ಒಮ್ಮೆ ಸ್ನೇಹಿತನೊಬ್ಬನ ಮನೆಯಲ್ಲಿ ನನಗೆ ಅಕಸ್ಮಾತ್ತಾಗಿ ಸ್ವಾಮಿ ಚಿನ್ಮಯಾನಂದರ ಭೇಟಿಯಾಯಿತು. ಆತ ನನ್ನನ್ನು ಅವರಿಗೆ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕನೆಂದು ಪರಿಚಯಿಸಿದ ಒಡನೆ ನನ್ನಲ್ಲಿ ವಿಶೇಷ ಆಸಕ್ತಿ ತಳೆದ ಸ್ವಾಮೀಜಿ ಅಂದರು (ಮಾತುಕತೆ ನಡೆದದ್ದು ಇಂಗ್ಲಿಷಿನಲ್ಲಿ), “ಈ ಕೆಲಸ ನೀವು ಹೇಗೆ ಮಾಡುತ್ತೀರಿ – ಇಂಗ್ಲಿಷಿನಿಂದ ಕನ್ನಡಕ್ಕೆ ಲೇಖನಗಳನ್ನು ಅನುವಾದಿಸುವ ಮೂಲಕವೇ?”

“ಅಲ್ಲ ಸ್ವಾಮೀಜಿ! ವಿಷಯತಜ್ಞರಿಂದ ನಾವು ಕನ್ನಡದಲ್ಲೇ ಲೇಖನಗಳನ್ನು ಆಹ್ವಾನಿಸಿ ಸಂಪಾದಿಸಿ ಮುದ್ರಿಸುತ್ತೇವೆ. ಕನ್ನಡಕ್ಕೆ ಈ ಸಾಮರ್ಥ್ಯವಿದೆ. ಅಲ್ಲದೇ ಲೇಖಕರಿಗೆ ತಮ್ಮ ವಿಜ್ಞಾನಚಿಂತನೆಗಳನ್ನು ಕನ್ನಡದಲ್ಲಿ ಪುನಸ್ಸೃಷ್ಟಿಸಲು ಸಾಕಷ್ಟು ಉತ್ಸಾಹವೂ ಇದೆ.”

ತುಸು ಅಪ್ರತಿಭರಾದ ಸ್ವಾಮೀಜಿ ನುಡಿದರು. “ಸರಿ ಹಾಗಾದರೆ ಥಿಯೊರಿ ಆಫ್ ರಿಲೆಟಿವಿಟಿಯನ್ನು (theory of relativity) ಹೇಗೆ ಕನ್ನಡದಲ್ಲಿ ಬರೆಯಿಸುತ್ತೀರಿ?”

“ಸಾಪೇಕ್ಷತಾಸಿದ್ಧಾಂತವೆಂದು ಅದರ ಹೆಸರು. ಅದನ್ನು ಸಾಕ್ಷತ್ಕರಿಸಿಕೊಂಡ ಆಲ್ಬರ್ಟ್‌ಐನ್‌ಸ್ಟೈನ್ (1879 – 1955) ತಮ್ಮ ಚಿಂತನೆಗಳನ್ನು ಸ್ವಂತ ಮಾತೃಭಾಷೆ ಜರ್ಮನ್‌ನಲ್ಲಿ ಅಭಿವ್ಯಕ್ತಿಸಿದರು. ಈ ನೂತನ ಸಿದ್ಧಾಂತದ ನವೀನತೆಗೂ ಸೌಂದರ್ಯಕ್ಕೂ ಮಾರುಹೋದ ಇತರ ವಿಜ್ಞಾನಿಗಳು, ಅನ್ಯ ಭಾಷಿಕರಾಗಿದ್ದರೆ ಜರ್ಮನ್ ಕಲಿತು, ತಿರುಳನ್ನು ಸ್ವಾಂಗೀಕರಿಸಿ, ಬಳಿಕ ಅದನ್ನು ತಮ್ಮ ತಮ್ಮ ಭಾಷೆಗಳಲ್ಲಿ ಪುನಸ್ಸೃಷ್ಟಿಸಿದರು. ಭಾವನೆಗಳು ಅಮೂರ್ತ ಮತ್ತು ಸಾರ್ವದೈಶಿಕ ಅಭಿವ್ಯಕ್ತಿಗಳಾದರೋ ಮೂರ್ತ ಮತ್ತು ಸ್ಥಲೀಯ, ಅಲ್ಲವೇ ಸ್ವಾಮೀಜಿ?”

ಕನ್ನಡವರಿಯದ ಅವರೇಕೆ ಅಂಥ ಅಭಿಪ್ರಾಯ ತಳೆದಿದ್ದರು? ಕನ್ನಡಿಗರಲ್ಲಿ (ವ್ಯಾಪಕವಾಗಿ ಭಾರತೀಯರಲ್ಲಿ ಕೂಡ) ಖುದ್ದು ತಮ್ಮ ಮಾತೃಭಾಷೆಯ ಬಗ್ಗೆ ಗಾಢವಾಗಿ ಬೇರು ಬಿಟ್ಟಿರುವ ಅಗಾಧ ಅಜ್ಞಾನ ಮತ್ತು ಅವಜ್ಞೆಗಳ ಫಲವಿದು! ದೀರ್ಘಕಾಲ ನಾವು ಇಂಗ್ಲಿಷ್ ಜನರಿಗೂ ಅವರ ಭಾಷೆಗೂ ದಾಸರಾಗಿದ್ದು ಸ್ವಾಭಿಮಾನಶೂನ್ಯರಾಗಿರುವುದೇ ಇದರ ಕಾರಣ. ಹುಟ್ಟಿನಿಂದಲೇ ನಾವು ಅಂಥ ಮಿಥ್ಯಾಭಾವನೆಗೆ ವಶರಾಗಿದ್ದೇವೆ. ಕನ್ನಡದ ತ್ರಾಣ ತಿಳಿಯುವತ್ತ ನಮಗೆ ಇನಿತೂ ಆಸಕ್ತಿಯಲ್ಲ – ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಮಾಜದಲ್ಲಿ ಕೂಡ. ನಿಜಕ್ಕೂ ಸಕಲ ದಾಸ್ಯಗಳಲ್ಲಿ ಬೌದ್ಧಿಕ ದಾಸ್ಯವೇ ನಿಕೃಷ್ಟವಾದದ್ದು.

ವಾಸ್ತವವಾಗಿ ಯಾವ ಭಾಷೆಯೂ ಸ್ವತಃ ಬಲಿಷ್ಟವೂ ಅಲ್ಲ, ಬಲಹೀನವೂ ಅಲ್ಲ. ಅದನ್ನು ಬಳಸುವವರು ಆ ಭಾಷೆಯಲ್ಲಿ ಹೇಗೆ ಹೇಗೆ ತಮ್ಮ ಹೊಸ ಹೊಸ ಚಿಂತನೆಗಳನ್ನು ನಿರೂಪಿಸುತ್ತಾರೋ ಹಾಗೆ ಹಾಗೆ ಅದು ತ್ರಾಣ ಗಳಿಸುತ್ತದೆ. ನೂತನ ಮಾರ್ಗಪ್ರವರ್ತಕರಿಗೆ ಈ ದಿಶೆಯಲ್ಲಿ ವ್ಯವಹರಿಸಲು ಆಂತರಿಕ ತುಡಿತವೂ (obsession) ಬಾಹ್ಯ ಹಿಡಿತವೂ (possession) ಇರುವಾಗ ಅವರು ಕ್ರಿಯಾಶೀಲರಾಗುತ್ತಾರೆ. ಇಂದು ಪ್ರಪಂಚಭಾಷೆಯಾಗಿ ವಿಜೃಂಭಿಸುತ್ತಿರುವ ಇಂಗ್ಲಿಷಿನ ಇತಿಹಾಸವನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಅಂದು ಕುಲೀನರ ಭಾಷೆಯೆಂದು ಇಂಗ್ಲೆಂಡಿನಲ್ಲಿ ಮೆರೆಯುತ್ತಿದ್ದ ಲ್ಯಾಟಿನ್ನಿನ ಸಾರ್ವಭೌಮತ್ವವನ್ನು ವಿಸ್ಥಾಪಿಸಿದುದು ವಿಲಿಯಮ್ ಶೇಕ್‌ಸ್ಪಿಯರ್ (1564 – 1616), ಮೈಖೇಲ್ ಫ್ಯಾರಡೇ (1791 – 1867) ಮೊದಲಾದ ಯುಗಪ್ರವರ್ತಕರು ತಮ್ಮ ಮೂಲಭೂತ ಸೃಜನಶೀಲ ಚಿಂತನೆಗಳನ್ನು ಇಂಗ್ಲಿಷಿನಲ್ಲಿ ಅಭಿವ್ಯಕ್ತಿಸಲು ತೊಡಗಿದ ಬಳಿಕವೇ. ಎಂದೇ ಈ ಮುಂದಿನ ಸಾರ್ವತ್ರಿಕ ನಿಯಮ: ಉಪಯೋಗಿಸಿದಂತೆ ಭಾಷೆ. ಬಳಸಿದಂತೆ ಸ್ನೇಹ, ನಿಯೋಜಿಸಿದಂತೆ ಆಯುಧ. ಇತ್ಯಾದಿ.

ಕನ್ನಡದಲ್ಲಿ ಬರೆಯುವ ಮೊದಲು ನಾವು ಕನ್ನಡದಲ್ಲಿ ಯೋಚಿಸಬೇಕು. ಆ ಮೊದಲು ಕನ್ನಡವನ್ನು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸಬೇಕು. ಕನ್ನಡ ಅಭಿಜಾತ ವಾಙ್ಮಯವನ್ನು ಓದಬೇಕು. ಗೋವಿಂದ ಪೈಗಳು ಹಾಡಿರುವಂತೆ “ತನು ಕನ್ನಡ, ನುಡಿ ಕನ್ನಡ, ಮನ ಕನ್ನಡವೆಮ್ಮವು” ಎಂಬ ಸೂತ್ರವನ್ನು ಪಾಲಿಸಬೇಕು. ಹೀಗೆ ಮಾಡುತ್ತಿದ್ದೇವೆಯೇ? ಇದಕ್ಕೆ ಮೊದಲು ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು. ಸರ್ವತ್ರ ಶಿಕ್ಷಣ ಮಾಧ್ಯಮವಾಗಬೇಕು – ಅಂದರೆ ನಮ್ಮ ಮಾತೃಭಾಷೆಗೆ ಅದರ ಸಹಜ ಸ್ಥಾನ ಪ್ರಾಪ್ತವಾಗಬೇಕು. ಇದು ಇಂದಿಗೂ (2004) ಆಗಿಲ್ಲ. ಏಕೆ? ನಾವು ದೃಡಸಂಕಲ್ಪಿಗಳಲ್ಲ. ಇಂಗ್ಲಿಷ್ ಬಗ್ಗೆ ಅನಾವಶ್ಯಕ ಮತ್ತು ಅವೈಚಾರಿಕ ವ್ಯಾಮೋಹ. ಇದಾದರೂ ಪೂರ್ತಿ ನಿಜವಲ್ಲ. ಏಕೆಂದರೆ ಭಾಷಾಪ್ರೀತಿ ಎನ್ನುವದೊಂದು ಮಾನಸಿಕ ಸ್ಥಿತಿ. ಇಂಗ್ಲಿಷ್ ಭಾಷೆಯನ್ನು ಮಾತ್ರ ನೀವು ಪ್ರೀತಿಸಿ ಮಾತೃಭಾಷೆ ಕನ್ನಡವನ್ನು ಕಡೆಗಣಿಸುತ್ತಿದ್ದೀರೆಂದರೆ ಇಂಗ್ಲಿಷ್ ಕುರಿತಂತೆ ಕೂಡ ನಿಮ್ಮ ಪ್ರೀತಿ ಶುದ್ಧ ಖೋಟ. ಸ್ವಾರ್ಥಪ್ರೇರಿತ ನೋಟ!

ನಮ್ಮ ಶಿಕ್ಷಕರು ಪಾಠಪುಸ್ತಕ ರಚಕರು, ವಿಜ್ಞಾನಲೇಖಕರು, ಪತ್ರಿಕಾಮಾಧ್ಯಮಗಳ ಭೀಷ್ಮರು ಮೊದಲಾದವರು ಕನ್ನಡದಲ್ಲಿ ವಿಜ್ಞಾನವಿಷಯ ನಿರೂಪಿಸುವುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಹೂಡಿ (1950 – 60ರ ದಶಕದಲ್ಲಿ) ತಾವು ಎದುರಿಸಿದ ನಿಜಸಮಸ್ಯೆಗಳನ್ನು ಹೇಳಿದ್ದುಂಟು. ಇವನ್ನು ಈ ಮುಂದಿನಂತೆ ಪಟ್ಟಿಮಾಡಬಹುದು:

 1. ಶಿಷ್ಟಪಾರಿಭಾಷಿಕ ಪದಗಳ ಅಭಾವ. ಪಾರಿಭಾಷಿಕ ಪದಗಳ ಅಂತಸ್ತು ಅಂಕಿತನಾಮಗಳದು. ನಿಸರ್ಗವನ್ನು ಅರಿಯುವ ಹಾದಿಯಲ್ಲಿ ವಿಜ್ಞಾನಿಗೆ ಹೊಸ ವಿದ್ಯಮಾನಗಳು ಕಂಡು ಬಂದಾಗ, ಆ ತನಕ ತಿಳಿದಿರದಿದ್ದ ಗುಣಗಳು ಪ್ರಕಟವಾದಾಗ, ಇತ್ಯಾದಿ ಆತ ಅವುಗಳಿಗೆ ಹೊಸತಾಗಿ ನಾಮಕರಣ ಮಾಡಬೇಕಾಗುತ್ತದೆ.
 2. ನೂತನ ಪದಗಳ ರಚನೆಗೆ ಖಚಿತ ಮಾರ್ಗದರ್ಶೀ ಸೂತ್ರಗಳ ಗೈರುಹಾಜರಿ. ಉದಾಹರಣೆಗೆ ಆಟಮ್ (atom). ಮಾಲೆಕ್ಯೂಲ್ (molecule). ರೇಡಿಯೇಷನ್ (radiation). ಬ್ಲ್ಯಾಕ್‌ಹೋಲ್ (blackhole). ಜೀನ್ (gene), ಆಕ್ಸಿಜನ್ (oxygen). ರಿವೊಲ್ಯೂಷನ್ (revolution). ರೊಟೇಷನ್ (rotation). ಕಂಪ್ಯೂಟರ್ ಹಾರ್ಡ್‌ವೇರ್ (computer hardware). ಸಾಫ್ಟ್‌ವೇರ (software) ಮುಂತಾದವು. ಇವನ್ನು ಕನ್ನಡಿಸಬೇಕೇ ಅಥವಾ ತದ್ವತ್ತಾಗಿ ಲಿಪ್ಯಂತರಣ ಮಾಡಿದರೆ ಸಾಕೇ? (ಕನ್ನಡದಲ್ಲಿ ಇವು ಅನುಕ್ರಮವಾಗಿ ಪರಮಾಣು. ಅಣು, ವಿಕಿರಣ, ಕೃಷ್ಣವಿವರ, ಜೀನ್, ಆಕ್ಸಿಜನ್, ಪರಿಭ್ರಮಣೆ, ಆವರ್ತನೆ, ಗಣಕ ಯಂತ್ರಾಂಶ, ತಂತ್ರಾಂಶ ಇತ್ಯಾದಿ)
 3. ಆಧುನಿಕ ವಿಜ್ಞಾನದ ಪರಿಕಲ್ಪನೆಗಳನ್ನು ಇಂಗ್ಲಿಷಿನಲ್ಲಿರುವಷ್ಟೇ ಅಡಕವಾಗಿಯೂ ಖಚಿತವಾಗಿಯೂ ನಿರೂಪಿಸುವ ದಿಶೆಯಲ್ಲಿ ಕನ್ನಡ ಸಾಕಷ್ಟು ಪುಟಿತವಾಗಿಲ್ಲದಿರುವುದು. ಅಂದರೆ ಪರಕೀಯ ಭಾವನೆಗಳಿಗೆ ಒಗ್ಗದ ಮತ್ತು ಒಲ್ಲದ ಕನ್ನಡವನ್ನು ಪಳಗಿಸುವುದು ಸಾಧ್ಯವೇ? ಇಂಥ ಸಾಹಸ ಜನೋಪಯುಕ್ತವಾದೀತೆ
 4. ಯಾವುದೇ ಆಧುನಿಕ ವಿಜ್ಞಾನ ಸಂಶೋಧನೆಯೂ ಕನ್ನಡದಲ್ಲಿ (ವ್ಯಾಪಕವಾಗಿ ಯಾವುದೇ ಭಾರತೀಯ ಭಾಷೆಯಲ್ಲಿ) ಜರಗಿರುವುದಿಲ್ಲ. ಆದ್ದರಿಂದ ನಮ್ಮ ಭಾಷೆ ವಿಜ್ಞಾನದಸಂವಹನ ಮಾಧ್ಯಮವಾಗಿ ಅರಳಿರುವುದಿಲ್ಲ. ಈಗ ಆ ಸಂಸ್ಕಾರವನ್ನು ಕೊಡುವುದು ಅಗತ್ಯವೇ. ಸಾಧುವೇ? ಸುಲಭಲಭ್ಯ ಇಂಗ್ಲಿಷ್ ಕೈಯಲ್ಲಿರುವ ಹಕ್ಕಿ ಇದರ ಉಪಯೋಗ ಪಡೆಯದೇ ಪೊದೆಯೊಳಗೆ ಅಡಗಿರಬಹುದಾದ ಕನ್ನಡ – ವಿಜ್ಞಾನ ಭಾಷೆಗೆ ಶರಣಾಗುವುದು ಶುದ್ಧ ಮೂರ್ಖತೆ ಆಗದೇ?
 5. ತೀವ್ರ ಪೈಪೋಟಿಯ ಈ ಯುಗದಲ್ಲಿ ನಮಗೆ ಅಯಾಚಿತವಾಗಿ ಒದಗಿರುವ ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷಿನ ಬದಲು ಅಡುಗೇಮನೆಯಿಂದ ಆಚೆಗೆ ಚಲಾವಣೆಯಲ್ಲಿರದ ಕನ್ನಡವನ್ನು ಮಕ್ಕಳ ಮೇಲೆ ಹೇರಿ ಅವರನ್ನು ವಿಜ್ಞಾನದೂರರನ್ನಾಗಿ ಮಾಡುವುದು ಅಪೇಕ್ಷಣಿಯವೇ?
 6. ಇಂಗ್ಲಿಷಿನಲ್ಲಿ ವಿಜ್ಞಾನ ಕುರಿತಂತೆ ಆಕರಗ್ರಂಥಗಳು, ವಿಶ್ವಕೋಶಗಳು, ಪದವಿವರಣ ಕೋಶಗಳು. ನಿಘಂಟುಗಳು ಇತ್ಯಾದಿ ಯಥೇಚ್ಛವಾಗಿ ದೊರೆಯುತ್ತವೆ. ಅಂತರಜಾಲವೂ ಇಲ್ಲಿ ವ್ಯಾಪಕ ಉಪಯೋಗಕ್ಕೆ ಒದಗುವುದು. ಕನ್ನಡದಲ್ಲಿ? ಇವುಗಳ ಗೈರುಹಾಜರಿಯೇ ಇಲ್ಲಿಯ ನಿಯಮವೆಂದು ಭಾಸವಾಗುತ್ತದೆ.

ಹೊಸ ಸಂಗತಿ, ಚಿಂತನೆ, ಸೂಚನೆ ಏನೇ ಬಂದರೂ ಮೊದಲು ಅವನ್ನು ನಿರಾಕರಿಸುವುದು ಮಾನವಮತಿಯ ಆದಿ ಪ್ರವೃತ್ತಿ ! ಒಂದು ಬಗೆಯ ಅಭದ್ರತೆ ಅಥವಾ ತನ್ನ ಮುದ್ದು ನಂಬಿಕೆಗಳಿಗೆ, ಆದ್ದರಿಂದ ಸ್ವಂತ ಅಸ್ತಿತ್ವಕ್ಕೆ, ಭಂಗ ಒದಗಲಿದೆಯೋ ಎಂಬ ಮನಃಸ್ಥಿತಿ. ಬಳಿಕ ಇಂಥ ಅವೈಚಾರಿಕ ತೀರ್ಮಾನವನ್ನು ತಾರ್ಕಿಕವಾಗಿ ಸಮರ್ಥಿಸಲು ಕಾರಣಗಳ ಹೊಸೆತ. ಆದರೆ ಹೊಸತು ಯಾವುದೇ ಇರಲಿ ಅದು ಅಂದಿನ ತನಕದ ಅನ್ವೇಷಣೆಯ ಕಾರಣವಾಗಿ ರಂಗಪ್ರವೇಶಿಸಿದಾಗ ಅದರ ಜೊತೆಯಲ್ಲೇ ಬೆಳೆದು ನಳನಳಿಸುವ ನೂತನ ಪೀಳಿಗೆ ಅದನ್ನು ತೀರ ಸಹಜವಾಗಿ ಅಂಗೀಕರಿಸಿ ಅದರ ಏಳಿಗೆಗೆ ತನ್ನ ದೇಣಿಗೆ ಸಲ್ಲಿಸುತ್ತದೆ. ನಮ್ಮ ಮನೆಗಳಲ್ಲೇ ನೋಡೋಣ. ಹಳೆಯ ತಲೆಮಾರಿನವರಿಗೆ ಗಣಕ (computer), ದೂರದರ್ಶನ (television), ವಿಮಾನಯಾನ (air travel) ಮುಂತಾದವು ಆತಂಕಕಾರಿಗಳಾಗಿದ್ದುದು ಸರಿಯಷ್ಟೆ; ಆದರೆ ಅವು ಇಂದಿನವರ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ, ಅಲ್ಲವೇ? ಹಳತು – ಹೊಸತುಗಳ ಈ ನಿರಂತರ ಸಂಘರ್ಷ – ಸಮನ್ವಯ ಯಾತ್ರೆಯನ್ನು ಸೂತ್ರರೂಪದಲ್ಲಿ ಹೇಳಿರುವ ಸಾಲುಗಳಿವು :

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ ||

ವಾಸ್ತವವಾಗಿ 1920ರ ಅಂದಾಜಿಗೆ ಎ.ನಾರಾಯಣರಾವ್, ಆರ್.ಎಲ್.ನರಸಿಂಹಯ್ಯ, ನಂಗಪುರಮ್ ವೆಂಕಟೇಶ ಅಯ್ಯಂಗಾರ್, ಕೋಟ ಲಕ್ಷ್ಮೀನಾರಾಯಣ ಕಾರಂತ, ಸಿ.ಎನ್.ಶ್ರೀನಿವಾಸ ಅಯ್ಯಂಗಾರ್, ಬೆಳ್ಳಾವೆ ವೆಂಕಟನಾರಣಪ್ಪ ಮೊದಲಾದ ಶಿಕ್ಷಣತಜ್ಞರು ಕನ್ನಡದಲ್ಲಿ ಆಧುನಿಕ ವಿಜ್ಞಾನವಿಷಯಗಳನ್ನು ಜನಪ್ರಿಯಗೊಳಿಸಲು ಮುಂದಾದ ಮೊದಲಿಗರು. ಅವರೆಲ್ಲರೂ ತಮ್ಮ ತಮ್ಮ ವಿಷಯಗಳನ್ನು ತಾಂತ್ರಿಕವಾಗಿ ಅಭ್ಯಸಿಸಿ ಬೋಧಿಸಿ ಕೃತಾರ್ಥ ಭಾವ ಗಳಿಸಿ, ಕನ್ನಡದಲ್ಲಿ ಅವೇ ಪರಿಕಲ್ಪನೆಗಳನ್ನು ಪುನಸ್ಸೃಷ್ಟಿಸಲು ಮುಂದಾದವರು. ಅಲ್ಲದೇ ಕನ್ನಡ ಹಾಗೂ ಸಂಸ್ಕೃತಗಳಲ್ಲಿ ಪರಿಣತರು ಕೂಡ. ಅವರ ಮನೋಮೂಸೆಗಳಲ್ಲಿ ನಡೆದ ಪ್ರಕ್ರಿಯೆಗಳನ್ನು ಸೂತ್ರರೂಪದಲ್ಲಿ ಹೀಗೆ ನಿರೂಪಿಸಬಹುದು: ತಾಂತ್ರಿಕವಾಗಿ ಪರಿಕಲ್ಪನೆಗಳ ಸ್ವಾಂಗೀಕರಣ – ಇದಕ್ಕೆ ವಿಷಯತಜ್ಞತೆಯ ಜೊತೆಗೆ ಇಂಗ್ಲೊಇಷ ಭಾಷಾಪ್ರಭುತ್ವವೂ ಅಗತ್ಯ; ಇವುಗಳಿಗೆ ಸ್ವಂತ ಪ್ರತಿಭೆಯ ಕಾವಿನಲ್ಲಿ ಕನ್ನಡರೂಪೂರಣ – ಇದಕ್ಕೆ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯದ ಜೊತೆಗೆ ಸೃಜನಶೀಲ ಚಿಂತನೆಯೂ ಅವಶ್ಯ; ಮತ್ತೆ ಕನ್ನಡ ಭಾಷೆಯ ಜಾಯಮಾನ ಅನುಸರಿಸಿ ಇದರಲ್ಲಿ ನಿರೂಪಣೆ – ಇದಕ್ಕೆ ಕನ್ನಡ ವ್ಯಾಕರಣದ ಅರಿವು, ಮತ್ತು ಈ ಕಾರ್ಯ ಕುರಿತು ದೃಢ ಭರವಸೆ. ಅವರೆಲ್ಲರೂ ಕನ್ನಡ ಮತ್ತು ಇಂಗ್ಲಿಷ್ ಉಭಯ ಭಾಷಾತಜ್ಞರಾಗಿದ್ದರು. ಸೃಜನಶೀಲ ಲೇಖಕರಾಗಿದ್ದರು. ಮೇಲಾಗಿ ಈ ಕರ್ತವ್ಯದ ಬಗ್ಗೆ ಪೂರ್ಣ ನಿಷ್ಠೆಯುಳ್ಳವರೂ ಆಗಿದ್ದರು.

ಈ ತೆರನಾಗಿ, ಅಂದಾಝು 1950ರ ದಶಕದ ತನಕ, ಕನ್ನಡವಿಜ್ಞಾನ ವಾಙ್ಮಯ ಅಲ್ಲಿ ಇಲ್ಲಿ ಆಸಕ್ತರ ಆಡುಂಬೊಲವಾಗಿ ಬೆಳೆಯಿತು. ಆಸಕ್ತರ ಮಾತ್ರ ಏಕೆ? ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಸರಕು ಉತ್ಪಾದನೆ ಮತ್ತು ಪೂರೈಕೆ ಆಗುವ ವ್ಯಾಪಾರನಿಯಮ ಸರ್ವತ್ರ ಅನ್ವಯವಾಗುವುದೆಂಬುದನ್ನು ಮರೆಯಬಾರದು. 1930ರ ದಶಕದಲ್ಲಿ ಕೋಟಿ ಶಿವರಾಮ ಕಾರಂತರು “ಬಾಲಪ್ರಪಂಚ” ಎಂಬ ಕಿರಿಯರ ಸಾಮಾನ್ಯ ವಿಶ್ವಕೋಶದ (ಈ ಮೂರು ಸಂಪುಟಗಳಲ್ಲಿ ವಿಜ್ಞಾನ ವಿಷಯಗಳೂ ಸೇರಿದ್ದವು) ಮೂಲಕ ಹೊಸ ಹರವಿನ ಶೋಧ ಮಾಡಿದರು. ಮುಂದೆ 1950 – 60ರ ದಶಕದಲ್ಲಿ “ವಿಜ್ಞಾನ ಪ್ರಪಂಚ” ಹೆಸರಿನಲ್ಲಿ ನಾಲ್ಕು ಸಂಪುಟಗಳನ್ನು ಪ್ರಕಟಿಸಿದರು. ಆಧುನಿಕ ವಿಜ್ಞಾನ ಕುರಿತಂತೆ ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದ ಜನಪ್ರಿಯ (ತಾಂತ್ರಿಕ ಅಲ್ಲ) ಕೃತಿಗಳನ್ನು ಓದಿ ತಮಗೆ ಅರ್ಥವಾದಷ್ಟನ್ನು (ಕಾರಂತರು ಮೂಲತಃ ಕಾದಂಬರಿಕಾರರು, ವಿಜ್ಞಾನದ ತಾಂತ್ರಿಕ ಭಾಷೆಗೆ ಪ್ರವೇಶ ಇದ್ದವರಲ್ಲ) ಕನ್ನಡ ವಾಕ್ಯಗಳಲ್ಲಿ ಬರೆದರು. ಏಕವ್ಯಕ್ತಿ – ಮಹಾಸಾಧನೆ ಮತ್ತು ಕಾರಂತರ “ಹತ್ತು ಮುಖಗಳು” ಎಂಬ ಭಾವುಕ ಕಾರಣಗಳಿಗಾಗಿ ಇದು ಪ್ರಸಿದ್ಧಿ ಗಳಿಸಿತು. ಅನೇಕ ಆವೃತ್ತಿಗಳನ್ನೂ ಕಂಡಿತು. ಆದರೆ ಭಾವುಕತೆ ಅಥವಾ ವ್ಯಕ್ತಿಗೌರವ ಎಂಬ ಜ್ಞಾತೃನಿಷ್ಠ ಕಾರಣಗಳು ವಿಜ್ಞಾನದ ಹಾದಿಯನ್ನು ಕಡೆಯುವುದಿಲ್ಲ. ನಿಯಂತ್ರಿಸುವುದೂ ಇಲ್ಲ. ಹೀಗಾಗಿ ಕಾರಂತರ ಪ್ರಯತ್ನ ಸಫಲವಾಗಲಿಲ್ಲ. ಮಾರ್ಗದರ್ಶಕವೂ ಆಗಲಿಲ್ಲ. ಅಲ್ಲದೇ ತತ್ಪೂರ್ವ ನರಸಿಂಹಯ್ಯಾದಿ ಶಿಕ್ಷಣವೇತ್ತರಿಂದ ರೂಪಿತವಾದ ಋಜುಮಾರ್ಗವನ್ನು ತಾತ್ಕಾಲಿಕವಾಗಿ ಮಸಳಿಸಿತು ಕೂಡ.

ಇಂಥ ಕುರುಡುಗಲ್ಲಿಯಿಂದ ಕನ್ನಡವಿಜ್ಞಾನ ವಾಙ್ಮಯವನ್ನು ಎತ್ತಿ ಸರಿಯಾದ ಶೈಕ್ಷಣಿಕ ಮಾರ್ಗಕ್ಕೆ ತಂದು ನಿಲ್ಲಿಸಿದುದು ಮುಖ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯ. ಸಾಹಿತ್ಯ ಮತ್ತು ವಿಜ್ಞಾನ ಕುರಿತಂತೆ ಮೌಲ್ಯಯುತ ಲೇಖನಗಳ ಸಂಕಲನವಾಗಿ ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿದ್ದ “ಪ್ರಬುದ್ಧ ಕರ್ಣಾಟಕ” ಎಂಬ ತ್ರೈಮಾಸಿಕ ತನ್ನ ಚಿನ್ನದ ಸಂಚಿಕೆಯಾಗಿ ವಿಜ್ಞಾನ ವಿಷಯಗಳನ್ನು ಮಾತ್ರ ಒಳಗೊಂಡ ಎರಡು ಬೃಹದ್ಗಾತ್ರದ ಸಂಪುಟಗಳನ್ನು ಪ್ರಕಟಿಸಿತು (1969). ಸಂಪಾದನೆಯ ಹೊಣೆ ಹೊತ್ತು ಕನ್ನಡವಿಜ್ಞಾನ ವಾಙ್ಮಯ ನಿರ್ಮಾಣಕ್ಕೆ ಅಂದಿನ ಸಂದರ್ಭದಲ್ಲಿ ಒಂದು ಶಿಷ್ಟ ರೂಪವಿತ್ತವರು ರಸಾಯನವಿಜ್ಞಾನ ಪ್ರಾಧ್ಯಾಪಕ ಮತ್ತು ವಿಜ್ಞಾನಲೇಖಕ ಜೆ.ಆರ್.ಲಕ್ಷ್ಮಣರಾಯರು. ಅಲ್ಲಿಂದ ಮುಂದಕ್ಕೆ ಇವರು “ವಿಜ್ಞಾನಕರ್ಣಾಟಕ” ವೆಂಬ ನೂತನ ತ್ರೈಮಾಸಿಕದ ಸಂಪಾದಕರಾಗಿ ಅನೇಕ ಹೊಸಲೇಖಕರು ಅರಳಲು ಕಾರಣರೂ ಆದರು. ಇದೇ ವಿಶ್ವವಿದ್ಯಾನಿಲಯದವರು ಪ್ರತ್ಯೇಕವಾಗಿ ಪ್ರಕಟಿಸುತ್ತ ಬಂದಿರುವ ವಿಜ್ಞಾನಾಕರಗ್ರಂಥಗಳು, ಪಠ್ಯಪುಸ್ತಕಗಳು, ಅನುವಾದಿತ ಕೃತಿಗಳು ಮುಂತಾದವು ಇಂಥ ವಾಙ್ಮಯರಚನೆಗೆ ಸಮರ್ಥ ಮತ್ತು ಸಮರ್ಪಕ ತಳಹದಿ ಕಟ್ಟಿವೆ. ರಾಜ್ಯದ ಇತರ ವಿಶ್ವವಿದ್ಯಾಲಯಗಳು. ಅನೇಕ ಸ್ವಯಂ ಸೇವಾಸಂಘಗಳು, ಖಾಸಗಿ ಪ್ರಕಾಶಕರು, ಕನ್ನಡ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ನಿಯತಕಾಲಿಕೆಗಳು, ವಿಜ್ಞಾನಲೇಖನಗಳನ್ನು ಪ್ರಕಟಿಸುತ್ತಿರುವ ದೈನಿಕಗಳು ಮುಂತಾದವು ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿದೆ. ಕನ್ನಡದ ಸರ್ವಾಂಗ ಸುಂದರ ಅಭಿವರ್ಧನೆಗೆ ಈ ಎಲ್ಲ ನಿರ್ಮಿತಿಗಳೂ ಸಾಕ್ಷಿಯಾಗಿವೆ. ಅನುವಾದಗಳು, ಸ್ವತಂತ್ರ ಗ್ರಂಥಗಳು ಮುಂತಾದವು ಕನ್ನಡದಲ್ಲಿ ಹೇರಳವಾಗಿ ಪ್ರಕಟವಾಗಿವೆ. ನೋಡುವ ಕಣ್ಣು, ತಿಳಿಯುವ ಮನಸ್ಸು ಮತ್ತು ಮೆಚ್ಚುವ ಹೃದಯವಿಲ್ಲದ ಅಭಿಮಾನರಿಕ್ತರು ಕನ್ನಡದಲ್ಲೇನಿದೆ ಎಂಬ ನಿಷೇಧಸುಖಿಗಳಾಗುತ್ತಾರೆ – ಈಚಿನ ದಿನಗಳಲ್ಲಿ ಅಧಿಕಾಧಿಕವಾಗಿ (2004).

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ 1968ರಲ್ಲಿ “ಕನ್ನಡ ವಿಶ್ವಕೋಶ” ಮತ್ತು ಎರಡು ವರ್ಷಾನಂತರ “ವಿಷಯ ವಿಶ್ವಕೋಶ” ಎಂಬ ಎರಡು ಯೋಜನೆಗಳು ಚಾಲೂಗೊಂಡುವು. ಮೊದಲನೆಯ ಯೋಜನೆಯಲ್ಲಿ ಪೂರ್ಣಾವಧಿ ವಿಜ್ಞಾನಸಂಪಾದಕನಾಗಿ ಸೇವೆ ಸಲ್ಲಿಸುವ ಭಾಗ್ಯ ನನಗೊದಗಿತ್ತು. (1986ರಲ್ಲಿ ವಯಸ್ಸು 60 ತುಂಬಿದಾಗ ನಿವೃತ್ತನಾದೆ. ಈಗ [2004] ನಿವೃತ್ತನಾಗಿ 18 ವರ್ಷಾನಂತರ ವಿಶ್ವವಿದ್ಯಾನಿಲಯದ ಕೋರಿಕೆ ಮೇರೆಗೆ 14ನೆಯ [ಮೂಲ ಯೋಜನೆ ಪ್ರಕಾರ ಕೊನೆಯ] ಸಂಪುಟದ ಗೌರವ ವಿಜ್ಞಾನ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ). ಮೂಲತಃ ಗಣಿತಾಧ್ಯಾಪಕನಾಗಿದ್ದು ಅನೇಕ ಪಠ್ಯಪುಸ್ತಕಗಳನ್ನೂ ಜನಪ್ರಿಯಕೃತಿಗಳನ್ನೂ ರಚಿಸಿದ್ದ ನನಗೆ ಈ ಹೊಸ ಹೊಣೆ ಒಂದು ಸವಾಲಾಯಿತು. ತಜ್ಞರಿಂದ ಲೇಖನಗಳನ್ನು ಆಹ್ವಾನಿಸುವುದು (ಹೆಚ್ಚಿನವು ಇಂಗ್ಲಿಷಿನಲ್ಲಿರುತ್ತಿದ್ದುವು). ಅಧುನಾತಮ ಆಕರಗ್ರಂಥಗಳಿಂದ ವಿಷಯಸನ್ನದ್ಧನಾಗಿ ಈ ಲೇಖನಗಳನ್ನು ಯುಕ್ತವಾಗಿ ಸಂಪಾದಿಸಿ ಮುದ್ರಣಕ್ಕೆ ಸಿದ್ಧಗೊಳಿಸುವುದು, ಅನುವಾದ ಕಾರ್ಯವನ್ನು ಇತರರಿಂದ ಮಾಡಿಸುವುದು (ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕಛೇರಿಯಲ್ಲಿಯೇ ಮಾಡಬೇಕಾಗಿದ್ದ ಅನಿವಾರ್ಯತೆ ಎದುರಾಗುತ್ತಿತ್ತು). ವೃತ್ತಪತ್ರಿಕೆಗಳಿಗೂ ವಿದೇಶೀ ವಿಜ್ಞಾನ ನಿಯತಕಾಲಿಕೆಗಳಿಗೂ ಸದಾ ತೆರೆದಮನದವರಾಗಿದ್ದು ಮಾಹಿತಿ ಸಂಗ್ರಹಿಸಿ ನಮ್ಮ ಲೇಖನಗಳನ್ನು ಪುಷ್ಟೀಕರಿಸುವುದು ಮುಂತಾದ ಸೃಜನಶೀಲ ಪ್ರಕ್ರಿಯೆಗಳು ನಮ್ಮ ದೈನಂದಿನ ಚಟುವಟಿಕೆಗಳಾದುವು. ಈ ತನಕ ಪ್ರಕಟವಾಗಿರುವ 13 ಬೃಹತ್ಸಂಪುಟಗಳು ಕನ್ನಡಕ್ಕೆ ಸಮರ್ಥ ವಿಜ್ಞಾನಮಾಧ್ಯಮವಾಗುವತ್ತ ನೀಡಿರುವ ದೇಣಿಗೆ ಅನುಪಮವಾದದ್ದು, ಸೂತ್ರರೂಪದಲ್ಲಿ: ಭಾಷೆ ಸಿದ್ಧವಿದೆ. ಶಿಷ್ಟ ಪಾರಿಭಾಷಿಕ ಪದಗಳಿವೆ, ಖಚಿತ ಮತ್ತು ಆಕರ್ಷಕ ನಿರೂಪಣ ಶೈಲಿ ಗೊತ್ತಿದೆ, ಆದರೆ ಕಟಿಬದ್ಧ ಲೇಖಕರ ದಂಡು ಎಲ್ಲಿದೆ?

ಮೂಕಶಿಲೆ ನವೆಯುತಿದೆ ರಾಮಪಾದವ ಕಾದು
ನಾಕಬಂದೀತೆಂದು ಶಬರಿ ಕಾದಿಹಳಲ್ಲಿ
ಹಾ ಕನ್ನಡಮ್ಮ! ನಾನಿಹೆನೆಂಬ ಭರವಸೆಯ
ಕನ್ನಡಿಗ! ನೀಡುವೆಯ ನೀನು? ಅತ್ರಿಸೂನು ||

1970ರ ಉಲ್ಲಾಸದಾಯಕ ಹವೆಯಲ್ಲಿ ಬೆಂಗಳೂರಿನ ಕರ್ನಾಟಕ ಸಹಕಾರೀ ಪ್ರಕಾಶನದ ವತಿಯಿಂದ “ಜ್ಞಾನಗಂಗೋತ್ರಿ” ಎಂಬ ಕಿರಿಯರ ವಿಶ್ವಕೋಶ (7 ಸಂಪುಟಗಳು) ಅರಳಿ ಪರಿಮಳಿಸಿತು (1970 – 74), ಇದರ ಪ್ರಧಾನ ಸಂಪಾದಕರು ಕಾದಂಬರಿಕಾರ ನಿರಂಜನ, ವಿಜ್ಞಾನ ಸಂಪಾದಕರು ಭೌತವಿಜ್ಞಾನಪ್ರಾಧ್ಯಾಪಕ ಮತ್ತು ಆ ಮೊದಲು “ವಿಜ್ಞಾನಲೋಕ” ಎಂಬ ಖಾಸಗಿ ಮಾಸಿಕದ ಸಂಪಾದಕ ಅಡ್ಯನಡ್ಕ ಕೃಷ್ಣಭಟ್ಟ ಈ ಎಲ್ಲ ಚಟುವಟಿಕೆಗಳು ವಿಜ್ಞಾನಸಂವಹನಮಾಧ್ಯಮವಾಗಿ ಕನ್ನಡದ ಸಾಮರ್ಥ್ಯ – ದೌರ್ಬಲ್ಯಗಳನ್ನು ಸ್ಫಟಿಕ ಶುಭ್ರತೆಯಿಂದ ಬಿಂಬಿಸಿದುವು (1970 – 80 ಅವಧಿ):

 1. ಯಾವುದೇ ಸಂಕೀರ್ಣ ವಿಷಯವನ್ನೂ ಕನ್ನಡದಲ್ಲಿ ಆಕರ್ಷಕವಾಗಿ ನಿರೂಪಿಸಬಹುದು. ಆದ್ದರಿಂದ ಕನ್ನಡದ ಆಂತರಿಕ ತ್ರಾಣ ಮತ್ತು ನಮ್ಯತೆ (flexibility) ಬಗ್ಗೆ ಏನೂ ಸಂಶಯತಳೆಯಬೇಕಾಗಿಲ್ಲ. ಇದರ ಅರ್ಥ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವಾತನಿಗೆ ದೊರೆಯುವಷ್ಟೇ ಜ್ಞಾನ ಕನ್ನಡದಲ್ಲಿ ತಿಳಿಯಬಯಸುವಾತನಿಗೂ ಲಭಿಸುವುದು ಸಾಧ್ಯ.
 2. ನಮ್ಮ ವಿಜ್ಞಾನಲೇಖಕರಿಗೆ ಕನ್ನಡ ಸಾಹಿತ್ಯದ ಗಂಭೀರ ಅಧ್ಯಯನ ಅಗತ್ಯವಿದೆ. ಇದೇ ರೀತಿ ಸಾಹಿತಿಗಳಿಗೂ ಕನಿಷ್ಠ ಜನಪ್ರಿಯವಿಜ್ಞಾನ ವಾಙ್ಮಯದಲ್ಲಾದರೂ ವಿಶೇಷ ಶಿಕ್ಷಣ ಕೊಡುವುದು ಅಪೇಕ್ಷಣೀಯ. ಎರಡರ ಸಾಹಚರ್ಯ ಕನ್ನಡದ ಸರ್ವಾಂಗ ಸುಂದರ ಅಭಿವರ್ಧನೆಗೆ ಅಗತ್ಯ. ಯುವ ಕನ್ನಡ ಉಪನ್ಯಾಸಕ ಕುವೆಂಪು, ಜೀನ್ಸ್ ಬರೆದಿದ್ದ The Mysterious Universe ಓದಿ ಸವಿದು ಆ ಸ್ವಾರಸ್ಯವನ್ನು ತರಗತಿಗಳಲ್ಲಿ ವಿವರಿಸುತ್ತಿದ್ದರೆಂದು ಅವರ ನೇರ ವಿದ್ಯಾರ್ಥಿ ಮತ್ತು ಹಿರಿಯ ಕನ್ನಡ ವಿಜ್ಞಾನ ಲೇಖಕ ಜೆ.ಆರ್.ಲಕ್ಷ್ಮಣರಾಯರೊಮ್ಮೆ ಹೇಳಿದ್ದರು.
 3. ಕನ್ನಡದಲ್ಲಿ ವಿಜ್ಞಾನನಿಘಂಟು, ಶಿಷ್ಟೀಕೃತಪಾರಿಭಾಷಿಕ ಪದಕೋಶ, ಪದವಿವರಣ ಕೋಶ ಮುಂತಾದವುಗಳು ಅಗತ್ಯವಿದೆ.
 4. ನವಲೇಖಕರ ಹೊಸ ಪೀಳಿಗೆಯೇ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಕ್ರಿಯಾಶೀಲವಾಗಬೇಕು. ಇವರನ್ನು ರೂಪಸಿಸಿ ಪ್ರೋತ್ಸಾಹಿಸುವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆಯೇ? ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 1990ರಲ್ಲಿ ಪ್ರಕಟಿಸಿದ “ಇಂಗ್ಲಿಷ್ – ಕನ್ನಡ ವಿಜ್ಞಾನ ಶಬ್ದಕೋಶ” (ಸಂಪಾದಕರು ಜೆ.ಆರ್.ಲಕ್ಷ್ಮಣರಾವ್ ಮತ್ತು ಅಡ್ಯನಡ್ಕ ಕೃಷ್ಣಭಟ್ಟ) ಮತ್ತು ನವಕರ್ನಾಟಕ ಪ್ರಕಾಶನ 2001ರಲ್ಲಿ ಪ್ರಕಟಿಸಿದ “ವಿಜ್ಞಾನ ಪದ ವಿವರಣಕೋಶ” (ನನ್ನ ಪ್ರಧಾನಸಂಪಾದಕತ್ವದಲ್ಲಿ ಹತ್ತು ಮಂದಿ ತಜ್ಞರ ನೆರವಿನಿಂದ) ವಿಜ್ಞಾನ ಸಂವಹನಮಾಧ್ಯಮವಾಗಿ ಕನ್ನಡವನ್ನು ನೇರ್ಪುಗೊಳಿಸುವ ದಿಶೆಯಲ್ಲಿ ಎರಡು ಪ್ರಮುಖ ಮಜಲುಗಳು.

ಇಲ್ಲಿಯವರೆಗಿನ ಸ್ಥೂಲ ಸಮೀಕ್ಷೆಯಿಂದ ಅನುಗತಿಸುವ ಅಂಶಗಳಿವು:

 1. ಕನ್ನಡವನ್ನು ಸಮರ್ಥರು ವಿಜ್ಞಾನದ ಜೀವಂತ ಮಾಧ್ಯಮವಾಗಿಯೂ ರೂಪಿಸಬಲ್ಲರು; 2. ಆವಶ್ಯಕತೆಗೆ ಅನುಸಾರವಾಗಿ ಕನ್ನಡದಲ್ಲಿ ವಿವಿಧ ಆಕರಕೃತಿಗಳೂ ಸಹಾಯಕಗ್ರಂಥಗಳೂ ಮೈದಳೆಯುತ್ತವೆ; 3. ಯುವಚೇತನಗಳನ್ನು ಆಕರ್ಷಿಸಿ ಕಾರ್ಯಪ್ರವೃತ್ತರಾಗುವಂತೆ ಸಮಗ್ರ ಯೋಜನೆ ಸಿದ್ಧವಾಗಿ ಅನುಷ್ಠಾನಿಸಲ್ಪಡಬೇಕು. ಕಾಲೇಜು ತರಗತಿಗಳಿಗೆ ವಿಜ್ಞಾನ ಪಾಠಗಳನ್ನು ಕನ್ನಡದಲ್ಲಿ ಕೂಡ ವಿವರಿಸಿದ ನನ್ನ ಹಾಗೂ ಕೆಲವು ಸಹಚರರ ಅನುಭವ ಸಾರವಿದು: ಈ ವಿದ್ಯಾರ್ಥಿಗಳಿಗೆ ಸಂಕೀರ್ಣ ಪರಿಕಲ್ಪನೆಗಳು ಇಂಗ್ಲೀಷ್ ಮಾಧ್ಯಮದವರಿಗಿಂತ ಚೆನ್ನಾಗಿ ಅರ್ಥವಾಗಿ ಮುಖಗಳಲ್ಲಿ ಉಲ್ಲಾಸ ಮಿನುಗುತ್ತಿತ್ತು; ತರಗತಿಯಲ್ಲಿ ಜೀವಂತ ಪ್ರಶ್ನೋತ್ತರಗಳು ಲವಲವಿಕೆ ತಂದಿರುತ್ತಿದ್ದುವು; ಮೇಲಾಗಿ ಪರೀಕ್ಷೆಗಳಲ್ಲಿ ಇವರು ಉತ್ಸಾಹದಿಂದ ಭಾಗಿಗಳಾದರು. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಏರ್ಪಡಿಸಿದ್ದ ಗಣಿತ ಒಲಿಂಪಿಯಡ್‌ನಲ್ಲಿ ಗಣಿತವನ್ನು ಕನ್ನಡದಲ್ಲಿ ಕಲಿತ ನನ್ನ ಒಬ್ಬ ವಿದ್ಯಾರ್ಥಿ ಒಂದನೆಯ ಸ್ಥಾನ ಗಳಿಸಿದ. ಮನದ ನಿಗೂಢ ಗುಹೆಗಳಿಗೆ ಸುಲಭ ಪ್ರವೇಶ ಒದಗಿಸುವ ಏಕೈಕ ಸಾಧನವೆಂದರೆ ಮಾತೃಭಾಷಾಬೋಧನೆ.

ಯುವ ಚೇತನಗಳನ್ನು ಪ್ರೇರಿಸುವ ಪರಿ ಹೇಗೆ? ಯಾರು? ನಮ್ಮ ಪ್ರಜಾಪ್ರಭುತ್ವಾತ್ಮಕ ಸರ್ಕಾರ ಪ್ರಜೆಗಳ ಭಾಷೆಯಾದ ಕನ್ನಡವನ್ನು ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿಯೂ ಶಿಕ್ಷಣ ಮಾಧ್ಯಮವಾಗಿಯೂ ಒಡನೆ ಚಲಾವಣೆಗೆ ತರಲು ಕಾನೂನಿನ ಕ್ರಮ ಕೈಗೊಳ್ಳಲೇಬೇಕು. ಕನ್ನಡಭಾಷೆಯ ಸಾಮರ್ಥ್ಯದ ಬಗ್ಗೆ ಅಥವಾ ತಜ್ಞರ ಲಭ್ಯತೆ ಬಗ್ಗೆ ಇನಿತೂ ಸಂದೇಹ ತಳೆಯಬೇಕಾಗಿಲ್ಲ. ಒಂದು ವಿಶೇಷ ಭಾಷೆಯಾಗಿ ಇಂಗ್ಲಿಷನ್ನು ಜೊತೆಯಲ್ಲೇ ಬೋಧಿಸಬೇಕು. ಮಾತೃಭಾಷೆಯಲ್ಲಿ ಜ್ಞಾನ – ವಿಜ್ಞಾನಗಳನ್ನು ಗಳಿಸುವ ವಿದ್ಯಾರ್ಥಿಗಳು ರಾಷ್ಟ್ರಸ್ವಾತಂತ್ರ್ಯಕ್ಕೆ ಜನರ ಅಸ್ಮಿತೆಗೆ, ದೇಶಪ್ರೇಮಕ್ಕೆ ಮತ್ತು ಐಕಮತ್ಯಕ್ಕೆ ನೂತನ ಭಾಷ್ಯ ಬರೆಯಬಲ್ಲರು. ಆಗ ಮಾತ್ರ ನಮ್ಮ ದೇಶ ವಿಶ್ವಕವಿ ರವೀಂದ್ರರು “ಗೀತಾಂಜಲಿ” 35ರಲ್ಲಿ ಆಶಿಸಿರುವಂತೆ ಶಿರವೆತ್ತಿ ನಡೆಯಬಲ್ಲದು (ಅನುವಾದಕರು ಜಿ.ರಾಮನಾಥ ಭಟ್ಟ):

ಎಲ್ಲಿ ಮನಕೆ ಭಯವೆ ಇಲ್ಲ ಎಲ್ಲಿ ತಲೆಯು ಬಾಗದು
ಎಲ್ಲಿ ಬಂಧಮುಕ್ತ ಜ್ಞಾನ ಜಗಕೆ ಬೆಳಕು ಕೊಡುವುದು
ಎಲ್ಲ ಅಲ್ಪತನದಿ ಮನವು ಮನೆಯ ನಡುವೆ ಗೋಡೆಯ
ಕಟ್ಟಿ ಜಗವ ಛಿದ್ರಗೊಳಿಸಿ ಧೂಳಿನಲ್ಲಿ ಕೆಡವದು
ಅಂಥ ಬಂಧಮುಕ್ತ ಸಗ್ಗದಲ್ಲಿ ನನ್ನ ನಾಡನು
ಎಚ್ಚರಿಸುತ ಸಲಹು ತಂದೆ ಲಾಲಿಸೆನ್ನ ಮೊರೆಯನು

ಕುವೆಂಪು ಹಾಡಿದ್ದಾರೆ:

ಪಂಪ ರನ್ನರ್ ಕುಮಾರವ್ಯಾಸ ಲಕ್ಷ್ಮೀಶ
ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ
ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ,
ಉಳಿವುದೀ ಕನ್ನಡಂ ||

ಇಂದು ನಮ್ಮ ಸ್ಥಿತಿ ಏನಾಗಿದೆ ಗೊತ್ತೇ?

ಅಪರಂಜಿ ಕೈಯಲಿದೆ ಹುಡುಕುತಿಹೆ ಬೇರೆಲ್ಲೊ
ಕಪಿಪುಂಗವನ ನಿಷ್ಠೆ ರೂಢಿಸಿಕೊ. ನೀಗೈವ
ಜಪ ತಪಂಗಳು ನಿನ್ನೊಳಿಹ ನಿಧಿಯ ಶೋಧಿಸಲಿ
ತಪನ ಸಾಮ್ರಾಜ್ಯವೇ ನಿನ್ನದೋ ಅತ್ರಿಸೂನು ||

ಹನುಮಂತ ನಿಷ್ಠೆ, ಅರ್ಜುನ ಲಕ್ಷ್ಯ, ನಚಿಕೇತ
ನಮನಯ ಭಗೀರಥನ ಸಾಹಸ ಪ್ರಜ್ಞೆ,
ರ್ಣನ ದೃಢತೆ, ಭರತನಂತಃಕರಣ ಸಂಗಳಿಸೆ
ಮನ ಮನೆ ಮಹೌನ್ನತ್ಯವೈಡುವುದು ಅತ್ರಿಸೂನು ||