3, 4. ಋತ ಮತ್ತು ಸತ್ಯ: ಸೌಂದರ್ಯದ ಪರ್ಯಾಯ ನಾಮ ಸತ್ಯ. ಇದು, ಈ ಹಿಂದೆ ಹೇಳಿದಂತೆ, ಇಂದ್ರಿಯಗಳಿಗೆ ಅಗೋಚರ. ಸತ್ಯದ ಬಾಹ್ಯ ಅಂದರೆ ಗೋಚರ ಮುಖವೇ ಋತ. ಈಶೋಪನಿಷತ್ತಿನಲ್ಲಿಯ ಶ್ಲೋಕ:

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್
ತತ್ತ್ವಂ
ಪೂಷನ್ನ ಪಾವೃಣು ಸತ್ಯ ಧರ್ಮಾಯ ದೃಷ್ಟಯೇ ||

ಡಿವಿಜಿಯವರ ಅನುವಾದ:

ಹೊನ್ನತಟ್ಟೆಯ ಕವಿದು, ಪೋಷಕನೆ, ಸೂರ್ಯ
ನಿನ್ನೊಳಿಹ
ಸತ್ಯದಾನನವ ಮರೆಯಿಸಿಹೆ
ನನ್ನಿಯಿಂ
ತೆಗೆ ಅದನು; ಸತ್ಯದೊಳ್ಮನವೆನಗೆ
ಎನ್ನ
ಕಣ್ಗದ ತೋರು; ಧರ್ಮಬೀಜವದು ||

ಇದರ ಜೊತೆಗೆ ಡಿವಿಜಿಯವರದೇ ಇನ್ನೊಂದು ‘ಕಗ್ಗ’ ಗಮನಿಸಬೇಕು:

ತರಣಿ ದರ್ಶನಕಿಂತ ಕಿರಣಾನುಭವ ಸುಲಭ
ಪರಮಶಾಸ್ತ್ರಕ್ಕಿಂತ
ಸರಿಯುದಾಹರಣೆ
ಪರಮತತ್ತ್ವವ
ಕಂಡ ಗುರುವನರಸುವುದೆಲ್ಲಿ?
ದೊರೆತಂದು
ನೀಧನ್ಯ ಮಂಕುತಿಮ್ಮ ||

ಸಾರಾಂಶವಿಷ್ಟು. ಪರಾತ್ಪರವಸ್ತು ಇದೆಯೆಂಬ ನಂಬಿಕೆ, ಅಥವಾ ಅಂಥ ಒಂದು ಆದರ್ಶದ ಅನಿವಾರ್ಯತೆ ಇದು ಸತ್ಯ (truth), ಇದು ಅಜರಾಮರ, ಇದರ ಗೋಚರ ಮುಖ ಋತ (the true). ಸೂರ್ಯನ ಗೋಚರ ಬಿಂಬ ಋತ. ಗರ್ಭಸ್ಥ ಬೈಜಿಕಾಗ್ನಿ ಸತ್ಯ. ಎಂದೇ

ಸತ್ಯದರ್ಶನವದಾದರ್ಶೋನ್ನತಿಯು, ಅದರ
ಉತ್ಸವ
ಪ್ರತಿಮೆಯೇ ಋತ ಕಣಾ ಮುನ್ನಡೆಗೆ
ಪಥಸೂಚಿ
, ನಚಿಕೇತ ಧ್ರುವ ಭಗೀರಥರಂತೆ
ಸತತ
ಪ್ರಯತ್ನಿಸೈ ಜಸಗಳಿಸೆ ಅತ್ರಿಸೂನು ||

ಮೇಲೆ ಉಲ್ಲೇಖಿಸಿರುವ ಉಪನಿಷತ್‌ಶ್ಲೋಕದಲ್ಲಿ “ಸತ್ಯ” ಮತ್ತು “ಹೊನ್ನ ತಟ್ಟೆ” ಅನುಕ್ರಮವಾಗಿ ಅದೇ ಹಿಂದಿನ ವಿವರಣೆಯಲ್ಲಿಯ “ಸೌಂದರ್ಯ” ಮತ್ತು “ಸುಂದರತೆ” ಎಂಬ ಪರಿಕಲ್ಪನೆಗಳನ್ನು ಪ್ರತೀಕಿಸುತ್ತವೆ. ಶಾಶ್ವತವೂ ಶಾಂತವೂ ಅಂತರ್ಗತವೂ ಅಗೋಚರವೂ ಆದ ಪದಾರ್ಥವೇ “ಶಿವ.” ಇದರ ಪರ್ಯಾಯ ಪದಗಳು “ಸತ್ಯ” ಮತ್ತು “ಸೌಂದರ್ಯ.” ವ್ಯತ್ಯಯಶೀಲವೂ ರುದ್ರವೂ ಬಹಿರ್ಗತವೂ ಗೋಚರವೂ ಆದ ಮುಖವೇ “ವಿಶ್ವ.” ಇದರ ಪರ್ಯಾಯ ಪದಗಳು “ಋತ” ಮತ್ತು “ಸುಂದರತೆ.” “ಸತ್ಯ”ವನ್ನು ಅಯಸ್ಕಾಂತ ಎಂದು ಭಾವಿಸಿದರೆ ಕಾಂತತ್ವ “ಋತ” ಆಗುತ್ತದೆ. ಹಿಮಾಲಯವನ್ನು “ಶಿವ”ನಿಗೆ ಸಮೀಕರಿಸಿದರೆ ಮಂಜು ಕವಿದಿರುವ ಆ ಜ್ವಲಂತ ದೃಶ್ಯ “ವಿಶ್ವ” ಆಗುತ್ತದೆ. ಶ್ರಾವಣದಲ್ಲಿ ಸಾಗರದ ರುದ್ರರಮಣೀಯ ದೃಶ್ಯ “ಋತ.” ಅದರ ಆಂತರಿಕ ತ್ರಾಣ “ಸತ್ಯ.” ಬೇಂದ್ರೆಯವರ ಕವನ ಹಾಡುವುದೂ ಇದೇ ಭಾವನೆಯನ್ನು:

ಸೂಜಿಗಲ್ಲು ತಿರುಗತಿತ್ತೋ ಹೊಳಿಮ್ಯಾಗ
ಸೂಜಿಯೊಂದು
ತೇಲತಿತ್ತೋ ಹೊಳಿಯಾಗ ||

ಋಷಿವಾಕ್ಯ ವಿಜ್ಞಾನಕಲೆ

ಹಿಂದೆ ವಿವರಿಸಿದ ವೈಜ್ಞಾನಿಕ ವಿಧಾನದಲ್ಲಿಯ ಮೊದಲ ಮೂರು ಹಂತಗಳನ್ನು ಸೂತ್ರ ರೂಪದಲ್ಲಿ ಅನುಕ್ರಮವಾಗಿ ಮೂರ್ತ, ತಾರ್ಕಿಕ ಮತ್ತು ತಾತ್ತ್ವಿಕ ಎಂದು ನಿರ್ದೇಶಿಸಬಹುದು. ಮೂರ್ತ ಹಂತದಲ್ಲಿ ಎದುರಿರುವ ಸಮಸ್ಯೆ ಅಥವಾ ವಿದ್ಯಮಾನ ಕುರಿತ ಮಾಹಿತಿಗಳನ್ನು ಇಂದ್ರಿಯಗಳ ನೆರವಿನಿಂದ ಸಂಗ್ರಹಿಸಿ ಇವುಗಳಿಗೆ ಒಂದು ರೂಪ ಕೊಡುತ್ತೇವೆ. ಹೀಗೆ ಸಂಗ್ರಹಿಸಿದ ಮಾಹಿತಿಗಳಿಂದ ಸಾರ ಆಸವಿಸಲುಮಾನವಮತಿ ಪ್ರತಿಭಾನ್ವಿತ ಊಹೆಯನ್ನು ಅಂತರ್ಬೋಧಾತ್ಮಕವಾಗಿ ಮಂಡಿಸುತ್ತದೆ. ಈ ಸಾರಕ್ಕೆ ವಾದವೆಂದು ಹೆಸರು. ಇದು ತಾರ್ಕಿಕ ಹಂತ. ಈ ವಾದದ ಜಿಗಿಹಲಗೆ ಮೇಲೆ ನಿಂತು ಅಜ್ಞಾತದ ಅಮೂರ್ತತೆಯತ್ತ ನೆಗೆತ ಮೂರನೆಯದು – ತಾತ್ತ್ವಿಕ ಅಥವಾ ಅಮೂರ್ತ ಹಂತ. ಕುವೆಂಪು ವಾಣಿಯಲ್ಲಿ “ಏರುವೆನು ವಾಗ್ದೇವಿಯಮೃತ ರಸನೆಯ ಲಸನ್‌ನಾವೆಯಂ…ಸೇರುವೆನು ಋತಚಿದ್ರಸಾಬ್ಧಿಯಂ.”

ವಿಜ್ಞಾನಿಯಾಗಲೀ ಕಲಾವಿದನಾಗಲೀ ಇವು ಮೂರು ಹಂತಗಳನ್ನೂ ಐದಲೇಬೇಕು. ಜ್ಞಾನ ವಿಜ್ಞಾನಮೇರುವಿನೆಡಗಿನ ಋಜು ಅಭಿಯಾನ ಇಲ್ಲಿಂದ ಆರಂಭ. ಮುಂದಿನ ಆರೋಹೀಸ್ತರಗಳಲ್ಲಿ ವಿಜ್ಞಾನ, ಕಲೆ ಎಂಬ ದ್ವೈತತ್ವ ಮಸಳಿ ವಿಜ್ಞಾನಕಲೆ ಎಂಬ ಅದ್ವೈತ ತತ್ತ್ವ ಮಾತ್ರ ಮಸಗುತ್ತದೆ: ಋತ ಚಿತ್ರಸಾಬ್ಧಿಯಲ್ಲಿ ಲೀನವಾಗುವ ನದಿಗಳ ಅನೇಕತೆ ಏಕತೆಯಾಗುವಂತೆ, ಅದು ಪೂರ್ಣತೆ:

ಪೂರ್ಣತಾಭಿಮುಖಯಾನಂ ಮನುಜ ಶಕ್ತಿ ಮಿತಿ
ಪೂರ್ಣತೆಯನೈದುವುದಸಾಧ್ಯಮಾತಂಗೆ
ತಿಳಿ
ವರ್ಣಕವದಾಗದೆಂದೂ
ವರ್ಣ, ಸಮವಲ್ಲ
ವರ್ಣವಕೆ
ಪ್ರಕೃತಿಯೊಳ್ನೀರಪನಿ ಅತ್ರಿಸೂನು ||

ವೈಜ್ಞಾನಿಕ ವಿಧಾನ ನಮಗೆ ಪ್ರದಾನಿಸಿರುವ ಮೂರು ಆರೋಹೀಹಂತಗಳಿಂದ (ಮೂರ್ತ, ತಾರ್ಕಿಕ, ತಾತ್ತ್ವಿಕ) ಸಜ್ಜಾಗಿ ಮಂಕುತಿಮ್ಮನ ನುಡಿಚಿತ್ರವನ್ನು ‘ಹೊಸ ಚಿಗುರು ಹಳೆಬೇರು…. ಜೀವನಕೆ ಮಂಕುತಿಮ್ಮ” ಈಗ ಹಂತ ಹಂತವಾಗಿ ಪರಾಂಬರಿಸೋಣ. ಇಲ್ಲಿ ಡಿವಿಜಿಯವರು ಈ ಮೇಲೆ ವಿವರಿಸಿರುವ ಮೂರು ಉತ್ತರೋತ್ತರ ಸ್ಥಿತಿಗಳಲ್ಲಿ ಜೀವನಕ್ಕೆ ಭಾಷ್ಯ ಬರೆದಿದ್ದಾರೆ:

  1. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು.” ಸಸ್ಯ ಕುರಿತಂತೆ ಇದು ನೈಸರ್ಗಿಕ ವಾಸ್ತವತೆ. ರೂಪಕಾರ್ಥದಲ್ಲಿ “ಚಿಗುರು” ಯುವ ಜನತೆಯನ್ನೂ “ಬೇರು” ವೃದ್ಧ ಮಂದಿಯನ್ನೂ “ಮರ” ಸಾಕ್ಷಾತ್‌ಜೀವನವನ್ನೂ ಪ್ರತೀಕಿಸುತ್ತವೆ. ವೈಜ್ಞಾನಿಕ ವಿಧಾನದಲ್ಲಿಯ ಮೂರ್ತಸ್ಥಿತಿಗೆ ಇದು ಸಂವಾದಿಯಾಗಿದೆ.
  2. “ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ.” ವ್ಯಕ್ತಿ ಸರ್ವತೋಮುಖ ಉತ್ಕರ್ಷೆ ಸಾಧಿಸಲು ಆತ ಅನುಸರಿಸಲೇಬೇಕಾದ ವ್ಯಾವಹಾರಿಕ ನೀತಿ ಇದರಲ್ಲಿ ನಿಹಿತವಾಗಿದೆ. ಇದು ಪುರೋಗಮನ – ನಿಯಂತ್ರಣವೆಂಬ ಪರಸ್ಪರ ನಿಯಂತ್ರಕ ಬಲಗಳ ಗತ್ಯಾತ್ಮಕ ವ್ಯವಸ್ಥೆಯೇ ಬದುಕು ಎನ್ನುತ್ತದೆ: ‘ಪುರೊಗಮನ’ ಜೀವನವನ್ನು ಮುನ್ನಡೆಸುತ್ತದೆ, ‘ನಿಯಂತ್ರಣ’ ಈ ಮುನ್ನಡೆಗೆ ದಿಗ್ದರ್ಶನವೀಯುತ್ತದೆ. ನಿಯಂತ್ರಣರಹಿತ ಪುರೋಗಮನ ಅಪಘಾತಹೇತು, ಪುರೋಗಮನರಹಿತ ನಿಯಂತ್ರಣ ಮರಣದ ಪರ್ಯಾಯ. ಪುರೋಗಮನ ನಿಯಂತ್ರಣ ಸಂಲಯನವೇ ಋಜುಜೀವನ: “ರಸವೇ ಜನನ ವಿರಸ ಮರಣ ಸಮರಸವೇ ಜೀವನ” ಎಂಬಂತೆ. ಪುರೋಗಮನವನ್ನು “ಪ್ರೀತಿ” ಎಂದೂ ನಿಯಂತ್ರಣವನ್ನು “ನೀತಿ” ಎಂದೂ ಭಾವಿಸೋಣ. ಪ್ರೀತಿ – ನೀತಿ ಸಮನ್ವಯವೇ ಪ್ರಾಮಾಣಿಕ ಜೀವನ, ಇದೇ ಧರ್ಮ. ವ್ಯಕ್ತಿ – ವ್ಯಕ್ತಿ ನಡುವಿನ ಅಂತರವರ್ತನೆ ಪ್ರೀತಿಸೇಚಿತವೂ ಮತ್ತು ನೀತಿನಿಯಂತ್ರಿತವೂ ಆಗಿರಬೇಕು. ಪ್ರೀತಿರಹಿತ ನೀತಿ ಗೌತಮ ಋಷಿಯಂತೆ ಜೀವನವಿಮುಖಿ, ನೀತಿರಹಿತ ಪ್ರೀತಿ ಧೃತರಾಷ್ಟ್ರನಂತೆ ಜೀವನ ಮಾರಕ. ಪ್ರೀತಿ – ನೀತಿ ಸಂತುಲನೆ ಎಂದರೆ: ಸಂಚಿತಾನುಭವದಿಂದ ಪಾಠ ಕಲಿತು ವರ್ತಮಾನದಲ್ಲಿ ಮೌಲ್ಯಬಧ್ಧವೂ ಕ್ರಿಯಾಶೀಲವೂ ಆಗಿ ನಡೆಸುವ ಜೀವನ.

ಪ್ರಸಕ್ತ ಪಂಕ್ತಿಯಲ್ಲಿ (“ಹೊಸಯುಕ್ತಿ…”) ಹಿಂದಿನದರನ್ವಯ “ಹೊಸಚಿಗುರು” ಪದಯುಗ್ಮ “ಹೊಸಯುಕ್ತಿ” ಆಗಿಯೂ ‘ಹಳೆಬೇರು” ಪದಯುಗ್ಮ ‘‘ಹಳೆತತ್ತ್ವ” ಆಗಿಯೂ ದ್ರವ್ಯಾಂತರಣಗೊಂಡಿವೆ (transmuted) ಮಹಾ ಕಲಾವಿದನ ಕುಂಚದ ಬಿಡಿ ಗೆರೆಗಳು ಸಂಘನಿಸಿ ಅಮೂರ್ತ ಭಾವ ಹೊಮ್ಮುವಂತೆ. ವೈಜ್ಞಾನಿಕ ವಿಧಾನದಲ್ಲಿಯ ತಾರ್ಕಿಕ ಸ್ಥಿತಿಗೆ ಇದು ಸಂವಾದಿ ಆಗಿದೆ.

  1. “ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ ಜಸವು ಜನಜೀವನಕೆ.” ಇಲ್ಲಿ ವಿಜ್ಞಾನ – ಕಲಾಸಂಪನ್ನ ಡಿವಿಜಿಯವರ ಚಿಂತನೆಯಮೂರ್ತ ಮತ್ತು ತಾರ್ಕಿಕ ಸ್ಥಿತಿಗಳೆರಡನ್ನೂ ಉತ್ತರಿಸಿ ಮೌಲ್ಯಗಳ ಹಾಗೂ ಅಮೂರ್ತನೆಯ “ಋತಚಿದ್ರಸಾಬ್ಧಿ”ಯಲ್ಲಿ ಲೀನವಾಗಿರುವುದನ್ನು ಕಾಣುತ್ತೇವೆ. “ಋಷಿವಾಕ್ಯ” ಎಂದರೆ ಸಿದ್ಧಾಂತ, “ವಿಜ್ಞಾನಕಲೆ” ಎಂದರೆ ಪ್ರಯೋಗ. ಪ್ರಯೋಗದಿಂದ ಸಿದ್ಧಾಂತವೋ ಸಿದ್ಧಾಂತದಿಂದ ಪ್ರಯೋಗವೋ ಹಿಂದೆ ಉಲ್ಲೇಖಿಸಿರುವ ಕೂರಂಟ್‌ಅವರ ವಿವರಣೆಯಲ್ಲಿ ಇಲ್ಲಿಯ “ಪ್ರಯೋಗ” “ವಾಸ್ತವತೆ” ಆಗಿದೆ ಎಂದು ಗಮನಿಸಬೇಕು. ಈ ದ್ವಂದ್ವವನ್ನು ಬೇರ್ಪಡಿಸಲಾರೆವು. ಸತ್ಯ – ಋತ ಸಂಬಂಧಕ್ಕೆ ಸದೃಶವಾದದ್ದು ಋಷಿವಾಕ್ಯ – ವಿಜ್ಞಾನಕಲೆ ಅಥವಾ ಸಿದ್ಧಾಂತ –ಪ್ರಯೋಗ (ವಾಸ್ತವತೆ) ಸಂಬಂಧ. ತತ್ತ್ವಶಾಸ್ತ್ರದಲ್ಲಿಯ ಒಂದು ಸೂಕ್ತಿ: “ಸಿರಿವಂತರು ಮತ್ತು ಬಡವರು ಬೀಗವಿಕ್ಕಿರುವ ಎರಡು ಸಂದೂಕಗಳು ಒಂದರ ಕೀಲಿ ಇನ್ನೊಂದರೊಳಗೆ.” ಜೀವನನಾನ್ಯದ ಎರಡು ಮಗ್ಗುಲುಗಳು ಋಷಿವಾಕ್ಯ ಮತ್ತು ವಿಜ್ಞಾನಕಲೆ (ಸಿದ್ಧಾಂತ ಮತ್ತು ವಾಸ್ತವತೆ). ರಾಷ್ಟ್ರಲಾಂಛನಕ್ಕೆ ಸಂವಾದಿ ಆದದ್ದು ಋಷಿವಾಕ್ಯ, ಅಂಕಿತಮೌಲ್ಯಕ್ಕೆ ಸಂವಾದಿ ಆದದ್ದು ವಿಜ್ಞಾನಕಲೆ, ಇವೆರಡೂ ಮೇಳವಿಸಿದಾಗ ನಾಣ್ಯ ಸುಭದ್ರವಾಗಿ ಚಲಾವಣೆಯಲ್ಲಿದ್ದು ರಾಷ್ಟ್ರೀಯ ಸಂಪದ್ವರ್ಧನೆಗೆ ಕಾರಣವಾಗುತ್ತವೆ. “ಜನಜೀವನದ ಜಸ” ಅಥವಾ ಯಶಸ್ಸು ಎಂದರೆ ಇದೇ. ವೈಜ್ಞಾನಿಕ ವಿಧಾನದಲ್ಲಿಯ ತಾತ್ತ್ವಿಕ ಸ್ಥಿತಿಗೆ ಇದು ಸಂವಾದಿಯಾಗಿದೆ.

ಸಿದ್ಧಾಂತ – ಪ್ರಯೋಗ ಅಥವಾ ಋಷಿವಾಕ್ಯ – ವಿಜ್ಞಾನಕಲೆ ಸಾಮರಸ್ಯ ಏರ್ಪಡದಾಗ ಏನಾಗುತ್ತದೆ? ಮಂಕುತಿಮ್ಮನ ಕ್ಷಮೆಕೋರಿ –

ಹೊಸಚಿಗುರು ಹಳೆಬೇರು ಕೂಡದಿರೆ ಮರಸೊರಗು
ಹೊಸ
ಯುಕ್ತಿ ಹಳೆ ತತ್ತ್ವ ಸೆಣಸುತಿರೆ ಅಪಧರ್ಮ
ಋಷಿವಾಕ್ಯ
ವಿಜ್ಞಾನಕಲೆ ಸೇರದಿರಲು
ಲ್ಷಷಯುಕ್ತ
ಜನಜೀವನವು ತಿಳಿಯೋ ಅತ್ರಿಸೂನು

ಅಂತೋಣಿ ಡಿ ಮೆಲ್ಲೋ ಎಂಬ ಪಾದ್ರಿ ಬರೆದಿರುವ “ದಿ ಸಾಂಗ್‌ಆಫ್‌ದಿ ಬರ್ಡ್‌”ನಲ್ಲಿಯ ಎರಡು ಆಖ್ಯಾನಕಗಳು ಈ ಸಂದರ್ಭದಲ್ಲಿ ಮನನೀಯವಾಗಿವೆ:

* ಒಬ್ಬ ಪಂಡಿತ ಬುದ್ಧನಿಗೆ ಹೇಳಿದ: “ಗುರುವೇ! ನೀನು ಬೋಧಿಸುತ್ತಿರುವ ಸೂಕ್ತಿಗಳು ಧರ್ಮಗ್ರಂಥಗಳಲ್ಲಿಲ್ಲ.”

ಬುದ್ಧ ನುಡಿದ: “ಹಾಗಾದರೆ ಅವನ್ನು ಅಲ್ಲಿ ಅಳವಡಿಸು.”

ಪಂಡಿತನಿಗೆ ತುಂಬ ಮುಜಗರವಾಯಿತು. ತುಸುಕಾಲ ತಡೆದು ಅಳುಕಿನಿಂದ ಪಿಸು ನುಡಿದ: “ಗುರುವೇ! ನಾನೊಂದು ಅರಿಕೆ ಸಲ್ಲಿಸಲೇ? ನೀನು ಬೋಧಿಸುತ್ತಿರುವ ಕೆಲವೊಂದು ಸೂಕ್ತಿಗಳು ಧರ್ಮಗ್ರಂಥಗಳಲ್ಲಿ ಉಕ್ತವಾಗಿರುವವನ್ನು ವಿರೋಧಿಸುತ್ತವೆ.”

ಬುದ್ಧ ಸಮಾರೋಪಿಸಿದ: “ಹಾಗಾದರೆ ಧರ್ಮಗ್ರಂಥಗಳಿಗೆ ತಿದ್ದುಪಡಿ ಅಗತ್ಯ.”

* ಪ್ರಪಂಚದ ಸಕಲ ಮತಧಮ್ಮಗಳ ಸಮಸ್ತ ಧಮ್ಮಗ್ರಂಥಗಳನ್ನೂ ಪುನಾರೂಪಿಸಬೇಕೆಂಬ ಸಲಹೆಯನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಯಿತು: ಪರಧರ್ಮ ಅಸಹಿಷ್ಣುತೆಗೆ ಅಥವಾ ಕ್ರೌರ್ಯಕ್ಕೆ ಇಂಬುಗೊಡುವ ಎಲ್ಲವನ್ನೂ ಅವುಗಳಿಂದ ನಿವಾರಿಸಬೇಕು; ವ್ಯಕ್ತಿಯ ಘನತೆಗೆ ಮಾರಕವಾಗುವ ಸರ್ವವನ್ನೂ ನಾಶಗೊಳಿಸಬೇಕು. ಈ ಸಲಹೆಯ ಮಂಡನಕಾರ ಜೀಸಸ್‌ಕ್ರೈಸ್ಟ್‌ಎಂದು ತಿಳಿದುಬಂದಾಗ ಪತ್ರಿಕಾವರದಿಗಾರರು ಆತನ ನಿವಾಸಕ್ಕೆ ಧಾವಿಸಿದರು. ಆತ ನೀಡಿದ ವಿವರಣೆ ತೀರ ಸರಳವಾಗಿತ್ತು: “ವ್ರತದಂತೆ ಧರ್ಮಗ್ರಂಥವೂ ಮಾನವನಿಗಾಗಿ ಇರುವಂಥದು, ಧರ್ಮಗ್ರಂಥಕ್ಕಾಗಿ ಮಾನವ ಅಲ್ಲ.”

ಆದ್ದರಿಂದ, ಹೊನ್ನ ತಟ್ಟೆಯ ಮುಸುಕು ತೆಗೆದಾಗ ಮಾತ್ರ (“ಹಿರಣ್ಮಯೇನ ಪಾತ್ರೇಣ…”), ಅಂದರೆ ಋತದ ಕವಚವನ್ನು ಭೇದಿಸಿದಾಗ ಮಾತ್ರ, ಸತ್ಯದರ್ಶನವಾಗುತ್ತದೆ. ಋತದ ಅನ್ವೇಷಣೆ ವಿಜ್ಞಾನ. ಈ ವಿಜ್ಞಾನದ ಗಮ್ಯ ಕಲೆ. ಋಷಿವಾಕ್ಯ ವಿಶ್ವಸತ್ಯ ಕುರಿತದ್ದು. ಇದರತ್ತ ಗಮಿಸುವುದು ವಿಜ್ಞಾನದ ಕಾರ್ಯ. ಫಲವಾಗಿ ವಿಜ್ಞಾನ ದ್ರವ್ಯಾಂತರಿಸಿ ಕಲೆಯಾಗುತ್ತದೆ. ಹೀಗೆ ಇವೆರಡು ಋಷಿವಾಕ್ಯ ಮತ್ತು ವಿಜ್ಞಾನಕಲೆ ಪರಸ್ಪರ ಪೂರಕ ಪೋಷಕನಾಗಿ “ಮೇಳವಿಸೆ ಜಸವು ಜನಜೀವನಕೆ.” ಆಗ ವ್ಯಕ್ತಿ ಆನಂದಲೀನನಾಗುತ್ತಾನೆ. ಕುವೆಂಪು ನುಡಿಗಳಲ್ಲಿ:

ತಮೋ ತಿಮಿರವಳಿಯಲಲ್ಲಿ ಪರಂಜ್ಯೋತಿ ಬೆಳಗಲಿ
ಋತದ
ಶಿವದ ಆನಂದದ ಚಿದ್ವಿಭೂತಿ ತೊಳಗಲಿ ||

ಈ ಮೂರನೆಯ ಸ್ಥಿತಿ ಋತದ ಕವಚಭೇದನೆ, ಸತ್ಯದರ್ಶನ, ವಿಜ್ಞಾನಕಲೆ ಸಂಲಯನ ಮತ್ತು ಆನಂದ ಪಾರವಶ್ಯ ಮಾನವನ ಎದುರು ಒಂದು ಅಮೂರ್ತ ಆದರ್ಶ. ಮೌಲ್ಯ ಅಥವಾ ಗಮ್ಯ ಒಡ್ಡುತ್ತದೆ. ಅದರ ಗುಣಗಳೇನು?

ಅದು ಇದೆ, ಆದರೆ ಅಲಭ್ಯ.
ಅದು
ಬರಸೆಳೆಯುತ್ತದೆ, ಆದರೆ ಹಾದಿ ತಿಳಿಯದು.
ಅದು
ಪಣಹೂಡಿದೆ, ನಾನು ಗೆಲ್ಲಲೇಬೇಕು.

ಭೌತವಿಶ್ವದಲ್ಲಿಯ ಕೃಷ್ಣವಿವರಕ್ಕೆ (Black Hole) ಸಂವಾದಿ ಆದದ್ದು ಈ ಮೇಲಿನ “ಅದು.” ಚಂದ್ರಶೇಖರ್‌ಮತ್ತೆ ಮತ್ತೆ ಹೇಳುತ್ತಿದ್ದುದು: “ಭೌತವಿಶ್ವದಲ್ಲಿಯ ಪರಮ ಸುಂದರ ನಿರ್ಮಿತಿ ಕೃಷ್ಣವಿವರ.” (ಇದೇ ಲೇಖಕನ ‘ಕೃಷ್ಣವಿವರಗಳು’ ಪುಸ್ತಕದಲ್ಲಿ ಸವಿವರ ವಿಶ್ಲೇಷಣೆ ಇದೆ.)

ಈಶಾವಾಸ್ಯೋಪನಿಷತ್ತಿನ ಪ್ರಖ್ಯಾತ ಶ್ಲೋಕ:

ತದೇ ಜತಿ ತನ್ನೈಜತಿ ತದ್ದೂರೇ ತದ್ವಂತಿಕೇ
ತದಂತರಸ್ಯ
ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||

ಅದು ಚಲಿಸುವುದು. ಚಲಿಸುವುದು, ಅದು ದೂರದಲ್ಲಿದೆ, ಹತ್ತಿರದಲ್ಲಿದೆ, ಅದು ಎಲ್ಲದರ ಒಳಗೆ ಇದೆ. ಅದೇ ಎಲ್ಲಕ್ಕೂ ಹೊರಗೆ ಇದೆ. (ಅನು: ಸೋಮನಾಥಾನಂದ) ಮೇಲಿನ ವಿವರಣೆ ಗಮ್ಯ – ಗಮನ – ಮಾರ್ಗ ಸಂಬಂಧವನ್ನು ಸೂಚಿಸುತ್ತದೆ. ಗಮ್ಯ – ಗಮನ – ಮಾರ್ಗ ಅವಿಭಾಜ್ಯ ಸನ್ನಿಕಟತೆಯಲ್ಲಿ ಎರಕಗೊಂಡಿವೆ. ಎಂದೇ ಒಂದನ್ನು ಉಳಿದೆರಡರಿಂದ ಪ್ರತ್ಯೇಕಿಸುವುದು ಅಸಾಧ್ಯ. ಮಾನವನ ಸಕಲ ಸೃಜನಶೀಲ ಕ್ರಿಯೆಗಳನ್ನೂ ಪ್ರೇರಿಸಿ ಪೋಷಿಸುವುದು ಗಮ್ಯ – ಗಮನ – ಮಾರ್ಗ ಅಂತರಕ್ರಿಯೆ. ಇದೇ ಋಷಿವಾಕ್ಯ – ವಿಜ್ಞಾನಕಲೆ ಮೇಳನ ಮತ್ತು ತಜ್ಜನ್ಯ ಜೀವನಯಶಸ್ಸು. ಧರ್ಮ ಇದರ ತಳಹದಿ.

ಮೌಲ್ಯಗಳ ಆಕರ ಧರ್ಮ. ಇದು ವ್ಯಕ್ತಿಗೆ ಗುರಿ ಅಥವಾ ಗಮ್ಯವನ್ನು ವಿಧಿಸುತ್ತದೆ. ಇದೊಂದು ಅಮೂರ್ತ ಗುಣ. ಇದನ್ನು ಐದಲು ಮೂರ್ತ ಮಾರ್ಗನಿರ್ಮಾಣ ಅಗತ್ಯ. ಇದು ವಿಜ್ಞಾನದ ಹೊಣೆ. (ನಿಸರ್ಗದ ಜೊತೆಗೆ ಮಾನವಮತಿ ವರ್ತಿಸಿದಾಗ ವಿಜ್ಞಾನ ಮೈದಳೆಯುತ್ತದೆ, ಅವ್ಯಕ್ತದ ಜೊತೆ ವರ್ತಿಸಿದಾಗ ಧರ್ಮ ಕೆನೆಗಟ್ಟುತ್ತದೆ.)ಐನ್‌ಸ್ಟೈನ್‌ಬರೆದಿದ್ದಾರೆ:

ಧರ್ಮರಹಿತ ವಿಜ್ಞಾನ ಕುಂಟು, ವಿಜ್ಞಾನರಹಿತ ಧರ್ಮ ಕುರುಡು.

ಮೊದನೆಯದು ಗುರಿ ಇರದ ವೃಥಾನಡಿಗೆ, ಎರಡನೆಯದು ದಾರಿ ಅರಿಯದ ವೃಥಾ ಪರಡಿಕೆ. ವಿಜ್ಞಾನಕ್ಕೆ ಧರ್ಮ ಮಾನವೀಯತೆಯನ್ನು ಪೂಸಬೇಕು. ಧರ್ಮಕ್ಕೆ ವಿಜ್ಞಾನ ವಾಸ್ತವತೆಯನ್ನು ಒದಗಿಸಬೇಕು. ಎಂದೇ ಧರ್ಮದೊಡನೆ ವಿಜ್ಞಾನ ಮೇಳವಿಸಲು ಜೀವನಕ್ಕೆ ಸಾರ್ಥಕ್ಯ ಲಭಿಸುತ್ತದೆ. ಗೋಪಾಲಕೃಷ್ಣ ಅಡಿಗರ (ಹಿಂದೆ ಉಲ್ಲೇಖಿಸಿದೆ) ನುಡಿಗಳಲ್ಲಿ

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೆ ಜೀವನ?

ಶಂಕರವಾಣಿ

ಶ್ರೀ ಶಂಕರಾಚಾರ್ಯರ “ಭುಜಗೋವಿಂದಮ್‌”ನಲ್ಲಿರುವ ಸುಪರಿಚಿತ ಶ್ಲೋಕ:

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ
ನಿರ್ಮೋಹತ್ವಂ
ನಿರ್ಮೋಹತ್ವೇ
ನಿಶ್ಚಲ ತತ್ವಂ
ನಿಶ್ಚಲ
ತತ್ವೇ ಜೀವನ್ಮುಕ್ತಿಃ ||

ವೈಜ್ಞಾನಿಕ ವಿಧಾನದಲ್ಲಿ ಗಮಿಸುತ್ತ ಇದನ್ನು ಅರ್ಥವಿಸಲು ಪ್ರಯತ್ನಿಸೋಣ. ವಿಜ್ಞಾನದ ಪಥಕ್ರಮಣದಲ್ಲಿ ಸಮಸ್ಯೆ ಎದುರಾಗುತ್ತದೆ. ಇದೇ ಆ ವಿಜ್ಞಾನಿಗೆ “ಸತ್ಸಂಗ.” ಸಮಸ್ಯೆಯ ರಹಸ್ಯಶೋಧನೆ, ಅಂದರೆ ಸಮಸ್ಯಾಪರಿಹಾರ, ಆತನ ಆರ್ಜುನಲಕ್ಷ್ಯ ಮಾತ್ರ ಎಂದೇ ಇತರ ಸಂಗಗಳು ಆತನಿಗೆ ವರ್ಜ್ಯ “ನಿಸ್ಸಂಗತ್ವಂ.” ಹೀಗೆ, ಒಂದನೆಯ “ಮೂರ್ತ ಅಥವಾ ಭೌತ ಸ್ಥಿತಿ”ಯಲ್ಲಿ ಮಗ್ನನಾಗುವ ವಿಜ್ಞಾನಿಗೆ ಎಲ್ಲ ಬಗೆಯ ಮೋಹಗಳೂ ದೂರವಾಗುತ್ತವೆ. ಇದೇ “ನಿರ್ಮೋಹತ್ವ.” ವಿಮಾನವೀಗ ನೆಲದಿಂದ ಮೇಲೆದ್ದಿದೆ, ಇಲ್ಲಿಯ ಪಾಶಗಳಿಂದ ದೂರವಾಗಿದೆ, ಗಗನಗಾಮಿ ಆಗಿದೆ (ಹಿಂದೆ ಉಲ್ಲೇಖಿಸಿರುವ ಕೂರಂಟ್‌ಉಕ್ತಿಯನ್ನು ಗಮನಿಸಿ). ಆ ಔನ್ನತ್ಯದಲ್ಲಿ ವಿಜ್ಞಾನಿಗೆ ತನ್ನ ಸಮಸ್ಯೆಯ ಬಗೆಗಿನ ತಳರೂಪಿಕೆ ತುಸು ತುಸವೇ ಸ್ಪಷ್ಟವಾಗುತ್ತ ಹೋಗುವುದು. ನಿರ್ಮೋಹದಿಂದ ಮೇಲಿನ ಮಜಲು “ನಿಶ್ಚಲತತ್ತ್ವ” ದರ್ಶನ. ಇದು ತಾರ್ಕಿಕ ಸ್ಥಿತಿ. ಇಂಥ ವಿಜ್ಞಾನಿಗೆ, ಅಂದರೆ ನಿಶ್ಚಲತತ್ತ್ವದರ್ಶನಲೀನವಾಗಿರುವಾತನಿಗೆ ಸಮಸ್ಯಾಪರಿಹಾರ ತಂತಾನೇ ಸ್ಫುರಿಸುತ್ತದೆ. ಈ ಹಂತವೇ “ಜೀವನ್ಮುಕ್ತಿ” ಅಥವಾ ತಾತ್ತ್ವಿಕ ಸ್ಥಿತಿ.

ಸಾರಾಂಶ

ಮಂಕುತಿಮ್ಮನ ಕಗ್ಗ, ವೈಜ್ಞಾನಿಕ ವಿಧಾನ ಮತ್ತು ಶ್ರೀಶಂಕರಾಚಾರ್ಯಕೃತ ಶ್ಲೋಕ ಇವುಗಳ ಸಂವಾದಿತ್ವ ಗಮನಿಸಬೇಕು:

ಮಂಕುತಿಮ್ಮ ವಾಣಿ ವೈಜ್ಞಾನಿಕ ವಿಧಾನ ಶಂಕರವಾಣಿ
ಹೊಸ ಚಿಗುರು ಹಳೆ ಬೇರು ಮೂರ್ತಹಂತ ಸತ್ಸಂಗತ್ವ
ಹೊಸ ಯುಕ್ತಿ ಹಳೆ ತತ್ತ್ವ ತಾರ್ಕಿಕ ಹಂತ ನಿಶ್ಚಲ ತತ್ತ್ವ
ಋಷಿವಾಕ್ಯ ವಿಜ್ಞಾನಕಲೆ ತಾತ್ತ್ವಿಕ ಹಂತ ಜೀವನ್ಮುಕ್ತಿ
ಜೀವನ ಯಶಸ್ಸು ವಿಶ್ವರೂಪ ದರ್ಶನ ಆನಂದಾನುಭೂತಿ

ಹಾದಿಗಳು ಬೇರೆ, ಗುರಿ ಒಂದೇ; ವಿಧಾನಗಳು ಬೇರೆ, ಫಲ ಒಂದೇ; ಮತ್ತು ಪರಿಕರಗಳು ಬೇರೆ, ಪಾಕ ಒಂದೇ;

ಸಕಲಕೆಲ್ಲಕೆ ನೀನೆ
ಅಕಳಂಕ
ಗುರುವೆಂದು
ನಿಖಿಳಶಾಸ್ತ್ರವು
ಪೇಳುತಿರಲರಿದೆನು
ಅವರವರ
ವೇಷದಲಿ
ಅವರವರಿಗೆಲ್ಲ
ಗುರು ನೀನೊಬ್ಬನೆ
ಅವರವರ
ಭಾವಕ್ಕೆ
ಅವರವರ
ಪೂಜೆಗಂ
ಅವರವರಿಗೆಲ್ಲ
ಶಿವ ನೀನೊಬ್ಬನೆ
ಹೋರಾಟವಿಕ್ಕಿಸಲು
ಬೇರಾದೆಯಲ್ಲದೆ
ಬೇರುಂಟೆ
ಜಗದೊಳಗೆ ನೀನಲ್ಲದೆ
ಆರು
ಅರಿಯರು ನೀನು ಬೇರಾದ ಪರಿಗಳನು
ಮಾರಾರಿ
ಶಿವಷಡಕ್ಷರಿ ಲಿಂಗವೆ ||

ಇಲ್ಲಿ “ಶಿವ” ಎಂದರೆ ವಿಜ್ಞಾನಿಗೆ ನಿಸರ್ಗ, ಆಸ್ತಿಕನಿಗೆ ದೇವರು, ನಾಸ್ತಿಕನಿಗೆ (ಅಂದರೆ ಮಾನವಮತಿಯ ಪರಮೋತ್ಕೃಷ್ಟ ಉಪಜ್ಞೆಯಾದ ದೇವರ ಬಗ್ಗೆ ನಂಬಿಕೆ ಇಲ್ಲದಾತನಿಗೆ) ಅಥವಾ ವಿಚಾರವಾದಿಗೆ ಜೀವನಮೌಲ್ಯ.

ಡಿವಿಜಿ ವಿವರಣೆ

‘ಮಂಕುತಿಮ್ಮನ ಕಗ್ಗ’ (ಡಿವಿಜಿ) 1943ರಲ್ಲಿ ಪ್ರಕಟವಾಯಿತು. ಇದರ ಒಂದು ಪದ್ಯ:

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ
ನೀನ್‌, ಅವನು ಪೇಳ್ದಂತೆ ಪಯಣಿಗರು
ಮದುವೆಗೋ
ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೆ
ನೆಲವಿಹುದು ಮಂಕುತಿಮ್ಮ ||

ಇದು ಸುಗಮ ಸಂಗೀತ ಮಾಧ್ಯಮದ ಮೂಲಕ ಜನಗಣಮನ ತಲಪಿ ಅನುನಾದಿಸಿದಾಗ ಸಮಕಾಲೀನ ಭಗವದ್ಗೀತೆ ಈ ನೆಲದಿಂದ ಅರಳಿ ಪರಿಮಳಿಸಿದಂತಾಯಿತು ಹನ್ನೆರಡನೆಯ ಶತಮಾನದಲ್ಲಿ ವಚನವಾಙ್ಮಯ ಪುಷ್ಪಿಸಿ ಸುಗಂಧ ಸೂಸಿದಂತೆ.

ವಿಜ್ಞಾನ, ಸಾಹಿತ್ಯ ಮತ್ತು ಸಂಗೀತ ಪರಿವ್ರಜನ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿವ್ಯಕ್ತಿ. ಎಂದೇ

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ
ಅಡಗಿ
ನಿದ್ರಿಪುದಲ್ಲಿ ಚೈತನ್ಯದಗ್ನಿ
ಮಿಡಿಯೆ
ಪರಸತ್ತ್ವ ವಿದ್ಯುದ್ದೀಪ್ತಿಯದನಾಗ
ನಡೆವುದದು
ಜೀವಿವೊಲು ಮಂಕುತಿಮ್ಮ ||

– ಈ ಪದ್ಯ ಓದಿದಾಗ ಮನಸ್ಸು ಪರಮಾಣುಶಕ್ತಿಯತ್ತ ತಂತಾನೇ ಹೊರಳಿತು. ಐನ್‌ಸ್ಟೈನ್‌1905ರಲ್ಲಿ ಮಂಡಿಸಿದ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಹೊರಣವನ್ನು (E = mc2) ಈ ಪದ್ಯ ಪ್ರತಿಮಿಸುವ ಬಗೆ ಮನನೀಯವಾಗಿದೆ. ಕೇವಲ 1 ಗ್ರಾಮ್‌ವಸ್ತುವನ್ನು (ಕಲ್ಲು, ಮರ, ಲೋಹ, ನೀರು ಅಥವಾ ಯಾವುದೇ ರದ್ದಿ ಕೂಡ ಆಗಬಹುದು) ಸಂಪೂರ್ಣವಾಗಿ ನಿರ್ನಾಮಗೊಳಿಸಿದರೆ ಅದರಿಂದ ಊಹಾತೀತ ಶಕ್ತಿ ಉದ್ಭವಿಸುತ್ತದೆ. ಅಂದರೆ ಶಕ್ತಿ (E) ಬೇರೆ ಅಲ್ಲ, ವಸ್ತು ಅಥವ ರಾಶಿ (m) ಬೇರೆ ಅಲ್ಲ, ಇವನ್ನು ಕೊಂಡಿಸುವ ಬಂಧಕ ಅಥವಾ ಅಂಟು ವಿಶ್ವದಲ್ಲಿ ಗರಿಷ್ಠ ವೇಗವಾಗಿರುವ ಬೆಳಕಿನ ಸ್ಥಿರ ವೇಗ c ಎಂಬುದು ಇದರ ಅರ್ಥ. ದಿನಾಂಕ 6 – 8 – 1945ರಂದು ಮೊದಲ ಪರಮಾಣು ಬಾಂಬ್‌ಕೆಡೆದಾಗ ಮತ್ತು “ದಿವಿಸೂರ್ಯ ಸಹಸ್ರಸ್ಯ” (ಗೀತೆ) ಕಾವ್ಯತ್ವದಿಂದ ಭೌತತ್ವಕ್ಕೆ ಇಳಿದಾಗ (ಕಲ್ಪನೆ ವಾಸ್ತವತೆ ಆದಾಗ) ಮೇಲಿನ ಕಗ್ಗ ಅಧಿಕ ಅರ್ಥ ಮತ್ತು ಧ್ವನಿ ನೀಡಿತು. (ಪರಮಾಣು ಬಾಂಬ್‌ತಾಡನೆಯ ನಗ್ನ ಮತ್ತು ಕ್ರೂರ ಸತ್ಯದರ್ಶನಕ್ಕಿಂತ ಮೊದಲೇ ಡಿವಿಜಿ ಈ ಪದ್ಯ ಬರೆದಿದ್ದರು ಎಂಬುದು ಗಮನಾರ್ಹ.)

“ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ ಕಂಪಿಸುವ ಕೇಂದ್ರ ನೀಂ”. ಖಗೋಳವಿಜ್ಞಾನದ ಮೊದಲ ಪಾಠವನ್ನು ಇದಕ್ಕಿಂತ ಅಡಕವಾಗಿ ಮತ್ತು ಸುಂದರವಾಗಿ ನಿರೂಪಿಸುವುದು ಅಸಾಧ್ಯ.

ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ
ಆವ
ಧೂಳಿನೋಳಾವ ಚೈತನ್ಯ ಕಣವೋ
ಜೀವವಿಂತಜ್ಞಾತ
ಸೂತ್ರದಾಟದ ಬೊಂಬೆ
ಭಾವಿಸಾ
ಸೂತ್ರಗಳ ಮಂಕುತಿಮ್ಮ ||

ವಿಕಿರಣಪಟು ಧಾತುಗಳ (radioactive elements) ಅಸ್ತಿತ್ವಕ್ಕೂ ಜೀವಿವಿಕಾಸಕ್ಕೂ ಬರೆದಿರುವ ಸಂಕ್ಷೇಪ ಭಾಷ್ಯವಿದು. ಇಂಥ ವಾಗ್ರತ್ನಗಳನ್ನು ವಿಜ್ಞಾನಾಸಕ್ತರು ಮಾತ್ರವಲ್ಲ. ಸಮಗ್ರವಾಗಿ, ಜೀವನಾಸಕ್ತರು ಯಾರು ಬೇಕಾದರೂ, ಈ ಮೇರು ಕೃತಿಯಿಂದ ಅಂತೆಯೇ ಇದರ ಸಂಗಾತಿ ಗ್ರಂಥವಾದ “ಮರುಳಮುನಿಯನ ಕಗ್ಗ”ದಿಂದ (1984) ಕೂಡ ಆಯ್ದು ಮೆಲುಕು ಹಾಕಿ ಕೃತಾರ್ಥರಾಗಬಹುದು. ಈ ಪರಿಯ ಸಾರ್ವಕಾಲಿಕ ಮೌಲ್ಯಯುಕ್ತ ರಚನೆಗಳ ಹಿನ್ನೆಲೆಯ ಜೀವಂತ ಸತ್ತ್ವ ಮತ್ತು ನಿರ್ವಾಹಕ ತತ್ತ್ವ ಯಾವ ಬಗೆಯದು? ನನಗೆ ಹೊಳೆದಿರುವ ತಾತ್ತ್ವಿಕ ಉತ್ತರ:

ಬುದ್ಧನೆಂಬವನೇನು ಸಾಮಾನ್ಯ ಪುರುಷನೇ?
ಬುದ್ಧಿ
ಸಂಸ್ಕಾರಕ್ಕೆ ಹೃದಯ ಸಂವೇದನೆಯು
ಬುದ್ಧಗೊಂಡಾಗ
ಮೈವಡೆದ ಆದರ್ಶ ಪರಿ
ಶುದ್ಧಾತ್ಮನೀತ
ಕಾಣ್ಅತ್ರಿಸೂನು ||

ಡಿವಿಜಿ ದರ್ಶನ

1965-69 ಅವಧಿಯಲ್ಲಿ ನಾನು ಬೆಂಗಳೂರು ನಿವಾಸಿ ಆಗಿದ್ದೆ. ಅಲ್ಲಿಯತನಕ ನನಗೆ ಡಿವಿಜಿಯವರ ವೈಯಕ್ತಿಕ ಪರಿಚಯವಿರಲಿಲ್ಲ. ಆ ಜ್ಞಾನಹಿಮಾಲಯದ ಅಸ್ತಿತ್ವ ಬಲುಹಿಂದಿನಿಂದಲೇ ತಿಳಿದಿತ್ತು. ಅದನ್ನು ಏರಲು ಸದಾ ಪ್ರಯತ್ನಶೀಲನಾಗಿದ್ದೆ. ಬೆಂಗಳೂರಿನಲ್ಲಿ ನನ್ನ ಮನೆ ಡಿವಿಜಿ – ಆಶ್ರಮದ ಸನಿಹದಲ್ಲೇ ಇತ್ತು. ಅರ್ಥಾತ್‌ನನಗೆ ಸಾಲೋಕ್ಯ ಮತ್ತು ಸಾಮೀಪ್ಯ ಒದಗಿದ್ದವು; ಸಾರೂಪ್ಯಗಳಿಸಲು ಅಧ್ಯಯನಮಗ್ನನಾಗಿದ್ದೆ; ಸಾಯುಜ್ಯ ಎಂದೂ ಐದಲಾಗದ ಆದರ್ಶವಷ್ಟೆ.

“ಮಂಕುತಿಮ್ಮನ ಕಗ್ಗ”ವನ್ನು ಆಮೂಲಾಗ್ರ ಅಭ್ಯಸಿಸಿ, ಅದರಲ್ಲಿ ಸಮೃದ್ಧವಾಗಿ ಸ್ಫುರಿಸುವ ಆಧುನಿಕ ವೈಜ್ಞಾನಿಕ ಪ್ರತಿಮೆಗಳನ್ನು ಗುರುತಿಸಿ ಟಿಪ್ಪಣಿ ಮಾಡಿಕೊಂಡು ಅವರಲ್ಲಿಗೆ ಹೋದೆ ಅಳುಕು ಅಂಜಿಕೆ ಹಿಂಜರಿಕೆ ಸಹಿತ. “ನೀವು ಆಧುನಿಕ ವೈಜ್ಞಾನಿಕ ಪರಿಕಲ್ಪನೆಗಳನ್ನು ಚೆನ್ನಾಗಿ ಅರಿತವರಾಗಿರಬೇಕು?” ಎನ್ನುತ್ತ ನಾನು ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಓದಿ ಹೇಳಿದೆ.

ನನ್ನ ಈ ಅಯಾಚಿತ ‘ಶಿಫಾರಸು’ ಅವರಿಗೆ ಅಪ್ರಿಯವಾಗಲಿಲ್ಲವೆಂದು ಅವರು ಬೀರಿದ ಮಧುರ ಮಂದಹಾಸದಿಂದ ಮತ್ತು ಮುಂದೆ ಭೋರ್ಗರೆದ ನಗೆಯ ಹೊನಲಿನಿಂದ ಸ್ಪಷ್ಟವಾಯಿತು. ಅವರೆಂದರು: “ಅಪ್ಪಾ! ನಾನು ಕಾಲೇಜು ಮೆಟ್ಟಲು ಕೂಡ ಹತ್ತಿದವನಲ್ಲ. ಆದರೆ ಜೀವನಧರ್ಮ ಮತ್ತು ದರ್ಶನಗಳಿಗೆ ಸಂಬಂಧಿಸಿದ ಸಮಸ್ತ ಚಿಂತನ ಪ್ರಕಾರಗಳಲ್ಲಿಯೂ ಆಸಕ್ತಿ ತಳೆದವನು. ಈ ದಿಶೆಯಲ್ಲಿ ನನ್ನ ಅನುಭವಸಾರವನ್ನು ಯಥಾಮತಿ ಯಥಾಶಕ್ತಿ ನಿರೂಪಿಸಿದ್ದೇನೆ, ಅಷ್ಟೆ. ಇದು ಆಧುನಿಕ ವಿಜ್ಞಾನರಂಗದಲ್ಲಿಯೂ ಪ್ರಸ್ತುತವಾಗಿದೆಯೆಂದರೆ ನನಗೆ ಆದ ಸತ್ಯದರ್ಶನ, ಭಾಗಶಃವೇ ಆದರೂ ಮತ್ತು ಅದನ್ನು ನಾನು ಅರಿತು ಅದಕ್ಕೆ ನೀಡಿರುವ ವ್ಯಾಖ್ಯಾನ ತಪ್ಪಾಗಿಲ್ಲವೆಂದು ತಿಳಿಯುತ್ತೇನೆ. ಜ್ಞಾನಮೇರು ಅಭಿಯಾನಕ್ಕೆ ಚಿಂತನೆಗಳು ಎಷ್ಟೊ ಮಾರ್ಗಗಳು ಅಷ್ಟು. ಈಗ, ದಾರ್ಶನಿಕ ಮತ್ತು ವಿಜ್ಞಾನಿ ತಮ್ಮ ತಮ್ಮ ಪಥಗಳಲ್ಲಿ ಆರೋಹಿಸುತ್ತಿರುವಾಗ. ಉಭಯರಿಗೂ ಗೋಚರವಾಗುವ ಕೆಲವು ಸಾಮಾನ್ಯ ದೃಶ್ಯಗಳಿರುತ್ತವೆ. ಈ ಕಾರಣದಿಂದಲೇ ತತ್ತ್ವಶಾಸ್ತ್ರದಲ್ಲಿಯ ಒಂದು ದರ್ಶನ ವಿಜ್ಞಾನದಲ್ಲಿಯೂ, ವಿಲೋಮವಾಗಿ, ವಿಜ್ಞಾನದಲ್ಲಿಯೇ ಒಂದು ದರ್ಶನ ತತ್ತ್ವಶಾಸ್ತ್ರದಲ್ಲಿಯೂ ಧ್ವನ್ಯರ್ಥ ನೀಡುವುದಾಗಿದೆ.” ಎಂದೇ

ಜ್ಞಾನಾಭಿಯಾನದಲಿ ಸಹಕಾರ ಹರಿಗೋಲು
ಮಾನಾಪಮಾನಗಳ
ಲೆಕ್ಕಿಸದೆ ಮುನ್ನೆಡೆವು
ಡೇ
ನಿನ್ನ ಹವಣಿರಲಿ ಸೋಲು ಗೆಲುವುಗಳಿಂದ
ಧ್ಯಾನ
ವಿಚಲಿತನಾಗದಿರಲೊ ಅತ್ರಿಸೂನು

ಇದೇ ವಿಷಯವನ್ನು ಚಂದ್ರಶೇಖರ್‌ಜೊತೆ ಪ್ರಸ್ತಾಪಿಸಿದೆ (ಜೂನ್‌1995) ಡಿವಿಜಿಯವರ ವಿವರಣೆಯನ್ನು ಅವರು ಪೂರ್ಣ ಅನುಮೋದಿಸಿದರು; “ವಿಜ್ಞಾನ ಎನ್ನಿ, ತತ್ತ್ವಶಾಸ್ತ್ರ ಎನ್ನಿ, ಅಥವಾ ಬೇರಾವುದೋ ಚಿಂತನಪ್ರಕಾರ ಎನ್ನಿ ಎಲ್ಲವುಗಳ ಮೂಲ ಮಾನವಮತಿ, ಪ್ರೇರಣೆ ನಿಸರ್ಗ. ಇನ್ನು ಈ ಮಾನವಮತಿಯಾದರೂ ನಿಸರ್ಗದ ಒಂದು ಅಂಶ. ಆದ್ದರಿಂದ ವಿವಿಧ ಚಿಂತನಪ್ರಕಾರಗಳ ನಡುವೆ ಸಾಮ್ಯ ಮತ್ತು ಸಾಮರಸ್ಯ ಪ್ರಕಟವಾಗಬೇಕಾದದ್ದು ಸಹಜ. ಪ್ರಕಟವಾಗದಿದ್ದರೆ ಆ ಚಿಂತನೆಯ ಒಳಗೆ ಏನೋ ದೋಷ ಹುದುಗಿದೆ ಎಂದರ್ಥ” ಎನ್ನುತ್ತ ಕೀಟ್ಸ್‌ಕವಿಯ ಪದ್ಯ ಉಲ್ಲೇಖಿಸಿದರು:

ಸೌಂದರ್ಯವೇ ಸತ್ಯ
ಸತ್ಯವೇ
ಸೌಂದರ್ಯ
ನಿನಗೆ
ತಿಳಿದಿರುವುದೀ ಧರೆಯಲ್ಲಿ ಇಷ್ಟೇ
ತಿಳಿದಿರಬೇಕಾದದ್ದೂ
ಇಷ್ಟೆ ||

ಕೊನೆಯದಾಗಿ “ಮಂಕುತಿಮ್ಮ” ಎಂದರೆ ಡಿವಿಜಿ; “ಅತ್ರಿಸೂನು” ಎಂದರೆ ಯಾರು?

ಅತ್ರಿಸೂನೆಂಬಾತ ಮಂಕುತಿಮ್ಮನಿಗೇನು
ಪುತ್ರನೇ
ಭ್ರಾತೃವೇ ಕುಲಜನೇ ನಕಲಿಯೇ?
ಚಿತ್ರಭಾನುವು
ತಿಮ್ಮ ಬರಿಕಿರಿ ಸೊಡರು ಸೂನು
ಶತ್ರುಗಳುಭಯರುಂ
ತಮಂಧಕ್ಕೆ ಅತ್ರಿಸೂನು ||

ವೆಂಕತಿಮ್ಮರ ಪುತ್ರ ಮದುಳಮುನಿಯನ ಮಿತ್ತ
ಪಂಕದಲಿ
ಕಮಲವರಳುವ ಸೂತ್ರವನ್ನರಿತು
ಸಂಕಟವನೆದುರಿಸುತ
ಕುಂಚಿಸಿದನೀ ಚಿತ್ರ
ಮಂಕುತಿಮ್ಮನ
ರಾಜ ಮಾರ್ಗದಲಿ ಅತ್ರಿಸೂನು ||
(1997).