ನೀವು ಕೊಳ್ಳಲು ಹೊರಟ ಸೇಬು ಯಾವ ಊರಿನದೆಂದು ಕೇಳುತ್ತೀರಾ?  ಯಾವಾಗ ತಂದಿದ್ದೆಂದು ಕೇಳುತ್ತೀರಾ? ಹಣ್ಣಿನ ಬಣ್ಣ, ಹೊಳಪು ನೋಡುತ್ತೀರಾ?  ಬೆಳೆ ವಿಚಾರಿಸುತ್ತೀರಾ?

ಹಣ್ಣು ಕೊಳ್ಳಲು ಹೋದಾಗ ಇದೆಲ್ಲಾ ಮಾಮೂಲು ಅಲ್ಲವೆ?  ಕಾಶ್ಮೀರ, ಹಿಮಾಚಲಪ್ರದೇಶ ಅಥವಾ ನ್ಯೂಜಿಲೆಂಡ್, ವಾಷಿಂಗ್‌ಟನ್….. ವಿದೇಶಿ ಸೇಬು ಎಷ್ಟು ದಿನ ಇಟ್ಟರೂ ಕೆಡದು.  ನಮ್ಮ ದೇಶದ ಸೇಬು ಪಟ್ಟೆ ಪಟ್ಟೆ, ಅರಿಸಿನ ಕೆಂಪು ಏನೆಲ್ಲಾ ಮಿಶ್ರ ಬಣ್ಣ, ವಿದೇಶದ್ದು ಅಪ್ಪಟ ಗುಲಾಬಿ, ಅಪ್ಪಟ ಕೆಂಪು, ಅಪ್ಪಟ ಅರಿಸಿನ, ಬೆಲೆಯಲ್ಲೂ ಅದೇ ವೈರುಧ್ಯ.

ಏನೀಗ ಸೇಬು ಕೊಳ್ಳಬೇಕೆ? ಬೇಡವೆ? ವರ್ಷಕ್ಕೊಮ್ಮೆ ತಿಂದರೆ ತಪ್ಪೇನು?  ಯಾರೂ ಸೇಬು ತಿನ್ನುವುದೇ ಇಲ್ಲವೆ?

ಅಪ್ಪಟ ಸೇಬು, ವಿದೇಶಿ ಸೇಬುಗಳು ಎಷ್ಟು ದೂರದಿಂದ ಬಂದಿವೆ ಗೊತ್ತೆ.  ಪಕ್ಕದ ದೇಶದಿಂದ! ದೂರದ ದೇಶದಿಂದ!! ಅಥವಾ ಬೇರೆಯದೇ ಖಂಡದಿಂದ!!! ಅಲ್ಲಿಯ ನೆಲದ, ಅಲ್ಲಿಯ ಜನರಿಗೆ ಯೋಗ್ಯವಾದ, ಅಲ್ಲಿನ ಜನರ ದೇಹಕ್ಕೆ ಹಿಡಿಸುವ ಹಣ್ಣುಗಳು ಅವು.

ನಮ್ಮ ನೆಲಕ್ಕೆ, ನಮ್ಮ ಅಂಗಡಿಯ ಮುಂಗಟ್ಟಿನ ಮೇಲೆ, ನಮ್ಮ ಮನೆ ಅಡುಗೆಮನೆಯ ಕಟ್ಟೆ ಮೇಲೆ ಅಲ್ಲಿಂದ ಪ್ರಯಾಣ ಮಾಡಿ ಬಂದು ಕುಳಿತಿದ್ದು ಏಕೆ? ಯಾರಿಗಾಗಿ?

ಅಬ್ಬಾ ವಿಮಾನದ ಮೇಲೇರಿ ಬಂತೆ, ಸಮುದ್ರ ಮಾರ್ಗದಲ್ಲಿ ಬಂತೆ ಅಥವಾ ಪಟ್ಟಣಗಳನ್ನು ನಗರಗಳನ್ನು ಮಹಾನಗರಗಳನ್ನು ಬಳಸಿ ಬಂತೆ.

ಅರೆ ಹೇಗಾದರೂ ಬರಲಿ.  ಒಟ್ಟು ಬರಲಿ, ನಮ್ಮ ಅಡುಗೆಮನೆಯಲ್ಲಿರಲಿ.  ವಾಷಿಂಗ್‌ಟನ್‌ನಿಂದಲೇ ಬಂದಿರಬಹುದು, ಏನೀಗ?

ಅಂದರೆ ೧೨,೦೪೫ಕಿಲೋಮೀಟರ್ ದೂರದಿಂದ ಬಂದಿದ್ದು.  ಅಲ್ಲಿಂದ ವಿಮಾನವನ್ನೇರಿ ಬಂದಿದ್ದು.  ನೂರಾರು ಲೀಟರ್ ಪೆಟ್ರೋಲ್ ಉರಿಸಿ ಬಂದಿದ್ದು.  ೨,೬೯೫ಕಿಲೋಗ್ರಾಂ ಇಂಗಾಲದ ಡೈ ಆಕ್ಸೈಡ್ ಹೊರಹಾಕಿ ಬಂದಿದ್ದು.  ೭೩೬ಕಿಲೋಗ್ರಾಂ ಇಂಗಾಲ ಖರ್ಚುಮಾಡಿ ಬಂದಿದ್ದು.  ಇದರೊಂದಿಗೆ ಕೊಯ್ಲು, ಪ್ಯಾಕೇಟ್ ಮಾಡಿದ್ದು, ಹಾಳಾಗದಂತೆ ರಾಸಾಯನಿಕ ಸೇರಿಸಿದ್ದು.

ಹಾಗಾದರೆ ಕಾಶ್ಮೀರದ್ದು ಆದೀತು.  ಕಾಶ್ಮೀರದ್ದಕ್ಕೆ ಇದರ ಅರ್ಧ ಖರ್ಚು.  ಹಾಗಂತ ಅದರೆದುರು ಇದು ನಿಂತೀತು ಹೇಗೆ?  ಗುಣಮಟ್ಟ ಪುಸ್ಸ್… ತಾಳಿಕೆ ಬಾಳಿಕೆ ಪುಸ್ಸ್… ವಿದೇಶ ವಂಡರ್‌ಫುಲ್, ವಿದೇಶೀಯರು ಬ್ಯೂಟಿಫುಲ್, ವಿದೇಶದ ಸೇಬು ಮಾರ್‍ವೆಲೆಸ್.  ತರಕಾರಿಗಳು, ಹಣ್ಣುಗಳು, ತಿನಿಸುಗಳು ಅದ್ಬುತ…ಅತ್ಯದ್ಭುತ…ಅನದ್ಭುತ…

ಪೈಪೋಟಿ ಮಾಡಿದರೆ ಸೋಲು ಖಂಡಿತ.  ನಮಗೆ ಆ ತಂತ್ರಜ್ಞಾನ ಗೊತ್ತಿಲ್ಲ.  ಕೃಷಿ ಗೊತ್ತಿಲ್ಲ.  ನಿರ್ವಹಣೆ ಗೊತ್ತಿಲ್ಲ.  ವ್ಯಾಪಾರ ಮಾಡುವುದೂ ಗೊತ್ತಿಲ್ಲ.  ತಿನ್ನುವುದು……..!?

ಇದೆಲ್ಲಾ ಜಾಗತೀಕರಣ ಕಣ್ರಿ, ಉದಾರೀಕರಣ ಕಣ್ರಿ, ಇವರೊಂದಿಗೆ ಪೈಪೋಟಿ ಮಾಡಬೇಕ್ರಿ.

ನಾವೆಲ್ಲಾ ವಿದೇಶಿ ಸೇಬು ನೋಡಿದ್ದೇ ಈಗ.  ನಮಗೇನು ಅಲ್ಲಿ ಹೋಗಿ ತಿನ್ನಲಿಕ್ಕೆ ಆಗ್ತದೆಯಾ?  ಇಲ್ಲಿ ಬಂದಾಗ ತಿನ್ನಬೇಕು, ತಪ್ಪೇನಿದೆ?

ತಿಂದರೆ ತಪ್ಪೇನಿಲ್ಲ ಕಣ್ರಿ.  ಅಲ್ಲಿ ಸೇಬು ಬೆಳೆಯುವವರು ರೈತರು.  ಇಲ್ಲಿ ಸೀಬೆ ಬೆಳೆಯುವವರೂ ರೈತರು.  ಸೇಬು ಒಂದಕ್ಕೆ ೧೦ ರೂಪಾಯಿಗಳು.  ಸೀಬೆ ಒಂದಕ್ಕೆ ಒಂದೇ ರೂಪಾಯಿ.  ಪೌಷ್ಠಿಕಾಂಶದಲ್ಲಿ, ಖನಿಜಾಂಶದಲ್ಲಿ ಒಂದಕ್ಕೊಂದು ಪೈಪೋಟಿ.  ಸೀಬೆ ನಮ್ಮ ನೆಲದ್ದು.  ನಮ್ಮ ವಾಯುಗುಣಕ್ಕೆ ತಕ್ಕಂತಹದು.  ನಮ್ಮ ದೇಶಕ್ಕೆ ಹಿಡಿಸುವಂತಹದ್ದು.

ಸೇಬು ರುಚಿ ಸೀಬೆಗೆಲ್ಲಿ ಮಾರಾಯ್ರೆ?

ಹೌದು ಕಣ್ರಿ.  ನಮ್ಮ ರೈತರಿಗೆ ಸೀಬೆ ಬೆಳೆಯೋದನ್ನು ನಿಲ್ಲಿಸಲು ಹೇಳೂಣು.  ತರಕಾರಿ ಬೆಳೆಯೋದನ್ನು ನಿಲ್ಲಿಸಲು ಹೇಳೂಣು.  ಭತ್ತ, ರಾಗಿ, ಜೋಳ ಬೆಳೆಯೋದನ್ನು ನಿಲ್ಲಿಸಲು ಹೇಳೂಣು.  ಅವ್ರೂ ಅಲ್ಲಿದನ್ನೇ ತಿನ್ನಲಿ.  ಅವ್ರೂ ವಿದೇಶಕ್ಕೆ ಹೋಗೋಲ್ವಲ್ಲ.  ಅಲ್ಲಿ ರುಚಿ ಜೀವಮಾನದಲ್ಲಿ ತಿನ್ನೋಕಾಗೋಲ್ವಲ್ಲ.

ನಮ್ಮ ರೈತರಿಗೆ ಈಗಾಗ್ಲೆ ಬೆಂಕಿಬಿಸಿ, ನೆರೆಹಾವಳಿ, ಬರದ ಬರೆ ತಗುಲಿ ಕೃಷಿ ಮಾಡೋಣ ಅಂದ್ರೂ ಆಗ್ತಾಯಿಲ್ಲ.  ಜಾಗ ಯಾಕೆ ಪಾಳು ಬಿಡೂದು ಅಂತಾ ಕಾರ್ಖಾನೆ ಕಟ್ಟಲಿಕ್ಕೆ, ಶಾಲಾ ಕಾಲೇಜು ಕಟ್ಟಲಿಕ್ಕೆ, ವಸತಿ ಸಮುಚ್ಛಯ ನಿರ್ಮಿಸಲಿಕ್ಕೆ ಕೊಡ್ತಾ ಇದಾರೆ.  ಝಣಝಣ ಹಣ ಎಣಿಸ್ತಾ ಇದಾರೆ.  ಮುಂದೆಲ್ಲಾ ವಿದೇಶಿ ರುಚಿನೇ ಉಣ್ಣೋಣು ಬಿಡ್ರಿ.

ಹೌದ್ರಿ.  ರೈತರ ಭೂಮಿ ನುಂಗಿ ನುಂಗಿ ನಮ್ಮ ನಗರಗಳೆಲ್ಲಾ ಮಹಾನಗರಗಳಾಗುತ್ತಿವೆ.  ಪಟ್ಟಣಗಳೆಲ್ಲಾ ನಗರಗಳಾಗುತ್ತಿವೆ.  ಹಳ್ಳಿಗಳು ಪೇಟೆಗಳಾಗಿವೆ.  ಎಲ್ರೂ ಅಧಿಕಾರಿಗಳಾಬೇಕ್ರಿ, ಗುಮಾಸ್ತರಾಗಬೇಕ್ರಿ.  ಈ ರೈತಾಪಿ ಬದುಕು ಭಾಳ ಕಷ್ಟ ಕಣ್ರಿ……  ವಿದೇಶಿ ಆಹಾರ, ವಿದೇಶಿ ವಸ್ತುಗಳು, ವಿದೇಶಿ ಉಪಕರಣ ಹೀಗೆ ಎಲ್ಲಾ ವಿದೇಶದ್ದೇ ಬರತೊಡಗಿದರೆ, ನಮ್ಮೋರು ಭತ್ತ ಬೆಳೆಯೋ ನೆಲದಲ್ಲಿ ಕಾರ್ಖಾನೆ ಕಟ್ತಾ ಇದ್ರೆ ಆಗೋದು ಅದೇ ಕಣ್ರಿ.  ಅಲ್ಲಿಂದ ಇಲ್ಲಿಗೆ ತರಕ್ಕೆ ಆಗೋ ಖರ್ಚು ನಮ್ಮ ಮೇಲೆ, ಹೆಚ್ಚಾಗೋ ಹಸುರುಮನೆ ಅನಿಲ ಅಂದ್ರೆ ಇಂಗಾಲದ ಡೈ ಆಕ್ಸೈಡ್ ಖರ್ಚು ನಮ್ಮ ಮೇಲೆ.  ಬೆಲೆ ಏರಿಕೆ, ತಲಾ ಆದಾಯ ಕುಸಿತ, ತಿರುಗಿ ಬಡತನ ಇವೆಲ್ಲಾ ಅವುಗಳ ಸಂಗಡಾನೇ ಬರ್‍ತಾವ್ರಿ.

ಹಂಗಂತೀರೇನು?  ನಾನೊಂದು ಸೇಬು ತಿಂದ್ರೆ ಪೌಷ್ಠಿಕಾಂಶಗಳಿಗಿಂತ ದುಷ್ಪರಿಣಾಮಾನೆ ಹೆಚ್ಚಾಗುತ್ತೇನು?  ಹಂಗಾರೆ ಇದನ್ನೆಲ್ಲಾ ನಿಯಂತ್ರಿಸೋದು ಹ್ಯಾಂಗೆ ಅಂತಾ?  ಅವರ ಪೈಪೋಟಿ ಎದುರಿಸೋಕ್ಕೆ ನಮ್ಮ ರೈತರಿಗೆ ಆಗಲ್ವೆ?

ಖಂಡಿತಾ ಆಗತ್ತೆ.  ನಾವು ವಿದೇಶಿ ಆಹಾರಗಳನ್ನು ತಿನ್ನೋದನ್ನು ಬಿಡೋದು ಮೊದಲ ಕೆಲಸ.  ನಮ್ಮ ಸಂಘಟನೆಗಳ ಮೂಲಕ ನಮ್ಮ ದೇಶದ ವಿವಿಧ ಕಡೆ ಬೆಳೆಯೋ ಆಹಾರಗಳನ್ನು ಒಂದೇ ಕಡೆ ಸಿಗೋ ಹಾಗೆ ಮಾಡೋದು, ಅದನ್ನೇ ಕೊಳ್ಳೋದು ಇನ್ನೊಂದು ಮುಖ್ಯ ಕೆಲಸ.

ನಾವು ಒತ್ತಾಯ ಮಾಡಿದ್ರೆ ಸರ್ಕಾರವೂ ನಮ್ಮ ಜೊತೆ ಸೇರತ್ತೆ.  ವಿದೇಶದಿಂದ ಬರೋ ಆಹಾರಪದಾರ್ಥಗಳ ತೆರಿಗೆ ಹೆಚ್ಚಿಸ್ತದೆ.  ನಿಯಂತ್ರಣ ಹೇರ್‍ತದೆ.  ಆಗ ನಮ್ಮ ಆಹಾರಪದಾರ್ಥಗಳು ಅವುಗಳೊಂದಿಗೆ ಪೈಪೋಟಿ ಮಾಡೋದು ತಪ್ಪುತ್ತದೆ.

ಸ್ವದೇಶಿ ಬೇಕೋ ವಿದೇಶಿ ಬೇಕೋ ಆಯ್ಕೆ ನಿಮ್ಮದೇ.  ಬರೀ ರಾಸಾಯನಿಕಗಳನ್ನೇ ಹಾಕಿ, ಕೀಟಗಳು ಬರದಂತೆ ಏನೆಲ್ಲಾ ಕೀಟನಾಶಕಗಳನ್ನು ಸಿಂಪಡಿಸಿ, ಕಲರ್ ಫೇಡ್ ಆಗಬಾರದು ಅಂತಾ ಅದಕ್ಕೂ ರಾಸಾಯನಿಕ ಬಣ್ಣ ಬಳಿದು,ಬೇಗ ಹಣ್ಣು ಆಗಬಾರದು ಅಂತ ರಾಸಾಯನಿಕಗಳಲ್ಲಿ ಅದ್ದುತ್ತಾರೆ.  ಅಂತ ಸೇಬುವಿನಲ್ಲಿ ಇನ್ನೆಂಥಾ ಪೌಷ್ಠಿಕತೆ.  ಇನ್ನೆಂಥಾ ರುಚಿ…

ಪರಿಕಲ್ಪನೆ: ಪೂರ್ಣಿಮ ಕಂದಿ