ವ್ಯಕ್ತಿಯ ಭವಿಷ್ಯವನ್ನು ಆಕಾಶಕಾಯಗಳು ಮುಖ್ಯವಾಗಿ ನವಗ್ರಹಗಳು, ನಿಯತ್ರಿಸುವುವೆಂಬ ನಂಬಿಕೆಯ ಸುತ್ತ ಮಡುಗಟ್ಟಿರುವ ಕಿಟ್ಟಕ್ಕೆ ಫಲಜ್ಯೋತಿಷ (astrology) ಎಂದು ಹೆಸರು. ‘ಫಲ’ ಎಂದರೆ ಭವಿಷ್ಯ ಕುರಿತ ನುಡಿ. ‘ಜ್ಯೋತಿಷ’ ಪದವು ಜ್ಯೋತಿಶ್ಶಾಸ್ತ್ರದ ( ಜ್ಯೋತಿರ್ವಿಜ್ಞಾನ, ಖಗೋಳವಿಜ್ಞಾನ, astronomy) ಹ್ರಸ್ವರೂಪ.

ಮಾನವಮತಿ ಸಾಧಾರಣವಾಗಿ ಅವೈಚಾರಿಕ ನಂಬಿಕೆಗಳ ಮತ್ತು ವೈಚಾರಿಕ ಹೊಳಹುಗಳ ಮಿಶ್ರಣ ಯಾವುದೇ ‘ಕಾರ್ಯ’ದ ಹಿನ್ನೆಲೆಯಲ್ಲಿ ಒಂದು ‘ಕಾರಣ’ ವರ್ತಿಸುತ್ತದೆ. ಮತ್ತು ಪ್ರತಿಯೊಂದು ‘ಕಾರಣ’’ದ ಪರಿಣಾಮವಾಗಿ ಒಂದು ‘ಕಾರ್ಯ’ ಘಟಿಸುತ್ತದೆ ಎಂದು ಅರಿತು ತದನುಸಾರ ನಿರ್ಧಾರ ತಳೆಯುವ ಮನಃಸ್ಥಿತಿಯೇ ವೈಚಾರಿಕತೆ. ಹೀಗಲ್ಲದೇ ಎಲ್ಲವೂ ದೈವೇಚ್ಛೆ, ವಿಧಿಲೀಲೆ, ಅಥವಾ ಕರ್ಮಫಲ ಎಂದು ನಂಬುವ ಮನಃಸ್ಥಿತಿ ಅವೈಚಾರಿಕತೆ, ವೈಚಾರಿಕತೆ ಸದಾ ಕ್ರಿಯಾಶೀಲವಾಗಿರುತ್ತದೆ. ಅವೈಚಾರಿಕತೆಯಾದರೋ ನಿಷ್ಕ್ರಿಯತೆ ಅಥವಾ ಪಲಾಯನವಾದವನ್ನು ಪ್ರೇರಿಸುತ್ತದೆ.

ಗಗನ ವೈಚಿತ್ರ್ಯಗಳನ್ನೂ ಭೂವೈಪರೀತ್ಯಗಳನ್ನೂ ಗಮನಿಸಿದ ಆದಿಮಾನವನಲ್ಲಿ ಉಭಯಸ್ಥಿತಿಗಳೂ ಜಾಗೃತವಾದುವು. ಕುತೂಹಲ, ವೀಕ್ಷಣೆ, ಊಹನೆ, ಪರೀಕ್ಷಣೆ ಮುಂತಾದವುಗಳಿಂದ ರಚಿತವಾದ ಪ್ರಾಯೀಗಿಕ ಮಾರ್ಗವನ್ನು ವೈಚಾರಿಕತೆ ಅನಾವರಣಿಸಿತು. ಫಲವಾಗಿ ಖಗೋಳವಿಜ್ಞಾನ, ವೈಜ್ಞಾನಿಕ ವಿಧಾನ, ಮತ್ತು ವೈಜ್ಞನಿಕ ವೈಜ್ಞಾನಿಕ ಮನೋಧರ್ಮ ಅರಳಿದುವು. ಹೀಗಲ್ಲದೇ ಅವೈಚಾರಿಕತೆಯು ಭಯ, ಪವಾಡ, ಕಲ್ಪನೆ, ಅಂಧವಿಶ್ವಾಸ ಮುಂತಾದವುಗಳಿಂದ ನಿರ್ಮಿತವಾದ ಮಸಕು ದಾರಿಯನ್ನು ತೆರೆದಿಟ್ಟಿತು. ಫಲವಾಗಿ ಫಲಜ್ಯೋತಿಷ, ತರ್ಕಚಮತ್ಕಾರ, ಮತ್ತು ಮೂಢನಂಬಿಕೆ ಬಾಯಿಕಳೆದುವು. ಹೀಗೆ ವಿಚಾರಮೂಲ ಖಗೋಳವಿಜ್ಞಾನವೂ ಅವಿಚಾರಪ್ರೇರಿತ ಫಲಜ್ಯೋತಿಷವೂ ಪ್ರಾಚೀನ ಕಾಲದಿಂದಲೇ ಮಾನವನ ಅವಿಭಾಜ್ಯ ಅಂಗಗಳಾಗಿ ಬೆಳೆದು ಬಂದಿವೆ.

ಈ ಸಂಬಂಧದಲ್ಲಿ ಖಗೋಳವಿಜ್ಞಾನವನ್ನು “ಊರ್ಧ್ವಮೂಲಮಧಃ ಶಾಖಮಶ್ವತ್ಥಂ” (ಅರಿವೆಂಬ ಅರಳೀಮರದ ಬೇರುಗಳು ಬಾನಿನಲ್ಲಿದ್ದು ವಿಜ್ಞಾನವೆಂಬ ಕೊಂಬೆರೆಂಬೆಗಳು ವರ್ತಮಾನದಲ್ಲಿ ಸದಾ ಮಾನವಸಂಗಾತಿಗಳಾಗಿವೆ ಎಂಬುದು ಇಂಗಿತ) ಎಂದು ಭಾವಿಸಿದರೆ ಫಲಜ್ಯೋತಿಷವನ್ನು ಈ ವೃಕ್ಷಕ್ಕೆ ತಾಗಿರುವ ಬಂದಣಿಕೆ ಎಂದು ಹೇಳಬಹುದು. ಫಲಜ್ಯೋತಿಷವು ಖಗೋಳವಿಜ್ಞಾನದಿಂದ ಸಮೃದ್ಧವಾಗಿ ಮಾಹಿತಿ, ಸಂಗತಿ, ನಿಯಮ, ಸೂತ್ರ ಮುಂತಾದವನ್ನು ಹೀರಿ ಸ್ವಾಂಗೀಕರಿಸಿಕೊಂಡು ವಿಜ್ಞಾನವೇಷದಲ್ಲಿ ವಿಜೃಂಭಿಸುತ್ತಿದೆ. ಇಂಥಲ್ಲಿ ಇಂದಿನ ಒಬ್ಬ ಸುಶಿಕ್ಷಿತ ವ್ಯಕ್ತಿ ಈ ವಾಲಿ – ಸುಗ್ರೀವರ (astrology, astronomy ಉಚ್ಚಾರಣಾಸಾಮೀಪ್ಯ ಗಮನಿಸಬೇಕು) ನಡುವಿನ ವ್ಯತ್ಯಾಸವರಿಯದೆ, ಮಾತಿನ ಮೋಡಿಯಿಂದ ಸುಲಭಗ್ರಾಹ್ಯವಾದ ಫಲಜ್ಯೋತಿಷಕ್ಕೆ ಶರಣಾಗುವುದು ವಿರಳವಲ್ಲ.

ಖಗೋಳವಿಜ್ಞಾನವನ್ನು ವಿಜ್ಞಾನಗಳ ಮಾತೆ ಎಂದು ಸಕಾರಣವಾಗಿ ವರ್ಣಿಸುವುದುಂಟು. ಏಕೆಂದರೆ ಇರುವ ಈ ಲೋಕಕ್ಕಿಂತ ಇಲ್ಲದ ಆ ಲೋಕ ಮಾನವಮತಿಯನ್ನು ಎಲ್ಲ ಕಾಲಗಳಲ್ಲಿಯೂ ಅತಿಶಯವಾಗಿ ಆಕರ್ಷಿಸಿದೆ: “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” (ಗೋಪಾಲಕೃಷ್ಣ ಅಡಿಗ).

ವಿಜ್ಞಾನದ ಸುದೀರ್ಘ ವಿಕಾಸದಲ್ಲಿ ಅದರ ಆಧಾರ ಭಾವನೆಗಳು, ಅದು ಸತ್ಯಶೋಧನೆ ನಡೆಸುವ ಬಗೆ, ವಿವಿಧ ವಿಜ್ಞಾನ ವಿಭಾಗಗಳ ಅಂತರಸಂಬಂಧ ಮತ್ತು ಏಕತೆ ಮುಂತಾದವು ಖಚಿತವಾಗಿವೆ. ಆಧಾರಭಾವನೆಗಳೂ ಮೂರು:

  1. ವಿಶ್ವದಲ್ಲಿ ಕ್ರಮವಿದೆ.
  2. ಮಾನವಮತಿ ಈ ಕ್ರಮವನ್ನು ಗ್ರಹಿಸಿ, ಅರ್ಥವಿಸಿ, ವ್ಯಾಖ್ಯಾನಿಸಬಲ್ಲದು.
  3. “ದೇವರು ನವುರು, ಎಂದೂ ಕುಹಕಿ ಅಲ್ಲ.”

ಮೂರನೆಯದು ಐನ್‌ಸ್ಟೈನರ ಪ್ರಸಿದ್ಧ ಸೂಕ್ತಿ – ನಿಸರ್ಗಕ್ಕೆ ಪ್ರೀತಿ – ದ್ವೇಷ, ಧೈರ್ಯ – ಭಯ, ಪ್ರವೃತ್ತಿ – ನಿವೃತ್ತಿ ಮುಂತಾದ ಮಾನವ ರಾಗಭಾವಗಳಿಲ್ಲ ಎಂಬುದು ಇಂಗಿತ: ಅವನವನ ಪ್ರಯತ್ನಕ್ಕೆ ಅವನವನ ಹಾದಿ ಪ್ರಕಾರ ಫಲ ಎಂದರ್ಥ. ವಿಶ್ವರಹಸ್ಯವನ್ನು ಅನ್ವೇಷಿಸಿ ಅರಿಯಲು ಮುಂದಾಗುವ ವ್ಯಕ್ತಿಯ ಬಗ್ಗೆ ನಿಸರ್ಗದ ಧೋರಣೆ ಪೂರ್ಣತಟಸ್ಥ ಮತ್ತು ದಿವ್ಯ ನಿರ್ಲಿಪ್ತ.

ವಿಶ್ವಸಂಯಂತ್ರದ ವಿಧಿನಿಯಮಗಳನ್ನು ಶೋಧಿಸುವುದು ವಿಜ್ಞಾನದ ಉದ್ದೇಶ. ಇದರ ಸಾಧನೆಗೆ ವ್ಯಕ್ತಿ ಅನುಸರಿಸುವ ಪಥದಲ್ಲಿ ಒಂದು ಕ್ರಮ ಕಾಣುತ್ತೇವೆ: ಸಮಸ್ಯಾ ನಿರೂಪಣೆ, ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ಮತ್ತು ಊಹಾಮಂಡನೆ, ಹಾಗೂ ಮೂಲ ಸಮಸ್ಯೆಗೆ ಈ ಊಹೆಯನ್ನು ಅನ್ವಯಿಸಿ ಇದರ ತಪಾಸಣೆ. ಇಂಥ ಪುನರಪಿ ತಪಾಸಣೆಗಳಲ್ಲಿ ಉತ್ತೀರ್ಣವಾಗುವ ಅಂತಿಮ ಊಹೆಯೇ ದತ್ತ ಸಮಸ್ಯೆಯ ಪರಿಹಾರ – ಸದ್ಯಕ್ಕೆ! ಏಕೆಂದರೆ ಭೌತವಿಶ್ವದಲ್ಲಿ ಶಾಶ್ವತ ಸಮಸ್ಯೆಯೂ ಇಲ್ಲ. ಪರಿಹಾರವೂ ಇಲ್ಲ:

ಸಂದೇಹವೀಕೃತಿಯೊಳಿನ್ನಿಲ್ಲವೆಂದಲ್ಲ
ಇಂದು ನಂಬಿಹುದೆ ಮುಂದೆಂದುಮೆಂದಲ್ಲ
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು
ಇಂದೀಗೀ ಮತವುಚಿತ ಮಂಕುತಿಮ್ಮ ||

ಸತ್ಯಶೋಧನಾರ್ಥ ವಿಜ್ಞಾನ ಅನುಸರಿಸುವ ಈ ಕ್ರಮಬದ್ಧ ನಡೆಗೆ ವೈಜ್ಞಾನಿಕ ವಿಧಾನವೆಂದೂ ಈ ನಡೆಯ ವೇಳೆ ವ್ಯಕ್ತಿಯ ಮನಸ್ಸು ತಳೆಯುವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮವೆಂದೂ ಹೆಸರು. ಮೂಲತಃ ಮಾನವಮತಿ – ನಿಸರ್ಗ ಅಂತರಕ್ರಿಯೆಯು ಕಾರ್ಯ – ಕಾರಣ ಪಾತಳಿಯಲ್ಲಿ ತಾರ್ಕಿಕವಾಗಿ ಜರಗಿದಾಗ ವಿಜ್ಞಾನ ಮೈದಳೆದದ್ದು ನಿಜ, ಆದರೂ ವೈಜ್ಞಾನಿಕ ವಿಧಾನ ಸಮಸ್ತ ಮಾನವಸಮಸ್ಯೆಗಳ ಪರಿಹಾರಕ್ಕೂ ಅನ್ವಯಯೋಗ್ಯವಾಗಿದೆ. ಇಷ್ಟು ಹಿನ್ನೆಲೆಯಿಂದ ಈಗ ಫಲಜ್ಯೋತಿಷವು ವಿಜ್ಞಾನವೇ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸೋಣ.

ವ್ಯಕ್ತಿಯ ಜೀವನ ವೃತ್ತಾಂತ, ವಿಶೇಷವಾಗಿ ಭವಿಷ್ಯ, ಆತನ ಜಾತಕದಲ್ಲಿ ನಿಹಿತವಾಗಿದೆ. ನುರಿತ ಜೋಯಿಸ ಈ ಜಾತಕವನ್ನು ಪರಿಶೀಲಿಸಿ ವ್ಯಕ್ತಿಗೆ ಮುಂದಾಗಲಿರುವುದನ್ನು ಇಂದೇ ಕಣಿ ನುಡಿಯಬಲ್ಲ, ಮತ್ತು ದುಷ್ಟಗ್ರಹಗಳ ಅಪವಿತ್ರ ಮೈತ್ರಿಯಿಂದ ಆತನ ಮೇಲೆ ಕೆಡೆಯಲಿರುವ ಅಪಘಾತಗಳನ್ನು ಯುಕ್ತ ಮುನ್ನೆಚ್ಚರಿಕೆ ವಹಿಸಿ ನಿವಾರಿಸಬಹುದು – ಫಲಜ್ಯೋತಿಷದ ಹೂರಣವಿದು.

ಜೋಯಿಸ ನುಡಿಯುವ ಭವಿಷ್ಯ ಸ್ಥೂಲವಾಗಿ ಈ ಧಾಟಿಯಲ್ಲಿರುವುದು: ಮುಂದಿನ ತಿಂಗಳ ಕೊನೆಯ ದಿನದಂದು ಶನಿ ಮೀನರಾಶಿಯನ್ನು ಪ್ರವೇಶಿಸುತ್ತಾನೆ; ಅಲ್ಲಿ ಆ ಮೊದಲೇ ತಂಗಿರುವ ರಾಹುವಿಗೂ ಶನಿಗೂ ಎಣ್ಣೆಸೀಗೆ; ಎಂದೇ ಈ ಜಾತಕನಿಗೆ ಅನಿಷ್ಟ ಕಾದಿದೆ; ಯುಕ್ತ ಶಾಂತಿ ಹೋಮ ದಾನಾದಿಗಳ ಮೂಲಕ ಅನಿಷ್ಟನಿವಾರಣೆ ಸಾಧ್ಯ.

ಇದನ್ನು ವೈಜ್ಞಾನಿಕ ವಿಧಾನದಿಂದ ತಿಳಿಯಲು ಪ್ರಯತ್ನಿಸೋಣ. ನಿಶ್ಚಲ ಭೂಮಿಯಲ್ಲಿ ನಿಂತಿರುವಂತೆ ಅನ್ನಿಸುವ ನಮಗೆ ಕಾಣುವ ಗಗನದೃಶ್ಯವಿದು : ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಮತ್ತು ಶನಿ ಎಂಬ 7 ಭೌತ ಆಕಾಶಕಾಯಗಳು ಮತ್ತು ರಾಹು ಹಾಗೂ ಕೇತು ಎಂಬ 2 ಕಾಲ್ಪನಿಕ ಬಿಂದುಗಳು (ಇವುಗಳ ಒಟ್ಟು ಹೆಸರು ಫಲಜ್ಯೋತಿಷದ ಪರಿಭಾಷೆಯಲ್ಲಿ ‘ನವಗ್ರಹ’ಗಳು; ವಾಸ್ತವವಾಗಿ ಸೂರ್ಯ ಒಂದು ನಕ್ಷತ್ರ – ನಮ್ಮ ನಕ್ಷತ್ರ, ಚಂದ್ರ ಗ್ರಹವಲ್ಲ – ನಮ್ಮ ಉಪಗ್ರಹ, ರಾಹು ಮತ್ತು ಕೇತುಗಳಿಗೆ ಭೌತ ಅಸ್ತಿತ್ವವಿಲ್ಲ, ಉಳಿದ 5 ಮಾತ್ರ ಋಜುಗ್ರಹಗಳು. ಇವುಗಳ ಯಾದಿಗೆ ಭೂಮಿ, ಯುರೇನಸ್‌, ನೆಪ್ಚೂನ್‌ಮತ್ತು ಪ್ಲೂಟೊ ಗ್ರಹಗಳನ್ನು ಸೇರಿಸಬೇಕು) ನಮ್ಮ ಸುತ್ತ ನಿರಂತರವಾಗಿ ಪರಿಭ್ರಮಿಸುತ್ತಿವೆ; ಪರಿಭ್ರಮಣದ ದಿಶೆ (ರಾಹು, ಕೇತು ಹೊರತಾಗಿ) ಪಶ್ಚಿಮ – ಪೂರ್ವ: ಇವುಗಳ ಕಕ್ಷೆಗಳು, ಸ್ಥಿರನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ , ಒಂದು ಇಕ್ಕಟ್ಟು ಪಟ್ಟಿಗೆ ಸೀಮಿತವಾಗಿರುವಂತೆ ಭಾಸವಾಗುತ್ತವೆ; ಎಂದೇ ಇದರ ನೇರ ಅದೇ ದಿಶೆಯಲ್ಲಿ ಮೇಷದಿಂದ ಮೀನದವರೆಗಿನ 12 ರಾಶಿಗಳನ್ನು ಗುರುತಿಸಿದೆ; ಈ ಪಟ್ಟಿಗೆ ರಾಶಿಚಕ್ರವೆಂದು ಹೆಸರು.

ರಾಶಿಗಳಿಗೂ ರಾಶಿಚಕ್ರಕ್ಕೂ ಭೌತ ಅಸ್ತಿತ್ವ ಇಲ್ಲ! “ಶನಿಯು ಮೀನರಾಶಿಯನ್ನು ಪ್ರವೇಶಿಸುವುದು” ಎಂದರೆ ಭೌತಕಾಯವಾದ ಶನಿಗ್ರಹವು ನಮಗೆ ಕಾಣುವಂತೆ ಮೀನರಾಶಿಯೆಂಬ ಕಾಲ್ಪನಿಕ ರಾಶಿಚಕ್ರಖಂಡದತ್ತ ಸರಿಯುತ್ತಿದೆ ಎಂದರ್ಥ. ವ್ಯಕ್ತಿಯು ಕುರ್ಚಿಯಲ್ಲಿ ಕೂರಲು ತೊಡಗುವುದಕ್ಕೆ ಸದೃಶವಾದ ಭೌತಘಟನೆ ಇದಲ್ಲ. ಗಗನವಿಸ್ಮಯಗಳಾದ ಗ್ರಹಣಗಳ ಕಾರಣವಾಗಿ ರಾಹು ಮತ್ತು ಕೇತು ಎಂಬ ಒಂದು ಜೊತೆ ವ್ಯಾಸೀಯವಿರುದ್ಧ ಬಿಂದುಗಳಿಗೆ (ನಮ್ಮ ನೆಲೆ ಇಲ್ಲಿಯ ಕೇಂದ್ರ) ಪ್ರಾಮುಖ್ಯ ತಂಗಿದೆ” ಎಂದರೆ ನಮಗೆ ಭಾಸವಾಗುವಂತೆ ಕಾಲ್ಪನಿಕ ಬಿಂದು ರಾಹುವು ಕಾಲ್ಪನಿಕ ಮೀನರಾಶಿಯ ದಿಶೆಯಲ್ಲಿದೆ ಎಂದರ್ಥ.

ಅಂದ ಮೇಲೆ ಮೀನರಾಶಿಯಲ್ಲಿ ಶನಿ – ರಾಹು ವಾಸ್ತವ್ಯಕ್ಕೆ ಭೌತಪ್ರಾಮುಖ್ಯ ಏನೂ ಇಲ್ಲ ಎಂಬುದು ಸ್ಪಷ್ಟ. ತೀರ ವಿರಳವಾಗಿ “ಅಷ್ಟಗ್ರಹಯೋಗ” ಸಂಭವಿಸುವುದುಂಟು – ನಮಗೆ ಕಾಣುವಂತೆ ಸೂರ್ಯನಿಂದ ಶನಿಯವರೆಗಿನ 7 ಭೌತಕಾಯಗಳೂ ರಾಹು ಅಥವಾ ಕೇತು ಎಂಬ ಕಾಲ್ಪನಿಕ ಬಿಂದುವೂ ಒಂದೇ ರಾಶಿಯ ದಿಶೆಯಲ್ಲಿರುವುದು. ಗಗನದ ಅಸೀಮ ಅಗಾಧತೆ ಮತ್ತು ನಮ್ಮ (ಖುದ್ದು ಭೂಮಿಯ ಕೂಡ) ಅನಂತಸೂಕ್ಷ್ಮತೆ ಎರಡೂ ಸೇರಿ ಇಂಥ ಒಂದು ಭ್ರಮೆ ನಮ್ಮ ಮನದಲ್ಲಿ ಮೂಡುತ್ತದೆ, ಅಷ್ಟೆ. ಆ ಕಾಯಗಳ ನಡುವೆ ಯಾವ ತಿಮುಕೂ ಇರದು, ತಿಕ್ಕಾಟವೂ ನಡೆಯದು. ಇನ್ನು ಬಿಡಿ ವ್ಯಕ್ತಿಯ ಮೇಲೆ ಹಾಗಿರಲಿ, ಸಾಕ್ಷಾತ್‌ಭೂಮಿಯ ಮೇಲೂ, ಅಷ್ಟಗ್ರಹಯೋಗದ ಪರಿಣಾಮ ಸೊನ್ನೆ! ಪರಸ್ಪರ ಗುರುತ್ವಾಕರ್ಷಣ ಬಲಗಳ ಗಣನೆಯಿಂದಲೂ ಇದನ್ನು ಸಾಧಿಸಬಹುದು.

ಈಗ ಜಾತಕ ಅಂದರೇನೆಂದು ಪರಿಶೀಲಿಸೋಣ. ಇದು ಯಾವುದೇ ಸ್ಥಳ ಕ್ಷಣ ಕುರಿತಂತೆ ರಾಶಿಚಕ್ರ ಮತ್ತು ಇದರಲ್ಲಿ ‘ನವಗ್ರಹ’ಗಳ ವಿನ್ಯಾಸ – ಇವುಗಳ ಸಂಕ್ಷಿಪ್ತ ಸ್ತಬ್ಧಚಿತ್ರ ಪ್ರತಿಯೊಂದು ಶಿಶು ಜನನವೂ ದೇಶ – ಕಾಲದಲ್ಲಿ ಏಕೈಕ ಘಟನೆ. ಆದ್ದರಿಂದ “ತೊಟ್ಟಿಲುಗಳೆಷ್ಟೂ ಜಾತಕಗಳಷ್ಟು ಧರೆಯೊಳಗೆ!” ಹೀಗೆ ಜಾತಕವೊಂದು ಖಚಿತ ವೈಜ್ಞಾನಿಕ ದಾಖಲೆ. ಸಂದ ಯುಗಗಳಲ್ಲಿ ಕವಡೆ ಜೋಯಿಸ ದೀರ್ಘಕಾಲ ಗುಣುಗುಣಿಸಿ ತಯಾರಿಸುತ್ತಿದ್ದ ಜಾತಕವನ್ನು ವರ್ತಮಾನ ದಿನಗಳಲ್ಲಿ ಗಣಕಪರಿಕರ್ಮಿ ತಾರ್ತಕ್ಷಣಿಕವಾಗಿ ಮುದ್ರಿಸಿಕೊಡಬಲ್ಲ, ಜಾತಕರಚನೆ ನಿಸ್ಸಂದಿಗ್ಧವಾಗಿ ಖಗೋಳವಿಜ್ಞಾನಾಧಾರಿತವಾದದ್ದು. ಅಂದಮಾತ್ರಕ್ಕೆ ಜಾತಕದಿಂದ ಸ್ಫುರಿಸುವ ‘ಫಲ’ ಮಾತ್ರ ವೈಜ್ಞಾನಿಕವಾಗಿರಬೇಕಾಗಿಲ್ಲ, ಅದು ವೈಜ್ಞಾನಿಕವಲ್ಲ.

ಫಲಭಾಗ ಕುರಿತಂತೆ ಕೇವಲ ಎರಡು ವಾಸ್ತವ ನಿದರ್ಶನಗಳನ್ನು ಪರಿಶೀಲಿಸೋಣ “ಈ ಮದುವೆಯಿಂದ ಶಿಶುಜನನವಾದಾಗ ವರನ ತಂದೆ ಸಾಯುವನು” ಎಂದು ಜೋಯಿಸ ಭಾವೀವರನ ತಾಯಿಗೆ “ ಆಶ್ವಾಸಿಸುತ್ತಾನೆ.” ಉದ್ವಿಗ್ನ ತಾಯಿ ಈ ಮದುವೆ ಆಗಕೂಡದೆಂದು ಹಠ ಹಿಡಿಯುತ್ತಾಳೆ. ಕೋಪೋದ್ರಿಕ್ತ ಪುತ್ರ ಬಂದೂಕಿಗೆ ಶರಣುಹೋಗಿ ತಾಯಿ, ತಂದೆ, ಅಲ್ಲಿದ್ದ ಕುಟುಂಬಸದಸ್ಯರಿಗೆ ಗುಂಡು ಹೊಡೆದು ಸಾಯಿಸುತ್ತಾನೆ. ತಾನೂ ಗುಂಡು ಹೊಡೆದುಕೊಂಡು ಮಡಿಯುತ್ತಾನೆ. ಹೇಗೂ ಜಾತಕ ಸತ್ಯವಾಯಿತಲ್ಲ!

“ಈಗ ನಿಮಗೆ ಶನಿ ದಶೆ. ಇದು ಮುಗಿಯುವ ಮೊದಲು, ಅಂದರೆ ಇನ್ನು 3 ವರ್ಷ ಪರ್ಯಂತ, ನಿಮ್ಮ ಉದ್ಯಮದಲ್ಲಿ ಏನೂ ಸುಧಾರಣೆ ತರಬೇಡಿ. ಬಳಿಕ ನೀವು ಮುಟ್ಟಿದ್ದು ಚಿನ್ನವಾಗುತ್ತದೆ.” ಆಗಲೇ ತನ್ನ ಅದಕ್ಷತೆ ಹಾಗೂ ಅವಿವೇಕಗಳ ಕಾರಣವಾಗಿ ಸಾಕಷ್ಟು ಸಾಲದಲ್ಲಿ ಮುಳುಗಿದ್ದ ಉದ್ಯಮಿ ಶನಿದಶೆ (!) ಮುಗಿಯುವ ಮೊದಲೇ ಆತ್ಮಹತ್ಯಗೆ ಬಲಿಯಾದ. ಸ್ವರ್ಗದಲ್ಲಿ ಆತನಿಗೆ ಸುವರ್ಣದಶೆ ಪ್ರಾಪ್ತವಾದದ್ದು ಖರೆ!

ಜೋಯಿಸನ ತಂತ್ರಗಳು ಮುಖ್ಯವಾಗಿ ಐದು: ಗಿರಾಕಿಯ ಅವ್ಯಕ್ತ ಭಯವನ್ನು ಭುಗಿಲೆಬ್ಬಿಸುವುದು, ಸುಪ್ತ ಮಹತ್ತ್ವಾಕಾಂಕ್ಷೆಗೆ ತನಿ ಎರೆಯುವುದು, ಮನೋವಾಚನ ಪ್ರಾಚೀನ ಗ್ರಂಥಗಳನ್ನೂ ದೈವಿಕ ಬಲಗಳನ್ನೂ ಉಲ್ಲೇಖಿಸುವುದು, ಮತ್ತು ವ್ಯಾಖ್ಯಾನ ಚಮತ್ಕಾರ – ಇವೆಲ್ಲವುಗಳ ತಳದಲ್ಲಿರುವುದು ಹಿಂಗದ ಸ್ವಾರ್ಥಲಾಲಸೆ: ಕೊಳ್ಳೆಯಿಂದ ತಾನು (ಜೋಯಿಸ) ಹೇಗೆ ಗರಿಷ್ಠ ಲಾಭ ಹಿಂಡುವುದು ಎಂಬ ಅಸಲು ವ್ಯಾಪಾರೀಬುದ್ಧಿ!

ಭವಿಷ್ಯ ನುಡಿಯಲು ಜೋಯಿಸನಿಗಿರುವ ಆಧಾರ ಮತ್ತು ಅಧಿಕಾರ ಏನು? ಪ್ರಾಚೀನ ಗ್ರಂಥಗಳು, ಋಷಿವಾಕ್ಕುಗಳೂ, ಪೂರ್ವನಿದರ್ಶನಗಳು, ಕಾಕತಾಲೀಯತೆ, ಇತ್ಯಾದಿ – ಇವು ಆಧಾರ, ಜೋಯಿಸನಲ್ಲಿಗೆ ಕಣಿಕೇಳಲು ಹೋಗುವ ವ್ಯಕ್ತಿ ಆತನಲ್ಲಿಟ್ಟಿರುವ ಅಂಧವಿಶ್ವಾಸ, ಅಸೀಮಭಕ್ತಿ, ಆರಾಧನಾದೃಷ್ಟಿ, ಶರಣಾಗತಿ ಮನೋಭಾವ ಇತ್ಯಾದಿ – ಇವು ಅಧಿಕಾರ.

ಈ ಆಧಾರವನ್ನಾಗಲೀ ಅಧಿಕಾರವನ್ನಾಗಲೀ ವೈಜ್ಞಾನಿಕ ವಿಧಾನದಿಂದ ತಪಾಸಿಸಲು ಸಾಧ್ಯವಿದೆಯೇ? ಸುತರಾಂ ಇಲ್ಲ. ಭೌತ ಅಸ್ತಿತ್ವರಹಿತ ರಾಶಿಗಳಲ್ಲಿ ‘ನವಗ್ರಹ’ಗಳ ವಿನ್ಯಾಸವೆಂಬ ಭ್ರಮೆ, ಇವು ತಮ್ಮ ಸ್ಥಾನಕಾರಣವಾಗಿ ಬಿಡಿವ್ಯಕ್ತಿಯ ವರ್ತಮಾನ ಭವಿಷ್ಯಗಳನ್ನು ರೂಪಿಸುವುವೆಂಬ ಭ್ರಮೆ, ‘ನವಗ್ರಹ’ಗಳನ್ನು ಶಾಂತಿಗೊಳಿಸಿ(?) ತನ್ನ ದಂದುಗಳನ್ನು ನೀಗಿಕೊಳ್ಳಬಹುದೆಂಬ ಭ್ರಮೆ, ಈ ಎಲ್ಲ ಸಂಗತಿಗಳೂ ಪ್ರಾಚೀನ ಗ್ರಂಥಗಳಲ್ಲಿ (ಘಾಸಿಲುಗಳು?) ಗರ್ಭೀತವಾಗಿದ್ದು ಇವನ್ನು ಜೋಯಿಸ ತನ್ನ ಮಂತ್ರ ಹಾಗೂ ಆಧ್ಯಾತ್ಮಿಕ ಬಲದಿಂದ (?) ಉತ್ಖನಿಸಿ ನುಡಿಯಬಲ್ಲನೆಂಬ ಭ್ರಮೆ ಮತ್ತು ವ್ಯಕ್ತಿಯು ಸೃಷ್ಟೀಶನ ಕೈಗೊಂಬೆ, ಭಗವಂತನ ಇಚ್ಛೆ ‘ನವಗ್ರಹ’ಗಳಲ್ಲಿ ನಿಹಿತವಾಗಿದೆ, ಅದನ್ನು ಪೂರ್ವಭಾವಿಯಾಗಿ ಇಣುಕಿನೋಡಿ ತನ್ನ ಭವಿಷ್ಯವನ್ನು ನಿಯಂತ್ರಿಸಿಕೊಳ್ಳಬಲ್ಲನೆಂಬ ಭ್ರಮೆ – ಈ ಪಂಚಭ್ರಮೆಗಳೇ ಫಲಜ್ಯೋತಿಷದ ಆಧಾರ ಸ್ತಂಭಗಳು. ನಿಸರ್ಗದಲ್ಲಿ ಆಧಾರವಿಲ್ಲದ, ಯಾವುದೇ ಋಜುಪ್ರಯೋಗಕ್ಕೆ ಒಳಪಡದ, ಕಾರ್ಯ – ಕಾರಣ ಸಂಬಂಧವನ್ನು ಎಲ್ಲಿಯೂ ಸ್ಥಾಪಿಸಲಾಗದ, ಸುಭದ್ರ ತಾರ್ಕಿಕ ಸಿದ್ಧಾಂತಕ್ಕೆ ಅಳವಡದ ಪುನರಾವರ್ತನಶೀಲವಲ್ಲದ ಮತ್ತು ಸ್ವಯಂಚಿಕಿತ್ಸಕವಲ್ಲದ (non – self – correcting) ಫಲಜ್ಯೋತಿಷವು ವಿಜ್ಞಾನವೇ? ಸಾಹಿತ್ಯವೇ? ಮಾನವಿಕವೇ?

ಹಾಗಾದರೆ ಅನಾದಿಕಾಲದಿಂದಲೂ ಫಲಜ್ಯೋತಿಷವೇಕೆ ಇಷ್ಟು ಜನಪ್ರಿಯವಾಗಿದೆ? ಹೌದು. ಪ್ರಾಚೀನಯುಗಗಳಿಂದಲೂ ಮನುಕುಲದ ನಿತ್ಯಸಂಗಾತಿಗಳಾಗಿ ಬಂದಿರುವ ಎರಡು ಪಿಡುಗುಗಳಿವೆ: ದೇಹಕ್ಕೆ ಅಂಟಿರುವ ಜಾಡ್ಯ ವ್ಯಭಿಚಾರ; ಮನಕ್ಕೆ ಹಿಡಿದಿರುವ ಮೌಢ್ಯ – ಫಲಜ್ಯೋತಿಷ.

೨೦ನೆಯ ಶತಮಾನದ ೧೮೭ ಮಂದಿ ಪ್ರಪಂಚಪ್ರಸಿದ್ಧ ವಿಜಞಾನಿಗಳು (ಇವರಲ್ಲಿ ಭಾರತಸಂಜಾತ ಖಭೌತವಿಜ್ಞಾನಿ ಎಸ್‌. ಚಂದ್ರಶೇಖರ್‌, ೧೯೧೦ – ೯೫, ಇವರೂ ಸೇರಿದಂತೆ ೧೯ ನೊಬೆಲ್‌ಪ್ರಶಸ್ತಿ ಪುರಸ್ಕೃತರಿದ್ದಾರೆ) ೧೯೭೫ರಲ್ಲಿ ನೀಡಿರುವ ಪತ್ರಿಕಾಪ್ರಕಟಣೆ ಇಂದು (೨೦೦೨) ಹಿಂದೆಂದಿಗಿಂತಲೂ ಅಧಿಕ ಪ್ರಸ್ತುವಾಗಿದೆ:

“ಫಲಜ್ಯೋತಿಷ್ಯ”ಕ್ಕೆ ಇಂದು ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ಅಧಿಕ ಪುರಸ್ಕಾರ ಲಭಿಸುತ್ತಿರುವುದು ಕಂಡು ವಿವಿಧ ಕ್ಷೇತ್ರಗಳಲ್ಲಿರುವ ವಿಜ್ಞಾನಿಗಳು ಆತಂಕಗೊಂಡಿದ್ದಾರೆ. ಫಲಜ್ಯೋತಿಷಿಗಳು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ನುಡಿಯುವ ಭವಿಷ್ಯವನ್ನೂ ನೀಡುವ ಸಲಹೆಯನ್ನೂ ಜನ ಪ್ರಶ್ನೆಗೆ ಒಳಪಡಿಸದೆ ಅಂಗೀಕರಿಸುವುದರ ವಿರುದ್ಧ ನಾವು – ಈ ಕೆಳಗೆ ರುಜುಹಾಕಿರುವ ಖಗೋಳವಿಜ್ಞಾನಿಗಳು, ಖಭೌತವಿಜ್ಞಾನಿಗಳು ಹಾಗೂ ಇತರ ಕ್ಷೇತ್ರಗಳಲ್ಲಿಯ ವಿಜ್ಞಾನಿಗಳು – ಸಾರ್ವಜನಿಕರಿಗೆ ಎಚ್ಚರಿಕೆ ನೀಡಬಯಸುತ್ತೇವೆ. ಫಲಜ್ಯೋತಿಷವನ್ನು ನಂಬಬೇಕೆಂದಿರುವವರು, ಅದರ ಸಿದ್ಧಾಂತಗಳಿಗೆ ಯಾವುದೇ ವೈಜ್ಞಾನಿಕ ಅಡಿಪಾಯ ಇಲ್ಲ ಎಂಬುದನ್ನು ಮನಗಾಣಬೇಕು.

“ಪ್ರಾಚೀನ ಕಾಲದ ಜನರು ಜಗತ್ತಿನ ಬಗ್ಗೆ ತಳೆದಿದ್ದ ನಿಗೂಢ ಐಂದ್ರಜಾಲಿಕ ಕಲ್ಪನೆಯ ಅವಿಭಾಜ್ಯ ಘಟಕವಾಗಿ ಫಲಜ್ಯೋತಿಷವೂ ಇತ್ತು. ಎಂದೇ ಅಂದಿನವರು ಫಲಜ್ಯೋತಿಷಿಗಳು ನುಡಿದ ಭವಿಷ್ಯವನ್ನೂ ನೀಡಿದ ಸಲಹೆಯನ್ನೂ ನಂಬಿದರು. ಆಕಾಶಕಾಯಗಳು ದೇವತೆಗಳ ನೆಲೆವನೆಗಳು ಅಥವಾ ದೇವತೆಗಳಿಂದ ಪ್ರಸರಿಸಲ್ಪಡುವ ಶಕುನಗಳು ಮತ್ತು ಈ ಕಾರಣದಿಂದ ಅವು ಭೂಮಿಯಲ್ಲಿಯ ಘಟನೆಗಳೊಡನೆ ನಿಕಟವಾಗಿ ಬೆಸುಗೆಗೊಂಡಿವೆ ಎಂದು ಭಾವಿಸಿದರು. ಭೂಮಿಯಿಂದ ಗ್ರಹಗಳಿಗೆ ಇರುವ ಹಿರಿದೂರಗಳ ಅಂದಾಜೇ ಅವರಿಗಿರಲಿಲ್ಲ. ಈಗ ಆ ದೂರಗಳನ್ನು ಗಣಿಸಬಹುದು, ಗಣಿಸಲಾಗಿದೆ ಕೂಡ. ಆದ್ದರಿಂದ ದೂರದ ಗ್ರಹಗಳೂ ಇವುಗಳಿಂದ ಅವೆಷ್ಟೋ ಅಧಿಕ ದೂರಗಳಲ್ಲಿ ಹರಡಿ ಹೋಗಿರುವ ನಕ್ಷತ್ರಗಳೂ ಭೂಮಿಯಲ್ಲಿ ಉತ್ಪಾದಿಸುವ ಗುರುತ್ವಾಕರ್ಷಣೀಯ ಮತ್ತು ಇತರ ಪರಿಣಾಮಗಳು ಎಷ್ಟು ಅನಂತಾಲ್ಪ ಎಂಬುದನ್ನು ಈಗ ಅರಿಯಬಲ್ಲೆವು. ಜನನ ಕ್ಷಣದಲ್ಲಿ ನಕ್ಷತ್ರಗಳು ಮತ್ತು ಗ್ರಹಗಳು ನಮ್ಮ ಮೇಲೆ ಬೀರುವ ಬಲಗಳು ಯಾವುದೇ ರೀತಿಯಲ್ಲಿ ನಮ್ಮ ಭವಿಷ್ಯವನ್ನು ರೂಪಿಸಬಲ್ಲವೆಂದು ಊಹಿಸುವುದು ಕೂಡ ಶುದ್ಧಾಂಗ ಅವಿವೇಕ ದೂರದ ಆಕಾಶಕಾಯಗಳ ಸ್ಥಾನಗಳು ಕೆಲವು ದಿವಸಗಳನ್ನು ಇಲ್ಲವೇ ಅವಧಿಗಳನ್ನು ವಿಶಿಷ್ಟ ಕೆಲಸಗಳಿಗೆ ಅಧಿಕ ಪ್ರಶಕ್ತವಾಗಿಸುವುವೆಂಬುದಾಗಲೀ ಒಬ್ಬ ವ್ಯಕ್ತಿಯ ಜನನ ತಾರೆ ಆತ ಇತರರೊಂದಿಗೆ ಸರಿಹೊಂದುವುದನ್ನು ಅಥವಾ ಹೊಂದದಿರುವುದನ್ನು ನಿರ್ಧರಿಸುವುದೆಂಬುದಾಗಲಿ ಖಂಡಿತ ನಿಜವಲ್ಲ.

“ಫಲಜ್ಯೋತಿಷವನ್ನು ಜನ ಏಕೆ ನಂಬುತ್ತಾರೆ? ಇಂದಿನ ಅನಿಶ್ಚಿತ ಸನ್ನಿವೇಶಗಳಲ್ಲಿ ಯುಕ್ತ ನಿರ್ಧಾರ ತಳೆಯಲು ಯೋಗ್ಯ ಮಾರ್ಗದರ್ಶನಲಾಭ ತಮಗೆ ಅಗತ್ಯವೆಂಬುದು ಬಹುಮಂದಿಯ ಆಶಯ. ತಮ್ಮ ನಿಯಂತ್ರಣಕ್ಕೆ ಅಧೀನವಾಗಿರುವ ನಾಕ್ಷತ್ರಿಕ ಬಲಗಳಿಂದ ಪೂರ್ವನಿರ್ಧರಿತವಾದ ಅದೃಷ್ಟದಲ್ಲಿ ಭರವಸೆ ಇಡುವುದು ಅವರ ಅಪೇಕ್ಷೆ ಪ್ರತಿ ವ್ಯಕ್ತಿಯೂ ಪ್ರಪಂಚವನ್ನು ಎದುರಿಸಲೇಬೇಕು; ಪ್ರತಿಯೊಬ್ಬನ ಭವಿಷ್ಯವೂ ಅವನ ಕೈಯಲ್ಲಿದೆ – ಈ ಸಂಗತಿಗಳನ್ನು ಎಲ್ಲರೂ ತಿಳಿದಿರುವುದು ಅತ್ಯಗತ್ಯ.

“ವರ್ತಮಾನ ದಿನಗಳಲ್ಲಿ ಜ್ಞಾನ ಮತ್ತು ವಿದ್ಯೆ ವ್ಯಾಪಕವಾಗಿ ಪಸರಿಸಿವೆ. ಅಂದ ಮೇಲೆ ಇಂದ್ರಜಾಲ ಮತ್ತು ಮೂಢಬಾವನೆಗಳ ಮೇಲೆ ನಿಂತಿರುವ ನಂಬಿಕೆಗಳ ಖೊಟ್ಟಿತನವನ್ನು ಎತ್ತಿತೋರಿಸುವ ಅಗತ್ಯವೇನಿದೆ ಎಂದು ಒಬ್ಬ ಕೇಳಬಹುದು. ಆದರೆ ನಿಜಸ್ಥಿತಿ ಹೀಗಿಲ್ಲ: ಫಲಜ್ಯೋತಿಷವು ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಸಾರ ಪಡೆದಿದೆ. ಫಲಜ್ಯೋತಿಷಿಗಳು ಒದಗಿಸುವ ಯಾದಿ, ಭವಿಷ್ಯವಾಣಿ ಮತ್ತು ಜಾತಕಗಳನ್ನು ಸಮೂಹಮಾಧ್ಯಮಗಳು ಮತ್ತು ಅನ್ಯತ್ರ ವಿಶ್ವಾಸಾರ್ಹ ದೈನಿಕಗಳು, ಸಾಪ್ತಾಹಿಕಗಳು ಹಾಗೂ ಪುಸ್ತಕಪ್ರಕಾಶನಗಳು ಯಾವುದೇ ತೆರನಾದ ವಿಮರ್ಶೆಗೆ ಆಗಿದೆ. ಇದರ ದುಷ್ಟ ಉಪೋತ್ಪನ್ನವಾಗಿ ವಿಚಾರಹೀನತೆ ಮತ್ತು ಅಂಧಶ್ರದ್ಧೆ ಪ್ರಬಲಿಸುವುದು ಖಾತ್ರಿ. ಫಲಜ್ಯೋತಿಷಿಗಳೆಂಬ ಢೋಂಗಿಮಂದಿಯ ಡೌಲು, ಅಬ್ಬರ. ಬೊಬ್ಬೆಗಳನ್ನು ನೇರವಾಗಿಯೂ ಶಕ್ತಿಯುತವಾಗಿಯೂ ವಿರೋಧಿಸಲು ಕಾಲ ಮಾಗಿದೆ ಎಂದು ಭಾವಿಸಿದ್ದೇವೆ.

“ಫಲಜ್ಯೋತಿಷದಲ್ಲಿ ವಿಶ್ವಾಸವಿರುವ ಜನರಿಗೆ ಒಂದು ಸಂಗತಿ ಮನವರಿಕೆ ಮಾಡಿಕೊಡಬೇಕು: ಅವರ ನಂಬಿಕೆಗಳಿಗೆ ಆಧಾರವಾಗಿ ತಪಾಸಣೆಗೆ ಒಳಪಡಿಸಿದ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ; ನಿಜಕ್ಕೂ ಪ್ರಬಲ ವ್ಯತಿರಿಕ್ತ ಪುರಾವೆ ಉಂಟು”.

ಈ ಸಂದೇಶ ಪ್ರಕಟವಾಗಿ ಸುಮಾರು ಮೂರು ದಶಕಗಳು ಸಂದಿವೆ. ವರ್ತಮಾನ ಪರಿಸ್ಥಿತಿ ಏನು? ಅಧಿಕ ಶೋಚನೀಯ. ವ್ಯಕ್ತಿಗಳು ಕುರಿಗಳಾದಾಗ ಜೋಯಿಸರು ಹುಲಿಗಳಾಗಿ ನರಭಕ್ಷಕರಾಗುತ್ತಾರೆ!

ವಾಸ್ತವದ ನೈಜತೆಗೆ ಕುರುಡಾದ ಮೂರ್ಖರಿಗೆ
ಉತ್ತರಕುಮಾರಗೋತ್ರದ ನುಡಿಕನಸಿಗರಿಗೆ
ಸತ್ಯವನ್ನೆದುರಿಸುವ ಕೆಚ್ಚಿರದ ಹೇಡಿಗಳಿ
ಗುತ್ತಮ ಶ್ರೀರಕ್ಷೆ ಜಾತಕವೊ ಅತ್ರಿಸೂನು ||

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ;
ರಾಶಿಕೂಟ ಗಣ ಸಂಬಂಧೆವುಂಟೆಂದು ಹೇಳಿರಯ್ಯಾ;
ಚಂದ್ರ ಬಲ ತಾರಾಬಲವುಂಟೆಂದು ಹೇಳಿರಯ್ಯಾ;
ನಾಳಿನ ದಿನ ಕಿಂದಿನ ದಿನ ಲೇಸೆಂದು ಹೇಳಿರಯ್ಯಾ;
ಕೂಡಲ ಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ! ||
(೨೦೦೧).