ಜಗತ್ತಿನ 179ದೇಶಗಳಲ್ಲಿ ಸಂಯುಕ್ತ ರಾಷ್ಟ್ರಗಳ (ಯುಎನ್)ಮಾನವಾಭಿವೃದ್ದಿ ಸೂಚ್ಯಂಕದಲ್ಲಿ ಭಾರತದ ಸ್ಥಾನ 132ನೆಯದುೊ!ಭಾರತದ ಆರೋಗ್ಯದ ಬಗೆಗಿನ ಪ್ರಮುಖ ಸವಾಲುಗಳೆಂದರೆ: ಐದು ವರ್ಷಕ್ಕಿಂತ ಎಳೆಯ ಮಕ್ಕಳು, ಸೇಕಡಾ 40ರಷ್ಟು ಅಪೇಕ್ಷಿತ ಮಟ್ಟಕ್ಕಿಂತ ಕಡಿಮೆ ತೂಕದ ಮಕ್ಕಳು. ಇದು ಆಫ್ರಿಕದ ಅನೇಕ ದೇಶಗಳಿಗಿಂತ ಹೆಚ್ಚಿನ ಸಮಸ್ಯೆ ಎಂಬುದು ನಿಚ್ಚಳ. ಭಾರತದ ಅರ್ಧಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯಗಳೇ ಇಲ್ಲ ಮತ್ತು 200ಮಿಲಿಯಕ್ಕೂ ಹೆಚ್ಚು ಜನರಿಗೆ ಸುರಕ್ಷಿತ ಕುಡಿಯುವ ನೀರು ಲಭ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮೇರೆಗೆ ಸುಮಾರು 9,00,000 ಭಾರತೀಯರು ಈಗಲೂ ಪ್ರದೂಷಿತ ನೀರಿನ ಸೇವನೆಯಿಂದ ಹಾಗೂ ಕಲುಷಿತ ಗಾಳಿಯನ್ನು ಉಸಿರಾಡಿ ಸಾವನ್ನಪ್ಪುತ್ತಿದ್ದಾರೆ.

ಇದು ಭಾರತದ ಆರೋಗ್ಯಮಟ್ಟದ ಬಗೆಗಿನ ಜಾಗತಿಕ ಅಂಕಿ ಅಂಶಗಳ ಒಂದು ನೋಟ.  ಇಂತಹ ಮಾಹಿತಿಗಳು ಇಲ್ಲಿಗೇ ಮುಗಿಯಲಿಲ್ಲ. ಪ್ರತಿ ಐದು ನಿಮಿಷಗಳಿಗೊಮ್ಮೆ ಓರ್ವ ಮಹಿಳೆ ಗರ್ಭಿಣಿಯಾಗಿರುವಾಗ ಅಥವಾ ಮಗುವನ್ನು ಹೆರುವ ಸಮಯದಲ್ಲಿ ಅಸುನೀಗುತ್ತಿದ್ದಾಳೆ. ಹುಟ್ಟಿದ ಮಗುವೂ ಅಷ್ಟೆ. ಜಾಗತಿಕ ಶಿಶು ಮರಣದ ಸೇಕಡಾ 25ರಷ್ಟು ಎಂದರೆ ಸುಮಾರು 2.1ಮಿಲಿಯ ಭಾರತೀಯ ಎಳೆ ಮಕ್ಕಳು 5ವರ್ಷಗಳಿಗೆ ಮೊದಲೇ ಸಾಯುತ್ತಿದ್ದಾರೆ. ಇನ್ನು ಹೆಣ್ಣು ಭ್ರೂಣಹತ್ಯೆಯಂತೂ ಒಂದೇ ಸಮನೆ ಹೆಚ್ಚುತ್ತಲೇ ಇದೆ. ಬಡ ಜನರು ಡೆಂಗೆ, ಮಲೇರಿಯ, ಕ್ಷಯ, ಎಚ್‌ಐವಿ/ಏಡ್ಸ್‌ಗಳಿಂದ ಸಾಯುತ್ತಿದ್ದಾರೆ. ಡಯಬಿಟಿಸ್ ಮತ್ತು ಹೃದಯಾಘಾತಗಳಿಂದ ಸಾಯುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಎರಡೂ ಅವರ ಜೀವನ ಶೈಲಿಗಳನ್ನು ಕುರಿತ ಪರಿಣಾಮಗಳು. ಇದರ ಇನ್ನೊಂದು ಮುಖ, ಹಣ ಇರುವವರಿಗೆ ಎಲ್ಲ ಬಗೆಯ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ. ಬಡವರಿಗೆ ಪರಿಣತ ವೈದ್ಯರ ಸೇವೆ ದೊರೆಯುವುದೂ ಕಷ್ಟ. ಪ್ರತಿ 10,000ಇಂಥ ರೋಗಿಗಳಿಗೆ ಸರಾಸರಿ ಕೇವಲ ಏಳು ಮಂದಿ ವೈದ್ಯರ ಸೇವೆ ಲಭ್ಯವೆಂದರೆ ಜನಾರೋಗ್ಯದ ಪರಿಸ್ಥಿತಿಯನ್ನು ಊಹಿಸಿಯೇ ತಿಳಿಯಬೇಕು.  ದೇಶದ 6,00,000ಹಳ್ಳಿಗಳಿಗೆ 20,000ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಈ ಪರಿಸ್ಥಿತಿಗೆ ಕಾರಣ, ಇದನ್ನು ನಿವಾರಿಸುವುದು ಹೇಗೆ ಎಂಬುದನ್ನು ತಿಳಿಯಲು ಪ್ರಯತ್ನಿಸೋಣ. ಪ್ರತಿಬಾರಿ ಚುನಾವಣೆಯಲ್ಲಿ ಇಂತಹ ಎಲ್ಲ ಪರಿಸ್ಥಿತಿಗಳಿಗೆ ಪರಿಹಾರ ದೊರಕಿಸುವ ಭರವಸೆಗಳ ಘೋಷಣೆಗಳು ಇರುತ್ತವಾದರೂ ಆಮೇಲೆ ಯಾವುದೇ ಪ್ರಕ್ರಿಯೆಗಳು ಜರುಗುವುದಿಲ್ಲ. ಬಹುಶಃ ವಿಜ್ಞಾನ ಚಟುವಟಿಕೆಗಳು, ವಿಜ್ಞಾನ ಕಾರ್ಯಕರ್ತರು ಈ ದೇಶದ ಈ ಪರಿಸ್ಥಿತಿಗೆ ಕಣ್ಣು ತೆರೆಯುವಂತಾಗಬೇಕು. ಬದುಕಿನ ಈ ಮೂಲಭೂತ ಅಗತ್ಯಗಳ ಬಗೆಗೆ ಜನರ ಜಾಗ್ರತಿ ಮೂಡಿಸುವ ಕೆಲಸ ಅವರದಾಗಬೇಕು.

ತೀವ್ರ ನ್ಯೂನಪೋಷಣೆಯಿಂದ ನರಳುತ್ತಿದ್ದ ಎರಡು ವರ್ಷದ ಮಗು (ಎಡ), ಹತ್ತು ತಿಂಗಳು ಪೂರಕ ಆಹಾರ ದೊರೆತಾಗ (ಬಲ)

ಉದಾಹರಣೆಗೆ ಅಂಗನವಾಡಿ ಕೆಲಸಗಾರರು ಮತ್ತು ಅಲ್ಲಿನ ಫಲಾನುಭವಿಗಳನ್ನು ಸಂದರ್ಶಿಸಿ ಸ್ಥಳೀಯ ಆಹಾರಗಳ ಹಿರಿಮೆ ಮತ್ತು ಮೌಲ್ಯಗಳ ಬಗೆಗೆ ತಿಳಿಸಿ, ಆರೋಗ್ಯ ಸುಧಾರಿಸುವಲ್ಲಿ ನಮಗೆ ನಿಲುಕುವ ಆಹಾರಗಳನ್ನು ಸೇವಿಸುವುದರ ಒಳಿತನ್ನು, ಸರಿಯಾದ ವೈಜ್ಞಾನಿಕ ಮಾಹಿತಿಯ ಮೂಲಕ ಸಕಾರಣವಾಗಿ, ವಿವರವಾಗಿ ತಿಳಿಸಿಕೊಡುವುದು. ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು ಎಂದು ಮನದಟ್ಟು ಮಾಡುವುದು. ಮಕ್ಕಳ ಪಾಲನೆಯಲ್ಲಿ ಅವರಿಗೆ ವೈಯುಕ್ತಿಕ ನೈರ್ಮಲ್ಯ ಏತಕ್ಕೆ ಮುಖ್ಯ ಎಂಬಿವೇ ಮುಂತಾದ ಅನೇಕ ವಿಷಯಗಳನ್ನು ಸಂಪೂರ್ಣವಾಗಿ ಹೇಳಿಕೊಡಬೇಕು. ಬಳಸುವುದು ಹಲ್ಲು ಪುಡಿಯಿರಲಿ, ಪೇಸ್ಟ್ ಇರಲಿ ಬಾಯಿಯ ಶುಚಿತ್ವ ಜೀವನವಿಡೀ ನಮ್ಮ ಆರೋಗ್ಯಸಾಧನೆಗೆ ಮುಖ್ಯವಾದುದು. ಏಕೆಂದರೆ ಮನುಷ್ಯ ಏನನ್ನೇ ತಿಂದರೂ ಅದು ಬಾಯಿಯ ಮೂಲಕವೇ ಹೋಗುವುದು. ಆದ್ದರಿಂದ ಆದಷ್ಟು ಅದು ಶುಚಿಯಾಗಿರಬೇಕು. ಅಲ್ಲಿ ಆಹಾರವನ್ನು ಏಕೆ ಚೆನ್ನಾಗಿ ಅಗಿಯಬೇಕು? ಏಕೆಂದರೆ ಕಾರ್ಬೊಹೈಡ್ರೇಟ್ ಜೀರ್ಣಕ್ರಿಯೆ ಬಾಯಿಯಲ್ಲಿನ ಅಮೈಲೇಸ್ ಕಿಣ್ವದಿಂದಲೇ ಆರಂಭವಾಗುತ್ತದೆ. ತಿಂದ ಬಳಿಕ ಚೆನ್ನಾಗಿ ಬಾಯಿ ತೊಳೆಯಬೇಕು, ಏತಕ್ಕಾಗಿ? ಇಲ್ಲದಿದ್ದರೆ ಬಾಯಿಯಲ್ಲಿ ಸೂಕ್ಷ್ಮಜೀವಿ ಸಂಖ್ಯೆ ವೃದ್ದಿಗೊಳ್ಳುತ್ತದೆ. ಏನೇ ತಿಂದರೂ, ನೀರುಹಾಕಿ ಬಾಯಿ ಮುಕ್ಕಳಿಸಬೇಕು. ಚಿಕ್ಕಂದಿನಿಂದ ಸರಿಯಾಗಿ ಬಾಯಿಯ ಶುಚಿತ್ವ ಕಾಪಾಡಿಕೊಂಡರೆ, ವಯಸ್ಕರ ಹಲ್ಲು ಬೇಗ ಬಿದ್ದು ಹೋಗುವುದನ್ನು ತಪ್ಪಿಸಬಹುದು.  ಜೀರ್ಣಕ್ರಿಯೆ ಮತ್ತು ಸಾಕಷ್ಟು ಆಹಾರ ತಿನ್ನುವುದಕ್ಕಾಗಿ ಕೊನೆಯವರೆಗೆ ಹಲ್ಲುಗಳು ಅಗತ್ಯ.

ಆರೋಗ್ಯ ಸಂರಕ್ಷಣೆಯಲ್ಲಿ ವೈಯಕ್ತಿಕ ನೈರ್ಮಲ್ಯ ಬಹಳ ಮುಖ್ಯವಾದುದು

ಶಾಲೆಗೆ ಬರುವ ಮಕ್ಕಳು ಮನೆಯಲ್ಲಿ ಬೆಳಿಗ್ಗೆ ಗಂಜಿಯನ್ನಾದರೂ ಸೇವಿಸಿ ಬರಬೇಕು.  ಮನೆಯಲ್ಲಿ ಮಾಡಿದ ಬೆಳಗಿನ ಉಪಾಹಾರ ಶಾಲಾ ಮಕ್ಕಳಿಗೆ ಬಹಳ ಮುಖ್ಯ. ಇಲ್ಲದಿದ್ದರೆ ಬರುಬರುತ್ತ ದುರ್ಬಲರಾಗಿ, ಅವರ ಏಕಾಗ್ರತೆಗೆ ಭಂಗ ಬರುತ್ತದೆ. ಅವರ ಗಮನ ತಗ್ಗುತ್ತದೆ. ಇದರಿಂದ ವಿಷಯ ಗ್ರಹಿಕೆ ಕಡಿಮೆಯಾಗುತ್ತದೆ. ಬಹಳ ಕಾಲ ಇದು ಮುಂದುವರಿದರೆ ಅವರ ಐಕ್ಯು (IQ) ಕೂಡ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೇ ಧ್ಯೇಯವಾಗಿಟ್ಟುಕೊಂಡು ವಿಜ್ಞಾನ ಕಾರ್ಯಕರ್ತರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬಹುದು. ಇದಕ್ಕೆ ತಕ್ಕ ಮಾಹಿತಿಯನ್ನು ಪೋಷಣ ತಜ್ಞರಿಂದ ಅವರಿಗೆ ಒದಗಿಸಬೇಕು. ಶಾಲಾ ನೋಟೀಸು ಬೋರ್ಡ್‌ಗಳಲ್ಲಿ ಇಂತಹ ವಿಷಯಗಳನ್ನು ಹಾಕುವುದಕ್ಕಾಗಿ ಸರಳ, ವಿಜ್ಞಾನ ಬರಹಗಳನ್ನು ಶಾಲೆಗೆ ಲಭ್ಯವಾಗುವಂತೆ ಮಾಡಬಹುದು. ಆಗಾಗ್ಗೆ ಈ ಕಾರ್ಯಕ್ರಮಗಳು ಜರುಗುತ್ತಲೇ ಇರಬೇಕು. ಏಕೆಂದರೆ, ಪ್ರತಿವರ್ಷ ಮಕ್ಕಳು ತೇರ್ಗಡೆಯಾಗುತ್ತಾರೆ.  ಹೊಸ ಮಕ್ಕಳು ಬರುತ್ತಾರೆ. ಅರಸುತ್ತ ಹೋದರೆ ಇಂತಹ ಅನೇಕ ಉದಾಹರಣೆಗಳು ದೊರೆಯುತ್ತವೆ. ವೇದಿಕೆಗಳಿಗಿಂತ, ನೇರವಾಗಿ ಒಬ್ಬರಿಂದ -ಒಬ್ಬರಿಗೆ ವಿಷಯದ ರವಾನೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ವೈಜ್ಞಾನಿಕ ವಿಚಾರಪರತೆ ಹೆಚ್ಚುತ್ತದೆ. ವಿಜ್ಞಾನದ ವಿಚಾರಗಳನ್ನು ಹೆಚ್ಚು ತಿಳಿದುಕೊಳ್ಳುವುದಕ್ಕಿಂತ ತಿಳಿದುಕೊಂಡಷ್ಟನ್ನು ಸರಿಯಾಗಿ, ಕಾರಣಪೂರಕವಾಗಿ ತಿಳಿದುಕೊಂಡರೆ ಜೀವನದಲ್ಲಿ ಅದರ ಅನುಷ್ಠಾನ ಮಾಡುವ ವಿಶ್ವಾಸ ಬರುತ್ತದೆ.

ಇದರಿಂದ ಆರಂಭದಲ್ಲಿ ಹೇಳಿದ ಗಂಭೀರ ಸಮಸ್ಯೆಗಳೆಲ್ಲ ಒಮ್ಮೆಲೇ ಪರಿಹಾರವಾಗಿ ಬಿಡುತ್ತವೆಯೆಂದಲ್ಲ. ಆದರೆ ‘ಹನಿಗೂಡಿದರೆ ಹಳ್ಳ’ವಾಗುವುದು ನಿಜವಾದರೆ ‘ಅಳಿಲು ಸೇವೆ’ಎಂಬ ಮಾತಿಗೂ ಇಂಥ ಅರ್ಥವಿದೆ. ಇದಕ್ಕೆ ಹಣ, ಶಿಫಾರಸು ಅಥವಾ ಸ್ಥಾನಮಾನಗಳ ಅಗತ್ಯವಿಲ್ಲ. ಇದೊಂದು ನಿಜವಾಗಿ ಪ್ರತಿಯೊಬ್ಬ ಕಲಿತವನ ಸಾಮಾಜಿಕ ಹೊಣೆ, ಕರ್ತವ್ಯ.  ವಿಷಯ ಪರಿಣತರೂ ಈ ಹೊಣೆಗೆ, ಕುರುಡರಾಗಬಾರದು.