ಕಳೆದ ಮಾರ್ಚ್‌ನಲ್ಲಿ ಸರಕಾರ ಒಂದಿಷ್ಟು ವಿಟಮಿನ್ ಮಾತ್ರೆಗಳನ್ನು ನಿಷೇಧಿಸಿತು.  ಇದಕ್ಕೆ ಕಾರಣ ವಿಟಮಿನ್ ಬಿ೬ ಹಾಗೂ ಬಿ೧೨ ಮಾತ್ರೆಗಳಿಂದ ಅಡ್ಡ ಪರಿಣಾಮಗಳು ಹೆಚ್ಚುತ್ತಿರುವುದು.  ಆದರೆ ಸರಕಾರದ ಒಂದು ಇಲಾಖೆಯ ಕೆಲಸ ಇನ್ನೊಂದು ಇಲಾಖೆಗೆ ತಿಳಿದಿರುವುದಿಲ್ಲ.  ಇದರಿಂದಾಗಿ ಸರಕಾರಿ ಆಸ್ಪತ್ರೆಗಳಿಗೆ ಈಗಲೂ ಈ ನಿಷೇಧಿಸಲ್ಪಟ್ಟ ಮಾತ್ರೆಗಳು ಬರುತ್ತಲೇ ಇವೆ.

ಇಂದಿನ ಆಹಾರಪದ್ಧತಿಯನ್ನು ನೋಡಿದರೆ ವಿಟಮಿನ್ ಸೇವನೆ ಅನಿವಾರ್ಯ.  ಭಾರತದಲ್ಲಿ ವಿಟಮಿನ್ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.೮೦ಕ್ಕೇರಿದೆ.  ಅಂತೆಯೇ ನಮ್ಮ ಆಹಾರದಲ್ಲಿ ವಿಟಮಿನ್ ಎಷ್ಟಿದೆ ಎಂದು ತಿಳಿದುಕೊಂಡು ಕೊರತೆಯಿರುವುದನ್ನು ತುಂಬಿಕೊಳ್ಳಬೇಕಾದ್ದು ಮುಖ್ಯ.

ವಿಟಮಿನ್ ಇ ಇಂದು ಹೆಚ್ಚು ಪ್ರಚಾರದಲ್ಲಿದೆ.  ಇದು ಆಂತರಿಕ ಪ್ರತಿರೋಧಕ್ಕೆ ಸಹಾಯಕ.  ಕೊಲೆಸ್ಟರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ.  ಅಲ್ಜೀಮರ್‍ಸ್, ಕ್ಯಾಟರಾಕ್ಟರ್, ಹೃದಯದ ಕಾಯಿಲೆಗಳನ್ನು ತಡೆಯುವುದಲ್ಲಿ ವಿಟಮಿನ್ ಇ ಪಾತ್ರ ದೊಡ್ಡದು.  ಇದನ್ನು ಮಾತ್ರೆ ರೂಪದಲ್ಲಿ ದಿನವೊಂದಕ್ಕೆ ೧೫ಮಿ.ಗ್ರಾಂಗಿಂತ ಹೆಚ್ಚು ತೆಗೆದುಕೊಳ್ಳಬಾರದು.  ಸಸ್ಯಜನ್ಯ ಕೊಬ್ಬು, ಗೋಧಿಜುಳಿ ಕಾಯಿ ಮತ್ತು ಕೆಲವು ಬೀಜಗಳಿಂದ ವಿಟಮಿನ್ ಇ ದೊರೆಯುತ್ತದೆ.  ಆದರೆ ದಿನದಲ್ಲಿ ೯೦ಮಿ.ಗ್ರಾಂ.ಗಿಂತ ಅಧಿಕ ವಿಟಮಿನ್ ಇ ದೇಹ ಸೇರಿದರೆ ರಕ್ತನಾಳ ಒಡೆಯುವ ಸಾಧ್ಯತೆ ಇದೆ.  ನಿರಂತರ ರಕ್ತಸ್ರಾವವಾಗುತ್ತಿದ್ದರೆ, ಸುರಿಯುತ್ತಿರುವ ರಕ್ತ ಎರಡು ನಿಮಿಷವಾದರೂ ನಿಲ್ಲದಿದ್ದರೆ ವಿಟಮಿನ್ ಇ ಪ್ರಮಾಣ ಕಡಿಮೆ ಮಾಡುವುದು ಒಳ್ಳೆಯದು.

ನೆಗಡಿ ನಿವಾರಕ ಎನ್ನುವ ಹಣೆಪಟ್ಟಿ ಹೊತ್ತಿರುವ ವಿಟಮಿನ್ ಸಿ ಯನ್ನು ದಿನವೊಂದಕ್ಕೆ ಗಂಡಸರು ೯೦ ಮಿ.ಗ್ರಾಂ. ಹಾಗೂ ಹೆಂಗಸರು ೭೫ ಮಿ.ಗ್ರಾಂ. (ಒಂದು ಲೋಟ ಕಿತ್ತಳೆ ಜ್ಯೂಸ್)ವರೆಗೆ ಸೇವಿಸಬಹುದು.  ಧೂಮಪಾನಿಗಳು ೩೫ ಮಿ.ಗ್ರಾಂ.ಗಿಂತ ಹೆಚ್ಚು ಸೇವಿಸಬೇಕಾಗುತ್ತದೆ.  ಇದರಿಂದ ಸಣ್ಣ ಕರುಳಿನ ತೊಂದರೆ ನಿವಾರಣೆಯಾಗುತ್ತದೆ.  ಹಾಗೆಂದು ದಿನವೂ ೨೦೦ ಮಿ.ಗ್ರಾಂ. ಸೇವಿಸಿದರೆ ಕೆಳಹೊಟ್ಟೆಯ ಸೆಳೆತ, ಅತಿಸಾರ, ಹೊಟ್ಟೆ ತೊಳೆಸುವಿಕೆ ಉಂಟಾಗುತ್ತದೆ.

ಪೋಲಿಕ್ ಆಮ್ಲ, ಬಿ೬ ಮತ್ತು ಬಿ೧೨ ಮಗು ಜನನ ಕಾಲದ ತೊಂದರೆಗಳು, ಹೃದಯದ ತೊಂದರೆಗಳು ಹಾಗೂ ಮಾನಸಿಕ ಅಸ್ವಸ್ಥತೆ ನಿವಾರಿಸಲು ಸಹಾಯಕ.  ರಕ್ತನಾಳ ಮತ್ತು ಹೃದಯಸಂಬಂಧಿ ಕಾಯಿಲೆಗಳನ್ನು ಸಾಮಾನ್ಯ ಸ್ಥಿತಿಗೆ ತರುವ ಹೋಮೋಸಿಸ್ಟಿನ್ ಎನ್ನುವ ವಸ್ತುವಿನ ಸಮತೋಲನದ ಕೆಲಸ ವಿಟಮಿನ್ ಬಿಯದು.  ಮಗುವಿನ ಜನನ ಕಾಲದಲ್ಲಿ ಉಂಟಾಗುವ ಬೆನ್ನುಹುರಿ ಸೀಳುವಿಕೆಯನ್ನು ಪೋಲಿಕ್ ಆಮ್ಲ ತಡೆಗಟ್ಟುತ್ತದೆ.  ನರಗಳ ತೊಂದರೆ, ಉನ್ಮಾದ ಹಾಗೂ ಆಯಾಸದ ನಿವಾರಣೆಗೆ ಬಿ೧೨ ನೀಡುತ್ತಾರೆ.  ೫೦ ವರ್ಷದ ನಂತರ ಗಂಡಸರು ೧.೭ ಮಿ.ಗ್ರಾಂ. ಹೆಂಗಸರು ೧.೫ ಮಿ.ಗ್ರಾಂ. ವಿಟಮಿನ್ ಬಿ ಮಾತ್ರೆ ಸೇವಿಸಬಹುದು.  ಆದರೆ ಪೋಲಿಕ್ ಆಮ್ಲ ೧೦೦೦ ಮೈಕ್ರೋಗ್ರಾಂ. ಹಾಗೂ ಬಿ೬ ೧೦೦ ಮಿ.ಗ್ರಾಂ. ಮೀರಿದರೆ ನರಗಳ ತೊಂದರೆ, ಜಡತೆ, ಸ್ನಾಯು ಸೆಳೆತದೊಂದಿಗೆ ದೇಹದ ನಿಯಂತ್ರಣ ತಪ್ಪುತ್ತದೆ.

ಗಟ್ಟಿಹಲ್ಲು ಮತ್ತು ಮೂಳೆ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿ ಬೇಕು.  ಮೂಳೆ ಸವೆತ ತಪ್ಪಿಸಲು ದಿನಕ್ಕೆ ೧೦೦೦-೧೨೦೦ ಮಿ.ಗ್ರಾಂ. ಕ್ಯಾಲ್ಸಿಯಂ ಅವಶ್ಯ.  ಆದರೆ ಇದು ೨೫೦೦ ಮಿ.ಗ್ರಾಂ. ದಾಟಿದರೆ ಮಲಬದ್ಧತೆ ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ದಾರಿಯಾಗುತ್ತದೆ.

ವಿಟಮಿನ್ ಡಿ ನಮ್ಮ ಚರ್ಮದೊಳಗೆ ಸೂರ್ಯಕಿರಣದ ಪ್ರಭಾವದಿಂದ ಉತ್ಪತ್ತಿಯಾಗುತ್ತದೆ.  ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ಗಳೂ ಇದರೊಂದಿಗೆ ದೊರೆಯುತ್ತವೆ.  ಹಾಲು, ಬೆಣ್ಣೆ ಮತ್ತು ಮೊಟ್ಟೆಯಲ್ಲಿರುವ ವಿಟಮಿನ್ ಡಿಯನ್ನು ಪ್ರತಿದಿನ ೯೦ ಮಿ.ಗ್ರಾಂ.ನಷ್ಟು ಸೇವಿಸಬೇಕು.  ೭೦ರ ಹೊತ್ತಿಗೆ ಪ್ರತಿದಿನ ೨೭೦ ಮಿ.ಗ್ರಾಂ.ನಷ್ಟು ವಿಟಮಿನ್ ಡಿ ಬೇಕಾಗುತ್ತದೆ.  ಆದರೆ ದಿನಕ್ಕೆ ೪೫೦ ಮಿ.ಗ್ರಾಂ. ದಾಟಿದರೆ ತಲೆನೋವು, ಹೊಟ್ಟೆ ತೊಳೆಸುವಿಕೆ, ಹೃದಯ ಕಾಯಿಲೆ, ಮೂತ್ರಕೋಶ ಕಾಯಿಲೆಗಳು ಪ್ರಾರಂಭವಾಗುತ್ತವೆ.

ಮೂಳೆಗಳಿಗೆ ಅವಶ್ಯವಿರುವ ಇನ್ನೊಂದು ಖನಿಜ ಮೆಗ್ನೀಷಿಯಂ.  ಇದನ್ನು ಗಂಡಸರು ೪೨೦ ಹಾಗೂ ಹೆಂಗಸರು ೩೨೦ ಮಿ.ಗ್ರಾಂ. ಪ್ರತಿದಿನ ಸೇವಿಸಬೇಕು.  ಮಲ್ಟಿ ವಿಟಮಿನ್ ಮಾತ್ರೆಗಳಲ್ಲಿ ಶೇ.೨೫ ಭಾಗ ಮೆಗ್ನೀಷಿಯಂ ಇದೆ.  ಉಳಿದಂತೆ ಕಾಯಿಗಳು, ಕಾಳುಗಳು, ಕಪ್ಪು ಹಸುರಿನ ಎಲೆಗಳಿಂದ ದಿನದ ಊಟದಲ್ಲಿ ಮೆಗ್ನೀಷಿಯಂ ಸಿಗುವಂತೆ ನೋಡಿಕೊಳ್ಳಬಹುದು.  ಆದರೆ ೪೫೦ ಮಿ.ಗ್ರಾಂ. ದಾಟಿದರೆ ಹೊಟ್ಟೆ ತೊಳೆಸುವಿಕೆ, ಅತಿಸಾರ ಪ್ರಾರಂಭವಾಗುತ್ತದೆ.

ಕಬ್ಬಿಣದಂಶದ ಕೊರತೆ ಎಲ್ಲಾ ವಯಸ್ಸಿನವರಲ್ಲೂ ಉಂಟಾಗುತ್ತದೆ.  ಹಾಗೆಂದು ಕಬ್ಬಿಣದಂಶದ ಮಾತ್ರೆ ಸೇವಿಸುವುದರಿಂದ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳೇ ಹೆಚ್ಚು.  ಇದು ಹೊಟ್ಟೆ ತೊಳಸುವಿಕೆ, ಕೆಳಹೊಟ್ಟೆನೋವು, ಅತಿಸಾರದೊಂದಿಗೆ ಬೇರೆ ಖನಿಜಗಳು ಜೀರ್ಣವಾಗುವುದನ್ನು ತಪ್ಪಿಸುತ್ತದೆ.

೨೦ ವರ್ಷಗಳ ಹಿಂದೆ ಮೀನೆಣ್ಣೆ ಮಾತ್ರೆ ಹೆಚ್ಚು ಪ್ರಚಾರದಲ್ಲಿತ್ತು.  ಆದರೆ ಇಂದು ನೂರಾರು ವಿಟಮಿನ್ ಮಾತ್ರೆಗಳು ಮಾರುಕಟ್ಟೆಗೆ ಬಂದಿವೆ.  ರೋಗನಿವಾರಕಗಳೊಂದಿಗೆ ವಿಟಮಿನ್ ಮಾತ್ರೆಗಳನ್ನೂ ನೀಡುವುದು ಇಂದಿನ ವೈದ್ಯರ ಪದ್ಧತಿ.  ಆದರೆ ನಾವು ತಿನ್ನುವ ಆಹಾರದಲ್ಲಿಯೇ ಎಲ್ಲಾ ವಿಟಮಿನ್‌ಗಳೂ ಇರುವಂತೆ ನೋಡಿಕೊಂಡರೆ ಅಥವಾ ಸಲಹೆ ಪಡೆದುಕೊಂಡು ಬಳಸಿದರೆ ಹೆಚ್ಚು ಒಳ್ಳೆಯದು.