“ಬದುಕು ಜಟಕಾ ಬಂಡಿ”ಯ ನಾಲ್ಕು ಗಾಲಿಗಳು ಮಾನವೀಯತೆ, ನೈತಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕತೆ. ಇವು ಏಕಶ್ರುತಿ – ಸಮಲಯ ಮೇಳನದಲ್ಲಿರುವಾಗ ಬಾಳಬಂಡಿ ಋಜುಪಥಗಾಮಿ ಆಗಿರುತ್ತದೆ, ಮತ್ತು ಸವಾರ ಸಂತೃಪ್ತನಾಗಿರುತ್ತಾನೆ. ಇಲ್ಲದಾಗ ಬಂಡಿ ಹಳಿದಪ್ಪುತ್ತದೆ.

ಮಾನವೀಯತೆ

ಸುಸಂಸ್ಕೃತ ವ್ಯಕ್ತಿಯ ಸಹಜ ಗುಣವಿದು. ಅಖಿಳ ಜೀವಾವಳಿ ಬಗ್ಗೆ ಕರುಣೆ ಇದರ ಮುಖ್ಯ ಲಕ್ಷಣ. ಮಾನವೀಯತೆಯ ಪ್ರಕಟಿತ ರೂಪ ದಯೆ “ದಯೆಯೇ ಧರ್ಮದ ಮೂಲವಯ್ಯಾ.” ಧರ್ಮ ಎಂದರೆ ಸಭ್ಯರು ತಮ್ಮ ವರ್ತನೆಯಲ್ಲಿ ಪಾಲಿಸುವ ಶಿಸ್ತು. ವ್ಯಕ್ತಿಯ ನಡವಳಿಕೆಯನ್ನು ಇದು ವಿಧಿಸುತ್ತದೆ. “ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ.” ಇದರ ವ್ಯಾಖ್ಯಾನ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ! ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.” ಇಲ್ಲಿ “ಕೂಡಲ ಸಂಗಮದೇವ” ಮನುಕುಲವನ್ನು ಪ್ರತಿನಿಧಿಸುತ್ತದೆ. “ಸತ್ಯಂವದ ಧರ್ಮಂಚರ” ಸೂಕ್ತಿಯ ಮಥಿತಾರ್ಥವೂ ಇದೇ: ಸತ್ಯವನ್ನು ನುಡಿ, ಧರ್ಮದಲ್ಲಿ ನಡೆ.

ಗಂಗಾತಟಾಕದಲ್ಲೊಬ್ಬ ಬೌದ್ಧಭಿಕ್ಷು ಅಡ್ಡಾಡುತ್ತಿದ್ದ. ಪ್ರವಾಹದಲ್ಲೊಂದು ಚೇಳು ಕೊಚ್ಚಿಹೋಗುತ್ತಿತ್ತು. ದಯಾಮೂರ್ತಿ ಬಿಕ್ಷು ಒಡನೆ ನೀರಿಗಿಳಿದು ಅದನ್ನೆತ್ತಿ ದಡದ ಮೇಲೆ ಬಿಟ್ಟ. ಆದರೆ ಚೇಳು ಮಾತ್ರ ಆತನ ಅಂಗೈಯನ್ನು ಕುಟುಕಿತು. ಪಾಪ ಬುದ್ಧಿಶೂನ್ಯ ಮೂಕ ಜಂತು ಎಂದುಕೊಂಡ. ಕೆಲವೇ ನಿಮಿಷಗಳಲ್ಲಿ ಚೇಳು ಮತ್ತೆ ನೀರಿಗೆ ಬಿತ್ತು. ಕೂಡಲೇ ಭಿಕ್ಷು ಅದನ್ನೆತ್ತಿ ದಡಹಾಯಿಸಿದ, ಜೊತೆಗೇ ಕುಟುಕು ಪ್ರಸಾದವನ್ನೂ ಪಡೆದ! ಮತ್ತೆ ಮತ್ತೆ ಈ ಸರಣಿಯ ಪುನರಾವರ್ತನೆ ಆಗುತ್ತಿದ್ದುದನ್ನು ಗಮನಿಸಿದ ದಾರಿಹೋಕನೊಬ್ಬ ಪ್ರಶ್ನಿಸಿದ, “ಅಯ್ಯಾ ಭಿಕ್ಷು! ಒಮ್ಮೆ ಆ ಕೃತಘ್ನ ಪ್ರಾಣಿಯನ್ನು ಕಾಪಾಡಿ ಕುಟುಕಿಸಿಕೊಂಡಿರುವ ನೀನು ಪುನಃ ಪುನಃ ಅದೇ ಹೆಡ್ಡತನವನ್ನೇಕೆ ಪ್ರದರ್ಶಿಸುತ್ತಿರುವೆ?”

ಪೂರ್ತಿ ನಿರ್ಯೋಚನೆಯಿಂದ ಭಿಕ್ಷು ಉದ್ಗರಿಸಿದ, “ಕಾಪಾಡುವುದು ನನ್ನ ಧರ್ಮ, ಕುತ್ತುವುದು ಅದರ ಧರ್ಮ!”

ಮಾನವಧರ್ಮ ಪ್ರಾಣಿಧರ್ಮಕ್ಕಿಂತ ಬೇರೆ ಆಗಬೇಕೇ? ಪ್ರಾಣಿವರ್ತನೆ ಅದರ ಸ್ವಭಾವಜನ್ಯವಾದದ್ದು, ಯೋಚನೆಯಿಂದ ಪ್ರಕಟವಾಗುವುದಲ್ಲ. ಆಯಾ ಪ್ರಾಣಿಯಲ್ಲಿ ಆಯಾ ಸ್ವಭಾವವನ್ನು ನಿಸರ್ಗವೇ ಗರ್ಭಿಸಿಟ್ಟಿರುತ್ತದೆ. ಮನುಷ್ಯನಲ್ಲೂ ಈ ಗುಣವಿದ್ದೇ ಇದೆ. ಉದಾಹರಣೆಗೆ ಶಿಶುವರ್ತನೆ ಸ್ವಭಾವಸಿದ್ಧವಾದದ್ದು. ಶಿಶು ಬೆಳೆದು ಅಭಿವರ್ಧಿಸಿದಂತೆ ಅದಕ್ಕೆ ನಾಲ್ಕು ಇತರ ಸೌಕರ್ಯಗಳು ಒದಗಿ ಬರುವುದನ್ನು ಕಾಣುತ್ತೇವೆ: ಸ್ಮರಣೆ, ಚಿಂತನೆ, ಮಾತು ಮತ್ತು ಕೃತಿ. ಎಂದೇ ನಿರ್ದಿಷ್ಟ ಸಂದಿಗ್ಧ ಸಂದರ್ಭದಲ್ಲಿ ವ್ಯಕ್ತಿ ಯೋಚಿಸಿ, ಅವಶ್ಯವಾದರೆ ಪೂರ್ವನಿದರ್ಶನಗಳನ್ನು ನೆನಪಿಸಿಕೊಂಡು, ಯುಕ್ತ ನಿರ್ಧಾರ ತಳೆದು ತದನುಸಾರ ವರ್ತಿಸಬಲ್ಲ. ಇಂಥ ವರ್ತನೆ ಮಾನವೀಯತೆಯಿಂದ ಆದ್ರೀಕೃತವಾಗಿದ್ದು ದಯೆಯಾಗಿ ಪ್ರಕಟವಾಗಬೇಕು. ಭಿಕ್ಷು ಮಾಡಿದ್ದು ಈ ಕೆಲಸವನ್ನೇ ಮನುಷ್ಯನ ಮೂಲ ಇರುವುದೇ ದಯೆಯಲ್ಲಿ ತಾಯಿ ಒಲವಿಂದ ಧಾರೆ ಎರೆವ ದಯೆಯೇ ಮೈವಡೆದು ಶಿಶುವಾಗುವುದಲ್ಲವೇ?

ನೈತಿಕತೆ

ಸಮಾಜಜೀವಿಯಾದ ವ್ಯಕ್ತಿಯ ಆಂತರಂಗಿಕ ಚಿಂತನೆ ಮತ್ತು ಬಾಹಿರಂಗಿಕ ವರ್ತನೆ ಜನರೋಧಿಯಾಗದೆ ಜನೋಪಕಾರಿಯಾಗುವಂತೆ ಆತನ ನಡೆನುಡಿ ಬಗೆಗಳನ್ನು ಪ್ರಭಾವಿಸಿ ನಿಯಂತ್ರಿಸುವ ಗುಣವಿದು. ಜೀವನನಾಣ್ಯದ ಎರಡು ಮಗ್ಗುಲುಗಳು ಮಾನವಿಯತೆ (humanism) ಮತ್ತು ನೈತಿಕತೆ (ethics) ಸರಳವಾಗಿ ಪ್ರೀತಿ ಮತ್ತು ನೀತಿ. ಪ್ರೀತಿಯ ಸೆಲೆ ಹೃದಯ, ನೀತಿಯ ನೆಲೆ ಬುದ್ಧಿ ಜೀವನನಾಣ್ಯಕ್ಕೆ ಚಲಾವಣೆಯನ್ನು ಪ್ರೀತಿಯೂ ಮೌಲ್ಯವನ್ನು ನೀತಿಯೂ ಒದಗಿಸುತ್ತವೆ. ಇವು ಒಂದಕ್ಕೊಂದು ಪೂರಕ ಪೋಷಕವಾಗಿರುವ ಬದುಕು ಸುಗಮವಾಗಿರುವುದು.

ಪ್ರೀತಿಯೊಂದೇ ಇದ್ದರೆ ಬಾಳು ಚುಕ್ಕಾಣಿ ಇರದ ದೋಣಿ ಆಗುತ್ತದೆ ಗೊತ್ತುಗುರಿ ಇಲ್ಲದ ಅಲೆತ. ನೀತಿಯೊಂದೇ ಇದ್ದರೆ ದೋಣಿ ವಿಧಿನಿಷೇಧಗಳ ಉಸುಕಿನಲ್ಲಿ ಹೂತು ಹೋಗುತ್ತದೆ ಅಲ್ಲಾಡಲಾಗದ ಪರಿಸ್ಥಿತಿ. ಪ್ರೀತಿ – ಆರ್ದ್ರೀಕೃತ ನೀತಿ, ನೀತಿ – ನಿಯಂತ್ರಿತ ಪ್ರೀತಿ ಇದು ಸಂತೃಪ್ತ ಜೀವನದ ಸೂತ್ರ.

ಇದೊಂದು ಹಳೆಯ ಕಥೆ. ಆದರೆ ಇದು ಬಿತ್ತರಿಸುವ ಜೀವನ ಮೌಲ್ಯ ಸದಾ ಪ್ರಸ್ತುತ. ವ್ಯಭಿಚಾರಿಣಿಯನ್ನು ಕಲ್ಲುಹೊಡೆದು ಸಾಯಿಸಬೇಕೆಂಬುದು ಆ ಜನಾಂಗದವರ ನೀತಿ. ಹಾಗಾದರೆ ಮಾನವಿಯತೆ? ಅಪರಾಧದ ಮೂಲ ಶೋಧಿಸದೇ ನೀತಿಯನ್ನು ಮರುಕಹೀನವಾಗಿ ಚಲಾಯಿಸುವುದೇ? ಈಗ ಮುಂದಿನ ಎರಡು ಚೌಪದಿಗಳನ್ನು ಓದಿ:

ಹಾದರವ ಮಾಡಿದಾಕೆಗೆ ಮರಣ ದಂಡನೆಯೆ
ಶಾಸ್ತಿ
ಹಿಡಿ ಹೊಡೆ ಕಲ್ಲು!” ಕೇಳಿತಶರೀರೋಕ್ತಿ:
ಹಾದರವಿದೂರ ಬೀರಲಿ ಮೊದಲ ಕೂರ್ಗಣೆಯ?”
ಕೆಡೆದು
ಬಿದ್ದುವು ಕಲ್ಲುಗಳು ನೆಲಕೆ ಅತ್ರಿಸೂನು ||
ಕಾಣು ಧರ್ಮದ ಮೂಲ ದಯೆಯೊಳೆದಿತು ಸಂತ
ವಾಣಿ
. ಆಚರಣೆಯಲಿ? ಭೈವರವನ ತಾಂಡವವು
ಗೋಣ
ಕತ್ತರಿಸುತಿದೆ ಸೋದರರ ಬೇಕಿಲ್ಲ
ಜಾಣತನ
ಶರಣಾಗು ಹೃದಯಕ್ಕೆ ಅತ್ರಿಸೂನು ||

ನೀತಿರಿಕ್ತ ಪ್ರೀತಿಗೆ ಧೃತರಾಷ್ಟ್ರ ಪ್ರತೀಕ, ಪ್ರೀತಿಶೂನ್ಯ ನೀತಿಗೆ (ಅಹಲ್ಯೆಗೆ ಶಾಪವಿತ್ತ) ಗೌತಮ ಋಷಿ ಪ್ರತೀಕ. ಉಭಯ ಸಂದರ್ಭಗಳಲ್ಲಿಯೂ ಜೀವನ ನೌಕೆಗಳು ಸ್ಫೋಟಿಸಿದುವು.

ವೈಚಾರಿಕತೆ

“ಜನರು ವಿಚಾರವಂತರಾಗದಿದ್ದರೆ ಕುರುಡು ನಂಬಿಕೆಗಳ ದಾಸರಾಗಿ ಬದುಕು ಬರಡಾಗುವುದು ಖರೆ” ಇಂಥ ಮಾತುಗಳನ್ನು ಪದೇ ಪದೇ ಕೇಳುತ್ತಿರುವೆವು. ವೈಚಾರಿಕತೆ (rationalism). ಕುರುಡು ನಂಬಿಕೆ (superstition). ನಿರಪೇಕ್ಷ ಚಿಂತನೆ (ಅಂದರೆ ರಾಗ ಭಾವವಿದೂರರಾಗಿ ಸಮಸ್ಯೆಯ ಪರಿಶೀಲನೆ) ಮುಂತಾದ ಪದಗಳನ್ನು ಸಲೀಸಾಗಿ ಚಲಾಯಿಸುವವರಿಗೆ ಈ ಪದಗಳ ಖಚಿತ ವ್ಯಾಖ್ಯೆ ಮತ್ತು ವ್ಯಾಪ್ತಿ ಏನು ಎಂಬ ಪ್ರಶ್ನೆ ಹಾಕಿದರೆ ನಮಗೆ ದೊರೆಯುವುದು ಅಸಂಖ್ಯೆ ಅಸಂಬದ್ಧ ನಿದರ್ಶನಗಳು ಮತ್ತು ಕಂಠತ್ರಾಣ ಪ್ರದರ್ಶನಗಳು!

ಹೀಗೇಕೆ? ನಮ್ಮ ಮಾತಿಗೆ ಅನುಭವದ ಬೆಂಬಲವಿಲ್ಲ. ಅನುಭವಕ್ಕೆ ಕಾಯಕದ ಸತ್ತ್ವ ಇಲ್ಲ. ಇನ್ನು ಕಾಯಕ ಅಥವಾ ದುಡಿಮೆ? ಇದನ್ನು ಸಾಧ್ಯವಾಗುವಷ್ಟು ಮುಂದಕ್ಕೆ ತಳ್ಳಿ ಅಥವಾ ನಿವಾರಿಸಿ, ಬದುಕಿನ ಎಲ್ಲ ಸೌಕರ್ಯ ಸವಲತ್ತುಗಳನ್ನು ಗಳಿಸಿ ಐಷಾರಾಮವಾಗಿ ಬಾಳುವುದರಲ್ಲೇ ಸುಖಕಾಣುತ್ತೇವೆ. ವಾಸ್ತವದಲ್ಲಿ, ಇಂಥ ಹಗಲುಗನಸುಗಳನ್ನು ಕಾಣುತ್ತ ಅವುಗಳಿಗೆ ವೈಚಾರಿಕತೆಯ (?) ಲೇಪನ ಹೊದೆಸುವವರು ಜೀವನದ ನಿಜಸುಖದಿಂದ ವಂಚಿತರಾಗಿರುತ್ತಾರೆ. ಏಕೆಂದರೆ ನಿಸರ್ಗದಲ್ಲಿ ಬಿಟ್ಟಿ ಕೂಳಿಲ್ಲ. ಈ ವಿಶ್ವನಿಯಮಕ್ಕೆ ಯಾರೂ ಎಂಥ ಅಧಿಕಾರಾಡೂಢರೇ ಆಗಲಿ ದೇವಮಾನವರೇ ಆಗಲಿ ಅಪವಾದ ಅಲ್ಲ. ಬಯಲಲ್ಲಿ ಇವನಾರವ. ಇವ ನಮ್ಮವ, ಇವ ಬೇರವ ಎಂಬ ತಾರತಮ್ಯ ನೀತಿ ಇಲ್ಲ.

ಆದ್ದರಿಂದ ಕಾಯಕವೇ ಕೈಲಾಸಾರೋಹಣಕ್ಕೆ ಮೊದಲ ದಿಟ ಮತ್ತು ದಿಟ್ಟ ಹೆಜ್ಜೆ. ನಮಗೆ ನಿಗದಿ ಆಗಿರುವ ಅಥವಾ ನಾವೇ ಆಯ್ದಿರುವ ವ್ಯಕ್ತಿಯಲ್ಲಿ ಮಗ್ನರಾಗಿರುವಾಗ ನಮ್ಮೊಳಗೆ ಹಲವಾರು ಅನುಭವಗಳು ಜಮಾವಣೆ ಆಗುತ್ತವೆ. ಜಗದಲ್ಲಿ ವೃತ್ತಿಗಳು ಎಷ್ಟೊ ಅನುಭವಗಳು ಅಷ್ಟು. ಇವೆಲ್ಲವುಗಳಿಗೂ ಸಾಮಾನ್ಯವಾಗಿರುವ ಒಂದು ಸೂತ್ರವಿದೆ: ಪ್ರತಿಯೊಂದು ಕಾರ್ಯದ ಹಿನ್ನೆಲೆಯಲ್ಲಿ ಒಂದಾದರೂ ಕಾರಣವಿದ್ದೇ ಇರುವುದು, ಅಂತೆಯೇ, ಪ್ರತಿಯೊಂದು ಕಾರಣದ ಪರಿಣಾಮವಾಗಿ ಒಂದಾದರೂ ಕಾರ್ಯ ಜರಗಿಯೇ ಜರಗುವುದು.

ನಿತ್ಯ ಜೀವನದ ಎರಡು ಸರಳ ಉದಾಹರಣೆಗಳು. ಮಗು ಅಳುತ್ತದೆ. ತಾಯಿ ಹಾಲೂಡುತ್ತಾಳೆ. ಮಗು ನಗುತ್ತದೆ. ಇಲ್ಲಿ ಮಗುವಿನ ಅಳು ಕಾರಣ, ತಾಯಿ ಹಾಲೂಡುವುದು ಕಾರ್ಯ; ಮುಂದೆ ತಾಯಿ ಹಾಲೂಡುವುದು ಕಾರಣ, ಮಗು ನಗುವುದು ಕಾರ್ಯ. ಮರದಲ್ಲಿ ಕಳಿತ ಹಣ್ಣು ನೇಲುತ್ತಿದೆ. ಇದ್ದಕ್ಕಿದ್ದಂತೆ ತೊಟ್ಟು ತುಂಡಾಗುತ್ತದೆ. ಹಣ್ಣು ನೆಲಕ್ಕೆ ಕೆಡೆಯುತ್ತದೆ. ಇಲ್ಲಿ ಕೆಡೆತ ಕಾರ್ಯ, ತೊಟ್ಟು ತುಂಡಾಗುವುದು ಕಾರಣ. ಮುಂಜಾನೆ ಆಗಿದೆ. ಕತ್ತಲೆ ಅಡಗಿದೆ. ಇದು ಕಾರ್ಯ ಇದರ ಹಿನ್ನಲೆ ಕಾರಣವೆಂದರೆ ಸೂರ್ಯೋದಯ.

ವಿಶ್ವವ್ಯಾಪಾರಗಳೆಲ್ಲವೂ ಕಾರ್ಯ – ಕಾರಣ ಜಾಲದಿಂದ ಬಂಧಿತವಾಗಿವೆ. ಯಾವುದೇ ಒಂದು ತಿಳಿದಿರುವಾಗ ಇನ್ನೊಂದರ ಅನ್ವೇಷಣೆ ಮನುಜಮತಿಗೊಂದು ಸವಾಲು. ಇದನ್ನೆದುರಿಸುವ ಹಾದಿಯಲ್ಲಿ ನಾಗರಿಕತೆ ಒಂದು ಸೂತ್ರವನ್ನು ಕಂಡುಕೊಂಡಿದೆ: ಕಾರ್ಯರಹಿತ ಕಾರಣವಾಗಲೀ ಕಾರಣರಹಿತ ಕಾರ್ಯವಾಗಲೀ ವಿಶ್ವದಲ್ಲಿಲ್ಲ. ಜೀವನದ ಪ್ರತಿಯೊಂದು ವಿದ್ಯಮಾನವನ್ನೂ ಕಾರ್ಯ – ಕಾರಣ ಪಾತಳಿಯಲ್ಲಿ ಅರ್ಥವಿಸುವುದು ಸಾಧ್ಯವಿದೆ ಎಂದು ಅಂಗೀಕರಿಸಿ ತದನುಸಾರ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮನೋಧರ್ಮವೇ ವೈಚಾರಿಕತೆ.

ಪವಾಡಗಳು ಘಟಿಸುತ್ತವೆ, ಭವಿಷ್ಯವನ್ನು ಕಣಿ ನುಡಿಯಬಹುದು, ಶೂನ್ಯದಿಂದ ವಸ್ತುಸೃಷ್ಟಿ ಸಾಧ್ಯ, ವಾಯುಲಘಿಮಾ (levitation)ಸಾಧನೀಯ ಮುಂತಾದ ನಂಬಿಕೆಗಳು ಪೂರ್ತಿ ಅವೈಚಾರಿಕ. ಏಕೆಂದರೆ ನಿಸರ್ಗದ ಆಧಾರ ಶ್ರುತಿಯಾದ ಕಾರ್ಯ – ಕಾರಣ ಸಂಬಂಧವನ್ನು ಇವು ಉಲ್ಲಂಘಿಸುತ್ತವೆ. ತಿಳಿಯದ ವಿದ್ಯಮಾನವನ್ನು ತಿಳಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ವೈಚಾರಿಕತೆಯ ಲಕ್ಷಣ. ಪವಾಡಕ್ಕೆ ತಳಕು ಹಾಕುವುದು ಕುರುಡು ನಂಬಿಕೆಯ (superstition) ಚಿಹ್ನೆ:

ಏರಿರದ ಬಂಡೆಗಳು ಧರೆಯೊಳಗೆ ನೂರಾರು
ಏರಲಾಗದ
ಶಿಖರ ಸೃಷ್ಟಿಯಲ್ಲಿಲ್ಲವೋ!
ದಾರಿ
ಕಡಿಯುತ ಹೆಜ್ಜೆಯಿಡುವಾತ ದಿಟ್ಟದಿಟ
ಬಾರಿಬಾರಿಗೆ
ಹೊಸತ ಕಾಣುವನು ಅತ್ರಿಸೂನು ||

ವೈಜ್ಞಾನಿಕತೆ

ಮಾನವಮತಿ ನಿಸರ್ಗದ ಜೊತೆ ಕಾರ್ಯ – ಕಾರಣಪಾತಳಿಯಲ್ಲಿ ವೀಕ್ಷಣೆ ಮತ್ತು ಪ್ರಯೋಗಸಹಿತ ವರ್ತಿಸುತ್ತಿರುವಾಗ ಘನಿಸುವ ಅನುಭವ ಮತ್ತು ಅರಿವು ವೈಜ್ಞಾನಿಕತೆ (scientific temper). ನಿಸರ್ಗದ ಅನಂತ ವೈಭವ, ಅಸಂಖ್ಯ ವಿನ್ಯಾಸ ಮತ್ತು ಪ್ರಶಾಂತ ಗತಿಶೀಲತೆ ಮಾನವನ ಕುತೂಹಲಕ್ಕೆ ಸದಾ ಉತ್ತೇಜಕಗಳು ಮತ್ತು ಸವಾಲುಗಳು ಕೂಡ. ಕುತೂಹಲಿಯ ಎದುರು ಎದ್ದು ನಿಲ್ಲುವ ಪ್ರಶ್ನೆಗಳಿಗೆ ಕೊನೆಯೇ ಇಲ್ಲ: ಜನನ – ಮರಣ ಚಕ್ರ ಇದೇ ದಿಶೆಯಲ್ಲಿ ಸದಾ ಉರುಳುತ್ತಿರುವುದೇಕೆ? ಇದಕ್ಕೆ ಸದೃಶವಾದ ಏಕಾದಿಶಾ ಪರಿಕ್ರಮಣವೇ ಅನೇಕ ನೈಸರ್ಗಿಕ ವಿದ್ಯಮಾನಗಳಲ್ಲಿ ಪ್ರಕಟವಾಗುವುದರ ಕಾರಣವೇನು? ತೊಟ್ಟುಕಳಚಿದ ಹಣ್ಣು ಬಾನಿಗೇಕೆ ನೆಗೆಯಬಾರದು?

ನಮ್ಮ ಸಾಧಾರಣ ಅನುಭವ ಬಗೆಹರಿಸಲಾರದ ಇಂಥ ಸರಳ ಪ್ರಶ್ನೆಗಳಿಗೆ ಭಗವಂತ, ನಿಸರ್ಗನಿಯಮ, ಅಧಿಕಪ್ರಸಂಗ ಮುಂತಾಗಿ ಹಾರಿಕೆ ಮಾತು ಹೇಳುವವರು ವಸ್ತುತಃ ಪಲಾಯನವಾದಿಗಳು. ಭಗವಂತನೇ ಇರಬಹುದು, ಆತ ನನಗೊಂದು ಮಿದುಳು ಪ್ರದಾನಿಸಿದ್ದಾನೆ, ಇದರ ಸದುಪಯೋಗದಿಂದ ನಾನೇಕೆ ಆತನ ಮನದ ಒಳನೋಟ ಪಡೆಯಲು ಪ್ರಯತ್ನಿಸಬಾರದು? ಹೀಗೆ ಯೋಚಿಸಿ ನಿಸರ್ಗ ನಿಯಮಾನ್ವೇಷಣೆ ತೊಡಗುವವರೇ ವಿಜ್ಞಾನಿಗಳುವಿಶ್ವಕುರಿತ ವಿಶೇಷ, ವಿಶಿಷ್ಟ ಮತ್ತು ಸಮಗ್ರ ಜ್ಞಾನಶೋಧಕರು.

ವಿಜ್ಞಾನಮಂದಿರದ ಮಣ್ಣು, ಮರಳು ಮತ್ತು ಸುಣ್ಣ ಮೂರು ಆದ್ಯುಕ್ತಿಗಳು (axioms) –ಎಲ್ಲರೂ ಎಲ್ಲ ಕಾಲದಲ್ಲಿಯೂ ಒಪ್ಪುವ ಎಂದೂ ಯಾರಿಂದಲೂ ಅಸಾಧುವೆಂದು ರುಜುವಾತಿಸಲಾಗದ ಸ್ವತಸ್ಸಿದ್ಧಗಳಿವು:

  1. ವಿಶ್ವದಲ್ಲಿ ಕ್ರಮವಿದೆ.
  2. ಈ ಕ್ರಮವನ್ನು ಮಾನವಮತಿ ಗ್ರಹಿಸಿ ಅರ್ಥವಿಸಿ ವ್ಯಾಖ್ಯಾನಿಸಬಲ್ಲದು.
  3. “ಭಗವಂತ ಎಂದೂ ದಾಳ ಒಗೆಯುವುದುಲ್ಲ.”

ವಿಶ್ವದಲ್ಲಿ ಕ್ರಮ (order) ಇರುವುದರಿಂದ ಅನ್ವೇಷಣೆಗೆ ಖಚಿತ ಮಾರ್ಗ ಒದಗುತ್ತದೆ. ಮತ್ತು ಇಂಥ ಅನ್ವೇಷಣೆ ಫಲಪ್ರದವಾಗುತ್ತದೆ. ಮಾನವಮತಿ ಈ ಕ್ರಮವನ್ನು ಗ್ರಹಿಸಿ ಅರ್ಥವಿಸಿದಾಗ ವಿಜ್ಞಾನ (science) ಮಿನುಗುತ್ತದೆ, ಮತ್ತು ಪಾರಂಪರಿಕವಾಗಿ ಇದು ತರುವಾಯದ ಪೀಳಿಗೆಗಳಿಗೆ ಲಭ್ಯವಾಗುತ್ತದೆ. ಮೂರನೆಯ ಆದ್ಯುಕ್ತಿ ಆಲ್ಬರ್ಟ್ ಐನ್‌ಸ್ಟೈನರ (1879 – 1955) ಪ್ರಸಿದ್ಧ ಸೂಕ್ತಿ “ದೇವರು ನವುರು ಎಂದೂ ಕುಹಕಿ ಅಲ್ಲ.” “ಪರಮಾತ್ಮ ಕಪಟ ದ್ಯೂತವಾಡುವುದಿಲ್ಲ” ಎಂದು ಮುಂತಾಗಿ ಇದನ್ನು ವಿವರಿಸುವುದುಂಟು ಅರ್ಥವಿಷ್ಟೆ: ತನ್ನ ರಹಸ್ಯಗಳನ್ನು ಮಾನವನಿಗೆ ಅರುಹಬೇಕೆಂಬ ‘ಅಪೇಕ್ಷೆ’ ನಿಸರ್ಗಕ್ಕಿಲ್ಲ, ಆತನಿಂದ ಬಚ್ಚಿಡಬೇಕೆಂಬ ‘ಸ್ವಾರ್ಥ’ವೂ ಇಲ್ಲ. “ಅಂತಕನ ದೂತರಿಗೆ ಕಿಂಚಿತ್ತು ದಯೆಯಿಲ್ಲ.” ವ್ಯಕ್ತಿಯ ಪ್ರಾಮಾಣಿಕ ಮತ್ತು ಅರ್ಥಪೂರ್ಣ ಪ್ರಯತ್ನಕ್ಕೆ ಅನುಗುಣವಾಗಿ ಫಲನಿಸರ್ಗದಲ್ಲಿ ಎಂತೋ ಅಧ್ಯಾತ್ಮದಲ್ಲಿಯೂ ಅಂತೆ: “ಅವರವರ ದರುಶನಕ್ಕೆ ಅವರವರ ವೇಷದಲ್ಲಿ ಅವರವರಿಗೆಲ್ಲ ಗುರು ನೀನೊಬ್ಬನೆ, ಅವರವರ ಭಾವಕ್ಕೆ ಅವರವರ ಪೂಜೆಗಂ ಅವರವರಿಗೆಲ್ಲ ಶಿವ ನೀನೊಬ್ಬನೆ.” ಇಲ್ಲಿ ಅನುಭಾವಿಗಳು ಯಾವ ವಸ್ತುವನ್ನು ಗುರು ಮತ್ತು ಶಿವ ಎಂದು ಕಾಣುವರೋ ಅದನ್ನೇ ವಿಜ್ಞಾನಿಗಳು ನಿಸರ್ಗ ಮತ್ತು ನಿಸರ್ಗಾಂತರ್ಗತ ಬಲ ಎಂದು ಗುರುತಿಸುವರು. ವಸ್ತು ಒಂದೇ, ದೃಷ್ಟಿ ಬೇರೆ.

ವಿಜ್ಞಾನಮಾರ್ಗದಲ್ಲಿ ಖಚಿತವಾಗಿ ಗುರುತಿಸಬಹುದಾದ ಆರು ವಿವಿಕ್ತ ಸೋಪಾನಗಳಿವೆ: ಸಮಸ್ಯಾನಿರೂಪಣೆ, ಮಾಹಿತಿಸಂಗ್ರಹಣೆ, ವಿಶ್ಲೇಷಣೆ, ವಾದರೂಪಣೆ, ಪ್ರಾಯೋಗಿಕ ತಪಾಸಣೆ ಮತ್ತು ಸಿದ್ಧಾಂತ ಮಂಡನೆ. ದತ್ತ ಸಮಸ್ಯೆ ಕುರಿತಂತೆ ವಿಶ್ಲೇಷಿತ ಮಾಹಿತಿಗಳಿಂದ ಸ್ಫುರಿಸುವ ತಾತ್ಪೂರ್ತಿಕ ಊಹೆಯೇ ವಾದ (hypothesis). ಪ್ರಾಯೋಗಿಕ ತಪಾಸಣೆಯಲ್ಲಿ ಉತ್ತೀರ್ಣವಾಗುವ ವಾದಕ್ಕೆ ಸಿದ್ಧಾಂತ (theory) ಎಂದು ಹೆಸರು.

ಯಾವುದೇ ಸಿದ್ಧಾಂತ ಅರಳಲು ಹಲವಾರು ತಲೆಮಾರುಗಳ ಕಾಲ ಆಸಕ್ತ ತಜ್ಞರು ಪರಿಶ್ರಮಿಸುತ್ತಲೇ ಇರಬೇಕು. ಪ್ರತಿಯೊಬ್ಬ ವಿಜ್ಞಾನವಿದ್ಯಾರ್ಥಿಗೂ ಖಾತ್ರಿ ತಿಳಿದಿರುವ ಒಂದು ತಥ್ಯವಿದೆ: ಸದ್ಯ ಸಿಂಧುವಾಗುವ ಸಿದ್ಧಾಂತಗಳಿವೆ, ಶಾಶ್ವತ ಸಿದ್ಧಾಂತವೇ ಇಲ್ಲ. ಎಂದೇ –

ಸಂದೇಹವೀಕೃತಿಯೊಳಿನ್ನಿಲ್ಲವೆಂದಲ್ಲ
ಇಂದು
ನಂಬಿದುದೆ ಮುಂದೆಂದುಮೆಂದಲ್ಲ
ಕುಂದು
ತೋರ್ದಂದದನು ತಿದ್ದಿಕೊಳೆ ಮನಸುಂಟು
ಇಂದಿಗೀ
ಮತವುಚಿತ ಮಂಕುತಿಮ್ಮ ||

ಮನಸ್ಸಿನ ಇಂಥ ಒಂದು ಪರಿಪಕ್ವ ಸ್ಥಿತಿಗೆ ವೈಜ್ಞಾನಿಕತೆ ಅಥವಾ ವೈಜ್ಞಾನಿಕ ಮನೋಧರ್ಮ (scientific temper) ಎಂದು ಹೆಸರು.

ನಮ್ಮ ನಂಬಿಕೆ, ವೃತ್ತಿ, ಆರ್ಥಿಕಸ್ಥಿತಿ, ವಯಸ್ಸು ಮುಂತಾದವು ಏನೇ ಇರಲಿ, ಬದುಕಿನ ಸಮಸ್ತ ಕ್ರಿಯಾಕಲಾಪಗಳಲ್ಲಿಯೂ ವೈಜ್ಞಾನಿಕ ಮನೋಧರ್ಮ ತಳೆಯುವುದರಿಂದ ಬಾಳು ಹಸನಗುತ್ತದೆ, ಸಮಾಜ ಶ್ರೇಯೋಪಥದಲ್ಲಿ ಮುನ್ನಡೆಯುತ್ತದೆ.

ಸಮನ್ವಯ

ಮಾನವೀಯತೆ – ನೈತಿಕತೆ – ವೈಚಾರಿಕತೆ – ವೈಜ್ಞಾನಿಕತೆ ಪರಸ್ಪರ ಮಧುರ ಮೇಳನದಲ್ಲಿರಬೇಕು. ಒಬ್ಬ ಪರಿಪೂರ್ಣ ಮಾನವನಲ್ಲಿ ಉದಾಹರಣೆಗೆ ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಐನ್‌ಸ್ಟೈನ್‌ಮೊದಲಾದ ದ್ರಷ್ಟಾರರಲ್ಲಿಇವೆಲ್ಲ ಗುಣಗಳೂ ಸಮ್ಮಿಳಿತವಾಗಿರುತ್ತವೆ:

ಬುದ್ಧನೆಂಬವನೇನು ಸಾಮಾನ್ಯ ಪುರುಷನೇ?
ಬುದ್ಧಿ
ಸಂಸ್ಕಾರಕ್ಕೆ ಹೃದಯ ಸಂವೇದನೆಯು
ಬದ್ಧಗೊಂಡಾಗ
ಮೈವಡೆದ ಆದರ್ಶ ಪರಿ
ಶುದ್ಧಾತ್ಮ
ಪರಿಪಕ್ವ ನರತಿಲಕ ಅತ್ರಿಸೂನು ||

ಅತಿರೇಕಸ್ಥಿತಿ

ಇಲ್ಲಿಯತನಕ ವಿವರಿಸಿದ ನಾಲ್ಕು ಗುಣಗಳ ಪೈಕಿ ಒಂದು ಅಥವಾ ಹೆಚ್ಚು ಉಳಿದವನ್ನು ಹಿಮ್ಮೆಟ್ಟಿಸಿ “ವಿಜೃಂಬಿಸುವುದು” ವಿರಳವಲ್ಲ. ಮಾನವೀಯತೆ ಅತಿರೇಕವಾದಾಗ ವ್ಯಕ್ತಿಯ ಅಸ್ತಿತ್ವ ಮತ್ತು ಅನನ್ಯತೆ ನಾಶವಾಗುತ್ತವೆ. ನೈತಿಕತೆ ಔಚಿತ್ಯದ ಸರಹದ್ದು ಮೀರಿದಾಗ ವ್ಯಕ್ತಿ ಶಾಸ್ತ್ರಾಂಧನಾಗಿ ವರ್ತಮಾನ ಜೀವನವಿಮುಖಿ ಆಗುತ್ತಾನೆ. ವೈಚಾರಿಕತೆ ಉಗ್ರವಾದಾಗ ಅದು ಶುಷ್ಕತರ್ಕವಾಗಿ ವಿಕೃತಿಸುತ್ತದೆ. ವೈಜ್ಞಾನಿಕತೆ ತನ್ನದೇ ಸರ್ವಾಧಿಪತ್ಯ ಎಂಬಂತೆ ವರ್ತಿಸುವಾಗ ಪ್ರಪಂಚ ಕ್ರೂರ ಜಂತುಗಳ ದಟ್ಟ ಗೊಂಡಾರಣ್ಯವಾಗುತ್ತದೆ. ಇಂಥ ಒಂದೊಂದು ಮಾನಸಿಕ ಸ್ಥಿತಿಗೂ ಬುದ್ಧ್ಯಂಧತೆ ಅಥವಾ ಸಂಕ್ಷೇಪವಾಗಿ ಅಂಧತೆ (fanaticism) ಎಂದು ಹೆಸರು.

ಮಾನವೀಯತಾಂಧತೆಗೆ ಭರತನನ್ನೂ (ವಾನಪ್ರಸ್ಥಾಶ್ರಮಿ ಭರತ ಮಹಾರಾಜ ಸದ್ಯೋಜಾತ ಅನಾಥ ಹರಿಣಶಿಶು ಬಗ್ಗೆ ಅತಿಶಯ ಮೋಹ ತಳೆದು ಕರ್ತವ್ಯಚ್ಯುತನಾಗಿ ಅದರ ಸ್ಮರಣೆಯಲ್ಲಿಯೇ) ಮಡಿದು ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದಾತ) ನೈತಿಕಾಂಧತೆಗೆ ಜಮದಗ್ನಿ ಋಷಿಯನ್ನೂ (ಪತ್ನಿ ರೇಣುಕೆ ಪರಮಪುರುಷನಿಂದ ಕ್ಷಣಕಾಲ ಆಕರ್ಷಿತಳಾಗಿದ್ದಳೆಂದು ತಿಳಿದು ಆಕೆಯ ಶಿರಚ್ಛೇದನ ಮಾಡಿಸಿದಾತ) ವೈಚಾರಿಕಾಂಧತೆಗೆ ಜನಹಿತವನ್ನು ಅಲಕ್ಷಿಸಿ ಅಭಿವೃದ್ಧಿ ಹೆಸರಿನಲಿ ಪರಿಸರ ನಾಶಮಾಡುವ ಸರ್ಕಾರವನ್ನೂ ವೈಜ್ಞಾನಿಕಾಂಧತೆಗೆ (ಇಂದು scientism ಪದ ಈ ಅರ್ಥದಲ್ಲಿಯೂ scientific temper ವೈಜ್ಞಾನಿಕ ಮನೋಧರ್ಮ ಎನ್ನುವ ಅರ್ಥದಲ್ಲಿಯೂ ಬಳಕೆ ಆಗುತ್ತಿವೆ) ನೈಸರ್ಗಿಕ ಬಲ ಹಾಗೂ ಸಂಪನ್ಮೂಲಗಳನ್ನು ಸ್ವಾರ್ಥಸಾಧನೆಗೋಸ್ಕರ ಬಳಸುವ ವಿಜ್ಞಾನಿ – ರಾಜಕಾರಣಿಗಳನ್ನೂ ಪರಿಗಣಿಸಬಹುದು. ನೀತಿ: ಅತಿ ಸರ್ವತ್ರವರ್ಜಯೇತ್‌.

ನಾಲ್ಕು ಗುಣಗಳಲ್ಲಿ ಮಾನವೀಯತೆಗೆ ಮಾತೃಸ್ಥಾನ. ಇದರ ಒರೆಗಲ್ಲಿನಲ್ಲಿ ಚಿನ್ನವಾಗದ ನೈತಿಕತೆ ಶುಷ್ಕ ವಿಧಿನಿಷೇಧಗಳ ಜಾಲಿಬನ, ವೈಚಾರಿಕತೆ ಒಣವಾದಗಳ ಬಂಜರು ನೆಲ, ಮತ್ತು ವೈಜ್ಞಾನಿಕತೆ ಮನುಕುಲನಾಶಕ ರಣರಂಗ.

ಧರ್ಮ, ವಿಜ್ಞಾನ

ಬಾಳ ಬಂಡಿಗೆ ನೂಕುಬಲ ಒದಗಿಸುವ ಹಿಂಗಾಲಿಗಳು ವೈಚಾರಿಕತೆ ಮತ್ತು ವೈಜ್ಞಾನಿಕತೆ ಒಟ್ಟಾಗಿ ವಿಜ್ಞಾನ (science); ಗುರಿ ಕಾಣಿಸುವ ಮುಂಗಾಲಿಗಳು ಮಾನವೀಯತೆ ಮತ್ತು ನೈತಿಕತೆ ಒಟ್ಟಾಗಿ ಧರ್ಮ (religion). ಐನ್‌ಸ್ಟೈನರ ಸುಪ್ರಸಿದ್ಧ ಸೂಕ್ತಿ ಇವೆರಡರ ಅವಿನಾ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ: ಧರ್ಮರಹಿತ ವಿಜ್ಞಾನ ಕುಂಟು (ಪಂಗು); ವಿಜ್ಞಾನರಹಿತ ಧರ್ಮ ಕುರುಡು (ಅಂಧ). ಮೊದಲನೆಯ ಸಂದರ್ಭದಲ್ಲಿ ಗುರಿ ಎಟುಕದು, ಎರಡನೆಯದರಲ್ಲಿ ಹಾದಿ ಕಾಣದು, ಧರ್ಮ – ವಿಜ್ಞಾನ ಸಮನ್ವಯವೇ ಅರ್ಥಪೂರ್ಣ ಗತಿಶೀಲ ಜೀವನದ ಮರ್ಮ. ಬುದ್ಧ ಎಂದೋ ಈ ತಥ್ಯವನ್ನು ಒಂದು ವಿಧೇಯಕವಾಗಿ ಮಂಡಿಸಿದ್ದಾನೆ:

ನಂಬದಿರು ಏನನ್ನೂ
ಅದು
ನಿನಗೆ ಹೇಳಲ್ಪಟ್ಟಿದೆ ಎಂಬ ಒಂದೇ ಕಾರಣಕ್ಕಾಗಿ
ಅಥವಾ
ಅದು ಪಾರಂಪರಿಕ ಎಂಬ ಕಾರಣಕ್ಕಾಗಿ
ಅಥವಾ
ನೀನೇ ನಿನ್ನಷ್ಟಕ್ಕೆ ಅದನ್ನು ಕಲ್ಪಿಸಿಕೊಂಡಿರುವೆ ಎಂಬ ಕಾರಣಕ್ಕಾಗಿ
ನಿನ್ನ
ಉಪಾಧ್ಯಾಯ ನಿನಗೆ ಹೇಳುವುದನ್ನು
ಆತನ
ಬಗೆಗಿನ ಗೌರವ ಎಂಬ ಒಂದೇ ಕಾರಣಕ್ಕಾಗಿ ನಂಬದಿರು
ಬದಲು
ತೀಕ್ಷ್ಮಣ ಪರೀಕ್ಷೆ ಮತ್ತು ವಿಶ್ಲೇಷಣಾನಂತರ
ಯಾವುದು
ಸಮಸ್ತ ಜೀವಿಗಳ
ಶ್ರೇಯೋಭಿವೃದ್ಧಿಗೆ
ಕಾರಣವೋ
ತತ್ತ್ವವನ್ನು ನಂಬು
ಮತ್ತು
ಅದಕ್ಕೆ ಶರಣಾಗು
ಮತ್ತು
ಅದನ್ನು ನಿನ್ನ ಜೀವನ ಮಾರ್ಗದರ್ಶಿ ಎಂದು ಸ್ವೀಕರಿಸು ||

ವಿಜ್ಞಾನ ಗಮನದಲಿ ವಿಶ್ವವೆ ಚಿರನಿತಷ
ಪ್ರಾಜ್ಞಮತಿ
ಸೃಷ್ಟಿ ನಿಯಮಾನ್ವೇಷಣೆಯ ಮಹಾ
ಯಜ್ಞದಲಿ
ತಾದಾತ್ಮ ವೈದಿಹಿ ಸ್ಫುರಿಸುವಾ
ಆಜ್ಞೇಯತೆಯ
ಹೊಳಹು ವಿಜ್ಞಾನ ಅತ್ರಿಸೂನು ||
(2004)