“ನಿರಂತರ ವ್ಯತ್ಯಯಶೀಲತೆಯೇ ವಿಶ್ವದ ಧರ್ಮ, ಆದರೆ ಅದರ ಸ್ಥಿತಿ ಮಾತ್ರ ಸದಾ ಸ್ತಿಮಿತವಾಗಿರುತ್ತದೆ.” ವಿಶ್ವ (universe) ಕುರಿತು ಸ್ತಿಮಿತಸ್ಥಿತಿವಾದ ಇದು (Steady State hypothesis) ನೀಡುವ ವಿವರಣೆ. ಈ ವಿನೂತನ ವಾದದ ಪ್ರವರ್ತಕ ಫ್ರೆಡ್ ಹಾಯ್ಲ್ (1915 – 2001). ಇಂಗ್ಲೆಂಡಿನ ಈ ಖಭೌತವಿಜ್ಞಾನಿ 2001 ಆಗಸ್ಟಿನಲ್ಲಿ ವಿಶ್ವಲೀನರಾದರು. ಹಾಯ್ಲ್ – ವಾದದ ಸ್ವಾರಸ್ಯಗ್ರಹಿಸಲು ಖಗೋಳವಿಜ್ಞಾನ ಏರಿಬಂದಿರುವ ಮಜಲುಗಳತ್ತ ವಿಹಂಗಮ ದೃಷ್ಟಿ ಬೀರಬೇಕು.

ಖಗೋಳವಿಜ್ಞಾನದ ಪ್ರಮುಖ ಮಜಲುಗಳು

ನಾಗರಿಕತೆ ಆರಂಭವಾಗುವ ಮೊದಲು (ಕ್ರಿಸ್ತಪೂರ್ವ 10,000ಕ್ಕಿಂತ ಹಿಂದೆ) ಮಾನವನಿಗೆ ಗಗನವೊಂದು ನಿಗೂಢ ವಿಸ್ಮಯಗಳ ಉಗ್ರಾಣ, ಸೂರ್ಯ ಚಂದ್ರ ಗ್ರಹ ತಾರೆಗಳ ಚಾರಣ ತಾಣ, ಮತ್ತು ವ್ಯಕ್ತಿಯ ಭೂತ ವರ್ತಮಾನ ಹಾಗೂ ಭವಿಷ್ಯಗಳಿಗೆ ಹಿಡಿದಿರುವ ದರ್ಪಣ. ಆಕಾಶದ ಗೋಚರ ವಿದ್ಯಮಾನಗಳಿಗೆ ಮಾನವನ ಕುತೂಹಲಮತಿ ವ್ಯಾಖ್ಯಾನ ಬರೆಯಿತು. “ನನ್ನ ನೆಲೆಯೇ ವಿಶ್ವಕೇಂದ್ರ, ಇದು ಅಚಲ. ಸಮಸ್ತ ಆಕಾಶಕಾಯಗಳೂ ಇದನ್ನು ಪರಿಭ್ರಮಿಸುತ್ತಿರಬೇಕಾದದ್ದು ಸೃಷ್ಟೀಶನ ಆಣತಿ. ಮಾನವ ಆ ಸಾಕ್ಷಾತ್ ಭಗವಂತ ಪ್ರತಿಬಿಂಬಲ್ಲವೇ?”

ಇಂಥ ಭಾವಲಹರಿಗಳಿಗೊಂದು ಒಡಲು ಕೊಟ್ಟವ ಅರಿಸ್ಟಾಟಲ್ (ಕ್ರಿಪೂ 384 – 322). ಇದಕ್ಕೆ ಉಸಿರು ಊದಿರುವ ಕ್ಲಾಡಿಯಸ್ ಟಾಲೆಮಿ (ಕ್ರಿಶ 1 – 2 ಶತಮಾನ). ಇದು ಟಾಲೆಮಿವಾದವೆಂದೇ ಪ್ರಸಿದ್ಧವಾಯಿತು. ಭೂಕೇಂದ್ರವಾದ (geocentric hypothesis) ಪರ್ಯಾಯನಾಮ. ಇದೊಂದು ಮಾನವಕೃತ ರಂಗವೇದಿಕೆ. ಗಗನಕಾಯಗಳು ಇಲ್ಲಿಯ ನಟರು, ಮಾನವ ನೋಟಕ. ಈ ನಿರಂತರ ನಾಟಕದ ಪಾಠ, ನಿಯಮ, ಸೂತ್ರ ಮುಂತಾದವುಗಳ ಶೋಧ ಖಗೋಳವಿಜ್ಞಾನಿಯ ಪ್ರಮುಖ ಪ್ರೇರಣೆ. ಶತಮಾನಗಳು ಸಂದಂತೆ, ನಾಟಕದ ಅಸಂಖ್ಯ ವಿನೂತನ ದೃಶ್ಯಗಳು ಅನಾವರಣಗೊಂಡಂತೆ, ಮಾನವನಿಗೆ ಒಂದು ಸಂಗತಿ ಸ್ಪಷ್ಟವಾಯಿತು: ಅಗೆದಷ್ಟೂ ಮುಗಿಯದ ಗಣಿ, ಮತ್ತು ಬಗೆದಷ್ಟೂ ಮಿರುಗುವ ಮಣಿ ಈ ವ್ಯೋಮ. ಹೊಸ ಮಾಹಿತಿಗಳ ಮಹಾಪೂರವನ್ನು ವಿಶ್ಲೇಷಿಸಿ ವಿವರಿಸುವಲ್ಲಿ ಟಾಲೆಮಿವಾದ ಕುಂಟುತ್ತಿದೆಯೋ ಎಂಬ ಅನುಭವ; “ಸೋರುತಿಹುದು ಮನೆಯ ಮಾಳಿಗಿ!”

“ಸಂಭವಾಮಿ ಯುಗೇಯುಗೇ” ಎಂಬಂತೆ ನಿಕೊಲಾಸ್ ಕೊಪರ್ನಿಕಸ್ (1473 – 1543) ಎಂಬ ಯುಗಪುರುಷನ ಅವತಾರವಾಯಿತು. ಟಾಲೆಮಿ – ವಾದಕ್ಕೆ ವಿದಾಯ ಹೇಳಿ ಸೂರ್ಯಕೇಂದ್ರವಾದವನ್ನು (heliocentnic hypothesis) ಆವಾಹಿಸಿದವನೀತ. ಇದನ್ನು ಕೊಪರ್ನಿಕಸ್ – ವಾದವೆಂದೂ ಹೇಳುವುದುಂಟು. ಈ ದ್ವಿತೀಯ ರಂಗವೇದಿಕೆಯಲ್ಲಿ ಸೂರ್ಯನ ನೆಲೆಯೇ ಸ್ಥಿರಕೇಂದ್ರ, ಭೂಮಿಯೂ ಸೇರಿದಂತೆ ಸಮಸ್ತ ಗ್ರಹೋಪಗ್ರಹಗಳೂ ಇದರ ಸುತ್ತ ವರ್ತುಳೀಯ ಕಕ್ಷೆಗಳಲ್ಲಿ ನಿತ್ಯ ಸಂಚಾರಿಗಳಾಗಿವೆ. ಹೀಗೆ ಭೂಮಿಯ ವ್ಯಕ್ತಿ – ಕೇಂದ್ರಿತ ಸ್ವಪ್ರತಿಷ್ಠೆ ಸೂರ್ಯನ ವಸ್ತುನಿಷ್ಠ ನೈಜತೆಗೆ ಮಣಿಯಬೇಕಾಯಿತು.

ಕೊಪರ್ನಿಕಸ್ – ರಂಗವೇದಿಕೆಯ ಒಳಗೆ ದಾಖಲಾದ ಚಲನವಿನ್ಯಾಸಗಳಿಗೆ ಗಣಿತದ ಖಚಿತ ಸೂತ್ರಗಳನ್ನು ನೇಯ್ದಾತ ಯೋನ್ ಕೆಪ್ಲರ್ (1571 – 1630). ವೀಕ್ಷಣಲಭ್ಯ ಮಾಹಿತಿಗಳನ್ನು ಈತ ಅಧ್ಯಯನ – ಚಿಂತನಮಾಡಿ ಗ್ರಹಚಲನ ನಿಯಮಗಳನ್ನು ಆವಿಷ್ಕರಿಸಿದ. ಇವು ಮೂರು. ಈತನ ಹೆಸರಿನಿಂದಲೇ ಪ್ರಸಿದ್ಧವಾಗಿವೆ. ಸೂರ್ಯಕುರಿತಂತೆ ಗ್ರಹಚಲನೆ ವಾಸ್ತವತೆ, ಇದರ ಯಥಾ ಗಣಿತ ಪ್ರತಿಬಿಂಬ ಕೆಪ್ಲರ್ – ಗ್ರಹಚಲನನಿಯಮಗಳು.

ಕೆಪ್ಲರನ ಜ್ಯೇಷ್ಠ ಸಮಕಾಲೀನ ವಿಜ್ಞಾನಿ ಗೆಲಿಲಿಯೋ ಗೆಲಿಲೀ (1546 – 1642). ಈತ ಪ್ರಯೋಗ ಕುಶಲಿ, ಗಣಿತನಿಶಿತಮತಿ, ಮತ್ತು ನಿರ್ಭೀತ ವಿಜ್ಞಾನ ಪ್ರಸಾರಕ. ಬಾಹ್ಯಬಲ ಪ್ರಯುಕ್ತವಾದ ಹೊರತು ಜಡವಸ್ತುವಿನಲ್ಲಿ ಸ್ಥಿತಿವ್ಯತ್ಯಯ ಸಂಭವಿಸದು ಎಂದು ಪ್ರಯೋಗರೀತ್ಯ ಸಾಧಿಸಿದ. ಕೊಪರ್ನಿಕಸ್ – ವಾದದ ನಿಷ್ಠಾವಂತ ಅನುಯಾಯಿಯಾಗಿ ಖಗೋಳ ಕಾಯಗಳ ಸ್ಥಿತಿಗತಿ ಕುರಿತ ವೀಕ್ಷಣೆ ಮತ್ತು ಪ್ರಯೋಗಗೈದ. ವಿಶ್ವವೊಂದು ವಿವಿಧಬಲಗಳಸಂಕೀರ್ಣಜಾಲ. ಇದನ್ನು ಗಣಿತೋಕ್ತಿಗಳಲ್ಲಿ ನಿರೂಪಿಸಿ ಇವುಗಳೊಂದಿಗೆ ಗಣಿತ ನಿಯಮಾನುಸಾರ ವರ್ತಿಸಿ ನೂತನ ಫಲಿತಾಂಶ ಪಡೆಯುವುದು, ಮತ್ತು ಈ ಫಲಿತಾಂಶವನ್ನು ವಾಸ್ತವತೆಯ ಜೊತೆ ತುಲನಿಸಿ ಹೊಸ ಜಾಡು ಕಾಣುವುದು ಸಾಧ್ಯವಿದೆ ಎಂಬ ವಾಸ್ತವತೆ – ಗಣಿತ ಅಂತರಸಂಬಂಧ ಸ್ಥಾಪಿಸಿದ. ಗೆಲಿಲಿಯೋ ನಿರ್ಮಿಸಿದ ದೂರದರ್ಶಕವು ವಿಶ್ವಕ್ಕೆ ಹೊಸ ಕಿಂಡಿ ತೆರೆಯಿತು.

ಗೆಲಿಲಿಯೋ – ಕೆಪ್ಲರ್ ಎಂಬ ಮೇರು ಯಮಳ ವಿಜ್ಞಾನಿಗಳ ಸುಭದ್ರ ಮತ್ತು ವಿಶಾಲ ಭುಜಗಳ ಮೇಲೆ ನಿಂತು, ದೃಷ್ಟಿಚುಂಚನ್ನು ದಿಗಂತದಂಚಿನಿಂದಾಚೆಗೆ ಚಾಚಿ, ಜ್ಞಾನಸೀಮೆಯನ್ನು ಕ್ರಾಂತಿಕಾರಕವಾಗಿ ವಿಸ್ತರಿಸಿದ ಪರಮಭವ್ಯ ಸಂಜ್ಞಾಜ್ಯೋತಿ ಐಸಾಕ್ ನ್ಯೂಟನ್ (1642 – 1727). ಗ್ರಹಗಳು ಸೂರ್ಯನನ್ನು ಕೆಪ್ಲರ್ – ನಿಯಾಮಾನುಸಾರ ಪರಿಭ್ರಮಿಸುತ್ತಿರುವುದರ ರಹಸ್ಯಶೋಧನೆ ಈತನ ಗೀಳು. ಫಲ? ಗಣಿತ, ಭೌತ ಮತ್ತು ಖಗೋಳವಿಜ್ಞಾನಗಳ ಇತೋಪ್ಯತಿಶಯ ಪ್ರವರ್ಧನೆ. ನ್ಯೂಟನ್ನನಿಂದ ವಿಶ್ವಗುರುತ್ವಾಕರ್ಷಣನಿಯಮದ ಆವಿಷ್ಕಾರವೇ (1665 – 66) ಕೆಪ್ಲರ್ – ನಿಯಮಗಳಿಗೆ ಮತ್ತು ಗೆಲಿಲಿಯೋ – ಪರಿಕಲ್ಪನೆಗಳಿಗೆ ಸಿದ್ಧಿಸಿದ ಪ್ರಥಮ ಸೈದ್ಧಾಂತಿಕ ಭಾಷ್ಯ. ನ್ಯೂಟನ್ ವಿವರಿಸಿದ: ಎರಡು ಕಾಯಗಳ ನಡುವೆ ವರ್ತಿಸುವ ಗುರುತ್ವಾಕರ್ಷಣಬಲ ಅವುಗಳ ರಾಶಿ – ಗುಣಲಬ್ಧಕ್ಕೆ ಅನುಲೋಮಾನುಪಾತವಾಗಿಯೂ ನಡುವಿನ ಅಂತರದ ವರ್ಗಕ್ಕೆ ವಿಲೋಮಾನುಪಾತೀಯವಾಗಿಯೂ ಇದೆ. ಹೀಗೆ ಸುಂದರ ಗಣಿತೋಕ್ತಿಯೊಂದರಲ್ಲಿ ವಿಶ್ವದ ವೈವಿಧ್ಯ ವಿಸ್ತಾರಗಳನ್ನು ಅಡಕವಾಗಿ ಹಿಡಿದಿಟ್ಟು ವಿವರಿಸುವುದು ಸಾಧ್ಯವಾಯಿತು. ಅಲ್ಲಿದೆ ವಾಸ್ತವಬಿಂಬ, ಇಲ್ಲಿದೆ ಅದರ ಗಣಿತ ಪ್ರತಿಬಿಂಬ, ಇವುಗಳ ನಡುವೆ ಸೇತುವೆಯಾಗಿ ನಿಂತಿದ್ದಾನೆ. ಈ ವಿಜ್ಞಾನಿ ಎಂಬ ಹುಂಬ! ಮೊದಲು ವಿಶ್ವದಿಂದ ಸೂತ್ರನಿಗಮನ. ಬಳಿಕ ಸೂತ್ರದಿಂದ ವಿಶ್ವದ ಹೊಸ ಮಗ್ಗುಲಿನ ದರ್ಶನ. ಈ ಎರಡನೆಯದು ಮಾನವನ ಅನ್ವೇಷಣಪಕ್ಷಿಗೆ ಹೊಸಗರಿ ಮೂಡಿಸಿತು.

ದೂರದರ್ಶಕ ನೀಡಿದ ದಿವ್ಯದೃಷ್ಟಿ ಮತ್ತು ನ್ಯೂಟನ್ – ನಿಯಮ ಒದಗಿಸಿದ ಗಣಿತಸೃಷ್ಟಿ ಖಗೋಳವಿಜ್ಞಾನದಲ್ಲಿ ಅಸಂಖ್ಯ ನವ ಆವಿಷ್ಕಾರಗಳ ವೃಷ್ಟಿಯನ್ನೇ ಕರೆದುವು. 19ನೆಯ ಶತಮಾನಾಂತ್ಯದ ತನಕ ಈ ಜ್ಞಾನಯಾನ ಸಫಲ, ಸುದೃಢ ಮತ್ತು ಸಮೃದ್ಧವಾಗಿ ಮುನ್ನಡೆಯಿತು: ಸರ್ವಂ ನೂಟನ್‌ಮಯಂವಿಶ್ವಂ ಎಂಬಂತೆ! ಆದರೆ ವಿಶ್ವ ಎಂದೂ ಜಡ ಒಣ ಮಾಹಿತಿಗಳ ಬರಿಗುಪ್ಪೆ ಅಲ್ಲ. ಅದು ಸದಾ ನವನವೋನ್ಮೇಷಶಾಲಿನಿ, ಜೀವಂತ ಭಾವನೆಗಳ ಚಿರಂತನ ಪೋಷಕ ಗಣಿ, ಸಂತತ ದ್ರವ್ಯ ಪ್ರದಾಯಕ ಸ್ಯಮಂತಕಮಣಿ.

ಖಭೌತವಿಜ್ಞಾನದ ಆವಾಹನೆ

ನ್ಯೂಟನ್ – ವೇದಿಕೆ ಆಧರಿಸಿ ನೂತನ ಮಾಹಿತಿ ಸಂಗ್ರಹಿಸಿದ್ದು ನಿಜ. ಆದರೆ ಕಾಲ ಸಂದಂತೆ ಜಮೆಯಾದುದನ್ನು ಖುದ್ದು ಆ ವೇದಿಕೆಯ ಒಳಗೇ ವಿವರಿಸಲು ಸಾಧ್ಯವಾಗದೋ ಎನ್ನುವ ಪರಿಸ್ಥಿತಿ ಹಣುಕಿತು. ತಾಯಿ ಕಾಣುವ ನೋಟ ಮಗುವಿಗೆ ಮುನ್ನೋಟ ಒದಗಿಸುವುದು ಖರೆ, ಆದರೆ ಖುದ್ದು ಮಗು ಕಾಣುವ ನೋಟ ಮಾತ್ರ ಬೇರೆಯೇ ಅಲ್ಲವೇ? ಹೊಸ ಮಾಹಿತಿಗೆ ಹೊಸ ಸಿದ್ಧಾಂತ ಅವಶ್ಯವಾಯಿತು. ಆಗ ರಂಗ ಪ್ರವೇಶಿಸಿದುವು ಶಕಲ ಸಿದ್ಧಾಂತ (1900), ವಿಶೇಷ ಸಾಪೇಕ್ಷತಾಸಿದ್ಧಾಂತ (1905), ಮತ್ತು ಸಾರ್ವತ್ರಿಕ ಸಾಪೇಕ್ಷತಾಸಿದ್ಧಾಂತ (1915). ಇವುಗಳ ಒಟ್ಟು ಹೆಸರು ಆಧುನಿಕ ಭೌತವಿಜ್ಞಾನ (modern physics). ಎಂದೇ ತತ್ಪೂರ್ವದ ನ್ಯೂಟನ್ನನದು ಅಭಿಜಾತ ಭೌತವಿಜ್ಞಾನ (classical physics). ಪರಮಾಣುವಿನ ಸೂಕ್ಷ್ಮಜಗತ್ತು ಮತ್ತು ನಕ್ಷತ್ರ ನೀಹಾರಿಕೆಗಳ ಬೃಹಜ್ಜಗತ್ತು ಇವನ್ನು ಅಭ್ಯಸಿಸಿ ವ್ಯಾಖ್ಯಾನಿಸುವಲ್ಲಿ ಆಧುನಿಕ ಭೌತವಿಜ್ಞಾನ ಉಪಯುಕ್ತ ಉಪಕರಣ. ನಮ್ಮ ದೈನಂದಿನ ಜೀವನದ ಸಮಸ್ತ ಭೌತಸಮಸ್ಯೆಗಳಿಗೂ – ಸ್ಥಲೀಯವಾಗಿ ವಾಹನಚಾಲನೆಯಿಂದ ತೊಡಗಿ ಚಾಂದ್ರಯಾನದವರೆಗೂ – ಸಮರ್ಪಕ ಪರಿಹಾರ ಒದಗಿಸುವ ಆಯುಧ ಅಭಿಜಾತ ಭೌತವಿಜ್ಞಾನ.

ಖಗೋಳವಿಜ್ಞಾನ ಮತ್ತು ಆಧುನಿಕ ಭೌತವಿಜ್ಞಾನ ಇವುಗಳ ಬಲಿಷ್ಠ ಸಂಕರಶಿಶು ಖಭೌತವಿಜ್ಞಾನ (aslrophysics): ಖಗೋಳ ಕಾಯಗಳಿಗೆ ಭೌತವಿಜ್ಞಾನ ನಿಯಮಗಳನ್ನು ಅನ್ವಯಿಸಿ ಪಡೆಯುವ ಜ್ಞಾನದ ಮೊತ್ತ.

ಖಭೌತವಿಜ್ಞಾನ ಒದಗಿಸಿದ ವಿಶ್ವದೃಷ್ಟಿ ಊಹಾತೀತ ವಿಚಿತ್ರ ದೃಶ್ಯಗಳನ್ನು ಅನಾವರಣಿಸಿತು. ಇವುಗಳ ಸಾರ:

* ಸೂರ್ಯನಂಥ 400 ಬಿಲಿಯನ್ (1 ಬಿಲಿಯನ್ = 1,000,000,000) ನಕ್ಷತ್ರಗಳ ಸಂಘಟನೆ ಆಕಾಶಗಂಗೆ (Milky Way). ಸೂರ್ಯ ಇದರಲ್ಲಿ ಸಾಧಾರಣ ದರ್ಜೆಯ ಕಿರಿ ಮತ್ತು ಯುವತಾರೆ, ಅಂಚಿನಲ್ಲಿ ನೆಲೆ. ಸದಸ್ಯ ನಕ್ಷತ್ರಗಳ ಪರಸ್ಪರ ಗುರುತ್ವಾಕರ್ಷಣಬಲ ಈ ಜೇನುಗೂಡನ್ನು ಒಂದು ಘಟಕವಾಗಿ ಹಿಡಿದಿಡುತ್ತದೆ. ಎರಡು ಆಸನ್ನ ತಾರೆಗಳ ನಡುವಿನ ಸರಾಸರಿ ಅಂತರ 10 ಜ್ಯೊತಿರ್ವಷಗಳು. (ಸೆಕೆಂಡಿಗೆ ಸುಮಾರು 300,000 ಕಿಮಿವೇಗದಿಂದ ಸರಳರೇಖೆ ನೇರ ಧಾವಿಸುವ ಬೆಳಕಿನ ಕಿರಣ 1 ವರ್ಷದಲ್ಲಿ ಕ್ರಮಿಸುವ ದೂರವೇ ಜ್ಯೋತಿರ್ವರ್ಷ.)

* ಆಕಾಶಗಂಗೆಯಂಥ ನಾಕ್ಷತ್ರಿಕ ಸಂಘಟನೆಯ ಸಾಮಾನ್ಯ ನಾಮ ಬ್ರಹ್ಮಾಂಡ (galaxy). ಪ್ರತಿಯೊಂದು ಬ್ರಹ್ಮಾಂಡವೂ ಒಂದೊಂದು ಗುರುತ್ವಾತ್ಮಕ ವ್ಯವಸ್ಥೆ – ಜೇನು ಹುಟ್ಟಿನಂತೆ. ಬ್ರಹ್ಮಾಂಡಗಳ ಸಮುದಾಯವೇ ವಿಶ್ವ ಜ್ಞಾತ ವಿಶ್ವದಲ್ಲಿ ಸುಮಾರು 400 ಬಿಲಿಯನ್ ಬ್ರಹ್ಮಾಂಡಗಳಿವೆಯೆಂದು ಅಂದಾಜು. ಮಾನವನ ವೀಕ್ಷಣೆ ಕಲ್ಪನೆಗಳು ಇನ್ನೂ ಆಚೆಗೆ ಚಾಚುವುದು ಸಾಧ್ಯವಿದೆ. ನಮ್ಮ ಮಾಪನೋಪಕರಣದ ಸಾಮರ್ಥ್ಯಮಿತಿಯನ್ನು ಮೀರಿ ನಾವು ಏನನ್ನೂ ಪರಿಗ್ರಹಿಸಲಾರೆವಷ್ಟೆ.

* ವಿಶ್ವವ್ಯಾಕೋಚಿಸುತ್ತಿದೆ – ಹಿಗ್ಗುತ್ತಿದೆ! ನಮ್ಮ ದ್ವೀಪದಿಂದ (ಭೂಮಿ) ಕಾಣುವಂತೆ ಇತರ ಸಮಸ್ತ ಬ್ರಹ್ಮಾಂಡಗಳೂ ದೂರದೂರ, ನಮಗೆ ಹೆದರಿಯೋ ಎಂಬಂತೆ ಧಾವಿಸುತ್ತಿವೆ. ದೂರದೊಡನೆ ಧಾವನವೇಗವೂ ವರ್ಧಿಸುತ್ತಿದೆ. ಈಗ, ವಿಶ್ವದಲ್ಲಿ ಎಲ್ಲ ತಾಣಗಳೂ ಒಂದೇ ಆಗಿರಬೇಕು. ನಮ್ಮ ತಾಂಡೆ (ಆಕಾಶಗಂಗೆ) ಏನೂ ಅಧಿಕ ಪ್ರಿಯ ಸ್ಥಾನವಾಗಿರಬೇಕಾಗಿಲ್ಲ ಎಂಬ ನಿರ್ಮೋಹ ದೃಷ್ಟಿ ತಳೆಯುವುದು ಸಾಧು. ಹಾಗಾದರೆ? ಈ ಒಗಟಿಗೆ ಒಡಪಾಗಿ ವಿಜ್ಞಾನಿಗಳೊಂದು ಊಹೆ ಮಂಡಿಸಿದರು: ಬಲೂನ್ – ಮಚ್ಚೆ ಸಂಬಂಧ. ಖಾಲಿ ಬಲೂನಿನ ಮೈಮೇಲೆ ಎಡ್ಡತಿಡ್ಡ ಬೇಕಾದಂತೆ ಹಲವಾರು ವಿವಿಕ್ತ ಮಚ್ಚೆಗಳನ್ನು ಗುರುತಿಸಬೇಕು; ಅದಕ್ಕೆ ಗಾಳಿ ಊದಬೇಕು; ಅದು ಉಬ್ಬತೊಡಗುತ್ತದೆ; ಪರಿಣಾಮವಾಗಿ ಮಚ್ಚೆಗಳೆಲ್ಲವೂ ದೂರ ದೂರ ಸರಿಯಲಾರಂಭಿಸುತ್ತವೆ. ಆದ್ದರಿಂದ ಯಾವುದೇ ಮಚ್ಚೆಯಲ್ಲಿ ನೆಲಸಿರುವಾತನಿಗೆ ಉಳಿದವೆಲ್ಲವೂ ತನ್ನಿಂದ ದೂರದೂರ ಜಾರುತ್ತಿರುವ ದೃಶ್ಯ ಕಾಣುತ್ತದೆ.

* ಸರಿ, ಇದೇ ವಾದವನ್ನು ಕಾಲದ ಋಣದಿಶೆಯಲ್ಲಿ, ಅಂದರೆ ಭೂತಕಾಲದತ್ತ, ವಿಸ್ತರಿಸಿದರೆ (ಇದು ಹಿಮ್ಮೊಗ ಚಲನೆ) ಎಂಥ ದೃಶ್ಯ ಪ್ರಕಟವಾಗಬೇಖು ಎಂಬ ಸಹಜ ಪ್ರಶ್ನೆ ಏಳುತ್ತದೆ. ನಾವೀಗ ಸಂಕೋಚಿಸುತ್ತಿರುವ ವಿಶ್ವನ್ನು ಗಮನಿಸುತ್ತಿದ್ದೇವೆ. ಬಲೂನ್ ಕುಗ್ಗುತ್ತಿದೆ, ಮಚ್ಚೆಗಳು ಹತ್ತಿರ ಹತ್ತಿರ ಸರಿಯುತ್ತಿವೆ. ಎಲ್ಲಿಯ ತನಕ? ಲಭ್ಯ ವೈಜ್ಞಾನಿಕ ಮಾಹಿತಿಗಳನ್ನು ಆಧರಿಸಿ ಸಮಗ್ರ ಭೌತ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಎದುರಾದ ದೃಶ್ಯ ಅತಿ ವಿಸ್ಮಯಕಾರಿ ಆಗಿತ್ತು: ಸುಮಾರು 15 ಬಿಲಿಯನ್ ವರ್ಷಗಳ ಹಿಂದೆ, ಇಂದಿನ ವಿಸ್ತೃತ ಮತ್ತು ವ್ಯಾಕೋಚನಶೀಲ ವಿಶ್ವ, ಅಂಡವಿಶ್ವ (cosmic egg) ಅಥವಾ ಪರಮಾದಿ ಪರಮಾಣು (primordial atom) ಎಂಬ ಅಖಂಡ ಘಟಕವಾಗಿ ಗಿಡಿದುಕೊಂಡಿತ್ತು. ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಮುಂತಾದ ಮೂಲಕಣಗಳ ಅತಿಸಾಂದ್ರ ಮತ್ತು ತೀವ್ರ ತಪ್ತರಾಶಿ ಅದು. ತನ್ನ ಭಾರಕ್ಕೆ ತಾನೇ ಮಣಿದ ಅದರ ತಿರುಳಿನಲ್ಲಿ ಅಗಾಧ ಸಂಮರ್ದ ಉದ್ಭವಿಸಿ ರೌರವದ ಅತಿಶಾಖ ತಹತಹಿಸಿತು. ಆಗ ಸಂಭವಿಸಿತೊಂದು ಪ್ರಳಯ ರುದ್ರನ ವಿಲಯ ತಾಂಡವದಂಥ ಮಹಾವಿಸ್ಫೋಟ (Big Bang). ಈ ಪರಮಾದಿ ಘಟನೆಯೇ ವಿಶ್ವದ ಆರಂಭ, ದೇಶಕಾಲಗಳ ಮೂಲಬಿಂದು. ಇದರ ಕಾರಣವಾಗಿ ಅಂಡವಿಶ್ವ ಅಸಂಖ್ಯ ಅಸಮಗಾತ್ರಗಳ ಖಂಡಗಳಾಗಿ ಒಡೆಯಿತು. ಇವು ಸ್ಫೋಟಕೇಂದ್ರದಿಂದ ಸಕಲ ದಿಶೆಗಳಿಗೂ ಕವಣೆ ಬೀರಲ್ಪಟ್ಟವು – ಬಾಂಬ್ ಸ್ಫೋಟನಾನಂತರ ಆ ಸ್ಥಳದಿಂದ ಎಲ್ಲೆಡೆಗಳಿಗೆ ಎಸೆಯಲ್ಪಡುವ ಸಿಡಿತಲೆಗಳಂತೆ, 1940ರ ದಶಕದ ಪರಿಸ್ಥಿತಿ ಇದು.

ಸ್ತಿಮಿತಸ್ಥಿತಿ ವಾದ

ವಿಶ್ವಾರಂಭ ಮಹಾವಿಸ್ಫೋಟದಿಂದ ಸಂಭವಿಸಿತೆಂಬ ಊಹೆಯನ್ನು ಅಂದಿನ ಮುಂಚೂಣಿ ಖಭೌತವಿಜ್ಞಾನಿಗಳಾಗಿದ್ದ ಹಾಯ್ಲ್, ಹರ್ಮನ್ ಬಾಂಡಿ (1919) ಮತ್ತು ತಾಮಸ್ ಗೋಲ್ಡ್ (1920) ಒಪ್ಪಲಿಲ್ಲ. ಹಾಗಾದರೆ ವರ್ತಮಾನದಲ್ಲಿ ಸ್ಪಷ್ಟವಾಗಿ ಪ್ರಕಟವಾಗುತ್ತಿರುವ ವಿಶ್ವದ ನಿರಂತರ ವ್ಯಾಕೋಚನಶೀಲತೆಯ ಮರ್ಮವೇನು? ಭೂತಕಾಲದಲ್ಲೆಂದೋ ಈ ವ್ಯಾಕೋಚನೆ ತೊಡಗಿರಬೇಕಲ್ಲವೇ?

ಹಾಯ್ಲ್ ಮತ್ತು ಸಹಚರರು ಸ್ತಿಮಿತಸ್ಥಿತಿ ವಾದವನ್ನು ಮಂಡಿಸಿದರು. ವಿಶ್ವ ಸ್ವಯಂಸೃಷ್ಟ ಮತ್ತು ಸ್ವಯಂಪರಿಪೂರ್ಣ ಎಂಬುದು ಇವರ ಆಧಾರ ಭಾವನೆ. ಆದ್ದರಿಂದ ಇದು ಸತತವಾಗಿ ಸ್ಥಲೀಯ ವ್ಯತ್ಯಯಗಳ ತುಮುಲ ರಂಗವಾಗಿದ್ದರೂ ಸಮಗ್ರವಾಗಿ ಏಕ ಸ್ಥಿತಿಯಲ್ಲಿಯೇ ಇರುವುದು. ಇದರ ಅರ್ಥ: ಯಾರೇ ಎಲ್ಲೇ ಎಂದೇ ವೀಕ್ಷಿಸಿದರೂ ವಿಶ್ವ ಒಂದೇ ದೃಶ್ಯ ಪ್ರದರ್ಶಿಸುತ್ತಿರುವುದು. ಎಂದೇ ಭೂತಸ್ಥಿತಿ ಇಲ್ಲ. ಭವಿಷ್ಯ ವ್ಯತ್ಯಯ ಆಗದು, ವರ್ತಮಾನ ಸ್ತಿಮಿತತೆಯೊಂದೇ ಸಾಧು. ಅರ್ಥಾತ್, ವಿಶ್ವಾರಂಭ ಮಹಾವಿಸ್ಫೋಟದಿಂದ ಘಟಿಸಲಿಲ್ಲ.

ಹಾಗಾದರೆ ಓಡಿಹೋಗುತ್ತಿರುವ ಬ್ರಹ್ಮಾಂಡಗಳು ತೆರವು ಮಾಡಿದ ನೆಲೆಗಳು ಏನಾಗುತ್ತವೆ? ಸ್ತಿಮಿತ ಸ್ಥಿತಿವಾದ ಹೇಳುತ್ತದೆ: “ವಿಶ್ವದಲ್ಲಿ ಎಲ್ಲ ನೆಲೆಗಳೂ ಒಂದೇ, ಯಾವುದೇ ನೆಲೆಯಿಂದ ಗೋಚರಿಸುವ ದೃಶ್ಯವೂ ಒಂದೇ, ಇಂತಿದ್ದೂ ವಿಶ್ವವ್ಯಾಕೋಚಿಸುತ್ತಿದೆ ಎಂದು ವೀಕ್ಷಣೆಯಿಂದ ಸ್ಥಿರೀಕೃತವಾಗಿದೆ. ಇದಕ್ಕೆ ವಿವರಣೆ: ಪ್ರತಿಯೊಂದು ತೆರವಿನಲ್ಲಿಯೂ ನವಬ್ರಹ್ಮಾಂಡ ಪುನಸ್ಲೃಷ್ಟಿ ಆಗುತ್ತಲೇ ಇರುವುದು “ಜಲಾಶಯಕ್ಕೆ ಜಮೆ ಆಗುವ ಮತ್ತು ಅದರಿಂದ ಖರ್ಚಾಗುವ ನೀರಿನ ಮೊತ್ತ ಒಂದೇ ಇರುವಾಗ ಅಲ್ಲೊಂದು ಗತ್ಯಾತ್ಮಕ ಸ್ತಿಮಿತ ಸ್ಥಿತಿ ಏರ್ಪಡುವುದಿಲ್ಲವೇ, ಹಾಗೆ.”

ಹಾಯ್ಲರ್ ಸಮಕಾಲೀನ ಖಭೌತವಿಜ್ಞಾನಿಗಳಾಗಿದ್ದ ಜಾರ್ಜ್‌ಗ್ಯಾಮೊ (1904 – 68), ಜೇಮ್ಸ್ ಜೀನ್ಸ್ (1877 – 1946), ಆರ್ಥರ್ ಎಡಿಂಗ್ಟನ್ (1882 – 1944) ಮೊದಲಾದವರು ಮಹಾವಿಸ್ಫೋಟವಾದದ ಪ್ರವರ್ತಕರು ಮತ್ತು ಬೆಂಬಲಿಗರು. ಇವರ ತಾರ್ಕಿಕ ಊಹೆಯನ್ನು ಖಂಡಿಸುತ್ತ ಹಾಯ್ಲ್, “ಅದೊಂದು Big Bluff Big Bang ಅಲ್ಲ ಎಂದು ಗೇಲಿ ಮಾಡಿದರು. ಗ್ಯಾಮೊ ಈ Big Bang ಪದವನ್ನೇ ಗಟ್ಟಿಯಾಗಿ ಹಿಡಿದು, ಮಹಾವಿಸ್ಫೋಟವಾದಕ್ಕೆ ಇದೇ ಹೆಸರಿಟ್ಟು ಚಲಾವಣೆಗೆ ತಂದರು – ನಿಂದಕನ ಹೆಸರನ್ನು ಮಗನಿಗಿಡಬೇಕು! Big Bluffನ ಕನ್ನಡ ರೂಪ ‘ಮಹಾಗಫಾ,’ Big Bangನದು ‘ಮಹಾಬಾಜಣೆ.’

20ನೆಯ ಶತಮಾನದ ಕೊನೆ ವೇಳೆಗೆ ವೀಕ್ಷಣಲಭ್ಯ ಮಾಹಿತಿಗಳೆಲ್ಲವೂ ಮಹಾಬಾಜಣೆ ವಾದವನ್ನೇ ಪುರಸ್ಕರಿಸಿ ಪುಷ್ಟೀಕರಿಸಿವೆ. ಆದ್ದರಿಂದ ಇಂದು (2002) ಸ್ತಿಮಿತಸ್ಥಿತಿ ವಾದಕ್ಕೆ ಐತಿಹಾಸಿಕ ಮಹತ್ತ್ವ ಮಾತ್ರ ಇರುವುದಾಗಿದೆ.

ಹಾಯ್ಲ್, ಜೀನ್ಸ್, ಎಡಿಂಗ್ಟನ್, ಗ್ಯಾಮೊ ಎಲ್ಲರೂ ಪ್ರಧಾನವಾಗಿ ಖಭೌತವಿಜ್ಞಾನ ಸಂಶೋಧಕರು, ಜೊತೆಯಲ್ಲೇ ಜನಪ್ರಿಯ ವಿಜ್ಞಾನ ಪ್ರಸಾರಕರು ಕೂಡ. ಹಾಯ್ಲ್ ಬರೆದಿದ್ದಾರೆ. “ಮನುಕುಲ ಯಾವುದೇ ಕಾಲದಲ್ಲಿ ಊಹಿಸಬಹುದಾದ ಎಲ್ಲ ವಿಸ್ಮಯಗಳನ್ನೂ ಮೀರುವ ಮಹಾವಿಸ್ಮಯಗಳ ನಿರಂತರ ನಿಧಿ ಈ ವಿಶ್ವ”

ಅಂದಿನ ವಿಸ್ಮಯ ಇಂದಿನ ಪರಿಚಯ, ಇಂದಿನ ವಿಸ್ಮಯ ನಾಳಿನ ಪರಿಚಯ ಹೀಗೆ ಸಾಗಿದೆ ವಿಜ್ಞಾನ – ವಿಶ್ವ ಜೈತ್ರ ಯಾತ್ರೆ ಹಾಗಾದರೆ ಭವಿಷ್ಯದ ಗರ್ಭದಲ್ಲಿ ಏನೇನು ವಿಸ್ಮಯಗಳು ಮರಸು ಕುಳಿತಿವೆಯೋ ಊಹಿಸುವುದೂ ಸಾಧ್ಯವಿಲ್ಲ. ಕಾದು ನೋಡುವುದೇ ಶರಣು!

ಇಂದಿನಾ ವಿಸ್ಮಯಂ ನಾಳಿನಾ ಪರಿಚಯಂ
ಅಂದಂದು ಬೆರಗಾಗಿ ಮಾಡು ಸಂಶೋಧನೆಯ
ಬಂದುದ ಪರೀಕ್ಷಿಸು ಕುತೂಹಲದಿ: ಕಾಣುವೆಯೊ
ಮುಂದಿನದ! ಗತಿಶೀಲತೆಯ ವಿಶ್ವ ಅತ್ರಿಸೂನು ||

ಫಲವಂತ ಮಿದುಳಿನಲಿ ವಿಶ್ವ ಸಂಕೀರ್ಣತೆಯು
ಮೆಲು ನುಡಿಯುವುದು ತನ್ನ ಚಿರ ರಹಸ್ಯದ ತುಣುಕ
ಮೊಳಿತ ಮರವಾಗುಲೇ ಕಲ್ಪನೆಯ ಜನಕೆ
ನಲವಿಂದ ಕಾಣಿಪುದು ನವ ದೃಶ್ಯ ಅತ್ರಿಸೂನು ||

ವಿಜ್ಞಾನ ಗಮನದಲಿ ವಿಶ್ವವೇ ಚಿರನಿಕಷ
ಪ್ರಾಜ್ಯಮತಿ ಸೃಷ್ಟಿನಿಯ ಮಾನ್ವೇಷಣೆಯ ಮಹಾ
ಯಜ್ಞದಲಿ ತಾದಾತ್ಮ್ಯ ವೈದಿರಲು ಸ್ಫುರಿಸುವಾ
ಅಜ್ಞೇಯತೆಯ ಮಿನುಗ ಭಾವಿಸೋ ಅತ್ರಿಸೂನು ||
(2006)