ಸಾಗರೋಲ್ಲಂಘನಕ್ಕೆ ಸಿದ್ಧನಾಗಿ “ಗಾತ್ರದಿಂ ಹೈಮಾಚಲಸ್ಪರ್ಧಿ”ಯಾಗಿ ನಿಂತಿದ್ದು ಹನುಮಂತ ತನ್ನ ಬಳದಗದವರಿಗೆ ನೀಡಿದ ಆಶ್ವಾಸನೆಯ ಅಂಗವಾಗಿ ಈ ಸಾಲುಗಳು ಬರುತ್ತವೆ. ಬಾಲದ ಬರಲಿನಿಂದ ಬಾನಂಗಳವನ್ನೇ ಗುಡಿಸಿ ಕಸರೂಪದ ನಕ್ಷಗ್ರಗಳನ್ನು ಒಗ್ಗೂಡಿಸಿ (ಪಶ್ಚಿಮದ) ಪಾತಾಳಕ್ಕೆ ತಳ್ಳಿಬಿಡುತ್ತೇನೆ ಎನ್ನುವಲ್ಲಿಯ ಕಲ್ಪನೆ ಬಲು ಸೊಗಸಾಗಿದೆ. ಇದನ್ನು ಆಕಾಶದಲ್ಲಿಯ ಒಂದು ಸುಂದರ ವಿದ್ಯಮಾನಕ್ಕೆ ಸಂಬಂಧಿಸಬಹುದು. ಸಪ್ತರ್ಷಿಮಂಡಲ (ನೋಡಿ-೨೦) ನಮ್ಮ ಯಾಮ್ಯೋತ್ತರವನ್ನು (meridian) ದಾಟಿ ಇನ್ನೇನು ಪಶ್ಚಿಮಾಕಾಶಕ್ಕೆ ಹೊರಳಲಿದೆ ಎನ್ನುವಾಗಿನ ನೋಟವನ್ನು ಗಮನಿಸಬೇಕು (ಮೇ – ಜೂನ್ ತಿಂಗಳುಗಳ ಸಂಜೆ ಅನುಕೂಲ). ಅದರ ಹಿಡಿಯ ಭಾಗವನ್ನು, ಅಂದರೆ ಅತ್ರಿ – ಆಂಗೀರಸ್ಸು, ವಸಿಷ್ಠ – ಮರೀಚಿಗಳನ್ನು ಜೋಡಿಸುವ ವಕ್ರರೇಖೆಯನ್ನು ಅದೇ ಕ್ರಮದಲ್ಲಿ, ದಕ್ಷಿಣದೆಡೆಗೆ ವಿಸ್ತರಿಸಿದರೆ ಒಂದು ಉಜ್ಜ್ವಲ ನಕ್ಷತ್ರ ತಲುಪುತ್ತೇವೆ. ಇದು ಸ್ವಾತೀ ನಕ್ಷತ್ರ ರೇಖೆಯನ್ನು ಮತ್ತಷ್ಟು ವೃದ್ಧಿಸಿದರೆ ಅದು ಆಕಾಶದ ದಕ್ಷಿಣ-ಪೂರ್ವ ಭಾಗದಲ್ಲಿ ನಾಲ್ಕು ನಕ್ಷತ್ರಗಳು ರಚಿಸುವ ಒಂದು ಚತುಷ್ಕೋಣಾಕೃತಿಯಲ್ಲಿ ಅಂತ್ಯವಾಗುತ್ತದೆ. ಈ ಆಕೃತಿಗೆ ಹಸ್ತಾ ನಕ್ಷತ್ರವೆಂದು ಹೆಸರು. ಈಗ ನೀಲವ್ಯೋಮದ ಮಹಾ ವಿಸ್ತಾರದಲ್ಲಿ ಸಪ್ತರ್ಷಿ ಮಂಡಲ-ಸ್ವಾತೀ-ಹಸ್ತಾ ನಕ್ಷತ್ರಗಳ ಸಮತ್ರ ಚಿತ್ರವನ್ನು ಲಕ್ಷ್ಯವಿಟ್ಟು ಗ್ರಹಿಸಿದರೆ ದೈತ್ಯಗಾತ್ರದ ಪ್ರಾಣಿಯೊಂದರ ಬಾಲ ಸಮಗ್ರಾಕಾಶವನ್ನು ಪೂರ್ವದಿಂದ ಪಶ್ಚಿಮಕ್ಕೆ ಗುಡಿಸುತ್ತ ನಕ್ಷತ್ರಗಳನ್ನು ಪಶ್ಚಿಮದ ಪಾತಾಳಕ್ಕೆ ಎಸೆಯುತ್ತ ಸಾಗುತ್ತಿದೆ ಎಂಬ ಭಾವ ಸ್ಫರಿಸುತ್ತದೆ. (ನೋಡಿ – ಕೆ.ಸಂ. ೧೧, ೯೭-೧೦೦, ಅದೇ, ೧೭೫-೧೭೭)

27
ಪೃಥಿವಿಯಾಕರ್ಷಣೆಯ ಶಕ್ತಿ
ಗತಿಸಲ್ಕೆ ಬಾಂದಳಕೆ ಸಿಡಿವ ಪೃಥುಲಾಚಲದ ಕೂಟ
(ಕಿ.ಸಂ.-11, 108-110)

ಹನುಮಂತ ಸಾಗರೋಲ್ಲಂಘನವನ್ನು ಇದೀಗ ತಾನೇತೊಡಗಿದ್ದಾನೆ ಸ್ಥಾವರಾಚಲದ ಅಗ್ರದಿಂದ ಈ ಜಂಗಮಾಚಲ ಲಂಕಾಭಿಮುಖವಾಗಿ ಜಿಗಿದಿದೆ. ಜಂಗಮಾಚಲದಲ್ಲಿ (ಅಂದರೆ ಹನುಮಂತನಲ್ಲಿ) ನೆಲೆಗೊಂಡಿರುವ ವೀಕ್ಷಕನಿಗೆ ಈ ದೃಶ್ಯ ಹೇಗೆ ಕಾಣುತ್ತದೆ? “ನಗಂ ತೆಕ್ಕನೆಯ ಕೆಳ ಕೆಳಗಿಳಿದುರುಳ್ವ ತೆರನಾಯ್ತು ನಿಮಿಷಮಾತ್ರಂ.” ಭೂಮಿಯ ಮೇಲಿನ ಸಮಸ್ತ ಚರಾಚರ ವಸ್ತುಗಳೂ ಭೌಊಗುರುತ್ವದ ಪರಿಣಾಮವಾಗಿ ಭೂಮಿಗೆ ಬಂಧಿತವಾಗಿ ಉಳಿದುಕೊಂಡಿವೆ (ನೋಡಿ – 10). ಈ ಕಾರಣದಿಂದಲೇ ವಾಯು ಹಾಗೂ ಜಲರಾಶಿಗಳು ಭೂಮಂಡಲದಲ್ಲೇ ಉಳಿದಿವೆ ಮತ್ತು ಮೇಲೆಸೆದ ಕಲ್ಲು ನೆಲಕ್ಕೆ ಬೀಳುತ್ತದೆ. ಈಗ, ಕಾಲ್ಪನಿಕವಾಗಿ, ಈ ಗುರುತ್ವ ಬಲ ಇಲ್ಲವೆಂದು ಭಾವಿಸಿದರೆ ಏನಾದಿತು? ಆಂತರಿಕ್ಷದೆಡೆಗೆ ವಿಶಾಲ ಪರ್ವತ ಸಮೂಹಗಳು ಕೂಡ ಜಿಗಿದು ಮಾಯವಾಗದಿರವು. ಹನುಮಂತಲಂಘನ ಇಂಥ ಒಂದು ವಿದ್ಯಮಾನವನ್ನು ನೆನಪಿಗೆ ತರುವಂತಿತ್ತು ಎಂದು ಕವಿ ಇಲ್ಲಿ ಚಿತ್ರಿಸಿದ್ದಾರೆ.

28
ದೇಶಮಂ ಪಿಂಡುತೆ ಕಿಮುಳ್ಚುತ್ತೆ ಕಾಲಮಂ
(ಕಿ. ಸಂ.- 11, 190)

ಹನುಮಂತನ ಸಾಗರೋತ್ತರಣ ವೇಗವನ್ನು ವರ್ಣಿಸುವಾಗ ಬರುವ ಮಾತುಗಳಿವು. ಕವಿ ಇಲ್ಲಿ ಸಾಪೇಕ್ಷತಾ ಸಿದ್ಧಾಂತದ ಭಾವನೆಯನ್ನು ಸೊಗಸಾಗಿ ಅಳವಡಿಸಿಕೊಂಡಿದ್ದಾರೆ: ಕಾಲ (time) ಮತ್ತು ಆಕಾಶ (ದೇಶ space) ಅವಿಚ್ಛಿನ್ನವಾಗಿ ಬೆಸುಗೆಗೊಂಡಿವೆ, ಇದನ್ನು ದೇಶ-ಕಾಲ ಅವಿಚ್ಛಿನ್ನತೆ (space-time continuum) ಎನ್ನುವುದುಂಟು. ಇದನ್ನೇ ಕವಿ “ನೀಹಾರಿಕಾ ಲಕ್ಷಗಳ್, ನಕ್ಷತ್ರ ಕೋಟಿಗಳ್, ಸೂರ್ಯ-ಚಂದ್ರಾದಿ ವಂಕಿಮ ದೇಶಕಾಲದ ಮನೋಜ್ಞವೀಧಿ” ಎಂದು ವರ್ಣಿಸಿದ್ದಾರೆ (ಶ್ರೀ. ಸಂ.- 13, 166-168). ಮಹಾವೇಗದಲ್ಲಿ ಅಂದರೆ ಬೆಳಕಿನ ವೇಗದಲ್ಲಿ ಸಂಚರಿಸುವಾಗ ಮಾತ್ರ ಆಕಾಶ-ಕಾಲ-ಅವಿಚ್ಛಿನ್ನತೆ ವೇದ್ಯವಾಗುತ್ತದೆ.

29
ರವಿಗಾತ್ರಮಂ ನಗುವ ತಾರಾದ್ವಯಂ,
ಸಂಖ್ಯಾತೀತಮಾ ಜ್ಯೋತಿತ್ಸರದ ದೂರದೊಳ್,
ವಿಶ್ವಾಂತರಿಕ್ಷದೊರ್ಳ, ಯುಗಯುಗಾಂತರಕೊರ್ಮೆ
ಲಕ್ಷಯೋಜನ ನಿಕಟಮಾಗಲ್, ಪರಸಪರಂ
ಸಂಕರ್ಷಿಸಲ್ ತೊಡಗಿಪುವಯ್, ಶಿಖಿಜ್ವಾಲೆ
ಯೋಜನ ಸಹಸ್ರಮಂ ಲಂಘಿಸುತೆ, ಜಿಹ್ವೆಯಂ
ಚಾಚುತಾಕಾಶಮಂ ನೆಕ್ಕುತಿರೆ, ಮೆಲ್ಲನೆಯೆ
ಪ್ರಳಯಾನುರಾಗದಿಂದೊಂದನೊಂದಂ
ಸೆಳೆದು
ಬಳಿ ಸಾರ್ವುವಾ ಮಂಡಲದ್ವಯಂ   
(ಕಿ. ಸಂ. – 11, 282 – 290)

ನಮಗೆ ಸೂರ್ಯನೇ ಊಹಾತೀತ ಗಾತ್ರದ (ನೋಡಿ – 21) ನಕ್ಷತ್ರ ಆದರೆ ವಿಶಾಲ ವಿಶ್ವದಲ್ಲಿ ಇಂಥ ಹಾಗೂ ಇದಕ್ಕಿಂತ ಅಧಿಕ ಗಾತ್ರದ ನಕ್ಷತ್ರಗಳು ಸಂಖ್ಯಾತೀತವಾಗಿವೆ. ವಿಶ್ವದ ದೂರಗಳನ್ನು ಜ್ಯೋತಿವತ್ಸರದ ಮಾನದಂಡದಲ್ಲಿ ಅಳೆಯುವುದು ವಾಡಿಕೆ. ಸೆಕೆಂಡಿಗೆ ಸುಮಾರು 300,000 ಕಿಲೊಮೀಟರುಗಳನ್ನು ಧಾವಿಸುವ ಬೆಳಕಿನ ಕಿರಣ 1 ವರ್ಷದ ಅವಧಿಯಲ್ಲಿ ಗಮಿಸುವ ದೂರವೇ 1 ಜ್ಯೋತಿವತ್ಸರ (ಜ್ಯೋತಿರ್ವರ್ಷ). ನಮ್ಮ ದೃಷ್ಟಿಯಿಂದ ವಿಶ್ವದಲ್ಲಿ ವಿಪುಲ ನಕ್ಷತ್ರಗಳಿರುವುದು ನಿಜವಾದರೂ ವಿಶ್ವದ ಅಗಾಧತೆಯೊಡನೆ ಹೋಲಿಸುವಾಗ ಅದರ ಬಹ್ವಂಶ ಖಾಲಿಯಾಗಿಯೇ ಉಂಟು. ಇಂಥಲ್ಲಿ ಸಮ ಗಾತ್ರಗಳ ಎರಡು ನಕ್ಷತ್ರಗಳು ಪರಸ್ಪರ ಸಂಘರ್ಷಿಸುವಷ್ಟು ಸಮೀಪ ಬರುವುದು ಯುಗ ಯುಗಾಂತರಗಳಲ್ಲಿ ನಡೆಯುವ ಒಂದು ಅಪೂರ್ವ ಘಟನೆ. ಇದು ಸಂಭವಿಸಿದಾಗ ಈ ನಕ್ಷತ್ರಗಳ ನಡುವೆ ಗುರುತ್ವಾಕರ್ಷಣೀಯ ಕದನ ಆರಂಭವಾಗುವುದು. ಆಗ ಒಂದು ಇನ್ನೊಂದನ್ನು ತನ್ನೆಡೆಗೆ ಸೆಳೆಯತೊಡಗುತ್ತದೆ. ಇದರ ಪರಿಣಾಮವಾಗಿ ಪ್ರತಿಯೊಂದರಿಂದಲೂ ಇನ್ನೊಮದರ ಕಡೆಗೆ ಅನಿಲಜ್ವಾಲಾಜಿಹ್ವೆಗಳು ಚಾಚುತ್ತವೆ. ಇದೊಂದು ಮಹಾ ಪ್ರಳಯೋಪಮ ದೃಶ್ಯ. (ಇಂಥ ಒಂದು ಸಂಘಟ್ಟನೆಯ ಪರಿಣಾಮವಾಗಿ ಸೂರ್ಯ ಅದರ ಗ್ರಹವಲಯವನ್ನು ಪಡೆದಿರಬಹುದೆಂಬ ಒಂದು ಊಹೆ 20ನೆಯ ಶತಮಾನದ ಆದಿಯಲ್ಲಿತ್ತು.)

30
ಚುಕ್ಕಿ ಚುಕ್ಕಿಯ ಹಾಸುಹೊಕ್ಕಿಂದೆ ಕಿಕ್ಕಿರಿದ
ಅಸಂಖ್ಯ ನಕ್ಷತ್ರಮಯದಮೃತಪಥ
(ಕಿ. ಸಂ. – 11, 391 – 392)

ಸಾಗರೋತ್ತರಣ ಮುಗಿಸಿ, ಹನುಮಂತ ಇನ್ನೇನು ಲಂಕಾದ್ವೀಪದ ಮೇಲೆ ಇಳಿಯಬೇಕು. ಆಗ ಸಂಜೆ ಆಗಿದೆ.

ಆರು ಬಣ್ಣಿಸಬಲ್ಲರಾಂಜನೇಯನ ದೃಷ್ಟಿ
ಕಂಡುದಂ, ಮೇಣ್ ಚಿತ್ತಮೊಳಕೊಂಡುದಂ? ಹಿಗ್ಗಿ
ಕಂಡನಾಕಾಶದೆಳ್ತರದಿಂದೆ ಲಂಕೆಯಂ,
ಬೈಗುಗಪ್ಪಪ್ಪಿರ್ದುಮುಜ್ಜ್ವಲಿಸುತಿರ್ದಾ
ಸಮುದ್ರವೇಲಾಸ್ಥಗಿತ ದೈತ್ಯನೃಪನಗರಿಯಂ.
ಜಟಿಲ ಕೌಶಲರಚಿತ ದೀಪಸ್ತಬಕ ಖಚಿತಮಂ
ವಿಸ್ತೀರ್ಣಮಂ.    
(ಕಿ. ಸಂ. – 11, 383 – 389)

ಆ ಎತ್ತರದಿಂದ ಆಂಜನೇಯನಿಗೆ ಕಂಡ ಲಂಕಾನಗರಿಯ ಬೆಳಗು ದೃಶ್ಯವನ್ನು ಕವಿ, ಭೂತಳದಲ್ಲಿ ನಿಂತವನಿಗೆ ಬಾನಿನ ಅನಂತತೆಯಲ್ಲಿ ಕಾಣುವ ಆಕಾಶಗಂಗೆಗೆ ಹೋಲಿಸಿದ್ದಾರೆ. ಅಸಂಖ್ಯಾತ ನಕ್ಷತ್ರಗಳ ಒಕ್ಕೂಟವಿದು. ಬಿಡಿಯಾಗಿ ಎಣಿಕೆಗೆ ಸಿಕ್ಕುದು; ಆದರೆ ಒಟ್ಟಾಗಿ ಮಂದ ಬೆಳಕಿನ ಹೊನಲು ದಕ್ಷಿಣದಿಂದ ಉತ್ತರಕ್ಕೆ ಚಾಚಿರುವಂತೆ ಭಾಸವಾಗುತ್ತದೆ.

31
ಕೃತ್ತಿಕಾರೋಹಿಣಿಯರನುಗಾಮಿ ಮೃಗಶಿರಕೆ
ಹೊಂಚುತಿರ್ದುದು ಮೃಗವ್ಯಾಧ ಬಾಣೋಜ್ಜ್ವಲ
ಗಭಸ್ತಿ               
(ಕಿ. ಸಂ. – 12, 341 – 343)

ದಶಶಿರಕನಕಲಕ್ಷ್ಮಿಯಾದ ಲಂಕಿಣಿಯ ಸೊಕ್ಕು ಮುರಿದು ಹನುಮಂತ ನಿಜರೂಪದಲ್ಲಿ ಲಂಕೆಯನ್ನು ಪ್ರವೇಶಿಸುತ್ತಾನೆ. ಆಗ ಮಧ್ಯರಾತ್ರಿಯ ವೇಳೆ. ಪೂರ್ಣಚಂದ್ರಬಿಂಬ ಮುಗಿಲಿಲ್ಲದ ಆಗಸದಿಂದ ಮುಗಿಯದ ಜೊನ್ನಮಳೆ ಸುರಿಸುತ್ತಿದೆ. ನಕ್ಷತ್ರಗಳ ಕಾಂತಿ ಸಹಜವಾಗಿ ಮಸಳಿ ಅತ್ಯುಜ್ಜ್ವಲವಾದವು ಮಾತ್ರ ದೂರ ದೂರ ಹರಡಿಕೊಂಡಂತೆ ಕಾಣುತ್ತಿವೆ. ಇಂಥವುಗಳ ಪೈಕಿ ಮುಖ್ಯವಾದವು ವೃಷಭರಾಶಿ ಹಾಗೂ ಮಹಾವ್ಯಾಧ ನಕ್ಷತ್ರಪುಂಜ. ಮೊದಲಿನದರಲ್ಲಿ ಕೃತ್ತಿಕೆ ಮತ್ತು ರೋಹಿಣಿ ನಕ್ಷತ್ರಗಳೂ ಎರಡನೆಯದರಲ್ಲಿ ಮೃಗಶಿರಾ, ಆರ್ದ್ರಾ ಮೊದಲಾದ ನಕ್ಷತ್ರಗಳೂ ಇವೆ. ಮೇಲಿನ ಸಾಲುಗಳಲ್ಲಿ ಕವಿ ಒಂದು ಪುರಾಣೋಕ್ತ ಕಲ್ಪನೆಯನ್ನು ಬಳಸಿಕೊಂಡಿದ್ದಾರೆ. ವೃಷಭರಾಶಿಯಲ್ಲಿ ಮಹಾವ್ಯಾಧನನ್ನು ಹಾಯಲು ಮಲೆತು ನಿಂತಿರುವ ಎತ್ತು ಉಂಟು. ಇದರ ಮುಖ ಪೂರ್ವಕ್ಕಿದೆ (ಅಂದರೆ ಮಹಾವ್ಯಾಧನೆಡೆಗೆ). ಮಹಾವ್ಯಾಧಪುಂಜದಲ್ಲಿ ಒಬ್ಬ ಧೀರ ಬೇಟೆಗಾರ ಎತ್ತನ್ನು ಎದುರಿಸಿ ನಿಂತಿದ್ದಾನೆ. ಅವನು ಕೈದು ಹಿರಿದು, ಹಾಯಲು ಬರುತ್ತಿರುವ ಎತ್ತನ್ನು ತರಿದು. ಅದನ್ನು ಹಿಂದೆ ಹಿಂದೆ (ಅಂದರೆ ಪಶ್ಚಿಮ ದಿಕ್ಕಿಗೆ) ಅಟ್ಟುತ್ತಿದ್ದಾನೆ. ಆಕಾಶದ ದೈನಂದಿನ ಆವರ್ತನೆಯಲ್ಲಿ ವೃಷಭರಾಶಿಯನ್ನು “ಅಟ್ಟುತ್ತ” ಮಹಾವ್ಯಾಧ ಪುಂಜ “ಸಾಗುತ್ತಿದೆ” ಎಂಬುದನ್ನು ನೆನಪಿನಲ್ಲಿಡಬೇಖು. ಹನುಮಂತ ಲಂಕೆಯನ್ನು ಅನ್ವೇಷಿಸುತ್ತಿದ್ದ ಮೊದಲ ಘಟ್ಟದಲ್ಲಿ ಮೇಲೆ ವಿವರಿಸಿದ ದೃಶ್ಯ ಆಕಾಶದಲ್ಲಿ ಕಾಣುತ್ತಿತ್ತು. (ನೋಡಿ ಲಂ. ಸಂ – 1, 386 – 388; 32)

32
ಕಿಡಿಕಿಡಿಯೆ
ಮೂಡು ಬಾನೊಳ್ ಮೂಡಿ ಹೆಡೆಯೆತ್ತಿದಾ ರಾಶಿ
ವೃಶ್ಚಿಕಂ            
(ಲಂಕಾ ಸಂಪುಟಂ – 2, 4 – 7)

ಹನುಮಂತ ಕನಕಲಂಕಾನ್ವೇಷಣೆಯನ್ನು ಮಾಡುತ್ತಿರುವ ಸನ್ನಿವೇಶ. ಸಂಜೆ ಹೊತ್ತು “ನಗರದುತ್ತರ ಗಿರಿಯ ನೆತ್ತಿಯಲಿ ಬಿಳ್ದುದೊಂದುರಿವರಿಲ್” – ಈ ಉಲ್ಕೆಯೇ ಹನುಮಂತ. ಅಲ್ಲಿಂದ ಮುಂದೆ ಅಪರಾತ್ರಿಯಲ್ಲಿ (ನೋಡಿ – 31) ಅವನು ಲಂಕಾಪ್ರವೇಶ ಮಾಡಿದ್ದಾನೆ. ಆಗ ಮಹಾವ್ಯಾಧಪುಂಜ ಹೆಚ್ಚು ಕಡಿಮೆ ಯಾಮ್ಯೋತ್ತರದ ಸಮೀಪದಲ್ಲಿದೆ. ಅನ್ವೇಷಣೆ ಮುಂದುವರಿದಂತೆ ಕಾಲ ಕೂಡ ಮೀರುತ್ತದೆ. ಕುಂಭಕರ್ಣನಿವಾಸದಿಂದ ಹನುಮಂತ ಹೊರಡುವ ವೇಳೆಗೆ “ಮೀನುಗುತಿರ್ದತ್ತು ಮೃಗಶಿರಂ ಪಶ್ಚಿಮವರ್ತಿಯಾಗಿ.” ಮುಂದೆ ವಿಭೀಷಣನ ಹಾಗೂ ರಾವಣನ ಮಂದಿರಗಳನ್ನು ಶೋಧಿಸಿ ಸೀತೆಯನ್ನು ಕಾಣದೇ “ಅಶೋಕ ವನಮಿರ್ಪ ತಾಣವನರಸಿ ತೊಳತೊಳಲಿ ಚರಿಸಿ”ದಂತೆ ಮೂಡುಬಾನಿನಲ್ಲಿ ವೃಶ್ಚಿಕರಾಶಿಯ ಹೆಡೆ (ಚೇಳಿನ ತಲೆಯ ಭಾಗ) ಏಳುತ್ತಿರುವುದು ಕಾಣುವುದು. ಆಕಾಶದ ಪೂರ್ವ – ದಕ್ಷಿಣ ಭಾಗದಲ್ಲಿ ಮೂಡುವ ಈ ಸುಮಾರು 12 – 13 ಸ್ಪಷ್ಟ ನಕ್ಷತ್ರಗಳ ಚಿತ್ರ ಚೇಳಿನ ತಲೆ ಮತ್ತು ಮೈಯ್ಯ ಅಂಕುಡೊಂಕುವಂಕಿಗಳನ್ನು ಚೆನ್ನಾಗಿ ಹೋಲುತ್ತದೆ. ಮಹಾವ್ಯಾಧ ಪುಂಜ (ಅಂದರೆ ಮೃಗಶಿರಾನಕ್ಷತ್ರವಿರುವ ಸಮೂಹ) ಆಕಾಶದಲ್ಲಿರುವಾಗ ವೃಶ್ಚಿಕರಾಶಿ ಇರುವುದಿಲ್ಲ ಮತ್ತು ವಿಲೋಮವಾಗಿ ಕೂಡ.

33
ಚೇತನಾಕಾಂಕ್ಷಿ ಜಡದಂತರಂಗದ ತಪದ
ವಿದ್ಯುದಣುಗಳ ರಣದ ಜಯಗಾಥ ಪಲ್ಲವಿಯೊ?
(ಲಂ. ಸಂ. – 2, 287 – 288)

ಹನುಮಂತ ಅಶೋಕವನವನ್ನು ಹೊಕ್ಕಿದ್ದಾನೆ. ಮುಂಜಾನೆಯ ಹೊಂಬಿಸಿಲಿನ ರಿಂಗಣ ಕುಣಿತದಿಂದ ಅಶೋಕವನದೊಳಗೆ ನವಚೈತನ್ಯ ಪ್ರವಹಿಸಿ ಎಲ್ಲೆಲ್ಲಿಯೂ ಉಲ್ಲಾಸ ಹೊಮ್ಮುತ್ತಿದೆ. ಅದೇ ವೇಳೆಯಲ್ಲಿ “ಮರುತಜ ಮನದ ಕೋರಿಕೆಯ ಮಾಧುರ್ಯಮದೆ [ಸೀತಾದರ್ಶನವಾಗಬೇಕೆಂಬುದೇ ಈ ಕೋರಿಕೆ] ಬಹಿರ್ ಲೋಕದೊಳ್ ಭವಿಸಿದುದೊ ….ಎನಲ್, ತೇಲಿ ಬಂದುದು ಕಿವಿಗೆ ತಂತಿಯಿಂಚರದೈಂಜ್ರಜಾಲಿಕಂ.” ಈ ರಸ ಸನ್ನಿವೇಶವನ್ನು ವರ್ಣಿಸುತ್ತ ಕವಿ ಮೇಲೆ ಉದ್ಧರಿಸುವ ಸಾಲುಗಳನ್ನು ಬರೆದಿದ್ದಾರೆ. ತಂತಿಗಳ ಮೂಲಕ ಹರಿವ ಎಲೆಕ್ಟ್ರಾನುಗಳು (ವಿದ್ಯುದಣುಗಳು) ಬಲ್ಬ್ – ತಂತುವಿನ ಮೂಲಕ ಪ್ರವಹಿಸಿದಾಗ ಬೆಳಕನ್ನು ಬೀರುವ (ಜಯಗಾಥ ಪಲ್ಲವಿ) ವಿದ್ಯಮಾನವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

34
ಹೈಮ ಶೈಲ ಶಿರ
ಗುಹೆಯ ಗರ್ಭದಿ, ಕಳ್ತಲಿಡಿದ ಕರ್ಗ್ಗವಿಯಲ್ಲಿ
ಶೈತ್ಯ ದೈತ್ಯನ ಭಯಕೆ ಹೆಪ್ಪುಗಟ್ಟಿರ್ದ ನೀರ್
ಉತ್ತರಾಯಣ ರವಿಯ ಛವಿಯ ಚುಂಬನಕೆಂತು
ಮಂಜುಗಡ್ಡೆಯ ತನ್ನ ಘನನಿದ್ರೆಯಂ ದ್ರವಿಸಿ
ಪೆಡೆನಿಮಿರ್ದೊಯ್ಯನೆ ಸುರುಳಿವಿರ್ಚ್ಚುವೊಲ್ ಸ್ರವಿಸಿ
ಪರಿವಂತೆ          
(ಲಂ. ಸಂ. – 3, 10 – 16)

ಅಶೋಕವನದಲ್ಲಿಯ ಪರ್ಣಕುಟಿಯೊಳಗೆ ಸೀತೆ ತನ್ನ “ದೀರ್ಘತಾ ಕ್ಷೇಶ”ದಲ್ಲಿ ಇನ್ನೂ ಒಂದು ರಾತ್ರಿ ಕಳೆದಿದ್ದಾಳೆ. ಹೊಸ ಹಗಲಿನ ಉದಯ ಸಾರುವ ಮೊದಲ ಕಿರಣದ ಪ್ರವೇಶ ಆಕೆಯ ದೃಷ್ಟಿಯಲ್ಲಿ “ಇನ್ನೊಂದು ದೀರ್ಘತರ ಸಂಕಟದ ದೀರ್ಘ ದಿನದವತಾರ”ದ ಸೂಚಕ ಮಾತ್ರ. ಆದರೂ ಮುಂಜಾನೆಯ ಸೂರ್ಯನ ಸುಖೋಷ್ಣಲೇಪನದಿಂದ ಮೈಥಿಲಿ “ಮೈತಿಳಿದೆದ್ದು ಕಣ್ದೆರೆದು. ಸುಯ್ದು ಸುತ್ತುಂ ನೋಡಿ. ಕಯ್ಮುಗಿದಳಿಷ್ಟದೇವತೆಗೆ, ಮನೋರಾಮಚಂದ್ರಂಗೆ” ಆಕೆ ಎದ್ದ ಈ ದೃಶ್ಯವನ್ನು ಕವಿ ನೈಸರ್ಗಿಕ ವಿದ್ಯಮಾನವೊಂದಕ್ಕೆ ಮೇಲಿನ ಸಾಲುಗಳಲ್ಲಿ ಹೋಲಿಸಿದ್ದಾರೆ. ಅದೇ ವೇಳೆ ಹನುಮಂತ ಸೀತಾದರ್ಶನತವಕಿತನಾಗಿ ಅಶೋಕವನದ “ಶಾಂತ ಮೇಣ್ ಕಾಂತ ಕುಂಜದೈಕಾಂತ”ದಲ್ಲಿ ಕಾದಿದ್ದಾನೆ. ಮುಂದೆ ಸೀತಾಹನುಮಂತರ ಭೇಟಿ ಆಗುತ್ತದೆ. ಅದರ ಪರಿಣಾಮವಾಗಿ ರಾವಣಭಯ ಸೀತೆಗೆ (ಮಾತ್ರವಲ್ಲ, ಸಮಸ್ತ ಸಜ್ಜನರಿಗೆ ಕೂಡ) ನಿರ್ನಾಮವಾಗುತ್ತದೆ ಎಂಬುದನ್ನು ಗ್ರಹಿಸುವಾಗ ಈ ಸಾಲುಗಳಿಗೆ ಅಪೂರ್ವವಾದ ಒಂದು ಧ್ವನ್ಯರ್ಥ ಸಹ ಪ್ರಾಪ್ತವಾಗುತ್ತದೆ.

35
ವಿದ್ಯುತ್
ಕಶಾಘಾತಕೆಂತು ಲೋಹದ ಜಡತೆ ಚೇತನಕೆ
ಚಿಮ್ಮುವುದೊ     
(ಲಂ. ಸಂ. – 5, 238 – 240)

ಸುಗ್ರೀವಾಜ್ಞೆಯನ್ನು ಹೊತ್ತು ಹೋದ ದೂತರ ಪೈಕಿ ದಕ್ಷಿಣ ದಿಕ್ಕಿನವರು ಇನ್ನೂ ಮರಳಿಲ್ಲ. ಅವಧಿ ಮೀರಿಹೋಗಿದೆ. ಹಿಂದೆ ಬಂದವರಿಂದ ಮೈಥಿಲಿಯ ಇರವಿನ ಬಗ್ಗೆ ಏನೂ ಸುದ್ದಿ ತಿಳಿದಿಲ್ಲ. ಹೀಗಾಗಿ ರಾಮಲಕ್ಷ್ಮಣರಿಗೂ ಅಂತೆಯೇ ಸುಗ್ರೀವಾದಿ ಕಪಿ ಸಮಸ್ತರಿಗೂ ಮಂಕು ನಿರುತ್ಸಾಹ ಕವಿದಿದ್ದುವು. ಧೃತಿನಿಮ್ನತೆಯ ಇಂಥ ಸಂದರ್ಭದಲ್ಲಿ ಹನುಮಂತಾದಿಗಳ ಆಗಮನದ ದೃಶ್ಯವೇ ಕಿಷ್ಕಿಂಧಾಸಮಸ್ತರಲ್ಲಿಯೂ ಹುಮ್ಮಸ್ಸನ್ನು ಬೀರಿತು. ಹೇಗೆಂದರೆ ಕಬ್ಬಿಣದ ಮೂಲಕ ವಿದ್ಯುತ್ತನ್ನು ಹರಿಸಿದಾಗ ಆ ಜಡ ಕಬ್ಬಿಣ ಆಯಸ್ಕಾಂತವಾಗುವಂತೆ, ಕಬ್ಬಿಣದ ರೇಕು ತುಣುಕುಗಳನ್ನು ತನ್ನೆಡೆಗೆ ಆಕರ್ಷಿಸುವ ಬಲ ಪಡೆಯುವಂತೆ.

36
ಅತೀಂದ್ರಿಯ ಭಾವ
ಪಂಜರಮೆ ತಾಧಾರಮಲ್ತೆ ಸೇಂದ್ರಿಯ ಸೃಷ್ಟಿ
ರಚನೆಗೆ?          
(ಲಂ. ಸಂ. – 9, 112 – 114)

“ಮರಣಮಥವಾ ಶರಧಿ ತರಣಂ” ಪಣತೊಟ್ಟು ಸಮುದ್ರರಾಜನೆದುರು ಬಾಣ ಹೂಡಲು ಸನ್ನದ್ಧನಾದ ಶ್ರೀರಾಮನೆಡೆಗೆ ಸಮುದ್ರದೂತನಾಗಿ ವಿಶ್ವಕರ್ಮ ಬರುತ್ತಾನೆ; ನಿಸರ್ಗದ ಮರ್ಯಾದೆಯೂ ರಾಮನ ವ್ರತವೂ ಉಳಿಯುವಂಥ ಒಂದು ಉಪಾಯ ಸೂಚಿಸುತ್ತಾನೆ: ತನ್ನ ಮಗ ನಳನ ನೆರವಿನಿಂದ ಸಮುದ್ರಕ್ಕೆ ಸೇತುವೆ ಕಟ್ಟಿದರೆ ಅದು ನೀರಿನ ರಾಶಿಯ ಮೇಲೆ ತೇಲುವುದೆಂದು ದೇವಶಿಲ್ಪಿ ಆಶ್ವಾಸಿಸುತ್ತಾನೆ. ಈ ಸಂದರ್ಭದಲ್ಲಿ ವಿಶ್ವಕರ್ಮನ ಬಾಯಿಯಿಂದ ಬರುವ ಮಾತುಗಳಲ್ಲಿ ಮೇಲಿನ ಸಾಲುಗಳೂ ಇವೆ. ವಾಸ್ತವವಾಗಿ ಒಂದೊಂದು ವಿಜ್ಞಾನವಿಷ್ಕಾರದ ಹಿನ್ನೆಲೆಯಲ್ಲೂ ಕಾಣುವುದು ಇದೇ ಸೂತ್ರವನ್ನು –ಅತೀಂದ್ರಿಯ ಭಾವಪಂಜರವನ್ನು ಆಧರಿಸಿ ರಚಿಸಿರುವ ಸೇಂದ್ರಿಯ ಸೃಷ್ಟಿ (ನೋಡಿ – ಶ್ರೀ. ಸಂ. – 11, 519)

37
ಇರಲಿರಲ್
ತೆರೆದೆಮೆಯನಿಕ್ಕದ ಕುತೂಹಲದೊಳೀಕ್ಷಿಸಿರೆ,
ದೈತ್ಯ ಭೀಮನ ಸುಪ್ತಿ ನೀಹಾರಿಕೆಯ ನಡುವೆ
ಮರ್ಬ್ಬು ಮರ್ಬ್ಬಾವಿರ್ಭವಿಸಿತಿರ್ಬ್ಬನಿಯ ದಿನದ
ಪೊಳ್ತರೆಯಳೆಂತಂತೆ ವೃಕ್ಷ ರೂಕ್ಷಚ್ಛಾಯೆ!
ಚಾಚಿ ಹಬ್ಬಿರ್ದ ಹಲೆಗಳನೊಯ್ಯನೊಯ್ಯನೆಯ
ಬಾಚಿ ಜೋಡಿಸಿ, ತಿರುಗಿತು ಸರೀಸೃಪಾಕೃತಿಗೆ!
. . . . . . . . . . . .
. . . . . . . . . .
ಪುತ್ತು
ಕರಗಲ್ ತಪಂಗೆಯ್ವ ಕಿತ್ತಡಿಯ ಮೆಯ್ವರಿಜು
ಕಣ್ಬೆಲಕೆ ಬೀಳ್ವಂತೆ, ಕಂಡುದು ಮಹಾಶಯ್ಯೆ ತಾಂ
ಪೊತ್ತ ಪೇರರ್ದೆಯ ಪೊದೆದಲೆಯ ದಾನವ ಭವ್ಯ
ಕುಂಭಕರ್ಣನ ಮಹದ್ ವಿಗ್ರಹಂ!
(ಶ್ರೀ ಸಂಪುಟಂ – 1, 210 – 272)

“ಕುಂಭಕರ್ಣನನೆಬ್ಬಿಸಿಮ್” ಸಂಚಿಕೆಯಲ್ಲಿ ಬರುವ ಸಾಲುಗಳಿವು. ಆಕಾಲದಲ್ಲಿ ಕುಂಭಕರ್ಣನನ್ನು ಎಬ್ಬಿಸುತ್ತಿರುವ ಸಂದರ್ಭ:

ಕುಂಭಕರ್ಣನನೆಬ್ಬಿಸುವರೆ! ಹಾ!
ಪ್ರಳಯಫಣಿಯಂ ನಿದ್ದೆಗೆಡಿಪರೆ! ಅವೇಳೆಯೊಳ್
ಹಬ್ಬಗೆಯ್ವರೆ ಜಗವನಾಮಿಳ್ತು ಪೆರ್ಬ್ಬುಲಿಗೆ!
ಮುಂದೆ ಗತಿ ಏನೆಂತೊ ತಮಗೆಂದು, ಗುಜುಗುಜಿಸಿ
ನೆರೆದುದು ಜನಂ, ತಂಡತಂಡದಿ ಬೀದಿಬೀದಿಯಲಿ!
(ಶ್ರೀ. ಸಂ. – 1, 177 – 181)

ಶಂಖ ಊದಿದರು, ಜಾಗಟೆ ಬಾರಿಸಿದರು, ಗಂಟೆ ಹೊಡೆದರು

ಕಿವಿನಿಮಿರೆ ದಿಗ್ಗಜಕೆ
ಜಗಭಯಂಕರವಾಯ್ತು ನಿರ್ಘೋಷ
(ಶ್ರೀ. ಸಂ. – 1, 209 – 210)

ಆಗ ಕುಂಭಕರ್ಣ ಏಳುತ್ತಾನೆ ಹಂತ ಹಂತವಾಗಿ ಅವನಿಗೆ ಎಚ್ಚರ ಬರುತ್ತದೆ. ಮೊದಲಿನ ಹಂತದಲ್ಲಿ ಆ ಮಬ್ಬಿನಿಂದ ಒಂದು ಸರೀಸೃಪಾಕೃತಿ ತಲೆ ಎತ್ತುತ್ತದೆ ಅದು “ಪಿಂಗಾಕ್ಷಿವೆಸರಭೂತಿನಿ” ಇದಕ್ಕೆ ಬಲಿ ಒಪ್ಪಿಸಿ ಶಾಂತಿ ಮಾಡುತ್ತಾರೆ. ಎರಡನೆಯ ಹಂತದಲ್ಲಿ “ನಕ್ರಗಳ್ ಮಕರಗಳ್ ಮತ್ಸ್ಯಗಳ್ ಮೇಲೇಳುತ್ತವೆ.” ಇವು “ಜಲಪಿಶಾಚೋತ್ಕರಂಗಳ್.” ಇವುಗಳಿಗೂ ಬಲಿ ಒಡ್ಡಿ ಶಾಂತಿ ಮಾಡಿದರು. ಮೂರನೆಯ ಹಂತದಲ್ಲಿ “ಮೂಡಿದುವು ಭೀಕರದ ಪಕ್ಷಿರೂಪಗಳಂತೆ ಪ್ರಾಣಿಯಾಕಾರಗಳ್.” ಇವು “ಮೃತ್ತಿಕಾ ದೇವತೆಗಳನುಚರರ್.” ಸರಿ ಇವಕ್ಕೂ ಬಲಿ ನೀಡಿ ತೃಪ್ತಿಪಡಿಸುತ್ತಾರೆ. ನಾಲ್ಕನೆಯ ಹಂತದಲ್ಲಿ “ಮೂದಿದುದು ಸೌಧೋನ್ನತಂ ಸೌಧಗಾತ್ರದೊಳೊಂದು ವಿಗ್ರಹಂ ಪುಂಗವ ಪ್ಲವಂಗದಾ.” ಕಪಿರೂಪದಲ್ಲಿ ಹೀಗೆ ಮೈದಳೆದದ್ದು “ಕುಮಭಿಕಾ ಭೂತಂ.” ಇದಕ್ಕೆ ಒದಗಿಸಿದ ಬಲಿ ಏನು ಸಾಮಾನ್ಯವೇ? –

ಇಡಿಯಿಡಿಯ ಕಾಳ್ಬಂದಿಗಳನೆತ್ತಿ ತುಯ್ದೆಸೆಯೆ
ಬೀಳಗೊಡದೆಯೆ ಪಿಡಿದುದಾಮಹಾಮರ್ಕಟಂ!
ಪೀರ್ದುದು ಕೊರಳ್ಮರಿದು ವನವರಾಹನ ರುಧಿರ
ಮದಿರೆಯಂ: ಹಿಡಿಕೊಂಡುದು ತನ್ನ ಬಾಯ್ಬಿಲಕೆ.
ತಿಲದಿಂದ ತೈಲಮಂ ಪಿಳಿವ ಗಾಣಿಗನಂತೆ
ನೆಣಮಜ್ಜೆಯಂ!
(ಶ್ರೀ. ಸಂ. – 1, 258 – 263)

ಅಲ್ಲಿಂದ ಮುಂದಕ್ಕೆ “ಕುಮಭ ದ್ರೋಣಮೆನೆ ಕರೆದುದು ಮುಸಲಧಾರೆ.” ಆಗ ಏಳುತ್ತಾನೆ ನಿದ್ರೆ ಮುಗಿದ ಸಾಕ್ಷಾತ್ ಕುಂಭಕರ್ಣ, ದೈತ್ಯಭಾಸ್ಕರಂ! “ವಿರಿಂಚಿ ಶಾಪದ ವಿಚಿತ್ರ ಕೃತಿ”ಯಾದ ಕುಂಭಕರ್ಣನನ್ನು ಆವೇಳೆಯಲ್ಲಿ ನಿದ್ರೆಯಿಂದ ಎಬ್ಬಿಸುವಾಗ ಏನೆಲ್ಲ ಭಯಂಕರ ಘಟನೆಗಳು ಸಂಭವಿಸಬಹುದು ಎಂಬುದನ್ನು ಕವಿ ಮೇಲೆ ಉದ್ಧರಿಸಿರುವ ಅರುವತ್ತಮೂರು ಸಾಲುಗಳಲ್ಲಿ ವರ್ಣಿಸಿದ್ದಾರೆ. ಇಲ್ಲಿಯ ಕಲ್ಪನೆ ಮತ್ತು ನಿರೂಪಣೆ ಘನಘೋರವಾಗಿವೆ. ಓದುಗರಲ್ಲಿ ಸಂದರ್ಭದ ಗಭೀರತೆಯನ್ನು ಚೆನ್ನಾಗಿ ಮೂಡಿಸುತ್ತವೆ. ಇನ್ನೂ ಒಂದು ಹೆಜ್ಜೆ ಮುಂದುವರಿದು ಇದರಲ್ಲಿ ಹುದುಗಿರುವ ವೈಜ್ಞಾನಿಕಾಂಶವನ್ನು ಗಮನಿಸಿದರೆ ಇಲ್ಲಿ ಕವಿ ವಿಕಾಸ ಸಿದ್ಧಾಂತವನ್ನು (theory of evolution) ಸೂತ್ರರೂಪದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಯುವುದು. ಮೊದಲು ಮೊಬ್ಬುಮೊಬ್ಬಾಗಿದ್ದ ಜೀವಿರಹಿತ ಪ್ರಪಂಚ. ಕಾಲಾಂತರದಲ್ಲಿ ಸರೀಸೃಪಗಳು ಮೈದಳೆಯುತ್ತವೆ, ವಿಕಾಸವೃಕ್ಷ ಬೆಳೆದು ರೆಂಬೆ ಒಡೆಯುತ್ತದೆ. ನೆಗಳೆ ಮೊಸಳೆ ಮೀನು ಮುಂತಾದ ಜಲಚರಿಗಳು ಹುಟ್ಟಿ ಪ್ರಪಂಚವನ್ನು ಆಳುವುವು. ಮುಂದಕ್ಕೆ ಇವುಗಳಿಮದಲೇ ಪಕ್ಷಿಗಳ ವಿಕಾಸವಾಗುತ್ತದೆ, ಆಗ ಕಪಿದಾನವನ ಉದಯಕ್ಕೆ ಕಾಲ ಸನ್ನಿಹಿತವಾಗುವುದು. ವಿಕಾಸಕ್ರಿಯೆಯ ಮುಂದಿನ ಘಟ್ಟದಲ್ಲಿ ಮಾನವನ (ಇಲ್ಲಿ ಕುಂಭಕರ್ಣನ) ಆಗಮನವಾಗುತ್ತದೆ. ವಿಕಾಸ ಸಿದ್ಧಾಂತಕ್ಕೆ ಈ ವರ್ಣನೆ ಹೊಂದಿಕೊಳ್ಳುವುದು ಎಂಬ ಸ್ವಾರಸ್ಯಕರ ಅಂಶವನ್ನು ನನಗೆ ಮೊದಲು ಸೂಚಿಸಿದವರು ಟಿ.ವಿ. ವೆಂಕಟಾಚಲಶಾಸ್ತ್ರೀಯವರು (ಅವರಿಗೆ ಅದರ ವಿವರಣೆಯನ್ನು ಇತ್ತವರು ಕುವೆಂಪು ಅವರೇ ಎಂದು ಶಾಸ್ತ್ರೀ ಹೇಳಿದರು.)

38
ಸತೋಯ ನೀಲಾಂಬುದಕರೆ
ಸುರಧನುಸ್ ಶೋಭೆಯಂ ನೀಳ್ಪ ರವಿ ಕರದಂತೆ
(ಶ್ರೀ. ಸಂ. – 1, 407 – 408)

ಯುದ್ಧಕಾಂಡದಲ್ಲಿ ಕುಂಭಕರ್ಣನನ್ನು ಎಬ್ಬಿಸಿದ್ದಾರೆ. ಪರಿಸ್ಥಿತಿಯ ಸೂಕ್ಷ್ಮವನ್ನು ಅರಿತ ಆತ “ನಾಳೆ ಪೊಳ್ತರೆಯ ರಣಕೀ ರಾತ್ರಿ ಸಿದ್ಧನಾಗುವೆನೇಳಿ. ನೆಮ್ಮದಿಯ ಬಗೆಯಿಂದ ನಡೆಯಿಂ ನೀಂ ಮನೆಗೆ” ಎಂದು ಅಗ್ರಜನಿಗೆ ಆಶ್ವಾಸಿಸುತ್ತಾನೆ. ಇದನ್ನು ಬಲುವಾಗಿ ಮೆಚ್ಚಿಕೊಂಡ ರಾವಣ ಕುಂಭಕರ್ಣನನ್ನು ಅಪ್ಪಿ ಹೊಗಳಿ “ಮಹಾ ಹಾರಮಂ ತೊಡಿಸಿದನು ಕಂಠಕೆ” –ಹೇಗೆಂದರೆ, ನೀರಿನ ಹನಿಗಳಿಂದ ಕೂಡಿರುವ ಮಹಾ ಕಾಳಮೇಘರಾಶಿಗೆ ಸೂರ್ಯಕಿರಣ ಕಾಮನಬಿಲ್ಲನ್ನು ತೊಡಿಸುವಂತೆ ಕಾಮನಬಿಲ್ಲು ಕೇವಲ ಕ್ಷಣಿಕವಾದದ್ದು, ಅಂತೆಯೇ ಕಾಲಮೇಘರಾಶಿ ಸದೃಶ ಕುಂಭಕರ್ಣನಿಗೆ ದೊರೆತ ಈ ಬಹುಮಾನವೂ ಕ್ಷಣಿಕವಾದದ್ದು ಎಂಬ ಭಾವ ಇಲ್ಲಿ ಧ್ವನಿಸುತ್ತದೆ.

39
ಮೈದೋರ್ದುದೊಂದು ಪಗಲರಿಲ್
(ಶ್ರೀ. ಸಂ. – 2, 483)

ಕುಂಭಕರ್ಣ ಪ್ರದರ್ಶಿಸಿದ ಘೋರಯುದ್ಧದ ಅಂತಿಮ ಘಟ್ಟ; ನೇರವಾಗಿ ರಾಮನೋಡನೆ ಕುಂಭಕರ್ಣನಿಗೆ ಸಂಘಟ್ಟನೆ ಎದುರಾಗಿದೆ. ರಾಮ ಭೀಕರ ಶಕ್ತ್ಯಸ್ತ್ರ ಪ್ರಯೋಗಿಸುತ್ತಾನೆ. ಆಗ ಸಾಕ್ಷಾತ್ ಶಿವನೂ ಕಾತರಿಸುತ್ತಾನೆ. ಇದೊಂದೇ ಆಯುಧದಿಂದ ರಾವಣಾನುಜ ಹತನಾಗಲಾರ ಎಂದು ಗೊತ್ತಿದ್ದ ಶಿವ ಇದಕ್ಕೆ ಬೆಂಬಲವಾಗಿ “ಬೀಸಿದನು ರುದ್ರ ತ್ರಿಶೂಲಮಂ.” ಈ ತ್ರಿಣೇತ್ರಾಯುಧ ಹಗಲಿನಲ್ಲಿ ನಕ್ಷತ್ರ ಕಂಡಂತೆ ಬಂದಿತಂತೆ. ಇಂಥ ದೃಶ್ಯ ಕೇವಲ ಕವಿಕಲ್ಪನೆಯಲ್ಲ. ಒಂದು ನಕ್ಷತ್ರ ತನ್ನ ಕೊನೆ ದಿನಗಳಲ್ಲಿ ಅತಿಶಯವಾಗಿ ಕುಗ್ಗಿ ಕಾದು ಅಂತಃಸ್ಫೋಟಿಸುವುದೆಂದೂ ಆಗ ಅದರ ಬೆಳಕು ಹಲವಾರು ಸಾವಿರ ಪಟ್ಟು ಏರುವುದೆಂದೂ ತಿಳಿದಿದೆ. ಇಂಥ ನಕ್ಷತ್ರಗಳಿಗೆ ಸೂಪರ್ನೋವಾಗಳೆಂಬ ಹೆಸರುಂಟು. ಸೂಪರ್ನೋವಾ ನಕ್ಷತ್ರವನ್ನು ನಡುಹಗಲಲ್ಲೂ ಕಾಣುವುದು ಸಾಧ್ಯ. ಖಗೋಳವಿಜ್ಞಾನದ ಇತಿಹಾಸದಲ್ಲಿ ಇಂಥ ಘಟನೆಗಳ ಉಲ್ಲೇಖವಿದೆ.

40
ಅಣುಘೋರಮಸ್ತ್ರಂ ಸಿಡಿಯಲಾ ಮಹಾಸ್ಫೋಟಕೆ
ಸುದೂರ ಪುಟ ಭೇದನಂ ಭಿತ್ತಿ ಭೂಕಂಪಿಪೋಲ್!
(ಶ್ರೀ. ಸಂ. – 4, 648 – 649)

ಇಂದ್ರಜಿತು ರಹಸ್ಯವಾಗಿ ನಿಕುಂಭಿಲಯಾಗ ಕೈಗೊಂಡಿದ್ದಾನೆ. “ಮೃತ್ಯುಗರ್ಭಂ ತರತರನೆ ನಡುಗೆ ಮಾರಣಮಹಾಶಕ್ತಿಗಳೊಡನೆ ಸೃಜಿಸು”ವುದೇ ಅವನ ಉದ್ದೇಶ. ಇದೇನಾದರೂ ಸಿದ್ಧಿಸಿತೋ ಬಳಿಕ ಆತನನ್ನು ತಡೆಯುವವರು ಮೂಲೋಗರಲ್ಲಿ ಯಾರೂ ಇಲ್ಲ. ಆದ್ದರಿಂದ ಈ ಯಾಗ ಪೂರ್ತಿ ಆಗುವ ಮುನ್ನವೇ ಅವನನ್ನು ಸಂಹರಿಸಬೇಕು ಎಂದು ನಿರ್ಧರಿಸಿ ಲಕ್ಷ್ಮಣಸಮೇತ ವಿಭೀಷಣಾದಿಗಳು “ಇಂದ್ರಜಿತು ಮೇಘನಾದಂ ನಿಕುಂಭಿಲೆಯ ಯಾಗದೊಳಿರ್ದ ನ್ಯಗ್ರೋಧಮೂಲಕ ಗುಹಾರಹಸ್ಯವನರಸಿ, ರಜನಿ ಮುಗಿಯುವ ಮುನ್ನಮಾಕ್ರತು ಪ್ರಯತ್ನಮಂ ಕಿಡಿಸಿ ಭಂಗಿಸೆ ಕೂಟಯೋಧಿಯಂ” ಧಾವಿಸಿದರು. ಅತಿ ಕಠಿನವಾದ ತಂತ್ರನೈಪುಣ್ಯದಿಂದ ಲಕ್ಷ್ಮಣ ಇಂದ್ರಜಿತುವನ್ನು ಸಂಹರಿಸಿದಾಗ ಅಲ್ಲಿ ನಡೆದದ್ದು ಎರಡು ಪ್ರಳಯಶಕ್ತಿಗಳ ನಡುವಿನ ಮಹಾಸಂಘಟ್ಟನೆ. ಇದನ್ನು ಕವಿ ಪರಮಾಣು ಬಾಂಬಿನ ಆಸ್ಪೋಟನೆಗೆ ಹೋಲಿಸಿರುವರು. ತಾಣು ಈ ಭಾಗವನ್ನು ಬರೆಯುತ್ತಿದ್ದಾಗ ಪ್ರಪಂಚದ ಪ್ರಥಮ ಪರಮಾಣು ಬಾಂಬನ್ನು ಆಸ್ಫೋಟಿಸಲಾಗಿತ್ತು. ಅದರ ಸ್ಥೂಲ ವಿವರಗಳನ್ನು ಅವರು ಗಮನಿಸಿದ್ದರೆಂದು ನನ್ನೊಡನೆ ಹೇಳಿದರು.

41
ರಾವಣೋಲ್ಕೆಯ ಮರಣಮಯ ಪಥಕೆ                           
(ಶ್ರೀ. ಸಂ. – 8, 158)

ರಾವಣ ತಾನು ಏಕಾಕಿಯಾಗಿ ರಾಮನ ವಿರುದ್ಧ ಯುದ್ಧ ಮಾಡುವೆನೆಂದು ನಿರ್ಧರಿಸಿ ರಣರಂಗಕ್ಕೆ ಹೋಗುತ್ತಾನೆ. ದಶರಥನ ಚಂಡಿಕಾಧ್ವಜಯುಕ್ತ ರಥವನ್ನು ಕಂಡ ಕಪಿದಳ ಮೊದಲು ಅಚ್ಚರಿಪಟ್ಟರೂ ಇದೇನೋ ಹೊಸ ವಂಚನೆಯೆಂದು ಬಗೆದು ಅವನೆಡೆಗೆ ಸಹಸ್ರ ಸಂಖ್ಯೆಯಲ್ಲಿ ಧಾವಿಸುತ್ತದೆ: “ವಾನರ ಮಹಾಚಮೂವ್ಯೂಹಮುಖದೊಳಗಿರ್ದ ದಳಪತಿದರೀಮುಖಂ ತನ್ನ ಪಡೆಗಾಜ್ಞೆಯಂ ಕೈಬೀಸಿ ಬೆಸಸಿ ನುಗ್ಗಿದನು ತಾನೆಯೆ ಮುಂದೆ ರಾವಣೋಲ್ಕೆಯ ಮರಣಯ ಪಥಕೆ.” ಖಗೋಳವೈಜ್ಞಾನಿಕವಾಗಿ ಉಲ್ಕಾಪಾತ, ಭೂಮಿಗೆ ಸಂಬಂಧಿಸಿದಂತೆ, ಒಂದು ಸ್ಥಳೀಯ ವಿದ್ಯಮಾನ, ಸೌರವ್ಯೂಹದಲ್ಲಿ ಬೇರೆ ಬೇರೆ ಕಕ್ಷೆಗಳಲ್ಲಿಯೂ ತಳಗಳಲ್ಲಿಯೂ ಸಂಚರಿಸುತ್ತಿರುವ ಅಸಂಖ್ಯಾತ ಸೂಕ್ಷ್ಮ ವಸ್ತುಗಳ ಪೈಕಿ (ಕಲ್ಲುಬಂಡೆಗಳು, ಲೋಹದ ಗಟ್ಟಿಗಳು ಇತ್ಯಾದಿ) ಯಾವುದೇ ಒಂದು ಭೂಗುರುತ್ವಾಕರ್ಷಣವಲಯದ ಸಮೀಪ ಬಂದಾಗ ಭೂತಳದೆಡೆಗೆ ಸೆಳೆಯಲ್ಪಡುತ್ತದೆ. ಅದರ ಬೀಳುವ ವೇಗ ಕ್ಷಣ ಕ್ಷಣ ಏರುತ್ತ ಹೋಗುವುದು. ತತ್ಪರಿಣಾಮವಾಗಿ ವಾಯುಮಂಡಲದೊಡನೆ ಅತೀವ ಘರ್ಷಣೆ ಉಂಟಾಗಿ ಅದರಿಂದ ಉಷ್ಣ ಸಂಜನಿಸಿ ವಸ್ತು ಕಾದು ಕೆಂಪಗಾಗಿ ಉರಿದು ಬೂದಿಯಾಗಿ ನಶಿಸಿಹೋಗುತ್ತದೆ. ಇದೇ ಉಲ್ಕೆ ಅದು ಉರಿಯುತ್ತ ಮುನ್ನುಗ್ಗುತ್ತಿರುವಾಗ ಬಾನಿನಲ್ಲಿ ಭಾರಿ ಒಂದು ಬೆಂಕಿಗೆರೆಯನ್ನು ಎಳೆದಂಥ ದೃಶ್ಯವನ್ನು ಪ್ರದರ್ಶಿಸುತ್ತದೆ. ಈ ವಿದ್ಯಮಾನವನ್ನು ಹೆಚ್ಚುಕಡಿಮೆ ಪ್ರತಿರಾತ್ರಿಯೂ ನಾವು ಕಾಣಬಹುದು. ಉಲ್ಕೆಗೆ ಎದುರಾದ ವಸ್ತು ನುಚ್ಚುನುರಿಯಾಗಿ ನಾಶವಾಗುವುದು ಸರಿಯಷ್ಟೆ. ರಾವಣರಥದ ಪಥ ಉಲ್ಕಾರೇಖೆಯಂತಿತ್ತು. ಎದುರಾದ ಸಮಸ್ತರನ್ನೂ ನಾಶಪಡಿಸುತ್ತಿತ್ತು ಎಂಬುದು ಈ ಸಾಲಿನ ಭಾವ. ಇದರೊಂದಿಗೆ ಇನ್ನೂ ಒಂದು ಭಾವ ಅಧ್ಯಾಹಾರವಾಗಿದೆ: ಉಲ್ಕೆ ತನ್ನನ್ನು ತಾನೇ ಉರಿಸಿಕೊಂಡು ಆತ್ಮ ನಾಶಮಾಡಿಕೊಳ್ಳುವ ಒಂದು ವಸ್ತು, ರಾವಣನಾದರೂ ಪ್ರಸಕ್ತ ಸಂದರ್ಭದಲ್ಲಿ ಮಾಡಿದ್ದು ಇದನ್ನೇ (ನೋಡಿ – 13; ಅ. ಸಂ. – 6, 77 – 78; ಶ್ರೀ. ಸಂ. – 8, 305)

42
ಬಲವಂದುದೀ ಮೇದಿನೀ ಗೋಲಮೊಂಬತ್ತು ಸೂಳ್
ತಪೋನಿಧಿಯನಾದಿತ್ಯನಂ
(ಶ್ರೀ. ಸಂ. – 13, 10 – 11)

“ಶ್ರೀರಾಮಾಯಣದರ್ಶನಂ” ಮಹಾಕಾವ್ಯದ ಬರೆವಣಿಗೆ ಇನ್ನೇನು ಮುಗಿಯುತ್ತಿದೆ; “ಅಭಿಷೇಕ ವಿರಾಡ್ ದರ್ಶನಂ” ಬರೆಯುತ್ತಿದ್ದಾರೆ ಕವಿ; ತಾವು ಈ ರಚನೆಯಲ್ಲಿ ಗುರುಕೃಪೆಯಿಂದ ಯಶಸ್ವಿ ಆದದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಒಂಬತ್ತು ವರ್ಷಗಳೇ ಈ “ಅಲೌಕಿಕ ನಿತ್ಯಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯಸತ್ಯ ಕಥನಂ”ಅನ್ನು ರಚಿಸುವಾಗ ಸಂದು ಹೋದದ್ದನ್ನು ಮೇಲಿನ ಸಾಲುಗಳಲ್ಲಿ ಹೇಳಿರುವರು. ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವುದೂ ಇದರ ಅವಧಿಗೆ ವರ್ಷವೆಂಬ ಹೆಸರಿರುವುದೂ ಈಗ (ಅಂದರೆ ನಿಕೂಲಾಸ್ ಕೊಪರ್ನಿಕಸನ, 15 – 16ನೆಯ ಶತಮಾನಾನಂತರ) ಎಲ್ಲರಿಗೂ ತಿಳಿದಿರುವ ಸಂಗತಿ.

ಭಾಗ ಮೂರು

ಈ ಲೇಖನದ ಭಾಗ ಎರಡರಲ್ಲಿ 22, 37 ಮತ್ತು 42ರ ಹೊರತಾಗಿ ಉಳಿದೆಲ್ಲ ವಿವರಣೆಗಳನ್ನೂ ಕವಿ ಕುವೆಂಪು ಅವರು ಸ್ವತಃ ಪರಿಶೀಲನೆ ಮಾಡಿ ನನಗೆ ಯುಕ್ತ ಸಲಹೆಗಳನ್ನಿತ್ತು ನನ್ನ ಸಂದೇಹಗಳನ್ನು ನಿವಾರಿಸಿ ಉಪಕಾರ ಮಾಡಿದ್ದಾರೆ. ಕಾವ್ಯವನ್ನು ಓದುತ್ತಿದ್ದಾಗ ನನಗೆ ಎದುರಾಗುತ್ತಿದ್ದ ಹಲವಾರು ಸಮಸ್ಯೆಗಳಿಗೆ ಎನ್. ಪ್ರಹ್ಲಾದರಾಯರೂ ಪ್ರಭುಶಂಕರರೂ ಯೋಗ್ಯ ಪರಿಹಾರಗಳನ್ನು ನೀಡಿದ್ದಾರೆ. ಕವಿವರೇಣ್ಯರ ಹಾಗೂ ಈ ಇಬ್ಬರು ಮಹನೀಯರ ನೆರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

1975