ಕರ್ನಾಟಕದಲ್ಲಿ ವಿಠ್ಠಲನ ಆರಾಧನೆಯ ಇತಿಹಾಸ

ವಿಠ್ಠಲನ ಆರಾಧನೆ ಸಂಪ್ರದಾಯ ಉಗಮವಾದ ಕಾಲಕ್ಕೆ ಹೆಚ್ಚು ಕಮ್ಮಿ ಇಂದಿನ ಸಕಲ ಮಹಾರಾಷ್ಟ್ರವೂ ಕನ್ನಡ ಸಮ್ರಾಟರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಈಗಾಗಲೇ ನಿರ್ಧರಿತವಾಗಿರುವ ಸಂಗತಿ. ಶಾತವಾಹನರು, ವಾಕಾಟಕರು, ಬದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು ಹಾಗೂ ದೇವಗಿರಿಯ ಯಾದವರು ಹೀಗೆ ಐದು ರಾಜ ಮನೆತನಗಳು ಇಂದಿನ ಮಹಾರಾಷ್ಟ್ರ ರಾಜ್ಯವನ್ನು ಆಳಿದುವುಗಳಾಗಿವೆ. ಇವರಲ್ಲಿ ರಾಷ್ಟ್ರಕೂಟ ದೊರೆಗಳ ಆಡಳಿತಾವಧಿಗೂ ಮೊದಲೇ ಕರ್ನಾಟಕದಲ್ಲಿ ವಿಠ್ಠಲನ ಆರಾಧನಾ ಸಂಪ್ರದಾಯ ಆರಂಭವಾಯಿತು. ಕ್ರಿ.ಶ. ೬ನೆಯ ಶತಮಾನದ ಹೊತ್ತಿಗೇ ಇಲ್ಲಿ ವಿಠ್ಠಲ ಭಕ್ತಿಯು ಚಾಲ್ತಿಯಲ್ಲಿದ್ದಿತು. ಮುಂದೆ ವೈಷ್ಣವರು ಈ ದೇವರನ್ನು ಆರಾಧಿಸಲಾರಂಭಿಸಿದರು. ಕಾಲ ಸುಮಾರು ಕ್ರಿ.ಶ. ೮೦೧. ಡಾ. ಜಿ. ವರದರಾವ್ ಅವರು ತುಖೇಕರಿ ಎಂಬ ಊರಿನಲ್ಲಿ ದೊರೆತಿರುವ ಒಂದು ಹಸ್ತ ಬರೆಹವನ್ನು ಉಲ್ಲೇಖಿಸುತ್ತಾ ತಮ್ಮ ಶ್ರೀಪಾದರಾಜ ಕೃತಿಯಲ್ಲಿ ಈ ವಿಷಯವನ್ನು ಹೇಳಿದ್ದಾರೆ. ಅವರ ಪ್ರಕಾರ ಕರ್ನಾಟಕದಲ್ಲಿ ವಿಠ್ಠಲ ಭಕ್ತಿ ಸಂಪ್ರದಾಯವು ಆರಂಭವಾದ ಕಾಲ ಕ್ರಿ.ಶ. ೮೦೧. ಅಚಲಾನಂದ ಎಂಬ ವ್ಯಕ್ತಿಯು ಭೀಮರಥಿ ನದಿಯ ದಂಡೆಯಲ್ಲಿ ವಿರಾಜಮಾನನಾಗಿದ್ದ ಶ್ರೀವಿಠ್ಠಲನ ದರ್ಶನವನ್ನು ಪಡೆದನು. ಈ ಉಲ್ಲೇಖಾನುಸಾರ ತರ್ಕಿಸಬಹುದಾದರೆ, ಅಚಲಾನಂದ ಎಂಬ ಭಕ್ತನಿಗೆ ಭೀಮರಥಿಯ ತೀರದಲ್ಲಿ ಒಂದು ಶ್ರೀವಿಠ್ಠಲನ ಮೂರ್ತಿ ಲಭಿಸಿದ್ದಿರಬೇಕು. ಅವನು ಅದನ್ನು ಇಂದಿನ ಕರ್ನಾಟಕ ಪ್ರದೇಶಕ್ಕೆ ತಂದು ಆರಾಧನೆ ಮಾಡುತ್ತಾ ಈ ಸಂಪ್ರದಾಯವನ್ನು ಇಲ್ಲಿ ಹುಟ್ಟು ಹಾಕಿರಬೇಕು. ಮತ್ತೊಂದು ಮೂಲದ ಪ್ರಕಾರ ವೈಷ್ಣವ ಸಂತರ ಪೈಕಿ ವ್ಯಾಸರಾಜ ಬ್ರಾಹ್ಮಣ್ಯತೀರ್ಥ ಮತ್ತು ಶ್ರೀಪಾದರಾಯ ಎಂಬುವವರಿಗೆ ಭೀಮರಥಿ ನದಿಯ ತೀರದಲ್ಲಿ ಶ್ರೀವಿಠ್ಠಲನ ಮೂರ್ತಿಯು ದೊರಕಿತು ಎಂಬುದಾಗಿ ಕರ್ನಾಟಕದಲ್ಲಿನ ವೈಷ್ಣವರ ಪರಂಪರಾಗತವಾದ ನಂಬಿಕೆಯಾಗಿದೆ. ಒಟ್ಟಾರೆ ಈ ಆರಾಧನ ಸಂಪ್ರದಾಯವು ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರಾದಿಗಳಂಥ ವಾರಕರಿಗಳ ಮೂಲಕ ವೈಭವೋಪೇತ ಆಯಮಾವನ್ನು ಪಡೆದ ವಿಠ್ಠಲಭಕ್ತಿ ಸಂಚಲನಕ್ಕೆ ಮೊದಲೇ ಕರ್ನಾಟಕದಲ್ಲಿ ಇದ್ದಿತು ಎಂಬುದು ಸುಸ್ಪಷ್ಟವಾಗುತ್ತದೆ. ಮುಂದೆ ಮಧ್ವಪಂಥದವರು ಈ ದೇವರ ಆರಾಧನೆಯನ್ನು ಕರ್ನಾಟಕಾದ್ಯಂತ ಪಸರಿಸುವಂತೆ ಮಾಡಿದರು. ಈ ಗಾಯಕ ಸಂತರು ಪಂಢರಪುರದ ವಾರಕರಿಗಳಾಗಿದ್ದಿರಬೇಕು. ಎಂತಲೇ ಅವರನ್ನು ಗಾಯಕ ಸಂತ ಅಥವಾ ಹರಿದಾಸರು ಎಂಬುದಾಗಿ ಕರೆಯಲಾಗಿದೆ. ಈ ಕುರಿತಂತೆ ದಿ. ಸೇತು ಮಾಧವರಾವ್ ಪಗಡಿ ಅವರ ಅಭಿಪ್ರಾಯವು ಇಂತಿದೆ:

“ಮಾಧ್ವ ಸಂಪ್ರದಾಯವು ಉದಯವಾದುದು ಕ್ರಿ.ಶ. ೧೪ನೆಯ ಶತಮಾನದಲ್ಲಿ ಅದಕ್ಕೆ ಪೂರ್ವದಲ್ಲಿಯೇ ಅಚಲಾನಂದನು ಆಗಿ ಹೋಗಿದ್ದನು. ಹಾಗಾಗಿ ಅಚಲಾನಂದನನ್ನು ಮಾಧ್ವ ಸಂಪ್ರದಾಯಿ ಎಂದು ಹೇಳುವುದಕ್ಕೆ ಬರುವುದಿಲ್ಲ. ಬದಲಾಗಿ ಈತನನ್ನು ಭಾಗವತ ಭಕ್ತನೆಂದು ಹೇಳುವುದೇ ಸರಿ. ಅಚಲಾನಂದನ ಮನೆತನದಲ್ಲಿ ಬರುವ ವ್ಯಕ್ತಿಗಳೆಲ್ಲ ಇಂದಿಗೂ ತಮ್ಮನ್ನು ವಿಠ್ಠಲ ಭಕ್ತರೆಂದೇ ಗುರುತಿಸಿಕೊಳ್ಳುತ್ತಾರೆ ಹಾಗೂ ಅವರು ಧರಿಸುತ್ತಿರುವುದು ವೈಷ್ಣವ ಚಿಹ್ನೆಯಾದ ಗೋಪಿಚಂದನ.

ಅಚಲಾನಂದ ದಾಸರು ವಿಠ್ಠಲ, ನರಸಿಂಹ ಇತ್ಯಾದಿ ದೇವರುಗಳ ಪೂಜೆಗೆ ಸರಿಯಾದ ವ್ಯವಸ್ಥೆಯಾಗಬೇಕು ಎಂಬ ಕಾರಣದಿಂದ ನರಸಿಂಹಪುರ ಎಂಬ ಹೆಸರಿನ ಊರೊಂದನ್ನು ನಿರ್ಮಿಸಿ ಅದನ್ನು ೬೬ (ಉಚ್ಚಕುಲ) ಬ್ರಾಹ್ಮಣ ಕುಟುಂಬಗಳವರಿಗೆ ಅಗ್ರಹಾರವಾಗಿ ಕೊಟ್ಟರು. ಇದೇ ಅಲ್ಲದೆ ತಮ್ಮ ಪರಂಪರೆಯ ಅನುಸಾರವೇ ಪೂಜೆ ನಡೆದುಕೊಂಡು ಬರಬೇಕೆಂಬ ಕಾರಣವಾಗಿ ಒಂದು ಮಠವನ್ನು ಕೂಡಾ ಸ್ಥಾಪಿಸಲಾಯಿತು.

ಅಚಲಾನಂದರ ಮಠದಲ್ಲಿ ಮುಂದೆ ಬಂದು ಹೋದಂಥ ವ್ಯಕ್ತಿಗಳೆಂದರೆ ಗೋಪಿನಾಥ ದಾಸ, ಮುದ್ದು ವಿಠ್ಠಲದಾಸ, ಪಾಂಡುರಂಗ ದಾಸ ಎಂಬುವರುಗಳು. ಇವರೆಲ್ಲರೂ ಮುಂದೆ ಅಚಲಾನಂದರ ವಿಠ್ಠಲ ಪೂಜೆಯನ್ನು ಒಂದು ಪರಂಪರೆ ಎಂಬಂತೆಯೇ ಅನುಸರಿಸಿಕೊಂಡು ನಡೆಸುತ್ತಾ ಬಂದರು.

ಈ ಮೇಲೆ ಉಲ್ಲೇಖಿಸಿದ ಹಸ್ತಪ್ರತಿಯಲ್ಲಿ ಅಚಲಾನಂದನು ಸ್ಥಾಪಿಸಿದ ಮಠಗಳು ಎಲ್ಲೆಲ್ಲಿ ಇವೆ ಎಂಬುದರ ಯಾದಯೂ ಉಂಟು. ಆ ಸ್ಥಳಗಳೆಂದರೆ ೧. ಪಂಡರಿಗೆ (ಪಂಢರಪುರ, ಸೊಲ್ಲಾಪುರ, ಮಹಾರಾಷ್ಟ್ರ), ೨. ಕಳಸಾ (ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ), ೩. ವಿದ್ಯಾನಗರ ಅಥವಾ ಅನಂತರದ ವಿಜಯನಗರ (ಬಳ್ಳಾರಿ ಜಿಲ್ಲೆ, ಕರ್ನಾಟಕ), ೪. ರಾಮೇಶ್ವರ (ತಮಿಳುನಾಡು), ೫. ಕಾಶಿ (ಉತ್ತರ ಪ್ರದೇಶ) ಮತ್ತು ೬. ಕೆಳದಿ (ಶಿವಮೊಗ್ಗ ಜಿಲ್ಲೆ, ಕರ್ನಾಟಕ).

ಈ ಮಠಗಳೆಲ್ಲವೂ ಬಹುತೇಕ ಅಚಲಾನಂದರ ವಂಶಜರುಗಳೇ ಸ್ಥಾಪಿಸಿದುವುಗಳಾಗಿರಬೇಕು. ಅಂಥ ಮಠಗಳ ಸಂಖ್ಯೆ ಏಳು. ಅಚಲಾನಂದರ ವಂಶಜರು ತಮಗೆ ಕಾಲಕಾಲಕ್ಕೆ ಇನಾಮಾಗಿ ಬಂದ ಊರುಗಳು ಮತ್ತು ಜಮೀನುಗಳ ಯಾದಿಯನ್ನು ಸಹ ಈ ಹಸ್ತಪ್ರತಿಯಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ಬರುವ ಕೆಲವಾರು ಸ್ಥಳಗಳ ಹೆಸರುಗಳೂ ಇವೆ. ಅವುಗಳೆಂದರೆ, ೧. ವಿಠ್ಠಲದಾಸ ಪಾಳ್ಯ, ೨. ತುಖೇಕೇರಿ ಊರಿಗೆ ಹತ್ತಿರದ ದಾಸರಹಳ್ಳಿ ಮತ್ತು ವಿಠ್ಠಲನ ದೇವನ ಹಳ್ಳಿ, ೩. ಕುಣಿಗಲ್‌ಗೆ ಸಮೀಪದಲ್ಲಿರುವಂಥ ಹಾಸನಪುರ (ಬೆಂಗಳೂರು ಜಿಲ್ಲೆ) ಮತ್ತು ೪. ಮಾಗಡಿ ತಾಲ್ಲೂಕಿನಲ್ಲಿ ಬರುವ ವಿಠ್ಠಲಪುರ (ಬೆಂಗಳೂರು ಜಿಲ್ಲೆ).

ಕರ್ನಾಟಕದಲ್ಲಿ ತಮಗೂ ಮೊದಲೇ ಮಹತ್ವದ ಸ್ಥಾನ ಪಡೆದಿದ್ದಂಥ ಈ ವಿಠ್ಠಲನ ಮಹತ್ವದೆಡೆಗೆ ಮಹಾರಾಷ್ಟ್ರದಲ್ಲಿನ ಸಂತರೂ ಲಕ್ಷ್ಯ ಹರಿಸಿದ್ದಿರಬೇಕು ಎಂಬುದು ಸಹಜವಾದ ಸಂಗತಿ. ‘ಕಾನಡಾ ಹೋ ವಿಠ್ಠಲೂ ಕರ್ನಾಟಕೂ ತ್ಯಾನೆ ಮಜ ಲಾವಿಲಾ ವೇಧೂ’ (ಕನ್ನಡದ ವಿಠ್ಠಲ ಹೋ ಕರ್ನಾಟಕ, ಅವನು ಎನ್ನನು ಸೆಳೆದಿಹನು ಭಕ್ತಿ ಭಾವದಿಂದ) ಎಂಬ ಸಂತ ಜ್ಞಾನ ದೇವನ ಅಭಂಗವು ಬಹಳ ಪ್ರಸಿದ್ಧವಾಗಿದೆ.

ಸಂತ ನಾಮದೇವನು ಹೇಳಿರುವಂತೆ,

‘ಕಾಶಿಯೇ ಕನೌಜಾ, ದ್ವಾರಕೆ ಗುಜರೂ ಕಾನಡಾ ವಿಠ್ಠಲೂ ಪಂಢರಿಯೇ’, ‘ಕಾನಡಾ ವಿಠ್ಠಲೂ ಉಭಾ-ಭಿವರೇ ತೀರಿ-ನಾಮ ಬರವೇ, ರೂಪ ಬರವೇ ಕಾನಡಿಯಾ’ (ಕನ್ನಡ ವಿಠ್ಠಲನವ ನಿಂತಿಹ ಭೀಮೆಯ ತೀರದೊಳು, ನಾಮವು ಸುಂದರ, ಕಾನಡಿಯವನ ರೂಪವು ಮೋಹಕ). ಇಲ್ಲಿ ಕಾನಡಿ ಎಂಬುದಕ್ಕೆ ಅಗಮ್ಯ, ಅಸೀಮ ಎಂದು ಅರ್ಥೈಸಿರುವುದೂ ಉಂಟು. ಆದರೆ ಕಾಶಿ, ಕನೌಜಾದಿಗಳಂತೆ ಕಾನಡಿಯೂ ಸ್ಥಳನಾಮವೇ. ಹಾಗೆಯೇ ಕನ್ನಡ ಅಭಂಗವೊಂದಿದ್ದು, ಅದು ಜ್ಞಾನದೇವನೆಂದು ಹೇಳಲಾಗಿದೆ: ‘ಆ, ಆ, ನೀ ಕೇಳು ಕೇಳಲೆ, ಧನಿಗೆ ಮಸಲಾ ಆದಿನೆ ಚಲುವನೆ, ಚಲುವನೇ ಪಂಢರಿರಾಯನು ಚಲುವನೇ…’ (ಅರ್ಥ ಮೋಹಕವಾದುದು ಪಂಢರಿರಾಯನ ರೂಪವು, ಅವನೊ ಎನಗೆ ಅಚ್ಚುಮೆಚ್ಚು). ಅಂತೆಯೇ ಕಾನಡಿಯವ ಎಲ್ಲಿ ದೊರಕ್ಯಾನೆ, ಎಲ್ಲಿ ಬಾರನ್ನೇ ಪುಂಡಲೀಕನ ಭಕ್ತಿಗೆ ಬಂದಾ ರಖುಮಾ ದೇವಿವರನು ಎಲ್ಲಿ ದೊರಕ್ಯಾನೆ, ಎಲ್ಲಿ ಭೆಟ್ಟಿಯಾದನೇ?” (ಮಹಾರಾಷ್ಟ್ರ-ಕರ್ನಾಟಕಾತೀಲ ಸುವರ್ಣಕಾಲ, ಅನು: ವಿಠ್ಠಲರಾವ್ ಗಾಯಕ್ವಾಡ್, ದ್ರಾವಿಡ ಅಧ್ಯಯನ ೩-೧, ಪುಟಗಳು-೮೮ ಮತ್ತು ೮೯). ಮುಂದೆಯೂ ಈ ಸಾದಾಗಪ್ಪು ದೇವನನ್ನು ಕುರಿತಂತೆ ಮರಾಠಿ ಸಂತರು ಚೆಲುವು ಮತ್ತು ಆನಂದದ ನೆಲೆಯಿಂದಲೇ ಅಭಂಗಗಳನ್ನು ರಚಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ:

‘ಸುಂದರ ತೇ ಧಾನ್ಯ ಉಭಾ ವಿಟೇವರೀ |
ಕರಕಟಾವರೀ ಠೇವೋನೀಯಾ ||’
(ಸುಂದರವದು ಧ್ಯಾನ ನಿಂತಿಹ ಇಟ್ಟಿಗೆಯ ಮೇಲೆ |
ಇಟ್ಟು ಕರಗಳನು ನಡುವಿನ ಮೇಲೆ ||)

‘ಆನಂದಾಚೆ ಡೋಹಿ ಆನಂದ ತರಂಗ |
ಆನಂದಾಚೆ ಅಂಗ ಆನಂದಾಚೆ |’
(ಆನಂದದ ಅಂತರಾಳ ಆನಂದ ತರಂಗ
ಆನಂದದ ಅಂಗ, ಆನಂದಾ ||)

ಸಂತ ತುಕಾರಾಮನ ಅಭಂಗಗಳ ಈ ಸಾಲುಗಳು ನೋಟದಲ್ಲಿನ ಚೆಲುವು ಮತ್ತು ಹೃದಯಲ್ಲಿನ ಭಕ್ತಿಯ ಸ್ವರೂಪ ಎಷ್ಟು ಗಂಭೀರವಾದುದು ಎಂಬುದನ್ನು ಮನಗಾಣಿಸುತ್ತವೆ. ಕರ್ನಾಟಕದಲ್ಲಿ ರುದ್ರಭಟ್ಟನ ಜಗನ್ನಾಥ ವಿಜಯ ಕಾವ್ಯದ ಕಾಲದಿಂದ ಭಾಗವತ ಪಂಥದ ಬಗ್ಗೆ ಚರ್ಚೆಯನ್ನು ಆರಂಭಿಸಲಾಗುತ್ತದೆ. ಆದರೆ ಈ ಉಲ್ಲೇಖದ ಪ್ರಕಾರ ಕ್ರಿ.ಶ. ೮, ೯ನೆಯ ಶತಮಾನದ ಹೊತ್ತಿಗೇ ಭಾಗವತ ಸಂಪ್ರದಾಯದ ಸಂತರಿಂದ ವಿಠ್ಠಲ ಅರ್ಥಾತ್ ವಿಷ್ಣುವಿನ ಆರಾಧನೆಯ ಸಂಪ್ರದಾಯ ಆರಂಭವಾಗಿದ್ದಿತು. ಅವರು ಸ್ಥಾಪಿಸಿದ ಆರಾಧನಾ ಸ್ಥಳಗಳು ಎರಡು ಮೂರು ಶತಮಾನಗಳ ಅನಂತರ ಬಂದ ಜ್ಞಾನದೇವಾದಿ ಮರಾಠಿ ಸಂತರನ್ನು ಆಕರ್ಷಿಸಿದವು ಎಂದರೆ ಈ ಕುರಿತಂತೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿರುವುದು ಎಂದು ಮತ್ತೆ ಹೇಳಬೇಕಾಗಿಲ್ಲ.

ಮುಂದೆ ಮಾಧ್ವ ಪಂಥ ಮತ್ತು ಶ್ರೀವೈಷ್ಣವ ಪಂಥದವರೂ ವಿಠ್ಠಲನ ಆರಾಧನೆಗೆ ಹೆಚ್ಚು ಒತ್ತು ನೀಡಿದರು. ಈ ವಿವರವೂ ಪಗಡಿಯವರ ಪ್ರಸ್ತುತ ಲೇಖನದಲ್ಲಿದೆ :

“ಮಾಧ್ವ ಸಂಪ್ರದಾಯದ ಸಂಸ್ಥಾಪಕ ಮಧ್ವಾಚಾರ್ಯ ಆನಂದ ತೀರ್ಥರು (ಕಾಲ ಕ್ರಿ.ಶ. ೧೨೩೮ ರಿಂದ ೧೩೧೮) ತಾವು ಭಾರತಾದ್ಯಂತ ಸಂಚಾರಕ್ಕೆ ತೊಡಗಿದ್ದಾಗ ಒಮ್ಮೆ ಪಂಢರಪುರಕ್ಕೂ ಬಂದಿದ್ದರು. ಎನ್ನಲಾಗಿದೆ. ಇದಕ್ಕೆ ಪ್ರತ್ಯಕ್ಷ ಪುರಾವೆ ಇಲ್ಲದಿದ್ದರೂ ಮಾಧ್ವ ಸಾಹಿತ್ಯದಲ್ಲಿನ ಈ ಮುಂದಿನ ಉಲ್ಲೇಖಾನುಸಾರ ಮಧ್ವಾಚಾರ್ಯರು ಪಂಢರಪುರಕ್ಕೆ ಭೇಟಿ ನೀಡಿದ್ದಾರೆಂಬ ತರ್ಕವು ಸುಸಂಗತವೆನಿಸುತ್ತದೆ. ಆ ಪ್ರಾಂತ್ಯದ ರಾಜನನ್ನು ಅವರು ಈ ಎಂದು ಸಂಬೋಧಿಸಿದ್ದಾರೆ. ಈ ಎಂಬ ಶಬ್ದ ಪ್ರಯೋಗವು ದೇವಗಿರಿಕರ ಯಾದವ ವಂಶದಲ್ಲಿನ ಮಹಾದೇವ ಯಾದವನೆಂಬ ರಾಜನನ್ನು ಉದ್ದೇಶಿಸಿಯೇ ಹೇಳಿದುದಾಗಿರಬೆಕು. ಮತ್ತೊಂದು ಪುರಾವೆ ಎಂದರೆ ಮುಂದೆ ಮುನ್ನೂರು ವರ್ಷಗಳ ಕಾಲಕ್ಕೆ ಮಾಧ್ವಪೀಠದ ಸ್ವಾಮಿ ವಿದ್ಯಾಧೀಶ (ಕ್ರಿ.ಶ. ೧೬೧೯ ರಿಂದ ೧೬೩೧) ಎಂಬುವವರು ಪಂಢರಪುರಕ್ಕೆ ಭೇಟಿ ಕೊಟ್ಟರು. ಆಗ್ಗೆ ಈ ಪೂರ್ವದಲ್ಲಿ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುನೀತ ಗೊಂಡಿದ್ದ ಸ್ಥಳದಲ್ಲಿ ಒಂದು ಮಠವು ಸ್ಥಾಪನೆಗೊಂಡಿತ್ತು. ವಿದ್ಯಾಧೀಶರ ಕಾಲಕ್ಕೆ ಅದು ಭಗ್ನಾವಸ್ಥೆಗೆ ಬಂದಿತ್ತು. ಹಾಗಾಗಿ ಅವರು ಅದರ ಜೀರ್ಣೋದ್ಧಾರ ಮಾಡಿಸಿದ್ದರು ಎಂಬುದು ಅವರ ಚರಿತ್ರೆಯೊಳಗೆ ಉಲ್ಲೇಖಗೊಂಡಿರುವಂಥ ಸಂಗತಿ. ಇನ್ನು ಮೂರನೆಯ ಪುರಾವೆಯೂ ಹಾಗೆಯೇ ಮಹತ್ವದ್ದಾಗಿದೆ: ಮಧ್ವಾಚಾರ್ಯರು ಕ್ರಿ.ಶ. ೧೨೭೧ರ ಸುಮಾರಿನಲ್ಲಿ ವಿಠ್ಠಲನ ಅನೇಕ ಮೂರ್ತಿಗಳನ್ನು ನಿರ್ಮಿಸಿದ್ದರು. ತಮ್ಮ ಶಿಷ್ಯರೆಲ್ಲರೂ ಈ ಮೂರ್ತಿಯ ಪೂಜೆ ಮಾಡಬೇಕೆಂಬುದು ಅವರ ಮುಖ್ಯ ಉದ್ದೇಶ. ಈ ಕಾರಣವಾಗಿ ತಮ್ಮ ಬೇರೆ ಬೇರೆ ಶಾಖಾ ಮಠಗಳಿಗೆ ಆ ಮೂರ್ತಿಗಳನ್ನು ಕಳುಹಿಸಿದರು. ಆ ಮಠಗಳೆಂದರೆ ಶಿರೂರ, ಪುತ್ತಿಜೆ, ಸುಬ್ರಹ್ಮಣ್ಯ. ಇಂದಿಗೂ ಅಲ್ಲಿ ಈ ಮೂರ್ತಿಗಳಿಗೆ ನಿತ್ಯಪೂಜೆಯು ನಡೆಯುತ್ತಲಿದೆ.

ಇತರ ಮಾಧ್ವ ಸಂತರ ಪೈಕಿ ಮುಖ್ಯರೆನಿಸಿದ ಶ್ರೀಪಾದರಾಜ ಬ್ರಾಹ್ಮಣತೀರ್ಥ ಮತ್ತು ವ್ಯಾಸರಾಯ ಇವರುಗಳು ಪಂಢರಪುರಕ್ಕೆ ಯಾತ್ರೆಗೆಂದು ಬಂದಿದ್ದಾಗ ಚಂದ್ರಭಾಗ ನದಿಯ ತೀರದಲ್ಲಿ ಶ್ರೀವಿಠ್ಠಲನ ಮೂರ್ತಿಯೊಂದು ಅವರಿಗೆ ಸಿಕ್ಕಿತ್ತು ಎಂಬುದೊಂದು ಕಥೆ. ಅಬ್ಬೂರು ಎಂಬ ಊರಿನಲ್ಲಿರುವ ವ್ಯಾಸರಾಯರ ಮಠದಲ್ಲಿ ಆ ಮೂರ್ತಿಯೂ ಇಂದಿಗೂ ಇರುವುದು ಗಮನಾರ್ಹ. ಶ್ರೀಪಾದರಾಯರು ಈ ಮೂರ್ತಿಯನ್ನು ಕುರಿತಂತೆ ಅತಿಶಯ ಭಕ್ತಿಭಾವದಿಂದ ಸ್ತೋತ್ರ ಮಾಡಿರುವುದುಂಟು. ಆ ಸ್ತೋತ್ರಗಳೆಲ್ಲ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿವೆ. ಈ ವಿಠ್ಠಲ ಸ್ತುತಿಯಿಂದಾಗಿ ‘ಶ್ರೀರಂಗ ವಿಠ್ಠಲ’ ಎಂಬ ಕಾವ್ಯನಾಮವು ಶ್ರೀಪಾದರಾಯರಿಗೆ ಪ್ರಾಪ್ತವಾಗಿದೆ.

ಮಾಧ್ವ ಸಂಪ್ರದಾಯದಲ್ಲಿ ಪ್ರಕಾಂಡ ಪಂಡಿತರೆನಿಸಿದ್ದ ಶ್ರೀವ್ಯಾಸರಾಯರನ್ನು ವಿಜಯನಗರದ ಸಾಮ್ರಾಟನಾದ ಶ್ರೀಕೃಷ್ಣದೇವರಾಯನು (ಕ್ರಿ.ಶ. ೧೫೦೯-೧೫೫೬) ನವರತ್ನಗಳಿಂದ ಅಭಿಷೇಕ ಮಾಡಿ ಸತ್ಕರಿಸಿದ್ದನೆಂಬುದು ಸರ್ವಶ್ರುತವಾದ ಸಂಗತಿ. ವ್ಯಾಸರಾಯರು ವಿಜಯನಗರದಲ್ಲಿನ ತುಂಗಭದ್ರೆಯ ತೀರದ ಮೇಲೆ ವಿಠ್ಠಲನ ಮಂದಿರ ವೊಂದನ್ನು ಉತ್ಕರ್ಷಕ್ಕೆ ತಂದರು. ಅದನ್ನು ಅವರು ಕರೆದಿರುವುದು ‘ವಿಜಯ ವಿಠ್ಠಲ’ ಮಂದಿರ ಎಂಬುದಾಗಿ.

ವ್ಯಾಸರಾಯರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ತಮ್ಮ ಶಿಷ್ಯರಿಗೆಲ್ಲ ತಂತಮ್ಮ ಕಾವ್ಯಗಳ ರಚನೆಯಲ್ಲಿ ತಂತಮ್ಮ ಹೆಸರಿನೊಂದಿಗೆ ವಿಠ್ಠಲನೆಂಬ ಅಂಕಿತ ನಾಮವನ್ನು ಸೇರಿಸಿಕೊಳ್ಳುವಂತೆ ಆಜ್ಞೆ ಮಾಡಿದರು……” (ಅದೇ, ಪುಟ ೮೯, ೯೦).

ವ್ಯಾಸರಾಯರ ಈ ಅನುಜ್ಞೆಯನುಸಾರ ೩೭ ಜನ ದಾಸರು ತಂತಮ್ಮ ಹೆಸರುಗಳೊಂದಿಗೆ ವಿಠ್ಠಲನೆಂಬ ಅಂಕಿತ ನಾಮವನ್ನು ಸೇರಿಸಿಕೊಂಡು ಕೀರ್ತನೆಗಳನ್ನು ಬರೆದಿದ್ದಾರೆ. ಆ ಹೆಸರುಗಳಿಂತಿವೆ :

೧. ರಂಗ-ವಿಠ್ಠಲ

೨. ವಿಜಯ ವಿಠ್ಠಲ

೩. ಗೋಪಾಲ ವಿಠ್ಠಲ

೪. ಹಯವದನ ವಿಠ್ಠಲ

೫. ಮುದ್ದು ವಿಠ್ಠಲ (ಪ್ರೇಮಮಯಿ, ಸುಂದರ)

೬. ರಾಮಚಂದ್ರ ವಿಠ್ಠಲ

೭. ವೇಣುಗೋಪಾಲ ವಿಠ್ಠಲ

೮. ಮಧುವೇಶ ವಿಠ್ಠಲ

೯. ಮೋಹನ ವಿಠ್ಠಲ

೧೦. ಗುರುವಿಜಯ ವಿಠ್ಠಲ

೧೧. ಹಯಗ್ರೀವ ವಿಠ್ಠಲ

೧೨. ವಿರಜೀ ಪ್ರಾಣೇಶ ವಿಠ್ಠಲ

೧೩. ಬಾದರಾಯಣ ವಿಠ್ಠಲ

೧೪. ಕೇಶವ ವಿಠ್ಠಲ

೧೫. ನಂದ ಗೋಪಾಲ ವಿಠ್ಠಲ

೧೬. ಗುರು ಗೋಪಾಲ ವಿಠ್ಠಲ

೧೭. ಶ್ರೀಪತಿ ವಿಠ್ಠಲ

೧೮. ವ್ಯಾಸ-ವಿಠ್ಠಲ

೧೯. ನರಸಿಂಹ ವಿಠ್ಠಲ

೨೦. ಜಗನ್ನಾಥ ವಿಠ್ಠಲ

೨೧. ರಘುಪತಿ ವಿಠ್ಠಲ

೨೨. ಭೂವರಾಹ ರಘುಪತಿ ವಿಠ್ಠಲ

೨೩. ಶ್ರೀಪತಿ ವಿಠ್ಠಲ

೨೪. ವಂದೇ ಶ್ರೀಪತಿ ವಿಠ್ಠಲ

೨೫. ಶ್ರೀನಿಧಿ ವಿಠ್ಠಲ

೨೬. ವಂದೇ ಶ್ರೀನಿಧಿ ವಿಠ್ಠಲ

೨೭. ಶ್ರೀವರ ವಿಠ್ಠಲ

೨೮. ತೀರ್ಥಪಾದ ವಿಠ್ಠಲ

೨೯. ಮುದ್ದು ಮೋಹನ ವಿಠ್ಠಲ

೩೦. ಶ್ರೀರಾಮಪತಿ ವಿಠ್ಠಲ

೩೧. ಕಮಲೇಶ ವಿಠ್ಠಲ

೩೨. ಕಮಲಾಪತಿ ವಿಠ್ಠಲ

೩೩. ಶ್ರೀಶ-ವಿಠ್ಠಲ

೩೪. ಶ್ರೀಕೇಶವ ವಿಠ್ಠಲ

೩೫. ಶ್ರೀಶ ಪ್ರಾಣೇಶ ವಿಠ್ಠಲ

೩೬. ಗುರುಶೀಶ ವಿಠ್ಠಲ

೩೭. ಭೀಮೇಶ ವಿಠ್ಠಲ

ಇವರಲ್ಲಿ ಪುರಂದರದಾಸರಂತೂ ವಿಠ್ಠಲ ಭಕ್ತಿಯನ್ನು ತಮ್ಮ ಕೀರ್ತನೆಗಳ ಮೂಲಕ ಕರ್ನಾಟಕದಲ್ಲಿ ಮಾತ್ರವಲ್ಲ ಕರ್ನಾಟಕದ ಆಚೆಗೂ (ಭಾರತಾದ್ಯಂತ) ಪ್ರಸಾರ ಮಾಡಿದ್ದಾರೆ. ವಿಠ್ಠಲನ ಬಗ್ಗೆ ಅವರಿಗೆ ಎಷ್ಟು ಸಲುಗೆ ಎಂದರೆ,

‘ಹೇ ವಿಠ್ಠಲಾ, ನಾನು ನಿನಗೆ ಮೂರು ಬಾರಿ ಶರಣು ಬಂದಿರುವೆ
ನಿನ್ನ ಮೇಲಣ ಮುನಿಸಿನಿಂ ರುಕ್ಮಿಣಿ ಬೇರೆಯಾಗಿ ನೆಲೆಸಿಹಳು
ಭಗವಂತಾ ನೀನು ನಿನ್ನ ಪಟ್ಟದ ರಾಣಿ ರುಕ್ಮಿಣಿ ಮುನಿಸಿಕೊಳ್ಳುವಂದದಿ ಏನ ಮಾಡಿದಿ?
ನಿನಗುಂಟು ಬಿರುದುಗಳನೇಕ ಚಕ್ರಧಾರಿ, ಚಕ್ರಪ್ರಾಣಿ
ಆದೊಡೆ ರುಕ್ಮಿಣಿ ವಿಷಯದೊಳು ಏಕೆ ಬಳಸಿದೆ ಮೂಢನಂತೆ ಬೇಡಾದುದನು
ನಿನಗಿಹ ಹಲವು ಬಿರುದುಗಳಲಿ ಬಹುಪ್ರಿಯವಲ್ಲವೆ ಶಂಖಧರ
ಪುಂಡಲಿಕನ ಭಕುತಿಯನು ನಿಕಷದೊಳು ನೋಡ ಹೋದ ನೀನು
ತಿಳಿದು ತಿಳಿದೇಕೆ ನಿಂತೆಯೊ ಇಟ್ಟಿಗೆಯ ಮೇಲೆ!
ಹೇ ವಿಠ್ಠಲಾ ನೀನಿರುವೆ ಪಂಢರಿ ಕ್ಷೇತ್ರಕ್ಕೆ ರಕ್ಷಕನು’

ಈ ಬಗೆಯ ಭಾವವು ಮರಾಠಿಯ ಶ್ರೇಷ್ಠ ಸಂತ ತುಕಾರಾಮನಲ್ಲಿಯೂ ನೋಡಲು ಸಿಕ್ಕುತ್ತದೆ. ಇಷ್ಟು ಮಾತ್ರವಲ್ಲ ಪುರಂದರದಾಸರು ಸುಮಾರು ಹನ್ನೆರಡು ವರ್ಷಗಳ ಕಾಲ ಪಂಢರಪುರದಲ್ಲಿ ವಾಸ್ತವ್ಯ ಮಾಡಿದ್ದರು. ವಿಠ್ಠಲನ ಮಂದಿರದಲ್ಲಿನ ಒಂದು ಸ್ತಂಭವನ್ನು ಇಂದಿಗೂ ಅವರ ಹೆಸರಿನಲ್ಲೇ ಗುರುತಿಸಲಾಗುತ್ತಿದೆ.

ಅಚಲಾನಂದ ದಾಸರ ಮೂಲಕ ಭಾಗವತದ ಪರಿಭಾವದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ವಿಠ್ಠಲ ಸಂಪ್ರದಾಯ ಮುಂದೆ ವಿಶಿಷ್ಟ್ಯಾದ್ವೈತ, ದ್ವೈತ ಪಂಥದ ದಾಸವರೇಣ್ಯರ ಮೂಲಕ ವಿಠ್ಠಲ ಭಕ್ತಿಯ ಒಂದು ಮಹಾಪೂರವಾಗಿ ರೂಪುಗೊಂಡು ಎಲ್ಲೆಡೆ ಪಸರಿಸಿತು. ಇಂದಿಗೂ ಅಗಣಿತ ಸ್ತೋತ್ರ, ಕೀರ್ತನೆಗಳ ಮೂಲಕ ಈ ಸಂಪ್ರದಾಯ ಉಳಿದುಕೊಂಡಿದೆ.

ಇತ್ತ ಮತ್ತೊಂದು ನೆಲೆಯಲ್ಲಿಯೂ ಕರ್ನಾಟಕದ ಅದ್ವೈತಿಗಳು ವಿಠ್ಠಲನತ್ತ ವಾರಕರಿಗಳ ಡಿಂಡಿಯಾತ್ರೆಯಿಂದ ಸೆಳೆಯಲ್ಪಟ್ಟರು. ಯಾದವರ ಮಂತ್ರಿ ಹೇಮಾಡ ಪಂಥ ಎಂಬಾತ ಕರ್ನಾಟಕದ ಶಿಲ್ಪಕಲೆಯನ್ನು (ಬೇಲೂರು, ಹಳೇಬೀಡು) ಕಂಡು ಮೋಹಿತನಾಗಿ ಅಭ್ಯಸಿಸಿ ಮಹಾರಾಷ್ಟ್ರದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದ. ಅವನ್ನು ಹೇಮಾಡ ಪಂಥಿ ದೇವಾಲಯಗಳೆಂದೇ ಕರೆಯುತ್ತಾರೆ. ಈ ಪಂಥದಲ್ಲಿಯೇ ಬಂದವನಾದ ಪುಢಾಕರ ಎಂಬಾತ ಧಾರವಾಡ, ಬೆಳಗಾವಿ, ವಿಜಾಪುರ ಮುಂತಾದ ಪ್ರಾಂತ್ಯಗಳಲ್ಲಿನ ಅದ್ವೈತಿ ಮಾರ್ಗಿಗಳನ್ನು ಪಂಢರಾಪುರದತ್ತ ಸೆಳೆದನು. ಕರ್ನಾಟಕದಲ್ಲಿ ಇಂದಿಗೂ ಕಾಣಸಿಗುವ ಡಿಂಡಿಯಾತ್ರೆ ಇವನ ಕಾರಣವಾಗಿಯೇ ಹುಟ್ಟಿಕೊಂಡುದಾಗಿದೆ. ಇಂದು ಬಹುತೇಕ ಕರ್ನಾಟಕದ ಎಲ್ಲ ಭಾಗಗಳಿಂದಲೂ ಆಷಾಢ, ಕಾರ್ತೀಕ ಮಾಸಗಳಲ್ಲಿ ವಿಠ್ಠಲನ ಈ ಡಿಂಡೀಯಾತ್ರೆಯು ಹೊರಡುತ್ತದೆ. ಜ್ಞಾನೇಶ್ವರಿ ಕೃತಿಯನ್ನು ಭಕ್ತಿಸೇವೆಯ ಮನೋಭಾವದಿಂದ ಓದಿಸುವುದು ಮತ್ತು ಪ್ರಕಟಣೆ ಮಾಡಿ ಹಂಚುವುದೂ ನಡೆಯುತ್ತಿದೆ.

ಉಪಸಂಹಾರ

ವಿಠ್ಠಲ ಎಂಬ ದೇವರು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ಈ ಮೂರು ರಾಜ್ಯಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವಲ್ಲಿ ಮುಖ್ಯವಾದುದು. ಹರಿಹರ ಭೇದವನ್ನು ಲೆಕ್ಕಿಸದೆ ವಿಶಿಷ್ಟವಾದ ಅದ್ವೈತ ಸಂಪ್ರದಾಯದಲ್ಲಿ ಬೆಳೆದಿರುವ ಈ ದೇವರ ಸ್ವರೂಪ ಬಹು ಆಯಾಮದ್ದು. ತಲೆಯ ಮೇಲೆ ಲಿಂಗವುಳ್ಳುದಾದ್ದರಿಂದ ಶೈವ, ಎಲ್ಲಾ ಜಾತಿ ವರ್ಗದವರನ್ನು ಒಪ್ಪಿಕೊಂಡುದರಿಂದ ಜಾತ್ಯತೀತ ಮತ್ತು ಬುದ್ಧ, ಜಿನ ಸ್ವರೂಪಿ. ಹೀಗೆ ವಿಠ್ಠಲ ಸಂಪ್ರದಾಯದ ಅಧ್ಯಯನವೆಂದರೆ ಒಂದು ರೀತಿಯಲ್ಲಿ ದಕ್ಷಿಣ ಭಾರತದ ಸಂಸ್ಕೃತಿಯ ಬಹುಸ್ತರಗಳ ಅಧ್ಯಯನವೇ ಆಗಿದೆ. ಅನೇಕ ಕಾರಣಗಳಿಂದ ವಿಠ್ಠಲನ ಮೂರ್ತಿ ವಿಜಯನಗರಕ್ಕೆ ಬಂದಿತು. ಈ ಕುರಿತಂತೆಯೂ ಗಂಭೀರವಾದ ಕೀರ್ತನೆಗಳಿವೆ.

‘ಏನಿದು ಕೌತುಕವೋ ವಿಠ್ಠಲ | ಏನಿದು ಕೌತುಕವೋ |
ನೀನಿಲಿಗೇಕೆ ಬಂದೆ, ವಿಠ್ಠಲಾ | ಏನಿದು ಕೌತುಕವು ||ಪ||

ಮಧ್ವ ದೈಷಿಗಳು ಮಾಡುವ ಪದ್ಧತಿಯನು ಕಂಡು
ಹೃದ್ಯವಾಗದೆ ಕದ್ದ ಕಳ್ಳನಂತೆ, ಎದ್ದಿಲ್ಲಿಗೆ ಬಂದ್ಯಾ ||೧||

ಮಿಥ್ಯಾವಾದಿಗಳು ನಿರಂತರ ಸುತ್ತಿ ಮುತ್ತಿಕೊಂಡು |
ಅತು ಕರೆದು ಕೂಗುತಿರೆ ಬಹಳ ಬೇಸತ್ತು ಹೊರಟು ಬಂದ್ಯಾ ||೨||

ಶ್ರೀವಿಠ್ಠಲ ನಿನ್ನ ಸದ್ಗುಣ ವೇದಶಾಸ್ತ್ರಗಳಲಿ |
ಶೋಧಿಸಿ ನೋಡಲು ಭೂದೇವರಿಗೊಲಿದಾದರಿಸಿ ಬಂದ್ಯಾ ||೩||
ವಿಠ್ಠಲಾ | ಏನಿದು ಕೌತುಕವೋ ||

ಅಜ್ಞಾತ ಕವಿಯೊಬ್ಬನ ಈ ಗೀತವನ್ನು ಶಂಬಾ ಅವರು ತಮ್ಮ ಮರ‍್ಹಾಟೀ ಸಂಸ್ಕೃತಿ….. ಕೃತಿಯಲ್ಲಿ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ಶ್ರೀವೈಷ್ಣವ ಪಂಥದವರು ವಿಜಯವಿಠ್ಠಲನ ದೇವಾಲಯ ಹಿಡಿದಾಗ ಮಡಿವಂತಿಕೆಯು ಜಾಲ್ತಿಗೆ ಬರಲು ಭಕ್ತ ಭಾನುದಾಸನು ವಿಠ್ಠಲನ ವಿಗ್ರಹವನ್ನು ಪಂಢರಪುರಕ್ಕೆ ತೆಗೆದುಕೊಂಡು ಹೋದ. ಆಗಲೂ ಅಲ್ಲಿ ಮುಸ್ಲಿಮರ ಆಳ್ವಿಕೆಯೇ ಇತ್ತು. ಇಂಥ ಅಂಶಗಳ ಬಗ್ಗೆ ಸೂಕ್ಷ್ಮ ಪರಿಶೀಲನೆಯನ್ನು ಮಾಡಿದಾಗ ವಾರಕರಿ ಪಂಥ ಮತ್ತು ವಿಠ್ಠಲ ಸಂಪ್ರದಾಯದ ವಿಶೇಷತೆಗಳೇನು ಎಂಬುದನ್ನು ಸಮಗ್ರವಾಗಿ ಅರಿಯಬಹುದಾಗಿದೆ. ಈ ಕುರಿತಂತೆ ಈವರೆಗಿನ ಬರಹದಲ್ಲಿ ಅಲ್ಲಲ್ಲಿ ಪ್ರಸ್ತಾಪಿಸಿಲಾಗಿದೆ. ಈ ಮೂರೂ ಭೂಪ್ರದೇಶಗಳ ಜನರು ಕಾಲದ ಅಗತ್ಯಕ್ಕೆ ಅನುಗುಣವಾಗಿ ಈ ಸಂಪ್ರದಾಯವನ್ನು ಒಪ್ಪಿಕೊಂಡು ಬೆಳೆಸಿದ್ದಾರೆ. ಬಹುತ್ವದಲ್ಲಿ ‘ಅಭೇದ’ದ ಸ್ತರವನ್ನು ಕಾಣಲು ಪ್ರಯತ್ನಿಸಿದ್ದಾರೆ ಎಂಬುದು ಈ ಮೂಲಕ ತಿಳಿದು ಬರುತ್ತದೆ. ಕರ್ನಾಟಕದಂತೆ ಆಂಧ್ರದಲ್ಲಿಯೂ ತಲ್ಲಪಾಕ ವೆಂಕಟರಾಯನು ವಿಠ್ಠಲ ಸಾಹಿತ್ಯವನ್ನು ರಚಿಸಿದ್ದನು. ಆದರೆ ಅದು ಕರ್ನಾಟಕದಂತೆ ವಿಸ್ತೃತವಾಗಿ ಬೆಳೆಯಲಿಲ್ಲ.