ಸ್ವಾಮಿ ವಿವೇಕಾನಂದರು (೧೮೬೩ – ೧೯೦೨) ತಮ್ಮ ಮಾತು ಮತ್ತು ಕೃತಿಗಳಿಂದ ನಾವೆಲ್ಲರೂ ಆ ಅನುಷ್ಠಾನಕ್ಕೆ ತರಬಹುದಾದ ಒಂದು ಆದರ್ಶವನ್ನು ನಮ್ಮೆದುರು ಕಡೆದಿಟ್ಟಿದ್ದಾರೆ. ಇದು ವೈಚಾರಿಕತೆ, ವೈಜ್ಞಾನಿಕತೆ, ನೈತಿಕತೆ ಮತ್ತು ಪ್ರೇಮಶೀಲತೆಗಳ ಮಧುರ ರಸಪಾಕ ಎಂದೇ ಇವರು ವಿಚಾರವಂತನಿಗೆ ಅನುಸರಣೀಯ ನಿದರ್ಶನಗಳ ಅಕ್ಷಯಭಂಡಾರ, ವಿಜ್ಞಾನಿಗೆ ವೈಜ್ಞಾನಿಕ ಮನೋಧರ್ಮದ ಹರಿಕಾರ, ನೀತಿವಂತನಿಗೆ ಜೀವನ ಮೌಲ್ಯಗಳ ಸಮೃದ್ಧ ಆಕರ ಮತ್ತು ಭಕ್ತನಿಗೆ ಭಗವದಾರಾಧನೆಯ ಸಾಕಾರ. ಈ ಲೇಖನದಲ್ಲಿ ‘ಭಗವಂತ’ ಎನ್ನುವುದು ಸಕಲಶಕ್ತಿಗಳ ಮೂಲವಾಗಿರುವ ನಿಸರ್ಗವನ್ನು ಪ್ರತೀಕಿಸುತ್ತದೆ. ಮಾನವ ಸೃಷ್ಟಿಯಾಗಿರುವ ಯಾವುದೇ ಶಕ್ತಿಯನ್ನಲ್ಲ.

ಲೌಕಿಕ ಅಥವಾ ಸಾಧಾರಣ ನೆಲೆಯಲ್ಲಿ ನಾವು ವೈಚಾರಿಕತೆ ಮುಂತಾದ ವಿಭಿನ್ನ ಮನಃಸ್ಥಿತಿಗಳನ್ನು ಉಲ್ಲೇಖಿಸುವುದುಂಟು. ಈ ವಿಭೇದೀಕರಣ ನಮ್ಮ ಸೀಮಿತ ಸಾಮರ್ಥ್ಯದ ದ್ಯೋತಕವೇ ವಿನಾ ವಸ್ತುಸ್ಥಿತಿಯ ಯಥಾಲಕ್ಷಣವಲ್ಲ ಎಂಬುದನ್ನು ಸ್ವಾಮೀಜಿಯವರು ತಮ್ಮ ನಡೆ ನುಡಿ ಬಗೆಗಳಿಂದ ತೋರಿಸಿಕೊಟ್ಟಿದ್ದಾರೆ. ಎಂದೇ ಅವರ ಸಮಗ್ರ ಕೃತಿಗಳು ಒಬ್ಬ ಮಾನವಿಕ ವಿದ್ಯಾರ್ಥಿಗೆ ಎಷ್ಟೋ ಅಷ್ಟೇ ಒಬ್ಬ ವಿಜ್ಞಾನ ವಿದ್ಯಾರ್ಥಿಗೂ ಉದ್ಬೋಧಕಗಳಾಗಿವೆ. ಇರುವುದೊಂದೇ ಬೆಟ್ಟ – ಜ್ಞಾನಗಿರಿ; ಅದರ ಶೃಂಗಕಿವೆ ಪಥಗಳು ಹಲವು!

ನಮ್ಮ ಶೃಂಗಾಭಿಯಾನ ಸುಗಮವಾಗುವ ಸಲುವಾಗಿ ಈಗ ವೈಚಾರಿಕತೆ. ವೈಜ್ಞಾನಿಕತೆ, ನೈತಿಕತೆ, ಪ್ರೇಮಶೀಲತೆ ಎಂಬ ಚತುರ್ಗುಣಗಳ ಅರ್ಥವ್ಯಾಪ್ತಿಯನ್ನು ಗಮನಿಸೋಣ.

ವೈಚಾರಿಕತೆ (rationalism)

ಸೃಷ್ಟಿಯಲ್ಲಿ ಘಟಿಸುವ ಪ್ರತಿಯೊಂದು ‘ಕಾರ್ಯ’ದ ಹಿನ್ನೆಲೆಯಲ್ಲಿ ಒಂದು ‘ಕಾರಣ’ವಿದೆ ಮತ್ತು ಪ್ರತಿಯೊಂದು ‘ಕಾರಣ’ದ ಫಲವಾಗಿ ಒಂದು ‘ಕಾರ್ಯ’ವಿದೆ ಎಂಬ ಕಾರ್ಯ – ಕಾರಣ ಸಂಬಂಧದ ಅರಿವಿಗೆ ವೈಚಾರಿಕತೆ ಎಂದು ಹೆಸರು. ಮಾನವನ ಸಮಸ್ತ ಕ್ರಿಯಾಕಲಾಪಗಳನ್ನೂ ಕಾರ್ಯ – ಕಾರಣ ಪಾತಳಿಯಲ್ಲಿ ಅರ್ಥವಿಸುವುದು ಸಾಧ್ಯವಿದೆ ಎಂಬುದು ವೈಚಾರಿಕತೆಯ ನಿಲವು. ಸದ್ಯ ಯಾವುದೇ ಗೋಚರ ಕಾರ್ಯದ ಹಿನ್ನೆಲೆಯ ಕಾರಣ ನಮ್ಮ ಅರಿವಿಗೆ ಬಂದಿರದಿದ್ದರೆ, ಅಂತೆಯೇ ಯಾವುದೇ ಕಾರಣದ ಫಲವಾದ ಕಾರ್ಯವನ್ನು ನಮಗೆ ಪತ್ತೆ ಮಾಡಲಾಗದಿದ್ದರೆ, ಆಯಾ ಕಾರಣದ ಅಥವಾ ಕಾರ್ಯದ ಶೋಧನೆಗೆ ಯುಕ್ತ ಪ್ರಯತ್ನವನ್ನು ಪ್ರಯುಕ್ತಿಸಬೇಕೇ ಹೊರತು, ಮೊದಲನೆಯದನ್ನು ಕಾರಣರಹಿತ ಕಾರ್ಯವೆಂದೂ ಎರಡನೆಯದನ್ನು ಕಾರ್ಯರಹಿತ ಕಾರಣವೆಂದೂ ತೀರ್ಮಾನಿಸುವುದು ಸಲ್ಲ ಎಂದು ವೈಚಾರಿಕತೆಗೆ ಗೊತ್ತಿದೆ. ತರ್ಕ ವಿಧಿಸುವ ಮಾರ್ಗವೇ ವೈಚಾರಿಕತೆ.

ವೈಚಾರಿಕತೆ (scientism)

ಮಾನವಮತಿ ನಿಸರ್ಗದ ಜೊತೆ ಕಾರ್ಯ – ಕಾರಣ ಪಾತಳಿಯಲ್ಲಿ, ಅಂದರೆ ವೈಚಾರಿಕವಾಗಿ, ವರ್ತಿಸುವಾಗ ಆರು ವಿವಿಕ್ತ ಸೋಪಾನಗಳು ಏರ್ಪಡುತ್ತವೆ: ಸಮಸ್ಯಾನಿರೂಪಣೆ, ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ವಾದರೂಪಣೆ, ಪ್ರಾಯೋಗಿಕ ತಪಾಸಣೆ ಮತ್ತು ಸಿದ್ಧಾಂತ ಮಂಡನೆ. ಈ ವಿವಿಧ ಹಂತಗಳಲ್ಲಿ ತರ್ಕದಷ್ಟೇ ಪ್ರಧಾನ ಪಾತ್ರವನ್ನು ಪ್ರಯೋಗವೂ ವಹಿಸುತ್ತದೆ. ತರ್ಕ ಎಷ್ಟೇ ಸಮಂಜಸವಾಗಿದ್ದರೂ ಪ್ರಯೋಗದಲ್ಲಿ ವಾದ ಉತ್ತೀರ್ಣವಾಗದಿದ್ದರೆ ಇದರ ನೆಲೆ ಕಸದ ಬುಟ್ಟಿ! ಬೇರೆಯೇ ವಾದವನ್ನು ರೂಪಿಸಿ ಮತ್ತೆ ಇದನ್ನು ತರ್ಕದ ನಿಕಷಕ್ಕೆ ಒರೆ ಹಚ್ಚಬೇಕಾಗುತ್ತದೆ. ಹೀಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಂತಿಮವಾಗಿ ತೇರ್ಗಡೆಯಾಗುವ ವಾದಕ್ಕೆ ಸಿದ್ಧಾಂತವೆಂದು ಹೆಸರು: ಮಾನವನ ಎದುರು ನಿಸರ್ಗ ಒಡ್ಡುವ ವಿಶಿಷ್ಟ ಸಮಸ್ಯೆಗೆ ಈ ಸಿದ್ಧಾಂತ ನಿರ್ದಿಷ್ಟ ಪರಿಹಾರ. ಈ ತೆರನಾಗಿ ಮುನ್ನಡೆಯುವಾಗ ಸಂಚಿತವಾಗುವ ಅರಿವಿಗೆ ವಿಜ್ಞಾನ ಎಂದು ಹೆಸರು. ನೈಸರ್ಗಿಕ ವಿದ್ಯಮಾನಗಳಿಗೆ ಮಾನವಮತಿ ವೀಕ್ಷಣೆ – ತರ್ಕ – ಪ್ರಯೋಗಾಧಾರಿತವಾಗಿ ಬರೆಯುವ ಭಾಷ್ಯವಿದು. ವಿಜ್ಞಾನಕಾರ್ಯದಲ್ಲಿ ವ್ಯಕ್ತಿ ಮಗ್ನವಾಗಿರುವಾಗ ಆತನ ಮನಸ್ಸು ತಳೆಯುವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮ (scientific temper), ಅಥವಾ ಸಂಕ್ಷೇಪವಾಗಿ, ವೈಜ್ಞಾನಿಕತೆ ಎನ್ನುತ್ತೇವೆ. ವೈಚಾರಿಕತೆ ವಿಧಿಸುವ ಪ್ರಾಯೋಗಿಕ ಮಾರ್ಗವೇ ವೈಜ್ಞಾನಿಕತೆ.

ನೈತಿಕತೆ (ethics)

ಮನುಷ್ಯ ಸಮಾಜಜೀವಿ. ವ್ಯಕ್ತಿಗಳ ನಡುವಿನ ನಿರಂತರ ಅಂತರಕ್ರಿಯೆಗಳ ಜೇನುಗೂಡೇ ಸಮಾಜ. ಇಲ್ಲಿ ವ್ಯಕ್ತಿ (ವ್ಯಷ್ಟಿ) ಸಮಾಜದ (ಸಮಷ್ಟಿ) ಸಮಗ್ರತೆಯನ್ನೂ ಸಮಾಜ ವ್ಯಕ್ತಿಯ ಹಿತವನ್ನೂ ಸದಾ ಪೋಷಿಸುತ್ತಿರಬೇಕು. ಸುಖೀ ಜೀವನದ ಪ್ರಮುಖ ಅವಶ್ಯಕತೆ ವ್ಯಷ್ಟಿ – ಸಮಷ್ಟಿ ಪರಸ್ಪರ ಅವಲಂಬನೆ. ಈ ಭಾವವನ್ನು ವ್ಯಕ್ತಿಯಲ್ಲಿ ಪ್ರೇರಿಸುವ ಮೂಲ ಬಲಕ್ಕೆ ಧರ್ಮ ಎಂದು ಹೆಸರು. ಇದೊಂದು ಅಮೂರ್ತ ಗುಣ. ಇದರ ಪ್ರಕಟಿತ ರೂಪ ನೈತಿಕತೆ. ವ್ಯಕ್ತಿಯ ನಡವಳಿಕೆಗಳಲ್ಲಿ ನೈತಿಕತೆ ಸದಾ ಮುಂಚೂಣಿಯಲ್ಲಿರಬೇಕು. ಆಲ್ಬರ್ಟ್‌ಐನ್‌ಸ್ಟೈನ್‌(೧೮೭೯ – ೧೯೫೫) ಬರೆದಿದ್ದಾರೆ (೧೯೫೦): “ನಮ್ಮ ಕ್ರಿಯೆಗಳಲ್ಲಿ ನೈತಿಕ ಪಾರಿಶುದ್ಧ್ಯ ಕಾಪಾಡಿಕೊಳ್ಳಲು ಶ್ರಮಿಸುವುದೇ ಅತ್ಯಂತ ಪ್ರಮುಖ ಮಾನವ ಸಾಹಸ. ನಮ್ಮ ಆಂತರಿಕ ಸಮತೋಲ ಮತ್ತು ಖುದ್ದು ನಮ್ಮ ಅಸ್ತಿತ್ವ ಕೂಡ, ಅದನ್ನು ಅವಲಂಬಿಸಿವೆ. ನಾವೆಸಗುವ ಕ್ರಿಯೆಗಳಲ್ಲಿಯ ನೈತಿಕ ಪಾರಿಶುದ್ಧ್ಯವೊಂದೇ ಜೀವನಕ್ಕೆ ಸೌಂದರ್ಯವನ್ನೂ ಗಾಂಭೀರ್ಯವನ್ನೂ ಆವಾಹಿಸಬಲ್ಲದು.”

ವೈಚಾರಿಕತೆ, ವೈಜ್ಞಾನಿಕತೆಗಳಲ್ಲಿ ಬುದ್ಧಿಯ ಪಾತ್ರ ಪ್ರಧಾನ. ಇದೊಂದೇ ಆದರೆ ವೈಚಾರಿಕತೆ ನಿಷ್ಕ್ರಿಯತೆಯಾಗಿಯೂ ವೈಜ್ಞಾನಿಕತೆ ಶೋಷಕತೆಯಾಗಿಯೂ ವಿಕೃತಿಸುತ್ತವೆ. ಹೀಗಾಗದಂತೆ ಮಾಡಲು ಇವೆರಡಕ್ಕೂ ನೈತಿಕತೆಯ ವಿವೇಕಸಿಂಚನ ಅತ್ಯಗತ್ಯ. ಆದ್ದರಿಂದ ವೈಚಾರಿಕತೆ – ವೈಜ್ಞಾನಿಕತೆಗಳಿಗೆ ಪ್ರಸ್ತುತತೆಯನ್ನು ಆವಾಹಿಸುವ ಮತ್ತು ತನ್ಮೂಲಕ ಸಮಾಜಜೀವನವನ್ನು ಸುಖಮಯವಾಗಿಸುವ ಸ್ನೇಹನವೇ ನೈತಿಕತೆ.

ಪ್ರೇಮ (love)

ನೈತಿಕತೆಯ ಆಧರಶ್ರುತಿ ಪ್ರೇಮ – ಅಹೇತುಕ ಪ್ರೀತಿ. “ಪ್ರೇಮವಿಲ್ಲದ ಗಾನ ಕೇಳನೋ ಹರಿ” ಎನ್ನುವಲ್ಲಿ ಪುರಂದರದಾಸರು ಪ್ರೇಮ ಪದದ ವ್ಯಾಖ್ಯಾನ ಮಾಡಿದ್ದಾರೆ. ಪ್ರೇಮ ತ್ರಿಕೋನ ಎನ್ನುವ ಲೇಖನದಲ್ಲಿ (‘ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳು’, ಮೂರನೆಯ ಸಂಪುಟ) ಸ್ವಾಮೀಜಿಯವರು ಪ್ರೇಮ ತ್ರಿಕೋನ ಕುರಿತು ನೀಡಿರುವ ವಿವರಣೆ ಮನನೀಯವಾಗಿದೆ. ಸಾರಾಂಶ:

ಮೂರು ಕೋನಗಳು ಇಲ್ಲದೇ ತ್ರಿಕೋನಕ್ಕೆ ಹೇಗೋ ಹಾಗೆ ಮೂರು ವೈಲಕ್ಷಣ್ಯಗಳಿಲ್ಲದೇ ಪ್ರೇಮಕ್ಕೆ ಅಸ್ತಿತ್ವವಿಲ್ಲ. ಮೊದಲನೆಯ ಕೋನ ನಿರ್ಮೋಹ ಪ್ರೇಮವೆಂಬುದು ಕೊಟ್ಟು ಪಡೆದುಕೊಳ್ಳುವ ವ್ಯಾಪಾರ ವಸ್ತುವಲ್ಲ! ಯಾರು ತಮ್ಮ ಇಚ್ಛಿತ ಕಾಮನೆಗಳು ಈಡೇರಬೇಕೆಂಬ ಬಯಕೆಯಿಂದ, ಪರಿಶುದ್ಧ ಆದರ್ಶವಾದ ಭಗವಂತನನ್ನು [ = ಶಕ್ತಿ ಸಮಷ್ಟಿ ಆಗಿರುವ ವಿಶ್ವ] ಪ್ರೇಮಿಸಿ ಆರಾಧಿಸುವರೋ ಅವರ ಲಕ್ಷ್ಯ ದೇವರಲ್ಲ, ಬದಲು, ವರ ಮತ್ತು ಇದರಿಂದ ಪ್ರಾಪ್ತವಾಗುವ ಅಂತಸ್ತು. ಆದರೆ ಭಿಕ್ಷಾಟನೆ ಅಥವಾ ದೈನ್ಯ ಎಂದೂ ನೈಜ ಪ್ರೇಮದ ಭಾಷೆ ಅಲ್ಲ. ಭಗವಂತ ಪ್ರೇಮಪಾತ್ರನಾದ್ದರಿಂದ ಭಕ್ತ ಆತನನ್ನು ಪ್ರೇಮಿಸುತ್ತಾನೆ. ಇಲ್ಲಿ ಪ್ರೇಮದ ಸಲುವಾಗಿಯೇ ಪ್ರೇಮ ಕ್ರಿಯಾಶೀಲವಾಗಿರುತ್ತದೆ. ಸುಂದರ ದೃಶ್ಯವನ್ನು ವೀಕ್ಷಿಸಿದಾಗ ನಮ್ಮಲ್ಲಿ ತಂತಾನೇ ಸ್ಫುರಿಸುವ ಆನಂದದಂತೆ ಈ ಪ್ರೇಮವಿರುವುದು; ವೀಕ್ಷಕನಿಂದ ಈ ದೃಶ್ಯ ಏನೂ ಶುಲ್ಕವನ್ನು ಅಪೇಕ್ಷಿಸುವುದಿಲ್ಲ, ಹೇಗೋ ಹಾಗೆ.

ಎರಡನೆಯ ಕೋನ ನಿಶ್ಯತ್ತು. ಪರಿಶುದ್ಧ ಪ್ರೇಮಕ್ಕೆ ವೈರಿಗಳೇ ಇಲ್ಲ. ಒಬ್ಬ ಪ್ರೇಮಿಯ ಅತ್ಯುನ್ನತ ಲಕ್ಷ್ಯವಿದು. ನಾವು ಪ್ರೇಮಿಸುವ ವಸ್ತು ನಮ್ಮ ಪರಮೋನ್ನತ ಆದರ್ಶವಾಗುವ ತನಕ ನೈಜ ಪ್ರೇಮವೆಂದೂ ಮೊಳೆಯದು, ಹೊಳೆಯದು ಕೂಡ. ಪ್ರತಿಯೊಬ್ಬನಲ್ಲಿಯ ಇಂಥ ಮಹೋನ್ನತ ಆದರ್ಶಕ್ಕೆ ದೇವರು ಎಂದು ಹೆಸರು. ನಾವು ಪ್ರೇಮಿಸುವ ಮತ್ತು ಪ್ರೇಮಿಸಬಲ್ಲ ದೇವರ ಬಗೆಗಿನ ಪರಿಪೂರ್ಣ ಚಿತ್ರವನ್ನು ಸೌಂದರ್ಯ, ತಾದಾತ್ಮ್ಯ, ಅಧಿಕಾರ ಮುಂತಾದ ಸಮಸ್ತ ಭಾವಗಳ ಸಂಶ್ಲೇಷಣೆ ಮಾತ್ರ ನೀಡಬಲ್ಲದು.

ಮೂರನೆಯ ಕೋನ ನಿರ್ಭಯ. ಪ್ರೇಮಕ್ಕೆ ಭಯವೆಂದರೇನೆಂದೇ ಗೊತ್ತಿಲ್ಲ. ನೇಸರು ಕತ್ತಲೆಯನ್ನು ಬಣ್ಣಿಸಬಲ್ಲುದೇ? ಭಯಾಧಾರಿತ ದೇವರ ಆರಾಧಕರು ಅಭಿವೃದ್ಧಿ ಶ್ರೇಣಿಯಲ್ಲಿ ತೀರ ಕೆಳಗಿನ ಮೆಟ್ಟಿಲಿನಲ್ಲಿರುವವರು. ಭಗವಂತನಿಗೆ ಹೆದರಿ ಯಾವುದೇ ಕೆಲಸದಲ್ಲಿ ತೊಡಗುವ ಮನಃಸ್ಥಿತಿಗಿಂತ ಶ್ರೇಯಸ್ಕರವಾದದ್ದು ಆತನನ್ನು ಪ್ರೇಮಿಸುತ್ತ ಕಾರ್ಯೋದ್ಯುಕ್ತವಾಗುವ ನಿಲವು. ಹೃದಯದಲ್ಲಿ ಭಯ ಹುದುಗಿರುವತನಕ ಪ್ರೇಮ ಜಿನುಗದು. ವಿಶ್ವ ಬೇರೆ, ನಾನು ಬೇರೆ ಎಂಬ ಸ್ವಾರ್ಥಚಿಂತನೆಯೇ ಭಯದ ಮೂಲ.

ನಾನು, ನನ್ನದು, ನನಗೆ, ನನ್ನಿಂದ ಮುಂತಾದ ಯೋಚನೆಗಳನ್ನು ನಿರ್ಮೂಲಿಸಿದಾಗ ಭಯವಿಲ್ಲವಾಗುತ್ತದೆ. ಅಲ್ಲಿ ಪ್ರೇಮದ ಸೆಲೆ ಜುಳುಜುಳಿಸುತ್ತದೆ:

ಪ್ರೇಮ ತ್ರಿಕೋನಕ್ಕೆ ಶೃಂಗಗಳು ಮೂರಿಹವು:
ನಿರ್ಮೋಹ, ನಿಶ್ಯತ್ರು, ನಿರ್ಭಯಂ ಪ್ರತಿಫಲದ
ಕಾಮನೆಯ ತೊರೆ, ಮೈತ್ರಿಯನು ಮೆರೆ, ಸದಾ ಧೀರ
ಧೀಮಂತನಾಗಿರಲು ಕದವ ತೆರೆ ಅತ್ರಿಸೂನು ||

ಒಬ್ಬ ಸಭ್ಯ ಪುರುಷನಲ್ಲಿ ಬೆಸುಗೆಗೊಂಡಿರುವ ನಾಲ್ಕು ಗುಣಗಳ ವೈಚಾರಿಕತೆ, ವೈಜ್ಞಾನಿಕತೆ, ನೈತಿಕತೆ, ಪ್ರೇಮಶೀಲತೆ ಸಂಯುಕ್ತ ಫಲಕ್ಕೆ ಮಾನವೀಯತೆ (compassion) ಎಂದು ಹೆಸರು. ಮಾನವೀಯತೆಯಲ್ಲಿ ಉತ್ತುಂಗ ಶಿಖರ ತಲುಪಿ ಜನಕೋಟಿಗೆ ಸದಾ ದಾರಿದೀಪವಾಗಿರುವವರನ್ನು ಸಂತರೆನ್ನುತ್ತೇವೆ. ಉದಾಹರಣೆಗೆ, ಬುದ್ಧ, ಏಸು, ಶಂಕರ, ಬಸವಣ್ಣ, ಸ್ವಾಮಿ ವಿವೇಕಾನಂದ, ಗಾಂಧಿ ಮೊದಲಾದ ಮಾನ್ಯರು. ಇವರೆಲ್ಲರೂ ಮೂರ್ತಿವೆತ್ತ ಶ್ರೇಷ್ಠ ಮಾನವೀಯತೆಗಳು. ಸಂತವಾಣಿ ನಿತ್ಯಸತ್ಯ ಮತ್ತು ಸದಾ ಪ್ರಸ್ತುತ. ಏಕೆಂದರೆ ಅವರು ತತ್ಕಾಲದಲ್ಲಿ ಸಾರ್ವಕಾಲಿಕತೆಯನ್ನೂ ತದ್ದೇಶದಲ್ಲಿ ಸಾರ್ವದೈಶಿಕತೆಯನ್ನೂ ಸಾಂತದಲ್ಲಿ ಅನಂತವನ್ನೂ ದರ್ಶಿಸಬಲ್ಲ ದ್ರಷ್ಟಾರರು:

ಏಕದಿಂದಲನೇಕ ಮತ್ತನೇಕದಿನೇಕ
ವೀ ಕ್ರಮವೇ ವಿಶ್ವದಂಗಾಂಗ ಸಂಬಂಧ
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ
ಸಾಕಲ್ಯದರಿವಿರಲಿ ಮಂಕುತಿಮ್ಮ ||

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಹೇಗೆ ಮಾನವೀಯತೆಯ ಎಲ್ಲ ಲಕ್ಷಣಗಳೂ ಪ್ರಕಟವಾಗುತ್ತವೆ ಎಂಬುದನ್ನೀಗ ಕೆಲವು ನಿದರ್ಶನಗಳ ಮೂಲಕ ಪರಿಶೀಲಿಸೋಣ.

. ವೈಚಾರಿಕತೆ: ಸಂಪುಟ ೫ ರಲ್ಲಿ ಪವಾಡಗಳು ಎಂಬ ಅಧ್ಯಾಯವಿದೆ. ಅದರ ಸಾರಾಂಶವಿದು. ಅಮೆರಿಕದಲ್ಲಿದ್ದ (೧೮೬೪) ಸ್ವಾಮೀಜಿಯವರನ್ನು ಮಾಟ (ದುಷ್ಟ ಶಕ್ತಿಗಳ ಆವಾಹನೆಯಿಂದ ಇಷ್ಟ ಸಿದ್ಧಿಸಿಕೊಳ್ಳುವ ವಾಮತಂತ್ರ), ವಾಯುಲಘಿಮಾ (ಅವಲಂಬನರಹಿತವಾಗಿ ಗಾಳಿಯಲ್ಲಿ ತೇಲುವುದು), ಚಿರಕಾಲ ನಿಶ್ಚೇಷ್ಪತೆ (ಗುಹೆ ಹೊಕ್ಕು ಅನ್ನ ನೀರಿಲ್ಲದೇ ದೀರ್ಘಕಾಲ ನಿಶ್ಚಲಿಯಾಗಿರುವುದು) ಮುಂತಾದ ಪವಾಡಗಳ ಬಗ್ಗೆ ಪ್ರಶ್ನಿಸಲಾಯಿತು. ಅವರ ಉತ್ತರ ನೇರವಾಗಿತ್ತು, ಖಚಿತವಾಗಿಯೂ ಇತ್ತು: ಪವಾಡಗಳನ್ನು ತಾವು ನಂಬುವುದಿಲ್ಲ.

ವೈಚಾರಿಕ ಮನೋಧರ್ಮ ಕುರಿತಂತೆ ಸ್ವಾಮೀಜಿಯವರ ಈ ಮುಂದಿನ ಸೂಕ್ತಿಗಳನ್ನು ಗಮನಿಸಬೇಕು:

  • ಮೂಢನಂಬಿಕೆ ಅಥವಾ ಅಂಧಶ್ರದ್ಧೆ ಮನುಷ್ಯನ ಪರಮಶತ್ರು, ಅಂಧಾಭಿಮಾನ ಇನ್ನೂ ಅಪಾಯಕಾರಿ (ಸಂಪುಟ ೧, ಹಿಂದೂ ಸ್ವಾತಂತ್ರ್ಯ).
  • “ದೆವ್ವಗಳನ್ನು ತಾವು ನಂಬುವುದಿಲ್ಲ ಎನ್ನುವ ವ್ಯಕ್ತಿಗಳನ್ನು ನೀವು ನೋಡಿದ್ದೀರಿ. ಆದರೆ ಅದೇ ವೇಳೆ ಕಗ್ಗತ್ತಲೆಯಲ್ಲಿ ಒಂಟಿಯಾಗಿ ನಡೆಯುವಾಗ ಒಂದು ಬಗೆಯ ಭೀತಿಕಂಪನ ಆವರಿಸದ ವ್ಯಕ್ತಿಗಳು ತೀರ ಕಡಿಮೆ. ಅಂಧಶ್ರದ್ಧೆಯ ಫಲವಿದು” (ಸಂಪುಟ ೨, ಆತ್ಮನ ಸ್ವಾತಂತ್ರ್ಯ).
  • ಮತ್ಸರದ ಗೈರುಹಾಜರಿಯೇ ಅಹಿಂಸೆಯ ವಜ್ರಪರೀಕ್ಷೆ. ಆ ಕ್ಷಣದ ಉದ್ರೇಕದಲ್ಲಿ ಅಥವಾ ಯಾವುದೋ ಅಂಧಶ್ರದ್ಧೆಯ ಹಿಡಿತದಲ್ಲಿ ಅಥವಾ ಪುರೋಹಿತ ವರ್ಗದ ಒತ್ತಡದಲ್ಲಿ ಒಬ್ಬಾತ ಏನೋ ಒಂದು ಒಳ್ಳೆಯ ಕೆಲಸ ಮಾಡಬಹುದು, ಇಲ್ಲವೇ ದಾನವೀಯಬಹುದು. ಆದರೆ ಋಜು ಜನ ಮತ್ತು ಜೀವನಪ್ರೇಮಿ ಸದಾ ಮತ್ಸರವಿದೂರಿ.

ಸಮಗ್ರಕೃತಿಗಳಲ್ಲಿ ಯಾದೃಚ್ಛಿಕವಾಗಿ ಯಾವುದೇ ಪುಟ ತೆರೆಯಿರಿ: ನಿಮಗೆ ಅಲ್ಲಿ ಕಾದಿದೆ ಹೊಸ ಉದಾಹರಣೆ! ಸಂಪುಟ ೪ರಲ್ಲಿ ಯಾದೃಚ್ಛಿಕವಾಗಿ ಒಂದು ಪುಟ ಮಗುಚಿದೆ: ಬ್ರಹ್ಮವಿದ್ಯೆ ಬಗ್ಗೆ ಕೆಲವು ಟೀಕೆಗಳು ಲೇಖನ ಎದುರಾಯಿತು. ಈ ವಿನೂತನ ಪಾಶ್ಚಾತ್ಯ ಚಿಂತನೆ ಕುರಿತಂತೆ ಸ್ವಾಮೀಜಿಯವರ ನಿಲವು ಸ್ಪಷ್ಟ ಸಕಾರಣ ನಿರಾಕರಣೆ. ಇವರು ಬರೆದಿದ್ದಾರೆ: “ವಿಶ್ವ ಕುರಿತ ಮೂಲ ದೈವಿಕಜ್ಞಾನ ತಮಗಿದೆಯೆಂದು ಬ್ರಹ್ಮವಿದ್ಯಾವಾದಿಗಳು ಹೇಳಿಕೊಳ್ಳುತ್ತಾರೆ. ಈ ಸಂಗತಿ ತಿಳಿಯಲು ನಮಗೆ [ಹಿಂದೂಗಳಿಗೆ] ಸಂತಸವಾಗಿದೆ. ಇದನ್ನೊಂದು ಚಿರನಿಗೂಢ ರಹಸ್ಯೆವಾಗಿ ರಕ್ಷಿಸಿಕೊಂಡು ಬರಲು ಅವರು ಉದ್ದೇಶಿಸಿರುವರೆಂಬುದನ್ನು ಕೇಳಿ ಇನ್ನಷ್ಟು ಆನಂದವಾಗಿದೆ. ಈ ಎಲ್ಲ ಗೂಢಾದ್ಗೂಢತರ ಜ್ಞಾನವನ್ನು ಒಮ್ಮೆಗೆ ಅನಾವರಣಿಸಿ ನಮ್ಮ ಮೇಲೆ ರಿಕ್ತ ಮರ್ತ್ಯ ಹಿಂದೂಗಳ ಮೇಲೆ ಹರಿಯಬಿಟ್ಟರೆ ಸರ್ವನಾಶವೇ ನಮ್ಮ ಗತಿ!” ಸ್ವಾಮೀಜಿಯವರ ಸಕಾರಣ ಕಟಕಿಯನ್ನು ಗಮನಿಸಬೇಕು.

. ವೈಜ್ಞಾನಿಕತೆ: ಸ್ವಾಮಿ ವಿವೇಕಾನಂದರ ವೈಜ್ಞಾನಿಕ ಚಿಂತನೆಗೆ ಉತ್ಕೃಷ್ಟ ನಿದರ್ಶನ ಸಂಪುಟ ೮ರಲ್ಲಿದೆ. ಸ್ವಂತ ಅದೃಷ್ಟದ ನಿರ್ಮಾಪಕ ಮಾನವ ಎನ್ನುವ ಲೇಖನದ ಉದ್ಧೃತಾಂಶ:

“ದಕ್ಷಿಣ ಭಾರತದಲ್ಲಿ ಅತಿ ಪ್ರಬಲವಾದ ಒಂದು ವಂಶವಿತ್ತು. ಬೇರೆ ಬೇರೆ ಕಾಲಗಳಲ್ಲಿ ಬಾಳಿದ ಗಣ್ಯ ವ್ಯಕ್ತಿಗಳ ಜನನ ಮೂಹೂರ್ತಗಳನ್ನು ಆಧರಿಸಿ ಅವರ ಜಾತಕಗಳನ್ನು ತಯಾರಿಸುವುದು ಈ ವಂಶಜರ ವೃತ್ತಿ ಇವನ್ನು ‘ಓದಿ’ ಇವರು ಆ ಜಾತಕನ ಬಗೆಗಿನ ಪ್ರಮುಖ ಸಂಗತಿಗಳನ್ನು ಮುನ್ನುಡಿದರು ಮತ್ತು ಇವುಗಳ ದಾಖಲೆಗಳನ್ನು ರಚಿಸಿದರು. ಕಾಲಾಂತರದಲ್ಲಿ ಘಟನೆಗಳು ಸಂಭವಿಸಿದಂತೆ, ಇವನ್ನು ದಾಖಲೆಗಳಲ್ಲಿಯ ವಿವರಗಳೊಂದಿಗೆ ಹೋಲಿಸಿ ನೋಡಿದರು. ಸಾವಿರ ವರ್ಷಪರ್ಯಂತ ಈ ತುಲನೆ ಮುಂದುವರಿದಾಗ, ಅಲ್ಲಿ ಹಲವಾರು ಹೊಂದಾಣಿಕೆಗಳು ಕಂಡುಬಂದವು. ಇವನ್ನು ಸಾರ್ವತ್ರೀಕರಿಸಿ ಬೃಹತ್ಸಂಪುಟವೊಂದರಲ್ಲಿ ಕಲೆ ಹಾಕಿದರು. ಮುಂದೆ ಈ ವಂಶ ನಶಿಸಿಹೋಯಿತು. ಆದರೆ ಫಲಜ್ಯೋತಿಷಿಗಳ ದಂಡು ಮಾತ್ರ ಉಳಿಯಿತು. ಆ ಬೃಹತ್ಸಂಪುಟ ಇವರ ಸೊತ್ತು. ಫಲ ಜ್ಯೋತಿಷ (astrology) ಈ ತೆರನಾಗಿ ಅಸ್ತಿತ್ವಕ್ಕೆ ಬಂದಿರುವುದು ಸಾಧ್ಯ. ಹಿಂದೂಗಳನ್ನು ತೀವ್ರವಾಗಿ ಗಾಸಿಗೊಳಿಸಿರುವ ಕುರುಡುನಂಬಿಕೆಗಳ ಪೈಕಿ ಅವರು ಫಲಜ್ಯೋತಿಷದ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಗೆ ಅತ್ಯಧಿಕ ಲಕ್ಷ್ಯ ಹರಿಸಿದುದೂ ಒಂದಾಗಿದೆ.”

“ನಮ್ಮ ಚಿಂತನೆಯ ಪ್ರಕಾರ ಭಾರತಕ್ಕೆ ಫಲಜ್ಯೋತಿಷ ತಂದವರು ಗ್ರೀಕರು. ಇವರು ಹಿಂದೂಗಳಿಂದ ಖಗೋಳವಿಜ್ಞಾನ ಪಡೆದು ಇದನ್ನು ತಮ್ಮ ಜೊತೆ ಒಯ್ದು ಯೂರೋಪಿಗೆ ತಲುಪಿಸಿದರು. ಈ ಪರಸ್ಪರ ಪ್ರಭಾವವನ್ನು ಭಾರತದ ಪ್ರಾಚೀನ ಪವಿತ್ರ ಮಂದಿರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು: ಇವು ನಿರ್ದಿಷ್ಟ ಜ್ಯಾಮಿತೀಯ ಆಲೇಖ್ಯಾನುಸಾರ ರಚಿತವಾಗಿವೆ, ಮತ್ತು ನಕ್ಷತ್ರಗಳು ನಿರ್ದಿಷ್ಟ ಸ್ಥಾನಗಳಿಗೆ ಬಂದಾಗ ನಿರ್ದಿಷ್ಟ ವಿಧಿಗಳನ್ನು ಆಚರಿಸಲು ಬದ್ಧವಾಗಿವೆ.”

“ಭವಿಷ್ಯವನ್ನು ಅತ್ಯದ್ಭುತವಾಗಿ ಕಣಿನುಡಿದಿರುವ ಹಲವಾರು ಫಲ ಜ್ಯೋತಿಷಿಗಳನ್ನು ನೋಡಿದ್ದೇನೆ. ಆದರೆ ಅವರು ನಕ್ಷತ್ರಗಳನ್ನು ಆಧರಿಸಿ ಅಥವಾ ತತ್ಸದೃಶ ಕ್ರಿಯೆ ನಡೆಸಿ, ಈ ಯಶಸ್ಸು ಗಳಿಸಿರಬಹುದೆಂಬ ಪೊಳ್ಳನ್ನು ನಾನಂತೂ ನುಂಗಲಾರೆ. ಹಲವಾರು ಸಂದರ್ಭಗಳಲ್ಲಿ ತೀರ ಸ್ಪಷ್ಟವಾಗಿಯೇ ಅದು ಮನೋವಾಚನವಾಗಿತ್ತು. ಮುಂದೆ ಸಂಭವಿಸಲಿರುವ ಘಟನೆಗಳನ್ನು ಕೆಲವೊಮ್ಮೆ ಪರಮಾಶ್ಚರ್ಯಕರವಾಗಿ ಮುನ್ನುಡಿದಿರುವುದೂ ಉಂಟು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಬರಿದೆ ಓಣಗುಲ್ಲು.”

“ಲಂಡನ್ನಿನಲ್ಲಿ ಒಬ್ಬ ತರುಣ ತನ್ನಲ್ಲಿಗೆ ಬಂದು ‘ಮುಂದಿನ ವರ್ಷ ನನ್ನ ಗತಿ ಏನಾದೀತು?’ ಎಂದು ಕೇಳುತ್ತಿದ್ದ. ‘ಹಾಗೆಂದರೇನರ್ಥ?’ ಎಂದು ಅವನನ್ನು ಪ್ರಶ್ನಿಸಿದಾಗ, ‘ನಾನು ಹಣ ಪೂರ್ತಿ ಕಳೆದುಕೊಂಡು ದಟ್ಟದರಿದ್ರನಾಗಿದ್ದೇನೆ’ ಎಂದ.

“ಅನೇಕ ಮಂದಿಗೆ ದೇವರೆಂದರೆ ಹಣವೊಂದೇ. ದುರ್ಬಲ ವ್ಯಕ್ತಿಗಳು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ತಾವು ನಿರ್ಗತಿಕರಾಗಿರುವೆವೆಂದು ತಿಳಿದಾಗ ಸಂಶಯಾಸ್ಪದ ವಿಧಾನಗಳಿಂದಾದರೂ ಹಣಮಾಡಲು ಹಿಂಜರಿಯುವುದಿಲ್ಲ. ಇಂಥವರು ಫಲಜ್ಯೋತಿಷ ಹಾಗೂ ಇದೇ ತೆರನಾದ ನಯವಂಚನೆಯ ವಿಧಾನಗಳಿಗೆ ಶರಣಾಗುತ್ತಾರೆ. ಸಂಸ್ಕೃತದಲ್ಲಿ ಒಂದು ಗಾದೆ ಇದೆ. ಹೇಡಿ ಮತ್ತು ಮುಟ್ಠಾಳ ಮಾತ್ರ ‘ಇದು ನನ್ನ ವಿಧಿ’ ಎಂದು ಕೊರಗುತ್ತಾನೆ; ದೃಢಮನಸ್ಕನಾದರೋ, ‘ನನ್ನ ವಿಧಿಯನ್ನು ನಾನೇ ಬರೆಯುತ್ತೇನೆ’ ಎಂದು ಪಣ ತೊಡುತ್ತಾನೆ.”

“ಮುದುಕತನಕ್ಕೆ ಕಾಲಿಡುತ್ತಿರುವ ಬಲಹೀನರು ಮಾತ್ರ ಅದೃಷ್ಟದ ಬಗ್ಗೆ ಮಾತಾಡುತ್ತಾರೆ. ಸಾಧಾರಣವಾಗಿ ಯುವಜನರು ಎಂದೂ ಫಲಜ್ಯೋತಿಷದ ಹತ್ತಿರ ಕೂಡ ಸುಳಿಯುವುದಿಲ್ಲ. ನಾವು ಯಾವುದೋ ಗ್ರಹದ ಪ್ರಭಾವಕ್ಕೆ ಒಳಗಾಗಿರುವುದು ನಿಜವೇ ‘ಇರಬಹುದು.’ ಆದರೆ ಈ ಸಂಗತಿ ನಮ್ಮನ್ನೇನೂ ಬಾಧಿಸಬೇಕಾಗಿಲ್ಲ.”

“ಬುದ್ಧ ವಿಧಿಸಿದ್ದಾನೆ. ‘ವಂಚಕ ವಿಧಾನಗಳಿಂದ ಮತ್ತು ಮಿಥ್ಯಾಚಮತ್ಕಾರಗಳಿಂದ ನಕ್ಷತ್ರಗಳನ್ನು ಕುರಿತ ಗಣನೆ ಮಾಡಿ ಉದರಂಭರಣೆ ಗೈಯುವವರನ್ನು ಹತ್ತಿರ ಸೇರಿಸತಕ್ಕದ್ದಲ್ಲ.’ ಬುದ್ಧನಿಗೆ ತಾನೇನು ಹೇಳುತ್ತಿದ್ದೇನೆ ಎಂಬುದು ತಿಳಿದಿರಲೇಬೇಕು. ಏಕೆಂದರೆ ಹಿಂದೂಗಳಲ್ಲೆಲ್ಲ ಆತ ಪರಮಶ್ರೇಷ್ಠ.”

“ನಕ್ಷತ್ರಗಳು ಬರಲಿ, ನಮಗೇಕೆ ಚಿಂತೆ? ನಕ್ಷತ್ರವೊಂದು ನನ್ನ ಬದುಕನ್ನು ಕಲಕುವುದಾದರೆ ನಾನದಕ್ಕೆ ದುಗ್ಗಾಣಿ ಕಿಮ್ಮತ್ತೂ ಕೊಡಲಾರೆ. ಫಲಜ್ಯೋತಿಷ ಮತ್ತು ಇಂಥ ಎಲ್ಲ ನಿಗೂಢ ವಿಷಯಗಳು ಸಾಧಾರಣವಾಗಿ ದುರ್ಬಲ ಮನಸ್ಸಿನ ವ್ಯಾಧಿ ಚಿಹ್ನೆಗಳೆಂಬುದು ನಿಮ್ಮ ಗಮನಕ್ಕೆ ಬರದಿರದು. ಆದ್ದರಿಂದ ನಮ್ಮ ಮನಗಳಲ್ಲಿ ಇವು ವರ್ಧಿಸುತ್ತಿವೆಯೆಂಬ ಅರಿವು ಮೂಡಿದಾಗ ನಾವು ವೈದ್ಯರನ್ನು ನೋಡಬೇಕು. ಯೋಗ್ಯ ಆಹಾರ ಮತ್ತು ವಿಶ್ರಾಂತಿ ಪಡೆಯಬೇಕು.”

“ಯಾವುದೇ ವಿದ್ಯಮಾನ ಕುರಿತು ವಿವರಣೆ ಅದರ ಸ್ವಭಾವದ ಒಳಗಡೆಯೇ ಒದಗುವುದಾದರೆ ಬಾಹ್ಯ ಮೂಲಗಳಲ್ಲಿ ಅದನ್ನು ಅರಸುವುದು ಅವಿವೇಕ. ಜಗತ್ತು ತನ್ನನ್ನು ತಾನೇ ವಿವರಿಸುವುದಾದರೆ ಈ ವಿವರಣೆಯನ್ನು ಹೊರಗೆಲ್ಲೋ ಹುಡುಕುವುದು ಪರಮ ಮೂರ್ಖತೆ. ವ್ಯಕ್ತಿಯ ಜೀವನದಲ್ಲಿ ಘಟಿಸುವ ಯಾವುದೇ ವಿದ್ಯಮಾನವನ್ನು ಮಾನವ ಸ್ವಂತ ಸಾಮರ್ಥ್ಯದ ನೆರವಿನಿಂದ ವಿವರಿಸಲಾಗದಂಥ ದೃಷ್ಟಾಂತ ಎಲ್ಲಿಯಾದರೂ ಇದೆಯೇ? ಅಂದಮೇಲೆ ಇಲ್ಲಿಯ ವಿದ್ಯಮಾನ ಕುರಿತಂತೆ ನಕ್ಷತ್ರಗಳಲ್ಲಿಗೋ ಇನ್ನೆಲ್ಲಿಗೋ ಬುದ್ಧಿ ಹರಿಸುವುದರ ಔಚಿತ್ಯವಾದರೂ ಏನು?”

“ಇದೊಂದು ಹಳೆಯಕತೆ. ನಾಡಿನ ದೊರೆಯಲ್ಲಿಗೆ ಒಬ್ಬ ಫಲಜ್ಯೋತಿಷಿ ಹೋಗಿ, “ಇನ್ನು ಆರು ತಿಂಗಳ ಒಳಗೆ ನೀನು ಸಾಯಲಿರುವೆ” ಎಂದು ಭವಿಷ್ಯ ನುಡಿದ.”

“ಸಹಜವಾಗಿಯೇ ಅರಸ ಭಯವಿಹ್ವಲನಾದ – ಆ ಗಳಿಗೆಯೇ ಸತ್ತು ಹೋಗುವನೋ ಎಂಬಂಥ ಸ್ಥಿತಿ. ಈತನ ಬುದ್ಧಿವಂತ ಮಂತ್ರಿ, ‘ಫಲಜ್ಯೋತಿಷಿಗಳೆಲ್ಲರೂ ಮುಟ್ಠಾಳರು’ ಎಂದು ಘೋಷಿಸಿದರೂ ರಾಜನಲ್ಲಿ ನೆಮ್ಮದಿ ಮೂಡಲಿಲ್ಲ. ಇನ್ನೇನು ಹಾದಿ ಎಂದು ಯೋಚಿಸಿದ ಆ ಸಚಿವ, ಫಲಜ್ಯೋತಿಷಿಯನ್ನು ಅರಮನೆಗೆ ಮರುಕರೆಸಿ ಪ್ರಶ್ನಿಸಿದ, ‘ನಿನ್ನ ಗಣನೆಗಳೆಲ್ಲವೂ ನಿಖರವಾಗಿವೆಯೇ?’

“ಫಲಜ್ಯೋತಿಷಿ, “ಹೌದು, ಇಲ್ಲಿ ಯಾವ ದೋಷವೂ ನುಸುಳಿರಲು ಸಾಧ್ಯವಿಲ್ಲ.”

“ಆದರೂ ಮಂತ್ರಿಯ ಸಮಾಧಾನಾರ್ಥ ಅವೇ ಗಣನೆಗಳನ್ನು ಮಗುದೊಮ್ಮೆ ಮಾಡಿ, ‘ಗಣನೆಗಳು ಸರಿಯಾಗಿವೆ. ಭವಿಷ್ಯವಾಚನ ಕರಾರುವಾಕ್ಕಾಗಿದೆ’ ಎಂದು ದೃಢೀಕರಿಸಿದ.”

“ಅರಸನ ಮುಖ ಬಿಳಿಚಿಕೊಂಡಿತು. ಫಲಜ್ಯೋತಿಷಿಗೆ ಮಂತ್ರಿ ಸವಾಲೆಸೆದ. ‘ನಿನ್ನ ಮರಣ ಎಂದು ಸಂಭವಿಸಲಿದೆ ಎಂಬುದನ್ನು ಗಣಿಸಿರುವೆಯಾ?’

‘ಹೌದು, ಇನ್ನು ಹನ್ನೆರಡು ವರ್ಷಗಳಲ್ಲಿ’

“ಆ ಕ್ಷಣ ಸಚಿವ ಒರೆಯಿಂದ ತನ್ನ ಕರವಾಲ ಹಿರಿದು, ಜ್ಯೋತಿಷಿಯ ತಲೆ ತರಿದು, ರಾಜನಿಗೆ ಹೇಳಿದ, ‘ಈ ಸುಳ್ಳನನ್ನು ನೋಡಿದೆಯಾ? ಈ ಗಳಿಗೆಯೇ ಈತ ಮಡಿದಿದ್ದಾನೆ!’

“ನಿಮ್ಮ ರಾಷ್ಟ್ರ ನಳನಳಿಸಬೇಕಾದರೆ ಈ ಎಲ್ಲ ಮೌಢ್ಯಗಳಿಂದ ನೀವು ದೂರವಾಗಿರಬೇಕು. ನಮ್ಮನ್ನು ಬಲಿಷ್ಠರಾಗಿ ಮಾಡುವಂಥವು ಮಾತ್ರ ಒಳ್ಳೆಯ ವಿಷಯಗಳು. ಇವು ನಮ್ಮ ಬಲವನ್ನು ಸಂವರ್ಧಿಸುವುದೇ ಎಂಬುದು ಮಾತ್ರ ಇವನ್ನು ಕುರಿತ ಏಕೈಕ ಪರೀಕ್ಷೆ. ವಾಸ್ತವವಾಗಿ, ಒಳಿತೇ ಬದುಕು, ಕೆಡುಕೇ ಸಾವು.”

ಇನ್ನೊಮ್ಮೆ ಸ್ವಾಮೀಜಿ ಹೇಳಿದರು, “ವಾಸ್ತವ ಸಂಗತಿಗಳ ಶೋಧನೆ ಭೌತಿಕ ವಿಜ್ಞಾನ. ಆಧಿಭೌತಿಕ ಅಥವಾ ಅಧ್ಯಾತ್ಮಕ ವಿಜ್ಞಾನವಾದರೋ ಪುಷ್ಪಗಳನ್ನು ಗುಚ್ಛವಾಗಿ ಬಂದಿಸುವ ಸೂತ್ರ. ಪ್ರತಿಯೊಂದು ಅಮೂರ್ತೀಕರಣವೂ ಆಧಿಭೌತಿಕ. ಮರದ ಬೇರಿಗೆ ಗೊಬ್ಬರ ಊಡುವ ಕಾರ್ಯವೂ ಅಮೂರ್ತೀಕರಣ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.” (ಸಂಪುಟ – ೭)

. ನೈತಿಕತೆ: ವಿಜ್ಞಾನದ ಪರಿಭಾಷೆಯಲ್ಲಿ ಭೌತ ಬಲಗಳ ಸ್ವರಮೇಳವೇ ವಿಶ್ವ – ಏಕ ಶ್ರುತಿ, ಅಸಂಖ್ಯ ಸ್ವರಗಳು. ಸ್ವಾಮಿ ವಿವೇಕಾನಂದರು ದಿವ್ಯಮಾತೆಯ ಆರಾಧನೆ (ಸಂಪುಟ – ೮) ಎಂಬ ಲೇಖನದಲ್ಲಿ ಈ ಭೌತ ಚಿಂತನೆಯ ಆಧ್ಯಾತ್ಮಿಕ ಮುಖವನ್ನು ಪ್ರಸ್ತಾವಿಸುತ್ತಾರೆ. “ವಿಶ್ವದ ಸಮಸ್ತ ವಿದ್ಯಮಾನಗಳು ಏಕಶಕ್ತಿಯ ವಿವಿಧಲಾಸ್ಯಗಳು. ಈ ಶಕ್ತಿಯನ್ನು ಅವರು ಅಮೂರ್ತಗುಣವಾದ ಮಾತೃಶಕ್ತಿಯೆಂದು ಪ್ರತೀಕಿಸುತ್ತಾರೆ. ಸಾಮಾನ್ಯವಾಗಿ ದೇವರು ಎನ್ನುವ ಪರಿಕಲ್ಪನೆ ಮಾನವಚಿಂತನೆಯ ಮೂರ್ತ ಪರಿಮಿತಿಯಿಂದ ಕುಂಠಿತವಾಗುತ್ತದೆ. ಉದಾಹರಣೆಗೆ, ಅತಿಮಾನುಷ ಸಾಮರ್ಥ್ಯವಿರುವ ಭಗವಂತ. ಶಕ್ತಿ ಪರಿಕಲ್ಪನೆಯಲ್ಲಿ ಈ ಮಾನವಸಹಜ ಪರಿಮಿತಿ ಇಲ್ಲ. ಭಗವದ್ಗೀತೆಯಲ್ಲಿ, ‘ನಾನು ವಾಸ್ತವ, ನಾನು ಅವಾಸ್ತವ. ನಾನು ಒಳ್ಳೆಯದನ್ನು ತರುತ್ತೇನೆ, ನಾನು ಕೆಟ್ಟದ್ದನ್ನು ತರುತ್ತೇನೆ’ ಎನ್ನುವಲ್ಲಿ ಈ ಏಕಶಕ್ತಿ ಪರಿಕಲ್ಪನೆ ನಿಹಿತವಾಗಿದೆ. ಆದರೆ ಇದು ಮುಂದೆ ಪ್ರವರ್ಧಿಸಲಿಲ್ಲ, ಬದಲು, ‘ಈ ವಿಶ್ವ ಒಳ್ಳೆಯದರ ಮತ್ತು ಕೆಟ್ಟದರ ಒಂದು ಸಂಕೀರ್ಣ ವಾಸ್ತವತೆ, ಒಂದೇ ಶಕ್ತಿ ಇವೆರಡೂ ಆಗಿ ಮೈದಳೆಯುತ್ತದೆ’ ಎನ್ನುವ ದ್ವೈತತ್ವಚಿಂತನೆ ಅಭಿವರ್ಧಿಸಿತು. ಇಂಥ ಒಂದು ಪರಿಕಲ್ಪನೆಯ ಮೇಲೆ ರಚಿಸಿದ ನೈಕತೆಯಲ್ಲಿ ಪಾಪಿಯನ್ನು ಪುಣ್ಯವಂತ ದ್ವೇಷಿಸುವುದನ್ನೂ ಪುಣ್ಯವಂತನ ಎದುರು ಪಾಪಿ ಹೋರಾಡುವುದನ್ನೂ ಕಾಣುತ್ತೇವೆ. ಏಕಶಕ್ತಿಯನ್ನು ಆಧರಿಸಿ ಕಟ್ಟಿದ ನೈತಿಕತೆ ಮಾತ್ರ ನಮಗೆ ಚಿತ್ತಸ್ವಾಸ್ಥ್ಯ ನೀಡಬಲ್ಲದು.”

ವಿಜ್ಞಾನಿಸಂತರಾಗಿದ್ದ ಐನ್‌ಸ್ಟೈನರ ಚಿಂತನೆಯನ್ನು ಗಮನಿಸಬೇಕು. ೧೯೩೫ರಲ್ಲಿ ಇವರು ತಮ್ಮ ತಂಗಿಗೆ ಬರೆದ ಪತ್ರದಲ್ಲಿ ನೈತಿಕತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ: “ವರ್ತಮಾನ ಕಾಲದ ಭಾರೀ ರಾಜಕೀಯ ಕೋಲಾಹಲಗಳು ಎದೆ ಓಡೆಯುವಂತಿವೆ. ಇವುಗಳ ನಡುವೆ ತಮ್ಮ ತಲೆಮಾರಿನ ಒಬ್ಬಾತನಿಗೆ ತಾನು ಪೂರ್ತಿ ಒಂಟಿಗನಾಗಿರುವೆನೆಂಬ ಭಾವ ಮೂಡುವುದು ಸಹಜ. ಜನರು ನ್ಯಾಯ ಮತ್ತು ಘನತೆ ಬಗೆಗಿನ ಗಾಢ ಅನುರಕ್ತಿಯನ್ನು ಕಳೆದುಕೊಂಡಿರುವರೋ, ನಮ್ಮದಕ್ಕಿಂತ ಮೇಲುಮಟ್ಟದ ತಲೆಮಾರಿನವರು ಅಸಾಧಾರಣ ತ್ಯಾಗ ತಪಸ್ಸುಗಳಿಂದ ಗಳಿಸಿದ ಮೌಲ್ಯಗಳನ್ನು ಕಡೆಗಣಿಸಿರುವರೋ ಎಂಬಂತೆ ತೋರುತ್ತಿದೆ…. ನಿಜಕ್ಕೂ ಮಾನವೀಯ ಮೌಲ್ಯವೆಲ್ಲವುಗಳ ಅಡಿಪಾಯವಾದರೂ ಏನು? ನೈತಿಕತೆ.”

ನೈತಿಕತೆಯ ಮಹತ್ವವನ್ನು ಆಧ್ಯಾತ್ಮದ ಮಾರ್ಗವಾಗಿ ಸ್ವಾಮಿ ವಿವೇಕಾನಂದರೂ ವಿಜ್ಞಾನದ ಮಾರ್ಗವಾಗಿ ಐನ್‌ಸ್ಟೈನರೂ ಗುರುತಿಸಿರುವ ಪರಿಯಲ್ಲಿ ಎದ್ದು ಕಾಣುವ ಸಾದೃಶ್ಯ, ಸ್ವಾಮೀಜಿಯವರೇ ಬೇರೆ ಒಂದು ಸಂದರ್ಭದಲ್ಲಿ. ಉದ್ಗರಿಸಿದ ಸೂಕ್ತಿಗೆ ಒಂದು ಉಜ್ವಲ ನಿದರ್ಶನ: ಅಧ್ಯಾತ್ಮಮಾರ್ಗವೂ ವಿಜ್ಞಾನಮಾರ್ಗವೂ ಅದೇ ಋತವನ್ನು ಅರ್ಥವಿಸಲು ಪ್ರಯತ್ನಿಸುತ್ತಿರುವ ಎರಡು ಬಗೆಗಳು ಮಾತ್ರ. (ನೋಡಿ ಅಧ್ಯಾಯ ೯ರಲ್ಲಿ ಡಿವಿಜಿ ದರ್ಶನ)

೪. ಕಾರಣ, ವಿಶ್ವಾಸ ಮತ್ತು ಪ್ರೇಮ ಎಂಬ ಕವನದಲ್ಲಿ (ಸಂಪುಟ ೫) ಸ್ವಾಮೀಜಿಯವರು ಕಾರಣ – ಭರವಸೆ – ಪ್ರೇಮ ಸಂಬಂಧವನ್ನು ಸೂತ್ರರೂಪದಲ್ಲಿ ವಿವರಿಸಿದ್ದಾರೆ:

ಕಾರಣಕ್ಕೆ ಅದರದೇ ಪರಿಮಿತಿಗಳಿವೆ, ತಳವಿದೆ, ವಿಕೃತಿಯೂ ಇದೆ. ಅದನ್ನು ಸುತ್ತುವರಿದಿರುವ ಭಿತ್ತಿಗಳು ಅಜ್ಞೇಯತಾವಾದ, ನಿರೀಶ್ವರವಾದ. ಹಾಗೆಂದು ಅಲ್ಲಿಗೇ ನಿಲ್ಲತಕ್ಕದ್ದಲ್ಲ. ಅತೀತವಾದದ್ದು ಪ್ರತಿಕ್ಷಣವೂ ನಮ್ಮನ್ನು ಪ್ರಭಾವಿಸುತ್ತಿದೆ, ಆಕಾಶ ಮತ್ತು ತಾರೆಗಳು ನಮ್ಮ ಮೇಲೆ ವರ್ತಿಸುತ್ತಿವೆ, ಕಾಣದಿರುವವು ಕೂಡ ಎಂದೇ ಅವನ್ನು ಉತ್ಕ್ರಮಿಸಲೇಬೇಕು. ಕಾರಣವೊಂದೇ ಇದನ್ನು ಸಾಧಿಸಲಾರದು: ಸಾಂತದಿಂದ ಅನಂತವನ್ನು ಹಿಡಿದಿಡಲಾಗದು.

ಭರವಸೆ ಒಂಟಿಯಾಗಿರುವಾಗ ವಿಕೃತಿಸುತ್ತದೆ: ಅಂಧಾಭಿಮಾನ, ಮತಾಂಧತೆ, ಪಂಥಮೌಢ್ಯ ಎಂದೇ ಸಾಂತವನ್ನು ಸಂಕೋಚಿಸಿ ಅನಂತವನ್ನೈದಲಾರೆವು. ಕೆಲವೇಳೆ ತೀವ್ರತೆ ಅಧಿಕವಾಗಬಹುದು. ಆದರೆ ವಿಸ್ತಾರ ಕುಂಠಿತವಾಗುತ್ತದೆ ಮತ್ತು ಅಂಧಾಭಿಮಾನಿಗಳು ಹಾಗೂ ಮತಾಂಧರು ಸ್ವಂತ ಹಮ್ಮುಬಿಮ್ಮುಗಳ ದಾಸರಾಗುತ್ತಾರೆ. ಬೇರೇನೂ ಹಾದಿಯಿಲ್ಲವೇ? ಇದೆಪ್ರೇಮ. ಇದೆಂದೂ ವಿಕೃತವಾಗದು. ಇದು ಶಾಂತ, ಮೃದುಕಾರಿ ಮತ್ತು ಸದಾ ವಿಸ್ತರಣಶೀಲ ಇದರ ಅಧಿವ್ಯಾಪನೆಗೆ ವಿಶ್ವವೇ ಬಲು ಚಿಕ್ಕದು.

ನಾವಿದನ್ನು ವ್ಯಾಖ್ಯಾನಿಸಲಾರೆವು. ಇದರ ಅಭಿವರ್ಧನೆಯನ್ನು ಗಮನಿಸಿ ಮಾತ್ರ ಇದನ್ನು ಗುರುತಿಸಿ ಇದರ ಪರಿವೇಷವನ್ನು ವಿವರಿಸಬಲ್ಲೆವು.

ಪ್ರಥಮತಃ ಬಾಹ್ಯ ಪ್ರಪಂಚಕ್ಕೆ ಗುರುತ್ವಾಕರ್ಷಣೆಯ ತೆರದಲ್ಲಿ ಪ್ರೇಮ ಸಂಯೋಜಕ ಪ್ರವೃತ್ತಿಯದು ರೂಪ, ವಿಧಿ, ನಿಯಮಗಳು ಇದರ ಮೃತ್ಯು: ರೂಪ, ವಿಧಾನ ವಿಧಿ ನಿಷೇಧಗಳ ಮೂಲಕ ಆರಾಧನೆ ಆಗುವಲ್ಲಿ ಪ್ರೇಮವಿರದು. ಪ್ರೇಮ ಸೂಸಿದಾಗ ವಿಧಾನ ಮಡಿಯುತ್ತದೆ. ಮಾನವಜೀವ ತನ್ನ ಪೂರಕವನ್ನೂ ಸ್ಥಿರ ಸಮತೋಲವನ್ನೂ ತನ್ನ ಅನಂತ ವಿಶ್ರಾಂತಿಯನ್ನೂ ಅನ್ವೇಷಿಸಲು ಪ್ರಯುಕ್ತಿಸುವ ಹೋರಾಟವೇ ಪ್ರೇಮ.

ಗಂಧವನ್ನು ತೇದರೂ ಹೆರೆದರೂ ಕೊಯ್ದರೂ ಸುಟ್ಟರೂ ಅಥವಾ ಹಾಗೆಯೇ ಇಟ್ಟರೂ ಅದರ ಗುಣ ಒಂದೇಪರಿಮಳ ಬೀರುವುದು. ಅಂದರೆ ವೈಚಾರಿಕತೆ, ವೈಜ್ಞಾನಿಕತೆ, ನೈತಿಕತೆ ಮತ್ತು ಪ್ರೇಮ ಇವುಗಳ ಸಂಯುಕ್ತ ಫಲ ಮಾನವೀಯತೆ ಎಂಬ ಶ್ರೀಗಂಧ. ಸ್ವಾಮಿ ವಿವೇಕಾನಂದರ ಕೃತಿಗಳಲ್ಲಿ ಯಾವ ಪುಟವನ್ನು ತೆರೆದು ನೋಡಿದರೂ ಅಲ್ಲಿ ತೊಟ್ಟಿಕ್ಕುವ ಒರತೆ ಮಾನವೀಯತೆ. ಪರೀಕ್ಷಾರ್ಥ ನಾನು ಯಾದೃಚ್ಛಿಕವಾಗಿ ಸಂಪುಟ ೨ರ ಪುಟ ಮಗುಚಿದೆ: ನೈಜ ಹಾಗೂ ತೋರಿಕೆಯ ಮಾನವ ಲೇಖನ ಕಂಡಿತು. ಅದರಲ್ಲಿರುವ ಈ ವಾಕ್ಯಗಳನ್ನು ಗಮನಿಸಿ: “ಈ ಪ್ರಪಂಚದಲ್ಲಿ ಬಾಳುತ್ತಿರುವ ಸ್ತ್ರೀ ಪುರುಷರ ಪೈಕಿ ದಶಲಕ್ಷನೆಯ ಒಂದು ಅಂಶ (೧/೧೦,೦೦,೦೦೦) ಸುಮ್ಮನೆ ಕುಳಿತು ಕ್ಷಣಕಾಲ, ‘ನೀವೆಲ್ಲರೂ ದೇವರೇ! ಮನುಷ್ಯರೇ, ಓ ಪ್ರಾಣಿಗಳೇ ಮತ್ತು ಜೀವಿಗಳೇ! ನೀವೆಲ್ಲರೂ ಜೀವಂತ ಏಕ ಚಿಚ್ಛಕ್ತಿಯ ಪ್ರಕಟಿತ ರೂಪಗಳು’ ಎಂದು ಸಾರಿದ್ದಾದರೆ ಸಮಸ್ತ ಪ್ರಪಂಚವೂ ಅರ್ಧಗಂಟೆಯಲ್ಲೇ ಪರಿವರ್ತನೆಗೊಂಡುಬಿಡುವುದು” ಸ್ವಾಮೀಜಿಯವರ ಮಾನವೀಯತೆಗೆ ಬೇರೆ ನಿದರ್ಶನ ಬೇಕೇ?

ಇದೇ ಕೇಂದ್ರೀಯ ಪರಿಕಲ್ಪನೆ ವಿಜ್ಞಾನದ ಪರಿಭಾಷೆಯಲ್ಲಿ: “ಈ ಪ್ರಪಂಚದಲ್ಲಿ ಬಾಳುತ್ತಿರುವ ಸ್ತ್ರೀಪುರುಷರ ಪೈಕಿ ದಶಲಕ್ಷನೆಯ ಒಂದು ಭಾಗ ನಿರ್ಯೋಚನೆಯಿಂದ ಕುಳಿತು, ಹಲವು ನಿಮಿಷಗಳ ಕಾಲ, ‘ನೀವೆಲ್ಲರೂ ಶಕ್ತಿ ಸ್ವರೂಪರು, ಓ ಮನುಜರೇ ಪ್ರಾಣಿಗಳೇ ಎಲ್ಲ ಜೀವಿಗಳೇ! ನೀವೆಲ್ಲರೂ ಅದೇ ಜೀವಂತ ವಿಶ್ವಶಕ್ತಿಯ ವಿಭಿನ್ನರೂಪಿಗಳು’ ಎಂದುದಾದರೆ ಸಮಸ್ತ ಪ್ರಪಂಚವೂ ಕೇವಲ ಅರ್ಧ ಗಂಟೆಯಲ್ಲಿಯೇ ಬದಲಾಗಿ ಬಿಡಬಲ್ಲದು.”

ವಿಜ್ಞಾನದ ಪುರೋಗಮನದಲ್ಲಿ ಇಂಥ ವ್ಯತ್ಯಗಳು ಸದಾ ಸಂಭವಿಸುತ್ತಲೇ ಇರುವುವು: ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ‘ನವಗ್ರಹಗಳು’ ಸ್ಥಿರ ಭೂಮಿಯ ಸುತ್ತ ನಿರಂತರ ಪರಿಭ್ರಮಣೆಯಲ್ಲಿವೆ ಎಂಬ ವಿಶ್ವ ಚಿತ್ರವನ್ನು ವಿಜ್ಞಾನ ಒಂದು ಕಾಲದಲ್ಲಿ ಬಿತ್ತರಿಸಿತ್ತು. ಆದರೆ ಇಂದು? ವಿಜ್ಞಾನದ ಸೀಮಾಪುರುಷರ ತಪಸ್ಸಿನ ಫಲವಾಗಿ ನಮಗೆ ತಿಳಿದಿದೆ: ಈ ಗೋಚರ ಚಿತ್ರದ ತಳದಲ್ಲಿರುವ ಶಾಶ್ವತ ಚಿತ್ರ ಬೇರೆಯೇ ಎಂದು.

ಸಮಾರೋಪವಾಗಿ ಒಂದು ಮಾತು. ಆಧುನಿಕ ಭೌತವಿಜ್ಞಾನದ ತಾರ್ಕಿಕ ಚಿಂತನೆಯ ಪ್ರಕಾರ ಸಮಸ್ತ ಭೌತವಿಶ್ವವೂ ನಾಲ್ಕು ವಿವಿಕ್ತ ಬಲಗಳ “ಗೊಂಬೆಯಾಟವಯ್ಯಾ!” ಅವು ಗುರುತ್ವಾಕರ್ಷಣಬಲ, ವಿದ್ಯುತ್ಕಾಂತಬಲ, ದುರ್ಬಲ ಬೈಜಿಕಬಲ ಮತ್ತು ಪ್ರಬಲ ಬೈಜಿಕಬಲ. ಮೊದಲನೆಯದು ವಿಶ್ವದ ಬೃಹದಸ್ತಿತ್ವವನ್ನು ನಿಯಂತ್ರಿಸುವ ಮತ್ತು ಜಗತ್ತುಗಳ ಹುಟ್ಟು ಸಾವುಗಳಿಗೆ ಕಾರಣವಾಗುವ “ಪ್ರೇಮ” ಬಲ. ಮೂರು ಮತ್ತು ನಾಲ್ಕನೆಯವು ಪರಮಾಣುಗಳ ಸ್ಥಿರತೆ ಹಾಗೂ ವಿಘಟನೆಗಳಿಗೆ ಕಾರಣವಾಗುವ “ಬಂಧಕ – ಛೇದಕ” ಬಲಗಳು. ಎರಡನೆಯದು ವಿಶ್ವ ಸರ್ವತ್ರ ಮಾಹಿತಿ ಒಯ್ಯುವ “ಪ್ರಸಾರ” ಬಲ. ಇವೆಲ್ಲವೂ ಮೂಲ ಏಕ ಬಲವೊಂದರ ವಿಭಿನ್ನ ಅಭಿವ್ಯಕ್ತಿಗಳಾಗಿರಬೇಕು. ಆ “ಎಲ್ಲ ಬಲಗಳಿಗೆ ತಾ ಮೂಲದ ಬಲ ಸಕಲ ತಪೋತರು ಪರಮಫಲ”ವನ್ನು (ಕುವೆಂಪು) ತಾವು ಅನ್ವೇಷಿಸಬೇಕೆಂಬುದು ಮುಂಚೂಣಿ ವಿಜ್ಞಾನಿಗಳ ಆಶಯ. ಈ ದಿಶೆಯಲ್ಲಿ ವಿದ್ಯುತ್ಕಾಂತ ಬಲ ಹಾಗೂ ದುರ್ಬಲ ಬೈಜಿಕಬಲಗಳ ಸೈದ್ಧಾಂತಿಕ ಸಂಯೋಜನೆ ಮತ್ತು ಪ್ರಾಯೋಗಿಕ ಸ್ಥರೀಕರಣ ಕೈಗೂಡಿವೆ: ಆ ಸಂಯೋಜಿತ ಬಲಕ್ಕೆ ಎಲೆಕ್ಟ್ರೊವೀಕ್‌(ವಿದ್ಯುದ್ದುರ್ಬಲ) ಬಲವೆಂದು ಹೆಸರು. ಅಂದರೆ ಸದ್ಯ (೨೦೦೪) ವಿಶ್ವದ ಮೂಲ ಘಟಕಗಳು – ಮೂರು ವಿವಿಕ್ತ ಬಲಗಳೆಂದಾಯಿತು. ಇವನ್ನು ಏಕೀಕರಿಸಬಲ್ಲ ವಿಜ್ಞಾನಿ – ದ್ರಷ್ಟಾರನ ಆಗಮನಕ್ಕೆ ವೇದಿಕೆ ಸಿದ್ಧವಾಗಿದೆ. ಪಥಿಕ ಎಲ್ಲಿರುವನೋ ಎಂದು ಬರುವನೋ ಯಾವ ನೂತನ ದಿಶೆ ಆಯುವನೋ ಭವಿಷ್ಯವೇ ನಿರ್ಧರಿಸಬೇಕು.

ಈ ಸಂಗತಿಯನ್ನು ಇಲ್ಲಿ ಪ್ರಸ್ತಾವಿಸಿರುವುದರ ಉದ್ದೇಶವಿದು. ತತ್ತ್ವಶಾಸ್ತ್ರವನ್ನು ವಿಜ್ಞಾನಗಳ ಮಾತಾಮಹಿ ಎಂದೂ ಖಗೋಳವಿಜ್ಞಾನವನ್ನು ಮಾತೆ ಎಂದೂ ಗಣಿತವನ್ನು ರಾಜ್ಞಿ ಎಂದೂ ಹೇಳುವುದುಂಟು. ಈ ರೂಪಕದ ಅರ್ಥ: ತತ್ತ್ವಶಾಸ್ತ್ರ ಗುರಿ ತೋರಿಸುತ್ತದೆ. ವಿಜ್ಞಾನ ಆ ಗುರಿಯತ್ತ ನಡೆಯಲು ಹಾದಿ ಕಟ್ಟುತ್ತದೆ. ಗಣಿತವಾದರೋ ಪಥದ ದೃಢತೆಯನ್ನು ಸ್ಥಿರೀಕರಿಸುತ್ತದೆ. “ಪಥಿಕಾ! ಪಥ ದತ್ತವಾಗಿಲ್ಲ ನೀ ನಡೆದು ಪಥವನ್ನು ನಿರ್ಮಿಸಬೇಕು” ಎಂಬ ಸೂಕ್ತಿ ಇದೇ ಭಾವವನ್ನು ಸೂಚಿಸುತ್ತದೆ. ಸ್ವಾಮಿ ವಿವೇಕಾನಂದರು ತಮ್ಮ ಕೃತಿಯಿಂದ ಗುರಿ ಅಂದರೆ ಏಕೀಕೃತ ಲಕ್ಷ್ಯ ತೋರಿಸಿದ್ದಾರೆ. ವಿಜ್ಞಾನಿ ಅದರತ್ತ ನಡೆದು ದಾರಿ ರೂಪಿಸುತ್ತಿದ್ದಾನೆ. ಧರ್ಮ ಈ ಪಥಗಮನವನ್ನು ನಿಯಂತ್ರಿಸುತ್ತದೆ.

ತರುಣಿ ದರ್ಶನಕಿಂತ ಕಿರಣಾನುಭವ ಸುಲಭ
ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ
ಪರಮ ತತ್ತ್ವವ ಕಂಡ ಗುರುವನರಸುವುದೆಲ್ಲಿ?
ದೊರೆ ತಂದು ನೀಂ ಧನ್ಯ ಮಂಕುತಿಮ್ಮ ||

ಚಿಂತನೆಯ ಕಡಲಿನೊಳಗುಲ್ಲಾಸ ನಾವೆಯಲಿ
ಸಂತತಮಹಾಯಾನ ಹೈದಿರುವ ಧೀಶಕ್ತಿ!
ಅಂತವಿಲ್ಲದ ಸಂತಸವ ಧಾರೆಯೆರೆವ ಪ್ರ
ಶಾಂತಮತಿ ನಿನಗಿದೋ ಚಿರನಮನ ಅತ್ರಿಸೂನು ||

ವಿಜ್ಞಾನ ಮೂಲವನು ಕಾಣ್ತತ್ತ್ವಶಾಸ್ತ್ರದಲಿ
ತತ್ತ್ವಶಾಸ್ತ್ರದ ಸೆಲೆಯನರಸು ವಿಜ್ಞಾನದಲಿ
ಸೃಷ್ಟಿವೈಚಿತ್ರ್ಯವೀ ದ್ವಂದ್ವ, ಪರಿಕಿಪೊಡೆ ಅಂ
ತರ್ಬೋಧೆಗಿದು ಗೋಚರಿಪುದು ತಿಳಿ ಅತ್ತಿಸೂನು ||
(೧೯೯೯).