ಶ್ರೀ ವಿಠ್ಠಲಶೆಟ್ಟಿ ಎಂಬ ಹೆಸರಾದರೂ ಮಾಸ್ಟರ್ ವಿಠ್ಠಲ ಎಂದೇ ಚಿರಪರಿಚಿತರಾಗಿರುವ ಶ್ರೀಯುತರು ನೃತ್ಯಾಚಾರ್ಯ ಶ್ರೀ ರಾಜನ್‌ಅಯ್ಯರ್ ಅವರ ಬಳಿ ನೃತ್ಯಾಭ್ಯಾಸ ಮಾಡಿದರು.

೧೯೪೦ರಿಂದ ಸತತವಾಗಿ ನೃತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು ಮಹಾಭಾರತ, ರಾಮಾಯಣ ಕಥೆಗಳ ಆಧಾರಿತ ರೂಪಕಗಳು, ಬೈಬಲ್ ಕಥಾಧಾರಿತ ರೂಪಕಗಳನ್ನು ರಂಗಭೂಮಿಗೆ ಕೊಡುಗೆಯಾಗಿ ನೀಡಿದ್ದಾರೆ. ೧೯೮೦ರಲ್ಲಿ ಸ್ಪೀಡನ್ ದೇಶದಲ್ಲಿ ಲಲಿತಕಲೆಗಳಿಗೆ ಹೆಸರಾದ ಸಂಸ್ಥೆ “ಸ್ಕಾನೇಷಿಯಾ ವರ್ಲ್ಡ್‌ಟೂರ್‍” ರವರು ಮೂರು ತಿಂಗಳ ಕಾಲ ನೃತ್ಯವನ್ನು ಬೋಧಿಸುವಂತೆ ಇವರನ್ನು ಗೌರವ ಪೂರ್ಣವಾಗಿ ಆಮಂತ್ರಿಸಿದ್ದರು. ಮಿನುಗುತಾರೆ ದಿವಂಗತ ಕಲ್ಪನಾ ಅವರಿಗೆ ’ತಿಲ್ಲಾನ’ದವರೆಗೆ ನೃತ್ಯವನ್ನು ಹೇಳಿಕೊಟ್ಟಿದ್ದಾರಲ್ಲದೇ, ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ ಮಂಗಳೂರಿನಲ್ಲಿ ಕಾರ್ಯಕ್ರಮ ನೀಡಿದಾಗ, ಇವರು ಅಲ್ಲಿ ’ಶಿಲ್ಪಿಯ ಸ್ವಪ್ನ’ ಎಂಬ ನೃತ್ಯ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ.

ಪ್ರಸ್ತುತ ’ನೃತ್ಯ,ಕೌಸ್ತುಭ’ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿರುವ ಮಾಸ್ಟರ್ ವಿಠ್ಠಲ ಅವರಿಗೆ ’ನಾಟ್ಯ ಚಕ್ರವರ್ತಿ’, ’ನೃತ್ಯ ಕಲಾಸಿಂಧು’, ’ನಾಟ್ಯ ಕಲಾ ನಿಧಿ’ ಇನ್ನೂ ಮುಂತಾದ ಬಿರುದಾಂಕಿತರಾದ ಶ್ರೀಯುತರಿಗೆ ೧೯೯೮-೯೯ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.