ಸುಮಾರು ಆರುನೂರ ಐವತ್ತು ವರ್ಷಗಳ ಹಿಂದೆ ನಡೆದ ಸಂಗತಿ.

ಒಂದು ಬೆಳಗ್ಗೆ. ಕಂಚಿನಗರದಲ್ಲಿ ಕಾಮಕೋಟಿ ಪೀಠದ ಸ್ವಾಮಿಗಳು ಶ್ರೀ ವಿದ್ಯಾತೀರ್ಥರು ತಮ್ಮ ಶಿಷ್ಯರೊಂದಿಗೆ ಕುಳಿತಿದ್ದರು. ರಾಜ್ಯದ ರಾಜನೂ ಗುರುಗಳ ಬಳಿ ಕುಳಿತಿದ್ದ. ಗುರುಗಳು ಶಿಷ್ಯರನ್ನು ಪರೀಕ್ಷಿಸಲು ತೀರ್ಮಾನಿಸಿದ್ದರು. ಪ್ರತಿ ಶಿಷ್ಯನನ್ನೂ ಒಂದೇ ಪ್ರಶ್ನೆ ಕೇಳಿದರು: “ಜೀವಿತದ ಆಕಾಂಕ್ಷೆ ಏನು?”

ಜನತೆಯ ಸೇವೆ’

ಈ ಪ್ರಶ್ನೆಗೆ ಒಬ್ಬೊಬ್ಬ ಶಿಷ್ಯರೂ ಒಂದೊಂದು ರೀತಿಯಾಗಿ ಉತ್ತರ ಕೊಟ್ಟರು.

“ನಾನು ಯಾರಾದರೂ ದೊರೆಯ ಬಳಿ ಆಸ್ಥಾನ ಪಂಡಿತನಾಗಿ ಆಶ್ರಯ ಪಡೆಯುತ್ತೇನೆ” ಎಂದು ಒಬ್ಬ ಶಿಷ್ಯನು ಹೇಳಿದನು.

ಈಗ ವೆಂಕಟನಾಥನ ಸರದಿ.

“ನಾನು ಭಗವದ್ ಶ್ರೀ ರಾಮಾನುಜಾಚಾರ್ಯರ ತತ್ವಗಳನ್ನು ಪ್ರಚಾರಕ್ಕೆ ತರಲು ಸಂಕಲ್ಪಿಸಿದ್ದೇನೆ. ಅವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡಬೇಕೆಂದಿದ್ದೇನೆ, ವೇದಾಂತ ದೇಶಿಕನಾಗಲು ನಿಶ್ಚಯಿಸಿದ್ದೇನೆ.”

“ಸುದರ್ಶನ ಭಟ್ಟರೇ, ನಿಮ್ಮ ಅಭಿಪ್ರಾಯ ಹೇಳಿ.”

“ನಾನು ಶ್ರೀರಂಗಕ್ಕೆ ತೆರಳಿ ಅಲ್ಲಿ ನನ್ನ ಜೀವಿತವನ್ನು ಶ್ರೀರಂಗನಾಥನ ಸೇವೆಗೆ ಮೀಸಲಿಡುತ್ತೇನೆ.”

“ಅಯ್ಯಾ ಭೋಗನಾಥ ನಿನ್ನ ವಿಚಾರ ಹೇಳು.”

“ನಾನು ಪಂಡಿತರಾಜನಾಗಲಿಚ್ಛಿಸುತ್ತೇನೆ” ಎಂದು ಉತ್ತರಿಸಿದನು.

“ಸಾಯಣ ನಿನ್ನ ಆಸೆ ಏನು?”

“ನಾನು ದೊಡ್ಡವನಾದ ಮೇಲೆ ನಾಲ್ಕು ವೇದಗಳಿಗೆ ಭಾಷ್ಯ ಬರೆಯಬೇಕೆಂದಿದ್ದೇನೆ. ಸರ್ವದರ್ಶನ ಸಾರ ಸಂಗ್ರಹ ಮಾಡುವುದೇ ನನ್ನ ಜೀವಿತದ ಗುರಿ.”

ಗುರುಗಳು ಕಡೆಯಲ್ಲಿ ಕೇಳಿದರು:

“ಮಾಧವಾ, ಈಗ ನಿನ್ನ ಆಕಾಂಕ್ಷೆ ಏನು ಹೇಳು.”

“ಗುರುದೇವ, ತಮ್ಮ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.”

“ಏಕೆ ಮಗು?”

“ನಾನು ಎಂಬ ಅಹಂಕಾರ ಎಲ್ಲಿಯವರೆಗೆ ಒಬ್ಬ ಮನುಷ್ಯನಲ್ಲಿ ಇರುವುದೋ ಅಲ್ಲಿಯವರೆಗೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ದೈವೇಚ್ಛೆಗೆ ಬಂದರೆ ಈ ಬದುಕನ್ನು ಅವನ ವ್ಯಕ್ತರೂಪವಾದ ಜನತೆಯ ಸೇವೆಯಲ್ಲಿ ಸವೆಸಬೇಕೆಂದಿದ್ದೇನೆ. ದೈವದತ್ತವಾದ ಈ ಮಾನವ ಜನ್ಮವನ್ನು ಅಜ್ಞಾನ ರೂಪದಲ್ಲಿ ಜಡನಿದ್ರೆಯಲ್ಲಿ ಮಲಗಿರುವ ಈ ರಾಷ್ಟ್ರಶಕ್ತಿಯನ್ನು ಎಚ್ಚರಿಸಲು ವಿನಿಯೋಗಿಸಬೇಕೆಂದಿದ್ದೇನೆ. ನನ್ನ ಬದುಕನ್ನು ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ರಕ್ಷಣೆಗಾಗಿ ಮೀಸಲಿಡಬೇಕೆಂದಿದ್ದೇನೆ.”

ಈ ಮಾತುಗಳನ್ನು ಕೇಳಿ ಗುರುಗಳಾದ  ವಿದ್ಯಾತೀರ್ಥರಿಗೆ ಅಭಿಮಾ ಉಂಟಾಯಿತು. ಅವರು ಶಿಷ್ಯನನ್ನು ಆಲಂಗಿಸಿಕೊಂಡು ಹೇಳಿದರು: “ಮಗೂ, ಪರೋಪಕಾರಕ್ಕೆ, ಸ್ವದೇಶ ಸ್ವಧರ್ಮ, ಸ್ವಾತಂತ್ರ್ಯಗಳ ರಕ್ಷಣೆಗೆ ಮುಡಿಪಾದ ಜೀವನ ಪಾವನವಾದದ್ದು. ನಿನ್ನ ಉದ್ದೇಶ ಫಲಿಸಲಿ, ನಿನ್ನಿಂದ ಲೋಕ ಕಲ್ಯಾಣ ಸಾಧಿಸಲಿ”.

ಗುರುವಿನಿಂದ ಈ ಅಭಿಮಾನದ ಆಶೀರ್ವಾದ ಪಡೆದ ಮಾಧವಚಾರ್ಯನೇ ಮುಂದೆ ವಿದ್ಯಾರಣ್ಯ ಎಂದು ಪ್ರಸಿದ್ಧನಾದ.

ತಂದೆ – ತಾಯಿ, ಬಾಲ್ಯ

ಮಾಧವಚಾರ್ಯರ ತಂದೆ ಮಾಯಣಾಚಾರ್ಯರು, ಅವರು ಸದಾಚಾರ ಸಂಪನ್ನರು. ಪಂಪಾಕ್ಷೇತ್ರದ ಒಂದು ಗ್ರಾಮದಲ್ಲಿ ನೆಲೆಸಿ, ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು.

ಇವರಿಗೆ ತಕ್ಕ ಪತ್ನಿ ಶ್ರೀಮತಿದೇವಿ. ಸೌಮ್ಯ ಸ್ವಭಾವದ, ಧರ್ಮನಿಷ್ಠಳಾದ ಹೆಂಗಸು. ಬಹುಕಾಲವಾದರೂ ಈ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಇದಕ್ಕಾಗಿ ಅನೇಕ ಯಾತ್ರೆಗಳನ್ನು ಮಾಡಿದರು. ವ್ರತ, ತಪಗಳನ್ನು ಮಾಡಿದರು. ಕಡೆಗೆ ಅವರಿಗೆ ಮಗುವಾಯಿತು. ಈ ಹುಡುಗ ಹುಟ್ಟಿದ್ದು ಸುಮಾರು. ೧೨೬೮ರಲ್ಲಿ. ಅವರು ಆ ಮಗುವಿಗೆ ಜಾತಕರ್ಮಗಳನ್ನು ಮಾಡಿ ಮಾಧವನೆಂದು ಹೆಸರಿಟ್ಟರು.

’ನನ್ನ ಬದುಕನ್ನು ಜನತೆಯ ಸೇವೆಯಲ್ಲಿ ಸವೆಸಬೇಕೆಂದಿದ್ದೇನೆ’

ವಿದ್ಯಾಭ್ಯಾಸ

ತಂದೆ ತಾಯಿಗಳು ಮಕ್ಕಳಿಗೆ ಒಳ್ಳೆಯ ಗುರುಗಳಿಂದ ಶಿಕ್ಷಣ ಕೊಡಿಸಲು ತೀರ್ಮಾನಿಸಿದರು. ತುಂಗಭದ್ರಾ ನದಿಯ ತೀರದಲ್ಲಿ ಶಂಕರಾನಂದರೆಂಬ ತಪಸ್ವಿಗಳು ವಾಸವಾಗಿದ್ದರು. ಅವರು ಬಹು ದೊಡ್ಡ ವಿದ್ವಾಂಸರು. ಮಾಯಣಚಾರ್ಯರು ಮೂವರು ಗಂಡು ಮಕ್ಕಳನ್ನೂ ಅವರ ಬಳಿಗೆ ಕರೆದುಕೊಂಡು ಹೋಗಿ ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಬೇಡಿದರು. ಶಂಕರಾನಂದರು ಸಾಮಾನ್ಯವಾಗಿ ಶಿಷ್ಯರನ್ನು ಸ್ವೀಕರಿಸುತ್ತಿರಲಿಲ್ಲ.. ನಿಜವಾಗಿ ವಿದ್ಯೆ ಕಲಿಯಬೇಕೆಂಬ ಶ್ರದ್ಧೆಯಿಂದ ಬಂದಿದ್ದಾರೆ ಎಂದ ಖಚಿತವಾದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದರು. ಮಾಧವ,  ಸಾಯಣ ಮತ್ತು ಭೋಗನಾಥರು ಅವರ ಕಾಲಿಗೆ ನಮಸ್ಕರಿಸಿದರು. ಶಂಕರಾನಂದರಿಗೆ ಅವರನ್ನು ಕಂಡು ಸಂತೋಷವಾಯಿತು. ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.

ಹಲವು ವರ್ಷಗಳ ಕಾಲ ಅಣ್ಣತಮ್ಮಂದಿರು ಈ ಹಿರಿಯರ ಬಳಿ ವಿದ್ಯಾಭ್ಯಾಸ ಪಡೆದರು. ಹುಡುಗರು ಬುದ್ಧಿವಂತರು. ಶ್ರದ್ಧೆಯಿಂದ ಕೆಲಸ ಮಾಡುವವರು. ಸಂತೋಷದಿಂದ ಗುರುಗಳು ವಿದ್ಯದಾನ ಮಾಡಿದರು, ಅವರಿಗೆ ತಾವು ಹೇಳಿಕೊಡುಬಹುದಾದನ್ನೆಲ್ಲ ಹೇಳಿ ಕೊಟ್ಟಾಯಿತು ಎಂದು ತೋರಿತು. ಹುಡುಗರನ್ನು ಕರೆದು ಹೇಳಿದರು. “ಮಕ್ಕಳೇ ಇಷ್ಟು ವರ್ಷ ತುಂಬಾ ಶ್ರದ್ಧೆಯಿಂದ ವಿದ್ಯೆ ಕಲಿತದ್ದೀರಿ. ಇನ್ನು ನನ್ನ ಗುರುಗಳು ಶ್ರೀ ವಿದ್ಯಾತೀರ್ಥ ಮಹಾಸ್ವಾಮಿಗಳ ಬಳಿಗೆ ಹೋಗಿ, ಅವರು ಕಂಚಿಯಲ್ಲಿದ್ದಾರೆ.ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅನುಗ್ರಹಿಸಿ ಎಂದು ಪ್ರಾರ್ಥಿಸಿ ನಾನು ಪತ್ರ ಕೊಡುತ್ತೇನೆ.”

“ತಮ್ಮ ಅಪ್ಪಣೆಯಂತೆ” ಎಂದರು ಹುಡುಗರು. ಶಂಕರಾನಂದರಿಂದ ಪತ್ರವನ್ನು ಪಡೆದು ಕಂಚಿಗೆ ಹೋದರು.

ಈ ಮಧ್ಯೆ ಮಾಯಣಾಚಾರ್ಯರು ತೀರಿಕೊಂಡಿದ್ದರು. ಅವರ ಹೆಂಡತಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅವರನ್ನು ಕಂಚಿಗೆ ಕಳುಹಿಸಿದರು.

ಕಂಚಿಯಲ್ಲಿ

ಆ ಕಾಲದಲ್ಲಿ ಕಂಚೀ ನಗರವು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಧರ್ಮಗಳ ಕೇಂದ್ರವಾಗಿತ್ತು. ಅಲ್ಲಿನ ವಿದ್ಯಾಕೇಂದ್ರಗಳಲ್ಲಿ ಷಡ್ದರ್ಶನಗಳನ್ನು ಕಲಿಸಿಕೊಡುವ ಗುರುಗಳಿದ್ದರು.ಇವುಗಳಲ್ಲಿ ಕಾಮಕೋಟಿ ಪೀಠವು ಪ್ರಸಿದ್ಧವಾಗಿತ್ತು. ಅಲ್ಲಿನ ವಿದ್ವಾಂಸರ ಕೀರ್ತಿ ಕೇಳಿ ದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು.

ಕಂಚೀನಗರವು ಆ ಕಾಲದ ವಿದ್ಯಾ ಹಾಗೂ ಸಂಸ್ಕೃತಿಯ ಕೇಂದ್ರವಾಗಿದ್ದಂತೆ ಪಲ್ಲವ ರಾಜಧಾನಿಯೂ ಆಗಿತ್ತು.

ಮಾಧವನ ಅದೃಷ್ಟದಿಂದ ಅವನಿಗೆ ಬಹು ಶ್ರೇಷ್ಠ ಗುರುಗಳೇ ದೊರಕಿದ್ದರು. ಮಾಧವನು ತನ್ನ ಸಹೋದರರೊಡಗೂಡಿ ಷಡ್ದರ್ಶನಗಳನ್ನೂ, ಸಾಹಿತ್ಯ ಕಲೆಗಳನ್ನೂ ಕಲಿತನು. ವೇದ ವೇದಾಂತಗಳಲ್ಲಿ ಪಾರಂಗತನಾದನು.

ವಿದ್ಯಾತೀರ್ಥರು

ಕಾಮಕೋಟಿ ಪೀಠದ ವಿದ್ಯಾತೀರ್ಥ ಗುರುಗಳಿಗೆ ಸರ್ವಜ್ಞ ವಿಷ್ಣು, ವಿದ್ಯೇಶ, ವಿದ್ಯಾನಂದ, ವಿದ್ಯಾಶಂಕರರೆಂಬ ಹೆಸರುಗಳಿದ್ದವು. ಅವರು ಸಮಸ್ತ ಲೌಕಿಕ ಹಾಗೂ ಆಧ್ಯಾತ್ಮ ವಿದ್ಯೆಗಳಿಗೆ ತವನಿಧಿಯಂತೆ ಇದ್ದರು. ಅವರನ್ನು ಜನರು ದಕ್ಷಿಣಾಮೂರ್ತಿಯ ಅವತಾರನೆಂದು ತಿಳಿದಿದ್ದರು.ಇಂಥ ಮಹಾತಪಸ್ವಿಗಳನ್ನು ಗುರುಗಳಾಗಿ ಪಡೆದು, ಅವರ ಅಭಿಮಾನಕ್ಕೆ ಪಾತ್ರವಾದುದು ಮಾಧವನ ಪುಣ್ಯ ವಿಶೇಷವೇ ಸರಿ.

ಕಂಚಿಯಲ್ಲಿ ಅವನ ಸುದೈವದಿಂದ ವೆಂಕಟನಾಥಾಚಾರ್ಯರೂ, ಸುದರ್ಶನಭಟ್ಟರೂ, ದ್ವೈತಮತದ ಅಕ್ಷೋಭ್ಯತೀರ್ಥರೂ ಅವನಿಗೆ ಸ್ನೇಹಿತರಾಗಿ ದೊರಕಿದ್ದರು.

ಬಾಲ್ಯದಲ್ಲೇ ಮಾಧವನಿಗೆ ತಾನು ಮಹತ್ಕಾರ್ಯ ಸಾಧನೆಗಾಗಿ ಜನಿಸಿರುವಂತೆ ಅನಿಸುತ್ತಿತ್ತು. ಸಾಮಾನ್ಯರಂತೆ ತಾನು ವಿದ್ಯಾಭ್ಯಾಸ ಮುಗಿಸಿ ಗೃಹಸ್ಥರಾಗಿ ಮಕ್ಕಳನ್ನು ಪಡೆದು ತಮ್ಮ ಜೀವನವನ್ನು ಕಳೆಯಲು ಹುಟ್ಟಿಲ್ಲವೆಂದು ಅವನಿಗೆ ಮನವರಿಕೆಯಾಗಿತ್ತು.

ಭಾರತೀಕೃಷ್ಣ, ಶಂಕರಾನಂದ, ಶ್ರೀಕಂಠನಾಥರಂಥ ಯೋಗ್ಯ ಗುರುಗಳ ಕೈಲಿ ಅವನ ಜೀವನ ರೂಪುಗೊಂಡಿತ್ತು. ಅವನ ಚೇತನಕ್ಕೆ ಮಹತ್ವದ ಸಂಸ್ಕಾರ ದೊರೆತಿತ್ತು. ಅವನಲ್ಲಿ ದೇಶಭಕ್ತಿ, ಚಿತ್ತಸ್ಥೈರ್ಯ, ಸೇವಾಭಿವೃದ್ಧಿ, ಕಾರ್ಯಪಟುತ್ವ, ಪರಧರ್ಮಸಹಿಷ್ಣುತೆ, ಧರ್ಮಪರಾಯಣತೆ, ರಾಜಕೀಯ ಪ್ರಜ್ಞೆ, ಜಗತ್ಕಲ್ಯಾಣದಾಕಾಂಕ್ಷೆಗಳು ಮೊಳಕೆಯ ರೂಪದಲ್ಲಿ ಹುದುಗಿದ್ದವು.

ಹೃದಯದ ಹಂಬಲ

ಅಂದು ಗುರುಗಳ ಅನುಗ್ರಹಕ್ಕೆ ಪಾತ್ರನಾದ ಮಾಧವನ ಕಣ್ಣು ಮುಂದೆ ಈ ಒಂದು ವಿಚಾರ ಮೇಲಿಂದ ಮೇಲೆ ಬಂದು ಕಾಡುತ್ತಿತ್ತು.

“ದಕ್ಷಿಣಾ ಪಥದಲ್ಲಿ ಹಿಂದೂ ಧರ್ಮ ಸಂಸ್ಕೃತಿಗಳಿಗೆ ಬಂದಿರುವ ಗಂಡಾಂತರವನ್ನು ನಿವಾರಿಸಲು ಯತ್ನಿಸಬೇಕು. ತಾಯಿ ಭುವನೇಶ್ವರಿಯ ಅನುಗ್ರಹದಿಂದ ಕನ್ನಡದ ನೆಲದಲ್ಲಿ ನೂತನ ರಾಜ್ಯವೊಂದನ್ನು ಕಟ್ಟಬೇಕು. ತಾನೂ ನೂತನ ರಾಜ್ಯ ಸ್ಥಾಪಕನಾಗಿ ದಕ್ಷಿಣಾಪಥದಿಂದ ವಿರೋಧಿಗಳನ್ನು ಓಡಿಸಬೇಕು. ತಪಸ್ಸಿಗೆ ಹೊರತಾದ ಸಿದ್ದಿಯಿಲ್ಲ. ಅದಕ್ಕಾಗಿ ತಾನು ತಪಸ್ಸು ಮಾಡಿ ಭುವನೇಶ್ವರಿಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು” ಎಂದು ಮೇಲಿಂದ ಮೇಲೆ ಅನಿಸುತ್ತಿತ್ತು.

ಈ ಆಸೆಯನ್ನು ಗುರುಗಳಲ್ಲಿ ತೋಡಿಕೊಳ್ಳಲು ಅವರು “ಮಗು ನೀನು ಸಾಮಾನ್ಯನಲ್ಲ. ನೀನೊಬ್ಬ ಮಹತ್ಕಾರ್ಯ ಸಾಧನೆಗಾಗಿ ಹುಟ್ಟಿರುವ ಕಾರಣಪುರುಷ. ನಿನ್ನಿಂದ ಈ ನಾಡು ನುಡಿಗಳು ಉದ್ದಾರವಾಗುತ್ತವೆ” ಎಂದು ಭವಿಷ್ಯ ನುಡಿದು ಅವನನ್ನು ಬೀಳ್ಕೊಟ್ಟಿದ್ದರು.

ಹೀಗೆ ಮಾಧವಾಚಾರ್ಯರು ಸಹೋದರರೊಡನೆ ಕಂಚಿಯ ಗುರುಕಾಲ ವಾಸವನ್ನು ಪೂರೈಸಿಕೊಂಡು ಪಂಪಾಕ್ಷೇತ್ರಕ್ಕೆ ಹಿಂದಿರುಗಿದ್ದರು. ತಾಯಿ ಹಾಗೂ ತಂಗಿಯ ಯೋಗಕ್ಷೇಮದ ಭಾರವನ್ನು ವಹಿಸಿಕೊಂಡಿದ್ದರು.

ಅವರು ವಿವಾಹವಯಸ್ಕಳಾಗಿದ್ದ ಸಹೋದರಿ ಸಿಂಗಲೆಗೆ ಅನುರೂಪವಾದ ಯುವಕನೊಡನೆ ವಿವಾಹ ಮಾಡಿ ಜವಾಬ್ದಾರಿ ಕಳೆದುಕೊಂಡರು.

ಅನಂತರ ವೀತಿಹೋತ್ರಿ ಎಂಬುವರ ಪುತ್ರಿಯಾದ ವೈತಿಹೋತ್ರಿಯನ್ನು ವಿವಾಹವಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ಅವರು ಜೀವನಕ್ಕೆ ಶ್ರೋತ್ರಿವೃತ್ತಿಯನ್ನು ಕೈಗೊಂಡಿದ್ದರು. ಅಲ್ಲದೆ ವಿದ್ಯಾದಾನದಿಂದ ಹೇಗೊ ಜೀವನ ನಡೆದು ಹೋಗುತ್ತಿತ್ತು. ಆದರೂ ಮಾಧವಾಚಾರ್ಯರ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಮನಸ್ಸಿಗೆ ಶಾಂತಿ ಇರಲಿಲ್ಲ.

ಮೇಲಿಂದ ಮೇಲೆ ಗುರುಗಳಾದ ವಿದ್ಯಾತೀರ್ಥರ ಸಮ್ಮುಖದಲ್ಲಿ ತಾವು ಪ್ರಕಟಿಸಿದ್ದ ಜೀವಿತದ ಉದ್ದೇಶ ಅವರನ್ನು ಕೈಬೀಸಿ ಕರೆಯುತ್ತಿತ್ತು.

ಶ್ರೀರಂಗದಲ್ಲಿ ವಿಪತ್ತು

ಶ್ರೀರಂಗದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿದ್ದ ಸೇರಿದ್ದ ಭಕ್ತವೃಂದದಲ್ಲಿ ಯಾರ ಮುಖದಲ್ಲೂ ಕಳೆಯಿರಲಿಲ್ಲ. ಅಲ್ಲಿ ಸೇರಿದ್ದವರೆಲ್ಲರೂ ಮುಂದೇನು ಗತಿ ಎಂದು ಯೋಚಿಸುತ್ತಿದ್ದರು.

ಕ್ಷೇತ್ರದರ್ಶನಕ್ಕೆ ಬಂದಿದ್ದ ಯಾತ್ರಿಕರಿಂದ ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ್‌ ಖಿಲ್ಜಿಯ ದಂಡನಾಯಕ ಮಲ್ಲಿಕಾಪೂರನು ತನ್ನ ಅಸಂಖ್ಯಾತ ಸೇನಾಬಲದೊಡನೆ ಹೊರಟು ಶ್ರೀರಂಗದ ದೇವಾಲಯದಲ್ಲಿರುವ ಸಂಪತ್ತಿನ ಆಸೆಯಿಂದ ಅದರ ಮೇಲೆ ದಾಳಿಯಿಡಲು ಬರುತ್ತಿದ್ದಾನೆಂದು ಆಗಷ್ಟೇ ವಾರ್ತೆ ಬಂದಿತ್ತು.

ಶ್ರೀರಂಗವು ಪ್ರಾಚೀನ ಹಿಂದೂಕ್ಷೇತ್ರವಾಗಿತ್ತು. ಅದಕ್ಕೆ ಮೂರು ನಾಲ್ಕು ಪ್ರಾಕಾರಗಳು ಇದ್ದವು. ಅದಕ್ಕೆ ಬಲವಾದ ಕೋಟೆಯಿತ್ತು. ಅದನ್ನು ರಕ್ಷಿಸಲು ಸೈನಿಕ ಬಲವಾಗಲೀ, ಆಯುಧಗಳ ಸಂಗ್ರಹವಾಗಲೀ ಇರಲಿಲ್ಲ. ಈಗ ಮುಂದೇನು ಮಾಡಬೇಕೆಂದು ನಿರ್ಧರಿಸಲು ಊರಿನ ಪ್ರಮುಖರು ದೇವಾಲಯದ ಪ್ರಾಕಾರದಲ್ಲಿ ಸಭೆ ಸೇರಿದ್ದರು. ಒಬ್ಬರು ದೇವಾಲಯದಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಶತ್ರುಗಳಿಂದ ರಕ್ಷಿಸಬೇಕೆಂದು ಸಲಹೆ ನೀಡಿದರು. ಇನ್ನೊಬ್ಬರು ದೇವಾಲಯದ ರಕ್ಷಣೆಗಾಗಿ ಪ್ರಾಣವನ್ನು ಒತ್ತೆಯಿಟ್ಟು ಹೋರಾಟ ನಡೆಸಬೇಕೆಂದು ಸಲಹೆ ಇತ್ತರು.

ರಕ್ಷಣೆ

ಈ ಸಮಯದಲ್ಲಿ ಅಲ್ಲಿದ್ದ ವೆಂಕಟನಾಥಾರ್ಯರಿಗೆ ಈ ಚರ್ಚೆಯಿಂದ ಬೇಸರ ಹುಟ್ಟಿತು. ಅವರು ತಮ್ಮ ಅಲೌಕಿಕ ನಿಧಿಯಾದ ಶ್ರೀರಂಗನಾಥ ಸ್ವಾಮಿಯ ವಿಗ್ರಹವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದರು. ಬಹಳ ಚರ್ಚೆಯ ನಂತರ ವೆಂಕಟನಾಥಾಚಾರ್ಯರ ಸಲಹೆಯಂತೆ ಸ್ವಾಮಿಯ ಗರ್ಭಗುಡಿಯನ್ನು ಮುಚ್ಚಿ ಕೃತಕ ಗರ್ಭಗುಡಿಯೊಂದನ್ನು ನಿರ್ಮಿಸಿ ದಾಳಿ ಮಾಡುವವರ ಕಣ್ಣಿನಿಂದ ಮೂಲ ವಿಗ್ರಹವನ್ನು ರಕ್ಷಿಸಬೇಕೆಂದು ತೀರ್ಮಾನವಾಯಿತು. ಅನಂತರ ದೇವಾಲಯದ ಬೆಲೆಬಾಳುವ ಒಡವೆ ವಸ್ತುಗಳನ್ನೂ ಉತ್ಸವ ಮೂರ್ತಿಗಳನ್ನೂ ತಿರುಪತಿ ಕ್ಷೇತ್ರಕ್ಕೆ ಒಯ್ದು ಅಲ್ಲಿ ಅಡಗಿಸಿ ತಮ್ಮ ಕ್ಷೇತ್ರದ ಅಮೂಲ್ಯ ಸಂಪತ್ತನ್ನುಳಿಸಿಕೊಳ್ಳಬೇಕೆಂದು ತೀರ್ಮಾನಿಸಿದರು.

ಅವರು ಹೀಗೆ ಆತ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿರುವಾಗಲೇ ಯುವ ಸೈನಿಕರು ಬಿರುಗಾಳಿಯಂತೆ ಬಂದು ಶ್ರೀರಂಗದ ಮೇಲೆ ದಾಳಿ ಇಟ್ಟರು. ಈ ಹೋರಾಟದಲ್ಲಿ ನೂರಾರು ನಿವಾಸಿಗಳು ಮೃತರಾದರು. ಸಾವಿರಾರು ಮಂದಿ ಗಾಯಗೊಂಡವರು.

ವೆಂಕಟಾನಾಥಾರ್ಯರು

ಇಂಥ ವಿಪತ್ತಿನ ಸಮಯದಲ್ಲಿ ವೆಂಕಟನಾಥಾರ್ಯರು ಮಿತ್ರರಾದ ಸುದರ್ಶನಭಟ್ಟರ ಜತೆಯಲ್ಲಿ ತಮ್ಮ ಸರ್ವಸ್ವವಾಗಿದ್ದ ಗ್ರಂಥ ಭಂಡಾರವನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು.

ವೆಂಕಟನಾಥರ್ಯರಿಗೆ ವೇದಾಂತದೇಶಿಕರೆಂದು ಹೆಸರಿತ್ತು. ಇವರು ಸ್ಥಳ ಸತ್ಯಮಂಗಲ. ತಮ್ಮ ಪ್ರಿಯ ಮಿತ್ರರಾದ ಸುದರ್ಶನ ಭಟ್ಟರನ್ನು ನೋಡಿಬರುವ ಆಸೆಯಾಗಿ ಶ್ರೀರಂಗಕ್ಕೆ ಬಂದಿದ್ದರು.

ಈ ಸಮಯದಲ್ಲಿ ಶ್ರೀರಂಗ ಕ್ಷೇತ್ರದ ಮೇಲೆ ಯವನರ ದಾಳಿ ಅನಿರೀಕ್ಷಿತವಾಗಿ ಬಂದಿತ್ತು. ಈ ವಿಪತ್ಕಾಲದಲ್ಲಿ ಅವರು ಕ್ಷೇತ್ರ ರಕ್ಷಣೆಯ ಪವಿತ್ರ ಕಾರ್ಯದಲ್ಲಿ ನೆರವಾಗಿದ್ದರು.

ದಾಳಿಕಾರರು ದೇವಾಲಯವನ್ನು ಸೂರೆಮಾಡಿದರು. ಕೃತಕ ವಿಗ್ರಹವನ್ನೇ ಮೂಲದೇವರೆಂದು ತಿಳಿದು, ಭಗ್ನಗೊಳಿಸಿದರು. ಅಲ್ಲಿ ಕೈಗೆ ಸಿಕ್ಕಿದ ಎಲ್ಲ ಬೆಲೆಬಾಳುವ ವಸ್ತುಗಳನ್ನು ದೋಚಿ, ತೃಪ್ತರಾಗಿ ಹಿಂತಿರುಗಿದರು.

ಈ ಸಮಯದಲ್ಲಿ ಕಾವೇರಿನದಿಯ ಮಳಲಿನಲ್ಲಿ ವೆಂಕಟನಾಥಾರ್ಯರೂ, ಸುದರ್ಶನ ಭಟ್ಟರೂ ತಮ್ಮ ಅಪೂರ್ವ ಗ್ರಂಥರಾಶಿಯನ್ನು ಅಡಗಿಸಿಟ್ಟು ಇಡೀ ರಾತ್ರಿ ಪೊದೆಯೊಲ್ಲಿ ಕಳೆದರು.

ಹತಾಶ ಜನ

ಶ್ರೀರಂಗ ಕ್ಷೇತ್ರಕ್ಕೆ ಬಂದೊದಗಿದ ದುಃಸ್ಥಿತಿಯನ್ನು ಕಣ್ಣಾರೆ ಕಂಡ ವೆಂಕಟನಾಥಾರ್ಯರು ಮೊದಲಿನ ವ್ಯಕ್ತಿಯಾಗಿ ಉಳಿಯಲಿಲ್ಲ. ಶತ್ರುಗಳು ಎಷ್ಟು ನಿಷ್ಕರುಣೆಯಿಂದ ವರ್ತಿಸಬಲ್ಲರೆಂಬುದನ್ನು ಕಣ್ಣಾರೆ ಕಂಡಿದ್ದರು.

ಅವರಿಗೆ ಕಂಡ ಆಶ್ಚರ್ಯ ಸಂಗತಿ ಎಂದರೆ ಹಿಂದೂ ಧರ್ಮ, ಸಂಸ್ಕೃತಿಗಳಿಗೆ ಭಯಂಕರ ವಿಪತ್ತು ಬಂದಿದ್ದರೂ ದೇಶದ ಜನತೆ ಮಾತ್ರ ಎಚ್ಚೆತ್ತುಕೊಳ್ಳದೆ ಜಡನಿದ್ರೆಯಲ್ಲೇ ಇತ್ತು. ಜನತೆಯ ಮಾನ ಪ್ರಾಣಗಳ ಸಂರಕ್ಷಣೆಯ ಭಾರ ಹೊತ್ತಿದ್ದ ದೊರೆಗಳು ಸ್ವಾರ್ಥಿಗಳೂ, ವಿಷಯ ಲಂಪಟರೂ ಲೋಭಿಗಳೂ ಆಗಿದ್ದರು.

ಮಲ್ಲಿಕಾಪೂರನು ರಾಮೇಶ್ವರದವರೆಗೆ ದಂಡೆತ್ತಿ ಹೋಗಿ, ಅಲ್ಲಿ ತನ್ನ ವಿಜಯದ ಸಂಕೇತವಾಗಿ ಒಂದು ವಿಜಯಸ್ತಂಭವನ್ನು ನಿಲ್ಲಿಸಿದನು. ಗೆದ್ದ ರಾಜ್ಯಗಳಲ್ಲಿ ತನ್ನ ಅಧಿಕಾರಿಗಳನ್ನು ನೇಮಿಸಿ, ಅಪಾರ ಸಂಪತ್ತಿನೊಡನೆ ದಿಲ್ಲಿಗೆ ಹಿಂದಿರುಗಿದನು.

ಇಂಥ ಸ್ಥಿತಿಯಲ್ಲಿ ಶ್ರೀರಂಗದಲ್ಲಿ ಸುದರ್ಶನ ಭಟ್ಟರೂ, ಸತ್ಯಮಂಗಲದಲ್ಲಿ ವೆಂಕಟನಾಥಾರ್ಯರೂ, ಪಂಪಾ ಕ್ಷೇತ್ರದಲ್ಲಿ ಮಾಧವಾಚಾರ್ಯರೂ ದಿಕ್ಕೆಟ್ಟು ಕುಳಿತಿದ್ದರು.

ಅಭೀತಿಸ್ತವ

ಹೀಗಿರಲು ಪಂಪಾಕ್ಷೇತ್ರದಲ್ಲಿದ್ದ ಮಾಧವಾಚಾರ್ಯರಿಗೆ ಶ್ರೀರಂಗದಲ್ಲಿ ದಾಳಿಕಾರರು ನಡೆಸಿದ ಅತ್ಯಾಚಾರದ ಕಥೆ ಕೇಳಿ ರಕ್ತ ಕುದಿಯಿತು. ಅವರು ಶ್ರೀರಂಗಕ್ಕೆ ಬಂದು ಗೆಳೆಯ ಸುದರ್ಶನ ಭಟ್ಟರಿಗಾಗಿ ಹುಡುಕಿದರು. ಅವರು ಸಿಕ್ಕಲಿಲ್ಲ. ಅನಂತರ ಮಾಧವಚಾರ್ಯರು ವೆಂಕಟನಾಥರ್ಯರನ್ನು ನೋಡಲು ಸತ್ಯಮಂಗಲಕ್ಕೆ ಬಂದರು.

“ಅಯ್ಯಾ ಮಿತ್ರ ಸುದರ್ಶನ ಭಟ್ಟರು ಏನಾದರು?” ಎಂದು ಕಾತರದಿಂದ ಪ್ರಶ್ನಿಸಿದರು.

“ಇತ್ತೀಚೆಗೆ ಅವರಿಂದ ಯಾವುದೇ ಸುದ್ದಿ ಇಲ್ಲ. ಅವರು ಎದೆಯೊಡೆದು ತೀರಿಕೊಂಡರಂತೆ. ಹೀಗಾಗಿದ್ದರೆ ಆಶ್ಚರ್ಯವಿಲ್ಲ. ಸಾಯದೆ ಬದುಕಿರುವ ನನ್ನಂಥವರು ಪಾಪಿಗಳು. ಈ ಕಣ್ಣಿನಿಂದ ಇನ್ನೂ ಏನೇನು ನೋಡಬೇಕಾಗಿದೆಯೋ ಆ ದೇವರಿಗೇ ಗೊತ್ತು” ಎಂದು ವೆಂಕಟನಾಥರು ವಿಷಾದಿಸಿದರು.

“ಅಯ್ಯಾ! ದೇಶಿಕಾ, ನೀನು ಬಾಲ್ಯದಲ್ಲಿ ಎಂಥಾ ಉತ್ಸಾಹ ಧೈರ್ಯಗಳ ಪುತ್ಥಳಿಯಾಗಿದ್ದೆ. ಈಗ ಯಾಕೆ ಹೇಡಿಯಂತೆ ಮಾತನಾಡುವೆ? ನಿನಗೆ ಅಂದಿನ ಕ್ಷಾತ್ರ, ಆತ್ಮವಿಶ್ವಾಸಗಳು ಎಲ್ಲಿ ಹೋದವು?” ಮಾಧವಾಚಾರ್ಯರು ಪ್ರಶ್ನಿಸಿದರು.

“ನೀನು ಶ್ರೀರಂಗದಲ್ಲಿ ನಡೆದ ಅನ್ಯಾಯಗಳನ್ನು ಕಣ್ಣಾರೆ ಕಂಡಿದ್ದರೆ ಗೊತ್ತಾಗುತ್ತಿತ್ತು! ನನಗೆ ಅದೊಂದು ದುಃಸ್ವಪ್ನ! ಅದನ್ನು ನಾನು ಮರೆಯಲಾರೆ!”

“ಈಗ ಏನು ಮಾಡಬೇಕೆಂದು ನಿನ್ನ ವಿಚಾರ?”

“ನಾನು ಜನಸಾಮಾನ್ಯರನ್ನು ಈ ಜಡ ನಿದ್ರೆಯಿಂದ ಎಚ್ಚರಿಸಬೇಕೆಂದು ಸಂಕಲ್ಪಿಸಿದ್ದೇನೆ. ನನ್ನ ಸಮಸ್ತ ಶಕ್ತಿಯನ್ನು ಈ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಮೀಸಲಿಡಬೇಕೆಂಬ ಸಂಕಲ್ಪಕ್ಕೆ ಬಂದಿದ್ದೇನೆ. ಅದಕ್ಕಾಗಿ ಅಭೀತಿ ಸ್ತವವೆಂಬ ರಣಗೀತೆಯನ್ನು ಬರೆದಿದ್ದೇನೆ” ಎಂದು ಹೇಳಿ ಒಂದು ಹಸ್ತಪ್ರತಿಯನ್ನು ಮಾಧವಾಚಾರ್ಯರ ಮುಂದೆ ಇಟ್ಟರು. ದಾಳಿಯಿಂದ ನಿಃಸತ್ವವಾಗಿದ್ದ ಜನತೆಯಲ್ಲಿ ಪೌರುಷವನ್ನು ತುಂಬಲು ಸಂಸ್ಕೃತದಲ್ಲಿ ಅವರು ರಚಿಸಿದ್ದ ಅಭೀತಿಸ್ತವದ ಶ್ಲೋಕಗಳ ಹಸ್ತಪ್ರತಿ ಅದು.

ಶಾರದೆಯ ಆರಾಧಕರು (ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ)

ರಾಜಗುರುಗಳು (ಹಕ್ಕ ಬುಕ್ಕರೊಡನೆ)

ಬದುಕಿನ ಗುರಿ ತಿಳಿಯಿತು

ಮಾಧವಾಚಾರ್ಯರು ಅದನ್ನು ಓದಿಕೊಂಡರು. ಮತ್ತೆ ಮತ್ತೆ ಓದಿಕೊಂಡರು.

ಅವರ ಕಣ್ಣುಗಳು ಪ್ರಜ್ವಲಿಸಿದವು. ಮುಖವು ದೃಢವಾಯಿತು.

“ಅಯ್ಯಾ ಮಿತ್ರ, ನಾನು ಯಾವ ಪವಿತ್ರ ಕಾರ್ಯಕ್ಕಾಗಿ ಬಂದಿದ್ದೆನೋ ಆ ಉದ್ದೇಶ ಇಂದು ಈಡೇರಿತು. ನನ್ನ ಬದುಕಿನ ಗುರಿ ಏನೆಂದು ಇಂದು ತಿಳಿಯಿತು. ಭೀತಿ ಇಲ್ಲದೆ ಬದುಕುವುದನ್ನು ಸಾರಿ ನೀನು ನನಗೆ ನನ್ನ ಜನ್ಮದ ಉದ್ದೇಶವನ್ನು ತಿಳಿಸಿಕೊಟ್ಟೆ. ಅದಕ್ಕಾಗಿ ನಾನು ನಿನಗೆ ಋಣಿಯಾಗಿದ್ದೇನೆ” ಎಂದು ಮಾಧವಾಚಾರ್ಯರು ಆನಂದ ಬಾಷ್ಪ ಸುರಿಸುತ್ತಾ ಗೆಳೆಯ ವೆಂಕಟನಾಥಾರ್ಯರಿಗೆ ನಮಸ್ಕರಿಸಿದರು.

ಮುಂದೆ ಆ ಮಿತ್ರರು ಬಾಲ್ಯದ ದಿನಗಳನ್ನು ಕುರಿತು ಮೆಲುಕು ಹಾಕಿದರು. ತಾವು ಕಂಚಿಯಲ್ಲಿ ಸರ್ವಜ್ಞ ವಿಷ್ಣುಶರ್ಮರ ಗುರುಕುಲದಲ್ಲಿ ಕಳೆದ ಸುಖ ದಿನಗಳನ್ನು ಜ್ಞಾಪಿಸಿಕೊಂಡು ನಕ್ಕು ನಲಿದರು. ದೇಶಕ್ಕೆ ಬಂದಿದ್ದ ದುಃಸ್ಥಿತಿಗಾಗಿ ಮರುಗಿದರು; ಇಂಥ ಅನಿಶ್ಚಿತ ದಿನಗಳಲ್ಲಿ ತಾವು ಮಾಡಬೇಕಾಗಿರುವ ಕರ್ತವ್ಯವನ್ನು ಕುರಿತು ಆಲೋಚಿಸಿದರು. ನಾಡಿನಲ್ಲಿ ತುಂಬಿದ್ದ ಅಜ್ಞಾನ ಅಧೈರ್ಯಗಳನ್ನು ತೊಡೆದು ಹಾಕಿ, ನಾಡಿನಲ್ಲಿ ನವೋದಯವನ್ನುಂಟು ಮಾಡಲು ಕೈಕೊಳ್ಳಬೇಕಾದ ಮಾರ್ಗವನ್ನು ಕುರಿತು ವಿಚಾರ ವಿನಿಮಯ ನಡೆಸಿದರು.

ಇಲ್ಲಿಗೆ ಮಾದವಾಚಾರ್ಯರ ಜೀವನ ಒಂದು ನಿಲುಗಡೆಗೆ ಬಂದಂತಾಯಿತು.

ದೇವಶಿಲ್ಪಿ ಬಂದಾನೇ?

ದಕ್ಷಿಣಾಪಥದ ಅಂದಿನ ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಜನ ನಿರ್ವೀಯರಾಗಿದ್ದರು. ಹಿಂದುಗಳು ಅನ್ಯಾಯವನ್ನು ಎದುರಿಸುವ ಸ್ಥೈರ್ಯವಿಲ್ಲದೆ ಭಯದಲ್ಲಿ ಕೈಕಾಲು ಕಟ್ಟಿಕೊಂಡು ಕುಳಿತಿದ್ದರು. ಆಳುತ್ತಿದ್ದವರು ಅವರನ್ನು ತೀರ ಅನ್ಯಾಯದಿಂದ ನಡೆಸಿಕೊಳ್ಳುತ್ತಿದ್ದರು. ದೇವಾಲಯಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.

ಆದರೆ ಸಾಂಘಿಕ ಪ್ರತಿಭಟನೆ ಮಾತ್ರ ಎಲ್ಲೂ ಇರಲಿಲ್ಲ. ಜನರನ್ನು ಸ್ವದೇಶ, ಸ್ವಧರ್ಮಗಳ ಸಲುವಾಗಿ ಒಂದುಗೂಡಿಸಿ ಒಂದು ಆದರ್ಶದ ಕಡೆಗೆ ನಡೆಸಬಲ್ಲ ರಾಷ್ಟ್ರಪುರುಷನ ಅಗತ್ಯವಿತ್ತು. ಅಂತಹ ಕಾರಣ ಪುರುಷನ ಸಲುವಾಗಿ ಮಾತೃಭೂಮಿ ಹತಾಶಳಾಗಿ ಕಾದಿದ್ದಳು. ತನ್ನ ಉಜ್ವಲ ಚಾರಿತ್ಯ್ರದಿಂದ  ಹೇಡಿಗಳ ಹೃದಯದಲ್ಲಿ ಪೌರುಷವನ್ನು ಕೊನರಿಸಬಲ್ಲ ದೇವಶಿಲ್ಪಿಯೊಬ್ಬನ ಅಗತ್ಯವಿತ್ತು.

ಕನ್ನಡಿಗರು ಹಿಂದೆ ಇಡೀ ದಕ್ಷಿಣಾಪಥವನ್ನು ತಮ್ಮ ತೋಳ್ತೆಕ್ಕೆ ಹಿಡಿದು ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿ ಮೆರೆದಿದ್ದರು.  ಕನ್ನಡ ತಾಯಿಯ ಮಕುಟಮಣಿಗಳಾಗಿ ಗಂಗರೂ, ರಾಷ್ಟ್ರಕೂಟರೂ, ಚಾಲುಕ್ಯರೂ, ಕದಂಬರೂ, ಹೊಯ್ಸಳರೂ ಮೆರೆದಿದ್ದರು. ಕನ್ನಡ ಜನ ಸಾಹಿತ್ಯ, ಸಂಗೀತ, ಶಿಲ್ಪಕಲೆಗಳಲ್ಲಿ ಔನ್ನತ್ಯವನ್ನು ಮೆರೆಸಿದ್ದರು.

ಧರ್ಮನಿಷ್ಠೆ, ಪ್ರಜಾ ಕಲ್ಯಾಣಕ್ಕಾಗಿ ರಾಜ್ಯ

ಈ ವೇಳೆಗೆ ದಿಲ್ಲಿಯ ಸಿಂಹಾಸನದಲ್ಲಿ ಅನೇಕ ಬದಲಾವಣೆಗಳು ಆಗಿದ್ದವು.

ಖಿಲ್ಜಿ ಸಂತತಿಯ ಭಾಗ್ಯರವಿ ಅಸ್ತಮಿಸಿ ತುಗಲಖ್‌ ವಂಶದವರು ಅಧಿಕಾರಕ್ಕೆ ಬಂದಿದ್ದರು. ತಂದೆಯನ್ನು ಮೋಸದಿಂದ ಕೊಲ್ಲಿಸಿ, ಮಹಮದ್‌ ಬಿನ್‌ ತುಗಲಖನು ದಿಲ್ಲಿ ಸಾಮ್ರಾಟನಾಗಿದ್ದನು. ಅವನಿಗೆ ನೆಪಮಾತ್ರಕ್ಕೆ ದಕ್ಷಿಣಾಪಥದ ರಾಜ್ಯಗಳು ಸಾಮಂತ ರಾಜ್ಯಗಳಾಗಿದ್ದವು. ಆದರೆ ಎಲ್ಲೆಲ್ಲೂ ಸ್ವೇಚ್ಛಾಚಾರ, ದುರಾಡಳಿತಗಳು ನಡೆದಿದ್ದವು.

ಇಂಥ ಅನಿಶ್ಚಯದ ಸ್ಥಿತಿಯಲ್ಲಿ ಸುಭದ್ರವಾದ ಸಾಮ್ರಾಜ್ಯವೊಂದಕ್ಕೆ ತಾವು ಅಡಿಪಾಯ ಹಾಕಬೇಕೆಂದು ಮಾಧವಾಚಾರ್ಯರು ಹಂಬಲಿಸಿದ್ದರು. ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುವಂತೆ ಧರ್ಮನಿಷ್ಠೆ, ಪ್ರಜಾಸೇವೆಗಳ ಅಡಿಗಲ್ಲ ಮೇಲೆ ನಿಂತ ಆಡಳಿತವನ್ನು ಅವರು ಬಯಸಿದರು. ಆತ್ಮಗೌರವನ್ನು ಕಳೆದುಕೊಂಡು ಎಲ್ಲ ಅನ್ಯಾಯಗಳನ್ನೂ ಸಹಿಸಿಕೊಂಡು ಬದುಕಿದವರಿಗೆ ನಿರ್ಭಯವನ್ನೂ ಆತ್ಮಗೌರವವನ್ನೂ ಕಲಿಸಲು ಬಯಸಿದರು. ಇದಕ್ಕೆ ಬೇಕಾದ ಸಹಕಾರ ಸಹಾಯಗಳು ಯಾವ ರಾಜವಂಶದಿಂದಾಗಲೀ, ಅಧಿಕಾರಿಗಳಿಂದಾಗಲೀ ಅವರಿಗೆ ದೊರೆತಿರಲಿಲ್ಲ. ಅವರ ಕನಸ್ಸನ್ನು ಕೇಳಿ ಎಲ್ಲರೂ ಉಪೇಕ್ಷಿಸುವವರೇ ಆಗಿದ್ದರು. ತಮ್ಮ ಕನಸು ನನಸಾಗುವ ದಿನಕ್ಕಾಗಿ ಅವರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಅವರಲ್ಲಿ ಧನಬಲವಿರಲಿಲ್ಲ, ಜನಬಲವಿರಲಿಲ್ಲ. ಆದರೂ ಈ ಕಾರ್ಯಸಾಧನೆಯಾಗುತ್ತದೆ ಎಂಬ ಆತ್ಮ ವಿಶ್ವಾಸವಿತ್ತು. ಗುರುಗಳ ಆಶೀರ್ವಾದದಿಂದ ದೈವಾನುಗ್ರಹದಿಂದ ಈ ಕಾರ್ಯ ಸಾಧಿಸುವುದೆಂದು ತಿಳಿದಿತ್ತು. ಆದರೆ ಈ ಕಾರ್ಯಕ್ಕೆ ಬೇಕಾಗುವ ಪುಣ್ಯಸಂಚಯವಿಲ್ಲದೆ ಯಶಸ್ವಿಯಾಗುವುದಿಲ್ಲ ಎಂದು ಅನಿಸಿತ್ತು. ಅವರು ಸಂಸಾರಕ್ಕೆ ತಿಲಾಂಜಲಿಯನ್ನಿತ್ತು ತಪಸ್ಸಿಗೆ ಕುಳಿತುಕೊಳ್ಳಲು ನಿರ್ಧರಿಸಿದರು.

ತಪಸ್ವಿ

ಮಾಧವಾಚಾರ್ಯರು ಹೀಗೆ ನಿಶ್ಚಯಿಸಿ ತಪಸ್ಸಿಗೆ ಕುಳಿತುಕೊಳ್ಳಲು ಪ್ರಶಸ್ತ ಸ್ಥಳವನ್ನು ಹುಡುಕುತ್ತಾ ದೇಶಾಟನೆ ಕೈಗೊಂಡರು. ಅವರು ಅನೇಕ ನಾಡುಗಳನ್ನು ಸುತ್ತಿ ಬಂದರು. ಎಲ್ಲೂ ಅವರಿಗೆ ಒಪ್ಪುವ ಸ್ಥಳ ದೊರಕಲಿಲ್ಲ. ಅವರು ಪಂಪಾಕ್ಷೇತ್ರಕ್ಕೆ ಹಿಂದಿರುಗಿ ಬಂದರು. ಈ ವೇಳೆಗೆ ಮಾಧವಚಾರ್ಯರ ತಾಯಿ ತೀರಿಕೊಂಡಿದ್ದಳು. ಹೆಂಡತಿಯೂ ಅಕಾಲ ಮರಣಕ್ಕೆ ತುತ್ತಾಗಿದ್ದಳು. ವಿಧಿಯೇ ಸಂಸಾರಬಂಧನದಿಂದ ಅವರನ್ನು ಮುಕ್ತಗೊಳಿಸಿದ್ದನು.

ಈಗ ಮಾಧವಾಚಾರ್ಯರಿಗೆ ಯಾವ ಬಂಧನವೂ ಇರಲಿಲ್ಲ. ಅವರು ತಮ್ಮ ಬದುಕನ್ನು ರಾಷ್ಟ್ರದ ಸೇವೆಗೆ ಮುಡುಪಿಟ್ಟರು.

ಅವರು ಒಂದು ಬಾರಿ ಪಂಪಾವಿರೂಪಾಕ್ಷಸ್ವಾಮಿಯ ದರ್ಶನ ಪಡೆದು ತುಂಗಭದ್ರೆಯ ತಡಿಗೆ ಬಂದು ಒಂದು ಮರವನ್ನು ಆಶ್ರಯಿಸಿ ವಿಶ್ರಮಿಸಿಕೊಳ್ಳುತ್ತಾ ಕುಳಿತರು.

ಹಾಗೇ ಜೊಂಪು ಹತ್ತಿತು. ಅವರು ಮೈಮರೆತರು. ಅವರ ದೇಹದಲ್ಲಿ ಒಂದು ಬಗೆಯ ಪುಳಕವುಂಟಾಯಿತು. ಮನಸ್ಸನ್ನು ತುಂಬಿದ್ದ ಕಳವಳ ದೂರಾದಂತೆ ಅನಿಸಿತು.

ಅವರು ಚಣಕಾಲ ಕಣ್ಣುತೆರೆದು ಸುತ್ತಲೂ ನೋಡಿದರು. ಅಲ್ಲಿ ಪ್ರಕೃತಿ ಪ್ರಸನ್ನವಾಗಿತ್ತು. ಸಮೀಪದಲ್ಲೇ ತುಂಗಭದ್ರೆಯು ಗಿರಿವನಗಳ ನಡುವೆ ಲಾಸ್ಯವಾಡುತ್ತಿರುವಂತೆ ಕಂಡಳು. ನದಿಯ ತೆರೆಗಳ ಮೇಲೆ ಸೂರ್ಯನ ಹೊಂಗಿರಣಗಳು ಕುಣಿಯುತ್ತಿದ್ದವು. ಆ ಪ್ರದೇಶದಲ್ಲಿ ಭೀಮಾಕಾರದ ವೃಕ್ಷಗಳು ಆಗಸವನ್ನು ಮರೆಮಾಡಿ ನಿಂತಿದ್ದವು.

ಅಲ್ಲಿ ಕುಳಿತಾಗ ಮಾಧವಾಚಾರ್ಯರ ಕಳವಳ ದೂರವಾಗಿ ಬೆಳಕು ಮೂಡಿದಂತೆ ಆಯಿತು. ಅವರು ನದಿಯಲ್ಲಿ ಸ್ನಾನ ಮಾಡಿ ಪದ್ಮಾಸನ ಹಾಕಿ ಧ್ಯಾನ ಮಗ್ನರಾದರು.

ಪರಮ ಪಾವನ ಕ್ಷೇತ್ರ

ಆ ಪ್ರದೇಶವು ಸಿದ್ಧ ಕ್ಷೇತ್ರವೆಂದು ಹೆಸರು ಪಡೆದಿತ್ತು. ಹಿಂದೆ ಪುರಾಣ ಕಾಲದಲ್ಲಿ ಪಂಪಾಂಬಿಕೆಯು ಅಲ್ಲಿನ ಹೇಮಕೂಟದಲ್ಲಿ ತಪಸ್ಸು ಮಾಡಿ ಪರಮೇಶ್ವರನನ್ನು ಒಲಿಸಿಕೊಂಡಳೆಂದು ಹೇಳುತ್ತಿದ್ದರು. ಅಂಜನಾದೇವಿಯು ವಾಯುಪುತ್ರನಾದ ಹನುಮಂತನನ್ನು ಮಗನನ್ನಾಗಿ ಪಡೆದುದು ಅಂಜನಾದ್ರಿಯಲ್ಲಿಯಲ್ಲೇ, ಶ್ರೀರಾಮ ಸುಗ್ರೀವರ ಸಖ್ಯವಾದುದು, ವಾಲಿಯ ವಧೆ, ಸುಗ್ರೀವನಿಗೆ ರಾಜ್ಯ ಕೋಶಗಳು ಪ್ರಾಪ್ತವಾದುದು ಅಲ್ಲಿನ ಕಿಷ್ಕಿಂಧೆಯಲ್ಲೇ. ಹೀಗೆ ಅದು ಬೇಡಿದವರ ಇಷ್ಟಾರ್ಥವನ್ನು ಈಡೇರಿಸುವ ಸಿದ್ಧಕ್ಷೇತ್ರ ಆಗಿತ್ತು.

ಅಲ್ಲದೆ ಅದು ವೀರಭೂಮಿ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಒಮ್ಮೆ ಒಬ್ಬ ಬೇಟೆಗಾರನು ಬೇಟೆಯಾಡುತ್ತಾ ಅಲ್ಲಿಗೆ ಬಂದನಂತೆ. ಬೇಟೆಯ ನಾಯಿಗಳ ಮೇಲೆ ಹುಲ್ಲೆಗಳು ತಿರುಗಿ ಬಿದ್ದು ಅವನ್ನು ಹಿಮ್ಮೆಟ್ಟಿಸಿದ್ದವಂತೆ. ಈ ನೆಲವನ್ನು ಗಂಡುಮೆಟ್ಟಿನ ಭೂಮಿಯೆಂದೂ ಕರೆಯುತ್ತಿದ್ದರು. ಇಲ್ಲಿ ಕ್ಷಾತ್ರತೇಜ ಮೈವೆತ್ತಿ ನಿಂತಿದೆ ಎಂದೂ ಜನರು ಹೇಳಿಕೊಳ್ಳುತ್ತಿದ್ದರು.

ಇಂಥ ಪರಮ ಪಾವನೆಯಾದ ತುಂಗಭದ್ರೆಯ ಮಡಿಲಲ್ಲಿ ವಿರೂಪಾಕ್ಷ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮಾಧವಾಚಾರ್ಯರು ತಪಸ್ಸಿಗೆ ಕುಳಿತರು.

ಮಾಧವಾಚಾರ್ಯರ ತಪಸ್ಸು ದಿನಕಳೆದಂತೆ ತೀವ್ರವಾಗತೊಡಗಿತು. ಮೊದಲು ಗೆಡ್ಡೆ ಗೆಣಸುಗಳನ್ನು ತಿಂದರು. ಆಹಾರವನ್ನು ತೊರೆದು ಬರಿ ಜಲಾಹಾರವನ್ನೂ ಅನಂತರ ಅದನ್ನೂ ಬಿಟ್ಟು ನಿರಾಹಾರದಿಂದ ತಪಸ್ಸು ಮುಂದುವರೆಸಿದರು. ಹೀಗೆ ಅವರು ಹನ್ನೆರಡು ವರ್ಷ ತಪಸ್ಸು ಮಾಡಿದರು. ದೇವಿಯು ಒಲಿಯಲಿಲ್ಲ.

ಈ ಬಗೆಯ ಘೋರ ತಪಸ್ಸಿನಿಂದ ಅವರ ದೇಹ ಕೃಶವಾಗಿತ್ತು. ಆದರೆ ಆಧ್ಯಾತ್ಮದ ಪ್ರಭೆ, ಚೈತನ್ಯ ಕಣಕಣಗಳಲ್ಲಿ ತುಂಬಿ ಹರಿಯುತ್ತಿತ್ತು. ಅವರಿಗೆ ಹಸಿವು ಬಾಯಾರಿಕೆಗಳಾಗಲೀ ಆಯಾಸ ದಣಿವಾಗಲೀ ಕಾಣಲಿಲ್ಲ. ಮನಸ್ಸು ಭುವನೇಶ್ವರಿಯಲ್ಲಿ ನೆಲೆಸಿತ್ತು! ಅದು ಸುಪ್ರಸನ್ನವಾಗಿತ್ತು.

ನಿನ್ನ ಮಂಗಳ ಮೂರ್ತಿ ನೆಲೆಸಲಿ

ಭುವನೇಶ್ವರಿಯು ಮಾಧವಾಚಾರ್ಯರನ್ನು ಪರೀಕ್ಷಿಸಲು ಭಯಂಕರ ಬಿಸಿಲಾಗಿ ಬಂದಳು. ಬಿರುಗಾಳಿಯಾಗಿ ಬೀಸಿದಳು. ಮಳೆಯಾಗಿ ಭರಸಿಡಿಲಾಗಿ ಬೆಂಕಿಯಾಗಿ ಮಹಾ ಪ್ರವಾಹವಾಗಿ ಬಂದು ಅವರನ್ನು ಅಲ್ಲಾಡಿಸಿ ನೋಡಿದಳು. ಮಾಧವಾಚಾರ್ಯರ ಚಿತ್ತ ಚಂಚಲವಾಗಲಿಲ್ಲ.

ಕಡೆಗೆ ಮಗನ ಕರೆಗೆ ಓಗೊಡುವ ತಾಯಿಯಂತೆ ಭುವನೇಶ್ವರಿಯು ಮಾಧವಾಚಾರ್ಯರಿಗೆ ದರ್ಶನವಿತ್ತಳು.

“ವತ್ಸಾ ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ ಏಳು, ಎದ್ದೇಳು, ನಿನಗೆ ಬೇಕಾದ ವರವನ್ನು ಕೇಳು” ಎಂದು ಮಂಜುಳ ಕಂಠದಲ್ಲಿ ತಾಯಿ ಹೇಳಿದಳು.

ಮಾದವಾಚಾರ್ಯರು ಕಣ್ಣು ತೆರೆದರು. ಎದುರಿಗೆ ನಿಂತಿದ್ದ ಆ ಮಂಗಳ ಮೂರ್ತಿಯನ್ನು ನೋಡಿ ಆನಂದ ಭಾಷ್ಪದಿಂದ ತುಂಬಿ ಕರಗಳನ್ನು ಜೋಡಿಸಿ ಗದ್ಗದ ಕಂಠದಲ್ಲಿ ಪ್ರಾರ್ಥಿಸಿದರು.

“ತಾಯಿ, ನಿನಗೆ ತಿಳಿಯದುದು ಯಾವುದಿದೆ? ನಿನ್ನನ್ನು ದರ್ಶಿಸಿದ ಮೇಲೆ ನನಗೆ ಐಹಿಕವಾಗಿ ಏನನ್ನೂ ಕೇಳಬೇಕೆನಿಸುತ್ತಿಲ್ಲ. ನನಗೆ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಕೊಡು, ನನ್ನ ಹೃದಯದೇಗುಲದಲ್ಲಿ ನಿನ್ನ ಮಂಗಳ ಮೂರ್ತಿ ಸದಾ ನೆಲಸಿರುವಂತೆ ಕರುಣಿಸು.”

ಮುಂದಿನ ಜನ್ಮದವರೆಗೆ ಕಾಯಲಾರೆ

ವತ್ಸಾ, ನಿನ್ನ ಅಭೀಷ್ಟವೇನೆಂದು ನಾನು ಬಲ್ಲೆ, ಇಂದಿನಿಂದ ನೀನು ಸಕಲ ಬ್ರಹ್ಮ ವಿದ್ಯೆಗಳಲ್ಲೂ ಪಾರಂಗತವಾಗಿ ವಿದ್ಯಾರಣ್ಯ ಎನಿಸಿಕೊಳ್ಳುವೆ, ಕನ್ನಡನಾಡಿಗೆ ಬಂದಿರುವ ದುಃಸ್ಥಿತಿ ನಿನ್ನಿಂದ ತೊಲಗುತ್ತದೆ. ನಿನ್ನಿಂದ ಲೋಕಕಲ್ಯಾಣವಾಗುತ್ತದೆ ಆದರೆ…

“ಏಕೆ ತಾಯಿ ಅನುಮಾನವೆ?”

“ಮಗು, ಇದು ಈ ಜನ್ಮದಲ್ಲಿ ಸಾಧ್ಯವಾಗುವುದಿಲ್ಲ”

“ತಾಯಿ, ಮುಂದಿನ ಜನ್ಮದವರೆಗೆ ನಾನು ಕಾಯಲಾರೆ” ಎಂದು ಭಗವತಿಯಲ್ಲಿ ಅಂಗಲಾಚಿ ಬೇಡಿದರು.

“ಹಾಗಾದರೆ ನೀನು ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕು.”

“ಇಗೋ ಈ ಕ್ಷಣವೇ ನಾನು ಸಂನ್ಯಾಸಿ ಆಗುತ್ತೇನೆ.”

ಭುವನೇಶ್ವರಿಯು ಮುಗುಳ್ನಗುತ್ತಾ “ತಥಾಸ್ತು! ನಿನ್ನ ಅಭೀಷ್ಟ ಸಿದ್ಧಿಯಾಗಲಿ” ಎಂದು ಆಶೀರ್ವದಿಸಿ ಕಣ್ಮರೆಯಾದಳು.

ಸಂನ್ಯಾಸಿಯ ಪ್ರತೀಕ್ಷೆ

ಈಗ ಮಾಧವಾಚಾರ್ಯರು ಶೃಂಘೇರಿಯ ಭಾರತೀ ಕೃಷ್ಣತೀರ್ಥರಿಂದ ಸಂನ್ಯಾಸ ದೀಕ್ಷೆ ಪಡೆದು ವಿದ್ಯಾರಣ್ಯರೆಂಬ ಆಶ್ರಮನಾಮ ಪಡೆದರು.

ಅವರಿಗೆ ಈಗ ನಡುವಯಸ್ಸು. ಅವರು ಪ್ರತಿದಿನ ಬ್ರಾಹ್ಮೀ ಮುಹೂರ್ತಕ್ಕೆ ಏಳುತ್ತಿದ್ದರು. ತುಂಗಭದ್ರೆಯಲ್ಲಿ ಸ್ನಾನಮಾಡಿ, ಪಂಪಾವಿರೂಪಾಕ್ಷಸ್ವಾಮಿಯ ದರ್ಶನ ಪಡೆದು, ಸ್ವಾಧ್ಯಾಯ ಪ್ರವಚನಗಳಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದರು. ಅವರ ಜೀವನವು ಯಾಂತ್ರಿಕವಾಗಿ ಸಾಗಿತ್ತು. ನೂತನ ಸಾಮ್ರಾಜ್ಯದ ಕಾರಣಪುರುಷನಿಗಾಗಿ ಕಾಯುತ್ತಾ ಅವರು ಕುಳಿತಿದ್ದರು.

ವರ್ಷಗಳ ಮೇಲೆ ವರ್ಷಗಳು ಕಳೆದವು. ಅವರ ಆಕಾಂಕ್ಷೆ ಈಡೇರುವ ಶುಭಲಕ್ಷಣ ಕಾಣಲಿಲ್ಲ.

ಅವರು ಪ್ರತಿದಿನ ಮಲಗುವಾಗ “ತಾಯಿ, ಒಂದು ದಿನ ವ್ಯರ್ಥವಾಗಿ ಕಳೆದುಹೋಯಿತು. ಇನ್ನೆಷ್ಟು ದಿನ ಹೀಗೆ ಪರೀಕ್ಷಿಸುವೆ?” ಎಂದು ಎಳೆಯ ಮಗುವಿನಂತೆ ಕಂಬನಿ ಮಿಡಿಯುತ್ತಾ ಹಂಬಲಿಸುತ್ತಿದ್ದರು.

ಅರುಣೋದಯ

ಕಡೆಗೆ ಒಂದು ದಿನ ಅವರ ಬಾಳಿನ ದಿಗಂತದಲ್ಲಿ ಅರುಣೋದಯವಾದಂತೆ ಇಬ್ಬರು ಸ್ಫುರದ್ರೂಪಿಗಳಾದ ಯುವಕರು ಕಾಣಿಸಿಕೊಂಡರು. ಅವರು ಕುದುರೆ ಸವಾರರು. ಮಾರ್ಗಾಯಾಸದಿಂದ ಬಳಲಿ ವಿದ್ಯಾರಣ್ಯರ ಆಶ್ರಮವನ್ನು ಪ್ರವೇಶಿಸಿದರು. ತಪಸ್ವಿಗಳನ್ನು ನೋಡಿ ಅವರ ಕಾಲಿಗೆ ಎರಗಿದರು.

ಆ ಯುವಕರಿಗೆ ಸುಮರು ಮೂವತ್ತು ಮೂವತ್ತೈದು ವರ್ಷ ವಯಸ್ಸು, ನೋಡಲು ಅಣ್ಣತಮ್ಮಂದಿರಂತೆ ಕಾಣುತ್ತಿದ್ದರು. ರಾಜ ಲಕ್ಷಣಗಳಿಂದ ಕೂಡಿದ ವರ್ಚಸ್ವೀ ಯುವಕರಾಗಿದ್ದರು. ವಿದ್ಯಾರಣ್ಯರಿಗೆ ತಾವು ಇಷ್ಟು ದಿನದಿಂದ ನಿರೀಕ್ಷಿಸುತ್ತಿದ್ದ ಕಾರಣ ಪುರುಷರು ಇವರೇ ಎಂದು ಬೋಧೆಯಾಯಿತು. ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು.

ಆ ಯುವಕರು “ಗುರುದೇವ, ತಮ್ಮ ದರ್ಶನದಿಂದ ನಾವು ಪುನೀತರಾದೆವು. ನಮ್ಮ ಬಾಳಿನಲ್ಲಿ ಕವಿದಿದ್ದ ಕಾರ್ಮುಗಿಲು ತಮ್ಮ ದರ್ಶನ ಮಾತ್ರದಿಂದ ತೊಲಗಿದಂತೆ ಭಾಸವಾಗುತ್ತಿದೆ. ತಾವು ನಮ್ಮನ್ನು ಅನುಗ್ರಹಿಸಿ ಕಾಪಾಡಬೇಕು” ಎಂದು ಕೇಳಿಕೊಂಡರು.

ನಾವು ಹಕ್ಕಬುಕ್ಕರು

ನೀನು ಯಾರು? ನಿಮ್ಮ ಹೆಸರೇನು? ಇಲ್ಲಿಗೆ ಬಂದ ಕಾರಣವನ್ನು ಸಂಕೋಚವಿಲ್ಲದೆ ತಿಳಿಸಿ” ಎಂದು ವಿದ್ಯಾರಣ್ಯರು ಕೇಳಿದರು.

“ಸ್ವಾಮಿ, ನಾವಿಬ್ಬರು ಅಣ್ಣ ತಮ್ಮಂದಿರು. ನನ್ನ ಹೆಸರು ಹರಿಹರ (ಹಕ್ಕ), ನನ್ನ ತಮ್ಮ ಬುಕ್ಕರಾಯ (ಬುಕ್ಕ). ನಾವು ಈ ನಾಡಿನ ಒಡೆಯರಾಗಿದ್ದೆವು. ಇಂದು ರಾಜ್ಯಕೋಶಗಳನ್ನು ಕಳೆದುಕೊಂಡು ದೇಸಿಗರಂತೆ ಅಲೆಯುತ್ತಿದ್ದೇವೆ.” ಎಂದು ತಮ್ಮ ಬಾಳಿನ ದುರಂತ ಕಥೆಯನ್ನು ಅಣ್ಣ ವಿದ್ಯಾರಣ್ಯರಲ್ಲಿ ನಿವೇದಿಸಿದನು.

ಈ ಯುವಕರು ಸಂಗಮದೇವನ ಮಕ್ಕಳು. ಸಂಗಮದೇವನಿಗೆ ಕುಮ್ಮಟ ದುರ್ಗದ ದೊರೆ ಕಂಪಿಲರಾಯನು ತನ್ನ ಮಗಳನ್ನು ಕೊಟ್ಟು ತನ್ನ ಭಂಡಾರಿಯನ್ನಾಗಿ ಮಾಡಿಕೊಂಡಿದ್ದನು. ಶತ್ರುಗಳು ಕಮ್ಮಟ ದುರ್ಗವನ್ನು ಮುತ್ತಿದರು. ಅಲ್ಲಿದ್ದವರನ್ನೆಲ್ಲಾ ನಿಷ್ಕರುಣೆಯಿಂದ ಕೊಂದರು; ಅಳಿದುಳಿದ ರಾಜ-ಬಂಧುಗಳಲ್ಲಿ ಹನ್ನೊಂದು ಮಂದಿಯನ್ನು ಮಹಮದ್‌ಬಿನ್‌ ತುಗಲಖನ ಸೈನಿಕರು ಸೆರೆಹಿಡಿದುಕೊಂಡು ದೆಹಲಿಗೆ ಹೋದರು.

‘ಕನ್ನಡನಾಡಿಗೆ ಬಂದಿರುವ ದುಃಸ್ಥಿತಿ ನಿನ್ನಿಂದ ತೊಲಗುತ್ತದೆ’

ಈ ಹನ್ನೊಂದುಮಂದಿ ಸೆರೆಯಾಳುಗಳಲ್ಲಿ ಹಕ್ಕಬುಕ್ಕರೂ ಸೇರಿದ್ದರು.

ಮುಂದೆ ತುಗಲಖನ ಹುಚ್ಚು ಪ್ರಭುತ್ವದಿಂದ ದಕ್ಷಿಣ ರಾಜ್ಯಗಳಲ್ಲಿ ಅರಾಜಕತೆ ಉಂಟಾಯಿತು. ಅದನ್ನು ಅಡಗಿಸಲು ಸುಲ್ತಾನನು ಸಮರ್ಥರಾದ ಈ ಯುವಕರನ್ನು ಬಿಡುಗಡೆ ಮಾಡಿ ಸೈನ್ಯದೊಂದಿಗೆ ಕಳುಹಿಸಿದನು. ಈ ಸಮಯ ಸಾಧಿಸಿ ಅವರು ತಪ್ಪಿಸಿಕೊಂಡು ಅಲ್ಲಿಗೆ ಬಂದಿದ್ದರು. ಈ ಎಲ್ಲಾ ಕಥೆಯನ್ನು ಕೇಳಿ ವಿದ್ಯಾರಣ್ಯರು ಈ ತರುಣರಿಗೆ ತಮ್ಮ ಆಶ್ರಮದಲ್ಲಿ ಆಶ್ರಯವಿತ್ತರು. ಈ ಹಕ್ಕ-ಬಹುಕ್ಕರ ಮೂಲಕ ನೂತನ ರಾಜ್ಯವನ್ನು ನಿರ್ಮಿಸಲು ಅವರು ಸಂಕಲ್ಪಿಸಿದರು.

ಆನೆಗೊಂದಿ ವರವಾಯಿತು

ದಿಲ್ಲಿ ಸುಲ್ತಾನ ಮಹಮದ್‌ಬಿನ್‌ ತುಗಲಖನು ಆನೆಗೊಂದಿಯ ರಾಜ ಜಂಬುಕೇರ್ಶವರ ರಾಯನನ್ನು ಸೋಲಿಸಿ ಅರಮನೆಯಲ್ಲೆ ಅವನನ್ನು ಬಂದಿಯನ್ನಾಗಿರಿಸಿದನು. ಆನೆಗೊಂದಿ ರಾಜ್ಯಕ್ಕೆ ತನ್ನ ‘ಪ್ರತಿನಿಧಿಯನ್ನಾಗಿ ಮಲಿಕ ನಲಾಯಬನೆಂಬುವನ್ನು ನೇಮಿಸಿದ್ದನು.

ವಿದ್ಯಾರಣ್ಯರ ಆದೇಶದಂತೆ ಹಕ್ಕಬುಕ್ಕರು ದೇಶಪ್ರೇಮಿ ಯುವಕರ ತಂಡವೊಂದನ್ನು ಸಂಘಟಿಸಿದರು. ಅವರು ಉಪಾಯವಾಗಿ ಕೋಟೆಯನ್ನು ಪ್ರವೇಶಿಸಿ, ಮಲಿಕ ನಾಯಬನು ಮದ್ಯದ ಅಮಲಿನಲ್ಲಿ ಮೈಮರೆತಿರುವಾಗ ಅವನನ್ನು ಸೆರೆ ಹಿಡಿದರು; ಆನೆಗೊಂದಿಯನ್ನು ರಕ್ತಪಾತವಿಲ್ಲದೆ ಶತ್ರುಗಳಿಂದ ಮುಕ್ತಗೊಳಿಸಿದರು. ದೊರೆಯನ್ನೂ ಅವನ ಪತ್ನೀ ಪುತ್ರರನ್ನೂ ಬಿಡುಗಡೆ ಮಾಡಿದರು. ಆನೆಗೊಂದಿಯ ಅರಮನೆಯ ಮೇಲೆ ಹಿಂದುಗಳ ವರಹಾಂಕಿತ ಧ್ವಜ ಮತ್ತೆ ಹಾರಿತು.

ವಿಜಯನಗರ

ಈ ವಿಜಯೋತ್ಸವವನ್ನು ನಿಮಿತ್ತ ಮಾಡಿಕೊಂಡು ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಪ್ರಶಸ್ತವಾದ ಸ್ಥಳವನ್ನು ಆಯ್ಕೆ ಮಾಡಿ ವಿದ್ಯಾನಗರವೆಂಬ ನೂತನ ನಗರದ ನಿರ್ಮಾಣಕ್ಕೆಕ ಶಂಕು ಸ್ಥಾಪನೆ ಮಾಡಿದರು. ಈ ಸಮಯದಲ್ಲಿ ಭೂಗತವಾಗಿದ್ದ ನಿಧಿಯೊಂದು ಅವರ ಕರಗತವಾಯಿತು. ಇದರಿಂದ ರಾಜ್ಯ ನಿರ್ಮಾಣಕ್ಕೆ ಅನುಕೂಲವಾಯಿತು. ಜನಸಾಮಾನ್ಯರು ವಿದ್ಯಾರಣ್ಯರು ಭುವನೇಶ್ವರಿಯನ್ನು ಪ್ರಾರ್ಥಿಸಿ ಮೂರು ಮುಕ್ಕಾಲು ಘಳಿಗೆ ಸುವರ್ಣವೃಷ್ಟಿ ಕರೆಸಿದರೆಂದು ಭಾವಿಸಿದರು.

ಬಹು ದಿನಗಳ ಜನತೆಯ ಆಶೋತ್ತರವಾಗಿ ವಿದ್ಯಾರಣ್ಯರು ಶಾಲಿವಾಹನಶಕ ಧಾತು ಸಂವತ್ಸರ ವೈಶಾಕ ಶುದ್ಧ ಸಪ್ತಮಿ ಗುರುವಾರ (ಕ್ರಿ.ಶ. ೧೩೩೬ರಲ್ಲಿ) ಈ ಹೊಸ ನಗರದ ಶಂಕು ಸ್ಥಾಪನೆ ಮಾಡಿದರು. ಹಕ್ಕಬುಕ್ಕರಿಗೆ ಇದನ್ನು ವಿದ್ಯಾನಗರ ಎಂದು ಕರೆಯುವ ಆಸೆ. ಆದರೆ ವಿದ್ಯಾರಣ್ಯರು ಅದನ್ನು ‘ವಿಜಯನಗರ’ ಎಂದು ಕರೆದರು.

ಭುವನೇಶ್ವರಿಯ ಕೃಪೆಯಿಂದ ವಿಜಯನಗರವು ಬೆಳೆದು ದೇಶ ವಿದೇಶಗಳಿಂದ ಪ್ರವಾಸಿಗಳನ್ನು ಆಕರ್ಷಿಸುವ ಮಹಾನಗರವಾಯಿತು. ಅರವತ್ತನಾಲ್ಕು ಚದರಮೈಲಿ ವಿಸ್ತಾರವಾಗಿ ಬೆಳೆದ ಈ ನಗರವು ಮೂರುವರೆ ಶತಮಾನಗಳ ಕಾಲ ಕರ್ನಾಟಕ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆಯಿತು. ಈ ರಾಜ್ಯಕ್ಕೆ ವಿದ್ಯಾರಣ್ಯರ ಇಚ್ಛೆಯಂತೆ ಹರಿಹರನು ದೊರೆಯಾದನು. ಅವನ ನಂತರ ಬುಕ್ಕರಾಯನು ದೊರೆಯಾದನು. ವಿದ್ಯಾರಣ್ಯರು ಇವರಿಗೆ ಮಂತ್ರಿಯಾಗಿ, ರಾಜ ಗುರುಗಳಾಗಿ ಮಾರ್ಗದರ್ಶನ ಮಾಡಿದರು.

ವಿದ್ಯಾರಣ್ಯರನ್ನು ಕರ್ನಾಟಕ ರಾಜ್ಯ ಸಂಸ್ಥಾಪ ನಾಚಾರ್ಯ ಎಂದು ಜನ ಕರೆದರು.

ಶಾರದೆಯ ಆರಾಧಕರು

ಪೂಜ್ಯರಾದ ವಿದ್ಯಾರಣ್ಯರು ಸಾಮ್ರಾಜ್ಯವೊಂದನ್ನು ರೂಪಿಸಿದ ಶಿಲ್ಪಿಯಾಗಿದ್ದರು. ರಾಜ್ಯಾಡಳಿತವನ್ನು ಹೊತ್ತ ಪ್ರಧಾನ ಮಂತ್ರಿಯಾಗಿದ್ದರೂ ಅವರು ತಪಸ್ವಿಗಳಾಗಿದ್ದರು. ಅವರು ತಮ್ಮ ಸಹೋದರ ಸಾಯಣರೊಡಗೂಡಿ ಸರ್ವದರ್ಶನ ಸಂಗ್ರಹವೆಂಬ ಬೃಹದ್‌ಗ್ರಂಥವನ್ನು ರಚಿಸಿ, ಪಂಡಿತಲೋಕಕ್ಕೆ ಉಪಕಾರ ಮಾಡಿದರು.

ಅವರು ಒಮ್ಮೆ ಅಕ್ಷೋಭ್ಯ ತೀರ್ಥರೊಡನೆ ವಾದಿಸಿ ಅವರ ವಿದ್ಯೆಯನ್ನು ಗೌರವಿಸಿದರು. ಅವರ ಶಿಷ್ಯರಾದ ಜಯತೀರ್ಥರನ್ನು ಯರಗೊಳದ ಗುಹೆಯಲ್ಲಿ ಸಂದರ್ಶಿಸಿ ಅವರು ರಚಿಸದ ಪ್ರಮಾಣ ಲಕ್ಷಣವೆಂಬ ಗ್ರಂಥದಿಂದ ಪ್ರಭಾವಿತರಾದರು. ಅವರನ್ನು ರಾಜಧಾನಿ ವಿಜಯನಗರಕ್ಕೆ ಬರಮಾಡಿಕೊಂಡು ಆನೆಯ ಮೇಲೆ ಕೂಡಿಸಿ ಮೆರವಣಿಗೆ ಮಾಡಿಸಿ ವಿದ್ವಾಂಸರನ್ನು ಗೌರವಿಸಿದರು.

ಅವರು ಭಾರತೀಕೃಷ್ಣ ತೀರ್ಥರ ಅನಂತರ ಶ್ರೀ ಶಂಕರಾಚಾರ್ಯರ ಶ್ರೀ ಶಾರದಾ ಪೀಠಕ್ಕೆ ಹನ್ನೆರಡನೆ ಜಗದ್ಗುರುಗಳಾಗಿ ಕ್ರಿ.ಶ.೧೩೩೧ ರಲ್ಲಿ ಅಧಿಕಾರಕ್ಕೆ ಬಂದು ಐವತ್ತೈದು ವರ್ಷಗಳವರೆಗೆ ಅದ್ವೈತ ಸಿಂಹಾಸನದಲ್ಲಿದ್ದು ಕ್ರಿ.ಶ. ೧೩೮೬ರಲ್ಲಿ ವಿದೇಹ ಮುಕ್ತಿಯನ್ನು ಪಡೆದರು.

ವಿದ್ಯಾರಣ್ಯರು ನಾಲ್ಕು ವೇದಗಳಿಗೆ ಭಾಷ್ಯವನ್ನೂ, ಉಪನಿಷತ್ತುಗಳಿಗೆ ವ್ಯಾಖ್ಯಾನವನ್ನೂ ಬರೆದರು. ಅಲ್ಲದೆ ಪಂಚದಶಿ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶಿಕ ಪರಾಶರ ಮಾಧವೀಯ, ದೇವಿ ಅಪರಾಧ ಸ್ತೋತ್ರ ಮುಂತಾದ ಅದ್ವೈತ ಪರ ಗ್ರಂಥಗಳನ್ನು ಬರೆದು ಸಾರಸ್ವತ ಭಂಡಾರವನ್ನು ತುಂಬಿದರು. ಅವರು ತಮ್ಮ ಸಂಗೀತಸಾರ ಗ್ರಂಥದಲ್ಲಿ ಹದಿನೈದು ಮೂಲ ರಾಗಗಳ ಪ್ರಸ್ತಾಪ ಮಡಿ ಕರ್ನಾಟಕ ಸಂಗೀತ ಪಿತಾಮಹರಾದರು.

ಮಾರ್ಗದರ್ಶನ

ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಸುಭದ್ರವಾದ ಧಾರ್ಮಿಕ ಬುನಾದಿಯ ಮೇಲೆ ನಿಲ್ಲಿಸಿ, ಸಾಮ್ರಾಟರಿಗೆ ಮತ ಧರ್ಮಗಳ ವಿಷಯದಲ್ಲಿ ಯೋಗ್ಯ ಮಾರ್ಗದರ್ಶನ ನೀಡಿದರು. ಹರಿಹರನ ನಂತರ ದೊರೆಯಾದ ಬುಕ್ಕರಾಯನ ಆಳ್ವಿಕೆಯಲ್ಲಿ ಒಮ್ಮೆ ವಿಜಯನಗರದಲ್ಲಿದ್ದ ಜೈನಮತೀಯರಿಗೂ, ಶ್ರೀವೈಷ್ಣವ ಮತೀಯರಿಗೂ ಭಿನ್ನಾಭಿಪ್ರಾಯದಿಂದ ಪರಸ್ಪರ ಘರ್ಷಣೆ ಉಂಟಾಯಿತು. ಈ ಸಮಯದಲ್ಲಿ ವಿದ್ಯಾರಣ್ಯರು ಅವರಿಬ್ಬರ ನಡುವೆ ಇದ್ದ ವಿರಸವನ್ನು ಪರಿಹರಿಸಿದರು. ಅವರ ಆದೇಶದಂತೆ ದೊರೆ ಬುಕ್ಕರಾಯನು ಎರಡು ಜನಾಂಗದ ಮುಖಂಡರನ್ನೂ ಬಳಿಗೆ ಕರೆಸಿಕೊಂಡು ಅವರಿಗೆ ಬುದ್ಧಿ ಹೇಳಿ, ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಆಶ್ರಮ ಧರ್ಮಗಳನ್ನು ನಿರ್ಭಯವಾಗಿ ಅನುಸರಿಸಲು ಸ್ವಾತಂತ್ಯ್ರವಿದೆ ಎಂದು ಘೋಷಿಸಿ ಅದರಂತೆ ಶಾಸನವನ್ನು ಬರೆಸಿದನು. ಇದರಿಂದ ವಿಜಯನಗರ ಸಾಮ್ರಾಜ್ಯದ ಜನತೆಯಲ್ಲಿ ಪರಮತ ಸಹಿಷ್ಣುತೆ ಪರಸ್ಪರ ವಿಶ್ವಾಸಗಳು ಬೆಳೆದವು.

ವಿದ್ಯಾರಣ್ಯರು ಪರಮ ವೈರಾಗ್ಯ ಮೂರ್ತಿಗಳು. ಅವರಲ್ಲಿ ಕ್ಷಾತ್ರ ಹಾಗೂ ಬ್ರಹ್ಮ ತೇಜಸ್ಸುಗಳ ಹಿತಮಿತ ಸಮನ್ವಯವಿತ್ತು. ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೇಲೆ ಅವರ ಜೀವಿತದ ಕಾರ್ಯ ಮುಗಿದಂತೆ ಆಯಿತು. ಅವರು ಸಾಮ್ರಾಜ್ಯವನ್ನು ಅಂತರಂಗ ಹಾಗೂ ಬಹಿರಂಗದ ಶತ್ರುಗಳಿಂದ ಮುಕ್ತಗೊಳಿಸಿದ ಮೇಲೆ ಶೃಂಗೇರಿಗೆ ಹಿಂದಿರುಗಿ ಗುರುಪೀಠವನ್ನು ಅಲಂಕರಿಸಿದರು.

ಅಪೂರ್ವ ಸಂನ್ಯಾಸಿ

ವಿದ್ಯಾರಣ್ಯರು ಈ ಲೋಕವನ್ನು ಬಿಟ್ಟಾಗ ಅವರಿಗೆ ಸುಮಾರು ಒಂದು ನೂರ ಹದಿನೆಂಟು ವರ್ಷ ಎಂದು ಕಾಣುತ್ತದೆ. ಈ ದೀರ್ಘ ಜೀವನದುದ್ದಕ್ಕೂ ಅವರು ಹಂಬಲಿಸಿದ್ದು ಜನತೆಯ ಕಲ್ಯಾಣಕ್ಕಾಗಿ, ದ್ವೇಷಿಸಿದ್ದು ಅನ್ಯಾಯವನ್ನು, ದಬ್ಬಾಳಿಕೆಯನ್ನು, ಸಾರಿದ್ದು ನಿರ್ಭಯವನ್ನು ಪರಧರ್ಮಕ್ಕೆ ಗೌರವ ಕೊಡುವುದನ್ನು, ಜನತೆಯ ಸೇವೆ ಸಲ್ಲಿಸಬೇಕೆಂಬ ಉದಾತ್ತವಾದ ಆದರ್ಶವನ್ನಿಟ್ಟುಕೊಂಡವರು ಅದಕ್ಕೆ ಯೋಗ್ಯತೆಯನ್ನು ಪಡೆಯಬೇಕು. ಒಂದು ಘನವಾದ ಕಾರ್ಯ ಸಾಧನೆಯಾಗಬೇಕಾದರೆ ಬರಿಯ ತೋಳಿನ ಶಕ್ತಿಯಷ್ಟೇ ಸಾಲದು, ತೋಳ ಶಕ್ತಿಗೆ ನಿರ್ಮಲವಾದ ನಿಷ್ಠೆ ಸೇರಬೇಕು. ಅಂತಹ ಕೆಲಸದಲ್ಲಿ ತೊಡಗಿರುವವರಿಗೆ ಕಣ್ಣುಮುಂದೆ ದೊಡ್ಡತನದ ಮೇಲ್ಪಂಕ್ತಿ, ರಕ್ಷೆ ಇರಬೇಕು. ವಿದ್ಯಾರಣ್ಯರು ದೀರ್ಘ ತಪಸ್ಸನ್ನು ಮಾಡಿದರು. ಭುವನೇಶ್ವರಿಯಲ್ಲಿ ತಮಗಾಗಿ ಸುಖ ಅಧಿಕಾರಗಳನ್ನು ಬೇಡಲಿಲ್ಲ. ಜ್ಞಾನ ವೈರಾಗ್ಯಗಳನ್ನು ಬೇಡಿದರು. ಸಂನ್ಯಾಸಿಯಾದರು. ಇತರರ ಸುಖ-ದುಃಖ ಕಷ್ಟ-ನೋವುಗಳಿಂದ ದೂರವಾಗಿದ್ದು ಮುಕ್ತಿಮಾರ್ಗ ಕಂಡುಕೊಳ್ಳುವುದಕ್ಕಲ್ಲ, ತಾವು ಒಬ್ಬ ವ್ಯಕ್ತಿ ಎಂಬುದನ್ನು ಮರೆತು ಇತರರಿಗೆ ಮುಡಿಪಾಗಿ, ಆತ್ಮಗೌರವ ಕಳೆದುಕೊಂಡಿದ್ದ ಕನ್ನಡಿಗರನ್ನು ಎಚ್ಚರಿಸಿ ಹೊಸ ರಾಜ್ಯ ಕಟ್ಟುವುದಕ್ಕೆ. ವಿಜಯನಗರ ರಾಜ್ಯದ ಸ್ಥಾಪನೆಯಾಗುವ ಹೊತ್ತಿಗೆ ಅವರು ಶೃಂಗೇರಿಯ ಶಾರದಾ ಪೀಠವನ್ನು ಅಲಂಕರಿಸಿದ್ದರು. ತಮ್ಮ ತಪಸ್ಸನ್ನೆಲ್ಲ ಹೊಸ ರಾಜ್ಯಕ್ಕೆ ಧಾರೆ ಎರೆದರು. ರಾಜರಿಗೆ ಮಾರ್ಗದರ್ಶನ ಮಾಡಿದರು. ರಾಜ್ಯದ ಆಡಳಿತ ಪ್ರಜೆಗಳಿಗಾಗಿ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಪ್ರಜೆಗಳಿಗೆ ಮಾರ್ಗದರ್ಶನ ಮಾಡಿದರು ಈರ್ಷ್ಯ ಅಸೂಯೆಗಳಿಲ್ಲದಂತೆ ಬದುಕಲು. ವಿದ್ವಾಂಸರಲ್ಲಿ ವಿದ್ವಾಂಸರೆನಿಸಿಕೊಂಡರು, ನಿಜವಾಗಿ ಶಾರದೆಯ ಆರಾಧಕರಾದರು. ತಮ್ಮ ವೈಯಕ್ತಿಕ ಜೀವನದ ವೈರಾಗ್ಯ, ನೇಮ, ನಿಷ್ಠೆ, ಶುಭ್ರತೆಗಳ ಮಟ್ಟಿಗೆ ಸಂನ್ಯಾಸಿ, ಲೋಕಕಲ್ಯಾಣ ರಥಕ್ಕೆ ರಾಜರೊಡನೆ, ಸಾಮಾನ್ಯ ಜನರೊಡನೆ ಹೆಗಲು ಕೊಟ್ಟ ಮಹಾಮಹಿಮ. ಕನ್ನಡನಾಡಿನ ಜನತೆಯು ಅವರು ಮಾಡಿದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ, ಅವರ ವಿಗ್ರಹವನ್ನು ಪಂಪಾ ವಿರೂಪಾಕ್ಷಸ್ವಾಮಿಯ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ತಮ್ಮ ಶ್ರದ್ಧಾ ಭಕ್ತಿಯನ್ನು ಅರ್ಪಿಸಿದೆ.

ಇಂದಿಗೂ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ವಿದ್ಯಾರಣ್ಯರ ದಿವ್ಯಮಂಗಳ ಮೂರ್ತಿಯನ್ನು ನೋಡಬಹುದು.