ಗುಜರಾತ್ ಪ್ರಾಂತದ ಖೇಡಾ ಜಿಲ್ಲೆಯಲ್ಲಿಯ ಕರಮಸದ ಎಂಬುದು ಒಂದು ಹಳ್ಳಿ. ಈ ಹಳ್ಳಿಯು ಅತ್ಯಂತ ರಮಣೀಯವಾದ ಪ್ರದೇಶದಲ್ಲಿತ್ತು. ಭೂಮಿಯು ಅತ್ಯಂತ ಫಲವತ್ತಾದ್ದರಿಂದ ಜನರು ಸುಖಿಗಳಾಗಿದ್ದರು. ಇಲ್ಲಿ ಗುಜರಾತ್ ಪ್ರಾಂತದ ಅನೇಕ ವೀರರು, ಸಾಹಿತಿಗಳು, ಸಂತರು ಜನಿಸಿದರು. ಈ ಪುಣ್ಯಭೂಮಿಯಲ್ಲಿ ವಿಠ್ಠಲ ಭಾಯಿಯವರು ೧೮೭೧ರಲ್ಲಿ ಜನಿಸಿದರು. ಇವರ ತಂದೆಯವರಾದ ಜನ್ಹೇರಭಾಯಿಯವರು ಅಂಥ ಶ್ರೀಮಂತರೇನೂ ಅಲ್ಲ. ಇವರು ಒಕ್ಕಲತನದಿಂದ ಜೀವಿಸುತ್ತಿದ್ದರು.

ಬೆಳೆಯ ಸಿರಿ ಮೊಳಕೆಯಲ್ಲಿ

ವಿಠ್ಠಲಭಾಯಿ ಚಿಕ್ಕವನಿರುವಾಗ ಬಹಳ ತುಂಟನಾಗಿದ್ದನು. ಆದರೆ ಬಹು ಚುರುಕು ಬುದ್ಧಿ. ಅವನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದರೆ ಎಲ್ಲರಿಗೂ ಸಾಕು ಬೇಕಾಗುತ್ತಿತ್ತು. ಅವನ ಪ್ರಾಥಮಿಕ ಶಿಕ್ಷಣ ಕರಮಸದಲ್ಲಿ ಆಯಿತು. ಮುಂದಿನ ಶಿಕ್ಷಣಕ್ಕಾಗಿ ನಡಿಯಾದಕ್ಕೆ ಹೊರಟನು. ಆಗಿನ ಕಾಲದಲ್ಲಿ ರೈತನ ಮಗನೊಬ್ಬನು ಇಂಗ್ಲಿಷ್ ಕಲಿಯಲು ಬೇರೆ ಊರಿಗೆ ಹೋಗುವ ರೂಢಿ ಇರಲಿಲ್ಲ. ಅದೊಂದು ಸಾಹಸದ ಕೆಲಸವೆಂದೇ ಜನರ ತಿಳಿವಳಿಕೆಯಾಗಿತ್ತು. ರೈತನ ಮಗನು ಎಷ್ಟು ಕಲಿತರೂ ಅವನಿಗೆ ಹೊಲ ಸಾಗುವಳಿ ಮಾಡದೆ ಬೇರೆ ಉದ್ಯೋಗವು ದೊರೆಯುವಂತಿರಲಿಲ್ಲ.

ಹೈಸ್ಕೂಲನ್ನು ಸೇರಿದ ಮೇಲೆಯೂ ಅವನ ತುಂಟತನವೇನೂ ಕಡಿಮೆಯಾಗಲಿಲ್ಲ. ಶಾಲೆಯಲ್ಲಿಯೂ ಅವನೇ ಮುಂದಾಳು. ಗುಂಪು ಕಟ್ಟಿಕೊಂಡು ಶಿಕ್ಷಕರನ್ನು ಪೀಡಿಸುತ್ತಿದ್ದನು. ಹೆದರಿಕೆ ಎಂಬುದು ಅವನಿಗೆ ಗೊತ್ತೇ ಇರಲಿಲ್ಲ. ಅವನ ಸ್ಮರಣಶಕ್ತಿ ಅಗಾಧವಾದದ್ದು.

ಒಮ್ಮೆ ಶಾಲೆಯಲ್ಲಿ ಒಂದು ಸ್ವಾರಸ್ಯವಾದ ಪ್ರಸಂಗ ನಡೆಯಿತು. ಪರೀಕ್ಷೆಯಲ್ಲಿ ಇಂಗ್ಲೆಂಡ್ ದೇಶದ ರಾಜಕಾರಣಿಯೊಬ್ಬನ ಬಗ್ಗೆ ಪ್ರಶ್ನೆ ಕೇಳಿದ್ದರು. ವಿಠ್ಠಲಭಾಯಿ ತಾನು ಓದಿದ ಚರಿತ್ರೆಯಲ್ಲಿ ಆತನ ಬಗ್ಗೆ ಬಂದ ಭಾಗವನ್ನೆಲ್ಲ ಉತ್ತರ ರೂಪವಾಗಿ ಬರೆದಿದ್ದನು. ಬಾಲಕನ ಸ್ಮರಣಶಕ್ತಿಯನ್ನು ಕಂಡು ಶಿಕ್ಷಕರು ಬೆರಗಾಗಿ ಅವನಿಗೆ ಪೂರ್ಣ ಅಂಕಗಳನ್ನು ಕೊಟ್ಟರು. ಮುಖ್ಯಾಧ್ಯಾಪಕರು ಇದನ್ನು ಕಂಡು, ’ಈ ಹುಡುಗನು ಪುಸ್ತಕದಲ್ಲಿಯ ವಿಷಯವನ್ನು ನೋಡಿ ಬರೆದಂತೆ ಕಾಣುತ್ತದೆ. ನೀವು ಅವನಿಗೆ ಪೂರ್ಣ ಅಂಕಗಳನ್ನು ಕೊಟ್ಟು ಬಿಟ್ಟಿರುವಿರಲ್ಲ?’ ಎಂದು ಪ್ರಶ್ನಿಸಿದರು. ಅದಕ್ಕೆ ಶಿಕ್ಷಕರು ’ ಅವನು ಪುಸ್ತಕವನ್ನೂ ನೋಡಿ ಬರೆದಿಲ್ಲ. ಅವನ ಸ್ಮರಣ ಶಕ್ತಿಯನ್ನು ತಾವೇ ಪರೀಕ್ಷಿಸಬಹುದು. ಅವನನ್ನು ತಮ್ಮ ಕಡೆಗೆ ಕಳಿಸುತ್ತೇನೆ’ ಎಂದು ಉತ್ತರ ಕೊಟ್ಟರು. ವಿಠ್ಠಲಭಾಯಿಯನ್ನು ಮುಖ್ಯಾಧ್ಯಾಪಕರ ಬಳಿಗೆ ಕಳಿಸಿದರು. ಅವರು ಅವನಿಗೆ ಒಂದು ಪಾಠವನ್ನು ಓದಲು ಹೇಳಿದರು,; ಆನಂತರ ಆ ಪುಸ್ತಕವನ್ನು ಮುಚ್ಚಿ ಆ ಪಾಠವನ್ನು ಬರೆಯಲು ಹೇಳಿದರು. ಬಾಲಕನು ಆ ಪಾಠವನ್ನು ಸ್ವಲ್ಪವೂ ತಪ್ಪದೆ ಬರೆದಿದ್ದನು! ಅದನ್ನು ಕಂಡು ಮುಖ್ಯಾಧ್ಯಾಪಕರಿಗೆ ಬಹಳ ಆಶ್ಚರ್ಯವಾಯಿತು. ವಿಠ್ಠಲಭಾಯಿಗೆ ಈ ಸ್ಮರಣ ಶಕ್ತಿಯಿಂದ ಜೀವನದಲ್ಲಿ ಬಹಳ ಉಪಯೋಗವಾಯಿತು.

ವಿಠ್ಠಲಭಾಯಿ ತುಂಟನಾಗಿದ್ದರೂ ತಾಯಿ – ತಂದೆ ಎಂದರೆ ಅವನಿಗೆ ಭಕ್ತಿ ಬಹಳ. ತಾಯಿಯನ್ನು ಭೇಟಿಯಾಗುವುದಕ್ಕಾಗಿ ಅವನು ಪ್ರತಿ ತಿಂಗಳೂ ತನ್ನ ಊರಿಗೆ ಬರುತ್ತಿದ್ದನು. ಮೆಟ್ರಿಕ್ಯುಲೇಷನ್ ಎಂಬ ಪರೀಕ್ಷೆಗೆ ಕುಳಿತುಕೊಳ್ಳಬೇಕಾದರೆ ವಿದ್ಯಾರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು ಒಂದು ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮೇಲಿನ ಪರೀಕ್ಷೆಗೆ ಕೂಡಲು ಅನುಮತಿ ದೊರೆಯುತ್ತಿತ್ತು. ಈ ಪೂರ್ವ ಪರೀಕ್ಷೆಯಲ್ಲಿ ಬ್ರಿಟಿಷ್ ಆಡಳಿತದಿಂದ ಭಾರತೀಯರಿಗೆ ಆದ ಲಾಭವೇನು? ಎಂದು ಪ್ರಶ್ನೆ ಕೇಳಿದ್ದರು. ವಿಠ್ಠಲಭಾಯಿ ಬ್ರಿಟಿಷ್ ಆಡಳಿತದಿಂದಾದ ಹಾನಿಯನ್ನು ಮಾತ್ರ ತಮ್ಮ ಉತ್ತರದಲ್ಲಿ ವರ್ಣಿಸಿದ್ದರು. ಇದರಿಂದ ಶಿಕ್ಷಕರು ಸಿಟ್ಟಿಗೆದ್ದು ವಿಠ್ಠಲಭಾಯಿಗೆ ಈ ವರ್ಷ ಪರೀಕ್ಷೆಗೆ ಕೂಡಲು ಅನುಮತಿ ಕೊಡಲಿಲ್ಲ! ಮುಂದಿನ ವರ್ಷ ವಿಠ್ಠಲಭಾಯಿ ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾದರು. ಆಗಿನ ಕಾಲದಲ್ಲಿಯ ಶಿಕ್ಷಣ ಪದ್ಧತಿಯು ಅಂತಹುದದು! ಸತ್ಯವನ್ನು ಹೇಳಿದ್ದಕ್ಕಾಗಿ ಶಿಕ್ಷೆ!

ಮೆಟ್ರಿಕ್ ಪರೀಕ್ಷೆ ಪಾಸಾದ ಮೇಲೆ ಅವರು ಮನಸ್ಸು ಮಾಡಿದ್ದರೆ ಸರಕಾರಿ ನೌಕರಿಯಲ್ಲಿ ಸೇರಬಹುದಾಗಿತ್ತು. ಸ್ವತಂತ್ರ ವೃತ್ತಿಯ ಪಟೇಲರಿಗೆ ಅದು ಒಪ್ಪಿಗೆಯಾಗಲಿಲ್ಲ. ಯಾವುದಾದರೊಂದು ಸ್ವತಂತ್ರ ವೃತ್ತಿಯನ್ನು ಮಾಡಬೇಕೆಂದು ಅವರ ಮನಸ್ಸಿನಲ್ಲಿತ್ತು. ಅದಕ್ಕಕಾಗಿ ಅವರು ವಕೀಲಿ ವೃತ್ತಿಯ ಅಭ್ಯಾಸವನ್ನು ಮಾಡಿದರು. ೧೮೯೫ರಲ್ಲಿ ವಕೀಲಿ ಪರಿಕ್ಷೆಯಲ್ಲಿ ಅವರು ಮೇಲಿನ ಸ್ಥಾನವನ್ನು ಪಡೆದು ಉತ್ತೀರ್ಣರಾದರು. ಗೋಧ್ರಾದಲ್ಲಿ ವ್ಯವಸಾಯವನ್ನು ಪ್ರಾರಂಭಿಸಿದರು.

ಬಹುಬೇಗ ವಿಠ್ಠಲಭಾಯಿಯವರು ಸಮರ್ಥ ವಕೀಲರು ಎಂದು ಪ್ರಸಿದ್ಧರಾದರು. ಅವರ ಸತತ ಉದ್ಯೋಗ, ಅಸದೃಶವಾದ ಸ್ಮರಣಶಕ್ತಿ, ವಾಕ್ ಪಟುತ್ವ, ಕಾಯಿದೆ ಪಾಂಡಿತ್ಯಗಳಿಂದ ಎಲ್ಲರ ಮೆಚ್ಚಿಕೆಗೆ ಪಾತ್ರರಾದರು. ತಮ್ಮ ವಾದ ಕೌಶಲ್ಯದಿಂದ ಎಂಥ ಕೇಸನ್ನಾದರೂ ಗೆಲ್ಲುತ್ತಿದ್ದರು. ನ್ಯಾಯಾಧೀಶರು ವಿಠ್ಠಲಭಾಯಿಯ ವಾದ ಕೌಶಲವನ್ನು ಕಂಡು ತಲೆದೂಗುತ್ತಿದ್ದರು. ಅವರ ತಮ್ಮಂದಿರಾದ ವಲ್ಲಭಭಾಯಿಯವರೂ (ಇವರೇ ಮುಂದೆ ಸರದಾರ ಪಟೇಲರು ಎಂದು ಕೀರ್ತಿವಂತರಾದರು) ವಕೀಲರಾಗಿ ಅದೇ ಊರಿಗೆ ಬಂದರು.

ವಿಠ್ಠಲಭಾಯಿಯವರು ವಕೀಲಿ ವೃತ್ತಿಯನ್ನು ನಡೆಸುತ್ತಿದ್ದರೂ ಸಾಮಾಜಿಕ ಸುಧಾರಣೆಯ ಕಡೆಗೂ ಅವರು ಸಾಕಷ್ಟು ಲಕ್ಷ್ಯವನ್ನು ಹಾಕಿದರು. ಪಟೇಲರ ಮನೆತನದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಒಳ್ಳೆ ಗತಿಯಾಗಲೆಂದು ವಿಪರೀತ ಹಣವನ್ನು ಖರ್ಚು ಮಾಡಿ ಶ್ರಾದ್ಧಕರ್ಮಗಳನ್ನು ನಡೆಸುವುದು ಪದ್ಧತಿಯಾಗಿ ಹೋಗಿತ್ತು. ಅನೇಕ ಬಡವರೂ ಇದೇ ಮಾರ್ಗವನ್ನು ಅನುಸರಿಸಿ ಸಾಲಗಾರರಾಗಿದ್ದರು. ಈ ಪದ್ಧತಿಯನ್ನು ಸುಧಾರಿಸುವುದು ಅವಶ್ಯವೆಂದು ಪಟೇಲರಿಗೆ ತೋರಿತು. ಒಮ್ಮೆ ಪಟೇಲರ ಮನೆಯಲ್ಲಿ ಒಬ್ಬರು ತೀರಿಕೊಂಡಾಗ ಹೆಚ್ಚು ಹಣವನ್ನು ಖರ್ಚು ಮಾಡಬೇಕೆಂದು ಸಂಸಾರದವರು ತೀರ್ಮಾನಿಸಿದ್ದರು. ವಿಠ್ಠಲಭಾಯಿ ಪಟೇಲರು ಇದನ್ನು ವಿರೋಧಿಸಿದರು. ಮನೆಯವರೊಡನೆ ವಾದ ಮಾಡಿದರು. ತಾವು ಮನೆಬಿಟ್ಟು ಹೊರಡುವುದಾಗಿ ಹೇಳಿದರು. ಈ ರೀತಿಯಾಗಿ ಹಣವನ್ನು ದುಂದು ವೆಚ್ಚ ಮಾಡದೆ ಯಾವುದಾದರೂ ಒಳ್ಳೆಯ ಸಂಸ್ಥೆಗೆ ಕೊಡುವುದು ಯೋಗ್ಯವೆಂದು ತಿಳಿದು ದಾನ ಮಾಡಿದರು. ಇದರಿಂದ ಉಳಿದವರಿಗೆ ಪಾಠ ಕಲಿಸಿದಂತಾಯಿತು,

ಬ್ಯಾರಿಸ್ಟರ್ ಪಟೇಲರು

ವಲ್ಲಭಭಾಯಿ ಪಟೇಲರು ಕೆಲವು ದಿನ ವಕೀಲಿ ವ್ಯವಸಾಯವನ್ನು ಮಾಡಿದ ಮೇಲೆ ಲಂಡನ್ನಿಗೆ ಹೋಗಿ ಬ್ಯಾರಿಸ್ಟರರಾಗಬೇಕೆಂದು ಮೊದಲಿನಿಂದಲೂ ಪ್ರಯತ್ನಿಸುತ್ತಿದರು. ಬ್ಯಾರಿಸ್ಟರ್ ಪರೀಕ್ಷೆ ಮಾಡಿ ಬಂದವರು ಹೈ ಕೋರ್ಟುಗಳ ವಕೀಲರಾಗುತ್ತಿದ್ದರು. ಅವರಿಗೆ ವರಮಾನವೂ ಚೆನ್ನಾಗಿರುತ್ತಿತ್ತು. ಸಮಾಜದಲ್ಲಿ ಹೆಚ್ಚು ಗೌರವವೂ ದೊರೆಯುತ್ತಿತ್ತು. ವಲ್ಲಭಭಾಯಿಯವರು ಅದಕ್ಕಾಗಿ ಹಣವನ್ನು ಕೂಡಿ ಹಾಕಿದ್ದರು. ಪಾಸ್ ಪೋರ್ಟ್ ತರಿಸಿದ್ದರು. ಈ ಸುದ್ದಿಯು ವಿಠ್ಠಲಭಾಯಿಯವರಿಗೆ ತಿಳಿಯಿತು. ಅವರು ಸರದಾರ ಪಟೇಲರನ್ನು ಕುರಿತು ’ನೀನು ನನಗಿಂತ ಚಿಕ್ಕವನು. ನಾನು ಮೊದಲು ಲಂಡನ್ನಿಗೆ ಹೋಗಿ ಬರುವೆನು. ಆಮೇಲೆ ನೀನು ಹೋಗಬಹುದು’ ಎಂದರು. ವಲ್ಲಭಭಾಯಿ ಪಟೇಲರು ಒಪ್ಪಿಕೊಂಡರು. ವಿಠ್ಠಲಭಾಯಿಯವರು ಲಂಡನ್ನಿಗೆ ತೆರಳಿದರು.

ಲಂಡನ್ನಿನಲ್ಲಿ ಬಡ ಕೂಲಿಕಾರರು ವಾಸ ಮಾಡುವ ಸ್ಥಳವಾದ ಕೆನ್ಸಿಂಗ್ ಟನ್ ಭಾಗದಲ್ಲಿ ಅವರು ವಾಸಿಸ ತೊಡಗಿದರು. ಲಂಡನ್ ಬಹಳ ಶ್ರೀಮಂತನಗರ, ವೈಭವದ ದೃಶ್ಯಗಳು ಅಲ್ಲಿ ಎಷ್ಟೋ! ಖುಷಿಯಾಗಿ ಕಾಲ ಕಳೆಯಲು ಬೇಕಾದಷ್ಟು ಅವಕಾಶ. ಆದರೆ ಪಟ್ಟಣದ ವೈಭವವನ್ನು ನಿರೀಕ್ಷಿಸುವುದಾಗಲಿ, ಅಲ್ಲಿಯ ವಿಲಾಸ ವೈಭವಗಳಲ್ಲಿ ಪಾಲುಗೊಳ್ಳುವದಾಗಲಿ ಅವರ ಉದ್ದೇಶವಾಗಿರಲಿಲ್ಲ. ಅವರು ಬಂದದ್ದು ಬ್ಯಾರಿಸ್ಟರ್ ಪರೀಕ್ಷೆಯ ಅಭ್ಯಾಸಕ್ಕೆ. ಅವರು ವಕೀಲರಾಗಿದ್ದಾಗ ಉಳಿಸಿದ್ದ ಹಣದಲ್ಲಿಯೇ ತಮ್ಮ ಎಲ್ಲ  ವೆಚ್ಚವನ್ನು ಮುಗಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿಯೇ ಅವರು ಅತಿ ಅವಶ್ಯವಿದ್ದಾಗ ಮಾತ್ರ ಹಣವನ್ನು ಖರ್ಚು ಮಾಡುತ್ತಿದ್ದರು. ಅಭ್ಯಾಸದ ವಿಷಯದಲ್ಲಿ ಅವರು ಎಲ್ಲರಿಗಿಂತಲೂ ಮುಂದಿದ್ದರು. ಕಾಯಿದೆ  ಪುಸ್ತಕಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದುದರಿಂದಲೇ ಅವರಿಗೆ ತೃಪ್ತಿಯಿಲ್ಲ. ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು, ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಅವರ ಆಸೆ. ಬ್ಯಾರಿಸಟರ್ ಪರೀಕ್ಷೆಗೆ ಮೂರು ವರ್ಷ ಅಭ್ಯಾಸ ಮಾಡಬೇಕಾಗಿತ್ತು. ಚೆನ್ನಾಗಿ ಅಭ್ಯಾಸ ಮಾಡಿದರೆ ಆರು ತಿಂಗಳ ಮೊದಲೇ ಪರೀಕ್ಷೆಗೆ ಕೂಡಲು ಅನುಮತಿ ಕೊಡುತ್ತಿದ್ದರು. ವಿಠ್ಠಲಭಾಯಿಯವರು ಎರಡು ವರ್ಷ ಆರು ತಿಂಗಳು ಆದ ಮೇಲೆ ಪರೀಕ್ಷೆಗೆ ಕುಳಿತು ಮೊದಲನೆಯ ವರ್ಗದಲ್ಲಿ ಮೊದಲಿಗರಾಗಿ ತೇರ್ಗಡೆಯಾದರು. ಅವರಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದದ್ದಕ್ಕಾಗಿ ಐವತ್ತು ಪೌಂಡ್ ಗಳ ಬಹುಮಾನ ದೊರೆಯಿತು.

ವಿಠ್ಠಲಭಾಯಿಯವರು ಇತರ ದೇಶಗಳಲ್ಲಿ ರಾಜ್ಯದ ಆಡಳಿತಕ್ಕೆ ರಚಿಸಿದ ರಾಜ್ಯಾಂಗ ಘಟನೆಗಳ ಬಗ್ಗೆ ಅನೇಕ ಗ್ರಂಥಗಳನ್ನು ಓದಿದರು. ರಾಜಕೀಯ ವಿಜ್ಞಾನ ಅವರಿಗೆ ಬಹು ಮೆಚ್ಚಿಗೆ. ತಮ್ಮ ಶಿಕ್ಷಣ ಮುಗಿಸಿಕೊಂಡು ೧೯೦೮ರಲ್ಲಿ ಅವರು ಭಾರತಕ್ಕೆ ಮರಳಿ ಬಂದರು.

ಮುಂಬಯಿಯ ಹೈಕೋರ್ಟಿನಲ್ಲಿ ಅವರು ತಮ್ಮ ವಕೀಲಿ ವ್ಯವಸಾಯವನ್ನು ಪ್ರಾರಂಭಿಸಿದರು. ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿತ್ತು. ಅವರ ಪತ್ನಿ ಕಾಯಿಲೆಯಿಂದ ಹಾಸಿಗೆ ಹಿಡಿದರು. ಎಷ್ಟು ಉಪಚಾರ ಮಾಡಿದರೂ ಗುಣವಾಗದೆ ತೀರಿಕೊಂಡರು. ಅವರ ಒಬ್ಬಳೇ ಮಗಳೂ ಚಿಕ್ಕವಳಿರುವಾಗಲೇ ತೀರಿಕೊಂಡಿದ್ದಳು. ಅವರ ಸಂಸಾರವು ಅಲ್ಲಿಗೆ ಮುಕ್ತಾಯವಾಯಿತು. ಇಡೀ ದೇಶವೇ ಅವರ ಸಂಸಾರವಾಯಿತು. ಅವರ ಪತ್ನಿಯು ತೀರಿಕೊಂಡಾಗ ಅವರ ವಯಸ್ಸು ಇನ್ನೂ ಚಿಕ್ಕದು. ಆದರು ಅವರು ಮತ್ತೆ ಮದುವೆಯಾಗಲಿಲ್ಲ.

ನಿರ್ಭೀತ ಸಾರ್ವಜನಿಕ ಸೇವಕ

ಪಟೇಲರು ವಕೀಲರಾದರೂ, ಅವರ ಕಾರ್ಯಕ್ಷೇತ್ರವು ಕೇವಲ ವಕೀಲಿ ವ್ಯವಸಾಯಕ್ಕೆ ಸೀಮಿತವಾಗಿರಲಿಲ್ಲ. ಸಾರ್ವಜನಿಕ ಕಾರ್ಯಗಳಲ್ಲಿ ಅವರು ಆಸ್ಥೇಯಿಂದ ಭಾಗವಹಿಸಿತೊಡಗಿದರು. ಆಗ ಭಾರತಕ್ಕಿನ್ನೂ ಸ್ವಾತಂತ್ರ‍್ಯ ಬಂದಿರಲಿಲ್ಲ. ಕೆಲವು ಭಾಗಗಳನ್ನು ಬ್ರಿಟಿಷರ ಅಧೀನರಾಗಿದ್ದ ರಾಜರು ಆಳುತ್ತಿದ್ದರು. ದೇಶದ ಉಳಿದ ಭಾಗವನ್ನು ಪ್ರಾಂತಗಳು ಎಂದು ವಿಂಗಡಿಸಿ, ಬ್ರಿಟಿಷ್ ಸರ್ಕಾರ ಗವರ್ನರುಗಳನ್ನು ನೇಮಿಸುತ್ತಿತ್ತು. ವಿಠ್ಠಲಭಾಯಿಯವರು ಮುಂಬಯಿ ಪ್ರಾಂತದ ಕೌನ್ಸಿಲ್ಲಿಗೆ ಆರಿಸಿ ಬಂದರು. ಆಗ ಶಾಸನ ಸಭೆಗೆ ವಿಶೇಷ ಅಧಿಕಾರಗಳಿರಲಿಲ್ಲ. ಗವರ್ನರನು ಮನ ಬಂದಂತೆ ಕಾಯ್ದೆಗಳನ್ನು ಮಾಡುತ್ತಿದ್ದನು. ಕೌನ್ಸಿಲಿನ ಸದಸ್ಯರು ತಮ್ಮ ವಿರೋಧವನ್ನು ಹೇಳಬಹುದಾಗಿತ್ತು. ಅಷ್ಟೆ. ಅದರಿಂದ ಹೆಚ್ಚು ಪ್ರಯೋಜನವೂ ಇರಲಿಲ್ಲ. ವಿಠ್ಠಲಭಾಯಿಯವರು ಜನತೆಯ ಹಿತಕ್ಕೆ ವಿರೋಧವಾಗಿ ಸರ್ಕಾರವು ಯಾವುದೊಂದು ಕಾರ್ಯವನ್ನು ಮಾಡಿದಾಗ ಅದನ್ನು ವಿರೋಧಿಸದೆ ಬಿಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಬ್ರಿಟಿಷರಿಗೆ ಎಲ್ಲ ಅಧಿಕಾರ. ಆದರೂ ಸರಕಾರಕ್ಕೆ ಹೆದರದೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಅವರಿಗೆ ಸರಕಾರದಿಂದ ಯಾವ ಅನುಗ್ರಹವೂ ಬೇಕಾಗಿರಲಿಲ್ಲ. ಅದಕ್ಕಾಗಿಯೇ ಅವರು ಗವರ್ನರನ ಎದುರಲ್ಲೇ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಕೌನ್ಸಿಲ್ಲಿನಲ್ಲಿ ಜನರ ಪರವಾಗಿ ಅವರು ವಾದಿಸುತ್ತಿದ್ದರು. ಅವರು ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ಅಭ್ಯಾಸ ಮಾಡಿ ಸಾಧಕ – ಬಾಧಕ ಉಪಾಯಗಳನ್ನು ತಿಳಿದುಕೊಂಡು, ಆಮೇಲೆ ಮಾತನಾಡುತ್ತಿದ್ದರು. ಪ್ರಜೆಗಳಿಗೆ ಅನ್ಯಾಯವಾಗುವಂತಹ ಯಾವುದೇ ಕಾಯ್ದೆಯನ್ನಾದರೂ ಅವರು ವಿರೋಧಿಸುತ್ತಿದ್ದರು. ಯೂರೋಪಿಯನ್ ಅಧಿಕಾರಿಗಳ ಸಂಗಡ ಅವರು ಯಾವಾಗಲೂ ಯುದ್ಧ ಮಾಡತಕ್ಕವರೇ! ವಿರೋಧಿಸಬೇಕು ಎಂಬ ಆಶೆಗಾಗಿಯೇ ವಿರೋಧಿಸುತ್ತಿರಲಿಲ್ಲ. ಜನರ ಕಲ್ಯಾಣಕ್ಕಾಗಿ ಅವರು ಸದಾ ಹೆಣಗುತ್ತಿದರು. ಕೌನ್ಸಿಲಿನಲ್ಲಿ ಇದ್ದ ಎಷ್ಟೋ ಮಂದಿ ಸದಸ್ಯರು ತಮ್ಮ ವೇಳೆಯನ್ನೆಲ್ಲ ನಿರಾಲೋಚನೆಯಾಗಿ ಕಳೆಯುತ್ತಿದ್ದರು. ಪ್ರಜೆಗಳ ಹಿತದ ಸಲುವಾಗಿ ತಾವು ಹೋರಾಡಬೇಕು ಎಂಬ ಕಲ್ಪನೆಯೇ ಅವರಿಗೆ ಇರಲಿಲ್ಲ. ಪಟೇಲರಿಗೆ ಮನೆಯೂ ಮಠವೂ ಕೌನ್ಸಿಲ್ಲೇ.

ಪಟೇಲರು ಕೌನ್ಸಿಲಿನಲ್ಲಿ ಅನೇಕ ವಿಷಯಗಳನ್ನು ಮಂಡಿಸಿದರು. ಅವುಗಳಲ್ಲಿ ಶಿಕ್ಷಣದ ವಿಷಯದ ಬಗ್ಗೆ ಅವರು ತಂದ ಗೊತ್ತುವಳಿ ಅತ್ಯಂತ ಮಹತ್ವವಾದದ್ದು. ಎಲ್ಲರಿಗೂ ವಿಧ್ಯಾಭ್ಯಾಸ ದೊರೆಯಬೇಕು. ಪ್ರಾರಂಭದ ವಿದ್ಯಾಭ್ಯಾಸಕ್ಕೆ ಫೀಸ್ ಹಾಕಬಾರದು. ಉಚಿತವಾಗಿರಬೇಕು ಎಂದು ಅವರ ಒತ್ತಾಯ. ಆದರೆ ಸರಕಾರದವರಿಗೆ ಈ ವಿಷಯದಲ್ಲಿ ಆಸ್ಥೆ ಇರಲಿಲ್ಲ. ಆದ್ದರಿಂದ ಪಟೇಲರು ತಂದ ಈ ಗೊತ್ತುವಳಿಯು ಒಪ್ಪಿಗೆಯಾಗಲಿಲ್ಲ. ಮರುವರ್ಷ ಪಟೇಲರು ಈ ಗೊತ್ತುವಳಿಯನ್ನು ಮತ್ತೆ ತಂದರು. ಆಗ ಸರಕಾರದವರು ನಗರಸಭೆಯವರು ಸಾಧ್ಯವಾದರೆ ಒತ್ತಾಯದ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಬಹುದೆಂದು ಒಪ್ಪಿಕೊಂಡರು ಮತ್ತು ಪಟೇಲರ ಗೊತ್ತುವಳಿಯು ಬಹುಮತದಿಂದ ಅಂಗೀಕೃತವಾಯಿತು. ವಿದೇಶೀ ಸರ್ಕಾರಕ್ಕೆ ನಮ್ಮ ಜನಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿಲ್ಲ. ಬರಿಯ ತಾತ್ಸಾರವೇ. ವಿಠ್ಠಲಭಾಯಿಯವರು ಶಿಕ್ಷಣದ ಮಹತ್ವ ಚೆನ್ನಾಗಿ ಅರಿತಿದ್ದರು. ಅದಕ್ಕಾಗಿಯೇ ಅವರು ಕಡ್ಡಾಯ ಸಾರ್ವತ್ರಿಕ ಶಿಕ್ಷಣಕ್ಕಾಗಿ ಸರಕಾರವನ್ನು ಆಗ್ರಹಪಡಿಸಿದರು. ಸರಕಾರದವರು ತಮ್ಮ ಹೊಣೆಯನ್ನು ನಗರ ಸಭೆಗಳ ಮೇಲೆ ಹಾಕಿ, ತಾವು ಮಾಡಬೇಕಾದ ಕರ್ತವ್ಯದ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡರು.

೧೯೧೭ರಲ್ಲಿ ಖೇಡಾ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ, ಬೆಳೆಗೆ ವಿಪರೀತ ಹಾನಿಯಾಯಿತು. ಎಲ್ಲಿಯೂ ಬೆಳೆಯು ಸರಿಯಾಗಿ ಬರಲಿಲ್ಲ. ಸರಕಾರದವರು ೬೦೦ ಹಳ್ಳಿಗಳಲ್ಲಿ ಕೇವಲ ೧೦೪ ಹಳ್ಳಿಗಳಲ್ಲಿ ಭೂಕಂದಾಯ ವಸೂಲು ಮಾಡುವುದನ್ನು ನಿಲ್ಲಿಸಿದರು. ಎಲ್ಲ ಹಳ್ಳಿಗಳಲ್ಲಿಯೂ ರೈತರು ಕಂಗೆಟ್ಟಿದ್ದರು. ಪಟೇಲರು ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಅರಿತುಕೊಂಡು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಭೂಕಂದಾಯವನ್ನು ವಸೂಲು ಮಾಡಬಾರದೆಂದು ವಿನಂತಿ ಮಾಡಿಕೊಂಡರು. ಆದರೆ ಆ ಅಧಿಕಾರಿಯು ಕಂದಾಯ ವಸೂಲಿಯನ್ನು ನಿಲ್ಲಿಸಲು ಒಪ್ಪಿಕೊಳ್ಳಲಿಲ್ಲ. ಕೌನ್ಸಿಲಿನಲ್ಲಿಯೂ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು. ಮುಂಬಯಿ ನಗರದಲ್ಲಿ ನಡೆದ ಅನೇಕ ಸಭೆಗಳಲ್ಲಿ ಮಾತನಾಡಿ ಸರಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು. ವೈಸರಾಯನು ತಾತ್ಕಾಲಿಕವಾಗಿ ಒತ್ತಾಯದಿಂದ ಕಂದಾಯ ವಸೂಲು ಮಾಡಬಾರದೆಂದು ಗವರ್ನರಿಗೆ ತಿಳಿಸಿದನು. ಸರಕಾರದ ಈ ಅನ್ಯಾಯದ ಧೋರಣೆಯನ್ನು ಶಾಸನಸಭೆಯಲ್ಲಿಯೂ, ಹೊರಗೂ ಅತಿ ಉಗ್ರವಾಗಿ ಟೀಕಿಸಿದವರೆಂದರೆ ಪಟೇಲರೆ.

ಇಂಗ್ಲೆಂಡಿನಲ್ಲಿಯ ಕಾರ್ಯ

ಇಂಗ್ಲೆಂಡಿನ ಸರಕಾರದಲ್ಲಿ ಭಾರತದ ವಿಷಯಗಳ ಮಂತ್ರಿಯಾಗಿದ್ದ ಮಾಂಟೆಗು ಪಾರ್ಲಿಮೆಂಟಿನಲ್ಲಿ ಭಾರತದಲ್ಲಿ ಮಾಡಬೇಕಾದ ರಾಜಕೀಯ ಸುಧಾರಣೆಗಳ ಬಗ್ಗೆ ಒಂದು ಮಸೂದೆಯನ್ನು ತರಲು ತೀರ್ಮಾನಿಸಿದ. ಭಾರತಕ್ಕೆ ಆದಷ್ಟು ಹೆಚ್ಚು ಅಧಿಕಾರ ದೊರೆಯಬೇಕೆಂದು ಪ್ರತಿಪಾದಿಸುವುದಕ್ಕಾಗಿ ಭಾರತದ ಕಾಂಗ್ರೆಸ್ ಪಕ್ಷವು ಪಟೇಲ್ ಮತ್ತು ಕೇಳಕರ್ ಅವರನ್ನು ತನ್ನ ಪ್ರತಿನಿಧಿಗಳಾಗಿ ಇಂಗ್ಲೆಂಡಿಗೆ ಕಳಿಸಿತು. ಇವರ ಕೆಲಸವು ಮೂರು ಬಗೆಯದಾಗಿತ್ತು. ಸುಧಾರಣಾ ಸಮಿತಿಯ ಮುಂದೆ ಸಾಕ್ಷಿ ನುಡಿದು ಹೆಚ್ಚು ಅಧಿಕಾರವು ಭಾರತೀಯರಿಗೆ ದೊರೆಯುವಂತೆ ಮಾಡುವಲ್ಲಿ ಬ್ರಿಟಿಷ್ ಜನತೆಯ ಬೆಂಬಲವನ್ನು ಪಡೆಯುವುದು. ಭಾರತೀಯರಿಗೆ ಯಾವ ಸುಧಾರಣೆಗಳನ್ನು ಕೊಡಬೇಕು ಎಂಬುದನ್ನು ಕುರಿತು ವಿಚಾರ ಮಾಡುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಗೆ ವಿಠ್ಠಲಭಾಯಿಯವರು ಒಂದು ಪತ್ರ ಬರೆದು, ’ಭಾರತೀಯರ ಪ್ರತಿನಿಧಿಯಾಗಿ ಮಾತನಾಢುವ ಹಕ್ಕು ಕಾಂಗ್ರೆಸ್ಸಿನ ಪ್ರತಿನಿಧಿಗಳಿಗೆ ಇರುವಂತೆ ಮತ್ತೆ ಯಾರಿಗು ಇಲ್ಲ. ಕಾಂಗ್ರೆಸ್ ಭಾರತೀಯರ ಆಸೆ ಆಕಾಂಕ್ಷೆಗಳ ಪ್ರತಿನಿಧಿಯಾಗಿದೆ. ಆದ್ದರಿಂದ ಆ ಸಂಸ್ಥೇಯ ಪ್ರತಿನಿಧಿಯಾಘಿ ಬಂದ ಎಲ್ಲರಿಗೂ ಸಮಿತಿಯ ಮುಂದೆ ಅಭಿಪ್ರಾಯ ತಿಳಿಸಲು ಅವಕಾಶ ಕೊಡಬೇಕು. ಹಾಗೂ ಭಾರತದಲ್ಲಿ ಬ್ರಿಟಿಷ್ ಸರಕಾರವು ನಡೆಸಿರುವ ದಬ್ಬಾಳಿಕೆಯನ್ನು ಬೇಗನೆ ಕೊನೆಗೊಳಿಸಬೇಕು. ಇಲ್ಲವಾದರೆ ನಿಮ್ಮ ಸುಧಾರಣೆಗಳ ಬಗ್ಗೆ ಜನರಲ್ಲಿ ವಿಶ್ವಾಸವೇ ಇಲ್ಲದಂತಾಗಬಹುದು’ ಎಂದು ತಿಳಿಸಿದರು. ಕಾಂಗ್ರೆಸ್ಸಿನ ಪರವಾಗಿ ಪಟೇಲರನ್ನು ಸಾಕ್ಷ್ಯ ನುಡಿಯಲು ಕರೆದರು. ಪಟೇಲರು ಸಮಿತಿಯ ಮುಂದೆ ಏನು ಮಾತನಾಡಬೇಕು ಎಂದು ಮೊದಲೇ ಗೊತ್ತು ಮಾಡಿ ಇಟ್ಟುಕೊಂಡಿದ್ದರು. ಸಮಿತಿಯ ಎದುರಿನಲ್ಲಿ ಭಾರತಕ್ಕೆ ಹದಿನೈದು ವರ್ಷದೊಳಗಾಗಿ ಪೂರ್ಣ ಸ್ವಾತಂತ್ರ‍್ಯ ಕೊಡಬೇಕೆಂದರು. ಅನೇಕ ಪಕ್ಷಗಳ ಪ್ರತಿನಿಧಿಗಳು ಸಮಿತಿಯ ಮುಂದೆ ಸಾಕ್ಷಿ ನುಡಿದರು. ಆದರೆ  ಪಟೇಲರಂತೆ ದಿಟ್ಟತನದಿಂದ ಯಾರೂ ಮಾತನಾಡಲಿಲ್ಲ. ಅವರ ಮಾತಿನಲ್ಲಿ ಧೈರ್ಯವೂ, ಖಚಿತತೆಯೂ ಎದ್ದು ಕಾಣಿಸುತ್ತಿದ್ದವು. ಮಾಂಟೆಗುರವರು ಪ್ರಾಂತಗಳಿಗೆ ಅಧಿಕಾರಗಳನ್ನು  ಕೊಡುವ ಗೊತ್ತುವಳಿಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದರು. ಆದರೆ ಕೇಂದ್ರ ಸರಕಾರದಲ್ಲಿ ಯಾವ ಅಧಿಕಾರವನ್ನೂ ಭಾರತೀಯರಿಗೆ ಕೊಟ್ಟಿರಲಿಲ್ಲ. ಪ್ರಾಂತಗಳಲ್ಲಿ ಸ್ವಲ್ಪ ಹೆಚ್ಚು ಅಧಿಕಾರ ಕೊಟ್ಟ ಮಾತ್ರಕ್ಕೆ ಭಾರತೀಯರು ತೃಪ್ತರಾಗುವುದಿಲ್ಲ. ಕೇಂದ್ರ ಸರ್ಕಾರದಲ್ಲಿಯೂ ಅವರಿಗೆ ಭಾಗವಿರಬೇಕು ಎಂದು ಪಟೇಲರು ಸ್ಪಷ್ಟವಾಗಿ ಹೇಳಿದರು.

ಈ ಕೆಲಸ ಮುಗಿದ ಮೇಲೆ ಬ್ರಿಟಿಷರಲ್ಲಿ ಭಾರತೀಯರ ಹಕ್ಕುಗಳ ಬಗ್ಗೆ ಸಹಾನೂಭೂತಿಯನ್ನು ಉಂಟು ಮಾಡುವುದು ಹಾಗೂ ಭಾರತೀಯರು ಯಾವ ರೀತಿಯಾಗಿ ದಬ್ಬಾಳಿಕೆಗೆ ಒಳಗಾಗಿರುವರು ಎಂಬುದನ್ನು ತಿಳಿಸಿಕೊಡುವುದು. ಈ ಎರಡು ಕೆಲಸಗಳಿಗಾಗಿ ಭಾರತೀಯ ಶಿಷ್ ಮಂಡಳದವರು ಮೆತ್ತಗೆ ಎರಡು ತಿಂಗಳು ಅಲ್ಲಿ ನಿಲ್ಲಬೇಕಾಯಿತು. ಪಟೇಲರು ರಾಜಕೀಯ ಮುಖಂಡರನ್ನು ಭೇಟಿಯಾಗಿ ಭಾರತದ ಪರಿಸ್ಥಿತಿಯ ಬಗ್ಗೆ ಅವರೊಡನೆ ಚರ್ಚಿಸಿದರು. ಅನೇಕ ಸಭೆಗಳಲ್ಲಿ ಮಾತನಾಡಿದರು. ಬೇರೆ ನಗರಗಳಿಗೆ ಹೋಗಿ ಭಾರತದಲ್ಲಿ ಭಾರತೀಯರು ಪಡುತ್ತಿರುವ ಕಷ್ಟ. ಅವರಿಗಾಗುತ್ತಿರುವ ಅನ್ಯಾಯ ಎಲ್ಲವನ್ನೂ ವಿವರಿಸಿದರು.

ಇಂಗ್ಲೆಂಡಿನ ಕೂಲಿಕಾರ ಪಕ್ಷದ ಸದಸ್ಯರನ್ನು ಕಂಡು ಭಾರತದ ಪರಿಸ್ಥಿತಿಯನ್ನು ಸ್ಪಷ್ಟಗೊಳಿಸಿದರು. ಓಡಯರ್ ಮತ್ತು ಡೈಯರ್ ಎಂಬ ಬ್ರಿಟಿಷ್ ಅಧಿಕಾರಿಗಳು ಪಂಜಾಬಿನಲ್ಲಿ ಕಟುಕರಂತೆ ನಡೆದುಕೊಂಡಿದ್ದರು. ಅನೇಕರ ಸಾವಿಗೆ ಇವರೇ ಕಾರಣರು. ಪಟೇಲರು, ಈ ಅಧಿಕಾರಿಗಳ ಅನ್ಯಾಯ ಮತ್ತು ದುಷ್ಟತನಗಳನ್ನು ಶಿಕ್ಷಿಸಬೇಕು ಎಂದರು. ಅತ್ಯಂತ ಕ್ರೂರವಾಗಿ ಆಳ್ವಿಕೆ ನಡೆಸುತ್ತಿದ್ದ ವೈಸರಾಯಿಯನ್ನೂ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಮುಂಬಯಿ ಕಾರ್ಪೋರೇನ್ ನಲ್ಲಿ ಕಾರ್ಯ

೧೯೩೦ನೆಯ ಇಸವಿ. ಭಾರತ ಇನ್ನೂ ಬ್ರಿಟಿಷರ ಆಡಳಿತದಲ್ಲಿತ್ತು. ಇದಕ್ಕೆ ವಿರುದ್ಧ ಮಹಾತ್ಮಾಗಾಂಧಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು. ಭಾರತದಲ್ಲಿ ಒಂದು ಹೊಸ ಯುಗವೇ ಪ್ರಾರಂಭವಾಯಿತು.

ವಕೀಲರು ಸರಕಾರ ಕೋರ್ಟುಗಳನ್ನು ಬಹಿಷ್ಕರಿಸಿದರು, ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳನ್ನು ತ್ಯಜಿಸಿದರು. ದೇಶದ ಎಲ್ಲ ಭಾಗಗಳಲ್ಲಿಯೂ ಸರಕಾರದ ವಿರುದ್ಧವಾದ ವಾತಾವರಣವು ನಿರ್ಮಾಣವಾಯಿತು. ಸಾವಿರಾರು ಜನರು ಬಂಧಿತರಾದರು. ಮೋತಿಲಾಲ್ ನೆಹರು, ಲಾಲಾ ಲಜಪತರಾಯ್ ಮೊದಲಾದ ಮುಖಂಡರು ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆಗೆ ಹೋದರು.

ವಿಠ್ಠಲ್ ಭಾಯಿ ಪಟೇಲರು ಕೇಂದ್ರ ಶಾಸನ ಸಭೆಯ ಅಧ್ಯಕ್ಷರಾಗಿ ಅಲ್ಲದೆ ವಿದೇಶಗಳಲ್ಲಿ ಪ್ರವಾಸ ಮಾಡಿ ಭಾರತದ ವಾಣಿಯಾದರು.

ಗಾಂಧೀಜಿಯವರು ಪ್ರಾರಂಭಿಸಿದ ಈ ಸತ್ಯಾಗ್ರಹವನ್ನು ಕಂಡು ವೈಸರಾಯನು ಗಾಬರಿಯಾದನು. ದೇಶದ ತುಂಬ ಈ ಸತ್ಯಾಗ್ರಹವು ಹಬ್ಬುವುದೆಂದು ಅವನು ಕನಸಿನಲ್ಲೂ ಎಣಿಸಿರಲಿಲ್ಲ. ವಿಠ್ಠಲಭಾಯಿ ಪಟೇಲರಿಗೆ ಈ ಸತ್ಯಾಗ್ರಹ ಒಪ್ಪಿಗೆ ಇರಲಿಲ್ಲ. ಜನರು ಸರಕಾರವನ್ನು ಎದುರಿಸಲು ಇನ್ನೂ ಸಿದ್ಧವಾಗಿಲ್ಲ ಎಂದು ಅವರ ಅಭಿಪ್ರಾಯ. ಒಂದು ಮಹಾ ಸಾಮ್ರಾಜ್ಯದ ಸರ್ಕಾರವನ್ನು ಎದುರಿಸುವುದು ಎಂದರೆ ಸುಲಭವಲ್ಲ. ಸರ್ಕಾರಕ್ಕೆ ಪೊಲೀಸರುಂಟು. ಸೈನಿಕರುಂಟು. ಮದ್ದುಗುಂಡುಗಳುಂಟು. ಅದನ್ನು ಎದುರಿಸಿ ನಿಲ್ಲಲು ಜನರನ್ನು ಸಿದ್ಧಗೊಳಿಸಬೇಕು. ಪೂರ್ಣ ತಯಾರಿಯನ್ನು ಮಾಡಿಕೊಂಡು ಮುಂದೆ ನುಗ್ಗಬೇಕು. ಒಮ್ಮೆ ಮುಂದೆ ಇಟ್ಟ ಹೆಜ್ಜೆಯನ್ನು ಎಂಥ ಪ್ರಸಂಗ ಬಂದರೂ ಹಿಂದೆ ಇಡಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಕಾಂಗ್ರೆಸ್ ನಲ್ಲಿ ಬಹು ಮಂದಿ ಸತ್ಯಾಗ್ರಹ ಹೂಡಬೇಕು ಎಂದು ತೀರ್ಮಾನಿಸಿದರು. ವಿಠ್ಠಲಭಾಯಿ ಪಟೇಲರೂ ಬಹುಮತಕ್ಕೆ ಒಪ್ಪಿದರು. ಸತ್ಯಾಗ್ರಹದಲ್ಲಿ ಭಾಗವಹಿಸಲು ಸಿದ್ಧರಾದರು.

ಈ ಸತ್ಯಾಗ್ರಹದ ಅಂಗವಾಗಿ ಬಾರ್ಡೋಲಿ ಎಂಬ ಸ್ಥಳದಲ್ಲಿ ಚಳುವಳಿಯನ್ನು ಪ್ರಾರಂಭಿಸಬೇಕು ಎಂದು ನಿರ್ಣಯವಾಗಿತ್ತು. ಸರ್ಕಾರದವರಿಗೆ ಕೊಡಬೇಕಾಗಿದ್ದ ಭೂಕಂದಾಯವನ್ನು ಕೊಡುವುದಿಲ್ಲ ಎಂದು ಜನ ಹಟ ಹಿಡಿಯಬೇಕು – ಇದೇ ಈ ಸಂಗ್ರಾಮದ ಮಹತ್ವದ ಅಂಶ. ವಿಠ್ಠಲಭಾಯಿ ಪಟೇಲರ ಅಧ್ಯಕ್ಷತೆಯಲ್ಲಿ ಬಾರ್ಡೋಲಿ ರೈತರು ಸಭೆ ಸೇರಿದರು. ತಾವು ಕಂದಾಯ ಕೊಡುವುದಿಲ್ಲ ಎಂದು ತೀರ್ಮಾನಿಸಿದರು.

ಆದರೆ ಅಷ್ಟರಲ್ಲಿ ಯಾರೂ ನಿರೀಕ್ಷಿಸದೆ ಇದ್ದ ಒಂದು ಸಂಗತಿ ನಡೆಯಿತು. ಸಂಯುಕ್ತ ಪ್ರಾಂತದ ಚೌರಿಚೌರಾ ಎಂಬಲ್ಲಿ ಜನರು ಅಹಿಂಸೆಯನ್ನು ಪಾಲಿಸದೆ ಹಿಂಸಾಚಾರಕ್ಕೆ ಇಳಿದರು. ಇಪ್ಪತ್ತಾರರು ಮಂದಿ ಪೊಲೀಸರನ್ನು ಸುಟ್ಟರು.

ಇದರಿಂದ ಗಾಂಧೀಜಿಯವರಿಗೆ ಬೇಸರವಾಯಿತು. ಕೂಡಲೇ ತಾವು ಪ್ರಾರಂಭಿಸಿದ ಸತ್ಯಾಗ್ರಹವನ್ನು ನಿಲ್ಲಿಸಿರುವುದಾಗಿ ಸಾರಿದರು.

ಸತ್ಯಾಗ್ರಹ ನಿಂತಿತು. ಮುಖ್ಯವಾದ ನಗರಗಳ ಆಡಳಿತ ನೋಡಿಕೊಳ್ಳಲು ಜನರು ಆರಿಸಿದ ಪುರಸಮಿತಿಗಳು ಇರುತ್ತಿದ್ದವು. ಜಿಲ್ಲೆಗಳ ಆಡಳಿತವನ್ನು ಸ್ವಲ್ಪ ಮಟ್ಟಿಗೆ ಜಿಲ್ಲಾ ಸಮಿತಿಗಳು ನೋಡಿಕೊಳ್ಳುತ್ತಿದ್ದವು. ಈ ಸಮಿತಿಗಳಿಗೆ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸಬೇಕು ಎಂದು ಕಾಂಗ್ರೆಸ್ ಪಕ್ಷ ತೀರ್ಮಾನಿಸಿತು.

ಪಟೇಲರು ಚುನಾವಣೆಯ ರಂಗಕ್ಕೆ ಇಳಿದರು. ಮುಂಬಯಿ ಕಾರ್ಪೋರೇಷನ್ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ವಿಜಯ ತಂದುಕೊಡಲು ಕೆಲಸ ಪ್ರಾರಂಭಿಸಿದರು.

ಚುನಾವಣೆಯಲ್ಲಿ ಭಾಗವಹಿಸುವುದು ಸುಲಭವಾಗಿರಲಿಲ್ಲ. ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬ ಅನುಭವ ಬೇಕಲ್ಲವೇ? ಆ ಅನುಭವವೇ ಕಾಂಗ್ರೆಸ್ಸಿನವರಿಗೆ ಇರಲಿಲ್ಲ, ಪಟೇಲರ ಪ್ರಯತ್ನದಿಂದ ಮೊದಲ ಬಾರಿ ಚುನಾವಣೆಗೆ ಒಂದು ಹೊಸ ಸ್ವರೂಪವು ಪ್ರಾಪ್ತವಾಯಿತು. ಮುಂದೆ ರಾಜಕೀಯ ಮುಖಂಡದವರೆಲ್ಲರೂ ಮೊದಲು ಮುನಸಿಪಲ್ ಚುನಾವಣೆಯಲ್ಲಿ ಭಾಗವಹಿಸಿ ಅನುಭವ ಪಡೆದವರೇ ಆಗಿದ್ದರು. ಜವಾಹರಲಾಲ ನೆಹರೂರವರು ಅಲಹಾಬಾದ್ ನಗರಸಭೆಯ ಅಧ್ಯಕ್ಷರಾದರು. ವಲ್ಲಭಭಾಯಿಯವರು ಅಹಮದಾಬಾದ್ ನಗರಸಭೆಯಲ್ಲಿ ಮಾಡಿದ ಕಾರ್ಯವು ಅಸದೃಶವಾದದು.

ಮುಂಬಯಿ ಕಾರ್ಪೋರೇಶನ್ ಚುನಾವಣೆಯಲ್ಲಿ ಭಾಗವಹಿಸಲು ಪಟೇಲರು ನ್ಯಾಷನಲ್ ಪಕ್ಷ ಸ್ಥಾಪಿಸಿದರು. ಪಕ್ಷದ ಉದ್ದೇಶವು ರಾಷ್ಟ್ರದ ಹಿತದ ದೃಷ್ಟಿಯಿಂದ ಕೆಲಸ ಮಾಡುವುದು; ನಗರ ಸಭೆಯಲ್ಲಿ ಸ್ವಚ್ಛವಾದ, ಪ್ರಾಮಾಣಿಕವಾದ ಆಡಳಿತವನ್ನು ನಿರ್ಮಿಸುವುದು. ಕೆಲವರಿಗೆ ಮಾತ್ರ ಮತದಾನ ಮಾಡುವ (ಓಟು ಕೊಡುವ) ಅಧಿಕಾರವಿತ್ತು. ಇದು ತಪ್ಪಿ ಎಲ್ಲರಿಗೂ ಮತದಾನದ ಹಕ್ಕು ದೊರೆಯುವಂತೆ ಮಾಡುವುದು; ಜನರು ಹೆಂಡ ಮೊದಲಾದುದನ್ನು ಕುಡಿಯುವಂತೆ ಮಾಡುವುದು; ಶಾಲೆಗಳಲ್ಲಿ ಹಿಂದಿ ಶಿಕ್ಷಣಕ್ಕೆ ಉತ್ತೇಜನ ಕೊಡುವುದು; ನಗರ ಸಭೆಯಲ್ಲಿ ದೇಶೀಯ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಸಾಗಿಸುವುದು; ಇವೇ ಈ ಪಕ್ಷದ ಮುಖ್ಯ ಗೊತ್ತು ಗುರಿಗಳಾಗಿದ್ದವು ಈ ರೀತಿ ಪಕ್ಷದ ಧ್ಯೇಯ ಧೋರಣೆಗಳನ್ನು ರೂಪಿಸಿದವರು ಪಟೇಲರೇ. ಐವತ್ತು ವರ್ಷಗಳ ಹಿಂದೆಯೇ ಇಂತಹ ಗುರಿಗಳನ್ನು ಗೊತ್ತು ಮಾಡಿದ ಅವರ ವಿವೇಕ ಎಷ್ಟಿದ್ದಿರಬೇಕು!

ಚುನಾವಣೆಯಲ್ಲಿ ಶ್ರೀಮಂತರೇ ಗೆಲ್ಲುತ್ತಿದ್ದರು. ಪಟೇಲರ ಪ್ರಯತ್ನದಿಂದ ಶ್ರೀಮಂತರಲ್ಲದವರೂ ಆಯ್ಕೆ ಆದರು. ನ್ಯಾಷನಲ್ ಪಕ್ಷದ ೪೮ ಜನರು ಆರಿಸಿ ಬಂದರು. ಪಟೇಲರು ಮತ್ತೊಂದು ಒಳ್ಳೆಯ ಹೆಜ್ಜೆ ಇಟ್ಟರು. ಜಾತಿಗೆ ಪ್ರಾಮುಖ್ಯತೆ ಕೊಡುವುದನ್ನು ವಿರೋಧಿಸಿದರು. ಮುಂಬಯಿ ನಗರಸಭೆಯಲ್ಲಿ ಪ್ರತಿವರ್ಷ ಒಂದೊಂದು ಜಾತಿಯವರು ಅಧ್ಯಕ್ಷರಾಗುತ್ತಿದ್ದರು. ಒಂದು ವರ್ಷ ಹಿಂದೂ ಅಧ್ಯಕ್ಷನಾದರೆ ಮುಂದಿನ ವರ್ಷ ಪಾರಸಿ ಅಥವಾ ಮುಸಲ್ಮಾನನು ಅಧ್ಯಕ್ಷ. ಈ ಪದ್ಧತಿಯನ್ನು ವಿಠ್ಠಲಭಾಯಿಯವರು  ವಿರೋಧಿಸಿದರು. ಜಾತಿಯನ್ನು ಗಣನೆಗೆ ತೆಗೆದುಕೊಳ್ಳದೆ ಯೋಗ್ಯತೆಯ ಮೇಲಿಂದ ಅಧ್ಯಕ್ಷರನ್ನು ಆರಿಸಬೇಕೆಂದು ಪ್ರತಿಪಾದಿಸಿದರು.

ಕಾರ್ಪೋರೇಷನ್ನಿನ ಸದಸ್ಯರಾದ ಮೇಲೆ ಪಟೇಲರು ಅನೇಕ ಜನೋಪಯೋಗಿಯಾದ ಕಾರ್ಯಗಳನ್ನು ಕೈಗೆತ್ತಿಕೊಂಡರು. ಇಷ್ಟು ದಿನಗಳವರೆಗೆ ಎಲ್ಲ ಕಾರ್ಯಕ್ರಮಗಳು ಇಂಗ್ಲಿಷ್ ಭಾಷೆಯಲ್ಲಿಯೇ ನಡೆಯುತ್ತಿದ್ದವು. ತಪ್ಪಿಸಿ ದೇಶೀಯ ಭಾಷೆಗಳಲ್ಲಿಯೂ ಸದಸ್ಯರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಮುಂಬಯಿ ನಗರದಲ್ಲಿ ದೇಶೀಯ ಔಷಧಾಲಯಗಳು ಪ್ರಾರಂಭವಾದವು. ಕಮೀಷನರ್ ಸಲುವಾಗಿ ಒಂದು ಬಂಗಲೆಯನ್ನು ಕಟ್ಟಬೇಕೆಂದು ಕಾರ್ಪೋರೇಷನ್ ನಿರ್ಣಯ ಮಾಡಿದ್ದಿತು. ಹಣವಿಲ್ಲದ ಸಮಯದಲ್ಲಿ ಇಂತಹ ಖರ್ಚು ಅನಾವಶ್ಯಕ ಎಂದು ಪಟೇಲರು ವಾದಿಸಿದರು. ಕಾರ್ಪೋರೇಷನ್ ಈ ತೀರ್ಮಾನವನ್ನು ಕೈಬಿಡುವಂತೆ ಮಾಡಿದರು. ಮಲೇರಿಯಾ ರೋಗವನ್ನು ನಿಯಂತ್ರಣದಲ್ಲಿ ತರುವುದಕ್ಕಾಗಿ ಅನೇಕ ಯೋಜನೆಗಳನ್ನು ಕೈಕೊಳ್ಳಲಾಯಿತು. ಇದಕ್ಕೂ ಮೊದಲು ಮುಂಬಯಿ ಕಾರ್ಪೋರೇಷನ್ ನಲ್ಲಿ ಮಹಿಳಾ ಸದಸ್ಯರಿರಲಿಲ್ಲ. ಹೆಂಗಸರಿಗೂ ಚುನಾವಣೆಗೆ ನಿಲ್ಲುವ ಹಕ್ಕು ಇರಬೇಕೆಂದು ಪಟೇಲರು ಶ್ರಮಿಸಿದರು. ೧೯೨೩ರಲ್ಲಿ ಸ್ತ್ರೀಯರಿಗೆ ಈ ಹಕ್ಕು ದೊರೆಯಿತು. ಪಟೇಲರು ಮೂವರು ಸ್ತ್ರೀಯರು ಚುನಾವಣೆಯಲ್ಲಿ ಆರಿಸಿ ಬರುವಂತೆ ಮಾಡಿದರು.

ಜನರಿಗಾಗಿ ಅಧ್ಯಕ್ಷರು

೧೯೨೪ರಲ್ಲಿ ಅವರು ಅಧ್ಯಕ್ಷರಾದ ಮೇಲೆ ಕಾರ್ಪೋರೇಷನ್ ವಾಯುವೇಗದಿಂದ ಕೆಲಸ ಮಾಡತೊಡಗಿತು. ಮೊದಲು ಅಧ್ಯಕ್ಷರಾಗಿದ್ದವರು ಸಭೆ ನಡೆದಾಗ ಮಾತ್ರ ಕಛೇರಿಗೆ ಬರುತ್ತಿದ್ದರು ಎಲ್ಲ ಕೆಲಸಗಳನ್ನೂ ಸರಕಾರೀ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಜನರ ತೊಂದರೆಗಳನ್ನು ವಿಚಾರಿಸುವವರೇ ಇರಲಿಲ್ಲ. ಅಧಿಕಾರಿಗಳು ಬೇಕಾದಾಗ ಬಂದು ಹೋಗುತ್ತಿದ್ದರು. ಹೇಗೋ ಕೆಲಸ ನಡೆಸುತ್ತಿದ್ದರು. ವಿಠ್ಠಲಭಾಯಿಯವರು ಅಧ್ಯಕ್ಷರಾದ ಕೂಡಲೇ ನಗರಸಭೆಯಲ್ಲಿ ಮೊದಲು ಅಧ್ಯಕ್ಷರಿಗಾಗಿ ಪ್ರತ್ಯೇಕ ಸ್ಥಳದ ಏರ್ಪಾಡು ಆಯಿತು. ದಿನವೂ ಅವರು ಕಛೇರಿಗೆ ಬಂದು ಸಂಜೆಯ ಆರು ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಅದನ್ನು ಕಂಡು ಆಫೀಸಿನಲ್ಲಿಯ ಅಧಿಕಾರಿಗಳು ವೇಳೆಗೆ ಸರಿಯಾಗಿ ಬಂದು ಕೆಲಸ ಮಾಡತೊಡಗಿದರು. ಕೆಲಸ ಸರಿಯಾಗಿ ಆಗಿಲ್ಲದಿದ್ದರೆ ಏಕೆ ಆಗಲಿಲ್ಲ ಎಂದು ಅಧಿಕಾರಿಗಳನ್ನು ಕೇಳುತ್ತಿದ್ದರು. ಹೀಗಾಗಿ ಸ್ವಲ್ಪ ದಿನಗಳಲ್ಲಿಯೇ ಮುಂಬಯಿ ಕಾರ್ಪೋರೇಷನ್ ಪ್ರಗತಿಪರ ನಗರಸಭೆಗಳಲ್ಲಿ ಒಂದಾಯಿತು. ಪಟೇಲರು ಕೆಲವೇ ವರ್ಷ ಅಧ್ಯಕ್ಷರಾಗಿದ್ದರೂ ಅವರು ಮಾಡಿದ ಕಾರ್ಯವು ಚಿರಸ್ಮರಣೀಯವಾದುದು.

ವಿಠ್ಠಲಭಾಯಿಯವರ ದಿಟ್ಟತನ, ಸ್ವತಂತ್ರ ಮನೋವೃತ್ತಿ ಇವನ್ನು ಒಂದು ಪ್ರಸಂಗದಲ್ಲಿ ಕಾಣಬಹುದು. ಆಗಿನ ಕಾಲದಲ್ಲಿ ವೈಸರಾಯಿ ಬ್ರಿಟಿಷ್ ಚಕ್ರಾಧಿಪತ್ಯದ ಪ್ರತಿನಿಧಿ; ಅವನನ್ನು ಕಾಣುವುದೆಂದರೆ ಗೌರವ ಎಂದು ಭಾರತದಲ್ಲಿಯೂ ಬಹು ಜನರ ನಂಬಿಕೆ.

ವಿಠ್ಠಲಭಾಯಿಯವರು ಅಧ್ಯಕ್ಷರಾಗಿದ್ದಾಗ ವೈಸರಾಯ ಲಾರ್ಡ್ ರೀಡಿಂಗನು ಮುಂಬಯಿ ನಗರಕ್ಕೆ ಬಂದಿದ್ದನು. ಮುಂಬಯಿ ನಗರದಲ್ಲಿ ಅನೇಕ ಸಮಾರಂಭಗಳು ಅವನ ಸ್ವಾಗತದ ಸಲುವಾಗಿ ಏರ್ಪಟ್ಟಿದ್ದವು. ಆಗ ರಾಜಕೀಯ ಪರಿಸ್ಥಿತಿ ಹದಗೆಟ್ಟಿತ್ತು. ಭಾರತೀಯರನ್ನು ಬ್ರಿಟಿಷ್ ಸರ್ಕಾರ ನ್ಯಾಯವಾಗಿ ಕಾಣುತ್ತಿರಲಿಲ್ಲ. ಪಟೇಲರು ಒಂದು ಪತ್ರ ಬರೆದು ವೈಸರಾಯರಿಗೆ ಏರ್ಪಾಡು ಆಗಿರುವ ಯಾವುದೇ ಸತ್ಕಾರ ಸಮಾರಂಭದಲ್ಲಿ ತಾವು ಭಾಗವಹಿಸುವುದು ಸಾಧ್ಯವಿಲ್ಲವೆಂದು ತಿಳಿಸಿದರು.

ಆದರೆ ಕಾರ್ಪೋರೇಷನ್ ಸಭಾಸದರು ಬಹುಮತದಿಂದ ಅಧ್ಯಕ್ಷರು ವೈಸರಾಯರ ಸನ್ಮಾನ  ಸಮಾರಂಭದಲ್ಲಿ ಭಾಗವಹಿಸಬೇಕೆಂದು ನಿರ್ಣಯಿಸಿದರು. ಪಟೇಲರು ಅದಕ್ಕೆ ಒಪ್ಪದೆ ತಮ್ಮ ಪದವಿಗೇ ರಾಜೀನಾಮೆ ಕೊಟ್ಟರು. ಮತ್ತೆ ಚುನಾವಣೆ ನಡೆದು ಅವರೇ ಅಧ್ಯಕ್ಷರಾದರು!

ಕೇಂದ್ರ ಶಾಸನಸಭೆಯಲ್ಲಿ ಪ್ರವೇಶ

ಆಗ ಇಡೀ ಭಾರತಕ್ಕೆ ಒಂದು ಕೇಂದ್ರ ಶಾಸನಸಭೆ ಇದ್ದಿತು. ಇವರಲ್ಲಿ ಬಹುಮಂದಿ ಸರ್ಕಾರ ಆರಿಸಿದ ಜನ ಇಲ್ಲವೇ ಸರ್ಕಾರವನ್ನು ಸಂತೋಷಪಡಿಸಲು ಸಿದ್ಧರಾಗಿದ್ದವರು. ಆಗಿನ ಭಾರತ ಸರ್ಕಾರ ತಾನು ಮಾಡುವುದಕ್ಕೆಲ್ಲ ಈ ಸಭೆಯ ಒಪ್ಪಿಗೆ ಪಡೆದು, ಭಾರತದ ಜನಗಳ ಬೆಂಬಲ ತನಗೆ ಎಂದು ಹೇಳಿಕೊಳ್ಳುತ್ತಿತ್ತು.

ಕೇಂದ್ರ  ಶಾಸನ ಸಭೆಯಲ್ಲಿಯೇ ಸರ್ಕಾರ ಮಾಡುವ ಅನ್ಯಾಯಗಳನ್ನು ಎತ್ತಿ ತೋರಿಸಬೇಕು ಎಂದು ಕಾಂಗ್ರೆಸ್ ಪಕ್ಷ ತೀರ್ಮಾನಿಸಿತು.

ಕಾಂಗ್ರೆಸ್ ಚುನಾವಣೆಗಳಲ್ಲಿ ಭಾಗವಹಿಸಬೇಕಾಯಿತು. ಇದಕ್ಕಾಗಿ ಪಟೇಲರು ಕಾಂಗ್ರೆಸ್ಸಿನಲ್ಲಿ ಸ್ವರಾಜ್ಯ ಪಕ್ಷ ಎಂಬ ಉಪಪಕ್ಷವನ್ನು ಪ್ರಾರಂಭಿಸಿದರು. ಚುನಾವಣೆಗಳಾದವು. ಮೋತಿಲಾಲ ನೆಹರು ಕೇಂದ್ರ ಶಾಸನ ಸಭೆಯಲ್ಲಿ ಸ್ವರಾಜ್ಯ ಪಕ್ಷದ ಅಧ್ಯಕ್ಷರಾದರು. ಪಟೇಲರು ಆ ಪಕ್ಷದ ಉಪಾಧ್ಯಕ್ಷರಾದರು. ಇಷ್ಟು ದಿನಗಳವರೆಗೆ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆಯೇ ಇರಲಿಲ್ಲ. ಸರಕಾರದವರು ಮಾಡುವ ಅನ್ಯಾಯದ ಕಾಯ್ದೆಗಳಿಗೆ ವಿರೋಧ ಮಾಡುವುದೇ ಪಟೇಲರ ಪಕ್ಷದ ಧ್ಯೇಯವಾಗಿತ್ತು. ಸರ್ಕಾರವೂ, ಅಧಿಕಾರಿಗಳೂ ಮನಸ್ಸಿಗೆ ಬಂದಂತೆ ನಡೆಯುವುದು ಕಷ್ಟವಾಯಿತು. ಪಟೇಲರೂ ಅವರ ಪಕ್ಷದವರೂ ನಿರ್ಭಯವಾಗಿ ಅವರ ತಪ್ಪುಗಳನ್ನೂ ಅನ್ಯಾಯಗಳನ್ನೂ ಎತ್ತಿ ತೋರಿಸುತ್ತಿದ್ದರು. ಬ್ರಿಟಿಷ್ ಸರ್ಕಾರವು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಜಗತ್ತಿಗೆ ಗೊತ್ತಾಯಿತು. ಪಟೇಲರನ್ನು ಕಂಡು ಸರ್ಕಾರದ ಕಡೆ ಇದ್ದ ಸದಸ್ಯರಿಗೆ ಹೆದರಿಕೆಯುಂಟಾಯಿತು. ಪಟೇಲರು ಜನರಹಿತದ ಸಲುವಾಗಿ ಶಾಸನ ಸಭೆಯಲ್ಲಿ ಅವ್ಯಾಹತವಾಗಿ ಹೋರಾಡಿದರು. ಸರ್ಕಾರದ ನೀತಿಯನ್ನು ಅವರಂತೆ ವಿರೋಧಿಸಿದರು ಯಾರೂ ದೊರೆಯಲಾರರು. ಸರ್ಕಾರ ಪ್ರತಿ ವರ್ಷ ತನ್ನ ಆದಾಯ, ಖರ್ಚುಗಳ ಅಂದಾಜು ಪಟ್ಟಿಯನ್ನು ಬಜೆಟ್ ನ್ನು ಶಾಸನ ಸಭೇಯ ಮುಂದೆ ಇಡಬೇಕಾಗಿತ್ತು. ಅದನ್ನು ಪಟೇಲರು ಪ್ರತಿಸಾರಿ ಉಗ್ರವಾಗಿ ಟೀಕಿಸುತ್ತಿದ್ದರು.

ಇಷ್ಟು ದಿನಗಳವರೆಗೆ ಕೇಂದ್ರ ಶಾಸನಸಭೆಯ ಅಧ್ಯಕ್ಷನನ್ನು ಸರ್ಕಾರದವರೇ ನಿಯಮಿಸುತ್ತಿದ್ದರು. ಅದರಿಂದ ಅವನು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದರು. ೧೯೨೫ರಲ್ಲಿ ಮೊದಲನೆಯ ಬಾರಿಗೆ ಅಧ್ಯಕ್ಷನನ್ನು ಆರಿಸುವ ಅವಕಾಶವು ಸದಸ್ಯರಿಗೆ ಪ್ರಾಪ್ತವಾಯಿತು. ಅಧ್ಯಕ್ಷನು ತಮಗೆ ಬೇಕಾದವನು ಆದರೆ ಸರ್ಕಾರದವರಿಗೆ ತಮ್ಮ ಮನಸ್ಸಿಗೆ ಬಂದಂತೆ ಶಾಸನ ಸಭೆಯನ್ನು ಕುಣಿಸಲು ಅವಕಾಶವಾಗುತ್ತಿತ್ತು. ಸ್ವರಾಜ್ಯ ಪಕ್ಷದ ವತಿಯಿಂದ ವಿಠ್ಠಲಭಾಯಿ ಪಟೇಲರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಲಾಯಿತು. ಕೇಂದ್ರ ಶಾಸನಸಭೆಯಲ್ಲಿ ಸ್ವರಾಜ್ಯ ಪಕ್ಷದ ಬಹುಮತ ಇರಲಿಲ್ಲ.

ಸರ್ಕಾರದವರಿಗೆ ವಿಠ್ಠಲಭಾಯಿ ಪಟೇಲರೆಂದರೆ ಆಗುತ್ತಿರಲಿಲ್ಲ. ಸರ್ಕಾರದ ವಿರುದ್ಧವಾಗಿ ಯಾವಾಗಲೂ ಮಾತನಾಡುತ್ತಿದ್ದರು. ಸರ್ಕಾರದ ತಪ್ಪುಗಳನ್ನು ತೋರಿಸುತ್ತಿದ್ದರು. ಆದುದರಿಂದ  ಈ ಚುನಾವಣೆಯಲ್ಲಿ ಭಾರತ ಸರ್ಕಾರವೇ ಅವರ ವಿರುದ್ಧ ನಿಂತಿತು. ಸದಸ್ಯರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿತು. ತನ್ನ ಕಡೆ ಒಬ್ಬರನ್ನು ಸರ್ಕಾರವು ನಿಲ್ಲಿಸಿತು. ಹೊಸದಾಗಿ ಹತ್ತು ಜನ ಯೂರೋಪಿಯನ್ ರನ್ನು ಸದಸ್ಯರನ್ನಾಗಿ ಮಾಡಿತು.

ಆದರೂ ಪಟೇಲರು ಜಯಶಾಲಿಗಳಾದರು. ಇದು ಸರ್ಕಾರಕ್ಕೆ ಮೊದಲನೆಯ ದೊಡ್ಡ ಪರಾಜಯ.

ಒಮ್ಮೆ ಅವರು ಅಧ್ಯಕ್ಷರಾದ ಮೇಲೆ ಮಾಡುವುದೇನು? ವಿಠ್ಠಲಭಾಯಿಯವರಂತೂ ಸರ್ಕಾರಕ್ಕೆ ಹೆದರುವ ಮನುಷ್ಯರಲ್ಲ. ಹಣದ ಆಸೆ. ಅಧಿಕಾರದ ಆಸೆ ಯಾವುದರಿಂದಲೂ ಅವರನ್ನು ವಶಪಡಿಸಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಿರಲಿಲ್ಲ. ಸರ್ಕಾರಕ್ಕೆ ಹೊಟ್ಟೆಯಲ್ಲಿ ಮುಳ್ಳುಮುರಿದಂತಾಯಿತು. ಪಟೇಲರ ಧೈರ್ಯವೂ ದೇಶಪ್ರೇಮವೂ, ಕರ್ತೃತ್ವ ಶಕ್ತಿಯು, ಅವರು ಅಧ್ಯಕ್ಷರಾದ ಮೇಲೆ ಹೆಚ್ಚಿಗೆ ಬೆಳಕು ಕಂಡವು.

ಸರ್ಕಾರವು ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತೆ ಒದ್ದಾಡಿತು. ವಿಠ್ಠಲಭಾಯಿ ಪಟೇಲರು ಅಧ್ಯಕ್ಷರಾದ ಮೇಲೆ ಯೂರೋಪಿಯನ್ ಸದಸ್ಯರೂ, ಮಾಜಿ ಅಧ್ಯಕ್ಷರೂ ಆದ ಫ್ರೆಡರಿಕ್ ರವರು ವಿಠ್ಠಲಭಾಯಿಯವರನ್ನು ಮುಕ್ತ ಕಂಠದಿಂದ ಹೊಗಳಿದರು.

ಪಟೇಲರು ಎಂದೂ ನಿದ್ರೆ ಮಾಡುವ ಸದಸ್ಯರಾಗಿರಲಿಲ್ಲ. ಅವರು ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಅಭ್ಯಾಸ ಮಾಡಿಕೊಂಡು ಸಭೆಗೆ ಬರುತ್ತಿದ್ದರು. ಅಧ್ಯಕ್ಷರಾದ ಮೇಲೆ ಅವರ ಜವಾಬ್ದಾರಿಯು ಇನ್ನಷ್ಟು ಹೆಚ್ಚಿತು. ಅವರು ಇಂಗ್ಲಿಂಡಿನಲ್ಲಿರುವ ಪಾರ್ಲಿಮೆಂಟಿನ ಅಧ್ಯಕ್ಷರಿಗೆ ಪತ್ರ ಬರೆದು ಅಧ್ಯಕ್ಷರ ಕರ್ತವ್ಯಗಳೇನು, ಯಾವ ಶಬ್ದಗಳನ್ನು ಸದಸ್ಯರು ಶಾಸನಸಭೆಯಲ್ಲಿ ಉಪಯೋಗಿಸಬಾರದು, ಒಂದು ವೇಳೆ ಅಂತಹ ಶಬ್ದಗಳನ್ನು ಉಪಯೋಗಿಸಿದರೆ ಅವರಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕು ಎಂಬ ಸಲಹೆ ಪಡೆದರು.

ಅವರಿಗೆ ಯಾವುದೆ ವಿಷಯವನ್ನು ಪೂರ್ಣ ತಿಳಿದುಕೊಳ್ಳದೆ ಸಮಾಧಾನವಾಗುತ್ತಿರಲಿಲ್ಲ. ಅಧ್ಯಕ್ಷರಾಗಿ ಅವರು ಸಭೆಯನ್ನು ನಡೆಸುತ್ತಿದ್ದ ರೀತಿಯನ್ನು ಅವರ ವಿರೋಧಿಗಳೇ ಮೆಚ್ಚಿದರು. ಸರ್ಕಾರವು ನಿರುಪಾಯವಾಗಿ ಅವರ ಮುಂದೆ ದಂಡ ಪ್ರಣಾಮ ಹಾಕಬೇಕಾಯಿತು! ತಪ್ಪು ಮಾಡಿದವರು ಎಂತಹ ದೊಡ್ಡ ಅಧಿಕಾರಿಯಿದ್ದರೂ ಅವರು ಕ್ಷಮಿಸುತ್ತಿರಲಿಲ್ಲ. ಒಮ್ಮೆ ಮುಖ್ಯ ಸೇನಾಪತಿಯು ಪಟೇಲರ ಕ್ಷಮೆಯನ್ನು ಕೇಳಬೇಕಾಯಿತು! ಮುಖ್ಯ ಸೇನಾಪತಿ ಎಂದರೆ ವೈಸರಾಯನಿಗೆ ಸಮನಾದವನು. ಅಂತಹವನೂ ಕೂಡ ಅವರಿಗೆ ತಲೆ ಬಗ್ಗಿಸಬೇಕಾಯಿತು. ಬ್ರಿಟಿಷ್ ರಾಜ್ಯದಲ್ಲಿ ಇದೇನು ಸಣ್ಣ ವಿಷಯವಲ್ಲ.

ದೇಶಕ್ಕಾಗಿ ಸ್ವಂತ ಹಣದ ಖರ್ಚು

ವಿಠ್ಠಲಭಾಯಿಯವರು ತಮ್ಮ ಜೀವಮಾನದಲ್ಲಿ ಎಂದೂ ಹಣವನ್ನು ಸಂಗ್ರಹಿಸಬೇಕೆಂದು ಇಚ್ಛಿಸಲಿಲ್ಲ. ಅವರು ಸ್ವತಃ ಕಷ್ಟಪಟ್ಟು ಸಂಪಾದಿಸಿದ ಹಣವೆಲ್ಲವೂ ರಾಷ್ಟ್ರ ಹಿತಕ್ಕಾಗಿಯೇ ಖರ್ಚಾಯಿತು. ಅವರು ಅಧ್ಯಕ್ಷರಾದ ಕೂಡಲೇ ತಮ್ಮ ಸಂಬಳದಲ್ಲಿಯ ಹಣದಿಂದ ಪ್ರತಿ ತಿಂಗಳೂ ೧೬೨೫ ರೂಪಾಯಿಗಳನ್ನು ಮಹಾತ್ಮ ಗಾಂಧೀಯವರಿಗೆ ಕಳಿಸಿಕೊಡುತ್ತಿದ್ದರು. ಗಾಂಧಿಯವರಿಗೆ, ’ಈ ಹಣವನ್ನು ನಿಮ್ಮ ಮನಸ್ಸಿಗೆ ಬಂದ ಯಾವುದಾದರೊಂದು ರಾಷ್ಟ್ರೀಯ ಕಾರ್ಯಕ್ಕಾಗಿ ಖರ್ಚು ಮಾಡಿರಿ’ ಎಂದು ತಿಳಿಸಿದರು. ಎಂತಹ ಉದಾರ ಬುದ್ಧಿ! ಗಾಂಧಿಯವರು ಪಟೇಲರ ಪತ್ರ ಬರೆದು ಅವರ ಉದಾರ ಬುದ್ಧಿಯನ್ನು ಕೊಂಡಾಡಿದರು.

ಮತ್ತೆ ಅಧ್ಯಕ್ಷರು – ಸರ್ಕಾರಕ್ಕೆ ಸಿಂಹಸ್ವಪ್ನ

೧೯೨೬ರಲ್ಲಿ ಶಾಸನ ಸಭೆಯ ಅವಧಿಯು ಮುಕ್ತಾಯವಾಯಿತು. ಆ ಸಂದರ್ಭದಲ್ಲಿ ಯೂರೋಪಿಯನ್ ಸದಸ್ಯರು ಕೂಡ ಪಟೇಲರ ಗುಣವನ್ನೂ ಸಾಮರ್ಥ್ಯವನ್ನೂ ಮೆಚ್ಚಿ ಮಾತನಾಡಿದರು. ೧೯೨೬ರಲ್ಲಿ ನಡೆದ ಚುನಾವಣೆಗೆ ಪಟೇಲರು ಸ್ವತಂತ್ರವಾಗಿ ಸ್ಪರ್ಧಿಸಿದರು. ಈ ಸಾರೆ ಅವರ ವಿರುದ್ಧ ನಿಲ್ಲುವ ಎದುರಾಳಿಗಳಾರೂ ಇರಲಿಲ್ಲವಾದ್ದರಿಂದವರು ಅವಿರೋಧವಾಗಿ ಆಯ್ಕೆಯಾದರು. ೧೯೨೭ರಲ್ಲೂ ಅವರು ಅಧ್ಯಕ್ಷ ಪದವಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾದ ಮೇಲೆ ಇಂಗ್ಲೆಂಡಿನಲ್ಲಿ ಪಾರ್ಲಿಮೆಂಟು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನಿರೀಕ್ಷಿಸುವುದಕ್ಕಾಗಿ ಅವರು ಇಂಗ್ಲೆಂಡಿಗೆ ತೆರಳಿದರು. ಅವರು ಲಂಡನ್ನಿನಲ್ಲಿರುವಾಗ ಪ್ರತಿದಿನ ಪಾರ್ಲಿಮೆಂಟಿನ ಭವನಕ್ಕೆ ಹೋಗಿ ಅಲ್ಲಿನ ಕಾರ್ಯಕಲಾಪಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದರು. ಅಲ್ಲಿನ ಹೌಸ್ ಆಫ್ ಕಾಮನ್ಸಿನ ಅಧ್ಯಕ್ಷರು ಪಟೇಲರಿಗೆ ಪಾರ್ಲಿಮೆಂಟು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ವಿವರವಾಗಿ ತಿಳಿಸಿಕೊಟ್ಟರು. ಅನೇಕ ಸಭಾಸದರನ್ನು ಭೇಟಿಯಾಗಿಯೂ ಅವರು ವಿಷಯವನ್ನು ಸಂಗ್ರಹಿಸಿದರು. ಅನೇಕ ಸಂಘ ಸಂಸ್ಥೆಗಳಲ್ಲಿ ಭಾಷಣ ಮಾಡಿ ಹಿಂದೂಸ್ಥಾನದ ಪರಿಸ್ಥಿತಿಯನ್ನು ವಿವರಿಸಿದರು. ಬ್ರಿಟಿಷ್ ಮಂತ್ರಿಮಂಡಲದ ಸದಸ್ಯರನ್ನು ಕಂಡು ಹಿಂದೂಸ್ಥಾನದಲ್ಲಿಯ ಪರಿಸ್ಥಿತಿಯು ಸುಧಾರಿಸಬೇಕಾದರೆ ಜನರಿಗೆ ಹೆಚ್ಚಿಗೆ ಅಧಿಕಾರ ಕೊಡಬೇಕು ಎಂದು ಪ್ರತಿಪಾದಿಸಿದರು. ಇಲ್ಲವಾದರೆ  ಪರಿಸ್ಥಿತಿಯು ವಿಕೋಪಕ್ಕೆ ಹೋಗಬಹುದೆಂದು ಎಚ್ಚರಿಕೆ ನೀಡಿದರು. ಪಟೇಲರು ನಾಲ್ಕು ತಿಂಗಳು ವಿದೇಶದಲ್ಲಿ ಸಂಚರಿಸಿದರು.

ವಿಠ್ಠಲಭಾಯಿಯವರ ದೇಶಪ್ರೇಮ ಮತ್ತು ನಿರ್ಭಯಗಳನ್ನು ತೋರಿಸುವ ಒಂದು ಪ್ರಸಂಗವನ್ನು ನೆನೆಯಬಹುದು. ಹಿಂದೂಸ್ಥಾನದಲ್ಲಿ ಸಮತಾವಾದದ ಪ್ರಚಾರವನ್ನು ತಡೆಯುವುದಕ್ಕಾಗಿ ಎಂದು ಸರ್ಕಾರವು ಶಾಸನ ಸಭೆಯಲ್ಲಿ ಸಾರ್ವಜನಿಕ ರಕ್ಷಣೆ ಎಂಬ ಮಸೂದೆಯನ್ನು ಮಂಡಿಸಿತು. ಈ ಮಸೂದೆಯ ಪ್ರಕಾರ ಸಮತಾವಾದವನ್ನು ಪ್ರಸಾರ ಮಾಡುವವರನ್ನು ಭಾರತದಿಂದ ಹೊರಗೆ ಹಾಕಲು ಸರ್ಕಾರಕ್ಕೆ ಅಧಿಕಾರವು ದೊರೆಯುತ್ತಿತ್ತು

ಭಾರತದಲ್ಲಿಯ ರಾಷ್ಟ್ರೀಯ ನಾಯಕರನ್ನು ದೇಶದಿಂದ ಹೊರಕ್ಕೆ ಕಳುಹಿಸುವುದೇ ಸರ್ಕಾರದ ನಿಜವಾದ ಉದ್ದೇಶ. ಅದಕ್ಕಾಗಿ ಈ ಮಸೂದೆಯನ್ನು ಸ್ವರಾಜ್ಯ ಪಕ್ಷ ವಿರೋಧಿಸಿತು. ಆದರೂ ಸರ್ಕಾರದವರು ಈ ಮಸೂದೆ ಒಪ್ಪಬೇಕೆಂದು ಹಠ ಹಿಡಿದರು. ಚರ್ಚಿಸಿದ ನಂತರ ಮತಕ್ಕೆ ಹಾಕಲಾಯಿತು.

ಸರ್ಕಾರದ  ಪರವಾಗಿ ಮತ್ತು ಸರ್ಕಾರದ ವಿರೋಧವಾಗಿ ಸಮನಾಗಿ ಮತಗಳು ಬಂದವು. ವಿಠ್ಠಲಭಾಯಿಯವರು ತಮ್ಮ ಮತವನ್ನು ಉಪಯೋಗಿಸಿ ಈ ಗೊತ್ತುವಳಿಯನ್ನು ಪರಾಜಯಗೊಳಿಸಿದರು.

ಸಾಮಾನ್ಯವಾಗಿ  ಶಾಸನ ಸಭೆಯ ಅಧ್ಯಕ್ಷರು ’ಓಟು’ ಮಾಡುತ್ತಿರಲಿಲ್ಲ. ಆದರೆ ಎರಡು ಕಡೆಗಳಿಗೂ ಮತಗಳು ಬಂದಾಗ ಅವರೂ ಮತ ನೀಡಬಹುದು. ಇದರಿಂದ ಸರ್ಕಾರದ ಕೋಪ ಹೆಚ್ಚಾಯಿತು. ಅವರು ಪಟೇಲರನ್ನು ನಾನಾ ರೀತಿ ಪೀಡಿಸತೊಡಗಿದರು.  ಆದರೂ ಪಟೇಲರು ಸರ್ಕಾರಕ್ಕೆ ಹೆದರದೆ ತಮ್ಮ ಕಾರ್ಯವನ್ನು ಸಾಗಿಸಿದರು.

ಸಾರ್ವಜನಿಕ ರಕ್ಷಣಾ ಮಸೂದೆಯು ಒಮ್ಮೆ ಪರಾಜಯ ಹೊಂದಿದ್ದರೂ ಸರ್ಕಾರ ಸುಮ್ಮನಾಗಲಿಲ್ಲ. ಮತ್ತೆ ಸಮತಾವಾದದ ಪ್ರಚಾರವನ್ನು ಮಾಡುತ್ತಿರುವರೆಂಬ ಆಪಾದನೆಯ ಮೇಲೆ ಸರ್ಕಾರ ೩೧ ಜನರನ್ನು ಸೆರೆ ಹಿಡಿಯಿತು. ನ್ಯಾಯಾಲಯದಲ್ಲಿ ಅವರ ವಿಚಾರಣೆ ನಡೆಯಿತು.

ಈ ಪ್ರಶ್ನೆಯು ನ್ಯಾಯಾಲಯದ ಮುಂದಿರುವುದರಿಂದ ಸಾರ್ವಜನಿಕ ರಕ್ಷಣೆ ಎಂಬ ಗೊತ್ತುವಳಿಯನ್ನು ಸಭೆಯಲ್ಲಿ ಮಂಡಿಸಲು ಬರುವುದಿಲ್ಲ. ಏಕೆಂದರೆ ಸಭಾಸದಸ್ಯರು ಭಾಷಣ ಮಾಡುವಾಗ ನ್ಯಾಯಾಲಯದಲ್ಲಿರುವ ಈ ಮೊಕದ್ದಮೆಯ ಬಗ್ಗೆ ಮಾತನಾಡಬಹುದು. ಯಾವುದಾದರೊಂದು ವಿಷಯವು ನ್ಯಾಯಾಲಯದ ಮುಂದೆ ಇರುವಾಗ ಅದರ ಬಗ್ಗೆ ಚರ್ಚೆ ಮಾಡಕೂಡದು. ಆದ್ದರಿಂದ ಸರ್ಕಾರ ಮೊಕದ್ದಮೆಯನ್ನಾದರೂ ಹಿಂತೆಗೆದುಕೊಳ್ಳಬೇಕು. ಇಲ್ಲವೆ ಈ ಸಭೆಯಲ್ಲಿಯ ಗೊತ್ತುವಳಿಯನ್ನಾದರೂ ಹಿಂತೆಗೆದುಕೊಳ್ಳಬೇಕು ಎಂದು ಪಟೇಲರು ತಮ್ಮ ನಿರ್ಣಯವನ್ನು ಸಾರಿದರು. ಆದರೆ ಸರ್ಕಾರವು ಇದನ್ನು ಒಪ್ಪಲಿಲ್ಲ. ಅಧ್ಯಕ್ಷರಿಗೆ ಯಾವುದೊಂದು ಗೊತ್ತುವಳಿಯನ್ನೂ ತಡೆಹಿಡಿಯುವ ಅಧಿಕಾರವಿಲ್ಲವೆಂದು ಸರ್ಕಾರದ ಕಡೆಯವರು ಹೇಳಿದರು. ಈ ರೀತಿ ಸರ್ಕಾರ ಮತ್ತು ಪಟೇಲರ  ನಡುವೆ ಒಂದು ವಾಗ್ವಾದ್ಧವೇ ನಡೆಯಿತು. ಈ ಗೊತ್ತುವಳಿಯನ್ನು ಶಾಸನಸಭೆಯಲ್ಲಿ ತಂದಿತು. ಈ ಗೊತ್ತುವಳಿಯು ಶಾಸನಸಭೆಯ ಮುಂದೆ ಬಂದಾಗ ಪಟೇಲರು ಅಧ್ಯಕ್ಷರಿಗೆ ಎಷ್ಟು ಅಧಿಕಾರವಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ಹಾಗೂ ಯಾವುದಾದರೂ ಪ್ರಶ್ನೆಯು ನ್ಯಾಯಾಲಯದ ಮುಂದೆ ಇರುವಾಗ ಆ ವಿಷಯದ ಬಗ್ಗೆ ಚರ್ಚಿಸುವುದು ನಿಯಮಕ್ಕೆ ವಿರುದ್ಧ ಎಂದು ಸಾರಿದರು. ಆ ಗೊತ್ತುವಳಿಯನ್ನು ಮಂಡಿಸಲು ಅವಕಾಶ ಕೊಡುವುದಿಲ್ಲವೆಂದು  ಹೇಳಿದರು! ಇದೆಂತಹ ಧೈರ್ಯ! ಆಗ ಬ್ರಿಟಿಷರಿಗೆ ಜಗತ್ತಿನಲ್ಲಿ ಯಾವುದೇ ಸರ್ಕಾರಕ್ಕೆ ಇಲ್ಲದ ಅಧಿಕಾರಗಳು ಇದ್ದವು. ಶಾಸನ ಸಭೆಯು ತಳ್ಳಿ ಹಾಕಿದ ಗೊತ್ತುವಳಿಗಳನ್ನು ಕೂಡ ಕಾನೂನು ಎಂದು ತೀರ್ಮಾನಿಸಲು ವೈಸರಾಯ್ ಗೆ ಅಧಿಕಾರವಿತ್ತು. ಅಂತಹ ಸಮಯದಲ್ಲೂ ಪಟೇಲರು ಪ್ರಜೆಗಳ ಹಕ್ಕನ್ನು ಎತ್ತಿ  ಹಿಡಿದರು. ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಸಮರ್ಥಿಸಿಕೊಂಡರು. ವೈಸರಾಯನು ನಿರುಪಾಯನಾಗಿ, ತಾನೇ ಆಜ್ಞೆಯನ್ನು ಹೊರಡಿಸಿ ಸಾರ್ವಜನಿಕ ರಕ್ಷಣಾ ಕಾಯಿದೆಗೆ ಜೀವದಾನ ಮಾಡಿದನು.

ಅಧ್ಯಕ್ಷ ಪದಕ್ಕೆ ರಾಜೀನಾಮೆ

೧೯೩೦ರಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಉಪ್ಪು ಬಡ ಮನುಷ್ಯನಿಗೂ ಅವಶ್ಯವಾದದ್ದು. ಉಪ್ಪಿನ ಮೇಲೆ ಕಂದಾಯ ಎಂದರೆ ಬಡವನ ಮೇಲೆ ಕಂದಾಯ ಹೇರಿದಂತೆ. ಉಪ್ಪಿನ ಮೇಲೆ ಹಾಕಿದ ಕಂದಾಯವನ್ನು ಹಿಂತೆಗೆದುಕೊಳ್ಳಲು ಗಾಂಧೀಜಿಯವರು ಸರ್ಕಾರಕ್ಕೆ ಕೇಳಿಕೊಂಡರು. ಕಟುಕರವನಿಗೆ ಕರುಣೆ ಎಂಬುದುಂಟೆ? ಸರ್ಕಾರವು ಅದಕ್ಕೆ ಒಪ್ಪಲಿಲ್ಲ. ಆದ್ದರಿಂದ ಈ ಸತ್ಯಾಗ್ರಹವು ಪ್ರಾರಂಭವಾಯಿತು. ದೇಶದ ಮೂಲೆ ಮೂಲೆಗಳಲ್ಲಿ ಜನರು ಉಪ್ಪಿನ ಕಾಯಿದೆಯನ್ನು ಮುರಿದು ಸೆರೆಮನೆಯನ್ನು ಸೇರಿದರು. ಗಾಂಧೀಜಿಯವರನ್ನು ಸರ್ಕಾರವು ಬಂಧಿಸಿತು. ವೈಸರಾಯರು ಸತ್ಯಾಗ್ರಹವನ್ನು ತುಳಿದು ಹಾಕುವುದಕ್ಕಾಗಿ ದಬ್ಬಾಳಿಕೆಯನ್ನು ವಿರೋಧಿಸಿ ಪಟೇಲರು ೧೯೩೦ರಲ್ಲಿ ಅಧ್ಯಕ್ಷ ಪದಕ್ಕೆ, ಶಾಸನಸಭೆಯ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು. ಸರ್ಕಾರದ ಕೈಗೊಂಬೆಯಾಗಿ ಕಾರ್ಯ ಮಾಡುವುದು ತಮಗೆ ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಮ್ಮ ಪತ್ರದಲ್ಲಿ ಹೇಳಿದರು. ಪಟೇಲರ ಈ ಪತ್ರವು ಅವರ ದೇಶಾಭಿಮಾನಕ್ಕೂ ಸ್ವಾತಂತ್ರ‍್ಯ ಪ್ರೀತಿಗೂ, ಧೈರ್ಯಕ್ಕೂ ಸಾಕ್ಷಿಯಾಗಿದೆ. ಗಾಂಧೀಜಿಯವರು ಪ್ರಾರಂಭಿಸಿದ ರಾಜಕೀಯ ಆಂದೋಲನದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಆಗಿದೆ ಎಂದು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದರು.

ಪೇಶಾವರದಲ್ಲಿ ಸರ್ಕಾರ ತುಂಬ ಕ್ರೂರವಾಗಿ ನಡೆಯಿತು ಎಂದು ದೂರುಗಳು ಬಂದವು, ಇದನ್ನು ವಿಚಾರಿಸಿ ವರದಿಯನ್ನು ತಯಾರಿಸಲು ಕಾಂಗ್ರೆಸ್ ಪಟೇಲರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಪಟೇಲರು ವರದಿಯನ್ನು  ತಯಾರಿಸಿದರು.  ದೆಹಲಿಯಲ್ಲಿ ಪಟೇಲ ವರದಿಯ ಚರ್ಚೆಯನ್ನು ಮಾಡಲು ಕಾಂಗ್ರೆಸ್  ಕಾರ್ಯಕಾರಿ ಸಮಿತಿಯ ಸಭೆ ಸೇರಬೇಕಾಗಿತ್ತು. ಸರಕಾರವು ಈ ಸಭೆ ನಡೆಯಕೂಡದು ಎಂದು ಅಪ್ಪಣೆ ಮಾಡಿತು. ಆದರೂ ಪಟೇಲರು ಸರ್ಕಾರದ ಆಜ್ಞೆಯನ್ನು ನಿಷೇಧಿಸಿದ್ದರಿಂದ ಅವರಿಗ ಆರು ತಿಂಗಳ ಶಿಕ್ಷೆ ವಿಧಿಸಲಾಯಿತು. ಸೆರೆಮನೆಯಲ್ಲಿರುವಾಗ ಅವರ ಪ್ರಕೃತಿಯು ಕೆಟ್ಟಿದ್ದರಿಂದ ಅವಧಿ ಮುಗಿಯುವುದರೊಳಗೆ ಎರಡು ದಿನದ ಮೊದಲು ಅವರನ್ನು ಬಿಡುಗಡೆ ಮಾಡಲಾಯಿತು!

ಕೊನೆಯ ದಿನಗಳು

ಅವರು ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ವಿಯನ್ನಾ ನಗರಕ್ಕೆ ತೆರಳಿದರು. ಅಲ್ಲಿ ಅವರಿಗೆ ಶಸ್ತ್ರಕ್ರಿಯೆ ಮಾಡಲಾಯಿತು. ಅದರಿಂದ ಅವರಿಗೆ ಗುಣವೆನಿಸಿದರೂ, ಅವರ ಬೇನೆಯು ಉಲ್ಬಣಗೊಳ್ಳುತ್ತಲೇ ಇದ್ದಿತು. ಹಿಂದೂಸ್ಥಾನಕ್ಕೆ ಬಂದ ಕೂಡಲೇ ಪಟೇಲರನ್ನು ಬಂಧಿಸಿತು. ಪಟೇಲರು ಕಾಂಗ್ರೆಸ್ಸಿಗರಾದುದೇ ಅದಕ್ಕೆ ಕಾರಣ. ದೇಶದಲ್ಲಿಯ ಎಲ್ಲ ಮುಖಂಡರನ್ನು ಬಂಧಿಸಲಾಯಿತು. ಪಟೇಲರ ಪ್ರಕೃತಿಯು ಮತ್ತೆ ಕೆಟ್ಟಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಪಟೇಲರು ವಿಯೆನ್ನಾ ನಗರಕ್ಕೆ ತೆರಳಿ ಅಲ್ಲಿ ಸ್ವಲ್ಪ ದಿನ ವಿಶ್ರಾಂತಿ ಪಡೆದರು. ಆದರೆ ಅವರ ಮನಸ್ಸಿಗೆ ಸಮಾಧಾನವಿರಲಿಲ್ಲ. ತಮ್ಮ ಆರೋಗ್ಯ  ಕೆಡುತ್ತಿದ್ದರೂ ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲಿ ಭಾರತಕ್ಕಾಗಿ  ಪ್ರವಾಸ ಮಾಡಿದರು.  ಭಾರತದ ದಾಸ್ಯ. ಬ್ರಿಟಿಷರ ಅನ್ಯಾಯ ಇವನ್ನು ವಿವರಿಸಿದರು. ಬಿಡುವಿಲ್ಲದೆ ದುಡಿದರು. ಇದರಿಂದ ಅವರ ಪ್ರಕೃತಿಯು ಮತ್ತಷ್ಟು ಕೆಟ್ಟಿತು.  ತಿರುಗಿ ಅವರು ವಿಯೆನ್ನಾ ನಗರಕ್ಕೆ ಬರಬೇಕಾಯಿತು. ತಮ್ಮ ಅಂತ್ಯಾವಸ್ಥೆಯಲ್ಲಿ ಅವರು ಭಾರತದ ಬಗ್ಗೆ ಚಿಂತಿಸುತ್ತಿದ್ದರು. ಅವರ ಮರಣ ಶಯ್ಯೆಯಲ್ಲಿ ಇದ್ದಾಗ ಸುಭಾಷ್ ಚಂದ್ರ ಬೋಸರು ಅವರ ಸೇವೆ ಮಾಡುತ್ತಿದ್ದರು.

೧೯೩೩ ನೆಯ ಅಕ್ಟೋಬರ್ ೧೩ ರಂದು ಪಟೇಲರು ತಮ್ಮ ಕೊನೆಯ ಉಸಿರನ್ನು ಎಳೆದರು. ತಮ್ಮ ಶವಸಂಸ್ಕಾರವನ್ನು ಮುಂಬಯಿ ನಗರದಲ್ಲಿ ಮಾಡಬೇಕೆಂದು ಅವರು ಮೊದಲೇ ತಿಳಿಸಿದ್ದರು. ಆ ಪ್ರಕಾರ ಸುಭಾಷರು ಅವರ ಶವಗಳನ್ನು ಮುಂಬಯಿಗೆ ತೆಗೆದುಕೊಂಡು ಬಂದರು. ಮುಂಬಯಿ ನಾಗರಿಕರು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದು ತಮ್ಮ ಶ್ರದ್ಧಾಂಜಲಿಯನ್ನು ಭಾರತಮಾತೆಯ ಈ ವೀರಪುತ್ರನಿಗೆ ಅರ್ಪಿಸಿದರು.

ಪಟೇಲರು ತಮ್ಮ ಆಸ್ತಿಯನ್ನು ಸುಭಾಷ್ ಚಂದ್ರ ಬೋಸರಿಗೆ ವಹಿಸಿ ಕೊಡಬೇಕು. ಅದನ್ನು ಭಾರತದ ಉದ್ಧಾರಕ್ಕಾಗಿ  ಖರ್ಚು ಮಾಡಬೇಕು ಎಂದು ಮೃತ್ಯು ಪತ್ರದಲ್ಲಿ ಬರೆದಿದ್ದರು. ಪಟೇಲರು ಜೀವಂತವಿರುವಾಗ ದೇಶದ ಸಲುವಾಗಿ ತಮ್ಮ ದೇಹವನ್ನು ಸವೆಸಿದರು. ಸಾಯುವಾಗ ತಮ್ಮ ಆಸ್ತಿಯನ್ನು ದೇಶದ ಕಲ್ಯಾಣಕ್ಕಾಗಿ ದಾನ ಮಾಡಿದರು. ಇಂತಹ ಮಹಾಪುರುಷರು ಎಷ್ಟು ಮಂದಿ ದೊರೆತಾರು?