ತಾಯಿ ಕಾಣದ ಮಗು

ನಮ್ಮ ಕತೆ ೧೯ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಆರಂಭವಾಗುತ್ತದೆ. ಅಂದು ಗುಂಡ್ಲುಪೇಟೆ ತೆರೆಕಣಾಂಬಿ ಪ್ರದೇಶದಲ್ಲಿ ನಾರಣೈಂಗಾರ್‌ಎಂಬ ಯುವಕರೊಬ್ಬರಿದ್ದರು. ಇವರ ಹಿರಿಯರಿಗೆ ಹೇಳಿಕೊಳ್ಳುವ ಆಸ್ತಿ ಆಗಲಿ ವೃತ್ತಿ ಆಗಲಿ ಇರಲಿಲ್ಲ. ಹೀಗಾಗಿ ಇವರದು ಬಡತನದ ಪರಿಸರದಲ್ಲಿ ಬೆಳೆದರು. ವಂಶಪಾರಂಪರ್ಯವಾಗಿ ಬಂದಿದ್ದ ದೈವಭಕ್ತಿ ಮತ್ತು ಕರ್ತವ್ಯಶೃದ್ಧೆ ಮಾತ್ರ ಇವರ ಬಂಡವಾಳ. ನಾರಣೈಂಗಾರ್ಯರ ಬದುಕಿನ ಬಳ್ಳಿ ಹೊಸ ಬೆಳಕನ್ನು ಅರಸಿ ಅದರ ಕಡೆಗೆ ಹಬ್ಬಬೇಕೆಂದು ತವಕಿಸುತ್ತಿದ್ದುದು ಸಹಜವೇ. ಅದೇ ವೇಳೆ ತಲೆದೋರಿದ ನಿಸರ್ಗದ ಮುನಿಸು ಊರಿನಿಂದ ಇವರ ನಿರ್ಗಮನವನ್ನು ತ್ವರಿತಗೊಳಿಸಿತು. ಆ ವಲಯದಲ್ಲೆಲ್ಲ ಭೀಕರ ಕ್ಷಾಮ. ಹುಟ್ಟುನಾಡನ್ನು ಬಿಟ್ಟ ನಾರಣೈಂಗಾರ್ಯರು ಹಲವಾರು ತೀರ್ಥಕ್ಷೇತ್ರಗಳಲ್ಲಿ ಅಲೆದರು. ಶಿಲ್ಪಕಲೆಯ ತವರು ಮನೆಯೂ ಚೆನ್ನಕೇಶವದೇವರ ಪವಿತ್ರ ಸ್ಥಾನವೂ ಆದ ಬೇಲೂರಿನ ಆಯಸ್ಕಾಂತತ್ವ ಆಸ್ತಿಕ ನಾರಣೈಂಗಾರ್ಯರಿಗೆ ಬಲುಪ್ರಿಯವೆನಿಸಿತು. ಇವರು ಅಲ್ಲೇ ನೆಲಸಿದರು. ಕೃಷಿ ಮತ್ತು ಪೌರೋಹಿತ್ಯಗಳಿಂದ ಜೀವನರಥವನ್ನು ನಡೆಸತೊಡಗಿದರು. ಯುಕ್ತ ಕಾಲದಲ್ಲಿ ಯೋಗ್ಯ ಕನ್ಯೆಯನ್ನು ಅರಸಿ ಮದುವೆ ಆಗಿ ಗೃಹಸ್ಥರೂ ಆದರು. ಕೈಯಲ್ಲಿ ನಾಲ್ಕು ಕಾಸು ಕೂಡಿಬಂದುದರಿಂದ ಕೃಷಿಯ ಸ್ವತಂತ್ರ ವೃತ್ತಿಯನ್ನು ಅವಲಂಬಿಸಬೇಕೆಂದು ಬಯಸಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕನ್ನೇಹಳ್ಳಿಯಲ್ಲಿ ಸುಮಾರು ೪೦ ಎಕ್ರೆ ಕಾಫಿ ತೋಟ ಕೊಂಡುಕೊಂಡು ಅಲ್ಲೇ ತಮ್ಮ ಪತ್ನಿ ಸಮೇತ ಬಿಡಾರ ಹೂಡಿದರು.

ನಾರಣೈಂಗಾರ್‌ದಂಪತಿಗಳ ಮೊದಲ ಕೂಸೇ ಮುಂದೆ ಮಹಾಗಣಿತ ವಿದ್ವಾಂಸ. ಪ್ರಾಧ್ಯಾಪಕೋತ್ತಮ, ಆಸ್ತಿಕ ಶಿರೋಮಣಿ, ‘ಕನ್ನಡ ವಾಲ್ಮೀಕಿ’ ಎಂದು ಖ್ಯಾತನಾಮರಾದ ಡಾಕ್ಟರ್‌ಸಿ. ಎನ್‌. ಶ್ರೀನಿವಾಸ ಅಯ್ಯಂಗಾರ್ಯರು (೧೯೦೧ – ೭೨). ಬಾಲಕ ಶ್ರೀನಿವಾಸನ ಜನನವಾದದ್ದು ೧೯೦೧ ಫೆಬ್ರವರಿ ೨೧ ರಂದು (ಶಾರ್ವರಿ ಸಂವತ್ಸರ, ಫಾಲ್ಗುಣ ಶುದ್ಧ ತದಿಗೆ). ಕನ್ನೇಹಳ್ಳಿಯ ಹಚ್ಚಹಸುರಿನ ಹುಚ್ಚು ಕಡಲಿನ ನಡುವೆ ಹುಟ್ಟಿದ ಈ ಅಣುಗ ಸ್ವಪ್ರಯತ್ನದಿಂದಲೂ ನಿಷ್ಠೆಯಿಂದಲೂ ಎಲ್ಲಕ್ಕೂ ಮಿಗಿಲಾಗಿ (ಅವರೇ ಬೇರೆ ಒಂದು ಸಂದರ್ಭದಲ್ಲಿ ಹೇಳಿರುವಂತೆ) ಭಗವತ್ಕೃಪೆಯಿಂದಲೂ ಸಾಧನೆ ಸಿದ್ಧಿಗಳ ನಿಚ್ಚಣಿಕೆಯ ಪಾವಟಿಗೆಗಳನ್ನು ಏರುತ್ತ ಸಾಗಿ ಮರೆಯಾದ ರಸಯಾತ್ರೆ ಒಂದು ಮಹಾಕಾವ್ಯ.

ಶ್ರೀನಿವಾಸ ಅಯ್ಯಂಗಾರ್ಯರ ತಾಯಿ ಇನ್ನಿಬ್ಬರು ಮಕ್ಕಳನ್ನು ಹಡೆದು ಕೊನೆಯ ಹೆರಿಗೆಯಲ್ಲಿ ತೀರಿಕೊಂಡರು. ಇತ್ತ ಕೊನೆಯ ಕೂಸಾದರೂ (ಗಂಡು) ಹೆಚ್ಚು ಕಾಲ ಉಳಿಯಲಿಲ್ಲ. ನಾರಣೈಂಗಾರ್ಯರ ತಲೆಯ ಮೇಲೆ ಬಾನೇ ಕಳಚಿ ಬಿದ್ದಂತಾಯಿತು. ಮಲೆನಾಡಿನ ಪ್ರತಿಕೂಲ ಹವೆಯೂ ಮನೆಯೊಳಗಿನ ಕ್ಲೇಶಪರಂಪರೆಯೂ ಒಟ್ಟಾಗಿ ಇವರ ಆರೋಗ್ಯವನ್ನು ಹದಗೆಡಿಸಿದುವು. ಮಕ್ಕಳ ಲಾಲನೆ ಪಾಲನೆಗೋಸ್ಕರವಾಗಿ ಆದರೂ ತಾನು ಬದುಕಿರಬೇಕಾದದ್ದು ಅತ್ಯಗತ್ಯ ಎಂದು ಇವರಿಗೆ ಸ್ಪಷ್ಟವಾಯಿತು. ಹೀಗಾಗಿ ಕನ್ನೇಹಳ್ಳಿಯ ತಮ್ಮ ಆಸ್ತಿಯನ್ನು ದೊರೆತ ಅಲ್ಪಬೆಲೆಗೆ ಮಾರಿ, ಎರಡು ಹಸುಗೂಸುಗಳ ಸಮೇತ ಚಿಕ್ಕಮಗಳೂರಿಗೆ ನಿರ್ಗಮಿಸಿದರು. ಅಲ್ಲೊಂದು ಮನೆ ಮಾಡಿ, ಈ ಮಕ್ಕಳಿಗೆ ತಂದೆಯೂ ತಾಯಿಯೂ ತಾನೇ ಆಗಿ, ಅವರು ಸಬ್ಬಲ್ಲು ಮುರಿದ ಬಂಡಿಯನ್ನು ಮತ್ತೆ ಹಾದಿಗೆ ಹೂಡಿದರು. ಮುಂದೆ ಕೆಲವೇ ದಿಸಗಳಲ್ಲಿ ಇನ್ನೊಂದು ಮಗು (ಹೆಣ್ಣು) ಮಾರಿ ಬೇನೆಗೆ ಬಲಿ ಆಯಿತು. ಈಗ ಮನೆಯಲ್ಲಿ ಉಳಿದವರು ಇಬ್ಬರೇ ಕಾಯಿಲೆ ಸಂಕಟಗಳಿಂದ ನರಳುತ್ತಿದ್ದ ತಂದೆ, ಇನ್ನೂ ಕಣ್ಣು ತೆರೆಯುತ್ತಿದ್ದ ಅಣುಗ ಶ್ರೀನಿವಾಸ.

ತಾಯಿ ಎಂಬ ವಸ್ತುವನ್ನು ಈ ಬಾಲಕ ತಿಳಿದವನಲ್ಲ. ತಂದೆಯಾದರೋ ತನ್ನ ಜಂಜಡಗಳ ನಡುವೆ ಅಡುಗೆ ಮಾಡಿ ಬಡಿಸಿದ್ದೇ ಈ ಮಗುವಿಗೆ ಪಂಚಭಕ್ಷ್ಯ ಪರಮಾನ್ನ. ಪ್ರತಿಭೆಯ ತಿರಿ ಮುರುಟಲು ಇದಕ್ಕಿಂತ ಹೆಚ್ಚಿನ ಹೊಡೆತ ಇನ್ನೇನು ಬೇಕು? ಆದರೆ ನಾರಣೈಂಗಾರ್ಯರು ತಮ್ಮ ಕಂದನಿಗೆ ಯಾವುದಕ್ಕೂ ಕೊರತೆ ಮಾಡಲಿಲ್ಲ. ಕಡುಬಡವ ತನ್ನ ನಿಧಿಯನ್ನು ಕಾಪಾಡುವ ಜತನದಿಂದ ತಮ್ಮ ವಂಶದ ಈ ಏಕಮಾತ್ರ ಕಂದನನ್ನು ಇವರು ಪೋಷಿಸತೊಡಗಿದರು.

ಶಾಲೆಯಲ್ಲಿ ಅರಳಿದ ಮಗಳು

ಚಿಕ್ಕಮಗಳೂರು (ಸಿ) ನಾರಣೈಂಗಾರ್‌(ಎನ್‌) ಶ್ರೀನಿವಾಸ ಅಯ್ಯಂಗಾರ್‌(ಎಸ್‌) ಇದು ಅವರ ಪೂರ್ಣ ಹೆಸರು; ಸಂಕ್ಷೇಪವಾಗಿ ಸಿಎನ್‌ಎಸ್‌.

ಪ್ರಾಪ್ತ ವಯಸ್ಸಿನಲ್ಲಿ ತಂದೆ ಇವರನ್ನು ಶಾಲೆಯ ಮೆಟ್ಟಿಲು ಏರಿಸಿದರು. ಮನೆಯಲ್ಲಿ ವೈದಿಕ ಸಂಪ್ರದಾಯ, ಶಾಲೆಯಲ್ಲಿ ಸಾಂಪ್ರದಾಯಿಕ ವಿದ್ಯಾಭ್ಯಾಸ ಹೀಗೆ ಸಿಎನ್‌ಎಸ್‌ಅವರ ಬೆಳವಣಿಗೆ ಮುಂದುವರಿಯಿತು. ಇವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ, ಇತರ ಮಕ್ಕಳಂತೆಯೇ ಲೋವರ್‌ಸೆಕೆಂಡರಿ ತರಗತಿಗೆ (ಅಂದರೆ ಇಂದಿನ ಏಳನೆಯ ದರ್ಜೆ) ಉತ್ತೀರ್ಣರಾಗಿ ಏರಿದರು.

ಆಗಿನ ಪದ್ಧತಿಯಂತೆ ಈ ತರಗತಿಯಲ್ಲಿ ವಿದ್ಯಾರ್ಥಿಗಳು ಒಂದೋ ಸಂಸ್ಕೃತವನ್ನು ಇಲ್ಲವೇ ಆರೋಗ್ಯಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಕಲಿಯಬೇಕಾಗಿತ್ತು. ನಾರೆಣೈಂಗಾರ್ಯರು ತಮ್ಮ ಮಗನಿಗೆ ಸಂಸ್ಕೃತವನ್ನು ಆಯ್ದುಕೊಳ್ಳಲು ಸಲಹೆ ನೀಡಿದರು. ಬಾಲಕನಿಗೆ ತಂದೆ ಹೇಳಿದ್ದೇ ವೇದವಾಕ್ಯ. ಆದರೆ ೧೯೧೨ರ ದಿನಗಳಲ್ಲಿ ಚಿಕ್ಕಮಗಳೂರಿನ ಲೋವರ್‌ಸೆಕೆಂಡರಿ ತರಗತಿಯಲ್ಲಿ ಸಂಸ್ಕೃತ ಭಾಷೆಗೆ ಏನು ಪ್ರೋತ್ಸಾಹವಿದ್ದಿರಬಹುದು? ಮುರುಕು ಕೋಣೆ, ಮುದುಕ ಮಷ್ಟ (ಮಾಷ್ಟ್ರು ಪದದ ಹೀನಾಯ ರೂಪ), ಹರಕು ಪುಸ್ತಕ! ತಿರುಕ ವಿದ್ಯಾರ್ಥಿ! ಈ ಪುಸ್ತಕವಾದರೂ ರಾಜಧಾನಿಯಿಂದ ಚಿಕ್ಕಮಗಳೂರಿಗೆ ಐತರಲು ಅವೆಷ್ಟೊ ತಿಂಗಳುಗಳ ವಿಳಂಬ. ಇನ್ನು ತರಗತಿಯಲ್ಲಿ ಸಂಸ್ಕೃತವನ್ನು ಆಯ್ದ ವಿದ್ಯಾರ್ಥಿಗಳು ಎಷ್ಟು ಮಂದಿ? ಒಬ್ಬನೇ ಒಬ್ಬ ನಮ್ಮ ಶ್ರೀನಿವಾಸ ಮಾತ್ರ.

ಸಂಸ್ಕೃತ ಪಂಡಿತರು ತಡವಾಗಿ ತರಗತಿಗೆ ಬಂದು, ಸಾಕಷ್ಟು ಕಾಲ ಕುರ್ಚಿಶಾಯಿಗಳಾಗಿ, ಗೊರಕೆಹೊಡೆದು ತಿಳಿದೆದ್ದ ಬಳಿಕ ಒಂದಿಷ್ಟು ವ್ಯಾಕರಣ ಮತ್ತು ಭಾಷಾಂತರವನ್ನು ಗೋಗರೆಯುತ್ತಿದ್ದರು. ಈ ರೀತಿಯಲ್ಲಿ ಮೊದಲ ಮೂರು ತಿಂಗಳುಗಳೂ ಸಂದುಹೋದುವು. ಆ ವೇಳೆಗೆ ಚಿಕ್ಕಮಗಳೂರಿಗೆ ಬೆಂಗಳೂರಿನಿಂದ ವರ್ಗವಾಗಿ ಬಂದ ಪೊಲೀಸ್‌ಅಧಿಕಾರಿಯೊಬ್ಬರ ಮಗ ಇದೇ ತರಗತಿಗೆ ಪ್ರವೇಶ ಪಡೆದ. ಈಗ ಶ್ರೀನಿವಾಸನಿಗೆ ಒಬ್ಬ ಸಹಪಾಠಿ ದೊರೆತಂತಾಯಿತು. ಈತ ಬೆಂಗಳೂರಿನಿಂದ ಬರುವಾಗಲೇ ತನ್ನೊಡನೆ ಆ ತರಗತಿಗೆ ಬೇಕಾದ ಪಠ್ಯಪುಸ್ತಕ ತಂದಿದ್ದ. ಈ ವಿದ್ಯಾರ್ಥಿಗಳು ಪಂಡಿರಿಗೆ ಇನ್ನು ಮುಂದಾದರೂ ಪಾಠ ಮಾಡಬೇಕೆಂದು ಮನವಿ ಮಾಡಿಕೊಂಡರು. ಪಠ್ಯಪುಸ್ತಕ ದೊರೆತದ್ದು ಮುಖ್ಯ ಕಾರಣವೋ ಪೊಲೀಸ್‌ಅಧಿಕಾರಿಯ ಮಗ ಒಬ್ಬ ವಿದ್ಯಾರ್ಥಿ ಎಂಬುದು ಮುಖ್ಯ ಕಾರಣವೋ ಅಂತೂ ಅಂದಿನಿಂದ ಸಂಸ್ಕೃತ ಸಾಹಿತ್ಯದ ಕ್ರಮಬದ್ಧ ಪಾಠಪ್ರವಚನ ಪ್ರಾರಂಭವಾಯಿತು.

ಇವರು ಕಲಿಯಬೇಕಾಗಿದ್ದ ಪದ್ಯ ವಿಭಾಗದಲ್ಲಿ ವಾಲ್ಮೀಕಿ ರಾಮಾಯಣದ ಸುಂದರಕಾಂಡದ ನಾಲ್ಕು ಸರ್ಗಗಳಿದ್ದುವು : ೫೦ ರಿಂದ ೫೩ರ ವರೆಗಿನವು. ಎಂಥವರಿಗೂ, ಅದೂ ವಿಶೇಷವಾಗಿ ಎಳೆಯ ಮನಸ್ಸುಗಳಿಗೆ ಬಲು ಸ್ವಾರಸ್ಯಕರವಾಗುವ ಸರ್ಗಗಳಿವು. ಲಂಕೆಯಲ್ಲಿ ಸೀತೆಯನ್ನು ಪತ್ತೆ ಹಚ್ಚಿದ ಬಳಿಕ ಚೈತ್ಯಾಲಯವನ್ನು ಹಾಳುಗೆಡವಿ ಅನೇಕ ರಾಕ್ಷಸರನ್ನು ಕೊಂದ ಹನುಮಂತನನ್ನು ಬ್ರಹ್ಮಸ್ತ್ರದಿಂದ ಕಟ್ಟು ಹಾಕಿ ಹಿಡಿದು ರಾವಣನ ಮುಂದೆ ನಿಲ್ಲಿಸಿದ್ದಾರೆ. ಅಲ್ಲಿ ನಡೆದ ರಾವಣ – ಹನುಮಂತರ ವಾಗ್ವಾದದಿಂದ ತೊಡಗಿ ಮುಂದೆ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಟ್ಟು ಮೆರವಣಿಗೆ ಮಾಡುವವರೆಗಿನ ಕತೆ ಈ ಸರ್ಗಗಳಲ್ಲಿದೆ. ಶ್ರೀನಿವಾಸನ ಹಚ್ಚಮನಸ್ಸಿನ ಮೇಲೆ ಇದರ ದೃಶ್ಯ ಶಾಶ್ವತ ಮತ್ತು ಹೊಚ್ಚ ಹೊಸ ಅಚ್ಚು ಒತ್ತಿತು; ಮತ್ತು ರಾಮಾಯಣದ ವಿಚಾರ ತೀವ್ರ ಆಸಕ್ತಿ ಮೊಳೆಯುವಂತೆ ಮಾಡಿತು. ಮನೆಯಲ್ಲಿ ಮೂಲರಾಮಾಯಣದ ಆರು ಕಾಂಡಗಳನ್ನೂ ಒಳಗೊಂಡಿದ್ದ ತೆಲುಗು ಲಿಪಿಯ ಗ್ರಂಥವಿತ್ತು. ಶ್ರೀನಿವಾಸ ಇದನ್ನೇ ಆತುರದಿಂದ ಸೆಳೆದುಕೊಂಡು ಪಠಿಸತೊಡಗಿದ. ಬಾಲಕಾಂಡದಿಂದಲೇ ಪ್ರಾರಂಭ.

ನಾರಣೈಂಗಾರ್ಯರು ಮಗನ ಈ ಗೀಳನ್ನು ಗಮನಿಸಿದರು. “ಅದೇನಪ್ಪಾ! ನೀನು ಅಷ್ಟೊಂದು ಏಕಾಗ್ರತೆಯಿಂದ ಓದುತ್ತಿರುವುದು?”

“ಶಾಲೆಯಲ್ಲಿ ಸುಮದರಕಾಂಡದ ಒಂದು ಭಾಗ ಬೋಧಿಸುತ್ತಿದ್ದಾರೆ. ಇಡೀ ರಾಮಾಯಣವನ್ನು ಮೊದಲಿನಿಂದ ಓದಬೇಕು ಎಂಬ ಆಸೆ ಹುಟ್ಟಿತು. ಹೀಗಾಗಿ ಬಾಲಕಾಂಡದಿಂದಲೇ ಆರಂಭಿಸಿದ್ದೇನೆ.”

“ಪವಿತ್ರವಾದ ರಾಮಾಯಣವನ್ನು ಹಾಗೆಲ್ಲ ಓದಬಾರದು, ಮಗೂ! ನಿನಗೆ ಅಕ್ಕರೆ ಇದ್ದರೆ ನಾಳೆ ಬೆಳಗ್ಗೆ ಆಹ್ನಿಕಾನಂತರ ಅದರ ಪಾರಾಯಣದ ವಿಧಿ ಹೇಳಿಕೊಡುತ್ತೇನೆ. ಅಲ್ಲಿಂದ ಮುಂದಕ್ಕೆ ನಿತ್ಯವೂ ಅದೇ ರೀತಿ ಓದುತ್ತ ಮುಂದುವರಿಸು.”

ಮರುಮುಂಜಾನೆ ಶಾಸ್ತ್ರೋಕ್ತವಾಗಿ ರಾಮಾಯಣಪಾರಾಯಣ ವಿಧಿಯನ್ನು ಮಗನಿಗೆ ಬೋಧಿಸಿದರು. ಈತನಾದರೂ ಅದೆಂಥ ಸತ್ಪಾತ್ರ! ಆದೇ ತನ್ನ ಜೀವನದ ಏಕೈಕ ಉದ್ದೇಶವೋ ಎಂಬಂತೆ ಅಂದಿನಿಂದ ಎಡೆಬೆಡದೆ ಪ್ರತಿ ದಿವಸವೂ ರಾಮಾಯಣವಾಚನ ಮಾಡುತ್ತ ಸಾಗಿದ. ಎರಡು ವಷ್ಷಗಳ ಕಾಲ ಈ ಅಧ್ಯಯನ ಮುಂದುವರಿಯಿತು. ಇವನಿಗಾಗ ವಯಸ್ಸು ಹದಿಮೂರು ವರ್ಷ.

ರಾಮಾಯಣ ಪಾರಾಯಣ ಒಂದೊಂದು ಸಲ ಮುಗಿದ ಬಳಿಕವೂ ಶ್ರೀರಾಮಪಟ್ಟಾಭಿಷೇಕವನ್ನು ವಿಧ್ಯುಕ್ತವಾಗಿ ನೆರವೇರಿಸುವುದು ಸಂಪ್ರದಾಯ. ಅದೂ ಈ ಬಾಲಕ ಮೊದಲ ಸಲ ಪಾರಾಯಣವನ್ನು ಮುಗಿಸಿದಾಗ ಅದರ ಸಂಭ್ರಮ ಕೇಳಬೇಕೇ? ಶ್ರೀರಾಮ ದೇವಸ್ಥಾನದಲ್ಲಿಯೇ ಈ ಮಹಾಕಾರ್ಯ ನಡೆಯಬೇಕೆಂದು ಹಿರಿಯರು ಅಪೇಕ್ಷಿಸಿದರು. ಚಿಕ್ಕಮಗಳೂರಿಗೆ ಎರಡು ಮೈಲು ದೂರದಲ್ಲಿರುವ ಹಿರಿಮಗಳೂರಿನ ಶ್ರೀರಾಮದೇವರ ಸನ್ನಿಧಿಯಲ್ಲಿ ಬಾಲಕ ಶ್ರೀನಿವಾಸನಿಂದ ಮೊದಲು ಶ್ರೀರಾಮ ಪಟ್ಟಾಭಿಷೇಕ ಸಮಾರಂಭ ಜರಗಿತು. ಅದಕ್ಕೆ ಆಹ್ವಾನಿತರಾಗಿ ಮೊದಲು ಪಾರಾಯಣಕಾರ ಇಡೀ ಇಕತೆಯನ್ನು ಹೇಳುವುದು ಕ್ರಮ. ಇದನ್ನೇ ಶ್ರೀನಿವಾಸ ಕೂಡ ಮಾಡಬೇಕೆಂದು ಅವರೆಲ್ಲರೂ ಅಪೇಕ್ಷಿಸಿದರು. ಹೀಗಾಗಿ ೧೩ ವರ್ಷ ವಯಸ್ಸಿನ ಈ ತರುಣ ಆಶುಭಾಷಣ ಮಾಡಿ ರಾಮಾಯಣದ ಕತೆ ಹೇಳಬೇಕಾಯಿತು.

ಶ್ರೀನಿವಾಸ ಅಯ್ಯಂಗಾರ್ಯರ ಜೀವನನದಿಗೆ ರಾಮಾಯಣದ ಕೊಡುಗೆಯೂ ರಾಮಾಯಣಕ್ಕೆ ಇವರ ಕೊಡುಗೆಯೂ ಮಹತ್ತರವಾದವು.

ರಾಮಾಯಣವಿವರನು ಕಡೆಯಿತೋ ಮುದದಿಂದ
ರಾಮಾಯಣವನಿವರೆ ಮರುಬರೆದರೋ ಒಗಟ
ರಾಮಚಂದ್ರನೆ ಪರಿಹರಿಸಬೇಕು ಪರಿಕಿಸಲು
ರಾಮಚೇತನವಿವರ ಪ್ರೇರಕತೆ ಅತ್ತಿಸೂನು ||

ಕಾಲೇಜಿನಲ್ಲಿ ಏರಿದ ಎತ್ತರ

ಸಿಎನ್‌ಎಸ್ ಓದಿನಲ್ಲಿ ಬಲು ಜಾಣರು. ಇವರು ಶಾಲೆಯ ಪ್ರತಿಯೊಂದು ಕೆಲವನ್ನೂ ಬಲುಶ್ರದ್ಧೆಯಿಂದ ನಿರ್ವಹಿಸುತ್ತದ್ದರು. ಪಾಠದ ಎಲ್ಲ ವಿಷಯಗಳೂ ಇವರಿಗೆ ಕುತೂಹಲಭರಿತವಾಗಿದ್ದುವು. ಆದರೆ ಇವರ ಹೆಚ್ಚಿನ ಒಲವು ಗಣಿತದೆಡೆಗಿತ್ತು. ಇಂಥ ಒಬ್ಬ ನಿಷ್ಠಾವಂತ ವಿದ್ಯಾರ್ಥಿ ಪ್ರತಿಯೊಂದು ತರಗತಿಯಲ್ಲಿಯೂ ಮುಂದಿನ ಸಾಲಿನಲ್ಲಿಯೇ ಇರುತ್ತಿದ್ದುದು ಆಶ್ಚರ್ಯವಿಲ್ಲ. ೧೯೧೬ರಲ್ಲಿ ಇವರು ಮೈಸೂರು ಸಂಸ್ಥಾನದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ, ಇಡೀ ಸಂಸ್ಥಾನಕ್ಕೆ ಮೂರನೆಯ ಸ್ಥಾನ ಪಡೆದು, ಉತ್ತೀರ್ಣರಾದರು. ಅಲ್ಲಿಗೆ ಚಿಕ್ಕಮಗಳೂರಿನ ವಿದ್ಯಾಭ್ಯಾಸ ಮುಗಿಯಿತು ಮುಂದೆ ಕಾಲೇಜು ವ್ಯಾಸಂಗ ಮಾಡಲು ಬೆಂಗಳೂರು ಅಥವಾ ಮೈಸೂರು ನಗರ ಆಶ್ರಯಸಬೇಕಾಗಿತ್ತು. ನಾರಣೈಂಗಾರ್ಯರು ತಮ್ಮ ಉಳಿದ ಚಿಕ್ಕಪುಟ್ಟ ಜಮೀನುಗಳನ್ನೆಲ್ಲ ಮಾರಿ ಮಗನೊಡನೆ ಬೆಂಗಳೂರು ಅಥವಾ ಮೈಸೂರು ನಗರ ಆಶ್ರಯಿಸಬೇಕಾಗಿತ್ತು. ನಾರಣೈಂಗಾರ್ಯರು ತಮ್ಮ ಉಳಿದ ಚಿಕ್ಕಪುಟ್ಟ ಜಮೀನುಗಳನ್ನೆಲ್ಲ ಮಾರಿ ಮಗನೊಡನೆ ಬೆಂಗಳೂರು ನಗರ ಸೇರಿದರು.

ಬೆಂಗಳೂರಿನ ಗವರ್ನ್‌ಮೆಂಟ್ ಕಾಲೇಜಿಯೇಟ್ ಹೈಸ್ಕೂಲಿನಲ್ಲಿ (ಮುಂದೆ ಇದನ್ನು ೧೯೭೫ರ ಅಂದಾಜಿಗೆ ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ ಮತ್ತು ಗವರ್ನ್‌ಮೆಂಟ್ ಸೈನ್ಸ್ ಕಾಲೇಜ್ ಎಂಬ ಎರಡು ಕಾಲೇಜುಗಳಾಗಿ ವಿಭಾಗಿಸಿದರು) ಎಂಟ್ರನ್ಸ್ ಕ್ಲಾಸನ್ನು ಸಿಎನ್‌ಎಸ್ ಪ್ರವೇಶಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಸ್ಥಾನ ಪಡೆದಿದ್ದುದರಿಂದ ಇವರಿಗೆ ರೂಪಾಯಿ ೧೮ರ ಮಾಸಿಕ ವಿದ್ಯಾರ್ಥಿ ವೇತನ ಸುಲಭವಾಗಿ ಲಭಿಸಿತು. ೧೯೧೭ರಲ್ಲಿ ಇವರು ಪ್ರವೇಶ ಪರೀಕ್ಷೆ ಮುಗಿಸಿ ಸ್ನಾತಕ ವ್ಯಾಸಂಗಕ್ಕಾಗಿ ಸೆಂಟ್ರಲ್ ಕಾಲೇಜನ್ನು ಪ್ರವೇಶಿಸಿದರು.

ಶ್ರೀನಿವಾಸ ಅಯ್ಯಂಗಾರ್ಯರನ್ನು ಇಲ್ಲಿಯತನಕವೂ ರಕ್ಷಿಸಿಕೊಂಡು ಬಂದಿದ್ದ ಅವರ ತಂದೆಯವರ ಭದ್ರ ಕವಚ ಈಗ ಸಡಿಲವಾಗತೊಡಗಿತ್ತು. ನಾರಣೈಂಗಾರ್ಯರ ಜೀವನದ ಘನೋದ್ದೇಶ ಪರಿಪೂರ್ಣವಾಗುವ ಘಟ್ಟ ಸನ್ನಿಹಿತವಾಗುತ್ತಿತ್ತು. ತಮ್ಮ ಮಗನ ಅಭಿವೃದ್ಧಿಯನ್ನು ಕಾಣುವುದರಲ್ಲೇ ಜೀವ ಹಿಡಿದುಕೊಂಡಿದ್ದ ಅವರು ೧೯೧೮ರ ಇನ್‌ಫ್ಲೂಯೆಂಜಾ ಪಿಡುಗಿಗೆ ಬಲಿಯಾಗಿ ಅಸುನೀಗಿದರು. ಹದಿನೇಳು ವಯಸ್ಸಿನ ಸಿಎನ್‌ಎಸ್ ತಬ್ಬಲಿ ಆದರು. ವಿಶಾಲ ಜಗತ್ತಿನಲ್ಲಿ ತನ್ನವರು ಎಂದು ಹೇಳಿಕೊಳ್ಳಬಹುದಾದಂಥ ಯಾರೂ ಇಲ್ಲದ ಅನಾಥರಾದರು. ಆದರೆ ಇವರು ಧೃತಿಗೆಡಲಿಲ್ಲ. “ಅನಂತರ ಶ್ರೀರಾಮನೇ ನಾನಾ ವ್ಯಕ್ತಿಗಳ ಮೂಲಕ ನನಗೆ ಸಹಾಯವನ್ನು ಒದಗಿಸುತ್ತ ನನ್ನ ಬೆನ್ನ ಹಿಂದೆ ನಿಂತು ಕಾಪಾಡಿದನು; ಈಗಲೂ ಹಾಗೆಯೇ ಕಾಪಾಡುತ್ತಿರುವನು” ಎಂದು ಇವರು ತಮ್ಮ ಜೀವನದ ಕೊನೆಯ ವರ್ಷದಲ್ಲಿ ಕೃತಾರ್ಥತೆಯ ಶಿಖರವನ್ನು ಏರಿದ್ದಾಗ ಹೇಳಿದ್ದುಂಟು.

೧೯೧೭ ರಿಂದ ೧೯೨೦ರ ತನಕ ಸೆಂಟ್ರಲ್‌ಕಾಲೇಜಿನಲ್ಲಿ ಇವರ ವ್ಯಾಸಂಗ ಸಾಗಿತು. ಆಗ ಸಿಎನ್‌ಎಸ್‌ಅವರಿಗೆ ಪ್ರೊ. ಎ. ಆರ್‌. ಕೃಷ್ಣಶಾಸ್ತ್ರಿಗಳು (೧೮೯೦ – ೧೯೬೮), ಮತ್ತು ಪ್ರೊ. ಬೆಳ್ಳಾವೆ ವೆಂಕಟನಾರಣಪ್ಪನವರು (೧೮೭೨ – ೧೯೪೩) ಗುರುಗಳಾಗಿದ್ದರೆನ್ನುವುದನ್ನು ಇಲ್ಲಿ ಸ್ಮರಿಸಬೇಕು. ಸ್ನಾತಕ ಪರೀಕ್ಷೆಯಲ್ಲಿ ಶ್ರೀನಿವಾಸ ಅಯ್ಯಂಗಾರ್ಯರಿಗೆ ಉತ್ತಮ ಅಂಕಗಳು ದೊರೆತದ್ದರಿಂದ ಅಂದಿನ ನಿಯಮಾನುಸಾರ ವಿಶ್ವವಿದ್ಯಾಲಯ ಇವರಿಗೆ ಬಿಎಸ್‌ಸಿ (ಅಂದಿನ ಆನರ್ಸ್‌) ಪ್ರಥಮ ದರ್ಜೆಯ ಪದವಿ ನೀಡಿತು. ಇವರ ಅಧ್ಯಯನದ ಪ್ರಧಾನ ವಿಷಯ ಗಣಿತ. ಇದನ್ನೇ ಇನ್ನಷ್ಟು ವಿಶಿಷ್ಟವಾಗಿ ವ್ಯಾಸಂಗಿಸಿ ಉನ್ನತ ಹಂತ ಏರಬೇಕೆಂಬುದು ಇವರ ಆಸೆ. ಆದರೆ ಅಂದು ಮೈಸೂರು ಸಂಸ್ಥಾನದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶವಿರಲಿಲ್ಲ. ನೆರೆಯ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಮೈಸೂರಿನ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುವುದು ಬಲು ಅಸಂಭವನೀಯವಾಗಿತ್ತು. ಹೀಗಾಗಿ ಸಿಎನ್‌ಎಸ್‌ದೂರದ (ಅಂದಿಗಂತಳೂ ಬಲು ದೂರದ) ಕಲ್ಕತ್ತ ನಗರಕ್ಕೆ ಎಂಎಸ್‌ಸಿ ವ್ಯಾಸಂಗ ಮಾಡಲು ತೆರಳಿದರು (೧೯೨೦). ಈ ಪ್ರತಿಭಾನ್ವಿತ ವಿದ್ಯಾರ್ಥಿಗೆ ಮೈಸೂರು ಸರ್ಕಾರ ರೂಪಾಯಿ ೫೦ರ ಮಾಸಿಕ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದರಿಂದ ಕಲ್ಕತ್ತ ನಗರದ ವಾಸ್ತವ್ಯ ತಕ್ಕಮಟ್ಟಿನ ನೆಮ್ಮದಿ ಒದಗಿಸಿತ್ತು. ಅಂದು ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು ಸುಪ್ರಸಿದ್ಧ ವಿದ್ಯಾಕಾರಣಿ ಆಶುತೋಷ ಮುಖರ್ಜಿ (೧೮೬೪ – ೧೯೨೪). ಅಧ್ಯಾಪಕ ವೃಂದದಲ್ಲಿಯೂ ವಿದ್ಯಾರ್ಥಿವೃಂದದಲ್ಲಿಯೂ ಸಾಕಷ್ಟು ಸಂಖ್ಯೆ ಮೇಧಾವಿಗಳು ಅಲ್ಲಿ ಆಗ ಒಂದುಗೂಡಿದ್ದುದರಿಂದ ಆ ವಿಶ್ವವಿದ್ಯಾಲಯವೊಂದು ಉನ್ನತ ಬೌದ್ಧಿಕ ಕೇಂದ್ರವೇ ಆಗಿತ್ತು. ಇಂಥ ಮಹಾ ವಿದ್ಯಾಕೇಂದ್ರದಲ್ಲಿ ತನಗೆ ಅಧ್ಯಯನಾವಕಾಶ ದೊರೆತದ್ದು ಪರಮ ಸೌಭಾಗ್ಯವೆಂದು ಸಿಎನ್‌ಎಸ್‌ಭಾವಿಸಿದ್ದರು. ನಿಜಸಂಗತಿ ಏನೆಂದರೆ ಆ ವಿಶ್ವವಿದ್ಯಾಲಯಕ್ಕೆ ಇಂಥ ಒಬ್ಬ ಸೃಷ್ಟಿಶೀಲ ಚಿಂತನಕಾರ ಲಭಿಸಿದ್ದು ಕೂಡ ಒಂದು ಸುಯೋಗವೇ ಆಗಿತ್ತು.

ಗಣಿತ ಶ್ರೀಮಂತ ಸಿಎನ್ಎಸ್

ಎಂಎಸ್‌ಸಿ ವ್ಯಾಸಂಗವೇನೋ ಚೆನ್ನಾಗಿ ಮುಂದುವರಿಯಿತು. ೧೯೨೨ರ ನವಂಬರಿನಲ್ಲಿ ಇನ್ನೇನು ಕೊನೆಯ ಪರೀಕ್ಷೆ ಬರೆಯಬೇಕು. ಆ ವೇಳೆಗೆ ಸಿಎನ್‌ಎಸ್‌ಅವರ ಆರೋಗ್ಯ ಹಠಾತ್ತನೆ ಕೆಟ್ಟು ಹೋಯಿತು. ಮೊದಲ ದಿನದ ಪರೀಕ್ಷೆ ಬರೆದು ಮರುಳುತ್ತಿದ್ದಂತೆ ಕಾಲಿನ ಸ್ನಾಯುಗಳ ಒಳಗೆ ತೀವ್ರ ವೇದನೆ ಪ್ರಾರಂಭವಾಯಿತು. ಮರುದಿನ ಈ ನೋವು ಹೆಚ್ಚಾಯಿತೇ ವಿನಾ ಕಡಿಮೆ ಆಗಲಿಲ್ಲ. ಸಮೀಪದ ಒಬ್ಬ ವೈದ್ಯರಿಂದ ಒಂದಿಷ್ಟು ಔಷಧಿ ಪಡೆದು ಸೇವಿಸಿ ಬಲು ಪ್ರಯಾಸದಿಂದ ಪರೀಕ್ಷಾ ಮಂದಿರಕ್ಕೆ ನಡೆದು ಅಂದಿನ ಪತ್ರಿಕೆ ಬರೆದು ಮರಳಿದರು. ಈಗ ನಡೆಯಲೂ ಆಗದಷ್ಟು ಉಲ್ಬಣಸ್ಥಿತಿಗೆ ವ್ಯಾಧಿ ಏರಿತ್ತು. ಕೈಬೆರಳುಗಳಿಂದ ಲೇಖನಿ ಹಿಡಿಯುವುದೂ ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಇನ್ನು ಪರೀಕ್ಷೆ ಬರೆಯುವುದು ಹೇಗೆ? ಇವರ ಅಂಗೋಪಾಂಗಗಳೆಲ್ಲವೂ ವಾತರೋಗಗ್ರಸ್ತವಾಗಿದ್ದುವು. ಪುಣ್ಯವಶಾತ್‌, ಅಂದು ಸಂಜೆ ಮೈಸೂರಿನ ವೈದ್ಯಕೀಯ ಮಿತ್ರರೊಬ್ಬರು ಸಿಎನ್‌ಎಸ್‌ರನ್ನು ನೋಡಲು ಇವರ ಕೊಠಡಿಗೆ ಬಂದರು. ತಮ್ಮ ಮಿತ್ರರ ಈ ದುಸ್ಥಿತಿಯನ್ನು ಅವರಿಗೆ ನೋಡಲಾಗಲಿಲ್ಲ. ಒಡನೆಯೇ ರೋಗಿಯನ್ನು ಅವರು ತಮ್ಮ ಪ್ರಾಧ್ಯಾಪಕ ವೈದ್ಯರ ದವಾಖಾನೆಗೆ ಸಾಗಿಸಿದರು. ಆ ವೈದ್ಯ ಇವರ ಕೈಕಾಲುಗಳಿಗೂ ದೇಹದ ಇತರ ಭಾಗಗಳಿಗೂ ಹದವಾಗಿ ವಿದ್ಯುತ್‌ಶಾಖ ಕೊಟ್ಟು ನೋವನ್ನು ಹತೋಟಿಗೆ ತಂದರು. ಮರುದಿನ ಮುಂಜಾನೆಯೂ ಇದೇ ಶುಶ್ರೂಷೆ ನೀಡಲಾಯಿತು. ಇದರಿಂದ ತಾತ್ಕಾಲಿಕ ಉಪಶಮನ ದೊರೆತು ಆ ದಿನ ಪರೀಕ್ಷೆ ಮಾತ್ರ ಹೇಗೋ ಬರೆಯುವುದು ಸಾಧ್ಯವಾಯಿತು, ಅಷ್ಟೆ. ಈ ರೀತಿ ಪ್ರತಿದಿನವೂ ಎರಡಾವರ್ತಿ ಬೆಳಗ್ಗೆ ಮತ್ತು ಸಾಯಂಕಾಲ ವಿದ್ಯುತ್‌ಶಾಖ ಪಡೆದು ನೋವನ್ನು ಕಡಿಮೆ ಮಾಡಿಕೊಳ್ಳುವುದು, ಮತ್ತು ಆಯಾ ದಿವಸದ ಪರೀಕ್ಷೆ ಉತ್ತರಿಸುವುದು ಹೀಗೆ ಆ ದಿವಸಗಳೆಲ್ಲವೂ ಸಾಗಿದುವು. ಇನ್ನು ಪರೀಕ್ಷಾಕೇಂದ್ರವಿದ್ದುದು ವಿಶ್ವವಿದ್ಯಾಲಯದ ಕಟ್ಟಡದ ಆರನೆಯ ಮಹಡಿಯಲ್ಲಿ. ವಿಶ್ವವಿದ್ಯಾಲಯದ ನೌಕರರು ಬಲು ಅಕ್ಕರೆಯಿಂದ ಈ ವಾತಪೀಡಿತ ತರುಣನನ್ನು ವಿದ್ಯುತ್‌ಎತ್ತುಗಕ್ಕೆ ಒಯ್ದು ನಿಲ್ಲಿಸಿ ಆರನೆಯ ಮಹಡಿಗೆ ಸಾಗಿಸಿ ಪರೀಕ್ಷಾಂಗಣದವರೆಗೆ ಎತ್ತಿಕೊಂಡೇ ಹೋಗಿ ಕೂರಿಸಿ ಬರೆಯಲು ಅಣಿ ಮಾಡಿಕೊಡುತ್ತಿದ್ದರು. ಪರೀಕ್ಷೆ ಮುಗಿದ ಬಳಿಕ ಇವರನ್ನು ಕೊಠಡಿಗೆ ಕಳಿಸಲು ಕೂಡ ಇದೇ ರೀತಿ ನೆರವಾಗುತ್ತಿದ್ದರು. ಒಂದು ದಿವಸ ಎತ್ತುಗ ಕೆಟ್ಟು ಹೋಗಿದ್ದಾಗ ನೌಕರರು ತಮ್ಮ ಈ ‘ದೇವರಿಗೆ’ ಅಕ್ಷರಶಃ ಪಲ್ಲಕ್ಕಿ ಸೇವೆಯನ್ನೇ ಸಲ್ಲಿಸಿದರು. ಕುರ್ಚಿಯಲ್ಲಿ ಕೂರಿಸಿ ಆ ಆರು ಮಹಡಿಗಳ ಎತ್ತರಕ್ಕೂ ಹೊತ್ತುಕೊಂಡೇ ಹೋಗಿದ್ದರು! ಹೀಗೆ ಆ ದುರ್ದಿನಗಳು, ಆ ಪರೀಕ್ಷಾ ದಿನಗಳು, ಸಂಪೂರ್ಣ ಪರಾಧೀನತೆಯಲ್ಲೇ ಕಳೆದುಹೋದುವು.

“ಪರೀಕ್ಷೆಯೂ ವ್ಯಾಧಿಯೂ ನನಗೆ ನಿರಂತರವಾಗಿ ಆ ಹತ್ತು ದಿವಸಗಳ ಕಾಲ ಸಂಗಾತಿಗಳಾಗಿದ್ದುವು. ಹನ್ನೊಂದನೆಯ ದಿವಸ ಪರೀಕ್ಷೆ ಮುಗಿದಿತ್ತು; ವ್ಯಾಧಿಮಾಯವಾಗಿತ್ತು. ಕೊಲ್ಕಟದ ರಸ್ತೆಗಳಲ್ಲಿ ಎಂದಿನಂತೆ ತಿರುಗಾಡುತ್ತಿದ್ದೆ!” ಎಂಬುದಾಗಿ ಸಿಎನ್‌ಎಸ್‌ಹಲವಾರು ದಶಕಗಳ ತರುವಾಯ ಬರೆದಿದ್ದಾರೆ.

ಎಂಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂತು: ಸಿ. ಎನ್‌. ಶ್ರೀನಿವಾಸ ಅಯ್ಯಂಗಾರ್ಯರು ಪ್ರಥಮ ದರ್ಜೆ ಪ್ರಥಮಸ್ಥಾನ ಪಡೆದಿದ್ದರು; ಜೊತೆಗೆ ಕೊಲ್ಕಟ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಗರಿಷ್ಠ ಅಂಕಗಳನ್ನು (ಎಂಎಸ್‌ಸಿ ಗಣಿತ ವಿಭಾಗದಲ್ಲಿ) ಕೂಡ ಗಳಿಸಿ ದಾಖಲೆ ಸ್ಥಾಪಿಸಿದ್ದರು! ಇಲ್ಲಿಗೆ ಅವರ ಜೀವನದಲ್ಲಿ ಒಂದು ಮುಖ್ಯ ಘಟ್ಟ ಮುಗಿಯುತ್ತದೆ (೧೯೨೨).

ಇಂಥ ಹಿರಿಮೆ ಮತ್ತು ಪದವಿ ಗಳಿಸಿದವರು ಆ ದಿವಸಗಳಲ್ಲಿ ಸಮಗ್ರ ಭಾರತದಲ್ಲಿಯೂ ಬಲು ಮಂದಿ ಇರಲಿಲ್ಲ. ಆದರೆ ಇದರ ಅರಿವು ಕೂಡ ಸಿಎನ್‌ಎಸ್‌ರಿಗೆ ಇತ್ತೋ ಏನೋ ಸಂಶಯವೇ. ಆ ದಿವಸಗಳನ್ನು ಕುರಿತು ಅವರೇ ಒಮ್ಮೆ ಹೇಳಿದ ಮಾತು: “ಅನಂತಜ್ಞಾನದ ನಿರಂತರಾನ್ವೇಷಣೆಯಲ್ಲಿ ನಾನು ಆಗ ಒಂದನೆಯ ಹೆಜ್ಜೆಯನ್ನು ಸರಿಯಾದ ಹಾದಿಯಲ್ಲಿ ಇರಿಸಿದ್ದೆನೆಂಬ ಆಶ್ವಾಸನೆ ಮಾತ್ರ ಈ ಫಲಿತಾಂಶ.”

ಪ್ರಾಧ್ಯಾಪಕಸಂಶೋಧಕ ಸಿಎನ್ಎಸ್

೧೯೨೩ ಆರಂಭವಾಗುವಾಗ ನಾವು ತರುಣ ಲೆಕ್ಚರರ್‌ಶ್ರೀನಿವಾಸ ಅಯ್ಯಂಗಾರ್ಯರನ್ನು ನೋಡುತ್ತೇವೆ. ಸ್ಥಳ ಮೈಸೂರಿನ ಮಹಾರಾಜ ಕಾಲೇಜು. ಮಧ್ಯಮಗಾತ್ರದ ನಿಲವು. ಕೃಶವಾದರೂ ಸುದೃಢಕಾಯ. ಎಣ್ಣೆಗಪ್ಪು ಮೈಬಣ್ಣ, ತುಂಬು ಮುಖ. ದಪ್ಪ ಮಸೂರಗಳ ಕನ್ನಡಕದ ಮೂಲಕ ಬರುವ ದೃಷ್ಟಿ ಬಲು ನೇರ. ಅದರಲ್ಲಿ ಕಾಂತಿಯ ಜೊತೆಗೆ ವಿನಯವಂತಿಕೆ ಮತ್ತು ಶಾಂತಿಯ ಸುರಿಮಳೆ. ಮಾತು ಮುತ್ತು, ಗಂಭೀರ. ಉನ್ನತ ಮಟ್ಟದ ಮತ್ತು ಯಾರನ್ನೂ ನೋಯಿಸದ ತಿಳಿಹಾಸ್ಯವನ್ನು ತಮ್ಮದೇ ಧಾಟಿಯಲ್ಲಿ ಹರಿಸುವ ನಿಷ್ಣಾತ ಸಂಭಾಷಣಕಾರ. ಒನಪು ಒಯ್ಯಾರಗಳಿಗಾಗಲೀ ಕೊಂಕು ಕುಹಕಗಳಾಗಲೀ ಅವರ ವರ್ತನೆಯಲ್ಲಿ ಎಂದೂ ಅವಕಾಶವಿಲ್ಲ. ಮಂದ ಶ್ರುತಿಯಲ್ಲಿ ಸ್ಪಷ್ಟ ಉಚ್ಚಾರಣೆಯಿಂದ ಅವರು ನುಡಿದರೆಂದರೆ ಅದು ಗಣಿತ ಪ್ರಮೇಯಗಳಂತೆ ಸಿದ್ಧವಾಕ್ಯಗಳೇ. ನಡಿಗೆ ಬಲು ಚುರುಕು. ಅದರಲ್ಲಿಯೂ ಸರಳತೆಯೇ ಪ್ರಧಾನ ಲಕ್ಷಣ. ನಡೆನುಡಿಗಳು ಹೇಗೋ ಹಾಗೆ ಬಗೆಯೂ. ಇಂಥ ಒಬ್ಬ ತರುಣ ಅಧ್ಯಾಪಕ ಆಸಕ್ತ ವಿದ್ಯಾರ್ಥಿಗಳ ಆದರ್ಶ ಮತ್ತು ಆರಾಧ್ಯ ವ್ಯಕ್ತಿಯಾದದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ನಿಷ್ಠಾವಂತ ಉಪಾಧ್ಯಾಯ, ಶಿಷ್ಯರ ವಿಚಾರದಲ್ಲಿ ಅಪಾರ ಸಹನೆ ಆಸಕ್ತಿಗಳನ್ನು ವಹಿಸಿ ಬೋಧಿಸುವ ಮಾರ್ಗದರ್ಶಿ ಇವರೆಂಬ ಹಿರಿಮೆ ಇವರಿಗೆ ಸಹಜವಾಗಿ ಲಭಿಸಿತು. ಮರುವರ್ಷ (೧೯೨೪) ಇವರು ಗಣಿತದ ಅಸಿಸ್ಟೆಂಟ್‌ಪ್ರೊಫೆಸರ್‌ಆಗಿ ಬಡ್ತಿ ಪಡೆದರು. ಜೊತೆಯಲ್ಲೇ ಇವರಿಗೆ ಬೆಂಗಳೂರಿನ ಸೆಂಟ್ರಲ್‌ಕಾಲೇಜಿಗೆ ವರ್ಗವೂ ಆಯಿತು. ಅಂದಿನಿಂದ ಮುಂದಕ್ಕೆ ಸಿಎನ್‌ಎಸ್‌ರ ಕಾರ್ಯಕ್ಷೇತ್ರ (೧೯೫೮ ರಿಂದ ೧೯೬೫ರ ತವಕದ ಧಾರವಾಡ ವಾಸ್ತವ್ಯವನ್ನು ಬಿಟ್ಟರೆ) ಬೆಂಗಳೂರು ನಗರವೇ. ೧೯೨೩ರ ತರುಣದಲ್ಲಿ ಸಿಎನ್‌ಎಸ್‌ರು ಮದುವೆ ಆಗಿ ಗೃಹಸ್ಥರಾದರು.

ಈ ಹಿರಿಯರಿಗೆ ಜೀವನದಲ್ಲಿ ಅಧಿಕಾರದ ಆಸೆ ಆಕಾಂಕ್ಷೆಗಳಿರಲಿಲ್ಲವೇ? ಪ್ರಾಧ್ಯಾಪಕ ವೃತ್ತಿಗೆ ಅಂದು ಇದ್ದುದೇನಿದ್ದರೂ ಗೌರವ ಮಾತ್ರ ಹಣಕಾಸಿನ ಸೌಲಭ್ಯ ಕಡಿಮೆ. ಅಧಿಕಾರವೋ ಶೂನ್ಯ. ಮೇಧಾವಿ ತರುಣನಿಗೆ, ಉನ್ನತ ಪದವೀಧರನಿಗೆ ಬರೀ ಗೌರವದಿಂದ ಜೀವನದಲ್ಲಿ ಆರ್ಥಿಕ ಸಮತೋಲ ಒದಗುವುದು ಸಾಧ್ಯವಿಲ್ಲವಷ್ಟೆ?

ಆ ದಿವಸಗಳಲ್ಲಿ ತರುಣ ಪದವೀಧರರ ಪ್ರಥಮಾಕರ್ಷಣೆ ಇಂಡಿಯನ್‌ಆಡಿಟ್ಸ್‌ಅಂಡ್‌ಅಕೌಂಟ್ಸ್‌ಪರೀಕ್ಷೆ. ಇದಕ್ಕೆ ಭಾರತದಲ್ಲಿಯೇ ಪರೀಕ್ಷಾ ಕೇಂದ್ರವನ್ನು ಆಯುವ ಸೌಕರ್ಯವಿತ್ತು. ಸಿಎನ್‌ಎಸ್‌ಈ ಪರೀಕ್ಷೆಗೆ ಕೂರಲು ನಿಶ್ಚಯಿಸಿದರು. ಅಭ್ಯರ್ಥನ ಪತ್ರದಲ್ಲಿ ತಮ್ಮ ಒಲವು ಯಾವ ವಿಭಾಗಕ್ಕೆ ಸೈನ್ಯ ವಿಭಾಗಕ್ಕೋ ನಾಗರಿಕ ವಿಭಾಗಕ್ಕೋ ಅಥವಾ ಇವೆರಡಕ್ಕೋ ಎಂಬುದನ್ನು (ಪರೀಕ್ಷೆಗೆ ಮೊದಲೇ) ಸೂಚಿಸಬೇಕಾಗಿತ್ತು. ಬಹುಶಃ ಸೈನ್ಯವಿಭಾಗ ತನ್ನ ಪ್ರವೃತ್ತಿಗೆ ಸರಿಹೊಂದಲಾರದು ಎಂದು ಭಾವಿಸಿ ನಾಗರಿಕ ವಿಭಾಗಕ್ಕೆ ಮಾತ್ರ ಇವರು ತಮ್ಮ ಒಲವನ್ನು ಸೂಚಿಸಿದ್ದರು. ಪರೀಕ್ಷೆ ಬರೆದುದಾಯಿತು (೧೯೨೩). ಫಲಿತಾಂಶವೂ ಬಂತು ಸಿಎನ್‌ಎಸ್‌ಎರಡನೆಯ ಸ್ಥಾನ ಪಡೆದಿದ್ದರು. ಆ ವರ್ಷ ಖಾಲಿ ಇದ್ದ ಹುದ್ದೆಗಳು ಮೂರು. ನಾಗರಿಕ ವಿಭಾಗದಲ್ಲಿ ಒಂದು, ಅದಾದ ಮೇಲೆ, ಸೈನ್ಯ ವಿಭಾಗದಲ್ಲಿ ಎರಡು. ಎಂದೇ ಇವರಿಗೆ ನಾಗರಿಕ ಹುದ್ದೆ ದೊರೆಯಲಿಲ್ಲ, ಸೈನ್ಯದ ಹುದ್ದೆ ದಕ್ಕಲಿಲ್ಲ. “ಹೀಗಾಗಿ ನನಗೆ ಕಾಲೇಜಿನ ಕೆಲಸವೇ ಗಟ್ಟಿಯಾಗಿ ಉಳಿಯಿತು. ಆಗ ನಾನು ಆ ‘ತಪ್ಪು’ ಮಾಡದಿದ್ದರೆ ಕೈತುಂಬ ಹಣ ಬಂದಿರುತ್ತಿತ್ತು. ಆದರೆ ನನ್ನ ಜೀವನಪಥ ಏನಾಗುತ್ತಿತ್ತೋ ಹೇಳಬಲ್ಲವರಾರು?” ಎಂಬುದಾಗಿ ಸಿಎನ್‌ಎಸ್‌ಬರೆದಿದ್ದಾರೆ. ಇವರು ಹುಟ್ಟಿನಿಂದಲೇ ಸಂಶೋಧಕರು, ಅಧ್ಯಾಪಕರು, ಸೌಜನ್ಯವಂತರು. ಇಂಥವರು ಆಡಿಟ್‌ವಿಭಾಗದ ನೀರಸ ಅಂಕೆ ಅಂಶಗಳ ಅಂಕುಡೊಂಕುಗಳಲ್ಲಿ ಅಡಗಿಹೋಗಿದ್ದುದು ನಾಡಿನ ಪುಣ್ಯ ವಿಶೇಷ.

ಮುಂದೆ ೧೯೨೮ರ ಸುಮಾರಿಗೆ ಸೆಂಟ್ರಲ್‌ಕಾಲೇಜಿನಲ್ಲಿ ಗಣಿತಶಾಸ್ತ್ರದ ಎಂಎಸ್‌ಸಿ ಪ್ರಾರಂಭವಾದಾಗ ಆ ತರಗತಿಗಳಿಗೆ ಪಾಠ ಮಾಡುವ ಸುಯೋಗ ಇವರಿಗೆ ಸಹಜವಾಗಿ ಲಭಿಸಿತು. ಇದರಿಂದ ಇವರ ಗಣಿತಾಸಕ್ತಿಗೆ ಸಾಣೆ ಹಿಡಿದಂತಾಯಿತು. ತಾವು ಗಣಿತದಲ್ಲಿ ಉನ್ನತ ಸಂಶೋಧನೆ ಮಾಡಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಬಯಸಿದರು. ಇಂಥ ಕಾರ್ಯಕ್ಕೆ ಎರಡು ಮುಖ್ಯ ಅನುಕೂಲತೆಗಳು ಬೇಕು: ತಜ್ಞ ವಿದ್ವಾಂಸನೊಬ್ಬನಿಂದ ಸಮರ್ಥ ಮಾರ್ಗದರ್ಶನ; ಮತ್ತು ಆಧುನಿಕ ಗ್ರಂಥಭಂಡಾರಕ್ಕೆ ಮುಕ್ತ ಪ್ರವೇಶ. ಆದರೆ ಅಂದಿನ ಸೆಂಟ್ರಲ್‌ಕಾಲೇಜಿನಲ್ಲಿ ಇವೆರಡೂ ಅಲಭ್ಯವಾಗಿದ್ದುವು. ಅಲ್ಲದೇ ಸಂಶೋಧನ ಪ್ರಬಂಧಗಳನ್ನು ಸ್ವೀಕರಿಸಿ ಪರಿಶೀಲಿಸಿ ಡಾಕ್ಟರೇಟ್‌ಪದವಿ ಪ್ರಧಾನಿಸಬೇಕಾದ ಏರ್ಪಾಡು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಗ ಇರಲಿಲ್ಲ. ಜ್ಞಾನ ಪಿಪಾಸುಗಳಾದ ಸಿಎನ್‌ಎಸ್‌ಧೃತಿ ಈ ಯಾವ ಬಾಹ್ಯ ಕೊರತೆಗಳಿಂದಲೂ ಕುಂದಲಿಲ್ಲ. ತಾವೇ ತಮ್ಮ ಸಂಶೋಧನ ಮಾರ್ಗ ರೂಪಿಸಿಕೊಂಡು ಪ್ರಾಧ್ಯಾಪಕತ್ವದ ಸಮಸ್ತ ಹೊಣೆಗಳ ನಡುವೆ, ಸಂಶೋಧನೆಯನ್ನೂ ಮುಂದುವರಿಸಿದರು.

ಸಂಶೋಧನೆ ಎಂದರೇನು? ಸಂಶೋಧಕನಾಗಬಯಸುವಾತ ಆ ತನಕ ತನ್ನ ಶಾಸ್ತ್ರ ವಿಭಾಗದಲ್ಲಿ ಸಂಗ್ರಹವಾಗಿರುವ ಜ್ಞಾನವನ್ನು ಮೊದಲು ಅರಿತುಕೊಳ್ಳಬೇಕು. ಇದರಿಂದ ಆತನಿಗೆ ಜ್ಞಾನದ ವರ್ತಮಾನಮಟ್ಟ ಏನೆಂದು ಗೊತ್ತಾಗುವುದು. ಆಗ ಸಹಜವಾಗಿ ಈ ಜ್ಞಾನದಲ್ಲಿಯ ಅರೆಕೊರೆಗಳೂ ಇನ್ನೂ ಪರಿಹರಿಸಲಾಗಿಲ್ಲದ ಸಮಸ್ಯೆಗಳೂ ವೇದ್ಯವಾಗುತ್ತವೆ.ಇವುಗಳ ಪೈಕಿ ತನಗೆ ಕುತೂಹಲಕಾರಿಯಾದ ಒಂದು ಸಮಸ್ಯೆಯನ್ನು ಆಯ್ದು ಅದರ ಒಡಪನ್ನು ಅರಸುವ ಹಾದಿಯಲ್ಲಿ ನಿರಂತರವಾಗಿ ಪಯಣಿಸಬೇಕು. ಇದೇ ಸಂಶೋಧನೆ. ಇದರಲ್ಲಿ ಪರಿಹಾರ ದೊರೆತೇ ದೊರೆಯುವುದೆಂದೇನೊ ಭರವಸೆ ಇಲ್ಲ: ತಿಳಿಯದ ಎತ್ತರ ಏರಲು ಬಯಸುವ ಪರ್ವತಾರೋಹಿಯ ನಡೆಯಂತೆ. ದಾರಿ ತಪ್ಪಬಹುದು, ಹೊಸಗುರಿ ಎದುರಾಗಬಹುದು, ಕುರುಡು ಕೊನೆ ತಲಪಿ ಇಡೀ ಪ್ರಯತ್ನವೇ ವಿಫಲವಾಗಬಹುದು. ಅನಿರೀಕ್ಷಿತ ಮೂಲೆಯಿಂದ ಹಠಾತ್ತನೆ ಬೆಳಕು ಬರಲೂಬಹುದು. ಇಂಥ ಮಾರ್ಗಕ್ಕೆ ಇಳಿದ ಅನ್ವೇಷಕ ತಪಸ್ವಿ ಆಗಿರಬೇಕು, ತನ್ನ ಉದ್ದೇಶದ ಸಾಧನೆಯ ವಿಚಾರದಲ್ಲಿ “ಹುಚ್ಚ”ನೇ ಆಗಿರಬೇಕು, ವಲ್ಮೀಕವಾಸಿಯೇ ಆಗಬೇಕು.

ಶ್ರೀನಿವಾಸ ಅಯ್ಯಂಗಾರ್ಯರ ಪ್ರತಿಭೆಗೆ ಸಂಶೋಧನೆಯ ಮಾರ್ಗ ಹಿಡಿಯದೇ ಇರುವುದು ಸಾಧ್ಯವಾಗುತ್ತಿರಲಿಲ್ಲ. ಸ್ವಪ್ರಯತ್ನದಿಂದಲೇ ಇವರ ಸಂಶೋಧನ ಪ್ರಬಂಧ ಸಿದ್ಧವಾಯಿತು. ಇದನ್ನೇ ತಮ್ಮ ಮಾತೃವಿಶ್ವವಿದ್ಯಾಲಯಕ್ಕೆ (ಕೊಲ್ಕಟ) ಪರಾಮರ್ಶೆಗೋಸ್ಕರ ಅರ್ಪಿಸಿದರು. ವಾಡಿಕೆಯಂತೆ ವಿಶ್ವವಿದ್ಯಾಲಯ ಇದನ್ನು ಮೂವರು ಜಗದ್ವಿಖ್ಯಾತ ಗಣಿತ ವಿದ್ವಾಂಸರಿಗೆ ಮೌಲ್ಯಮಾಪನೆಗಾಗಿ ಕಳಿಸಿಕೊಟ್ಟಿತ: ಎ. ಆರ್‌. ಫೋರ್ಸೈತ್‌, ಡಿ. ಇ. ಲಿಟ್ಲ್‌ವುಡ್‌ಮತ್ತು ಇ. ಟಿ. ವ್ಹಿಟೇಕರ್‌ಇವರೇ ಆ ವಿದ್ವಾಂಸರು. ಇವರು ಸಿಎನ್‌ಎಸ್‌ರ ಪ್ರಬಂಧವನ್ನು ಬಲುವಾಗಿ ಮೆಚ್ಚಿ ಇದರ ಕರ್ತೃವಿಗೆ ಪಿಎಚ್‌ಡಿಗಿಂತಲೂ (ಡಾಕ್ಟರ್‌ಆಫ್‌ಫಿಲಾಸಫಿ) ಉನ್ನತ ಮಟ್ಟದ ಡಿಎಸ್‌ಸಿ (ಡಾಕ್ಟರ್‌ಆಫ್‌ಸೈನ್ಸ್‌) ಪದವಿಯನ್ನೇ ನೀಡಬೇಕೆಂದು ಶಿಫಾರಸು ಮಾಡಿದರು. ಇದರ ಮೇರೆಗೆ ಕೊಲ್ಕಟ ವಿಶ್ವವಿದ್ಯಾಲಯ ೧೯೩೨ರಲ್ಲಿ ಸಿಎನ್‌ಎಸ್‌ರಿಗೆ ಡಿಎಸ್‌ಸಿ ಪದವಿ ಪ್ರದಾನಿಸಿತು. ಇವರ ನಿರಂತರ ಜ್ಞಾನಾನ್ವೇಷಣೆಯ ಪ್ರಯಾಣದಲ್ಲಿ ಈ ಪದವಿ ಒಂದು ಮಜಲು. ಮುಂದೆ ಸಾಗಲಿರುವ ಬಹುದೂರವನ್ನು ತೋರಿಸಲು ಎತ್ತಿ ಹಿಡಿದ ಕೈಮರ.

ಈ ಪ್ರೋತ್ಸಾಹದಿಂದ ಉದ್ದೀಪಿತರಾದ ಸಿಎನ್‌ಎಸ್‌ತಮ್ಮ ಸುತ್ತ ಸಮರ್ಥ ಶಿಷ್ಯರ ಒಂದು ತಂಡವನ್ನೇ ಆಕರ್ಷಿಸುವಲ್ಲಿ ಯಶಸ್ವಿಗಳಾದರು. ಯಾವ ಸಂಶೋಧನೆಯೂ ನಿರ್ವಾತದಲ್ಲಿ ವಿಶೇಷ ಪ್ರಗತಿ ಸಾಧಿಸಲಾರದು. ಸಮಾನ ಆಸಕ್ತಿಯನ್ನು ತಳೆದಿರುವ ಹಲವಾರು ಬುದ್ಧಿಗಳ ಮಿಳನ ಅದಕ್ಕೆ ಅತ್ಯಾವಶ್ಯಕ. ಆಗ ಮಾತ್ರ ಅಭಿಪ್ರಾಯಗಳ ಸತತ ವಿನಿಮಯ, ನಿರ್ಭೀತ ಚರ್ಚೆ ಹಾಗೂ ಮಂಥನ ಮತ್ತು ಫಲಿತಾಂಶಗಳ ಕ್ರೋಡೀಕರಣ ಸಾಧ್ಯವಾಗುತ್ತವೆ. ಇಂಥ ಚಟುವಟಿಕೆಯ ಜೇಣುಗೂಡಿನ ರಾಣಿ ನೊಣ ಆಚಾರ್ಯರಾದದ್ದು, ತರುಣ ಸಂಶೋಧಕರ ಪೀಳಿಗೆಯೇ ಮೈದಳೆದದ್ದುಇವೆಲ್ಲವೂ ಆಚಾರ್ಯರ ವ್ಯಕ್ತಿತ್ವಕ್ಕೂ ಪ್ರವೃತ್ತಿಗೂ ಅನುಗುಣವಾಗಿಯೇ ಇದ್ದುವು. ಅಖಿಲ ಭಾರತದ ಗಣಿತ ನಕಾಶೆಯಲ್ಲಿ ಬೆಂಗಳೂರಿಗೆ ಆ ದಿನಗಳಲ್ಲಿ (೧೯೩೦ – ೬೦) ಒಂದು ಹಿರಿಯ ಸ್ಥಾನವಿತ್ತು. ಇದನ್ನು ದೊರಕಿಸಿಕೊಡುವಲ್ಲಿ ಶ್ರೀನಿವಾಸ ಅಯ್ಯಂಗಾರ್ಯರ ಮತ್ತು ಅವರ ಅನುಯಾಯಿಗಳ ಪಾತ್ರ ಬಲು ದೊಡ್ಡದು. ಸ್ವತಃ ಆಚಾರ್ಯರ ಹಲವಾರು ಸಂಶೋಧನ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗಣ್ಯ ಗಣಿತ ನಿಯತಕಾಲಿಕೆಗಳಲ್ಲಿ ಆಗಾಗ ಪ್ರಕಟವಾಗಿ ಬೆಂಗಳೂರಿಗೆ ಅಪಾರ ಯಶಸ್ಸನ್ನು ತಂದಿವೆ.

ಹಳೆಯದನು ತೊರೆದು ಹೊಸಬೆಳಕನರಸುವವ ಋಷಿ
ಋಷಿಕಂಡ ಬೆಳಕನ್ನು ಬೀರುವವನಾಚಾರ್ಯ
ಆಚಾರ್ಯ ಕಾಣಿಸಿದ ಪಥದಿ ನಡೆವವ ಶಿಷ್ಯ
ಶಿಷ್ಯ ಋಷಿಯಾಗುವುದೇ ಋಜುವಿದ್ಯೆ ಅತ್ರಿಸೂನು ||