ಪೀಠಿಕೆ

ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ “ಕೆ. ದಾಮೋದರ ಕಿಣಿ ಸ್ಮಾರಕೋಪನ್ಯಾಸ” ನೀಡಲು ಆಹ್ವಾನಿತನಾಗಿದ್ದೆ (15-11-1994). ಈ ಕಾರ್ಯಕ್ರಮದ ಜೀವನಾಡಿ ಪ್ರೋ.ಎಂ.ರಾಮಚಂದ್ರರು ನನಗೆ ಸೂಚಿಸಿದ ಹಲವಾರು ಶೀರ್ಷಿಕೆಗಳ ಪೈಕಿ “ ಋಷಿವಾಕ್ಯ ವಿಜ್ಞಾನಕಲೆ” ಎಂಬುದು, ಇದರ ಅರ್ಥನಾವೀನ್ಯದಿಂದಲೂ ಅಂಗಸೌಷ್ಠವದಿಂದಲೂ. ನನ್ನನ್ನು ಬಹಳವಾಗಿ ಆಕರ್ಷಿಸಿತು. ಈ ಸೂತ್ರವಾಕ್ಯದ ಪೂರ್ವೋತ್ತರ ಏನೆಂದು ನೇರ ಅವರನ್ನೇ ಕೇಳಬಹುದಿತ್ತು. ಆದರೆ ಪ್ರಯತ್ನಿಸಿ ವಿಫಲನಾದ ತರುವಾಯವೇ ಈ ಸುಲಭ ಮಾರ್ಗಾಶ್ರಯ ಸಾಧುವೆಂದು ಸ್ವಭಾವ ಎಚ್ಚರಿಸಿತು.

ಜ್ಞಾಪಕಶಕ್ತಿ ಎಂದೂ ನನ್ನ ಭದ್ರ ಆಸ್ತಿ ಆಗಿರಲಿಲ್ಲ. ಅದೂ ಪ್ರಾಯ ಅರುವತ್ತರ ಆನಂತರ (ನಾನು ಹುಟ್ಟಿದ್ದು 1926ರಲ್ಲಿ) ಆ ಶಕ್ತಿಯ ಪತನದರ ಅತಿ ತೀವ್ರವಾಗಿತ್ತು ಚಿಂತನೆ, ಅನ್ವೇಷಣೆ ಸಾಗಿದ್ದುವುಇಲ್ಲ, ಅವುಗಳಿಂದ ಸಂಪೀಡಿತನೂ (obsessed ಆಂತರಂಗಿಕ ತುಡಿತ), ವಂಶೀಕೃತನೂ (possessed ಬಾಹಿರಂಗಿಕ ಹಿಡಿತ) ಆಗಿದ್ದೆ. ಒಂದು ಸವಿಮುಂಜಾನೆ ಹಕ್ಕಿಯ ಇನಿದನಿ ಎದುರಿನ ಚಿಗುರಿನಿಂದ ತೀರ ಆಕಸ್ಮಿಕವಾಗಿ ಹೊಮ್ಮಿದೆ, (ನಗರಗಳಲ್ಲಿ ಈಗೀಗ ಕಾಗೆಗಳೂ ನಷ್ಟವಂಶಿಗಳಾಗುತ್ತಿವೆ) ಸಿಸೇಮೆ ತೆರೆದಿದೆ!

ಎಲ್ಲೆಲ್ಲು ಬೆಳಕು ಇರಲಾಕ ಅಳುತಿ ನೀಹಾಡಿ
ಒಡಲ
ಮರಿ ಮಾಡಿ
ಒಳಹೊರಗು
ನಾನಿರಲು ಯಾಕ ನಿನ ಹಣತಿs
ಬಾರ
ನನ ಗೆಣತಿ
ತೆರೆತೆರೀ
ನಿನ ಎದಿಕದಾ
ಬಂದಿತ
ಹದಾ
ಕೇಳ
ಪದಾ ಕೇಳ sದಾ ||

ಅಗೋ! ತೆರೆಯಿತು ಬೇಂದ್ರೆಯವರ ಈ ಪದ “ನನ ಎದಿಕದಾ!” ಮಿಂಚಿತು ಸುಪರಿಚಿತ ನಾದ :

ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ
ಹಳೆ ತತ್ತ್ವ ದೊಡಗೂಡೆ ಧರ್ಮ
ಋಷಿವಾಕ್ಯದೊಡನೆ
ವಿಜ್ಞಾನಕಲೆ ಮೇಳವಿಸೆ
ಜಸವು
ಜನಜೀವನಕೆ ಮಂಕುತಿಮ್ಮ ||

ಆ ಸಾಕ್ಷಾತ್ಕಾರ ವಿದ್ಯುನ್ಮುಹೂರ್ತದಲ್ಲಿ ರಾಮಚಂದ್ರ “ಹೊಸ ಯುಕ್ತಿ”ಗೆ ಹುಟ್ಟಿನ ಆಕಸ್ಮಿಕತೆಯಿಂದ “ಹಳೆತತ್ತ್ವ”ವಾಗಿರುವ ನಾನು ಮಣಿದು, ಬೇಂದ್ರೆಯವರ ಇನ್ನೊಂದು “ಋಷಿವಾಕ್ಯ” ತೀರ ಸಹಜವಾಗಿ ಹೊಳೆದು ಬಿತ್ತಿತು ಮಂದಹಾಸ:

ನಾದಬೇಕು ನಾದಬೇಕು
ನಾದಾನ
ನಾದಬೇಕು
ನಾದಕ್ಕೆ
ಪ್ರತಿನಾದಬೇಕು
ನಾದಾನ
ಆದ ಮ್ಯಾಲೆ ಯಾಕೆ ವಾದ ಬೇಕು? ||

ಋಷಿವಾಕ್ಯ

ಋಷಿವಾಕ್ಯ ಎಂದರೆ ಪರಮೋನ್ನತ ಸಿದ್ಧಿ ಐದಿರುವ ಪ್ರತಿಭಾನ್ವಿತನಿಂದ ಸ್ಫುರಣಗೊಳ್ಳುವ ಸ್ಫೂರ್ತಿದೀಪ್ತ ಉದ್ಗಾರ, ಪರಂಪರೆಯ ಹೊಸ ಮಿನುಗಿನ ಹೊಳಹು, ಮಾರ್ಗದರ್ಶಕ ಸೂಚನೆ, ಅಥವಾ ಮೌಲ್ಯಯುಕ್ತ ನುಡಿ.

ಜೀವಂತ ಜನಾಂಗದ ದೈನಂದಿನ ಜೀವನದಲ್ಲಿ ಕೆನೆಗಟ್ಟುವ ದರ್ಶನಗಳೇ ಮೌಲ್ಯಗಳು:

* ಸತ್ಯಂವದ ಧರ್ಮಂಚರ

* ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ
, ಅನ್ಯರಿಗೆ ಅಸಹ್ಯ ಪಡಬೇಡ
ಇದೇ
ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ
ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ ||

* ಸತ್ಯಮೇವ ಜಯತೇ ನಾನೃತಮ್‌

* ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ
ಸಂಬಂಧವಯ್ಯ? ||

ಮೌಲ್ಯಗಳ ಮೊತ್ತ ಸಂಸ್ಕೃತಿ, ಸಭ್ಯರನ್ನು ಸುಸಂಸ್ಕೃತರು ಎನ್ನುತ್ತೇವೆ. ನಡೆ ನುಡಿ ಬಗೆಗಳಲ್ಲಿ ಇವರು ಮೌಲ್ಯಗಳನ್ನು ಬಿಂಬಿಸುತ್ತಾರೆ. ಸಂಸ್ಕೃತಿಯ ಪ್ರವಹನ ಪರಂಪರೆ. ಪರಂಪರೆಯ ವರ್ತಮಾನ ಮುಖ ಸಂಪ್ರದಾಯ ಅಥವಾ ಶಿಷ್ಟಾಚಾರ. ರಾಮಾಯಣ ಕಾಲದ ಭಾರತೀಯ ಸಂಸ್ಕೃತಿಗೆ ಇಂದಿನ ನಾವುಉತ್ತರಾಧಿಕಾರಿಗಳಾಗಿರುವುದು ಪರಂಪರೆಯ ಕಾರಣವಾಗಿ. ಆದರೆ ಇಂದಿನ ಸಂಪ್ರದಾಯ ಬೇರೆ; ಅಂದಿನದು ಬೇರೆ. ಗಂಗೋತ್ರಿಯಲ್ಲಿಯೂ ಗಯಾದಲ್ಲಿಯೂ ಗಂಗಾನದಿ ಒಂದೇ. ಆದರೆ ಗಂಗಾಜಲ ಮಾತ್ರ ಬೇರೆ.

ಮೌಲ್ಯಯುಕ್ತ ನುಡಿ ಅಥವಾ ಬಾಳ್ವೆಗೆ ನಿದರ್ಶನಗಳು

  • ಮೈಥುನಕ್ರಿಯೆಯಲ್ಲಿ ನಿರತವಾಗಿ ಹೊರಪರಿವೆ ಮರೆತಿದ್ದ ಹಕ್ಕಿ ಜೋಡಿಯ ಪೈಕಿ ಒಂದಕ್ಕೆ ಬೇಡನ ಕ್ರೂರ ಬಾಣ ಕುಡುಕಿ ತತ್ಪೂರ್ವದ ಮಧುರಾನಂದ ಕರುಣಾಕ್ರಂದನವಾಗಿ ಪ್ರವಹಿಸುತ್ತದೆ. ಈ ದೃಷ್ಟಿವಿಚ್ಛಿದ್ರಕ ಮತ್ತು ಹೃದಯವಿದ್ರಾವಕ ದೃಶ್ಯ ವೀಕ್ಷಿಸಿದ ಕಿರಾತನ ಅಂತಃಕರಣ ದುಃಖದಗ್ಧವಾಗಿ ವಿಷಾದ ಶ್ರುತಿಯಲ್ಲಿ ದ್ರವಿಸುತ್ತದೆ ಆದಿಕಾವ್ಯದ ಪ್ರಥಮ ಪಂಕ್ತಿ :

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ಕ್ರೌಂಚ
ಮಿಥುನಾದೇಕಮವಧೀಃ ಕಾಮಮೋಹಿತಂ ||
 – ವಾಲ್ಮೀಕಿ ರಾಮಾಯಣ

ಮೂಕಶೋಕ ಆ ಕಿರಾತನ ನಮ್ಯ (flexible) ಮನವನ್ನು ನವ್ಯಕಾವ್ಯಸೃಷ್ಟಿಗೆ ಉತ್ತಾರಣೆಗೊಳಿಸಿದೆ. ಗೇಯ ಶ್ಲೋಕ ದ್ರವಿಸಿದೆ“ಹರನ ಜಡೆಯಿಂದ ಇಳಿದು” ಬಂದಂತೆ ಗಂಗೆ. ಕಿರಾತಶಿಲೆ ಈಗ ವಾಲ್ಮೀಕಿ ಗೊಮ್ಮಟ. ಈ ಭಾವ ಕುವೆಂಪು ಪ್ರತಿಭಾಮೂಸೆಯಲ್ಲಿ ಮರುವುಟ್ಟು ಪಡೆದಿರುವ ಪರಿ :

ಮಾಣ್, ನಿಷಾದನೆ ಮಾಣ್ ! ಕೊಲೆ ಸಾಲ್ಗುಮಯ್ಯೊ ಮಾಣ್!
ನಲಿಯುತಿರೆ
ಬಾನ್ ಬನದ ತೊರೆ ಮಲೆಯ ಭುವನ ಕವನಂ
ಸುಖದ
ಸಂಗೀತಕೆ ವಿಷಾದಮಂ ಶ್ರುತಿಯೊಡ್ಡಿ
ಕೆಡಿಸುವಯ್
‌||
– ಶ್ರೀ ರಾಮಾಯಣ ದರ್ಶನಂ

* ಚಕ್ರವರ್ತಿಗೆ ಅಕ್ಕಸಾಲೆ ತಯಾರಿಸಿಕೊಟ್ಟಿದ್ದ ಸ್ವರ್ಣಕಿರೀಟ ತಾಜಾ ವಸ್ತುವೇ? ಖೋಟಾ ಮಾಲೇ? ಕಿರೀಟಕ್ಕೆ ಗಾಸಿ ಆಗದಂತೆ ಈ ಪ್ರಶ್ನೆಗೆ ಉತ್ತರ ಅರಸುವುದು ಹೇಗೆ? ಈ ಸಮಸ್ಯೆಯಿಂದ ಪೂರ್ಣ ವಶೀಕೃತನಾಗಿದ್ದ ವಿಜ್ಞಾನಿ ಆರ್ಕಿಮಿಡೀಸ್‌(ಕ್ರಿ.ಪೂ 287 – 212) ಮೀಯಲೆಂದು ನೀರು ತುಂಬಿದ್ದ ತೊಟ್ಟಿಗೆ ಇಳಿಯುತ್ತಾನೆ. ಆಶ್ಚರ್ಯ! ತಾನು ಹಗುರ ಆದ ಅನುಭವ, ಜೊತೆಗೆ ತೊಟ್ಟಿಯಿಂದ ನೀರು ಹೊರ ತುಳುಕಿದ ನೋಟ! ಆಗ ಮಿಂಚಿದೆ ಸಮಸ್ಯೆಗೆ ಪರಿಹಾರಸಾಪೇಕ್ಷ ಸಾಂದ್ರತೆಯ ತತ್ತ್ವ ಆ ಗಳಿಗೆ ಆತ ಆತನಲ್ಲ, ಆ ಪರಿಹಾರ ಆತನನ್ನು ಸರ್ವಾಪೋಶಿಸಿದೆ: “ಕಂಡೆನಾ! ಕಂಡೆನಾ!” ಎಂದು ಉದ್ಗರಿಸುತ್ತ ಸ್ನಾನದ ಉಡುಪಿನಲ್ಲಿ ಹೊರಧಾವಿಸಿದ್ದಾನೆ. ಪುರಂದರದಾಸರ ಭಕ್ತಿಪಾರಮ್ಯವಾಣಿ: “ಕಂಡೆನಾ ಗೋವಿಂದನ | ಕಂಡೆನಾ ಕನಸಿನಲಿ ಕನಕರತ್ನದ ಖಣಿಯ| ನಂದನ ಕಂದ ಮುಕುಂದನ ಚರಣವ!” ಆರ್ಕಿಮಿಡೀಸ್‌ಉದ್ಗಾರ ಭೌತವಿಶ್ವವನ್ನು ಆಧ್ಯಾತ್ಮಿಕ ಸ್ತರಕ್ಕೂ ಪುರಂದರವಾಣಿ ಆಧ್ಯಾತ್ಮಿಕಾನುಭವವನ್ನು ಭೌತವಿಶ್ವಕ್ಕೂ ಒಯ್ಯುವ ಸಮಾನಾರ್ಥಕಗಳು. ಎರಡೂ ಉದ್ಭವಿಸಿದುದು ಮಾನವಮತಿ ವಿಶ್ವದ ಜೊತೆ ಪೂರ್ಣವಾಗಿ ಅನುವರ್ತಿಸಿದುದರಿಂದ ಎಂಬುದು ಸ್ಪಷ್ಟ.

* ಪಾಶ್ಚಾತ್ಯ ಅಭಿಜಾತ ಸಂಗೀತದಲ್ಲಿ ಲಡ್ವಿಗ್‌ವಾನ್‌ಬೇತೋವನ್‌(1770 – 1827) ಹಿರಿಹೆಸರುಜೀನಿಯಸ್‌. ಈತನ ಸಾಧನೆ ಸಿದ್ಧಿಗಳು ಪರಮೋಚ್ಛ್ರಾಯ ಸ್ಥಿತಿಗೆ ಏರಿದುದು ಬದುಕಿನ ಕೊನೆಯ ಇಪ್ಪತ್ತೇಳು ವರ್ಷಗಳಲ್ಲಿ, ಅನಾರೋಗ್ಯ, ಕಿವುಡುತನ, ಒಂಟಿಬಾಳು ಎಲ್ಲ ಬವಣೆಗಳೂ ಅಪಸ್ವರಮೇಳದಂತೆ ಈತನನ್ನು ತೀವ್ರವಾಗಿ ಜರ್ಜರಿಸುತ್ತಿದ್ದಾಗ ಆ ಅನಾಥ ಪ್ರಜ್ಞೆಯಿಂದ, ಭೌತಬಧಿರತ್ವದಿಂದ, ದೈಹಿಕ ಅಸ್ವಾಸ್ಥ್ಯದಿಂದ ಮತ್ತು ಜೀವನವಿದೂರತ್ವದಿಂದ ಪಾರಾಗಲೆಂದೋ ಈತನ ಸೃಜನಶೀಲ ಸಾಮರ್ಥ್ಯ ಗರಿಗೆದರಿ, ವಿಶಾಲಾಕಾಶಗಾಮಿಯಾಗಿ, ಚಿರಂತನ ಮೌಲ್ಯಗಳನ್ನು ದರ್ಶಿಸಿ ಮಹಾಕೃತಿಗಳನ್ನು ರಚಿಸಿತು. ಮಿಲಿಯಮ್‌ಶೇಕ್‌ಸ್ಪಿಯರ್‌ (1564 – 1616) ಹೇಗೆ ಮಾನವಮತಿಯ ಪ್ರತಿಯೊಂದು ರಾಗಭಾವವನ್ನೂ ತನ್ನ ನಾಟಕಗಳಲ್ಲಿ ಘನೀಭವಿಸಿ, ಅದರ ಚಿರಂತನ ಮೌಲ್ಯವನ್ನು ಉದಾತ್ತೀಕರಿಸಿರುವನೋ ಹಾಗೆ ಬೇತೋವನ್‌ಮಾನವನ ಸಾಹಸಪ್ರಜ್ಞೆಯ ಹಾಗೂ ಕಲ್ಪನಾಸಾಮರ್ಥ್ಯದ ಹಿರಿಮೆಯನ್ನೂ ತನ್ನ ಕೃತಿಗಳಲ್ಲಿ ಸೆರೆಹಿಡಿದು ಅವುಗಳ ಉಜ್ಜ್ವಲ ಮುಖವನ್ನು ವೈಭವೀಕರಿಸಿದ್ದಾನೆ. ಅವನು ಕಾವ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈ ಆಡಿಸಿ ಅವುಗಳಿಗೆ ಹಿರಿ ಅಂತಸ್ತು ನೀಡಿದರೆ ಇವನು ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಕೃತಿರಚಿಸಿ ಇವುಗಳಿಗೆ ಘನತೆ ತಂದುಕೊಟ್ಟಿರುವನು. ಇಬ್ಬರದೂ ಮೈದಾಸ್‌ಅಥವಾ ಪರುಷ ಸ್ಪರ್ಶ ಮುಟ್ಟಿದ್ದನ್ನು ಚಿನ್ನವಾಗಿಸುವ ಗುಣ.

* ಕೇಂಬ್ರಿಜ್‌ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕನೊಬ್ಬ ಮ್ಯಾಂಚೆಸ್ಟರಿನಲ್ಲಿದ್ದ ಗಣಿತ ಜೀನಿಯಸ್‌ನಲ್ಲಿಗೆ ಹೋದ. ವೃತ್ತಿಯಿಂದ ಈತ ಖಾಲಿ ಕಾರಕೂನನಮ್ಮ ರಾಮಾನುಜನ್‌ರಂತೆ (1887 – 1920). ಈ ಪ್ರಾಧ್ಯಾಪಕ ಮಹೋದಯ ಆ ಗಣಿತಗುಮಾಸ್ತನಿಗೆ ಪುಂಖಾನುಪುಂಖವಾಗಿ ಪ್ರಶ್ನೆ ಎಸೆದ. ಜ್ಯಾಮಿತಿಯಿಂದ ಲಘುಗಣಕಗಳವರೆಗೆ, ಮುಂದೆ ಅವಕಲ – ಅವಕುಲ ಕಲನಶಾಸ್ತ್ರಕ್ಕೆ, ಇಲ್ಲಿದ್ದ ಆಚೆಗೆ ತೀರ ಅಪರಿಚಿತ ಮತ್ತು ಪ್ರಗಲ್ಭ ಪ್ರಶ್ನೆಗಳಿಗೆ. ಸ್ವಿಚ್‌ಒತ್ತಿದ ಕ್ಷಣವೇ ಬಲ್ಬ್‌ಬೆಳಗುವಂತೆ ಉತ್ತರಗಳು ಉದುರಿದುವು. ಕೊನೆಗೆ ಆ ಬಡಪಾಯಿ ಗುಮಾಸ್ತನಿಗೆ ಬೇರೆಯೇ ಒಂದು ಅತಿ ಸಂಕೀರ್ಣ ಪ್ರಶ್ನೆ ಹಾಕಲಾಯಿತು. ಇದನ್ನು ಬಿಡಿಸಲು ವಾರಗಳೇ ಬೇಕಾಗಬಹುದಿತ್ತು. ಆದರೆ ನಮ್ಮ ಕಾರಕೂನ – ಜೀನಿಯಸ್‌ಕಾಗದದ ತುಣುಕಿನಲ್ಲಿ ಆ ಗಳಿಗೆ ಉತ್ತರ ಗೀಚಿ ಸಮಸ್ಯೆಯನ್ನು ಫೈಸಲ್‌ಮಾಡಿದ! ದಿಗ್ಭ್ರಾಂತ ಪ್ರಾಧ್ಯಾಪಕ ಆ ವಿನೀತ ಗುಮಾಸ್ತನನ್ನು ವಿಚಾರಿಸಿದ: “ನೀನಿದನ್ನು ಹೇಗೆ ಮಾಡಿದೆ? ಇದರ ವಿಧಾನವನ್ನು ನನಗೆ ತೋರಿಸುವೆಯಾ? ಉತ್ತರವೇನೋ ಸರಿ. ಆದರೆ ನಿನ್ನ ಮಾರ್ಗ ಮಾತ್ರ ಸಂಪ್ರದಾಯಕ್ಕಿಂತ ಪೂರ್ತಿ ವಿಭಿನ್ನ!” “ನನ್ನ ಮನದೊಳಗೆ ಇರುವ ಒಂದು ಕ್ರಮವಿಧಿ (programme) ಪ್ರಕಾರ ನಾನು ಈ ಸಮಸ್ಯೆಗೆ ಪರಿಹಾರ ಪಡೆದಿದ್ದೇನೆ. ಆದರೆ ಅದೇನೆಂಬುದನ್ನು ನಾನು ಹೇಳಲಾರೆ. ಏಕೆಂದರೆ ಖುದ್ದು ನಾನೇ ಅದನ್ನು ನೋಡಿಲ್ಲ!” “ಓಹೋ! ನಿನ್ನ ಮನದೊಳಗಿರುವ ಕ್ರಮವಿಧಿ? ಇದರ ಬಗ್ಗೆ ನೀನು ಪ್ರಸ್ತಾಪಿಸಿದರೆ ನಾನು ಸೋಲುವುದೇ ಸೈ. ಅಲ್ಲಿ ನಾನು ನಿನ್ನನ್ನು ಅನುಸರಿಸಲಾರೆ.”

ವಿಭಿನ್ನ ಕ್ಷೇತ್ರಗಳಿಂದ ಆಯ್ದಿರುವ ಈ ನಾಲ್ಕು ಉದಾಹರಣೆಗಳ ಸಾರವೇನು? ನಿಸರ್ಗದ ಅಸಂಖ್ಯ ಉದ್ದೀಪನೆಗಳಿಗೆ (stimuli) ವ್ಯಕ್ತಿಗಳು ಅಷ್ಟೇ ಬಗೆಗಳಲ್ಲಿ ಅನುಕ್ರಿಯೆಗಳನ್ನು (responses) ವ್ಯಕ್ತಪಡಿಸುತ್ತಾರೆ. ಇವುಗಳ ಪೈಕಿ ಹೆಚ್ಚಿನವು ಭೂಸ್ಥಿತಿಗಿಂತ ಎತ್ತರದ ಮಟ್ಟಕ್ಕೆ ಏರಿರುವುದಿಲ್ಲವಾಸ್ತವ ಪ್ರಪಂಚದ ನಿರಂತರ ಬಹುತೇಕ ನೀರಸ ಕೂಡ, ವಿದ್ಯಮಾನಗಳಿವು. ಆದರೆ ಇವೇ ಉದ್ದೀಪನೆಗಳು ಯಾರೋ ಒಬ್ಬನೆ “ಮನದೊಳಗೆ ಇರುವ ಕ್ರಮವಿಧಿ”ಯನ್ನು ಪ್ರಭಾವಿಸಿ ಆತನಿಂತ ಗುಣಾತ್ಮಕವಾಗಿ ಬೇರೆಯೇ ಆಗಿರುವ ಅನುಕ್ರಿಯೆಗಳನ್ನು ಹೊಮ್ಮಿಸುತ್ತವೆ. ಆ ಗಳಿಗೆ ಆತ ಸಾಧಾರಣತ್ವದಿಂದ ಋಷಿತ್ವಕ್ಕೆ ಉತ್ತಾರಣೆಗೊಂಡಿರುತ್ತಾನೆ ಕಿರಾತ ವಾಲ್ಮೀಕಿ ಆದಂತೆ ಅಥವಾ ಕಾರಕೂನ ಗಣಿತ ಸ್ಯಮಂತಕರಣಿ ಆದಂತೆ. ಅಡಿಗರ ನುಡಿಗಳಲ್ಲಿ “ ಮಣ್ಣಿನ ಮನದಲ್ಲಿ ಹೊನ್ನನೆ ಬೆಳೆಯುವ ಅಪೂರ್ವತೇಜದ ಮಾಂತ್ರಿಕತೇ!” ಇದೇ ಭಾವವನ್ನು ಸೂಚಿಸುತ್ತವೆ. ಈ ಮನೋಭೂಮಿಕೆಯಿಂದ ಭಗವದ್ಗೀತೆಯ ಸುಪರಿಚಿತ ಶ್ಲೋಕವನ್ನು ಓದೋಣ:

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್
ಯತ್ಕೃಪಾ
ತಮಹಂ ವಂದೇ ಪರಮಾನಂದ ಮಾಧವಮ್‌||
ಅದು
ಕರುಣಿಸಿ ಮೂಗ ನುಡಿವನೊ ಕುಂಟಬೆಟ್ಟವ ನೆಗೆವನೋ
ಅಂಥ
ಪರಮಾನಂದ ಮಾಧವಗೆನ್ನ ಕರಗಳ ಮುಗಿವೆನು ||
ಅನು – ಪುತಿನ

ಇಲ್ಲಿ “ಯತ್‌” ಅಥವಾ “ಅದು” ಎಂಬುದು ವ್ಯಕ್ತಿಮನಾಂತರ್ಗತ ವಿಶೇಷ ಪ್ರತಿಭೆಗೆ ಸಂಬಂಧಿಸಿದುದಾಗಿದೆ. ಎಂದೇ ಬಾಃಯ ಉದ್ದೀಪನೆಗಳು ಒಂದೇ ಆಗಿದ್ದರೂ ಎಲ್ಲರೂ ರಸೃಷಿಗಳೋ ಮಹಾವಿಜ್ಞಾನಿಗಳೋ ಉತ್ಕೃಷ್ಟ ಕಲಾವಿದರೋ ಆಗುವುದಿಲ್ಲ.

ಸನ್ನಿವೇಶದ ಸಾರಭೂತಾಂಶವೇ ಋಷಿವಾಕ್ಯ. ಮಳೆಮೋಡದ ಅಡ್ಡ ಛಳುಕುವ ಕೋಲ್ಮಿಂಚಿನ ಬರೆಹದಂತೆ. ಕೆಲವು ಉದಾಹರಣೆಗಳು :

ದೇವಸ್ಯ ಪಶ್ಯ ಕಾವ್ಯಂ ನಮಮಾರ ನಜೀರ್ಯತಿ
ದೇವರ
ಕಾವ್ಯ ಓದು. ಅದಕ್ಕೆ ಮರಣವಿಲ್ಲ ಜೀರ್ಣವಿಲ್ಲ (ಆಕಾಶಚಿತ್ರ ಕುರಿತು ಋಗ್ಸೂಕ್ತಿ)
ನಹಿ
ಜ್ಞಾನೇನ ಸದೃಶಂ
ಅರಿವೇ
ಬೆಳಕು
ಮಸಿಯನೇಸುಕಾಲ
ನೆಳಗಿದರೆ ಬಿಳಿದಾಗ ಬಲ್ಲುದೇ?
E = mc2, GMM1/R2, Rs = 2GM/c2

ಇವು ನೀತಿ ಉಕ್ತಿಗಳಾಗಿರಬಹುದು, ಗಾದೆ ಮಾತುಗಳಾಗಿರಬಹುದು, ವಿಜ್ಞಾನದ ಸೂತ್ರಗಳೂ ಆಗಿರಬಹುದು. ಸಾರ್ವತ್ರಿಕತೆ ಇವುಗಳ ವೈಶಿಷ್ಟ್ಯ. ಅಂದರೆ ಇವು ವಿವಿಕ್ತ ಸನ್ನಿವೇಶಗಳನ್ನು ಅಡಕ ನುಡಿಗಳಲ್ಲಿ ಹಿಡಿದಿಟ್ಟಿರುವ ರಸಘಟ್ಟಿಗಳೂ ಹೌದು, ಭವಿಷ್ಯ ಸೂಚಕಗಳೂ ಹೌದು. ವಾಸ್ತವತೆ (reality) ಮತ್ತು ಸಿದ್ಧಾಂತ (theory) ಇವನ್ನು ಬೆಸೆಯುವ ವಿಶಿಷ್ಟ ವಾಕ್ಯಗಳಿವು:

“ನಿಗಮನ (deduction) ಹೇಗೆ ಅಂತರ್ಬೋಧೆಯಿಂದ (intuition) ಘೋಷಿಸಲ್ಪಡತಕ್ಕದ್ದೋ ಹಾಗೆ ಉತ್ತರೋತ್ತರ ಸಾರ್ವತ್ರಿಕರಣ (progressive generalization) ಮಾಡಬೇಕೆನ್ನುವ ಅಭಿಪ್ರೇರಣೆ ವರ್ಣಮಯ ವಿವರ ಕುರಿತ ಗೌರವ ಪ್ರೀತಿಗಳಿಂದ ಪಾಕಗೊಂಡಿರತಕ್ಕದ್ದು ಮತ್ತು ಸಂತುಲಿತವಾಗಿರತಕ್ಕದ್ದು. ಬಿಡಿ ಸಮಸ್ಯೆಯನ್ನು ಘನ ಸಾರ್ವತ್ರಿಕ ಸಿದ್ಧಾಂತಗಳ ವಿಶೇಷ ನಿದರ್ಶನವೆಂಬ ಕೀಳುದರ್ಜೆಗೆ ಇಳಿಸುವುದು ಸಲ್ಲ. ವಾಸ್ತವವಾಗಿ, ವಿಶಿಷ್ಟವಾದುದರ ಪರಿಗಣನೆಯಿಂದ ಸಾರ್ವತ್ರಿಕ ಸಿದ್ಧಾಂತಗಳು ಉದ್ಭವಿಸುತ್ತವೆ. ಇವು ತಳದಲ್ಲಿರುವ ಇನ್ನಷ್ಟು ಪದಾರ್ಥಗಳನ್ನು ಹೆಕ್ಕಿ ನೇರ್ಪುಗೊಳಿಸಲು ನೆರವಾಗದಿದ್ದರೆ ಅರ್ಥಶೂನ್ಯವೆನಿಸುತ್ತವೆ. ಸಾರ್ವತ್ರಿಕತೆ ಮತ್ತು ವೈಯಕ್ತಿಕ, ನಿಗಮನ ಮತ್ತು ನಿರ್ಮಾಣ, ತರ್ಕ ಮತ್ತು ಕಲ್ಪನೆ ಇವುಗಳಲ್ಲಿಯ ಅನ್ಯೋನ್ಯ ಪ್ರಭಾವವೇ ಗಣಿತದ

[ಓದಿ – ಋಷಿವಾಕ್ಯದ] ಗಹನಸತ್ತ್ವ ನಿರ್ದಿಷ್ಟ ಸಾಧನೆಯೊಂದರ ತಿರುಳಿನಲ್ಲಿ ಗಣಿತದ ಈ ಮುಖಗಳ ಪೈಕಿ ಒಂದು ಅಥವಾ ಇನ್ನೊಂದು ಇರುವುದು ಸಾಧ್ಯ. ಸುದೀರ್ಘ ವ್ಯಾಪ್ತಿ ಇರುವ ಒಂದು ವಿಕಸನದಲ್ಲಿ ಇವೆಲ್ಲವೂ ಭಾಗಿಗಳಾಗಿರುತ್ತವೆ. ಸಾಮಾನ್ಯವಾಗಿ ಹೇಳುವುದಾದರೆ, ಇಂಥ ಒಂದು ಅಭಿವೃದ್ಧಿ ಅಥವಾ ವಿಕಸನ ‘ಮೂರ್ತ’ (concrete) ನೆಲದಲ್ಲಿ ಆರಂಭವಾಗಿ ಅಮೂರ್ತೀಕರಣದ (abstraction) ಮೂಲಕ ತಳಭಾರವನ್ನು ತೊಡೆದು ಹಾಕಿ ನೌಕಾಯನ (navigation) ಮತ್ತು ವೀಕ್ಷಣೆ (observation) ಸುಲಭವಾಗಿರುವ ಅಸಾಂದ್ರ ವಾಯುವಲಯದ ಉನ್ನತ ಸ್ತರಗಳಿಗೆ ಉತ್ತಾರಣೆಗೊಂಡಿರುವುದು. ಈ ಆರೋಹಣದ ಬಳಿಕ, ಹೊಸತಾಗಿ ಸರ್ವೇಕ್ಷಿಸಲಾದ ಬಿಡಿ ‘ವಾಸ್ತವತೆ’ಯ ನಿಮ್ಮ ತಳಗಳಲ್ಲಿಳಿದು, ನಿರ್ದಿಷ್ಟ ಗುರಿಗಳನ್ನು ತಲಪುವ ನಿರ್ಣಾಯಕ ಪರೀಕ್ಷೆ ಎದುರಾಗುವುದು. ಸಂಕ್ಷೇಪವಾಗಿ, ಅಮೂರ್ತಸಾರ್ವತ್ರಿಕತೆಯೆಡೆಗಿನ ಆರೋಹಣ ಮೂರ್ತ ಮತ್ತು ವಿಶಿಷ್ಟದಿಂದ ತೊಡಗಿ ಅಲ್ಲಿಗೇ ಮರಳತಕ್ಕದ್ದು” (ರಿಚರ್ಡ್ ಕೂರಂಟ್‌).

ಋಷಿವಾಕ್ಯ ರೂಢಿಯಲ್ಲಿ

ರೂಢಿಯಲ್ಲಿ ‘ಋಷಿವಾಕ್ಯ’ ಎಂದರೆ ವೇದೋಪನಿಷತ್ತು, ಬೈಬಲ್‌, ಕೊರಾನ್‌ಮುಂತಾದ ವಿವಿಧ ಜ್ಞಾನಾರ್ಣವಗಳಲ್ಲಿ ಘನಿಸಿರುವ ಜೀವನ ಧರ್ಮ ಅಥವಾ ಜೀವನ ಸತ್ತ್ವ ಎಂಬ ಅರ್ಥ ಉಂಟು.

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮದುಚ್ಯತೇ
ಪೂರ್ಣಸ್ಯ
ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||
– ಈಶಾವಾಸ್ಯ

ಪೂರ್ಣಮದು; ಪೂರ್ಣಮಿದು; ಪೂರ್ಣದಿಂ ಬಂದುದೀ
ಪೂರ್ಣಮಾ
ಪೂರ್ಣದಿಂ ಪೂರ್ಣಮಂ ಕಳೆದೊಡಂ
ಪೂರ್ಣಮೆಯ
ತಾನುಳಿವುದಾ ಪ್ರಜ್ಞೆಗದುವಿದುಂ
ಸರ್ವಮುಂ
ಸತ್ಯದಾವಿಷ್ಕಾರ ವಿನ್ಯಾಸಗಳ್‌||
– ಶ್ರೀ ರಾಮಾಯಣ ದರ್ಶನಂ

ಪ್ರಣಿತೆಯೂ ಇದೆ ಬತ್ತಿಯೂ ಇದೆ
ಜ್ಯೋತಿಯ
ಬೆಳಗುವಡೆ, ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ? ||
– ಅಲ್ಲಮ ಪ್ರಭು

ಬಾನಾಚೆಯಿಂ ವಿಶ್ವ ಸತ್ತ್ವ ತಾನಿಳಿದಿಳೆಗೆ
ನಾನೆನುವ
ಚೇತನದಿ ರೂಪಗೊಂಡಿಹುದೋ?
ನಾನೆನುವ
ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ
ಬಾನಾಚೆ
ಹಬ್ಬಿಹುದೊ? ಮಂಕುತಿಮ್ಮ ||
– ಡಿವಿಜಿ

ಸಿರಿವಂತರು ಮತ್ತು ಬಡವರು ಎಂದರೆ ಬೀಗವಿಕ್ಕಿರುವ ಎರಡು
ಸಂದೂಕಗಳು
, ಒಂದರ ಕೀಲಿ ಇನ್ನೊಂದರೊಳಗೆ ||
– ಕಾರೆನ್‌ಬ್ಲಿಕ್ಸನ್‌

ಅನಂತ ಅನಂತಗಳ ಸಂಕಲನ, ವ್ಯವಕಲನ, ಗುಣಾಕಾರ ಮತ್ತು
ಭಾಗಾಹಾರ
ಫಲಗಳು ಪ್ರತಿಯೊಂದು ಅನಂತವೇ.||
– ಗಣಿತ

ಈ ಮೇಲಿನ ಆರು ವಿವಿಕ್ತ ನಿದರ್ಶನಗಳಲ್ಲಿ ವಿಶ್ವಕ್ಕೂ (ಅನಂತ, ಸಮಷ್ಟಿ) ವ್ಯಕ್ತಿಗೂ (ಸಾಂತ,ವೃಷ್ಟಿ) ನಡುವಿನ ಸಂಬಂಧ ಕಾಣಬಹುದು. ಎಂದೇ ಈ ನಿರೂಪಣೆಗಳು ಋಷಿವಾಕ್ಯಗಳು. ಸಮಷ್ಟಿ ಎಂಬುದು ಕೇವಲ ವ್ಯಷ್ಟಿಗಳ ಮೊತ್ತ ಮಾತ್ರವೇ ಅಲ್ಲ. ಗುಣಾತ್ಮಕವಾಗಿ ಬೇರೆಯದೂ ಹೌದು; ಅಂತೆಯೇ ವ್ಯಷ್ಟಿ ಎಂಬುದು ಸಮಷ್ಟಿಯ ವಿವಿಕ್ತ ಘಟಕ ಮಾತ್ರವೇ ಅಲ್ಲ. ಗುಣಾತ್ಮಕವಾಗಿ ಕೂಡ ಬೇರೆಯದೇ. ಪ್ರಭೆ ಸಮಷ್ಟಿಅನಂತ; ಪ್ರಣಿತ, ಬತ್ತಿ, ತೈಲವ್ಯಷ್ಟಿಗಳು ಇವು ಅನಂತದ ಘಟಕಗಳು ಇನ್ನೂ ಒಂದು ನಿದರ್ಶನ: ನೀರಿನ ಘಟಕಗಳು ಹೈಡ್ರೋಜನ್‌ಮತ್ತು ಆಕ್ಸಿಜನ್‌ಎನ್ನುವ ಅನಿಲಗಳು. ಇವುಗಳಲ್ಲಿ ಪರಸ್ಪರ ಗುಣಾತ್ಮಕ ವ್ಯತ್ಯಾಸ ಎದ್ದು ಕಾಣುತ್ತದೆ.

ಇನ್ನೂ ಕೆಲವು ನಿದರ್ಶನಗಳನ್ನು ಗಮನಿಸಿ:

* ಕಠೋಪನಿಷತ್ತಿನಲ್ಲಿ

ನಾವಿರತೋ ದುಶ್ಚರಿತಾನ್ನಾಶಾಂತೋ ನಾಸಮಾಹಿತಃ
ನಾಶಾಂತ
ಮಾನಸೋ ವಾsಪಿ ಪ್ರಜ್ಞಾನೇನೈವಮಾಪ್ನುಯಾತ್‌||

ದುರಾಚಾರದಿಂದ ಪಾರಾಗದೆ ಇರುವವನು, ಶಾಂತನಲ್ಲದವನು,ಸಮಾಜಹಿತನಲ್ಲದವನು, ಮನಃಶಾಂತಿ ಇಲ್ಲದೆ ಇರುವವನು, ಪ್ರಜ್ಞಾನದಿಂದ ಇವನನ್ನು ಪಡೆಯಲಾರನು (ಅನುಸೋಮನಾಥಾನಂದ)

ಇವನು ಅಥವಾ ಅವನು ಎಂದರೆ ‘ಅರಿವು’ ಅಥವಾ ‘ಜ್ಞಾನ’ ವಿಜ್ಞಾನದ ಪರಿಭಾಷೆಯಲ್ಲಿ ಇದು ಸಮಸ್ಯೆಗೆ ‘ಪರಿಹಾರ’ ಇದೊಂದು ಸೂಕ್ತಿ, ಸಾರ್ವತ್ರಿಕ ಸತ್ಯ ಎಂದೇ ಋಷಿವಾಕ್ಯ.

* ಸಂವಾದೀ ಭಾವವನ್ನು ಅಂಬಿಗರ ಚೌಡಯ್ಯನ ವಚನದಲ್ಲಿ ಗುರುತಿಸಬಹುದು:

ಬ್ರಹ್ಮದ ಮಾತನಾಡಿ ಕೆನ್ನೆಯ ಕಾಲದೆಸೆಯಲ್ಲಿ ಕುಳಿತಲ್ಲಿ
ಬ್ರಹ್ಮದ
ಮಾತು ಅಲ್ಲಿ ನಿಂದಿತ್ತೆಂದ ||

* ಪುರಂದರದಾಸರು ಇನ್ನಷ್ಟು ಮನದಟ್ಟುವಂತೆ ಈ ಭಾವಕ್ಕೆ ನುಡಿಯೊಡಲು ನೀಡಿದ್ದಾರೆ:

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ
ಮುಸುಕಿನ ಮೋರೆಗೆ ಹಾಕಿ
ಪರಸತಿಯರ
ಗುಣ ಮನದಲಿ ಸ್ಮರಿಸುತ
ಪರಮ
ವೈರಾಗ್ಯಶಾಲಿ ಎಂದೆನಿಸುವುದು
ಉದರ
ವೈರಾಗ್ಯವಿದು ||

ರಾಮವಾತ್ಸಲ್ಯ, ಭರತಭ್ರಾತೃಭಕ್ತಿ, ಹರಿಶ್ಚಂದ್ರಸತ್ಯಸಂಧತೆ, ಅರ್ಜುನಲಕ್ಷ್ಯ, ಕರ್ಣ ಏಕಾಗ್ರತೆ, ಹನುಮಂತನಿಷ್ಠೆ, ಕೃಷ್ಣಕಾರುಣ್ಯ, ನಚಿಕೇತಪ್ರಯತ್ನ, ಭಗೀರಥಸಾಹಸ, ದ್ರೌಪದೀ ಆರ್ಜವ ಮುಂತಾದ ಗುಣಗಳು ಬದುಕಿನ ಅವಿಭಾಜ್ಯ ಅಂಗಗಳಾದಾಗ ಪರಿಹಾರರಹಿತ ಸಮಸ್ಯೆಗಳೇ ಇರುವುದಿಲ್ಲ.

ಬುಡಕಟ್ಟು ಮಂದಿರದಲ್ಲಿ ಸ್ವಾರ್ಥ ಮತ್ತು ಇದರ ಪರಿಣಾಮವಾದ ಅರಾಜಕತೆ ತಾಂಡವಾಡುತ್ತಿದ್ದಾಗ ಸ್ಫುರಿಸಿದ ಋಷಿವಾಕ್ಯ:

ಕೊಲ್ಲತಕ್ಕದ್ದಲ್ಲ ಹಾದರಗೈಯತಕ್ಕದ್ದಲ್ಲ
ನೆರೆಯವನ
ವಿರುದ್ಧ ಸುಳ್ಳು ಸಾಕ್ಷಿ ಹೇಳತಕ್ಕದ್ದಲ್ಲ ||
– ಬೈಬಲ್‌

ಆದ್ದರಿಂದ, ಜೀವನಭಾಂಡದಲ್ಲಿ ಬೆಂದು ಪಾಕಗೊಂಡ ಮಹಾವ್ಯಕ್ತಿಗಳ ಪ್ರತಿಭಾ ಪ್ರಸ್ಫುರಣಗಳೇ ಋಷಿವಾಕ್ಯಗಳು, “ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ ನಾನೆನುವ ಚೇತನದಿ” ಮೈವಡೆದ ಜೀವನಸೂತ್ರಗಳು. ದ್ರಷ್ಟಾರ ಮೂಲತಃ ಕವಿಯೂ ಆಗಿದ್ದರೆ ಈ ಚೇತನ ನುಡಿಗಬ್ಬವಾಗಿಯೂ ಕಲಾವಿದ ಆಗಿದ್ದರೆ ಕುಂಚ ಕಾವ್ಯವಾಗಿಯೂ ವಿಜ್ಞಾನಿ ಆಗಿದ್ದರೆ ಭೌತಸೂತ್ರವಾಗಿಯೂ, ಇತ್ಯಾದಿ ಮೈದಳೆಯುವುದು. ಮಾಧ್ಯಮಗಳು ಬೇರೆ ಬೇರೆ, ಮೂಲದ್ರವ್ಯ ಒಂದೇ.

ಋಷಿಗಳನ್ನು ದೇವಾಂಶಸಂಭೂತರೆಂದೂ ಋಷಿವಾಕ್ಯಗಳನ್ನು ದೇವವಾಣಿಗಳೆಂದೂ ಪರಿಭಾವಿಸುವ ಜನರಿದ್ದಾರೆ. ಸೃಷ್ಟಿಕರ್ತ ಪರಮಾತ್ಮ ತನ್ನ ಸಂದೇಶಗಳನ್ನು ಲೋಕೋದ್ಧಾರಾರ್ಥ ಈ ಮಹಾಮಾನವರ ಮೂಲಕ ಬಿತ್ತರಿಸುವನೆಂಬುದು ಇವರ ಪ್ರಾಮಾಣಿಕ ನಂಬಿಕೆ ಮತ್ತು ಅಚಲ ವಿಶ್ವಾಸ. ಇಂಥವರ ಭಕ್ತಿಯನ್ನಾಗಲೀ ಆರ್ಜವವನ್ನಾಗಲೀ ಪ್ರಶ್ನಿಸದೇ ಇಲ್ಲಿ ಒಂದು ಸಂಗತಿ ಸ್ಪಷ್ಟಪಡಿಸಬೇಕು: ಸೃಷ್ಟಿಕರ್ತ ಬೇರೆ, ಸೃಷ್ಟಿ ಬೇರೆ ಎಂಬ ದ್ವೈತತ್ವ ಈ ಜನರ ಚಿಂತನೆಯ ತಳರೂಪಿಕೆ. ಅಲ್ಲದೇ ಇದಕ್ಕೆ ಆನುಷಂಗಿಕವಾಗಿ ಸೃಷ್ಟಿಕರ್ತನ ಅಂತಸ್ತು ಸದಾ ಉಚ್ಚ, ಸೃಷ್ಟಿಯದು ಸದಾ ನೀಚ ಎಂಬ ಮಂದ್ರ ಅನುನಾದವೂ ಉಂಟು. ಎಂದೇ “ದೀನ ನಾನು ಸಮಸ್ತಲೋಕಕೆ ದಾನಿ ನೀನು” ಅಥವಾ “ನಾನು ಪಾಪಿ, ನೀನು ಪಾಪಹರ,” “ನಾನು ಅನಾಥ, ನೀನು ರಕ್ಷಕ” ಮುಂತಾದ ಕೀಳರಿಮೆಯ ಉದ್ಗಾರಗಳು ಫಲವಾಗಿ ವ್ಯಕ್ತಿಯ ಪ್ರವರ್ತನಶೀಲತೆ ಕುಂಠಿತವಾಗುತ್ತದೆ. “ನನ್ನ ರಕ್ಷಣೆಯ ಹೊಣೆ ದ್ರೌಪದೀ ಮಾನಸಂರಕ್ಷಕನಾಗಿರುವ ನಿನ್ನದಾಗಿರುವಾಗ ನನಗೇಕೆ ಚಿಂತೆ?” ಇಂಥ ನಿಲವುಗಳು ಮೇಲುನೋಟಕ್ಕೆ ಭಕ್ತಿ ಪಾರಮ್ಯಗಳೆಂದೆನ್ನಿಸಿದರೂ ವಸ್ತುತಃ ಉತ್ತರಕುಮಾರತ್ವದ ವಿವಿಧ ಛಾಯೆಗಳು, ಠಾಯಿಗಳು ಕೂಡ. ಈ ತೆರನಾದ ಮಾನಸಿಕ ಪರಿಸರದಲ್ಲಿ ಬೆಳೆಯುವವರಿಗೆ ಋಷಿವಾಕ್ಯ ಬೇರೆ ಅಲ್ಲ, ದೇವವಾಣಿ ಬೇರೆ ಅಲ್ಲ. ಅದೇನಿದ್ದರೂ ತಮಗೆ ಎಂದೂ ಐದಲಾಗದ ಹಿರಿ ಎತ್ತರ ಎಂದು ಅನ್ನಿಸುವುದು ಸಹಜ. ಈ ನೈಚ್ಯ ಭಾವ ಅವರ ಉತ್ಕರ್ಷೆಗೆ ಪ್ರತಿಬಂಧಕ: “ನೀನೇರಿರುವ ಎತ್ತರಕ್ಕೆ ನಾನೇರಬಲ್ಲೆನೇ? ನಿನಗೆ ಶರಣಾಗುವುದೇ ನನಗಿರುವ ಏಕೈಕ ಮಾರ್ಗ!” ಇಂಥ ಮನೋಭಾವದ ವ್ಯಕ್ತಿಗಳು ಅವರಿಗೆ ನಿಸರ್ಗದಿಂದ ದತ್ತವಾಗಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಕಸಿಸಲಾರರು.

ಹೀಗಲ್ಲದೇ ಋಷಿಗಳು ಕೂಡ ಮೂಲತಃ ಮನುಷ್ಯರು. ಸ್ವಪ್ರಯತ್ನದಿಂದ ಪೂರ್ಣ ಮಾನವತ್ವದತ್ತ ವಿಕಸಿಸಿರುವ ಮಹಾಸಾಧಕರು, ಅತಿಮಾನವರಲ್ಲ ಎಂಬ ವಸ್ತುಸ್ಥಿತಿಯನ್ನು ಅರ್ಥವಿಸಿದ್ದಾದರೆ ದೇವವಾಣಿ ಎಂಬ ಪ್ರತ್ಯೇಕ ನುಡಿಯೊಂದಿಲ್ಲ, ಮನುಷ್ಯವಾಣಿಯೇ ಆ ಅಂತಸ್ತಿಗೆ ಏರಿ ಋಷಿವಾಕ್ಯ ಅಗುತ್ತದೆಂದು ತಿಳಿಯುತ್ತದೆ:

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿಭೋ!
ಸತ್ಯವ
ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ
ಸ್ವರ್ಗ ಅನಾಚಾರವೇ ನರಕ
ಕೂಡಲ
ಸಂಗಮ ದೇವಾ, ನೀವೇ ಪ್ರಮಾಣು
ದೇವಲೋಕ
ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ
ಶರಣನಾಗಲರಿಯೆ ||

ಸಾಧಕರ ಜೀವನದರ್ಶನ ಸಾರವೇ ಋಷಿವಾಕ್ಯ. ಆದ್ದರಿಂದ ವ್ಯಕ್ತಿಗೆ ಉತ್ತಮ ಧ್ಯೇಯಸಾಧನೆ ಪ್ರಧಾನ ಲಕ್ಷ್ಯ ಆಗಬೇಕು. ಹಾದಿ ನಡೆದಂತೆ ಕ್ರಮೇಣ ದರ್ಶನ ಸಿದ್ಧಿಸುತ್ತದೆ. ಆಗ ಋಷಿವಾಕ್ಯ ಉದ್ಭವಿಸುತ್ತದೆ. “ವಿಶ್ವಸತ್ಯವನ್ನು ದರ್ಶಿಸುವಾತ ಋಷಿ, ಋಷಿ ಕಂಡುದನ್ನು ಬೋಧಿಸುವಾತ ಗುರು, ಗುರುಬೋಧನೆಯನ್ನು ಅರಿವಾತ ಶಿಷ್ಯ. ಶಿಷ್ಯ ಋಷಿತ್ವಕ್ಕೇರುವುದು ಋಜುವಿದ್ಯೆ” ಎಂಬ ಪ್ರಾಚೀನ ಹೇಳಿಕೆ ಉಂಟು. ಮಾನವ ಸ್ವಪ್ರಯತ್ನದಿಂದ ದೇವತ್ವಕ್ಕೆ ಉತ್ತಾರಣೆಗೊಳ್ಳುವ ಪ್ರಕ್ರಿಯೆ ಇದು. ರಾಮನಾಗಲೀ ಕೃಷ್ಣನಾಗಲೀ ಈ ತೆರನಾಗಿ – ದಿವ್ಯಾದರ್ಶದೀಪ್ತರೂ ಸ್ಫೂರ್ತಿಮಂತಸಾಧಕರೂ ಆಗಿ ಮಾನವತ್ವದಿಂದ ದೇವತ್ವಕ್ಕೆ ಆರೋಹಿಸಿದವರು ಎಂಬ ನೈಜ ಚಿಂತನೆ ಸಾಮಾನ್ಯರ ಜೀವನಕ್ಕೆ ಉಲ್ಲಾಸಪ್ರೇರಕವೂ ಮಾರ್ಗದರ್ಶನವೂ ಆಗಿರುವುದು. ಬೇಂದ್ರೆ ನುಡಿಗಳಲ್ಲಿ:

ಜೋಲುವುದೇತಕೆ ನೇಣಿಗೆ ಗೆಳೆಯಾ?
ಏಣಿಗೆ
ಇದೆ, ಹಿಡಿ ಅದರೆಳೆಯಾ
ಹಂತಿಗೆ
ಹಂತಿಗೆ ಬೇರೆ ಲೋಕವಿದೆ
ಅಲ್ಲಲ್ಲಿಗೆ
ನವ ಪಾಕವಿದೆ
ನೂರಿಗೆ
ಊರದೆ, ಸಾವಿರಕೇರದೆ
ಅಲಕ್ಷವಿರುವುದು
ಯಾವ ಎದೆ?”

ವಿಜ್ಞಾನ ಕಲೆ

ನವಜಾತ ಕಲೆಗೆ (modern art) ಮೀಸಲಾಗಿದ್ದ ಜರ್ಮನ್‌ನಿಯತಕಾಲಿಕೆಯೊಂದರ ಸಂಪಾದಕ 1921 ಜನವರಿ 21 ರಂದು (ಆಗ ಬರ್ಲಿನ್‌ನಲ್ಲಿದ್ದ) ಐನ್‌ಸ್ಟೈನ್‌ರಿಗೆ ಪತ್ರ ಬರೆದು, ಯಾವುದೇ ದತ್ತಯುಗಕ್ಕೆ ಸೇರಿದ ಕಲಾಭಿವರ್ಧನೆಗಳಿಗೂ ವೈಜ್ಞಾನಿಕ ಫಲಿತಾಂಶಗಳಿಗೂ ನಡುವೆ ನಿಕಟ ಸಂಬಂಧ ಇದೆ ಎಂಬುದು ತನಗೆ ಖಚಿತವಾಗಿ ಮನವರಿಕೆ ಆಗಿದೆಯೆಂದು ತಿಳಿಸಿದ. ಈ ವಿಷಯ ಕುರಿತು ತನ್ನ ನಿಯತಕಾಲಿಕೆಯಲ್ಲಿ ಪ್ರಕಟಿಸಲೋಸ್ಕರ ಕೆಲವು ಪರಿಚ್ಛೇದಗಳನ್ನು ಬರೆದುಕೊಡಬೇಕೆಂದು ಅವರಿಗೆ ಪ್ರಾರ್ಥನೆ ಸಲ್ಲಿಸಿದ. ಐನ್‌ಸ್ಟೈನ್‌ಅದೇ 27 ರಂದು ಈ ಮುಂದಿನಂತೆ ಬರೆದರು:

“ನೀವು ಸೂಚಿಸಿರುವ ವಿಷಯ ಕುರಿತು ಬರೆಯಲು ಸ್ವಂತವಾದದ್ದು ನನ್ನಲ್ಲಿ ಏನೊಂದೂ ಇಲ್ಲ. ಇನ್ನು ಪ್ರಕಟಣಾರ್ಹವಾದದ್ದು ಯಾವುದೂ ಇಲ್ಲವೆಂಬುದು ಸ್ಪಷ್ಟವಷ್ಟೆ. ಆದರೂ ನನ್ನ ಸದ್ಭಾವನೆಯ ದ್ಯೋತಕವಾಗಿ ಇದರೊಂದಿಗೆ ಲಗತ್ತಿಸಿರುವ ಸೂಕ್ತಿ ರೂಪದ ಹೇಳಿಕೆ ಕಳಿಸುತ್ತಿದ್ದೇನೆ. ನನ್ನ ಶಾಯಿ ಕುಂಚಿಸಬಲ್ಲುದಾಗಿದ್ದರೆ ನಿಮ್ಮ ಸ್ನೇಹಶೀಲ ಪತ್ರದಲ್ಲಿ ಅಪೇಕ್ಷಿಸಲಾಗಿರುವ ಇಚ್ಛೆಯನ್ನು ಇನ್ನಷ್ಟು ಸಮರ್ಥವಾಗಿ ಈಡೇರಿಸಿ ಪುಷ್ಕಳ ಕೃತಿಯನ್ನೇ ರವಾನಿಸಿರುತ್ತಿದ್ದೆ.

“ಕಲಾತ್ಮಕ ಮತ್ತು ವೈಜ್ಞಾನಿಕ ಅನುಭವಕ್ಕೆ ಸಾಮಾನ್ಯವಾಗಿರುವುದೇನು? ಎಲ್ಲಿ ಪ್ರಪಂಚ ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳ ರಂಗಭೂಮಿಯಾಗುವುದು ಕೈದಾಗುವುದೋ ಎಲ್ಲಿ ಇದರೆದುರು ಮುಕ್ತ ಜೀವಿಗಳಾಗಿ ಇದನ್ನು ಮೆಚ್ಚುತ್ತ, ಪ್ರಶ್ನಿಸುತ್ತ ಮತ್ತು ವೀಕ್ಷಿಸುತ್ತ ನಿಲ್ಲುವೆವೋ ಅಲ್ಲಿ ಕಲೆಯ ಮತ್ತು ವಿಜ್ಞಾನದ ಪ್ರಪಂಚ ಪ್ರವೇಶಿಸಿರುತ್ತೇವೆ. ನೋಡಿದ್ದನ್ನೂ ಅನುಭವಿಸಿದ್ದನ್ನೂ ತರ್ಕಶಾಸ್ತ್ರದ ಪರಿಭಾಷೆಯಲ್ಲಿ ಚಿತ್ರಿಸಿದ್ದಾದರೆ ಆಗ ವಿಜ್ಞಾನದಲ್ಲಿ ಉದ್ಯುಕ್ತರಾಗಿರುತ್ತೇವೆ. ಜಾಗೃತ ಮನಸ್ಸಿಗೆ ಅಪ್ರವೇಶ್ಯಾವಾಗುವ ಅಂತರ್ಬೋಧನೆಯಿಂದ (intuition) ಅರ್ಥಪೂರ್ಣವಾದವೆಂಬುದಾಗಿ ಪರಿಗಣಿಸಲ್ಪಡುವ ರೂಪಗಳ ಮೂಲಕ ಅದನ್ನು ಸಂವಹನಿಸಿದ್ದಾದರೆ ಆಗ ಕಲೆಯಲ್ಲಿ ಮಗ್ನರಾಗಿರುತ್ತೇವೆ. ವೈಯಕ್ತಿಕ ಕಾಳಜಿ ಮತ್ತು ಸಂಕಲ್ಪಗಳಿಗೆ ಅತೀತವಾದ ಆ ಯಾವುದೋ ಒಂದರ ಬಗೆಗಿನ ಸಪ್ರೇಮ ನಿಷ್ಠೆಯೇ ಇವೆರಡಕ್ಕೂ ಸಾಮಾನ್ಯವಾದದ್ದು. “(ನೋಡಿ – ಐನ್ಸ್ಟೈನ್‌, ಮಾನವೀಯ ಮುಖ).

ಆದ್ದರಿಂದ ವಿಜ್ಞಾನ ಮತ್ತು ಕಲೆ ಎರಡೂ ಮಾನವಮತಿಯ ಸೃಷ್ಟಿಗಳು: ಎರಡಕ್ಕೂ ಪ್ರೇರಣೆ ಒದಗುವುದು ಒಂದೇ ಮೂಲದಿಂದ ಅದು ನಿಸರ್ಗ. ಇವುಗಳ ನಡುವಿನ ಸಾದೃಶ್ಯ ವೈದ್ಯಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಮೊದಲು ಒಂದು ವಿವರಣೆ ಅಗತ್ಯ: ವಿಜ್ಞಾನ ಎಂದರೇನು?

ವಿಜ್ಞಾನ, ವೈಜ್ಞಾನಿಕ ವಿಧಾನ

ಮನುಷ್ಯನ ‘ಮಿದುಳು’ ( = ಬುದ್ಧಿ) ನಿಸರ್ಗದ ಜೊತೆ ಕ್ರಿಯೋದ್ಯುಕ್ತವಾಗಿರುವಾಗ ಕುತೂಹಲ, ವೀಕ್ಷಣೆ, ಪ್ರಯೋಗ, ತಾರ್ಕಿಕ ವಿವೇಚನೆ ಮುಂತಾದವು ಸಂಭವಿಸುತ್ತವೆ. ಯಾವುದೇ ನೈಸರ್ಗಿಕ ವಿದ್ಯಮಾನವನ್ನು ಕಾರ್ಯ – ಕಾರಣ ಪಾತಳಿಯಲ್ಲಿ ಅಭ್ಯಸಿಸಿ ತನ್ಮೂಲಕ ನಿಸರ್ಗ ಸಂಯಂತ್ರದ ಕ್ರಿಯಾತಂತ್ರ ಅರಿಯುವುದು ವಿಜ್ಞಾನದ ಉದ್ದೇಶ. ಗೋಚರ ವಿದ್ಯಮಾನ ಇಲ್ಲಿ ‘ಕಾರ್ಯ.’ ಇದರ ಹಿನ್ನೆಲೆಯಲ್ಲಿ ಇದ್ದೇ ತೀರಬೇಕೆಂದು ಭಾವಿಸಲಾಗಿರುವ ‘ಕಾರಣ’ದ ಅನ್ವೇಷಣೆ ವಿಜ್ಞಾನಿಯ ಗೀಳು. ಏಕೆಂದರೆ ಕಾರಣರಹಿತ ಕಾರ್ಯವಿಲ್ಲ ಎಂಬುದು ಅವನ ದೃಢ ನಂಬಿಕೆ. ಇಂಥ ವ್ಯವಸ್ಥಿತ ಅನ್ವೇಷಣೆಯ ಫಲವಾಗಿ ನಿಸರ್ಗದ ಹಲವಾರು ಮೂಲಭೂತ ನಿಯಮಗಳು ಬೆಳಕಿಗೆ ಬರುತ್ತವೆ: ನ್ಯೂಟನ್‌ಪ್ರತಿಪಾದಿಸಿದ ವಿಶ್ವಗುರುತ್ವಾಕಷರ್ಣ ನಿಯಮ, ಮೆಂಡಲ್‌ಮಂಡಿಸಿದ ಆನುವಂಶಿಕತಾಸೂತ್ರ, ಐನ್‌ಸ್ಟೈಲ್‌ಸ್ಥಾಪಿಸಿದ ರಾಶಿ – ಶಕ್ತಿ ಸಮಾನತೆ (mass – energy equivalence) ಇತ್ಯಾದಿ. ಇವು ವಿಜ್ಞಾನದ ಪಕ್ವ ಫಲಗಳಿಗೆ ಕೆಲವು ನಿದರ್ಶನಗಳು.

ಗೋಚರ ‘ಕಾರ್ಯ’ದಿಂದ ಅಗೋಚರ ‘ಕಾರಣ’ ಅರಸುವ ದಿಶೆಯಲ್ಲಿ ವಿಜ್ಞಾನ ಸಹಜವಾಗಿ ಕಂಡುಕೊಂಡು ತನಗೆ ತಾನೇ ವಿಧಿಸಿಕೊಳ್ಳುವ ಮಾರ್ಗಕ್ಕೆ ‘ವೈಜ್ಞಾನಿಕ ವಿಧಾನ’ ಎಂದು ಹೆಸರು. ನಿಸರ್ಗವೇ ಇಲ್ಲಿಯ ವಿಧಾಯಕ: “ನನ್ನ ರಹಸ್ಯ ಅರಿಯುವುದು ನನ್ನ ಅಪೇಕ್ಷೆಯೇ? ಹಾಗಾದರೆ ತೊಡು ವೈಜ್ಞಾನಿಕ ವಿಧಾನ ದೀಕ್ಷೆಯನ್ನು” ಎಂದು ನಿಸರ್ಗವೇ ಮಾನವನಿಗೆ ಆದೇಶಿಸುವುದೋ ಎಂಬಂತೆ. ಸೂತ್ರ ರೂಪದಲ್ಲಿ ಹೇಳುವುದಾದರೆ ವೈಜ್ಞಾನಿಕ ವಿಧಾನ ನಾಲ್ಕು ಪಾವಟಿಗೆಗಳ ಒಂದು ಏಣಿ. ಇದರ ಒಂದು ಕೊನೆ ನಿಸರ್ಗದಲ್ಲಿ ನಿಂತಿದೆ. ಇನ್ನೊಂದು ಕೊನೆ ಸಿದ್ದಾಂತಕ್ಕೆ ಆಂತಿದೆ. ಏಣಿ ಏರುವಾತ ವಿಜ್ಞಾನಿ. ನಿಸರ್ಗವಿಲ್ಲದೇ (ಅಂದರೆ ಮಾನವಮತಿ ಇಲ್ಲದೇ) ಸಿದ್ಧಾಂತವಿಲ್ಲ: ಸಿದ್ಧಾಂತವಿಲ್ಲದಿದ್ದರೂ (ಆಗ ಮಾನವನೇ ಇರುವುದಿಲ್ಲ) ನಿಸರ್ಗವಿರುವುದು. ವೈಜ್ಞಾನಿಕ ನಾಲ್ಕು ಪಾವಟಿಗೆಗಳಿವು: