ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕುಗಳಲ್ಲಿ ಒಂದು. ಶಾಲಾ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸಿ ಪ್ರಾಥಮಿಕ ಶಿಕ್ಷಣವನ್ನು ಅರ್ಥಪೂರ್ಣವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪೂರ್ಣಗೊಳಿಸುವ ಉದ್ದೇಶದಿಂದ ಅನೇಕ ಪರಿಣಾಮಕಾರಿ ಅನುಭವಗಳನ್ನು ನೀಡುವುದರೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುಗಾರಿಕೆಯ ಬೃಹತ್ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಗುರಿ ಸಾಧಿಸಲು ಮೇಲ್ಕಂಡ ವಿವಿಧೋದ್ದೇಶ ಚಟಿವಟಿಕೆಗಳನ್ನು ಆಯೋಜಿಸಿದೆ. ಈ ನಿಟ್ಟಿನಲ್ಲಿ ೫,೬, ಮತ್ತು ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳ ಆಯ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಗೂ ಇತರೆ ಹೆಣ್ಣು ಮಕ್ಕಳಿಗಾಗಿ ” ಚಿಣ್ಣರ ಸುವರ್ಣ ಜಿಲ್ಲಾ ದರ್ಶನ” ಎಂಬ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಸರ್ವ ಶಿಕ್ಷಣ ಅಭಿಯಾನ, ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮಂಡ್ಯ ಇವರ ಸಹಯೋಗದೊಂದಿಗೆ ಅನುಷ್ಠಾನಗೊಳ್ಳುತ್ತಿದೆ.

ಪ್ರವಾಸದ ಪ್ರಾಮುಖ್ಯತೆ :

 • ವೈವಿಧ್ಯಮಯ ಜನಜೀವನ, ಶಿಲ್ಪಕಲೆ, ಐತಿಹಾಸಿಕ ಕಟ್ಟಡಗಳ ಬಗ್ಗೆ ಧನಾತ್ಮಕ ಮನೋಭಾವನೆಗಳ ಸಂವರ್ಧನೆ.
 • ವಿವಿಧ ಪ್ರದೇಶಗಳ ಸಂಸ್ಕೃತಿ ಹಾಗೂ ಪರಂಪರೆಗಳ ಪರಿಚಯ ಮತ್ತು ನಾಡು-ನುಡಿ ಕುರಿತಾಗಿ ಅಭಿಮಾನ ಬೆಳೆಸುವುದು.
 • ವಾಸ್ತವ ಜೀವನ ಕುರಿತ ಮನೋಭಾವನೆಯಲ್ಲಿ ಬದಲಾವಣೆ.
 • ಸಹಬಾಳ್ವೆ ಹಾಗೂ ಸಹಭಾಗಿತ್ವದ ಮಹತ್ವ ತಿಳಿಸುವುದು.
 • ಇತರೆ ಧರ್ಮ, ಜಾತಿ ಹಾಗೂ ಪ್ರಾಂತ್ಯದ ಜನರೊಂದಿಗೆ ಸಂವೇದನೆ ಮತ್ತು ಸಹಕಾರ ಮನೋಭಾವ ಬೆಳೆಸುವುದು.
 • ತನ್ನ ಸ್ಥಾನ ಹಾಗೂ ಕರ್ತವ್ಯಗಳ ಬಗ್ಗೆ ಅರಿವನ್ನು ಉಂಟುಮಾಡುವುದು.
 • ಸರ್ವತೋಮುಖ ವ್ಯಕ್ತಿತ್ವ ವಿಕಾಸವನ್ನುಂಟು ಮಾಡುವುದು.

ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಜ್ಞಾನವನ್ನು ಪಡೆಯುವುದು.

 

ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಪ್ರವಾಸದ ಅಗತ್ಯತೆ

 • ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂಡು ಪಠ್ಯೇತರ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸುವುದು.
 • ಮಕ್ಕಳು ಶಾಲೆಯತ್ತ ಹೆಚ್ಚು ಆಕರ್ಷಿತರಾಗಿ ಹಿರಿಯ ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.
 • ಮಕ್ಕಳಲ್ಲಿ ಪಠ್ಯವಸ್ತುವಿನ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗುವುದು.
 • ವಿದ್ಯಾರ್ಥಿಗಳಲ್ಲಿ ವೀಕ್ಷಣೆ, ಮೌಖಿಕ ಹಾಗೂ ಲಿಖಿತ ಕೌಶಲಗಳ ಸಂವರ್ಧನೆ ಮಾಡುವುದು.
 • ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸುವುದು.
 • ಮಕ್ಕಳಲ್ಲಿ ಸಹಬಾಳ್ವೆಯ ಮಹತ್ವ ಬೆಳೆಸುವುದು.
 • ಸ್ವಾಭಾವಿಕ ಸನ್ನಿವೇಶಗಳ ಮುಖಾಂತರ ಶಿಕ್ಷಣವನ್ನು ದೊರಕಿಸುವುದು.
 • ಮಕ್ಕಳಲ್ಲಿ ಜ್ಞಾನ, ಕಲಾಭಿರುಚಿ ಹಾಗೂ ಕುತೂಹಲಗಳನ್ನು ಬೆಳೆಸುವುದು.
 • ಪಠ್ಯಪುಸ್ತಕದಲ್ಲಿನ ಮಾಹಿತಿ ಹಾಗೂ ಹೊರ ಪ್ರಪಂಚದ ವಾಸ್ತವ್ಯದ ನಡುವೆ ಇರುವ ಅಂತರವನ್ನು ಅರ್ಥೈಸುವುದು.
 • ಸೆಮಿಸ್ಟರ್ ಪದ್ಧತಿಯ ಗುಂಪು ಚಟುವಟಿಕೆ ಹಾಗೂ ವೈಯಕ್ತಿಕ ಚಟುವಟಿಕೆಗಳನ್ನೊಳಗೊಂಡ ಯೋಜನೆಗಳನ್ನು ತಯಾರಿಸಲು ಮಕ್ಕಳಲ್ಲಿ ಮನೋಸ್ಥೈರ್ಯ ಬೆಳೆಸುವುದು.
 • ವಿವಿಧ ಪ್ರದೇಶಗಳ ಸಂಸ್ಕೃತಿ ಪರಂಪರೆ, ನಾಡು-ನುಡಿಯನ್ನು ಪರಿಚಯಿಸುವುದು.
 • ಮಕ್ಕಳ ಸೃಜನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
 • ಕಲಿಯುವಿಕೆಗೆ ಸ್ವತಂತ್ರವಾದ ವಾತಾವರಣವನ್ನು ನಿರ್ಮಿಸುವುದು.
 • ಕಲಿಕೆಯನ್ನು ಶಾಶ್ವತಗೊಳಿಸುವುದು.
 • ವಿದ್ಯಾರ್ಥಿಗಳನ್ನು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಲು ಪ್ರೋತ್ಸಾಹಿಸುವುದು.

ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ, ಸಮಾಜ ಸೇವೆ ಭಾವೈಕ್ಯತೆ, ದೇಶಪ್ರೇಮ ಮುಂತಾದ ಸದ್ಗುಣಗಳನ್ನು ಬೆಳೆಸುವುದು.

ಪ್ರವಾಸದ ಸ್ಥಳಗಳ ಆಯ್ಕೆ :

ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಶೈಕ್ಷಣಿಕ ಮಹತ್ವದ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳು.

ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವ ರಾಜ್ಯದಲ್ಲಿನ ದೂರದ ಪ್ರದೇಶಗಳು

ಪ್ರವಾಸದ ಮುಖ್ಯಾಂಶಗಳು :

 • ಎರಡು ದಿನ ಹಾಗೂ ಒಂದು ರಾತ್ರಿಯ ಉಚಿತ ಪ್ರವಾಸ.
 • ಉತ್ತಮವಾದ ಊಟ, ಕಾಫಿ, ತಿಂಡಿ, ವಸತಿ ಇತ್ಯಾದಿ.
 • ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಉಚಿತ ಪ್ರವೇಶ ವ್ಯವಸ್ಥೆ.
 • ಪ್ರತಿ ತಂಡಕ್ಕೆ ಅನುಭವಿ ಶಿಕ್ಷಕರು ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರು.
 • ಪ್ರವಾಸದ ಅವಧಿಯಲ್ಲಿ ತಾಲ್ಲೂಕು, ಜಿಲ್ಲೆಯಲ್ಲಿನ ಮಾಹಿತಿ ಕೇಂದ್ರಗಳು.
 • ಪ್ರಥಮ ಚಿಕಿತ್ಸೆ ಸೌಲಭ್ಯ.
 • ಪ್ರತಿ ತಂಡದ ಮೌಲ್ಯಮಾಪನ ಮತ್ತು ದಾಖಲೀಕರಣ. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ.
 • ಮಾರ್ಗಸೂಚಿ, ಜಿಲ್ಲೆಯ ನಕ್ಷೆ, ನೋಟ್ ಪುಸ್ತಕ, ಪೆನ್, ಚಿತ್ರಕಲೆ ಹಾಗೂ ಇತರೆ ಚಟುವಟಿಕೆಗಳಿಗೆ ಅವಶ್ಯಕ ಲೇಖನ ಸಾಮಗ್ರಿಗಳನ್ನು ಮತ್ತು ಟೋಪಿಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆ.

ವಿದ್ಯಾರ್ಥಿಗಳು ಪ್ರವಾಸದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು :ನೀವು ಪಾಲಿಸಬೇಕಾದ ಅಂಶಗಳು :

 • ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಸುತ್ತಲಿನ ಪರಿಸರವನ್ನು ತಪ್ಪದೆ ಗಮನಿಸಬೇಕು.
 • ವಿವಿಧ ಸ್ಥಳಗಳಲ್ಲಿ ಜನರ ಭಾಷೆ, ಧರಿಸುವ ಉಡುಪು, ಗುಣ-ನಡತೆ, ಆದರ-ಸತ್ಕಾರಗಳು, ಜೀವನ ಶೈಲಿ, ತಿಂಡಿ-ತಿನಿಸುಗಳಲ್ಲಿ ಇರುವ ವೈವಿಧ್ಯತೆಗಳನ್ನು ಗಮನಿಸಬೇಕು.
 • ಪ್ರತಿ ದಿನದ ದಿನಚರಿಯನ್ನು ಬರೆಯುವುದು.
 • ಸ್ಥಳಗಳ ಬಗ್ಗೆ ಮಾಹಿತಿಯನ್ನು ಶಿಕ್ಷಕರಿಂದ ಅಥವಾ ಮಾರ್ಗದರ್ಶಕರಿಂದ ಕೇಳಿ ತಿಳಿಯಬೇಕು.
 • ವೇಳಾಪಟ್ಟಿಯಂತೆ, ವಿದ್ಯಾರ್ಥಿ ಗುಂಪಿನ ನಾಯಕರು, ಪ್ರವಾಸಿ ಮಾರ್ಗದರ್ಶಕರು ಹಾಗೂ ಶಿಕ್ಷಕರು ನೀಡುವ ಸೂಚನೆಯಂತೆ ಸಮಯ ಪಾಲನೆ ಮಾಡಬೇಕು.
 • ಪ್ರವಾಸದಲ್ಲಿ ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಉಂಟಾಗುವ ತೊಂದರೆಗಳಿಗೆ ಕೂಡಲೇ ಶಿಕ್ಷಕರನ್ನು ಸಂಪರ್ಕಿಸಬೇಕು.
 • ಬಸ್ಸಿನಿಂದ ಇಳಿದು ಸ್ಥಳಗಳ ವೀಕ್ಷಣೆಗೆ ಸಾಲಾಗಿ ಸಾಗಬೇಕು.
 • ನೀರು ಅಥವಾ ಇಳಿಜಾರು ಸ್ಥಳಕ್ಕೆ ಭೇಟಿ ನೀಡಿದಾಗ ಶಿಕ್ಷಕರು ನೀಡುವ ಸೂಚನೆಗಳನ್ನು ಪಾಲಿಸಿ ಎಚ್ಚರದಿಂದಿರಬೇಕು.
 • ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಒಯ್ಯುವುದು.
 • ಪ್ರವಾಸ ಕಾಲದಲ್ಲಿ ವೈಯಕ್ತಿಕ ಕೆಲಸವನ್ನು ಪ್ರತಿಯೊಬ್ಬರು ತಾವೇ ನಿರ್ವಹಿಸಬೇಕು.
 • ಶುಚಿಯಾದ ನೀರನ್ನೇ ಕೇಳಿ ಪಡೆದು ಕುಡಿಯಬೇಕು.
 • ನಿಮಗೆ ಹಂಚಿಕೆ ಮಾಡಲಾಗುವ ಮಲಗುವ ಕೋಣೆಯಲ್ಲಿಯೇ ನೀವು ಮಲಗಬೇಕು.
 • ಪ್ರತಿ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲರೂ ಭಾಗವಹಿಸಬೇಕು.
 • ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
 • ಕುಡಿಯುವ ನೀರು ಹಾಗೂ ಒಂದು ಕೈ ಒರೆಸುವ ಬಟ್ಟೆ ನಿಮ್ಮ ಕೈಗೆ ಕೂಡಲೆ ಸಿಗುವಂತೆ ಇಟ್ಟುಕೊಳ್ಳಿ.
 • ನಿಮ್ಮ ಶಿಕ್ಷಕರು ಹಾಜರಾತಿಯನ್ನು ತೆಗೆದುಕೊಳ್ಳುವಾಗ ನಿಶ್ಯಬ್ದತೆಯಿಂದ ಇರಬೇಕು.
 • ಪ್ರತಿ ಮುಂಜಾನೆ ಹಾಗೂ ರಾತ್ರಿ ಶಿಕ್ಷಕರು ಹೇಳಿಕೊಡುವ ಪ್ರಾರ್ಥನೆಯಲ್ಲಿ ಭಾಗವಹಿಸಬೇಕು.

ವಾತಾವರಣವನ್ನು ಕಲುಷಿತಗೊಳಿಸದಿರಿ. ಶಿಸ್ತು ಮತ್ತು ಸಭ್ಯತೆಯಿಂದ ನಡೆದುಕೊಳ್ಳಬೇಕು.

ನೀವು ಹೀಗೆ ಮಾಡದಿರಿ

 • ಬಸ್ಸಿನ ಕಿಟಕಿಗಳಿಂದ ತಲೆ ಅಥವಾ ಕೈಗಳನ್ನು ಹೊರ ಚಾಚಬಾರದು.
 • ಬೆಲೆ ಬಾಳುವ ವಸ್ತು/ಆಭರಣಗಳನ್ನು ಕೊಂಡೊಯ್ಯಬಾರದು.
 • ಪ್ರವಾಸ ಸಮಯದಲ್ಲಿ ಅಂಗಡಿ ತಿಂಡಿಗಳನ್ನಾಗಲಿ ಅಥವಾ ಮನೆಯಿಂದ ತಂದ ಕರಿದ ತಿಂಡಿಗಳನ್ನು ತಿನ್ನಬಾರದು.
 • ಅರ್ಧರಾತ್ರಿಯಲ್ಲಿ ಒಬ್ಬರೆ ಎದ್ದು ಹೊರಗೆ ಹೋಗಬಾರದು.
 • ನೀವು ಕೋಪ ಮಾಡಿಕೊಳ್ಳುವುದಾಗಲಿ/ತುಂಟತನವನ್ನಾಗಲಿ ಮಾಡಿಕೊಳ್ಳಬಾರದು.

 

ಶಿಕ್ಷಕರಿಗೆ ಮಾರ್ಗಸೂಚಿ ಮತ್ತು ಸೂಚನೆಗಳು, ನಿರ್ವಹಿಸಬೇಕಾದ ಅಂಶಗಳು

 • ಪ್ರವಾಸ ಕಾಲದಲ್ಲಿ ಮಗುವಿಗೆ ಕಲಿಯುವ ಅನುಭವಗಳನ್ನು ಹಾಗೂ ವಾತಾವರಣವನ್ನು ಸೃಷ್ಟಿಸಬೇಕು.
 • ಪ್ರತಿಯೊಂದು ಮಗುವನ್ನು ಸಮಾನವಾಗಿ ಕಂಡು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು.
 • ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾಗದಂತೆ ಶಿಕ್ಷಕರು ಜವಾಬ್ದಾರಿಯನ್ನು ವಹಿಸಬೇಕು.
 • ವಿದ್ಯಾರ್ಥಿಗಳು ಬಸ್ಸಿನ ಕಿಟಕಿಗಳಿಂದ ಕೈ ಅಥವಾ ತಲೆಯನ್ನು ಹೊರಚಾಚದಂತೆ ಎಚ್ಚರಿಕೆ ವಹಿಸಬೇಕು.
 • ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಹೆಣ್ಣು ಮಕ್ಕಳ ಗುಂಪಿನ ಜವಾಬ್ದಾರಿಯನ್ನು ಶಿಕ್ಷಕಿಯರು ವಹಿಸಬೇಕು.
 • ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪರೀಕ್ಷಿಸಬೇಕು.
 • ಎಲ್ಲಾ ಶಿಕ್ಷಕರು ಸಹಕಾರ ಮನೋಭಾವದಿಂದ ಹೊಣೆಗಾರಿಕೆಯನ್ನು ನಿರ್ವಹಿಸಬೇಕು.
 • ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಸಿದ್ದರಾಗಲು ಪ್ರೇರೇಪಿಸಬೇಕು.
 • ಪ್ರತಿ ಮಗುವಿನ ಹಿನ್ನೆಲೆಯನ್ನು ಅರಿಯಲು ಪ್ರಯತ್ನಿಸಬೇಕು ಹಾಗೂ ಅಗತ್ಯ ಸಹಕಾರವನ್ನು ನೀಡಬೇಕು.
 • ಹೆಣ್ಣು ಮಕ್ಕಳ ಕೋಣೆಯಲ್ಲಿ ಶಿಕ್ಷಕಿಯರು ಕಡ್ಡಾಯವಾಗಿ ಮಲಗಬೇಕು.
 • ಹೆಣ್ಣುಮಕ್ಕಳಲ್ಲಿ ಉಂಟಾಗುವ ತೊಂದರೆಗಳಿಗೆ ಶಿಕ್ಷಕಿಯರು ಗಮನಹರಿಸಬೇಕು.
 • ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಿತ ಹಾಗೂ ಮಿತವಾದ ಭೋಜನ ಮಾಡುವಂತೆ ತಿಳಿಹೇಳಬೇಕು.
 • ವಿದ್ಯಾರ್ಥಿಗಳಿಗೆ ಶುದ್ಧ ನೀರು ಒದಗಿಸಲು ವ್ಯವಸ್ಥೆ ಮಾಡುವುದು.
 • ಗಂಭೀರವಾಗಿ ಅನಾರೋಗ್ಯದಿಂದ ಬಳಲುವ ಮಗುವಿನ ಆರೈಕೆ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.
 • ನೀರು ಅಥವಾ ಇಳಿಜಾರು ಸ್ಥಳಗಳಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು.
 • ಎಲ್ಲಾ ಸ್ಥಳಗಳಲ್ಲಿ ಶಿಸ್ತು ಹಾಗೂ ಸಭ್ಯತೆಯಿಂದ ವರ್ತಿಸಲು ಮಕ್ಕಳಿಗೆ ಪ್ರೇರೇಪಿಸಬೇಕು.
 • ಯಾವುದೇ ಮಗು ಗುಂಪನ್ನು ಬಿಟ್ಟು ಹೋಗದಂತೆ ನಿಗಾ ವಹಿಸಬೇಕು.
 • ಪ್ರತಿದಿನ ಮುಂಜಾನೆ ಸಾಮೂಹಿಕ ಪ್ರಾರ್ಥನೆ ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
 • ಪ್ರತಿದಿನದ ದಿನಚರಿಯನ್ನು ವಿದ್ಯಾರ್ಥಿಗಳಾದಿಯಾಗಿ ಶಿಕ್ಷಕರೂ ನಿರ್ವಹಿಸಬೇಕು.
 • ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
 • ಈ ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಿಕ್ಷಕರ ವಿವರ
 • ಈ ದಿನಚರಿ
 • ಈ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
 • ಈ ವಿದ್ಯಾರ್ಥಿಗಳು ಬರೆದ ಕವನ/ಚುಟುಕ/ಚಿತ್ರಕಲೆ ಇತ್ಯಾದಿ.
 • ಇಡೀ ಪ್ರವಾಸದ ಸಂದರ್ಭದಲ್ಲಿ ಸನ್ನಡತೆಯಿಂದ ನಡೆದುಕೊಂಡು ಸಹಕರಿಸಿದ ವಿದ್ಯಾರ್ಥಿಗಳನ್ನು ಗುರುತಿಸಬೇಕು.
 • ವಿದ್ಯಾರ್ಥಿಗಳಿಗೆ ನೀಡಲಾಗುವ ಜಿಲ್ಲೆಯ ನಕ್ಷೆಯಲ್ಲಿ ವೀಕ್ಷಿಸಿದ ಸ್ಥಳಗಳನ್ನು ಗುರುತಿಸಲು ಸಹಕರಿಸಬೇಕು.
 • ಶಿಕ್ಷಕರು ಒಟ್ಟಾಗಿ ಸೇರಿ ತಮ್ಮ ತಂಡದ ವರದಿಯನ್ನು ಸಿದ್ಧಗೊಳಿಸಿ ಪ್ರವಾಸದ ಅಂತ್ಯದಲ್ಲಿ ತಮ್ಮ ಅಧಿಕಾರಿಗಳಿಗೆ ಸಲ್ಲಿಸಬೇಕು.

ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಿರುವ ಪ್ರವಾಸೋದ್ಯಮ ಇಲಾಖೆಯ ಸಮನ್ವಯಾಧಿಕಾರಿಗಳು ಕಾಲಕಾಲಕ್ಕೆ ನೀಡಲಾಗುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕು.

ಶಿಕ್ಷಕರೆ ಹೀಗೆ ಮಾಡದಿರಿ !

 • ಶಿಕ್ಷಕರ ನಡುವೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡಬಾರದು.
 • ಬೆಲೆಬಾಳುವ ವಸ್ತುಗಳನ್ನು ವಿದ್ಯಾರ್ಥಿಗಳಾದಿಯಾಗಿ ಶಿಕ್ಷಕರೂ ಸಹ ಹೊಂದಿರಬಾರದು.
 • ಬಸ್ಸಿನಲ್ಲಿ ಎಲ್ಲಾ ಶಿಕ್ಷಕರು ಒಂದೇ ಕಡೆ ಕುಳಿತುಕೊಳ್ಳಬಾರದು.
 • ಮಕ್ಕಳಿಗಿಂತ ಮೊದಲು ಸ್ಥಳಗಳನ್ನು ಕಾಯ್ದಿರಿಸಲು ಮುನ್ನುಗ್ಗಬಾರದು.
 • ಯಾವುದೇ ಶಿಕ್ಷಕರು ತಾವು ಭೇಟಿ ನೀಡಿದ ಸ್ಥಳಗಳಲ್ಲಿ ತಮ್ಮ ಪರಿಚಯದವರನ್ನು,
 • ಸಂಬಂಧಿಗಳನ್ನು ನೋಡುವ ಅಥವಾ ವೈಯಕ್ತಿಕ ಕಾರ್ಯಗಳ ಸಲುವಾಗಿ ತಂಡವನ್ನು ಬಿಟ್ಟು ತೆರಳಬಾರದು.
 • ಶಿಕ್ಷಕರು ಧೂಮಪಾನ ಮಾಡುವುದು ಅಥವಾ ಇನ್ನಿತರೆ ದುಶ್ಚಟಗಳಲ್ಲಿ ತೊಡಗಬಾರದು.
 • ಈ ಕುರಿತು ಇಲಾಖೆಯ ಗಮನಕ್ಕೆ ಬಂದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು.
 • ಯಾವುದೇ ಹೆಚ್ಚಿನ ಅನಾರೋಗ್ಯದಿಂದ ಪ್ರವಾಸದ ಮಾರ್ಗಮಧ್ಯದಲ್ಲಿ ಬಳಲುತ್ತಿದ್ದಲ್ಲಿ,  ಮಗುವನ್ನು ಒಂಟಿಯಾಗಿ ಬಿಡಬಾರದು.