“ಆಯುಧವಲ್ಲದಿದ್ದರೂ ದೇಹವನ್ನು ನಾಶಮಾಡಬಲ್ಲ ಶಸ್ತ್ರಗಳು ಉಂಟು; ಅವನ್ನು ಅರಿತವನನ್ನು ಶತ್ರುಗಳು ಕೊಲ್ಲಲಾರರು. ಹಿಮವನ್ನೂ ಹುಲ್ಲನ್ನೂ ನಾಶಮಾಡಬಲ್ಲ ವಸ್ತುವು ಕೂಡ, ಮಹಾರಣ್ಯರ ಬಿಲದಲ್ಲಿ ಅಡಗಿಕೊಂಡಿರುವ ವಸ್ತುವನ್ನು ಸುಡಲಾರದು. ಕಣ್ಣಿಲ್ಲದವನಿಗೆ ದಾರಿ, ದಿಕ್ಕು ಕಾಣುವುದಿಲ್ಲ; ಧೈರ್ಯವಿಲ್ಲದವನಿಗೆ ಐಶ್ಚರ್ಯ ದೊರೆಯುವುದಿಲ್ಲ. ಇದನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಇರಿ.”

ಒಗಟಿನಂಥ ಈ ಮಾತುಗಳನ್ನು ಆಡಿದವನು ವಿದುರ. ಅವನು ಹೀಗೆ ಹೇಳಿದ್ದು ಪಾಂಡವರಿಗೆ. ಸಂದರ್ಭ: ಪಾಂಡವರು ತಮ್ಮ ತಾಯಿ ಕುಂತಿಯೊಡನೆ ವಾರಣಾವತ ಎಂಬ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದಾಗ; ಅವರನ್ನು ಬೀಳ್ಕೊಡಲು ಕುರುವಂಶದ ಅರಸರ ರಾಜಧಾನಿಯಾದ ಹಸ್ತಿನಾಪುರದ ಜನರು ನಗರದ ಹೊರವಲಯದಲ್ಲಿ ನೆರೆದಿದ್ದಾಗ. ವಿದುರ ಹೇಳಿದ್ದನ್ನು ಮನವಿಟ್ಟು ಕೇಳಿಕೊಂಡ ಯುದಿಷ್ಠಿರ ತಾನೇನೂ ಮಾತನಾಡಲಿಲ್ಲ. ಆದರೆ ಅವನು ಹೇಳಿದ್ದು ತನಗೆ ಅರ್ಥವಾಯಿತು ಎಂಬಂತೆ ತಲೆ ಅಲ್ಲಾಡಿಸಿದ.

ಅದರ ಅರ್ಥ

ವಿದುರನ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಂಡ ಅನೇಕರಿಗೆ ಅವು ಒಗಟಾಗಿದ್ದಂತೆ, ಯುಧಿಷ್ಠಿರನ ತಾಯಿ ಕುಂತಿಗೂ ಅವನ ತಮ್ಮಂದಿರಿಗೂ ಒಗಟಾಗಿಯೇ ಉಳಿದಿದ್ದವು. ಅವರ ಕುತೂಹಲವನ್ನು ಕೆಣಕಿದ್ದವು.

ದಾರಿ, ಸ್ವಲ್ಪ ದೂರ ಸಾಗಿದ ಮೇಲೆ ಕುಂತಿ, “ವಿದುರನ ಮಾತು ನಮಗೆ ಅರ್ಥವಾಗಲಿಲ್ಲ; ನೀನು ಮಾತ್ರ ಅರ್ಥವಾದಂತೆ ತಲೆಯಾಡಿಸಿದೆ; ಅವನ ಮಾತಿನ ಅರ್ಥವೇನು? ನಮಗೆ ಹೇಳಬಹುದಾದರೆ ಹೇಳು” ಎಂದಳು.

ಯುಧಿಷ್ಠಿರ ಹೇಳಿದ, “ಅಮ್ಮಾ, ಅದರ ಅರ್ಥ ಇಷ್ಟೇ-ಬೆಂಕಿ, ವಿಷಗಳ ಬಗೆಗೆ ಎಚ್ಚರದಿಂದಿರಿ. ಗುಪ್ತ ಮಾರ್ಗವೊಂದಿದೆ-ಅದನ್ನು ತಿಳಿದುಕೊಳ್ಳಿ. ಧೈರ್ಯವಾಗಿ ನಡೆದುಕೊಳ್ಳಿ. ಅದರಿಂದ ನಿಮಗೆ ಲಾಭವುಂಟು ಎಂದು.”

ವಾರಣಾವತಕ್ಕೆ ಹೋಗುತ್ತಿದ್ದ ತಮಗೆ ವಿದುರ ಈ ರೀತಿ ಎಚ್ಚರಿಕೆ ಕೊಟ್ಟಿದ್ದೇಕೆ ಎಂಬುದು ಪಾಂಡವರಿಗೂ ಅವರ ತಾಯಿಗೂ ಆಗ ಒಂದು ಸಮಸ್ಯೆಯಾಗಿಯೇ ಉಳಿಯಿತು. ಆದರೂ ತಾವು ಪ್ರವೇಶಿಸಲಿದ್ದ ಹೊಸ ವಾಸಸ್ಥಳದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕೆಂದು ಅವರು ನಿರ್ಧರಿಸಿದರು.

ಧರ್ಮ ಬಲ್ಲವನು

ಹಸ್ತಿನಾಪುರದ ರಾಜವಂಶ ಹಾಗೂ ವಿದುರ ಇವರದು ಪರಸ್ಪರ ಹತ್ತಿರದ ಸಂಬಂಧ. ವಿದುರನ ತಾಯಿ ಹಸ್ತಿನಾಪುರದ ಅರಮನೆಯ ಅಂತಃಪುರದಲ್ಲಿ ರಾಣಿಯರ ಆಪ್ತ ದಾಸಿಯಾಗಿದ್ದವಳು. ಶಂತನು ಚಕ್ರವರ್ತಿಯ ಮಗ ವಿಚಿತ್ರವೀರ್ಯನ ರಾಣಿಯಾದ ಅಂಬಿಕೆ, ಅಂಬಾಲಿಕೆಯರಲ್ಲಿ, ವ್ಯಾಸರ ಅನುಗ್ರಹದಿಂದ ಧೃತರಾಷ್ಟ್ರ, ಪಾಂಡು ಇವರು ಹುಟ್ಟಿದರು; ಆ ರಾಣಿಯರ ದಾಸಿಯಲ್ಲಿ ವ್ಯಾಸರ ಅನುಗ್ರಹದಿಂದ ಹುಟ್ಟಿದವನು ವಿದುರ. ಹೀಗೆ ಈ ಮೂವರದು ಅಣ್ಣ ತಮ್ಮಂದಿರ ಸಂಬಂಧ. ಪಾಂಡು ರಾಜನ ಐದು ಮಂದಿ ಮಕ್ಕಳಾದ ಯುಧಿಷ್ಠಿರ ಮುಂತಾದವರಿಗೆ ಧೃತರಾಷ್ಟ್ರ ದೊಡ್ಡಪ್ಪ; ವಿದುರ ಚಿಕ್ಕಪ್ಪ.

ವಿದುರ ಬೆಳೆದದ್ದು ಕೂಡ ಅರಮನೆಯಲ್ಲೇ; ಧೃತರಾಷ್ಟ್ರ, ಪಾಂಡು ಇವರ ಜೊತೆಯಲ್ಲೇ. ಅವನು ತನ್ನ ಇಡೀ ಜೀವನವನ್ನು ಕಳೆದದ್ದು ಧೃತರಾಷ್ಟ್ರನ ಸಂಗಾತಿಯಾಗಿ; ಆಪ್ತನಾಗಿ.

ಧೃತರಾಷ್ಟ್ರ ಪಾಂಡು, ವಿದುರ ಈ ಮೂವರೂ ವ್ಯಾಸ ಮಹರ್ಷಿಗಳ ಅನುಗ್ರಹದಿಂದ ಹುಟ್ಟಿದವರೇ ಆದರೂ ಇವರ ಸ್ವಭಾವ ಮಾತ್ರ ಬೇರೆಬೇರೆ. ಹುಟ್ಟಿನಿಂದಲೇ ಕುರುಡನಾದ ಧೃತರಾಷ್ಟ್ರ ಕಪಟಿ, ಸ್ವಾರ್ಥಿ; ಅವನ ಧರ್ಮನಿಷ್ಠೆ ಕೂಡ ಅಷ್ಟಕ್ಕಷ್ಟೇ. ಪಾಂಡುವಾದರೂ ಧರ್ಮಿಷ್ಠ: ಪ್ರಜೆಗಳ ಪ್ರೀತಿಗೆ ಪಾತ್ರನಾದವನು; ವೀರ. ವಿದುರನ ದೈವಭಕ್ತಿ ದೊಡ್ಡದು. ಅವನು ನೀತಿಯನ್ನೂ ಧರ್ಮವನ್ನೂ ಬಲ್ಲವನು. ಅದರಂತೆ ನಡೆಯುತ್ತಿದ್ದವನು. ತನಗೆ ಸರಿತೋರಿದ್ದನ್ನು ಮುಚ್ಚು ಮರೆಯಿಲ್ಲದೆ ಬಿಚ್ಚಿ ಹೇಳುವುದು ಅವನ ಸ್ವಭಾವ. ಇದರಿಂದಾಗಿ ಕಪಟಿಗಳಾದ ಧೃತರಾಷ್ಟ್ರ ಮತ್ತು ಅವನ ಮಕ್ಕಳಿಗೆ-ಅಂದರೆ ಕೌರವರಿಗೆ ವಿದುರನನ್ನು ಕಂಡರೆ ಬೇಸರವೇ. ಆದರೆ ಜನರು ವಿದುರನ ಬಗೆಗೆ ಅಪಾರ ಗೌರವ ತೋರುತ್ತಿದ್ದುದರಿಂದ ಅವನನ್ನು ತಮ್ಮ ಜೊತೆಯಲ್ಲಿಟ್ಟುಕೊಂಡಿದ್ದರು; ಅವನನ್ನು ಬಹಿರಂಗವಾಗಿ ಖಂಡಿಸಲು, ವಿರೋಧಿಸಲು ಕೌರವರು ಹಿಂದುಮುಂದು ನೋಡುತ್ತಿದ್ದರು – ಅಷ್ಟೇ!

ತನ್ನ ಜೀವಿತ ಕಾಲದಲ್ಲಿ ಪಾಂಡು ವಿದುರನನ್ನು ತುಂಬ ಗೌರವಿಸುತ್ತಿದ್ದ; ಅನಂತರ ಅವನ ಮಕ್ಕಳೂ ಅಷ್ಟೇ. ಇದರಿಂದಲಾಗಿ ವಿದುರನಿಗೆ ಪಾಂಡವರ ಮೇಲೆ ತುಂಬ ಪ್ರೀತಿ. ಪಾಂಡು ಸತ್ತಾಗ ಅವನ ಐದು ಜನ ಮಕ್ಕಳೂ ಇನ್ನೂ ಎಳೆಯ ಹುಡುಗರು. ಅವರು ತಮ್ಮ ದಾಯಾದಿಗಳಾದ ಕೌರವರಿಂದ ಯಾವ ವಿಪತ್ತಿಗೂ ಒಳಗಾಗದೆ ಬಲಿಷ್ಠರಾಗಿ ಬೆಳೆಯಬೇಕು, ಕೀರ್ತಿಶಾಲಿಗಳಾಗಿ ಬಾಳುವಂತೆ ಆಗಬೇಕು ಎಂಬುದು ಅವನ ಆಸೆ. ಇದರಿಂದಾಗಿ ವಿದುರ ಪಾಂಡವರ ರಕ್ಷಣೆಯಲ್ಲಿ ತುಂಬ ಆಸಕ್ತಿವಹಿಸುತ್ತಿದ್ದ. ಕೌರವರ ಕುತಂತ್ರಗಳಿಂದ ಅವರನ್ನು ಕಾಪಾಡುವುದು, ತಾನು ಮಾಡಲೇಬೇಕಾದ ಕೆಲಸ ಎಂದು ತಿಳಿದುಕೊಂಡಿದ್ದ.

ಮಂಗಳ ಮಂದಿರ

ಪಾಂಡವರನ್ನೂ ಅವರ ತಾಯಿಯನ್ನೂ ಹಸ್ತಿನಾಪುರದಿಂದ ವಾರಣಾವತಕ್ಕೆ ಕಳುಹಿಸಬೇಕೆಂಬ ಆಲೋಚನೆ ಧೃತರಾಷ್ಟ್ರ ಮತ್ತು ಅವನ ಮಕ್ಕಳಿಗೆ ಇದೆ ಎಂಬ ವಿಚಾರ ವಿದುರನಿಗೆ ತಿಳಿದಾಗ, ಇದರಲ್ಲೇನೋ ಮೋಸವಿರಬೇಕು ಎಂದು ಎನಿಸಿತು ಅವನಿಗೆ. ಆದ್ದರಿಂದಲೇ ವಾರಣಾವತಕ್ಕೆ ಹೊರಟ ಪಾಂಡವರಿಗೆ ಅವನು ಇನ್ನಾರಿಗೂ ಅರ್ಥವಾಗದ ಮಾತಿನಲ್ಲಿ ಎಚ್ಚರಿಕೆ ಕೊಟ್ಟಿದ್ದು.

ವಾರಣಾವತದಲ್ಲಿ ಪಾಂಡವರಿಗಾಗಿ ಒಂದು ಹೊಸ ಅರಮನೆಯೇ ಸಿದ್ಧವಾಗಿತ್ತು. ಆದರೆ ಹೆಸರು ‘ಮಂಗಳ ಮಂದಿರ’. ಧೃತರಾಷ್ಟ್ರನ ಮಗನಾದ ದುರ್ಯೋಧನನ ಆಜ್ಞೆಯಂತೆ ಕಟ್ಟಿದ್ದ ಆ ಹೊಸ ಅರಮನೆಯಲ್ಲಿ ಸುಖ ಜೀವನಕ್ಕೆ ಬೇಕಾದ ಎಲ್ಲ ಸಲಕರಣೆಗೂ ಅನುಕೂಲಗಳು ಇದ್ದವು.

‘ಮಂಗಳ ಮಂದಿರ’ದಲ್ಲಿ ಬಿಡಾರ ಮಾಡಿದ ಪಾಂಡವರು ವಿದುರನ ಎಚ್ಚರಿಕೆಯನ್ನು ಮರೆಯಲಿಲ್ಲ. ಆ ಹೊಸ ಅರಮನೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು. ಕಟ್ಟಡವೇನೋ ನೋಡಲು ಮನೋಹರವಾಗಿಯೇ ಇತ್ತು. ಆದರೆ ಅದನ್ನು ಕಟ್ಟಲು ಉಪಯೋಗಿಸಿದ್ದ ಸಾಮಾನುಗಳಲ್ಲಿ ಬಹುಭಾಗ ಬೆಂಕಿ ಬಿದ್ದೊಡನೆ ಹೊತ್ತಿಕೊಂಡು ಉರಿಯುವಂಥ ಮರ, ನಾರು, ಅರಗು ಮುಂತಾದವು. ವಿದುರನ ಎಚ್ಚರಿಕೆ ಅವರಿಗೆ ಅರ್ಥವಾಯಿತು. ತಾವು ಈ ಮನೆಯಲ್ಲಿದ್ದಾಗ ಅದಕ್ಕೆ ಬೆಂಕಿ ಹಚ್ಚಿಸಿ ತಮ್ಮನ್ನು ಸುಟ್ಟುಬಿಡಬೇಕೆಂದು ಕೌರವರು ಎಂಥ ದುಷ್ಟ ತಂತ್ರ ಹೂಡಿದ್ದಾರೆಂಬುದನ್ನು ಅವರು ಗ್ರಹಿಸಿದರು.

ಸ್ವಲ್ಪ ಕಾಲ ಕಳೆಯಿತು.

ಪಾಂಡವರು ‘ಮಂಗಳ ಮಂದಿರ’ದಲ್ಲಿ ಕೆಲಕಾಲ ಇದ್ದು ಅದಕ್ಕೆ ಒಗ್ಗಿಕೊಂಡ ಮೇಲೆ ಅದಕ್ಕೆ ಬೆಂಕಿ ಹೊತ್ತಿಸಿಬಿಡಬೇಕೆಂದು ದುರ್ಯೋಧನನ ಆಲೋಚನೆ ಇರಬೇಕು ಎಂದು ವಿದುರ ಊಹಿಸಿದ್ದ. ಅಂಥ ದುರ್ಘಟನೆ ಸಂಭವಿಸಿದಲ್ಲಿ ಪಾಂಡವರು ಆ ಅರಮನೆಯಿಂದ ತಪ್ಪಿಸಿಕೊಳ್ಳಲು ಏನಾದರೂ ಏರ್ಪಾಡು ಮಾಡಬೇಕೆಂದು ಆಶಿಸಿದ. ಪಾಂಡವರ ಕಡೆಗೆ ಒಬ್ಬ ಶಿಲ್ಪಿಯನ್ನು ಕಳುಹಿಸಿಕೊಟ್ಟ ಆ ಶಿಲ್ಪಿ ಯಾರಿಗೂ ತಿಳಿಯದಂತೆ ‘ಮಂಗಳ ಮಂದಿರ’ದಿಂದ ಹೊರಕ್ಕೆ ಇಹೋಗಲು ಒಂದು ಸುರಂಗ ಮಾರ್ಗವನ್ನು ತೋಡಿದ.

ಒಂದು ರಾತ್ರಿ ಭೀಮನೇ ಅರಮನೆಗೆ ಬೆಂಕಿ ಹಚ್ಚಿದ. ಪಾಂಡವರು ಸುರಂಗ ಮಾರ್ಗದಿಂದ ತಪ್ಪಿಸಿಕೊಂಡು ಹೋದರು. ಅರಮನೆಯು ಹೊತ್ತಿಕೊಂಡು ಧಗಧಗನೆ ಉರಿಯಲಾರಂಭಿಸಿತು.  ಇದನ್ನು ಕಂಡ ಪುರ ಜನರು ಅಲ್ಲಿಗೆ ಓಡಿಬಂದರು. ಆದರೆ ಆ ಬೆಂಕಿಯನ್ನಾರಿಸಲು ಸಾಧ್ಯವಾಗಲಿಲ್ಲ. ಸ್ವಲ್ಪಹೊತ್ತಿನೊಳಗಾಗಿ ‘ಮಂಗಳ ಮಂದಿರ’ ಉರಿದುಹೋಯಿತು.

ಪಾಂಡವರೂ ಅವರ ತಾಯಿಯೂ ಅಗ್ನಿ ಪ್ರಮಾದಕ್ಕೆ ಒಳಗಾಗಿ ಸತ್ತುಹೋಗಿರಬೇಕೆಂದು ಜನ ಭಾವಿಸಿದರು. ಹಾಗೆಂದು ಹಸ್ತಿನಾಪುರದಲ್ಲಿದ್ದ ಧೃತರಾಷ್ಟ್ರನಿಗೆ ತಿಳಿಸಿದರು. ಈ ಸುದ್ದಿ ಕೇಳಿ ಧೃತಾರಾಷ್ಟ್ರನಿಗೂ ಅವನ ಮಕ್ಕಳಿಗೂ ಸಂತೋಷವೇ-ತಮ್ಮ ದಾಯಾದಿಗಳಾದ ಪಾಂಡವರು ಸತ್ತರೆಂದು. ಆದರೂ ಮೇಲೆ ಮೇಲೆ ತುಂಬ ಶೋಕವನ್ನು ತೋರಿಸುತ್ತ ಪಾಂಡವರಿಗಾಗಿ ಮರುಗಿದರು; ಗೋಳಾಡಿದರು.

ಪಾಂಡವರು ಬೆಂಕಿಗೆ ಸಿಕ್ಕಿ ಸತ್ತಿಲ್ಲವೆಂದೂ ಅವರು ಸುರಂಗ ಮಾರ್ಗದಿಂದ ತಪ್ಪಿಸಿಕೊಂಡು ಹೋಗಿರಬೇಕೆಂದೂ ವಿದುರನ ನಂಬಿಕೆ. ಆದರೆ ಅವರೆಲ್ಲಿಗೆ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಅವನಿಗೂ ಗೊತ್ತಾಗಿರಲಿಲ್ಲ. ಅದನ್ನು ತಿಳಿಯಲು ಅವನು ತಳಮಳಗೊಳ್ಳುತ್ತಿದ್ದ.

ಪಾಂಡವರ ಏಳಿಗೆ

ಪಾಂಡವರು ದ್ರುಪದರಾಜನ ಮಗಳು ದ್ರೌಪದಿಯ ಸ್ವಯಂವರಕ್ಕೆ ಹೋದರು. ದ್ರೌಪದಿ ಪಾಂಡವರ ಹೆಂಡತಿಯಾದಳು. ಆಗಲೇ ಪಾಂಡವರು ಸುರಕ್ಷಿತವಾಗಿದ್ದಾರೆ. ಗೌರವದ ಸ್ಥಾನವನ್ನೂ ಪಡೆದಿದ್ದಾರೆಂಬುದು ವಿದುರನಿಗೆ ಗೊತ್ತಾದದ್ದು. ಈ ಸುದ್ಧಿ ತಿಳಿದು ವಿದುರ ಸಂತೋಷಪಟ್ಟ ಕೌರವರಾದರೂ ಕಳವಳಕ್ಕೀಡಾದರು: ಪಾಂಡವರನ್ನು ನಾಶಪಡಿಸಬೇಕೆಂಬ ತಮ್ಮ ಕುತಂತ್ರ ಕೈಗೂಡದೆ ಹೋದದ್ದು ಮಾತ್ರವಲ್ಲ, ಅದು ಪಾಂಡವರಿಗೆ ಗೊತ್ತಾಗಿರಬೇಕೆಂದು ಆತಂಕ ಒಂದು ಕಡೆ; ಪಾಂಡವರು ದ್ರುಪದ ರಾಜಕುಮರಿ ದ್ರೌಪದಿಯನ್ನು ಮದುವೆಯಾಗಿ ಬಲಿಷ್ಠನಾದ ರಾಜನೊಬ್ಬನ ನೆಂಟಸ್ತನವನ್ನು ಗಳಿಸಿಕೊಂಡರೆಂಬ ಹೊಟ್ಟೆಯ ಕಿಚ್ಚು ಒಂದು ಕಡೆ-ಇವೆರಡೂ ಕೌರವರನ್ನು ಕಾಡಿದವು.

ಮುಂದೇನು ಮಾಡಬೇಕೆಂಬ ಬಗೆಗೆ ಸಮಾಲೋಚನೆಗಳು ನಡೆದವು.. ಭೀಷ್ಮ, ದ್ರೋಣ ಮುಂತಾದ ಹಿರಿಯರು, “ಪಾಂಡವರೊಡನೆ ವೈರ ಬೇಡ. ಅವರಿಗೆ ಅರ್ಧ ರಾಜ್ಯವನ್ನು ಕೊಟ್ಟು ಅವರೊಡನೆ ಸ್ನೇಹದಿಂದ ಬಾಳುವುದೇ ಒಳ್ಳೆಯದು” ಎಂದು ಸೂಚಿಸಿದರು. ವಿದುರನೂ ಈ ಅಭಿಪ್ರಾಯವನ್ನೇ ಎತ್ತಿಹಿಡಿದ. ಹೀಗೆ ಎಲ್ಲರೂ ಒತ್ತಾಯಪಡಿಸಿದಮೇಲೆ, ಧೃತರಾಷ್ಟ್ರ ಈ ಸೂಚನೆಗೆ ಒಪ್ಪಿದ. ಆದರೆ ಪಾಂಡವರನ್ನು ಹಸ್ತಿನಾಪುರಕ್ಕೆ ಹಿಂದಿರುಗಿ ಕರೆದುಕೊಂಡು ಬರುವ ಕೆಲಸ ವಿದುರನ ಪಾಲಿಗೆ ಬಂತು. ಪಾಂಡವರು ಅವನ ಮಾತನ್ನು ಎಂದಿಗೂ ಮೀರುವುದಿಲ್ಲವೆಂಬುದು ಎಲ್ಲರಿಗೂ ಗೊತ್ತು.

ಧೃತರಾಷ್ಟ್ರ ಪಾಂಡವರನ್ನು ತನ್ನ ಅರಮನೆಯಲ್ಲೆ ಕೆಲವು ದಿವಸ ಇಟ್ಟುಕೊಂಢು ಉಪಚಾರ ಮಾಡಿದ. ಅನಂತರ ಅವರಿಗೆ ಅರ್ಧ ರಾಜ್ಯವನ್ನು ಕೊಟ್ಟು, ಖಾಂಡವ ಪ್ರಸ್ಥ ಪ್ರದೇಶಕ್ಕೆ ಕಳುಹಿಸಿದ. ಪಾಂಡವರು ಅಲ್ಲಿಗೆ ಹೋಗಿ ನೆಲೆಸಿದರು. ಘೋರ ಅರಣ್ಯವಾಗಿದ್ದ ಆ ಪ್ರದೇಶವನ್ನು ಅಭಿವೃದ್ಧಿಗೆ ತಂದರು. ಇಂದ್ರಪ್ರಸ್ಥ ಎಂಬ ನಗರವನ್ನು ಕಟ್ಟಿ ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ವೈರಿಗಳನ್ನು ಜಯಿಸಿ ತಮ್ಮ ಐಶ್ವರ್ಯವನ್ನು ಬೆಳೆಸಿಕೊಂಡರು. ಮಿತ್ರರೊಡನೆ ಸೌಹಾರ್ದ, ಸಹಾನುಭೂತಿಗಳಿಂದ ವರ್ತಿಸಿ ಅವರ ಬೆಂಬಲವನ್ನು ಗಳಿಸಿಕೊಂಡರು.

ಹೀಗೆ ಪಾಂಡವರು ರಾಜಸಮೂಹದಲ್ಲಿ ತಮ್ಮ ಹಿರಿಮೆಯನ್ನು ಸ್ಥಾಪಿಸಿಕೊಂಡು ರಾಜಸೂಯ ಯಾಗವನ್ನು ಮಾಡಲು ನಿರ್ಧರಿಸಿದರು. ಅದಕ್ಕೆ ಸಿದ್ಧತೆಗಳನ್ನು ಮಾಡಿ ತಮ್ಮ ಹಿರಿಯರನ್ನೂ ಬಂಧುಗಳನ್ನೂ ಕರೆಸಿಕೊಂಡರು. ಯಾಗದ ಎಲ್ಲ ಖರ್ಚುವೆಚ್ಚಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವಂತೆ ವಿದುರನನ್ನು ಕೇಳಿಕೊಂಡರು. ಅವನು ಒಪ್ಪಿಕೊಂಡ. ಯಾಗ ತುಂಬ ವಿಜೃಂಭಣೆಯಿಂದ ಸುಗಮವಾಗಿ ನಡೆದದ್ದು ಅವನಿಗೆ ಅಪಾರ ಸಂತೋಷವನ್ನುಂಟುಮಾಡಿತು.

ಆದರೆ ದುರ್ಯೋಧನನ ಮೇಲೆ ಆದ ಪರಿಣಾಮವೇ ಬೇರೆ. ಯಾಗದ ಸಂದರ್ಭದಲ್ಲಿ ಆಶ್ರಿತರೂ, ಸ್ನೇಹಿತರೂ ಒಪ್ಪಿಸಿದ ಕಪ್ಪಕಾಣಿಕೆಗಳನ್ನು ತೆಗೆದುಕೊಳ್ಳುವ ಕೆಲಸ ಅವನಿಗೆ ಬಂದಿತ್ತು. ಮುತ್ತುರತ್ನಗಳೂ ಚಿನ್ನದ ಗಟ್ಟಿಗಳೂ ರಾಶಿರಾಶಿಯಾಗಿ ಬಂದು ಬಿದ್ದುದನ್ನು ಕಂಡು ದುರ್ಯೋಧನನಿಗೆ ಪಾಂಡವರ ಮೇಲೆ ಹೊಟ್ಟೆಕಿಚ್ಚು ಉಂಟಾಯಿತು. ಅವರ ಐಶ್ವರ್ಯ, ವೈಭವ, ಪ್ರಭಾವಗಳನ್ನು ಕಂಡು ಅವನು ಕರುಬಿದ. ಹಸ್ತಿನಾಪುರಕ್ಕೆ ಹಿಂದಿರುಗಿದ್ದೇ ತಡ ತನ್ನ ಸೋದರಮಾವ ಶಕುನಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. “ಯುಧಿಷ್ಠಿರನಿಗೆ ಪಗಡೆ ಆಟವೆಂದರೆ ತುಂಬ ಆಸೆ. ಆದರೆ ಚೆನ್ನಾಗಿ ಆಡಲು ಬರುವುದಿಲ್ಲ. ಅವನನ್ನು ಪಗಡೆ ಆಟಕ್ಕೆ ಕರೆದು ಅವನ ಐಶ್ವರ್ಯವನ್ನೆಲ್ಲಾ ಗೆದ್ದುಬಿಡೋಣ. ನನಗೆ ಪಗಡೆ ಆಟದ ಮರ್ಮ ಗೊತ್ತು” ಎಂದ ಶಕುನಿ. ಅವನೂ ದುರ್ಯೋಧನನೂ ಸೇರಿ ಧೃತರಾಷ್ಟ್ರನ ಹತ್ತಿರ ಹೋಗಿ, ಪಗಡೆ ಆಟಕ್ಕೆ ಅವನ ಅನುಮತಿ ಪಡೆದುಕೊಂಡರು.

ನನ್ನ ಮಾತು ಕೇಳು

ಈ ವಿಚಾರ ವಿದುರನಿಗೆ ಗೊತ್ತಾಯಿತು. ಅವನು ಧೃತರಾಷ್ಟ್ರನಿಗೆ, “ಈ ಪಗಡೆಯ ಆಟ ನನಗೆ ಸಮ್ಮತವಿಲ್ಲ. ಇದರಿಂದ ಅಣ್ಣತಮ್ಮಂದಿರಲ್ಲಿ ಜಗಳ ಹುಟ್ಟಿ ಕೇಡಾಗುತ್ತದೆ” ಎಂದು ಹೇಳಿದ. ಆದರೆ ಧೃತರಾಷ್ಟ್ರ ಈ ಮಾತಿಗೆ ಕಿವಿಗೊಡಲಿಲ್ಲ. “ನಾನು, ನೀನು, ನಮ್ಮ ಅಜ್ಜ ಭೀಷ್ಮರು ಇರುವಾಗ ಯಾವ ಅವಿವೇಕವೂ ನಡೆಯಲಾರದು. ನೀನು ರಥವನ್ನು ತೆಗೆದುಕೊಂಡು ಇಂದ್ರಪ್ರಸ್ಥಕ್ಕೆ ಹೋಗಿ ಪಾಂಡವರನ್ನು ಕರೆದುಕೊಂಡು ಬಾ” ಎಂದು ಹೇಳಿದ. ಹಿರಿಯನಾದ ಧೃತರಾಷ್ಟ್ರನ ಆಜ್ಞೆಯನ್ನು ಮೀರಬಾರದೆಂದು ವಿದುರನು ಇಂದ್ರಪ್ರಸ್ಥಕ್ಕೆ ಹೋಗಿ ಪಾಂಡವರನ್ನೂ, ದ್ರೌಪದಿ, ಕುಂತಿಯರನ್ನೂ ಕರೆದುಕೊಂಡು ಹಸ್ತಿನಾಪುರಕ್ಕೆ ಬಂದ.

ಶಕುನಿಯು ದುರ್ಯೋಧನನ ಪರವಾಗಿ ಆಡಿ ಯುಧಿಷ್ಠಿರನಿಂದ ಅವನ ಐಶ್ವರ್ಯದ ಬಹು ಭಾಗವನ್ನು ಗೆದ್ದುಕೊಂಡ. ಆಟ ಹೀಗೇ ಮುಂದುವರಿದರೆ ಅದರಿಂದ ಅಪಾಯವುಂಟು ಎಂದು ಅನ್ನಿಸಿತು. ವಿದುರನಿಗೆ. ಧೃತರಾಷ್ಟ್ರನ ಹತ್ತಿರ ಹೋಗಿ ಅವನಿಗೆ ಬುದ್ಧಿ ಹೇಳಿದ: “ಸಾಯುವವನಿಗೆ ಔಷಧ ಹೇಗೋ ಹಾಗೆ, ನನ್ನ ಮಾತು ನಿನಗೆ ರುಚಿಸದೇ ಇರಬಹುದು. ಆದರೂ ನನ್ನ ಮಾತು ಕೇಳು. ದುರ್ಯೋಧನ ಪಾಪಿ. ಭರತವಂಶದ ವಿನಶಕ್ಕಾಗಿಯೇ ಹುಟ್ಟಿದವನು. ಅವರು ನಿನ್ನ ಮನೆಯಲ್ಲಿ ಸೇರಿಕೊಂಡಿರುವ ನದಿ. ಅದು ನಿನಗೆ ತಿಳಿದಿದ್ದರೂ ನೀನೂ ಎಚ್ಚರಗೊಳ್ಳದೆ ಇದ್ದೀಯೆ. ಅವನನ್ನು ನಿಗ್ರಹಿಸದೆ ಕೌರವರಿಗೆ ಸುಖವಿಲ್ಲ. ಒಂದು ಕುಲಕ್ಕಾಗಿ ಒಬ್ಬನನ್ನು ತ್ಯಜಿಸಬೇಕು; ಗ್ರಾಮಕ್ಕಾಗಿ ಒಂದು ಕುಲವನ್ನು ತ್ಯಜಿಸಬೇಕು; ದೇಶಕ್ಕಾಗಿ ಒಂದು ಗ್ರಾಮವನ್ನು ತ್ಯಜಿಸಬೇಕು. ಧನಧಾಸೆಯಿಂದ ಪಾಂಡವರಿಗೆ ದ್ರೋಹವೆಸಗಬೇಡ. ದುರ್ಯೋಧನ ಗೆಲ್ಲುತ್ತಿದ್ದಾನೆಂದು ಸಂತೋಷಪಡಬೇಡ. ಆಟ ಹೋಗಿ ಹೊಡೆದಾಟ ಹುಟ್ಟಿದಾಗ ಅದರಿಂದ ಸರ್ವನಾಶವಾಗುತ್ತದೆ. ಶಕುನಿಯ ಆಟವನ್ನು ನಾವೆಲ್ಲಾ ಬಲ್ಲೆವು. ಅವನು ಮೋಸಗಾರ. ಅವನು ಇಲ್ಲಿಂದ ಹೊರಟು ಹೋಗಲಿ” ಎಂದು.

ವಿದುರನ ಈ ಮಾತುಗಳನ್ನು ಕೇಳಿ, ಗೆಲುವಿನಿಂದ ಕೊಬ್ಬಿದ್ದ ದುರ್ಯೋಧನನಿಗೆ ತುಂಬ ಸಿಟ್ಟುಬಂತು. ವಿದುರನನ್ನು ಕುರಿತು, “ನೀನು ನಮ್ಮಲೇ ಇದ್ದುಕೊಂಡು ನಮಗೇ ಎರಡು ಬಗೆಯುತ್ತೀಯೆ. ತೊಡೆಯ ಮೇಲೆ ಇಟ್ಟುಕೊಂಡ ಹಾವಿನಂತೆ ನೀನು. ನಮ್ಮ ಹಿತ ಯಾವುದು ಹೇಳು ಎಂದು ನಾವು ನಿನ್ನನ್ನು ಕೇಳಿದೆವೇನು? ಆದ್ದರಿಂದ ನೀನು ಈಗಲೇ ಇಲ್ಲಿಂದ ಹೊರಟುಹೋಗು” ಎಂದು ಸಿಟ್ಟು ಮಾಡಿದನು.

ವಿದುರ ಇದರಿಂದ ಕೋಪಗೊಳ್ಳಲಿಲ್ಲ. ಭರತವಂಶದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ದುರ್ಯೋಧನನಿಗೆ ಬುದ್ಧಿಯ ಮಾತನ್ನೇ ಹೇಳಿದ: “ನಿನಗೆ ಪ್ರಿಯವಾಗಿರುವಂಥೆ ಮಾತನಾಡುವರು ಬಹುಜನ ಸಿಗಬಹುದು; ಆದರೆ ಅಪ್ರಿಯವಾಗಿ ಕಂಡರೂ ಒಳ್ಳೆಯದನ್ನುಂಟು ಮಾಡುವಂಥ ಮಾತು ಆಡುವವರು ಸಿಗುವುದು ಕಷ್ಟ. ನಿಜವಾದ ಸ್ನೇಹವುಳ್ಳವರನ್ನು ಕಡೆಗಾಣಬಾರದು. ಅವರ ಮಾತನ್ನು ಕೇಳಬೇಕು” ಎಂದ.

‘ನಿಜವಾದ ಸ್ನೇಹವುಳ್ಳವರನ್ನು ಕಡೆಗಾಣಬಾರದು’

 ಅನರ್ಥ ಆಗಿಯೇ ಆಯಿತು

 

ಆದರೆ ಯಾರೂ ವಿದುರನ ಮಾತನ್ನು ಕೇಳಲಿಲ್ಲ. ಪಗಡೆಯ ಆಟ ಮುಂದುವರಿಯಿತು. ಯುಧಿಷ್ಠಿರ ಎಲ್ಲವನ್ನೂ ಸೋತ, ತಮ್ಮಂದಿರನ್ನೂ ಸೋತ. ವಿದುರ ದುಃಖವನ್ನು ತಡೆಯಲಾರದೆ ತಲೆಯನ್ನು ಕೈಯಲ್ಲಿ ಹೊತ್ತು ಕುಳಿತ. ಯುಧಿಷ್ಠಿರ ಆಟದಲ್ಲಿ ಆಟದಲ್ಲಿ ಮತ್ತೆ ಸೋತ ಪಣವಾಗಿಟ್ಟಿದ್ದ ದ್ರೌಪದಿಯನ್ನೂ ಕಳೆದುಕೊಂಡ.

ತಾನು ಗೆದ್ದ ಆನಂದದ ಭರದಲ್ಲಿ ದುರ್ಯೋಧನ ತನ್ನ ವಿವೇಕವನ್ನು ಪೂರ್ಣವಾಗಿ ಕಳೆದುಕೊಂಡ. ತನಗೆ ತಂದೆಯ ಸಮಾನನಾದ ವಿದುರನನ್ನು ಕರೆದು, “ಪಾಂಡವರ ಪ್ರಿಯ ಪತ್ನಿಯಾದ ದ್ರೌಪದಿಯನ್ನು ಕರೆದುಕೊಂಡು ಬಾ. ಅವಳು ನಮ್ಮ ದಾಸಿಯರ ನಡುವೆ ಇದ್ದುಕೊಂಡು ನಮ್ಮ ಮನೆಯ ಕಸ ಗುಡಿಸಲಿ. ನಮ್ಮ ಮನಸ್ಸಿಗೆ ಆನಂದವಾಗಲಿ” ಎಂದ.

ಈ ಮಾತು ಕೇಳಿ ವಿದುರ ದುರ್ಯೋಧನನ ಮೇಲೆ ಕೋಪಗೊಳ್ಳಲಿಲ್ಲ. ಅವನ ಅವಿವೇಕಕ್ಕಾಗಿ ಕನಿಕರಿಸಿದ. ಅವನನ್ನು ಕುರಿತು, “ಎಂಥ ಮೂರ್ಖ ನೀನು! ನಿನ್ನ ಕತ್ತಿಗೆ ಬಿದ್ದಿರುವ ನೇಣು ನಿನಗೇ ಕಾಣುತ್ತಾ ಇಲ್ಲವಲ್ಲ! ನೀನು ಕಮರಿಯ ಅಂಚಿನಲ್ಲಿ ತೂರಾಡುತ್ತಾ ಇರುವುದು ನಿನಗೇ ತಿಳಿಯುತ್ತಿಲ್ಲವಲ್ಲ! ಹುಲಿಗಳನ್ನು ರೇಗಿಸಿದ ಜಿಂಕೆ ಬದುಕೀತೆ? ಇದು ಕೌರವರಿಗೆ ಅಂತ್ಯಕಾಲ. ಆದ್ದರಿಂದಲೇ ವಿವೇಕದ ಮಾತುಗಳು ನಿನ್ನ ಕಿವಿಗೆ ಬೀಳುತ್ತಿಲ್ಲ; ದುರಾಶೆ ಬೆಳೆಯುತ್ತಿದೆ” ಎಂದು ಅವನಿಗೆ ಕಾದಿದ್ದ ದುರಂತದ ಬಗೆಗೆ ಎಚ್ಚರಿಕೆ ಕೊಟ್ಟ ಆದರೆ ಯಾರೂ ಅವನ ಮಾತೂ ಕೇಳಲಿಲ್ಲ. ವಿದುರ ದ್ರೌಪದಿಯನ್ನು ಆಸ್ಥಾನಕ್ಕೆ ಕರೆತರಲೂ ಇಲ್ಲ. ದುರ್ಯೋಧನ ಬೇರೆಯವರನ್ನು ಕಳುಹಿಸಿ ದ್ರೌಪದಿಯನ್ನು ಹಿಡಿಸಿ ಆಸ್ಥಾನಕ್ಕೆ ಎಳೆತರಿಸಿದ. ಅವನೂ ಅವನ ತಮ್ಮ ದುಶ್ಯಾಸನನೂ ಅವಳನ್ನು ಅವಮಾನ ಮಾಡಿದರು. ಕೊನೆಗೆ ಧೃತರಾಷ್ಟ್ರ ಪಾಂಡವರಿಗೆ ಅವರ ಐಶ್ವರ್ಯವನ್ನೆಲ್ಲಾ ಹಿಂದಕ್ಕೆ ಕೊಡಿಸಿದ. ಅವರನ್ನೂ ದ್ರೌಪದಿಯನ್ನೂ ಸಮಾಧಾನ ಮಾಡಿ ಗೌರವದಿಂದ ಹಿಂದಕ್ಕೆ ಕಳುಹಿಸಿಕೊಟ್ಟ.

ಪಾಂಡವರು ಅತ್ತ ಹೋದದ್ದೇ ತಡ. ದುರ್ಯೋಧನನು ಧೃತರಾಷ್ಟ್ರನ ಹತ್ತಿರಕ್ಕೆ ಹೋಗಿ, “ವನವಾಸವನ್ನು ಪಣವಾಗಿ ಇಟ್ಟು ಇನ್ನೊಮ್ಮೆ ಜೂಜಾಡೋಣ. ಪಾಂಡವರನ್ನು ಕರೆಸು” ಎಂದು ಬೇಡಿಕೊಂಡ. ಧೃತರಾಷ್ಟ್ರ ಅದಕ್ಕೆ ಒಪ್ಪಿಕೊಂಡ. ಆಗ ವಿದುರ, ಭೀಷ್ಮ, ದ್ರೋಣ ಮುಂತಾದವರೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಿದರು. ಆದರೂ ಅವನು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಪಾಂಡವರು ಬಂದರು. ಸೋತವರು ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುವ ಷರತ್ತಿನ ಮೇಲೆ ಮತ್ತೆ ಜೂಜು ನಡೆಯಿತು. ಯುಧಿಷ್ಠಿರ ಮತ್ತೆ ಸೋತ. ಪಾಂಡವರು ವನವಾಸಕ್ಕೆ ಸಿದ್ಧರಾದರು. ಹೀಗೆ ದೀನಸ್ಥಿತಿಗೆ ಬಂದ ಪಾಂಡವರನ್ನೂ ದ್ರೌಪದಿಯನ್ನೂ ಕೌರವರು ಹೀಯಾಳಿಸಿ ಮಾತನಾಡಿದರು. ಪಾಂಡವರಿಗೂ ಕೋಪಬಂತು. ಯುದಧ ಸಂಭವಿಸಿದಾಗ ಕೌರವರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದರು. 

‘ನ್ಯಾಯವಾದ, ಪ್ರಾಮಾಣಿಕವಾದ ರೀತಿಯಲ್ಲಿ ನಡೆದುಕೊಳ್ಳುವುದೇ ಶ್ರೇಯಸ್ಸನ್ನು ಸಾಧಿಸುವ ಮಾರ್ಗ’.

 ಯಾವ ದುರ್ಘಟನೆಯನ್ನು ತಡೆಗಟ್ಟಬೇಕೆಂದು ವಿದುರ ಶ್ರಮಿಸಿದನೋ ಅದು ನಡೆದೇ ನಡೆಯುವಂತಾಯಿತು – ದುರ್ಯೋಧನನೂ ಅವನ ತಂದೆ ಧೃತರಾಷ್ಟ್ರನೂ ವಿದುರನ ಬುದ್ಧಿವಾದಕ್ಕೆ ಮನಸ್ಸು ಕೊಡದೆ ಇದ್ದುದರಿಂದ.

ಪಾಂಡವರೂ ದ್ರೌಪದಿಯೂ ವನವಾಸಕ್ಕೆ ಹೋದರೆ ಮುಪ್ಪಿನ ವಯಸ್ಸಿನ ಕುಂತಿಯ ಗತಿಯೇನು? ಅವಳು ಅವರೊಡನೆ ಕಾಡಿಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಸಹಿಸಬಲ್ಲಳೆ? ವಿದುರ ಈ ವಿಚಾರವಾಗಿ ಆಲೋಚಿಸಿದ. ಕುಂತಿ ಎಲ್ಲಿರಬೇಕು? ಧೃತರಾಷ್ಟ್ರನ ಅರಮನೆಯಲ್ಲಿದ್ದರೆ ಅವಳ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ. ಅವಳು ತನ್ನ ಮನೆಯಲ್ಲಿದ್ದರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ನಿರ್ಧರಿಸಿ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದ.

ಧರ್ಮದ ಮಾತು ಹೇಳಿದ್ದೂ ತಪ್ಪು!

ತನ್ನ ಮಕ್ಕಳು ಜೂಜಿನಲ್ಲಿ ಪಾಂಡವರ ರಾಜ್ಯ, ಐಶ್ವರ್ಯಗಳನ್ನೆಲ್ಲಾ ವಶಪಡಿಸಿಕೊಂಡದ್ದು. ಸ್ವಾರ್ಥಿಯಾದ ಧೃತರಾಷ್ಟ್ರನಿಗೆ ಒಂದು ರೀತಿಯಲ್ಲಿ ಸಂತೋಷವೇ. ಆದರೂ ಪಾಂಡವರು ಬಲಶಾಲಿಗಳು; ಯುದ್ಧಚತುರರು. ಮೋಸದಿಂದ ಕಷ್ಟಕ್ಕೆ ಒಳಗಾದ ಅವರು ಕೋಪಗೊಂಡುತನ್ನ ಮಕ್ಕಳ ಮೇಲೆ ಹೋರಾಟ ಆರಂಭಿಸಿದರೆ ಗತಿಯೇನು? ಎಂಬ ಚಿಂತೆ ಅವನನ್ನು ಕಾಡುತ್ತಿತ್ತು. ಹೀಗೆ ತನ್ನ ಮನಸ್ಸು ಚಿಂತೆಗೊಳಗಾದಾಗಲೆಲ್ಲಾ ವಿದುರನನ್ನು ಕರೆಸಿ ಅವನ ಸಲಹೆ ಕೇಳುವುದು ಧೃತರಾಷ್ಟ್ರನ ಪದ್ಧತಿ. ಪಾಂಡವರು ವನವಾಸಕ್ಕೆ ಹೊರಟುಹೋದ ಮೇಲೆ ಅವನು ವಿದುರನನ್ನು ತನ್ನ ಬಳಿಗೆ ಕರೆಸಿಕೊಂಡ.  ಅವನನ್ನು ಕುರಿತು, “ವಿದುರ, ನೀನು ಧರ್ಮದ ಗುಟ್ಟನ್ನು ಬಲ್ಲವನು. ಪಾಂಡವರು ಕೌರವರು ಇಬ್ಬರಲ್ಲೂ ಒಂದೇ ರೀತಿಯ ಅಭಿಮಾನವುಳ್ಳವನು. ಆದ್ದರಿಂದ ಇವರಿಬ್ಬರಿಗೂ ಯಾವುದು ಹಿತವೋ ಅದನ್ನು ಹೇಳು. ಪಾಂಡವರಿಂದ ನಾವು ನಾಶವಾಗಬಾರದು; ನಮ್ಮಿಂದ ಪಾಂಡವರೂ ನಾಶವಾಗಬಾರದು; ಏನು ಮಾಡಿದರೆ ಇದು ಸಾಧ್ಯ; ಹೇಳು” ಎಂದು ಕೇಳಿಕೊಂಡನು.

ಇದಕ್ಕೆ ಉತ್ತರವಾಗಿ ವಿದುರ, “ಧೃತರಾಷ್ಟ್ರ, ನೀನು ಧರ್ಮದಿಂದ ನಡೆದುಕೊಂಡರೆ ನಿನ್ನ ಮಕ್ಕಳೂ ಪಾಂಡವರೂ ಸುಖವಾಗಿ ಬಾಳುತ್ತಾರೆ. ಅಧರ್ಮದಿಂದ ನಡೆದುಕೊಂಡ ನಿನ್ನ ಮಗನ ಬೆಂಬಲಕ್ಕೆ ನಿಂತು ನೀನು ತಪ್ಪು ಮಾಡಿದ್ದಿ. ಅನ್ಯಾಯವಾಗಿ ಪಾಂಡವರಿಂದ ಅಪಹರಿಸಿರುವುದನ್ನೆಲ್ಲಾ ಅವರಿಗೆ ಹಿಂದಕ್ಕೆ ಕೊಡಿಸಿಬಿಡು. ಆಗ ಎಲ್ಲವೂ ಸರಿಹೋಗುತ್ತದೆ. ಆದರೆ ನಿನ್ನ ಮಗ ದುರ್ಯೋಧನ ಈ ಮತಿಗೆ ಒಪ್ಪುವುದಿಲ್ಲ. ಅವನು ಹಾಗೆ ಒಪ್ಪದೆ ಇದ್ದರೆ, ಅವನನ್ನು ನೀನು ಶಿಕ್ಷಿಸಿ ದೂರ ಮಾಡಬೇಕು. ಇಲ್ಲದಿದ್ದರೆ ಕೌರವರ ನಾಶ ತಪ್ಪಿದ್ದಲ್ಲ. ಈ ಮಾತನ್ನು ನಿನಗೆ ಎಷ್ಟೋ ಬಾರಿ ಹೇಳಿದ್ದೇನೆ” ಎಂದನು.

ಈ ಮಾತು ಕೇಳಿ ಧೃತರಾಷ್ಟ್ರನಿಗೆ ತುಂಬ ಕೋಪ ಬಂತು. “ನೀನು ಯಾವಾಗಲೂ ಪಾಂಡವರ ಪಕ್ಷಪಾತಿ; ನಮಗೆ ಅನುಕೂಲನಲ್ಲ” ಎಂದು ವಿದುರನನ್ನು ದೂರಿ, “ಪಾಂಡವರಿಗಾಗಿ ನನ್ನ ಮಗನನ್ನು ಬಿಟ್ಟುಬಿಡು ಎನ್ನುತ್ತೀಯಾ? ನನ್ನ ಮಗ ನನ್ನ ದೇಹದ ಹಾಗೆ. ನನ್ನ ದೇಹವನ್ನು ನಾನೇ ನಾಶಮಾಡಿಕೊಳ್ಳಲೇ? ಎಂಥ ಬುದ್ಧಿವಾದ ನಿನ್ನದು! ನೀನು ಕಪಟಿ. ನಮ್ಮಲ್ಲಿ ನಿನಗೆ ಸ್ವಲ್ಪವೂ ಅಭಿಮಾನವಿಲ್ಲ. ಗೌರವವಿಲ್ಲ! ಇಲ್ಲಿರಲು ಇಷ್ಟವಿಲ್ಲದಿದ್ದರೆ ಎಲ್ಲಿಗಾದರೂ ಹೊರಟುಹೋಗು” ಎಂದು ಗುಡುಗುಟ್ಟುತ್ತಾ ವಿದುರನನ್ನು ಅಲ್ಲಿಯೇ ಬಿಟ್ಟು ತಾನೊಬ್ಬನೇ ಎದ್ದು ಒಳಕ್ಕೆ ಹೊರಟುಹೋದನು.

ನೀವು ಹೀಗೆ ನಡೆದುಕೊಳ್ಳಿ

ಧೃತರಾಷ್ಟ್ರನ ಮಾತು, ನಡುವಳಿಕೆಗಳಿಂದ ವಿದುರನ ಮನಸ್ಸಿಗೆ ಬೇಸರವಾಯಿತು. ಪಾಪ! ವನವಾಸದಲ್ಲಿರುವ ಪಾಂಡವರು ಎಷ್ಟು ಕಷ್ಟಪಡುತ್ತಿದ್ದಾರೆಯೋ ಎಂಬ ಆತಂಕವೂ ಉಂಟಾಯಿತು. ಅವರನ್ನು ನೋಡಿಕೊಂಡು ಬರೋಣವೆಂದು ಹೊರಟ.

ವಿದುರ ತಮ್ಮ ಕುಟೀರಕ್ಕೆ ಬಂದೊಡನೆಯೇ ಪಾಂಡವರು ಅವನನ್ನು ಸತ್ಕರಿಸಿ ಕುಶಲ ಪ್ರಶ್ನೆಗಳನ್ನು ಕೇಳಿದರು. ಅನಂತರ ವಿದುರ, ತಾನೇಕೆ ಹಸ್ತಿನಾಪುರವನ್ನು ಬಿಟ್ಟುಬಂದೆ ಎಂಬುದನ್ನು ಅವರಿಗೆ ತಿಳಿಸುತ್ತಾ ತನಗೂ ಧೃತರಾಷ್ಟ್ರನಿಗೂ ಆದ ಮಾತುಕತೆಗಳನ್ನೆಲ್ಲಾ ವಿವರಿಸಿದ.

“ತಾಳಿದವನು ಬಾಳಿಯಾನು. ಕಷ್ಟವಿರಲಿ, ಸುಖವಿರಲಿ, ಬಂಧು-ಬಳಗದವರೊಡನೆ ಒಂದೇ ರೀತಿಯಿಂದ ನಡೆದುಕೊಳ್ಳಬೇಕು; ಅವರನ್ನು ಮರ್ಯಾದೆಯಿಂದ ಕಾಣಬೇಕು. ಈ ದೊಡ್ಡ ಗುಣವುಳ್ಳವರು ಮುಂದಕ್ಕೆ ಬರುತ್ತಾರೆ. ನೀವೂ ಇದರಂತೆ ನಡೆದುಕೊಳ್ಳಿ” ಎಂದು ಪಾಂಡವರಿಗೆ ಉಪದೇಶ ಮಾಡಿದ. ತಾವು ಅದರಂತೆ ನಡೆಯುವುದಾಗಿ ಪಾಂಡವರು ವಿದುರನಿಗೆ ಮಾತುಕೊಟ್ಟರು.

ವಿದುರ ಹಸ್ತಿನಾಪುರವನ್ನು ಬಿಟ್ಟು ಹೊರಟುಹೋದ ಸುದ್ದಿ ತಿಳಿದು ಧೃತರಾಷ್ಟ್ರನ ಮನಸ್ಸಿಗೆ ತುಂಬ ಖೇದವಾಯಿತು. ಬಸವಳಿದು, ಜ್ಞಾನತಪ್ಪಿ ಬಿದ್ದು ಬಿಟ್ಟನು. ಚೇತರಿಸಿಕೊಂಡ ಮೇಲೆ ಹತ್ತಿರದಲ್ಲಿದ್ದ ಸಂಜಯನನ್ನು ಕರೆದು, “ವಿದುರ ನನ್ನ ತಮ್ಮ, ನನ್ನ ಆಪ್ತ’ ಅಷ್ಟುಮಾತ್ರವಲ್ಲ, ಅವನು ಧರ್ಮವನ್ನು ಬಲ್ಲವನು. ಅವನು ನನ್ನನ್ನು ಬಿಟ್ಟುಹೋದಾಗಿನಿಂದ ನನ್ನ ಮನಸ್ಸಿಗೆ ಕಸಿವಿಸಿಯಾಗುತ್ತಿದೆ. ಅವನು ನನ್ನ ಜೊತೆಯಲ್ಲಿಲ್ಲದಿದ್ದರೆ ನಾನು ಬದುಕಲಾರೆ. ಅವನನ್ನು ಹುಡುಕಿ ಬೇಗ ಕರೆದುಕೊಂಡು ಬಾ” ಎಂದು ಹೇಳಿ ಕಳುಹಿಸಿದನು. ತನಗೆ ಹಿರಿಯನಾದ ಧೃತರಾಷ್ಟ್ರ ತನಗಾಗಿ ಹಂಬಲಿಸುತ್ತ ದುಃಖತನಾಗಿದ್ದಾನೆ ಎಂಬುದನ್ನು ತಿಳಿದು ವಿದುರ ಒಡನೆಯೇ ಹಸ್ತಿನಾಪುರಕ್ಕೆ ಹಿಂದಿರುಗಿದ. ಇದರಿಂದ ಧೃತರಾಷ್ಟ್ರನಿಗೆ ಸಂತೋಷವಾಯಿತು. ಆದರೆ ವಿದುರ ಹಿಂದಿರುಗಿ ಬಂದದ್ದು ದುರ್ಯೋಧನನಿಗೆ ಇಷ್ಟವಾಗಲಿಲ್ಲ.

ಮುಂದೇನು?

ಪಾಂಡವರು ಹದಿಮೂರು ವರ್ಷಗಳನ್ನು ಕಳೆದರು. ಆ ಕಾಲದ ಕಡೆಯಲ್ಲಿ ವಿರಾಟ ಎಂಬ ರಾಜನ ಮಗಳನ್ನು ಅರ್ಜುನನ ಮಗ ಅಭಿಮನ್ಯುವಿಗೆ ಕೊಟ್ಟು ಮದುವೆಯಾಯಿತು. ಕೃಷ್ಣ, ಬಲರಾಮ, ದ್ರುಪದ ಮುಂತಾದ ಅವರ ಬಂಧುಗಳೂ ಸ್ನೇಹಿತರೂ ಅವರನ್ನು ನೋಡಲು ಬಂದರು. ದುರ್ಯೋಧನನಿಂದ ಮತ್ತೆ ರಾಜ್ಯ ಪಡೆಯುವುದು ಹೇಗೆ ಎಂಬ ಪ್ರಶ್ನೆ ಬಂದಿತು.

ಯುದ್ಧದಲ್ಲಿ ತೊಡಗಿ, ಬಂಧುಗಳನ್ನೇ ಕೊಲ್ಲುವುದು ಯುಧಿಷ್ಠಿರನ ಮನಸ್ಸಿಗೆ ಅಷ್ಟಾಗಿ ರುಚಿಸಲಿಲ್ಲ. ಅದನ್ನು ಗಮನಕ್ಕೆ ತಂದುಕೊಂಡು ಹೋರಾಟ ಆರಂಭಿಸುವುದಕ್ಕೆ ಮೊದಲೂ ಸಂಧಾನ ನಡೆಸಿ ನೋಡೋಣ ಎಂದು ಕೆಲವರು ಸಲಹೆ ಮಾಡಿದರು. ಅದರಂತೆ ದ್ರುಪದನು ತನ್ನ ಪುರೋಹಿತನನ್ನು ಧೃತರಾಷ್ಟ್ರನ ಆಸ್ಥಾನಕ್ಕೆ ಕಳುಹಿಸಿಕೊಟ್ಟನು. ಅವನು ಭೀಷ್ಮ, ಧೃತರಾಷ್ಟ್ರ, ವಿದುರ, ದುರ್ಯೋಧನ ಮುಂತಾದವರೆಲ್ಲರೂ ಇದ್ದ ಸಭೆಯಲ್ಲಿ, “ನೀವೆಲ್ಲರೂ ಸೇರಿ ಧರ್ಮಕ್ಕೆ ಅನುಸಾರವಾಗಿ ಪಾಂಡವರಿಗೆ ಬರಬೇಕಾದದ್ದನ್ನು ಅವರಿಗೆ ಕೊಡಿಸಿಬಿಡಿ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಪಾಂಡವರಿಗೆ ಯುದ್ಧ ಬೇಕಿಲ್ಲ. ಆದರೆ ತಮಗೆ ನ್ಯಾಯವಾಗಿ ದೊರೆಯಬೇಕಾದುದನ್ನು ಪಡೆಯಲು ಅವರು ಯುದ್ಧ ಮಾಡಲು ಹಿಂಜರಿಯುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದನು.

ಪಾಂಡವರೊಡನೆ ಸ್ನೇಹದಿಂದ ನಡೆದುಕೊಳ್ಳಬೇಕೆಂಬ ಮಾತಿಗೆ ಭೀಷ್ಮ ಬೆಂಬಲ ಕೊಟ್ಟನು. ಆದರೆ ಕರ್ಣ ಅದನ್ನು ಒಪ್ಪದೆ “ಯುದ್ಧವೇ ನಡೆಯಲಿ” ಎಂದನು ಧೃತರಾಷ್ಟ್ರ ಭೀಷ್ಮನ ಮಾತನ್ನು ಒಪ್ಪಿ, ಪಾಂಡವರೊಡನೆ ಸಂಧಾನದ ಮಾತುಕತೆ ನಡೆಸಲು ಸಂಜಯನನ್ನು ಕಳುಹಿಸಿಕೊಟ್ಟ ಅವನು ಉಪಪ್ಲಾವ್ಯಕ್ಕೆ ಹೋಗಿ ಯುಧಿಷ್ಠಿರನೊಡನೆ ಮಾತನಾಡಿದನು. ಯುಧಿಷ್ಠಿರನು ತನ್ನ ಪುರೋಹಿತನ ಮೂಲಕ ಹೇಳಿದ್ದ ಮಾತನ್ನೇ ಹೇಳಿದ. ಅಲ್ಲದೆ ವಿದುರನಿಗೆ “ನೀನು ಯುಧಿಷ್ಠಿರನಿಗೆ ಹಿತವನ್ನು ಮಾಡಬೇಕೆಂದಿದ್ದರೆ ಯುದ್ಧವಾಗದಂತೆ ನೋಡಿಕೋ” ಎಂದು ಹೇಳಿಕಳುಹಿಸಿದ.

ವಿದುರ ನೀತಿ

ಸಂಜಯ, ಉಪಪ್ಲಾವ್ಯದಿಂದ ಹಸ್ತಿನಾಪುರಕ್ಕೆ ಹಿಂದಿರುಗಿದಾಗ ರಾತ್ರಿಯಾಗಿತ್ತು. ಆದರೂ ಅವನು ಒಡನೆಯೇ ಧೃತರಾಷ್ಟ್ರನನ್ನು ಕಂಡು, “ದೀರ್ಘ ಪ್ರಯಾಣದಿಂದ ನನಗೆ ತುಂಬ ಆಯಾಸವಾಗಿದೆ. ಯುಧಿಷ್ಠಿರನು ಏನು ಹೇಳಿದನೆಂಬುದನ್ನು ನಾಳೆ ಬೆಳಗ್ಗೆ ರಾಜಸಭೆಯಲ್ಲಿ ತಿಳಿಸುತ್ತೇನೆ. ಯಾರಲ್ಲಿ ತಪ್ಪಿದೆಯೋ ಅವರನ್ನು ತೆಗಳಲೇಬೇಕಾಗುತ್ತದೆ. ನೀನು ಪಾಂಡವರೊಡನೆ ವೈರ ಕಟ್ಟಿಕೊಂಡು ಪ್ರಜಾನಾಶಕ್ಕೆ ಕಾರಣನಾಗುತ್ತಿದ್ದೀಯೆ. ಆದ್ದರಿಂದ ನಾನು ನಿನ್ನನ್ನು ತೆಗಳದೆ ವಿಧಿಯಿಲ್ಲ” ಎಂದು ಹೇಳಿ ಹೊರಟುಹೋದ.

ಸಂಜಯನ ಮಾತು ಕೇಳಿ ಧೃತರಾಷ್ಟ್ರನ ಮನಸ್ಸಿನಲ್ಲಿ ಕಳವಳ ಉಂಟಾಯಿತು. ಮಲಗಿದರೂ ನಿದ್ರೆ ಬರಲಿಲ್ಲ. ವಿದುರನನ್ನು ಬರಮಾಡಿಕೊಂಡ. ಸಂಜಯ ತನ್ನನ್ನು ತೆಗಳಿದ ವಿಚಾರವನ್ನು ಅವನಿಗೆ ತಿಳಿಸಿ, “ಯಾವುದು ಧರ್ಮವೋ ಏತರಿಂದ ಶ್ರೇಯಸ್ಸು ಉಂಟಾಗುವುದೋ ಅದನ್ನು ನನಗೆ ಹೇಳು. ಅದರಿಂದ ನನ್ನ ಮನಸ್ಸಿಗೆ ಸಮಾಧಾನವಾಗಬಹುದು” ಎಂದನು.

ಧೃತರಾಷ್ಟ್ರನ ಸ್ಥಿತಿಯನ್ನು ಕಂಡು ವಿದುರನಿಗೆ ಮರುಕವುಂಟಾಯಿತು. ಹೇಗಾದರೂ ಮಾಡಿ ಯುದ್ಧವನ್ನು ತಪ್ಪಿಸು ಎಂದು ಯುಧಿಷ್ಠಿರ ಹೇಳಿಕಳುಹಿಸಿದ್ದ ಮಾತನ್ನು ನೆನಪಿಗೆ ತಂದುಕೊಂಡು ಧೃತರಾಷ್ಟ್ರನಿಗೆ ರಾತ್ರಿ ಬಹು ಹೊತ್ತಿನವರೆಗೆ, ನಾನಾ ವಿಚಾರಗಳನ್ನು ಕುರಿತು ಬುದ್ಧಿಯ ಮಾತುಗಳನ್ನು ಹೇಳಿದನು. ಇವು ‘ವಿದುರ ನೀತಿ’ ಎಂದು ಪ್ರಸಿದ್ಧವಾಗಿವೆ.

ವಿದುರನು ಧೃತರಾಷ್ಟ್ರನಿಗೆ ಮೊದಲು ವಿವೇಕಿ ಯಾರು, ಅವಿವೇಕಿ ಯಾರು, ಅವರು ಹೇಗೆಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ವಿವರಿಸಿದನು. ಒಬ್ಬನು ಮಾಡುವ ಪಾಪದ ಪರಿಣಾಮವನ್ನು ಅನೇಕರು ಅನುಭವಿಸಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದನು. ನ್ಯಾಯಸಮ್ಮತವಾದ, ಪ್ರಾಮಾಣಿಕವಾದ ರೀತಿಯಲ್ಲಿ ನಡೆದುಕೊಳ್ಳುವುದೇ ಶ್ರೇಯಸ್ಸನ್ನು ಸಾಧಿಸುವ ಮಾರ್ಗ ಎಂದು ತಿಳಿಸಿದನು. “ಪಾಂಡವರಿಗೆ ಕೊಡಬೇಕಾದ ರಾಜ್ಯದ ಪಾಲನ್ನು ಅವರಿಗೆ ಕೊಟ್ಟುಬಿಡು; ಆಗ ನೀನು, ನಿನ್ನ ಮಕ್ಕಳು, ಪಾಂಡವರು ಎಲ್ಲರೂ ಸುಖದಿಂದಿರಬಹುದು” ಎಂದು ಸೂಚಿಸಿದನು.

ವಿದುರ ಹೇಳಿದ್ದನ್ನೆಲ್ಲಾ ಕೇಳಿದ ಮೇಲೆ ಧೃತರಾಷ್ಟ್ರ, “ವಿದುರ, ನೀನು ಹೇಳುವುದೆಲ್ಲಾ ಸರಿ. ನೀನು ಯಾವಾಗಲೂ ಇದೇ ಮಾತನ್ನೇ ಹೇಳುತ್ತಿದ್ದೀಯೆ. ನನ್ನ ಬುದ್ಧಿಗೂ ಅದು ಸರಿಯೆಂದೇ ತೋರುತ್ತದೆ. ಅದೇ ರೀತಿ ನಡೆದುಕೊಳ್ಳೋಣ ಎನಿಸುತ್ತದೆ. ಆದರೆ ಏನು ಮಾಡಲಿ? ದುರ್ಯೋಧನ ಬಂದು ಮಾತನಾಡಿದನೆಂದರೆ ಅದೆಲ್ಲಾ ಬದಲಾಗುತ್ತದೆ” ಎಂದು ತನ್ನ ಅಸಹಾಯಕತೆಯನ್ನೂ ಆತಂಕವನ್ನೂ ತೋಡಿಕೊಂಡನು.

ಮಾರನೆಯ ದಿನದ ಸಭೆಯಲ್ಲಿ ಸಂಜಯ ಯುಧಿಷ್ಠಿರನ ಅಭಿಪ್ರಾಯವನ್ನೂ ಪಾಂಡವರ ನಿಲುವನ್ನೂ ಸ್ಪಷ್ಟವಾಗಿ ತಿಳಿಸಿದ. ಇದನ್ನು ಕೇಳಿದ ಧೃತರಾಷ್ಟ್ರ,  “ಪಾಂಡವರೊಡನೆ ಯುದಧ ಬೇಡ; ಸಂಧಿ ಮಾಡಿಕೊಳ್ಳೋಣ” ಎಂದು ಸೂಚಿಸಿದ. ಭೀಷ್ಮ ಕೂಡ ಈ ಅಭಿಪ್ರಾಐವನ್ನು ಅನುಮೋದಿಸಿದ. ಆದರೆ ದುರ್ಯೋಧನ ಮಾತ್ರ ಇದಕ್ಕೆ ಒಪ್ಪಲಿಲ್ಲ. “ಯುದ್ಧ ಮಾಡಿಯೇ ಸಿದ್ಧ’ ಎಂದ.

ಇನ್ನು ಮೇಲಾದರೂ ಬುದ್ಧಿ ಕಲಿತುಕೋ

ಕಡೆಯದಾಗಿ ಸಂಧಾನಕ್ಕೆ ಪಾಂಡವರು ಶ್ರೀಕೃಷ್ಣನನ್ನೆ ಕಳುಹಿಸಿದರು.

ಕೃಷ್ಣ ಸಂಧಾನಕ್ಕಾಗಿ ಬರುತ್ತಿದ್ದಾನೆಂಬುದು ತಿಳಿದೊಡನೆಯೇ ಧೃತರಾಷ್ಟ್ರ ವಿದುರನನ್ರನು ಕರೆಸಿ, “ನಾಳೆ ಶ್ರೀಕೃಷ್ಣ ಇಲ್ಲಿಗೆ ಬರುತ್ತಾನೆ. ನಾವು ಅವನಿಗೆ ಅತ್ಯಂತ ವೈಭವದ ಸ್ವಾಗತ, ಸತ್ಕಾರಗಳನ್ನು ವ್ಯವಸಥೆ ಮಾಡಬೇಕು. ಊರನ್ನೆಲ್ಲಾ ಸಿಂಗರಿಸಬೇಕು. ದುರ್ಯೋಧನನ ಮನೆಗಿಂತ ದುಶ್ಯಾಸನನ ಮನೆಯೇ ಚೆನ್ನಾಗಿದೆ. ಕೃಷ್ಣ ಬಿಡಾರಕ್ಕಾಗಿ ಆ ಮನೆಯನ್ನು ಬಿಟ್ಟುಕೊಡಬೇಕು. ತುಂಬ ಬೆಲೆ ಬಾಳುವ ವಸ್ತುಗಳನ್ನು ಅವನಿಗೆ ಕಾಣಿಕೆಯಾಗಿ ಅರ್ಪಿಸಬೇಕು” ಎಂದನು.

ಇದನ್ನು ಕೇಳಿ ವಿದುರ, “ಧೃತರಾಷ್ಟ್ರ, ನಿನಗೆ ವಯಸ್ಸಾಯಿತು; ಇನ್ನು ಮೇಲಾದರೂ ಒಳ್ಳೆಯ ಬುದ್ಧಿಯನ್ನು ಕಲಿತುಕೋ. ಇಲ್ಲದಿದ್ದರೆ ನಿನ್ನ ವಂಶ ನಾಶವಾಗುತ್ತದೆ. ನೀನು ಶ್ರೀಕೃಷ್ಣನಿಗೆ ಸಲ್ಲಿಸಬೇಕೆಂದ ಎಲ್ಲ ಸತ್ಕಾರಗಳೂ ಕೃಷ್ಣನಿಗೆ ಸಲ್ಲಬೇಕಾದವುಗಳೇ. ಅದಕ್ಕೆ ಅವನು ಅರ್ಹನೆ, ಆದರೆ ನೀನು ಧರ್ಮಬುದ್ಧಿಯಿಂದಾಗಲೀ ಪ್ರೀತಿಯಿಂದಾಗಲೀ ಇವನ್ನು ಕೃಷ್ಣನಿಗೆ ಅರ್ಪಿಸುತ್ತಿಲ್ಲ. ಈ ಹೊರ ಉಪಚಾರಗಳಿಂದ ಕೃಷ್ಣನನ್ನು ಒಲಿಸಿಕೊಂಡು, ಪಾಂಡವರು ಕೇಳುತ್ತಿರುವ ಐದು ಊರುಗಳು ಕೂಡ ಅವರಿಗೆ ದಕ್ಕದಂತೆ ಮಾಡಬೇಕೆಂದು ಯೋಚಿಸುತ್ತಿದ್ದೀಯೆ.  ಆದರೆ ಕೃಷ್ಣ ಇಂಥ ತಂತ್ರಗಳಿಂದ ಮೋಸ ಹೋಗುವವನಲ್ಲ. ಪಾಂಡವರನ್ನು ಕಂಡರೆ ಅವನಿಗೆ ಪಂಚಪ್ರಾಣ. ಈಗ ಅವನು ಇಲ್ಲಿಗೆ ಬಂದಿರುವುದು ಯುದ್ಧವನ್ನು ತಪ್ಪಿಸಿ ಕೌರವರಿಗೆ ಕೇಡಾಗದಂತೆ ಮಾಡುವುದಕ್ಕಾಗಿ. ಅದರಿಂದ ಅವನನ್ನು ಆಡಂಬರವಿಲ್ಲದೆ ಸತ್ಕರಿಸಿ, ಅವನ ಮಾತಿನಂತೆ ನಡೆದುಕೋ” ಎಂದು ಬುದ್ಧಿಯ ಮಾತು ಹೇಳಿದನು.

ದುರ್ಯೋಧನನು, “ಕೃಷ್ಣನಿಗೆ ತುಂಬ ಗೌರವ ತೋರಿಸಿದರೆ ನಾವು ಹೆದರಿದ್ದೇವೆ ಎಂದುಕೊಳ್ಳುತ್ತಾನೆ. ಕೃಷ್ಣನನ್ನೇ ಸೆರೆಹಿಡಿದರೆ ಪಾಂಡವರ ಬಲ ಮುರಿದ ಹಾಗೆ’ ಎಂದ. ಈ ಮಾತುಗಳನ್ನು ಕೇಳಿ ಅಲ್ಲಿದ್ದ ಹಿರಯರಿಗೆಲ್ಲ ತುಂಬ ವ್ಯಥೆಯಾಯಿತು.

ಕೃಷ್ಣ ಸಂಧಾನ

ಮಾರನೆಯ ದಿನ ಬೆಳಗ್ಗೆ ಶ್ರೀಕೃಷ್ಣ ಹಸ್ತಿನಾಪುರಕ್ಕೆ ಬರುತ್ತಿದ್ದಾಗ ಭೀಷ್ಮ, ದ್ರೋಣ ಮುಂತಾದವರು ಅವನನ್ನು ಊರ ಹೊರಗೇ ಕಂಡು ಸ್ವಾಗತಿಸಿದರು. ಊರೊಳಕ್ಕೆ ಬಂದಮೇಲೆ ಕೃಷ್ಣ ನೇರವಾಗಿ ಧೃತರಾಷ್ಟ್ರನ ಅರಮನೆಗೆ ಹೋಗಿ ಅವನಿಗೆ ನಮಸ್ಕರಿಸಿ ಕ್ಷೇಮ ಸಮಾಚಾರವನ್ನು ವಿಚಾರಿಸಿದ. ಅವನು ಕೃಷ್ಣನನ್ನು ಸತ್ಕರಿಸಿದ. ಅನಂತರ ಕೃಷ್ಣ ಹೋದದ್ದು ವಿದುರನ ಮನೆಗೆ. ಅಲ್ಲಿ ಕೃಷ್ಣಿಗೆ ಭಕ್ತಿ, ಪ್ರೀತಿ, ವಿಶ್ವಾಸಗಳಿಂದ ಕೂಡಿದ ಸತ್ಕಾರ ನಡೆಯಿತು. ಊಟ, ವಿಶ್ರಾಂತಿ ಆದ ಮೇಲೆ ಕುಂತಿಯನ್ನು ಕಂಡು, ಪಾಂಡವರ ಕ್ಷೇಮ ಸಮಾಚಾರವನ್ನು ಅವಳಿಗೆ ವಿವರವಾಗಿ ತಿಳಿಸಿದ. ಅವರ ಕಷ್ಟದ ಕಾಲ ತೀರಿತು. ಅವರು ಬೇಗನೆ ಜಯಶಾಲಿಗಳಾಗಿ ಮೆರೆಯುವರು ಎಂದು ಹೇಳಿ ಅವಳನ್ನು ಸಮಾಧಾನ ಮಾಡಿದ.

ರಾತ್ರಿಯ ಊಟವಾದ ಮೇಲೆ, ವಿದುರ ಕೃಷ್ಣನನ್ನು ಕುರಿತು, “ದುರ್ಯೋಧನ ಧರ್ಮ ಅಧರ್ಮಗಳನ್ನು ಲಕ್ಷಿಸದ ಮೂರ್ಖ, ಕೋಪಿಷ್ಠ ದುರಭಿಮಾನಿ. ತಾನೇ ಬುದ್ಧಿವಂತನೆಂಬ ಅಹಂಕಾರ ಬೇರೆ. ಅವನು ಹಿರಿಯರನ್ನು ಗೌರವಿಸುವುದಿಲ್ಲ. ಇಂಥ ಅವಿವೇಕಿ ಇರುವ ಸಭೆಗೆ ನೀನು ಹೋಗುವುದು ನನಗೆ ಇಷ್ಟವಿಲ್ಲ” ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ.

ಇದನ್ನು ಕೇಳಿದ ಕೃಷ್ಣ “ವಿದುರ, ನೀನು ಹೇಳಿದ್ದೆಲ್ಲಾ ಸತ್ಯ. ಈ ಎಲ್ಲ ವಿಚಾರಗಳು ನನಗೂ ತಿಳಿದಿವೆ. ಆದರೂ ಸಂಧಾನಕ್ಕಾಗಿ ಬಂದಿದ್ದೇನೆ- ಸಾವಿನ ದವಡೆಯೊಳಕ್ಕೆ ನುಗ್ಗಲು ಸಿದ್ಧವಾಗಿರುವ ಪ್ರಚಂಡ ಸೇನೆಗಳನ್ನು ವಿನಾಶದಿಂದ ತಪ್ಪಿಸಬಹುದಾದರೆ ತಪ್ಪಿಸೋಣ ಎಂದು. ಇದು ಧರ್ಮಕಾರ್ಯ. ನನ್ನ ಪ್ರಯತ್ನ ಸಾರ್ಥಕವಾಗಲಿ, ಬಿಡಲಿ ನನ್ನ ಕರ್ತವ್ಯವನ್ನು ಮಾಡಿದ ಸಮಾಧಾನ ಇರುತ್ತದೆ. ದುರ್ಯೋಧನನ ಕಡೆಯವರೆಲ್ಲಾ ಒಟ್ಟಾಗಿ ನನ್ನ ಮೇಲೆ ಬಿದ್ದರೂ ಕೂಡ ನನ್ನನ್ನು ಏನೂ ಮಾಡಲಾರರು, ನನ್ನ ವಿಚಾರವಾಗಿ ಯಾವ ಆತಂಕವೂ ಬೇಡ” ಎಂದು ಹೇಳಿದ.

ಮಾರನೆಯ ದಿನ ಬೆಳಗ್ಗೆ ಕೃಷ್ಣ ಧೃತರಾಷ್ಟ್ರನ ಸಭೆಗೆ ಹೋದ. ವಿದುರ ಅವನ ಜೊತೆಯಲ್ಲಿಯೇ ಇದ್ದ. ವಿದುರ ಕೃಷ್ಣನ ಪಕ್ಕದಲ್ಲಿಯೇ ಕುಳಿತ.

ಕೃಷ್ಣನು ಧೃತರಾಷ್ಟ್ರನಿಗೂ ದುರ್ಯೋಧನನಿಗೂ ಹೇಳಿದ ಬುದ್ಧಿವಾದದ ಮಾತುಗಳಿಂದ ಪ್ರಯೋಜನವಾಗಲಿಲ್ಲ. ದುರ್ಯೋಧನನೂ ಅವನ ಕಡೆಯವರೂ ಕೃಷ್ಣನನ್ನೇ ಸೆರೆಹಿಡಿಯುವ ಯೋಚನೆ ಮಾಡಿದರು.

ಈ ಕುತಂತ್ರದ ಸುಳಿವು ತಿಳಿದೊಡನೆಯೇ ಧೃತರಾಷ್ಟ್ರ, ವಿದುರನ ಮೂಲಕ ದುರ್ಯೋಧನನಿಗೆ ಮತ್ತೆ ಹೇಳಿ ಕಳುಹಿಸಿದ. “ಇದು ಮೂರ್ಖ ಪ್ರಯತ್ನ ಬಿಟ್ಟುಬಿಡು” ಎಂದು ಹೇಳಿದ. ವಿದುರ ಕೂಡ ಧೃತರಾಷ್ಟ್ರನ ಮಾತಿಗೆ ಬೆಂಬಲ ಕೊಟ್ಟು, ಕೃಷ್ಣನ ಶಕ್ತಿ, ಸಾಮರ್ಥ್ಯ, ಸಾಹಸ ಕಾರ್ಯಗಳನ್ನೆಲ್ಲಾ ವಿವರಿಸಿ, “ಕೃಷ್ಣನ ತಂಟೆಗೆ ಮಾತ್ರ ಹೋಗಬೇಡ” ಎಂದು ದುರ್ಯೋಧನನನ್ನು ಎಚ್ಚರಿಸಿದ. ಆದರೂ ಅವನು ಯಾರ ಮಾತನ್ನೂ ಲಕ್ಷಿಸಲಿಲ್ಲ. ಕೃಷ್ಣನನ್ನು ಸೆರೆ ಹಿಡಿಯಲು ಪ್ರಯತ್ನಿಸಿದ, ಆದರೆ ಸಾಧ್ಯವಾಗಲಿಲ್ಲ.

ದುಃಖವನ್ನು ತಡೆದುಕೋ

ಕೌರವ ಪಾಂಡವರ ನಡುವೆ, ಕುರುಕ್ಷೇತ್ರದಲ್ಲಿ ಹದಿನೆಂಟು ದಿನಗಳು ಘೋರ ಯುದ್ಧ ನಡೆಯಿತು. ಎರಡು ಕಡೆಯವರಿಗೂ ಸೇರಿದಂತೆ ಹದಿನೆಂಟು ಅಕ್ಷೋಹಿಣಿ ಸೇನೆ ಹತವಾಯಿತು. ದುರ್ಯೋಧನ ಮತ್ತು ಅವನ ಸಹೋದರರೂ ಕರ್ಣನೇ ಮುಂತಾದ ಅವನ ಶೂರ ಮಿತ್ರರೂ ಯುದ್ಧದಲ್ಲಿ ಮಡಿದರು. ಪಾಂಡವರ ಕಡೆಯೂ ಅನೇಕಾನೇಕ ಮಂದಿ ವೀರರು ಸತ್ತರು.

ಯಾವ ಜನಹತ್ಯೆಯನ್ನು ತಪ್ಪಿಸಬೇಕೆಂದು ಯುಧಿಷ್ಠಿರನು ಆಸೆಪಟ್ಟನೋ ವಿದುರ ಕೃಷ್ಣರು ಪ್ರಯತ್ನಿಸಿದರೋ ಅದು ನಡೆದೇಹೋಯಿತು. ಧೃತರಾಷ್ಟ್ರ, ಗಾಂಧಾರಿ ಇಬ್ಬರೂ ಮುದುಕರು. ಧೃತರಾಷ್ಟ್ರ ಕುರುಡ. ಅವರು ನೂರು ಜನ ಮಕ್ಕಳನ್ನೂ ಬಂಧು ಬಳಗವನ್ನೂ ಕಳೆದುಕೊಂಡರು. ಅವರ ಗೋಳನ್ನು ಹೇಳುವುದು ಸಾಧ್ಯವಿಲ್ಲ. ದುಃಖ, ಸಂಕಟ ಅಪಾರ. ಅವರನ್ನು ಸಮಾಧಾನಪಡಿಸುವುದು ತುಂಬ ಕಷ್ಟವೇ ಆಯಿತು. ವಿದುರನು ಧೃತರಾಷ್ಟ್ರನನ್ನು ಸಮಾಧಾನ ಪಡಿಸುತ್ತಾ, “ಆಸೆಯೇ ದುಃಖಕ್ಕೆ ಮೂಲ. ತತ್ವಜ್ಞಾನವೇ ಅದಕ್ಕೆ ಮದ್ದು. ಮನಸ್ಸನ್ನು ಬಿಗಿಹಿಡಿದು ದುಃಖವನ್ನು ಕಳೆದುಕೋ. ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡು, ಸ್ನೇಹದಿಂದ ನಡೆದುಕೋ. ಅದರಿಂದ ಒಳ್ಳೆಯದಾಗುತ್ತದೆ” ಎಂದು ಬೋಧಿಸಿದ. ಯಾರು ಎಷ್ಟು ಹೇಳಿದರೂ ಗಾಂಧಾರಿ, ಧೃತರಾಷ್ಟ್ರರ ದುಃಖ ಶಾಂತವಾಗಲಿಲ್ಲ. ತಮ್ಮ ಮಕ್ಕಳು ಮೊಮ್ಮಕ್ಕಳನ್ನೆಲ್ಲಾ ಯುದ್ಧರಂಗದಲ್ಲಿ ಕಳೆದುಕೊಂಡ ನೋವು ಅವರ ಮನಸ್ಸನ್ನು ಇರಿಯುತ್ತಲೇ ಇತ್ತು. ಯುಧಿಷ್ಠಿರನಂತೂ ಆ ನೋವನ್ನು ಪರಿಹರಿಸಿ ಅವರ ಮನಸ್ಸಿಗೆ ಶಾಂತಿಯನ್ನುಂಟುಮಾಡಲು ತನ್ನಿಂದಾದ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದ. ತಾನು ರಾಜ್ಯಭಾರವನ್ನು ವಹಿಸಿಕೊಂಡ ಮೇಲೆ ವಿದುರನನ್ನು ತನ್ನ ಮಂತ್ರಿಯನ್ನಾಗತಿ ನಿಯಮಿಸಿದ; ಧೃತರಾಷ್ಟ್ರ, ಗಾಂಧಾರಿಯವರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವ ಮತ್ತು ಅವರ ಇಷ್ಟವನ್ನು ನಡೆಸಿಕೊಡುವ ಕೆಲಸವನ್ನು ಅವನಿಗೇ ವಹಿಸಿದ. ವಿದುರ ಈ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿದ. ಅದರಿಂದ ಧೃತರಾಷ್ಟ್ರ, ಗಾಂಧಾರಿಯವರ ಮನಸ್ಸಿಗೆ ಸ್ವಲ್ಪಮಟ್ಟಿಗೆ ಸಮಾಧಾನವಾಯಿತು. ಮೊದಲಿನಿಂದ ವಿದುರ ಹೇಳಿದಂತೆ ನಡೆದಿದ್ದರೆ ತಾನಾಗಲೀ, ಗಾಂಧಾರಿಯಾಗಲೀ ಇಷ್ಟೊಂದು ದುಃಖಪಡಬೇಕಾಗಿ ಬರುತ್ತಿರಲಿಲ್ಲ ಎಂಬುದನ್ನು ಧೃತರಾಷ್ಟ್ರ ಮನಗಂಡನು. ಆ ಮಾತನ್ನು ಬಾಯಿಬಿಟ್ಟು ಆಡಿಯೂ ತೋರಿಸಿದನು.

ತಪಸ್ಸಿಗೆ

ಕುರುಕ್ಷೇತ್ರದ ಮಹಾಯುದ್ಧ ಮುಗಿದು ಯುಧಿಷ್ಠಿರ ಪಟ್ಟಕ್ಕೆ ಬಂದಮೇಲೆ ಧೃತರಾಷ್ಟ್ರ, ಗಾಂಧಾರಿಯರು ಹದಿನೆಂಟು ವರ್ಷಕಾಲ ಅವನ ಪೋಷಣೆಯಲ್ಲಿಯೇ ಇದ್ದರು. ಅನಂತರ ಒಂದು ದಿನ ಧೃತರಾಷ್ಟ್ರ, ಯುಧಿಷ್ಠಿರನನ್ನು ಕರೆಸಿಕೊಂಡು ತಾನೂ ಗಾಂಧಾರಿಯೂ ಕಾಡಿಗೆ ತಪಸ್ಸಿಗೆ ಹೋಗುವುದಾಗಿ ಹೇಳಿದ. ಯುಧಿಷ್ಠಿರ ಒಪ್ಪಿಗೆ ಕೊಡಲೇಬೇಕಾಯಿತು.

ಇದು ಗೊತ್ತಾದೊಡನೆ ಕುಂತಿ ತಾನೂ ಗಾಂಧಾರಿ, ಧೃತರಾಷ್ಟ್ರರೊಡನೆ ವನವಾಸಕ್ಕೆ ಹೋಗುವುದಾಗಿ ನಿರ್ಧರಿಸಿದಳು. ವಿದುರನೂ ಅದೇ ರೀತಿ ನಿರ್ಣಯ ಮಾಡಿದ. ಪಾಂಡವರು, ದ್ರೌಪದಿ ಎಷ್ಟು ಬೇಡಿಕೊಂಡರೂ ಈ ನಾಲ್ಕು ಜನರು ವನವಾಸಕ್ಕೆ ಹೊರಟೇಬಿಟ್ಟರು. ಅರಮನೆಯವರೂ ಪುರಜನರೂ ಅವರನ್ನು ಗೌರವದಿಂದ ಬೀಳ್ಕೊಟ್ಟರು.

ಅವರು ಅತ್ತ ತಪೋವನಕ್ಕೆ ಹೋದಮೇಲೆ ಕೂಡ, ಇತ್ತ ಪಾಂಡವರಿಗೆ ಅವರ ಹಂಬಲವೇ. ಧೃತರಾಷ್ಟ್ರ, ಗಾಂಧಾರಿಯವರು ಕಣ್ಣುಕಾಣದ ಮುದುಕ, ಮುದುಕಿಯರು, ಕುಂತಿಯೂ ಇಳಿವಯಸ್ಸಿನವಳೇ. ಅವಳಿಗೆ ಮೊದಲಿನಷ್ಟು ಶಕ್ತಿಯೂ ಇಲ್ಲ. ಅವಳು ಆ ಹಿರಿಯರಿಬ್ಬರ ಆರೈಕೆ ನಡೆಸುವುದಾದರೂ ಹೇಗೆ ಸಾಧ್ಯ? ಕಾಡಿನಲ್ಲಿ ಇವರೆಲ್ಲಾ ಏನೇನು ಕಷ್ಟ ಅನುಭವಿಸುತ್ತಿದ್ದಾರೋ ಎಂಬ ಚಿಂತೆ ಪಾಂಡವರನ್ನು ಕಾಡಿತು. ಈ ಕಳವಳ ಹೆಚ್ಚಿದ ಮೇಲೆ ಅವರು ತಪೋವನಕ್ಕೆ ಹೋಗಿ ತಮ್ಮ ಹಿರಿಯರನ್ನು ನೋಡಿಕೊಂಡು ಬರಲು ಹೊರಟರು. ಅನೇಕ ಮಂದಿ ಪುರಜನರು ಕೂಡ ಅವರೊಡನೆ ಪ್ರಯಾಣ ಬೆಳೆಸಿದರು.

ಕುಂತಿ, ಗಾಂಧಾರಿ, ಧೃತರಾಷ್ಟ್ರು ಅವರಿಗೆ ಧೃತರಾಷ್ಟ್ರನ ಆಶ್ರಮದಿಂದ ನದಿಗೆ ಹೋಗುವ ದಾರಿಯಲ್ಲೇ ಸಿಕ್ಕಿದರುಇ. ಎಲ್ಲರೂ ಜೊತೆಯಾಗಿ ಆಶ್ರಮಕ್ಕೆ ಬಂದರು. ಪರಸ್ಪರ ಕ್ಷೇಮ ವಿಚಾರಿಸಿದ ಮೇಲೆ ಯುಧಿಷ್ಠಿರ, “ವಿದುರನೆಲ್ಲಿ? ಕಾಣುವುದಿಲ್ಲವಲ್ಲ!” ಎಂದು ಧೃತರಾಷ್ಟ್ರನನ್ನು ಕೇಳಿದ. ಅದಕ್ಕವನು, “ವಿದುರ ಕ್ಷೇಮದಿಂದಿದ್ದಾನೆ; ಆದರೆ ನಮ್ಮ ಜೊತೆಯಲ್ಲಿಲ್ಲ. ದಟ್ಟವಾಗಿ ಅರಣ್ಯದಲ್ಲಿ ಇದ್ದುಕೊಂಡು ಉಗ್ರವಾದ ತಪಸ್ಸು ನಡೆಸುತ್ತಿದ್ದಾನೆ. ಯಾವ ಆಹಾರವನ್ನೂ ತೆಗೆದುಕೊಳ್ಳುತ್ತಿಲ್ಲ. ಪೂರ್ತಿ ಉಪವಾಸ ಮಾಡುತ್ತಿದ್ದಾನೆ. ತುಂಬ ಸವೆದುಹೋಗಿದ್ದಾನೆ. ಯಾವಾಗಲಾದರೂ ಒಮ್ಮೆಮ್ಮೆ ಈ ಕಡೆ ಬಂದು ನಮ್ಮನ್ನು ನೋಡಿಕೊಂಡು ಹೊರಟು ಹೋಗುತ್ತಾನೆ’ ಎಂದನು.

ಧಾರ್ಮಿಕ ಪರಂಪರೆ

ಹೇಗಾದರೂ ಮಾಡಿ ವಿದುರನನ್ನು ಕಾಣಬೇಕೆಂಬ ಅಪೇಕ್ಷಯುಂಟಾಯಿತು ಯುಧಿಷ್ಠಿರನ ಮನಸ್ಸಿನಲ್ಲಿ ಆ ಹೊತ್ತಿಗೆ ಸರಿಯಾಗಿ ಅಲ್ಲಿದ್ದವರು  ಯಾರೋ, “ಅಗೋ ವಿದುರ! ಈ ಕಡೆಗೇ ಬರುತ್ತಿದ್ದ; ಆಶ್ರಮದಲ್ಲಿ ಇಷ್ಟೊಂದು ಜನ ಇರುವುದನ್ನು ನೋಡಿ, ಬೇಗಬೇಗ ಹಿಂದಕ್ಕೆ ಹೋಗುತ್ತಿದ್ದಾನೆ” ಎಂದು ಕೂಗಿಕೊಂಡರು.

ಯುಧಿಷ್ಠಿರ ತಿರುಗಿನೋಡಿದ. ಥಟ್ಟನೆ ಮೇಲೆದ್ದು ವಿದುರನ ಕಡೆಗೆ ಓಡಿದ. 

ಯುಧಿಷ್ಠಿರನನ್ನೇ ದೃಷ್ಟಿಸಿ ನೋಡಲಾರಂಭಿಸಿದ

 ವಿದುರ ಮುಂದೆಮುಂದೆ ನಡೆಯುತ್ತಾ ದಟ್ಟವಾದ ಅರಣ್ಯವನ್ನು ಹೊಕ್ಕ. ಯುಧಿಷ್ಠಿರ ಅವನನ ನು ಹಿಂಬಾಲಿಸಿದ. ವಿದುರ ಒಮ್ಮೆಮ್ಮೆ ಕಣ್ಣಿಗೆ ಬೀಳುತ್ತಿದ್ದ; ಒಮ್ಮೆಮ್ಮೆ ಮರಗಳ ಗುಂಪಿನಲ್ಲಿ ಮರೆಯಾಗುತ್ತಿದ್ದ. ಅವನು ತನಗೆ ಸಿಗದೆ ತಪ್ಪಿಹೋಗಬಾರದೆಂದು ಆಲೋಚಿಸಿದ ಯುಧಿಷ್ಠಿರ, “ವಿದುರ! ವಿದುರ! ನಾನು ಯುಧಿಷ್ಠಿರ; ನಿನ್ನ ಪ್ರೀತಿಗೆ ಪಾತ್ರನಾದ ಯುಧಿಷ್ಟಿರ; ನಿನಗಾಗಿ ಬರುತ್ತಿದ್ದೇನೆ” ಎಂದು ಗಟ್ಟಿಯಾಗಿ ಕೂಗಿಕೊಳ್ಳುತ್ತಾಠ ಮುಂದುವರಿದ. ಹೀಗೆ ಸ್ವಲ್ಪದ ಊರ ಹೋದಮೇಲೆ ವಿದುರ ಒಂದು ನಿರ್ಜನವಾದ ಪ್ರದೇಶದಲ್ಲಿ ಒಂದು ಮರಕ್ಕೆ ಬೆನ್ನುಕೊಟ್ಟು ನಿಂತಿರುವುದು ಕಾಣಿಸಿತು. ಯುಧಿಷ್ಠಿರ ಅವನ ಹತ್ತಿರಕ್ಕೆ ಹೋಗಿ ನಿಂತು ನೋಡಿದ. ವಿದುರನ ಮೈ ಬಹಳ ಕೃಶವಾಗಿತ್ತು. ಮೈನರಗಳೆಲ್ಲಾ ಉಬ್ಬಿಕೊಂಡಿದ್ದವು. ಜಟೆ ಕಟ್ಟಿದ ಕೂದಲು, ಬಾಯಿಯಲ್ಲಿ ಚಿಣ್ಣಿಯಂಥ ಒಂದು ಸಣ್ಣ ಮರದ ತುಂಡು ಇತ್ತು. ಮೈಮೇಲೆ ಬಟ್ಟೆಯಿರಲಿಲ್ಲ. ಧೂಳು ಮುಸುಕಿತ್ತು.

ಯುಧಿಷ್ಠಿರ ಇನ್ನೂ ಸ್ವಲ್ಪ ಹತ್ತಿರಕ್ಕೆ ಹೋಗಿ, “ನಾನು, ಯುಧಿಷ್ಠಿರ” ಎಂದ. ಯಾರೊಡನೆಯೂ ಮಾತನಾಡದೆ ಇವರು ಮೌನವ್ರತವನ್ನು ಕೈಗೊಂಡಿದ್ದ ವಿದುರ, ಯುಧಿಷ್ಠಿರನ ಕಡೆಗೆ ಕಣ್ಣು ಹಾಯಿಸಿ ಅಲ್ಲಿಯೇ ನಿಲ್ಲುವಂತೆ ಸನ್ನೆಮಾಡಿದ. ಅನಂತರ ಯುಧಿಷ್ಠಿರನ ಕಣ್ಣುಗಳಲ್ಲಿ ತನ್ನ ದೃಷ್ಟಿಯನ್ನು ನಿಲ್ಲಿಸಿ ದಟ್ಟಿಸಿ ನೋಡಲಾರಂಭಿಸಿದ . ಅವನು ಹಾಗೆ ನೋಡುತ್ತ ಇದ್ದಂಥೆ, ವಿದುರ ಗಳಿಸಿಕೊಂಡಿದ್ದ ಪ್ರಬಲಶಕ್ತಿ ತನ್ನಲ್ಲಿ ಬಂದು ಸೇರಿಕೊಳ್ಳುತ್ತಿದೆ ಎನಿಸಿತು ಯುಧಿಷ್ಠಿರನಿಗೆ! ಹೊಸ ಬಲವೂ ತೇಜಸ್ಸೂ ತನ್ನ ದೇಹದಲ್ಲಿ ಸೇರಿದ ಅನುಭವವಾಯಿತು ಅವನಿಗೆ.

ಯುಧಿಷ್ಠಿರ ಈ ಹೊಸ ಅನುಭವದಿಂದ ಚೇತರಿಸಿಕೊಂಡು ವಿದುರನ ಕಡೆ ನೋಡಿದ.  ವಿದುರನ ದೇಹ ಸೆಟೆದು ನಿಂತಿತ್ತು. ಅದರಲ್ಲಿ ಜೀವವಿರಲಿಲ್ಲ.

ಮಹಾಭಾರತದಲ್ಲಿ ಬರುವ ರಂಗುರಂಗಿನ ಪಾತ್ರಗಳ ಮಾಲಿಕೆಯಲ್ಲಿ ವಿದುರನ ಸ್ಥಾನ ಅಪರೂಪವಾದದ್ದು. ಅತ್ಯ ಪೂರ್ವವಾದದ್ದು ಕೂಡ. ವಿದುರ ಯಾವ ಕಳಂಕವೂ ಇಲ್ಲದಂಥ ಮಹಾಪುರುಷ. ಅವನ ವ್ಯಕ್ತಿತ್ವ ಅತ್ಯಂತ ಶುಭ್ರವಾದದ್ದು. ಅವನು ಧರ್ಮದ ಪ್ರತೀಕ. ಧರ್ಮವನ್ನು ಎಂದೂ ಮೀರಿದವನಲ್ಲ. ತನಗೆ ಯಾವುದು ಧರ್ಮ ಅಥವಾ ಅಧರ್ಮ ಎಂದು ತೋರಿತೋ ಅದನ್ನು ಯಾವ ಆಸೆ ಆತಂಕಗಳಿಗೂ ಒಳಗಾಗದೆ ಸ್ಪಷ್ಟವಾಗಿ, ಧೈರ್ಯವಾಗಿ ಹೇಳಲು ಅವನು ಹಿಂಜರಿಯುತ್ತಿರಲಿಲ್ಲ. ಇದು ಅವನ ಹಿರಿಮೆ.

ಇಂಥ ಧರ್ಮಾವತಾರನ ಸತ್ವ ಅವನ ಅವಸಾನ ಕಾಲದಲ್ಲಿ, ಅವನಂತೆಯೇ ಧರ್ಮನಿಷ್ಠನಾಗಿದ್ದ ಯುಧಿಷ್ಠಿರನಲ್ಲಿ ಸೇರಿಹೋದದ್ದು ಯೋಗ್ಯವಾದದ್ದೇ; ಏಕೆಂದರೆ ಅದು ಹಿಂದಿನಿಂದ ನಡೆದುಬಂದ ನಮ್ಮ ಧಾರ್ಮಿಕ ಪರಂಪರೆ ನಿಲುಗಡೆಯಿಲ್ಲದ ಹೊಳೆಯಂತೆ ಹರಿದುಬರುತ್ತಿದೆ ಎಂಬುದರ ಗುರುತಾಗಿದೆ.