ಕೋಕಾಕೋಲಾ, ಪೆಪ್ಸಿಗಳು ಸಣ್ಣಕರುಳಿನಲ್ಲಿ ಪಚನವಾಗುತ್ತಿರುವ ಆಹಾರವನ್ನು ಕೊಳೆಯುವಂತೆ ಮಾಡುತ್ತದೆ.  ಇದರಿಂದ ಉತ್ಪತ್ತಿಯಾದ ವಾಯುವು ಇಡೀ ದೇಹದಲ್ಲಿ ವಿಷವಾಯುವಾಗಿ ವ್ಯಾಪಿಸುತ್ತದೆ.  ಆಮೇಲೆ ಅಲ್ಸರ್, ಗ್ಯಾಸ್ಟ್ರಿಕ್, ಕ್ಷಯ, ಅಸ್ತಮಾ ಹಾಗೂ ಕ್ಯಾನ್ಸರ್‌ನಂತಹ ರೋಗಗಳು ಬರಬಹುದೆಂಬ ಸಾಧ್ಯತೆಯನ್ನು ತಜ್ಞರು ಪರಿಶೀಲಿಸಿದ್ದಾರೆ.ಇರಲಿ, ಈ ಪಾನೀಯಗಳನ್ನು ಹಿತ್ತಲಿನ ಟೊಮೆಟೋ, ಬದನೆ, ಮೆಣಸಿನಗಿಡಗಳಿಗೆ ಕೀಟನಾಶಕವಾಗಿ ಬಳಸಬಹುದು.  ಬಚ್ಚಲು, ಕಕ್ಕಸುಮನೆಗಳನ್ನು ಇದರಿಂದ ತೊಳೆದರೆ ಫಳಫಳವೆನ್ನುತ್ತದೆ.  ಬಟ್ಟೆಗಳು ಜಿಡ್ಡುಗಟ್ಟಿದ್ದರೆ, ಪಾತ್ರೆಗಳು, ಮಿಷನ್‌ಗಳು ತುಕ್ಕು ಹಿಡಿದಿದ್ದರೆ ಇದನ್ನು ಹಾಕಿ ತೊಳೆಯಿರಿ.  ಪರಿಣಾಮ ಅದ್ಭುತ.  ಇನ್ನೂ ಏನಾದರೂ ಹೊಸ ಪ್ರಯೋಗಗಳನ್ನು ಮಾಡಿದ್ದರೆ ತಿಳಿಸಿರಿ.

ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ತಂಪು ಪಾನೀಯಗಳ ವಿರುದ್ಧ ತಮ್ಮ ಹೋರಾಟವನ್ನು ಮತ್ತೂ ಪ್ರಬಲಗೊಳಿಸಿದ್ದಾರೆ.  ತಮ್ಮ ಕೇಂದ್ರದಲ್ಲಿರುವ ಐಎಸ್‌ಓ೯೦೦೧ ಪ್ರಾಮಾಣೀಕೃತ ಮಾಲಿನ್ಯ ತಪಾಸಣಾ ಪ್ರಯೋಗಾಲಯದಲ್ಲಿ ತಂಪು ಪಾನೀಯಗಳನ್ನು ಪರೀಕ್ಷಿಸಿ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಕೇಂದ್ರವು ಬೆಂಗಳೂರು, ದಿಲ್ಲಿ, ಕೊಲ್ಕತ್ತಾ, ಮುಂಬೈ, ನೈನಿತಾಲ್‌ಗಳಿಂದ ಪೆಪ್ಸಿ, ಕೋಕಾಕೋಲಗಳ ೧೧ ಜನಪ್ರಿಯ ಬ್ರಾಂಡ್‌ಗಳ ೫೭ ಮಾದರಿಗಳನ್ನು ತರಿಸಿ ಪರೀಕ್ಷೆಗೆ ಒಳಪಡಿಸಿತು.  ಪೆಪ್ಸಿಯಲ್ಲಿ ಸರಾಸರಿಗಿಂತ ೩೦ ಪಟ್ಟು ಅಧಿಕ ಕೀಟನಾಶಕಗಳ ಮತ್ತು ಕೋಕಾಕೋಲಾದಲ್ಲಿ ೨೭ ಪಟ್ಟು ಅಧಿಕ ಕೀಟನಾಶಕಗಳ ಅಂಶ ಪತ್ತೆಯಾಗಿದೆ.

ನ್ಯೂರೋಟಾಕ್ಸಿನ್, ಕ್ಲೋರೋ ಪೈರಿಫಾಸ್, ಹೆಪ್ಟಾಕ್ಲೋರ್ ಮುಂತಾದ ಭಯಾನಕ ವಿಷಗಳು ಸಿಕ್ಕಿಬಿದ್ದವು.  ಪೆಪ್ಸಿಕೋಲಾ, ಪೆಪ್ಸಿ ಕೆಫೆಚಿನೋ, ಮೌಂಟೇನ್ ಡ್ಯೂ, ಮಿರಿಂಡಾ ಲೆಮೆನ್, ಮಿರಿಂಡಾ ಆರೆಂಜ್, ಡೂಕ್ ಲೆಮನೇಡ್, ಸೆವೆನ್‌ಅಪ್, ಕೋಕಾಕೋಲಾ, ಲಿಮ್ಕಾ, ಫಾಂಟಾ, ಥಮ್ಸ್ ಅಪ್ ಇವೇ ಆ ತಂಪು ಪಾನೀಯಗಳು… ಅಲ್ಲಲ್ಲ ಕೀಟನಾಶಕಗಳು.

ಕಳೆದ ವರ್ಷ ರಾಜ್ಯದ ಹಲವು ಕಡೆ ತಂಬಾಕು, ಶೇಂಗಾ, ಕಡ್ಲೆ, ಹೆಸರು ಮುಂತಾದ ಬೆಳೆಗಳಿಗೆ ಈ ಪಾನೀಯಗಳನ್ನೇ ಸಿಂಪಡಿಸಿ ಕೀಟಗಳನ್ನು ನಾಶಪಡಿಸಿದ ಘಟನೆ ವರದಿಯಾಗಿತ್ತು.  ಆದರೂ ಇವುಗಳ ಮಾರಾಟ ಕಡಿಮೆಯಾಗಲಿಲ್ಲ.

ದಿಲ್ಲಿಯಲ್ಲಿ ಕಳೆದ ೧೫ ವರ್ಷಗಳಿಂದ ಅನಿಲ್‌ಕುಮಾರ್ ಹೆಗ್ಡೆಯವರ ಮುಂದಾಳತ್ವದಲ್ಲಿ ಒಂದಿಷ್ಟು ಸಮಾನಾಸಕ್ತರು ದಿನಾಲೂ ವಿದೇಶೀ ತಂಪು ಪಾನೀಯಗಳ ವಿರುದ್ಧ ಸಂಸತ್ ಭವನದೆದುರು ಘೋಷಣೆ ಕೂಗುತ್ತಾರೆ.  ಯಾವುದೇ ಒಬ್ಬ ನಾಗರೀಕನೂ ಈ ಕುರಿತು ತಲೆಕೆಡಿಸಿಕೊಂಡಿಲ್ಲ.  ಇವುಗಳ ಮಾರಾಟ ನಿಂತಿಲ್ಲ.

ತಂಪು ಪಾನೀಯಗಳಲ್ಲಿ ಕೇವಲ ಕೀಟನಾಶಕಗಳೊಂದೇ ಅಲ್ಲ, ೨೦ ಗ್ರಾಂ ಸಕ್ಕರೆ, ೪೧ ಮಿಲಿಗ್ರಾಂ ಕೆಫಿನ್, ಇಂಗಾಲದ ಡೈ ಆಕ್ಸೈಡ್, ಆಲ್ಕೋಹಾಲ್, ಮಾದಕ ದ್ರವ್ಯ ಹಾಗೂ ಫೋಸ್ಫೆರಿಕ್ ಆಮ್ಲವಿದೆ. ಈ ಫೋಸ್ಫೆರಿಕ್ ಆಮ್ಲವು ಮೊದಲು ಹಲ್ಲಿನ ಎನಾಮೆಲ್ ತಿನ್ನುತ್ತದೆ.  ಆಮೇಲೆ ಹಲ್ಲನ್ನೇ ತಿನ್ನುತ್ತದೆ.  ಹೊಟ್ಟೆಗೆ ಹೋದಮೇಲೂ ಮೂಳೆಯನ್ನು ಕರಗಿಸಿ ಮೂತ್ರಕೋಶದೊಳಗೆ ಕಲ್ಲಾಗುವಂತೆ ಮಾಡುತ್ತದೆ.

ಇಂಗಾಲದ ಡೈ ಆಕ್ಸೈಡ್ ರಕ್ತದಲ್ಲಿ ಸೇರಿ ಆಮ್ಲಜನಕವನ್ನು ಪಲ್ಲಟಗೊಳಿಸುತ್ತದೆ.  ಮಿದುಳು ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ.  ಸಕ್ಕರೆ ಅಂಶ ಕೊಬ್ಬು ಹೆಚ್ಚಿಸಿದರೆ, ಕೆಫಿನ್ ಹಾಗೂ ಮಾದಕದ್ರವ್ಯಗಳು ಚಟ, ಮತ್ತೆ ಮತ್ತೆ ಅದನ್ನೇ ಕುಡಿಯಬೇಕೆಂಬ ಹಂಬಲ ಹೆಚ್ಚಿಸುತ್ತದೆ.

ಆದರೆ ಕೀಟನಾಶಕಗಳೇಕೆ ಸೇರಿತು?

ಮೇಲಿನ ವಿವಿಧ ರಾಸಾಯನಿಕಗಳನ್ನು ಸಮನ್ವಯಗೊಳಿಸಲು, ಪಾನೀಯ ಹಾಳಾಗದಿರಲು, ಬಹುಕಾಲ ಉಳಿಯಲು, ತಾಜಾ, ತಣ್ಣಗಿರಲು ಆರ್ಗ್ಯನೋಫಾಸ್ಪರಸ್‌ನ್ನು ಸೇರಿಸುವುದು ಪದ್ಧತಿ.  ನಿಗದಿತ ಪರಿಮಾಣದಲ್ಲಿ ಸೇರಿಸಿದರೆ ಕಡಿಮೆ ಅಪಾಯಕಾರಿ, ಮಿತಿ ಮೀರಿದರೆ ವಿಷ.

ಈ ಪಾನೀಯಗಳ ಗ್ರಾಹಕರು ಮಕ್ಕಳು.  ಇದು ಸಾಬೀತಾಗಿದ್ದರಿಂದಲೇ ಶಾಲಾ ಕಾಲೇಜುಗಳ ಸಮೀಪ ಇವುಗಳ ಮಾರಾಟ ನಿಷೇಧಗೊಳಿಸಲಾಯಿತು.  ಆದರೆ ಮನೆಮನೆಗಳ ಫ್ರಿಜ್‌ಗಳಲ್ಲಿ, ಬಾರ್‌ಗಳಲ್ಲಿ, ಗೂಡಂಗಡಿಗಳಲ್ಲಿ ತಪ್ಪಿಸಲು ಸಾಧ್ಯವೇ?  ತಜ್ಞರ ಪ್ರಕಾರ ನೀರಿನಲ್ಲಿ, ಸಕ್ಕರೆಯಲ್ಲಿ ಹಾಗೂ ಪಾನೀಯಕ್ಕೆ ಬಳಸುವ ಇತರ ದ್ರಾವಣಗಳಲ್ಲೂ ಕೀಟನಾಶಕಗಳಿವೆ.  ಅದೂ ಪರೀಕ್ಷೆಗೊಳಗಾಗಬೇಕು.  ಆದರೆ ಈ ಬಹುರಾಷ್ಟ್ರೀಯ ಕಂಪೆನಿಯನ್ನು ಭಾರತದಿಂದ ಓಡಿಸಲು ಆಗುತ್ತದೆಯೇ?  ಖಂಡಿತಾ ಸಾಧ್ಯವಿದೆ.  ಉಪಾಯ ನಮ್ಮ ಕೈಯಲ್ಲೇ, ಬಾಯಲ್ಲೇ ಇದೆ.

ಹುಣಸೇಹಣ್ಣು ಪಾನಕ, ಬೆಲ್ಲದ ಪಾನಕ, ನಿಂಬೆಪಾನಕ, ಜೇನುಪಾನಕ, ಸೋಡಾ, ಪುನರ್ಪುಳಿ ಪಾನಕ, ನೆಲ್ಲಿ ಆಸವ, ಶುಂಠಿ ಸೋಡಾ, ಹೆಸರು ತನಿ, ಅರಳು ತನಿ, ಲಸ್ಸಿ, ಬೆರಸಿನ ಮಜ್ಜಿಗೆ, ಮಸಾಲೆ ಮಜ್ಜಿಗೆ, ಜಲಜೀರಾ, ಬೇಸಿಗೆ ಬಂತೆಂದರೆ ಆಯಾ ಪ್ರದೇಶಗಳಲ್ಲಿ ಸಿಗುವ ಸೊಪ್ಪು, ಹೂವು, ಹಣ್ಣು, ಕಾಯಿ ಏನೆಲ್ಲಾ ಪಾನೀಯಗಳಾಗಿ ದೇಹವನ್ನು ತಂಪು ಮಾಡುತ್ತಿತ್ತು.  ಮಳೆಗಾಲ, ಚಳಿಗಾಲಗಳಲ್ಲಿ ಕಷಾಯಗಳ ಸಾಲು ಸಾಲು.

ಹಾಲು ದೇಹದ ಆಮ್ಲೀಯತೆ ಕಡಿಮೆ ಮಾಡುತ್ತದೆ.  ಎಳೆನೀರಿನಲ್ಲಿನ ಅನೇಕ ರೀತಿಯ ಎಲೆಕ್ಟ್ರೋಲೈಟ್ಸ್‌ಗಳು ದೇಹದ ಅಂಗಾಂಗಳನ್ನು ಸುಸ್ಥಿತಿಗೆ ತರುತ್ತವೆ.  ಕಬ್ಬಿನ ರಸ ಜಾಂಡೀಸ್‌ನಂತಹ ಕಾಯಿಲೆಗಳಿಗೆ ಔಷಧಿ.  ಬಾದಾಮಿ ಹಾಲು ಪೌಷ್ಠಿಕ ಆಹಾರ.  ಜಲಜೀರಾ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.  ಲಸ್ಸಿಯಲ್ಲಿರುವ ಲ್ಯಾಕ್ಟೋಬ್ಯಾಸಿಲೈ ಜಿಡ್ಡಿನಂಶ ರಕ್ತಕ್ಕೆ ಸೇರದಂತೆ ನಿಯಂತ್ರಣದಲ್ಲಿಡುತ್ತದೆ.  ಲಿಂಬು ಪಾನಕ ಸಿ-ವಿಟಮಿನ್ ಆಗರ.  ಮಜ್ಜಿಗೆಯಂತೂ ಯೌವನವನ್ನು ಖಾಯಂಗೊಳಿಸುತ್ತದೆ.  ವಿವಿಧ ಹಣ್ಣಿನ ರಸಗಳಂತೂ ದೇಹದಲ್ಲಿರುವ ಬೇಡದ ಅಣುಗಳನ್ನೆಲ್ಲಾ ಮಲವಾಗಿ ಹೋಗುವಂತೆ ಮಾಡುತ್ತದೆ.  ಪುನರ್ಪುಳಿ (ಮಿರಿಂಡಾ, ಕೋಕಂ) ಹಣ್ಣಿನ ರಸ ಹೊಟ್ಟೆ ಉಬ್ಬರಿಸಿದರೆ, ಅಜೀರ್ಣ, ಗ್ಯಾಸ್ ಟ್ರಬಲ್ ಏನಕ್ಕೆಲ್ಲಾ ಔಷಧ.  ಹುಣಸೇಹಣ್ಣಿನ ಪಾನಕ ಪಿತ್ತನಿವಾರಣೆ ಮಾಡುತ್ತದೆ.  ಹೆಸರುತನಿ ಕೆಲಸದಿಂದ ದಣಿದವರಿಗೆ ಶಕ್ತಿದಾಯಕ, ವೀರ್ಯವರ್ಧಕ.  ಹೀಗೆ ಒಂದಕ್ಕಿಂತ ಒಂದು ದೇಹಸ್ನೇಹಿ.  ಎಲ್ಲವೂ ನಾವೇ ಸುಲಭದಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದು.

ವಿಪರ್ಯಾಸವೆಂದರೆ ನಮ್ಮ ಮನೆಗಳಲ್ಲಿ ಈ ಎಲ್ಲಾ ಪಾನೀಯಗಳನ್ನು ತಯಾರಿಸುವುದು ಬಿಟ್ಟೇಹೋಗಿದೆ.  ಕುಡಿಯುವುದು ಸಾಧ್ಯವೇ ಇಲ್ಲೆನ್ನುವ ಹಂತ ತಲುಪಿದ್ದೇವೆ.  ನಮ್ಮ ಮಕ್ಕಳಿಗಂತೂ ಗೊತ್ತೇ ಇಲ್ಲ.  ಕೊಟ್ಟಿದ್ದರೆ ಕುಡಿಯುತ್ತಿದ್ದವೇನೋ?! ಅಂತಹ ಸಂಸ್ಕೃತಿಯನ್ನೇ ಕಲಿಸಿಲ್ಲ… ಇಷ್ಟೆಲ್ಲಾ ಸಂಶೋಧನಾ ವರದಿಗಳು ಬಂದಮೇಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಬೇಜವಾಬ್ದಾರಿಯಿಂದ ವರ್ತಿಸದಿದ್ದರೆ ಮುಂದೆ ತೆರಬೇಕಾದ ದಂಡ ದುಬಾರಿಯಾದೀತು.  ಮುಖ್ಯವಾಗಿ ಮಕ್ಕಳನ್ನು ಇದರಿಂದ ದೂರವಿಡುವ ಕೆಲಸ ಪಾಲಕರದು, ಸಮಾಜದ್ದು.  ಈ ವಿಷಪಾನೀಯಗಳನ್ನು ಕುಡಿಯದಿರುವುದೇ ಬಹಿಷ್ಕಾರ.