ಮೂಲತಃ ಗೋವಾದವರಾಗಿದ್ದು ಮುಂಬೈಯಲ್ಲಿ ಜನಿಸಿ ಕರ್ನಾಟಕದ ಹುಬ್ಬಳ್ಳಿ. ಬೆಳಗಾಂವದಲ್ಲಿ ನೆಲೆಸಿ ಉತ್ತರ ಭಾರತದ ಹಾರ್ಮೋನಿಯಂ ವಾದನ ಶೈಲಿಯನ್ನು ದಕ್ಷಿಣ ಭಾರತದಲ್ಲಿ ಪಸರಿಸುವಂತೆ ಮಾಡಿ ಕರ್ನಾಟಕದಲ್ಲಿ ಹಾರ್ಮೋನಿಯಂ ವಾದನದ ಪರಂಪರೆಯನ್ನು ಹುಟ್ಟು ಹಾಕಿದ ಪಂ. ವಿಠಲರಾವ ಕೋರೆಗಾಂವಕರ ಅವರು ದೇಶದ ಮಹಾನ್‌ ಹಾರ್ಮೋನಿಯಂ ವಾದಕರಲ್ಲಿ ಅಗ್ರಗಣ್ಯರು.

ವಿಠಲರಾವರು ಗೋವಾದ ಕೋರೆಗಾಂವದವರು. ಹುಟ್ಟಿದ್ದು ಮುಂಬೈಯಲ್ಲಿ ೧೯೧೪ರಲ್ಲಿ (ಕೆಲವರ ಪ್ರಕಾರ ೧೮೮೪) ಬಾಲ್ಯದಲ್ಲಿ ಹೆತ್ತವರನ್ನು  ಕಳೆದುಕೊಂಡು ತಮ್ಮ-ತಂಗಿಯರನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡು ಬಾಲ್ಯದಲ್ಲಿಯೇ ಸಂಗೀತದ ಅಭಿರುಚಿಯಿಂದಾಗಿ ನಾಟಕಗಳಲ್ಲಿ ಹಾರ್ಮೋನಿಯಂ ನುಡಿಸಲು ಪ್ರಾರಂಭ. ೧೦ನೇ ವಯಸ್ಸಿಗೆ ಪಾಟಣಕರ ಸಂಗೀತ ನಾಟಕ ಮಂಡಳಿ ಕಂಪನಿಯಲ್ಲಿ ಸೇರ್ಪಡೆ. ಆ ಕಂಪನಿಯಲ್ಲಿದ್ದ ಭಾಗವತ ಎಂಬುವರಿಂದ ಪೇಟಿ (ಹಾರ್ಮೋನಿಯಂ) ಕಲಿಯಲಾರಂಭ. ಕೆಲದಿನಗಳ ನಂತರ ರಾಷ್ಟ್ರ ಖ್ಯಾತಿಯ ಹಾರ್ಮೋನಿಯಂ ವಾದಕ ಭಾಚೂಭಾಯಿ ಭಂಡಾರೆಯವರಲ್ಲಿ ಹಾರ್ಮೋನಿಯಂ ವಾದ್ಯದಲ್ಲಿ ಉನ್ನತ ಶಿಕ್ಷಣ. ಹುಟ್ಟಿನಿಂದ ಆಸಕ್ತಿ, ಯೋಗ್ಯ ಗುರುವಿನ ಮಾರ್ಗದರ್ಶನದಿಂದಾಗಿ ವಿಠಲರಾವ ಖ್ಯಾತ ಹಾರ್ಮೋನಿಯಂ ವಾದಕರೆಂಬ ಅಗ್ಗಳಿಕೆ ಗಳಿಸಿದರು. ಬಾಲಗಂಧರ್ವ ನಾಟಕ ಕಂಪನಿಯಲ್ಲಿ ಪೇಟಿ ನುಡಿಸುವ ಕಾರ್ಯ. ಬಾಲಗಂಧರ್ವರ ಪ್ರೀತಿಗೆ ಭಾಜನ.

ಮುಂಬೈಯಿಂದ ಹುಬ್ಬಳ್ಳಿಗೆ ಪಯಣ. ಫ್ರೆಂಚ್‌ ಶೈಲಿಯ ಪೇಟಿ ತಯಾರಿಸುವ ಅಂಗಡಿ ಪ್ರಾರಂಭ. ಹೆಚ್‌.ಎಂ.ವಿ. ಇತರ ಧ್ವನಿಮುದ್ರಿಕೆಗಳ ಏಜೆನ್ಸಿ. ಖಾಸಗಿ ಬಸ್‌ ಖರೀದಿ. ಹುಬ್ಬಳ್ಳಿ ಕಾರವಾರ ಮಧ್ಯೆ ಓಡಾಟ, ಲಕ್ಷಾಧಿಪತಿ. ಮುಂದೆ ಬೆಳಗಾವಿಗೆ ಪಯಣ. ಅಲ್ಲಿ ರುಕ್ಮಿಣಿ ಸಂಗೀತ ವಿದ್ಯಾಲಯ ಪ್ರಾರಂಭ. ಉಸ್ತಾದ್‌ ಅಬ್ದುಲ್‌ ಕರೀಮ್‌ಖಾನ್‌, ಗೋಹರಜಾನ್‌, ಬಾಲಗಂಧರ್ವ ಮಲಕಾಜಾನ್‌ – ಮೊದಲಾದ ಸಂಗೀತ ದಿಗ್ಗಜರಿಗೆ ಪೇಟಿಸಾಥ್‌. ಅನೇಕ ಶಿಷ್ಯರ ತಯ್ಯಾರಿ. ವ್ಯಾಪಾರದಲ್ಲಿ ನಷ್ಟ. ಮತ್ತೆ ಮುಂಬೈಗೆ ಪಯಣ. ಏನೆಲ್ಲ ಏರಿಳಿತ ಕಂಡರೂ ಹಾರ್ಮೋನಿಯಂ ಮೇಲಿನ ಅವರ ಕೈ ಕಳಗಿಳಿದದ್ದಲ್ಲ.

ವಿಠಲರಾವರ ಹಾರ್ಮೋನಿಯಂ ವಾದನ ಅತ್ಯಮೋಘ. ಕಿರಾನಾ ಘರಾಣೆಯ ಸುರೀಲಿಪನ ಮತ್ತು ಕ್ರಮಬದ್ಧ ಬಢಡ್‌, ಜೈಪುರ ಗಾಯಕಿಯ ಸ್ಪಷ್ಟತೆ, ರುಚಿಪೂರ್ಣ ಲಯಕಾರಿ, ರಾಗದ ಪ್ರಭುತ್ವಪೂರ್ಣ ಪ್ರಸ್ತುತಿ, ಗಾಯನದ ಖಟ್ಕಾ, ಮುರ್ಕಿ ತಾನ ವೈದ್ಯಗರ ಲೀಲಾಜಾಲ ಅವರ ಕೈಯಲ್ಲಿ ಸಮೃದ್ಧ. ಖಯಾಲ್‌, ನಾಟ್ಯಗೀತ, ಠುಮ್ರಿ ಗಾಯಕಿಗೆ ತಕ್ಕಂತೆ ವಾದನದ ಕೌಶಲ್ಯ. ಮರಾಠಿ ನಾಟ್ಯ ಗೀತೆಗಳನ್ನು ಹಾರ್ಮೋನಿಯಂನಲ್ಲಿ ನುಡಿಸುತ್ತಿದ್ದರೆ ಬಾಲಗಂಧರ್ವ, ಅಬ್ದುಲ್‌ ಕರೀಮ್‌ ಖಾನ್‌, ಗೋಹರ ಜಾನರೆಲ್ಲ ಹಾಡಿದಂತೆಯೇ ಹುಬೇಹೂಬ್‌ ವಾದನ. ೧೯೭೪ರ ಡಿಸೆಂಬರ್ ೩೧ ರಂದು ಬೆಳಗಾವದಲ್ಲಿ ನಿಧನ. ವಿಠಲರಾವ ಕೋರೆಗಾವಕರ ಯುಗಕ್ಕೊಮ್ಮೆ ಹುಟ್ಟಿ ಬರುವ ಅಪರೂಪದ ಕಲಾವಿದರು. ಅವರ ಶಿಷ್ಯರಲ್ಲಿ ಎಂ.ವ್ಹಿ. ದೇಸಾಯಿ, ಡಾ.ವ್ಹಿ.ಎನ್‌. ಶಿರೋಡಕರ, ಡಾ. ಪಾಟ್ಕರ ಹಾಗೂ ಸುಪ್ರಸಿದ್ಧ ಗಾಯಕ ಕೆ.ಜಿ. ಗಿಂಡೆ ಪ್ರಮುಖರು.

ವಿಠಲರಾವ ಕೋರೆಗಾಂವಕರ ಅವರಿಗೆ ದೊರೆತ ಪ್ರಶಸ್ತಿ – ಪುರಸ್ಕಾರಗಳಲ್ಲಿ, ಉಸ್ತಾದ್‌ ಅಲ್ಲಾದಿಯಾಖಾನರು ನೀಡಿದ ಸುವರ್ಣಪದಕ, ಅಂದಿನ ಮೈಸೂರು (ಈಗ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೨), ಗೋವಾ ಕಲಾ ಅಕಾಡೆಮಿ ಪ್ರಶಸ್ತಿ (೧೯೭೪) ಮುಂತಾದವು ಉಲ್ಲೇಖನೀಯ.