ಮೂಢನಂಬಿಕೆ ಎಂದರೇನು?

ಹಿರಿಯ ಚಿಂತನಶೀಲರೂ ತತ್ತ್ವಶಾಸ್ತ್ರಜ್ಞರೂ ಆಗಿರುವ ಎಸ್‌. ಶ್ರೀನಿವಾಸಾಚಾರ್‌ಒಮ್ಮೆ ಹೇಳಿದರು. “ವಿಜ್ಞಾನಪ್ರವಾಹದ ಒರತೆಯನ್ನು ಮೂಢನಂಬಿಕೆಗಳ ಜಲಾನಯನ ಪ್ರದೇಶದಲ್ಲಿ (catchment area) ಕಾಣುತ್ತೇವೆ.”

ನಾನು ಕಂಡಿರುವ ಅತ್ಯಂತ ನೈಷ್ಠಿಕ ವಿಚಾರವಂತರಲ್ಲಿ ಇವರೊಬ್ಬರು, ನಡೆ ನುಡಿ ಬಗೆಗಳಲ್ಲಿ ಉದಾರ ಮಾನವೀಯತೆಯನ್ನು ಬಿಂಬಿಸುತ್ತಿರುವ ಪರಿಶುದ್ಧಾತ್ಮರು. ನನ್ನ ಪರಮ ಗೌರವಕ್ಕೆ ಪಾತ್ರರು. ಇಂಥವರು ವಿಜ್ಞಾನದ ಮಾತೃ ಮೂಢನಂಬಿಕೆ ಎಂದು ಘೋಷಿಸಿದಾಗ ನನ್ನ ಸಹಜ ಪ್ರತಿಕ್ರಿಯೆ ಹೇಗಿರಬೇಕಿತ್ತು? “ಖಂಡಿತ ಬುರುಡೆ, ನೊರೆ, ಬುರುಗು” ಎಂದಲ್ಲವೇ? ಅಲ್ಲ, ಏಕೆಂದರೆ ಅವರ ಗೋತ್ರ: “ನುಡಿದಂತೆ ಮುತ್ತಿನ ಹಾರದಂತಿರಬೇಕು, ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕ, ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು, ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮ ದೇವನೆಂತೊಲಿವನಯ್ಯಾ?”

ಆದ್ದರಿಂದ ಅವರ ನುಡಿಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕು. ನನ್ನ ಸಂದೇಹಗ್ರಸ್ತ ದೃಷ್ಟಿ ಗಮನಿಸಿ ಅವರೇ ಮಾತು ಮುಂದುವರಿಸಿದರು, “ನಿಮಗೆ ತಿಳಿದಿರುವುದನ್ನೇ ನಾನು ಹೇಳಿರುವುದು. ಹೊಸತೇನನ್ನೂ ಅಲ್ಲ. ಹೇಳಿದ ಧಾಟಿ ಮಾತ್ರ ಬೇರೆ. ಆದ್ದರಿಂದ ನೀವು ಈ ವಿಚಾರವನ್ನು ಕೊಂಚ ತಾರ್ಕಿಕ ಚಿಂತನೆಯ ಒರೆಗಳಲ್ಲಿಗೆ ತೀಡಿ ನೋಡಿ.”

ಮೂಲಭೂತ ಚಿಂತನೆ

ನಿಸರ್ಗ ಇತರ ಯಾವ ಪ್ರಾಣಿಗೂ ಕೊಟ್ಟಿರದ ನಾಲ್ಕು ವಿಶಿಷ್ಟ ಸೌಕರ್ಯಗಳನ್ನು ಮಾನವನಿಗೆ ಪ್ರದಾನಿಸಿದೆ: ಯೋಚನೆ, ಸ್ಮರಣೆ, ಮಾತು ಮತ್ತು ಕೃತಿ. ಇವು ಆತನ ಸಮಸ್ತ ಚಟುವಟಿಕೆಗಳನ್ನೂ ಸದಾ ಪ್ರಭಾವಿಸುತ್ತವೆ. ಪ್ರಾಣಿಗಳ ವರ್ತನೆ ಹೀಗಲ್ಲ, ಅದು ಸ್ವಭಾವಾಧಾರಿತವಾದದ್ದು. ಇಂಗ್ಲಿಷಿನಲ್ಲಿ ಇದನ್ನು instinct ಎನ್ನುತ್ತೇವೆ. ಇದು ವೈಚಾರಿಕತೆ (rationalism) ಅಲ್ಲ, ಹಾಗಾದರೆ ವೈಚಾರಿಕತೆ ಎಂದರೇನು?

ಪ್ರತಿಯೊಂದು ನೈಸರ್ಗಿಕ ಘಟನೆಯ (ಕಾರ್ಯ, effect) ಹಿನ್ನೆಲೆಯಲ್ಲಿಯೂ ಒಂದು ಕಾರಣ (cause) ವರ್ತಿಸುತ್ತದೆ, ಆದ್ದರಿಂದ ಕಾರ್ಯ ಗೊತ್ತಾದಾಗ ಕಾರಣವನ್ನು ಪತ್ತೆ ಹಚ್ಚಬೇಕೆಂದೂ ಕಾರಣ ತಿಳಿದಾಗ ತತ್ಸಂಬಂಧೀ ಕಾರ್ಯವನ್ನು ಅರಸಬೇಕೆಂದೂ ಮಾನವಮತಿ ಸಹಜಕುತೂಹಲ ತಳೆಯುತ್ತದೆ. ಯಾವುದೇ ಘಟನೆ ಅಥವಾ ವಿದ್ಯಮಾನ ಕುರಿತು ಕಾರ್ಯ – ಕಾರಣ ಸಂಬಂಧ ಏರ್ಪಡಿಸಬೇಕೆಂದು ಇಂಥ ಮನಸ್ಸು ತುಡಿಯುತ್ತದೆ. ಏಕೆಂದರೆ ಕಾರ್ಯರಹಿತ ಕಾರಣವಿಲ್ಲ, ಅಂತೆಯೇ, ಕಾರಣರಹಿತ ಕಾರ್ಯವಿಲ್ಲ ಎಂದು ಅದಕ್ಕೆ ಖಚಿತವಾಗಿ ಗೊತ್ತಿರುವುದು. ಮನಸ್ಸಿನ ಈ ಸ್ಥಿತಿಯೇ ವೈಚಾರಿಕತೆ.

ವೈಚಾರಿಕತೆಯ ವಿಕಾಸ

ಕ್ರಮೇಣ ಮಾನವ ತನ್ನ ಸುತ್ತಲಿನ ನಿಸರ್ಗದಲ್ಲಿಯ ಸಮಸ್ತ ವಿದ್ಯಮಾನಗಳನ್ನೂ ವೈಚಾರಿಕತೆಯ ಒರೆಗಲ್ಲಿಗೆ ಉಜ್ಜಿ ಪರೀಕ್ಷಿಸಲು ಮುಂದಾಗುತ್ತಾನೆ. “ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ” ಎಂಬ ಕವಿಯ ಸ್ಫೂರ್ತಿಮಂತ ಉದ್ಗಾರವನ್ನು ಒಪ್ಪುತ್ತ ಅದೇ ದೇವರ ದಯ ತನಗೆ ವೈಚಾರಿಕ ಸಾಮರ್ಥ್ಯ ಕೊಟ್ಟಿರುವುದರಿಂದ ಈ “ದೈವಿಕ” ಘಟನೆಗಳ ಹಿನ್ನೆಲೆ ಕಾರಣಗಳ ಅನ್ವೇಷಣೆಗೆ ಸಿದ್ಧನಾಗುತ್ತಾನೆ.

ಅರ್ಥಾತ್‌ಈಗ ಆತ ನಿಸರ್ಗದ ಜೊತೆ ಕಾರ್ಯ – ಕಾರಣ ಪಾತಳಿಯಲ್ಲಿ ವ್ಯವಹರಿಸಲು ತೊಡಗುತ್ತಾನೆ. ವೈಚಾರಿಕತೆ ವಿಧಿಸುವ ಈ ಹಾದಿಯಲ್ಲಿ ಜ್ಞಾತೃನಿಷ್ಠತೆಗೆ (ವೈಕ್ತಿನಿಷ್ಠತೆ, subjectiveness) ಎಲ್ಲಿಯೂ ಅವಕಾಶವಿಲ್ಲ. ಏಕೆಂದರೆ ನಿಸರ್ಗ ಯಾವ ವ್ಯಕ್ತಿಯ, ರಾಜನ ಅಥವಾ ಮಾನವಕಲ್ಪಿತ ದೇವರ (?) ಇಚ್ಛಾನುಸಾರ ವರ್ತಿಸುವುದಿಲ್ಲ, ಬದಲು, ಅದರದೇ ನಿಯಮಾನುಸಾರ ಸತತ ಕ್ರಿಯಾಶೀಲವಾಗಿರುತ್ತದೆ. ಅಂದರೆ ಇಲ್ಲಿ ನಿಸರ್ಗವೇ ಆರಂಭಾಂತ್ಯಗಳ ನಿರ್ಣಾಯಕ. ವೈಚಾರಿಕವಾಗಿ ಸಾಗುತ್ತಿರುವ ಜಿಜ್ಞಾಸು – ಮಾನವನಲ್ಲಿ ಈ ಅರಿವು ಕ್ರಮೇಣ ಮಿನುಗುತ್ತದೆ. ಮನಸ್ಸಿನ ಇಂಥ ಸ್ಥಿತಿಗೆ ಜ್ಞೇಯನಿಷ್ಠತೆ (ವಸ್ತುನಿಷ್ಠತೆ, objectiveness) ಎಂದು ಹೆಸರು.

ಸೂರ್ಯೋದಯ, ಚಂದ್ರೋದಯ, ಚಂದ್ರನ ವಿವಿಧ ವರಿಸೆಗಳು, ಅವ್ಯತ್ಯಯಶೀಲ ನಕ್ಷತ್ರಚಿತ್ರಗಳ ನಿಗೂಢತೆ, ಗ್ರಹಣ, ಉಲ್ಕೆ, ಧೂಮಕೇತು ಮುಂತಾದ ನಿರಂತರ ವಿಸ್ಮಯಗಳ ಬಗ್ಗೆ ಮನುಕುಲ ಪ್ರಾಚೀನ ದಿನಗಳಿಂದಲೂ ಕುತೂಹಲ ತಳೆದಿದೆ: ಬಾನು ಬೀರುವ ಉದ್ದೀಪನೆಗೆ (stimulus) ‘ನಾನು’ (ಅಂದರೆ ಮನುಜ) ತೋರುವ ಅನುಕ್ರಿಯೆಯೊಂದು (response) ನಿರಂತರ ಪ್ರಕ್ರಿಯೆ. ಇದು ಏಕೆ ಹೀಗೆ, ಬೇರೆ ಹೇಗೊ ಅಲ್ಲ? ಕಾರಣವೇನು? ಆ ಗಗನದೀಪಗಳನ್ನು ಕ್ರಮಬದ್ಧವಾಗಿ ಬೆಳಗಿಸುತ್ತ ಆಕಾಶದ ಅಡ್ಡ ಒಯ್ಯುತ್ತಿರುವವರು ಯಾರು? ಈ ತೆರನಾದ ಅಸಂಖ್ಯ ಪ್ರಶ್ನೆಗಳಿಗೆ ಮೊದಲು ದೊರೆತ ಉತ್ತರವೇನು? ಅದು ಮನಸೋ ಇಚ್ಛೆ ಹರಿಯಗೊಟ್ಟ ಕಲ್ಪನಾವಿಲಾಸ ಅಲ್ಲವೇ? ಅದೇ ನಿಸರ್ಗ ಕುರಿತ ಸರಿಯಾದ ವಿವರಣೆ ಎಂದು ಅಧಿಕಾರಬಲದಿಂದ ಅಥವಾ ದೈವಿಕವಿಸ್ಮೃತಿಯಿಂದ (?) ಸಾಧಿಸಹೊರಟಾಗ ಅದು ಮೂಢನಂಬಿಕೆಯಲ್ಲದೇ ಬೇರೇನು? ಇಂದಿನ ಜ್ಞಾನದ ಬೆಳಕಿನಲ್ಲಿ ಇದು ಸುಸ್ಪಷ್ಟ.

ಉದಾಹರಣೆಗೆ ವ್ಯಕ್ತಿಗೆ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಆತನ ಜನನ ಮುಹೂರ್ತದಲ್ಲಿ ಕಂಡುಬಂದ ಗ್ರಹವಿನ್ಯಾಸದಲ್ಲಿ (ಅಂದರೆ ಜಾತಕ) ಗರ್ಭಿತವಾಗಿವೆ ಎಂಬ ನಂಬಿಕೆ ಪೂರ್ತಿ ಸ್ವಕಪೋಲಕಲ್ಪಿತ. ಈ ವಾಮ ಚಿಂತನಪ್ರಕಾರದ ಹೆಸರು ಫಲಜ್ಯೋತಿಷ (astrology). ಇದು ಎಲ್ಲ ಮೂಢನಂಬಿಕೆಗಳ ತಾಯಿ! ವಾಸ್ತವವಾಗಿ ಪ್ರತ್ಯಕ್ಷ ಪ್ರಯೋಗದಿಂದ ನಿಸರ್ಗದಲ್ಲಿ ರುಜುವಾತಿಸಲಾಗದ ಎಲ್ಲ ಹೇಳಿಕೆಗಳೂ, ನುಡಿದವರು ಯಾರೇ ಇರಲಿ, ಅವರ ಅಂತಸ್ತು ಏನೇ ಇರಲಿ, ಪೂರ್ತಿ ಮೂಢನಂಬಿಕೆಗಳೇ.

ಅನುಭವದೂರವಾದ ಒಂದು ಸಮಸ್ಯೆ ಎದುರಾಗುತ್ತದೆ ಎನ್ನೋಣ. ವಾಸ್ತವ ಜೀವನದಿಂದ ಒಂದು ನಿದರ್ಶನ. ಆರನೆಯ ತರಗತಿಗೆ ಭಾಗಾಹಾರವಿಧಾನವನ್ನು ವಿವರಿಸುತ್ತಿದ್ದ ಉಪಾಧ್ಯಾಯರಾರು ಸಾಕಷ್ಟು ಸಾಂಖ್ಯಕ ನಿದರ್ಶನಗಳ ಮೂಲಕ ತಮ್ಮ ತೀರ್ಮಾನವನ್ನು ಒಂದು ಸೂತ್ರವಾಕ್ಯದಲ್ಲಿ ಕ್ರೋಡೀಕರಿಸಿದರು: “ಯಾವುದೇ ಸಂಖ್ಯೆಯನ್ನು ಅದರಿಂದಲೇ ಭಾಗಿಸಿದಾಗ ದೊರೆಯುವ ಶೇಷ ಸದಾ ಸಂಶಯವುಂಟೇ?”

ಆ ಹಿಂದಿನ ಒಂದು ತಾಸು ಅವರು ಬೆವರು ಹರಿಸಿ, ಉದಾಹರಣೆ ನೀಡಿ, ವಿವರಣೆ ಕೊಟ್ಟು ಮತ್ತು ಕರಿಹಲಗೆ ಮೇಲೆ ಬರೆದು ವಿಷಯ ಮುಂದಟ್ಟು ಮಾಡಲು ಪ್ರಯತ್ನ ಮಾಡಿದ್ದರು. ಇವೆಲ್ಲದರಿಂದಾಗಿ ಮಕ್ಕಳ ಮನಗಳಲ್ಲಿ ಇಡೀ ಸಮಸ್ಯೆ ಒಂದು ಆಟವೆಂಬ ಭಾವನೆ ಸ್ಫುರಿಸಿತ್ತು. ಆದರೆ “ಜಗವೆಲ್ಲವು ನಿದ್ರಿಸುತಿರೆ ಇವನೊಬ್ಬನೆ ಎದ್ದ – ಇವ ಬುದ್ಧ, ಋತುಬದ್ಧ, ಪರಿಶುದ್ಧ, ಮತಿಸಿದ್ಧ” ಎಂಬಂತೆ ತರಗತಿಯ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬನೆದ್ದ, “ಹಾಗಾದರೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದಾಗಲೂ ದೊರೆಯುವ ಶೇಷ | ಹೌದೇ ಗುರುಗಳೇ?”

ಉಪಾಧ್ಯಾಯ ಕೊಟ್ಟ ಉತ್ತರ ಏನೆಂಬುದು ದಾಖಲಾಗಿಲ್ಲ, ಪ್ರಶ್ನೆ ಕೇಳಿದ ವಿದ್ಯಾರ್ಥಿ ಮಾತ್ರ ಯಾರೆಂಬುದು ತಿಳಿದಿದೆ: ೧೨ರ ಹರೆಯದ ಗಣಿತವಿದ್ಯಾರ್ಥಿಗಳು ಕಲಿಯುವ ಕಲನಶಾಸ್ತ್ರದ (calculus) ಆರಂಭ ಈ ಮೂಲಭೂತ ಪ್ರಶ್ನೆಯಲ್ಲಿದೆ (ನೋಡಿ: ‘ರಾಮಾನುಜನ್‌ಬಾಳಿದರಲ್ಲಿ’ ಮಂಗಳೂರಿನ ಅತ್ರಿ ಬುಕ್‌ಸೆಂಟರ್‌ಪ್ರಕಟಣೆ). ಬಹುಶಃ ರಾಮಾನುಜನ್‌ಎಂಬ ಯುವಪ್ರತಿಭೆಯ ಎಳೆ ಮನದಲ್ಲಿ ಆ ಗಳಿಗೆ ಮೂಡಿದ್ದು ಎಲ್ಲವನ್ನೂ ಸಂಶಯದ ಒರೆಗಲ್ಲಿಗೆ ಹಚ್ಚಬೇಕೆಂಬ ಅಂತರ್ಬೋಧೆ ಅಥವಾ ಪ್ರತಿಭಾನ (intuition), ಕಾರಣ? ಸಂಖ್ಯೆಗಳೆಲ್ಲವೂ ದೈವಾನುಗ್ರಹ ಎಂಬ ಪ್ರಚಲಿತ ಕುರುಡು ನಂಬಿಕೆ: “ಭಗವಂತ ಮಾನವನನ್ನು ಸೃಷ್ಟಿಸಿದ. ಮಾನವನೋ ಸಂಖ್ಯೆಯನ್ನು ಕಟ್ಟಿ ಸಾಕ್ಷಾತ್‌ಭಗವಂತನನ್ನೇ ಅಳೆದ!” ಇದು ಅಂದಿನವರ ಗಾಢ ವಿಶ್ವಾಸ. ಇಂದಿನ ಅನುಭವ ಹೇಳುತ್ತದೆ, “ಇದು ಶುದ್ಧ ಮೂಢನಂಬಿಕೆ”. ಗುರುವಿವರಣೆಯನ್ನು ಪ್ರಶ್ನಾತೀತವಾಗಿ ಅಂಗೀಕರಿಸಿದ್ದರೆ ಆತನ ರಾಮಾನುಜನ್‌ತನ ಅಥವಾ ವೈಜ್ಞಾನಿಕ ಚಿಂತನೆ ಮುರುಟಿ ಹೋಗಿರುತ್ತಿತ್ತು.

ಇನ್ನೊಂದು ಐತಿಹಾಸಿಕ ನಿದರ್ಶನ ಗಮನಿಸಬೇಕು. ನಾಗರಿಕತೆ ಅಂದರೆ ಯೋಚನೆ, ಸ್ಮರಣೆ, ವಿವರಣೆ ಮುಂತಾದ ಮಾನವಸಹಜ ಪ್ರಕ್ರಿಯೆಗಳು ಆರಂಭವಾಗುತ್ತಿದ್ದ ದಿನಗಳವು (ಸುಮಾರು ೫೦೦೦ ವರ್ಷಗಳಿಗಿಂತಲೂ ಪ್ರಾಚೀನ ಕಾಲ). ಪವಿತ್ರ ಋಷ್ಯಾಶ್ರಮದಲ್ಲಿದ್ದೇವೆ. “ಗುರುಬ್ರಹ್ಮಾ ಗುರುರ್ವಿಷ್ಣುರ್ಗುರುದೇವೋ ಮಹೇಶ್ವರಃ ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ” ಎಂಬ ಆಣತಿಯನ್ನು ಶಿಷ್ಯರೆಲ್ಲರೂ ಪ್ರಶ್ನಿಸದೆ ಪ್ರಸಾದ ಎಂದು ಸ್ವೀಕರಿಸಿ ಸ್ವಾಂಗೀಕರಿಸುತ್ತಿದ್ದ ಪರಿಸರ.

ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಗುರು ಬೋಧಿಸುತ್ತಿದ್ದಾನೆ. “ತೊಟ್ಟು ಕಳಚಿದ ಹಣ್ಣು ನೆಲಕ್ಕೆ ಕೆಡೆಯುವುದು ಭೂನಿಯಮ.”

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಅಂಧವಿನೀತತೆಯನ್ನು ತ್ರಿಕರಣಪೂರ್ವಕವಾಗಿ ಆರಾಧಿಸುತ್ತಿದ್ದ ಶಿಷ್ಯರು ಇದನ್ನು ಒಪ್ಪಿದರು. “ಎಷ್ಟು ಸುಲಭ! ಕಣ್ಣಾರೆ ಕಾಣುವ ಸತ್ಯ ಇದು.”

‘ಅಧಿಕ ಪ್ರಸಂಗ’ ಎಂದು ಮೇಲುನೋಟಕ್ಕೆ ಭಾಸವಾಗುವ ಸಂಶಯವನ್ನು ಒಬ್ಬ ಮಾತ್ರ ಎತ್ತಿದ, “ಗುರುಗಳೇ! ಹಾಗಾದರೆ ನಕ್ಷತ್ರಗಳನ್ನು ಆಕಾಶದಲ್ಲಿ ಹಿಡಿದಿಟ್ಟಿರುವ ತೊಟ್ಟುಗಳು ಯಾವುವು?”

“ಅಲ್ಲಿ ಚಾಲೂ ಆಗುವುದು ಆಕಾಶನಿಯಮ.” ಶಿಷ್ಯ ತೃಪ್ತನಾದ.

ಹಾಗಾದರೆ ಉಲ್ಕೆಗಳೇಕೆ ಬೀಳುತ್ತವೆ? ಧೂಮಕೇತುಗಳೇಕೆ ಅಕಸ್ಮಾತ್ತಾಗಿ ಗೋಚರಿಸಿ ತಮ್ಮ ವಿಕಟ ಲಾಂಗೂಲ ಬೀಸುತ್ತ ಬಾನಿನಡ್ಡ ಧಾವಿಸುತ್ತವೆ?” ಇನ್ನೊಬ್ಬ ಕೇಳದ.

“ಸ್ವರ್ಗದಿಂದ ಪತನವಾಗುವ ಪಾಪಾತ್ಮರೇ ಉಲ್ಕೆಗಳು. ಧರೆಯಲ್ಲಿ ಜನಸಮಷ್ಟಿ ನಿತ್ಯವೆಸಗುವ ಪಾಪಸಂಚಯಕ್ಕೆ ಭಗವಂತ ಕಾಲದಿಂದ ಕಾಲಕ್ಕೆ ಇಡುವ ಕೊಳ್ಳಿಯೇ ಧೂಮಕೇತು.”

ಪ್ರಶ್ನೆಯೇ ವಿಜ್ಞಾನ ಮೂಲ

ಆ ಗುರುವಿನ ವಿವರಣೆ ಶುದ್ಧ ಕುರುಡು ನಂಬಿಕೆ ಎಂದು ಇಂದಿನ ನಮಗೆ ತಿಳಿದಿದೆ. ವಾಸ್ತವವಾಗಿ ಐಸಾಕ್‌ನ್ಯೂಟನ್‌(೧೬೪೨ – ೧೭೨೭) ರಂಗಪ್ರವೇಶಿಸಿ ವಿಶ್ವ ಗುರುತ್ವಾಕರ್ಷಣನಿಯಮವನ್ನು ಗೋಚರ ವಿದ್ಯಮಾನಗಳಿಗೆ ಅನ್ವಯಿಸಿ ಗಣಿತದ ಪರಿಭಾಷೆಯಲ್ಲಿ ನಿರೂಪಿಸುವ ತನಕ (೧೬೮೭) ಆಕಾಶಕಾಯಗಳು ಅಲ್ಲಿ ‘ತೇಲು’ತ್ತಿರುವುದೂ ತೊಟ್ಟು ಕಳಚಿದ ಹಣ್ಣು ಇಲ್ಲಿ ನೆಲಕ್ಕೆ ಕೆಡೆಯುವುದೂ ಒಂದೇ ಕಾರಣದ ಫಲವಾಗಿ ಪ್ರಕಟವಾಗುವ ಕಾರ್ಯಗಳು ಎಂಬ ಸರಳ ಸತ್ಯ ಮಾನವನಿಗೆ ಗೊತ್ತಿರಲಿಲ್ಲ. ಇಂದು ಅಭಿಜಾತ ಭೌತವಿಜ್ಞಾನ (classical physics) ಎಂದು ಕರೆಯಲ್ಪಡುವ ವಿಜ್ಞಾನಶಾಖೆಯ ಮೂಲಪುರುಷ ನ್ಯೂಟನ್‌, ಈ ವಿಜ್ಞಾನಮೇರು ತನ್ನ ಪರಮ ಸಿದ್ಧಿಯ ಉತ್ತುಂಗದಿಂದ ತಾನು (ಅರ್ಥಾತ್‌ವಿಜ್ಞಾನ) ನಡೆದು ಬಂದ ದಾರಿಯನ್ನು ಸಿಂಹಾವಲೋಕಿಸಿ ಬರೆದ, “ಇತರ ವ್ಯಕ್ತಿಗಳಿಗಿಂತ ತುಸು ಆಚೆ ನಾನು ನೋಡಬಲ್ಲವನಾಗಿದ್ದರೆ ಅದರ ಕಾರಣ ಮಹಾದೈತ್ಯರ ಭುಜಗಳ ಮೇಲೆ ನಾನು ನಿಂತಿರುವುದು.”

ತಾತ್ಪರ್ಯ: ಮೂಢ ನಂಬಿಕೆಯಿಂದ ಆರಂಭವಾದ ಆಕಾಶಚಿಂತನೆ ನ್ಯೂಟನ್‌ನ ವೈಜ್ಞಾನಿಕ ತೀರ್ಮಾನದಲ್ಲಿ ಮುಕ್ತಾಯ ಕಂಡಿತು. ಅಂದ ಮೇಲೆ ವಿಜ್ಞಾನದ ಮೂಲ ಎಲ್ಲಿದೆ ಎಂಬುದು ಸ್ಪಷ್ಟ. ಅಲ್ಲೇ ನಾವು ನಿಲ್ಲಬಾರದು ಮಾತ್ರ. ಹಾಗೇನಾದರೂ ನಿಂತದ್ದಾದರೆ ನಾವು ಜೀವ್ಯವಶೇಷಗಳಾಗಿ (ಪಳೆಯುಳಿಕೆಗಳು) ನಶಿಸುವುದು ಖರೆ.

ನ್ಯೂಟನ್ನನ ಇನ್ನೊಂದು ನುಡಿ: “ಲೋಕಕ್ಕೆ ನಾನು ಹೇಗೆ ಕಾಣುವೆನೋ ಊಹಿಸಲಾರೆ. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ ನಾನೊಬ್ಬ ಕಡಲ ಕಿನಾರೆಯಲ್ಲಿ ಆಡುತ್ತಿರುವ ಕಿರಿ ಹೈದ. ಆಗ ಈಗ ನುಣುಪಾದ ಒಂದು ಹರಳನ್ನೋ ಚೆಲುವಾದ ಒಂದು ಚಿಪ್ಪನ್ನೋ ಹೆಕ್ಕಬಹುದು. ಆದರೆ ನನ್ನಿಯ ಹೆಗ್ಗಡಲಿಡೀ ನನ್ನೆದುರು ಅನನ್ವೇಷಿತವಾಗಿ ಚೆಲ್ಲಿಕೊಂಡಿದೆ.”

ನ್ಯೂಟನ್‌ದರ್ಶಿಸಿದ ಆ ‘ದೈತ್ಯರು’ ಯಾರು? ಇತಿಹಾಸಪೂರ್ವ ದಿನಗಳ ಮೂಢನಂಬಿಕೆಗಳಲ್ಲಿ ಆರಂಭವಾಗಿ ಅದೇ ಹಿಂದಿನ ಗೆಲಿಲಿಯೊ (೧೫೬೪ – ೧೬೪೨) ಮತ್ತು ಕೆಪ್ಲರ್‌(೧೫೭೧ – ೧೬೩೦) ತನಕ ದೈತ್ಯ ದಾಪು ಇಟ್ಟು ಅರಳಿ ಬೆಳಗಿದ ಪೂರ್ವಸೂರಿಗಳು ಅಲ್ಲವೇ? ಇನ್ನು ಆತ ಬೆರಗಾಗಿ ದಿಟ್ಟಿಸಿದ ‘ನನ್ನಿಯ ಹೆಗ್ಗಡಲು’ ಅಂತೆಯೇ ಹೆಕ್ಕಿದ ‘ಹರಳು’ ಯಾವುವು? ಸಾಕ್ಷಾತ್‌ಬೃಹದ್ವಿಶ್ವ ಮತ್ತು ವಿಶ್ವಗುರುತ್ವಾಕರ್ಷಣ ನಿಯಮ. ವಿಶ್ವ ಸದಾ ಒಂದೇ ಆಗಿದ್ದರೂ ಮಾನವನ ಅರಿವಿನ ನೋಟಕ್ಕೆ ಅನುಗುಣವಾಗಿ ತುಸು ತುಸುವೇ ತನ್ನ ರಹಸ್ಯೆಗಳನ್ನು ಬಯಲಿಸುತ್ತದೆ ‘ಅವರವರ ಭಾವಕ್ಕೆ, ಅವರವರ ದರುಶನಕೆ.’ ಆದ್ದರಿಂದ ನನ್ನಿ ಎಡೆಗಿನ ನಡೆ ಕುರುಡುನಂಬಿಕೆಗಳ ಇಟ್ಟಿಗೆಗಳಿಂದ ಕಟ್ಟಿದ್ದಾಗಿರಬಹುದೇ?

ಕ್ರಿಸ್ತಶಕ ೧ನೆಯ ಶತಮಾನದಲ್ಲಿ ಬಾಳಿದ ರೋಮನ್‌ರಾಜಕಾರಣಿ ಮತ್ತು ತತ್ತ್ವಶಾಸ್ತ್ರವಿದ ಸೆನೆಕಾ ವಿಶ್ವವೈಚಿತ್ರ್ಯವನ್ನು ವರ್ಣಿಸಿರುವ ಪರಿ: “ಈಗ ನಮ್ಮಿಂದ ಮರೆಯಾಗಿರುವ ಅನೇಕ ಸಂಗತಿಗಳು ಸಾಕಷ್ಟು ದೀರ್ಘಕಾಲ ಮಾಡುವ ಸಂಶೋಧನೆಗಳ ಫಲವಾಗಿ, ಬೆಳಕು ಕಾಣುವ ದಿನ ಬಂದೇ ಬರುತ್ತದೆ. ಆಕಾಶದಂಥ ಅತ್ಯಗಾಧ ವ್ಯಾಪ್ತಿಯನ್ನು ಅನ್ವೇಷಿಸಲು ಒಂದು ತಲೆಮಾರಿನ ಆಯುಷ್ಯವನ್ನೇ ಮೀಸಲಿಟ್ಟರೂ ಸಾಲದು… ಇಂತಿದ್ದರೂ ಆಕಾಶದ ಬಗೆಗಿನ ಜ್ಞಾನ ಉತ್ತರೋತ್ತರ ಯುಗಗಳ ದೀರ್ಘಾವಧಿಗಳಲ್ಲಿ ಕ್ರಮೇಣ ಅನಾವರಣಗೊಳ್ಳಲಿದೆ. ನಮ್ಮ ಕುಲಸಂಜಾತರಾಗಿ ಬರಲಿರುವ ಮುಂದಿನ ಯಾವುದೋ ಪೀಳಿಗೆಯ ಜನರು, ತಮಗೆ ಅಷ್ಟ ಸುಲಭವಾಗಿಯೂ ಸುಂದರವಾಗಿಯೂ ಮನವರಿಕೆಯಾಗಿರುವ ಸಂಗತಿಗಳು. ತಮ್ಮ ಪೂರ್ವಜರಾಗಿದ್ದ ನಮಗೆ ತಿಳಿದೇ ಇರಲಿಲ್ಲವಲ್ಲ ಎಂದು ಅಚ್ಚರಿಪಡುವ ದಿನ ಖಂಡಿತ ಬರಲಿದೆ. ಅನೇಕ ಆವಿಷ್ಕಾರಗಳು ಭವಿಷ್ಯದ ಯುಗಗಳಿಗಾಗಿ ಕಾಯ್ದಿರಿಸಲ್ಪಟ್ಟಿವೆ. ಆದರೆ ಆ ವೇಳೆಗೆ ನಮ್ಮ ಬಗೆಗಿನ ಮಾಹಿತಿ ಮಾಸಿ ಹೋಗಿರುತ್ತದೆ. ಪ್ರತಿಯೊಂದು ಯುಗದಲ್ಲಿಯೂ ಅನ್ವೇಷಣೆಗೆ ನೂತನ ವಿಷಯ ಒದಗುವುದಿಲ್ಲವಾಗಿದ್ದರೆ ಈ ವಿಶ್ವವೊಂದು ಅಲ್ಪ ಮತ್ತು ರಿಕ್ತಯಂತ್ರವಾಗಿರುತ್ತಿತ್ತು. ನಿಸರ್ಗವೆಂದೂ ತನ್ನ ನಿಗೂಢ ರಹಸ್ಯೆಗಳನ್ನು ಒಮ್ಮೆಗೆ ಆಗಲಿ ಎಲ್ಲರಿಗೂ ಆಗಲಿ ಬಿಟ್ಟು ಕೊಡುವುದಿಲ್ಲ.”

ಇವೆಲ್ಲ ವಿವರಣೆಗಳ ಸಾರಾಂಶ: ನಿರಂತರ ಹಾರಾಟದಲ್ಲಿರುವ ಹಕ್ಕಿಯೊಂದು ಮೊದಲು ಮೂಢನಂಬಿಕೆಯ ಹೆಗಲ ಮೇಲೆ ನಿಂತು ತನ್ನ ಚುಂಚವನ್ನು ಆಚೆಗೆ ಚಾಚುವುದು ಸಹಜ ವರ್ತನೆ, ಆಗ ಹೊಸ ದೃಶ್ಯ ಕಾಣುತ್ತದೆ, ಇದರ ಅನ್ವೇಷಣೆಗೆ ಹಾರುವುದು ಮುಂದಿನ ಹೆಜ್ಜೆ ಹೀಗೆ “ಹಕ್ಕಿ ಹಾರುತಿದೆ ನೋಡಿದಿರಾ?”

ವಿಜ್ಞಾನ ಎಂದರೇನು?

ನಿಸರ್ಗದ ಯಾವುದೇ ಗೋಚರ ವಿದ್ಯಮಾನ – ಉದಾಹರಣೆಗೆ ಹಗಲು ಇರುಳುಗಳ ನಿರಂತರ ಉರುಳಾಟ – ಗಮನಿಸಿದಾಗ ಮಾನವಮತಿ ಅದರ ಬಗ್ಗೆ ಕುತೂಹಲ ತಳೆಯುತ್ತದೆ. ಇಲ್ಲಿ ಹಗಲು – ಇರುಳು ಪರಿಕ್ರಮಣ ಗೋಚರ ಕಾರ್ಯ. ಈ ಕ್ರಮಬದ್ಧತೆಯ ಹಿನ್ನೆಲೆ ಕಾರಣ ಏನು ಎಂಬ ಪ್ರಶ್ನೆ ಮನದೊಳಗೆ ಉದ್ಭವಿಸುತ್ತದೆ. ಅರ್ಥಾತ್‌ಇಲ್ಲೇನಾದರೂ ಕಾರ್ಯ – ಕಾರಣ ಸಂಬಂಧ ಏರ್ಪಡಿಸಬಹುದೇ ಎಂಬ ಮೂಲಭೂತ ಪ್ರಶ್ನೆ.

ನೆಲದ ಮೇಲಿನ ಸವಾರ – ಬಂಡಿ ಅನುಭವವನ್ನು ಆಧರಿಸಿ ಗಗನದಲ್ಲಿರುವ ರಥ ಸೂರ್ಯನನ್ನು ಪೂðರ್ವದಿಂದ ಪಶ್ಚಿಮಕ್ಕೆ ಸದಾ ಒಯ್ಯುತ್ತಿರುತ್ತದೆ ಎಂಬ ತಾತ್ಕಾಲಿಕ ಸಂಬಂಧ ಅಥವಾ ಉತ್ತರ ದೊರೆಯತ್ತದೆ. ‌ಇದು ಮತ್ತೆ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಆಭಾಸಗಳಿಗೆ ಕಾರಣವಾಗುತ್ತದೆ. ಹೀಗೆಯೇ ಮುಂದುವರಿದು ಅಂತಿಮವಾಗಿ ಅದು ಸೂರ್ಯನ ಲಕ್ಷಣ ಎಂದೋ ಭಗವಂತನ ಲೀಲೆ ಎಂದೋ ಅಧಿಕಾರಿಯಾಗಿದ್ದರೆ ಅಧಿಕಪ್ರಸಂಗ ಸಾಕು ಎಂಬ ಉಡಾಫೆ ಆದೇಶ ನೀಡಿಯೋ ಈ ಪಿಷ್ಟಪೇಷಣ ನಿಲ್ಲುತ್ತದೆ. ಅರ್ಥ: ಮೂಢನಂಬಿಕೆಯಲ್ಲಿ ತನ್ನ ಆಶ್ರಯವನ್ನು ಕಾಣುತ್ತದೆ!

ಹೀಗೆ ಸಾಗುವ ವಿಜ್ಞಾನ ಜಟಕಾಬಂಡಿ (ಕಾಲ ಇದರ ಸಾಹೇಬ, ಯುಗಯಾತ್ರಿ ಮಾನವ ಇಲ್ಲಿಯ ಸವಾರ) ಅನೇಕ ತಾಣಗಳ ಮೂಲಕ ಹಾಯ್ದು ಹೊಸ ಹಾದಿ ಕಡಿದು ನ್ಯೂಟನ್‌ಎಂಬ ತಾಣದಲ್ಲಿ ನಿಲ್ಲುತ್ತದೆ ತಾತ್ಕಾಲಿಕವಾಗಿ. ಆದರೆ ವಿಜ್ಞಾನದ ಹಾದಿ ಹೇಗಿದೆ ಗೊತ್ತೇ?

ಕುವೆಂಪು ನುಡಿಗಳಲ್ಲಿ –

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಅನಂತವಾಗಿರು!
ನನ್ನ ಚೇತನ, ಆಗು ನೀ ಅನಿಕೇತನ!

ಜಿಜ್ಞಾಸುಮಾನವ ನ್ಯೂಟನ್‌- ನಿಲುಗಡೆ ತಲಪಿದಾಗ ಆತನಿಗೆ ವಿಜ್ಞಾನದ ಸ್ಥೂಲ ವ್ಯಾಖ್ಯೆ ದೊರೆತಿರುವುದು, ವೈಜ್ಞಾನಿಕ ವಿಧಾನಕ್ಕೆ ನಿರ್ದಿಷ್ಟ ರೂಪ ಒದಗಿರುವುದು ಮತ್ತು ನಿಸರ್ಗದ ಸೂಕ್ಷ್ಮಾತಿಸೂಕ್ಞ್ಮ ನಿಗೂಢಗಳಿಗೆ ಇಣುಕುನೋಟ ಲಭಿಸಿರುವುದು. ಅಲ್ಲಿಂದ ಮುಂದಿನ ಪ್ರಮುಖ ತಾಣ ಆಲ್ಬರ್ಟ್ ಐನಸ್ಟೈನ್‌(1879 – 1955).

20ನೆಯ ಶತಮಾನದ ಅನುಕೂಲ ಮಂಚಿಕೆಯಿಂದ ಸಂದ ಯುಗಗಳತ್ತ ವಿಹಂಗಮ ದೃಷ್ಟಿಹಾಯಿಸಿದಾಗ ಅರಿವಿಗೆ ಬರುವ ಸೂತ್ರಗಳಿವು: ಮಾನವನ ಕುತೂಹಲಭರಿತಮತಿ ಯಾವುದೇ ನೈಸರ್ಗಿಕ ವಿದ್ಯಮಾನ ಕುರಿತು ಕಾರ್ಯ – ಕಾರಣ ತಳದಲ್ಲಿ ವೀಕ್ಷಣೆ, ಪ್ರಯೋಗ ಮತ್ತು ತರ್ಕಸಹಿತ ವಿವರಣೆ ಅರಸುವಾಗ ಮೂಡುವ ಅರಿವೇ ವಿಜ್ಞಾನ. ಇದರ ಆಧಾರ ಭಾವನೆಗಳು ಮೂರು:

  1. ವಿಶ್ವದಲ್ಲಿ ಕ್ರಮ (order) ಇದೆ. 2. ಈ ಕ್ರಮವನ್ನು ಗುರುತಿಸಿ ಅರಿತು ಅರ್ಥವಿಸಿ ವಿವರಿಸುವ ಸಾಮರ್ಥ್ಯ ಮಾನವಮತಿಗಿದೆ. 3. “ಭಗವಂತ ನವುರು, ಆದರೆ ಎಂದೂ ಕುಹಕಿಯಲ್ಲ” (God is subtle, but never malicious.)

ಈ ಕೊನೆಯದು ಐನ್‌ಸ್ಟೈನ್‌ರ ಸುಪ್ರಸಿದ್ಧ ಸೂಕ್ತಿ. ಇದರಲ್ಲಿ ‘ಭಗವಂತ’ ನಿಸರ್ಗವನ್ನೂ ‘ಕುಹಕ’ ರಾಗಭಾವಪೂರಿತ ವೈಯಕ್ತಿಕ ಮನವನ್ನೂ ಪ್ರತೀಕಿಸುತ್ತವೆ. ಅಂದರೆ ನಿಸರ್ಗಕ್ಕೆ ಮನವಿಲ್ಲ ಮರುಕವೂ ಇಲ್ಲ, ತನ್ನ ರಹಸ್ಯಗಳನ್ನು ಮಾನವನಿಗೆ ಅರುಹಬೇಕೆಂಬ ಇಚ್ಛೆ ಅದಕ್ಕಿಲ್ಲ, ತಿಳಿಯಗೊಡಬಾರದೆಂಬ ಹಠವೂ ಇಲ್ಲ. ಅವನವನು ಅವನವನ ತಾಕತ್ತಿಗೆ ಅನುಗುಣವಾಗಿ ನಿಸರ್ಗದ ಜೊತೆ ಇದರ ವಿಧಿ ನಿಷೇಧಾನುಸಾರ ಅನುಸಂಧಾನಿಸಿದರೆ ತುಸುವಾದರೂ ಅರಿವು ಅವನಲ್ಲಿ ಮೂಡೀತು. ಈ ಅರಿವೇ ವಿಜ್ಞಾನ: ಮಾನವಮತಿ ನಿಸರ್ಗದ ಜೊತೆ ಕಾರ್ಯ – ಕಾರಣ ತಳದಲ್ಲಿ ಜ್ಞೇಯನಿಷ್ಠವಾಗಿ ವ್ಯವಹರಿಸುವಾಗ ಮನದೊಳಗೆ ಮಿನುಗುವ ಬೆಳಕು.

ವೈಜ್ಞಾನಿಕ ವಿಧಾನ

ವಿಶ್ವದಲ್ಲಿ ಎದುರಾಗುವ ಸಮಸ್ಯೆಗಳನ್ನು ವಿಜ್ಞಾನದ ಮೂರು ಆಧಾರಭಾವನೆಗಳ ಅನುಸಾರ ಪರಿಹರಿಸಲು ಯತ್ನಿಸುವ ಕ್ರಮಕ್ಕೆ ವೈಜ್ಞಾನಿಕ ವಿಧಾನ (scientific method ) ಎಂದು ಹೆಸರು. ಇದರ ಸೋಪಾನಗಳಿವು ಸಮಸ್ಯಾನಿರೂಪಣೆ: ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ; ವಾದರೂಪಣೆ; ಪ್ರಾಯೋಗಿಕ ಪರೀಕ್ಷಣೆ: ಸಿದ್ಧಾಂತಮಂಡನೆ.

ಈ ವಿಶ್ಲೇಷಣೆಯಲ್ಲಿ ಅಂತರ್ಗತವಾಗಿರುವ ಒಂದು ಸೂಕ್ಷ್ಮ ಧಾರೆ ಕಾರ್ಯ – ಕಾರಣ ಸಂಬಂಧ ಇದರ ಅರ್ಥ: ಕಾರ್ಯ ಗೋಚರವಾಗಿರುವಾಗ ಹಿನ್ನೆಲೆ ಕಾರಣವನ್ನೂ ಕಾರಣ ಗೊತ್ತಿರುವಾಗ ಫಲಿತ ಕಾರ್ಯವನ್ನೂ ಶೋಧಿಸುವುದು ವೈಜ್ಞಾನಿಕ ವಿಧಾನದಿಂದ ಸಾಧ್ಯವಾಗುತ್ತದೆ. ಇಂಥ ಅನ್ವೇಷಣೆಯಲ್ಲಿ ಜ್ಞೇಯನಿಷ್ಠತೆ ಮಾತ್ರ ಸಿಂಧು, ಜ್ಞಾತೃನಿಷ್ಠತೆ ಎಂದೂ ಅಲ್ಲ.

ಹೀಗೆ ವಿಶ್ವ ಕುರಿತ ಸಿದ್ಧಾಂತ ವ್ಯಕ್ತಿಕೇಂದ್ರವಾದಲ್ಲಿ ಆರಂಭವಾಗಿ, ಭೂಕೇಂದ್ರವಾದದ (ಕ್ರಿಸ್ತಪೂರ್ವ ದಿನಗಳು) ಮೂಲಕ ಸಾಗಿ, ಸೂರ್ಯ ಕೇಂದ್ರವಾದದಲ್ಲಿ (ಕ್ರಿಸ್ತ ಶಕ 16ನೆಯ ಶತಮಾನ) ನಿಂತು ಈಗ ಕೇಂದ್ರರಹಿತ ವಿಶ್ವದಲ್ಲಿ (20 – 21ನೆಯ ಶತಮಾನ) ತಂಗಿರುವುದನ್ನು ಗಮನಿಸಬೇಕು. ಜ್ಞಾನದ ಈ ಎಲ್ಲ ಅನಾವರಣಗಳ ಆಧಾರ ಶ್ರುತಿ ವೈಜ್ಞಾನಿಕ ವಿಧಾನ. (ನೋಡಿ: ಇದೇ ಲೇಖಕನ ವೈಜ್ಞಾನಿಕ ಮನೋಧರ್ಮ ಮತ್ತು scientific Temper)

ವಿಜ್ಞಾನದಲ್ಲಿಯ ಯಾವುದೇ ಸಿದ್ಧಾಂತ ಶಾಶ್ವತ ಅಲ್ಲ, ಇದಮಿತ್ಥಂ ಎಂಬ ನಿರ್ಣಾಯಕವೂ ಅಲ್ಲ:

ಸಂದೇಹವೀಕೃತಿಯೊಳಿನ್ನಿಲ್ಲವೆಂದಲ್ಲ
ಇಂದು ನಂಬಿದುದೆ ಮುಂದೆಂದುಮೆಂದಲ್ಲ
ಕುಂದು ತೋರ್ದಂದದನು ತಿದ್ದಿಕೊಳೆ ಮನವುಂಟು
ಇಂದೀಗೀ ಮತವುಚಿತ ಮಂಕುತಿಮ್ಮ ||

ವೈಜ್ಞಾನಿಕ ಮನೋಧರ್ಮ

ವೈಜ್ಞಾನಿಕ ವಿಧಾನದಲ್ಲಿ ಮಾನವ ವಿಶ್ವತಥ್ಯವನ್ನು ಅನ್ವೇಷಿಸಲು ಮುನ್ನಡೆಯುತ್ತಿರುವಾಗ ಆತನ ಮನಸ್ಸು ಐದುವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮ ಅಥವಾ ವೈಜ್ಞಾನಿಕತೆ (scientific temper or scientism) ಎಂದು ಹೆಸರು.

ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿರುವ ಶ್ರೀನಿವಾಸಾಚಾರ್‌ಅವರ ಅರ್ಥಗರ್ಭಿತ ನುಡಿಗಳಿಗೆ ವ್ಯಾಖ್ಯಾನ ಇನ್ನು ಅನಗತ್ಯವಲ್ಲವೇ? ಆದ್ದರಿಂದ

ಮೂಢನಂಬಿಕೆ ಮೂಲವನ್ನರಸಿ ಹೋದಾಗ
ಗಾಢಚಿಂತನೆ ಮೊಳೆತು ಕಾರ್ಯಕಾರಣ ಬಂಧ
ಮೂಡುವುದು ವಿಜ್ಞಾನದಾರಂಭವಿದು: ನೋಡಿ
ಮಾಡಿಕಲಿಯುವ ತಂತ್ರ, ಸಂಯಂತ್ರ ಅತ್ರಿಸೂನು

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ;
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ!
ಮಾಡುವ ನೀಡುವ ನಿಜಗುಂವುಳ್ಳಡೆ
ಕೂಡಿ ಕೊಂಬ ನಮ್ಮ ಕೂಡಲ ಸಂಗಮದೇವಾ! ||

ಮಾಡಿದೆನೆಂಬುದು ಮನದಲ್ಲಿ ಹೊಳಿದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಬೇಡಿತ್ತನೀವ ಕೂಡಲ ಸಂಗಮದೇವ! ||
(2000)