ಹೀಗೆ ಕಣ್ಣುಗಳಿಗೆ ಪರತತ್ತ್ವವನ್ನು ತೋರಿಸುತ್ತಾ, ಮನಸ್ಸಿಗೆ ಸುಖದ ಸಂಭ್ರಮವನ್ನು ತರುತ್ತಾ ವಿಶ್ವಕ್ಕೆಲ್ಲ ಮಹಾಬೋಧೆಯ ಸುಕಾಲವನ್ನು ತಂದುಕೊಟ್ಟನು. ಹಿಂದಿನ ಈ ಪ್ರಚಲಿತ ಮತದಲ್ಲಿಯೇ ಸಮಕಾಲೀನವಾಗಿದ್ದ ಎಲ್ಲಾ ಮತಗಳ ವಿಚಾರಗಳನ್ನು ಸೇರಿಸಿ ಹೊಸ ಸುಧಾರಣೆಯನ್ನು ತರಬಯಸಿದುದರ ಫಲವೇ ಜ್ಞಾನೇಶ್ವರಿ ಕೃತಿ. ಆ ಹೊತ್ತಿನಲ್ಲಿ ಜ್ಞಾನೇಶ್ವರನೊಂದಿಗೆ ಅವನ ಸೋದರರು, ಸೋದರಿ ಮುಕ್ತಾಬಾಯಿ, ಸಂತ ನಾಮದೇವ, ಸಂತ ಜನಾಬಾಯಿ, ಸಂತ ಗೋರಾಕುಂಬಾರ, ಸಂತ ಏಕನಾಥ ಸಂತ ಸಕ್ಕೂಬಾಯಿ ಸಂತ ಬಹಿಣಾಬಾಯಿ, ಸಂತ ವಿಸೋಬಾ ಖೇಚರ ಮೊದಲಾದವರು ಇದ್ದರು. ಜಾತಿಯಿಂದ ಎಲ್ಲಾ ಜನರ ಸಂಗಮವಾದಂತೆಯೇ ಮುಕ್ತಬಾಯಿ, ಜನಾಬಾಯಿಯಂಥ ಸ್ತ್ರೀಯರೂ ಜ್ಞಾನೇಶ್ವರ ಮಂಡಳಿಯಲ್ಲಿ ಸೇರಿಕೊಂಡಿದ್ದರು” (ಅದೇ). ಜ್ಞಾನೇಶ್ವರನ ಸುತ್ತ ಪವಾಡ ಕತೆಗಳು ಹುಟ್ಟಿಕೊಂಡಿರುವಂತೆಯೇ ವಾರಕರಿ ಪಂಥದ ಮತ್ತೊಬ್ಬ ಮಹಾನ್ ಸಂತನಾದ ನಾಮದೇವನ ವಿಷಯದಲ್ಲೂ ಪವಾಡ ಕಥೆಗಳಿರುವುದು ಗಮನಾರ್ಹ.

ಈ ಸಂತಾದಿಗಳು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಜನಸಾಮಾನ್ಯರ ಕಲ್ಯಾಣಕ್ಕೋಸ್ಕರವೇ ವ್ಯಯಿಸಿದರು. ಅವರ ಅಲೌಕಿಕ ಗುಣಗಳ ಪ್ರಭಾವದಿಂದಾಗಿ ಜನ ಸಾಮಾನ್ಯರು ತಮ್ಮ ಮನಸ್ಸಿನಲ್ಲಿ ಅವರಿಗೆ ‘ಮಹಾತ್ಮ’ರ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಮುಂದೆ ಈ ಜನಮಾನಸವೇ ಇಂಥ ಸಂತರ ವಿಷಯವಾಗಿ ಮತ್ತು ಅವರ ಆರಾಧ್ಯ ದೈವದ ವಿಷಯವಾಗಿ ಅನೇಕ ಚಮತ್ಕಾರಿಕ ಅದ್ಭುತ ಕತೆಗಳನ್ನೂ ಹುಟ್ಟು ಹಾಕಿತು ಎಂಬುದು ವೇದ್ಯ ಸಂಗತಿ. ಸಂತರು ಆ ಮಹಾಕಾರ್ಯಕ್ಕೆ ತೊಡಗುವಲ್ಲಿ ಒಂದು ಸ್ಪಷ್ಟ ಕಾರಣವೂ ಇತ್ತು. ಇವರೆಲ್ಲ ಬಹುತೇಕವಾಗಿ ಸಾಮಾಜಿಕ ವಿಷಮತೆಯ ಪೀಡನೆಗೆ ಒಳಗಾದ ವರ್ಗದಿಂದಲೇ ಹುಟ್ಟಿ ಬಂದವರಾಗಿದ್ದರು. ಸಾಮಾಜಿಕವಾಗಿ ಧುರೀಣರೆನಿಸಿದ ಕೆಲವರು ಆ ಸಮಾಜದ ಬಹುಜನ ಸಮುದಾಯವನ್ನು ಎಲ್ಲಾ ನೆಲೆಗಳಿಂದ ದೂರದಲ್ಲಿ ಇಟ್ಟು ಸಂಕಷ್ಟವನ್ನು ತಂದು ಹಾಕುತ್ತಿದ್ದರು. ಶೂದ್ರ, ಪತಿತ, ಅಸ್ಪೃಶ್ಯ, ಸ್ತ್ರೀ (ಅಬಲೆ, ಅಸ್ಪೃಶ್ಯೆ) ಎಂದು ಮುಂತಾಗಿ ದೂರುತ್ತಿದ್ದುದರಿಂದ ಅವರ ಮನಸ್ಸಿನಲ್ಲಿ ಪಾಪ ಭಯದ ಪ್ರಜ್ಞೆಯು ಹುಟ್ಟಿಕೊಂಡಿತ್ತು. ತಮ್ಮ ಆತ್ಮೋದ್ಧಾರದ ಬಗ್ಗೆ ಅವರಿಗೆ ಆತ್ಮವಿಶ್ವಾಸವೇ ಇಲ್ಲದಂತೆ ಮಾಡಿಬಿಟ್ಟಿದ್ದರು. ಅವರನ್ನೆಲ್ಲ ಸಂತೈಸುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಧ್ಯೇಯವುಳ್ಳ ಸಂತರು ‘ಮಾತೃ ಸ್ವರೂಪ’ದ ಪ್ರತೀಕವಾಗಿ ಬಂದರು. ತಾವು ಮಾತ್ರವಲ್ಲ, ತಾವು ಆರಾಧಿಸುತ್ತಿದ್ದ ದೈವವನ್ನೂ ‘ಮಾತೃ ಸ್ವರೂಪದ ವಿರಾಟ್ ಪ್ರತಿಮೆ’ಯಾಗಿಯೇ ಬಿಂಬಿಸಿದರು. ಎಂತಲೇ ಜ್ಞಾನೇಶ್ವರಾದಿ ಸಂತರನ್ನೆಲ್ಲ ಜನಸಾಮಾನ್ಯ ಲೋಕವು ‘ಮಾಉಲಿ’ (ತಾಯಿ) ಎಂದೇ ಸ್ಮರಿಸುತ್ತಿತ್ತು. ಇನ್ನು ಶ್ರೀವಿಠ್ಠಲನ ವಿಷದಲ್ಲಿಯಂತೂ ಭಕ್ತ ಜನಸಮೂಹ ‘ವಿಠೂ ಮಾಉಲೀ ತೂ, ಮಾಉಲೀ ಜಗಾಚೀ ಮಾಉಲೀಚೀ ಮೂರ್ತಿ ವಿಠ್ಠಲಾಚೀ’ (ವಿಠೂ ತಾಯಿಯಹೆ ನೀನು/ತಾಯಿಯಹೆ ಜಗಕೆಲ್ಲ ತಾಯಿಯ ಮೂರುತಿಯೋ ವಿಠ್ಠಲನದು) ಅಂತೆಯೇ ಮತ್ತೊಂದು ನೆಲೆಯಲ್ಲಿ ‘ದೇಹವಿದು ಪಂಢರಿ, ಆತ್ಮ ಪಾಂಡುರಂಗ’ ಎಂಬುದಾಗಿ ಅದ್ವೈತ ನೆಲೆಯಿಂದ ಪ್ರಾರ್ಥಿಸಿ ಪೂಜಿಸುತ್ತಾ ಬಂದಿದೆ. ಈ ಮಾತೃ ಸ್ವರೂಪ ಪ್ರಜ್ಞೆಯು ಒಂದು ರೀತಿಯಲ್ಲಿ ಗಂಭೀರ ಪರಿಣಾಮವನ್ನೇ ಉಂಟು ಮಾಡಿತು. ಯಾರನ್ನೂ ತಿರಸ್ಕರಿಸದೆ ಎಲ್ಲರನ್ನೂ ಸಮಾನರಾಗಿ ಕಂಡು ಎದೆಗಪ್ಪಿಕೊಂಡು ಕಾಯುವ ದೇವರಾಗಿ ಶ್ರೀವಿಠ್ಠಲನನ್ನು ರೂಪಿಸಿದರು. ಪಂಢರಪುರದಲ್ಲಿನ ವಿಠ್ಠಲ ವಿಗ್ರಹವನ್ನು ಭಕ್ತರು ಮಗುವಿನಂತೆ ಕೆನ್ನೆ ಸವರುವ, ಎದೆಗೆ ಅಪ್ಪುವ ಮತ್ತು ತಪ್ಪಿಗೆ ಕ್ಷಮಿಸುವಂತೆ ಕಿವಿ ಹಿಡಿದುಕೊಂಡು ಬೈಠಕ್ಕು ಹಾಕುವ ಮೂಲಕ ಮಾತೃ ಸ್ವರೂಪಿಯಾಗೇ ಕಾಣುತ್ತಿದ್ದಾರೆಂಬುದು ಇಲ್ಲಿ ಅವಶ್ಯ ಗಮನಿಸಬೇಕಾದಂಥ ಸಂಗತಿ. ಆ ಬಗೆಯಲ್ಲಿಯೇ ಜ್ಞಾನೇಶ್ವರಾದಿಗಳು ಶ್ರೀವಿಠ್ಠಲನ ಚರಿತ್ರೆಯನ್ನು ಅತ್ಯಂತ ಆಕರ್ಷಕವಾಗಿಯೇ ಕಟ್ಟಿದರು. ಮುಂದೆ ಭಾಗವತೋತ್ತಮನೆನಿಸಿದ ಸಂತ ಏಕನಾಥನು ಬಂದು ಪರಬ್ರಹ್ಮನ ಸರ್ವ ವೈಷ್ಣವ ಅವತಾರಾಗಳನ್ನು ಮಾತೆಯ ಸ್ವರೂಪವಾಗಿ ಕಂಡು ಕೀರ್ತಿಸಿದ್ದಾನೆ. ಮಧ್ಯಕಾಲೀನ ಯುಗದ ಧಾರ್ಮಿಕ ಸಂಕೀರ್ಣತೆಗೆ ‘ಮಾತೃತ್ವ ಪರ್ಯಾವರಣ’ದ ಮೂಲಕ ಸಂತರು ಹೊಸ ಆಶಾಮಾರ್ಗ (Oftimism)ವೊಂದನ್ನು ರೂಪಿಸಿ ಜನಮಾನಸದಲ್ಲಿ ಆತ್ಮೋದ್ಧಾರದ ಭಾವವು ಉಕ್ಕಿ ಹರಿಯುವಂತೆ ಮಾಡಿದರು ಎಂಬುದು ಗಮನಾರ್ಹವಾದ ಅಂಶ.

ಹೀಗೆ ಜ್ಞಾನೇಶ್ವರಾದಿಗಳು ತಮ್ಮ ವಿಶಿಷ್ಟ ದೃಷ್ಟಿಧೋರಣೆಗಳು ಮತ್ತು ಚಿಂತನೆಗಳ ಮೂಲಕ ಕರ್ಮಠ ಬ್ರಾಹ್ಮಣರಿಂದ ತುಂಬಿದ ಪೈಠಣ ಪ್ರದೇಶದಲ್ಲಿಯೇ ಬಂದು ನೆಲೆಸಿ ಅನೇಕ ಜನರನ್ನು ತಮ್ಮೆಡೆಗೆ ಸೆಳೆದು ಕೊಳ್ಳಲಾರಂಭಿಸಿದರು. ಅನೇಕರು ಈ ಸಂನ್ಯಾಸಿ ಮಕ್ಕಳ ವಿಷಯವಾಗಿ ಹೊಂದಿದ್ದ ಮನೋಭಾವವನ್ನು ಬದಲಾಯಿಸುವಂತೆ ಆಯಿತು ಇವರ ನಡತೆ ಮತ್ತು ಚಿಂತನೆಗಳ ಕಾರಣವಾಗಿ. ಭಕ್ತಿಯಂಥ ಶ್ರೇಷ್ಠ ಮಾರ್ಗದ ಮೂಲಕ ಜೀವನಕ್ಕೆ ಮುಕ್ತಿ ಸಾಧ್ಯವೆಂಬುದು ಇವರಲ್ಲಿ ಪ್ರತಿಪಾದಿತವಾದ ಮುಖ್ಯ ಚಿಂತನೆ. ಎಲ್ಲಾ ಆತ್ಮಗಳೂ ಒಂದೇ, ಹಾಗಾಗಿ ಯಾರೂ ಒಬ್ಬರೊಬ್ಬರ ವಿಷಯವಾಗಿ ಭೇದಭಾವ ಮತ್ತು ಮತ್ಸರವನ್ನು ತೋರಬಾರದು ಎಂಬುದಾಗಿ ಮನತಾಗುವಂತೆ ಬೋಧಿಸಿದರು. ಮುಂದೆ ಅವರು ಪೈಠಣದಿಂದ ನೇವಾಶೆಗೆ ಬಂದು ಅಲ್ಲಿ ಒಂದು ಹೊಸ ಪಂಥವೊಂದನ್ನು ಹುಟ್ಟು ಹಾಕಿದರು. ವಿಠ್ಠಲ ಭಕ್ತಿಮಂಡಲಿಯಲ್ಲಿ ಈ ಕಾರಣವಾಗಿ ಅವರಿಗೆ ಅಗ್ರೇಸರತ್ವ ಪ್ರಾಪ್ತವಾಯಿತು. ತಮ್ಮ ಬೋಧನೆ, ಸರಳ ನಡತೆಗಳ ಮೂಲಕ ಅವರು ಎಲ್ಲರಿಗೂ ಬೇಕಾದವರಾದರು ಎಂಬುದಷ್ಟೆ ಅಲ್ಲ ಅನೇಕರು ಅವರಿಗೆ ಅನುಯಾಯಿಗಳೂ ಆದರು. ಆ ಅನುಯಾಯಿಗಳಲ್ಲಿ ಅನೇಕ ಸಂತ ಶ್ರೇಷ್ಠರೂ ಇದ್ದುದು ವಿಠ್ಠಲ ಭಕ್ತಿಯು ಬಹು ಜನಪ್ರಿಯವಾಗಲು ಮುಖ್ಯ ಕಾರಣವಾಯಿತು. ಜ್ಞಾನೇಶ್ವರಾದಿ ಸೋದರರು ಈ ಭಕ್ತಿಯ ಜ್ಯೋತಿಯನ್ನು ಬೆಳಗಿಸಿ ಜೀವನ ಸಾರ್ಥಕವಾಯಿತು ಎಂಬುದಾಗಿ ಭಾವಿಸಿ ತರುಣ ವಯಸ್ಸಿನಲ್ಲಿಯೇ ಈ ಲೋಕವನ್ನು ಬಿಟ್ಟು ಹೋದರು. ನಿವೃತ್ತಿಯು ೨೬ನೆಯ ವಯಸ್ಸಿಗೆ, ಜ್ಞಾನದೇವನು ೨೨ನೆಯ ವಯಸ್ಸಿಗೆ, ಸೋಪಾನನು ೨೦ನೆಯ ವಯಸ್ಸಿಗೆ ಮತ್ತು ಅವರ ಸೋದರಿ ಮುಕ್ತಾಬಾಯಿಯು ೧೮ನೆಯ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದರು. ಆದರೆ ಈ ಚಿಕ್ಕ ವಯಸ್ಸಿನಲ್ಲಿ ಅವರು ಹೊತ್ತಿಸಿದ ಭಕ್ತಿಯ ಜ್ಯೋತಿಯು ಇಂದಿಗೂ ಪಂಢರಪುರದಲ್ಲಿ ಪ್ರಜ್ವಲಿಸುತ್ತಾ ಸರ್ವರನ್ನು ಸೆಳೆಯುತ್ತಲೇ ಇದೆ ಎಂಬುದನ್ನು ಗಮನಿಸಿದಾಗ ಜ್ಞಾನೇಶ್ವರಾದಿಗಳ ಕಾರ್ಯ ಎಷ್ಟು ಗಹನ ಗಂಭೀರವಾದುದು ಎಂಬುದನ್ನು ಮನಗಾಣಬಹುದಾಗಿದೆ. ಇಂದಿಗೂ ಆಷಾಢದ ವಾರಿಗೆ ಜ್ಞಾನದೇವನ ಜನ್ಮಸ್ಥಳ ಆಳಂದಿಯಿಂದ ಪಲ್ಲಕ್ಕಿಯು ಹೊರಟು ಪಂಢರಪುರಕ್ಕೆ ಬರುತ್ತದೆ. ಕಾರ್ತೀಕ ಮಾಸದ ವಾರಿಗೆ ಪಾಂಡುರಂಗನ ಪಲ್ಲಕ್ಕಿಯು ಹೊರಟು ಆಳಂದಿಗೆ ಬರುತ್ತಿರುವ ಸಂಪ್ರದಾಯ ಚಾಲ್ತಿಯಲ್ಲಿದೆ.

ಜ್ಞಾನೇಶ್ವರರ ನಂತರ ಸಂತ ನಾಮದೇವ, ಸಂತ ಏಕನಾಥ, ಸಂತ ಚೋಖಾಮೇಳ, ಸಂತ ಜನಾಬಾಯಿ, ಸಂತ ಶೇಖ್‌ಮಹಮದ್, ಸಂತ ತುಕಾರಾಮ ಮುಂತಾದವರೆಲ್ಲ ವಿಠ್ಠಲ ಭಕ್ತಿಗೆ ಹೆಚ್ಚಿನ ಒಲವು ಮತ್ತು ಪಾರಮ್ಯವನ್ನು ತಂದುಕೊಟ್ಟರು. ಸಂತ ನಾಮದೇವ ಭಾರತಾದ್ಯಂತ ತೀರ್ಥಯಾತ್ರೆ ಮಾಡಿ ಭಕ್ತಿಯ ಜ್ಯೋತಿಯ ಕಿರಣಗಳು ಎಲ್ಲೆಡೆ ಸೂಸುವಂತೆ ಮಾಡಿದನು. ನಾಮದೇವನ ಅನೇಕ ರಚನೆಗಳು ಪಂಜಾಬಿ ಭಾಷೆಯಲ್ಲಿಯೂ (ಗುರುಗ್ರಂಥ ಸಾಹೀಬ್) ಲಭ್ಯವಾಗಿದೆ. ಇನ್ನು ಭಾಗವತೋತ್ತಮನಾದ ಸಂತ ಏಕನಾಥನು ವಿಠ್ಠಲನ ಆರಾಧನೆಯಲ್ಲಿ ಆನಂದದ ಚಿಲುಮೆಯನ್ನು ಮೂಡಿಸಿದನು. ಸಂತ ತುಕಾರಾಮನ ಅಭಂಗಗಳು ಸರ್ವ ರಕ್ಷಕನಾದ ದಯಾಳು ಸ್ವರೂಪಿ ವಿಠ್ಠಲನ ನಾಮವಾಗಿ ಎಲ್ಲರ ಬಾಯಿಯಲ್ಲೂ ಸದಾ ಗುನುಗುನಿಸುವ ಮೂಲಕ ಅಮರತ್ವವನ್ನು ಪಡೆದಿವೆ. ಹೀಗೆ ಮಾತೃತ್ವ ಸ್ವರೂಪಿಯಾದ ವಿಠ್ಠಲ ದೇವನು ದಕ್ಷಿಣ ಭಾರತದ ಅನೇಕ ಸ್ಥಾನಗಳಲ್ಲಿ ಇಂದಿಗೂ ಪೂಜಿಸಲ್ಪಡುತ್ತಿದ್ದಾನೆ. ವಿಠ್ಠಲನ ಮುಖ್ಯ ಕ್ಷೇತ್ರ ಪಂಢರಪುರವಾದರೂ ಅವನ ಆರಾಧನೆಯ ಅನೇಕ ನೆಲೆಗಳು ದಕ್ಷಿಣ ಭಾರತದಲ್ಲಿ ಅನೇಕ ಕಡೆ ಇರುವುದನ್ನು ಕಾಣಬಹುದಾಗಿದೆ.

ಆರಂಭ ಕಾಲಕ್ಕೆ ಸಾಮಾಜಿಕವಾಗಿ ಉನ್ನತ ಶ್ರೇಣಿಯಲ್ಲಿದ್ದ ಪುರೋಹಿತ ಪಂಡಿತವರ್ಗವು ಈ ವಿಠ್ಠಲ ದೇವನಿಗೆ ತೀರಾ ವಿರೋಧವಾಗಿದ್ದು, ವಿಮುಖವಾಗಿತ್ತು. ಆದರೆ ಜ್ಞಾನೇಶ್ವರಾದಿಗಳು ಯಾವಾಗ ವಿಠ್ಠಲ ಭಕ್ತಮಂಡಳದಲ್ಲಿ ಸೇರಿಕೊಂಡು ಅದಕ್ಕೆ ಹೊಸ ಆಯಾಮದ ಮೂಲಕ ಸ್ಫೂರ್ತಿ, ಶಕ್ತಿಯನ್ನು ತುಂಬಿದರೋ ಶ್ರೀವಿಠ್ಠಲ ಪಂಥವು ಬಹಳ ಜನಪ್ರಿಯವಾಯಿತು. ಬಹಳಷ್ಟು ಜನರು ಈ ವಾರಕರಿ ಸಂಪ್ರದಾಯವನ್ನು ಸ್ವೀಕರಿಸಿದರು. ಆಷಾಢ ಮತ್ತು ಕಾರ್ತೀಕ ಏಕಾದಶಿಗಳ ಕಾಲಕ್ಕೆ ಡಿಂಡಿಯಾತ್ರೆ (ಡಿಂಡಿರ ವನ) ಕೈಗೊಂಡು ಪಂಢರಪುರಕ್ಕೆ ಕಾಲ್ನಡಿಗೆಯಲ್ಲೇ ಬರುವ ರೂಢಿ ಬೆಳೆಯಿತು. (ನಾಥ ಮತ್ತು ವೀರಶೈವ ಪಂಥವರಿಗೆ ಕದಳೀವನಗಳು ಇದ್ದ ಹಾಗೆ ವಾರಕರಿಯವರಿಗೆ ಡಿಂಡಿರವನ ಮುಖ್ಯವಾದುದಾಗಿದೆ.) ಬರುಬರುತ್ತಾ ಈ ಡಿಂಡಿ ಯಾತ್ರೆ ಹೆಚ್ಚು ಜನಪ್ರಿಯವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ವಾರಿಗಳಾಗಿ ಬರಲಾರಂಭಿಸಿದರು. ಇಂದು ಈ ಎರಡೂ ಪವಿತ್ರ ದಿನಗಳಂದು ಸೇರುವ ಭಕ್ತರ ಸಂಖ್ಯೆಯು ಸುಮಾರು ೧೫ ಲಕ್ಷಕ್ಕಿಂತಲೂ ಹೆಚ್ಚಾಗಿದೆ ಎಂಬುದು ಗಮನಾರ್ಹವಾದ ಅಂಶ. ಹೀಗೆ ದಿನೇ ದಿನೇ ಜನಪ್ರಿಯಗೊಳ್ಳುತ್ತಿದ್ದ ವಿಠ್ಠಲ ಭಕ್ತಿ ಸಂಪ್ರದಾಯವನ್ನು ಕಂಡ ಪುರೋಹಿತಶಾಹಿ ಪಂಡಿತವರ್ಗವು ಅದನ್ನು ಅನಿವಾರ್ಯವಾಗಿ ಸ್ವೀಕರಿಸಿತು. ಮಾತ್ರವಲ್ಲ ಅವೈದಿಕ ಸ್ವರೂಪವಾಗಿದ್ದ ವಿಠ್ಠಲ ದೇವರಿಗೆ ಮತ್ತು ವಿಠ್ಠಲ ಭಕ್ತಿಗೆ ವೈದಿಕ ಆಯಾಮವನ್ನು ನೀಡುವುದಕ್ಕೆ ಉಪಕ್ರಮವೊಂದನ್ನು ಹಮ್ಮಿಕೊಂಡರು. ‘ಪಾಂಡುರಂಗ ಮಹಾತ್ಮೆ’ ಎಂಬ ಸಂಸ್ಕೃತ ಭಾಷೆಯ ಗ್ರಂಥ ರಚನೆಯ ಮೂಲಕ ಈ ಸಂಪ್ರದಾಯಕ್ಕೆ ಒಂದು ಶಾಸ್ತ್ರ, ಪ್ರತಿಷ್ಠೆಯನ್ನು ತರುವ ಪ್ರಕ್ರಿಯೆಯು ಆರಂಭವಾಯಿತು. ಸಾಕ್ಷಾತ್ಕಾರಿ ಸಂತರು ಮತ್ತು ಭೋಳೆ ಭಕ್ತರ ನಡುವೆ ಸಂವಾದವನ್ನುಂಟು ಮಾಡುವ ಮುಖ್ಯ ದೃಷ್ಟಿಕೋನ ಇವರದು. ಆ ದಿಶೆಯಲ್ಲಿ ಭಾವಿಕ ಭಕ್ತರ ಮಾನಸದಲ್ಲಿ ಬೇರೂರಿ ಅರಳಿದ್ದ ಕಥೆ-ಗಾಥೆಗಳನ್ನು ಪೌರಾಣಿಕ ಆಯಾಮದಲ್ಲಿ ಕಟ್ಟಿಕೊಡುವ ಒಂದು ಮುಖ್ಯ ಕಾರ್ಯವೂ ನಡೆಯಿತು. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಭಗವದ್ಗೀತೆ, ಭಾಗವತದಲ್ಲಿ ಉದ್ಭವನು ಹೇಳಿದ ಉದ್ಭವ ಗೀತೆಗಳಂತೆ ಸಾಕ್ಷಾತ್ ವಿಠ್ಠಲ ದೇವರೇ ಸಂತ ತುಕಾರಾಮನಿಗೆ ಹೇಳಿದಂತೆ ‘ವಿಠ್ಠಲ ಗೀತೆ’ ಎಂಬ ಕೃತಿಯೊಂದು ಸಂಸ್ಕೃತದಲ್ಲಿ ರಚನೆಯಾಯಿತು. ಜೊತೆಗೆ ಭಕ್ತ ಪುಂಡರೀಕನನ್ನು ಒಳಗೊಂಡಂತೆ ಎಲ್ಲವನ್ನು ವೈದಿಕ ಋಚೆಗಳ ಮೂಲಕ ವ್ಯಾಖ್ಯಾನಿಸಿದ್ದು ಇಲ್ಲಿ ಗಮನಿಸಬೇಕಾದ ಅಂಶ. ಹಾಗೆಯೇ ಮರಾಠಿ ಭಾಷೆಯಲ್ಲಿ ಸಂತರು, ಭಕ್ತರು ರಚಿಸಿದ್ದ ಸಂತ ಧರ್ಮದ ಪ್ರಮಾಣ ಗ್ರಂಥಗಳೆನಿಸಿದ್ದ ಅನುಭವಾಮೃತ, ಚಾಂಗದೇವ ಪಾಸಷ್ಟಿ ಮತ್ತು ವಿವೇಕ ಸಿಂಧು ಮುಂತಾದ ಕೃತಿಗಳನ್ನು ಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದರು. ಪುರಾಣಾದಿ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಉಲ್ಲೇಖಗೊಂಡಿದ್ದ ವಿಠ್ಠಲ ಮತ್ತು ಪಂಢರಪುರದ ಬಗೆಗಿನ ವಿವರಗಳನ್ನು ಸಂಗ್ರಹಿಸಿ ವಿಠ್ಠಲನಿಗೆ ವೇದಕಾಲೀನ ಪ್ರತಿಷ್ಠೆಯನ್ನು ಒದಗಿಸುವ ಮೂಲಕ ವೈದಿಕೀಕರಣಗೊಳಿಸಿದ್ದನ್ನು ಡಾ. ಚಿಂ. ಢೇರೆ ಅವರು ‘ಶ್ರೀವಿಠ್ಠಲ; ಏಕ್ ಮಹಾಸಮನ್ವಯ’ ಎಂಬ ಸಂಶೋಧನ ಕೃತಿಯನ್ನು ವಿವರಣಾತ್ಮಕವಾಗಿ ದಾಖಲಿಸಿದ್ದಾರೆ.

ಪ್ರಾಕೃತ ಸ್ವರೂಪನಾಗಿದ್ದ ವಿಠ್ಠಲನನ್ನು ವೈದಿಕೀಕರಣಗೊಳಿಸಿದ ಮೇಲೆ ಭಕ್ತರ ವಿಷಯವಾಗಿಯೂ ಒಂದು ನಿರ್ದಿಷ್ಟ ಧೋರಣೆಯನ್ನು ರೂಪಿಸಲಾಯಿತು. ಪಂಢರಪುರವನ್ನು ಹೊರತುಪಡಿಸಿ ಮಿಕ್ಕ ಕಡೆಗಳಲ್ಲಿ ವಿಠ್ಠಲ ಭಕ್ತಿಯು ದರ್ಶನದ ನೆಲೆಯಿಂದಷ್ಟೇ ವ್ಯಕ್ತವಾಗುತ್ತಿದೆ. ಆದರೆ ಪಂಢರಪುರದ ವಿಠ್ಠಲನನ್ನು ಭಕ್ತರು ಅಪ್ಪಿಕೊಳ್ಳುವ, ಕೆನ್ನೆ ಸವರುವ ಮತ್ತು ಪಾದ ಮುಟ್ಟಿ ನಮಸ್ಕರಿಸುವ ಮೂಲಕ ಮೈಲಿಗೆ ಮಾಡುತ್ತಿದ್ದಾರೆ. ಹಾಗಾಗಿ ವರ್ಷಕ್ಕೊಮ್ಮೆಯಾದರೂ ಇಲ್ಲಿನ ವಿಠ್ಠಲನಿಗೆ ಮೈಲಿಗೆ ಮುಕ್ತಗೊಳಿಸಬೇಕೆಂಬ ಕಾರಣವಾಗಿ ಒಂದು ಸಂಪ್ರದಾಯವು ರೂಢಿಗೊಂಡಿತು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕುಡಾಳ ತಾಲ್ಲೂಕಿನ ವಾಲಾವಲ ಎಂಬ ಪ್ರದೇಶದಲ್ಲಿ ಒಂದು ವಿಠ್ಠಲ ಮಂದಿರವಿದೆ. ಆತ ‘ವೇದೋ ನಾರಾಯಣ’ (ಮಡಿ ಬ್ರಹ್ಮ). ವ್ಯತಿರಿಕ್ತನಾಗಿ ಪಂಢರಪುರದ ವಿಠ್ಠಲ ಮೈಲಿಗೆ ಬ್ರಹ್ಮ. ಆ ವೇದೋನಾರಾಯಣನ ಕೊರಳಲ್ಲಿಯ ತುಳಸಿ ಹಾರವನ್ನು ವರ್ಷಕ್ಕೊಮ್ಮೆ ತಂದು ಪಂಢರಪುರದ ವಿಠ್ಠಲನ ಕೊರಳಲ್ಲಿ ಹಾಕಿ, ಅಂದು ದೇವರಿಗೆ ಹೊಸ ಬಟ್ಟೆಯನ್ನು ತೊಡಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ನಿರ್ದಿಷ್ಟ ಸಮಯದವರೆಗೆ ಅಂದು ಯಾವ ಭಕ್ತರೂ ವಿಠ್ಠಲನನ್ನು ಸ್ಪರ್ಶಿಸುವ ಹಾಗಿಲ್ಲ. ‘ಭೂಮಿಯಹುದು ಮಡಿ, ಆಕಾಶವಹುದು ಮಡಿ, ಅಭಕ್ತರ ಹೃದಯದೊಳೇಕೊ ಮೈಲಿಗೆಯು’ ಎಂಬ ಸೋಪಾನ ದೇವನಂತಹ ಸಂತರ ಟೀಕೆಯ ನಡುವೆಯೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಸಂತ ಚಳವಳಿಯ ಪ್ರಭಾವ ಕಡಿಮೆಯಾದಂತೆ ವೈದಿಕರ ನೆಲೆ ಭದ್ರವಾಯಿತು. ಕೊನೆಗೆ ಎಲ್ಲರಿಗೂ ದರ್ಶನ ಸಿಗದೆ ಹೋದ ಕಾರಣ ಪುಲೆ ಮುಂತಾದವರು ಚಳವಳಿ ಮಾಡಿದರು. ಪರಿಣಾಮವಾಗಿ ೧೯೪೮ ರಿಂದೀಚೆಗೆ ಎಲ್ಲಾ ಜಾತಿ ವರ್ಗದವರು ವಿಠ್ಠಲ ದರ್ಶನದ ಅವಕಾಶವನ್ನು ಮತ್ತೆ ಪಡೆದುದೂ ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ.

ಇಷ್ಟಾಗಿಯೂ ವಿಠ್ಠಲನ ಪೂಜೆಯ ಮೂಲ ವ್ಯವಸ್ಥೆ ಇಂದಿಗೂ ಒಂದು ವರ್ಗದವರ ಕೈಯಲ್ಲಿ ಇರುವುದನ್ನು ದಿ. ಸೇತು ಮಾಧವರಾವ್ ಪಗಡಿ ಅವರು ತಮ್ಮ ‘ವಿಠ್ಠಲಾಚೇ ಮೂಲ ಆಣಿ ಕುಲ’ ಲೇಖನದಲ್ಲಿ ಹೇಳಿದ್ದಾರೆ : ‘ವಿಠ್ಠಲನ ಪೂಜಾ ವ್ಯವಸ್ಥೆ ಮಾಡುವ ಅವಕಾಶ ಬಡವೆ ಎಂಬ ಹೆಸರಿನ ಪೂಜಾರಿಗಳ ಕೈಯಲ್ಲಿದೆ. ದೇವಾಲಯದ ವ್ಯವಸ್ಥೆಯಲ್ಲಿ ಭಾಗಿಯಾಗುವ ಇತರೆ ವ್ಯಕ್ತಿಗಳೆಂದರೆ, ಸೇವಾಧಿಕಾರಿಗಳು. ಇದರಲ್ಲಿ ಪೂಜಾರರು, ಬೇನಾರಿಗಳು (ಮಂತ್ರ ಪಠಣ), ಪರಿಚಾರಕರು, ಡಿಂಗ್ರೆಗಳು ಪುರಾಣ ಹೇಳುವವರು, ದೀವಟಿಗರು (ದೀವಟಿಗೆ ಹಿಡಿಯುವವರು), ದಿಂಡೆಗಳು (ವಾದ್ಯಗಾರರು) ಇತ್ಯಾದಿ. ಇವರಲ್ಲದೆ ಸಂಗೀತ ಯುಕ್ತವಾಗಿ ಸ್ತೋತ್ರ ಮಾಡುವ ಹರಿದಾಸರೂ ಇದ್ದರು.’ ಈ ವಿಚಾರದಿಂದ ಸಂಗತವೋ ಸಂಘರ್ಷಾತ್ಮಕವೋ ಹೇಗೋ ಮೂಲಕ್ರಮ ಮತ್ತು ಉಪಕ್ರಮಗಳ ಆಚರಣೆಗಳು ಒಟ್ಟೊಟ್ಟಿಗೇ ಚಾಲ್ತಿಯಲ್ಲಿದ್ದವು ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ.

ಪಾಂಡುರಂಗ ವಿಠ್ಠಲನ ಮೂಲ ಮತ್ತು ಕುಲ

ಭಕ್ತರ ಪಾಲಿಗೆ ಬಹಳ ಹಕ್ಕಿನ ಮಾತೃ ಸ್ವರೂಪಿಯಾಗಿರುವ ವಿಠ್ಠಲ ಮೂಲತಃ ಗೋವಳಿಗರ ದೇವರು. ಮೂಲತಃ ಕಾನಡೀ (ಕನ್ನಡ) ವಿಠ್ಠಲನೆನಿಸಿದ ಈ ದೇವರ ಮೂಲವು ಬಹಳ ಸ್ಪಷ್ಟವಾಗಿ ಗೋವಳಿಗರ ಪರಂಪರೆಯಲ್ಲಿ ಇದೆ ಎಂಬುದಾಗಿ ಶ್ರೀಮತಿ ದುರ್ಗಾಬಾಯಿ ಭಾಗವತ ಅವರು ತಮ್ಮ ‘ಪೈಸ್’ ಎಂಬ ಕೃತಿಯಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ: “…ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ಇವುಗಳಲ್ಲಿಯ ಏಕಾತು ಸಂಸ್ಕೃತಿಯ ಪೂರ್ಣ ಪ್ರತೀಕವೆಂದರೆ ಪಂಢರಪುರದ ವಿಠ್ಠಲ, ಈ ಮೂರು ಪ್ರಾಂತ್ಯಗಳಲ್ಲಿ ಭಾಷಾ ಭಿನ್ನತೆ ಇದ್ದರೂ ಅವರ ಸಂಸ್ಕೃತಿಯು ಮಾತ್ರ ಒಂದೇ. ಸಂಸ್ಕೃತಿಯ ವಿಶ್ವದಲ್ಲಿ ಇದೊಂದು ಸೋಜಿಗವಲ್ಲವೆ? ಸಂಸ್ಕೃತಿಯ ಈ ಬಗೆಯ ಏಕಾತ್ಮತೆಯು ಈ ಮೂರೂ ಪ್ರದೇಶಗಳಲ್ಲಿಯ ಗುಡ್ಡಗಾಡು ಗ್ರಾಮೀಣ ವಸತಿಗಳಲ್ಲಿದ್ದು ಗೋಪ ಸಂಸ್ಕೃತಿಯಿಂದ ಹೊರ ಬಂದಿದೆ. ವಿಠ್ಠಲನು ಕನ್ನಡಿಗನು. ಆತನು ಗೋರಕ್ಷಕನು, ಗವಳಿಗನು, ಕಪ್ಪು ಕಂಬಳಿಯನ್ನು ಹೊದ್ದುಕೊಳ್ಳುವವನು. ಈತನಿಗೆ ಮಡದಿಯರಿಬ್ಬರು ರಾಹಿ-ರುಕ್ಮಿಣಿ, ರಾಹಿ ಅಥವಾ ರಾಧೆಯು ಇನ್ನೂ ಬೇರೆ ಸಂದರ್ಭಗಳಲ್ಲಿ ಕೃಷ್ಣನ ಪ್ರೇಯಸಿ, ಮಹಾರಾಷ್ಟ್ರದಲ್ಲಿ ಮಾತ್ರ ಈಕೆ ಆತನ ಮಡದಿ. ಆದರೆ ವಿಠ್ಠಲನ ನಿಜ ರಾಣಿಯೆಂದರೆ ರುಕ್ಮಿಣಿಯೇ. ಹೀಗಿದ್ದರೂ ಆತ, ಪತ್ನಿಯ ದಾಸನಲ್ಲ. ಪಂಢರಪುರದಲ್ಲಿ ಇಬ್ಬರಿಗೂ ಪ್ರತ್ಯೇಕ ದೇವಸ್ಥಾನಗಳಿವೆ. ಲೋಕ ರೂಢಿಗಳಲ್ಲಿ “ಬಂದಳೀsss ರಾಧೆ ಮುನಿದಳಾsss ರುಕ್ಮಿಣಿ” ಎಂದು ಹಾಡುತ್ತಾರೆ. ಪಂಢರಪುರದ ಮಹಾತ್ಮೆಯಲ್ಲಿಯೂ ಇದನ್ನೇ ಹೇಳಿದ್ದಾರೆ.” (ಸರಸ್ವತಿ ಗಜಾನನ ರಿಸಬೂಡಾ (ಅನು): ದಿಗಂತದಾಚೆ, ಪುಟ ೩೧, ೩೨) ಖ್ಯಾತ ಸಂಶೋಧಕಿಯೂ, ವಿಚಾರಶೀಲೆಯೂ ಆಗಿರುವ ಶ್ರೀಮತಿ ದುರ್ಗಾ ತಾಯಿ ಭಾಗವತರು ಮುಖ್ಯವಾದ ಮಾಹಿತಿಗಳ ಮೂಲಕ ಗಮನ ಸೆಳೆಯುತ್ತಾರೆ. ಕನ್ನಡ ದೇವರು ವಿಠ್ಠಲ ಎಂಬುದು ಈಗಾಗಲೇ ನಿರ್ಧರಿತವಾದ ವಿಷಯ. ಕಾರಣ ವಿಠ್ಠಲನ ಮುಖ್ಯ ಕ್ಷೇತ್ರವಾದ ಪಂಢರಪುರವು ಒಂದು ಕಾಲಕ್ಕೆ ಕನ್ನಡ ಸಮ್ರಾಟರ ಆಳ್ವಿಕೆಗೆ ಒಳಪಟ್ಟುದಾಗಿತ್ತು. ವಿಜಯನಗರ ಸಾಮ್ರಾಜ್ಯ ಅಥವಾ ಹಂಪಿಯ ವಿಜಯ ವಿಠ್ಠಲ ದೇವಾಲಯದಿಂದ ವಿಠ್ಠಲನ ವಿಗ್ರಹವನ್ನು ಪಂಢರಪುರಕ್ಕೆ ಭಾನುದಾಸನೆಂಬ ಭಕ್ತನು ಕೊಂಡೊಯ್ದನು. ಆದರೆ ಇದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ‘ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳ ಏಕಾತು ಸಂಸ್ಕೃತಿಯ ಪೂರ್ಣ ಪ್ರತೀಕ’ ಎಂಬ ವಿಚಾರ. (ಗೋವಾ ಸೇರಿದಂತೆ ದಕ್ಷಿಣ ಭಾರತದ ಇತರೆ ಭಾಗಗಳಲ್ಲೂ ವಿಠ್ಠಲನು ಜನರಿಗೆಲ್ಲ ಆರಾಧ್ಯ ದೈವನಾಗಿದ್ದಾನೆ) ‘ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಲಿಂಗಾಯತ ಸಂಪ್ರದಾಯದ ಕಾರಣ ವೈಷ್ಣವ ಮತ್ತು ಶೈವರ ನಡುವೆ ಕಡು ಹಗೆತನ ಬೆಳೆದದ್ದು ಸ್ಪಷ್ಟವಾಗಿ ಕಾಣುತ್ತದೆ. ವಿಠ್ಠಲನ ಸಂಪ್ರದಾಯದಲ್ಲಿ ಮಾತ್ರ ಈ ರೀತಿ ಕಂಡು ಬರುವುದಿಲ್ಲ. ವಿಠ್ಠಲನು ವಿಷ್ಣು ರೂಪ ಹೇಗೋ, ಅಷ್ಟೇ ಶಿವರೂಪಿಯೂ ಹೌದು. ಇದೇ ಇದಕ್ಕೆ ಕಾರಣ, ಜ್ಞಾನೇಶ್ವರನಿಗೆ ಉಂಟಾದ ಪ್ರೇರಣೆ ನಾಥ ಸಂಪ್ರದಾಯದಿಂದ ಬಂದದ್ದು. ಈ ಸಂಪ್ರದಾಯ ಶಿವಪಾರಮ್ಯವನ್ನು ಹೇಳುವಂತಹದ್ದು. ‘ವಾರಕರಿಗಳು ವೈಷ್ಣವರೂ ಈ ಎರಡೂ ಪಂಥಗಳವರ ದೃಷ್ಟಿಯೂ ವಿಠ್ಠಲನತ್ತ’ ಎಂದು ಅದೇ ಲೇಖನದಲ್ಲಿ ಮತ್ತೊಂದೆಡೆ ಹೇಳಿದ್ದಾರೆ ದುರ್ಗಾ ಭಾಗವತರು. ಸಂತ ನಾಮದೇವನು ಅಭಂಗವೊಂದರಲ್ಲಿ ‘ಮುಕುಂದ ಮುರಾರಿ ಪ್ರದ್ಯುಮ್ನ ಕೇಶವ ನೀನೇ ಸದಾಶಿವ ಶಾಂತ ರೂಪ’ ಎಂದು ಹೇಳಿರುವುದು ಈ ಹಿನ್ನೆಲೆಯಲ್ಲಿ ಗಮನಾರ್ಹ. ಇನ್ನೊಂದು ಮುಖ್ಯ ವಿಚಾರ ಕುರುಬ ಅರ್ಥಾತ್ ಧನೇಗರ್ ಜನಾಂಗದವರಲ್ಲಿ ಈ ಕುರಿತಂತೆ ಸಾಕಷ್ಟು ಸಾಂಪ್ರದಾಯಿಕ ಆಚರಣೆಗಳಿವೆ ಎಂಬುದು. ಈ ಅಂಶವನ್ನು ಮುಖ್ಯ ವಾಗಿಟ್ಟುಕೊಂಡು ಪಾಶ್ಚಾತ್ಯ ವಿದ್ವಾಂಸರೂ ಖ್ಯಾತ ಸಂಸ್ಕೃತಿ ಸಂಶೋಧಕರೂ ಆದ ಶ್ರೀ ರೆವರ‍್ಹೆಂಡ್ ದಲರಿ ಮತ್ತು ಡಾ. ಸೋಂಥಾಮಯರ್ ಹಾಗೂ ಮಹಾರಾಷ್ಟ್ರದ ಖ್ಯಾತ ಸಂಶೋಧಕರಾದ ಡಾ. ರಾಮಚಂದ್ರ ಚಿಂತಾಮಣ ಢೇರೆಯವರು ವಿಠ್ಠಲನ ಬಗ್ಗೆ ಸಂಶೋಧನೆ ಮಾಡಿ ಹಲವಾರು ಕುತೂಹಲಕಾರಿ ಅಂಶಗಳನ್ನು ಕಂಡರಿಸಿದ್ದಾರೆ :

“ವಿಠ್ಠಲನ ಮೂಲ ಉಪಾಸಕರಾದ ಆಂಧ್ರ-ಕರ್ನಾಟಕದ ಗೊಲ್ಲ-ಕುರುಬರು ಹಾಗೂ ಮಹಾರಾಷ್ಟ್ರದ ವಿಶೇಷವಾಗಿ ದಕ್ಷಿಣ ಮಹಾರಾಷ್ಟ್ರದ ಗೌಳಿ-ಧನಗರ ಇವರನ್ನು ಇಂದಿಗೂ ಆಂಧ್ರ-ಕರ್ನಾಟಕಗಳಲ್ಲಿ ‘ಯಾದವ’ರೆಂದು ಗುರುತಿಸುತ್ತಾರೆ. ಯಾದವರೆಂದರೆ, ದನಕರುಗಳನ್ನು ಅಥವಾ ಆಡು-ಕುರಿಗಳನ್ನು ಸಾಕುವ ಜನರು. ನಾವು ಯಾರನ್ನು ಗೋವಳಿಗರೆಂದು (Pastoral Tribes) ಗುರುತಿಸುತ್ತೇವೆಯೋ ಆ ಜನರು. ಆಂಧ್ರ-ಕರ್ನಾಟಕದಲ್ಲಿ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ತಿರುಗಾಡುವಾಗ ನಮಗೆ ಪ್ರತಿ ರಸ್ತೆಯಲ್ಲಿ ಈ ಗೋವಳಿಗಳು ತಮ್ಮ ಪಶುಧನಗಳ ಸಾಮಗ್ರಿಗಳನ್ನು ತೆಗೆದುಕೊಂಡು ಮೈಲುಗಟ್ಟಲೆ ರಸ್ತೆ ತುಳಿಯುತ್ತಾ ಸಾಗುತ್ತಿರುವುದು ಕಂಡು ಬರುತ್ತದೆ. ಅಲ್ಲಲ್ಲಿ ಅವರ ವಾಡೆಗಳೂ ಕಾಣಸಿಗುತ್ತವೆ. ‘ಗೊಲ್ಲಪಳ್ಳಿ’, ‘ಕುರುಬರ ಹಳ್ಳಿ’ ಇಂಥ ಗ್ರಾಮನಾಮಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಬೀರೋಬಾ, ಮ್ಹಸ್ಕೋಬಾ, ಮೈಲಾರ – ಇಂಥ ಅವರ ದೇವರ ತಾಣಗಳು ಆ ಭಾಗದ ವಸತಿಗಳಲ್ಲಿ ಇರುವುದನ್ನು ನೋಡುತ್ತೇವೆ. ಕಾಲಿಗೆ ದಪ್ಪನಾದ ಮೆಟ್ಟು ಸೊಂಟಕ್ಕೆ ತ್ರಿಕೋನ ಬಟ್ಟೆಯ ತುಂಡು, ಕೈಯಲ್ಲಿ ಕೋಲು, ತಲೆಗೆ ಬಣ್ಣದ ಮುಂಡಾಸು ಮತ್ತು ಹೆಗಲಿಗೆ ಕಂಬಳಿ – ಇಂಥ ವೇಷದಲ್ಲಿ ಮಿರಿ ಮಿರಿ ಮಿಂಚುವ ಕುರುಬರು- ಇದು ಈ ಪ್ರದೇಶದ ಒಂದು ಸರ್ವೇಸಾಮಾನ್ಯ ದೃಶ್ಯವಾಗಿದೆ. … ಕರ್ನಾಟಕದಲ್ಲಿ ಸುಮಾರು ೧/೬ ರಷ್ಟು ಜನ ಇವತ್ತಿಗೂ ತಮ್ಮ ಮೂಲದ ವೈಶಿಷ್ಟ್ಯವನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಮಹಾರಾಷ್ಟ್ರದ ಹಲವು ಊರುಗಳಲ್ಲಿ ಕುರುಬರು ಬಹುಸಂಖ್ಯೆಯಲ್ಲಿದ್ದಾರೆ. … ಶ್ರೀ ವಿಠ್ಠಲನ ಪ್ರಗತ ವೈಷ್ಣವ ಉಪಾಸನೆಯ ಆದ್ಯ ಮಹಾಕೇಂದ್ರವಾದ ಪಂಢರಪುರವು, ಆ ಪರಿಸರವು ಇಂದಿಗೂ ಧನಗರರ ವಸತಿಯಿಂದಲೇ ವ್ಯಾಪಿಸಿಕೊಂಡಿದೆ ಮತ್ತು ಈ ಹಿಂದಿನ ಕನ್ನಡ ಪ್ರಭಾವದ ಅಸಂಖ್ಯ ಗುರುತನ್ನು ಇವತ್ತಿಗೂ ಉಳಿಸಿಕೊಂಡಿದೆ.

ಶ್ರೀವಿಠ್ಠಲನ ಮೂಲ ಉಪಾಸಕರಾದ ಗೌಳಿ-ಕುರುಬರು ಅಥವಾ ಗೊಲ್ಲ-ಕುರುಬರು ಇವರನ್ನು ಹೇಗೆ ‘ಯಾದವ’ರೆಂದು ಗುರುತಿಸುತ್ತೇವೋ, ಹಾಗೆಯೇ ವಿಠ್ಠಲೋಪಾಸನೆಯ ವೈಭವವನ್ನು ಯಾರು ಬೆಳೆಸಿದರೋ, ಅಂಥ ಹಲವು ರಾಜ ಮನೆತನದವರೂ ಯಾದವರೆಂದು ಗುರುತಿಸಲ್ಪಟ್ಟಿದ್ದಾರೆ. ಪಂಢರಪುರದ ವಿಠ್ಠಲನೊಂದಿಗೆ ಸಂಬಂಧ ಹೊಂದಿದಂಥ ಉಪಲಬ್ದ ಶಿಲಾಶಾಸನಗಳಲ್ಲಿ ಕೃಷ್ಣ, ಮಹಾದೇವ ಹಾಗೂ ರಾಮಚಂದ್ರ – ದೇವಗಿರಿಯ ಈ ಮೂರೂ ರಾಜರುಗಳು ಯಾದವ ಕುಲದವರಾಗಿದ್ದಾರೆ. ವೀರ ಸೋಮೇಶ್ವರನೆಂಬ ಹೊಯ್ಸಳ ವಂಶದ ರಾಜನು ಸ್ವಂತಕ್ಕೆ ಯಾದವನೆಂದು ಕರೆಸಿಕೊಂಡ ಕುಲದವನಾಗಿದ್ದಾನೆ. ರಾಮಾನುಜಾಚಾರ್ಯರ ಮುಂದಾಳುತನದಲ್ಲಿ ಯಾರು ವೆಂಕಟೇಶನ ಅಂದರೆ ವಿಠ್ಠಲನೊಂದಿಗೆ ಹಲವು ತೆರದಲ್ಲಿ ಸಮಾನ ಧರ್ಮವನ್ನು ಪ್ರಕಟಪಡಿಸುವ ತಿರಮಲೈನ ದೇವರ ವೈಷ್ಣವೀಕರಣವನ್ನು ದೃಢಪಡಿಸಿದನೋ ಮತ್ತು ವೆಂಕಟೇಶನ ಉಪಾಸನೆಗೆ ‘ಶ್ರೀಮಂತ’ ರೂಪ ನೀಡಿದನೋ, ಆ ತೊಂಡೈ ಮಂಡಲದ ರಾಜ ‘ಯಾದವರಾಯ’ನು ಇದೇ ಹೆಸರಿನಲ್ಲಿ ಇತಿಹಾಸ ಪ್ರಸಿದ್ಧನೆನಿಸಿದ್ದಾನೆ. ವಿಜಯನಗರದಲ್ಲಿ ಅಸಾಧಾರಣ ಶಿಲ್ಪ ಸೌಂದರ್ಯದಿಂದ ಕೂಡಿದ ವಿಜಯ ವಿಠ್ಠಲ ಮಂದಿರವನ್ನು ನಿರ್ಮಿಸಿ ಆಂಧ್ರ-ಕರ್ನಾಟಕಗಳಲ್ಲಿ ವೈಷ್ಣವ ವಿಠ್ಠಲ ಭಕ್ತಿಗೆ ಪುನಃ ಸಮೃದ್ಧಿಯನ್ನು ತಂದಂಥ ವಿಜಯನಗರದ ಆದ್ಯ ಸಾಮ್ರಾಟನು ‘ತಾನು ಯದುಕುಲೀನ’ನೆಂದು ಅಭಿಮಾನದಿಂದ ಹೇಳಿಕೊಂಡಿದ್ದಾನೆ. ಮೂಲದಲ್ಲಿ ‘ಯಾದವ ಜನ’ರ ದೇವರಾದ ವಿಠ್ಠಲನಿಗೆ ಅಸಾಧಾರಣವಾದ ಪ್ರತಿಷ್ಠೆಯನ್ನು ತಂದು ಕೊಡಲು ‘ಯಾದವ ರಾಜಕುಲ’ವು ತನ್ನೆಲ್ಲ ಶ್ರದ್ಧೆ ಸಂಪತ್ತನ್ನು ಕಳೆದುಕೊಳ್ಳಬೇಕಾದದ್ದು ಕೇವಲ ಒಂದು ಯೋಗಾಯೋಗ ಎನ್ನೋಣವೇ?…. ಆಂಧ್ರ-ಕರ್ನಾಟಕ-ಮಹಾರಾಷ್ಟ್ರ ಈ ಮೂರೂ ಪ್ರದೇಶಗಳಲ್ಲಿನ ಹಲವು ಯಾದವ ರಾಜಕುಲದಲ್ಲಿ ಯಾವ ಅರ್ಥದಲ್ಲಿ ವಿಠ್ಠಲೋಪಾಸನೆಯ ಉನ್ನಯನದಲ್ಲಿ ಆತ್ಮೀಯ ಸಹಭಾಗ ಕಾಣುತ್ತದೆಯೋ, ಆ ಅರ್ಥದಲ್ಲಿ ಅದನ್ನು ಯೋಗಾ ಯೋಗ ಅನ್ನುವಂತಿಲ್ಲ……” (ರಾ.ಚಿಂ. ಢೇರೆ, ಶ್ರೀವಿಠ್ಠಲ ಒಂದು ಮಹಾಸಮನ್ವಯ, ಪುಟ ೨೮೩ ರಿಂದ ೨೮೫)

ದುರ್ಗಾ ತಾಯಿಯವರಂತೆ ಡಾ. ಚಿಂ. ಢೇರೆಯವರೂ ಕೂಡ ವಿಠ್ಠಲನ ಮೂಲ ಆರಾಧಕರು ಧನಗರ್ ಅಥವಾ ಕುರುಬರು ಎಂಬುದನ್ನು ಸ್ಪಷ್ಟವಾಗಿಯೇ ಹೇಳಿರುತ್ತಾರೆ. ನೀಲಗಿರಿ ಬೆಟ್ಟಗಳಿಂದ ಹಿಡಿದು ಗುಜರಾತಿನವರೆವಿಗೂ ಕುರುಬ ಜನಾಂಗದ ಸಂಚನಲವಿದ್ದಿತೆಂದು ಶಂಬಾ ಒಂದೆಡೆ ಹೇಳಿದ್ದಾರೆ. ದಾಯಾದಿ ಮತ್ಸರ ಕಾರಣವಾಗಿ ಯಾದವ ಅರಸರು ಎರಡು ಬಣವಾದರು. ಕರ್ನಾಟಕದಲ್ಲಿ ಹೊಯ್ಸಳರೆನಿಸಿದ ರಾಜವಂಶವು ದ್ವಾರ ಸಮುದ್ರದನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಭಾರ ನಡೆಸುತ್ತಿತ್ತು. ಹಾಗೆಯೇ ಮಹಾರಾಷ್ಟ್ರದಲ್ಲಿ ಯಾದವರು ದೇವಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಈ ದೇವಗಿರಿ ಯಾದವರ ಮಂತ್ರಿ ಹೇಮಾಡ ಪಂತನು ಕರ್ನಾಟಕದ ಶಿಲ್ಪವನ್ನು ಅಧ್ಯಯನ ಮಾಡಿ ಅದರಂತೆ ಮಹಾರಾಷ್ಟ್ರದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದನೆಂಬುದನ್ನು ಇತಿಹಾಸದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಮೊದಲ ಹೆಸರು ಬಿಟ್ಟಿದೇವ. ವಿಠ್ಠಲ>ಬಿಟ್ಟಲ ಎಂಬ ರೂಪ ಬದಲಾವಣೆ ಸಾಧ್ಯ. ಪಂಢರಪುರದ ವಿಠ್ಠಲ ಮಂದಿರದಲ್ಲಿ ಹೊಯ್ಸಳರ ಶಾಸನವು ಏಕಿದೆ ಎಂಬುದನ್ನು ಈ ಹಿನ್ನೆಲೆಯಲ್ಲಿ ಆಲೋಚನೆ ಮಾಡಬಹುದಾಗಿದೆ. ಹಾಗೆಯೇ ಮಹಾರಾಷ್ಟ್ರದ ಮತ್ತೊಂದು ಮುಖ್ಯ ದೇವರಾದ ಖಂಡೋಬಾನ ಉಪಾಸನೆಯನ್ನು ಹೆಚ್ಚು ಪ್ರೋತ್ಸಾಹಿಸಿದವರು ಇಂದೂರಿನ (ಮಧ್ಯಪ್ರದೇಶ) ದೊರೆ ಹೋಳ್ಕರ್. ಈತನು ಕುರುಬ ಪಂಗಡಕ್ಕೆ ಸೇರಿದವನೆಂದು ಢೇರೆಯವರು ಐತಿಹಾಸಿಕ ಆಧಾರದಿಂದ ಹೇಳಿದ್ದಾರೆ. ಒಟ್ಟಾರೆ ವಿಠ್ಠಲ ಸಂಪ್ರದಾಯವು ಯಾದವ (ಗವಳಿ-ಕುರುಬರು) ಕುಲದವರಿಂದಲೇ ಹುಟ್ಟಿದುದು ಮತ್ತು ಆ ದೇವರ ಸ್ಫೂರ್ತಿಯಿಂದಲೇ ಅನೇಕ ರಾಜ್ಯ-ಸಾಮ್ರಾಜ್ಯಗಳು ಸ್ಥಾಪನೆಗೊಂಡುದುದಾಗಿದೆ. ಈ ಯಾದವ ರಾಜ ಕುಲಗಳವರೆಲ್ಲ ತಮ್ಮ ಈ ಪಾರಂಪರಿಕ ದೇವತೆ-ಗೌಳಿಗರ ದೇವರು-ಯನ್ನು ವಿಷ್ಣು-ಕೃಷ್ಣನ ರೂಪದಲ್ಲಿ ಜನಪ್ರಿಯಗೊಳಿಸಿದರು ಎಂಬುದು ಬಹಳ ಮುಖ್ಯವಾದ ವಿಚಾರ.

ಆದರೆ ಇಂದು ವೈಷ್ಣವೀಕರಣಗೊಂಡಿರುವ ವಿಠ್ಠಲ ದೇವರೊಂದಿಗೆ ಈ ಕುರುಬರ ಸಂಬಂಧಿತ ಸಂಪ್ರದಾಯವು ಅಷ್ಟಾಗಿ ಉಳಿದಿಲ್ಲ. ಶಿಖರ ಶಿಂಗಣಾಪುರದ ಶಂಭು ಮಹಾದೇವನಂತೆಯೇ ಪಂಢರಪುರದ ವಿಠ್ಠಲನ ಪಾವಿತ್ರ‍್ಯವ್ಯೂಹದ ಓಘದಲ್ಲಿ ಅಂಬಿಗ-ಗವಳಿಗರ ವಿಶಿಷ್ಟ ಸಂಬಂಧ ಉಳಿದಿಲ್ಲ. ಸಂತ ನಾಮದೇವನು ಭಕ್ತನಾದ ನಾಮಾಶಿಂಪಿಯೇ ಎಂಬ ಉಲ್ಲೇಖ ವಿಠ್ಠಲನನ್ನು ಕುರಿತ ಕುರುಬರ ಕಥಾ ಭಂಡಾರದಲ್ಲಿ ಆಗಾಗ ಹೇಳಲಾಗುತ್ತಿರುವುದು ಗಮನಾರ್ಹ. ಆದರೆ ಒಂದೆಡೆ ತೀರಾ ಸಾಂಪ್ರದಾಯಿಕವಾಗುತ್ತಿರುವ ಧರ್ಮಶ್ರದ್ಧೆ ಮತ್ತೊಂದೆಡೆ ಹ್ರಾಸಗೊಳ್ಳುತ್ತಿರುವಿಕೆಯು ಆದಿಮ ಸ್ವರೂಪವನ್ನು ಹೆಚ್ಚು ಪರಿಷ್ಕರಣ ಗೊಳಿಸುತ್ತದೆ. ಪರಂಪರಾಗತವಾದ ಸಾಮಾಜಿಕ ಮನಸ್ಸು ಯಾವಾಗ ಉನ್ನತ ಮತ್ತು ಉಚ್ಚವಾದ ಪ್ರತಿಷ್ಠೆಗಾಗಿ ಹೋರಾಡುತ್ತದೆಯೋ ಆಗೆಲ್ಲ, ಒಂದು ಹೊಸ ಅಸ್ಮಿತೆ (Identity) ಹುಟ್ಟಿಕೊಳ್ಳುವುದು ಸರ್ವೇಸಾಮಾನ್ಯ. ಇದು ಸಂಘರ್ಷದ ರೂಪದಲ್ಲಿರಬಹುದು ಇಲ್ಲವೆ ಸಮನ್ವಯದ ರೂಪದಲ್ಲಿರಬಹುದು. ಎಂತಲೇ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಎಂದರೆ ಒಂದು ರೀತಿಯಲ್ಲಿ ಅದ್ಭುತ ಇತಿಹಾಸದ ಒಟ್ಟು ಸ್ವರೂಪವೇ ಆಗಿದೆ. ಅದರಲ್ಲಿನ ಪುರಾಣ ಪ್ರತಿಮೆಗಳು, ದಂತ ಕಥೆಗಳು, ಹಾಡು-ಗಾಥೆಗಳು, ಪೋವಾಡ (ವೀರ ಗೀತೆ)ಗಳು ಒಂದು ಬಗೆಯಲ್ಲಿ ಈ ಅದ್ಭುತ ಇತಿಹಾಸವನ್ನೇ ಅನಾವರಣಗೊಳಿಸುತ್ತಿರುತ್ತದೆ.

ಸಾದಾಗಪ್ಪು ಬಣದಲ್ಲಿ ಇರುವ ಈ ಶ್ರೀವಿಠ್ಠಲನು ತನ್ನ ಸರಳತೆಯಿಂದಲೇ ಕಳೆದ ಒಂದುವರೆ ಸಾವಿರಕ್ಕೂ ಹೆಚ್ಚಿನ ವರ್ಷಗಳಿಂದ ಭಾವಿಕ ಭಕ್ತರನ್ನು ಆಕರ್ಷಿಸುತ್ತಿರುವುದು ಆಶ್ಚರ್ಯಕರ ಸಂಗತಿ. ಯಾವ ಅಲಂಕಾರವೂ ಇಲ್ಲದಿದ್ದರೂ ತುಂಬು ಚೈತನ್ಯಪೂರ್ಣವಾಗಿರುವ ಈ ವಿಠ್ಠಲ ಸಂತರಿಂದ ಹಿಡಿದು ಪಂತರವರೆಗೂ ತೀರಾ ಅಗತ್ಯನೆನಿಸಿದ್ದಾನೆ. ಸಂತರು ಮತ್ತು ಪಂತರು ಈ ವಿಠ್ಠಲನಿಗೆ ತಂತಮ್ಮ ದೃಷ್ಟಿಧೋರಣೆಗಳಿಂದ ಒಂದು ನಿರ್ದಿಷ್ಟ ನೆಲೆಯನ್ನು ರೂಪಿಸಿದ್ದಾರೆ. “ವಿಠ್ಠಲನ ಸಂದರ್ಭದಲ್ಲಿ ಯೋಚಿಸುವುದಾದರೆ, ಹೀಗೆನ್ನಬಹುದು : ಪಂತರ ವಿಠ್ಠಲನು ಭವ್ಯ ಮಂದಿರದಲ್ಲಿ ರಾಜಾಶ್ರಯದ ಅಂಗಭೋಗ-ರಂಗಭೋಗ ಅನುಭವಿಸುವಲ್ಲಿ ಮೈಮರೆತಿದ್ದರೆ, ಸಂತರ ವಿಠ್ಠಲನು ಚಂದ್ರಭಾಗೆಯ ಮರಳಿನಲ್ಲಿ, ಭೋಳೆ ಭಾವಿಕರ ಭಜನೆಯ ಆನಂದದಲ್ಲಿ ಮೈಮರೆತಿದ್ದಾನೆ. ಪಂತರ ವಿಠ್ಠಲನು ಶ್ರುತಿ-ಸ್ಮೃತಿ ಹಾಗೂ ಇತಿಹಾಸ-ಪುರಾಣಗಳ ಬೆಂಬಲಕ್ಕಾಗಿ ಹಾತೊರೆಯುವಂತಹವನಾಗಿದ್ದರೆ, ಸಂತರ ವಿಠ್ಠಲನು ಶ್ರುತಿಗೂ ಸಿಗದ ಮೋಹಕನಾಗಿದ್ದಾನೆ. ಪಂತರ ವಿಠ್ಠಲನು ವೇದ-ಮಂತ್ರಗಳ ಘೋಷದಲ್ಲಿ ನಡೆದ ಯಜ್ಞ-ಯಾಗಾದಿಕರಿಗೆ ಸುಖ ನೀಡುವವನಾಗಿದ್ದರೆ, ಸಂತರ ವಿಠ್ಠಲನು ಯಜ್ಞ-ಯಾಗ, ಮಂತ್ರ-ತಂತ್ರಗಳನ್ನೆಲ್ಲ ತುಚ್ಚೀಕರಿಸಿ ಬರೇ ನಾಮ ಸಂಕೀರ್ತನೆಗಳಿಂದಲೇ ಮೋಹಗೊಂಡವನು. ಪಂತರ ವಿಠ್ಠಲನು ಸಂಸ್ಕೃತ ಮಾಧ್ಯಮದಿಂದ ನಡೆಯುವ ಘಟ-ಮಠದ ಚರ್ಚೆಯಲ್ಲಿ ಆಸಕ್ತಿಯುಳ್ಳವನಾಗಿದ್ದರೆ, ಸಂತರ ವಿಠ್ಠಲನು ಅಮೃತವನ್ನೂ ನಾಚಿಸುವ ಲೋಕ ಭಾಷೆಯ ಭಾವ ಪ್ರತೀತಿಯಲ್ಲಿ ಮುಳುಗುವಂತಹವನು. ಪಂತರು ಉಚ್ಚ ವರ್ಣೀಯ ಉಪಚಾರದಲ್ಲಿ ವಿಠ್ಠಲನನ್ನು ಬಂಧಿಸುವುದಕ್ಕೆ ಸತತ ಪ್ರಯತ್ನ ನಡೆಸಿದ್ದರೂ ಮರಾಠಿ ಸಂತರ ವಿಶ್ವಾತ್ಮಕವಾದ ಅನುಭೂತಿಯ ಸಮೃದ್ಧಿಯಿಂದಾಗಿ ಭಕ್ತರ ಭೇಟಿಗಾಗಿ ಸದಾಕಾಲ ಮುಕ್ತನಾಗಿ ನಿಂತಿದ್ದಾನೆ ಶ್ರೀವಿಠ್ಠಲ. ಜಾತಿ ಬಹಿಷ್ಕೃತನಾದ ಜ್ಞಾನದೇವನಿಂದ ಹಿಡಿದು ಜಾತಿಹೀನನೆನಿಸಿದ ಸಂತ ಛೋಖೋಬಾನವರೆವಿಗೆ ಸರ್ವಸ್ತರದ ಸಂತರ ಸಹವಾಸವನ್ನು ಸತತ ಅನುಭವಿಸಿದ್ದಾನೆ. (ರಾ.ಚಿಂ. ಢೇರೆ, ಶ್ರೀವಿಠ್ಠಲ : ಒಂದು ಮಹಾಸಮನ್ವಯ)

ಬ್ರಾಹ್ಮಣ, ವೀರಶೈವ, ಮುಸ್ಲಿಂ ಭಕ್ತರೂ ವಿಠ್ಠಲನ ಬಗ್ಗೆ ಅಭಂಗಗಳನ್ನು ಹಾಡಿ, ಕೀರ್ತಿಸಿ ಮೈಮರೆತಿದ್ದಾರೆ. ವಾರಕರಿಗಳು ವಿಠ್ಠಲನನ್ನು ಬುದ್ಧನೆಂದೂ ಹಾಡಿ ಕೀರ್ತಿಸುತ್ತಾರೆ. ಶ್ರೀವಿಠ್ಠಲನ ದೇವಾಲಯದ ಎದುರುಗಡೆ ಇರುವ ಸ್ತಂಭವನ್ನು ಜ್ಞಾನೇಶ್ವರನು ಜೀವನದ ಅಮರತೆಯ ಸಂಕೇತವೆಂಬುದಾಗಿ ಹೇಳಿದ್ದಾನೆ. ಸ್ತಂಭದಂತೆ ಅಭಂಗನಾಗಿ ನಿಂತಿರುವ ವಿಠ್ಠಲನೂ ಕೂಡಾ ತನ್ನ ಮೂಲ ಸರಳತೆಯಿಂದ ಪಂತರ ಸೀಮತೆ ಮತ್ತು ಸಂತರ ಅಸೀಮತೆಯ ಸ್ವರೂಪದಿಂದ ಇಂದಿಗೂ ವೈಶಿಷ್ಟ್ಯ ಪೂರ್ಣನಾಗಿದ್ದಾನೆ. ಒಂದೊಮ್ಮೆ ಭಾಗವತ ಧರ್ಮವಾಗಲಿ, ವಾರಕರಿ ಸಂಪ್ರದಾಯವಾಗಲೀ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಜಗತ್ತಿನಾದ್ಯಂತ ಪಸರಿಸಿದ್ದರೆ, ಶ್ರೀವಿಠ್ಠಲನ ಸ್ತಂಭವೂ ಕ್ರಿಸ್ತನ ಕ್ರಾಸಿನಂತೆಯೇ ವಿಶ್ವಾದ್ಯಂತ ವೈಷಿಷ್ಟ್ಯ ಪೂರ್ಣತೆಯನ್ನು ಪಡೆಯುತಿತ್ತು. ಯೇಸುಕ್ರಿಸ್ತನ ಶಿಲುಬೆಯು ಬಲಿದಾನದ ಪ್ರತೀಕವಾಗಿದ್ದರೆ, ಅಚಲವಾದ ಈ ಸ್ತಂಭವು ಜೀವನದ ಅಮರತ್ವವನ್ನು ಸಾರುವ ಅಸ್ತಿತ್ವಕ್ಕೆ ದ್ಯೋತಕ. ಅಂದರೆ ಪ್ರಾಣವನ್ನೆ ಮೀಸಲಿರಿಸಿ ಸದಾ ಕಾರ್ಯ ಪ್ರೇರಿತವಾಗಿರಬೇಕು ಎಂದು ಹೇಳುವ ಈ ಸ್ತಂಭವು ಜೀವನದಲ್ಲಿ ಶಾಂತಿಯನ್ನು ಉದ್ಭೋಧಿಸುವುದಕ್ಕೆ ಸಂಕೇತ. ಅವಕಾಶ, ಅನಂತತೆ ಮತ್ತು ಮಹಾಶೂನ್ಯವನ್ನು ತತ್ತ್ವವಾಗಿ ಹೊಂದಿರುವ ಈ ಸ್ತಂಭವು ಜೀವನದ ವೈಚಾರಿಕ ಆಯಾಮದ ದ್ಯೋತಕವಾಗಿ ಮೆರೆಯುತ್ತಿದೆ ಎಂದು ದುರ್ಗಾ ಭಾಗವತರು ತಮ್ಮ ‘ದಿಗಂತದಾಚೆ ಕೊಂಡೊಯ್ಯುವ ಸ್ತಂಭ’ ಎಂಬ ಲೇಖನದಲ್ಲಿ ಹೇಳಿದ್ದಾರೆ. ಡಾ. ರಾ.ಚಿಂ. ಢೇರೆಯವರು ವಿಠ್ಠಲನ ಅಧ್ಯಯನ ಕೈಕೊಂಡು ಶ್ರೀವಿಠ್ಠಲನಲ್ಲಿ ಬುದ್ಧಿ, ಜಿನನ ಅಂಶಗಳನ್ನು ಗುರುತಿಸಿದ್ದಾರೆ. ಬುದ್ಧನನ್ನು ವಿಷ್ಣುವಿನ ಒಂಬತ್ತನೆಯ ಅವತಾರವಾಗಿ ಸ್ವೀಕರಿಸಿದ್ದು ಮತ್ತು ವಿಠ್ಠಲನನ್ನು ಕುರಿತಂತೆ ‘ಬಾಳ ದಿಗಂಬರ’ ಎಂಬುದಾಗಿ ಸಂತರು ಅನೇಕ ಬಾರಿ ಉದ್ಗರಿಸಿರುವುದು ವಿಠ್ಠಲ ಸಂಪ್ರದಾಯದ ವ್ಯಾಪಕತೆಯು ಎಷ್ಟು ಮತ್ತು ಕ್ರೈಸ್ತರೂ ಸೇರಿದಂತೆ ಎಲ್ಲರೂ ವಿಠ್ಠಲನನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಬಹಳ ಕುತೂಹಲಕಾರಿ ಸಂಗತಿ. ಜೈನರು ಖಂಡೋಬಾನನ್ನು ‘ಮಲ್ಲಿನಾಥ’ನನ್ನಾಗಿ ಕಂಡಂತೆ ವಿಠೋಬಾನನ್ನೂ ‘ನೇಮಿನಾಥ’ನನ್ನಾಗಿ ಕಂಡು ಅವನಲ್ಲಿ ಏಕರೂಪಗೊಳಿಸುವ ಪ್ರಯತ್ನ ಮಾಡಿದ್ದರು. ಕ್ರಿ.ಶ. ೧೮ನೆಯ ಶತಮಾನದವರೆಗೂ ಅವರು ವಿಠ್ಠಲನನ್ನು ತಮ್ಮ ದೇವರೆಂದೇ ಹೇಳುತ್ತಿದ್ದರು.