ವಿಜ್ಞಾನ ವಾಙ್ಮಯ ನಿರ್ಮಾಪಕ ಸಿಎನ್ಎಸ್

ಸಿಎನ್‌ಎಸ್‌ರ ಆಸಕ್ತಿ ಕೇವಲ ಆಧುನಿಕ ಗಣಿತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದ ಭವ್ಯ ಗಣಿತ ಪರಂಪರೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಬೇಕೆಂದು ಬಯಸಿದರು. ಆದರೆ ಕಾಲಾನುಗುಣ್ಯ ರಚಿತವಾದ ಒಂದೇ ಒಂದು ಜ್ಞೇಯನಿಷ್ಠ ಗ್ರಂಥವೂ ಅವರಿಗೆ ದೊರೆಯಲಿಲ್ಲ. “ಭಾರತದ ಪ್ರಾಚೀನ ಗಣಿತ, ಖಗೋಳ ವಿಜ್ಞಾನಗಳು ಉನ್ನತ ಮಟ್ಟಕ್ಕೆ ಏರಿದ್ದುವು. ಪ್ರಪಂಚ ಕತ್ತಲಿನಲ್ಲಿ ತೊಳಲುತ್ತಿದ್ದಾಗ ಭಾರತ ಬೆಳಕನ್ನು ಬೀರಿತು” ಎಂದು ಮುಂತಾದ ಭಾವಪ್ರಧಾನ ನಿರೂಪಣೆಗಳೇ ಅಧಿಕ. ಇಂಥವುಗಳಿಂದ ನಿರಪೇಕ್ಷ ಮೌಲ್ಯ ಆಯ್ದು ನಿರೂಪಿಸಲು ಅತ್ಯಧಿಕ ಪರಿಶ್ರಮ ಹಾಗೂ ಚಿಕಿತ್ಸಕ ಒಳನೋಟ ಬೇಕಾಗುತ್ತವೆ. ಈ ಕಾರ್ಯವನ್ನು ನೆರವೇರಿಸಲು ಸಿಎನ್‌ಎಸ್‌ಟೊಂಕ ಕಟ್ಟಿದರು. ಹರಿದು ಹಂಚಿ ಹೋಗಿದ್ದ, ಅನೇಕ ವೇಳೆ ನಶಿಸಿಹೋಗಿದ್ದ, ಹಲವಾರು ಆಕರ ಸಾಮಗ್ರಿಗಳನ್ನು ಶೋಧಿಸಿ ಮೊದಲು ತಾವು ವಿಷಯವನ್ನು ಸರಿಯಾಗಿ ತಿಳಿದುಕೊಂಡು ಬಳಿಕ ಶಾಸ್ತ್ರೀಯವಾದ ಒಂದು ಚೌಕಟ್ಟಿನ ಒಳಗೆ ಅದನ್ನು ಪುನಃ ಸ್ಥಾಪಿಸಲು ನಚಿಕೇತ ಪ್ರಯತ್ನ ಹೂಡಿದರು. ಇದರ ಫಲವಾಗಿ ೧೯೪೫ರ ವೇಳೆಗೆ ಇವರು “ಗಣಿತ ಶಾಸ್ತ್ರದ ಚರಿತ್ರೆ” ಎಂಬ ಹಸ್ತಪ್ರತಿಯನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದರು. ಇದನ್ನು ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಣೆ ಮಾಡಿತು. ಈ ಗ್ರಂಥದ ಮೊದಲ ಅರ್ಧದಲ್ಲಿ ಗಣಿತದ ಸಮಗ್ರ ಇತಿಹಾಸದ ಸಂಕ್ಷೇಪ ವರದಿ ಉಂಟು. ಎರಡನೆಯದರಲ್ಲಿ ಗಣಿತ ಕುರಿತಂತೆ ಇದೇ ಇತಿಹಾಸದ ವಿವರಣೆ ಇದೆ. ಇವೇ ಮೂಲ ಸಾಮಗ್ರಿಗಳನ್ನು ಆಧರಿಸಿ ಇಂಗ್ಲಿಷಿನಲ್ಲಿ ಒಂದು ಗ್ರಂಥವನ್ನು ಬರೆದು ಪ್ರಕಟಿಸಿದರು.(೧೯೬೭). ಅದರ ಹೆಸರು Ancient Indian Mathematics. ಭಾರತೀಯ ಗಣಿತದ ನಿಷ್ಕೃಷ್ಟ ಇತಿಹಾಸ ತಿಳಿಯಲು ಬಯಸುವ ಪ್ರತಿಯೊಬ್ಬ ಜಿಜ್ಞಾಸುವಿಗೂ ಈ ಗ್ರಂಥಗಳು ಅತ್ಯುಪಯುಕ್ತ ಒಡನಾಡಿಗಳು.

ಪ್ರಾಚೀನ ಭಾರತೀಯ ಗಣಿತದ ಮೌಲ್ಯಮಾಪನೆಯನ್ನು ಇವರು ಅದೆಷ್ಟು ಜ್ಞೇಯನಿಷ್ಠವಾಗಿ ಮಾಡಿರುವರು ಎನ್ನುವುದನ್ನು ಈ ಮುಂದೆ ಉದ್ಧರಿಸಿರುವ ಒಂದು ಪರಿಚ್ಛೇದದಿಂದ ತಿಳಿಯಬಹುದು:

“ಅಂಕಗಣಿತದ ಸಂಖ್ಯಾಕ್ರಮ ಬಹಳ ಹಿಂದೆ ಭಾರತದಲ್ಲಿ ಹುಟ್ಟಿ ಪಾಶ್ಚಾತ್ಯ ದೇಶಗಳಿಗೆ ನಿಧಾನವಾಗಿ ಹೇಗೆ ಹರಡಿತು ಎಂದು ವಿವರಿಸಿದ್ದೇವೆ. ಇಂದು ಸಾರ್ವತ್ರಿಕವಾಗಿರುವ ಸಂಖ್ಯಾಕ್ರಮವೂ ಅಂಕಗಣಿತದ ಮುಖ್ಯ ವಿಧಾನಗಳೆಲ್ಲವೂ (ದಶಮಾಂಶಗಳ ಹೊರತಾಗಿ) ಭಾರತೀಯರಿಂದ ಬಂದವು ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಇಂದಿನ ಗಣಿತದಲ್ಲಿ ಭಾರತೀಯರ ಹೆಸರು ನಿಂತಿರುವುದು ಮುಖ್ಯವಾಗಿ ಇವುಗಳಲ್ಲಿ ಮಾತ್ರ. ಬೀಜಗಣಿತದ ಚಿಹ್ನೆಕ್ರಮವೂ ಮೂಲಭಾವನೆಗಳೂ ಅಂಕುರಿಸಿದುದು ಭಾರತದಲ್ಲಿಯೇ. ಬಹಳ ಕಾಲದವರೆಗೆ ಪಾಶ್ಚಾತ್ಯರ ಬೀಜಗಣಿತವು ಭಾರತೀಯ ಬೀಜಗಣಿತದ ಮಟ್ಟಕ್ಕೆ ಬರಲಿಲ್ಲ…. ಗಣಿತದ ಬಾಲ್ಯಸ್ಥಿತಿಯಲ್ಲಿ ಹೊಸ ಭಾವನೆಗಳೂ ಅವಶ್ಯಕವಾಗಿದ್ದುವು. ನಿಖರವಾದ ತರ್ಕವೂ ಬೇಕಾಗಿದ್ದಿತು. ಭಾರತೀಯರಲ್ಲಿ ಭಾವನೆಗಳು ಅದ್ಭುತವಾಗಿ ಹುಟ್ಟಿದುವು: ಋಣ ಸಂಖ್ಯೆಗಳು, ಅನಂತ, ತಾತ್ಕಾಲಿಕ. ಇವು ಸಂಕೀರ್ಣ ಭಾವನೆಗಳು. ರೇಖಾಗಣಿತಕ್ಕೆ ಬೀಜಗಣಿತವನ್ನು ಸಹಾಯಕವಾಗಿ ಉಪಯೋಗಿಸಿದುದು, ಕೆಲವು ಬೀಜಗಣಿತದ ಲೆಕ್ಕಗಳನ್ನು ರೇಖಾಗಣಿತದಿಂದ ಮಾಡಿದುದು ಇವು ಶ್ಲಾಘನೀಯವು. ಯೂರೋಪಿನಲ್ಲಿ ಹೀಗೆ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಸಹಾಯವಾಗುವಂತೆ ಸಂಬಂಧವೇರ್ಪಡಿಸಿದುದು ಬಹಳ ಕಾಲದ ತರುವಾಯ. ಇಷ್ಟು ಶ್ಲಾಘನೀಯವಾದ ಭಾವನೆಗಳೂ ವಿಧಾನಗಳೂ ಇದ್ದರೂ ಉತ್ತಮವಾದ ತಾರ್ಕಿಕ ಭಾವವಿಲ್ಲದುದೇ ಭಾರತೀಯ ಗಣಿತದ ಪ್ರಗತಿಯು ನಿಂತು ಹೋಗಿರುವುದಕ್ಕೆ ಮುಖ್ಯ ಕಾರಣವೆನ್ನಬಹುದು.” (ಗಣಿತ ಶಾಸ್ತ್ರದ ಚರಿತ್ರೆ, ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ, ೧೯೫೮. ಪುಟ ೩೨೫ – ೩೨೬.)

ಐತಿಹಾಸಿಕ ಕಾರಣಗಳಿಂದಾಗಿ ೨೦ನೆಯ ಶತಮಾನದ ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ವಿಜ್ಞಾನ ಪರಂಪರೆಯೊಡನೆ ಸಂಪರ್ಕ ಕಡಿದುಹೋಯಿತು. ಇತ್ತ ಪಾಶ್ಚಾತ್ಯ ವಿಜ್ಞಾನ ಮತ್ತು ಅದರ ವಿಧಾನಗಳು ಸಾರ್ವತ್ರಿಕವಾಗಿ ಬಳಕೆಗೆ ಬಂದುವು. ಇಂಗ್ಲಿಷ್‌ಸರ್ವತ್ರ ಶಿಕ್ಷಣ ಮಾಧ್ಯಮವಾಯಿತು. ಇದು ಎಂಥ ಪ್ರಕೋಪ ಸ್ಥಿತಿಗೆ ಮುಟ್ಟಿತೆಂದರೆ ವಿಶ್ವವಿದ್ಯಾಲಯಗಳ ಪದವಿ ಪಡೆದ ಸಾಮಾನ್ಯ ಎಲ್ಲ ಜನರೂ, ಇಂಗ್ಲಿಷ್‌ಒಂದೇ ಜ್ಞಾನದ ದೇವಾಲಯಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲ ಹಾದಿ, ದೇಶೀಯ ಭಾಷೆ ಯಾವುದಕ್ಕೂ ಈ ಸಾಮರ್ಥ್ಯ ಇಲ್ಲ ಎಂದು ಪ್ರಾಮಾಣಿಕವಾಗಿ ನಂಬಿದರು. ಇದು ೧೯೩೦ – ೪೦ರಲ್ಲಿದ್ದ ಪರಿಸ್ಥಿತಿ. ಪಾಶ್ಚಾತ್ಯ ವಿಜ್ಞಾನ ಶಿಕ್ಷಣವನ್ನು ಪಡೆದಿದ್ದವರ ಸಂಖ್ಯೆ ಆಗ ಬಲು ಕಡಿಮೆ. ಹೀಗಾಗಿ ಸಮಗ್ರ ರಾಷ್ಟ್ರದ ಬೌದ್ಧಿಕ ಜೀವನದಲ್ಲಿ ಕೃತಕವೂ ಅನಾರೋಗ್ಯಕರವೂ ಆದ ಒಂದು ಏರುಪೇರು ತಲೆದೋರಿತ್ತು; ಬೌದ್ಧಿಕ ಜೀವನದ (ಆದ್ದರಿಂದ ರಾಷ್ಟ್ರನಾಯಕತ್ವದ) ಹಿರಿತನ ಕೆಲವರಲ್ಲೇ ಕೇಂದ್ರೀಕೃತವಾಗಿ ಬಹುಸಂಖ್ಯಾತ ಪ್ರಜ್ಞೆಗಳು ತಮಗೆ ಇಂಗ್ಲಿಷ್‌ಬರದಿದ್ದುದರ, ಇಲ್ಲವೇ ಅದಕ್ಕೆ ಪ್ರವೇಶ ದೊರೆಯದಿದ್ದುದರ ಏಕೈಕ ಕಾರಣದಿಂದ ಒಂದು ವಿಧವಾದ ಕತ್ತಲೆಯಲ್ಲೇ ದಿನ ತಳ್ಳಬೇಕಾಗಿದ್ದ ವಿಷಮ ಪರಿಸ್ಥಿತಿ. ಆ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನಪ್ರಸಾರದ ಅಂಗವಾಗಿ ಹೊಸ ಒಂದು ಉದಾರ ನೀತಿ ತಳೆಯಿತು: ಇದರ ಪ್ರಕಾರ ಆಧುನಿಕ ವಿಜ್ಞಾನವನ್ನು ಹಳ್ಳಿ ಹಳ್ಳಿಗೆ ಕೂಡ ಕೊಂಡೊಯ್ಯಬೇಕು, ಇದು ಸಹಜವಾಗಿ ಕನ್ನಡದ ಮೂಲಕ ಆಗಬೇಕು. ಸಮರ್ಥ ಪ್ರಾಧ್ಯಾಪಕರು ಹಾಗೂ ಇತರ ವಿದ್ವಾಂಸರು ಭಾಷಣ ನೀಡುವುದರ ಮೂಲಕ, ಮತ್ತು ಅದೇ ವಿಷಯಗಳ ಮೇಲೆ ಹೊತ್ತಗೆಗಳನ್ನು ಬರೆದು ಕೊಡುವುದರ ಮೂಲಕ ಈ ಜ್ಞಾನಯಜ್ಞದಲ್ಲಿ ಭಾಗವಹಿಸಬೇಕು, ವಿಶ್ವವಿದ್ಯಾನಿಲಯ ಈ ಹೊತ್ತಗೆಗಳನ್ನು ಪ್ರಕಟಿಸಿ ಜನತೆಗೆ ಸುಲಭ ಬೆಲೆಗೆ ಒದಗಿಸಬೇಕು.

ಶ್ರೀನಿವಾಸ ಅಯ್ಯಂಗಾರ್ಯರು ಈ ಪ್ರಯೋಗದಲ್ಲಿ ತುಂಬ ಉತ್ಸಾಹದಿಂದ ಭಾಗವಹಿಸಿದರು. ಅವರು ೧೯೩೯ರಲ್ಲಿ ಖಗೋಳಶಾಸ್ತ್ರ ಕನ್ನಡದಲ್ಲಿ ಉಪನ್ಯಾಸ ನೀಡಿದ್ದು ಮಾತ್ರವಲ್ಲ ಅದೇ ವಿಷಯದ ಮೇಲೆ ಹೊತ್ತಗೆಯನ್ನು ಬರೆದುಕೊಟ್ಟರು ಕೂಡ. ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕ ಮಾಲೆಯ ಮೊದಲನೆಯ ಪುಸ್ತಕವೇ ಇದು: ಖಗೋಳಶಾಸ್ತ್ರ ಪ್ರವೇಶ. ಇದರಲ್ಲಿ ಸಿಎನ್‌ಎಸ್‌ಅದೆಷ್ಟು ಸ್ಪಷ್ಟವಾಗಿ ನೂತನ ಗಹನ ವಿಷಯವನ್ನು ಪ್ರಾರಂಭಿಸಿದ್ದಾರೆ ಎನ್ನುವುದನ್ನು ಮುಂದಿನ ಪರಿಚ್ಛೇದದಲ್ಲಿ ಉದ್ಧರಿಸಿರುವ ವಾಕ್ಯಗಳು ಶ್ರುತಪಡಿಸುತ್ತವೆ:

“ಮೋಡವಿಲ್ಲದ ಒಂದು ರಾತ್ರಿ ಆಕಾಶವನ್ನು ನೋಡಿದರೆ ನೂರಾರು ನಕ್ಷತ್ರಗಳು ಬೇರೆ ಬೇರೆ ಬಣ್ಣಗಳನ್ನೊಳಗೊಂಡು ಮಿನುಗುಟ್ಟುತ್ತ ಮಿರುಗುವ ದೃಶ್ಯದಿಂದ ಯಾರಿಗೆ ತಾನೇ ಆಶ್ಚರ್ಯವೂ ಆನಂದವೂ ಆಗಲಾರದು! ಇದನ್ನು ವರ್ಣಿಸುವ ಕವಿಗಳಷ್ಟೊಂದು ಮಂದಿ! ಆದರೆ ಯಾವ ಕವಿ ತಾನೇ ತನ್ನ ವರ್ಣನೆಯಿಂದ ತೃಪ್ತಿಗೊಳ್ಳಬಲ್ಲನು! ನಮಗೆ ಈಗ ಕವಿತಾವರ್ಣನೆ ಬೇಡ. ವಿಷಯ ಸಂಗ್ರಹಕ್ಕಾಗಿ ನೋಡೋಣ. ನಕ್ಷತ್ರಗಳನ್ನೆಲ್ಲ ಭೂಮಿಯ ಮೇಲೆ ಕವಿಚಿರುವ ಆಕಾಶವೆಂಬ ನೀಲಿ ಬಣ್ಣದ ಒಂದು ದೊಡ್ಡ ಟೋಪಿಯ ಮೇಲೆ ಅಲ್ಲಲ್ಲೇ ಪೋಣಿಸಿದ್ದಾರೆಂಬ ಭಾವ ಬರುತ್ತದೆಯಲ್ಲವೇ? ಆದರೆ ವಾಸ್ತವವಾಗಿ ಆಕಾಶವೆಂದರೇನು? ಭೂಮಿಯ ಮೇಲೆ ಸಾವಿರಾರು ಮೈಲಿಗಳವರೆಗೂ ವ್ಯಾಪಿಸಿರತಕ್ಕ ಅಂತರಿಕ್ಷವೆಂಬ ವಾಯುಮಂಡಲವಿದೆ. ಇದರ ಹೊರಗೆ, ಗ್ರಹಗಳು, ನಕ್ಷತ್ರಗಳು ಮುಂತಾದವನ್ನು ಬಿಟ್ಟರೆ ಇನ್ನು ಬೇರೆ ಏನೂ ಇಲ್ಲ ಎಂದು ಸದ್ಯಕ್ಕೆ ಭಾವಿಸಿಬಹುದು; ಎಂದರೆ ಭೂಮಿಯ ಅಂತರಿಕ್ಷವನ್ನು ದಾಟಿ ಹೋದ ಮೇಲೆ ಭೂಮಿಗೂ ಯಾವುದೇ ಒಂದು ನಕ್ಷತ್ರಕ್ಕೂ ನಡುವೆ ಯಾವುದೊಂದು ಪದಾರ್ಥವೂ ಇಲ್ಲ ಎಂದು ಸದ್ಯಕ್ಕೆ ಭಾವಿಸೋಣ. ಆದ್ದರಿಂದ ಭೂಮಿಯ ಮೇಲೆ ಯಾವ ಟೋಪಿಯೂ ಇಲ್ಲ. ನಕ್ಷತ್ರಗಳನ್ನೆಲ್ಲ ಯಾವುದಕ್ಕೂ ಅಂಟಿಸಿಲ್ಲ. ನಮ್ಮ ಬುದ್ಧಿಯಿಂದ ಮಾತ್ರವೇ ಗ್ರಹಿಸಲು ಸಾಧ್ಯವಾದ ಮೂಲಭಾವನೆಗಳಲ್ಲಿ ದೇಶ (space) ಮತ್ತು ಕಾಲ (time) ಎಂಬವು ಮುಖ್ಯವಾದವು. ನಮ್ಮ ಇಂದ್ರಿಯಗಳಿಗೆ ಗೋಚರಿಸುವ ಮತ್ತು ನಮಗೆ ಗೋಚರಿಸದೆ. ಊಹಾಶಕ್ತಿಯಿಂದ ತಿಳಿಯಬಹುದಾದ ದೇಶವನ್ನೆಲ್ಲ ಒಟ್ಟುಗೂಡಿ ವಿಶ್ವವೆಂದು (universe) ಕರೆಯುತ್ತೇವೆ. ಈ ವಿಶ್ವದ ಪರಿಮಾಣಗಳನ್ನಾಗಲಿ ವಿಶ್ವದಲ್ಲಿರತಕ್ಕ ವಸ್ತುಗಳ ಸಂಖ್ಯೆಯನ್ನಾಗಲಿ ನಮ್ಮಿಂದ ಊಹಿಸಲು ಸಾಧ್ಯವಿಲ್ಲ. ಇಂಥ ಅಗಾಧವಾದ ವಿಶ್ವದಲ್ಲಿ ಭೂಮಿಯೆಂಬ ಒಂದು ಸಣ್ಣ ವಸ್ತುವಿನ ಮೇಲೆ ನಾವು ಹುಳುಗಳೋಪಾದಿಯಲ್ಲಿ ಹರಿದಾಡುತ್ತಿದ್ದೇವೆ. ವಿಶ್ವದಲ್ಲಿ ಅಲ್ಲಲ್ಲೇ ದೂರ ದೂರದಲ್ಲಿ ಇರತಕ್ಕ ಪದಾರ್ಥಗಳ ಪೈಕಿ ಎಲ್ಲೋ ಕೆಲವು ನಕ್ಷತ್ರಗಳು ಮಾತ್ರ ನಮ್ಮ ಕಣ್ಣಿಗೆ ಕಾಣುತ್ತವೆ.” (ಖಗೋಳಶಾಸ್ತ್ರ ಪ್ರವೇಶ, ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ, ಚತುರ್ಥ ಮುದ್ರಣ ೧೯೬೭, ಪುಟ ೧ – ೨).

ಸಿಎನ್‌ಎಸ್‌ರ ವಿಷಯ ಪ್ರತಿಪಾದನೆ ಹಾಗೂ ಶೈಲಿಗಳಿಗೆ ಇನ್ನೂ ಒಂದು ಉದಾಹರಣೆಯನ್ನು ಉಲ್ಲೇಖಿಸಬಹುದು:

“ಗಣಿತಶಾಸ್ತ್ರದ ಬೆಳವಣಿಗೆಯಲ್ಲೂ ಅಭ್ಯಾಸದಲ್ಲೂ ಮುಖ್ಯವಾಗಿ ಗಮನ ಕೊಡತಕ್ಕ ವಿಷಯಗಳು ಎರಡು ತರ್ಕಪೂರಿತವಾದ ವಾದ ಮತ್ತು ನಿಖರತ್ವವನ್ನು ಸಾಧಿಸಬೇಕೆಂಬ ಉದ್ದೇಶ. ಗಣಿತಶಾಸತ್ರವನ್ನು ಅಭ್ಯಾಸ ಮಾಡುವುದರಿಂದ ಸಾಮಾನ್ಯ ಜನಗಳಿಗೆ ಮುಖ್ಯವಾಗಿ ಆಗುವ ಪ್ರಯೋಜನಗಳು ಇವುಗಳೇ. ಇತರ ವಿಜ್ಞಾನ ಶಾಸ್ತ್ರಗಳಲ್ಲಿ ವಿಚಾರ ಮಾಡಲ್ಪಡುವ ವಿಷಯಗಳಿಗೆ ಸಮಗ್ರವಾದ ತರ್ಕವನ್ನೂ ಸಾಧ್ಯವಾದಷ್ಟು ನಿಖರತ್ವವನ್ನೂ ಒದಗಿಸಿಕೊಡುವುದೇ ಆ ಶಾಸ್ತ್ರಗಳಿಗೆ ಗಣಿತವು ಮಾಡುವಂಥ ಸೇವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಮನಶಾಸ್ತ್ರ ಮುಂತಾದ ಸಾಮಾಜಿಕ ಶಾಸ್ತ್ರಗಳಲ್ಲೂ ಕೂಡ ಗಣಿತದ ಈ ಸೇವೆಯನ್ನು ನೋಡಬಹುದು. ಒಂದೊಂದು ವೇಳೆ ಇತರ ಶಾಸ್ತ್ರಗಳ ಅವಶ್ಯಕತೆಗಳು ಗಣಿತಕ್ಕೆ ಹೊಸ ಭಾವನೆಗಳನ್ನು ಕೊಟ್ಟು ಗಣಿತದ ಶಾಖೆಗಳು ಬೆಳೆದಿವೆ. ಗಣಿತಶಾಸ್ತ್ರಜ್ಞನು ಹೊಸ ಹೊಸ ಮೂಲ ಭಾವನೆಗಳನ್ನು ಅವನಿಗೆ ಸಹಜವಾಗಿ ತೋರುವ ರೀತಿಯಲ್ಲಿ ಕಲ್ಪಿಸುತ್ತ ತರ್ಕದ ಮೇಲೆ ಗಮನವಿಟ್ಟು ಗಣಿತವನ್ನು ಬೆಳೆಸುವನು. ಮೂಲ ಭಾವನೆಗಳು ಜಟಿಲವಾದಷ್ಟೂ ಅವುಗಳಿಂದ ಉತ್ಪನ್ನವಾಗುವ ಗಣಿತವೂ ಕಟುವಾಗುವುದು. ಈ ರೀತಿಯಾಗಿ ಗಣಿತವು ಅನಂತವಾಗಿ ಬೆಳೆಯುತ್ತ ಹೋಗಬಹುದು. ಇಂಥ ಗಣಿತ ಶೋಧನೆಗಳೆಲ್ಲ ಇತರ ಶಾಸ್ತ್ರಗಳಿಗೆ ಉಪಯುಕ್ತವಾಗಬೇಕಾದ ಅವಶ್ಯಕತೆ ಇಲ್ಲ. ಆದರೆ ವಿಜ್ಞಾನಶಾಸ್ತ್ರಗಳು ಬೆಳೆಯುತ್ತ ಹೋಗುವಾಗ ಯಾವ ಸಂದರ್ಭಗಳಲ್ಲಿಯೇ ಅದುವರೆಗೂ ಉಪಯೋಗವಾಗದೇ ಇರುವ ಗಣಿತ ಅಭಿಪ್ರಾಯಗಳೂ ಸಂಶೋಧನೆಗಳೂ ಉಪಯೋಗಕ್ಕೆ ಬರಬಹುದು. ಆದರೆ ಇಂಥ ಸಂದರ್ಭಗಳು ಗಣಿತದ ಎಲ್ಲ ವಿಷಯಗಳಿಗೂ ಬರಲಾರವು. ಈ ವಿಧವಾದ ಉಪಯುಕ್ತತೆಯನ್ನು ಗಣಿತಶಾಸ್ತ್ರಜ್ಞನು ಗುರಿಯಾಗಿಟ್ಟುಕೊಂಡಿರುವುದೂ ಇಲ್ಲ.” (ಗಣಿತಶಾಸ್ತ್ರದ ಸ್ವರೂಪ, ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ, ದ್ವಿತೀಯ ಮುದ್ರಣ ೧೯೬೦. ಪುಟ ೫೩ – ೫೪).

ಆಧುನಿಕ ವಿಜ್ಞಾನದ ಗಹನ ಪರಿಕಲ್ಪನೆಗಳನ್ನು ಕನ್ನಡ ಭಾಷೆಯಲ್ಲಿ ನಿರೂಪಿಸುವುದು ಸಾಧ್ಯವೇ ಎಂಬ ಸಂಶಯಾತ್ಮರಿಗೆ ಸಿಎನ್‌ಎಸ್‌ಪ್ರತ್ಯಕ್ಷ ಪ್ರಯೋಗದಿಂದ ಭ್ರಮನಿರಸನ ಮಾಡಿದ್ದಾರೆ. ವಿಷಯ ಬಲ್ಲವನಿಗೆ ಮತ್ತು ಅದನ್ನು ಇತರರಿಗೆ ತಿಳಿಸಿ ಸಂತೋಷಿಸಬೇಕೆಂಬ ಆಸೆ ಇರುವಾತನಿಗೆ ಭಾಷಾಮಾಧ್ಯಮ ಖಂಡಿತವಾಗಿಯೂ ಅಡ್ಡಬರುವುದಿಲ್ಲ. ಕನ್ನಡದಲ್ಲಿ ಶಾಸ್ತ್ರೀಯ ಹಾಗೂ ಜನಪ್ರಿಯ ವಿಜ್ಞಾನ ವಾಙ್ಮಯವನ್ನು ರಚಿಸುವ ದಿಶೆಯಲ್ಲಿ ಕೆಲಸ ಮಾಡಿದ ಮೊದಲಿಗರಲ್ಲಿ ಶ್ರೀನಿವಾಸ ಅಯ್ಯಂಗಾರ್ಯರಿಗೆ ಹಿರಿಯ ಸ್ಥಾನ ಉಂಟು.

ವಿಷಯಬಲ್ಲಾಂತಾಗೆ ಸಂವಹನವತಿ ಸುಲಭ
ಭಾಷೆಯಲಿ ಭಾವನೆಯನರುಹುವೀ ಯಜ್ಞದಲಿ
ದೇಶ ಕಾಲಾತೀತ ಜ್ಞಾನ ಪ್ರವಹಿಸಿ ಸಂ
ದೇಶ ಬೀರುವುದು: ಅರಿವೊಂದೆ ಗುರು ಅತ್ತಿಸೂನು ||

ಗೌರವ, ಪ್ರಶಸ್ತಿಗಳು

ಭಾರತೀಯ ಗಣಿತಶಾಸ್ತ್ರಕ್ಕೆ, ವಿಶೇಷವಾಗಿ ಖಗೋಳವಿಜ್ಞಾನಕ್ಕೆ, ಶ್ರೀನಿವಾಸ ಅಯ್ಯಂಗಾರ್ಯರು ಸಲ್ಲಿಸಿದ ಸೇವೆ ದ್ವಾರಕಾ ಲಕ್ಷ್ಯವನ್ನು ಇವರತ್ತ ಸೆಳೆಯಿತು. ಇದರ ಫಲವಾಗಿ ಸಿಎನ್‌ಎಸ್‌ಅವರಿಗೆ ಅಖಿಲ ಕರ್ನಾಟಕ ಜ್ಯೋತಿಷಿಕ ಸಂಘದ ತೃತೀಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿತು (೧೯೪೭). ಇದೇ ಸಮ್ಮೇಳನದಲ್ಲಿ ಶಂಕರಾಚಾರ್ಯರು ಶ್ರೀನಿವಾಸ ಅಯ್ಯಂಗಾರ್ಯರಿಗೆ “ಗಣಿತ ಕಳಾನಿಧಿ” ಎನ್ನುವ ಬಿರುದನ್ನು ಅನುಗ್ರಹಿಸಿದರು.

ಭಾರತದಲ್ಲಿ ಒಬ್ಬ ಗಣಿತ ವಿದ್ವಾಂಸನಿಗೆ ದೊರೆಯಬಹುದಾದ ಪರಮ ಗೌರವಗಳಲ್ಲಿ ಒಂದು ಭಾರತೀಯ ಗಣಿತ ಸಂಘದ (Indian Mathematical Society) ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪದವಿ. ಆಂಧ್ರಪ್ರದೇಶದ ವಾಲ್ಟೇರಿನಲ್ಲಿ ನಡೆದ ಈ ಸಂಘದ ೨೮ನೆಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಗೆ ಇವರನ್ನು ಆಹ್ವಾನಿಸಿ ಗೌರವ ಸಲ್ಲಿಸಲಾಯಿತು (೧೯೬೨). ಕನ್ನಡ ಸಾಹಿತ್ಯ ಪರಿಷತ್ತು ತನ್ನ ಚಿನ್ನದ ಹಬ್ಬವನ್ನು ೧೯೭೦ರಲ್ಲಿ ಆಚರಿಸಿತು. ಆ ವೇಳೆ, ಸಿಎನ್‌ಎಸ್‌ಕನ್ನಡ ವಿಜ್ಞಾನವಾಙ್ಮಯ ನಿರ್ಮಾಣಕ್ಕೆ ಸಲ್ಲಿಸಿದ ಕೊಡುಗೆಯನ್ನು ಮೆಚ್ಚಿ, ಪರಿಷತ್ತು ಸಾರ್ವಜನಿಕವಾಗಿ ಅವರನ್ನು ಗೌರವಿಸಿತು.

“ಕನ್ನಡ ವಾಲ್ಮೀಕಿ ರಾಮಾಯಣ”ದ ಕರ್ತೃವಾದ ಶ್ರೀನಿವಾಸ ಅಯ್ಯಂಗಾರ್ಯರನ್ನು ಕನ್ನಡ ಜನ ಬಗೆ ಬಗೆಯಾಗಿ ಪ್ರಶಂಸಿಸಿ ಗೌರವಿಸಿದೆ. ಕನ್ನಡ ವಾಲ್ಮೀಕಿ ಎಂದೇ ಇವರನ್ನು ಅರ್ಥಪೂರ್ಣವಾಗಿ ಕರೆದಿದೆ.

ಬೌದ್ಧಿಕ ರಂಗದಲ್ಲಿ ಸಿಎನ್‌ಎಸ್‌ಸಲ್ಲಿಸಿದ ಸೇವೆ ಬಹು ಮುಖವಾದದ್ದು, ಬಹುಕಾಲ ಉಳಿಯುವಂಥದ್ದು. ಪ್ರಾಧ್ಯಾಪಕರಾಗಿ ಅವರು ಪ್ರಾಚೀನ ಋಷಿಸದೃಶ ಗುರುಗಳು, ಉನ್ನತ ಸಂಶೋಧನ ಮಾರ್ಗದರ್ಶಿಗಳು, ಪ್ರೀತಿಯ “ನಮ್ಮೇಷ್ಟು” ಎಂದೇ ಶಿಷ್ಯಪ್ರಿಯರಾದರು. ಅವರ ಸೇವಾವಧಿ ೧೯೨೩ ರಿಂದ ೧೯೫೫ರ ತನಕ, ಅಂದರೆ ೩೨ ವರ್ಷಗಳಷ್ಟು ದೀರ್ಘಕಾಲ, ವಿಸ್ತರಿಸಿತ್ತು. ವ್ಯಕ್ತಿಶಃ ಇವರು ಬಲು ನಿಷ್ಠಾವಂತ ಮತ್ತು ಪ್ರಾಮಾಣಿಕ ಕ್ರಿಯಾಶೀಲರಾಗಿದ್ದರು. ಆದರೆ ಇವರಿಗೆ ತಮ್ಮ ವೃತ್ತಿಯಲ್ಲಿ ಅನುಗುಣವಾದ ಬಡ್ತಿಯಾಗಲಿ ಪ್ರೋತ್ಸಾಹವಾಗಲಿ ದೊರೆಯಲಿಲ್ಲ. ಲೌಕಿಕ ಯಶಸ್ಸು ಕುರಿತಂತೆ ಇವರು ಪೂರ್ಣ ನಿರ್ಮೋಹಿಗಳು. ನಿಶ್ಚಲ ತತ್ತ್ವಾನ್ವೇಷಣೆಯೊಂದೇ ಲಕ್ಷ್ಯ. ೧೯೩೮ರಲ್ಲಿ ಗಣಿತಶಾಸ್ತ್ರದ ಪ್ರೊಫೆಸರ್‌ಆಗಿ ಬಡ್ತಿ ಪಡೆದ ಸಿಎನ್‌ಎಸ್‌ಮುಂದೆ ೧೯೫೫ರಲ್ಲಿ ಸೆಂಟ್ರಲ್‌ಕಾಲೇಜಿನ ಪ್ರಾಂಶುಪಾಲರಾಗಿ (ಕೇವಲ ೨೦ ದಿವಸಗಳ ಅವಧಿ) ನಿವೃತ್ತರಾದರು. ಮುಂದಿನ ಮೂರು ವರ್ಷ (೧೯೫೫ – ೫೮) ಬೆಂಗಳೂರಿನ ನ್ಯಾಶನಲ್‌ಕಾಲೇಜಿನಲ್ಲಿ ಗೌರವ ಪ್ರೊಫೆಸರ್‌ಆಗಿದ್ದರು. ಆ ವೇಳೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಕರೆಬಂದು ಅಲ್ಲಿಯ ಸ್ನಾತಕೋತ್ತರ ಗಣಿತ ವಿಭಾಗ ಪ್ರಾರಂಭಿಸಲೋಸ್ಕರ ಧಾರವಾಡಕ್ಕೆ ತೆರಳಿದರು. ೧೯೬೩ರ ತನಕ ಅಲ್ಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಸಂಶೋಧಕ ಶಿಷ್ಯರನ್ನು ತರಬೇತುಗೊಳಿಸಿ ಗಣಿತ ವಿಭಾಗಕ್ಕೆ ಅಂತಸ್ತನ್ನೂ ವ್ಯಾಪ್ತಿಯನ್ನೂ ತಂದುಕೊಟ್ಟು ನಿವೃತ್ತರಾದರು.

ಮುಂದಿನ ಎರಡು ವರ್ಷ (೧೯೬೩ – ೬೫) ಅಲ್ಲಿಯೇ ವಿಶ್ವವಿದ್ಯಾಲಯ ಧನಾಯೋಗನೇಮಿತ (University Grants Commission ಸಂಕ್ಷೇಪವಾಗಿ ಯುಜಿಸಿ) ಪ್ರಾಧ್ಯಾಪಕರಾಗಿದ್ದರು. ೧೯೬೫ – ೬೬ರಲ್ಲಿ ನಿವೃತ್ತರಾಗಿ ಬೆಂಗಳೂರಿನ ಸ್ವಗ್ರಹದಲ್ಲಿದ್ದಾಗ ಪುನಃ ಯುಜಿಸಿ ಪ್ರಾಧ್ಯಾಪಕತ್ವದ ಆಹ್ವಾನ ಇವರಿಗೆ ಬಂದಿತು. ಈ ಸಲ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್‌ಕಾಲೇಜ್‌) ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು (೧೯೬೬ – ೬೭). ೧೯೬೭ರಲ್ಲಿ ಪೂರ್ಣವಾಗಿ ನಿವೃತ್ತರಾದರೂ ಆಸಕ್ತ ಸಂಶೋಧಕರಿಗೆ ಯುಕ್ತ ಮಾರ್ಗದರ್ಶನವನ್ನು ತಮ್ಮ ಕೊನೆ ಉಸಿರಿತನಕವೂ ಮುಕ್ತ ಮನಸ್ಸಿನಿಂದ ನೀಡುತ್ತಿದ್ದರು.

ಕನ್ನಡ ವಿಶ್ವಕೋಶಯೋಜನೆ ಪ್ರಾರಂಭವಾದಂದಿನಿಂದಲೂ (೧೯೫೬) ಅದರ ಗಣಿತ ಉಪಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಅಯ್ಯಂಗಾರ್ಯರು ವಿಷಯಗಳ ಹಾಗೂ ಲೇಖಕರ ಆಯ್ಕೆಯಲ್ಲಿ ಉನ್ನತ ಮಾರ್ಗದರ್ಶನ ನೀಡಿದ್ದಾರೆ. ಶಿಷ್ಟ ಮಾನಕವನ್ನು ನಿರ್ಮಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪಠ್ಯಪುಸ್ತಕ ಸಮಿತಿಯ ಗಣಿತ ವಿಭಾಗದ ಸದಸ್ಯರಾಗಿ (೧೯೬೭ – ೭೨) ಸಿಎನ್‌ಎಸ್‌ಶ್ರೇಷ್ಠಮಟ್ಟದ ಗಣಿತ ಗ್ರಂಥಗಳ ಪ್ರಕಟಣೆಗೆ ನೆರವಾದರು. ಸ್ವತಃ ತಾವೇ ಆಧುನಿಕ ಬೀಜಗಣಿತದ ಮೇಲೆ ಉತ್ತಮವಾದ ಒಂದು ಆಕರ ಗ್ರಂಥವನ್ನು ಬರೆದುಕೊಟ್ಟರು ಕೂಡ.

ಈ ದ್ರಷ್ಟಾರರ ಸಮಸ್ತ ಚಟುವಟಿಕೆಗಳಲ್ಲೂ ನಾವು ಗುರುತಿಸುವುದು ಎರಡು ಮುಖ್ಯ ಲಕ್ಷಣಗಳನ್ನು: ಸಿಎನ್‌ಎಸ್‌ರ ವೈಯಕ್ತಿಕ ನಿಷ್ಠಾಪೂರ್ವಕ ನಿರಂತರ ಕಾರ್ಯಶೀಲತೆ, ನಿಷ್ಠಾವಂತ ತರುಣ ಕ್ರಿಯಾಶೀಲರ ತಂಡವನ್ನೇ ರಚಿಸುವಲ್ಲಿಯ ಅವರ ದೂರದೃಷ್ಟಿ ಹಾಗೂ ಔದಾರ್ಯ. ತಮ್ಮ ತರುಣ ಸಹದ್ಯೋಗಿಗಳ ಲೇಖನಗಳು ನಿರೀಕ್ಷಿತ ಗುಣಮಟ್ಟ ಮುಟ್ಟದಿದದ ಸಂದರ್ಭಗಳಲ್ಲಿ ಸ್ವತಃ ತಾವೇ ಆ ಲೇಖನಗಳನ್ನು ತಿದ್ದಿ ಪರಿಷ್ಕರಿಸಿ ಹಿಂದಕ್ಕೆ ಕೊಡುತ್ತಿದ್ದುದು ಇವರ ಕ್ರಮ. ಹಿರಿಮೆ, ಔದಾರ್ಯಗಳಿಗೆ ಪರ್ಯಾಯ ನಾಮ ಸಿಎನ್‌ಎಸ್‌.

ಕನ್ನಡ ವಾಲ್ಮೀಕಿ ಸಿಎನ್ಎಸ್

ಇಸವಿ ೧೯೬೭ರಲ್ಲಿ ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ನಾನು ಗಣಿತ ಉಪನ್ಯಾಸಕನಾಗಿದ್ದೆ. ಮಾರ್ಚ್‌ತಿಂಗಳ ಒಂದು ದಿವಸ ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಿಂದ ನನಗೆ ಕರೆಬಂತು. ಪದವಿಪೂರ್ವ ತರಗತಿಗೆ ನೂತನ ಪಠ್ಯಪಟ್ಟಿ ಅನುಸಾರ ಇಂಗ್ಲಿಷ್‌- ಕನ್ನಡ ಎರಡು ಭಾಷೆಗಳಲ್ಲಿಯೂ ಗಣಿತ ಪಠ್ಯಪುಸ್ತಕವನ್ನು ಬರೆದು ಪ್ರಕಟಿಸಲು ತಮ್ಮ ವಿಭಾಗ ನಿರ್ಧರಿಸಿದೆ ಎಂದು ತಿಳಿಸಿ, ಇದಕ್ಕಾಗಿ ನೇಮಿತವಾಗಿರುವ ಸಮಿತಿಯಲ್ಲಿ ನಾನೊಬ್ಬ ಸದಸ್ಯನಾಗಿರಬೇಕೆಂದು ಅವರು ಕೋರಿದರು. ಅಲ್ಲದೇ ನನ್ನ ಹೆಸರನ್ನು ಡಾ. ಶ್ರೀನಿವಾಸ ಅಯ್ಯಂಗಾರ್ಯರೇ ಸೂಚಿಸಿದ್ದರೆಂದೂ ತಿಳಿಸಿದರು. ಸಿಎನ್‌ಎಸ್‌ಅವರ ಶಿಷ್ಯ, ಸಹದ್ಯೋಗಿ, ಕೊನೆಗೆ ಪರಿಚಿತನೂ ಅಲ್ಲದಿದ್ದ ನನ್ನ ಹೆಸರನ್ನು ಸೂಚಿಸುವಲ್ಲಿ ಅವರು ತಮ್ಮ ಸಹಜ ಔದಾರ್ಯ ಪ್ರದರ್ಶಿಸಿದ್ದರೆಂದು ಮಾತ್ರ ಹೇಳಬಲ್ಲೆ. ಸಮಿತಿಯ ಮೊದಲ ಸಭೆಯಲ್ಲೇ ನಮ್ಮ ಪರಸ್ಪರ ಪರಿಚಯವಾದದ್ದು. ಆ ಗಳಿಗೆಯಲ್ಲೇ ಅವರು ನನ್ನ ಬಗ್ಗೆ ಅಪಾರ ವಾತ್ಸಲ್ಯ ತಳೆದರು. ಅಂದಿನಿಂದ ಮುಂದೆ ಪ್ರತಿ ಮಂಗಳವಾರದ ಅಪರಾಹ್ಣ ಅವರನ್ನು “ಹುಲಿಗಾದ್ರಿ ಸೇವಾ”ದಲ್ಲಿ (ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯಲ್ಲಿರುವ ಅವರ ನಿವಾಸ) ನಾನು ಭೇಟಿ ಮಾಡುವುದು ವಾಡಿಕೆವಾಯಿತು. ಅವರ ಸಾನ್ನಿಧ್ಯದಲ್ಲಿ ನಾನು ಗಣಿತವನ್ನು ಹೊಸತಾಗಿ ಕಂಡೆ, ಕಲಿತೆ; ಬರವಣಿಗೆಯ ವಿಧಾನದಲ್ಲಿ ಹೆಚ್ಚಿನ ನಿರ್ದುಷ್ಪತೆ ಪಡೆದೆ. ಸಾಮಾನ್ಯ ಲೋಹವನ್ನು ಚಿನ್ನವಾಗಿ ಪರಿವರ್ತಿಸಬಲ್ಲ ಸಿಎನ್‌ಎಸ್‌ರ ಪರುಷಸ್ಪರ್ಶ ಒಂದು ವಿಶೇಷ ರಸಾನುಭವ.

೧೯೬೯ರ ಜನವರಿಯ ಒಂದು ಮಂಗಳವಾರದ ಬೈಠಕ್ಕಿನಲ್ಲಿ ಸಿಎನ್‌ಎಸ್‌ತಮ್ಮ ಸಹಜ ಮತ್ತು ನೇರ ಶೈಲಿಯಲ್ಲಿ ಮಾತು ಪ್ರಾರಂಭಿಸಿದರು. “ನಿಮ್ಮೊಡನೆ ಒಂದು ಮಹತ್ವದ ವಿಷಯ ಮಾತಾಡಬೇಕಾಗಿದೆ.”

ನಾನು ಕೇಳಲು ಉತ್ಸುಕನಾಗಿ ಕಣ್ಣು ಅರಳಿಸಿದೆ. ಅವರು ಮುಂದುವರಿಸಿದರು, “ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ಕನ್ನಡ ಗದ್ಯಕ್ಕೆ ಪದಶಃ ಅನುವಾದಿಸಬೇಕೆಂಬ ಪ್ರೇರಣೆ ಶ್ರೀರಾಮನಿಂದ ಬಂದಿತು. ಹದಿನಾಲ್ಕು ವರ್ಷಗಳ ಹಿಂದೆ ತೊಡಗಿದ ಈ ಕಾರ್ಯ ಈಗ ಮುಗಿಯುವ ಘಟ್ಟ ತಲುಪಿದೆ. ಇದು ಮುದ್ರಣಗೊಂಡು ಜನತೆಗೆ ಆದಷ್ಟು ಸುಲಭ ಬೆಲೆಗೆ ದೊರೆಯುವಂತಾದರೆ ನಾನು ಧನ್ಯ. ಬೇರೆ ಯಾವ ಲಾಭವೂ ನನಗೆ ಬೇಡ. ಸಾವಿರಾರು ರೂಪಾಯಿಗಳ ಮೂಲಧನ ಹೂಡಿ ಮುಂದುವರಿಸಬೇಕಾದ ಈ ಪ್ರಕಟಣ ಕಾರ್ಯ ಆರ್ಥಿಕವಾಗಿ ನನ್ನ ಶಕ್ತಿಗೆ ಮೀರಿದದು.” ಹೀಗೆ ಹೇಳಿ ಅನುವಾದದ ಹಸ್ತಪ್ರತಿಗಳ ಬೆಟ್ಟವನ್ನೇ ನನ್ನೆದುರು ತಂದಿಟ್ಟರು.

“ನಾನೇನು ಮಾಡಬೇಕೆಂದು ತಮ್ಮ ಆಪೇಕ್ಷೆ?”

“ಇದರ ಮುದ್ರಣದ ಹೊಣೆ ನಿಮ್ಮದು. ದೇವರು ಇದನ್ನು ನಿಮ್ಮಿಂದ ಮಾಡಿಸುತ್ತಾನೆ.”

“ನನಗೆ ದೇವರಲ್ಲಿ ನಂಬಿಕೆ ಇಲ್ಲ ! ನಾನೊಬ್ಬ ನಾಸ್ತಿಕ.””

“ನಿಮ್ಮ ವ್ಯಕ್ತಿತ್ವವನ್ನು ನಾನು ಕಂಡಿರುವಂತೆ ನೀವೊಬ್ಬ ಆಸ್ತಿಕ ಶ್ರೇಷ್ಠ. ಆದರೆ ಆ ವಿಚಾರ ಈಗ ಬೇಡ. ನನ್ನಲ್ಲಿ ನಿಮಗೆ ನಂಬಿಕೆ ಇದೆಯಷ್ಟೇ”

“ಧಾರಾಳವಾಗಿ !”

“ಹಾಗಾದರೆ ಈ ಮುದ್ರಣ ಸೇವೆ ನಡೆಯಲಿ!”

“ಪ್ರಯತ್ನ ಮಾಡೋಣ.”

ನನ್ನ “ಸಾಮರ್ಥ್ಯ”ದ ಅರಿವಿನಿಂದ ಈ ಉದ್ಗಾರ ಹೊರಟದ್ದಲ್ಲ. ಆ ಹಿರಿಯ ಚೇತನ ಅಷ್ಟೊಂದು ವಾತ್ಸಲ್ಯವನ್ನು ನನ್ನ ಮೇಲೆ ಹರಿಸುವಾಗ ಬೇರೆ ಏನು ತಾನೇ ಹೇಳಲು ಸಾಧ್ಯ?

ಆದಿಕಾವ್ಯ, ಶ್ರೇಷ್ಠ ಧರ್ಮಗ್ರಂಥ. ‘ಉನ್ನತ ಆದರ್ಶಗಳ ವಾಸ್ತವಿಕ ಚಿತ್ರಣ.’ ಭಾರತೀಯ ಸಂಸ್ಕೃತಿಯ ಭಂಡಾರ ಎಂದು ಮುಂತಾಗಿ ಪ್ರಸಿದ್ಧವಾಗಿರುವ ವಾಲ್ಮೀಕಿ ರಾಮಾಯಣ ಹೇಗೆ ಬಾಲಕ ಶ್ರೀನಿವಾಸನನ್ನು ಆಕರ್ಷಿಸಿತು ಎಂಬ ವಿಷಯ ಹಿಂದೆ ಪ್ರಸ್ತಾವಿಸಿದೆ. ಮೊದಲು ಪಾರಾಯಣ ಮುಗಿದು ಪಟ್ಟಾಭಿಷೇಕ ಮಾಡಿದಾಗ ಈ ತರುಣನ ಪ್ರಾಯ ಕೇವಲ ೧೩ ವರ್ಷ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗ ಮೂಡಿದ ಆಸಕ್ತಿ ಶ್ರೀನಿವಾಸ ಅಯ್ಯಂಗಾರ್ಯರ ಜೀವನ ಪರ್ಯಂತವೂ ಸದಾ ವರ್ಧಿಸುತ್ತಲೇ ಇದ್ದು ಅವರ ಸಮಗ್ರ ಜೀವನವನ್ನೂ ಪ್ರಭಾವಿಸಿತು.

ಬಹಳ ವರ್ಷಗಳ ತರುವಾಯ (೧೯೫೦ರ ಸುಮಾರಿಗೆ) ಸಿಎನ್‌ಎಸ್‌ಬೆಂಗಳೂರಿನ ಮಲ್ಲೇಶ್ವರ ನಿವಾಸಿಗಳಾಗಿದ್ದಾಗ ಒಂದು ಘಟನೆ ಸಂಭವಿಸಿತು. ಅಲ್ಲಿಯ ಶ್ರೀರಾಮ ಮಂದಿರದಲ್ಲಿ ಆಗ ಏರ್ಪಡಿಸಿದ್ದ ರಾಮಾಯಣದ ಮೇಲಿನ ಕೆಲವು ವಿಶೇಷೋಪನ್ಯಾಸಗಳನ್ನು ಇವರು ಆಲಿಸಿದರು. ಆಗ ಇವರಲ್ಲಿ ಹೊಸತೊಂದು ಆಸೆ ಅಂಕುರಿಸಿತು: ತಾನೂ ರಾಮಾಯಣವನ್ನು ವಿಮರ್ಶಾತ್ಮಕವಾಗಿ ಅಧ್ಯಯಿಸಿ ವಿಶೇಷೋಪನ್ಯಾಸಗಳನ್ನು ನೀಡಬೇಕೆಂಬ ಬಯಕೆ. ಇದರ ಫಲವಾಗಿ ಇವರು ಮುಂದೆ ಕೆಲವು ತಿಂಗಳುಗಳ ತರುವಾಯ ೨೪ ಉಪನ್ಯಾಸಗಳ ಒಂದು ಮಾಲಿಕೆಯನ್ನೇ ನೀಡಿ ಪಟ್ಟಾಭಿಷೇಕ ಮಾಡಿದರು (ಮಾರ್ಚ್‌೭, ೧೯೫೩). ಕನ್ನಡದಲ್ಲಿ ವಾಲ್ಮೀಕಿ ರಾಮಾಯಣದ ಪದಶಃ ಗದ್ಯಾನುವಾದ ಗ್ರಂಥ ದೊರೆಯದಿರುವುದರ ಕೊರತೆ ಇವರಿಗೆ ಆಗ ಚೆನ್ನಾಗಿ ಮನವರಿಕೆ ಆಯಿತು. ಇದನ್ನು ಪರಿಹರಿಸಲು ಸಾಧ್ಯವಾಗುವಷ್ಟು ಪ್ರಯತ್ನ ತಾನು ಮಾಡಲೇಬೇಕೆಂದು ಆಗ ಇವರು ಸಂಕಲ್ಪಿಸಿದರು. ಆದರೆ ಕಾಲೇಜಿನ ಹೊಣೆಗಾರಿಕೆ ಮತ್ತು ಕಣ್ಣುಗಳ ದೌರ್ಬಲ್ಯ ಇವುಗಳಿಂದಾಗಿ ಈ ಕೆಲಸವನ್ನು ಒಡನೆ ಆರಂಭಿಸಲು ಸಾಧ್ಯವಾಗಲಿಲ್ಲ. ಅಂತೂ ಇಂತೂ ಬರವಣಿಗೆಯ ಆರಂಭ ಆದದ್ದು ೧೯೫೫ನೆಯ ಇಸವಿ ಗಾಯತ್ರಿ ಹಬ್ಬದಂದು. ಆದರೆ ಇದು ನಿರಾತಂಕವಾಗಿ ಏನೂ ಮುಂದೆ ಸಾಗಲಿಲ್ಲ. ಶ್ರೀರಾಮನ ವನವಾಸಾವಧಿಯಷ್ಟೇ ಕಾಲ, ಒಮ್ಮೆ ವೇಗವಾಗಿ ಒಮ್ಮೆ ನಿಧಾನವಾಗಿ ಒಮ್ಮೆ ಸ್ಥಿಗತವಾಗಿ, ಈ ಯಜ್ಞ ಮುಂದುವರಿಯಿತು. ಇದು ಮುಗಿದದ್ದು ೧೯೬೯ರಲ್ಲಿ.

ಇದರ ಮುದ್ರಣ ವಿಚಾರ ಇವರ ಮನಸ್ಸಿಗೆ ಒಮ್ಮೊಮ್ಮೆ ಬಂದದ್ದುಂಟು. ಆದರೆ ಆಗೆಲ್ಲ ಅವರು, “ಬರೆಯುವುದು ನನ್ನ ಕೆಲಸ, ಅದನ್ನು ಹೊರಗೆಡಹಲು ಶ್ರೀರಾಮನೇ ಹೇಗೋ ದಾರಿ ತೋರಿಸುತ್ತಾನೆ.” ಎಂಬ ದೃಢನಂಬಿಕೆಯಿಂದ ಮುದ್ರಣದ ಪ್ರಶ್ನೆಯನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆಯೇ ಬರೆದು ಮುಗಿಸಿದರು.

ಸಿಎನ್‌ಎಸ್‌ರಿಗೆ ಪ್ರಕಟಣೆಯ ವಿಚಾರವಾಗಿ ನಾನು ನೀಡಿದ ಧಿಡೀರ್‌ಆಶ್ವಾಸನೆ ಒಂದು ಪವಾಡದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿದು ಬಂದಿತು. ಅವರ ಶಿಷ್ಯರೂ ಅಭಿಮಾನಿಗಳೂ ಸೇರಿ ಕರ್ನಾಟಕದ ಸುಪ್ರಸಿದ್ಧ ಪ್ರಕಾಶಕರಾದ ಡಿ. ವಿ. ಕೆ ಮೂರ್ತಿಯವರ ನೇತೃತ್ವದಲ್ಲಿ 1600 ಪುಟಗಳ ಈ ಮಹಾಗ್ರಂಥವನ್ನು ಅಭೂತಪೂರ್ವವಾಗಿ ಮುದ್ರಿಸಿ ಪ್ರಕಟಿಸುವುದು ಸಾಧ್ಯವಾಯಿತು (ಕನ್ನಡ ವಾಲ್ಮೀಕಿ ರಾಮಾಯಣ. ಡಿ.ವಿ.ಕೆ. ಮೂರ್ತಿಯವರ ಪ್ರಕಟಣೆ. 1971). ಸದ್ಯ, 2002, ಇದರ ಐದನೆಯ ಆವೃತ್ತಿ ಪ್ರಕಾಶಿತವಾಗಿದೆ.

ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ನಿರೂಪಣೆ, ವರ್ಣನೆ ಹಾಗೂ ಧಾಟಿಗಳಿಗೆ ಒಂದಿಷ್ಟೂ ಊನಬರದಂತೆ. ನಿಖರವಾಗಿ ಮಾಡಿರುವ ಪದರ್ಶ ಅನುವಾದವಿದು. ಅಂದರೆ ಮೂಲದ ಒಂದೊಂದು ಶ್ಲೋಕದ ಸಮಸ್ತಭಾವ ಭಾವನೆಗಳೂ ಸಾಧ್ಯವಾದಲ್ಲಿ ಪದಗಳೂ ಕನ್ನಡ ಗದ್ಯದ ಮರ್ಯಾದೆಗೆ ಹೊಂದುವಂತೆ ಬಟ್ಟಿ ಇಳಿದಿರುವ ಸಾರವೇ ಕನ್ನಡ ವಾಲ್ಮೀಕಿ ರಾಮಾಯಣ. ಸುಂದರಕಾಂಡದಿಂದ ಆಯ್ದ ಒಂದು ಉದಾಹರಣೆಯನ್ನು ಪರಿಶೀಲಿಸಬಹುದು (ಸರ್ಗ 65, ಶ್ಲೋಕ 20 – 27).

ವಿಜ್ಞಾಪ್ಯಶ್ಚ ನರವ್ಯಾಘ್ರೋ ರಾಮೋ ವಾಯುಸುತ ತ್ವಯಾ
ಆಖಿಲೇನೇಹ ಯದ್ದೃಷ್ಟಮಿತಿ ಮಾಮಾಹ ಜಾನಕಿ ||2||

ಅಯಂ ಚಾಸ್ಮೈ ಪ್ರದಾತವ್ಯೋ ಯತ್ನಾತ್ಸುಪರಿರಕ್ಷಿತಃ
ಬ್ರುವತಾ ವಚನಾನ್ಯೇವಂ ಸುಗ್ರೀವಸ್ಯೋಪಶೃಣ್ವತಃ ||22||

ಏಷ ಚೂಡಾಮಣಿಃ ಶ್ರೀಮಾನ್ಮಯಾ ಸುಪರಿರಕ್ಷಿತಃ
ಮನಃ ಶಿಲಾಯಾಸ್ತಿಲಕೋ ಗಂಡಪಾರ್ಶ್ಚೇ ನಿವೇಶಿತಃ
ತ್ವಯಾ ಪ್ರಣಷ್ಟೇ ತಿಲಕೇತಂ ತಿಲಸ್ಮರ್ತುಮರ್ಹಸಿ ||23||

ಏಷ ನಿರ್ಯಾತಿತಃ ಶ್ರೀಮಾನ್ಮಯಾತೇ ವಾರಿಸಂಭವಃ
ಏತಂ ದೃಷ್ಟ್ವಾ ಪ್ರಮೋದಿಷ್ಯೇ ವ್ಯಸನೇ ತ್ವಾಮಿವಾನಘ ||24||

ಜೀವಿತಂ ಧಾರಯಿಷ್ಯಾಮಿ ಮಾಸಂ ದಶರಥಾತ್ಮಜ
ಊರ್ಧ್ವ ಮಾಸಾನ್ನ ಜೀವೇಯಂ ರಕ್ಷಸಾಂ ವಶಮಾಗತಾ ||25||

ಇತಿ ಮಾಮಬ್ರವೀತ್ಸೀತಾ ಕೃಶಾಂಗೀ ವರವರ್ಣಿನೀ
ರಾವಣಾಂತಃಪುರೇ ರುದ್ಧಾ ಮೃಗೀಪೋತ್ಬಲ್ಲ ಲೋಚನಾ ||26||

ಏತದೇವ ಮಯಾಖ್ಯಾತಂ ಸರ್ವಂ ರಾಘವ ಯದ್ಯಾಥಾ
ಸರ್ವರ್ಥಾ ಸಾಗರಜಲೇ ಸಂತಾರಃ ಪ್ರವೀಧೀಯತಾಮಮ್‌|| ||27||

“‘ಎಲೈ ವಾಯುಪುತ್ರನೇ, ಇಲ್ಲಿ ನೋಡಿದ್ದನ್ನು ನೀನು ಸಂಪೂರ್ಣವಾಗಿ ನರಶ್ರೇಷ್ಠನಾದ ರಾಮನಿಗೆ ವಿಜ್ಞಾಪಿಸತಕ್ಕದ್ದು’ ಎಂಬುದಾಗಿಯೂ ನನಗೆ ಸೀತೆ ಹೇಳಿದಳು.” ಸುಗ್ರೀವನಿಗೆ ಕೇಳಿಬರುವಂತೆ ಈ ಮಾತುಗಳನ್ನು ಹೇಳುತ್ತಾ “‘ಯತ್ನದಿಂದ ಬಹಳ ಜಾಗ್ರತೆಯಾಗಿ ಕಾಪಾಡಿದ್ದ ಇದನ್ನೂ ಅಭಿಜ್ಞಾನಸೂಚಕವಾಗಿ ಆತನಿಗೆ ಕೊಡತಕ್ಕದ್ದು. ಸಂಪತ್ಕರವಾದ ಈ ಚೂಡಾಮಣಿಯನ್ನು ನಾನು ಬಹಳ ಜಾಗರೂಕತೆಯಿಂದ ಕಾಪಾಡಿರುವೆನು. ಒಂದು ದಿನ ನಿನ್ನಿಂದ (ನನ್ನ) ತಿಲಕವು ಅಳಿಸಿಹೋದಾಗ ಮಣಿಶಿಲೆಯ ತಿಲಕವನ್ನು ನೀನು ನನ್ನ ಕೆನ್ನೆಯ ಮೇಲೆ ಇಟ್ಟೆ ಅದನ್ನು ಜ್ಞಾಪಕ್ಕೆ ತಂದುಕೊ. ನೀರಿನಲ್ಲಿ ಹುಟ್ಟಿದ ಕಾಂತಿಯುಕ್ತವಾದ ಈ ಮಣಿಯನ್ನು ನಿನಗೆ ಕಳಿಸಿಕೊಟ್ಟಿರುವೆನು. ಎಲೈ ನಿರ್ದೋಷಿಯೇ. ನೀನು ಗುರುತಾಗಿ ಕಳಿಸಿರುವ ಆಭರಣವನ್ನು ನೋಡುತ್ತಾ ನನ್ನ ವ್ಯಸನದಲ್ಲಿ ನಿನ್ನನ್ನು ಕಂಡಂತೆ ಆನಂದಿಸುತ್ತಿರುವೆನು. ದಶರಥಪುತ್ರನೇ, ಇನ್ನೂ ಒಂದು ತಿಂಗಳು ಪ್ರಾಣವನ್ನು ರಕ್ಷಿಸಿಕೊಂಡಿರುವೆನು. ರಾಕ್ಷಸಿಯರ ವಶಕ್ಕೆ ಸಿಕ್ಕಿರುವ ನಾನು ತಿಂಗಳನಂತರ ಬದುಕಿರಲಾರೆನು’ ಎಂದಳು. ಈ ಪ್ರಕಾರ ಕೃಶಳಾದ ದೇಹವುಳ್ಳವಳೂ ಧರ್ಮವನ್ನು ಅನುಷ್ಠಿಸುತ್ತಿರುವವಳೂ ಹರಿಣಿಯಂತೆ ಅರಳಿದ ಕಣ್ಣುಗಳುಳ್ಳವಳೂ ಆದ ಸೀತೆಯು ರಾವಣನ ಅಂತಃಪುರದಲ್ಲಿ ಬಂಧಿತಳಾಗಿ ನನಗೆ ಹೇಳಿದಳು. ಎಲೈ ರಾಮನೇ, ಇದೆಲ್ಲವನ್ನೂ ಆಕೆ ಹೇಳಿರುವಂತೆಯೇ ಹೇಳಿರುವೆನು. ಸರ್ವಥಾ ಸಮುದ್ರದ ನೀರನ್ನು ದಾಟುವುದಕ್ಕಾಗಿ ಏರ್ಪಾಡನ್ನು ಮಾಡುವವನಾಗು.”

ಕನ್ನಡ ವಾಲ್ಮೀಕಿರಾಮಾಯಣ ಮೂಲ ವಾಲ್ಮೀಕಿ ರಾಮಾಯಣದ ಪದಶಃ ಸರಳ ಕನ್ನಡ ಗದ್ಯಾನುವಾದವಾಗಿ ಎಂಥ ಸಾರ್ಥಕ ಕೃತಿ ಆಗಿದೆ ಎನ್ನುವುದನ್ನು ಮೇಲೀನ ಉದಾಹರಣೆಯಿಂದ ತಿಳಿಯಬಹುದು. ಸಂಸ್ಕೃತ ಬಲ್ಲವರಿಗೆ ಈ ಗ್ರಂಥ ಮೂಲವನ್ನು ಇನ್ನಷ್ಟು ವಿಶದವಾಗಿ ಬಿಂಬಿಸುವ ಕೈಗನ್ನಡಿ. ಸಂಸ್ಕೃತ ಅರಿಯದ ಕನ್ನಡಿಗರಿಗಾದರೋ ಆದಿಕವಿಯ ರಸವಂತಿಕೆಯನ್ನೂ ಆತ ಹದವರಿತು ಮಾಡಿರುವ ಪದಪ್ರಯೋಗಗಳನ್ನೂ ಸವಿಯಲು ಇದು ನೇರ ಹಾದಿ. ಮೂಲ ಶ್ಲೋಕಗಳನ್ನು ಹತ್ತಿರ ಇಟ್ಟುಕೊಂಡು ಅಧ್ಯಯನ ಮಾಡಿದ್ದೇ ಆದರೆ ಸಂಸ್ಕೃತ ಭಾಷೆಯ ಸೊಗಸು ಸೊಗಡು ಬೆಡಗುಗಳನ್ನು ಕನ್ನಡದ ಮೂಲಕ ಸವಿಯಬಹುದು. ಈ ಮಹಾಗ್ರಂಥದ ಉದ್ದಕ್ಕೂ ಸಿಎನ್‌ಎಸ್‌ನೀಡಿರುವ ವಿಚಾರಪೂರ್ಣ ಟಿಪ್ಪಣಿಗಳು ಆದಿಕವಿಯ ದಿವ್ಯಜ್ಞಾನದೃಷ್ಟಿಯನ್ನು ಆಧುನಿಕ ವಿಜ್ಞಾನದೃಷ್ಟಿ ಹೇಗೆ ಅರಳಿ ಅರ್ಥವಿಸಿದೆ ಎನ್ನುವುದಕ್ಕೆ ಉತ್ಕೃಷ್ಟ ನಿದರ್ಶನಗಳು.

ಪ್ರಪಂಚ ಇರುವತನಕವೂ ಕನ್ನಡ ಭಾಷೆ ಉಳಿದಿರುತ್ತದೆ. ಕನ್ನಡ ಭಾಷೆ ಇರುವತನಕವೂ ಸಿಎನ್‌ಎಸ್‌ರ ಈ ಧ್ರುವ ಕೃತಿ ಉಳಿದಿರುತ್ತದೆ. ಕನ್ನಡ ವಾಲ್ಮೀಕಿ ರಾಮಾಯಣ ಇರುವತನಕವೂ ಶ್ರೀನಿವಾಸ ಅಯ್ಯಂಗಾರ್ಯರ ಹೆಸರು ಉಳಿದಿರುತ್ತದೆ.

ಕನ್ನಡ ವಾಲ್ಮೀಕಿ ರಾಮಾಯಣ ಅನಾವರಣ ಮಹೋತ್ಸವ ಮುಗಿದಿದೆ (1972). ಕೃತಾರ್ಥ ಸಿಎನ್‌ಎಸ್‌ನನ್ನ ಬಳಿಸಾರಿ “ಈಗಲಾದರೂ ದೇವರನ್ನು ನಂಬುತ್ತೀರೋ?” ಎಂದು ಆತ್ಮೀಯವಾಗಿ ಕುಟುಕಿದರು!

“ಈಗ ಕೂಡ ನಾನು ನಂಬುವುದು ನಿಮ್ಮನ್ನೇ, ನೀವು ಪ್ರತಿನಿಧಿಸುತ್ತಿರುವ ಜೀವನ ಮೌಲ್ಯವನ್ನು, ಅಂತೆಯೇ ಈ ಮೇರುಕೃತಿ ಗರ್ಭಿಸಿಕೊಂಡಿರುವ ಜೀವನ ಸೌಂದರ್ಯೋಲ್ಲಾಸಗಳನ್ನೇ!”

ಹುಲಿಗಾದ್ರಿ ಸೇವಾ ಸಂತ

“ಹುಲಿಗಾದ್ರಿ ಸೇವಾ”ದ ಸಂತ ಶ್ರೀನಿವಾಸ ಅಯ್ಯಂಗಾರ್ಯರು ಧಾರ್ಮಿಕ ಪ್ರವೃತ್ತಿಯವರು, ಆಸ್ತಿಕ ಶಿರೋಮಣಿಗಳು. ಅವರು ಎಂದೂ ತಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿದವರಲ್ಲ. ಇವರ ಒಬ್ಬಳು ಮಗಳು ಕ್ರಿಶ್ಚಿಯನ್‌ಯುವಕನನ್ನು ಪ್ರೀತಿಸಿ, ಮದುವೆ ಆಗುವ ಇಚ್ಛೆ ವ್ಯಕ್ತ ಪಡಿಸಿದಾಗ ಈ ತಂದೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸಿ ಪ್ರೋತ್ಸಾಹಿಸಿದರು, ಮತ್ತು ನವದಂಪತಿಗಳನ್ನು ತಮ್ಮ ಕುಟುಂಬಕ್ಕೆ ಒಲುಮೆಯಿಂದ ಬರಮಾಡಿಕೊಂಡರು. ದೇವರನ್ನು ನಂಬದವರೊಡನೆ ನಂಬಿಕೆಯ ಮಹಿಮೆಯನ್ನು ಕುರಿತು ಎಂದೂ ವಾದಜಾಲ ಬೀಸಿದವರಲ್ಲ, ವಾಗ್ಝರಿ ಹರಿಸಿದವರೇ ಅಲ್ಲ.

“ನಿಮ್ಮ ಆಸ್ತಿಕ ದೃಷ್ಟಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಹೇಗೆ ಸಮನ್ವಯಗೊಳಿಸುತ್ತೀರು?” ಎಂದೊಮ್ಮೆ ಅವರನ್ನು ಪ್ರಶ್ನಿಸಿದ್ದೆ.

“ಏನೋ ಒಂದು ತಪ್ಪು ಕಲ್ಪನೆಯಿಂದ ಈ ಪ್ರಶ್ನೆ ಕೇಳುತ್ತಿದ್ದೀರಿ. ಇವೆರಡು ದೃಷ್ಟಿಗಳೂ ಪರಸ್ಪರ ಸಂಬಂಧ ಇಲ್ಲದವು ಅಥವಾ ವಿರುದ್ಧವಾದವು ಎಂದು ನೀವು ತಿಳಿದಿರುವಹಾಗಿದೆ. ವಾಸ್ತವವಾಗಿ ಇವು ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕ. ಒಂದಿಲ್ಲದೇ ಇನ್ನೊಂದಿಲ್ಲ. ಒಂದಿದ್ದಾಗ ಇನ್ನೊಂದು ಇದ್ದೇ ಇರುತ್ತದೆ.”

“ತಪ್ಪು ತಿಳಿಯಬೇಡಿ. ಸೂರ್ಯಗ್ರಹಣದ ದಿವಸ ನೀವು ತರ್ಪಣ ಬಿಡುತ್ತೀರಿ. ಆದರೆ ಅದೇ ಸೂರ್ಯಗ್ರಹಣ ಕೇವಲ ಒಂದು ಖಗೋಳೀಯ ಘಟನೆ ಎಂದು ಕೂಡ ನೀವೇ ಬೋಧಿಸುತ್ತೀರಿ. ಇವೆರಡು ನಿಲವುಗಳ ನಡುವೆ ಸಮರಸ್ಯ ಹೇಗೆ ತರುತ್ತೀರಿ?”

“ನನ್ನ ವ್ರತಾಚರಣೆ ಕೇವಲ ವೈಯಕ್ತಿಕ. ಅದು ಪರಂಪರೆಯಲ್ಲಿ ನನಗಿರುವ ಶ್ರೆದ್ಧೆಯಿಂದ ಬಂದದ್ದು. ಅದರಿಂದ ನನಗೆ ನೆಮ್ಮದಿ ದೊರೆಯುವುದು ಮಾತ್ರವಲ್ಲ, ನನ್ನ ವೈಜ್ಞಾನಿಕ ಚಿಂತನೆಗೆ ಹೆಚ್ಚಿನ ಬೆಂಬಲವೂ ದೊರೆಯುತ್ತದೆ.”

ನಿಜ. ಸಮಾಜಕ್ಕೆ ಪೀಡಕವಲ್ಲದ ಸ್ವಂತ ವ್ಯಕ್ತಿತ್ವವನ್ನು ಉತ್ತಾರಿಸಬಲ್ಲ ವೈಯಕ್ತಿಕ ನಂಬಿಕೆಯ ಬಗ್ಗೆ ಗೌರವ ತಳೆಯುವುದು ಶ್ರೇಯಸ್ಕರವೆಂದು ಅವರಿಂದ ಕಲಿತೆ.

ಫ್ರೆಬ್ರುವರಿ 19, 1972ರಂದು ಕನ್ನಡ ವಾಲ್ಮೀಕಿ ರಾಮಾಯಣದ ಅನಾವರಣ ಸಮಾರಂಭ ಜರುಗಿತು. ಇದಾದ ಬಳಿಕ ಪದೇ ಪದೇ ಸಿಎನ್‌ಎಸ್‌, “ನನ್ನ ಜೀವನದ ಉದ್ದೇಶವನ್ನು ಶ್ರೀರಾಮ ಸಫಲಗೊಳಿಸಿದ್ದಾನೆ. ಇನ್ನು ಬದುಕಿ ನಾನು ಸಾಧಿಸಬೇಕಾದದ್ದು ಏನೂ ಇಲ್ಲ. ಶ್ರೀರಾಪಾದವನ್ನು ಸುಲಭವಾಗಿ ಸೇರುವುದೊಂದೇ ಈಗ ನನಗೆ ಉಳಿದಿರುವ ಆಸೆ” ಎನ್ನುತ್ತಿದ್ದರು.

“ಇಲ್ಲ, ನಿಮಗಿನ್ನೂ 71 ವರ್ಷ ವಯಸ್ಸು. ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಚಟುವಟಿಕೆಗಳು ಉತ್ಕೃಷ್ಟ ಮಟ್ಟದಲ್ಲಿವೆ. ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತ ಅವರ ಉತ್ಕೃಷ್ಟವನ್ನು ನೋಡಿ ಹಿಗ್ಗುತ್ತ ನೀವು ನೂರ್ಕಾಲ ಮೀರಿ ಬದುಕಬೇಕು” ಎಂಬುದಾಗಿ ನಾವು ಯಾರಾದರೂ ಹೇಳಿದಾಗ ಅವರು ಮೂಕರಾಗಿಬಿಡುತ್ತಿದ್ದರು. ಮಾತನ್ನು ಮತ್ತೂ ನಾವು ಮುಂದುವರಿಸಿದರೆ “ಶ್ರೀರಾಮನ ಇಚ್ಛೆ” ಎಂದು ಅದನ್ನು ಮೊಟಕುಗೊಳಿಸುತ್ತಿದ್ದರು.

ಪ್ರಾಸ್ಟೇಟ್‌ಗ್ರಂಥಿಯ ವ್ಯಾಧಿ ಸಿಎನ್‌ಎಸ್‌ರನ್ನು ಇಳಿವಯಸ್ಸಿನಲ್ಲಿ ಬಾಧಿಸತೊಡಗಿತ್ತು ಯುಕ್ತವೇಳೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದೇ ಇದಕ್ಕೆ ಯೋಗ್ಯ ಮತ್ತು ಪರಿಣಾಮಕಾರೀ ಪರಿಹಾರ. ಆದರೆ ಸಿಎನ್‌ಎಸ್‌ಈ ವ್ಯಾಧಿಯ ವಿಚಾರ ತಮ್ಮ ಮಡದಿ ಮಕ್ಕಳೊಡನೆ ಕೂಡ ಪ್ರಸ್ತಾವಿಸಿರಲಿಲ್ಲ. ಕ್ರಮಬದ್ಧ ಆಹಾರ, ವ್ಯಾಯಾಮ ಮುಂತಾದ ವಿಧಿನಿಯಮಗಳಿಂದ ವ್ಯಾಧಿಯನ್ನು ಹಿಡಿತದಲ್ಲಿರಿಸಿಕೊಂಡಿದ್ದರು. 1972ರ ಮಳೆಗಾಲದಲ್ಲಿ ಇವರಿಗೆ ತೀವ್ರವಾದ ಶೀತಜ್ವರ ಬಂದು ದೈಹಿಕ ಸಾಮರ್ಥ್ಯ ಬಲುವಾಗಿ ಉಡುಗಿಹೋಯಿತು. ಅದೇ ವೇಳೆಗೆ ಪ್ರಾಸ್ಟೇಟ್‌ಗ್ರಂಥಿಯ ವ್ಯಾಧಿ ಉಲ್ಬಣಿಸಿತು ಕೂಡ. ವೈದ್ಯ ಬಂದರು, ಔಷಧಿ ಕೊಟ್ಟರು. ರೋಗ ಹತೋಟಿಗೆ ಬಂದು ದೇಹಾರೋಗ್ಯ ಸುಧಾರಿಸಿದ ಬಳಿಕ ಶಸ್ತ್ರಚಿಕಿತ್ಸೆ ಆಗಲೇಬೇಕು ಎಂದರು. ಸಿಎನ್‌ಎಸ್‌ಗುಣಮುಖರಾಗುತ್ತಿದ್ದಂತೆ ತೋರಿತು. ಮುಖದ ಮೇಲೆ ಪ್ರಸನ್ನಭಾವ ಮೂಡಿತು. ಮನೆಮಂದಿಯನ್ನೂ ಬಂಧುಬಳಗದವರನ್ನೂ ನೋಡಿ ಮಾತಾಡಿದರು, ಮೃದುಹಾಸ ಸೂಸಿದರು.

ಸೆಪ್ಟೆಂಬರ್‌21ರಂದು (1972) ಮಧ್ಯಾಹ್ನದ ಊಟ ಮಾಡುತ್ತಿದ್ದಾಗ ತೀವ್ರವಾಗಿ ಹೃದಯಾಘಾತವಾಯಿತು. ನೇಸರು ಆಗಲೇ ‘ಹುಲಿಗಾದ್ರಿ ಸೇವಾ’ದ ಈ ಬೆಳಕನ್ನು ತನ್ನಡೆಗೆ ಸೆಳೆದು ಪಡುವಲಿಗೆ ಹೊರಳಿತ್ತು.

ತರಣಿಯ ಹೊಂಗದಿರೀ ಜಗವನು ಬಿಡಿಸುವ ಹೊತ್ತಿನೊಳು
ಮರಣದ ಮಾತೇಕಲೆ, ಮನವೆ ನುಡಿ ನುಡಿ ಬೇರೆಯದ
ಭವನವನೆತ್ತಿದೆ ಗಿರಿಧರನೊಲು ಕರಣಗಳಂಚೊಳು ಜೀವ
ಭವಲೀಲಾಕೌತುಕಿ ವಿಶ್ವಂಭರನುತ್ಸವ ಸುಹೃದ
ಸಾವೇ ಕೊನೆ ಮಾತಲ್ಲವೊ, ಮರುಳೇ ಜೀವವು ಅಲ್ಲ
ನೋವಲ್ಲವು ನಲವಲ್ಲವು ಬಂಧನ ಬಿಡುಗಡೆಯಲ್ಲ
ಒಂದಿಲ್ಲದೆ ಮತ್ತೊಂದಿಲ್ಲದ ಪರಿ ಹೊಂದಿರುವಿವಕೂ
ಹಿಂದಿರುವಾನಂದದ ಹನಿಯುರುಳಿತು ಮೂಡಲೊಳಿದೆಕೋ!
– ಪುತಿನ
(1980)

ನುಡಿನೇರ ನಡೆನೇರ ಬಗೆನೇರವಿರಲಿಲ್ಲ
ಮೃಡ ವಿಷ್ಣು ವಾಗೀಶರನುದಿನಂ ನಲಿಯುವರು
ಕೊಡುತಿರು ಸದಾ ಕಣಜ ತುಂಬಿ ಬಿರಿವುದೋ
ಬಿಡು ಶಂಕೆ ಪಾಲಿಸೀ ತತ್ತ್ವವನು ಅತ್ರಿಸೂನು ||