ಭಾಗ ಒಂದು

ಆಧುನಿಕ ವಿಜ್ಞಾಯುಗದ ಒಬ್ಬ ಮಹಾಕವಿಯ ರಚನೆಯಲ್ಲಿ ಸಮಕಾಲೀನ ವಿಜ್ಞಾನ ಪ್ರಭಾವವನ್ನು ಓದುಗರು ನಿರೀಕ್ಷಿಸುವುದು ಸಹಜ. ಆದರೆ ಕಾವ್ಯವಸ್ತು “ಇತಿಹಾಸ ದೃಷ್ಟಿಗಸ್ಪಷ್ಟ ಪ್ರಾಚೀನ” ಕಾಲದ್ದಾಗಿದ್ದರೆ ಆಗ ಕವಿಗೆ ತನ್ನ ವೈಜ್ಞಾನಿಕ ಜ್ಞಾನವನ್ನು ಕಾವ್ಯದಲ್ಲಿ ಬಳಸಿಕೊಳ್ಳುವಾಗ ಪೂರ್ಣಸ್ವಾತಂತ್ರ್ಯವಿರುವುದಿಲ್ಲ. ಉದಾಹರಣೆಗೆ ರಾಮಾಯಣ ಯುದ್ಧ ವರ್ಣನೆಯಲ್ಲಿ ಆಧುನಿಕ ಅಸ್ತ್ರಗಳ ಇಲ್ಲವೇ ಸಮರತಂತ್ರಗಳ ಪ್ರತ್ಯಕ್ಷ ನಿರೂಪಣೆ ಬಂದರೆ ಅದು ಅಭಾಸ ಎನಿಸೀತು. ಈ ತೊಂದರೆಯನ್ನು ನಿವಾರಿಸಲು ವಿಜ್ಞಾನೋಪಮೆಗಳನ್ನೂ ವಿಜ್ಞಾನದ ಪಾರಿಭಾಷಿಕ ಪದಗಳನ್ನೂ ರಸಸುಖದ ಹದ ಕೆಡದಂತೆ ಬಳಸುವ ಸ್ವಾತಂತ್ರ್ಯ ಕವಿಗೆ ಉಂಟು; ರಸಸುಖ ವರ್ಧಿಸಿದರೆ ಅತ್ಯುತ್ತಮ.

ವಿಜ್ಞಾನದ ಪರಿಕಲ್ಪನೆಗಳನ್ನೂ (concepts) ಪರಿಭಾಷೆಯನ್ನೂ (technical language) “ಶ್ರೀರಾಮಾಯಣದರ್ಶನಂ” ಮಹಾಕಾವ್ಯದಲ್ಲಿ ಕವಿ ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಕುರಿತ ಒಂದು ಸ್ಥೂಲ ಅಧ್ಯಯನ ಈ ಪ್ರಬಂಧದ ವಸ್ತು.

ಕಾವ್ಯವನ್ನು ಮೊದಲ ಬಾರಿಗೆ ಇದೊಂದು ಸಾಹಿತ್ಯಕೃತಿ ಎಂಬ ದೃಷ್ಟಿಯಿಂದ ಓದಿದೆ. ಇದರ ಪುಟ ಪುಟದಲ್ಲೂ ಸಮಕಾಲೀನ ವಿಜ್ಞಾನಪ್ರಜ್ಞೆ ಮಿನುಗಿ ಕಾವ್ಯದ ಒಟ್ಟಂದಕ್ಕೆ ಹೊಸ ಮೆರುಗು ಒದಗುತ್ತಿದ್ದುದನ್ನು ಕಂಡು ಹೆಚ್ಚಿನ ಕುತೂಲಹ ಮೊಳೆಯಿತು. ಹೀಗಾಗಿ ಹೊಸತೊಂದು ಪರಿದೃಷ್ಟಿಯನ್ನು (approach) ರೂಪಿಸಿಕೊಂಡು ಕಾವ್ಯವನ್ನು ಪುನಃ ಅಭ್ಯಸಿಸಿದೆ. ಅದರ ಫಲ ಈ ಲೇಖನ.

ಸಾಹಿತ್ಯ ಮತ್ತು ವಿಜ್ಞಾನ ಮಾನವನ ಸೃಜನಶೀಲ ಪ್ರತಿಭೆಯ ಬೇರೆ ಬೇರೆ ಮುಖಗಳು ಮಾತ್ರ ಒಂದರಿಂದ ಇನ್ನೊಮದು ಪರಿಕಲ್ಪನೆಗಳನ್ನೂ ಪರಿಭಾಷೆಯನ್ನೂ ಪಡೆದು ಕೊಂಡಾಗ ಅರ್ಥಸ್ಪಷ್ಟತೆಗೆ ಹೊಸ ಆಯಾಮ ಲಭಿಸುತ್ತದೆ; ಜೊತೆಯಲ್ಲೇ ಭಾಷೆಗೆ ಅಪೂರ್ವವಾದ ಸೌಂದರ್ಯ ಕೂಡ ಪ್ರಾಪ್ತವಾಗುತ್ತದೆ. ಈ ದಿಶೆಯಲ್ಲಿ ಕವಿ ಕುವೆಂಪು ಅವರು ಕನ್ನಡ ಓದುಗರಿಗೆ ಅದೆಂಥ ಉನ್ನತ ಕೊಡುಗೆಯನ್ನು ಸಲ್ಲಿಸಿದ್ದಾರೆ ಎನ್ನುವುದನ್ನು “ಶ್ರೀರಾಮಾಯಣದರ್ಶನಂ” ಮಹಾಕಾವ್ಯದಲ್ಲಿ ಕಾಣಬಹುದು. ಇದರಲ್ಲಿ ನಾನು ಗುರುತಿಸಿದ ಪ್ರಮುಖ ವೈಜ್ಞಾನಿಕಾಂಶಗಳನ್ನು ಮಾತ್ರ ಪುಸ್ತಕ ಲೇಖನದಲ್ಲಿ ಕಲೆಹಾಕಿದ್ದೇನೆ. ನನ್ನ ಆಜ್ಞತೆಯಿಂದಾಗಿ ಆಯ್ಕೆಗೆ ಸಿಕ್ಕದ ಇನ್ನೆಷ್ಟೋ ಸ್ವಾರಸ್ಯಕರ ವೈಜ್ಞಾನಿಕಾಂಶಗಳು ಇಲ್ಲಿ ಇವೆ ಎಂಬುದರ ಅರಿವು ನನಗುಂಟು. ನಮ್ಮ ಪಾತ್ರೆಯ ಗಾತ್ರದಷ್ಟು ಮಾತ್ರ ರತ್ನ ದೊರೆಯುವುದಷ್ಟೆ ಸಮುದ್ರಗರ್ಭದಿಂದ!

ಕಾವ್ಯದಲ್ಲಿ ವೈಜ್ಞಾನಿಕಾಂಶ ಅಂದರೇನು? ವಿಜ್ಞಾನಕ್ಷೇತ್ರದಿಂದ ಒಂದು ಪರಿಕಲ್ಪನೆಯನ್ನು ಪಡೆದು ಅದನ್ನು ಸಾರ್ವತ್ರೀಕರಿಸಿ ಜೀವನಾನುಭವಕ್ಕೆ ಸಮೀಕರಿಸಿದಾಗ ದೊರೆಯುವ ನಿರೂಪಣೆ ಇದು. ಅಂತಿಮವಾಗಿ ಇದು ಕೃತಿಕಾರ ವಿಜ್ಞಾನವಿಚಾರಗಳನ್ನು ಎಷ್ಟರಮಟ್ಟಿಗೆ ಅರಿತು ತನ್ನದಾಗಿ ಮಾಡಿಕೊಂಡಿದ್ದಾನೆ ಎನ್ನುವುದನ್ನು ಅವಲಂಬಿಸಿದೆ. ಒಂದು ಉದಾಹರಣೆಯನ್ನು ಪರಿಸೀಲಿಸೋಣ. “ಟಾಲ್ಸ್‌ಟಾಯಿಯ ಮನಸ್ಸಿಗೆ ಅದ್ಭುತವಾದ ವಿಘಟನ ಸಾಮರ್ಥ್ಯವಿತ್ತು ಯಾವುದೇ ಸನ್ನಿವೇಶದ ತೀರ ಅಸ್ಪಷ್ಟ ವಿವರಗಳನ್ನೂ ಬಿಡಿ ಬಿಡಿಯಾಗಿ ಗ್ರಹಿಸಿ ಲಂಬಿಸಿ ಸಮಗ್ರ ಚಿತ್ರವನ್ನು ಬಿಂಬಿಸಬಲ್ಲ ದ್ಯುತಿಸಂವೇದಕ ಮನಸ್ಸು ಆತನದು.” ಈ ವಾಕ್ಯಗಳ ಅರ್ಥವಿಷ್ಟು ಒಂದು ಸೂಕ್ಷ್ಮದರ್ಶಕಕ್ಕೆ ಪೂರೈಸಿದ ಲಕ್ಷ್ಯದಲ್ಲಿಯ (ಬರಿಗಣ್ಣಿಗೆ ಅದು ಒಂದು ಮಚ್ಚೆಯೋ ಚುಕ್ಕಿಯೋ ಆಗಿ ತೋರಬಹುದು) ಅಸಂಖ್ಯಾತ ವಿವರಗಳನ್ನು ಅದು ಬಿಡಿಬಿಡಿಯಾಗಿ ಒಡೆದು (ವಿಘಟಿಸಿ) ಲಂಬಿಸಿ ತೋರಿಸುತ್ತದೆ. ಇದೇ ಅದರ ವಿಘಟನಸಾಮರ್ಥ್ಯ (resolving power). ಛಾಯಾಚಿತ್ರಣದಲ್ಲಿ ಉಪಯೋಗಿಸುವ ಪೊರೆಯ (ಫಿಲ್ಮ್) ಕ್ರಿಯಾತಂತ್ರವೇನು? ಪೊರೆಯಲ್ಲಿರುವ ರಾಸಾಯನಿಕ ಲೇಪನದ ಮೇಲೆ ಬೆಳಕು (ದ್ಯುತಿ) ಬಿದ್ದ ಕ್ಷಣವೇ ಅಲ್ಲದೊಂದು ಅನುರೂಪ ಪ್ರತಿಕ್ರಿಯೆ ಉಂಟಾಗುತ್ತದೆ. ಇದರ ಯುಕ್ತ ಸಂಸ್ಕರಣದಿಂದ ಮೂಲ ವಸ್ತುವಿನ ಯಥಾಚಿತ್ರವನ್ನು ರೂಪಿಸುವುದು ಸಾಧ್ಯ. ಆದ್ದರಿಂದ ಪೊರೆ ದ್ಯುತಿಸಂವೇದಕವಾಗಿದೆ (photosensitive), ಅದು ಮೂಲ ವಸ್ತುವಿನ ಆಕಾರವನ್ನು ಕುರಿತ ಹಲವಾರು ಲಕ್ಷಣಗಳನ್ನು ಎವೆಹೊಡೆಯುವುದರೊಳಗೆ ಸೆರೆಹಿಡಿದಿರುವುದು ಎನ್ನುತ್ತೇವೆ. ಟಾಲ್ಸ್‌ಟಾಯಿಯ ವ್ಯಕ್ತಿಚಿತ್ರವನ್ನು ಬರೆಯುವಾಗ ಈ ಮೇಲೆ ಉದಾಹರಿಸಿದಂಥ ಒಂದು ವಾಕ್ಯ ಬಂದರೆ ಅದು ವೈಜ್ಞಾನಿಕಾಂಶ ಎಂದೆನ್ನಿಸಿಕೊಳ್ಳುತ್ತದೆ.

ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿಗೂ – ಆತ ಕವಿ ಆಗಿರಲಿ, ಶಿಲ್ಪಿ ಆಗಿರಲಿ, ವಿಜ್ಞಾನಿ ಆಗಿರಲಿ – ತಾನು ನಿರ್ಮಿಸಲಿರುವ ವ್ಯವಸ್ಥೆಗೆ (system) ತಕ್ಕಂಥ ಚೌಕಟ್ಟನ್ನು (framework) ಆರಿಸುವ ಸ್ವಾತಂತ್ರ್ಯ ಉಂಟು. ಇದನ್ನು ಆಯ್ದ ಬಳಿಕ ಆಯಾ ವ್ಯವಸ್ಥೆಯ ವ್ಯಕ್ತಿತ್ವಕ್ಕೆ ಒಪ್ಪುವ ಮಾತುಗಳಲ್ಲಿ ಚೌಕಟ್ಟಿನ ಪರಿಚಯವನ್ನು ಓದುಗನಿಗೆ ಆತ ಮಾಡಿಕೊಡುತ್ತಾನೆ. ಇಂಥ ಪರಿಚಯಾನಂತರ ಓದುಗ ಕವಿಯೊಂದಿಗೆ ಸಹೃದಯನಾಗುತ್ತಾನೆ; ವಿಜ್ಞಾನದ ಪರಿಭಾಷೆಯಲ್ಲಿ ಹೇಳುವುದಾದರೆ ಅವರೀರ್ವರೂ ಒಂದೇ ಆವೃತ್ತಿಯಲ್ಲಿ (frequency) ಇರುತ್ತಾರೆ.

ನನ್ನೀ ಕೃತಿಯನೋದುವಾತ್ಮರಾ ದಾರಿದ್ರ್ಯಮಂ ಪರಿಹರಿಸಿ
ಸರಸ್ವತಿಯೆ, ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ
(ಅಯೋಧ್ಯಾಸಂಪುಟಂ, ಸಂಚಿಕೆ 8, ಸಾಲು 18 – 20)

ಎಂಬುದಾಗಿ ಕವಿ ಆಶಿಸಿರುವಲ್ಲಿ ಮತ್ತು

ದರ್ಶನಧ್ವನಿರಸಾಮೃತ ಪಾನದಾನಂದದಿಂ
ಲೋಕಶೋವನಳಿಸಿ ಭುವನತ್ರಯಂಗಳಂ
ತಣಿಪ ನಂದನ ತಪೋದೀಕ್ಷೆಯಂ ಕೊಂಡೆಸಪ
ರಸಋಷಿಗೆ ಯೋಗಮತಿ ಸಹೃದಯ ವಿಭೂತಿಗೆ ನಮೋ!
(ಶ್ರೀಸಂಪುಟಂ, ಸಂಚಿಕೆ 13, ಸಾಲು 219 – 222)

ಎಂಬುದಾಗಿ ಕವಿ ನಿವೇದಿಸಿಕೊಂಡಿರುವಲ್ಲಿ ಇದೇ ಭಾವ ಅಧ್ಯಾಹಾರ.

“ಶ್ರೀರಾಮಾಯಣದರ್ಶನಂ” ಮಹಾಕಾವ್ಯದ ಆರಂಭದ ಹಲವಾರು ಸಾಲುಗಳಲ್ಲಿ (1 – 155) ಕವಿ ತಾನು ಕಟ್ಟಲಿರುವ ಕಾವ್ಯಸೌಧದ (ಅಂದರೆ ವ್ಯವಸ್ಥೆಯ) ಚೌಕಟ್ಟನ್ನು ನಿರೂಪಿಸಿದ್ದಾರೆ;

ಬಾಳ್ಗಬ್ಬದೊಳ್ ಕರುಣೆ ತಾಂ ಬೇನೆಗುದಿದೊಡೆಮಲ್ತೆ
ಮೆರೆದಪುದು ಪೊರಪೊಣ್ಮು ತಾ ಮಹಾಕಾವ್ಯ ಶಿಶುತಾಂ
ಚಾರು ವಾಗ್ವೈಖರಿಯ ಛಂದಶ್ಯರೀರದಿಂ?[1]
(ಅ.ಸಂ. – 1, 32 – 34)

ಎಂಬುದಾಗಿ ಈ ವಿವರಣೆ ಉಂಟು. ಇಂಥ ಒಂದು ವ್ಯವಸ್ಥೆಯಲ್ಲಿ

ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ
ಪೊರಸೂಸಿದಪುದು ಕಬ್ಬಿನ ರಸಂ
(ಅ. ಸಂ. – 1, 134 – 135)

ಎಂಬ ನಿರೂಪಣೆ ವೈಜ್ಞಾನಿಕ ಸತ್ಯವೇ ಆಗಿದೆ. ಭೌತವಿಜ್ಞಾನದ ಚೌಕಟ್ಟಿನೊಳಗೆ ಇದು ಸತ್ಯವಲ್ಲ ಎಂಬುದು ನಮಗೆ ಗೊತ್ತುಂಟು. ಏಕೆಂದರೆ ಯಾವ ಪ್ರಯೋಗ ಮಾಡಿಯೂ ಕಬ್ಬಿಣದಿಂದ ಕಬ್ಬಿನ ರಸವನ್ನು ಹಿಂಡುವುದು ಅಸಾಧ್ಯ ಆದ್ದರಿಂದ ಯಾವುದೇ ಹೇಳಿಕೆಯ ಸತ್ಯಾಸತ್ಯತೆಯನ್ನು ನಿರ್ಣಯಿಸುವ ಮುನ್ನ ಅದು ಯಾವ ಚೌಕಟ್ಟಿನಲ್ಲಿ ಇದೆ, ಅದರೊಳಗಿನ ವಿಧಿ ನಿಯಮಗಳೇನು ಇವೇ ಮುಂತಾದ ಪೂರ್ಣ ವಿವರಗಳೂ ನಮಗೆ ತಿಳಿದಿರಬೇಕಾದದ್ದು ಅತ್ಯಗತ್ಯ. ಅನಿವಾರ್ಯ ಕೂಡ. ಇದನ್ನು ಕವಿ

ಬ್ರಹ್ಮ ಸತ್ತೆಯನಾ ಪರಬ್ರಹ್ಮ ಸತ್ತೆಯಿಂ
ಮಾತ್ರಮೆಯೆ ದರ್ಶಿಸುತಿದಂ ಮಿಥ್ಯೆಯೆಂಬುದೇಂ
ಪೂರ್ಣ ಸತ್ಯಮೆ? ಯೋಗ ವಿಜ್ಞಾನಮೊಪ್ಪದು ಕಣಾ!
(ಅ.ಸಂ. – 1, 69 – 71)

ಎಂಬ ನುಡಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇಷ್ಟು ಮಾತ್ರವಲ್ಲ. ಇನ್ನೂ ಮುಂದುವರಿದು

ಕಾವ್ಯಸತ್ತೆಯನನ್ನ ಸತ್ತಾ ಪ್ರಮಾಣದಿಂ
ಪರಿಕಿಸಲ್ ಮಿಥ್ಯೆಯಲ್ಲದೆ ತನಗೆ ತಾಂ ಮಿಥ್ಯೆಯೇಂ?
(ಅ.ಸಂ. — 1, 76 – 77)

ಎಂಬುದಾಗಿ ಮಾನದಂಡದ ಆಯ್ಕೆಯಲ್ಲಿಯ ಔಚಿತ್ಯ ಕುರಿತು ಎಚ್ಚರಿಕೆ ಕೂಡ ನೀಡಿದ್ದಾರೆ. ಆ ಎಚ್ಚರಿಕೆ ಇದು: ಹೋಲಿಸಲಾಗದುದನ್ನು ಹೋಲಿಸಬಾರದು; ಹೋಲಿಸಲಾಗುವವನ್ನು ಮಾತ್ರ ಹೋಲಿಸಬಹುದು; ಅಳತೆಯ ಮಾನದಂಡ, ಅಳತೆ ಮಾಡಲ್ಪಡುವ ವಸ್ತುವಿನ ಗಾತ್ರವನ್ನು ಅನುಲಕ್ಷಿಸಿ, ಅರಿವಿಗೆ ನಿಲುಕುವ ಸಂಖ್ಯೆಯನ್ನು ಕೊಡುವಂತಿರಬೇಕು, ಒಂದು ವ್ಯವಸ್ಥೆಯಲ್ಲಿ ಸಂಗತವಾಗುವ (consistent) ಫಲಿತಾಂಶ ಬೇರೆ ಒಂದು ವ್ಯವಸ್ಥೆಯಲ್ಲಿ ಸಂಗತವಾಗಬೇಕಾಗಿಲ್ಲ; ಇತ್ಯಾದಿ ಇವೇ ಮೊದಲಾದವು ವಿಜ್ಞಾನದಲ್ಲಿ ಹೇಗೋ ಜೀವನದಲ್ಲೂ ಹಾಗೇ ಪದೇ ಪದೇ ಅನುಭವಕ್ಕೆ ಬರುವ ಸಂಗತಿಗಳು.

ಕವಿ ಕುವೆಂಪು ಅವರು ಆಧುನಿಕ ವಿಜ್ಞಾನದ ಮೂಲಭೂತ ಪರಿಕಲ್ಪನೆಗಳನ್ನು ಚೆನ್ನಾಗಿ ಬುದ್ಧಿ ಹಾಗೂ ಭಾವಗತ ಮಾಡಿಕೊಂಡು ಅವನ್ನು ಯಶಸ್ವಿಯಾಗಿ ಈ ಕಾವ್ಯದಲ್ಲಿ ಬಳಸಿದ್ದಾರೆ. ಇಲ್ಲಿ ಬರುವ ಉಲ್ಕೆ, ಧೂಮಕೇತು, ಸಪ್ತರ್ಷಿಮಂಡಲ, ಜಡತ್ವ, ಚೇತನ, ಗುರುತ್ವಾಕರ್ಷಣೆ, ನಕ್ಷತ್ರ, ರವಿ, ಬೆಳ್ಳಿ, ಜೀವಾತು ಇವೇ ಮುಂತಾದ ವಿಜ್ಞಾನದ ಪಾರಿಭಾಷಿಕ ಪದಗಳೂ ಅಲ್ಲಲ್ಲಿ ಧ್ವನಿಸುವ ವೈಜ್ಞಾನಿಕ ಸಿದ್ಧಾಂತಗಳೂ ಕಾವ್ಯದ ಉದ್ದಕ್ಕೂ ಅಸಂಖ್ಯಾತ ವಿಜ್ಞಾನಸರಸ್ಥಾನಗಳನ್ನು ನಿರ್ಮಿಸಿವೆ. ಇವೆಲ್ಲವನ್ನೂ ಗುರುತಿಸಿ ಹೆಚ್ಚಿನ ರಸಸುಖವನ್ನು ಪಡೆಯುವ ಭಾಗ್ಯ ಓದುಗರದಾಗಲಿ ಎಂದು ಹಾರೈಸುತ್ತೇನೆ.

ಓದುಗರಿಗೆ ಒಂದು ನಮ್ರ ಸೂಚನೆ. ಈ ಲೇಖನದ ಎರಡನೆಯ ಭಾಗವನ್ನು ಓದುವ ಮೊದಲು ಅವರೊಮ್ಮೆ ಕಾವ್ಯವನ್ನು ಓದಿಕೊಳ್ಳುವುದು ಕಡ್ಡಾಯ. ಮಗುದೊಮ್ಮೆ ಓದುವಾಗ ಈ ಲೇಖನದಲ್ಲಿ ವಿವರಿಸಿರುವ ಸಾಲುಗಳು ಬಂದಾಗ, ಓದನ್ನು ಕ್ಷಣಕಾಲ ನಿಲ್ಲಿಸಿ ಆ ಸನ್ನಿವೇಶದ ಮುನ್ನೆಲೆಯಲ್ಲಿ ಇಲ್ಲಿಯ ವಿವರಣೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಪರಿಶೀಲಿಸಬೇಕು. ಹೀಗೆ ಮಾಡಿದರೆ ಮಾತ್ರ ಹೊಳೆದೀತು ಕವಿ ಅದೆಷ್ಟು ಔಚಿತ್ಯಪೂರ್ಣವಾಗಿ ಹಾಗೂ ಸಮರ್ಥವಾಗಿ ಆಧುನಿಕ ವೈಜ್ಞಾನಿಕಾಂಶಗಳನ್ನು ಈ ಪ್ರಾಚೀನ ಚೌಕಟ್ಟಿಗೆ ಹೊಂದಿಸಿ ರಸಸುಖವನ್ನು ಸಾಧಿಸಿದ್ದಾರೆ ಎಂಬ ಅಂಶ. ಅಲ್ಲದೇ ಆಗ ಓದುಗರು ಈ ಕಾವ್ಯದಲ್ಲಿ ಇನ್ನಷ್ಟು ವಿಜ್ಞಾನರಸಪುಷ್ಪಗಳನ್ನು ಸ್ವತಃ ಗುರುತಿಸಿ ಅವುಗಳಿಂದ ಹೆಚ್ಚಿನ ಅರ್ಥಮಧುವನ್ನು ಹೀರಲು ಸಮರ್ಥರೂ ಆಗುವರು.

ಭಾಗ ಎರಡು

ಸೂಚನೆ ಉದ್ಧರಣಗಳು ಕಾವ್ಯ ಸಾಗಿದ ಅನುಕ್ರಮದಲ್ಲೇ ಉಂಟು. ಪ್ರತಿಯೊಂದು ಉದ್ಧರಣದ ಅಡಿಯಲ್ಲೂ ಆಕರವನ್ನು ಸೂಚಿಸಿದೆ. ಮೊದಲಿನ ಎರಡು ಅಕ್ಷರಗಳು ಸಂಪುಟಸೂಚಿಗಳು. ಒಡನೆ ಬರುವ ಸಮಖ್ಯೆ ಸಂಚಿಕೆಸೂಚಿ. ಮತ್ತೆ ಬರುವ ಸಂಖ್ಯೆಗಳು ಪಂಕ್ತಿಸೂಚಿಗಳು. ಅಧ್ಯಯನಕ್ಕೆ ಬಳಿಸಿದ ಆವೃತ್ತಿ; ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆ. 1971.

1
ಪೂರ್ಣಮದು: ಪೂರ್ಣಮಿದು: ಪೂರ್ಣದಿಂ ಬಂದುದೀ
ಪೂರ್ಣಮಾ ಪೂರ್ಣದಿ ಪೂರ್ಣಮಂ ಕಳೆದೊಡಂ
ಪೂರ್ಣಮೆಯ ತಾನುಳಿವುದು
(ಅಯೋಧ್ಯಾಸಂಪುಟಂ – 1, 72 – 74)

ಇದು ಉಪನಿಷತ್ತಿನ ಸುಪ್ರಸಿದ್ಧ ಮಂತ್ರದ ಕನ್ನಡ ರೂಪ. ಮಾನವನಿಗೆ ತನ್ನ ಪ್ರಜ್ಞೆಯ ವಿವಿಧ ಸ್ತರಗಳಲ್ಲಿ ಲಭಿಸುವ ಅನುಭವಗಳು ಆಯಾ ಸ್ತರಗಳಲ್ಲಿ ಸತ್ಯವೇ ಆಗಿವೆ. ಒಂದು ಸ್ತರದ ಅನುಭವವನ್ನು ಇನ್ನೊಂದು ಸ್ತರದ ಅನುಭವದಿಂದ ಅಳೆಯುವುದು ಸಲ್ಲದು. ಪ್ರತಿಯೊಂದು ಅದರದರಷ್ಟಕ್ಕೆ ಪೂರ್ಣವಾಗಿಯೇ ಇದೆ; ಅದರಿಂದ ಏನನ್ನು ತೆಗೆದರೂ ಅದಕ್ಕೆ ಏನನ್ನು ಸೇರಿಸಿದರೂ ಅದು ಪೂರ್ಣವಾಗಿಯೇ ಇರುತ್ತದೆ ಎಂಬುದಾಗಿ ಕವಿ ಇಲ್ಲಿ ಹೇಳುತ್ತಿದ್ದಾರೆ.

ಕವಿಕೃತಿಯುಮಾ ಬ್ರಹ್ಮಕೃತಿಯಂತೆ ಋತಚಿದ್
ವಿಲಾಸಮಾ ಕೃತಿಲೋಕಮೀ ಪ್ರಕೃತಿ ಲೋಕದೊಲೆ
ಬಹುಲೋಕ ಕಿರಣಮಯ ಸತ್ಯ ಸೂರ್ಯೋತ್ತಮನ
ಚಿತ್ ಪ್ರಕಾಶನದೊಂದು ರಸಲೋಕ ರೂಪ ಕಿರಣಂ
(ಅ.ಸಂ. – 1, 78 – 81)

ಬ್ರಹ್ಮಕೃತಿಯಾದ ವಿಶ್ವ ನಮ್ಮ ಪಂಚೇಂದ್ರಿಯಗಳ ಚೌಕಟ್ಟಿನೊಳಗೆ ಎಷ್ಟು ಸತ್ಯವೋ ಕವಿ ಕೃತಿಯಾದ ಕಾವ್ಯ ಭಾವರಸಲೋಕದೊಳಗೆ ಅಷ್ಟೇ ಸತ್ಯ; ಒಂದೊಂದೂ ಅದರದರಷ್ಟಕ್ಕೆ ಪೂರ್ಣವಾಗಿಯೇ ಇದೆ. ಈ ದೃಷ್ಟಿಯನ್ನು ರೂಪಿಸಿಕೊಂಡು ಸಹೃದಯರು ಕಾವ್ಯ ರಸಾಸ್ವಾದನ ಮಾಡಬೇಕು; ಹೇಗೆಂದರೆ

ಕಾಣವೆಳ್ಕುಂ ಪೊಕ್ಕು ಕೃತಿನೇತ್ರ ಪಥದಿಂ
ಕವೀಂದ್ರಮತಿ ಲೋಕದೊಳ್ ಪೊಳೆವ ಋತ ಕಲ್ಪನಾ
ಮೂರ್ತಂಗಳಂ ಭಾವಚರ ನಿತ್ಯಸತ್ಯಂಗಳಂ
(ಅ. ಸಂ, – 1, 84 – 86)

ಈಗ “ಪೂರ್ಣ” ಪದವನ್ನು ಗಣಿತದ “ಅನಂತ” (infinity) ಎಂದು ಭಾವಿಸಿದ್ದೇ ಆದರೆ 72 – 74 ಸಾಲುಗಳಿಗೆ ಒಂದು ವಿಶಿಷ್ಟ ವೈಜ್ಞಾನಿಕಾರ್ಥ ಬರುತ್ತದೆ. ಈ ಕೆಳಗಿನ ಮೂರು ಸಂಖ್ಯೆ ಶ್ರೇಢಿಗಳನ್ನು (number sequences) ಪರಿಶೀಲಿಸಬೇಕು:

A : 1, 2, 3, 4, 5, 6, 7, 8, 9, 10, 11, 12, 13, 14, 15, 16,…….

B : 1, 3, 5, 7, 9, 11, 13, 15,……..

C : 2, 4, 6, 8, 10, 12, 14, 16,…..

ಪ್ರತಿಯೊಂದು ಶ್ರೇಢಿಯೂ ಅಂತ್ಯವೇ ಇಲ್ಲದೆ ಮುಂದುವರಿಯುವುದು. ಆದ್ದರಿಂದ ಇವುಗಳಿಗೆ ಅನಂತ ಶ್ರೇಢಿಗಳು ಎಂಬ ಹೆಸರುಂಟು. A ಒಂದು ಅನಂತ ಶ್ರೇಢಿ, B ಇನ್ನೊಂದು ಅನಂತ ಶ್ರೇಢಿ, C ಮತ್ತೊಂದು ಅನಂತ ಶ್ರೇಢಿ A ಶ್ರೇಢಿಯಿಂದ ಬೆಸ ಸಂಖ್ಯೆಗಳನ್ನು ಮಾತ್ರ ಆಯ್ದು ಬೇರೆ ಒಂದು ಶ್ರೇಢಿಯನ್ನು ರಚಿಸಬೇಕು. ಅದು 1, 3, 5, 7, 9,…. ಆಗುತ್ತದೆ; ಇದು B ಶ್ರೇಢಿ ಎಂಬುದು ಸ್ಪಷ್ಟ. B ಯನ್ನು A ಯಿಂದ ಹೊರ ತೆಗೆದ ಬಳಿಕ A ಶ್ರೇಢಿಗೆ 2, 4, 6, 8, 10,….. ಎಂಬ ನೂತನ ರೂಪ ಬರುವುದು. ಇದು C ಶ್ರೇಢಿ. ಆದ್ದರಿಂದ A ಎಂಬ ಅನಂತದಿಂದ B ಎಂಬ ಅನಂತವನ್ನು ತೆಗೆದಾಗ ಉಳಿಯುವುದು C ಎಂಬ ಅನಂತ. ಪುನಃ B ಶ್ರೇಢಿಗೆ C ಶ್ರೇಢಿಯನ್ನು ಸೇರಿಸಿದಾಗ A ಶ್ರೇಢಿ ದೊರೆಯುವುದು. ಆದ್ದರಿಂದ B ಎಂಬ ಅನಂತಕ್ಕೆ C ಎಂಬ ಅನಂತವನ್ನು ಸೇರಿಸಿದಾಗ ದೊರೆಯುವುದು ಮತ್ತೆ A ಎಂಬ ಅನಂತ. ಹೀಗೆ ಅನಂತಕ್ಕೆ ಅನಂತವನ್ನು ಕೂಡಿಸಿದಾಗ ಇಲ್ಲವೇ ಅನಂತದಿಂದ ಅನಂತವನ್ನು ಕಳೆದಾಗ ಅನಂತವೇ ಸಿದ್ಧಿಸುವುದು. ಗಣಿತದಲ್ಲಿ ಬರುವ ಸಂಖ್ಯೆಗಳು, ಅವು ಎಷ್ಟೇ ದೊಡ್ಡವಾಗಿದ್ದರೂ, ಸಾಂತಸಂಖ್ಯೆಗಳೇ, 5,00,00,000 ಎಂಬ ಸಂಖ್ಯೆ 1ಕ್ಕಿಂತ ಅದೆಷ್ಟೋ ದೊಡ್ಡದು ನಿಜ. ಆದರೂ ಅದು ಅನಂತವಲ್ಲ. ತಾತ್ತ್ವಿಕವಾಗಿ ನಾವು 5,00,00,000ಯನ್ನು ಅಂತೆಯೇ ಅದಕ್ಕಿಂತ ಬಲು ದೊಡ್ಡದಾದ ಯಾವುದೇ ಬೃಹತ್ಸಂಖ್ಯೆಯಿಂದ ಅದನ್ನೇ ಕಳೆದಾಗ ದೊರೆಯುವ ಉತ್ತರ ಸೊನ್ನೆ. ಆದ್ದರಿಂದ ಯಾವ ಸಂಖ್ಯೆಯನ್ನೂ ಅನಂತ ಎಂದು ಭಾವಿಸುವುದು ಸಾಧುವಲ್ಲ. ಹೀಗಾಗಿ ಗಣಿತಜ್ಞರು ಸಾಂತಸಂಖ್ಯೆಗಳ ಎಣಿಕೆಯ ಜಾಡನ್ನು ತೊರೆದು ಅನಂತ ಎನ್ನುವ ಹೊಸ ಪರಿಕಲ್ಪನೆಯನ್ನು ಉಪಜ್ಞಿಸಿ (invent) ಅದರ ವಿಶಿಷ್ಟ ಗಣಿತವನ್ನು ಸುಭದ್ರ ತಾರ್ಕಿಕ ತಳಹದಿಯ ಮೇಲೆ ನೆಲೆಗೊಳಿಸಿದ್ದಾರೆ. ಅದನ್ನು ಸಾಂತಸಂಖ್ಯೆಗಳ ಗಣಿತದೊಡನೆ ಸಮೀಕರಿಸಬಾರದು. “ಅನಂತಮಂ ಸಾಂತದಲ್ಪಕ್ಕೆಳೆವ ಸಾಹಸಂ” ಅಸಂಗತ (inconsistent) ಫಲಿತಾಂಶಗಳನ್ನು ನೀಡುತ್ತದೆ. “ಅನಂತಮಂ ಅಳೆಯಲಳವೇ” ಎಂಬಲ್ಲಿ ಇದೇ ಭಾವ ಅಡಕವಾಗಿದೆ.

2
ನೆಲದಲ್ಲಿ, ಬಾನಲ್ಲಿ
ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರೇಮಾತ್ಮವಾಗಿರ್ಪುದು
(ಅ. ಸಂ. – 1, 246 – 249)

ಭೌತವಿಶ್ವವನ್ನು ಸರ್ವತ್ರ ವ್ಯಾಪಿಸಿ ಅದರ ಪ್ರಸಕ್ತ ವಿನ್ಯಾಸವನ್ನು ರೂಪಿಸುವ ಹಾಗೂ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾರ್ವತ್ರಿಕ ಗುರುತ್ವಾಕರ್ಷಣಬಲವನ್ನು (universal gravitational force) ಈ ಸಾಲುಗಳಲ್ಲಿಯ “ಅಂತರ್ಯಾಮಿ ಚೇತನಂ” ಓದುಗರ ಮನಸ್ಸಿನಲ್ಲಿ ಸ್ಫುರಿಸುತ್ತದೆ. ಪ್ರೇಮ ಅಮೂರ್ತವಾಗಿ ವ್ಯಕ್ತಿಗಳನ್ನು ಹೇಗೊ ಹಾಗೆ ಗುರುತ್ವಾಕರ್ಷಣಬಲ ಮೂರ್ತವಾಗಿ ವಸ್ತುಗಳನ್ನು ಹತ್ತಿರಕ್ಕೆ ಸೆಳೆಯುವ ಒಂದು ಭೌತಪರಿಮಾಣ.

3
ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು,
ಗಗನವಿಜ್ಞಾನಿ ತಾಂ ರಾತ್ರಿಯಾಕಾಶದಲಿ
ಕಾಣ್ಬೊಂದು ತಾರಾಗರ್ಭದಂತೆ.
(ಅ. ಸಂ. – 1, 273 – 275)

ಆಧುನಿಕ ವಿಜ್ಞಾನದಿಂದ ನೇರವಾಗಿ ಆಯ್ದ ಒಂದು ನಿದರ್ಶನವಿದು. ಇಲ್ಲಿ “ತಾರಾಗರ್ಭ” ಎಂದರೆ “ತಾರೆಗಳನ್ನು ಗರ್ಭದಲ್ಲಿ ತಳೆದಿರುವ ವಸ್ತು” ಎಂದು ಅರ್ಥವಿಸಬೇಕು. ಈ ವಸ್ತುವಿಗೆ ನೀಹಾರಿಕೆ (nebula) ಎಂದು ಹೆಸರು. ಬರಿಗಣ್ಣಿಗೆ ಮಂದ ಬೆಳಕಿನ ಮಸಕು ಮಚ್ಚೆಯಂತೆ ಕಾಣುವ ನೀಹಾರಿಕೆಯನ್ನು ವಿಜ್ಞಾನಿಗಳು ದೂರದರ್ಶಕದ ಮೂಲಕ ವೀಕ್ಷಿಸಿ ಅದು ಹೊಸ ನಕ್ಷತ್ರಗಳು “ಸಿದ್ಧ’ವಾಗುವ “ಕರ್ತಾರನ ಕಮ್ಮಟ” ಎಂದು ತೀರ್ಮಾನಿಸಿದ್ದಾರೆ. “ಸರಯೂ ತರಂಗಿಣಿಯ ಪಚ್ಚೆಯ ಪಸುರ್ ದಡದ ಮೇಲೆ” ದಶರಥ ಹೂಡಿದ ಪುತ್ರಕಾಮೇಷ್ಟಿ ಯಜ್ಞ ಕುಂಡ, “ವಿಪುಲ ದೂರದಲಿ” ನಿಂತು ನೋಡುವವನಿಗೆ, ಹೇಗೆ ಕಾಣಬಹುದು? ಕಪ್ಪು ನೀಲಾಕಾಶದ ಮಹಾವಿಸ್ತಾರದ ನಡುವಿನ ನೀಹಾರಿಕೆಯಂತೆ. ಈ ಕುಂಡ ದಶರಥಪುತ್ರ ಉದಯಕ್ಕೆ ಸಾಂಕೇತಿಕವೂ ಆಗಿದೆ. ನೀಹಾರಿಕೆಯ ಗರ್ಭದಿಂದ ನಕ್ಷತ್ರಗಳು ಮೈದಳೆಯುವಂತೆ ಎಂಬುದನ್ನು ಲಕ್ಷಿಸಬೇಕು.

4
ಕೊಳ್ಳಿದಂ ಕಾಮಧೇನುವಿನ ಕೊಡಗೆಚ್ಚಲಂ
ಪಾಲ್ಗರೆದು ಗೆಯ್ದ ಪಾಯಸಮಿದಂ ಮರುಭೂಮಿ
ನಗುವ ನಂದನವಪ್ಪುದಿದನೀಂಟೆ
(ಅ.ಸಂ, – 1, 355 – 357)

ನಿಸರ್ಗವೇ ಇಲ್ಲಿ ಕಾಮಧೇನು ವಿಜ್ಞಾನದ ಹಾದಿಯಲ್ಲಿ “ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು” ಅನ್ವೇಷಣೆಯನ್ನು ಮುಂದುವರಿಸಿದಾಗ ನಿಸರ್ಗ ಸುರಭಿಯ ಕೊಡಗೆಚ್ಚಲಿನಿಂದ ಸ್ರವಿಸಿದ ಅಮೃತವೇ ಪರಮಾಣುಶಕ್ತಿ ಇದನ್ನು ರಚನಾತ್ಮಕ ಉದ್ದೇಶಕ್ಕೆ ಬಳಸಿಕೊಂಡರೆ ಖಂಡಿತವಾಗಿಯೂ ಆಳುವ ಬೆಂಗಾಡು ಹಸುರು ಬನವಾಗದಿರದು:

ಆಳುವ ಕಡಲಿನಲಿ
ತೇಲಿಬರುತಲಿದೆ
ನಗೆಯಹಾಯಿದೋಣಿ (ಅಡಿಗ)

5
ಯಮಳ ತಾರೆಗಳಿದುಮೊಂದೆ ಚುಕ್ಕಿಯ ತೆರದಿ
ತೋರ್ಪ ನಕ್ಷತ್ರದೋಲ್              
(ಅ. ಸಂ. – 1, 384 – 385)

ಖಗೋಳವಿಜ್ಞಾನ ಹಲವಾರು ಯಮಳ ನಕ್ಷತ್ರಗಳನ್ನು (binary stars) ಗುರುತಿಸಿದೆ. ಸರಿಸುಮಾರಾಗಿ ಸಮ ಗಾತ್ರದ ಒಂದರಿಂದ ಇನ್ನೊಂದು ಸಾಕಷ್ಟು ದೂರದಲ್ಲಿರುವ ಮತ್ತು ಪರಸ್ಪರ ಗುರುತ್ವಾಕರ್ಷಣದ ಪರಿಣಾಮವಾಗಿ ಒಂದರ ಸುತ್ತ ಇನ್ನೊಂದು ಪರಿಭ್ರಮಿಸುತ್ತಿರುವ ಒಂದು ಜೊತೆ ನಕ್ಷತ್ರಗಳಿವು. ಸಮ ಬಲಶಾಲಿಗಳಾದ ಇಬ್ಬರು ವ್ಯಕ್ತಿಗಳು ಆಡುವ ಅಪ್ಪಾಲೆ ತಿಪ್ಪಾಲೆ ಆಟದಂಥ ವಿದ್ಯಮಾನವಿದು. ಯಮಳ ನಕ್ಷತ್ರಗಳ ನಡುವಿನ ಭೌತಾಂತರ ಮಾನವಮಾನಕದಲ್ಲಿ ಅಗಾಧವಾಗಿದ್ದರೂ ವಿಶ್ವಮಾನಕದಲ್ಲಿ ತೀರ ಸಾಧಾರಣ. ಅಲ್ಲದೇ ಭೂಮಿಯಿಂದ ಯಾವುದೇ ಯಮಳವ್ಯವಸ್ಥೆಯ ದೂರ ಬೃಹತ್ತಾಗಿರುವುದರಿಂದ ಅವು ಎರಡಿದ್ದರೂ ಒಂದೇ ಚುಕ್ಕಿಯಂತೆ (ನಕ್ಷತ್ರದಂತೆ) ಕಾಣುತ್ತವೆ. ಸುಮಿತ್ರಾಗರ್ಭದಲ್ಲಿದ್ದ ಯಮಳ ತಾರೆಗಳನ್ನು (ಲಕ್ಷಣ ಮತ್ತು ಶತ್ರುಘ್ನ) ಕುರಿತು ಮೇಲಿನ ಸಾಲುಗಳಿವೆ. ಮುಂದಕ್ಕೆ ಇವರು ಹೇಗೆ ರಾಮ ಮತ್ತು ಭರತರನ್ನು ಅನುಕ್ರಮವಾಗಿ ಅನುಸರಿಸಿ “ಒಂದೆ ಚುಕ್ಕಿಯ ತೆರದಿ” ತೋರುತ್ತಾರೆ ಎಂಬುದನ್ನು ಇಲ್ಲಿ ಗಮನಿಸಬೇಕು. (ನೋಡಿ: ಅ. ಸಂ. – 1, 684 – 689).

6
ತಾರಾಗಣಮೆ ತೋರ್ಬೆರಳ್
ತಾನಾಗೆ, ದೆಸೆಯರಿತು ಕಳ್ತಲೊಳೆ ನಡೆದರಯ್
ಸಾಹಸದ ಕಣ್ಣೂಹೆಯಿಂ.             
(ಅ. ಸಂ. – 2, 209 – 211)

ವಿಶ್ವಾಮಿತ್ರನೊಡಗೂಡಿ ರಾಮಲಕ್ಷ್ಮಣರು ಮಿಥಿಳಾಪುರಿಯೆಡೆಗೆ ಸಾಗುತ್ತಿದ್ದಾರೆ. ಕೌಶಿಕನಿಗೆ ಅದು ಚಿರಪರಿಚಿತ ದಾರಿಯಾಗಿದ್ದರೂ “ಕಣಿವೆಗಳನಿಳಿದದ್ರಿಗಳನಡರಿ ಬರುತಿರಲ್” ಅಲ್ಲಿ ಬಟ್ಟೆ ತಪ್ಪಿದೆ. ರಾತ್ರಿ ಸಂಜನಿಸಿದೆ. ಇಂಥ ಅವೇಳೆಯಲ್ಲಿ ಅವರು ಆಕಾಶಕಾಯಗಳ, ಅಂದರೆ ಸ್ಥಿರ ನಕ್ಷತ್ರಗಳ, ವಿನ್ಯಾಸಗಳನ್ನು ಅನುಲಕ್ಷಿಸಿ ಮುಂದುವರಿಯುತ್ತಿದ್ದಾರೆ. ಉದಾಹರಣೆಗೆ, ಸರ್ಪರ್ಷಿಮಂಡಲ (Ursa Major) ಮತ್ತು ಕುಂತೀ (Cassiopeia) ನಕ್ಷತ್ರಪುಂಜಗಳ ನೆರವಿನಿಂದ ಧ್ರುವನಕ್ಷತ್ರವನ್ನು ಪತ್ತೆ ಹಚ್ಚುವುದು ಸುಲಭ (ನೋಡಿ 20). ಈ ಸ್ಥಿರ ನಕ್ಷತ್ರ ಚಿತ್ರಗಳು ನೇರ ಉತ್ತರ ದಿಕ್ಕನ್ನು ಸೂಚಿಸುತ್ತವೆ. ಸಹಜವಾಗಿ ಇತರ ದಿಕ್ಕುಗಳು ಅನುಗತವಾಗುತ್ತವೆ. ಚಂದ್ರ; ಗ್ರಹಗಳು; ಮಹಾವ್ಯಾಧ ವೃಶ್ಚಿಕ, ತ್ರಿಶಂಕು ಮುಂತಾದ ಪ್ರಸಿದ್ಧ ನಕ್ಷತ್ರಪುಂಜಗಳು; ಅಭಿಜಿತ್, ಸ್ವಾತೀ, ಲುಬ್ಧಕ, ಅಗಸ್ತ್ಯ ಮುಂತಾದ ಉಜ್ಜ್ವಲ ನಕ್ಷತ್ರಗಳು – ಇವುಗಳ ನೆರವಿನಿಂದಲೂ ದೆಸೆಯರಿತು ಕತ್ತಲೆಯಲ್ಲಿ ನಡೆಯಬಹುದು (ನೋಡಿ – 31,32). ಅಲ್ಲಿ ಸ್ಥಿರ ಧ್ರುವತಾರೆ (Pole Star). ಇಲ್ಲಿ “ವಜ್ರಮೌನದ ಅಚಿನ್ ನಿದ್ರೆ”ಯಲ್ಲಿರುವ ಶಿಲೆ: ಅಲ್ಲಿ ಮಹಾಪತಿವ್ರತೆ ಆರುಂಧತಿ (ನಕ್ಷತ್ರ), ಇಲ್ಲಿ ಶಿಲಾತಪಸ್ವಿನಿ ಅಹಲ್ಯೆ – ಈ ಸಾಮ್ಯಗಳನ್ನು ಗಮನಿಸಬೇಕು. ಸಪ್ತರ್ಷಿಮಂಡಲದ 7 ನಕ್ಷತ್ರಗಳಿವು (ಪೂರ್ವದಿಕ್ಕಿನಿಂದ ತೊಡಗಿ): ಮರೀಚಿ, ವಸಿಷ್ಠ, ಆಂಗೀರಸ್ಸು, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠನಕ್ಷತ್ರದ ತೀರ ಒತ್ತಿಗಿದೆ ಮಂದ ಮಿನುಗಿನ ತಾರೆ ಆರುಂಧತಿ. ಪುಲಹ – ಕತ್ರು ರೇಖೆಯನ್ನು ಉತ್ತರಕ್ಕೆ ವಿಸ್ತರಿಸಿದಾಗ ದೊರೆಯುವ ಕ್ಷೀಣಪ್ರಕಾಶದ ತಾರೆಯೇ ಧುವನಕ್ಷತ್ರ, ಬಾನಿನಡಿ ಮೂಕವಿಸ್ಮಯದಿಂದ ನಿಂತು ಗಗನ ಕಲೆಯಲ್ಲಿ ದೃಷ್ಟಿ ಕೀಲಿಸಿ ಈ ಕುವೆಂಪು ಪಂಕ್ತಿಗಳ ಸ್ವಾರಸ್ಯ ಗ್ರಹಿಸಬೇಕು.

7
ದಿವ್ಯ ಮಾಯಾ ಶಿಲ್ಪಿ
ಕಲ್ಪನಾದೇವಿಯಂ ಕಲ್ಲ ಸೆರೆಯಿಂ ಬಿಡಿಸಿ
ಕೃತಿಸಿದನೆನಲ್  
(ಅ.ಸಂ. – 2, 285 – 287)

ರಾಮನ ಪಾದಸ್ಪರ್ಶದಿಂದ “ಕಲ್ಲೆ ತಾಂ ಬೆಣ್ಣೆಯಾಯ್ತೆನೆ ಕಂಪಿಸಿತು ಬಂಡೆ” ಮತ್ತು ಅದರಿಂದ ಹೊರಬಂದು “ರಘು ತನೂಜನಡಿದಾವರೆಗೆ ಹಣೆ ಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ.” ಅಹಲ್ಯೋದ್ಧರಣದ ಈ ಸನ್ನಿವೇಶವನ್ನು ಕವಿ ಇನ್ನೊಂದು ದೃಷ್ಟಿಯಿಂದ ನೋಡುತ್ತ ಮೇಲಿನ ಸಾಲುಗಳನ್ನು ಬರೆದಿದ್ದಾರೆ: ಬಂಡೆಯನ್ನು ಕಂಡರಿಸಿದಾಗ ವಿಗ್ರಹ ದೊರೆಯುತ್ತದೆ. ನಿಜ: ಬಂಡೆಯಲ್ಲಿ ಈ ವಿಗ್ರಹ ಅಂತರ್ಗತವಾಗಿತ್ತು. ಶಿಲ್ಪಿ ಶ್ರೇಷ್ಠನೊಬ್ಬನಿಗೆ ಮಾತ್ರ ಇದನ್ನು ಕಾಣಲು ಹಾಗೂ ಹೊರತೆಗೆಯಲು ಸಾಧ್ಯವಾಯಿತು. ಶ್ರೀರಾಮನಾದರೂ ಮಾಡಿದ್ದು ಇದೇ ಕಲಾಕಾರ್ಯವನ್ನು ಎಂದು ಕವಿ ಇಲ್ಲಿ ಹೇಳುತ್ತಿದ್ದಾರೆ. ಹೀಗೆ ಮೂಡಿಬಂದ ಕೃತಿಗೆ (ಅಹಲ್ಯೆಗೆ) ರಾಮ ಭಕ್ತಿಪೂರ್ವಕ ನಮಿಸುತ್ತಾನೆ, ಹೇಗೆಂದರೆ “ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!” ಮೇಲೆ ಉದ್ಧರಿಸಿರುವ ಸಾಲುಗಳು ಸತ್ಯದ ಆವಿಷ್ಕಾರವಾಗುವ ಸಮಸ್ತ ಕ್ಷೇತ್ರಗಳಿಗೂ ಸಾರ್ವತ್ರಿಕವಾಗಿ ಅನ್ವಯವಾಗುತ್ತವೆ.

ವಿಜ್ಞಾನರಂಗದಿಂದ ಒಂದು ಸುಪ್ರಸಿದ್ಧ ಉದಾಹರಣೆಯನ್ನು ಉಲ್ಲೇಖಿಸಿ ಇದನ್ನು ಸ್ಪಷ್ಟೀಕರಿಸಬಹುದು. ಸೌರವ್ಯೂಹದ ಆದಿಯಿಂದಲೂ ಸೂರ್ಯನ ಸುತ್ತ ಭೂಮಿ ಚಂದ್ರ ಮುಂತಾದ ಗ್ರಹೋಪಗ್ರಹಗಳೆಲ್ಲವೂ ಪರಿಭ್ರಮಿಸುತ್ತಿದ್ದುವು. ಇಂದಿಗೂ ಪರಿಭ್ರಮಿಸುತ್ತಿವೆ. ಆದರೆ ಜನ ಕಂಡದ್ದು, ಇಂದಿಗೂ ಕಾಣುವಂತೆ, ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ವಿಶ್ವವನ್ನು! ಆದ್ದರಿಂದ ಅಂದಿನ ವಿಜ್ಞಾನಿಗಳನ್ನೂ ಒಳಗೊಂಡಂತೆ ಸಮಸ್ತರೂ ವಿಶ್ವಕೇಂದ್ರವೆಂದರೆ ಅಚಲವಾಗಿರುವ ನಮ್ಮ ಭೂಮಿಯೇ ಎಂದು ತೀರ್ಮಾನಿಸಿದ್ದರು. ಹೀಗೆ ಸತ್ಯವು ಕಲ್ಲ ಸೆರೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಸೆರೆಬಿಡಿಸಿ ಸೂರ್ಯಕೇಂದ್ರವಾದವನ್ನು ಕೃತಿಸಿದವ ನಿಕೊಲಾಸ್ ಕೊಪರ್ನಿಕಸ್ (1473 – 1543) ಎಂಬ “ದಿವ್ಯ ಮಾಯಾ ಶಿಲ್ಪಿ.” ಇಂಥ ಒಬ್ಬೊಬ್ಬ ವಿಜ್ಞಾನಿಯೂ ಒಬ್ಬೊಬ್ಬ ಮಹಾಕವಿಯೇ, ಅವನ ಒಂದೊಂದು ಕೃತಿಯೂ ಮಹಾಕಾವ್ಯವೇ. (ನೋಡಿ – 18)

8
ಕಲ್ಲಾದರೇನ್?
ತೀವ್ರ ತಪದಿಂದೆ ಚೇತನ ಸಿದ್ಧಿಯಾಗದೇಂ?
(ಅ.ಸಂ. – 2, 298 – 300)

ರಾಮಚರಣಚುಂಬನದ ಪರಿಣಾಮವಾಗಿ ಶಿಲಾತಪಸ್ವಿನಿ ಅಹಲ್ಯೆ ಮೈದಳೆದು “ರಘು ತನೂಜನಡಿದಾವರೆಗೆ ಹಣೆ ಮಣಿದು” ನಿಂತಿದ್ದಾಳೆ. ಈ ವಿದ್ಯಮಾನವನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದು: ರಾಮಪಾದಸ್ಪರ್ಶ ನಿಮಿತ್ತ ಮಾತ್ರ, ವಾಸ್ತವವಾಗಿ ಅಹಲ್ಯೆಯ ದೀರ್ಘ ತಪಸ್ಸೇ ಇದನ್ನು ಸಾಧಿಸಿತು. ಈ ಭಾವವನ್ನು ಮೇಲಿನ ಸಾಲುಗಳು ಒಳಗೊಂಡಿವೆ. ಆಧುನಿಕ ಭೌತವಿಜ್ಞಾನದ ಒಂದು ಆವಿಷ್ಕಾರವನ್ನು ಇವುಗಳಲ್ಲಿ ಕಾಣಬಹುದು. ಭೌತಪ್ರಪಂಚದ ಸಮಸ್ತ ವಸ್ತುಗಳನ್ನೂ ಜಡವಸ್ತುಗಳು, ಶಕ್ತಿರೂಪಗಳು ಎಂಬ ಎರಡು ಪ್ರಧಾನ ವಿಭಾಗಗಳಾಗಿ ವಿಂಗಡಿಸುವುದು ಸಾಧ್ಯ. ಗಾಳಿ, ನೀರು, ಕಲ್ಲು, ಲೋಹ ಮುಂತಾದವು ಜಡವಸ್ತುಗಳು. ಉಷ್ಣ, ವಿದ್ಯುತ್ತು, ಬೆಳಕು, ಕಾಂತತ್ವ, ಜಲಾಶಯದ ನೀರಿನಲ್ಲಿ ಅಡಕವಾಗಿರುವ ಕಾರ್ಯಸಾಮರ್ಥ್ಯ ಮುಂತಾದವು ಶಕ್ತಿರೂಪಗಳು. ಐನ್‌ಸ್ಟೈನರ (1879 – 1955) ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಜಡತ್ವ – ಶಕ್ತಿ ಭೇದ ಕೇವಲ ತೋರ್ಕೆಯದು (ಬರ್ಫ –ನೀರು ವ್ಯತ್ಯಾಸವನ್ನು ಕಲ್ಪಿಸಿಕೊಂಡರೆ ಒಂದು ಸ್ಥೂಲ ಭಾವನೆ ಬರುವುದು); “ಘನೀಭವಿಸಿದ” ಶಕ್ತಿ ಜಡತ್ವವಾದರೆ “ದ್ರವೀಭವಿಸಿದ” ಜಡತ್ವ ಶಕ್ತಿ ಆಗುತ್ತದೆ. ಇವುಗಳ ನಡುವಿನ ಭೌತಸಂಬಂಧವನ್ನು E = mc2 ಎಂಬ ಸರಳ ಸುಪ್ರಸಿದ್ಧ ಸಮೀಕರಣ ವ್ಯಕ್ತಪಡಿಸುವುದು. ಇದಕ್ಕೆ ಐನ್‌ಸ್ಟೈನರ ಶಕ್ತಿ – ದ್ರವ್ಯರಾಶಿ ಸಮಾನತಾ ಸಮೀಕರಣವೆಂದು ಹೆಸರು. ಇಲ್ಲ E ಶಕ್ತಿಯನ್ನೂ m ದ್ರವ್ಯರಾಶಿಯನ್ನೂ (ಜಡತೆ) c ಬೆಳಕಿನ ವೇಗವನ್ನೂ ಪ್ರತಿನಿಧಿಸುತ್ತವೆ. ತಾತ್ತ್ವಿಕವಾಗಿ ಯಾವುದೇ ಜಡವಸ್ತುವನ್ನು ಶಕ್ತಿಯಾಗಿಯೂ, ವಿಲೋಮತಃ, ಯಾವುದೇ ಶಕ್ತಿಯನ್ನು ಜಡವಸ್ತುವಾಗಿಯೂ ಮಾರ್ಪಡಿಸಬಹುದು. ಪರಮಾಣು ಬಾಂಬ್ ಮೊದಲಿನ ತತ್ತ್ವಕ್ಕೆ ಉದಾಹರಣೆಯಾದರೆ ಹೈಡ್ರೊಜನ್ ಬಾಂಬ್ ಎರಡನೆಯ ತತ್ತ್ವಕ್ಕೆ ಉದಾಹರಣೆ. ಈಗ, ಜಡತೆಯನ್ನು ಶಕ್ತಿಯಾಗಿ ಪರಿವರ್ತಿಸಲು ಬೇಕಾಗುವ ತಪಸ್ಸೆಂದರೆ ಮನುಷ್ಯ ನಡೆಸುವ ಮಹಾಪ್ರಯೋಗಗಳು.

ಇಲ್ಲಿ ಡಿವಿಜಿಯವರ ನುಡಿಗಳನ್ನೂ ಗಮನಿಸಬೇಕು.

ಜಡವೆಂಬುದೇನು ಸೃಷ್ಟಿಯಲಿ ಚೇತನಸುಪ್ತಿ
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ
ನಡೆವುದದು ಜೀವಿವೊಲು ಮಂಕುತಿಮ್ಮ ||
ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ
ಬಲ ತೀವಿ ಚರಿಪುದದು ಮಂಕುತಿಮ್ಮ ||

9
ಕರ್ದ್ದಿಂಗಳಾಗಸದ
ಕರ್ಮಣಿಯ ಕುಟ್ಟಿಮದಿ ಕೆದರಿರ್ದ ಪೂಗಳಂ
ಗಿಡಿಸಲೆಂದಿರುಳವೆಣ್ ಕೈಲಾಂತು ನಿಡುನೀಳ್ದ
ಕೆಂಗೆಂಡದುರಿಯ ಸಮ್ಮಾರ್ಜನಿಯೊ, ಪೊಳ್ತಿಳಿಯೆ
ಕಳ್ತಲೆಯ ದಾರಿ ನಡೆಯಲನಂತ ಯಾತ್ರಿಕಂ,
ಕಾಲಪುರುಷಂ, ಪಿಡಿದ ಪೊಂಜೊ ತಾಂ ಪೇಳೆಂಬಿನಂ
ನೆತ್ತರುರಿಗೂದಲಂ ಬೀಸಿ ರಂಜಿಸುತಿರ್ದ
ಭೀಷ್ಮ ಭೀಷಣ ಧೂಮಕೇತು
(ಅ. ಸಂ. – 3, 66 – 73)

ಚಂದ್ರರಹಿತ ರಾತ್ರಿಯ ಆಕಾಶದ ರುದ್ರ ಗಭೀರತೆಯಲ್ಲಿ ಧೂಮಕೇತುವಿನ ದೃಶ್ಯವನ್ನು ಬಲು ಮನೋಜ್ಞವಾಗಿ ಚಿತ್ರಿಸುವ ಸಾಲುಗಳಿವು. ಬಿಳಿಗೊಂಡೆ ಮಂಡೆ, ಅದರಿಂದ ಸೂರ್ಯವಿಮುಖವಾಗಿ ಚಾಚಿರುವ ಮಸಕು ಬಾಲ – ಇದು ಧೂಮಕೇತುವಿನ ಸ್ಥೂಲ ಚಿತ್ರ. ಈ ದೃಶ್ಯ ಎಷ್ಟು ವಿಚಿತ್ರವೋ ಅಷ್ಟೇ ಅಪೂರ್ವ ಕೂಡ. ಆದ್ದರಿಂದ ಧೂಮಕೇತುವಿನ ದರ್ಶನ ಅನಿಷ್ಟಸೂಚಕವೆಂದು ಜನ ನಂಬಿದ್ದಿದೆ; ಧೂಮಕೇತು ಕಾಣಿಸಿಕೊಂಡಾಗ ಭೂಮಿಯ ಮೇಲೆ ಸಂಭವಿಸಿದ ವಿಪ್ಲವ, ದುರ್ಘಟನೆಗಳನ್ನು ಧೂಮಕೇತುವಿಗೆ ಹೊಂದಿಸಿದ್ದೂ ಇದೆ. ಧೂಮಕೇತು ಸೂರ್ಯನ ಸುತ್ತಲೂ ಸರಿಸುಮಾರಾಗಿ U – ಆಕಾರದ ಪಥದ ಮೇಲೆ ಸಂಚರಿಸುವುದು, ಆಕಾಶದ ಆಳದಿಂದ ಬಂದು, ಸೂರ್ಯನ ಸಮೀಪವಿರುವಾಗ ನಮಗೆ ಕಾಣಿಸಿಕೊಂಡು, ಮುಂದೊಂದು ದಿವಸ ಹಾಗೆಯೇ ಅಂತರ್ಧಾನವಾಗಿ ಹೋಗುತ್ತದೆ. ಈ ದಿವಸಗಳಲ್ಲಿ ಮಾತ್ರ ಅದರ ಚಲನೆಯನ್ನು ಗುರುತಿಸಬಹುದು.

[1] ಇಲ್ಲಿ ಕಂಡುಬರುವ ವೈಜ್ಞಾನಿಕಾಂಶವೂ ಗಮನಾರ್ಹ. ಶಿಶುಜನನವನ್ನು ಕುರಿತ ಶಾರೀರಿಕ ಕ್ರಿಯೆಯನ್ನು ಸಾರ್ವತ್ರೀಕರಿಸಿ ಜೀವನಾನುಭವಕ್ಕೆ ಸಮೀಕರಿಸಿದಾಗ ದೊರೆಯುವ ನಿರೂಪಣೆ ಇದು.