“ರಾತ್ರಿ ಆಕಾಶ ಬೆಳ್ಳಗಿಲ್ಲ, ಕಪ್ಪಗಿದೆ, ಇದೇಕೆ ಹೀಗೆ?”

ಎಂಥ ಮೂರ್ಖ ಪ್ರಶ್ನೆ! ಸೂರ್ಯನ ಗೈರುಹಾಜರಿಯಲ್ಲಿ ಆಕಾಶ ಇನ್ನು ಹೇಗೆ ತಾನೇ ಕಾಣಬೇಕು ಎಂದು ನೀವು ಕೆಲೆಯುತ್ತಿರುವುದು ನನಗೆ ಕೇಳುತ್ತಿದೆ. ನಮ್ಮ ಸಾಮಾನ್ಯ ಜ್ಞಾನ ( = ಪೂರ್ವಗ್ರಹಗಳ ಮತ್ತು ಕುರುಡುನಂಬಿಕೆಗಳ ಮೊತ್ತ?) ನಮ್ಮನ್ನು ಸ್ವರಕ್ಷಣೆಯ ಸುಲಭ ಮಾರ್ಗದತ್ತ ಒಯ್ಯುವುದೇ ವಾಡಿಕೆ. ಅಂದರೆ ಒಂದು ಪ್ರಶ್ನೆಗೆ ಥಟ್ಟನೆ ಒಂದು ಉತ್ತರ, ಪಟಾಲಮ್ಮಿನಲ್ಲಯಂತೆ!

ಹೀಗಲ್ಲದೆ ಒಬ್ಬ ಖಗೋಳವಿಜ್ಞಾನಿಯಲ್ಲಿ ಈ ಪ್ರಶ್ನೆ ಎದ್ದುದಾದರೆ ಆತ ಇದಕ್ಕೆ ಸಂಬಂಧಿಸಿದಂತೆ ಸಮಸ್ತ ವಿವರಗಳನ್ನೂ ವೈಜ್ಞಾನಿಕವಾಗಿ ಪರಾಂಬರಿಸಿ ಯುಕ್ತ ಪರಿಹಾರ ಅರಸಲು ಮುಂದಾಗುತ್ತಾನೆ.

ಇಂಥ ಒಂದು ಹಾದಿಯಲ್ಲಿ ಮೊದಲು ನಡೆದಾತ ಜರ್ಮನಿಯ ಹೈನ್ರಿಚ್ ವಿಲ್‌ಹೆಲ್ಮ್ ಮಥೌಸ್ ಆಲ್ಬರ್ಸ್‌(1758 – 1840). ವೃತ್ತಿಯಿಂದ ಈತ ವೈದ್ಯ, ಪ್ರವೃತ್ತಿಯಿಂದ ಖಗೋಳವಿಜ್ಞಾನಿ, ಮನೆಮಾಳಿಗೆಯೇ ವೇಧಶಾಲೆ, ಧೂಮಕೇತುಗಳ ಅನ್ವೇಷಣೆ ಮತ್ತು ಅಧ್ಯಯನ ಈತನ ಪ್ರಥಮಾಸಕ್ತಿ.

ಪ್ರತಿರಾತ್ರಿಯೂ ಆಲ್ಬರ್ಸ್‌ಆಕಾಶವನ್ನು ಜರಡಿ ಆಡುತ್ತಿದ್ದ ಧೂಮಕೇತುಗಳನ್ನು ಹಿಡಿಯಲು ನೀಲವ್ಯೋಮದ ಆಪಾರ ವಿಸ್ತಾರದಲ್ಲಿ ಅವು ತೀರ ವಿರಳ ಮತ್ತು ಆಕಸ್ಮಿಕ ಘಟನೆಗಳು. ಪೂರ್ವಭಾವಿ ಸೂಚನೆ ನೀಡದೇ ಎಲ್ಲೆಂದರಲ್ಲಿ ಎಂದೆಂದರಂದು ಮೈದೋರುವ ವಿಸ್ಮಯಗಳು, “ಅನಂತಕಾಲದ ಯಾತ್ರಿಕರು.”

ಈ ನಿರಂತರ ಅನ್ವೇಷಣೆಯ ವೇಳೆ ಅವನಲ್ಲಿ ಅನುರಣಿಸಿದ ಪ್ರಶ್ನೆ ಇದೇ: ಇರುಳ ಬಾನು ಕಪ್ಪು ಏಕೆ? ಹಗಲು ಅದು ತೊಟ್ಟಿದ್ದ ಬಿಳಿ ಗವಸು ಕರಗಿ ಹೋಗುವುದು ಏಕೆ? ಮಾಸಿಹೋಗುವುದು ಹೇಗೆ?

ಇದಕ್ಕೆ ಉತ್ತರ ಪಡೆಯಲು ಆಲ್ಬರ್ಸ್‌ಹಿಡಿದ ಹಾದಿ ಯಾವುದೆಂದು ತಿಳಿಯುವ ಮೊದಲು ಅಂದು (18 – 19 ಶತಮಾನ) ವಿಶ್ವ ಕುರಿತಂತೆ ಖಗೋಳವಿಜ್ಞಾನ ಮಂಡಿಸಿದ್ದ ಸಿದ್ಧಾಂತ ಏನೆಂದು ಅರಿಯುವುದು ಅವಶ್ಯ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಸಮಕಾಲೀನ ಜ್ಞಾನ ವಿಜ್ಞಾನಗಳ ಶಿಶು, ಎಂಥ ವ್ರವಾದಿ ಪುರುಷೋತ್ತಮರಿಗೂ ಸಂತಶಿರೋಮಣಿಗಳಿಗೂ ಇಲ್ಲಿ ವಿನಾಯಿತಿ ಇಲ್ಲ ಎಂಬುದನ್ನು ಮರೆಯಬಾರದು. ಫಲಜ್ಯೋತಿಷವೆಂಬ ಸಾರ್ವಕಾಲಿಕ ಡೋಂಗಿ, ನೋಸ್ಟ್ರಡ್ಯಾಮಸನ ಭವಿಷ್ಯವಾಣಿಗಳೆಂಬ ನಿರಂತರ ಮೋಸ, ತ್ರಿಕಾಲಜ್ಞಾನಿಗಳೆಂಬ ಆಷಾಢಭೂತಿಗಳ ವಾಮತಂತ್ರ ಯಾವುವೂ ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ ಎಂಬುದನ್ನು ಗಮನಿಸಬೇಕು.

ಚಂದ್ರನಿಲ್ಲದ ಮತ್ತು ಮೋಡ ಮುಸುಕಿದ ರಾತ್ರಿ ಆಕಾಶವನ್ನು ದಿಟ್ಟಿಸಿದರೆ ಅಲ್ಲಿಯ ಹಲವಾರು ಬಿಡಿ ನಕ್ಷತ್ರಗಳಿಗೆ ಹಿನ್ನೆಲೆಯಾಗಿ ಬೆಳಕಿನ ತೆಳುಲೇಪ ಉತ್ತರ – ದಕ್ಷಿಣ ದಿಶೆಯಲ್ಲಿ ಪಸರಿಸಿರುವುದು ಕಾಣುತ್ತದೆ. ಗೆಲಿಲಿಯೋ ಗೆಲಿಲಿ (1564 – 1642) 1610ರಲ್ಲಿ ಮೊತ್ತಮೊದಲಿಗೆ ಇದರತ್ತ ದೂರದರ್ಶಕ ದೃಷ್ಟಿ ಹಾಯಿಸಿದಾಗ “ಇದು ಅದ್ಭುತ! ಇದು ರಮ್ಯ!” ಎಂದು ಕುಣಿದಾಡಿದ. ಅಸಂಖ್ಯ ನಕ್ಷತ್ರಗಳ ಅಪಾರ ಸಮುದಾಯವಿದು. ಈ ನಕ್ಷತ್ರಗಳು ನಮ್ಮಿಂದ ಊಹಾತೀತ ದೂರಗಳಲ್ಲಿರುವುದರಿಂದ ಬಿಡಿಬಿಡಯಾಗಿ ಪ್ರಕಟವಾಗದೇ ಸಾಮೂಹಿಕ ಮಂದಕಾಂತಿ ಹೊಮ್ಮಿಸುತ್ತಿರುವಂತೆ ನಮಗೆ ಭಾಸವಾಗುತ್ತದೆ ಅಷ್ಟೆ.

ಇದು ಆಕಾಶಗಂಗೆ, ಇದು ವಿಶ್, ಇದು ಅನಾದಿ ಮತ್ತು ಅನಂತ, ಇದರ ವ್ಯಾಪ್ತಿಯೂ ಅನಂತವೇ, ನಮ್ಮ ಖಾಸಾ ತಾರೆಯಾದ ಸೂರ್ಯ ಇದರ ಕೇಂದ್ರದಲ್ಲಿ ನೆಲೆಸಿದೆ. ಅಂದ ಮೇಲೆ ನಮ್ಮ ಸ್ಥಾನವೂ ಆಕಾಶಗಂಗೆಯ ಕೇಂದ್ರದಲ್ಲಿದೆ ಎಂದಾಯಿತು. ಅಂದು ಆಕಾಶ, ವಿಶ್ವ, ಆಕಾಶಗಂಗೆ ಎಲ್ಲವೂ ಪರ್ಯಾಯ ಪದಗಳು. (ಇಂದು, 2002, ತಿಳಿದಿದೆ : ಆಕಾಶಗಂಗೆ ಸುಮಾರು 400,000,000,000 ನಕ್ಷತ್ರಗಳ ಜೇನುಗೂಡು ; ಇಂಥ ಅಸಂಖ್ಯ ಆಕಾಶಗಂಗೆಗಳ ಸಮುದಾಯವೇ ವಿಶ್ವ).

ಈ ‘ಸೀಮಿತ ವಿಶ್ವ’ ಎಂಬ ನಂಬಿಕೆಯ ಕೂಸಾದ ಆಲ್ಬರ್ಸ್‌, ನಕ್ಷತ್ರಲೋಕ ಕುರಿತಂತೆ ಅಂದು ತಿಳಿದಿದ್ದ ಮಾಹಿತಿಗಳನ್ನು ಒಂದು ಸಂಗತ ಸಿದ್ಧಾಂತವಾಗಿ ಹೆಣೆಯಲು ಈ ಮುಂದಿನ ಮೂಲಭಾವನೆಗಳು ಸಾಧುವೆಂದು ಅಂಗೀಕರಿಸಿದ (ಆಲ್ಬರ್ಸ್‌ಸಿದ್ಧಾಂತದ ಪೂರ್ವಪಕ್ಷವಿದು):

  1. ವಿಶ್ವದ ( = ಆಕಾಶಗಂಗೆಯ) ವ್ಯಾಪ್ತಿ ಅನಂತ. ಇದಕ್ಕೆ ಮೇರೆಯೇ ಇಲ್ಲ. ಭೂಮಿಯಲ್ಲಿ ಸಲ್ಲುವ ಯೂಕ್ಲಿಡ್ ಜ್ಯಾಮಿತಿ ವಿಶ್ವದಲ್ಲಿಯೂ ಸಲ್ಲುತ್ತದೆ.
  2. ಸರಾಸರಿಯಾಗಿ ಹೇಳುವುದಾದರೆ ವಿಶ್ವದಲ್ಲಿ ನಕ್ಷತ್ರಗಳ ವಿತರಣೆ ಏಕರೀತಿಯಲ್ಲಿದೆ.
  3. ಪ್ರತಿಯೊಂದು ನಕ್ಷತ್ರದಿಂದಲೂ, ಸರಾಸರಿಯಲ್ಲಿ, ಒಂದೇ ಪ್ರಮಾಣದ ಬೆಳಕು ಹೊಮ್ಮುತ್ತದೆ.
  4. ವಿಶ್ವದ ವಯಸ್ಸು ಅನಂತ. ಇದು ಅನಾದಿ ಕೂಡ.
  5. ನಕ್ಷತ್ರಗಳಿಗೂ ನಮಗೂ ನಡುವೆ ಬೆಳಕನ್ನು ಹೀರುವ ಅಥವಾ ತಡೆಗಟ್ಟುವ ಯಾವುದೇ ಅಡಚಣೆ ಅಥವಾ ಪ್ರತಿಬಂಧಕ ಇಲ್ಲ. ಆದ್ದರಿಂದ ಒಂದು ನಕ್ಷತ್ರ ಎಷ್ಟೇ ದೂರದಲ್ಲಿರಲಿ ಅದರಿಂದ ಹೊರಟ ಬೆಳಕು ನೇರವಾಗಿ ಬಂದು ನಮ್ಮನ್ನು ತಲುಪುತ್ತದೆ.

ಈ ಮೂಲಭಾವನೆಗಳು ಅಸಾಧಾರಣವಾದವಲ್ಲ, ಅಪ್ರಾಯೋಗಿಕವಾದವೂ ಅಲ್ಲ, ಅಂದು ಲಭ್ಯವಿದ್ದ ಸಾಕ್ಷ್ಯಾಧಾರಗಳಿಗೆ ಮತ್ತು ಚಲಾವಣೆಯಲ್ಲಿದ್ದ ಸಿದ್ಧಾಂತಗಳಿಗೆ ಇವು ನಿರ್ದಿಷ್ಟ ತಾತ್ತ್ವಿಕ ನೆಲಗಟ್ಟು ಒದಗಿಸಿದುವು ಕೂಡ. ಇದರ ಮೇಲೆ ಆಲ್ಬರ್ಸ್‌ಕಟ್ಟಿದ ತಾರ್ಕಿಕ ಸೌಧದ ಲಕ್ಷಣಗಳನ್ನು ಈಗ ನೋಡೋಣ.

ವಾದದ ಸಲುವಾಗಿ ಆತ ವಿಶ್ವವೆಂದರೆ ನಮ್ಮ ಸುತ್ತ ಅಖಂಡವಾಗಿ ಬೆಸೆದುಕೊಮಡಿರುವ ಗೋಳಚಿಪ್ಪುಗಳ ಒಕ್ಕೂಟವೆಂದು ಪರಿಗಣಿಸಿದ. ಬಲಿತ ಕ್ಯಾಬೇಜ್ ಗೆಡ್ಡೆಯ ಚಿತ್ರ ಕಲ್ಪಿಸಿಕೊಳ್ಳೋಣ. ಇದರ ತಿರುಳು ನಮ್ಮ ನೆಲೆ. ಇದನ್ನು ಸುತ್ತುವರಿದಿರುವ ಒಂದೊಂದು ಎಸಳು ಒಂದೊಂದು ಚಿಪ್ಪು. ಇವೆಲ್ಲವುಗಳ ಒಕ್ಕೂಟವೇ ಕ್ಯಾಬೇಜ್ – ಹೇಗೋ ಹಾಗೆ ವಿಶ್ವ.

ನಕ್ಷತ್ರಗಳು ಈ ಚಿಪ್ಪುಗಳಲ್ಲಿ ನೆಲಸಿವೆ. ಯಾವುದೇ ಚಿಪ್ಪಿನ ಗಾತ್ರ ಕೇಂದ್ರದಿಂದ ಅದರ ದೂರದ (ಅಂದರೆ ಆ ಚಿಪ್ಪಿನ ತ್ರಿಜ್ಯದ) ವರ್ಗಕ್ಕೆ ಅನುಲೋಮಾನುಪಾತದಲ್ಲಿದೆ ಎಂದು ಯೂಕ್ಲಿಡ್ ಜ್ಯಾಮಿತಿಯಿಂದ ತಿಳಿಯುತ್ತದೆ. ಉದಾಹರಣೆಗೆ, ಇಂಥ ಐದು ಚಿಪ್ಪುಗಳು ಕೇಂದ್ರದಿಂದ ಅನುಕ್ರಮವಾಗಿ 1, 2, 3, 4, 5 ಏಕಮಾನ ದೂರಗಳಲ್ಲಿದ್ದರೆ ಇವುಗಳ ಗಾತ್ರಗಳು ಅನುಕ್ರಮವಾಗಿ 1, 4, 9, 16, 25 ಅನುಪಾತಗಳಲ್ಲಿರುತ್ತವೆ.

ಆಕಾಶದ ಗಾತ್ರ ಅನಂತ, ನಕ್ಷತ್ರಗಳ ಸಂಖ್ಯೆ ಅನಂತ ಮತ್ತು ಇವುಗಳ ವಿತರಣೆ ಏಕರೀತಿಯಲ್ಲಿದೆ ಎಂದು ಅಂಗೀಕರಿಸಿರುವುದರಿಂದ ಈ ಸಂಖ್ಯೆ ಕೂಡ ಇದೇ ತ್ರಿಜ್ಯ ವರ್ಗಾನುಪಾತದಲ್ಲಿ ವರ್ಧಿಸಬೇಕು. ಉದಾಹರಣೆಗೆ ತ್ರಿಜ್ಯ 1ರ ಚಿಪ್ಪಿನಲ್ಲಿ 1 ನಕ್ಷತ್ರವಿದೆ ಎಂದು ಭಾವಿಸಿದರೆ ಆಗ ತ್ರಿಜ್ಯ 2ರ ಚಿಪ್ಪಿನಲ್ಲಿ 4, ತ್ರಿಜ್ಯ 3ರ ಚಿಪ್ಪಿನಲ್ಲಿ 9, ತ್ರಿಜ್ಯ 4ರ ಚಿಪ್ಪಿನಲ್ಲಿ 16, ತ್ರಿಜ್ಯ 5ರ ಚಿಪ್ಪಿನಲ್ಲಿ 25 ಇತ್ಯಾದಿಯಾಗಿ, ನಕ್ಷತ್ರಗಳು ವಿತರಣೆಗೊಂಡಿರುತ್ತವೆ. ಹೀಗೆ ನಮ್ಮಿಂದ ದೂರ ದೂರ ಹೋದಂತೆ ನಕ್ಷತ್ರ ಸಂಖ್ಯೆ ನಿರ್ದಿಷ್ಟ ಗಣಿತ ಸೂತ್ರಾನುಸಾರ ವರ್ಧಿಸುತ್ತದೆ.

ಈ ನಕ್ಷತ್ರಗಳಿಮದ ನಮಗೆ ಲಭಿಸುವ ಬೆಳಕಿನ ಮೊತ್ತ ಎಷ್ಟಿರಬಹುದು? ಆಕರ ನಮ್ಮಿಂದ ದೂರ ದೂರವಾದಂತೆ ಇದು ಕಡಿಮೆ ಕಡಿಮೆ ಆಗುವುದೆಂದು ಅನುಭವದಿಂದ ಅರಿತಿದ್ದೇವೆ. ವಾಸ್ತವವಾಗಿ, ಆಕರದಿಂದ ವೀಕ್ಷಕನನ್ನು ತಲಪುವ ಬೆಳಕಿನ ಪ್ರಮಾಣ ಆಕರ – ವೀಕ್ಷಕ ಅಂತರದ ಪ್ರತಿಲೋಮವರ್ಗಾನು ಪಾತದಲ್ಲಿದೆಯೆಂದು ನ್ಯೂಟನ್‌ಪ್ರಣೀತ ಭೌತವಿಜ್ಞಾನ ತಿಳಿಸುತ್ತದೆ.

ಅಂದರೆ ನಮ್ಮಿಂದ ನಕ್ಷತ್ರ ದೂರ 1, 2, 3, 4, 5 ಇತ್ಯಾದಿಯಾಗಿ ಏರಿದಂತೆ ಆಯಾ ಚಿಪ್ಪಿನಲ್ಲಿಯ ಪ್ರತಿಯೊಂದು ನಕ್ಷತ್ರದಿಂದಲೂ ನಮಗೆ ಬರುವ ಬೆಳಕಿನ ಮೊತ್ತ 1, 1/4, 1/9, 1/16, 1/25 ಇತ್ಯಾದಿ ಅನುಪಾತದಲ್ಲಿ ಇಳಿಯುವುದೆಂದಾಯಿತು. ಹೀಗೆ ತರ್ಕಿಸಿದ ಆಲ್ಬರ್ಸನ ಎದುರು ಅನಾವರಣಗೊಂಡ ಗಣಿತಚಿತ್ರ ಅಥವಾ ಪ್ರತಿರೂಪ ಅಸಾಧಾರಣವಾಗಿತ್ತು:

ನಮ್ಮಿಂದ ದೂರ ಸರಿದಂತೆ ನಕ್ಷತ್ರಸಂಖ್ಯೆ ಏರುವ ದರವೂ, ಅದೇ ವೇಳೆ, ಅವುಗಳಿಂದ ನಮಗೆ ಲಭಿಸುವ ಬೆಳಕಿನ ಮೊತ್ತ ಇಳಿಯುವ ದರವೂ ಪರಸ್ಪರ ಪ್ರತಿಲೋಮಾನುಪಾಗಳಲ್ಲಿವೆ; ಪ್ರತಿಯೊಂದು ನಕ್ಷತ್ರವೂ, ಸರಾಸರಿಯಲ್ಲಿ, ಒಂದೇ ಪ್ರಮಾಣದ ಬೆಳಕನ್ನು ಹೊರಹೊಮ್ಮಿಸುವುದೆಂದು ಅಂಗೀಕರಿಸಿದ್ದೇವೆ; ಅಂದ ಮೇಲೆ ಒಂದೊಂದು ಚಿಪ್ಪಿನಿಂದಲೂ, ಅದು ತ್ರಿಜ್ಯ 1ರ ಸಮೀಪ ಚಿಪ್ಪಾಗಿರಲಿ ತ್ರಿಜ್ಯ 100 ಲಕ್ಷದ ಸುದೂರ ಚಿಪ್ಪೇ ಆಗಿರಲಿ, ನಮಗೆ ಲಭಿಸುವ ಬೆಳಕಿನ ಮೊತ್ತ ಒಂದೇ ಆಗಿರುತ್ತದೆ. ದೂರತ್ವದ ಕಾರಣವಾಗಿ ಇಳಿಯುವ ಬೆಳಕನ್ನು ಸಂಖ್ಯಾವೃದ್ಧಿಯ ಕಾರಣವಾಗಿ ಹೆಚ್ಚುವ ನಕ್ಷತ್ರಗಳು ರದ್ದುಗೊಳಿಸುವಂಥ ಪರಿಸ್ಥಿತಿ.

ಚಿಪ್ಪುಗಳ ಮತ್ತು ನಕ್ಷತ್ರಗಳ ಅನಂತವೆಂದೂ ಚಿಪ್ಪಿನ ಮತ್ತು ನಮ್ಮ ನಡುವೆ ಬೆಳಕಿನ ಪ್ರವಾಹವನ್ನು ತಡೆಯಬಲ್ಲ ಅಡಚಣೆ ಇಲ್ಲವೆಂದೂ ಅಂಗೀಕರಿಸಿದ್ದೇವೆ. ಹಾಗಾದರೆ, ಸೂರ್ಯ ನಮ್ಮ ಆಕಾಶದಲ್ಲಿ ಇರಲಿ (ಆಗ ಹಗಲು), ಇಲ್ಲದಿರಲಿ (ಆಗ ಇರುಳು), ಅನಂತ ಸಂಖ್ಯೆಯ ಈ ಚಿಪ್ಪುಗಳಿಂದ ನಮ್ಮಲ್ಲಿಗೆಷ್ಟು ಬೆಳಕು ಬರುತ್ತದೆ?

ಈ ಸಂಬಂಧವಾದ ಸೂಕ್ಷ್ಮ ಗಣನೆಗಳನ್ನು ಆಲ್ಬರ್ಸ್‌ಮಾಡಿ ಅದು ಸೂರ್ಯನ ಮೇಲ್ಮೈ ಪ್ರಕಾಶದಷ್ಟಿರಬೇಕೆಂದು ಕಂಡುಕೊಂಡ. ಹೀಗೆ ಆತನೆದುರು ಹೊಸತೊಂದು ತಾರ್ಕಿಕವಾಗಿ ವಿಸ್ಮಯಕರವಾದ, ಸನ್ನಿವೇಶ ಸೆಟೆದು ನಿಂತಿತು:

ಸೂರ್ಯ ನಮ್ಮ ಬಾನಿನಲ್ಲಿರಲಿ ಇಲ್ಲದಿರಲಿ ವಿಶ್ವದಿಂದ ನಮಗೆ ಸೂರ್ಯನ ಮೇಲ್ಮೈ ಪ್ರಕಾಶದಷ್ಟು ಬೆಳಕು ಸಂತತವಾಗಿ ಬರುತ್ತಿದೆ, ಹಗಲಿನಲ್ಲಿ ಇದು ನಮಗೆ ಪ್ರತ್ಯೇಕವಾಗಿ ಗೊತ್ತಾಗುವುದಿಲ್ಲ. ಆದರೆ ಇರುಳಿನಲ್ಲಿ ಎದ್ದು ಕಾಣಬೇಕು ಅಂದರೆ ಇರುಳ ಬಾನು ಹಗಲ ಬಾನಿನಂತೆಯೇ ಬೆಳ್ಳಗೆ ಥಳಥಳಿಸುತ್ತಿರತಕ್ಕದ್ದು, ಅರ್ಥಾತ್, ರಾತ್ರಿಯ ನಭೋಮಂಡಲ ಕಪ್ಪಗೆ ತಣ್ಣಗೆ ಕಾಣತಕ್ಕದ್ದಲ್ಲ!

ಸಿದ್ಧಾಂತ ಸರಿ, ವಾಸ್ತವತೆ? ಖುದ್ದು ಆಲ್ಬರ್ಸನನ್ನೂ ಒಳಗೊಂಡಂತೆ ಯಾರಿಗೂ ಎಂದೂ ಎಲ್ಲಿಯೂ ನಿಶಾಕಾಶ ಶುಭ್ರವಸನಾಲಂಕೃತವಾಗಿ ಪ್ರಕಟವಾದದ್ದಿಲ್ಲ. ಹೀಗೆ ಇಲ್ಲಿ ಸಿದ್ಧಾಂತಕ್ಕೂ ವಾಸ್ತವತೆಗೂ ತಾಳೆ ಬೀಳದೇ ಸಂದಿಗ್ಧತೆ ಹಣುಕಿತು. ಎಂದೇ ಇದೊಂದು ವಿರೋಧಾಭಾಸ. ಇದನ್ನು ಮಂಡಿಸಿದಾತನ ಹೆಸರಿನಿಂದ ಇದು ಆಲ್ಬರ್ಸ್‌ವಿರೋಧಾಭಾಸವೆಂದು ಸುಪ್ರಸಿದ್ಧವಾಯಿತು.

ಸಿದ್ಧಾಂತ ಸದಾ ವಾಸ್ತವತೆಯ ಯಥಾ ಪ್ರತಿಬಿಂಬವಾಗಿರತಕ್ಕದ್ದು. ಆಗದಿದ್ದಾಗ ಸಿದ್ಧಾಂತವನ್ನು ಆಮೂಲಾಗ್ರ ಪುನಃಪರಿಶೀಲನೆಗೂ ವಾಸ್ತವತೆಯನ್ನು ಅತಿ ನಿಷ್ಕೃಷ್ಟ ವೀಕ್ಷಣೆಗೂ ಒಳಪಡಿಸಬೇಕಾಗುತ್ತದೆ. (ವಿಜ್ಞಾನಕ್ಕೂ ಮತಧರ್ಮಕ್ಕೂ ಇರುವ ತೀವ್ರ ವೈದೃಶ್ಯವೇ ಇದು – ಪ್ರತ್ಯಕ್ಷ ಪ್ರಯೋಗವೊಂದೇ ಸಿದ್ಧಾಂತದ ಒರೆಗಲ್ಲು ವಿಜ್ಞಾನದಲ್ಲಿ, ಮತಧರ್ಮದಲ್ಲಿ ಓಬೀರಾಯನ ಕಾಲದ ಪ್ರಣಾಳಿಕೆಗಳು, ವಿಧಿನಿಷೇಧಗಳು, ಸ್ಫೂರ್ತಿಯುತ ಊಹೆಗಳು ಆಧಾರಭಾವನೆಗಳು.) ಹೀಗೆ 19ನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಆಲ್ಬರ್ಸ್‌ವಿರೋಧಾಭಾಸ ಖಗೋಳವಿಜ್ಞಾನಿಗಳನ್ನು ಬ್ರಹ್ಮಕಪಾಲವಾಗಿ ಕಚ್ಚಿಕೊಂಡಿತ್ತು. ಇದಕ್ಕೆ ಮೋಕ್ಷ ಕಾಣಿಸಲು ಕಾಲದಿಂದ ಕಾಲಕ್ಕೆ ಮಂಡಿಸಿದ ಸೂಚನೆಗಳ ಅಥವಾ ತೇಪೆಗಳ ಪೈಕಿ ಎರಡು ಗಮನಾರ್ಹವಾಗಿವೆ.

ಒಂದನೆಯದರ ಪ್ರಕಾರ ಚಿಪ್ಪುಗಳಿಗೂ (ಆಕರಗಳು) ನಮಗೂ (ಆಕಾಶವನ್ನು ನೋಡುವ ವೀಕ್ಷಕರು) ನಡುವೆ ರಜೋಮೇಘಗಳು ಮತ್ತು ಮೃತ ನಕ್ಷತ್ರಾವಶೇಷಗಳು ಸಮೃದ್ಧವಾಗಿ ಹರಡಿಕೊಂಡಿವೆ. ಚಿಪ್ಪುಗಳಿಂದ ನಮ್ಮತ್ತ ಬರುವ ಬೆಳಕನ್ನು ಇವು ಮಾರ್ಗ ಮಧ್ಯವೇ ಹೀರಿಕೊಳ್ಳುತ್ತವೆ. ಎಂದೇ ರಾತ್ರಿಯ ಆಕಾಶ ನಿಜವಾಗಿ ಬೆಳ್ಳಗೆ ಕಾಣಬೇಕಾಗಿದ್ದರೂ ಕಪ್ಪಾಗಿ ಪ್ರಕಟವಾಗುತ್ತದೆ.

ಇದು ಸಮರ್ಪಕ ವಿವರಣೆ ಅಲ್ಲವೆಂದು ಪ್ರತಿವಾದವನ್ನು ಮಂಡಿಸಲಾಯಿತು. ಏಕೆಂದರೆ ಆಲ್ಬರ್ಸ್‌ಅಂಗೀಕರಿಸಿದ್ದ ಮೂಲಭಾವನೆಗಳ ಪ್ರಕಾರ ವಿಶ್ವ ಅನಾದಿ, ಅದರ ಪ್ರಾಯ ಅನಂತ. ಅಂದ ಮೇಲೆ ಮಾರ್ಗಮಧ್ಯದ ಅಡಚಣೆಗಳ ಮೇಲೆ ಈ ಅನಂತ ಕಾಲದಲ್ಲಿ ಸಾಕಷ್ಟು ಶಕ್ತಿಸೇಚಿತವಾಗಿ ಸ್ವತಃ ಅವು ಕೂಡ ಶಕ್ತಿ ಬೀರುವ ಆಕರಗಳಾಗಲೇಬೇಕು – ಲೋಹವನ್ನು ಅತಿ ದೀರ್ಘಕಾಲ ಶಾಖಕ್ಕೆ ಒಡ್ಡಿದರೆ ಆಗುವಂತೆ ಆದ್ದರಿಂದ ಈ ಅಪಾರ ಅಪಾರಕ ಅಡೆತಡೆಗಳ ಅಸ್ತಿತ್ವದಿಂದ ಪರಿಸ್ಥಿತಿ ಏನೂ ಬದಲಾಗಬೇಕಾಗಿಲ್ಲ.

ಎರಡನೆಯ ಸೂಚನೆ ಪ್ರಕಾರ ವಿಶ್ವಕ್ಕೆ ಆದಿ ಇದೆ; ಅದರ ಗಾತ್ರಕ್ಕೆ ಮಿತಿ ಇದೆ; ವಯಸ್ಸು ಅನಂತವಲ್ಲ. ಆದ್ದರಿಂದ ಚಿಪ್ಪುಗಳ, ಅಂತೆಯೇ ನಕ್ಷತ್ರಗಳ, ಸಂಖ್ಯೆಯೂ ಸಾಂತವೇ. ಇಂಥ ಸಾಂತ ವಿಶ್ವದಲ್ಲಿ ಚಿಪ್ಪುಗಳು ಸಂಯುಕ್ತವಾಗಿ ಬಿತ್ತರಿಸುವ ಪ್ರಕಾಶ ತೀರ ದುರ್ಬಲ. ಇದು ರಾತ್ರಿಯ ಆಕಾಶವನ್ನು ಖಂಡಿತವಾಗಿಯೂ ಬೆಳಗಿಸಲಾರದು. ಹೀಗೆ ಆಲ್ಬರ್ಸ್‌ವಿರೋಧಾಭಾಸ ಸಾಂತ ವಿಶ್ವದ ಪ್ರತಿಪಾದನೆಗೆ ಒಂದು ಮುಖ್ಯ ಆರಂಭ ಬಿಂದುವಾಯಿತು.

ಮುಂದೆ 20ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಖಗೋಳವಿಜ್ಞಾನಿಗಳು ಆವಿಷ್ಕರಿಸಿದ ಗಹನ ಮಾಹಿತಿಗಳು ಸಾಂತ ವಿಶ್ವ, ಅನಾದಿ ವಿಶ್ವ ಅಥವಾ ಅನಂತ ನಕ್ಷತ್ರಗಳು ಮುಂತಾದ ಸಮಸ್ತ ಪರಿಕಲ್ಪನೆಗಳನ್ನೂ ಬುಡಮೇಲು ಮಾಡಿ ತೊಡೆದು ಹಾಕಿದುವು. ವಿಶ್ವದ ಅಸಂಖ್ಯ, ವಿಚಿತ್ರ ಹಾಗೂ ಊಹಾತೀತ ಗಹನ ವಿದ್ಯಮಾನಗಳನ್ನು ವ್ಯಾಖ್ಯಾನಿಸುವಲ್ಲಿ ಯೂಕ್ಲಿಡ್ ಜ್ಯಾಮಿತಿಯಾಗಲೀ ನ್ಯೂಟನ್‌ಪ್ರಣೀತ ಭೌತವಿಜ್ಞಾನವಾಗಲೀ ಉಪಯುಕ್ತ ಸಾಧನಗಳಲ್ಲವೆಂದೂ ಖಚಿತವಾಯಿತು.

ಹಾಗಾದರೆ ಆಲ್ಬರ್ಸನ ಬ್ರಹ್ಮಕಪಾಲಕ್ಕೆ ಮೋಕ್ಷ? ಅದು ಬೇರೊಂದು ರೀತಿಯಲ್ಲಿ ಪ್ರಾಪ್ತವಾಯಿತು. ಅದೇನೆಂದು ತಿಳಿಯಲು ವಿಶ್ವದ ಬಗೆಗಿನ ಆಧುನಿಕ ಸಿದ್ಧಾಂತವನ್ನು ತುಸು ಗಮನಿಸಬೇಕು.

ಆಕಾಶಗಂಗೆಯೊಂದೇ ಮಾತ್ರ ವಿಶ್ವವಲ್ಲ, ಇಂಥ ಅಸಂಖ್ಯ ಆಕಾಶಗಂಗೆಗಳ (ಇವುಗಳಿಗೆ ಬ್ರಹ್ಮಾಂಡಗಳೆಂದು (gaiaxies), ಹೆಸರು) ಸಮುದಾಯವೇ ವಿಶ್ವ (universe). ಇದೊಂದು ದೇಶ – ಕಾಲ ಸಾತತ್ಯ; ನಿರಂತರವಾಗಿ ಹಿಗ್ಗುತ್ತಿರುವ, ಆದ್ದರಿಂದ ಪ್ರತಿಯೊಂದು ಬ್ರಹ್ಮಾಂಡವೂ ಇತರ ಎಲ್ಲ ಬ್ರಹ್ಮಾಂಡಗಳಿಂದ ದೂರ ದೂರ ಧಾವಿಸುತ್ತಿರುವ, ಮಹಾಸೃಷ್ಟಿ; ಅಂದ ಮೇಲೆ ಗತಯುಗದಲ್ಲೆಂದೋ ಇದು ಅಖಂಡ ವಸ್ತುವಾಗಿ ಒಂದುಗೊಡಿದ್ದಿರಬೇಕಷ್ಟೆ.

ಹೌದು, ಸುಮಾರು 15,000,000,000 ವರ್ಷಗಳ ಹಿಂದೆ ಇಂದಿನ ವಿಶ್ವ ಅಖಂಡ ಮುದ್ದೆಯಾಗಿ ಗಿಡಿದುಕೊಂಡಿತ್ತು. ಅದು ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಮುಂತಾದ ಮೂಲಕಣಗಳ ಹಾಗೂ ವಿಕಿರಣಶಕ್ತಿಯ ಸಮುಚ್ಚಯ. ಆಗ ಅದರ ಗರ್ಭದಲ್ಲಿ ಸಂಭವಿಸಿದ ಮಹಾವಿಸ್ಫೋಟದ (ಇದರ ಹೆಸರು ಮಹಾಬಾಜಣೆ Big Bang) ಫಲವಾಗಿ ಅದು ಒಡೆದು ಅದರ ಖಂಡಗಳು ದಿಕ್ಕಾಪಾಲಾಗಿ ಎರಚಲ್ಪಟ್ಟವು. ದೇಶ – ಕಾಲದ ಆದಿ ಈ ಮಹಾಬಾಜಣೆ.

ಹೀಗೆ ದೂರ ದೂರ ಸರಿಯುತ್ತಿರುವ ವಿಶ್ವಘಟಕಗಳಲ್ಲಿ ಕ್ರಮೇಣ ನೀಹಾರಿಕೆಗಳೂ (nebulae) ನಕ್ಷತ್ರಗಳೂ ಬ್ರಹ್ಮಾಂಡಗಳೂ ಮೈದಳೆದುವು. ಅಂದರೆ ವಿಶ್ವ ಹಿಗ್ಗುತ್ತ ವಿಕಸಿಸುತ್ತ ನವರೂಪಗಳನ್ನು ಪ್ರದರ್ಶಿಸುತ್ತ ಮುನ್ನಡೆಯುತ್ತಿದೆ.

ಇದರಲ್ಲಿಯ ನಕ್ಷತ್ರಗಳ ಸಂಖ್ಯೆ ಅನಂತವಲ್ಲ, ಸಾಂತ. ಈ ನಕ್ಷತ್ರಗಳು ಊಹಾತೀತ ದೂರಗಳಲ್ಲಿ ಚದರಿಹೋಗಿ ಪರಸ್ಪರ ದೂರ ದೂರ ಧಾವಿಸುತ್ತಿವೆ. ಇವುಗಳ ವಿಕಾಸಹಂತಗಳು ವಿವಿಧ, ಏಕರೀತಿಯಾಗಿ ಎಲ್ಲಿಯೂ ಇವು ವಿತರಣೆಗೊಂಡಿಲ್ಲ. ಆದ್ದರಿಂದ ಈ ಸಾಂತ ಸಂಖ್ಯೆಯ ಸಮಸ್ತ ನಕ್ಷತ್ರಗಳಿಂದ ಮಹಾವಿಸ್ತಾರದ ಆಕಾಶಕ್ಕೆ ನಾವು ಕಾಣುವಂತೆ, ಚೆಲ್ಲಲ್ಪಡುವ ಬೆಳಕು ತೀರ ಅಲ್ಪ, ದುರ್ಬಲ ಮತ್ತು ಅಗಮನಾರ್ಹ. ಇರುಳ ಬಾನಿನ ಮೇಲೆ ಏನೂ ಪರಿಣಾಮ ಬೀರದಷ್ಟು ಕ್ಷೀಣ.

ಎಂದೇ ಆಲ್ಬರ್ಸ್‌ವಿರೋಧಾಭಾಸಕ್ಕೆ ಅಸ್ತಿತ್ವವೇ ಇಲ್ಲ!

ಹಾಗಾದರೆ, “ಇರುಳ ಬಾನು ಕಪ್ಪು ಏಕೆ?”

“ಪ್ರಕಾಶರಾಹಿತ್ಯ ಆಕಾಶದ ಸಹಜ ಗುಣ. ಸೂರ್ಯ ನಮ್ಮ ಆಕಾಶಕ್ಕೆ ಬೆಳಕು ಮೊಗೆದಾಗ ಮಾತ್ರ ಅದು ಬೆಳ್ಳಗಾಗುತ್ತದೆ. ಆದ್ದರಿಂದ ಹಗಲಿನಲ್ಲಿ ಆಗಸ ಬೆಳ್ಳಗಿರುತ್ತದೆ. ಇರುಳಿನಲ್ಲಿ ಕಪ್ಪಗಿರುತ್ತದೆ.”

ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್!

ವಿಜ್ಞಾನದಲ್ಲಿ ಪ್ರಶ್ನೆ ಹಾಕುವುದು ಅತಿ ಸುಲಭ. ಆದರೆ ವಾಸ್ತವ ಪ್ರಯೋಗ, ವೀಕ್ಷಣೆ ಮತ್ತು ತಪಾಸಣೆಗಳಲ್ಲಿ ಉತ್ತೀರ್ಣವಾಗುವ ಉತ್ತರವೀಯುವುದು, ಅನೇಕವೇಳೆ, ಪ್ರಖರಮತಿಗಳಿಗೂ ಅವರ ಜೀವಿತಾವಧಿಗಳಲ್ಲಿ ಕೂಡ ಕೈಗೆಟುಕದ ಸಾಹಸವಾಗುತ್ತದೆ. ವಿಜ್ಞಾನದ, ಸಮಗ್ರವಾಗಿ ನಾಗರಿಕತೆಯ, ಇತಿಹಾಸವೇ ಈ ಪ್ರಶ್ನೋತ್ತರ ಸರಣಿಯ ಮುನ್ನಡೆ. ಸದಾ ಮುನ್ನಡೆ ಆಗುವುದೆಂದೇನೂ ಇಲ್ಲ – ಹೊಳೆಯ ಹರಿವಿನಂತೆ ಸ್ಥಗಿತವಾಗಹುದು, ಹಿಂದಕ್ಕೆ (ಅಂದರೆ ಹಿಂದಿಶೆಯಲ್ಲಿ) ಜಗುಳಬಹುದು. ಮತ್ತೆ ಮುಂದಕ್ಕೆ ಪ್ರವಹಿಸಬಹುದು.

ವಿಶ್ವವೈವಿಧ್ಯವನು ಗಣಿತಸೂತ್ರಗಳಲ್ಲಿ
ಶಾಶ್ವತೀಕರಿಸುವುದು ವ್ಯರ್ಥ ಪ್ರಯತ್ನವೂ
ನುಷ್ಯಕೃತ ಸಿದ್ಧಾಂತಗಳವು ಚಿರಸತ್ಯದಾ
ನಶ್ವರ ಪ್ರತಿಬಿಂಬಗಳು ಕಾಣೊ ಅತ್ರಿಸೂನು ||

ನಿನ್ನ ಮನೆಯೇ ವಿಶ್ವವೆಂಬಹಂಕಾರಕ್ಕೆ
ಮನ್ನೆಯವ ತೊರೆಯೆಲೋ, ಬಾನಿನಿಂ ಮೊಗೆಯುವಾ
ಜೊನ್ನ ರಸವನು ಹೀರಿ ತಳೆ ಕುತೂಹಲ, ಪ್ರಶ್ನೆ,
ಹಿನ್ನೆಲೆಯ ಕಾರಣವ ಶೋಧಿಸಲೇ ಅತ್ರಿಸೂನು ||

ವಿಶ್ವವಿಸ್ತಾರದಲಿ ನೀನೊಂದು ಕಣಮಾತ್ರ
ನಶ್ವರ ಕ್ಷಣಗಳನು ನೀತಿ ಮಾರ್ಗದಿ ಬಾಳಿ
ಶಾಶ್ವತಾಮೂಲ್ಯ ಮೌಲ್ಯ ಪ್ರದಾನಿಸಿ ಚಿರ
ಸ್ವಾಸ್ಥ್ಯ ಸಂತೃಪ್ತಿ ಸಂಪಾದಿಸಲೇ ಅತ್ರಿಸೂನು ||
(2002)