() ಆದ್ಯುಕ್ತಿಗಳು ಮತ್ತು ಆಧಾರ ಭಾವನೆಗಳು

ಯಾವ ವಿಜ್ಞಾನಗ್ರಂಥವನ್ನೂ ಜ್ಞಾನದ ಪ್ರಾರಂಭದಿಂದ ಎಂದರೆ ಆದಿಮಾನವನ ಕಾಲದಿಂದ – ತೊಡಗಿ ಬರೆಯಲಾಗುವುದಿಲ್ಲ. ಒಂದು ಮಜಲನ್ನು ಅಂಗೀಕರಿಸಿ ಅಲ್ಲಿಂದ ಮುಂದೆ ವಿಷಯಪ್ರತಿಪಾದನೆ ಮಾಡಬೇಕು. ಹೀಗೆ ಮಾಡುವಾಗ ಎರಡು ಸನ್ನಿವೇಶಗಳು ತಲೆದೋರುತ್ತವೆ;

(i) ತರ್ಕದಿಂದ ಅಥವಾ ಪ್ರಯೋಗದಿಂದ ಸಾಧಿಸಲಾಗದ ಆದರೆ ಎಲ್ಲರಿಗೂ ತಿಳಿದಿರುವ ಅಂಶಗಳು – ಇವು ಸ್ವಯಂವೇದ್ಯ ಸಂಗತಿಗಳು ಅಥವಾ ಆದ್ಯುಕ್ತಿಗಳು (axioms); ಒಂದು ರೀತಿಯಲ್ಲಿ ಅವಿಭಾಜ್ಯ ಮೂಲಭಾವನೆಗಳು; ಪಾರಿಭಾಷಿಕ ಪದಗಳ ಬಳಕೆ ಇವುಗಳಲ್ಲಿ ಪ್ರಥಮವಾಗಿ ನಡೆದಿರುತ್ತದೆ.

(ii) ವಾಸ್ತವಿಕತೆ ತಿಳಿದಿದೆ; ಅದರ ಸುಬದ್ಧ ಸಂಕ್ಷಿಪ್ತ ಭಾಷ್ಯದ ಹೆಸರು ಸಿದ್ಧಾಂತ. ಸಿದ್ಧಾಂತವನ್ನು ಪಡೆಯುವ ಮಾರ್ಗದಲ್ಲಿ ದತ್ತಾಂಶಗಳ ಸಂಗ್ರಹಣೆ, ಪಾರಿಭಾಷಿಕ ಪದಗಳ ಸ್ಪಷ್ಟೀಕರಣ, ಆದ್ಯುಕ್ತಿಗಳ ನಿರ್ಧಾರ ಎಲ್ಲ ಕ್ರಮಬದ್ಧವಾಗಿ ನೆರವೇರಿದ ತರುವಾಯ ಒಂದು ಊಹೆಯನ್ನು ಮಾಡಬೇಕಾಗುತ್ತದೆ. ಇದೇ ಆಧಾರಭಾವನೆ. ಈ ತೀರ್ಮಾನ ಲಭಿಸಿದ್ದು ಈ ಕಾರಣದಿಂದಾಗಿರಬಹುದೋ ಎಂಬ ಊಹೆಯೇ (hypothesis) ಆಧಾರ ಭಾವನೆ.

ಗ್ರಂಥಕಾರ ನೂತನ ಸಂಶೋಧನೆಯೊಂದನ್ನು ಮಾಡುತ್ತಿಲ್ಲ ಎಂಬುದು ನೆನಪಿನಲ್ಲಿರಬೇಕು. ಆದ್ದರಿಂದ ಅವನು ವಿವರಿಸಲಿರುವ ಸಿದ್ಧಾಂತ ಕುರಿತು ಆದ್ಯುಕ್ತಿಗಳ ಹಾಗೂ ಆಧಾರಭಾವನೆಗಳ ಖಚಿತ ನಿರೂಪಣೆ ಬಲು ಅವಶ್ಯ. ಇವುಗಳ ಆಯ್ಕೆಯಲ್ಲಿ ನಾವು ಗಮನಿಸುವ ಅಂಶಗಳಿಷ್ಟು :

(i) ಆದ್ಯುಕ್ತಿಗಳು ಆ ವಿಷಯದಲ್ಲಿ ಆಸಕ್ತರಿಗೆ ಸ್ಪಷ್ಟವಾಗಿ ವೇದ್ಯವಾಗಬೇಕು. ಅವನ್ನು ತರ್ಕದಿಂದ ಸಾಧಿಸಲು ಸಾಧ್ಯವಿಲ್ಲ.

(ii) ಒಂದು ವಿಷಯದ ತಳಹದಿಯ ಅತಿ ಮುಖ್ಯಾಂಶ ಆದ್ಯುಕ್ತಿಗಳು. “ಇವಿಷ್ಟು ನನ್ನ ಬತ್ತಳಿಕೆಯಲ್ಲಿರುವ ಬಾಣಗಳು” ಎಂದಂತೆ. ವಿಷಯ ನಿರೂಪಣೆಯಲ್ಲಿ ಇವೇ ಪುನಃ ಪುನಃ ಪ್ರಯೋಗವಾಗುತ್ತವೆ.

(iii) ಅತ್ಯಂತ ಕನಿಷ್ಠ ಸಂಖ್ಯೆಯ ಆದ್ಯುಕ್ತಿಗಳು ಆಧರಿಸಿ ರಚಿಸಿದ ಸಿದ್ಧಾಂತ (theory) ತಾರ್ಕಿಕವಾಗಿ ಅತಿಸುಭದ್ರ ಎನಿಸುವುದು.

(iv) ವಾಸ್ತವಿಕತೆಯನ್ನು ಯಥಾವತ್ತಾಗಿ ವಿವರಿಸುವ ಭಾಷ್ಯ ಸಿದ್ಧಾಂತ, ನಡೆವ ದಾರಿಯಲ್ಲಿರುವ ಗುರುತುಗಲ್ಲುಗಳು: ಪ್ರಯತ್ನ – ವೈಫಲ್ಯ – ಪ್ರಯತ್ನ – ವೈಫಲ್ಯ – ಪ್ರಯತ್ನ…. – ಜಯ. ಜಯ. ಅಂದರೆ ಸಮರ್ಪಕ ಸಿದ್ಧಾಂತ ಪಡೆಯುವವರೆಗೂ ಈ ಶ್ರೇಣಿ ಸಾಗಿಯೇ ಇರುವುದು. ಸಂಶೋಧಕ ತುಳಿಯುವ ಹೊಸ ಹಾದಿಯಲ್ಲಿ ಪ್ರತಿಸಲವೂ ಪಾರಿಭಾಷಿಕಪದಗಳೂ ಆಧಾರಭಾವನೆಗಳೂ ಪರಿಷ್ಕೃತವಾಗಿ ಸಿದ್ಧಾಂತರೂಪ ತಳೆಯುತ್ತವೆ. ವಿಜ್ಞಾನದ ಭಾಷೆಯೂ ನಿಖರವಾಗುತ್ತದೆ.

ಆದ್ಯುಕ್ತಿಗಳು ಮತ್ತು ಆಧಾರಭಾವನೆಗಳನ್ನು ಕುರಿತು ಸಮಗ್ರವಾಗಿ ಇಷ್ಟು ಹೇಳಬಹುದು : ಮೊದಲಿನವು ಕಟ್ಟಡದ ಅಸ್ತಿಭಾರವಾದರೆ ಎರಡನೆಯವು ಅದರ ಆಲೇಖ್ಯ. ಶಾಸ್ತ್ರದ ತಾರ್ಕಿಕ ಸುಭದ್ರತೆಗೆ ಆದ್ಯುಕ್ತಿಗಳ ನಿಷ್ಕೃಷ್ಟ ನಿರೂಪಣೆ ಅತ್ಯಗತ್ಯ.

(ಈ) ತಾರ್ಕಿಕ ಸಾಮಂಜಸ್ಯ

ನಿಸರ್ಗದ ಒಂದೊಂದು ಘಟನೆಯಲ್ಲೂ ಅತ್ಯಾಶ್ಚರ್ಯಕರವಾಗಿರುವಂಥ ತಾರ್ಕಿಕ ಸಾಮಂಜಸ್ಯವಿದೆ. ಇದರ ಅರ್ಥವಿಷ್ಟು : ಸೂರ್ಯಚಂದ್ರರ ಚಲನವಲನಗಳನ್ನು ನಕ್ಷತ್ರಗಳ ಮುನ್ನೆಲೆಯಲ್ಲಿ ಪರಿಶೀಲಿಸೋಣ. ಮುಂದೆ ಗ್ರಹಗಳನ್ನು ಇವುಗಳ ಯಾದಿಗೆ ಸೇರಿಸೋಣ. ದೀರ್ಘಕಾಲದ ವೀಕ್ಷಣೆ ಮತ್ತು ತರ್ಕದಿಂದ ಇವುಗಳ ವರ್ತನೆಯನ್ನು ಅರ್ಥವಿಸಿಕೊಂಡಿದ್ದೇವೆಂದು ಭಾವಿಸೋಣ. ಆದ್ದರಿಂದ ಈ ಘಟನೆಗಳನ್ನು ಕುರಿತು ವೈಜ್ಞಾನಿಕವಾಗಿ ಕಾರ್ಯ – ಕಾರಣ ಸಂಬಂಧ ನಿರೂಪಿಸಲು ಸಮರ್ಥರಾಗಿದ್ದೇವೆ. ಅಥವಾ ಒಂದು ನಿರ್ದಿಷ್ಟ ಬೌದ್ಧಿಕ ಚೌಕಟ್ಟಿನೊಳಗೆ – ವಿಜ್ಞಾನದ ಭಾಷೆಯಲ್ಲಿ ಸೂರ್ಯ ಚಂದ್ರ ಮುಂತಾದವುಗಳ ಯಥಾರೂಪ ಚಿತ್ರಣ ಮಾಡಿ ಆ ಘಟನೆಗಳನ್ನು ಪೂರ್ಣವಾಗಿ ವಿವರಿಸಲು ಶಕ್ತರಾಗಿದ್ದೇವೆ ಎಂದಾಯಿತು. ಈಗ ಹೊಸತೊಂದು ಸನ್ನಿವೇಶ ಒದಗಿತೆಂದು ಊಹಿಸೋಣ ಇದುವರೆಗೆ ಪರಿಶೀಲಿಸಿರದ ಆಕಾಶಕಾಯವೊಂದು ನಮ್ಮ ವೀಕ್ಷಣೆಗೆ ಲಭಿಸಿದೆ. ನಮ್ಮ ಬೌದ್ಧಿಕ ರಚನೆಯಾದ ಚೌಕಟ್ಟಿನೊಳಗೆ ಇದಕ್ಕೆ ದೊರೆಯುವ ಸ್ಥಾನಕ್ಕೂ ವಾಸ್ತವಿಕತೆಗೂ ಹೊಂದಾಣಿಕೆ ಇದ್ದರೆ ನಾವು ಮಂಡಿಸಿರುವ ವಾದ ತಾರ್ಕಿಕವಾಗಿ ಸಮಂಜಸವೆಂದೆನ್ನಿಸುವುದು. ಇಂಥ ಸಾಮಂಜಸ್ಯವಿರದಿದ್ದರೆ? ಆಗ ಈ ತರ್ಕ ಪ್ರತಿಪಾದಿಸುವ ಸಿದ್ಧಾಂತ ಬುಡಭದ್ರವಿಲ್ಲದ ಸೌಧದಂತೆ. ಇದು ಬಲು ಕಾಲ ನಿಲ್ಲದು. ಎಲ್ಲಿ ತಾರ್ಕಿಕ ಅಸಾಮಂಜಸ್ಯವಿರುವುದೋ ಅಲ್ಲಿ ಒಂದೋ ನಮ್ಮ ತಿಳಿವಳಿಕೆ ಅಪರಿಪೂರ್ಣವಾಗಿದೆ. ಅಥವಾ ನೂತನ ಸನ್ನಿವೇಶವೊಂದು ತಲೆದೋರಿದೆ ಎಂದು ತೀರ್ಮಾನಿಸಬೇಕು. ಬುಧಗ್ರಹದ ಪುರರವಿ ಬಿಂದುವಿನ (perihelion) ಚಲನೆ ಸೌರವ್ಯೂಹದ ಗಣಿತ ರಚನೆಯಲ್ಲಿ ಹಣುಕಿದ ಒಂದು ಅಸಾಮಂಜಸ್ಯ ಅದನ್ನು ತಾರ್ಕಿಕವಾಗಿ ನೆಲೆಗೊಳಿಸಲು ನೂತನ ಸಿದ್ಧಾಂತವೇ ಬರಬೇಕಾಯಿತಷ್ಟೇ.

ಪ್ರತಿಯೊಂದು ಸಿದ್ಧಾಂತವೂ ತಾರ್ಕಿಕವಾಗಿ ಸಮಂಜಸವಾಗಿದೆ. ಸರಿ. ಇದರ ವಿಲೋಮ “ತಾರ್ಕಿಕ ಸಾಮಂಜಸ್ಯವಿರುವ ಪ್ರತಿಯೊಂದು ಸಿದ್ಧಾಂತವೂ (ಎಂದರೆ ವಾಸ್ತವಿಕತೆಗೆ ಬರೆದ ಭಾಷ್ಯ) – ಸಾಧುವಾಗಿರಬೇಕಾಗಿಲ್ಲ. ಕವಿ, ಕಾದಂಬರಿಕಾರರು ರಚಿಸುವ ಲೋಕಗಳಲ್ಲಿಯೂ ತಾರ್ಕಿಕ ಸಾಮಂಜಸ್ಯವಿರಲೇಬೇಕು; ಆದರೆ ಕಾಲ್ಪನಿಕ ಚೌಕಟ್ಟಿನೊಳಗೆ ಸಮಂಜಸವಾಗಿರುವ, ನಮ್ಮ ಬುದ್ಧಿಗೆ ಅದ್ಭುತ ಸಂತೋಷ ಸಂತೃಪ್ತಿ ನೀಡುವ ತರ್ಕಶುದ್ಧ ವಾದಗಳೆಲ್ಲವೂ ಸಿದ್ಧಾಂತಗಳೇ ಎಂದು ಹೇಳಲಾಗುವುದಿಲ್ಲ. ವಸ್ತುವಿಗೆ ಯಾವುದೋ ಗುಣವಿದೆ ನಿಜ. ಆದರೆ ಆ ಗುಣವೇ ಆ ವಸ್ತುವಾಗದು. ಇದರ ಕಾರಣ ಸುಲಭ. ವಾಸ್ತವಿಕತೆಯಲ್ಲಿ ತಾರ್ಕಿಕ ಸಾಮಂಜಸ್ಯವಿದೆ; ಆದ್ದರಿಂದ ಅದರ ಭಾಷ್ಯವಾದ ಸಿದ್ಧಾಂತದಲ್ಲಿ ತಾರ್ಕಿಕ ಸಾಮಂಜಸ್ಯವಿರಲೇಬೇಕು. ಆದರೆ ವಿಲೋಮೋಕ್ತಿ ಒಂದು ಬೌದ್ಧಿಕ ಕ್ರಿಯೆ. ಇಲ್ಲಿ ವಾಸ್ತವಿಕತೆ ಹೀಗೆಯೇ ಇರಬೇಕೆಂಬ ಪ್ರೊಕ್ರಸ್ಟಿಯನ್ ಶಯ್ಯಾವಿಧಿ (Procrustean bed) ನಿಲ್ಲದು.

ತಾರ್ಕಿಕ ಅಸಾಮಂಜಸ್ಯ ತಲೆದೋರಲು ಕೆಲವು ಕಾರಣಗಳು : (i) ಪಾರಿಭಾಷಿಕ ಪದಗಳು. ಆದ್ಯುಕ್ತಿಗಳು, ಆಹಾರ ಭಾವನೆಗಳು ಇವುಗಳ ಮೇಲಿನ ಅಪ್ರಬುದ್ಧ ಹಿಡಿತ. (ii) ಸುಲಭ ಸಾರ್ವತ್ರೀಕರಣದ ಅತ್ಯಾಶೆ. (iii) ಸಾಕಷ್ಟು ಪುರಾವೆಗಳು ಸಂಗ್ರಹ ವಿಶ್ಲೇಷಣೆ ಮಾಡದೇ ಸಿದ್ಧಾಂತದೆಡೆಗೆ ಧಾವಿಸುವ ತವಕ.

() ಸಾಹಿತ್ಯಸೌಂದರ್ಯ

ಅಮೂರ್ತ ಗಣಿತದ ಭಾವನಾಲೋಕದಿಂದ ತೊಡಗಿ ಪ್ರಾಣಿ ವಿಜ್ಞಾನದ ರಕ್ತಮಾಂಸ ಮೂಳೆಗಳ ವಾಸ್ತವಿಕತೆಯವರೆಗೂ ಪ್ರತಿಯೊಂದು ಶಿಷ್ಟ ಮತ್ತು ಇಂಗ್ಲಿಷ್ ಗ್ರಂಥದಲ್ಲಿಯೂ ಎದ್ದು ತೋರುವ ಒಂದು ಗುಣ ಸಾಹಿತ್ಯಸೌಂದರ್ಯ. ಓದುಗನಿಗೆ ವಿಜ್ಞಾನದ ಆ ವಿಭಾಗ ತಿಳಿದಿರಲಿ ತಿಳಿಯದಿರಲಿ ಮಾತಿನ ಓಘ, ಪದಗಳ ಆಯ್ಕೆ, ಜೋಡಣೆ, ಉದಾಹರಣೆಗಳ ಸರಣಿ ಮುಂತಾದವುಗಳಲ್ಲಿರುವ ಕಲಾಪ್ರಜ್ಞೆ ಅವನನ್ನು ಸೆರೆಹಿಡಿಯದಿರದು. ವಾಸ್ತವಿಕತೆ ಸೌಂದರ್ಯಯುಕ್ತವಾದುದು. ಅದನ್ನು ವಿವರಿಸುವ ಭಾಷೆ ಮಾನವಕೃತವಾದದ್ದರಿಂದ ಅದು ಸಹಜವಾಗಿಯೇ ಸೌಂದರ್ಯಯುಕ್ತವಾಗಿರುವುದೆಂದು ಧೈರ್ಯವಾಗಿ ಸಾರುವಂತಿಲ್ಲ. ಕನ್ನಡಿಯ ತಳ ಏರುಪೇರಿನಿಂದ ಕೂಡಿದ್ದರೆ ಸುಂದರ ವದನ ಮಂಗಮೂತಿಯಾಗಿ ಪ್ರತಿಬಿಂಬಿತವಾದರೆ ಆಶ್ಚರ್ಯವಿಲ್ಲವಷ್ಟೆ.

Motion of a projectile ಎಂಬ ಒಂದೇ ವಿಷಯವನ್ನು ಕುರಿತು ಎರಡು ಬೇರೆ ಬೇರೆ ಪುಸ್ತಕಗಳಲ್ಲಿ ಬರೆದಿರುವ ಪೀಠಿಕಾಪರಿಚ್ಛೇದಗಳನ್ನು ಇಲ್ಲಿ ಉದ್ಧರಿಸಿಕೊಟ್ಟಿದೆ:

  1. We now consider the motion of a projectile, that is. The motion of a body which is small enough to be regarded as a particle and which is projected in a direction oblique to the direction of gravity. We shall suppose the body to be projected in vacuum near the surface of the earth or in other words we shall suppose the resistance due to air and the slight variation due to gravity to be negligible.
  2. The science of ballistics is concerned with the motion of projectiles. The theory of the explosion of the charge and the motion of the projectile in the barrdl of the gun belong to interior ballistics which we shall not be concerned. After the projectile leaves the barrel of the gun it moves under the influence of gravity and the resistance of air. The purpose of the exterior ballistics is to predict from given muzzle velocity and angle of elevation of the gun the path or trajectory of the projectile. On account of the complicated nature of the resistance of the air an accurate mathematical prediction of the trajectory is difficult. Some of the difficulties arise from the fact that the projectile is of finite size. To avoid these we regard the projectile as a particle. In the present section we shall make a further and much more drastic simplification : we shall assume that no resistance is offered by the air.

ಮೊದಲಿನದು ರೂಢಿಯಲ್ಲಿ ನಾವು ಹೇಳುವ guide ಭಾಷೆಯಲ್ಲಿದೆ. ವಾಸ್ತವಿಕತೆಯ ಸೌಂದರ್ಯದಿಂದ ಅದನ್ನು ಸರಳೀಕರಿಸಿರುವ ಮನಸ್ಸಿನ ಪುಟಿತದಿಂದ ಈ ಲೇಖಕ ಪ್ರಭಾವಿತನಾದಂತಿಲ್ಲ; ಬಲು, ಒಬ್ಬ ವಿದ್ಯಾರ್ಥಿಗೆ ಪರೀಕ್ಷೆಯನ್ನು ಎದುರಿಸಬೇಕಾಗುವ ಕನಿಷ್ಠ ಭಾವನೆಗಳನ್ನು ನೀರಸವಾಗಿ ನಿರೂಪಿಸುವ ವ್ಯಾಪಾರೀ ಮನೋವೃತ್ತಿ ಇಲ್ಲಿ ಎದ್ದು ಕಾಣುತ್ತಿದೆ. ಎರಡನೆಯದು ಜೀವನದ ಒಂದು ಘಟನೆಯಿಂದ ತೊಡಗಿ ಅದರ ಆದರ್ಶೀಕೃತ ರೂಪದೆಡೆಗೆ ಸಹಜ ಸರಳವಾಗಿ ಏರಿರುವ ಸೂಂದರ ನಿರೂಪಣೆ. ವಾಸ್ತವಿಕತೆಯ ಸೌಂದರ್ಯದಿಂದ ಈ ಲೇಖಕ ಸಂತೋಷಪಟ್ಟಿದ್ದಾನೆ. ಈತನ ಭಾಷಾಸೌಂದರ್ಯ ಮೆಚ್ಚುವಂತಿದೆ.

ಸಾಹಿತ್ಯಸೌಂದರ್ಯವೆಂದರೇನು? ಸಿದ್ಧಾಂತದ ಸಹಜ ಸೌಂದರ್ಯಕ್ಕೆ ಇಟ್ಟ ಒಪ್ಪ ಇದು. ಭಾವನೆಯನ್ನು ನಿಷ್ಕೃಷ್ಟವಾಗಿ ನಿರ್ದುಷ್ಟವಾಗಿ ಪ್ರಕಟಿಸುವುದರ ಜೊತೆಗೆ ಕಲಾತ್ಮಕವಾಗಿ ಹೇಳುವ ವಿಧಾನವಿದು. ಅಂತಿಮವಾಗಿ ಇದು ಗ್ರಂಥಕರ್ತೃವಿನ ಮನೋಧರ್ಮ, ಸಂಸ್ಕಾರ, ಸಾಹಿತ್ಯಪ್ರಭುತ್ವಗಳನ್ನು ಅವಲಂಬಿಸಿದೆಯಾದರೂ ನಾವು ಗಮನಿಸಿರುವ ಕೆಲವು ಯಾಂತ್ರಿಕ ಲಕ್ಷಣಗಳನ್ನು ಇಲ್ಲಿ ನಿರೂಪಿಸಬಹುದು: ಪಾರಿಭಾಷಿಕವಲ್ಲದ ಪದಗಳ ಪ್ರಯೋಗದಲ್ಲಿ ಎಚ್ಚರ ಆಡುಮಾತಿನ ಜಾಯಮಾನವನ್ನು ಗ್ರಹಿಸಿ ಅದರ ಜಾಡನ್ನು ಅನುಸರಿಸಿ ವಾಕ್ಯಗಳ ರಚನೆ; ಸಾಮಾನ್ಯವಾಗಿ ಒಂದು ಭಾವನೆಗೆ ಒಂದು ವಾಕ್ಯ; ವಾಕ್ಯದಿಂದ ವಾಕ್ಯಕ್ಕೆ ಭಾವನೆಯ ಸಹಜ ಅವಿಚ್ಛಿನ್ನ ವಹನ; ಚಿಕ್ಕ ಚೊಕ್ಕ ವಾಕ್ಯಗಳು; ಒಂದೇ ಪದದ ಪುನರಾವರ್ತನೆಯನ್ನು ವಿರಳವಾಗಿಸುವುದು; ವಾಕ್ಯಗಳ ರಚನೆಯಲ್ಲಿ ನೀರಸ ಏಕತಾನತೆ ಬರದಂತೆ ಎಚ್ಚರ; ವಹಿಸುವುದು; ಕಿರಿದರೊಳ್ ಪರಿದರ್ಥಮಂ ಹಿಡಿದಿಡುವ ಪ್ರಜ್ಞೆ.

ಸಾರಾಂಶ

ಇದುವರೆಗಿನ ಪರಿಶೀಲನೆಯ ಸಾರಾಂಶವಿಷ್ಟು; ವಿಜ್ಞಾನಕ್ಕೆ ಒಂದು ಭಾಷೆ ಇದೆ. ವಾಸ್ತವಿಕತೆಗೆ ಬರೆದ ಭಾಷ್ಯವಿದು; ಇದರ ಮೂಲ ಇಟ್ಟಿಗೆಗಳು ಪಾರಿಭಾಷಿಕ ಪದಗಳು, ತಳಹದಿ ಆದ್ಯುಕ್ತಿಗಳು, ಗಾರೆ ಪ್ರತೀಕಗಳು, ಆಲೇಖ್ಯ ಆಧಾರ ಭಾವನೆಗಳು, ಸೌಧಸಿದ್ಧಾಂತ ಇದು ತಾರ್ಕಿಕವಾಗಿ ಸಮಂಜಸವಾಗಿರಬೇಕು ಮತ್ತು ಸಾಹಿತ್ಯ ಸೌಂದರ್ಯಪೂರಿತವಾಗಿರಬೇಕು.

ಇಂಥ ಭಾಷೆ ಎಲ್ಲರಿಗೂ ಅರ್ಥವಾಗಲೇಬೇಕೆಂದಿಲ್ಲ. ಒಬ್ಬ ಗಣಿತದ ವಿದ್ಯಾರ್ಥಿ ಇದ್ದಾನೆ. ವೈದ್ಯವಿಜ್ಞಾನದಲ್ಲಿ ಆತನ ಪ್ರವೇಶ ಕೇವಲ ಹೊರವಲಯದ್ದು. ಅದರ ಒಂದು ಉತ್ಕೃಷ್ಟ ಗ್ರಂಥದ ಒಂದೇ ಒಂದು ವಾಕ್ಯವೂ ಆತನಿಗೆ ಅರ್ಥವಾಗದಿದ್ದರೆ ಕೊರತೆ ಆತನದೇ ವಿನಾ ಗ್ರಂಥದ್ದಲ್ಲ. ಪ್ರತಿಯೊಂದು ವಿಜ್ಞಾನಗ್ರಂಥವೂ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿರಬೇಖು ಎನ್ನುವ ಘನೋದ್ದೇಶವನ್ನು ಪ್ರಾಯೋಗಿಕವಾಗಿಸಲು ಪ್ರಯತ್ನಿಸುವಾಗ ಎದುರಾಗುವ ತೊಡಕನ್ನು ಜಾರ್ಜ್‌ಗಾಮೋ (1904 – 68) One, Two, Three……Infinity ಗ್ರಂಥದ ಮುನ್ನುಡಿಯಲ್ಲಿ ವಿವರಿಸಿದ್ದಾರೆ.

“…..Above all my thanks are due to my young friend Marina Von Neumann who claims that she knows everything better than her famous father does, except, of course, mathematics which she says she knows only equally well. After she had read in manuscript some of the chapters of the book and told me about numerous things in it which she could not understand, I finally decided that this book is not for children as I had originally intended it to be.”

ಇದೇ ವಿಚಾರ ಕುರಿತು “ವಿಜ್ಞಾನ ಪ್ರಪಂಚ” ಪ್ರಕಟವಾದಾಗ ಶಿವರಾಮ ಕಾರಂತರನ್ನು (1902 – 97) ಒಂದು ಪ್ರಶ್ನೆ ಕೇಳಿದೆ (1966). ಅದನ್ನೂ ಅದಕ್ಕೆ ಅವರು ನೀಡಿದ ಉತ್ತರವನ್ನೂ ಇಲ್ಲಿ ಉದ್ಧರಿಸಿದ್ದೇನೆ.

ಪ್ರಶ್ನೆ : “ಕನ್ನಡದಲ್ಲಿ ವೈಜ್ಞಾನಿಕ ಗ್ರಂಥ, ಪ್ರಬಂಧ ರಚನೆಯಾದಾಗ ಸಾಮಾನ್ಯ ಓದುಗರು ಆಡಿಕೊಳ್ಳುವ ಮಾತು ಹೀಗೆ : ಇಂಗ್ಲಿಷ್ ಬಲ್ಲವರಿಗೆ ಇವುಗಳ ಪ್ರಯೋಜನವಿಲ್ಲ. ಮೂಲಗ್ರಂಥಗಳನ್ನೇ ಓದಬಹುದು. ಕನ್ನಡ ಮಾತ್ರ ಬಲ್ಲವರಿಗೆ ಇವುಗಳ ಅರ್ಥವಾಗುವುದು ಕಠಿನ. ನಿಮ್ಮ ಅನುಭವದ ವಿವರ ತಿಳಿಸುವಿರಾ?”

ಉತ್ತರ : “ಇಂಗ್ಲಿಷಿನಲ್ಲಿ ವೈಜ್ಞಾನಿಕ ವಿವರ ಓದಿಕೊಳ್ಳುವವನಿಗೆ ಬೇಕಷ್ಟು ಗ್ರಂಥಗಳಿವೆ. ಅವರಿಗಾಗಿ ನಾವು ಈ ಕೆಲಸ ಮಾಡುವುದಿಲ್ಲ. ಬರಿದೆ ಕನ್ನಡ ಬಲ್ಲವರಿಗೆ ಅರ್ಥವಾಗಲು ಕಠಿನವೆಂದೇ? ವಿಷಯ ಪ್ರವೇಶ ಮಾಡುವ ಕಾಲದಲ್ಲಿ ಸಾಮಾನ್ಯ ಇಂಗ್ಲಿಷ್ ಬಲ್ಲವರಿಗೆ ಸೈನ್ಸ್ ಬುಕ್ ಅರ್ಥವಾಗುತ್ತದೆಯೇನು? ಅದು ಕತೆಯಂತಲ್ಲ. ಇಂಗ್ಲಿಷ್ ಬಲ್ಲವರೂ ಎಷ್ಟು ಸೈನ್ಸ್ ಓದುತ್ತಾರೆ? ಅದು ಬೆಳೆಯಿಸಬೇಕಾದ ಅಭಿರುಚಿ.”

ವಿಜ್ಞಾನದ ಭಾಷೆ ಬಲು ಬಿಗಿ – ಘನವಸ್ತುವಿನಲ್ಲಿ ಪರಮಾಣುಗಳಿರುವಂತೆ ಇಲ್ಲಿ ಶಬ್ದಗಳು ಸಂತುಲಿತವಾಗಿರುವುದು. ಈ ಭಾಷೆಯಲ್ಲಿ ಉತ್ಪ್ರೇಕ್ಷೆ ಉದ್ಗಾರಗಳಿಗೆ ಅವಕಾಶ ಕಡಿಮೆ. ನಿಸರ್ಗದಂತೆ ಇದೂ ಕಡುಕೃಪಣ. ಒಂದು ಹೆಚ್ಚಿನ ಪದ ಅಥವಾ ಪ್ರತ್ಯಯದ ಪ್ರಯೋಗವನ್ನು ಇದು ಸಹಿಸದು. ಈ ಕಾರಣಗಳಿಂದ ಪ್ರತೀಕರೂಪದೆಡೆಗೆ ವಿಜ್ಞಾನಿಗಳ ಒಲವು ಹೆಚ್ಚು ಅದು ವಿಜ್ಞಾನಭಾಷೆಯ ಆದರ್ಶ.

ಕನ್ನಡದಲ್ಲಿ ವಿಜ್ಞಾನಭಾಷೆ

ಇದುವರೆಗಿನ ತರ್ಕಸರಣಿ ಮತ್ತು ತೀರ್ಮಾನಗಳನ್ನು ಇಂಗ್ಲಿಷ್ ಭಾಷೆಯಲ್ಲಿರುವ ಶಿಷ್ಟಗ್ರಂಥಗಳ ಅವಲೋಕನದಿಂದ ಮಾಡಿದ್ದೇವೆ. ಆದರೆ ಇವು ಸಾಮಾನ್ಯವಾಗಿ ಇತರ ಭಾಷೆಗಳಿಗೂ ಅನ್ವಯಿಸುವುವು. ಕಾರಣ, ವಿಜ್ಞಾನವೆಂಬ ಮೂಲಪ್ರೇರಕ ಶಕ್ತಿ ಭಾಷಾತೀತವಾದದ್ದು.

ಕನ್ನಡದಲ್ಲಿ ವಿಜ್ಞಾನದ ಭಾಷೆ ಹೇಗೆ ಬೆಳೆದು ಬಂದಿದೆ ಎಂಬ ಪರಿಶೀಲನೆಯನ್ನು ಈ ಕೆಳಗಿನ ಆದ್ಯುಕ್ತಿಗಳನ್ನು ಆಧರಿಸಿ ಮಾಡುತ್ತೇವೆ : (i) ಕನ್ನಡಭಾಷೆ ವಿಜ್ಞಾನ ಭಾಷೆಯಾಗಿ ಬೆಳೆದಿಲ್ಲ. (ii) ಕನ್ನಡಭಾಷೆ ವಿಜ್ಞಾನಭಾಷೆಯಾಗಿ ಬೆಳೆಯುವುದು ಸಾಧ್ಯವಿದೆ.

ಕನ್ನಡಭಾಷೆ ವಿಜ್ಞಾನಭಾಷೆಯಾಗಿ ಏಕೆ ಬೆಳೆಯಲಿಲ್ಲ? ಈ ಚರ್ಚೆಯನ್ನು ಕೇವಲ ವೈಜ್ಞಾನಿಕ ಕ್ಷೇತ್ರಕ್ಕೆ ಸೀಮತಿಗೊಳಿಸುವುದು ಯುಕ್ತ. ಅಲ್ಲದೆ ಇದರ ಸವಿವರ ವಿಶ್ಲೇಷಣೆ ಪ್ರಸಕ್ತ ಲೇಖನದ ವ್ಯಾಪ್ತಿಗೆ ಮೀರಿದ್ದು, ಪ್ರಶ್ನೆಗೆ ಸುಲಭ ಮತ್ತು ಸರಳ ಉತ್ತರ – ವಿಜ್ಞಾನದ ಸಂವೇದನೆ ಕನ್ನಡಭಾಷೆಯಲ್ಲಿ ಆಗಲಿಲ್ಲ. ಆದ್ದರಿಂದ ಪದಗಳು ಇಲ್ಲಿ ಟಂಕಿಸಲ್ಪಡಲಿಲ್ಲ. ಸಂಶೋಧಕರು, ಬೋಧಕರು, ಲೇಖಕರು ಮೊದಲಾದವರು ವಿಜ್ಞಾನವನ್ನು ಅರ್ಥವಿಸುವುದು. ಬರೆಯುವುದು ಇಂಗ್ಲಿಷಿನಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲು ಅಥವಾ ಹೇಳಲು ಹೊರಟಾಗ ಅವರ ತೊಳಲಾಟ ಅಪಪ್ರಯೋಗಗಳನ್ನು ಲಕ್ಷಿಸಿದರೆ “ಭಾವನೆ ಸ್ಪಷ್ಟವಾಗಿದ್ದರೆ ಭಾಷೆ ಯಾವುದಾದರೇನಂತೆ?” ಎಂಬ ಭಾಷಾ ಸಮಸ್ಯೆಯ ಸುಲಭ ಪರಿಹಾರ ಅಷ್ಟೊಂದು ಸಮಂಜಸವೆನಿಸದು. ಎಂದರೇನಾಯಿತು? ಕನ್ನಡದಲ್ಲಿ ಯೋಚಿಸದೆ ಭಾಷೆ ಬೆಳೆಯದು, ಭಾಷೆ ಬೆಲೆಯದೆ ಯೋಚನೆ ಸಾಗದು; ಭಾಷೆಯ ಸಾಮರ್ಥ್ಯ ಅದಕ್ಕೆ ನಾವು ಕೊಟ್ಟರುಂಟು. ಆದ್ದರಿಂದ ಕನ್ನಡವು ವಿಜ್ಞಾನ ಭಾಷೆಯಾಗಿ ಬೆಳೆಯಬೇಕಾದರೆ ವಿಜ್ಞಾನರಂಗದಲ್ಲಿರುವ ಎಲ್ಲರೂ “ವಿಶೇಷವಾಗಿ ಸಂಶೋಧಕರು, ಲೇಖಕರು, ಬೋಧಕರು – ಮೊದಲು ಕನ್ನಡದಲ್ಲಿ ಯೋಚನೆ ಮಾಡಲು ತೊಡಗಬೇಕು; ಹೀಗೆ ಪುಟಪಾಕಗೊಂಡ ಮೆದು ಭಾಷೆಯನ್ನು ಬರವಣಿಗೆಯ ಸಂಸ್ಕಾರಕ್ಕೆ ಒಳಪಡಿಸಬೇಕು. ದೀರ್ಘ ಸಹನಶೀಲ ಪರಿಶ್ರಮ ಇಲ್ಲಿ ಅತ್ಯಾವಶ್ಯಕ. ಕನ್ನಡದಲ್ಲಿ ಯೋಚನೆ ಎಂಬುದೊಂದು ಬಲು ಸೂಕ್ಷ್ಮ ಮಾನಸಿಕ ಕ್ರಿಯೆ. ಇಂಗ್ಲಿಷಿನಲ್ಲಿ ಓದು ಗ್ರಹಿಸಿದುದನ್ನು ಆ ಕ್ಷಣವೇ ಮಾನಸಿಕವಾಗಿ ಭಾಷಾಂತರಿಸಿ ಕನ್ನಡದಲ್ಲಿ ಸೆರೆಹಿಡಿದಿಟ್ಟುಕೊಳ್ಳುವ ಒಂದು ವಿಧಿ… ಹೀಗೆ ಲಭಿಸಿದ ಕನ್ನಡ ಭಾವನೆಗೆ ಕನ್ನಡ ಭಾಷಾರೂಪ ನೀಡಿ ಪ್ರಕಟಿಸುವಾಗ ಭಾಷೆ ಭಯಂಕರವಾಗಿ ಕುಂಟುತ್ತದೆ, ಕಿರಲುತ್ತದೆ. ಇದಕ್ಕಿರುವ ಪರಿಹಾರ ಕನ್ನಡ ಭಾಷೆಯ ಶಾಸ್ತ್ರೀಯ ಅಭ್ಯಾಸ, ಈಗ ಮೂವತ್ತು ವರ್ಷಗಳ ಹಿಂದೆ “ಕನ್ನಡ ಭಾಷೆ ಕಲಿಯುತ್ತಿದ್ದೇನೆ” ಎಂದರೆ ಜನ ನಗುತ್ತಿದ್ದರು. ಇದರಲ್ಲಿ ಕಲಿಯುವುದೇನಿದೆ, ನಮ್ಮ ಮಾತಲ್ಲವೇ ಇದು ಎಂಬುದು (ತಿರಸ್ಕಾರದೊಂದಿಗೆ) ಹಿನ್ನೆಲೆಯಲ್ಲಿ ಅಡಗಿದ್ದ ಭಾವ. ಮಾತು ನಮ್ಮದೇ ಆದರೂ ಅದನ್ನು ಪ್ರಯತ್ನಪೂರ್ವಕ ಕಲಿಯದಿದ್ದರೆ ಅದರ ಮೇಲೆ ನಮಗಿರುವ ಹಿಡಿತ ದೈನಂದಿನ ವ್ಯವಹಾರ ಮಟ್ಟದಿಂದ ಮೇಲೇರದು. ಇಂಥ ಅಭ್ಯಾಸದ ಜೊತೆಗೆ ಆಧುನಿಕ ಕನ್ನಡ ಸಾಹಿತ್ಯದ ವಾಚನಾಭಿರುಚಿಯೂ ಬಲು ಅಗತ್ಯ. ಇಂಗ್ಲಿಷ್ ಭಾಷೆಯಲ್ಲಿರುವ ಒಂದು ಭೌತವಿಜ್ಞಾನ ಗ್ರಂಥದಲ್ಲಿ LIGHT ಪ್ರಕರಣವನ್ನು ಪ್ರಾರಂಭಿಸುವ ಬಗೆ ನೋಡಿ: “Let there be light” said Newton and there was light!

ಕನ್ನಡದ ಇಂಥ ಒಂದು ಗ್ರಂಥದ “ಬೆಳಕು” ಪ್ರಕರಣದ ಮೊದಲ ವಾಕ್ಯಗಳು “ಬೆಳಕು ಎಂದರೇನು? ಅದರ ಸ್ವಭಾವವೇನು?” ಎಂದಿವೆ. ನಮ್ಮ ಕಾವ್ಯಗಳು ಬರಡೇ? “ಬೆಳ್ಳನೆ ಬೆಳಗಾಯಿತು” ಎಂಬ ಕವಿವಾಣಿಗೆ ಇವರು ಕಿವುಡಾಗಿದ್ದರೇ? ವಿಜ್ಞಾನಕ್ಷೇತ್ರದವನಿಗೆ ಸಾಹಿತ್ಯ ಅನಾವಶ್ಯಕ ಎಂಬ ಅಭಿಪ್ರಾಯ ತಪ್ಪು ಜೀವನವೃಕ್ಷ ಜನಜೀವನದ ಸಾರವನ್ನು ಸಾಹಿತ್ಯದ ಮೂಲಕ ಹೀರಿ ವಿಜ್ಞಾನಫಲ ನೀಡುತ್ತದೆ. ಇಲ್ಲಿ ಸಾಹಿತ್ಯದ ಅಲಕ್ಷ್ಯ ಎಷ್ಟು ಅಪಾಯಕಾರಿ ಎಂಬುದು ಸ್ಪಷ್ಟ.

ಮೇಲೆ ಹೇಳಿದ ಜಾಡನ್ನು ಅನುಸರಿಸಿ ಹೊಸದಾರಿ ತುಳಿದವರು ಇಂದು (ಆರ್.ಎಲ್.ನರಸಿಂಹಯ್ಯನವರ ತಲೆಮಾರಿನ ಅನಂತರದವರು) ಬೆರಳೆಣಿಕೆಯ ಸಂಖ್ಯೆ ಮೀರಿರುವಂತೆ ಕಾಣುವುದಿಲ್ಲ. ಆದರೆ ಅವರ ದಾರಿಯಲ್ಲಿ ಹಲವಾರು ಮಂದಿ ಯುವ ಲೇಖಕರು ನಡೆಯುತ್ತಿರುವುದೊಂದು ಶುಭ ಲಕ್ಷಣ. ಈಗ (1970ರ ದಶಕ) ಪ್ರಕಟವಾಗಿರುವ ಗ್ರಂಥಗಳು, ಲೇಖನಗಳು ಮುಂತಾದ ವಿಜ್ಞಾನದ ವಿವಿಧ ಅಭಿವ್ಯಕ್ತಿಗಳ ಪರಿಶೀಲನೆಯಿಂದ ಕನ್ನಡವು ವಿಜ್ಞಾನದ ಭಾಷೆಯಾಗಿ ಬೆಳೆಯಬಲ್ಲುದು ಎಂಬ ನಮ್ಮ ಎರಡನೆಯ ಆದ್ಯುಕ್ತಿಗೆ ಸಾಕಷ್ಟು ಪುರಾವೆ ದೊರೆತಿದೆ. ನಮ್ಮ ಭಾಷೆಯ ಗ್ರಂಥಕರ್ತೃಗಳಿಗೆ (ವಿಜ್ಞಾನಕ್ಷೇತ್ರಕ್ಕೆ ಕನ್ನಡ ತಡವಾಗಿ ಪ್ರವೇಶಿಸಿದುದರಿಂದ) ಕೆಲವು ಸಾಧಕ ಬಾಧಕಗಳಿವೆ.

ಸಾಧಕಗಳು : (i) ವಿಜ್ಞಾನದ ಪರಿಕಲ್ಪನೆಗಳು ಇತರ ಭಾಷಾಮಾಧ್ಯಮದ ಮೂಲಕ ಸ್ಪಷ್ಟವಾಗಿ ತಿಳಿದಿವೆ. ಆದ್ದರಿಂದ ಅವನ್ನು ಕ್ರಮಬದ್ಧವಾಗಿ ಕನ್ನಡದಲ್ಲಿ ನಿರೂಪಿಸಬಹುದು. ಇಂಗ್ಲಿಷ್ ಭಾಷೆ ವಿಜ್ಞಾನದೊಂದಿಗೆ ಬೆಳೆದು ಬಂದುದರಿಂದ ಈ ಸೌಕರ್ಯ ಅದಕ್ಕೆ ಲಭಿಸಲಿಲ್ಲ. ಆದ್ದರಿಂದ ಆ ಭಾಷೆಯ ಏರುತಗ್ಗುಗಳನ್ನೂ ಅಂಕುಡೊಂಕುಗಳನ್ನೂ ಕನ್ನಡದಲ್ಲಿ ನಿವಾರಿಸಿಕೊಳ್ಳಬಹುದು. (ii) ಕನ್ನಡಸಾಹಿತ್ಯ ಪ್ರಬುದ್ಧವಾಗಿ ಬೆಳೆದಿದೆ. ಆದ್ದರಿಂದ ವಿಪುಲ ಪದಸಂಪತ್ತು, ಅರ್ಥವೈಶಿಷ್ಟ, ಪ್ರಯೋಗ ಲಾಲಿತ್ಯ ಇವೆಲ್ಲ ಸಹಜವಾಗಿ ಲಭಿಸುತ್ತವೆ.

ಬಾಧಕಗಳು : (i) ಪರಿಕಲ್ಪನೆ ಮೊದಲು ಅಭಿವ್ಯಕ್ತವಾದ ಮೂಲಭಾಷೆಯ ತೀವ್ರತೆ ಬೇರೆ ಯಾವ ಭಾಷೆಗೂ ಒದಗದು. (ii) ಪಾರಿಭಾಷಿಕ ಪದಗಳ ನಿರ್ಮಾಣ ಮತ್ತು ಚಲಾವಣೆಗಳಲ್ಲಿ ಗೊಂದಲ. (iii) ಕನ್ನಡದಲ್ಲಿ ಇಂಗ್ಲಿಷ್‌ನ ಮೂರಿ (ವಾಸನೆ).

ನಮ್ಮ ಹೆಸರಾಂತ ಲೇಖಕರು ಇವನ್ನು ಅರಿತು ಎಚ್ಚರದಿಂದ ಮಂದುವರಿದಿದ್ದಾರೆ. ಆದರೂ ಪಾರಿಭಾಷಿಕ ಪದಗಳ ಮತ್ತು ಪಾರಿಭಾಷಿಕ ಪದಪುಂಜಗಳ ಪ್ರಯೋಗ ಕಂಡು ಬಂದಿದೆ. ಒಂದು, ಪ್ರತಿಯೊಂದು ಪಾರಿಭಾಷಿಕ ಪದಕ್ಕೂ ಇಂಗ್ಲಿಷ್ ರೂಪವನ್ನು ಅಲ್ಲಲ್ಲೇ ಮತ್ತು ಗ್ರಂಥದ ಕೊನೆಯಲ್ಲಿ (ಆಕಾರಾದಿಯಾಗಿ) ಬರೆಯುವುದು. ಎರಡು, ಆಯಾ ಶಾಸ್ತ್ರಗಳಲ್ಲಿ ಪರಿಣತರಿಂದ ಸಿದ್ಧವಾಗಿರುವ ಮತ್ತು ಆಗುತ್ತಿರುವ ಶಬ್ದಕೋಶಗಳು. ಒಂದು ಇಂಗ್ಲಿಷ್ ಪಾರಿಭಾಷಿಕ ಪದಕ್ಕೆ ಒಂದು ಅಚ್ಚಗನ್ನಡ ಶಬ್ದ ಬೇಕೇಬೇಕು ಎಂಬ ಅಂದಾಭಿಮಾನ ಈ ನಾಡಿನಲ್ಲಿಲ್ಲದಿರುವುದೊಂದು ಭಾಗ್ಯವೇ. ನಮ್ಮ ಧೋರಣೆ ಹೇಗಿದೆ ಎಂಬುದನ್ನು ಕೆ.ವಿ.ಪುಟಟಪ್ಪನವರು 1963ರಷ್ಟು ಹಿಂದೆಯೇ ಸ್ಪಷ್ಟೀಕರಿಸಿದ್ದಾರೆ; “ವೈಜ್ಞಾನಿಕ ಅಥವಾ ಪಾರಿಭಾಷಿಕ ವಿಷಯಗಳಿಗೆ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸುವ ಸಂಕಟಕ್ಕೆ ಗುರಿಯಾಗಬೇಕಾಗಿಲ್ಲ. ಅಂತರರಾಷ್ಟ್ರೀಯ ಶಬ್ದಗಳನ್ನೇ ಇದ್ದಕ್ಕಿದ್ದ ಹಾಗೆಯೇ ಬಳಸಿಕೊಳ್ಳಬಹುದು. ಅವಶ್ಯಕತೆ ಕಂಡು ಬಂದರೆ ಮಾತ್ರ ವಿವರಣಾತ್ಮಕವಾಗಿ ಮಾತ್ರ ದೇಶಭಾಷೆಯ ಶಬ್ದಗಳನ್ನು ಉಪಯೋಗಿಸಬಹುದು. ಪಾರಿಭಾಷಿಕ ಶಬ್ದಗಳು ವಾಸ್ತವವಾಗಿ ಅಂಕಿತನಾಮಗಳು ತಾನೇ!”

ಶಿವರಾಮ ಕಾರಂತರನ್ನು “ಕನ್ನಡ ಭಾಷೆಯಲ್ಲಿ ಆಧುನಿಕ ವೈಜ್ಞಾನಿಕ ಗ್ರಂಥಗಳನ್ನು ಬರೆಯಲು ಇರುವ ದೊಡ್ಡ ಕೊರತೆ ಸಾಕಷ್ಟು ಪಾರಿಭಾಷಿಕ ಪದಗಳ ಅಭಾವ. ಈ ಕೊರತೆಯನ್ನು ನೀವು ಹೇಗೆ ಬಗೆಹರಿಸಿದ್ದೀರಿ?” ಎಂದು ಪ್ರಶ್ನಿಸಿದಾಗ (1996) ಅವರು ನೀಡಿದ ಉತ್ತರ, “ಪಾರಿಭಾಷಿಕ ಪದಗಳ ಕೊರತೆ ; ಅದು ತೀರ ಸಣ್ಣ ವಿಷಯ. ಮೊದಲಿನ ಕೊರತೆ ಅಭಿರುಚಿ ಅಭಿರುಚಿಯಿಂದ ಓದಿದವನಿಗೆ ಹೇಳಬೇಕು ಇತರರಿಗೆ ಅನಿಸುತ್ತದೆ. ಅನಿಸಿದಾಗ ಯುಕ್ತ ಕನ್ನಡ ಶಬ್ದಗಳ ಆಯ್ಕೆ ವಿಷಯ ತಿಳಿದವನಿಗೆ ಅದು ಅಂಥ ಕಷ್ಟವಲ್ಲ. ಅನೇಕ ಸೈನ್ಸ್ ಟರರ್ಮ್ಸನ್ನು ಹಾಗೆಯೇ ಇರಿಸಬಹುದು. ಸುಲಭದಲ್ಲಿ ತಿಳಿಸುವ ಸೈಂಟಿಫಿಕ್ ಫಂಕ್ಷನ್ಸ್‌ನ್ನು ಅನುವಾದಿಸಬಹುದು. ಅಂಥ ಕೆಲಸಕ್ಕೆ ಕ್ಲಿಷ್ಟವಲ್ಲದ ಕನ್ನಡ ಸಂಸ್ಕೃತ ಪದಗಳು ನೆರವಾಗುತ್ತವೆ. ಕೆಲವೊಮ್ಮೆ ಹೊಳೆಯದಿರಬಹುದು. ತುಸು ಇರಿಸಿಕೊಂಡವರು ಅಂಥ ನಾಲ್ಕಾರು ಪದಗಳನ್ನು ಒಂದೇ ವಾಕ್ಯದಲ್ಲಿ ಬಳಸಿ ಯಾವುದೂ ತಿಳಿಯದಂತೆ ಮಾಡುವ ಭಯ ಹೆಚ್ಚು”

ಕನ್ನಡದಲ್ಲಿ ಬರೆಯುವಾಗ ಎದುರಾಗುವ ಇತರ ಕೆಲವು ಸಮಸ್ಯೆಗಳನ್ನು ಕೇಂದ್ರೀಕರಿಸಲು ಕೆಳಗಿನ ಉದಾಹರಣೆಗಳನ್ನು ಬರೆದಿದೆ :

(i) ಆಲದ ಮರವು ಅಸಂಖ್ಯಾತ ಬೀಳಲುಗಳನ್ನು ಹೊಂದಿದ್ದು ಅದು ಎಲ್ಲ ಕಡೆಗಳಲ್ಲಿಯೂ ಬೆಳೆಯುತ್ತದೆ.

ಟೀಕೆ : “ಆಲದ ಮರವು ಅಸಂಖ್ಯಾತ ಬೀಳಲುಗಳನ್ನು ಹೊಂದಿ”ರುವುದಕ್ಕೂ “ಅದು ಎಲ್ಲ ಕಡೆಗಳಲ್ಲಿಯೂ ಬೆಳೆಯು”ವುದಕ್ಕೂ ಭಾವನಾಸಂಬಂಧವಿಲ್ಲ. ಅಲ್ಲದೆ ‘ಹೊಂದಿದೆ’ ಪ್ರಯೋಗ ಕನ್ನಡಕ್ಕೆ ಒಪ್ಪುವುದಿಲ್ಲ.

ಭಾವನಾ ಸಂಬಂಧವಿಲ್ಲದ ವಾಕ್ಯಗಳನ್ನು ಸಂಯೋಜಿಸಬಾರದು.

(ii) ಹತ್ತಿಸಿದ ಮೇಣದ ಬತ್ತಿಯಿಂದ ಕೂಡಿದ ನೀರಿನ ತಟ್ಟೆಯ ಮೇಲೆ ಒಂದು ಭರಣಿಯನ್ನು ಮುಚ್ಚಲಾಗಿರಲಿ.

ಟೀಕೆ : ಇಂಗ್ಲಿಷಿನಿಂದ ಹಸಿ ಹಸಿ ಭಾಷಾಂತರವಿದು. ಒಂದು ಇಂಗ್ಲಿಷ್ ವಾಕ್ಯಕ್ಕೆ ಒಂದು ಕನ್ನಡ ವಾಕ್ಯ ಎಂಬ ನೀತಿ ಸಲ್ಲದು. ಕನ್ನಡದ ಜಾಯಮಾನವನ್ನು ಮರೆಯಬಾರದು.

(iii) ಕುದಿಯುತ್ತಿರುವ ಲಾವಾರಸವನ್ನು ಹೊರಗೆ ಉಗುಳುವ ಪರ್ವತವನ್ನು ಅಗ್ನಿಪರ್ವತವೆಂದು ಕರೆಯುತ್ತೇವೆ. ಈ ಲಾವಾರಸವನ್ನು ಉಗುಳುವ ಅಗ್ನಿಪರ್ವತಕ್ಕೆ ಜ್ವಾಲಾಮುಖಿಯೆಂದೂ ಹೆಸರಿದೆ. ಇಂಥ ಜ್ವಾಲಾಮುಖಿಗಳ ವಿವರಣೆ ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಟೀಕೆ : ಪ್ರತಿ ವಾಕ್ಯವೂ ಹಿಂದಿನ ವಾಕ್ಯದ ಕೆಲವು ಪದಗಳನ್ನು ಪುನಃ ಉಪಯೋಗಿಸಿ ಮುಂದುವರಿಯುತ್ತದೆ. ಪುನರಾವರ್ತಿತ ಮುನ್ನಡ ಬರಕೂಡದು.

(iv) ಸಂಖ್ಯೆಗಳನ್ನು ವಿಶಾಲವಾಗಿ ವಾಸ್ತವ ಮತ್ತು ಮಿಶ್ರ ಸಂಖ್ಯೆಗಳೆಂದು ವಿಭಾಗಿಸಿದೆ. ಒಂದು ವರ್ಗ ಸಮೀಕರಣವನ್ನು ಪರಿಶೀಲಿಸಿ ಅದರ ಮೂಲಗಳು ವಾಸ್ತವಾಗಿರಬಹುದು. ಊಹ್ಯವಾಗಿರಬಹುದು.

ಟೀಕೆ : ಒಂದನೆಯ ವಾಕ್ಯದಿಂದ ಎರಡನೆಯ ವಾಕ್ಯಕ್ಕೆ ಭಾವನೆ ನೆಗೆದಿರುವುದು ಹನುಮಂತನಿಗೂ ಸವಾಲೆಂಬಂತಿದೆ. ವಾಕ್ಯಶ್ರೇಣಿಯಲ್ಲಿ ಭಾವನಾವಹನ ತುಂಡಾಗಕೂಡದು.

(v) ಅಡಿಕೆ ಮರದ ಕೃಷಿಯನ್ನು ಕುರಿತು ಬೇಕಾದಷ್ಟು ಹೇಳಬಹುದು.

ಟೀಕೆ : ಹೇಳುವುದನ್ನು ಪೀಠಿಕೆಯಿಲ್ಲದೇ ಸೀದಾ ಹೇಳಬಹುದಲ್ಲ! ನೇರ ವಿಷಯ ಪ್ರವೇಶಕ್ಕಿಂತ ಬೇರೆ ದಾರಿಯಿಲ್ಲ.

ಪರಿಸಮಾಪ್ತಿ

ಕನ್ನಡದಲ್ಲಿ ವಿಜ್ಞಾನಭಾಷೆಯನ್ನು ಜ್ಞಾನ ಸಂಶೋಧನೆ ಮತ್ತು ಪ್ರಸಾರ ಕಾರ್ಯಗಳ ನೇತಾರರಾಗಿರುವ ತಜ್ಞರು ಎಚ್ಚರದಿಂದ ಬೆಳೆಸಬೇಕು. ಇಂಥ ಕಾರ್ಯದಲ್ಲಿ ನೆರವೇರಲೇಬೇಕಾದ ಅನಿವಾರ್ಯ ವಿಧಿಗಳು :

(i) ಕನ್ನಡದಲ್ಲಿ ಚಿಂತನೆ ಚರ್ಚೆ ಬೋಧನೆ

(ii) ಕನ್ನಡ ಸಾಹಿತ್ಯದ ವಿದ್ವತ್ಪೂರ್ಣ ಅಭ್ಯಾಸ

(iii) ವಿಜ್ಞಾನಪ್ರಸಾರಕ್ಕಾಗಿ ವಿವಿಧ ಪ್ರಕಾರಗಳ (ಜನಪ್ರಿಯ ಲೇಖನಗಳು, ಗ್ರಂಥಗಳು ಪಠ್ಯಪುಸ್ತಕಗಳು, ಆಕರ ಗ್ರಂಥಗಳು, ಅನುವಾದಗಳು ಇತ್ಯಾದಿ) ರಚನೆ.

ಇಂದು ಮುಂಚೂಣಿಯಲ್ಲಿರುವವರ ಹೊಣೆಗಾರಿಕೆ ದೊಡ್ಡದು. ಅವರಿಗೆ ಇಂಗ್ಲಿಷ್ ಭಾಷೆಗೆ ನೇರ ಪ್ರವೇಶ ಉಂಟು. ಎಂದರೆ ವಿಜ್ಞಾನದ ವಿಕಾಸವನ್ನು ಅವರು ಪ್ರತ್ಯಕ್ಷ ಅನುಭವಿಸಬಲ್ಲರು. ಮುಂದಿನ ತಲೆಮಾರಿನವರಿಗೆ ಇಂಥ ಸೌಕರ್ಯ ಉಳಿದಿರುವುದು ಸಂಶಯ. ಅಂಥವರಿಗೆ ವಿಜ್ಞಾನಕ್ಕೆ ಕನ್ನಡವೇ ರಹದಾರಿ. ಆ ದಾರಿ ತೋರುವ ಒಂದು ಪ್ರಾಮಾಣಿಕ ಪ್ರಯತ್ನ ಈ ಕಾರ್ಯಶಿಬಿರದ್ದಾಗಲಿ ಎಂದು ಹಾರೈಸುತ್ತೇನೆ.

(1978)