ಸಮಸ್ಯಾನಿರೂಪಣೆ: ಇದು ವಿಜ್ಞಾನಿಯ ಅಧ್ಯಯನೋದ್ದೇಶವನ್ನು ಸ್ಪಷ್ಟಪಡಿಸುತ್ತದೆ ಮತ್ತು ಸೀಮಿತಗೊಳಿಸುತ್ತದೆ.

ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ: ಉದ್ದೇಶಗಾಮಿಯಾಗಿರಲು ಅವಶ್ಯವಾಗುವ ಪರಿಕರಗಳನ್ನು ಇದು ನಿರ್ಧರಿಸಿ ಕಲೆಹಾಕಿ ನೇರ್ಪುಗೊಳಿಸುತ್ತದೆ.

ಊಹಾರೂಪಣೆ ಮತ್ತು ತಪಾಸಣೆ : ವಿಶ್ಲೇಷಿತ ಮಾಹಿತಿಗಳಿಂದ ಬಟ್ಟಿ ಇಳಿಸಿದ ಸಾರವೇ ಊಹೆ ಅಥವಾ ವಾದ (hypothesis)ಇದನ್ನು ಮೂಲ ಸಮಸ್ಯೆಗೆ ಅನ್ವಯಿಸಿ ಊಹೆಯ ಸಾಚಾತನವನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ಹಂತವಿದು.

ಸಿದ್ಧಾಂತ ಮಂಡನೆ: ದತ್ತ ಸಮಸ್ಯೆಯ (ಅಥವಾ ‘ಕಾರ್ಯ’ದ) ಹಿನ್ನೆಲೆಯಲ್ಲಿರುವ ಪರಿಹಾರ (ಅಥವಾ ‘ಕಾರಣ’)ಇದು ಎಂಬ ತೀರ್ಮಾನ.

ಸಮಸ್ಯೆಗೆ ಒದಗಿದ ವರ್ತಮಾನ ಪರಿಹಾರವೇ ಸಿದ್ಧಾಂತ. ಶಾಶ್ವತ ಪರಿಹಾರವೆಂಬುದು ಕಾಲ್ಪನಿಕ ಆದರ್ಶ ಮಾತ್ರ. ಏಕೆಂದರೆ ದೇಶ ಕಾಲಗಳಲ್ಲಿ ವಿಶ್ವದ ಅನಂತಾಲ್ಪಾಂಶವಾಗಿರುವ ಮಾನವ ಅದರ ಅಗಾಧತೆಯನ್ನು ಎಂದೂ ಗ್ರಹಿಸಲಾರ ಅಥವಾ ನಿರ್ವಹಿಸಲಾರ:

ಸಂದೇಹವೀಕೃತಿಯೊಳಿನ್ನಿಲ್ಲವೆಂದಲ್ಲ
ಇಂದು
ನಂಬಿಹುದೆ ಮುಂದೆಂದುಮೆಂದಲ್ಲ
ಕುಂದು
ತೋರ್ದಂದದನು ತಿದ್ದಿಕೊಳೆ ಮನಸುಂಟು
ಇಂದಿಗೀ
ಮತವುಚಿತ ಮಂಕುತಿಮ್ಮ ||

ವಿಜ್ಞಾನದ ಅನಿವಾರ್ಯ ಅವಶ್ಯಕತೆಯಾಗಿ ಈ ವಿಧಾನ ಮೈದಳೆದಿದೆ, ನಿಜ. ಇಂತಿದ್ದರೂ ಇದು ಬದುಕಿನ ಎಲ್ಲ ತೊಡಕುಗಳಿಗೂ ಅನ್ವಯಶೀಲವಾಗಬಲ್ಲ ಒಂದು ಸಮರ್ಥ ಉಪಕರಣ ಎಂಬುದು ಗಮನಾರ್ಹ, ಅಷ್ಟು ಮಾತ್ರ ಇದೇ ವಿಜ್ಞಾನ ಅಥವಾ ಸಿದ್ಧಾಂತ ಅಲ್ಲ. ಇದು ನುರಿತ ಶಸ್ತ್ರವೈದ್ಯನ ಕುಶಲ ಕರಗಳಲ್ಲಿಯ ಬಾಳು (knife) ಆಗಿ ರೋಗಿಗೆ ನವಜೀವನದಾಯಕ ಸಂಜೀವಿನೀ ಆಗಬಹುದು, ಕ್ರೂರ ಕಟುಕನ ಕಠೋರ ಕರಗಳಲ್ಲಿಯ ಕರವಾಲವಾಗಿ ನಿರಪರಾಧಿಗಳ ಗೋಣುಕತ್ತರಿಸುವ ಅಂತಕದೂತವೂ ಆಗಬಹುದು. ಉಪಕರಣವಲ್ಲ, ಅದರ ಹಿನ್ನೆಲೆಯಲ್ಲಿರುವ ಮನಸ್ಸು, ಸಂಕಲ್ಪ ಅಥವಾ ಉದ್ದೇಶ ಮುಖ್ಯವೆಂಬುದು ಇಂಗಿತ.

ಸಮಸ್ಯೆ ಯಾವುದೇ ಇರಲಿ ಕಲೆ, ವಿಜ್ಞಾನ ಅಥವಾ ಜೀವನ ವ್ಯಕ್ತಿ ಅದರ ಪರಿಹಾರಾನ್ವೇಷಣೆಯಲ್ಲಿ ಪೂರ್ಣಮಗ್ನನಾಗಿರುವಾಗ ಆತನ ಮನಸ್ಸಿಗೆ ಒಂದು ಹದ, ಸ್ಥಿತಿ ಅಥವಾ ಪಾಕ ಒದಗುತ್ತದೆ. ಆ ಸ್ಥಿತಿಯಲ್ಲಿ ನಾನುತನಕ್ಕೆ ಇನಿತೂ ಅವಕಾಶವಿಲ್ಲ, ನಾನು (ವ್ಯಕ್ತಿ) ನಿಮಿತ್ತ ಮಾತ್ರ ನೀನೇ (ಸಮಸ್ಯೆ) ಸರ್ವಸ್ವ, ನಾನು ನಿನ್ನೊಳಗೆ ಐಕ್ಯ ಆದಂಥ ತುರೀಯಾವಸ್ಥೆ. ಮನಸ್ಸಿನ ಈ ಹದಕ್ಕೆ ‘ವೈಜ್ಞಾನಿಕ ಮನೋಧರ್ಮ’ ಎಂದು ಹೆಸರು. ತತ್ತ್ವಶಾಸ್ತ್ರಮಾರ್ಗವಾಗಿ ಗಮನಿಸಿದರೆ ಈ ಸ್ಥಿತಿ ‘ಸ್ಥಿತಪ್ರಜ್ವತ್ವ’. ಸ್ಥಿತಪ್ರಜ್ಞನ ಲಕ್ಷಣಗಳನ್ನು ಶ್ರೀಮದ್ಭಗವದ್ಗೀತೆಯಲ್ಲಿ ವಿವರಿಸಿದೆ (ಸೋಮನಾಥಾನಂದರ ‘ಗೀತಾಭಾವಧಾರೆ’ಯಿಂದ ಉದ್ಧೃತ):

ಸ್ಥಿತಪ್ರಜ್ಞಸ್ಯಕಾಭಾಷಾ ಸಮಾಧಿಸ್ಥಸ್ಯ ಕೇಶವ
ಸ್ಥಿತದೀಃ
ಕಿಂಪ್ರಭಾಷೇತ ಕಿಮಾಸೀತ ಪ್ರಜೇತ ಕಿಮ್‌||

“ಕೇಶವ! ಸಮಾಧಿಯಲ್ಲಿರುವ ಸ್ಥಿತಿಪ್ರಜ್ಞನ ಲಕ್ಷಣಗಳೇನು? ಅವನು ಹೇಗೆ ಮಾತಾಡುತ್ತಾನೆ? ಹೇಗೆ ಕುಳಿತುಕೊಳ್ಳುತ್ತಾನೆ? ಹೇಗೆ ನಡೆದುಕೊಳ್ಳುತ್ತಾನೆ?”

ಪ್ರಜಹಾತಿ ಯದಾ ಕಾಮಾನ್ ಸರ್ವಾನ್ಪಾರ್ಥ ಮನೋಗತಾನ್
ಆತ್ಮನೈವಾತ್ಮನಾತುಷ್ಟಃ
ಸ್ಥಿತಪ್ರಜ್ಞಸ್ತದೋಚ್ಯತೇ ||
ದುಃಖೇಷ್ವನುದ್ವಿಗ್ನಮನಾಃ
ಸುಖೇಷು ವಿಗತಸ್ಪೃಹಃ
ವೀತರಾಗಭಯ
ಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ||
ಯಃ
ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಮ್
ನಾಭಿನಂದತಿ
ನದ್ವೇಷ್ಟಿ, ತಸ್ಯ ಪ್ರಜ್ಞಾಪ್ರತಿಷ್ಠಿತಾ ||

“ಪಾರ್ಥ! ಮನಸ್ಸಿನಲ್ಲಿರುವ ಕಾಮನೆಗಳನ್ನು ಬಿಟ್ಟು ಯಾವಾಗ ಆತ್ಮನಲ್ಲಿ ಆತ್ಮನಿಂದಲೇ ಸಂತುಷ್ಟನಾಗಿರುವನೋ ಆಗ ಸ್ಥಿತಪ್ರಜ್ಞ ಎನಿಸುತ್ತಾನೆ. ದುಃಖದಲ್ಲಿ ಉದ್ವೇಗಗೊಳ್ಳದವನು, ಸುಖದಲ್ಲಿ ಆಸೆ ಇಲ್ಲದವನು, ರಾಗಭಯಕ್ರೋಧಗಳನ್ನು ಗೆದ್ದವನಾದ ಮುನಿ ಸ್ಥಿತಪ್ರಜ್ಞ ಯಾರು ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಪ್ರಿಯ ಅಪ್ರಿಯ ವಿಷಯಗಳನ್ನು ಪಡೆದಾಗ ಸಂತೋಷಿಸುವುದೂ ಇಲ್ಲವೋ ದ್ವೇಷಿಸುವುದೂ ಇಲ್ಲವೋ ಅವನ ಪ್ರಜ್ಞೆ ಸ್ಥಿರವಾಗಿರುವುದು”

ಪುರಂದರದಾಸರು ಸ್ಥಿತಪ್ರಜ್ಞನ ( = ವೈಜ್ಞಾನಿಕ ಮನೋಧರ್ಮಯುತನ) ಲಕ್ಷಣ ವರ್ಣಿಸಿದ್ದಾರೆ:

ಇರಬೇಕು ಇರದಿರಬೇಕು ಸರಿ
ಸಾರದಿ
ಜನಕಾದಿ ಋಷಿಗಳಂತೆ ||
ಮಿಥಿಲಾ
ಪಟ್ಟಣವು ದಹಿಸಿತೆಂಬುವ ಕೇಳಿ
ಮಿಥಿಲೇಶ
ಮಮ ಕಿಂಚಿನ್ನದಹ್ಯತೇಎಂಬಂತೆ ಇರಬೇಕು ||
ದಧೀಚಿ
ಋಷಿ ತನ್ನ ಅಸ್ಥಿ ಸುರರಿಗಿತ್ತು
ಮಧುವೈರಿ
ವೈಕುಂಠ ಪುರವಿತ್ತ ತೆರದಂತೆ ಇರಬೇಕು ||

ಅಲ್ಲಮನ ಈ ಮುಂದಿನ ವಚನ ಸ್ಥಿತಪ್ರಜ್ಞತ್ವದ ಬಗ್ಗೆ ಹಲವು ಹನ್ನೊಂದು ಸ್ತರಗಳಲ್ಲಿ ವಿವಿಧ ಅರ್ಥಗಳನ್ನು ಧ್ವನಿಸುತ್ತದೆ:

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆಹೋಗಿ
ಮೇದು
ಬಂದೆನೆಂದರೆ ಅದ ಕಂಡು ಬೆರಗಾದೆ!
ರಕ್ಕಸಿಯ
ಮನೆಗೆ ಹೋಗಿ
ನಿದ್ದೆಗೆಯ್ದು
ಬಂದೆನೆಂದರೆ ಅದ ಕಂಡು ಬೆರಗಾದೆ!
ಜವನ
ಮನೆಗೆ ಹೋಗಿ
ಸಾಯದೆ
ಬಂದೆನೆಂದರೆ ಅದ ಕಂಡು ಬೆರಗಾದೆ! ||

ಅಂತರ್ಬೋಧೆ ಅಥವಾ ಪ್ರತಿಭಾನ

ವಿಜ್ಞಾನ ಮತ್ತು ಕಲೆ ಎರಡರ ಮೂಲಕವೂ ನಿಸರ್ಗ. ಮಾನವನ ಪ್ರಖರ ಚಿಂತನ ಮತ್ತು ಸೃಜನಶೀಲ ಮತಿ ನಿಸರ್ಗದ ಜೊತೆ ವರ್ತಿಸಿದಾಗ, ಆಯಾ ಕ್ರಿಯೆಯ ಪರಿ ಅವಲಂಬಿಸಿ ವಿಜ್ಞಾನದ ಅಥವಾ ಕಲೆಯ ಧಮನಿ ಸೆಲೆಯೊಡೆಯುತ್ತದೆ. ಉಭಯ ಸನ್ನಿವೇಶಗಳಲ್ಲಿಯೂ ಅಂತರ್ಬೋಧೆಯ ಪಾತ್ರ ಮಹತ್ತ್ವಪೂರ್ಣವಾದದ್ದು. ಅಂತರ್ಬೋಧೆ ಅಥವಾ ಪ್ರತಿಭಾನ (intuition) ಎಂದರೆ, ಅಪ್ರಯತ್ನಿತವಾಗಿಯೋ ಎಂಬಂತೆ, ಹಠಾತ್ತನೆ ಸಂಭವಿಸುವ ಸತ್ಯದರ್ಶನ, ವಿದ್ಯುದಾಲಿಂಗನ. ಇದರಲ್ಲಿ ತರ್ಕಕ್ಕೆ ಎದ್ದು ಕಾಣುವಂಥ ಪಾತ್ರ ಏನೂ ಇಲ್ಲ. ವೈಜ್ಞಾನಿಕ ವಿಧಾನದಲ್ಲಿ ವಿಶ್ಲೇಷಿತ ಮಾಹಿತಿಯಿಂದ ಊಹೆ ಅಥವಾ ವಾದವನ್ನು ಆಸವಿಸುವಾಗ, ಶಿಲ್ಪದಲ್ಲಿ ಚಾಣದ ಒಂದು ವಿಶಿಷ್ಟ ಚಳಕದಿಂದ ವಿಗ್ರಹಕ್ಕೆ ಜೀವ ಆವಾಹಿಸುವಾಗ ಅಥವಾ ಕಾವ್ಯದಲ್ಲಿ ನಿರ್ದಿಷ್ಟ ಪದ ಪ್ರಯೋಗದಿಂದ ಭವಿಷ್ಯವನ್ನೇ ಮಾರ್ಪಡಿಸುವಾಗ, ಅಥವಾ ಕಾವ್ಯದಲ್ಲಿ ನಿರ್ದಿಷ್ಟ ಪದ ಪ್ರಯೋಗದಿಂದ ಭವಿಷ್ಯವನ್ನೇ ಮಾರ್ಪಡಿಸುವಾಗ (ಅಶ್ವಾತ್ಥಾಮೋ ಹತಃ ಕುಂಜರಃ) ಅಂತರ್ಬೋಧೆ ಮುಂಚೂಣಿಯಲ್ಲಿರುತ್ತದೆ.

ಕುಂಚಕಲಾವಿದ ವಿ. ಎಂ. ಶೋಲಾಪುರ್ಕರರಿಗೆ ಅಭಿಮಾನಿಗಳು Poet of the wood ಎಂಬ ಪ್ರೀತಿಯ ಬಿರುದು ನೀಡಿದ್ದಾರೆ: ವೃಕ್ಷಕವಿ ಅಥವಾ ದಾರುಕವಿ. ಅಷ್ಟಾವಕ್ರಾಕೃತಿಯ, ಹೆಚ್ಚಿನವರಿಂದ ಉಪೇಕ್ಷಿತವಾದ, ಮರದ ಚೌಬೀನೆ ಇವರ ಲಕ್ಷ್ಯ ಸೆಳೆಯುತ್ತದೆ: ಇದರ ಒಳಗೆ ಮಿಡಿಯುತ್ತಿರುವ ನಿಸರ್ಗಶಿಲ್ಪಿಯ “ಕಾವ್ಯ” ಇವರ ಕಿವಿಗಳಿಗೆ ಕೇಳಿಸುವುದೋ ಎಂಬಂತೆ, ಹೃದಯತಜ್ಞನಿಗೆ ನಾಡಿಮಿಡಿತ ರೋಗಿಯ ಆರೋಗ್ಯದರ್ಶನ ಮಾಡಿಸುವುದಿಲ್ಲವೇ, ಹಾಗೇ ಶೋಲಾಪುರ್ಕರ್‌ಪೂರ್ಣ ಭರವಸೆಯಿಂದ ನುಡಿಯುತ್ತಾರೆ: “ನೀವು ಮಾಡಬೇಕಾದ್ದಿಷ್ಟೆ ಕಲೆಯನ್ನು ಕವಿದಿರುವ ಅ – ಕಲೆಯ ತೊಗಟೆಯನ್ನು ತರಿದೊಗೆದುಬಿಡಿ, ನಿಸರ್ಗದ ಇನ್ನೂ ಒಂದು ನವಸ್ವನಕ್ಕೆ ಕಿವಿಯನ್ನು ಶ್ರುತಿಗೊಳಿಸಿ!” ಶಿಲೆಯಲ್ಲಿ ಗೊಮ್ಮಟನನ್ನು ಗುರುತಿಸುವ, ಮರದಲ್ಲಿ ಕಸೂತಿಯನ್ನು ಕಾಣುವ, ಅಂತೆಯೇ ಮಾಹಿತಿಗಳ ಗೋಜಲಿನಲ್ಲಿ ನಿಸರ್ಗದ ಸೂತ್ರವನ್ನು ಹೆಕ್ಕುವ ದಿವ್ಯ ದೃಷ್ಟಿಯೇ ಅಂತರ್ಬೋಧೆ. ಇದರ ಹಠಾತ್‌ಉತ್ಸರ್ಜನೆಗೆ ಕಾರಣವಾಗುವ ವ್ಯಾಧಾಸ್ತ್ರಪ್ರಯೋಗ ಯಾವುದು? ಅದು ನಿಸರ್ಗವೇ ಎಂಬುದು ಸಂದೇಹಾತೀತತಥ್ಯ. ಹಾಗಾದರೆ ಎಲ್ಲರೂ ಏಕೆ ವಾಲ್ಮೀಕಿ ಆಗುವುದಿಲ್ಲ? ಆರ್ಕಿಮಿಡೀಸ್‌ಎತ್ತರ ಐದುವುದಿಲ್ಲ?

ವರ್ನರ್‌ಹೈಸನ್‌ಬರ್ಗ್‌(1901 – 76) ಆಧುನಿಕ. ಅಂದರೆ 20ನೆಯ ಶತಮಾನದ ಅಥವಾ ನ್ಯೂಟನ್‌- ಉತ್ತರಕಾಲೀನ, ಭೌತವಿಜ್ಞಾನದಲ್ಲಿ ಒಬ್ಬ ಶಕಪುರುಷ. ಅನಿಶ್ಚಿತತಾತತ್ತ್ವದ (Uncertainty Principle)ಮಂಡನಕಾರ ಆಧುನಿಕ ಭೌತವಿಜ್ಞಾನದಲ್ಲಿ ಅನಿಶ್ಚಿತತಾತತ್ತ್ವ ಒಂದು ಖಚಿತ ನಿರ್ಣಾಯಕ ಉಕ್ತಿ, ಕೆಪ್ಲರ್‌ಆವಿಷ್ಕರಿಸಿದ ಗ್ರಹಚಲನ ನಿಯಮಗಳಂತೆ ಮತ್ತು ನೊಬೆಲ್‌ಪ್ರಶಸ್ತಿ ಪುರಸ್ಕೃತ. ಇವರು ತಮಗೆ ಅನಿಶ್ಷಿತತಾತತ್ತ್ವದ ಹೊಳಹು ಹೇಗೆ ಮಿನುಗಿತು ಎಂಬುದಕ್ಕೆ ಒಂದು ವಿವರಣೆ ನೀಡಿದ್ದಾರೆ. 1925 ಮೇ ತಿಂಗಳ ಕೊನೆಯ ಪಾದ. ಪರಾಗಜ್ವರ (hay fever)ಪೀಡಿತ ಹೈಸನ್‌ಬರ್ಗ್‌ಸ್ವಸ್ಥಳದಿಂದ – ಅಂದರೆ ಹೂ, ಹುಲ್ಲು, ಧೂಳು, ಪರಾಗ ಮುಂತಾದ ಜ್ವರಕಾರಕ ಕಲ್ಮಷಗಳಿದ್ದ ಪ್ರದೇಶದಿಂದ ದೂರದ ಕಡಲ ಕಿನಾರೆಗೆ ವಿಶ್ರಾಂತಿ ಪಡೆಯುವ ಸಲುವಾಗಿ ತೆರಳಿದರು. ಅಲ್ಲಿ, ಕಲ್ಮಷವಿದೂರ ಕಡಲತಡಿಯಲ್ಲಿ, ನಿಸರ್ಗದ ಮಡಿಲಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ಅವರಿಗಾಯಿತೊಂದು ವಿನೂತನ ದರ್ಶನ. ಹೈಸನ್‌ಬರ್ಗ್‌ಉವಾಚ:

“[ನಾನು ಸಾಗಿದಪಥದಲ್ಲಿ ದೊರೆತ] ಮೊದಲ ಪದಗಳು ಶಕ್ತಿತತ್ತ್ವದೊಂದಿಗೆ ಸಮರ್ಪಕವಾಗಿ ಹೊಂದಿಕೊಂಡಿರುವಂತೆ ಭಾಸವಾದುವು [ಅಂದರೆ ಗಣಿತಗಣನೆಗಳು ವಾಸ್ತವತೆಯನ್ನು ಯಥಾವತ್ತಾಗಿ ಪ್ರತಿಬಿಂಬಿಸುವುವೆಂಬ ಅನುಭವ]. ನಾನು ಉನ್ಮಾದಾವಸ್ಥೆ ತಲುಪಿದೆ. ಫಲವಾಗಿ ಅಂಕೆ ಸಂಖ್ಯೆಗಳ ಬಿಡಿ ಎಣಿಕೆಗಳಲ್ಲಿ ಅಸಂಖ್ಯೆ ದೋಷಗಳು ನುಸುಳಿದುವು. ಇವನ್ನೆಲ್ಲ ಸಾವಧಾನವಾಗಿ ನಿವಾರಿಸಿ ಸ್ಫುಟಗಣನೆಗಳ ಕೊನೆ ತಲುಪಿದಾಗ – ಅಥವಾ ಅದೇ ನನ್ನೆದುರು ಅನಾವರಣಗೊಂಡಾಗ ಮುಂಜಾನೆ ಗಂಟೆ 3 ಆಗಿತ್ತು. ಆಗ ಶಕ್ತಿತತ್ತ್ವು ಸಕಲ ಪದಗಳಿಗೂ ಸಮರ್ಪಕವಾಗಿ ಎರಕಗೊಂಡಿತ್ತು! ಎಂದೇ ನನ್ನ ಗಣನೆಗಳು ಮುನ್ನಡೆಸಿದ ಆ ಶಕಲ ಬಲವಿಜ್ಞಾನಪ್ರಕಾರದಲ್ಲಿ ಕಂಡ ಗಣಿತೀಯ ಸುಸಾಂಗತ್ಯ ಮತ್ತು ಸುಸಂಬದ್ಧತೆಯಿಂದ ಗಾಬರಿಗೊಂಡೆ. ಪರಮಾಣುವಿಕ ವಿದ್ಯಮಾನಗಳ ಮೂಲಕ ನಾನು ವಿಚಿತ್ರವೂ ಸುಂದರವೂ ಆದ ಆಂತರ್ಯವನ್ನು ಸಮೀಕ್ಷಿಸುತ್ತಿರುವೆನೆಂಬ ಭಾವನೆ ಸುಳಿಯಿತು. ನಿಸರ್ಗ ನನ್ನ ಎದುರು ಇಷ್ಟೊಂದು ಸಮೃದ್ಧವಾಗಿ ಬಿತ್ತರಿಸಿದ ಗಣಿತೀಯ ಸಂರಚನೆಯ ಸಂಪತ್ತನ್ನು ಶೋಧಿಸಬೇಕೆಂಬ ಯೋಚನೆಯೇ ನನಗೆ ಬವಳಿ ಬರುವಂತೆ ಮಾಡಿತು. ನಿದ್ರಿಸಲಾಗದಷ್ಟು ಉದ್ರಿಕ್ತನಾಗಿದ್ದೆ. ಅಲ್ಲಿ ಕಡಲಿನೆಡೆಗೆ ಚಾಚಿಕೊಂಡಿದ್ದ ಕಲ್ಲಬಂಡೆ ಏರಬೇಕೆಂಬುದು ನನ್ನ ಬಲುದಿನಗಳ ಬಯಕೆ. ಈಗ ಅದನ್ನು ಯಾವ ತೊಂದರೆಯೂ ಇಲ್ಲದೆ ಈಡೇರಿಸಿದೆ, ಮತ್ತು ಸೂರ್ಯೋದಯವನ್ನು ಪ್ರತೀಕ್ಷಿಸುತ್ತ ನಿಂತೆ.”

ಬಂಡೆ ಮಂಡೆ ಏರಿದಾಗ ಅವರು ಕಂಡ ಬಾನಕೆಂಡವೇ ಅನಿಶ್ಚಿತತಾ ತತ್ತ್ವ. ಆ ಪರ್ವ ದಿನಗಳಂದು ಹೈಸನ್‌ಬರ್ಗ್‌ತಮ್ಮ ಆಪ್ತರಿಗೆ ಬರೆದ ಕಾಗದ ಅವರ ಆ ಮುಹೂರ್ತದ ಮನಃಸ್ಥಿತಿಗೆ ಹಿಡಿದ ಕನ್ನಡಿ:

“ಸಂದ ಕೆಲವು ವಾರಗಳು ನಿಜಕ್ಕೂ ಪರಮ ಉದ್ದೀಪನಕಾರಿಗಳಾಗಿದ್ದುವು. ನಾನು ಏನನ್ನು ಅನುಭವಿಸಿರುವೆ ಎಂಬುದನ್ನು, ಪ್ರಾಯಶಃ, ಒಂದು ಸಾದೃಶ್ಯದ ಮೂಲಕ ಉತ್ಕೃಷ್ಟವಾಗಿ ಚಿತ್ರಿಸಬಲ್ಲೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಪ್ರಯತ್ನ ಪ್ರಯುಕ್ತಿಸಿ, ಪರಮಾಣುವಿಕ ಸಿದ್ಧಾಂತದ ಮೂಲಭೂತ ಶೃಂಗವೊಂದಕ್ಕೆ, ಇನ್ನೂ ಅಜ್ಞಾತವಾಗಿರುವ ಆರೋಹಣವನ್ನು ಪ್ರಯತ್ನಿಸಿರುವೆನು. ಮತ್ತೆ ಈಗ ಆ ಶೃಂಗ ನೇರ ಕಣ್ಣ ಮುಂದೆ ನಿಂತಿದ್ದು ಪರಮಾಣುವಿಕ ಸಿದ್ಧಾಂತದಲ್ಲಿಯ ಅಂತರಸಂಬಂಧಗಳ ಸಮಗ್ರ ಪ್ರಸ್ಥಭೂಮಿಯೇ ಹಠಾತ್ತನೆ ಎದುರಿಗೆ ಪ್ರತ್ಯಕ್ಷವಾಗಿದೆ. ಈ ಅಂತರಸಬಂಧಗಳು, ತಮ್ಮ ಸರ್ವಗಣಿತೀಯ ಅಮೂರ್ತಿಕರಣ ಸಹಿತ, ಊಹಾತೀತ ಸರಳತೆಯ ಮಾನಕವನ್ನು ಪ್ರದರ್ಶಿಸುತ್ತಿರುವುದೊಂದು ಅನರ್ಘ್ಯ ವರ ತೀರ ವಿನೀತರಾಗಿ ಇದನ್ನು ಸ್ವೀಕರಿಸುವುದೊಂದೇ ನಾವು ಮಾಡಬೇಕಾದದ್ದು. ಪ್ಲಾಟೋ ಕೂಡ ಇವು ಇಷ್ಟು ಸುಂದರವಾಗಿವೆ ಎಂದು ನಂಬಿರಲಾರ. ಕಾರಣ: ಈ ಅಂತರಸಂಬಂಧಗಳನ್ನು ಉಪಜ್ಞಿಸಲಾರೆವು (cannot invent) ವಿಶ್ವದ ಆದಿ ದಿನಗಳಿಂದಲೂ ಇವು ಅಲ್ಲಿ ಇದ್ದುವು.”

ಗ್ರೀಕ್ ತತ್ತ್ವಶಾಸ್ತ್ರಕೋವಿದ ಪ್ಲಾಟೋ (ಕ್ರಿಪೂ 427? – 346) ಇಂಥ ಸಂದರ್ಭವನ್ನು ಮಾನವಮತಿಯ ಕಾಲ್ಪನಿಕ ನಿರ್ಮಿತಿ ವಿಶ್ವದಲ್ಲಿ ಭೌತಸತ್ಯವಾಗಿ ಎದುರಾಗುವ ವಿರಳ ಸನ್ನಿವೇಶವನ್ನು ಮುಂಗಂಡಿದ್ದಾನೆ: “ಸುಂದರತೆಯ ಆ ದೃಶ್ಯದಿಂದ ಜೀವ ಗಂಭೀರ ಭೀತಿಗ್ರಸ್ಥವಾಗಿ ತಲ್ಲಣಿಸುತ್ತದೆ. ಭಯದಿಂದ ಕಂಪಿಸುತ್ತದೆ. ಏಕೆಂದರೆ, ಇಂದ್ರಿಯಗಳು ಬಹಿರ್ವಲಯದಿಂದ ತನಗೆ ಪ್ರದಾಯಿಸಿರದ, ಆದರೆ ಗಭೀರ ಅಪ್ರಜ್ಞಾ ಪ್ರದೇಶದಲ್ಲಿ ಪೂರ್ವಭಾವಿಯಾಗಿಯೇ ಪ್ರತಿಷ್ಠಾಪನೆಗೊಂಡಿದ್ದು ಸದಾ ಉಪಸ್ಥಿತವಿರುವ ಏನೋ ಒಂದು ತನ್ನೊಳಗೆ ಉತ್ಥಾನಿಸಿದೆ ಎಂಬ ಭಾವ ಜೋವದೊಳಗೆ ಸುಳಿಯುತ್ತದೆ.”

ಕನಕದಾಸರು ಹಾಡಿರುವಂತೆ “ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ ಬಯಲು ಆಲಯವೆರಡು ನಯನದೊಳಗೊ!”

ತೀ. ನಂ. ಶ್ರೀಕಂಠಯ್ಯನವರು (1906 – 66) ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಬರೆದಿರುವ ನುಡಿಗಳು ಸಾರ್ವಕಾಲೀಕ ಮತ್ತು ಸಾರ್ವದೈಶಿಕವಾಗಿವೆ:

“ಪ್ರತಿಭೆಯೇ ಕಾವ್ಯಜನನಿ. ಅದಿಲ್ಲದಿದ್ದರೆ ಕವಿಗೆ ಲೇಶ ಮಾತ್ರವೂ ವಸ್ತುವೇ ಇಲ್ಲ ‘ತಸ್ಮಿಂಸ್ತು ಅಸತಿ ನ ಕಿಂಚಿದಪಿ ಕವೇಃ ವಸ್ವಸ್ತಿ.’ ಪ್ರತಿಭೆಯ ಕಣ್ಣು ತೆರೆದಾಗಲೇ ಕವಿಗೆ ‘ದರ್ಶನ’ ಲಭಿಸುವುದು, ಸೃಷ್ಟಿ ನಡೆಯುವುದು, ವರ್ಣ ಸಾಧ್ಯವಾಗುವುದು. ಆದರೆ ಈ ಪ್ರತಿಭಾವ್ಯಾಪಾರಕ್ಕೆ ಮೊದಲಿನಿಂದ ಕೊನೆಯ ತನಕವೂ ನಿಯಾಮಕವಾದ ಮತ್ತೊಂದು ತತ್ತ್ವ ಉಂಟು. ಅದೇ ರಸಾವೇಶ.” [ಓದಿ : ಕಾವ್ಯ = ವಿಜ್ಞಾನ, ಕವಿ – ವಿಜ್ಞಾನಿ]

ಮೋಡಗಳ ಸಂಚಯನ (ಓದಿ : ತಪಸ್ಸು) ದೀರ್ಘಕಾಲಿಕ ಮತ್ತು ಅಸಂಖ್ಯ ಪ್ರಭಾವಾವಲಂಬಿ ಪ್ರಕ್ರಿಯೆ. ಮಿಂಚಿನ (ಓದಿ : ಪ್ರತಿಭೆ, ಪ್ರತಿಭಾನ) ಛಳುಕೋ? ಶಕ್ತಿಯ ಹಠಾತ್‌ಉತ್ಸರ್ಜನೆ. ಅಂತರ್ಬೋಧೆ ಅಥವಾ ಪ್ರತಿಭಾನ ಕುರಿತಂತೆ ಖುದ್ದು ನನ್ನೊಳಗೆ ಮಿಂಚಿದ ಒಂದು ಹೊಳಹನ್ನು ಇಲ್ಲಿ ನಿರೂಪಿಸಬಹುದು.

1979ರಲ್ಲಿ ಐನ್‌ಸ್ಟೈನ್‌ಜನ್ಮಶತಾಬ್ದಿ. ಆ ಹೊತ್ತಿಗೆ ಪ್ರಕಟಿಸುವ ಸಲುವಾಗಿ ಅವರ ವಿಜ್ಞಾನ ಜೀವನಚರಿತ್ರೆಯನ್ನು ಕನ್ನಡದಲ್ಲಿ ಬರೆಯಲು ತೊಡಗಿ ಕೊನೆಯ ಅಂಕವನ್ನೂ ತಲುಪಿದೆ. ಅದು ಅವರ ಮರಣ, ಅಂದರೆ ಯುಗಪುರುಷನ ನಿರ್ಯಾಣ. ಈ ಕೇವಲ ಭೌತಿಕ ಆದರೆ ಮಹಾ ಮೌಲಿಕ ಘಟನೆಯನ್ನು ನುಡಿಗಳಲ್ಲಿ ಕಡೆಯುವುದು ಹೇಗೆ? ಚಿಂತನೆ, ವಾಚನ, ಪ್ರಯತ್ನ, ವೈಫಲ್ಯ, ರಾಮಾಯಣಾದಿ ಮಹಾಕಾವ್ಯಗಳ ಅಧ್ಯಯನ ಹೀಗೆ ಈ ಚಕ್ರ ಉರುಳಿತು: “ದಾರಿ ಯಾವುದಯ್ಯಾ ವೈಕುಂಠಕ್ಕೆ ದಾರಿ ತೋರಿಸಯ್ಯಾ!” ಆಗ ಸ್ಫುರಿಸಿತು ಒಂದು ತಂತ್ರ (ನೋಡಿ : “ಐನ್‌ಸ್ಟೈನ್‌ಬಾಳಿದರಿಲ್ಲಿ” ಪುಸ್ತಕದಲ್ಲಿ ‘ಸೂತ್ರಛೇದನೆ’ ಅಧ್ಯಾಯ). ಅಲ್ಲಿಯೂ ಚರಮಗೀತೆ ಏನು ಬರೆಯೋಣ? ಏನನ್ನು ಉಲ್ಲೇಖಿಸೋಣ. ಆ ಚಡಪಡಿಕೆಯ ದಿನಗಳಂದು ಎಂದೋ ಒಂದು ಮುಂಜಾನೆಯ ಅರೆನಿದ್ದೆಯಲ್ಲಿ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ!”: ನನಗೆ ಚಿರಪರಿಚಿತವೂ ಬಲು ಪ್ರಿಯವೂ ಆಗಿದ್ದ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಮೃದುವಾಗಿ ಬೀರಿತು “ಮಂದಹಾಸಾ.” ಇದು ಕವಿ ಗೋಪಾಲಕೃಷ್ಣ ಅಡಿಗರ (1918 – 92)‘ಮೋಹನ ಮುರಲಿ’ ಕವನದ ಕೊನೆಯ ಸಾಲು.

“ಚಂದ್ರಶೇಖರ್‌ಪರಿಮಿತಿ” ಖ್ಯಾತಿಯ (ಬೃಹನ್ಕ್ಷತ್ರಗಳ ವಿಕಾಸ ಪಥವನ್ನು ಈ ವಿಶ್ವಭೌತಸ್ಥಿರಾಂಕ ನಿರ್ಣಯಿಸುತ್ತದೆ) ಸುಬ್ರಹ್ಮಣ್ಯನ್‌ಚಂದ್ರಶೇಖರ್‌(1910 – 95) ಇಂಥ ದಿವ್ಯಾನುಭವವನ್ನು ವರ್ಣಿಸಿರುವ ಪರಿ: “ಮಾನವಮತಿ ತನ್ನ ಗಬೀರತಮ ಮತ್ತು ಪರಮ ಪ್ರಗಲ್ಭ ನೆಲೆಯಲ್ಲಿ ಸುಂದರ ಎಂದು ಪರಿಭಾವಿಸುವ ವಸ್ತು ಬಾಹ್ಯ. ನಿಸರ್ಗದಲ್ಲಿ ಪ್ರತ್ಯಕ್ಷವಾಗುವುದು ನಿಜಕ್ಕೂ ಕಲ್ಪನಾತೀತ ಸಂಗತಿಯೇ ಸರಿ. ಬುದ್ಧಿಗಮ್ಯವಾದದ್ದು ಸುಂದರವೂ ಹೌದು.”

ಇನ್ನೊಮ್ಮೆ ಬರೆದರು: “ವಿಜ್ಞಾನದ ಅನುಶೀಲನೆಯನ್ನು (pursuit) ಬಹುತೇಕ ಪರ್ವತಾರೋಹಣಕ್ಕೆ ಹೋಲಿಸುವುದುಂಟು ಸಾಕಷ್ಟು ಎತ್ತರದ ಬೆಟ್ಟಗಳನ್ನೂ ಅಷ್ಟೇನು ಎತ್ತರದವಲ್ಲದ ಗುಡ್ಡಗಳನ್ನೂ ಹತ್ತುವುದು. ಆದರೆ ಆಕಾಶ ನೀಲವಾಗಿದ್ದು ಮಾರುತ ನಿಸ್ಪಂದವಾಗಿರುವಾಗ ಹಿಮಾಲಯ ಏರಿ, ಶಿಖರ ತಲಪಿ, ಅನಂತಕ್ಕೆ ವ್ಯಾಪಿಸಿಕೊಂಡಿರುವ ಮಂಜಿನ ಜ್ವಲಂತ ಪರಿಶುಭ್ರತೆಯಲ್ಲಿ ಮತ್ತು ನಿಶ್ಚಲವಾಯುವಿನ ನೀರವತೆಯಲ್ಲಿ ಸಮಗ್ರ ಹಿಮಾಲಯ ಶ್ರೇಣಿಯನ್ನೇ ಸರ್ವೇಕ್ಷಿಸಲು ನಮ್ಮ ಪೈಕಿ ಯಾರು ತಾನೇ ಕಲ್ಪನೆಯಲ್ಲಾದರೂ ಹವಣಿಸಿಯಾನು? ನಿಸರ್ಗ ಕುರಿತಂತೆ ತತ್ಸದೃಶ ದರ್ಶನ ಲಭಿಸೀತೆಂದು ನಾವು ಯಾರೂ ಆಶಿಸಲಾರೆವು. ಆದರೆ ತಳದ ಕಣಿವೆಯಲ್ಲಿ ನಿಂತು ಸೂರ್ಯ ಕಾಂಚನಗಂಗಾ ಶಿಖರ ಉತ್ಕ್ರಮಿಸುವುದನ್ನು ಪ್ರತೀಕ್ಷಿಸುವುದರಲ್ಲಿ ಹೀನವಾದುದಾಗಲೀ ದೀನವಾದುದಾಗಲೀ ಏನೂ ಇಲ್ಲ.”

ಇದೇ ಭಾವನೆಯನ್ನು ಐನ್‌ಸ್ಟೈನ್‌ಸ್ವತಂತ್ರವಾಗಿ ಅನುನಾದಿಸಿರುವ (resonate) ಪರಿ: “ಸೂಕ್ಷ್ಮ ಸಂವೇದನಶೀಲ ವ್ಯಕ್ತಿ, ಖಾಸಗಿ ಬದುಕಿನಿಂದ ಜ್ಞೇಯನಿಷ್ಠ (objective) ಅರಿವು ಮತ್ತು ಚಿಂತನೆಯ ಜಗತ್ತಿಗೆ ವಿಮೋಚಿತನಾಗಲು ತಹತಹಿಸುತ್ತಿರುವನು. ನಗರದ ಗಲಭೆ ಗೊಂದಲ ಇಕ್ಕಟ್ಟು ಪರಿಸರಗಳಿಂದ ಬಿಡುಗಡೆಗೊಂಡು, ಉನ್ನತ ಪರ್ವತಗಳ ಭವ್ಯ ನೀರವತೆಗೆ ನೆಗೆದು, ಅಲ್ಲಿಯ ನಿಶ್ಚಲ ಪರಿಶುಭ್ರ ವಾಯುವಿನ ನೇರ ದೃಷ್ಟಿ ಚಾಚಿ, ಮೇಲುನೋಟಕ್ಕೆ ಅನಂತ ಕಾಲದ ಸಲುವಾಗಿ ಕಡೆಯಲ್ಪಟ್ಟಿದೆಯೋ ಎಂದು ಭಾಸವಾಗುವ ಆ ಚಿರಶಾಂತ ವಿಸ್ತಾರಗಳನ್ನು ನಲ್ಮೆಯಿಂದ ಸರ್ವೇಕ್ಷಿಸಲು ಬಯಸುವ ನಗರನಿವಾಸಿಯ ಅದಮ್ಯ ಹಂಬಲದ ಜೊತೆ ಈ ತಹತಹವನ್ನು ಹೋಲಿಸಬಹುದು.”

ಕಲೆ

ನೈಸರ್ಗಿಕ ವಿದ್ಯಮಾನವೊಂದರಿಂದ ಸ್ಫೂರ್ತಿದೀಪ್ತವಾಗುವ ಅಂತರ್ಬೋಧೆಯ (ಅಥವಾ ಪ್ರತಿಭಾನದ) ಪ್ರಸ್ಫುರಣವೇ ಕಲೆ. ವಾಲ್ಮೀಕಿಯ ಸಂದರ್ಭದಲ್ಲಿ ಕ್ರೌಂಚವಧೆ ಇಂಥ ಪ್ರಸ್ಫುರಣಕ್ಕೆ ಕಾರಣವಾಯಿತು. ಫಲವೇ ಆದಿಕಾವ್ಯ ಎಂಬ ಹೆಸರಿನಿಂದ ಅಜರಾಮರವಾಗಿರುವ ರಾಮಾಯಣ, ಇದು ಕಲೆ. ಆರ್ಕಿಮಿಡೀಸನ ಅಂತರ್ಬೋಧೆಯ ಪ್ರಸ್ಫುರಣಪ್ರೇರಕವಾದರೂ ನೈಸರ್ಗಿಕ ಘಟನೆಯೇ. ಆದರೆ ಇದರ ಫಲ ಕಲೆ ಅಲ್ಲ, ಬದಲು ವಿಜ್ಞಾನ.

ಏನು ವ್ಯತ್ಯಾಸ? ಐನ್‌ಸ್ಟೈನ್‌ನೀಡಿರುವ ವಿವರಣೆಯನ್ನು ಇನ್ನೊಮ್ಮೆ ಗಮನಿಸಬೇಕು. “ನೋಡಿದ್ದನ್ನೂ ಅನುಭವಿಸಿದ್ದನ್ನೂ ತರ್ಕಶಾಸ್ತ್ರದ ಪರಿಭಾಷೆಯಲ್ಲಿ ಚಿತ್ರಿಸಿದ್ದಾದರೆ ಆಗ ವಿಜ್ಞಾನದ ಉದ್ಯಕ್ತರಾಗಿರುತ್ತೇವೆ. ಜಾಗೃತ ಮನಸ್ಸಿಗೆ ಅಪ್ರವೇಶ್ಯವಾಗುವ ಅಂತರ್ಬೋಧೆಯಿಂದ, ಅರ್ಥಪೂರ್ಣವಾದವೆಂಬುದಾಗಿ ಪರಿಗಣಿಸಲ್ಪಡುವ ರೂಪಗಳ ಮೂಲಕ ಸಂವಹನಿಸಿದ್ದಾದರೆ ಆಗ ಕಲೆಯಲ್ಲಿ ಮಗ್ನರಾಗಿರುತ್ತೇವೆ.”

ವಿಜ್ಞಾನದಲ್ಲಿ ಬಳಸುವ ಅರ್ಥದಲ್ಲಿ, ತರ್ಕ ಮತ್ತು ಪ್ರಯೋಗಗಳಿಗೆ ಕಲೆಯಲ್ಲಿ ನೆಲೆ ಇಲ್ಲ. ಕಲಾಮಾಧ್ಯಮಕ್ಕೇ ವಿಶಿಷ್ಟವಾಗಿರುವ ತರ್ಕ, ಸಮರ್ಥನ, ಔಚಿತ್ಯ ಮುಂತಾದವು ಇವೆ. ಎಂ ಹಿರಿಯಣ್ಣನವರು (1871 – 1950) ಈ ಸೂಕ್ಷ್ಮ ಗುರುತಿಸಿ ವಿವರಿಸಿದ್ದಾರೆ (ನೋಡಿ – Art Experience, ಕಾವ್ಯಾಲಯ ಪ್ರಕಾಶಕರು): “ಕಾವ್ಯದಲ್ಲಿಯ ಅಂತರಾರ್ಥ ಮೂರು ಮಡಿಕೆಯದು. ಇದರಲ್ಲಿ ಕವಿಯ ಉದ್ಧೇಶ ಸಂಗತಿಯ ಸಂವಹನ (ವಸ್ತು) ಅಥವಾ ಕಾಲ್ಪನಿಕ ಇಲ್ಲವೇ ಭಾವಲಹರಿಯ ವರ್ಗಾವಣೆ (ಅಲಂಕಾರ ಅಥವಾ ರಸ) ಆಗಿರಬಹುದು. ಮೊದಲನೆಯದರಲ್ಲಿ ಕಾವ್ಯಾಂಶ ಕನಿಷ್ಠ ಎಂಬುದು ಕಂಡಂತೆಯೇ ಇದೆ. ಇದರಲ್ಲೇನಾದರೂ ಕಲಾತ್ಮಕ ಲಕ್ಷಣವಿದ್ದರೆ ಅದು ಪೂರ್ತಿ ಸಂಸ್ಕರಣೆಗೆ (treatment) ಸೇರಿದ್ದೇ ಹೊರತು ವಿಷಯಕ್ಕೆ ಅಲ್ಲ. ಎಂದೇ ಪ್ರಕೃತ ಉಳಿದೆರಡನ್ನು ಮಾತ್ರ ಪರಿಗಣಿಸಿದರೆ ಸಾಕು. ಕಲ್ಪನೆ ಎಂಬ ಗುಣಗಳ ಸಂಯುಕ್ತವೇ ಋಜುಕಲೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಅಥವಾ ಇನ್ನೊಂದು ಗುಣ ಪ್ರಧಾನವಾಗಿ ಪ್ರಕಟವಾಗಬಹುದು. ಮತ್ತು ಆಗ ಈ ದ್ವಿಸ್ತರ [ ಎರಡು ಮಡಿಕೆ] ವರ್ಗೀಕರಣ ಆಯಾ ಪ್ರಧಾನ ಗುಣವನ್ನು ಉಲ್ಲೇಖಿಸುವುದೆಂದು ಭಾವಿಸಬೇಕು. ಪ್ರತಿಸ್ಪಂದನಶೀಲ ಮನವೊಂದು ಕಾಲ್ಪನಿಕ ಅಥವಾ ಭಾವಾತ್ಮಕ ಲಹರಿಯ ಮಾಂತ್ರಿಕತೆಗೆ ವಶವಾದಾಗ ಬಹುತೇಕ ಅಪ್ರಯತ್ನಿತವಾಗಿ, ಹೊಮ್ಮುವ ಅಭಿವ್ಯಕ್ತಿಯನ್ನು ಕಲೆ ಪ್ರತಿನಿಧಿಸುವುದು ಎಂಬುದು ಇಲ್ಲಿಯ ದೃಷ್ಟಿ.”

ತ್ರೀನಂಶ್ರೀಯವರು ಇದೇ ಪುಸ್ತಕದಿಂದ ಒಂದು ಪರಿಚ್ಛೇದವನ್ನು ಕನ್ನಡಿಸಿ ‘ಕಾವ್ಯ ಮೀಮಾಂಸೆ’ಯಲ್ಲಿ ಉಲ್ಲೇಖಿಸಿದ್ದಾರೆ (ಪುಟ 210 – 211): “ಸಾಂಖ್ಯದರ್ಶನದ ಮೇರೆಗೆ ಪ್ರಕೃತಿ ಸಮಗ್ರವಾಗಿ ಸುಂದರವಲ್ಲ: ಅದರಲ್ಲಿ ಸುಂದರವಾದ ಅಂಶಗಳೂ ಉಂಟು, ವಿರೂಪವಾದ ಅಂಶಗಳೂ ಉಂಟು. ಪ್ರಕೃತಿಯಲ್ಲಿಯ ವಸ್ತುಗಳಿಂದ ಆಹ್ಲಾದವೇ ಒದಗುವುದಿಲ್ಲವೆಂದೇನೂ ಆ ದರ್ಶನ ಹೇಳುವುದಿಲ್ಲ. ಆದರೆ ಸರ್ವಕಾಲದಲ್ಲಿಯೂ ಸರ್ವರಿಗೂ ಆಹ್ಲಾದ ಕೊಡತಕ್ಕದ್ದು ಪ್ರಕೃತಿಯಲ್ಲಿ ಏನೂ ಇಲ್ಲವೆಂದು ಅದರ ಅಭಿಪ್ರಾಯ. ಅವಿಮಿಶ್ರಿತವಾದ ಕೇವಲ ಸುಖವನ್ನು ಪಡೆಯಲು ವ್ಯಾವಹಾರಿಕ ಜಗತ್ತನ್ನು ಬಿಟ್ಟು ಬೇರೆಯೇ ಕಡೆಗೇ ನಾವು ತಿರುಗಬೇಕು. ಇತ್ತ ವೇದಾಂತದರ್ಶನದ ಮೇರೆಗೆ, ಸರ್ವವೂ ಸುಂದರ; ವಿಶ್ವದ ಆಂತರಿಕ ಸೌಂದರ್ಯವನ್ನು ಭಂಗಗೊಳಿಸತಕ್ಕದ್ದು ಯಾವುದೂ ಅದರಲ್ಲಿಲ್ಲ…. ಯೋಗಿ ಶ್ರೇಷ್ಠತಮನಾದ ಕವಿ. ಏಕೆಂದರೆ ಎಲ್ಲದರಿಂದಲೂ ಅವನಿಗೆ ಆನಂದ ಒದಗುತ್ತದೆ. ‘ಸರ್ವವೂ ಆತ್ಮ’ ಎಂಬ ಯೋಗಿಯ ಜ್ಞಾನವು ನಮಗೆ ಇಲ್ಲದಿದ್ದರೂ ನಾವು ಕೂಡ ಪ್ರಕೃತಿಯಿಂದ ಆಗಾಗ ರಸಾನುಭವ ಹೊಂದಬಹುದು. ಆದರೆ ವಿಶ್ವಸೌಂದರ್ಯವನ್ನು ಕಾಣಲು ನಮ್ಮ ಜಡತೆ ಸಾಮಾನ್ಯವಾಗಿ ಅಡ್ಡಿಯಾಗುತ್ತದೆ. ಸೌಂದರ್ಯಗ್ರಾಹಿಯಾದ ಕಣ್ಣುಳ್ಳ ಕವಿಯಾದರೆ ನಮಗೆ ಸಾಧ್ಯವಿಲ್ಲದ ಕಡೆಗಳಲ್ಲೂ ಪ್ರಕೃತಿಯ ಸೊಬಗನ್ನು ಸವಿಯುತ್ತಾನೆ; ತನ್ನ ಅನುಭವಕ್ಕೆ ಸ್ವರಸವಾದ [ಸ್ವಂತ ಅಪೇಕ್ಷೆಯ] ರೂಪವನ್ನು ಸಹಜವಾಗಿ ಕೊಟ್ಟು, ಆ ಮೂಲಕ ನಮ್ಮ ಕಣ್ಣನ್ನೂ ತೆರೆದು ನಾವು ಕಾಣದೇ ಬಿಟ್ಟದ್ದನ್ನು ತೋರಿಸುತ್ತಾನೆ. ಎಂದರೆ ನಮಗೆ ಹೃದ್ಯವಾಗುವಂತೆ ಅಭಿವ್ಯಕ್ತಿಗೊಳಿಸಿದ ಪ್ರಕೃತಿಯೇ ಕಲೆ……ವೇದಾಂತದ ಪ್ರಕಾರ, ಕಲೆ ಪ್ರಕೃತಿಯ ಉತ್ತಮಾಂಶವನ್ನು ಪ್ರಕಾಶಪಡಿಸುತ್ತದೆ; ಸಾಂಖ್ಯದ ಪ್ರಕಾರ, ಪ್ರಕೃತಿಗಿಂತಲೂ ಉತ್ತಮವಾದ ಬೇರೊಂದು ಲೋಕವನ್ನು ನಿರ್ಮಿಸುತ್ತದೆ.”

ಪ್ರತಿಭಾನದ ಮೂಸೆಯಲ್ಲಿ ಭಾವ ಮತ್ತು ಕಲ್ಪನೆ ಎಂಬ ಪರಿಕರಗಳು ಪ್ರತಿಭೆಯಿಂದ ಕ್ರಿಯಾಶೀಲವಾಗಿ ಮಿಂದು ಬೆಂದು ಒಂದಾಗುವ ರಸಸ್ಯಂದಿಯೇ ಕಲೆ. “ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ?” (ಕುವೆಂಪು). ಆ ‘ಶಿಲೆ’ಯ ಇನ್ನೊಂದು ಹೆಸರು ಪ್ರಕೃತಿ, ನಿಸರ್ಗ ಅಥವಾ ವಿಶ್ವ.

ಕಲಾಪ್ರವೀಣ ರಸಿಕನನ್ನು ತರ್ಕಭಯಂಕರ ಶುಷ್ಕವಾದಿ ಕೆಣಕಿದ, “ಕಲೆ ಎಂದರೇನು?” “ತಿಳಿದವನಿಗೆ ವಿವರಣೆ ಅನಾವಶ್ಯಕ, ತಿಳಿಯದವನಿಗೆ ನಿಷ್ಟ್ರಯೋಜಕ.” ಎಂದೇ ಡಿವಿಜಿ ವಾಣಿ:

ಕಲೆಗಳಲಿ ಪರಮಕಲೆ ಜೀವನದ ಲಲಿತ ಕಲೆ
ಕಲಿಸಲದನಳವಲ್ಲ
ಬಾಹ್ಯಬೋಧನೆಯಿಂ
ಒಲಿದೊಲಿಸಿಕೊಳುವ
ಲೌಕಿಕ ನಯದ ಸೊಗಸ ನೀಂ
ತಿಳಿವುದೊಳಹದದಿಂದ
ಮಂಕುತಿಮ್ಮ ||
ಸಂಗೀತ
ಕಲೆಯೊಂದು ಸಾಹಿತ್ಯ ಕಲೆಯೊಂದು
ಅಂಗಾಂಗ
ಭಾವರೂಪಣದ ಕಲೆಯೊಂದು
ಸಂಗಳಿಸಲೀ
ಕಲೆಗಳನುನಯವು ಚರ್ಯೆಯಲಿ
ಮಂಗಳೋನ್ನತ
ಕಲೆಯೊ ಮಂಕುತಿಮ್ಮ ||

ಸತ್ಯ ಸೌಂದರ್ಯ

ಇದುವರೆಗಿನ ಮಥನದಿಂದ ಅನುಗತಿಸುವ ತೀರ್ಮಾನ: ವಿಜ್ಞಾನ ಮತ್ತು ಕಲೆ ಎಂಬವು ನಿಸರ್ಗ ನಾಣ್ಯದ (ಓದಿ: ಜೀವನ) ಎರಡು ಮಗ್ಗುಲುಗಳು: ವಿಜ್ಞಾನದಿಂದ ಕಲೆಯ ತ್ರಾಣ ವರ್ಧಿಸುತ್ತದೆ ಮತ್ತು ಅಸ್ತಿತ್ವ ದೃಢಪಡುತ್ತದೆ. ಏಕೆಂದರೆ ಯಾವುದೇ ಸುಂದರ ಕಲೆ ಭದ್ರತಂತ್ರ ಕೌಶಲಗಳ ಘನ ಅಸ್ತಿಭಾರದ ಮೇಲೆ ನಿಂತಿರುವ ಗೋಪುರನೃತ್ತದ ಮೇಲೆ ನಿಂತ ನೃತ್ಯ ಶೋಭಿಸುವಂತೆ. ವಿಜ್ಞಾನದ ಒಂದು ಮುಖ ತಂತ್ರಕೌಶಲ ಸಮುಚ್ಚಯ ಎಂಬುದು ತಿಳಿದಿದೆ. ಇನ್ನು ವಿಜ್ಞಾನವಾದರೋ ಕಲಾಸಂಸ್ಪರ್ಶಕದಿಂದ ಅಧಿಕ ನಿಸರ್ಗ ಸಮೀಪಸ್ಥವಾಗುತ್ತದೆ ಮತ್ತು ಮಾರ್ದವತೆ ಗಳಿಸುತ್ತದೆ. ವಾಸ್ತವವಾಗಿ, ವಿಜ್ಞಾನ ಎಂಬ ಚಿಂತನಪ್ರಕಾರ ಅನ್ವೇಷಕನ ಮನೋಮುಕುರದಲ್ಲಿ ಭೌತವಿಶ್ವದ ಪ್ರತಿಬಿಂಬ. ಈ ಕನ್ನಡಿ ದೋಷಯುಕ್ತವಾಗಿದ್ದರೆ ಪ್ರತಿಬಿಂಬ ವಿಕೃತವಾಗುತ್ತದೆ. ಅಂದ ಮಾತ್ರಕ್ಕೆ ಕನ್ನಡಿಯನ್ನು ಎಷ್ಟೇ ದೋಷರಹಿತವಾಗಿಸಿ ಸ್ಫುಟೀಕರಿಸಿದರೂ, ಪ್ರತಿಬಿಂಬ ಎಂದೂ ಬಿಂಬೈಕ್ಯವಾಗದು. ತದ್ರೂಪಿ ಕೂಡ ಆಗದು: “ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್‌?” ಏಕೆ? ಒಂದು ವಿವರಣೆ:

ಉದ್ದ, ಅಗಲ, ದಪ್ಪ/ಆಳ/ಎತ್ತರ ಇವುಗಳಿಗೆ ಆಯಾಮಗಳೆಂದು (dimensins) ಹೆಸರು. “ಮೂರು ಆಯಾಮಗಳ ‘ದೇಶ’ದಲ್ಲಿಯೂ ಒಂದು ಆಯಾಮದ ‘ಕಾಲ’ದಲ್ಲಿಯೂ ನಾವು ಬಾಳುತ್ತಿದ್ದೇವೆ” ಎಂಬ ವಾಸ್ತವ ಸಂಗತಿಯ ಅರ್ಥ: ದೇಶದಲ್ಲಿ ( = ಆಕಾಶ space) ಹಿಂದೆ – ಮುಂದೆ, ಎಡ – ಬಲ, ಮೇಲೆ – ಕೆಳಗೆ ಚಲಿಸಬಲ್ಲೆವು; ಕಾಲದಲ್ಲಿ ( = ವೇಳೆ time) ಇದು ಸಾಧ್ಯವೇ? ಭೂತಕ್ಕೆ ಜಾರಲಾರೆವು, ಭವಿಷ್ಯಕ್ಕೆ ಏರಲಾರೆವು. ವರ್ತಮಾನದಲ್ಲಿ ಬಾಳುವುದೊಂದೇ ಶರಣು.

ಗಣಿತದಲ್ಲಿ ಬಿಂದುವಿನ ಆಯಾಮ ಸೊನ್ನೆಉದ್ದವಿಲ್ಲ, ಅಗಲವಿಲ್ಲ, ದಪ್ಪವಿಲ್ಲ. ಆದರೂ ಬಿಂದು “ಇದೆ” ಎಂದು ನಮ್ಮ ಅಂತರ್ಬೋಧೆ ನುಡಿಯುತ್ತದೆ. ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ಗೆರೆ ಸರಳರೇಳೆ. ಇದರ ಆಯಾಮ ಒಂದು ಉದ್ದವಿದೆ, ಅಗಲವಿಲ್ಲ, ದಪ್ಪವಿಲ್ಲ, ಪರಸ್ಪರ ಸಂಧಿಸುವ ಎರಡು ವಿಭಿನ್ನ ಸರಳರೇಖೆಗಳು ರಚಿಸುವ ಮೈಗೆ ಸಮತಲವೆಂದು ಹೆಸರು. ಇದಕ್ಕೆ ಉದ್ದವಿದೆ, ಅಗಲವಿದೆ. ಆದರೆ ದಪ್ಪ ಇಲ್ಲ. ಇದರ ಆಯಾಮ ಎರಡು. ಸಂಧಿಸುವ ನಾಲ್ಕು ವಿಭಿನ್ನ ಸಮತಲಗಳು ರಚಿಸುವ ಘನಾಕೃತಿಗೆ ಚತುಷ್ಫಲಕವೆಂದು ಹೆಸರು. ಇದರ ಆಯಾಮ ಮೂರು.

ಇವೆಲ್ಲ ಗಣಿತಸತ್ಯಗಳು. ನಿಷ್ಕೃಷ್ಟವಾಗಿ ಹೇಳುವುದಾದರೆ ಬಿಂದು, ಸರಳರೇಖೆ, ಸಮತಲ, ಘನಾಕೃತಿ ಯಾವುದಕ್ಕೂ ಭೌತ ಅಸ್ತಿತ್ವವಿಲ್ಲ! ಆದರೂ ಅವು “ಇವೆ” ಎಂಬುದು ನಮ್ಮ ಅನುಭವ. ಆರ್ಥ ಏನು? ನಿಸರ್ಗದಲ್ಲಿ ಈ ಯಾವ ಗಣಿತಾಕೃತಿಗಳೂ ದೊರೆಯವು. ಇವು ನಮ್ಮ ದೈನಂದಿನ ಅನುಭವಗಳ ಆದರ್ಶೀಕರಣಗಳು ಮಾತ್ರ, ವ್ಯವಹಾರದಲ್ಲಿಯೂ ಗಣಿತಸಿದ್ಧಾಂತವಿಸ್ತರಣೆಯಲ್ಲಿಯೂ ಅತ್ಯಂತ ಉಪಯುಕ್ತ ಕೂಡ. ಎಂದೇ ಈ ಮುಂದಿನ ಐನ್‌ಸ್ಟೈನ್‌ಸೂಕ್ತಿ: “ಗಣಿತ ಪ್ರಮೇಯಗಳು ವಾಸ್ತವತೆಯನ್ನು ಪ್ರತಿನಿಧಿಸುತ್ತಿರುವವರೆಗೆ ಖಚಿತವಲ್ಲ, ಖಚಿತವಾಗಿರುವವರೆಗೆ ವಾಸ್ತವತೆಯನ್ನು ಪ್ರತಿನಿಧಿಸುವುದಿಲ್ಲ.” ಈ “ಲೋಪ”ದ ಮೂಲ ಇರುವುದು ಮಾನವ – ನಿಸರ್ಗ ಸಂಬಂಧದಲ್ಲಿ: ಭಾಗಕ್ಕೆಂದೂ ಪೂರ್ಣತೆಯ ಸಮಗ್ರ ದರ್ಶನ ಸಿದ್ಧಿಸದು.

ವಿಜ್ಞಾನಮಾರ್ಗ ಕಲೆಯಲ್ಲಿಯೂ ಕಲಾಮಾರ್ಗ ವಿಜ್ಞಾನದಲ್ಲಿಯೂ ಲಯಿಸುತ್ತವೆ. ಈ ಸಂಲಯನ (fusion)ಫಲವೇ ವಿಜ್ಞಾನಕಲೆ ಅಥವಾ ಕಲಾವಿಜ್ಞಾನ.

ಪ್ರಸ್ತುತ ‘ಸುಂದರತೆ’(the beautiful), ‘ಸೌಂದರ್ಯ’ (beauty), `ಋತ’(the true) ಮತ್ತು ‘ಸತ್ಯ’(truth) ಎಂಬ ಪದಗಳ ನಡುವಿನ ಸೂಕ್ಷ್ಮ ಅರ್ಥವ್ಯತ್ಯಾಸ ಅರಿಯುವುದು ಮುಂದಿನ ಚರ್ಚೆಗೆ ಅಗತ್ಯ.

  1. ಸುಂದರತೆ : ಇದು ಇಂದ್ರಿಯಗಳಿಗೆ ಪ್ರಧಾನವಾಗಿ ಕಣ್ಣುಗಳಿಗೆ ಎದ್ದು ಕಾಣುವ ಚೆಲುವು ಅಥವಾ ಸೊಬಗು. ಮಸ್ಸೂರಿ ಶಿಖರದಿಂದ ಕಾಣುವ ಹಿಮಾಲಯದ ಭವ್ಯ ದೃಶ್ಯ, ಕುದುರೆಮುಖದ ಕೊಡೆಯಿಂದ ಕೆಳಕ್ಕೆ ದೃಷ್ಟಿ ಬೀರಿದಾಗ ಎದುರಾಗುವ ಹಸುರು ಕಡಲಿನ ಸುಂದರ ಸ್ತಬ್ಧ ಚಿತ್ರ, ಶ್ರಾವಣಮಾಸದ ಸಮುದ್ರ ವೈಭವ ಎಲ್ಲವೂ ಸುಂದರತೆಗೆ ನಿದರ್ಶನಗಳು. “ಸುಂದರತೆಯ ತಳರೂಪಿಕೆ ಗಣಿತ” ಎಂದಿದ್ದಾನೆ ಸೌರವ್ಯೂಹದ ಗಣಿತಲೇಖ್ಯಮಂಡನಕಾರ ಯೋಹನ್‌ಕೆಪ್ಲರ್‌(1571 – 1630). ಎಲ್ಲಿ ಸುಂದರತೆ ಇದೆಯೋ ಅಲ್ಲಿ ಗಣಿತವೂ ಎಲ್ಲಿ ಗಣಿತ ಇದೆಯೋ ಅಲ್ಲಿ ಸುಂದರತೆಯೂ ನಿಹಿತವಾಗಿರಲೇಬೇಕು ಎಂಬುದು ವಿಜ್ಞಾನಿಯ ನಂಬಿಕೆ. ಎಂದೇ ವಿಜ್ಞಾನದಲ್ಲಿ ಒಂದು ನೂತನ ಫಲಿತಾಂಶ ಅಥವಾ ವಾದ ಸಿದ್ಧಿಸಿದಾಗ ಆ ವಿಜ್ಞಾನಿಯ ಪ್ರಥಮಾಸಕ್ತಿ ಇರುವುದು ಅದು ಸುಂದರವಾಗಿದೆಯೇ ಇಲ್ಲವೇ ಎಂದು ಅರಿಯುವುದರಲ್ಲಿ, ಸರಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸುವುದರಲ್ಲಿ ಅಲ್ಲ. ಇಲ್ಲಿಯ ನಿರ್ಣಾಯಕ ಅವನೇ – ಇದೊಂದು ಬಗೆಯ ಭಾವಸಂವೇದನೆ. ಅದು ಸದ್ಯದ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿ ನವಮಾರ್ಗಪ್ರವರ್ತಕವಾಗಿದ್ದರೂ ಸುಂದರವಾಗಿಲ್ಲ ಎಂಬ ಭಾವ ಸ್ಫುರಿಸಿದರೆ ಅದರಲ್ಲೇನೋ ದೋಷ ಮರಸು ಕುಳಿತಿದೆ ಎಂಬುದು ಖಾತ್ರಿ. ಇಂಥ ನಿಲವಿನಿಂದ – ಅಂದರೆ ಗಣಿತವನ್ನು ಕೇವಲ ಬೌದ್ಧಿಕ ಕ್ರೀಡೆಯಾಗಿ ಅಭಿವರ್ಧಿಸಿ, ಲಭ್ಯ ಫಲಿತಾಂಶಗಳಿಗೆ ಸಂವಾದಿಯಾಗುವ ನೈಸರ್ಗಿಕ ವಿದ್ಯಮಾನಗಳನ್ನು ಶೋಧಿಸುವ ನಿಲವಿನಿಂದ ಮುನ್ನಡೆದ ವಿಜ್ಞಾನಿ ಯಶಸ್ವಿ ಆಗಿರುವುದಕ್ಕೆ ವಿಜ್ಞಾನೇತಿಹಾಸದಲ್ಲಿಯೂ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ಉದಾಹರಣೆಗೆ ವಸ್ತುವಿನ ಜಡರಾಶಿಯೂ ಗುರುತ್ವರಾಶಿಯೂ ಸಮ (inertial mass and gravitational mass) ಎಂಬ ಭೌತವಿಜ್ಞಾನ ತಥ್ಯವನ್ನು ನ್ಯೂಟನ್‌- ಕಾಲದಿಂದಲೂ ಪ್ರಶ್ನಾತೀತ ವಿಶ್ವ ಸತ್ಯ ಎಂದೇ ಅಂಗೀಕರಿಸಿ ವಿಜ್ಞಾನ ಬೆಳೆದು ನಳನಳಿಸಿದೆ, ಉಪಯುಕ್ತ ಪ್ರಾಯೋಗಿಕ ಫಲಗಳನ್ನೂ ನೀಡಿದೆ. ಆದರೆ ವಿದ್ಯಾರ್ಥಿ ಐನ್‌ಸ್ಟೈನ್‌ಪ್ರಕಾರ “ಈ ಅಂಗೀಕಾರ ಅಸುಂದರ, ಎಂದೇ ಈ ಸಿದ್ಧಾಂತ ದೋಷಮುಕ್ತವಲ್ಲ.” ಫಲ: 1905ರಲ್ಲಿ ಅವರೇ ಮಂಡಿಸಿದ ಯುಗಪ್ರವರ್ತಕ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ, ಇದು ದೇಶ – ಕಾಲಗಳ (space and time) ಸಂಲಗ್ನತೆ ಸಾಧಿಸಿದ ವಿಶ್ವ ಭಾಷ್ಯ. ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದಾಗ ದೊರೆಯುವ ಲಬ್ಧ ಅನಿರ್ಥರಣೀಯ ಎಂದು ಅಂಗೀಕರಿಸಿ ಗಣಿತ ಮುನ್ನಡೆದಿತ್ತು, ಇಂಥ ವಿಚಿತ್ರ ಸನ್ನಿವೇಶದ ಸಾರ್ವತ್ರೀಕೃತ ಸಮಸ್ಯೆಯನ್ನು ಸಮಕಾಲೀನವಾಗಿ, ಆದರೆ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ, ಅನ್ವೇಷಿಸಿದ ನ್ಯೂಟನ್‌ಮತ್ತು ಲೈಬ್ನಿಟ್ಝ್‌(ಉಭಯರೂ 17 – 18ನೆಯ ಶತಮಾನಗಳಲ್ಲಿ ಸಮಕಾಲೀನರು) ಕಲನಶಾಸ್ತ್ರವನ್ನು (calculcus) ಭೌದ್ಧಿಕ ಕ್ರೀಡೆಯಾಗಿ ಸೃಷ್ಟಿಸಿದರು. ವೇಗ, ವೇಗೋತ್ಕರ್ಷ ಮುಂತಾದ ದೈನಂದಿನ ಸಾಧಾರಣ ಅನುಭವಗಳನ್ನು ಸುಂದರ ಗಣಿತೋಕ್ತಿಗಳಲ್ಲಿ ಪೋಣಿಸಿ ಹೆಣೆದಿರುವ ಹಾರವಿದು. ಆಧುನಿಕ ಭೌತವಿಜ್ಞಾನದ ಭಾಷೆಯೇ ಕಲನಶಾಸ್ತ್ರ ಅಂದರೆ ಭೌತ ವಾಸ್ತವತೆಗೆ ಬರೆದಿರುವ ವ್ಯಾಖ್ಯಾನ!
  2. ಸೌಂದರ್ಯ: ಇದು ಸುಂದರತೆಯ ತಳದಲ್ಲಿದ್ದು ಸುಂದರತೆಗೆ ಕಾರಣವಾಗುವ ದೃಢ ಆಧಾರ. ಮಾನವನಿಗೆ ಅಗೋಚರ, ಪ್ರಯೋಗಕ್ಕೆ ಅಲಭ್ಯ. ಆದರೆ ಇದ್ದೇ ಇದೆಯೆಂಬಭದ್ರ ವಿಶ್ವಾಸ ತಳೆಯಲು ಯಥೇಚ್ಛ ಪರೋಕ್ಷ ಪುರಾವೆಗಳು ಲಭ್ಯ. ಕಾವ್ಯಕಾವೇರಿಗೆ ಪ್ರತಿಭೆಬ್ರಹ್ಮಗಿರಿ ಹೇಗೋ ಸುಂದರತೆಗೆ ಸೌಂದರ್ಯ.

ಸುಂದರತೆಯೆನುವುದೇಂ? ಜನಕ್ಕೆ ಮೈಮರೆಯಿಪಾ
ನಂದದೊಳಮರುಮವೇಂ
? ವಿಶ್ವಚೇತನದಾ
ಸ್ಪಂದನವೆ
ಸೌಂದರ್ಯಮದುವೆ ಜೀವನ ಮೂಲ
ಬಂಧುರತೆ
ಬೊಮ್ಮನದು ಮಂಕುತಿಮ್ಮ ||

ಆಂತರಂಗಿಕ “ಸೌಂದರ್ಯ”ದ ಬಾಹಿರಂಗಿನ ಪ್ರಕಾಶವೇ “ಸುಂದರತ.” ವಿಜ್ಞಾನಿಯೂ ಕಲಾವಿದ ದಾರ್ಶನಿಕರಂತೆ ಸೌಂದರ್ಯರಾಧಕ, ಸೌಂದರ್ಯಾನ್ವೇಷಕ ಮತ್ತು ಸೌಂದರ್ಯಲೋಲ. ಇಂಥ ಉನ್ನತ ನೆಲೆಯಲ್ಲಿ, ಈ ಹಿಂದೆ ಹೇಳಿದಂತೆ, ವಿಜ್ಞಾನ – ಕಲೆ ಅಥವಾ ಕಲಾವಿಜ್ಞಾನ ಮಾತ್ರ ಇರುವುದು. ಹಾಗಾದರೆ ವಿಜ್ಞಾನಿಯ ದೃಷ್ಟಿಯಲ್ಲಿ ಸೌಂದರ್ಯ ಎಂದರೇನು? ಆನ್ರೀ ಪ್ವಾಂಕ್ವೆರೇ (1854 – 1912) ಎಂಬ ಪ್ರಸಿದ್ಧ ಗಣಿತ – ಭೌತವಿಜ್ಞಾನಿ ಬರೆದಿದ್ದಾರೆ:

“ನಿಸರ್ಗ ಪ್ರಯೋಜನಕಾರಿ ಎಂಬುದಕ್ಕಾಗಿ ವಿಜ್ಞಾನಿ ಅದನ್ನು ಅಧ್ಯಯನ ಗೈಯುವುದಿಲ್ಲ; ಅವನು ಅದನ್ನು ಅಧ್ಯಯನಗೈಯುವುದು ಅದರಲ್ಲಿ ಅವನಿಗೆ ಆನಂದ ಲಭಿಸುವುದರಿಂದ; ಅದರಲ್ಲಿ ಅವನಿಗೆ ಆನಂದ ಲಭಿಸುವುದು ಅದು ಸುಂದರವಾಗಿರುವುದರಿಂದ; ನಿಸರ್ಗ ಸುಂದರವಾಗಿರದಿದ್ದರೆ ಅದನ್ನು ತಿಳಿಯುವುದು ನಿಷ್ಪ್ರಯೋಜಕವಾಗಿರುತ್ತಿತ್ತು; ನಿಸರ್ಗವನ್ನು ತಿಳಿಯುವುದು ನಿಸ್ಪ್ರಯೋಜಕವಾಗಿದ್ದರೆ ಬದುಕು ಅರ್ಥಹೀನವಾಗಿರುತ್ತಿತ್ತು. ಇಂದ್ರಿಯಗಳಿಗೆ ಎದ್ದುಕಾಣುವ ಸೌಂದರ್ಯವನ್ನು ಅಂದರೆ ಗುಣಗಳ ಮತ್ತು ತೋರಿಕೆಗಳ ಸೌಂದರ್ಯವನ್ನು ನಾನಿಲ್ಲಿ ಪ್ರಸ್ತಾವಿಸುತ್ತಿಲ್ಲ. ಆ ಸೌಂದರ್ಯವನ್ನು ಕಡೆಗಣಿಸುವೆನೆಂದಲ್ಲ. ಅದೆಂದೂ ನನ್ನ ಉದ್ದೇಶ ಅಲ್ಲ. ಆದರೆ ಅದಕ್ಕೆ ವಿಜ್ಞಾನದ ಜೊತೆ ಏನೂ ವ್ಯವಹಾರವಿಲ್ಲ. ಬದಲು ನನ್ನ ಮನಸ್ಸಿನಲ್ಲಿರುವುದು ಭಾಗಗಳ ಸುಸಂಗತ ಮೇಳನದಿಂದ ಲಭಿಸುವ ಮತ್ತು ಶುದ್ಧ ಪ್ರತಿಭೆಗೆ ಗ್ರಾಹ್ಯವಾಗುವ ಆ ಗಭೀರ ಸೌಂದರ್ಯ.”

ಆದ್ದರಿಂದ ಸೌಂದರ್ಯದ ಮೂಲ “ಭಾಗಗಳ ಸುಸಂಗತ ಮೇಳನ”ದಲ್ಲಿದೆ. ಈ ಗುಣದ ಇನ್ನೊಂದು ಹೆಸರು ಅಂಗಸೌಷ್ಠವ. ವ್ಯಕ್ತಿ ತನ್ನಲ್ಲಿ ಯೋಗ್ಯ ದೃಷ್ಟಿಯನ್ನೂ ಸದಭಿರುಚಿಯನ್ನೂ ಮೈಗೂಡಿಸಿಕೊಂಡರೆ – ಅಂದರೆ “ಶುದ್ಧ ಪ್ರತಿಭೆ” ಆತನಲ್ಲಿ ಲಕಲಕಿಸುತ್ತಿದ್ದರೆ ಅಂಗಸೌಷ್ಠವ ಇರುವಲ್ಲೆಲ್ಲ ಆತನಿಗೆ ಸೌಂದರ್ಯದರ್ಶನವಾಗುತ್ತದೆ, ಮತ್ತು ವಿಲೋಮವಾಗಿ, ಸೌಂದರ್ಯದರ್ಶನವಾದಲ್ಲೆಲ್ಲ ಅಂಗಸೌಷ್ಠವ ಎದ್ದು ಕಾಣುತ್ತದೆ. ಅಂದರೆ ನಿಜ ಸೌಂದರ್ಯದ ತಳ ಅಂಗಸೌಷ್ಠವ. ವಿಜ್ಞಾನಿಯ ಈ ಸೌಂದರ್ಯಾನ್ವೇಷಕ ದೃಷ್ಟಿಯನ್ನು ಸ್ಪಷ್ಟೀಕರಿಸುವ ಸಲುವಾಗಿ ಭೌತವಿಜ್ಞಾನಿ ರಿಚರ್ಡ್‌ಪಿ. ಫೈನ್‌ಮಾನ್‌(1918 – 88) ಒಂದು ನಿದರ್ಶನ ಉಲ್ಲೇಖಿಸುತ್ತಾರೆ:

“ನನಗೊಬ್ಬ ಕಲಾವಿದ ಸ್ನೇಹಿತ ಇದ್ದಾನೆ. ಅನೇಕ ಸಂದರ್ಭಗಳಲ್ಲಿ ಈತ ತಳೆಯುವ ಒಂದು ನಿಲವನ್ನು ಮಾತ್ರ ನಾನು ಒಪ್ಪಲಾರೆ. ಸುಂದರ ಪುಷ್ಪವೊಂದನ್ನು ಈ ಕಲಾವಿದ ಮಿತ್ರ ಕೈಯಲ್ಲಿ ಹಿಡಿದುಕೊಂಡು ‘ನೋಡು! ಇದು ಚಲುವಾಗಿದೆ’ ಎನ್ನುತ್ತಾನೆ. ನಾನ ಒಪ್ಪುತ್ತೇನೆ. ಅಲ್ಲಿಗೇ ಮಾತು ನಿಲ್ಲಿಸದೆ ಆತ ಮುಂದುವರಿದು ನನ್ನನ್ನು ಕುಟುಕುತ್ತಾನೆ: ‘ಒಬ್ಬ ಕಲಾವಿದನಾಗಿ ನಾನು ಇದರ ಸುಂದರತೆಯನ್ನು ಆಸ್ವಾದಿಸಿ ಆನಂದಿಸಬಲ್ಲೆ. ಆದರೆ ಒಬ್ಬ ವಿಜ್ಞಾನಿಯಾಗಿ ನೀನು ಮಾಡುವುದೇನು? ಇದರ ಅಂಗೋಪಾಂಗಗಳನ್ನು ಛಿದ್ರಿಸಿ, ಛೇದಿಸಿ ಸುಂದರತೆಯನ್ನು ಸಂಹರಿಸಿ, ಇಡೀ ಚೆಲುವನ್ನು ವಿರೂಪಗೊಳಿಸುವುದ!’ ಕಲಾವಿದನ ಈ ಮಾತು ಕುತರ್ಕ ಎಂಬುದು ಸುಸ್ಪಷ್ಟ. ಏಕೆಂದರೆ ಆತ ಕಾಣುವ ಸುಂದರತೆ [ಪ್ವಾಂಕ್ವಾರೇ ನುಡಿಗಳಲ್ಲಿ ‘ಇಂದ್ರಿಯಗಳಿಗೆ ಎದ್ದು ಕಾಣುವ ಸೌಂದರ್ಯ’] ಇತರ ಎಲ್ಲ ವ್ಯಕ್ತಿಗಳಿಗೂ ಲಭ್ಯವಿದೆ. ನಾನು ಕೂಡ ಆತನಂತೆಯೇ ಆ ಹೂವನ್ನು ನೋಡಿ ಸಂತೋಷಿಸಬಲ್ಲೆ. ಆದರೆ ಅದೇ ವೇಳೆ ನಾನು ಹೂವಿನಲ್ಲಿ ಆತ ಕಾಣುವುದಕ್ಕಿಂತ ಅವೆಷ್ಟೂ ಅಧಿಕ ವಿರಗಳನ್ನು ಗುರುತಿಸಿ ಹರ್ಷಿಸಲೂ ಬಲ್ಲೆ: ಹೂವಿನ ಎಸಳುಗಳನ್ನು ನೇಯ್ದಿರುವ ಕೋಶಗಳು, ವರ್ಣಕಗಳ (pigments) ವಿನ್ಯಾಸ, ತಳದಲ್ಲಿರುವ ಅಣುಪರಮಾಣುಗಳ ಅಳವಡಿಕೆ. ಇತ್ಯಾದಿ. [‘ಭಾಗಗಳ ಸುಸಂಗತ ಮೇಳನದಿಂದ ಲಭಿಸುವ ಮತ್ತು ಶುದ್ಧ ಪ್ರತಿಭೆಗೆ ಗ್ರಾಹ್ಯವಾಗುವ ಆ ಗಭೀರ ಸೌಂದರ್ಯ’]. ನಿಸರ್ಗಶಿಲ್ಪಿಯ ಸುಂದರಕೃತಿ ಬಹಿರಂಗದಲ್ಲಿ ಮಾತ್ರವಲ್ಲ, ಅಂತರಂಗದ ಸೂಕ್ಷ್ಮಾತಿಸೂಕ್ಷ್ಮ ವಿವರಗಳಲ್ಲಿಯೂ ಸೌಂದರ್ಯಭರಿತವಾಗಿದೆ.”

ಖಭೌತವಿಜ್ಞಾನಿ ಎಸ್‌. ಚಂದ್ರಶೇಖರ್‌(1910 – 95) ಬರೆದಿದ್ದಾರೆ: “ಗಣಿತದಲ್ಲಿ ಸುಂದರತೆಯ ಶೋಧನೆಗಾಗಿ ಪ್ರವರ್ತಿತವಾದ ಒಂದು ಆವಿಷ್ಕಾರ ನಿಸರ್ಗದಲ್ಲಿ ತನ್ನ ಯಥಾ ಪ್ರತಿರೂಪವನ್ನು ದರ್ಶಿಸಬಹುದೆಂಬ ಊಹಾತೀತ ಸಂಗತಿ ಸುಂದರತೆಯ ಸಾನ್ನಿಧ್ಯದಲ್ಲಿ ಒದಗುವ ವಿದ್ಯುದಾಲಿಂಗನಾನುಭವ ಮಾನವಮತಿ ಇದರ ತೀರ ತಳದಲ್ಲಿ ಮತ್ತು ಅತ್ಯಂತ ಪ್ರಗಲ್ಭತೆಯಲ್ಲಿ, ಸೌಂದರ್ಯಕ್ಕೆ ಸಂವೇದನಶೀಲವಾಗಿದೆ ಎನ್ನಲು ನನ್ನನ್ನು ಪ್ರೇರಿಸುತ್ತದೆ. ವಾಸ್ತವವಾಗಿ. ಇಲ್ಲಿ ನಾನು ಈ ವಿಚಾರ ಕುರಿತು ಏನು ಹೇಳಲು ಪ್ರಯತ್ನಿಸಿರುವೆನೋ ಅಷ್ಟೂ ಈ ಮುಂದಿನ ಧ್ಯೇಯವಾಕ್ಯಗಳಲ್ಲಿ ಹೇಳಲ್ಪಟ್ಟಿದೆ: ಋತದ ಪರಿಮುದ್ರೆ ಸರಳತೆ ಸತ್ಯದ ಪರಿವೇ ಸೌಂದರ್ಯ” (The simple is the real of the true, beauty is the splender of milk).