್ಠಯನೇಕೆ ನಿಷ್ಠೆ ಮಾಡುವೆ ರವಿಗೆ?
(ಕಿ. ಸಂ. – 7, 238)

ಪ್ರಕೃತ ಕಾವ್ಯದಲ್ಲಿ ಬರುವ ರಾವಣ “ಪುಟ್ಟುವಾಗಳೆಯೆ ನಾಂ ನೆತ್ತರೊಳೆ ಪೆಣ್ಣೊಡಲಿನಾಸೆಯಾ ಬೇಟಮಂ ಪೊತ್ತು” ಜನಿಸಿದಾತ. ಅವನ ದೃಷ್ಟಿಯಲ್ಲಿ ಪಾತಿವ್ರತ್ಯ ಎನ್ನುವುದೊಂದು ಅರ್ಥಹೀನ ಆದರ್ಶ. ಏಕೆಂದರೆ ಅವನ ಅನುಭವದಲ್ಲಿ “ರಾಕ್ಷಸೇಶ್ವರನ ಮೈಸಿರಿಗೆ….. ಮೆಚ್ಚಿ ವಶವಾಗದಿರ್ದಾ ಪವಿತ್ರಾಂಗಿ” ಇಲ್ಲವೇ ಇಲ್ಲ (ನೋಡಿ ಕಿ. ಸಂ. – 1, 326 – 354). ಆದ್ದರಿಂದ ಸೀತೆ ಅವನಿಗೆ ವಶವಾಗಬೇಕಾದದ್ದು ಸಹಜ ಎಂಬುದು ಆತನ ತರ್ಕ. ಆದರೆ ರಾವಣನ ಸೆರೆಯಲ್ಲಿ ಸಿಕ್ಕಿದ್ದ ಸೀತೆಯ ವರ್ತನೆ ತದ್ವಿರುದ್ಧವಾಗಿತ್ತು. ಇದಕ್ಕೆ ಪರಿಹಾರವೇನು? ಸೀತೆಯ ಇಚ್ಛಾನುಸಾರ ತಾನೂ ತನ್ನ ಬಳಗದವರೂ ನಡೆದುಕೊಂಡರೆ ಮುಂದೊಂದು ದಿನ ಆಕೆ ತನ್ನ ವಶವಾದಾಳು ಎಂಬುದು ಆತನ ನಂಬಿಕೆ. ಈ ಏರ್ಪಾಡೂ ನಡೆದಿದೆ; ಫಲ ನೀಡುವ ಲಕ್ಷಣ ಕಾಣಲಿಲ್ಲ. ಇವೆಲ್ಲವುಗಳ ಪರಿಣಾಮವಾಗಿ “ನಾನಾ ತುಮುಲ ಭಾವ ಘರ್ಷಣೆಗೆ ರಣನಾದ ರಾವಣಂ.” ಇಂಥ ಮಾನಸಿಕ ಹಿನ್ನೆಲೆಯಲ್ಲಿ ರಾವಣ ತನ್ನ ಪ್ರಿಯಪತ್ನಿಯೂ ಪತಿವ್ರತಾಶಿರೋಮಣಿಯೂ ಆದ ಮಂಡೋದರಿಯ ಪೂಜಾಮಂದಿರ ಪೂಜಾಮಂದಿರ ಪ್ರವೇಶಿಸುತ್ತಾನೆ. ಮಂಡೋದರಿಯ ಸ್ವಭಾವ ಹೇಗಿದೆ? “ನಾನಕ್ಕನೆನ್ ನಿನಗೆ, ತಂಗೆ, ವಯಸ್ಸಿನಿಂದಂತೆ ದುಕ್ಕದಿಂ!” (ನೋಡಿ – ಕಿ, ಸಂ. – 8) ಎನ್ನುವ ಸೂತ್ರವಾಕ್ಯದಲ್ಲಿ ಕವಿ ತುಂಬ ಕುಶಲವಾಗಿ ಈಕೆಯ ಋಜುಸ್ವಭಾವವನ್ನು ಆಸವಿಸಿದ್ದಾರೆ. ಸೀತೆಯೂ ಮಂಡೋದರಿಯೂ ಒಂದೇ ಕಾರಣದಿಂದ ಸಹದುಃಖಿಗಳು ಇವರೀರ್ವರ ತಪಃಪ್ರಭಾವದಿಂದ ರಾವಣನಿಗೆ ಜ್ಞಾನೋದಯವಾಗುವುದೇ ನಿಜವಾದ ಮಂಗಳ. ಆದ್ದರಿಂದಲೇ ಮಂಡೋದರಿ ಸೀತೆಗೆ ಹೇಳುತ್ತಾಳೆ. “ಆ ಮಂಗಳಂ ನಿನಗೆ ಶೀಘ್ರದಿನಕ್ಕೆ! ನಿನ್ನ ಮಂಗಳಮೆನಗೆ ಮಂಗಳಂ!” ಇಂಥ ಮಂಡೋದರಿ ಶಿವಮಂದಿರದಲ್ಲಿ ಪತಿಹಿತಕ್ಕಾಗಿ ಧ್ಯಾನನಿರತಳಾಗಿದ್ದಾಳೆ. ಅಲ್ಲಿಗೆ ರಾವಣ ಪ್ರವೇಶಿಸುತ್ತಾನೆ. “ನಮಿಸಿದನ್ ಮನ್ಮಥಾರಿಗೆ ಮನ್ಮಥನ ಬಂದಿ! ಮುಂಬರಿದನುಬ್ಬೇಗಮಂ ತಡೆಯಲಾರದೆಯೆ ಕುಗ್ಗಿ ಕುಸಿದಂತಿರ್ದ ದೀನ ದುಃಖದ ಸತಿಯ ಹೊರಗೆ.” ಪತಿಪತ್ನಿಯರಲ್ಲಿ ಮಾತು ಮುಂದುವರಿಯುತ್ತದೆ. ರಾವಣ ಹೇಳುತ್ತಾನೆ. “ನಿನ್ನವನ್ ನಾನೇಗಳುಂ.” ಮಂಡೋದರಿ “ಅಯ್ಯೋ ಆ ಪುಣ್ಯಮೆಂದಿಂಗೂ!” ಎಂದು ನಿಡುಸುಯ್ಯುತ್ತಾಳೆ. ಆಗ ರಾವಣ ಹೇಳಿದ ಮಾತು, “ಮತ್ತೆ ಮತ್ತದೆ ಕೊರತೆ! ಗರಹದ ನಿಷ್ಠೆಯನೇಕೆ ನಿಷ್ಠೆ ಮಾಡುವೆ ರವಿಗೆ, ರಾಜ್ಞಿ? ಪಚ್ಚುಗೊಂಡುದರಿಂದಮೇಂ ಅದನಿಕಿನಿತಪೂರ್ಣತೆಯ ಕೊರೆಯಿಲ್ಲ; ಕರೆ ಸಲ್ಲ.” ಖಗೋಳವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಪ್ರತಿಯೊಂದು ಗ್ರಹವನ್ನೂ (ವಾಸ್ತವವಾಗಿ ಸೌರವ್ಯೂಹದ ಸಮಸ್ತ ಕಾಯಗಳನ್ನೂ) ಇತ್ತ ಪ್ರತಿಯೊಂದು ಗ್ರಹಕಾಯ ಸೂರ್ಯನನ್ನೂ ಗೊತ್ತಾದ ಒಂದು ನಿಯಮಾನುಸಾರ ಪರಸ್ಪರ ಆಕರ್ಷಿಸುತ್ತವೆ. ಈ ಆಕರ್ಷಣ ಬಲವನ್ನೇ ಕವಿ ಇಲ್ಲಿ “ನಿಷ್ಠೆ” ಎಂಬುದಾಗಿ ಬಳಸಿಕೊಂಡಿದ್ದಾರೆ. ಸೂರ್ಯ ಮಹಾಗಾತ್ರ ಹಾಗೂ ದ್ರವ್ಯರಾಶಿ ಇರುವ ನಕ್ಷತ್ರ ಸೂರ್ಯಗೋಳದೊಳಗೆ ಒಂದು ಲಕ್ಷಭೂಮಿಗಳನ್ನು ತುಂಬಿದರೂ ಅಲ್ಲಿ ಖಾಲಿ ಜಾಗ ಉಳಿಯುತ್ತದೆ; ಸೂರ್ಯನ ಸಹಿತ ಸೌರವ್ಯೂಹದ ಒಟ್ಟು ದ್ರವ್ಯರಾಶಿಯಲ್ಲಿ ಸೂರ್ಯನದೇ ಅತ್ಯಧಿಕ 99.86%. ಹೀಗಾಗಿ ಸೂರ್ಯ ಯಾವುದೇ ಗ್ರಹವನ್ನು ತನ್ನೆಡೆಗೆ ಸೆಳೆವ ಗುರುತ್ವಾಕರ್ಷಣ ಬಲ ಆ ಗ್ರಹ ಸೂರ್ಯನನ್ನು ತನ್ನೆಡೆಗೆ ಸೆಳೆವ ಬಲಕ್ಕಿಂತ ಅದೆಷ್ಟೆಷ್ಟೋ ಪಟ್ಟು ಅಧಿಕ. ಉದಾಹರಣೆಗೆ ಭೂಮಿಯನ್ನು ಸೂರ್ಯ ಸೆಳೆವಬಲ, ಭೂಮಿ ಸೂರ್ಯನನ್ನು ಸೆಳೆವ ಬಲಕ್ಕಿಂತ 3,32,488 ಪಟ್ಟು ಅಧಿಕ. ಆದ್ದರಿಂದ ಮೊತ್ತದಲ್ಲಿ ಸೂರ್ಯನ ಸುತ್ತ ಸಮಸ್ತಕಾಯಗಳೂ ಪರಿಭ್ರಮಿಸುವ ವಿದ್ಯಮಾನ ಉಂಟಾಗುತ್ತದೆ. ಸೂರ್ಯನ ಈ ಅಗಾಧ ಬಲವನ್ನು ಗ್ರಹಗಳ ನಡುವೆ ಅದೆಷ್ಟೇ ಪಾಲುಮಾಡಿ (ಪಚ್ಚುಗೊಳಿಸಿ) ವಿತರಣೆ ಮಾಡಿದರೂ ಸೂರ್ಯನಿಗೆ ರವೆಯಷ್ಟೂ ಕೊರೆತೆ ಉಂಟಾಗುವುದಿಲ್ಲ – ಸಮುದ್ರದಿಂದ ಎಷ್ಟು ತಂಬಿಗೆ ನೀರನ್ನು ಬಸಿದರೂ ಹೇಗೆ ಅದರ ಗಾತ್ರದ ಮೇಲೆ ಏನೂ ಪರಿಣಾಮವಾಗುವುದಿಲ್ಲವೋ ಹಾಗೆ. ರಾವಣ ಇಂಥ ಮಹಾಪ್ರಬಲಿ, ಪ್ರಭಾವಶಾಲಿ. ಅವನೊಬ್ಬ ರವಿ. ಅವನ ಪ್ರೇಮ (ನಿಷ್ಠೆ) ಈಗ ಸೀತೆ ಎಡೆಗೆ (ಹೊಸ ಗ್ರಹ) ಸ್ವಲ್ಪ ಹರಿದ ಮಾತ್ರಕ್ಕೆ ಅದರಿಂದ ಮಂಡೋದರಿಗೆ (ಮೊದಲಿನ ಗ್ರಹ) ಸಲ್ಲುವ ಪ್ರೇಮಕ್ಕೆ (ನಿಷ್ಠೆ) “ಇನಿತಪೂರ್ಣತೆಯ ಕೊರೆ”ಯೂ ಇಲ್ಲ. ಇದು ರಾವಣನ ತರ್ಕ ಧಾಟಿ.

22
ಸೂರ್ಯನಾತಪಕೆ ಕಾಲದ ತಪಂ ನೆರವಾಗಲಾ
ಬಜ್ಜರತನಂ ಬರ್ಪುದೊಯ್ಯನಿದ್ದಲಿಗೆನಲ್                        
(ಕಿ.ಸಂ. – 8, 185 – 186)

ರಾವಣನ ಸೆರೆಯಲ್ಲಿರುವ ಸೀತೆ ದುಃಖಪೀಡಿತೆ; ಇಂಥ ಪತಿವ್ರತೆಗೆ ಈ ಹಿಂಸೆ ತನ್ನ ಪತಿಯಿಂದಾಗಿ ಒದಗಿತಲ್ಲ ಎಂದು ಮಂಡೋದರಿ ಅಧಿಕ ದುಃಖಿತೆ. ಮಂಡೋದರಿ ಸೀತೆಯನ್ನು ರಹಸ್ಯವಾಗಿ ಅಂದರೆ ರಾವಣನ ಅನುಮತಿ ಇಲ್ಲದಿದ್ದರೂ, ಸಂಧಿಸಿ ತನ್ನ ಮನದ ವ್ಯಾಕುಲವನ್ನು ಹೊರಗೆಡಹಿದ್ದಾಳೆ; ಮತ್ತು

ನನ್ನಂತೆ,
ದೇವಿ ನೀನುಂ ಪ್ರಾರ್ಥಿಸಾ, ನನ್ನ ಪತಿಯೆರ್ದೆಗೆ
ಶುದ್ಧಿ ದೊರೆಕೊಳ್ವಂತೆ ನಾನದನೆ ಬೇಡಲ್ಕೆ
ಬರುತಿರ್ದೆನೀಯೆಡೆಗೆ ನಿನ್ನ ಸಾನ್ನಿಧ್ಯಕ್ಕೆ                          
(ಕಿ. ಸಂ. – 8, 153 – 156)

ಈ ಪರಿಯಾಗಿ ಸೀತೆಯನ್ನು ಬೇಡುತ್ತಾಳೆ. ಸೀತೆಯು ಸಹಜ ಪ್ರತಿಕ್ರಿಯೆ ಆ ಮೊದಲೇ ವ್ಯಕ್ತವಾಗಿದೆ:

ನೀನಸುರಿ?
ನೀನಸುರಿಯಲ್ತು: ದೇವತೆ, ಪತಿವ್ರತೆಯಾಗಿ
ನಮಗೆಲ್ಲಮಾದರ್ಶ ಮಾತೆ. ನಿನಗಾಂ ನಮಿಸೆ
ಶೀಘ್ರದಿಂದೆನಗೆ ಮಂಗಳಮಪ್ಪುದೆಂದು ನಾಂ
ಬಲ್ಲೆನ್              
(ಕಿ. ಸಂ. – 8, 148 – 152)

ಈ ಇಬ್ಬರು ಮಹಾಪತಿವ್ರತೆಯರ ಏಕೋದ್ದೇಶ ರಾವಣೋದ್ಧಾರಲ ಒಬ್ಬಳ ಮಂಗಳ ಇನ್ನೊಬ್ಬಳಿಗೂ ಮಂಗಳ. ಇದರಿಂದಾಗಿ ಸೀತೆಗೆ

ಸೆರೆಮನೆಯೆ ಆತ್ಮಸಾಧನೆಗೊಂದು
ಎಲೆಯ ಮನೆಯಾಯಿತ್ತು ! ಪೌಲಸ್ತ್ಯಜನ ಲಂಕೆ
ಮಂಡೋದರಿಯ ಲಂಕೆಯಾಯಿತ್ತು: ರಾವಣನ
ಮೇಲಿರ್ದ ವೈರಭಾವಂ ಸುಲಭದಿಂ ಕರಗಿ
ಮಂಡೋದರಿಯ ಪತಿಯ ಮೇಲಣ ಕರುಣೆಯಾಯ್ತು         
(ಕ್ರಿ. ಸಂ. – 8, 180 – 184)

ಹೀಗೆ ಸೀತೆ ಮಂಡೋದರಿಯರಿಬ್ಬರೂ ತಪಸ್ಸು ಮಾಡುವಾಗ ರಾವಣನ ಪಾಪ ನಾಮಾವಶೇಷವಾಗುವುದು ತೀರ ಸಹಜವಾದದ್ದು; ಹೇಗೆಂದರೆ ಸಾಕಷ್ಟು ಕಾಲ ಉಷ್ಣದ ತೀವ್ರ ಒತ್ತಡಕ್ಕೆ ಈಡಾದ ಇದ್ದಲಿನಲ್ಲಿ ವಜ್ರದ ಗುಣ ಮೂಡುವಂತೆ ವೈಜ್ಞಾನಿಕವಾಗಿ ಇದ್ದಲೂ (ಇಂಗಾಲ) ವಜ್ರವೂ ಒಂದೇ ರಚನೆ ಉಳ್ಳವು. ಭೂಗರ್ಭದಲ್ಲಿ ಇಂಗಾಲ ಅತ್ಯುಷ್ಣ ಹಾಗೂ ಸಂಮರ್ದಗಳಿಗೆ ಈಡಾದಾಗ ವಜ್ರ ಉಂಟಾಗುತ್ತದೆ.

23
ಸಿಂಧು ಮಹಿಮೆಯನಳೆಯೆ
ಪೇಳ್ ಪನಿಯೆಣಿಕೆ ಏಕೆ?             
(ಕಿ. ಸಂ. – 9, 370 – 371)

ಸುಗ್ರೀವಾಜ್ಞೆಯ ಅನುಸಾರ ನೆರೆದಿದ್ದ “ಕಪಿಧ್ವಜ ಚಮೂಸಮೂಹಂಗಳಂ” ರಾಮನಿಗೆ ಪರಿಚಯಿಸುವ ಸನ್ನಿವೇಶ. “ಸಾನುಕಂದರದದ್ರಿ ಸೀಮೆಯಂ ತುಂಬಿದಾ ಗಿರಿ ಅರಣ್ಯ ಸ್ಪರ್ಧಿಯಂ ಕಾಣುತಾ ಕಪಿಸೈನ್ಯ ವಾರ್ಧಿಯಂ” ರಾಮನ ಹೃದಯವೂ ಹಾಗೆ ತುಂಬಿ ಬರುತ್ತದೆ. ಹೀಗೆ ವರ್ಣಿಸಿದ ಕವಿ ಈ ಮೇಲಿನ ಸಾಲುಗಳಲ್ಲಿ ಗಣಿತದ ಒಂದು ಸರಳ ವಿಧಿಯನ್ನು ಹೇಳಿದ್ದಾರೆ: ಸಮುದ್ರದಲ್ಲಿರುವ ಜಲರಾಶಿಯನ್ನು ಹನಿಗಳ ಮಾನಕದಿಂದ ಅಳೆದರೆ ಮುಗಿಯಲಾರದು ಹೇಗೋ ಹಾಗೆ ಈ ಮಹಾಕಪಿಸೈನ್ಯರಾಶಿಯನ್ನೂ ಬಿಡಿಬಿಡಿಯಾಗಿ ಎಣಿಸಿ ಇಲ್ಲವೆ ವರ್ಣಿಸಿ ಮುಗಿಯಲಾರದು: ಗಾತ್ರಾನುಗುಣ ಮಾನಕ ಅವಶ್ಯಕ ಎನ್ನುವುದು ಆಧ್ಯಾಹಾರ.

24
ಬೇರಿಗೆರೆಯುವ ನೀರ್ ಕೊಂಬೆ ಕೊಂಬೆಯನೇರಿ
ಮರಮಂ ಪೊರೆವವೋಲ್ ನಿನಗೆರೆದುದೀ ವಾಗ್ಧಾರೆ
ಜೀವಾತುವಕ್ಕೆಲ್ಲರುಲ್ಲಸಕೆ.                                           
(ಕಿ.ಸಂ. – 9, 551 – 553)

ಆಂಜನೇಯನಿಗೆ ಸುಗ್ರೀವ ಸೀತಾನ್ವೇಷಣೆಯ ಮಹಾಕಾರ್ಯವನ್ನು ಆಜ್ಞಾಪಿಸುತ್ತ ಆತನ ಸಾಹಸಗಳನ್ನು ಕೊಂಡಾಡುತ್ತಾನೆ: “ನಿನಗೆ, ಪೊಗಲಾರದೆಡೆಯಿಲ್ಲಮೆಲ್ಲಿಯುಂ. ನೀಂ ಪ್ರಾಣಜಂ ದೇಶಕಾಲಾನುವೃತ್ತಿಯ ನಯದಿ ನಯಪಂಡಿತಂ” ಎಂದು ಕ್ರೋಡೀಕರಿಸುತ್ತ ಈ ಮೇಲೆ ಬರೆದಿರುವ ಸಾಲುಗಳನ್ನು ಉಸುರುತ್ತಾನೆ. ಜೀವಾತು ಎಂದರೆ ವಿಟಮಿನ್ ಎನ್ನುವ ಆಧುನಿಕ ವಿಜ್ಞಾನದ ಪರಿಕಲ್ಪನೆಯನ್ನು ಕವಿ ಇಲ್ಲಿ ಸೊಗಸಾಗಿ ಬಳಸಿ ಕೊಂಡಿದ್ದಾರೆ. (ನೋಡಿ ಲಂ. ಸಂ. – 7, 287 – 288, ಅದೇ – 8, 143.)

25
ಮೂಲಮಿರ್ಪವನೀಜಕಿಂದೊ ನಾಳೆಯೊ ಫಲಂ:
ಬೇರ್ಗಡಿದರೇನುಂಟು? ಚಿತೆಗಿಂಧನಂ!                          
(ಕಿ. ಸಂ. – 10, 921 – 922)

ಸಂಪಾತಿ ಆರುಹಿದ ಸೂಕ್ಷ್ಮವನ್ನು, ಅಂದರೆ “ನೂರು ಯೋಜನದಾಚೆ, ಲಂಕೆ, ರಾಕ್ಷಸ ದ್ವೀಪಮಿದೆ ಶರಧಿ ಮೇಖಲೆಯಾಗಿ. ಖಳ ದಶಗ್ರೀವನಿನಕುಲನ ಕಾಂತೆಯನಲ್ಲಿ ಬೈತಿಟ್ಟಿಹಂ” ಈ ಸಂಗತಿಯನ್ನು ಗ್ರಹಿಸಿದ ಆಂಗದಾದಿ ಕಪಿವೀರರು ಮುಂದಿನ ಹಂತವನ್ನು ಚರ್ಚಿಸುತ್ತಿರುವ ಪ್ರಸಂಗ. ತಮ್ಮ ತಮ್ಮ ಸಾಗರೋತ್ತಣಸಾಮರ್ಥ್ಯವನ್ನು ಆ ವೀರರಲು ಅರಿಕೆ ಮಾಡಿದ್ದಾರೆ. ಅವರ ನಾಯಕನಾದ ಅಂಗದ ಹೇಳುತ್ತಾನೆ: “ಎನಗೆ ಬಲ್ಮೆಯಿಹುದುತ್ತರಿಸೆ ಶತಯೋಜನದ ಶರಧಿಯಂ. ಪಿಂತೆ ಮರಳಲ್ಕೆನಗೆ ಬೇಳ್ಪದಟಿನೊಳೆ ಶಂಕೆ.” ಆಗ ವೃದ್ಧ ಜಾಂಬವನೆದ್ದು ರಾಜನೀತಿಯನ್ನು ಹೇಳುವಾಗ ಬರುವ ಸಾಲುಗಳಿವೆ: ನಾಯಕನಿದ್ದುದಾದರೆ ಇಂದಲ್ಲ ನಾಳೆ ಯಶಸ್ಸು ಲಭ್ಯವಾಗಬಹುದು; ಆದ್ದರಿಂದ ಮೊದಲ ಹಂತದಲ್ಲೇ ನಾಯಕನನ್ನು ದುರ್ದಮ್ಯ ಸಾಹಸಕ್ಕೆ ನೂಕುವುದು ತರವಲ್ಲ. ಸ್ಪಷ್ಟೀಕರಿಸಲು ಕವಿ ಇಲ್ಲಿ ಮರ ಹಾಗೂ ಅದರ ಬೇರಿನ ಉಪಮೆಯನ್ನು ಬಳಸಿದ್ದಾರೆ.

26
ಲಾಂಗೂಲ ಚವರಿಯಿಂದಂಬರದರಿಲ್ಗಳಂ
ಗುಡಿಸಿ ಪಾತಾಳಕುದುರಿಸುವಾರ್ಪು
(ಕಿ. ಸಂ. – 10, 1096-1097)