ಇಂದಿನ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯಲ್ಲಿ ಇರುವ ಸಂತರ ಮತ್ತು ಭಕ್ತರ ಪ್ರೇಮದ ಅಧಿರಾಜ್ಯವಾಗಿರುವುದೇ ಪಂಢರಪುರ. ಮೂಲತಃ ಪಂಡರಗೆ (ಕನ್ನಡ ಹೆಸರು) ಎಂದು ಕರೆಯಲ್ಪಟ್ಟಿದ್ದ ಇದು ಇಂದು ಪಾಂಡುರಂಗನ ಮತ್ತು ಭಕ್ತ ಪುಂಡರೀಕನ ಹೆಸರಿನಿಂದ ಕೃತ್ರಿಮ ಸಂಸ್ಕೃತೀಕರಣ ರೂಪವನ್ನು ಪಡೆದಿದೆ. ಮಹಾರಾಷ್ಟ್ರದ ಭೀಮಾ ನದಿಯ ತೀರದ ಮೇಲೆ ಇರುವ ಈ ಕ್ಷೇತ್ರವು ಕಳೆದ ಸುಮಾರು ಹನ್ನೊಂದು-ಹನ್ನೆರಡು ಶತಮಾನಗಳಿಂದ ದಕ್ಷಿಣ ಭಾರತವೂ ಸೇರಿದಂತೆ ಎಲ್ಲೆಡೆಯಿಂದ ಬಹಳಷ್ಟು ಭಕ್ತರನ್ನು ಬರಮಾಡಿಕೊಳ್ಳುತ್ತಲೇ ಬಂದಿದೆ ಎಂಬುದು ಗಮನಾರ್ಹವಾದ ಸಂಗತಿ. ಭೀಮಾ ನದಿಗೆ ‘ಭಿವಾರಾ’ ಎಂಬುದಾಗಿಯೂ ಕರೆಯುವುದುಂಟು. ಅಲ್ಲದೆ ಈ ನದಿಯು ಪಂಢರಪುರ ಕ್ಷೇತ್ರದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಹರಿಯುತ್ತಿರುವುದ ರಿಂದ ಇದಕ್ಕೆ ‘ಚಂದ್ರಭಾಗಾ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಸಂಬಂಧವಾಗಿ ಒಂದು ಆಖ್ಯಾಯಿಕೆಯೂ ಇದೆ. ‘ಗಣಪತಿಯೂ ಕೊಟ್ಟಂಥ ಶಾಪದ ಕಾರಣ ಚಂದ್ರನು ಈ ನದಿಯಲ್ಲಿ ಬಂದು ಸ್ನಾನ ಮಾಡಿದ ಮೇಲೆ ಅವನಿಗೆ ಶಾಪದಿಂದ ಮುಕ್ತಿಯು ದೊರೆಯಿತು.’ ತನ್ನಲ್ಲಿ ಸ್ನಾನ ಮಾಡಿದ ಚಂದ್ರನ ಆಕಾರದಲ್ಲಿಯೇ ಅಂದರೆ ಅರ್ಧಚಂದ್ರಾಕಾರದಲ್ಲಿಯೇ ಆ ನದಿಯು ಮುಂದೆ ಹರಿಯಲು ಆರಂಭಿಸಿತು. ಆ ಕಾರಣವಾಗಿ ‘ಚಂದ್ರಭಾಗ’ ಎಂಬುದಾಗಿ ಜನರು ಅದಕ್ಕೆ ಹೆಸರಿಸಿ ಇಂದಿಗೂ ಹಾಗೆಯೇ ಕರೆಯುತ್ತಿದ್ದಾರೆ.

ಪಾಂಡುರಂಗ ವಿಠ್ಠಲನ ಇತಿಹಾಸ

ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರಾದಿ ಸಂತರ ಕಾಲದಿಂದ ಬಹಳ ಪ್ರಸಿದ್ಧಿಗೆ ಬಂದಂಥ ಈ ಪುಣ್ಯಕ್ಷೇತ್ರವು ಸ್ಕಂದ ಪುರಾಣದಲ್ಲಿಯೇ ಉಲ್ಲೇಖಿಸಲ್ಪಟ್ಟಿದೆ. ಆ ಪುರಾಣವನ್ನು ಆಧರಿಸಿ ‘ಪಂಢರೀ ಮಾಹಾತ್ಮ್ಯಂ’ ಎಂಬ ಗ್ರಂಥವೊಂದು ಪ್ರಾಚೀನ ಕಾಲದಲ್ಲಿಯೇ ರಚಿತವಾಗಿದ್ದು, ಅದರಲ್ಲಿ ಹೀಗೆ ವರ್ಣನೆ ಮಾಡಲಾಗಿದೆ :

“ಪೌಂಡರಿಕಮಿತೀ ಖ್ಯಾತ ತೀರ್ಥಕ್ಷೇತ್ರ, ಚ ಪೂಜಿತಂ |
ಪಾಂಡುರಂಗಶ್ಚ ತತ್ರಾಸ್ತೇ ಮೂರ್ತಿಮಾನ್ ದೇವತೋತ್ತಮಃ ||”

ಅಂದರೆ (ಭೀಮಾ ನದಿಯ ತೀರದಲ್ಲಿ) ‘ಪೌಂಡರಿಕ ಎಂಬ ಹೆಸರಿನ ಕ್ಷೇತ್ರ ಮತ್ತು ತೀರ್ಥವೊಂದಿದೆ. ಆ ಕ್ಷೇತ್ರದಲ್ಲಿ ಸರ್ವಶ್ರೇಷ್ಠ ದೇವನಾಗಿರುವ ಪಾಂಡುರಂಗನು ಮೂರ್ತಿ ರೂಪದಲ್ಲಿ ನೆಲೆಸಿದ್ದಾನೆ.’ ಈ ಉಲ್ಲೇಖದ ಪ್ರಕಾರ ಪಂಢರಪುರವು ಬಹಳ ಪ್ರಾಚೀನವಾದುದು. ಈ ಕ್ಷೇತ್ರಕ್ಕೆ ಹೋಗಿ ಭೀಮಾ ನದಿಯಲ್ಲಿ ಸ್ನಾನಮಾಡಿ ಶ್ರೀವಿಠ್ಠಲನ ಅರ್ಥಾತ್ ಪಾಂಡುರಂಗನ ದರ್ಶನ ಮಾಡಿದರೆ ಜೀವನದ ಸಂಕಷ್ಟಗಳು, ಪಾಪಗಳು ಇಲ್ಲವಾಗುತ್ತವೆ ಎಂಬುದು ಭಕ್ತ ಜನರ ಸಾಮಾನ್ಯ ನಂಬಿಕೆ. ಹಾಗೆಯೇ ಇಲ್ಲಿ ಸ್ನಾನ ಮಾಡಿದವರು ಸ್ವರ್ಗವನ್ನು ಸೇರುತ್ತಾರೆ ಮತ್ತು ದೇಹತ್ಯಾಗ ಮಾಡಿದವರು ಪುನರ್ ಜನುಮದಂಥ ನಿರಂತರ ಭವಚಕ್ರದಿಂದ ಬಿಡುಗಡೆಗೊಂಡು ಮೋಕ್ಷ ಹೊಂದುತ್ತಾರೆ ಎಂಬುದೂ ಸಂತರಲ್ಲಿರುವಂಥ ಆಧ್ಯಾತ್ಮಿಕ ನಂಬಿಕೆ.

ಪಂಢರಪುರದ ಈ ಸಾದಾಗಪ್ಪು ದೇವರನ್ನು ಸರ್ವಜನಾಂಗದ ದೇವತೆ ಎಂದು ಹೇಳಿ, ಪರಬ್ರಹ್ಮ ಸ್ವರೂಪದಲ್ಲಿ ಪರಿಗ್ರಹಿಸಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಹೆಸರಿನಿಂದ ಉಪಾಸನೆ ಮಾಡುತ್ತಾ ಬಂದಿದ್ದಾರೆ. ಪಂಢರೀನಾಥ, ಪಾಂಡುರಂಗ, ಪಂಢರಿರಾಯಾ, ವಿಠಾಯಿ, ವಿಠೋಬಾ, ವಿಠೂಮಾವುಲಿ, ವಿಠ್ಠಲ ಗುರುರಾವ್ ಇತ್ಯಾದಿ ಹೆಸರುಗಳನ್ನು ಭಕ್ತರು ಈ ದೇವರಿಗೆ ನೀಡಿರುವುದು ನಮಗೆ ಕಾಣಸಿಕ್ಕುತ್ತವೆ. ಆದರೆ ಇಂದು ಸರ್ವಪರಿಚಿತವೂ ಮತ್ತು ಪ್ರಚಲಿತವೂ ಆಗಿರುವ ಹೆಸರುಗಳೆಂದರೆ ಪಾಂಡುರಂಗ ಮತ್ತು ಶ್ರೀವಿಠ್ಠಲ. ಇವನ್ನು ಒಟ್ಟುಗೂಡಿಸಿ ಪಾಂಡುರಂಗ ವಿಠ್ಠಲ ಎಂದೂ ಕರೆಯುವುದುಂಟು. ‘ಪಾಂಡುರಂಗ ವಿಠ್ಠಲ’ ಎಂದರೆ ಪಾಂಡುರಂಗ ಎಂಬ ಕ್ಷೇತ್ರದ ಅಧಿದೇವತೆಯಾದ ವಿಠ್ಠಲ ಎಂಬ ಅರ್ಥವನ್ನೇ ಸೂಚಿಸುತ್ತದೆ. ಈ ಪಾಂಡುರಂಗ ಎಂಬ ಹೆಸರು ಕನ್ನಡ ಹೆಸರಾದ ‘ಪಂಡರಗೆ’ ಎಂಬುದರಿಂದ ಉಗಮಗೊಂಡುದಾಗಿದೆ. ಕ್ರಿ.ಶ. ೫೧೪ರ ತಾಮ್ರಪಟವೊಂದರಲ್ಲಿ ಪಾಂಡುರುಂಗಪಲ್ಲಿ ಎಂಬ ಹೆಸರು ಉಲ್ಲೇಖಿತವಾಗಿದೆ. ಈ ತಾಮ್ರಪಟವನ್ನು ಅನಂತರದಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ (ಕ್ರಿ.ಶ. ೮೨೦)ನು ನೂತನೀಕರಣಗೊಳಿಸಿದನು. ಬೆಳಗಾವಿಗೆ ೧೮ ಕಿ.ಮೀ. ದೂರಕ್ಕಿರುವ ಬೆಂಡಿಗೇರಿ ಎಂಬಲ್ಲಿನ ಕ್ರಿ.ಶ. ೧೨೪೯ರ ಶಿಲಾಶಾಸನದಲ್ಲಿ ಭೀಮರಥಿ ದಂಡೆಯಲ್ಲಿರುವುದು ಪೌಂಡರಿಕಕ್ಷೇತ್ರ ಮತ್ತು ವಿಷ್ಣುವನ್ನು ವಿಠೋಬಾ ಎಂದು ಉಲ್ಲೇಖಿಸಲಾಗಿದೆ. ವಿಠ್ಠಲನಿಗೆ ಹೇಗೆ ಬೇರೆ ಬೇರೆ ಹೆಸರುಗಳಿವೆಯೇ ಹಾಗೆಯೇ ಈ ಕ್ಷೇತ್ರಕ್ಕೂ ಅನೇಕ ಹೆಸರುಗಳಿರುವುದನ್ನು ಬೇರೆ ಬೇರೆ ಮಹಾತ್ಮೆ ಗ್ರಂಥಗಳಲ್ಲಿ ಹೇಳಲಾಗಿದೆ. ಪಂಢರಪುರ, ಪಾಂಡುರಂಗಪುರ, ಪಾಂಡರಿಕ ಕ್ಷೇತ್ರ, ಪಾಂಡರಿ, ಪಾಂಡರಿಪುರ, ಪೌಂಡರಿಕ ಕ್ಷೇತ್ರ, ಪುಂಡರಿಕ ಎಂಬಿವೇ ಮೊದಲಾದ ಹೆಸರುಗಳನ್ನು ಭಕ್ತರು ಮತ್ತು ಗ್ರಂಥಕರ್ತರು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ.

ದೇವರು ಮತ್ತು ಕ್ಷೇತ್ರಕ್ಕೆ ಬಹು ನಾಮಗಳಿರುವಂತೆಯೇ ಈ ಎರಡೂ ಹೆಸರುಗಳ ಸ್ಪಷ್ಟೀಕರಣಕ್ಕಾಗಿ ಅನೇಕ ಕತೆಗಳೂ ಹುಟ್ಟಿಕೊಂಡಿವೆ. ವಿಠ್ಠಲ ಎಂಬುದಕ್ಕೆ ಭಕ್ತಪುಂಡರೀಕನು ‘ಇಟ್ಟಿಗೆ’ ಎಸೆದು ಈ ದೇವರನ್ನು ನಿರಂತರ ಕಾಯುವಂತೆ ಮಾಡಿದನೆಂಬ ಕತೆಯು ಇದೆ: ‘ಸಂತ ರೋಹಿದಾಸನಿಂದ ಪ್ರಭಾವಿತನಾದ ಮೇಲೆ ಸ್ತ್ರೀಯರ ಸಹವಾಸದಲ್ಲಿ ಬಿದ್ದು ವೃದ್ಧ ತಂದೆ-ತಾಯಿಗಳನ್ನು ನಿರ್ಲಕ್ಷ್ಯ ಮಾಡಿದ್ದಂಥ ಪುಂಡರೀಕನು ಪಶ್ಚಾತ್ತಾಪಗೊಂಡು ಅವರ ಸೇವೆಯಲ್ಲಿ ನಿರತನಾದನು. ಹೀಗೆ ಭಕ್ತ ಪುಂಡರೀಕನು ತನ್ನ ತಂದೆ ತಾಯಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾಗ ವಿಠ್ಠಲನು ಪರೀಕ್ಷೆಗಾಗಿ ಅಲ್ಲಿಗೆ ಬಂದನು. ತಾನು ತಂದೆ ತಾಯಿಯರ ಸೇವೆಯಲ್ಲಿದ್ದುದರಿಂದ ಸ್ವಲ್ಪ ಸಮಯ ಕಾಯುವುದಕ್ಕೆ ಸೂಚನೆಯೊ ಎಂಬಂತೆ ತನ್ನ ಬಳಿಯಲ್ಲಿದ್ದ ಇಟ್ಟಿಗೆಯೊಂದನ್ನು ಎಸೆದನು. ಆ ಇಟ್ಟಿಗೆಯ ಮೇಲೆ ನಿಂತುದರಿಂದ ಈ ದೇವರಿಗೆ ವಿಠ್ಠಲ>ಇಟ್ಠಲ, ವಿಠೋಬಾ>ಇಟೋಬಾ ಎಂಬ ಹೆಸರುಗಳು ಬಂದವೆಂಬುದು ಈ ಕತೆಯ ಮುಖ್ಯ ವಿವರಣೆ. ಕನ್ನಡ ಶಬ್ದವಾದ ಇಟ್ಟಿಗೆಗೆ ಮರಾಠಿ ಭಾಷೆಯಲ್ಲಿ ‘ವೀಟ್’ ಎನ್ನುತ್ತಾರೆ. ಈ ‘ವೀಟ್’ ಮೇಲೆ ನಿಂತವನು ವಿಠ್ಠಲನೆಂದು ಕರೆಯಲಾಯಿತು. ಹೀಗೆಯೇ ವಿಠ್ಠಲ ದೇವರು ಇಪ್ಪತ್ತೆಂಟು ಯುಗಗಳಿಂದಲೂ ನಿಂತಿದ್ದಾನೆ ಎಂಬುದಾಗಿ ಸಂತ ಭಕ್ತರುಗಳು ನಂಬಿಕೊಂಡು ಬಂದಿದ್ದಾರೆ. ಇಂದಿಗೂ ಭಕ್ತರು ಪಂಢರಪುರಕ್ಕೆ ಹೋದರೆ ಚಂದ್ರಭಾಗ ನದಿಯಲ್ಲಿ ಮಿಂದು ಮೊದಲು ದರ್ಶನ ಪಡೆಯುವುದು ತಂದೆ ತಾಯಿ ಸೇವಾತತ್ಪರನೂ, ದೇವರನ್ನು ತನ್ನ ಸೇವಾ ಭಕ್ತಿಯಿಂದ ನಿಂತು ಕಾಯುವಂತೆ ಮಾಡಿದವನೂ ಆದ ಭಕ್ತ ಪುಂಡರೀಕನನ್ನೇ. ಈ ಇಬ್ಬರ ಗಾಢ ಸಂಬಂಧದ ದ್ಯೋತಕವೋ ಎಂಬಂತೆ ‘ಪುಂಡರೀಕ ವರದಾ ಹರಿ ವಿಠ್ಠಲ’ ಎಂಬ ನಿತ್ಯ ಸ್ಮರಣೋಕ್ತಿಯೊಂದು ಭಕ್ತರಿಂದ ಉದ್ಗರಿಸಲ್ಪಡುತ್ತಿರುವುದು ಗಮನಾರ್ಹ.

ಈ ದಂತಕತೆಯೇನೇ ಇರಲಿ ವಿಠ್ಠಲ ಎಂಬ ಶಬ್ದದ ಬಗ್ಗೆ ಅನೇಕ ಇತಿಹಾಸಕಾರರು ಮತ್ತು ಸಂಶೋಧಕರು ಅಧ್ಯಯನ ಮಾಡಿ ಈ ಕೆಳಗಿನ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಬಹಳಷ್ಟು ವಿದ್ವಾಂಸರ ಅಭಿಪ್ರಾಯದಂತೆ ವಿಠ್ಠಲ ಎಂಬ ಪದವು ವಿಷ್ಣು ಎಂಬುದರ ಅಪಭ್ರಂಶರೂಪ. ವಿಷ್ಣು>ವಿಟ್ಟು>ವಿಟ್ಠಲ>ವಿಠ್ಠಲ ಎಂಬುದು ಅದರ ಮುಖ್ಯ ನಿರೂಪಣೆಯಾಗಿದೆ. ಪ್ರಾಕೃತದಲ್ಲಿ ವಿಷ್ಣು, ವಿಷ್ಣುಹಾ, ವೇಷ್ಣೂಹಾ, ವೇಥ ಎಂಬ ರೂಪಗಳಿವೆ. ಕನ್ನಡ ಶಾಸನಗಳಲ್ಲಿ ‘ವಿಟ್ಟರಸ’, ‘ವಿಟ್ಟ’ ಹಾಗೆಯೇ ‘ಬಿಟ್ಟೀ’, ‘ಬಿಟ್ಟಾ’, ‘ಬಿಟ್ಟಿಗಾ’ ರೂಪಗಳಿದ್ದು ಅವು ವಿಷ್ಣು ಶಬ್ದದ ವ್ಯುತ್ಪತ್ತಿಗಳು ಎಂಬುದು ವಿದ್ವಾಂಸರು ಒಪ್ಪಿಕೊಂಡಿರುವ ವಿಚಾರ. ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಮೂಲ ಹೆಸರು ಬಿಟ್ಟಿದೇವ. ಶ್ರೀ ಕಾಶಿನಾಥ ಉಪಾಧ್ಯೆಯವರು ‘ವಿಠ್ಠಲ ಋಗ್ಮಂತ್ರ ಸಾರಾಭಾಷ್ಯೆ’ ಕೃತಿಯಲ್ಲಿ ವಿಠ್ಠಲ ಶಬ್ದದ ವ್ಯುತ್ತತ್ತಿಯನ್ನು ಹೀಗೆ ಹೇಳಿದ್ದಾರೆ. ವಿಟ್+ಠ+ಲ ವಿತ್ತ ವೇದನಂ ಜ್ಞಾನಂ, ತೇನ ಠಾಃ ಶೂನ್ಯಃ ತಾನಲಾತಿ ಸ್ವೀಕರೋತಿ. ಸಂತ ತುಕಾರಾಮನು ತನ್ನ ಒಂದು ಅಭಂಗದಲ್ಲಿ ವಿಠ್ಠಲ>ವಿಠೋಬಾ ಶಬ್ದ ಬಗೆಗೆ ಅತ್ಯಂತ ಸೂಕ್ಷ್ಮವಾಗಿ ಭಾಷ್ಯ ಬರೆದಿರುವಂತಿದೆ. ಆ ಪ್ರಕಾರ ‘ವಿ’ ಅಂದರೆ ‘ಜ್ಞಾನ’, ‘ಠೋಬಾ’ ಎಂದರೆ ‘ಆಕಾರ’. ಅಂದರೆ ‘ಜ್ಞಾನದ ಆಕಾರ’, ‘ಜ್ಞಾನದ ಮೂರ್ತಿ’. ಅಲ್ಲದೆ ‘ವಿ’ ಎಂದರೆ ‘ಗರುಡ’ ಮತ್ತು ‘ಠೋಬಾ’ ಎಂದರೆ ‘ಆಸನ’ ಅಂದರೆ ಗರುಡನನ್ನು ಆಸನವನ್ನಾಗಿ ಮಾಡಿಕೊಂಡಿರುವ ದೇವತೆ ಅರ್ಥಾತ್ ವಿಷ್ಣು. ಈ ವಿಷ್ಣುವೇ ಕಟಿಗಳ ಮೇಲೆ ಕರಗಳನ್ನು ಇಟ್ಟುಕೊಂಡು ಇಟ್ಟಿಗೆಯ ಮೇಲೆ ನಿಂತಿದ್ದಾನೆ. ಈ ಪ್ರಕಾರ ಶ್ರೀವಿಠೋಬಾನೇ ಶ್ರೀವಿಷ್ಣು ಅಥವಾ ಶ್ರೀಕೃಷ್ಣ. ದ್ವಾಪರ ಯುಗದಲ್ಲಿ ಶ್ರಾವಣವದ್ಯ ಅಷ್ಟಮಿಯಂದು ಬುಧವಾರ ಶ್ರೀಕೃಷ್ಣನ ಜನುಮವಾಗಿತ್ತು. ಶ್ರೀವಿಠ್ಠಲನ ವಾರವೂ ಬುಧವಾರ. ಇಂದಿಗೂ ಭಕ್ತರು ಬುಧವಾರದಂದು ವಿಠ್ಠಲನ ದರ್ಶನಕ್ಕೆ ಸಾಲುಗಟ್ಟಿ ನಿಂತಿರುತ್ತಾರೆ. ಇನ್ನು ವಾರಕರಿ (ಯಾತ್ರೆ)ಗೆ ಬಂದ ಭಕ್ತರು ಇಂದಿಗೂ ಬುಧವಾರದಂದು ಪಂಢರಪುರದಿಂದ ಬೇರೆ ಊರಿಗೆ ವಾಪಸ್ಸು ಹೋಗಲು ಸಿದ್ಧಾವಾಗುವುದಿಲ್ಲ. ವಿಷ್ಣು, ಕೃಷ್ಣ, ವಿಠ್ಠಲರ ಬಣ್ಣವು ಸಾದಾಗಪ್ಪು, ‘ಸಾವಳ ವಿಠ್ಠಲ’ ಎಂಬುದು ಭಕ್ತರ ಬಾಯಿಂದ ತುಂಬು ಭಕ್ತಿಯಲ್ಲಿ ಉಚ್ಚರಿಸಲ್ಪಡುತ್ತಿರುವ ಪದ.

ಈ ಕ್ಷೇತ್ರ ಮತ್ತು ಈ ದೇವರ ಬಗ್ಗೆ ಭಕ್ತರಿಗೆ ಎಷ್ಟು ಆಳವಾದ ಭಕ್ತಿ ಇದೆಯೆಂಬುದು ಈ ಕೆಳಗಿನ ಅಭಂಗದ ಸಾಲುಗಳನ್ನು ನೋಡಿದರೆ ಅರ್ಥವಾಗುತ್ತದೆ :

“ಧನ್ಯ ಧನ್ಯ ಹೇ ನಗರ | ಭೂ ವೈಕುಂಠ ಪಂಢರಪುರ”
(ಧನ್ಯ ಧನ್ಯವೋ ಈ ನಗರ | ಭೂವೈಕುಂಠವಹುದು ಪಂಢರಪುರ)
“ಅವಘೀಚ ತೀರ್ಥ ಘಡತೀ ಏಕವೇಳಾ | ಚಂದ್ರಭಾಗ ಡೋಳಾ ದೇಖಿಲಿಯಾ ||”

(ಸಮಸ್ತ ತೀರ್ಥಂಗಳು ಲಭಿಸುವುದು ಒಮ್ಮೆಗೆ ಚಂದ್ರಭಾಗೆಯ ದರುಶನದಿಂದಲೆ)

“ಆಧೀ ರಚಿಲೀ ಪಂಢರೀ | ಮಗ್ ವೈಕುಂಠ ನಗರೀ |
ಜೆವ್ಹಾ ನವ್ಹತೇ ಚರಾಚರ | ತೆವ್ಹಾ ಹೋತೇ ಪಂಢರಪುರ |
ಜೆವ್ಹಾ ನವ್ಹತೀ ಗೋದಾಗಂಗಾ | ತೆವ್ಹಾ ಹೋತೀ ಚಂದ್ರಭಾಗಾ |
ಚಂದ್ರ ಭಾಗೇಚೆ ತಟೀ | ಧನ್ಯ ಪಂಢರೀ ಗೋಮಟೀ ||”

(ಮೊದಲು ರಚಿಸಿದ ಪಂಢರಿ | ನಂತರದೊಳಾ ವೈಕುಂಠ ನಗರಿ |
ಎಂದು ಇರಲಿಲ್ಲವು ಚರಾಚರ | ಇದ್ದಿತಂದೀ ಪಂಢರಪುರ |
ಎಂದು ಇರಲಿಲ್ಲವೊ ಗೋದಾಗಂಗಾ | ಅಂದಿದ್ದಿತೀ ಚಂದ್ರಭಾಗಾ |
ಚಂದ್ರಭಾಗೆಯ ತಟದಿ | ಧನ್ಯವು ಪಂಢರಿಯು ಅಂದದಿ)

ಚಂದ್ರಭಾಗಾ ನದಿ, ಪಂಢರಪುರ ಇವುಗಳೆಲ್ಲ ವೈಕುಂಠ ಮತ್ತು ಚರಾಚರ ಸೃಷ್ಟಿಗೂ ಆದಿಯೊಳು ಇದ್ದಂಥವುಗಳು ಎಂಬ ಮಾತುಗಳು ಅವರ ಭಾವುಕ ಭಕ್ತಿಯ ನಂಬುಗೆಯ ಆಳವನ್ನು ತೋರಿಸುವುವುಗಳಾಗಿವೆ. ಹಾಗೆಯೇ

ಐಸೇ ತೀರ್ಥ ಕೋಣೀ ದಾಖವಾ ಸುಲಭ | ಜೇಥೆ ಸಮಾರಂಭ ಹರಿಕಥೇಚಾ ||
ಐಸೇ ತೀರ್ಥ ಕೋಣೀ ದಾಖವಾ ಸುಸ್ವರೂಪ | ಜೇಥೆ ತ್ರಿವಿಧ ತಾಪ ಹರಪತೀ ||
ನಾಮ ಮ್ಹಣೇ ಸಂತ ಜನಾಂಚೇ ಮಾಹೇರ್ | ಗಾತಾ ಮನೋಹರ ಗೋಡ ವಾಟೇ ||

(ಇಂಥ ತೀರ್ಥವನ್ನು ಸುಲಭವಾಗಿ ತೋರಿಸಿರಿ ಯಾರಾದರೂ |
ಎಲ್ಲಿ ನಡೆಯುತಿಹುದು ಇದರಂತೆ ಹರಿಕಥಾ ಸಮಾರಂಭವು ||

ಇಂಥ ತೀರ್ಥವನು ಆರು ತೋರುವಿರಿ ಸುಸ್ವರೂಪದೊಳು |
ಎಲ್ಲಿ ಪರಿಹಾರವಾಗುತಿಹುದೋ ತ್ರಿವಿಧ ತಾಪಂಗಳು ||
ಹೇಳುತಿಹುದು ನಾಮವೇ ಇದಹುದು ಸಂತ ಜನರಿಗೆ ತವರು |
ಹಾಡಲದನು ರುಚಿಸುವುದು ಮನೋಹರದಿಂದಲಿ ||)

ತ್ರಿಲೋಕಗಳಲ್ಲಿ ಎಲ್ಲಿಯೂ ಕಾಣಸಿಕ್ಕುವುದಿಲ್ಲ ವಿಠ್ಠಲನಂತಹ ದೇವರು. ಸಂತ ಜನರಿಗೆಲ್ಲ ಜೀವದ ಜೀವನು ವಿಠ್ಠಲ. ‘ಯಾರನ್ನು ಕುರಿತು ನಿತ್ಯ ವೇದವು ವ್ಯಾಖ್ಯಾನಿಸುತಿಹುದೋ’ ಮತ್ತು ‘ಶ್ರುತಿ ಯಾರನ್ನು ನೇತಿ ನೇತಿ ಎನ್ನುತ್ತಿರುವುದೋ’ ಅಂಥ ವಿಠ್ಠಲನ ಸುಕ್ಷೇತ್ರವಿದು. ಇಲ್ಲಿಗೆ ಬಂದರೆ ‘ವಿಠ್ಠಲ ವಿಠ್ಠಲವೆಂಬ ಸ್ಮರಣೆಯೊಳು | ಸಮಸ್ತ ಪಂಢರಪುರವು ಧುಮುಧುಮುಗುಡುತ್ತಿದೆ’ ಎಂಬುದು ಸಂತ ಚೋಖಾಮೇಳನ ಉದ್ಗಾರ.

ಪಂಢರಪುರವೆಂದರೆ ಬಹಳ ಮುಖ್ಯವಾಗಿ ನೆನಪಾಗುವುದು ಅಲ್ಲಿ ಹರಿಯುವ ಭೀಮ ಅಥವಾ ಚಂದ್ರಭಾಗಾ ನದಿ. ಆ ನದಿ ಭಕ್ತರ ಪಾಲಿಗೆ ಪಾವನಗಂಗೆ :

ವಾರಾಣಸೀ ಭಾಗೀರಥಿ | ಪಾಂಡುರಂಗೀ ಭೀಮರಥೀ ||
ವಾರಾಣಸೀ ಪಂಚಗಂಗಾ | ಪುಷ್ಪಾವತೀ ಪಾಂಡುರಂಗಾ ||
ವಾರಾಣಸೀ ಮಾಧವ ಬಿಂದು | ಪಾಂಡುರಂಗೀ ವೇಣುನಾದು ||
ವಾರಾಣಸೀ ಚಂದ್ರಮೌಳಿ | ಪಾಂಡುರಂಗೀ ವನಮಾಲೀ ||

ಸಂತ ನಾಮದೇವನು ಈ ಅಭಂಗದಲ್ಲಿ ಪಂಢರಪುರ ಕ್ಷೇತ್ರವು ವಾರಾಣಸಿ ಅಂದರೆ ಕಾಶಿಗೆ ಸಮನಾದುದು ಎಂದು ಹೇಳಿ ಅದರ ಕ್ಷೇತ್ರ ಮಹಿಮೆಯನ್ನು ಕೊಂಡಾಡುತ್ತಾನೆ. ವಾರಾಣಸಿಯಲ್ಲಿ ಭಾಗೀರಥಿ ಇದ್ದರೆ ಪಾಂಡುರಂಗ ಕ್ಷೇತ್ರದಲ್ಲಿ ಭೀಮರಥಿಯಿದೆ. ಹಾಗೆಯೇ ವಾರಾಣಸಿಯಲ್ಲಿ ಪಂಚಗಂಗಾ ಇದ್ದರೆ ಪಾಂಡುರಂಗಪುರದಲ್ಲಿ ಇರುವುದು ಪುಷ್ಪಾವತಿ. ಮಾಧವ ಬಿಂದು ವಾರಾಣಸಿಯಲ್ಲಿದ್ದರೆ, ಪಾಂಡುರಂಗಿಯಲ್ಲಿಹುದು ವೇಣುನಾದು. ಇನ್ನು ವಾರಾಣಸಿಗೆ ಚಂದ್ರಮೌಳಿಯಿರುವಂತೆ ಪಾಂಡುರಂಗ ಕ್ಷೇತ್ರಕ್ಕೆ ವನಮಾಲಿ. ನಾಮದೇವನಿಗೆ ಸಮಕಾಲೀನ ಸೂಫಿಸಂತ ಕಬೀರರು ಒಂದೆಡೆ ‘ಹಮ್ ತೋ ಕಾಶೀಕೆ ರಹಿವಾಸೀ | ಯಹಾ ತೋ ಘರಘರಮೇ ಕಾಶೀ |’ ಎಂದು ಮಹಾರಾಷ್ಟ್ರದ ಬಗ್ಗೆ ಗೌರವದಿಂದ ಉದ್ಗರಿಸಿದ್ದಾರೆ. ಹಾಗೆಯೇ ಮತ್ತೊಂದು ಅಭಂಗದಲ್ಲಿ ನಾಮದೇವನ ಭಕ್ತಿಯ ಉದ್ಗಾರವು ಹೀಗಿವೆ:

ಪಂಢರೀಚಾ ಮಹಿಮಾ | ದೇತಾ ಆಣಿ ಉಪಮಾ |
ಐಸಾಠಾವ ನಾಹೀ ಕೋಠೆ | ದೇವ ಉಭಾ ಉಭಿ ಭೇಟೆ |
ಜೋ ಯಾ ಗೇಲಾ ಪಂಢರಪುರಾ | ಆಣಿಕ ಯಾತ್ರಾ ನ ಕರೀ ತೋ |
ನ ಕರೀ ಆಳಸ ಆಲಿಯಾ ಸಂಸಾರೀ | ಪಾಹೆ ಪಾಹೆ ಪಂಢರಿ ಭೂವೈಕುಂಠ |

(ಎಂತಹುದು ಪಂಢರಿಯ ಮಹಿಮೆ | ಮತ್ತೆ ನೀಡುವೆ ಉಪಮಾ ||
ಇಂಥ ತಾಣವಿಲ್ಲ ಮತ್ತೆಲ್ಲಿಯು | ನಿಂತಿಹನು ದೇವ ಭೇಟಿಯ ನೀಡಲು |
ಆರು ಹೋಗುವರೊ ಪಂಢರಪುರಕೆ | ಹೋಗರು ಅವರು ಮತ್ತೆಲ್ಲಿಯು ತಿರುಗಿ ಯಾತ್ರೆಗೆ |
ಮಾಡದೆ ಆಲಸ್ಯ ಬಂದಿಹ ಸಂಸಾರಿ | ನೋಡಲು ನೋಡಲು ಭೂವೈಕುಂಠವಹ ಪಂಢರಿ ||)

ಈ ಅಭಂಗವು ಮುಖ್ಯವಾಗಿ ಸ್ಥಳ ಪುರಾಣವನ್ನು ಹೇಳುವಂತಹದ್ದಾಗಿದೆ. ಯಾವುದೇ ಸಾಂಸ್ಕೃತಿಕ ಅಧ್ಯಯನದಲ್ಲಿ ಸ್ಥಳ ಪುರಾಣವನ್ನು ಹುರುಳಿಲ್ಲದ ಕಲ್ಪಿತ ಕಥೆಯೆಂದು ತಿರಸ್ಕರಿಸಲು ಸಾಧ್ಯವಿಲ್ಲ. ಯಾವುದೇ ಪೂರ್ವಗ್ರಹವಿಲ್ಲದೆ ಇಂಥ ಸ್ಥಳ ಪುರಾಣಗಳನ್ನು ಅಧ್ಯಯನ ಮಾಡಿದರೆ ಮನುಷ್ಯ ಬದುಕಿನ ಆಧ್ಯಾತ್ಮಿಕ ವಲಯ, ಧಾರ್ಮಿಕ ವಲಯ ಮತ್ತು ಭಕ್ತಿ ವಲಯದ ಸ್ಪಷ್ಟ ಚಿತ್ರಣ ಲಭ್ಯವಾಗುವುದು. ಭಕ್ತಿಯಲ್ಲಿ ಭಾವುಕತೆ ಎಷ್ಟೇ ಇದ್ದರೂ ಆ ಸ್ಥಳ ಮಹಾತ್ಮೆ ಮತ್ತು ಸ್ಥಳ ಪುರಾಣಗಳಲ್ಲಿಯೇ ಸಾಂಸ್ಕೃತಿಕ ಇತಿಹಾಸವು ಇರುತ್ತದೆ. ನಾಮದೇವ ಈ ಸ್ಥಳ ಪುರಾಣವನ್ನು, ಸ್ಥಳ ಮಹಾತ್ಮೆಯನ್ನು ಇಷ್ಟು ಶ್ರದ್ಧೆಯಿಂದ ಹೇಳುವಲ್ಲಿ ಅವನೆದುರು ಬಹು ದೊಡ್ಡ ಭಕ್ತ ಸಮೂಹವೇ ಇತ್ತು. ದಿನೇ ದಿನೇ ಹೆಚ್ಚುತ್ತಾ ಬಂದಿರುವ ಈ ಭಕ್ತ ಸಮೂಹವು ಒಪ್ಪಿಕೊಂಡು ಬಂದಿರುವ ಭಕ್ತಿಯ ಮಾಹಿತಿಯನ್ನು ಕೆದುಕಿದಾಗ ಅವರ ತಲಮಾರುಗಳ ಸಂಕಥನವೊಂದು ಸಿಕ್ಕುತ್ತದೆ. ಇದು ಪಂಢರಪುರ ಕ್ಷೇತ್ರದ ಸಾಂಸ್ಕೃತಿಕ ಇತಿಹಾಸವನ್ನು ಮನದಟ್ಟು ಮಾಡುವಲ್ಲಿ ಬಹಳ ಪ್ರಯೋಜನಕಾರಿ.

ಈಚಿನ ವಿದ್ವಾಂಸರಾದ ಶ್ರೀವಿಶ್ವನಾಥ ಖೈರ್ ಅವರು ಇಲ್ಲಿ ಪಾಣಾರ್ (ಗಾಯಕ) ಜನಾಂಗದವರೇ ಹೆಚ್ಚಾಗಿ ನೆಲೆಸಿದ್ದ ಕಾರಣವಾಗಿ ಪಂಢರುಪರ ಎಂದು ಹೆಸರಾಯಿತೆಂದು ತಮ್ಮ ‘ದ್ರಾವಿಡ ಮಹಾರಾಷ್ಟ್ರ’ ಕೃತಿಯಲ್ಲಿ ಹೇಳಿದ್ದಾರೆ. ಹಾಗೆಯೇ ಪಂಢರಿ ಎಂದರೂ ಗಾಯಕರನ್ನೇ ಸೂಚಿಸುತ್ತದೆ ಎಂಬುದು ಅವರ ಅಭಿಪ್ರಾಯ.

ವಿಠ್ಠಲ ಆರಾಧನ ಸಂಪ್ರದಾಯದ ಉಗಮ

ವಿಠ್ಠಲ ಭಕ್ತಿಯ ಸಂಪ್ರದಾಯವು ಹೆಚ್ಚು ತೀವ್ರತೆಯನ್ನು ಪಡೆದುದು ಭಕ್ತ ಜ್ಞಾನೇಶ್ವರನ ಕಾಲದಿಂದ ಎಂಬುದು ಸ್ಪಷ್ಟವಾದ ಸಂಗತಿ. ಮೂಲತಃ ನಾಥ ಪಂಥದವರ ಪರಂಪರೆಯಲ್ಲಿ ಬೆಳೆದವನು ಜ್ಞಾನೇಶ್ವರ. ತಂದೆ ವಿಠ್ಠಲಪಂತನು ಜೀವನದಲ್ಲಿ ಬೇಸರಗೊಡು ತೀರ್ಥಯಾತ್ರೆ ಗೆಂದು ಹೊರಟು ಆಳಂದಿ ಎಂಬಲ್ಲಿಗೆ ಬಂದನು. ಅಲ್ಲಿದ್ದ ಸಿದ್ದೇಶ್ವರ ಪಂತನೆಂಬ ವ್ಯಕ್ತಿಯು ವಿಠ್ಠಲ ಪಂತನನ್ನು ಆಧರಿಸಿ ಸತ್ಕರಿಸಿದನು. ಅವನ ತೀವ್ರ ಬಲವಂತದ ಕಾರಣವಾಗಿ ಬಹಳ ದಿನಗಳ ಕಾಲ ಅಲ್ಲಿಯೇ ಉಳಿದ ವಿಠ್ಠಲ ಪಂತನು ಕೊನೆಗೆ ಅವನ ಮಗಳು ರುಕ್ಮಿಣಿಯನ್ನು ಮದುವೆಯಾದನು. ಜೀವನದಲ್ಲಿ ಬೇಸತ್ತು ತೀರ್ಥರ್ಯಾತ್ರೆ ಹೊರಟು ಬಂದವನಾಗಿದ್ದ ವಿಠ್ಠಲ ಪಂತನು ಬಹಳ ಬೇಗನೆ ಮೊದಲಿನ ಹಾಗೆಯೇ ಸಾಂಸಾರಿಕ ಜಿಗುಪ್ಸೆ ಹೊಂದಿ ಅದರಿಂದ ನಿವೃತ್ತಿ ಬಯಸುವ ರೀತಿಯಲ್ಲಿ ಮಾತನಾಡಲು ಆರಂಭಿಸಿದನು. ‘ಎಲ್ಲಿ ಹೋದರೂ ಮುತ್ತುಗಕ್ಕೆ ಮೂರೇ ಎಲೆಗಳು’ ಎಂಬಂತೆ ಆಳಂದಿಯಲ್ಲಿಯೂ ‘ನಾನು ಸಂನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತೇನೆ’ ಎಂದು ಹೇಳತೊಡಗಿದ. ಅದಕ್ಕೆ ಪಂತನ ಹೆಂಡತಿ ‘ನೀವು ಪಿತೃಋಣವನ್ನು ತೀರಿಸಿದ ಮೇಲೆ ನಿಮ್ಮ ಚಿತ್ತಕ್ಕೆ ಬಂದಂತೆ ಮಾಡಿರಿ’ ಎಂದು ಹೇಳಿದಳು. ಅದಕ್ಕೊಪ್ಪಿದ ವಿಠ್ಠಲ ಪಂತ, ಆದರೆ ಬಹಳ ಕಾಲ ಮಕ್ಕಳಾಗಲಿಲ್ಲ. ಹಾಗಾಗಿ ಮತ್ತೆ ಮತ್ತೆ ಹೆಂಡತಿಗೆ ಸಂನ್ಯಾಸದ ಬಗ್ಗೆ ಹೇಳಲಾರಂಭಿಸಿದ. ಒಮ್ಮೆ ಆಕೆ ಬೇಸರದಲ್ಲಿ ‘ಹೋಗಿರಿ’ ಎಂದು ಹೇಳಿದುದೇ ಸಾಕಾಯಿತು. ಮುಕ್ತನಾದಂತೆ ಭಾವಿಸಿ ಸಂನ್ಯಾಸವನ್ನು ಸ್ವೀಕರಿಸಿಯೇ ಬಿಟ್ಟ. ಶ್ರೀಪಾದ ಸ್ವಾಮಿಗಳೆಂಬುವರಿಂದ ಉಪದೇಶ ದೀಕ್ಷೆಯನ್ನು ಪಡೆದ ಆತನಿಗೆ ‘ಚೈತನ್ಯಾಶ್ರಮ’ ಎಂಬ ಹೆಸರು ಬಂದಿತು. ಸಂನ್ಯಾಸಾಶ್ರಮಕ್ಕೆ ಬಂದ ಮೇಲೆ ಅವನು ‘ಪಿತೃಋಣಕ್ಕೆ ತಾನು ಎರವಾದ ಬಗ್ಗೆ’ ಸದಾ ಚಿಂತಿಸಿ ಒಂದು ಬಗೆಯ ಮನೋವ್ಯಾಕುಲಕ್ಕೆ ಒಳಗಾದನು. ಇತ್ತ ಗುರುಗಳು ಒಮ್ಮೆ ಅವನ ಹೆಂಡತಿ ರುಕ್ಮಿಣಿ ಮತ್ತು ಅವಳ ತಂದೆಯನ್ನು ಭೇಟಿಯಾದರು. ಅವರ ಮೂಲಕ ವಿಠ್ಠಲ ಪಂತನ ವಿವರ ಪಡೆದುಕೊಂಡು ಬಂದು ಆಳಂದಿ ಸೇರಿದರು. ತನ್ನ ಶಿಷ್ಯ ಮನೋಸ್ವಾಸ್ಥ್ಯ ಸಾಧ್ಯವಿಲ್ಲದೆ ಒದ್ದಾಡುತ್ತಿದ್ದ. ಅದನ್ನು ಕಂಡ ಗುರುಗಳು ‘ಚೈತನ್ಯಾಶ್ರಮ’ನನ್ನು ಮತ್ತೆ ವಿಠ್ಠಲ ಪಂತನಾಗಿಸಿ ಮತ್ತೆ ಸಂಸಾರ ಮಾಡಿ ಬರುವಂತೆ ತಿಳಿವಳಿಕೆ ಹೇಳಿ ಕಳುಹಿಸಿದರು. ಸಂನ್ಯಾಸದಿಂದ ಮರಳಿ ಬಂದ ಮೇಲೆ ಆ ದಂಪತಿಗಳಿಗೆ ನಾಲ್ವರು ಮಕ್ಕಳಾದರು. ಅವರೇ ನಿವೃತ್ತಿ, ಜ್ಞಾನದೇವ, ಸೋಪಾನ ಮತ್ತು ಮುಕ್ತಾಬಾಯಿ. ‘ಸಂನ್ಯಾಸಿ ಮಕ್ಕಳು’ ಎಂಬ ಕಾರಣದಿಂದ ಕರ್ಮಠ ಬ್ರಾಹ್ಮಣ ಸಮಾಜ ಇವರನ್ನು ಆದರಿಸಲಿಲ್ಲ.

ಮುಂದೆ ಮಕ್ಕಳು ದೊಡ್ಡವರಾಗಿ ಮುಂಜಿ ಮಾಡುವ ಆಚರಣೆಗೆ ಸಮ್ಮತಿಸಲು ಕರ್ಮಠ ಬ್ರಾಹ್ಮಣರು ತಿರಸ್ಕರಿಸದರು. ಅವರ ಪ್ರಕಾರ ಜಾತಿ, ಕುಲ, ವರ್ಣ ಮತ್ತು ಅಧಿಕಾರಿಗಳಾವುವೂ ಇಲ್ಲ ಈ ಮಕ್ಕಳಿಗೆ, ಅಂದರೆ ಇವರು ಬ್ರಾಹ್ಮಣರಂತೂ ಅಲ್ಲವೆ ಅಲ್ಲ. ಹಾಗೆಯೇ ಕ್ಷತ್ರಿಯ, ವೈಶ್ಯ, ಶೂದ್ರರಾರೂ ಅಲ್ಲ. ಸಂನ್ಯಾಸ ಸ್ವೀಕರಿಸಿದವರಿಗೆ ಹೇಗೆ ಜಾತಿ, ಕುಲ, ವರ್ಣಗಳಿಲ್ಲವೋ ಹಾಗೆಯೇ ಇವರಿಗೂ ಇಲ್ಲ. ಆ ಕಾರಣ ಬ್ರಾಹ್ಮಣ ವರ್ಣಾನುಸಾರ ಮುಂಜಿ ಕಾರ್ಯವೂ ಸಾಧ್ಯವಿಲ್ಲ. ಒಂದೊಮ್ಮೆ ಪೈಠಣವೆಂಬ ಶ್ರೀಕ್ಷೇತ್ರಕ್ಕೆ ಹೋಗಿ ಪ್ರಾಯಶ್ಚಿತ್ತ ಪಡೆದು ಬಂದರಷ್ಟೇ ಇದು ಸಾಧ್ಯವಾಗಬಹುದು. ಈ ಮಾತನ್ನು ಕೇಳಿದ ಜ್ಞಾನದೇವಾದಿಗಳು ಪೈಠಣಕ್ಕೆ ಹೊರಟರು. ಅಲ್ಲಿ ಕೋಣನ ಬಾಯಿಂದ ಮಂತ್ರವನ್ನು ಹೇಳಿಸಿ ಚಮತ್ಕಾರ ತೋರಿದರೂ ಕರ್ಮಠ ಬ್ರಾಹ್ಮಣ ಸಮಾಜ ಮಾನ್ಯ ಮಾಡಲಿಲ್ಲ. ಹೇಮಾಡಪಂತ ಮತ್ತು ಬೋಪದೇವರು ಎಂಬಾತರು ‘ಶುದ್ಧಿ ಪತ್ರ’ ತಂದರೂ ಬ್ರಾಹ್ಮಣರು ಒಪ್ಪಲಿಲ್ಲ. ಬೇಸತ್ತ ವಿಠ್ಠಲಪಂತ ದಂಪತಿಗಳು ನದಿಗೆ ಹಾರಿ ಪ್ರಾಣ ಬಿಟ್ಟರು. ಈ ಪ್ರಾಯಶ್ಚಿತ್ತ ಮಕ್ಕಳ ಮೇಲೆ ಘೋರ ಪರಿಣಾಮ ಬೀರಿತು. ಈ ಹೊತ್ತಿಗಾಗಲೇ ಕರ್ಮಠ ಬ್ರಾಹ್ಮಣ್ಯಕ್ಕೆ ನೊಂದು ಬೇಸತ್ತಿದ್ದ ನಿವೃತ್ತಿನಾಥನು ಸಂನ್ಯಾಸವನ್ನು ಸ್ವೀಕರಿಸಿದ್ದ. ಅವನೇ ಮುಂದೆ ತನ್ನ ಸೋದರ ಸೋದರಿಯರಿಗೆಲ್ಲ ಗುರುವಾದನು. ಅವನು ಸಂನ್ಯಾಸ ಸ್ವೀಕರಿಸಿದ್ದುದು ನಾಥ ಪಂಥದ ಸಂಪ್ರದಾಯವದರಿಂದ.

ನಾಥ ಪಂಥದ ಮೂಲ ಸ್ಥಾಪಕನ ಹೆಸರು ಆದಿನಾಥ. ಈ ಪಂಥ ಮಹಾರಾಷ್ಟ್ರದಲ್ಲಿ ಮಹಾನುಭಾವ ಪಂಥದವರಿಗಿಂತಲೂ ಹಿಂದೆಯೇ ಇದ್ದಿತಾದರೂ ಆನಂತರದಲ್ಲಿಯೇ ಅದು ಮಹಾರಾಷ್ಟ್ರಾದ್ಯಂತ ಪ್ರಚಾರಗೊಂಡದ್ದು ಎಂಬುದು ಗಮನಾರ್ಹ ಸಂಗತಿ. ಈ ಆದಿನಾಥನನ್ನು ‘ತ್ರಿಪುರಾರಿ’ ಎಂಬ ಹೆಸರಿನಿಂದಲೂ ಕರೆಯಲಾಗಿದೆ. ಗುರು ಪರಂಪರೆಯ ಮೂಲಕವಾಗಿಯೇ ಬೆಳೆದು ಬಂದುದಾಗಿದೆ ಈ ಪಂಥ. ಇಲ್ಲಿ ‘ನಾಥ’ ಎಂಬ ಪದಕ್ಕೆ ಅರ್ಥ ‘ಸ್ವಯಂ ಸಿದ್ಧ’ನಾಗಿರುವುದು. ಈ ಪಂಥದ ಮೂಲ ಸ್ಥಾಪಕ ಆದಿನಾಥನೆಂದು ಈ ಮೊದಲೇ ಉಲ್ಲೇಖಿಸಿದ್ದೇನೆ. ಆದಿನಾಥನ ಶಿಷ್ಯ ಮಚ್ಛೇಂದ್ರನಾಥ; ಅವನ ಶಿಷ್ಯ ಗೋರಕ್ಷನಾಥ; ಗೈನಿನಾಥನು ಗೋರಕ್ಷನಾಥನಿಗೆ ಶಿಷ್ಯ; ಈ ಗೈನಿನಾಥ (ಗಹನಿ ನಾಥ)ನ ಶಿಷ್ಯನೇ ಜ್ಞಾನದೇವನ ಅಣ್ಣ ನಿವೃತ್ತಿನಾಥ. ಈ ನಿವೃತ್ತಿನಾಥನು ಮುಂದೆ (ತಂದೆ ತಾಯಿಗಳ ಮರಣಾನಂತರ) ತನ್ನ ಹಿರಿಯ ತಮ್ಮ ಜ್ಞಾನದೇವನಿಗೆ ಗುರುವಾದನು. ಹೀಗೆ ಒಂದು ಗುರುಪರಂಪರೆಯು ನಾಥ ಪಂಥಕ್ಕೆ ಇರುವುದು ಗಮನಾರ್ಹ. ಈ ಪಂಥದಿಂದಲೇ ಬಂದು ಮುಂದೆ ಕರ್ನಾಟಕದ ಬಸವಾದಿ ಶರಣರ ಚಳವಳಿಯಲ್ಲಿ ಭಾಗವಹಿಸಿದವನು ಅಲ್ಲಮ ಪ್ರಭುದೇವ. ಮಚ್ಛೇಂದ್ರನಾಥ ಅರ್ಥಾತ್ ಅನಿಮಿಷನೇ ಅಲ್ಲಮನಿಗೆ ಗುರು. ಇನ್ನು ಗೋರಕ್ಷನಾಥ ಅಲ್ಲಮನ ಸಹಪಾಠಿ. ಇವರ ಅನಂತರದ ಗುರು ಗೈನಿ (ಗಹಿನಿ) ನಾಥನಿಗೆ ತ್ರಯಂಬಕ ಎಂಬ ಶಿಷ್ಯನೊಬ್ಬ ಇದ್ದನು. ಈತನ ಮಗ ಗೋವಿಂದ ಪಂತ. ಗೋವಿಂದ ಪಂತನ ಮಗ ವಿಠ್ಠಲ ಪಂತ. ಅಂದರೆ ವಿಠ್ಠಲ ಪಂತನ ಅಜ್ಜನು ಈ ಮೊದಲೇ ನಾಥ ಪರಂಪರೆಯಲ್ಲಿ ಶಿಷ್ಯತ್ವಕ್ಕೆ ಸೇರಿಕೊಂಡಿದ್ದನು. ಅವನ ಮೊಮ್ಮಗ ವಿಠ್ಠಲ ಪಂತ ಸಂನ್ಯಾಸ ಸ್ವೀಕರಣ ಮತ್ತು ಮತ್ತೆ ಸಂಸಾರ ಸ್ವೀಕರಣದ ಕಾರಣ ಕರ್ಮಠ ಬ್ರಾಹ್ಮಣರ ನಿರಾಕರಣೆಗೆ ಗುರಿಯಾದ. ಮಾತ್ರವಲ್ಲ ನದಿಯಲ್ಲಿ ಮುಳುಗಿ ಪತಿ ಪತ್ನಿಯರಿಬ್ಬರೂ ದೇಹತ್ಯಾಗವನ್ನೂ ಮಾಡಬೇಕಾಯಿತು. ಆ ಪರಿಣಾಮ ಜ್ಞಾನ ದೇವಾದಿಗಳು ಉದಾರವಾದಿ ತಾತ್ತ್ವಿಕ ಚಿಂತನೆಗಳುಳ್ಳ ನಾಥ ಪಂಥವನ್ನು ಸೋದರ ನಿವೃತ್ತಿಯ ಮೂಲಕ ಒಪ್ಪಿಕೊಂಡರು. ಇಲ್ಲಿ ಒಂದು ವಿಚಾರವನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಅದೆಂದರೆ ನಾಥ ಪಂಥದ ಒಂದು ಕವಲು ಶೈವ ಪರಂಪರೆಯನ್ನು ಬೆಳೆಸಿತು. ಹಾಗೆಯೇ ಮತ್ತೊಂದು ಕವಲು ವೈದಿಕ ಪರಂಪರೆಯನ್ನು ಬೆಳೆಸಿತು. ಆದರೆ ಜ್ಞಾನದೇವಾದಿ ಸಂತರು ಹುಟ್ಟುಹಾಕಿದ ವಾರಕರಿ ಅಥವಾ ವಿಠ್ಠಲ ಸಂಪ್ರದಾಯವು ಅವೈದಿಕವಾದುದು ಎಂಬ ವಿಚಾರವನ್ನು ಮರೆಯುವಂತಿಲ್ಲ.

ಈ ಹಂತದಲ್ಲಿ ಜ್ಞಾನೇಶ್ವರಾದಿಗಳು ವಾರಕರಿ ಸಂಪ್ರದಾಯದ ಜೊತೆಗೆ ಭಕ್ತಿಯ ಆರಾಧ್ಯ ಕ್ಷೇತ್ರವನ್ನು ಕರ್ಮಠ ಬ್ರಾಹ್ಮಣರ ಪೈಠಣದಿಂದ ಪಂಢರಪುರಕ್ಕೆ ಬದಲಾಯಿಸಿದರು. ಈ ಪಂಢರಪುರದ ಮುಖ್ಯ ಅಧಿದೇವತೆಯೇ ವಿಠ್ಠಲ ಅಥವಾ ಪಾಂಡುರಂಗ ವಿಠ್ಠಲ. ಇಲ್ಲಿ ದೇವರು ಮತ್ತು ಭಕ್ತರ ಸಂಮಿಲನವು ಶುದ್ಧ ಭಕ್ತಿಯ ನೆಲೆಯಿಂದ ಆಗುತ್ತದೆ. ಈ ವಾರಕರಿ ಪಂಥ ಮುಖ್ಯವಾಗಿ ತೀರ್ಥಯಾತ್ರೆಯನ್ನು ಪುರಸ್ಕರಿಸುವಂತಹದ್ದಾಗಿತ್ತು. ಆ ಹೊತ್ತಿಗೆ ಧರ್ಮ, ಭಕ್ತಿಯೆಂದರೆ ಯಜ್ಞ ಯಾಗಾದಿಗಳ ಮೂಲಕ ಸಾಧಿಸುವಂತಹದ್ದು ಎಂಬ ವಿಚಾರವು ಬೇರೂರಿತ್ತು. ಜ್ಞಾನೇಶ್ವರ ಹುಟ್ಟು ಹಾಕಿದ ಈ ತೀರ್ಥಯಾತ್ರಾ ನೆಲೆಯ ಪಂಥವು ಒಂದರ್ಥದಲ್ಲಿ ಸಾಕಷ್ಟು ಖರ್ಚಿನ ಯಜ್ಞಕ್ಕೆ ಪರ್ಯಾಯವಾಗಿ ಬಹುಸಂಖ್ಯಾತ ಜನಸಾಮಾನ್ಯರಿಗೆ ಅರ್ಥಾತ್ ಬಡವರಿಗೆ ದೈವಿಕ ಉಪಾಸನೆಯ ಕಾರಣವಾಗಿ ರೂಪಿಸಿದ ಹೊಸ ಪುರಸ್ಕಾರ ಮಾರ್ಗವೂ ಆಗಿತ್ತು ಎಂಬುದು ಗಮನಾರ್ಹ.

ಜ್ಞಾನೇಶ್ವರನು ವಿಠ್ಠಲ ಭಕ್ತಿಯ ಪಾರಮ್ಯವನ್ನು ಬಹಳ ಗಂಭೀರ ನೆಲೆಯಿಂದಲೇ ರೂಪಿಸಿದ ಎಂಬುದು ಗಮನಾರ್ಹ. ಕೋಣನ ಬಾಯಲ್ಲಿ ಮಂತ್ರ ಹೇಳಿಸಿದ್ದು, ಸತ್ತ ಚಾಂಗದೇವನಿಗೆ ಬದುಕಿಸಿದ್ದು, ಸಚ್ಚಿದಾನಂದ ಬಾಬಾ ಎಂಬ ವ್ಯಕ್ತಿಯನ್ನು ಚಿರನಿದ್ರೆಯಿಂದ ಕರೆದು ಎಬ್ಬಿಸಿದ್ದು-ಇವೇ ಮುಂತಾದ ಚಮತ್ಕಾರಿಕ ಪವಾಡಗಳೂ ಇವೆ. ಆದರೆ ‘ಜ್ಞಾನೇಶ್ವರಿ’ ಎಂಬ ತನ್ನ ಕೃತಿಯ ಮೂಲಕ ಮಹಾರಾಷ್ಟ್ರವೇ ಮಾತ್ರವಲ್ಲ ಅದರ ಆಸುಪಾಸಿನ ಪ್ರದೇಶಗಳಲ್ಲೆಲ್ಲ ಭಕ್ತಿಯ ಗಂಗೆಯನ್ನೇ ಹರಿಯುವಂತೆ ಮಾಡಿದುದು ಬಹಳ ವಿಶಿಷ್ಟವಾದ ಸಂಗತಿಯೇ ಹೌದು. ಜಗತ್ ಕಲ್ಯಾಣಾರ್ಥವಾಗಿ ಶ್ರೀಮದ್ ಭಗವದ್ಗೀತೆಯನ್ನು ಮರಾಠಿ ಭಾಷೆಯಲ್ಲಿ ತಾನು ಬರೆದುದಾಗಿ ಜ್ಞಾನೇಶ್ವರ ಹೇಳಿಕೊಂಡಿದ್ದಾನೆ :

ಗೀತಾಲಂಕಾರ ನಾಮ ಜ್ಞಾನೇಶ್ವರೀ |
ಬ್ರಹ್ಮಾನಂದ ಲಹರೀ ಪ್ರಗಟಕೇಲೀ ||

ಭಗವದ್ಗೀತೆಯನ್ನೇ ಜ್ಞಾನೇಶ್ವರಿ ಎಂಬ ಹೆಸರಿನಿಂದ ಬರೆದಿದ್ದೇನೆ. ಇದರ ಉದ್ದೇಶ ಬ್ರಹ್ಮಾನಂದ ಲಹರಿಯನ್ನು ಪ್ರಕಟಪಡಿಸುವುದು.

ಮೂಲದಲ್ಲಿ ಕೇವಲ ಏಳು ನೂರು ಶ್ಲೋಕಗಳಿರುವ ಗೀತೆಯನ್ನು ಒಂಬತ್ತು ಸಾವಿರ ಮರಾಠಿ ಓವಿಗಳಲ್ಲಿ ‘ಜ್ಞಾನೇಶ್ವರಿ’ಯನ್ನಾಗಿಸಿದ ಜ್ಞಾನೇಶ್ವರ. ಈ ಕಾವ್ಯ ಬರೆಯುವುದಕ್ಕೆ ಸ್ಪಷ್ಟ ಕಾರಣಗಳಿವೆ. ವೇದಗಳು ಅಪೌರುಷೇಯ ಎಂಬ ಮಾತು ಜಗಜ್ಜನಿತವಾದ ಸಂಗತಿ. ವೇದಗಳು, ವೇದಾಂಗಗಳು ಒಂದೇ ರೀತಿಯಲ್ಲಿ ವೈದಿಕ ಪುರೋಹಿತಶಾಹಿಗಳ ಬಿಗಿ ಹಿಡಿತದಲ್ಲಿ ಇದ್ದವು. ಶೂದ್ರರಿಗೆ ಮತ್ತು ಸ್ತ್ರೀಯರಿಗೆ ಸಿಗದ ಹಾಗೆ ವೈದಿಕ ವರ್ಗ ಇದನ್ನು ಕಾಪಾಡಿಕೊಂಡಿತ್ತು. ವೈದಿಕ ಸಮಾಜದ ಈ ವೇದ ವಿರೋಧಿ ನೆಲೆಯನ್ನು ಬಯಲಿಗಳೆಯುವ ಉದ್ದೇಶದಿಂದಲೇ ಜ್ಞಾನೇಶ್ವರ ಗೀತೆಯನ್ನು ಅನುವಾದಿಸಿದ.

ಒಟ್ಟಾರೆ ಜ್ಞಾನೇಶ್ವರನಂತೆ ಭಾರತದ ವೈದಿಕ ಧರ್ಮದ ಸಂಪ್ರದಾಯವನ್ನು ವಿರೋಧಿಸಿ ಗೀತೆಯ ಬೇರೆ ಬೇರೆ ಭಾಷೆಗಳಲ್ಲಿ ಮತ್ತೆ ಮತ್ತೆ ಅನುವಾದವಾದದ್ದು ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ. ತಿಲಕ್, ಮಹಾತ್ಮಗಾಂಧಿ, ವಿನೋಬಾಭಾವೆ ಮುಂತಾದವರು ಗೀತೆಯನ್ನು ಅನುವಾದಿಸಿ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ.

ಈ ಕೃತಿ ಆ ಹೊತ್ತಿಗಾಗಲೇ ಪ್ರಚಲಿತವಾಗಿದ್ದ ವಾರಕರಿ ಪಂಥಕ್ಕೆ ತುಂಬು ಭಕ್ತಿಯ ಆಯಾಮವನ್ನು ತಂದು ಕೊಟ್ಟಿತು.

ಉಭಾರಿಲಾ ಧ್ವಜ ತಿಹೀ ಲೋಕಾವರೀ |
ಐಸೀ ಚರಾಚರೀ ಕೀರ್ತಿ ಜ್ಯಾಚೀ ||

(ಮೂರು ಲೋಕಗಳಲ್ಲಿಯೂ ಧ್ವಜವನ್ನು ನಿಲ್ಲಿಸಿದನು, ಇಂತಹುದು ಚರಾಚರ ದೊಳಗೆಲ್ಲ ಅವನ ಕೀರ್ತಿಯು) ಎಂಬುದಾಗಿ ಸಂತರು ಕೊಂಡಾಡಿದ್ದಾರೆ.

ಗೀತೆಯ ಅನುವಾದದ ಬಗ್ಗೆ ಸದಾನಂದ ಮೋರೆ ಅವರು ಹೇಳಿರುವ ಮಾತುಗಳು ಅವಶ್ಯ ಉಲ್ಲೇಖನೀಯ :

“ಜ್ಞಾನದೇವನಿಗೆ ಪೂರ್ವದಲ್ಲಿ ಭಾರತಾದ್ಯಂತ ಪ್ರಸ್ಥಾನತ್ರಯಗಳ ಕಲ್ಪನೆ ಮುಂದಾಗಿತ್ತು. (ಪ್ರಧಾನ) ಉಪನಿಷತ್ತುಗಳು, ಈ ಉಪನಿಷತ್ತುಗಳ ಸೂತ್ರರೂಪ ಸಾರವಾದ ಬಾದಾರಾಯಣ ವಿರಚಿತ ಬ್ರಹ್ಮಸೂತ್ರ ಮತ್ತು ಭಗವದ್‌ಗೀತೆ ಇವೇ ಮೂರು ಆ ಪ್ರಸ್ಥಾನ ತ್ರಯಗಳು. ಈ ಮೂರೂ ಪ್ರಸ್ಥಾನಗಳ ಮೇಲೆ ಭಾಷ್ಯವನ್ನು ಬರೆದು ಅವುಗಳನ್ನು ನಮಗೆ ಹೇಳುತ್ತಾ ಬಂದಿದ್ದುದು ಅಭಿಪ್ರೇತ ವಿಷಯವೇ. ಶಂಕರ, ರಾಮಾನುಜಾದಿ ಪೂರ್ವಾಚಾರ್ಯರು ಹೀಗೆ ತೋರಿಸುವ ಪ್ರಘಾತವನ್ನು ಮಾಡಿಕೊಂಡೇ ಬಂದಿದ್ದರು. ಆದರೆ ಈ ಭಾಷ್ಯಗಳೆಲ್ಲ ಸಂಸ್ಕೃತ ಭಾಷೆಯಲ್ಲಿದ್ದುವು. ಜ್ಞಾನದೇವನು ಇವುಗಳಲ್ಲಿ ಮೊದಲೆರಡು ಕೃತಿಗಳಾದ ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳನ್ನು ಬಿಟ್ಟು ಕೇವಲ ಗೀತೆಯ ಮೇಲಷ್ಟೆ ಭಾಷ್ಯವನ್ನು ಬರೆದ. ಅದು ಕೂಡಾ ಮರಾಠಿ ಭಾಷೆಯಲ್ಲಿ ಮತ್ತು ಹೆಣ್ಣು ಮಕ್ಕಳಿಂದ ನಿರ್ಮಿತವಾದ ಗೇಯ ಮಟ್ಟು ಎನಿಸಿದ ಓವಿ ಛಂದಸ್ಸಿನಲ್ಲಿ. ವೇದಗಳು ನಿದ್ರಸ್ತ ಪರಮೇಶ್ವರನ ನಿಃಶ್ವಾಸದಿಂದ ಬಂದುವುಗಳಾಗಿವೆ. ಆದರೆ ಗೀತೆ ಸ್ವತಃ ಪರಮೇಶ್ವರನು ಅರ್ಜುನನನ್ನು ಕುರಿತು ಹೇಳಿದುದಾಗಿದೆ. ಹಾಗಾಗಿ ಗೀತೆಯ ಪ್ರಮಾಣ ದರ್ಜೆ ವೇದಗಳಿಗಿಂತ ಹೆಚ್ಚಿನದು. ಈ ವಿಚಾರಗಳ ಮೂಲಕವೇ ಉಪನಿಷತ್ತುಗಳಿಗೆ ಹೇಳಲಾಗಿರುವ ಶ್ರುತಿ ಮತ್ತು ಗೀತೆಗೆ ಹೇಳಲಾಗಿರುವ ಸ್ಮೃತಿ (ಅಂದರೆ ಗೌಣ) ಎಂದೊಪ್ಪುವ ಪೂರ್ವಾಚಾರ್ಯರಿಗೆ ಭೇದವನ್ನು ಉಂಟುಮಾಡಿದೆ.” (ಮಹಾರಾಷ್ಟ್ರ ಟೈಂಸ್‌-೧೫-೦೨೧೯೯೭, ವಾರಕರಿ ಪಂಥ ಆಣಿ ಜಾತಿ ವ್ಯವಸ್ಥಾ)

ಅಲ್ಲಮ ಪ್ರಭುವಿನಂತೆ ಅದ್ವೈತಿಯೂ ಅನುಭಾವಿಯೂ ಆದ ಜ್ಞಾನೇಶ್ವರ ಶಿವ ಮತ್ತು ಶಕ್ತಿಯರ ಅಪರೂಪದ ದಾಂಪತ್ಯದಂತೆ ಅದ್ವೈತವನ್ನು ತನ್ನ ‘ಜ್ಞಾನೇಶ್ವರಿ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾನೆ. ಎರಡು ಕಣ್ಣುಗಳಿಂದ ನೋಡುವ ನೋಟವು ಎರಡಲ್ಲ ಒಂದೇ. ಹಾಗೆಯೇ ಎರಡು ದಡಗಳು ಇದ್ದರೂ ನದಿ ಮಾತ್ರ ಒಂದೇ. ಎರಡು ತುಟಿಗಳ ಮೂಲಕ ಹೊರಡುವ ಮಾತು ಒಂದೇ ಸ್ವರೂಪದ್ದು ಎಂಬ ಸ್ಪಷ್ಟ ದೃಷ್ಟಿಯು ಜ್ಞಾನೇಶ್ವರನದ್ದು. ತನ್ನ ಗುರುವೂ ಹಿರಿಯ ಸೋದರನೂ ಆದ ನಿವೃತ್ತಿನಾಥ ಅತ್ಯಂತ ಮೌನಿಯಾಗಿದ್ದುದಕ್ಕೆ ತದ್ವಿರುದ್ಧನಾಗಿದ್ದ ಜ್ಞಾನೇಶ್ವರ. ಇದು ಕೂಡಾ ಗುರು ನಿವೃತ್ತಿಯ ಆಜ್ಞೆಯ ಮೇರೆಗೆ ಶಿರಸಾವಹಿಸಿ ಪಾಲಿಸಿದುದರ ಫಲವಾಗಿದೆ ಎಂದು ಸ್ವತಃ ಜ್ಞಾನೇಶ್ವರನೇ ಒಂದೆಡೆಯಲ್ಲಿ ಹೇಳಿಕೊಂಡಿದ್ದಾನೆ. ಜ್ಞಾನೇಶ್ವರ ಶಬ್ದವಾದರೆ, ನಿವೃತ್ತಿ ನಿಶ್ಯಬ್ದವಾಗಿ ಮಹಾರಾಷ್ಟ್ರದ ಧಾರ್ಮಿಕ ಕ್ಷಿತಿಜವನ್ನು ತುಂಬಿದವರಾಗಿದ್ದಾರೆ. ಜ್ಞಾನದೇವನಿಗೆ ಸಮಕಾಲೀನವಾದ ನಾಮದೇವ ಮುಂತಾದವರು ಜ್ಞಾನದೇವನ ಭಕ್ತಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿ ಪಂಢರಾಪುರದತ್ತ ವಿಠ್ಠಲ ಭಕ್ತಿಯ ಮಹಾಪೂರವನ್ನೇ ಹರಿಸಿದರು.

ಕರ್ಮಯೋಗಿ, ಜ್ಞಾನಯೋಗಿ, ಭಕ್ತಿಯೋಗಿ ಮತ್ತು ವಿರಕ್ತಯೋಗಿ ಎನಿಸಿದ್ದನು ಜ್ಞಾನದೇವ. ನಾಥ ಪಂಥದಿಂದ ಪ್ರಭಾವಿತನಾದ ಜ್ಞಾನೇಶ್ವರನು ಈ ಮೊದಲೇ ಹೇಳಿದಂತೆ ಅದ್ವೈತಿ. ಅದಕ್ಕೆ ಕಾರಣ ಅವನಿಗೆ ಹೆಚ್ಚು ಪ್ರಭಾವ ಬೀರಿದ್ದ ಶಂಕರಾಚಾರ್ಯರ ಅದ್ವೈತ ಚಿಂತನೆಗಳು. ನಾಥ ಪಂಥವು ಸಾಂಪ್ರದಾಯಿಕ ವೈದಿಕ ಧರ್ಮಕ್ಕೆ ತನ್ನ ವಿಶಾಲ ನೆಲೆಯಿಂದ ವಿರೋಧ ಮಾಡಿತ್ತು. ಸ್ತ್ರೀಯರೂ ಸೇರಿದಂತೆ ಸರ್ವಜಾತಿಯ ಜನರಿಗೆ ಇದು ಪ್ರವೇಶಾವಕಾಶವನ್ನು ಒದಗಿಸಿ ಭಕ್ತಿಯ ಸ್ವರೂಪಕ್ಕೆ ಒಂದು ಹೊಸ ಆಯಾಮವನ್ನು ತಂದಿದ್ದಿತು. ಜ್ಞಾನೇಶ್ವರ ಈ ಪಂಥಕ್ಕೆ ಸೇರಿದರೂ ತನ್ನದೇ ಆದ ಒಂದು ವಿಶಿಷ್ಟ ದೃಷ್ಟಿಕೋನದ ಮೂಲಕ ಅದಕ್ಕೆ ಹೊಸ ಆಯಾಮವನ್ನು ತಂದನೆಂದು ಹೇಳಲಾಗಿದೆ: “ಈ ಸ್ಥಿತಿಯಲ್ಲಿ ಉಪದೇಶ ದೀಕ್ಷೆಯನ್ನು ಜ್ಞಾನೇಶ್ವರನು ಪಡೆದನು ಎಂಬುದು ನಿಜ. ಆದರೆ ಈ ಮೊದಲೇ ಜ್ಞಾನೇಶ್ವರನಲ್ಲಿ ಮೋಕ್ಷ ಪ್ರಾಪ್ತಿಯ ಕಲ್ಪನೆಯು ಮತ್ತು ಅದರ ಸಾಧನೆ, ಸಿದ್ಧಿಯ ಬಗೆಗೆ ಅರಿವು ಪೂರ್ಣ ಸ್ವರೂಪದಲ್ಲಿದ್ದಿತು. ಈ ವಿಚಾರಗಳು ಬದ್ಧ ಮೂಲವಾಗಿದ್ದುದರಿಂದ ಅದಕ್ಕೆ ನಾಥ ಸಂಪ್ರದಾಯದ ತಾತ್ತ್ವಿಕ ಚೌಕಟ್ಟಿನಿಂದ ಪೂರ್ಣತ್ವ ಸಾಧ್ಯವಾಗುವಂತಿರಲಿಲ್ಲ. ಹಾಗಾಗಿ ಆತನಲ್ಲಿ ಆ ಪಂಥದ ಅಭಿಪ್ರಾಯಗಳು ಮತ್ತು ಮಾನಸಿಕ ಭಾವನೆಗಳು ಬಹಳಷ್ಟು ದಿನಗಳ ತನಕ ಗಟ್ಟಿಯಾಗಿ ನಿಂತವು. ಕೊನೆಗೆ ಇವೆರಡಕ್ಕೂ ಒಂದು ಹೊಸ ಪ್ರವಾಹವನ್ನು ತರುವುದರ ಬಗ್ಗೆ ಗಾಢವಾಗಿ ಆಲೋಚಿಸಿದ. ಜ್ಞಾನೇಶ್ವರನಿಗೆ ಪೂರ್ವ ಶಿಕ್ಷಣ ಮತ್ತು ಸಂಸ್ಕಾರವಾಗಿ ಶಂಕರಾಚಾರ್ಯರ ಚಿಂತನೆಗಳು ಕರತಲಾಮಲಕವಾಗಿದ್ದವು. ಆದರೆ ಶಂಕರಾಚಾರ್ಯರ ಸೃಷ್ಟಿಯಲ್ಲಿಯೂ ಸ್ತ್ರೀ ಶೂದ್ರರಿಗೆ ಮೋಕ್ಷದ ನೆಲೆ ಮುಕ್ತವಾಗಿರಲಿಲ್ಲ. ಅಲ್ಲದೆ ಕಲ್ಪಿತ ಅವಿದ್ಯೆಯ ನೆಲೆಯಿಂದ ಸೃಷ್ಟಿಸಿದ್ದ ಮಾಯಾ ಸಿದ್ಧಾಂತದಲ್ಲಿ ಒಂದು ಬಗೆಯ ಔದಾಸೀನ್ಯದಿಂದಾಗಿ ನೈರಾಶ್ಯದ ಮೋಡವು ಆವರಿಸಿದಂತಾಗಿತ್ತು. ಇದು ಜ್ಞಾನೇಶ್ವರನಿಗೆ ಇಷ್ಟವಾಗಿರಲಿಲ್ಲ. ಕಾರಣ ಜ್ಞಾನೇಶ್ವರನ ಮುಖ್ಯ ದೃಷ್ಟಿಯೆಂದರೆ, ಸರ್ವ ಜಗತ್ತಿಗೂ ಆನಂದದ ಆವರಣವನ್ನು ತಂದು ಎಲ್ಲರಿಗೂ ಆಶೆಯ ಕಿರಣಗಳ ಪ್ರಕಾಶನವನ್ನು ಉಂಟು ಮಾಡುವುದಾಗಿತ್ತು. ಆ ಪ್ರಕಾಶನದೊಳಗೆ ಸ್ತ್ರೀ ಶೂದ್ರಾದಿಗಳೆಲ್ಲರಿಗೂ ಮೋಕ್ಷ ಮಾರ್ಗವನ್ನು ಸುಲಭ ಹಾಗೂ ಸ್ಪಷ್ಟವಾಗಿ ತೋರಿಸುವುದೇ ಮುಖ್ಯ. ನಮ್ಮ ಸಮಾಜವು ಚಾತುರ್ವರ್ಣ್ಯ ವಿಶಿಷ್ಟವಾದುದು. ಹಾಗಾಗಿ ಅದರೊಳಗಿನ ಎಲ್ಲಾ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಅತ್ಯಂತ ಸರಳಗೊಳಿಸಿ ಎಲ್ಲರಿಗೂ ಮೋಕ್ಷ ಮಾರ್ಗವನ್ನು ಮನಗಾಣಿಸಲು ವಿಶಿಷ್ಟವಾದ ಒಂದು ಹೊಸ ತಾತ್ತ್ವಿಕ ಚೌಕಟ್ಟನ್ನೇ ರೂಪಿಸಿದ. ಹಾಗೆಯೇ ರಾಮಾನುಜಾಚಾರ್ಯರ ಪಂಚರಾತ ಸಿದ್ಧಾಂತದ ಸವ್ಯೂಹ, ನಿರ್ವ್ಯೂಹ ಚಿಂತನೆಗಳನ್ನು (ಅದರಲ್ಲಿನ ಚಾತುರ್ವರ್ಣ್ಯ ಪದ್ಧತಿಯ ದೋಷಗಳನ್ನು ಕೈಬಿಟ್ಟು) ತನ್ನ ಕಾರ್ಯಕರಣದಲ್ಲಿ ಸೇರಿಸಿಕೊಂಡನು. ಅಂತೆಯೇ ಕಾಶ್ಮೀರ ಶೈವದ ಪ್ರಭಾವವಂತೂ ಇದ್ದೇ ಇತ್ತು :

“ವೇದು ಸಂಪನ್ನ ಹೋಯೇ ಠಾಈ | ಪರೀ ಕೃಪಣು ಆನ ನಾಹೀ |
ಜೇ ಕಾನೀ ಲಾಗಲಾ ತಿಹೀ | ವರ್ಣಾಂಚಾಚಿ ||
ಏರಾ ಭವವ್ಯಥಾ ಠೇಲೇಯಾ | ಸ್ತ್ರೀ ಶೂದ್ರಾದಿಕಾ ಪ್ರಾಣಿಯಾ |
ಅನಸವರೂ ಸಾಂಡುನೀಯಾ | ಅಸೇ ನವ್ಹೇ ||

[ವೇದ (ಜ್ಞಾನ)ವು ಸಂಪನ್ನವಾದುದು. ಅಂತೆ ಕೃಪಣುವೂ ಅಹುದು
ಕೇಳುತಿಹುದು ಕಿವಿಗಳಿಗಳಿಗೆ | ಮೂರು ವರ್ಣಂಗಳವರಿಗಷ್ಟೆ ||
ಉಳಿದವರಿಗೆಲ್ಲ ತಂದಿದೆ ಭವವ್ಯಥೆ | ಸ್ತ್ರೀ ಶೂದ್ರಾದಿ ಪ್ರಾಣಿಗಳಂತೆ |
ನೀಡಲಿಲ್ಲ ಅವಕಾಶ | ಅಂತಲ್ಲವು ಈ ಪರಿವೇಶ]