ಮೂಲತಃ ಗೋಮಾಂತಕದ ಕೋಪರಗಾಂವ ಎಂಬ ಊರಿನ ಪಂಡಿತ ವಿಠ್ಠಲರಾಯರ ಜನ್ಮವು ಮುಂಬೈಯಲ್ಲಿ ೧೮೮೪ರಲ್ಲಿ ಆಯಿತು. ಕೆಲಕಾಲದ ನಂತರ ಕೋಪರಗಾಂವನಲ್ಲಿ ವಾಸಿಸಲು ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಲ್ಲಿ ಅವರ ತಂದೆ ತಾಯಿ ತೀರಿ ಹೋದದ್ದರಿಂದ ಒಬ್ಬ ತಮ್ಮ, ಇಬ್ಬರು ಅಕ್ಕಂದಿರನ್ನು ಬೆಳೆಸುವ ಜವಾಬ್ದಾರಿ ವಿಠ್ಠಲರಾಯರ ಮೇಲೆ ಬಿದ್ದಿತ್ತು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಉದರ ಪೋಷಣಾರ್ಥವಾಗಿ ಸಣ್ಣಪುಟ್ಟ ಕಥಾಕೀರ್ತನಗಳನ್ನು ಮಾಡುತ್ತಿದ್ದರು. ವಿಠ್ಠಲರಾಯರಿಗೆ ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಭಿರುಚಿ ಇತ್ತು. ಆದ್ದರಿಂದ ಪುನಃ ಅವರು ಮುಂಬೈಗೆ ಬಂದು ಸ್ಥಾಯಿಕರಾದರು. ಆ ಕಾಲದ ಪಾಟಣಕರ ಸಂಗೀತ ಸಂಸ್ಥೆಯಲ್ಲಿ ಅವರು ಸಂಗೀತ ಮತ್ತು ನಾಟಕಗಳ ಅಧ್ಯಯನ ಮಾಡತೊಡಗಿದರು.

ಮುಂದೆ ಅವರಿಗೆ ಬಾಚು ಭಾಯಿ ಭಂಡಾರೆ ಇವರ ಸಂಪರ್ಕ ಬಂದು ವಿಠ್ಠಲರಾಯರು ಭಾಚುಬಾಯಿಯವರ ಬಳಿ ೧೯೦೫ರವರೆಗೆ ಹಾರ್ಮೋನಿಯಂ ನುಡಿಸಲು ಕಲಿತರು.

ಮುಂದೆ ೧೯೦೫ರಲ್ಲಿ ಕೆಲ ಹಿತಚಿಂತಕರ ಸಲಹೆಯ ಮೇರೆಗೆ ಅವರು ಸೈಕಲ್‌ ರಿಪೇರಿ ಹಾಗೂ ಉಕ್ರಿ ಮತ್ತು ಹಾರ್ಮೋನಿಯಂ, ಸ್ವೌ ಮುಂತಾದವುಗಳ ಬಗೆಗೆ ಒಂದು ಅಂಗಡಿಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಅವರ ಈ ಉದ್ಯೋಗ ಹುಬ್ಬಳ್ಳಿಯಲ್ಲಿ ಅತ್ಯಂತ ಪ್ರಸಿದ್ಧವಾಯಿತು.

ಹಿಸ್‌ ಮಾಸ್ಟರ್ ವ್ಹಾಯಿಸ್‌ ಎಂಬ ಗ್ರಾಮಫೋನ್‌ ಕಂಪನಿಯ ಏಜನ್ಸಿ ನಡೆಸಿದರು. ಅಷ್ಟೇ ಅಲ್ಲದೆ ಹುಬ್ಬಳ್ಳಿಯಿಂದ ಕಾರವಾರ, ಬಸ್ಸು ಓಡಾಟ ಕೂಡಾ ಪ್ರಾರಂಭಿಸಿದರು. ಎಲ್ಲಾ ಕಾರಭಾರದ ಜೊತೆಗೆ ಇವರ ಸಂಗೀತ ಸಾಧನೆ ಕೂಡಾ ಅವ್ಯಾಹತವಾಗಿ ಮುಂದುವರಿಯಿತು. ಪ್ರತಿದಿನ ೫-೬ಘಂಟೆಯವರೆಗೆ ಸಂಗೀತದ ಅಭ್ಯಾಸ ಮಾಡುತ್ತಿದ್ದರು. ಆ ಕಾಲದಲ್ಲಿ ಗಂಧರ್ವರ ನಾಟಕ ಕಂಪನಿಯ ಪ್ರಯೋಗಗಳು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದವು. ಹೀಗಾಗಿ, ನಾಟಕ ಕಂಪನಿಯ ಹಿರಿಯರಾದ ಬಾಲಗಂಧರ್ವರ ವಾಸ್ತವ್ಯ ಕೂಡಾ ವಿಠ್ಠಲರಾಯರ ಮನೆಯಲ್ಲಿ ಆಗುತ್ತಿತ್ತು. ಅದರಂತೆ ಅಬ್ದುಲ ಕರೀಮ್‌ ಖಾನ್‌, ವಝೆಬುವಾ, ಹೀರಾಬಾಯಿ ಬಡೋದೆಕರ್, ಮಾಸ್ಟರ್ ಕೃಷ್ಣ, ಗೋಹರಜಾನ್‌, ಮಲ್ಲಿಕಾಜಾನ್‌, ಬಾಲಕೃಷ್ಣಬುವಾ ಈಚ ಕರಂಜಿಕರ ಮುಂತಾದವರ ಬಳಿ ಸಂಗೀತ ಅಧ್ಯಯನ ಮಾಡುವ ಸದವಕಾಶ ವಿಠ್ಠಲರಾವ್‌ರವರಿಗೆ ದೊರೆಯಿತು.

ಸಂಗೀತದಲ್ಲಿ ಒಳ್ಳೆಯ ಮಾರ್ಗದರ್ಶನ ಹಾಗೂ ಭಾಗ್ಯಗಳಿಂದಾಗಿ ವಿಠ್ಠಲರಾವ್‌ರವರ ಜೀವನವು ಅತ್ಯಂತ ವೈಭವದ ಶಿಖರದ ಮೇಲೆ ಸಾಗಿತು. ಮುಂದೆ ಹುಬ್ಬಳ್ಳಿಯಲ್ಲಿಯೇ ವಿಠ್ಠಲರಾಯರು ರುಕ್ಮಿಣಿ ಸಂಗೀತ ವಿದ್ಯಾಲಯ ಕೂಡಾ ನಡೆಸಿದರು. ಆದರೆ, ಆಗ ನಡೆದ ಜಾಗತಿಕ ಯುದ್ಧದ ದೆಸೆಯಿಂದಾಗ ವಿದ್ಯಾಲಯ ಬೆಳಗಾಂವಿಗೆ ಬರಬೇಕಾಯಿತು. ಬೆಳಗಾಂವಿಯಲ್ಲಿಯೇ ಒಂದು ಸಂಗೀತ ವಿದ್ಯಾಯಲಯವನ್ನು ಸ್ಥಾಪಿಸಿ ಪುನಃ ಸಂಗೀತದ ಪ್ರಸಾರಕಾರ್ಯವನ್ನು ಪ್ರಾರಂಭಿಸಿದರು.

ದಿನನಿತ್ಯ ಸಂಗೀತದ ಸಾಧನೆ, ಪೂಜನ,ಅರ್ಚನ, ಮುಂತಾದವುಗಳ ಕಡೆ ವಿಶೇಷ ಗಮನಕೊಟ್ಟು ಅವರು ಸಂಗೀತ ಮತ್ತು ಪರಮಾತ್ಮನ ಬಗ್ಗೆ ಒಂದು ನಿಷ್ಠೆನ್ನು ಪ್ರತಿಷ್ಠಾಪಿಸಿದರು.. ಇದರಿಂದಾಗಿ ಅವರು ಜೀವನದಲ್ಲಿ ಒಂದು ರೀತಿಯ ಸಮಾಧಾನವನ್ನು ಅನುಭವಿಸುತ್ತಿದ್ದರು. ಖಾನಸಾಹೇಬ ಅಬ್ದುಲ ಕರೀಮ್‌ಖಾನ್‌,. ಬಾಲಗಂಧರ್ವ ಇವರಿಬ್ಬರು ಮಹಾನ್‌ ವ್ಯಕ್ತಿಗಳ ಬಗ್ಗೆ ಆದರ ಭಾವವಿತ್ತು. ಅವರು ಈ ಇಬ್ಬರು ಕಲಾವಿದರ ಸಂಗೀತವನ್ನು ತಮ್ಮ ಹಾರ್ಮೋನಿಯಂ ವಾದನದಲ್ಲಿ ಅಳವಡಿಸುತ್ತಿದ್ದರು.

ಹಿಸ್‌ ಮಾಸ್ಟರ್ ವಾಯಿಸ್‌ ಕಂಪನಿಯವರು ವಿಠ್ಠಲರಾವ್‌ರವರ ಒಂಬತ್ತು ರಿಕಾರ್ಡ್‌‌ಗಳನ್ನು ಮಾಡಿಕೊಂಡರು. ಅವುಗಳಲ್ಲಿ ದಿಲ್‌ರುಬಾ ಹಾಯ್‌ ಹ್ಯಾಜೀವಾಚೆ ಎಂಬ ಧ್ವನಿಮುದ್ರಿತ ರಿಕಾರ್ಡು ಅತ್ಯಂತ ಲೋಕಪ್ರಿಯವಾಗಿತ್ತು. ವಿಠ್ಠಲರಾಯರು ತಮ್ಮ ಹಾರ್ಮೋನಿಯಂ ವಾದ್ಯದ ಸೆಟ್ಟಿಂಗ್‌, ಟ್ಯುನಿಂಗ್‌ ಸ್ವತಃ ಮಾಡುತ್ತಿದ್ದರು. ಇದರಿಂದಾಗಿ ಅವರ ವಾದನದಲ್ಲಿ ನಾಜೂಕ ಕೆಲಸಗಳು ಅತ್ಯಂತ ಪ್ರಾಮುಖ್ಯತೆಯಿಂದ ಬರುತ್ತಿದ್ದವು. ಅವರ ಹಾರ್ಮೋನಿಯಂ ವಾದನದಲ್ಲಿ ಪ್ರಾಮುಖ್ಯತೆ ಕಂಡು ಬರುವುದೆಂದರೆ ಅವರ ಕಲ್ಪನಾವಿಲಾಸ. ರಾಗಾಧಾರ ಶಾಸ್ತ್ರೀಯ ಸಂಗೀತವಿರಲಿ, ಸುಗಮ ಸಂಗೀತವಿರಲಿ, ಅವರು ಒಂದು ಹೊಸ ಸೂತ್ರವನ್ನು ಕಲ್ಪಿಸುತ್ತಿದ್ದರು. ಅವರು ಅತ್ಯಂತ ಶ್ರೇಷ್ಠ ಸ್ವರಗಳನ್ನು ಸಾದರ ಪಡಿಸುತ್ತಿದ್ದರು. ಈ ಪ್ರಕಾರ ತಮ್ಮ ಶ್ರೇಷ್ಠ ಕಲ್ಪನಾ ವಿಲಾಸದಿಂದ ಅವರು ಶ್ರೇಷ್ಠ ಸುಂದರ ತೋಟವನ್ನು ಸಾದರಪಡಿಸುತ್ತಿದ್ದರು. ಅವರು ಒಂದು ಬುಹುಶ್ರುತ ಕಲಾವಿದರಾಗಿದ್ದರು. ಸಂಗೀತ ಶ್ರವಣ ಮಾಡುವುದು-ಇದೊಂದು ಶ್ರೇಷ್ಠ ಗುಣವನ್ನು ಕೊನೆಯವರೆಗೂ ಪಾಲಿಸುತ್ತಿದ್ದರು.

ಕಿರಾಣಾ ಘರಾಣೆಯ ಅಧ್ವರ್ಯು ಅಬ್ದುಲ್‌ ಕರೀಖಾನರ ಗಾಯನವೆಂದರೆ ವಿಠ್ಠಲರಾಯರಿಗೆ ಪಂಚಪ್ರಾಣ. ಅಬ್ದುಲ್‌ ಕರೀಂಖಾನರ ಜೇನುತುಪ್ಪದಂತಹ ಮಧುರ ಧ್ವನಿ, ಅಮೋಘ ಕಲ್ಪನೆ, ರಾಗ ರಾಗಿಣಿಗಳ ವಿಧವಿಧ ರೂಪ-ಭಾವದರ್ಶನ, ಇತರ ಸಂಗೀತ ಪದ್ಧತಿಗಳ ಬಗೆಗೆ ಗೌರವ ವಿಠ್ಠಲರಾಯರ ಮನ ಸೂರೆಗೊಂಡಿದ್ದವು. ಅಬ್ದುಲ್‌ ಕರೀಂಖಾನರು ಹಲವು ಕರ್ನಾಟಕ ರಾಗಗಳನ್ನು ಹಿಂದುಸ್ತಾನಿ ಸಂಗೀತದಲ್ಲಿ ಅಳವಡಿಸಿಕೊಂಡುದನ್ನು, ಅವುಗಳನ್ನು ಮಹಾರಾಷ್ಟ್ರ ಮತ್ತು ಇತರೆಡೆಗಳಲ್ಲಿ ಪ್ರಚಾರಕ್ಕೆ ತಂದುದನ್ನು ವಿಠ್ಠಲರಾಯರು ಬಹುವಾಗಿ ಮೆಚ್ಚಿಕೊಂಡಿದ್ದರು. ಅಬ್ದುಲ್‌ ಕರೀಂಖಾನರ ಜಮುನಾ ಕೆ ಲೇರ ಅತ್ಯಂತ ಪ್ರಸಿದ್ಧ. ಅದರ ಎಚ್‌ ಎಂ.ವಿ. ಧ್ವನಿಮುದ್ರಿಕೆಗೆ ವಿಠ್ಠಲರಾವ ಕೋರೆಗಾಂವಕರರು ಹಾರ್ಮೋನಿಯಮ್‌ ನುಡಿಸಿದ್ದಾರೆ. ಅವರಿಗೆ ಪಂಚಾಕ್ಷರಿ ಗವಾಯಿಗಳೊಂದಿಗೂ ಸಖ್ಯ. ಈರ್ವರೂ ಭೆಟ್ಟಿಯಾದಾಗೆಲ್ಲ ಕರ್ನಾಟಕ ರಾಗಗಳ ಬಗೆಗೆ ಚರ್ಚೆ. ಬಾಲಗಂಧರ್ವರ ಬಗೆಗೂ ವಿಠ್ಠಲರಾಯರಿಗೆ ಅದೇ ಪ್ರೀತಿ, ಆದರ. ಬಾಲಗಂಧರ್ವರು ಹಾರ್ಮೋನಿಯಮ್‌ ವಾದ್ಯಕ್ಕೆ ಗಾಯನದಲ್ಲಿ ಉತ್ತಮ ಸ್ಥಾನ ದೊರಕಿಸಿದವರು. ಬಾಲಗಂಧರ್ವರ ಗಾಯನದ ಸೂಕ್ಷ್ಮಗಳೆಲ್ಲ ಹಾರ್ಮೋನಿಯಮ್ಮಿನಲ್ಲಿ ಮೂಡಿ ಬರುತ್ತಿದ್ದವು ಎಂದು ವಿಠ್ಠಲರಾಯರು ಹೆಮ್ಮೆಪಡುತ್ತಿದ್ದರು.

ವಿಠ್ಠಲರಾವ್‌ ಕೋರೆಗಾಂವಕರರಲ್ಲಿದ್ದ ಹಾರ್ಮೋನಿಯಮ್‌ ಪ್ಯಾರಿಸಿನ ಕ್ಯಾಸ್ಟೀಯಾಲ್‌ ಕಂಪನಿ ತಯಾರಿಸಿದ್ದು. ಅದರಲ್ಲಿ ಇಪ್ಪತ್ತೆರಡೂ ಶೃತಿಗಳಿದ್ದು ಹನ್ನೆರಡು ಸಪ್ತಕಗಳಿದ್ದವು. ತಂತಿ ವಾದ್ಯಗಳಂತೆ ಅದನ್ನು ಬೇರೆ ಬೇರೆ ಗಾಯಕ-ಗಾಯಕಿಯರ ಶ್ರುತಿಗೆ ಹೊಂದಿಸಿಕೊಳ್ಳಬೇಕಿರಲಿಲ್ಲ. ಯಾವುದೇ ಶ್ರುತಿಯಲ್ಲಿ ಸರಾಗವಾಗಿ ನುಡಿಸಬಹುದಿತ್ತು. ಕೋರೆಗಾಂವಕರರ ವಾದನದಲ್ಲಿ ನಾದಮಾಧುರ್ಯ, ಸೂಕ್ಷ್ಮ ವಿನ್ಯಾಸಗಳೊಂದಿಗೆ ರಾಗದ ಸ್ಪಷ್ಟ ಭಾವವೂ ಚಿತ್ರಿತವಾಗುತ್ತಿತ್ತು. ರಾಗದ ಭಾವಕ್ಕನುಗುಣವಾಗಿ ಸೂಕ್ಷ್ಮ ಸಂಚಾರಗಳಿಂದ ಹಾಡುಗಾರಿಕೆಯಷ್ಟೇ ಆಪ್ಯಾಯಮಾನಗೊಳಿಸುತ್ತಿದ್ದರು. ಕೋರೆಗಾಂವಕರ ಸೂಕ್ಷ್ಮ ಗಮಕ, ತಾನಗಳನ್ನು ಹಾರ್ಮೋನಿಯಮ್ಮಿನಲ್ಲಿ ಹೂಬೇಹೂ ಗಾಯನದಲ್ಲಿಯಂತೆಯೆ ನುಡಿಸುವುದನ್ನು ಸಾಧಿಸಿದ್ದರು. ಸಂಗೀತ ಪ್ರಪಂಚದಲ್ಲಿ ವಿಠ್ಠಲರಾವ ಕೋರೆಗಾಂವಕರರು ಸಾಧನೆಯನ್ನು ಸುಪ್ರಸಿದ್ಧ ಹಾರ್ಮೋನಿಯಂ ವಾದಕಕ ಗೋವಿಂದರಾವ್‌ ಟೇಂಬೆ ಅವರಿಗೆ ಸರಿಸಮವಾಗಿ ಪ್ರಸ್ತಾಪಿಸುವುದಿದೆ.

ಅವರ ಹಾರ್ಮೋನಿಯಂ ವಾದನದಲ್ಲಿ ಕಟಾಮುಖಿ ಎಂಬ ಶ್ರೇಷ್ಠ ಪ್ರಕಾರಗಳು ಕೂಡಾ ಅತ್ಯಂತ ಮಾಧುರ್ಯದಿಂದ ಕೇಳಿಬರುತ್ತಿದ್ದವು. ಅವರು ಹಾರ್ಮೋನಿಯಂ ವಾದ್ಯದ ಮೇಲೆ ಕೈಯಿಟ್ಟರೆ ಸಾಕು ಅತ್ಯಂತ ಏಕಾಗ್ರಚಿತ್ತರಾಗುತ್ತಿದ್ದರು.

ಅವರು ತಮ್ಮ ಶಿಷ್ಯರಿಗೆ ಅತ್ಯಂತ ಆತ್ಮೀಯತೆಯಿಂದ ಕಲಿಸುತ್ತಿದ್ದರು. ವಿಠ್ಠಲರಾಯರ ಶಿಷ್ಯರ ಸಂಖ್ಯೆ ಬಹುವಿಶಾಲವಾಗಿತ್ತು. ಬೆಳಗಾವಿ, ಮುಂಬೈ, ಪುಣೆ ಮುಂತಾದ ಸ್ಥಳಗಳಿಂದ ಬಂದು ಹಾರ್ಮೋನಿಯಂ ಕಲಿಯುತ್ತಿದ್ದರು. ವಿಠ್ಠಲರಾವ್‌ರವರ ಸುದೀರ್ಘ ಜೀವನದಲ್ಲಿ ಸಂಗೀತ ಕಲೆ ಮತ್ತು ಸೌಜನ್ಯದ ಗುಣಗಳು ಅತ್ಯಂತ ಪ್ರಾಮುಖ್ಯತೆಯಿಂದ ಮೆರೆಯುತ್ತಿದ್ದವು. ಅವರ ಶಿಷ್ಯಂದಿರಲ್ಲಿ ಡಾ. ವಿ. ಎನ್‌. ಶಿರೋಡಕರ್ ಡಾ. ಕೆ.ಜಿ. ಗಿಂಡೆ, ಡಾ. ಪಾಠಕ್‌ ಮುಂತಾದವರು ಹೆಸರುವಾಸಿಯಾಗಿದ್ದಾರೆ. ೧೯೭೦ರಲ್ಲಿ ಮೈಸೂರು ಸಂಗೀತ ಅಕಾಡೆಮಿ ಯವರು ಅವರಿಗೆ ಸತ್ಕರಿಸಿ ಬಹುಮಾನ ನೀಡಿದರು. ಗೋಮಾಂತಕ (ಗೋವಾ) ಅಕಾಡೆಮಿ, ಬೆಳಗಾಂವಿ ಅಕಾಡೆಮಿಯ ವತಿಯಿಂದ ಕೂಡಾ ಅವರಿಗೆ ೧೯೭೪ರಲ್ಲಿ ಸತ್ಕಾರವನ್ನು ನೀಡಿತು.

ಇಂತಹ ಒಬ್ಬ ಶ್ರೇಷ್ಠ ಕಲಾವಿದರಿಗೆ ನಮ್ಮ ಮಾನ್ಯ ಕರ್ನಾಟಕ ಸರಕಾರದವರು ಅವರ ಸಂಗೀತ ಕಲೆಯನ್ನು ಮೆಚ್ಚಿ ಅವರಿಗೆ ನಿವೃತ್ತಿ ವೇತನವನ್ನು ಕೊಡಲು ಪ್ರಾರಂಭಿಸಿದರು. ಭಾರತೀಯ ಕೀರ್ತಿಯ ಹಾರ್ಮೋನಿಯಂ ವಾದನ ಪಟುವಿನ ನಿಧನ ಡಿಸೆಂಬರ್ ೧೯೭೪ರಲ್ಲಿ ಬೆಳಗಾಂವಿಯಲ್ಲಿ ಆಯಿತು. ಒಂದು ಸುದೀರ್ಘ ಆಯಷ್ಯವನ್ನು ಅನುಭವಿಸಿ ಶ್ರೇಷ್ಠ ಹಾರ್ಮೋನಿಯಂ ವಾದನಕಾರ ಎಂದು ಅವರು ಹೆಸರು ವಾಸಿಯಾಗಿದ್ದಾರೆ.