ವಿಜ್ಞಾನ

ವ್ಯವಸ್ಥೆಗೊಳಿಸಿದ ಅನುಭವವನ್ನು ಸಾಮಾನ್ಯವಾಗಿ ವಿಜ್ಞಾನವೆಂದು ಹೇಳುವುದಿದೆ. ಮಳೆ ಸುರಿಯುವಂಥ ಒಂದು ಚಿರಪರಿಚಿತ ಘಟನೆ. ಅದರಿಂದ ಲಭಿಸುವ ಅನುಭವವನ್ನು ಪರಿಶೀಲಿಸಿ ಮೋಡಗಳ ರಚನೆ, ಚಲನೆ, ಮಳೆ ಸುರಿಯಲು ನೈಸರ್ಗಿಕ ಕಾರಣಗಳು ಮುಂತಾದ ವಿವರಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ಅಳವಡಿಸಿ ಕಾರ್ಯ – ಕಾರಣ ಸಂಬಂಧ ಅರಿತರೆ ಅದು ವ್ಯವಸ್ಥಿತ ಅನುಭವ ಎನಿಸುವುದು. ಆದ್ದರಿಂದ ಅಂಥ ತಿಳಿವಳಿಕೆ ವಿಜ್ಞಾನ. ವಿಜ್ಞಾನ ಪದದ ಅತಿ ಸಮೀಪ ವ್ಯಾಖ್ಯೆ ನೀಡಲು ಸಾಧ್ಯವಿಲ್ಲ. ಕಾರಣ, ವಿಜ್ಞಾನದ ಉಗಮ ಪ್ರಗತಿ ಮತ್ತು ಪ್ರಕೃತ ಪರಿಸ್ಥಿತಿ ಮಾನವನ ವಿಕಾಸದೊಡನೆ ಬೆರೆತುಹೋಗಿವೆ. ಮಾನವ ಎಂದರೆ ಹೀಗೆ ಎಂದು ವ್ಯಾಖ್ಯಿಸಿ ಆತನ ರಚನೆ ಆಗಲಿಲ್ಲ. ಇದೇ ವಿಜ್ಞಾನದ ಅವಸ್ಥೆ ಕೂಡ.

ಮಾನವಜೀವನದಲ್ಲಿ ಲಭಿಸುವ ಅನುಭವಗಳನ್ನು ಅಂಸಖ್ಯಾತ ಆಕಾಶವಿದ್ಯಮಾನಗಳು, ಸಸ್ಯಪ್ರಪಂಚ, ಪ್ರಾಣಿಜಗತ್ತು, ಭೌತಬಲಗಳು, ರಾಸಾಯನಿಕ ಕ್ರಿಯೆಗಳು, ಆರೋಗ್ಯಪಾಲನೆ, ಸಾಮಾಜಿಕ ವ್ಯವಹಾರ – ಒಂದೇ ಎರಡೇ? ಇಲ್ಲೆಲ್ಲ ಅನುಭವವನ್ನು ವ್ಯವಸ್ಥೆಗೊಳಿಸಿ ಅಭ್ಯಸಿಸಿದಂತೆ ಹಲವಾರು ಚಿಂತನವಿಧಾನಗಳು ಸಹಜವಾಗಿ ಮೈದಳೆಯುತ್ತವೆ. ಚಂದ್ರನ ಕಲೆಗಳನ್ನು ತಿಳಿಯುವ ರೀತಿ, ನೀರಿನ ರಚನೆಯನ್ನು ಅರಿಯುವ ವಿಧಾನದಿಂದ ಬೇರೆ ಆಯಿತು; ಇನ್ನು ಸಸ್ಯಗಳ ಬೆಳವಣಿಗೆ ಅಭ್ಯಸಿಸುವ ಕ್ರಮ ಇವೆರಡರಿಂದ ಭಿನ್ನವೇ ಹೀಗೆ ಅನುಭವದ ವೈವಿಧ್ಯ ಅವಲಂಬಿಸಿ ಮತ್ತು ಅನುಸರಿಸಿ ವಿಜ್ಞಾನದ ವಿವಿಧ ವಿಭಾಗಗಳು ಜನಿಸಿ ಪ್ರವರ್ಧಿಸಿದುವು. ಇಂಥವು ಪರಸ್ಪರ ಅವಿಭಾಜ್ಯವೆಂದಾಗಲಿ, ಅಸಂಬಂಧಿತವೆಂದಾಗಲಿ ಸರ್ವತಂತ್ರಸ್ವತಂತ್ರಗಳೆಂದಾಗಲಿ ಭಾವಿಸಬೇಕಾಗಿಲ್ಲ. ಇವು ಪರಸ್ಪರ ಪೂರಕ ಪೋಷಕಗಳಾಗಿ ಮೊತ್ತದಲ್ಲಿ ಒಂದು ಅಖಂಡ ಸಂಗತ ಚಿತ್ರವನ್ನು ಪ್ರದರ್ಶಿಸುತ್ತವೆ.

ವಿಜ್ಞಾನ ಪದದೊಳಗೆ ಅಡಕವಾಗಿರುವ ವಿವಿಧ ವಿಷಯಗಳನ್ನು ತಜ್ಞರು ಹಲವಾರು ವಿಧಗಳಲ್ಲಿ ವಿಂಗಡಿಸಿ ಆ ವಿಭಾಗಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. ಇಂಥ ಒಂದು ವಿಧಾನದಲ್ಲಿ ವಿಜ್ಞಾನವನ್ನು ಪ್ರಕೃತಿವಿಜ್ಞಾನ, ಸಮಾಜವಿಜ್ಞಾನ ಎಂದು ಮುಂತಾಗಿ ವಿಂಗಡಿಸಲಾಗಿದೆ. ಪ್ರಕೃತಿವಿಜ್ಞಾನದಲ್ಲಿ ಭೌತ, ರಸಾಯನ, ಪ್ರಾಣಿ, ಸಸ್ಯ, ಭೂಮಿ ಮುಂತಾದ ಪ್ರಕಾರಗಳು ಸೇರಿವೆ. ಗಣಿತವನ್ನು ಅಮೂರ್ತ ವಿಜ್ಞಾನವೆಂಬ ಬೇರೆ ಪ್ರಕಾರಕ್ಕೇ ಸೇರಿಸಿದ್ದಾರೆ. ಈ ಲೇಖನದಲ್ಲಿ ಇವೆರಡೂ ಪ್ರಕಾರಗಳನ್ನು ಸೇರಿಸಿಕೊಂಡು ಅದಕ್ಕೆ ವಿಜ್ಞಾನ ಶಬ್ದವನ್ನು ಸೀಮಿತಗೊಳಿಸಬಯಸುತ್ತೇನೆ. ಸಮಾಜವಿಜ್ಞಾನ ಪ್ರಕೃತ ಪರಿಶೀಲನೆಯ ವ್ಯಾಪ್ತಿಯಲ್ಲಿಲ್ಲ.

ಭಾಷೆ

ಅನುಭವದಿಂದ ಮಾನವನ ಮನಸ್ಸಿನಲ್ಲಿ ಮೂಡುವ ಒಂದು ಪರಿಸ್ಥಿತಿ ಭಾವನೆ. ಭಾವನೆ ಅಭಿವ್ಯಕ್ತವಾಗುವ ಮಾಧ್ಯಮಗಳು ಹಲವಾರು. ಅತಿಮರುಕದಿಂದ ಮನನೊಂದ ಕೋಮಲ ಮನಸ್ಸು ಕಾವ್ಯದ ಒಂದು ಶ್ಲೋಕವನ್ನೇ ಮಾಧ್ಯಮವಾಗಿ ಬಳಸಬಹುದು. ಅಪಮಾನದಿಂದ ರಕ್ಷಕರ ಅಸಹಾಯಕತೆಯಿಂದ ಕಂಗೆಟ್ಟ ನಾರಿ ದೇವರಲ್ಲಿ ಮೊರೆಯಿಡಬಹುದು. ಇವೆರೆಡೂ ಭಾಷೆಯ ಬೇರೆ ಬೇರೆ ರೂಪಗಳು. ಭಗ್ನಪ್ರಣಿಯಿ ಆರಾಧ್ಯಮೂರ್ತಿಯನ್ನು ಶಿಲ್ಪ ಮಾಧ್ಯಮದ ಮೂಲಕ ಕಂಡರಿಸಬಹುದು. ಮರದಿಂದ ತೊಟ್ಟು ಕಳಚಿ ಬೀಳುತ್ತಿದ್ದ ಸೇಬಿನ ಹಣ್ಣನ್ನು ಕಂಡಾತ ವಿಶ್ವದ ಒಂದು ಪ್ರಮುಖ ಗಣಿತ ಸೂತ್ರವನ್ನೇ ನಿರೂಪಿಸಬಹುದು. ಆದ್ದರಿಂದ ಅಭಿವ್ಯಕ್ತಿಯ ಮಾಧ್ಯಮ ಅನುಭವ ಮತ್ತು ಭಾವನೆಗಳ ಗುಣಲಕ್ಷಣಗಳನ್ನು ಅವಲಂಬಿಸಿದೆ. ಸಾಂಕೇತಿಕವಾಗಿ

ಅನೂಭವ ® ಭಾವನೆ ® ಮಾಧ್ಯಮ

ಎಂದು ಬರೆಯಬಹುದು. ಒಬ್ಬನಿಂದ ಅಭಿವ್ಯಕ್ತವಾದ ಮಾಧ್ಯಮ ಇನ್ನೊಬ್ಬನಿಗೆ ಅನುಭವವಾಗುವುದರಿಂದಲೂ ವ್ಯಕ್ತಿ ಸಂಘಜೀವಿಯಾಗಿರುವುದರಿಂದಲೂ ಮೇಲಿನ ಉಕ್ತಿ ವಿಲೋಮಗತೀಯವೂ ಹೌದು. ಆದ್ದರಿಂದ

ಮಾಧ್ಯಮ ® ಭಾವನೆ ® ಮಾಧ್ಯಮ

ಎಂದು ನಿರೂಪಿಸಬಹುದು. ಅಥವಾ ಎರಡನ್ನೂ ಸಂಯೋಜಿಸಿ

ಅನುಭವ  ಭಾವನೆ  ಮಾಧ್ಯಮ

ಎಂದು ಒಟ್ಟಾಗಿ ಸಂಕೇತಿಸಬಹುದು. ಈ ಲೇಖನದಲ್ಲಿ ಭಾಷೆ ಎಂದರೆ ಮನಸ್ಸಿನ ಭಾವನೆಯನ್ನು ನಾಲಗೆಯ ವಿಶಿಷ್ಟ ರೀತಿಯ ಉಚ್ಚಾರಣೆಗಳಿಂದ ಶಬ್ದ ಮತ್ತು ವಾಕ್ಯರೂಪಗಳಲ್ಲಿ ಹೊರಪಡಿಸುವ ಮಾಧ್ಯಮ ಎಂಬ ಅರ್ಥದಲ್ಲಿ ಬಳಸುತ್ತೇನೆ. ಬರಹ ಇದೇ ಭಾಷೆಯ ಇನ್ನೊಂದು ರೂಪ ಎಂಬುದನ್ನು ಗಮನಿಸಬೇಕು.

ವಿಜ್ಞಾನ ಒಂದು ಮಾನಸಿಕ ಸಂವೇದನೆ. ಅದು ಅಭಿವ್ಯಕ್ತವಾಗಿರುವ ಮಾಧ್ಯಮ ಭಾಷೆ. ಈ ಭಾಷೆಯ ಉದ್ದೇಶ ಅಸಕ್ತ ವ್ಯಕ್ತಿಗಳಲ್ಲಿ ಪರಸ್ಪರ ಸಂವಹನದ ಏರ್ಪಾಡು ಏಕಾಂತವಾಗಿ ಅಥವಾ ಶೂನ್ಯದಲ್ಲಿ ವಿಜ್ಞಾನ ಪ್ರವರ್ಧಿಸದು. ವ್ಯಕ್ತಿ ವ್ಯಕ್ತಿಗಳ ಅನುಭವ – ವಿನಿಮಯ ವಿಜ್ಞಾನವೃಕ್ಷದ ತಾಯಿಬೇರಿಗೆ ಗೊಬ್ಬರ ನೀರಿನಂತೆ. ಒಬ್ಬನ ಅನುಭವ ಇನ್ನೊಬ್ಬನಿಗೆ ಅದೇ ಅನುಭವವಾದಾಗ ಎಂದರೆ ಒಬ್ಬನ ಭಾಷೆ ಇನ್ನೊಬ್ಬನಿಗೆ ಅಸಂದಿಗ್ಧ ಅರ್ಥ ನೀಡಿದಾಗ ಅವರಲ್ಲಿ ಪರಸ್ಪರ ವಾಹಕತ್ವವಿದೆ ಎನ್ನುತ್ತೇವೆ ಅವರು ಒಂದೇ ಆವೃತ್ತಿಯಲ್ಲಿದ್ದಾರೆ (frequency) ಎಂದರ್ಥ.

ಭಾಷೆಯ ಉಗಮ

ಆಕಾಶದಲ್ಲಿ ಬೆಳಗುತ್ತಿರುವ ಅಸಂಖ್ಯಾತ ದೀಪಗಳನ್ನು ಮನುಷ್ಯ ನೋಡಿದ. ಇದು ವಾಸ್ತವಿಕತೆ. ನೆಲದ ಮೇಲಿನ ದೀಪಗಳಿಗಿಂತ ಆಕಾಶದ ಈ ವಾಸ್ತವಿಕತೆ ಭಿನ್ನವಾಗಿರುವುದರಿಂದ ಇದಕ್ಕೆ ಬೇರೆ ಹೆಸರು ಕೊಡುವುದು ಅರ್ಥಸ್ಪಷ್ಟತೆಯ ದೃಷ್ಟಿಯಿಂದ ಅವಶ್ಯಕವೆನ್ನಿಸಿತು. ಇವನ್ನು ನಕ್ಷತ್ರಗಳು ಎಂದು ಹೆಸರಿಸಲಾಯಿತು. ತೊಂದರೆ ಅಲ್ಲಿಗೇ ಮುಗಿಯಲಿಲ್ಲ. ಹೀಗಾಗಿ ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಂಬ ಪದಗಳು ಅನಿವಾರ್ಯವೆನಿಸಿದುವು. ಎಂದರೇನಾಯಿತು? ವಾಸ್ತವಿಕತೆಯನ್ನು ಅತ್ಯಂತ ನಿಷ್ಕೃಷ್ಟವಾಗಿ ವಿವರಿಸಲು ಪದಗಳ (ಮಾತಿನ ಎಂಬ ಅರ್ಥದಲ್ಲಿ) ಉಗಮವಾಯಿತು. ಆದ್ದರಿಂದ ಪ್ರತಿಯೊಂದು ಪದವೂ ಅಥವಾ ಪದಸಮುದಾಯವಾದ ವಾಕ್ಯವೂ ವಾಸ್ತವಿಕತೆಯ ಸಾಂಕೇತಿಕ ರೂಪ. ಆದರೆ ಮುಂದೆ ಪದಗಳ ಮತ್ತು ವಾಕ್ಯಗಳ ಧ್ವನ್ಯರ್ಥ ಮುಂತಾದ ಛಾಯೆಗಳು ಬೆಳೆದು ಬಂದಿರುವುದನ್ನು ಗಮನಿಸುವಾಗ ಒಂದು ಪದಕ್ಕೆ ಒಂದು ವಾಸ್ತವಿಕತೆ ಇದೆ ಎಂಬ ವಿಲೋಮೋಕ್ತಿ ತಾರ್ಕಿಕವಾಗಿ ನಿಲ್ಲದು. ವಾಸ್ತವಿಕತೆ – ಪದ ಇವುಗಳ ಸಂಬಂಧ ಒಂದು – ಒಂದು ಹೊಂದಾಣಿಕೆಯಾದರೆ ಪದ – ವಾಸ್ತವಿಕತೆ ಇವುಗಳಗಳ ಒಂದು – ಹಲವಾರು ಹೊಂದಾಣಿಕೆ. ಇಲ್ಲಿ ನಾವು ತಿಳಿಯುವ ಸಾರವಿಷ್ಟು ವಿಜ್ಞಾನವಿಭಾಗ ಯಾವುದೇ ಇರಲಿ, ಅದರ ವಿಕಾಸದ ಮೊದಲ ಹಂತ ವಾಸ್ತವಿಕತೆ, ಎರಡನೆಯ ಹಂತ ಅದರ ಪ್ರತೀಕಾತ್ಮಕ (symbolic) ರೂಪ ಅಥವಾ ವಿಜ್ಞಾನದ ಭಾಷೆ.

ವಿಜ್ಞಾನದ ಭಾಷೆಯ ಲಕ್ಷಣಗಳೇನು?

ಇಂಗ್ಲಿಷಿನಲ್ಲಿ ವಿಜ್ಞಾನದ ಭಾಷೆಗೆ ಒಂದು ಶಿಷ್ಟರೂಪ ಬಂದಿರುವುದರಿಂದಲೂ ನಮ್ಮ ಅಭ್ಯಾಸ, ಚಿಂತನೆ ಮತ್ತು ಬೋಧನೆ ಅದೇ ಭಾಷೆಯಲ್ಲಿ ನಡೆಯುತ್ತಿರುವುದರಿಂದಲೂ ಅದರಲ್ಲಿರುವ ಶಿಷ್ಟಗ್ರಂಥಗಳ ಪರಿಶೀಲನೆ ಯುಕ್ತಮಾರ್ಗ. ಈ ಕ್ರಿಯೆಯಿಂದ ಇಂಗ್ಲಿಷಿನಲ್ಲಿ ವಿಜ್ಞಾನದ ಭಾಷೆಗೆ ಮೂರು ಬಾಹ್ಯಲಕ್ಷಣಗಳಿವೆಯೆಂದು ತಿಳಿಯುತ್ತೇವೆ – ವಿವರಣಾತ್ಮಕ, ಎಂದರೆ ವಿಷಯವನ್ನು ವಿವರಿಸುವ ವಾಕ್ಯಗಳ ಸಮೂಹ; ಪ್ರತೀಕಾತ್ಮಕ, ಎಂದರೆ ಶಿಷ್ಟ ಪ್ರತೀಕಗಳನ್ನೂ ಚಿಹ್ನೆಗಳನ್ನೂ ಬಳಸಿಕೊಂಡು ಭಾವನೆಗಳನ್ನು ಸಂಕ್ಷೇಪ ರೂಪಗಳಲ್ಲಿ ನಿರೂಪಿಸಿ ಮುಂದುವರಿಸಿಕೊಂಡು ಹೋಗುವ ವಿಧಾನ; ಚಿತ್ರಗಳು, ಎಂದರೆ ವಾಸ್ತವಿಕತೆಯ ತದ್ರೂಪಗಳು, ಅಲೇಖಗಳು, ರೇಖಾಕೃತಿಗಳು ಮುಂತಾದವು. ಇವು ಪರಸ್ಪರ ಪೂರಕ ಮತ್ತು ಪೋಷಕ. ಯಾವ ಲಕ್ಷಣ ಎಷ್ಟು ಪ್ರಮಾಣದಲ್ಲಿ ಇರಬೇಕು, ಎಲ್ಲಿ ಒಂದು ಲಕ್ಷಣದಿಂದ ಇನ್ನೊಂದು ಲಕ್ಷಣಕ್ಕೆ ಜಗುಳಬೇಕು ಎಂಬ ವಿವರಗಳು ಮುಖ್ಯವಾಗಿ ನಿರೂಪಿತ ವಿಷಯವನ್ನು ಅವಲಂಬಿಸಿವೆ.

ಅಂತೂ ಒಂದು ವಿಷಯ ಅನುಷಂಗಿಕವಾಗಿ ಸ್ಪಷ್ಟವಾದಂತಾಯಿತು. ವಿಜ್ಞಾನದ ಭಾಷೆಯನ್ನು ಲಿಪಿ ಮತ್ತು ಪ್ರತೀಕಗಳಿಂದ (ಇವೂ ಲಿಪಿಯಲ್ಲಿಯೇ ಸೇರಿವೆಯಷ್ಟೆ) ನಿರೂಪಿಸಬಲ್ಲೆವು ಮತ್ತು ಚಿತ್ರಗಳಿಂದ ರೂಪಿಸಬಲ್ಲೆವು. ಈ ಹೇಳಿಕೆ ವಿಜ್ಞಾನದ ಭಾಷೆಯ ಒಂದು ಲಕ್ಷಣವೆಂದು ತಿಳಿಯಬೇಕೇ ವಿನಾ ಅದರ ವ್ಯಾಖ್ಯೆ ಎಂದಲ್ಲ.

ಭಾಷಾ ಲಕ್ಷಣಗಳು. ಅಲ್ಲಿಯ ಅವಧಾರಣೆಗಳು ಹೇಗೆಯೇ ಇರಲಿ, ಭಾಷೆಯ ಬಳಕೆಯಲ್ಲಿ ತೋರಿಬರುವ ಮೂಲಸೂತ್ರಗಳಿಷ್ಟು:

(ಅ) ಪಾರಿಭಾಷಿಕ ಪದಗಳ ಅರ್ಥನಿರೂಪಣೆ

(ಆ) ಪ್ರತೀಕಗಳು, ಸಂಕೇತಗಳು ಮುಂತಾದ ಸಂಕ್ಷೇಪ ರೂಪಗಳು ಪ್ರತಿನಿಧಿಸುವ ವೈಜ್ಞಾನಿಕ ಭಾವನೆಗಳ ಅಥವಾ ಪರಿಕರ್ಮಗಳ ವಿವರಣೆ

(ಇ) ಸ್ವತಸ್ಸಿದ್ಧಗಳ (ಆದ್ಯುಕ್ತಿಗಳ) ಮತ್ತು ಆಧಾರಭಾವನೆಗಳ ಸ್ಪಷ್ಟೀಕರಣ

(ಈ) ತಾರ್ಕಿಕ ಸಾಮಂಜಸ್ಯ

(ಉ) ಸಾಹಿತ್ಯ ಸೌಂದರ್ಯ

() ಪಾರಿಭಾಷಿಕ ಪದಗಳು

ಪ್ರಾಣಿವಿಜ್ಞಾನದ ಉದಾಹರಣೆ ತೆಗೆದುಕೊಳ್ಳೋಣ. ಅಳಿದ ಪ್ರಾಣಿಗಳ ಪಳೆಯುಳಿಕೆಗಳ ನೆರವಿನಂದಲೂ ಇರುವ ಪ್ರಾಣಿಗಳ ಅಧ್ಯಯನದಿಂದಲೂ ಆ ಪ್ರಪಂಚದ ಇತಿಹಾಸವನ್ನು ಶಾಸ್ತ್ರೀಯವಾಗಿ ಬರೆಯಲಾಗಿದೆ. ಅಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಲಕ್ಷಿಸಿ ಮಾಡಿದ ವಿಶಾಲ ವಿಂಗಡಣೆ ಸಹಜವಾಗಿ ಉಳಿದುಕೊಂಡಿದೆ. ಶಾಸ್ತ್ರದ ಅಸ್ತಿಭಾರವಾಗಿದೆ. ಹೀಗೆ ಮಾಡದಿದ್ದ ಮೊದಲಿನ ಯಾವ ವಿಂಗಡಣೆಗಳೂ ಉಳಿಯಲಿಲ್ಲ – ಶಾಸ್ತ್ರದ ಬೆಳವಣಿಗೆಯ ಒಂದಲ್ಲ ಒಂದು ಹಂತದಲ್ಲಿ ಇಂಥ ಅಸಹಜ ವಿಂಗಡಣೆಗಳು ವಾಸ್ತವಿಕತೆಯಿಂದ ದೂರವಾದ ಫಲಿತಾಂಶಗಳನ್ನು ನೀಡಿ ವಿಂಗಡಣೆಗಳ ಅಸ್ತಿತ್ವವನ್ನೇ ಪ್ರಶ್ನಿಸಿ ಸುಧಾರಿತ ಮಾರ್ಗಕ್ಕೆ ಎಡೆ ಮಾಡಿದುವು. ಈ ತರ್ಕ ಎಲ್ಲ ಶಾಸ್ತ್ರಗಳಿಗೂ ಅನ್ವಯಿಸುತ್ತದೆ. ಪ್ರಾಣಿ ವಿಜ್ಞಾನದಲ್ಲಿರುವ ವಿಂಗಡಣೆಗಳ ಹೆಸರುಗಳನ್ನೇ ಪರಿಶೀಲಿಸಿ: ವಿಭಾಗ (ಫೈಲಮ್), ವರ್ಗ (ಕ್ಲಾಸ್), ಗಣ (ಆರ್ಡರ್), ವಂಶ (ಫ್ಯಾಮಿಲಿ), ಕುಲ (ಜಿನೇರಾ), ಜಾತಿ (ಸ್ಪೀಶೀಸ್), ಇವು ವಾಸ್ತವಿಕತೆಯ ಭಿನ್ನರೂಪಗಳ ಖಚಿತ ಪ್ರತಿಬಿಂಬಗಳು. ಈ ಶಾಸ್ತ್ರದ ಒಂದು ಬರೆಹದಲ್ಲಿ ವಂಶ, ಕುಲ ಅಥವಾ ವರ್ಗ, ಜಾತಿ ಎಂಬ ಪದಯುಗ್ಮಗಳನ್ನು ರೂಢಿಯ ಮಾದರಿಯಲ್ಲಿ ಪರ್ಯಾಯ ಪದಗಳಾಗಿ ಬಳಸಿದರೆ ಅರ್ಥಗೊಂದಲ ಉಂಟಾಗದಿರದು. ವ್ಯಕ್ತಿ ವ್ಯಕ್ತಿಗಳಲ್ಲಿ ಆಗ ಸಂವಹನ ಕಡಿದುಹೋಗುವುದು.

ಪಾರಿಭಾಷಿಕ ಶಬ್ದಗಳ ಆಯ್ಕೆಯಲ್ಲಿ ನಾವು ಗಮನಿಸುವ ಅಂಶಗಳಿಷ್ಟು :

(i) ರೂಢಿಯಲ್ಲಿ ನೀಹಾರಿಕಾರೂಪದಲ್ಲಿ ಅರ್ಥವಿರುವ ಪದಗಳನ್ನು ಆರಿಸಿಕೊಂಡು ವಿವರಣೆ ಉದಾಹರಣೆಗಳಿಂದ ಅವುಗಳ ಅರ್ಥವನ್ನು ನಿರ್ದಿಷ್ಟಗೊಳಿಸಿದೆ. ಉದಾಹರಣೆಗೆ ಭೌತವಿಜ್ಞಾನದಲ್ಲಿ ಫೋರ್ಸ್, ಪವರ್, ಎನರ್ಜಿ, ಸ್ಪ್ರೆಂತ್ ಪದಗಳು. ನಮ್ಮ ಭಾಷೆಯಲ್ಲಿ ಇವು ಕ್ರಮವಾಗಿ ಬಲ, ಸಾಮರ್ಥ್ಯ, ಶಕ್ತಿ, ತ್ರಾಣ ಎಂಬುದಾಗಿ ಬಳಕೆಗೆ ಬಂದಿವೆ. ಸಾಮಾನ್ಯವಾಗಿ ಇವು ಪರ್ಯಾಯ ಪದಗಳಾದರೂ ಭೌತ ವಿಜ್ಞಾನದಲ್ಲಿ ಖಚಿತ ಭಾವನೆಗಳನ್ನು ಪ್ರತಿನಿಧಿಸುವುದರಿಂದ ಬೇರೆ ಬೇರೆ ಎಂದೇ ಪರಿಗಣಿಸಬೇಕಾಗುತ್ತದೆ. ಗುರುತ್ವಾಕರ್ಷಣ ಬಲ, ಅಶ್ವ ಸಾಮರ್ಥ್ಯ, ಪರಮಾಣು ಶಕ್ತಿ, ಉಕ್ಕಿನ ತ್ರಾಣ – ಇವು ಸರಿಯಾದ ಪ್ರಯೋಗಗಳು; ಗುರುತ್ವಾಕರ್ಷಣ ಶಕ್ತಿ, ಅಶ್ವಬಲ, ಪರಮಾಣು ತ್ರಾಣ, ಉಕ್ಕಿನ ಸಾಮರ್ಥ್ಯ ಇವು ಅಪ ಪ್ರಯೋಗಗಳು.

(ii) ರೂಢಿಯಲ್ಲಿ ಇಲ್ಲದ ಹೊಸ ಶಬ್ದಗಳ ನಿರ್ಮಾಣ ಅನಿವಾರ್ಯವಾದಾಗ ಮೊದಲ ಸಂಶೋಧಕ ಬಳಸಿದಿ ಪದವು ಭಾವನೆಯಷ್ಟೇ ತೀವ್ರತೆಯಿಂದ ಚಾಲ್ತಿಗೆ ಬಂದಿದೆ. (a+ib) ಯನ್ನು ಇಮ್ಯಾಜಿನರಿ ನಂಬರ್ (ಮಿಶ್ರ ಸಂಖ್ಯೆ) ಎಂದೂ ಭೂಮಿಯ ಉತ್ತರಕಾಂತ ಧ್ರುವವನ್ನು ಸೂಚಿಸುವ ಆಯಸ್ಕಾಂತದ ಕೊನೆಯನ್ನು ಉತ್ರಧ್ರುವವೆಂದೂ ಕರೆಯುವುದು ಇಂದು ಒಪ್ಪಲಾಗದಿದ್ದರೂ ಮೊದಲ ತೀವ್ರತೆ ಇನ್ನೂ ಇಂಥ ಹಲವಾರು “ಅಪಪ್ರಯೋಗಗಳನ್ನು” ಪಾರಿಭಾಷಿಕ ಪದಗಳಾಗಿ ಉಳಿಸಿಕೊಂಡಿದೆ. ಆದರೆ ಇಂದು ಹೀಗೆ ನಡೆಯುವುದು ವಿರಳ; ಪಾರಿಭಾಷಿಕ ಪದಗಳು ಆದಷ್ಟು ಭಾವಸೂಚಕವಾಗಿದ್ದರೆ ಒಳ್ಳೆಯದು. ಇಮ್ಯೂನೊಕೆಮಿಸ್ಟ್ರಿ, ಇಂಟರ್ ಫೆರಾನ್, ಸೆಟ್, ಕ್ವೇಸಾರ್, ಮ್ಯಾಸ್ಕನ್ – ಇವೆಲ್ಲ ಈ ರೀತಿ ಅಸ್ತಿತ್ವಕ್ಕೆ ಬಂದಿರುವ ಪದಗಳು. ಕನ್ನಡದಲ್ಲಿ ಕೆಲವು ಉದಾಹರಣೆ ಕೊಡಬಹುದು. ಲಾಗರಿತಮ್ – ಲಘುಗಣಕ, ಆಕ್ಸಿಡೇಶನ್ – ಉತ್ಕರ್ಷಣೆ, ಆರ್ಕೇಯನ್ ಈರಾ – ಆರ್ಷೇಯ ಕಲ್ಪ ಆಗಿರುವುದೂ ಯುರೇನಿಯಮ್, ಈಕ್ವಿಡೇ, ಅಲ್ಗೇ, ಕೇಂಬ್ರಿಯನ್ ಮುಂತಾದವು ಆಯಾ ರೂಪದಲ್ಲೇ ಉಳಿದಿರುವುದೂ ಕೆಲವು ನಿದರ್ಶನಗಳು.

(iii) ಒಂದೂ ಶಾಸ್ತ್ರದಲ್ಲಿ ಒಂದು ಪಾರಿಭಾಷಿಕ ಪದಕ್ಕೆ ಸಾಮಾನ್ಯವಾಗಿ ಒಂದೇ ಅರ್ಥ ಇದೆ. ಆ ಅರ್ಥ ಬರುವಲ್ಲೆಲ್ಲ ಅದೇ ಪದ ಕಡ್ಡಾಯವಾಗಿ ಆವರ್ತಿಸುತ್ತದೆ. ಪದೇ ಪದೇ ಒಂದೇ ಪದ ಬಂತಲ್ಲ, ಓದಲು ಇದು ಹಿತವಲ್ಲವಲ್ಲ ಎಂದು ಪರ್ಯಾಯ ಪದ ಬಳಸುವಂತಿಲ್ಲ. ಅರ್ಥಸ್ಪಷ್ಟತೆ ಮುಖ್ಯ. ಸಾಹಿತ್ಯದ ಮೆರಗು ತರುವಾಯ ಎಂಬುದು ಇಂಥಲ್ಲಿ ಅಂತರ್ಗತ ಸೂತ್ರ. ಇನ್ನು ಒಂದೇ ಪದದ ಅಸಹ್ಯ ಪುನರಾವರ್ತನೆಯನ್ನು ನಿವಾರಿಸಲೇಬೇಕೆಂದಾಗ ವಾಕ್ಯಗಳ ಪುನಾರಚನೆಯೇ ಯೋಗ್ಯ ಮಾರ್ಗ. ಈ ವಾದಸಮರ್ಥನೆಗಾಗಿ ಕನ್ನಡದ ಒಂದು ಉದಾಹರಣೆ ಪರಿಶೀಲಿಸಬಹುದು: “ನೀರಿನ ರಾಸಾಯನಿಕ ಸಂಯೋಜನೆಯನ್ನು ಹೆನ್ರಿ ಕ್ಯಾವೆಂಡಿಷನು 1781ರಲ್ಲಿ ಕಂಡುಹಿಡಿದನು.

ನೀರು ಜಲಜನಕ ಮತ್ತು ಆಮ್ಲಜನಕಗಳು ರಾಸಾಯನಿಕವಾಗಿ ಸೇರಿ ಉಂಟಾಗಿರುವ ಒಂದು ಸಂಯುಕ್ತ. ನೀರಿನಿಂದಲೇ ಮನುಷ್ಯನ ಆಗುಹೋಗುಗಳು ನಿರ್ಧರಿತವಾಗುತ್ತವೆ. ನೀರಿನ ಒಂದೊಂದು ಅಣುವಿನಲ್ಲೂ ಜಲಕನಕದ ಪ್ರತಿ ಎರಡು ಪರಮಾಣುಗಳಿಗೆ ಆಮ್ಲಜನಕದ ಒಂದು ಪರಮಾಣು ಸೇರಿದೆ. ನೀರನ್ನು ಕಾಸಿದರೆ ಉಗಿಯಾಗುತ್ತದೆ. ಉಗಿ ನೀರಿನ ಒಂದು ಸ್ಥಿತಿಯೇ ವಿನಾ ರಾಸಾಯನಿಕವಾಗಿ ನೀರಿನಿಂದ ಭಿನ್ನ ರಚನೆಯಲ್ಲ.” ನೀರು ಶಬ್ದದ ಪುನರಾವರ್ತನೆ ಇಲ್ಲಿ ಎಷ್ಟು ಅಹಿತಕರವಾಗಿದೆಯೆಂದರೆ ಕುಹಕ ಮನಸ್ಸು ಈ ಶಬ್ದದ ಆವರ್ತನಸಂಖ್ಯೆ ಎಷ್ಟು, ವಿಭಕ್ತಿ ಪ್ರತ್ಯಯಗಳು ಹೇಗೆ ಪ್ರಯೋಗವಾಗಿ ಎಂದು ಕೊಂಕು ದಾರಿಯಲ್ಲಿ ಹರಿದರೆ ಆಶ್ಚರ್ಯವಿಲ್ಲ. ಇದನ್ನು ನಿವಾರಿಸಲು ‘ನೀರಿ’ನ ಬದಲು ‘ಜಲ,’ ‘ವನ,’ ‘ಶರ,’ ‘ಅಂಬು’ ಮುಂತಾದ ಪರ್ಯಾಯ ಪದಗಳನ್ನು ಬಳಸಿದರೆ ವಿಜ್ಞಾನ ಪ್ರಪಂಚದಲ್ಲಿ ಅದು ಅಪರಾಧವಾಗುತ್ತದೆ. ಪರಿಹಾರ ಒಂದೇ, ವಾಕ್ಯಗಳ ಪುನಾರಚನೆ : “ಹೆನ್ರಿ ಕ್ಯಾವೆಂಡಿಷ್ ನೀರಿನ ರಚನೆಯನ್ನು ಶೋಧಿಸಿದ (1781) ಅದರ ಒಂದೊಂದು ಅಣುವೂ ಜಲಜನಕದ ಎರಡು ಮತ್ತು ಆಮ್ಲಜನಕದ ಒಂದು ಪರಮಾಣುಗಳ ರಾಸಾಯನಿಕ ಸಂಯೋಗದಿಂದ ಉಂಟಾಗಿರುವ ಸಂಯುಕ್ತ ಕಾಸಿದರೆ ಅದು ಉಗಿಯಾಗುತ್ತದೆ. ಆದ್ದರಿಂದ ಉಗಿ ನೀರಿನ ಒಂದು ರೂಪವೇ ವಿನಾ ಭಿನ್ನ ರಾಸಾಯನಿಕ ರಚನೆ ಅಲ್ಲ.” ಮೊದಲಿನ ಸಲ ನೀರು ಶಬ್ದದ ಆವರ್ತನ ಸಂಖ್ಯೆ 7 ಎರಡನೆಯ ಸಲ 2, ಇಷ್ಟು ಮಾತ್ರವಲ್ಲ. “ನೀರಿನಿಂದಲೇ ಮನುಷ್ಯ ಜೀವನದ ಆಗು ಹೋಗುಗಳು ನಿರ್ಧರಿತವಾಗುತ್ತವೆ” ಈ ವಾಕ್ಯ ಎಷ್ಟೇ ಸತ್ಯವಾದರೂ ಪ್ರಸಕ್ತ ಪರಿಚ್ಛೇದದ ಸಂದರ್ಭದಲ್ಲಿ ಅನಾವಶ್ಯಕವಾದ್ದರಿಂದ ಇದನ್ನು ತೆಗೆದುಬಿಟ್ಟಿದ್ದೇವೆ.

(iv) ತೋರ್ಕೆಗೆ ಒಂದೇ ರೂಪದ ಪಾರಿಭಾಷಿಕ ಪದಗಳು ಭಿನ್ನಶಾಸ್ತ್ರಗಳಲ್ಲಿ ಭಿನ್ನ ಅರ್ಥಗಳನ್ನು ನೀಡುವ ಉದಾಹರಣೆಗಳಿವೆ. ಇಂಥ ಸಂದಿಗ್ಧ ಪರಿಸ್ಥಿತಿಗಳಲ್ಲಿ ಸಂದರ್ಭ ಗ್ರಹಿಸಿ ಅರ್ಥ ತಿಳಿಯಬೇಕು. ಅಂತಿಮವಾಗಿ ಪದವಾಗಲೀ ವಾಕ್ಯವಾಗಲೀ ಸಮಗ್ರ ಸೌಧದ ಒಂದು ಅಂಶವಷ್ಟೆ. ಸೌಧದ ಸಾಮೂಹಿಕ ಪ್ರಜ್ಞೆಯಿಂದ ಭಿನ್ನವಾಗಿ ವಾಕ್ಯದ ಅಥವಾ ಪದದ ಅರ್ಥ ಗ್ರಹಿಸಬಾರದು. ಕೆಲವು ಉದಾಹರಣೆಗಳನ್ನು ನೋಡಬಹುದು:

ನಾರ್ಮಲ್ ಟು ದಿ ಕರ್ವ್‌ಎಟ್ ದಿ ಗಿವನ್ ಪಾಯಿಂಟ್ (ಗಣಿತ)

ನಾರ್ಮಲ್ ಟೆಂಪರೇಚರ್ ಎಂಡ್ ಪ್ರೆಶರ್ (ಭೌತ)

ನಾರ್ಮಲ್ ಸೊಲ್ಯೂಷನ್ (ರಸಾಯನ)

ಪದ ಒಂದೇ ನಾರ್ಮಲ್. ಆದರೆ ಭಿನ್ನ ಪರಿಸರಗಳಲ್ಲಿ ಭಿನ್ನ ಅರ್ಥ. ಇನ್ನು ಒಂದೇ ಪದ ಒಂದೇ ಶಾಸ್ತ್ರದಲ್ಲಿ ಸಂದರ್ಭ ಬೇರೆ ಆಗುವಾಗ ಬೇರೆ ಅರ್ಥವೀವ. ವಿರಳ ಉದಾಹರಣೆಗಳೂ ಇವೆ.

ಪವರ್ ಆಪ್ ಎ ಪಾಯಿಂಟ್ ವಿತ್ ರೆಸ್ಪೆಕ್ಟ್ ಟು ಎ ಗಿವನ್ ಸರ್ಕಲ್

ಪವರ್ ಆಫ್ ಇನ್‌ x ಇನ್ xn

ಎರಡು ಪವರ್ಗಳೂ ಗಣಿತದಲ್ಲಿಯೇ ಬರುವವು. ವಿಜ್ಞಾನವೂ ಅದರ ಭಾಷೆಯೂ ಒಟ್ಟೊಟ್ಟಿಗೆ ಬೆಳೆದು ಬರುವಾಗ ಇಂಥ ಸನ್ನಿವೇಶಗಳು ಉಂಟಾಗುವುದು ಸಹಜ. ಅಂದ ಮಾತ್ರಕ್ಕೆ ಕನ್ನಡದಲ್ಲಿ ವಿಜ್ಞಾನಕ್ಕೆ ಒಂದು ಭಾಷೆಯನ್ನು ಅರಸುವಾಗ ಇವೇ ಕೊರತೆಗಳ ಪುನರಾವರ್ತನೆ ನಡೆಯಬೇಕೆಂದೇನೂ ಇಲ್ಲ. ಅವನ್ನು ನಿವಾರಿಸುವುದು ಜಾಣ್ಮೆ.

ಪಾರಿಭಾಷಿಕ ಪದಗಳನ್ನು ಕುರಿತು ಸಮಗ್ರವಾಗಿ ಇಷ್ಟು ಹೇಳಬಹುದು. ಅವು ವಿಜ್ಞಾನ ಸೌಧದ ಮೂಲ ಇಟ್ಟೆಗಗಳು. ಅವನ್ನು ಕುರಿತ ಖಚಿತ ತಿಳಿವಳಿಕೆ ಆ ವಿಭಾಗದಲ್ಲಿ ಪ್ರವೇಶಕ್ಕೆ ಪರವಾನಿಗೆ.

ಪಾರಿಭಾಷಿಕ ಪದಗಳ ಜೊತೆಗೆ ಪಾರಿಭಾಷಿಕ ಪದಪುಂಜಗಳನ್ನೂ ಹೆಸರಿಸಬೇಕು. ಕೆಳಗಿನ ಕೆಲವು ವಾಕ್ಯಗಳನ್ನು ಪರಿಶೀಲಿಸಿ :

(a) Produce the line AB to C such that BC = 2AB (Mathematics).

(b) When a body resting on another body tends to move it meets with an opposing force (physics).

(c) lodine water contains dissolved iodides (Chemistry).

(d) Since life is a systematic phenomenon it is obvious that in a living system the molecules and ions do not dash about at random. Bouncing off each other endlessly and aimlessly (Zoology).

(e) Occasionally one may find apparently thrity plants in fence rows, or strong stalks pushing up through stone heaps or other rubbish pild foot thick upon an old abandoned asparagus bed (Botany).

(f) A number of dietary and endocrine factors have a pronounced effect on the skeletal system especially during periods of rapid development (Medical Science).

ಇವುಗಳಲ್ಲಿ ಓರೆ ಅಕ್ಷರಗಳಿಂದ ಕಾಣಿಸಿರುವ ಪದಪುಂಜಗಳು ಆಯಾ ವಿಭಾಗಗಳನ್ನು ವಿವರಿಸುವಾಗ ಬರುವಂಥವು ; ಪಾರಿಭಾಷಿಕ ಪದಗಳಷ್ಟಲ್ಲದಿದ್ದರೂ ಇವುಗಳಿಗೂ ವಿಶಿಷ್ಟ ಅರ್ಥಗಳು ಆಯಾ ವಿಭಾಗಗಳಿವೆ. ಇವನ್ನು ಬಿಟ್ಟರೆ ಅಥವಾ ಬೇರೆ ಅರ್ಥದಲ್ಲಿ ಪ್ರಯೋಗಿಸಿದರೆ ಆ ವಿಜ್ಞಾನವಿಭಾಗವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದು.

() ಪ್ರತೀಕಗಳು ಮತ್ತು ಸಂಕೇತಗಳು

ಸಾಮಾನ್ಯವಾಗಿ x, y, z, x, h z, m, u, O ಮುಂತಾದ ನಿರೂಪಣೆಗಳನ್ನು ಪ್ರತೀಕಗಳೆಂದೂ +, – , X, U, V, = Ù, S ಮುಂತಾದವನ್ನು ಚಿಹ್ನೆಗಳೆಂದೂ sin, log, f (n) ಮುಂತಾದವನ್ನು ಸಂಕೇತಗಳೆಂದೂ ಕರೆಯುತ್ತೇವೆ. ವಿಶಾಲಾರ್ಥದಲ್ಲಿ ಇವೆಲ್ಲವೂ ಪ್ರತೀಕಗಳೇ, ಕೆಲವೊಂದು ಭಾವನೆಗಳ ಅಥವಾ ಮಾತಿನ ಸಂಕ್ಷೇಪ ರೂಪಗಳು ಮಾತ್ರ ವಿಜ್ಞಾನದ ಭಾಷೆ ಪ್ರಗತಿಗೊಂಡು ತರ್ಕಸರಣಿ ಬಿಗಿಯಾದಂತೆ ಅದು ಪ್ರತೀಕ. ಸಂಕೇತ ಮತ್ತು ಚಿಹ್ನೆಗಳ ಆದರ್ಶೀಕೃತ ರೂಪಕ್ಕೆ ಪರಿವರ್ತನೆಗೊಳ್ಳುವುದು ಅನಿವಾರ್ಯವಾಯಿತು.

ಐದು ಮಾವಿನಹಣ್ಣುಗಳಿರುವ ಬುಟ್ಟಿಯಿಂದ ಮೂರು ಹಣ್ಣುಗಳನ್ನು ತೆಗೆದರೆ ಆ ಬುಟ್ಟಿಯಲ್ಲಿ ಉಳಿದಿರುವ ಹಣ್ಣುಗಳು ಎಷ್ಟು ಎನ್ನುವ ಬದಲು ಸರಳ ಸಮಸ್ಯೆಯನ್ನು ಬಿಡಿಸುವಾಗ (5 – 3 = 2); ಸೂರ್ಯನಲ್ಲಿ ಜರಗುವ ಬೀಜಸಂಲಯನ ಕ್ರಿಯೆಯನ್ನು ವಿವರಿಸುವಾಗ; ಅಲ್ಕೊಹಾಲಿನ ರಾಸಾಯನಿಕ ರಚನೆಯನ್ನು ನಿರೂಪಿಸುವಾಗ; ತಳಿವಿಜ್ಞಾನದಲ್ಲಿ ಅಂತರ್ಗತವಾಗಿರುವ ಜಟಿಲ ಸಮಸ್ಯೆಯನ್ನು ತಿಳಿಯಪಡಿಸುವಾಗ “ಪ್ರತೀಕಭಾಷೆಗೆ ಇತ್ಯಾದಿ ಇರುವ ಸೌಕರ್ಯ ಎಲ್ಲರಿಗೂ ತಿಳಿದಿದೆ. ಅವನ್ನು ಮಾತಿನಲ್ಲಿ ಬರೆದು ತಾರ್ಕಿಕವಾಗಿ ಪುನಃ ಮಾತಿನಲ್ಲೇ ಮುಂದುವರಿಸುವುದಾದರೆ ಎದುರಾಗುವ ಸಮಸ್ಯೆಗಳೇನು ಎಂಬುದನ್ನು ಯಾವುದೇ ಸರಳ ಉದಾಹರಣೆಯನ್ನು ಪರಿಶೀಲಿಸುವುದರ ಮೂಲಕ ತಿಳಿಯಬಹುದು.

ಪ್ರತೀಕಗಳ ಆಯ್ಕೆಯಲ್ಲಿ ನಾವು ಗಮನಿಸುವ ಅಂಶಗಳಿಷ್ಟು:

  • ಶಿಷ್ಟರೂಪಕ್ಕೆ ಬಂದಂಥವು ಅಂತಾರಾಷ್ಟ್ರೀಯವಾಗಿವೆ. ಉದಾಹರಣೆಗೆ sin x, H2O,E = mc2,dy/dx ಇಂಗ್ಲಿಷ್ ಭಾಷೆಯವನಿಗೂ ಜರ್ಮನ್ ಭಾಷೆಯವನಿಗೂ ಕನ್ನಡ ಭಾಷೆಯವನಿಗೂ ನೀಡುವ ಅರ್ಥ ಒಂದೇ. ಅವನ್ನು ಮಾತಿನಲ್ಲಿ ವಿವರಿಸುವಾಗ ಮಾತ್ರ ಆಯಾ ಭಾಷೆಯ ವ್ಯಕ್ತಿತ್ವ ಅನುಸರಿಸಿ ಬೇರೆ ಬೇರೆಯಾಗುತ್ತವೆ. ಇಲ್ಲಿ ಒಂದು ವಿಚಾರವನ್ನು ಪ್ರಾಸಂಗಿಕವಾಗಿ ಹೇಳಬೇಕು. ನಾವು ಇಂಗ್ಲಿಷ್ ಲಿಪಿ ಎಂದು ಕರೆಯುವ ಅಕ್ಷರಗಳು ವಾಸ್ತವಿಕವಾಗಿ ಗ್ರೀಕ್ ಲಿಪಿಯಿಂದ ರೂಪಗೊಂಡ ರೋಮನ್‌ಲಿಪಿ ಯೂರೊಪಿನ ಎಲ್ಲ ರಾಷ್ಟ್ರಗಳೂ ಈ ಲಿಪಿಯ ಅಕ್ಷರಗಳನ್ನೂ ಅವುಗಳ ಉಚ್ಚಾರಣೆಗಳನ್ನೂ ಹೆಚ್ಚು ಕಡಿಮೆ ಏಕಪ್ರಕಾರವಾಗಿ ಉಳಿಸಿಕೊಂಡಿವೆ; ರಷ್ಯ, ಬಲ್ಗೇರಿಯಾಗಳು ಇದಕ್ಕೆ ಅಪವಾದ. ಅಕ್ಷರಗಳು ರೋಮನ್ ಲಿಪಿಯವೇ. ಇನ್ನಷ್ಟೂ ಇವೆ. ಆದರೆ ಉಚ್ಚಾರಣೆ ಬೇರೆ, ರೋಮನ್ H ರಷ್ಯನ್ ಉಚ್ಚಾರಣೆಯಲ್ಲಿ ಎನ್.ರೋಮನ್ B ರಷ್ಯನ್ ಉಚ್ಚಾರಣೆಯಲ್ಲಿ ವಿ.ರೋಮನ್ C ರಷ್ಯನ್ ಉಚ್ಚಾರಣೆಯಲ್ಲಿ ಎಸ್ ಇತ್ಯಾದಿಯಾಗಿ ಪರಿವರ್ತಿತವಾಗುತ್ತವೆ. ಆದರೆ ರಸಾಯನವಿಜ್ಞಾನದ ಪ್ರತೀಕ ಅಥವಾ ಸೂತ್ರ H2Oವನ್ನು ರಷ್ಯದ ವಿಜ್ಞಾನಿಗಳು ಸಹ ಎಚ್‌ಟೂಓ ಎಂದೇ ಓದುತ್ತಾರೆ; ಮತ್ತು ಇದು ನೀರಿನ ಅಣುಸೂತ್ರ ಎಮದೇ ತಿಳಿಯುತ್ತಾರೆ. ಆದ್ದರಿಂದ ಪ್ರತೀಕಗಳು ನಿಜವಾಗಿಯೂ ಅಂತರಾಷ್ಟ್ರೀಯವಾಗಿವೆ.

(ii) ಶಿಷ್ಟರೂಪಕ್ಕೆ ಬಂದಂಥವು ವಿಜ್ಞಾನದ ಎಲ್ಲ ವಿಭಾಗಗಳಲ್ಲಿಯೂ ಎಲ್ಲ ಸಂದರ್ಭಗಳಲ್ಲಿಯೂ ಒಂದೇ ಅರ್ಥ ನೀಡುವುವು. H2Oಪ್ರತೀಕ ರಸಾಯನ, ಭೌತ, ಪ್ರಾಣಿ ಮುಂತಾದ ಎಲ್ಲ ವಿಭಾಗಗಳಲ್ಲಿಯೂ ಎಲ್ಲ ಸಂದರ್ಭಗಳಲ್ಲಿಯೂ ನೀರಿನ ಒಂದು ಅಣುವನ್ನು ಪ್ರತಿನಿಧಿಸುತ್ತದೆ. ಇಂಥವು ನಿಜಕ್ಕೂ ಅಂಕಿತ ನಾಮಗಳು.

(iii) ಶಿಷ್ಟರೂಪಕ್ಕೆ ಬರದೇ ಇರುವಂಥವುಗಳ ಅರ್ಥಸ್ಪಷ್ಟತೆಯನ್ನು, ಪಾರಿಭಾಷಿಕ ಪದಗಳನ್ನು ಕುರಿತು ಮಾಡಿದಂತೆ ನಿಗದಿಸಬಹುದು. ಚುಕ್ಕಿಯ ಉದಾಹರಣೆ ನೋಡಬಹುದು. ಅದು ಬಿಂದು (ಎಂದರೆ ಆಯಾಮರಹಿತ ಆದರ್ಶ) ಆಗಬಹುದು. ದಶಮಾಂಶ ಸೂಚಕವಾಗಬಹುದು. ಗುಣಾಕಾರ ಸೂಚಕವಾಗಬಹುದು, ಇತ್ಯಾದಿ.

ಪ್ರತೀಕ ಮತ್ತು ಸಂಕೇತಗಳನ್ನು ಕುರಿತು ಸಮಗ್ರವಾಗಿ ಇಷ್ಟು ಹೇಳಬಹುದು; ಅವು ವಿಜ್ಞಾನಭಾಷೆಯ ಆದರ್ಶರೂಪಗಳು, ಅಂತಾರಾಷ್ಟ್ರೀಯ, ವಾಸ್ತವಿಕತೆಗೆ ಸಮೀಪತಮ ನಿರೂಪಣೆ.

ಈ ಸೌಲಭ್ಯಗಳಿಗೆ ನಾವು ಸಹಜವಾಗಿ ತೆರಬೇಕಾದ ಶುಲ್ಕ ಇವುಗಳ ದೃಢತೆಯಲ್ಲಿ ಅಡಕವಾಗಿದೆ. ಸಾಕಷ್ಟು ಶಿಕ್ಷಣ, ಪೂರ್ವಸಿದ್ಧತೆ ಇಲ್ಲದಿರುವವರಿಗೆ ಪ್ರತೀಕಭಾಷೆ ರಂಗವಲ್ಲಿಯಂತೆಯೇ ಚೀನೀ ಲಿಪಿಯಂತೆಯೋ ಕಂಡರೆ ಆಶ್ಚರ್ಯವಿಲ್ಲ. ಪ್ರತೀಕ ಭಾಷೆ ಸಹಜ ಭಾಷೆಗಿಂತ (ಆಡುನುಡಿ, ಬರೆವ ನುಡಿ) ತೀರ ಭಿನ್ನವಾಗಿದೆ. ಪ್ರತೀಕ, ಸಂಕೇತ, ಸಂಜ್ಞೆಗಳು ಪಾರಿಭಾಷಿಕ ಪದಗಳನ್ನು ಬೆಸೆದು ಬಂಧಿಸುವ ಗಾರೆ.