ಚಿಣ್ಣರ ಜಿಲ್ಲಾ ದರ್ಶನ

ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ

ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಓದುವ ಮಕ್ಕಳನ್ನು ಶಾಲೆಗೆ ದಾಖಲಿಸಿ ಪ್ರಾಥಮಿಕ ಶಿಕ್ಷಣವನ್ನು ಅರ್ಥಪೂರ್ಣವಾಗಿಸುವುದು ಹಾಗೂ ಗುಣಮಟ್ಟ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ.

ಸರ್ವ ಶಿಕ್ಷಣ ಅಭಿಯಾನ ಯೋಜನೆಯ ನಿಟ್ಟಿನಲ್ಲಿ ೫,೬,೭ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲೆಗಳ ಆಯ್ದ ಪರಿಶಿ ಜಾತಿ/ಪರಿಶಿಷ್ಟ~ ವರ್ಗ ಹಾಗೂ ಇತರೆ ಪ್ರತಿಭಾವಂತ ಮಕ್ಕಳಿಗಾಗಿ “ಚಿಣ್ಣರ ಜಿಲ್ಲಾ ದರ್ಶನ” ಎಂಬ ಶೈಕ್ಷಣಿಕ ಪ್ರವಾಸ ಏರ್ಪಡಿಸಿದೆ.
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರವಾಸದ ಅಗತ್ಯತೆ

 • ಶಿಕ್ಷಣದ ಜೊತೆಗೆ ಪಠ್ಯೇತರ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು.
 • ಶಾಲೆಗಳತ್ತ ಮಕ್ಕಳು ಆಕರ್ಷಿತರಾಗಿ ಶಾಲೆ ಬಿಡುವ ಸಾಧ್ಯತೆ ಕಡಿಮೆ ಮಾಡುವುದು.
 • ವಿದ್ಯಾರ್ಥಿಗಳಲ್ಲಿ ನೋಡು, ಕೇಳುವ ಹಾಗೂ ಬರೆಯುವ ಕೌಶಲ್ಯ ಬೆಳೆಸುವುದು.
 • ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸಿ, ಸಹಬಾಳ್ವೆಯ ಮಹತ್ವ ತಿಳಿಸುವುದು.
 • ಮಕ್ಕಳಲ್ಲಿ ಸರ್ವತೋಮುಖ ವ್ಯಕ್ತಿತ್ವದ ವಿಕಾಸ ಮತ್ತು ಜ್ಞಾನ, ಕಲಾಭಿರುಚಿ, ಕುತೂಹಲ ಬೆಳೆಸುವುದು.
 • ಬೇರೆ ಬೇರೆ ಪ್ರದೇಶಗಳ ಸಂಸ್ಕೃತಿ, ಪರಂಪರೆ, ನಾಡುನುಡಿಯನ್ನು ಪರಿಚಯಿಸುವುದು.
 • ಮಕ್ಕಳಲ್ಲಿ ರಾಷ್ಟ್ರೀಯ ಭಾವನೆ, ಸಮಾಜ ಸೇವೆ, ಭಾವೈಕ್ಯತೆ ಮುಂತಾದ ಸದ್ಗುಣಗಳನ್ನು ಬೆಳೆಸುವುದು.

 

ಪ್ರವಾಸ ಸಮಯದಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಅಂಶಗಳು

 • ಪ್ರಯಾಣಿಸುವಾಗ ಸುತ್ತಲ ಪರಿಸರವನ್ನು ತಪ್ಪದೇ ಗಮನಿಸುವುದು.
 • ವಿವಿಧ ಸ್ಥಳಗಳಲ್ಲಿ ಜನರ ಭಾಷೆ, ಉಡುಪು, ಜೀವನ, ಆಹಾರ ಶೈಲಿ ಗಮನಿಸುವುದು.
 • ಸ್ಥಳಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಕೇಳಿ ತಿಳಿಯುವುದು.
 • ನೀರು, ಬೆಟ್ಟ, ಇಳಿಜಾರು ಸ್ಥಳಕ್ಕೆ ಭೇಟಿ ನೀಡಿದಾಗ ಶಿಕ್ಷಕರ ಸೂಚನೆ ಪಾಲಿಸುವುದು.
 • ಕುಡಿಯುವ ನೀರು, ಕೈಒರೆಸುವ ಬಟ್ಟೆ ಜೊತೆಯಲ್ಲಿರಬೇಕು.
 • ವಾತಾವರಣವನ್ನು ಕಲುಷಿತಗೊಳಿಸದೇ, ಶಿಸ್ತು ಸಭ್ಯತೆಯಿಂದ ನಡೆದುಕೊಳ್ಳಬೇಕು.


ಶಿಕ್ಷಕರಿಗೆ ಸೂಚನೆ

 • ಪ್ರತೀ ಮಗುವನ್ನು ಸಮಾನವಾಗಿ ಕಾಣುವುದು.
 • ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಜವಾಬ್ದಾರಿ ವಹಿಸಬೇಕು.
 • ತಂಡಗಳಾಗಿ ವಿಂಗಡಿಸಿ, ಹೆಣ್ಣು ಮಕ್ಕಳನ್ನು ಶಿಕ್ಷಕಿಯರು ಗಮನಿಸಬೇಕು.
 • ಪ್ರತೀ ಹಂತದಲ್ಲಿ ಹಾಜರಾತಿ ಪರೀಕ್ಷಿಸಿ, ಸಹಕಾರ ಮನೋಭಾವದಿಂದ ನಿರ್ವಹಿಸಬೇಕು.
 • ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಿತ ಹಾಗೂ ಮಿತವಾದ ಭೋಜನ ವ್ಯವಸ್ಥೆ ಮಾಡಿಸುವುದು.
 • ಅನಾರೋಗ್ಯದಿಂದ ಬಳಲುವ ವಿದ್ಯಾರ್ಥಿಗಳನ್ನು ಆರೈಕೆ ಮಾಡುವ ಹೊಣೆ ಶಿಕ್ಷಕರದು.
 • ಪ್ರತೀದಿನದ “ದಿನಚರಿ”ಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿರ್ವಹಿಸಬೇಕು.
 • ವಿದ್ಯಾರ್ಥಿಗಳಿಗೆ ನೀಡಿದ ದಾವಣಗೆರೆ ಜಿಲ್ಲಾ ನಕ್ಷೆಯಲ್ಲಿ ವೀಕ್ಷಿಸಿದ ಸ್ಥಳಗಳನ್ನು ಗುರುತಿಸಲು ಸಹಕರಿಸಬೇಕು.

ಶಿಕ್ಷಕರು ಒಟ್ಟಾಗಿ ಸೇರಿ ತಮ್ಮ ತಂಡದ ವರದಿಯನ್ನು ಸಿದ್ಧಗೊಳಿಸಿ ಪ್ರವಾಸದ ಅಂತ್ಯದಲ್ಲಿ ಅಧಿಕಾರಿಗಳಿಗೆ ಸಲ್ಲಿಸಬೇಕು.

 

ಪ್ರವಾಸದ ಮುಖ್ಯ ಅಂಶಗಳು

 • ಎರಡು ದಿನ ಪ್ರವಾಸ ಒಂದು ರಾತ್ರಿ ತಂಗುವಿಕೆ
 • ಉತ್ತಮವಾದ ಊಟ, ಕಾಫಿ, ತಿಂಡಿ, ವಸತಿ ಇತ್ಯಾದಿ
 • ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಉಚಿತ ಪ್ರವೇಶ
 • ಪ್ರತಿ ತಂಡಕ್ಕೆ ಅನುಭವಿ ಶಿಕ್ಷಕರ ಮಾರ್ಗದರ್ಶನ
 • ಪ್ರಥಮ ಚಿಕಿತ್ಸೆ ಸೌಲಭ್ಯ
 • ಪ್ರತಿ ತಂಡದ ಮೌಲ್ಯಮಾಪನ ಮತ್ತು ದಾಖಲೀಕರಣ
 • ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೇತ
 • ಮಕ್ಕಳಿಗೆ ಬಹುಮಾನ

ಉಚಿತ ನೋಟ್ ಪುಸ್ತಕ, ಪೆನ್ನು, ಲೇಖನ ಸಾಮಗ್ರಿ ಹಾಗೂ ಟೋಪಿಗಳ ಉಚಿತ ವಿತರಣೆ

ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ ಪರಮ ತತ್ವವ ಕಂಡ ಗುರುವನರಸುವುದೆಲ್ಲಿ ಕಂಡಂದು ನೀಂ ಧನ್ಯ-ಮಂಕುತಿಮ್ಮ – ಡಿವಿಜಿ

 

ದಾವಣಗೆರೆ ಜಿಲ್ಲಾ ಇತಿಹಾಸ
ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ. ಈ ಜಿಲ್ಲೆಯ ಭೌಗೋಳಿಕ ಹಿನ್ನೆಲೆ, ಇತಿಹಾಸ ನೆನೆದಾಗ ಈ ನೆಲದಲ್ಲಿ ಆಳಿ ಬದುಕಿದವರ ಕಥೆ, ಅವರ ಕನಸುಗಳು, ಭಾವನೆಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ. ಇಲ್ಲಿನ ಜನರು ಏಕೀಕೃತ ಕರ್ನಾಟಕದ ರಾಜಧಾನಿ ದಾವಣಗೆರೆಯೇ ಆಗಬೇಕೆಂದು ಹಂಬಲಿಸಿದವರು.

ದಾವಣಗೆರೆ ನಾಡಿನ ಹೃದಯ ಭಾಗದಲ್ಲಿದ್ದು ಕೈಗಾರಿಕೆ, ರಾಜಕೀಯ, ಶಿಕ್ಷಣ, ಇತಿಹಾಸ, ಸಾಂಸ್ಕೃತಿಕ ನೆಲೆಗಳಲ್ಲಿ ಗಟ್ಟಿ ತಳಹದಿ ಹೊಂದಿ ದಾವಣಗೆರೆ ಜಿಲ್ಲೆಯಾಗಿ ರೂಪುಗೊಂಡಿದ್ದು ೧೯೯೭ರಲ್ಲಿ.

‘ದಾವಣಗೆರೆಯ ಪ್ರಾಚ್ಯ ಸಂಸ್ಕೃತಿ’ ಕುತೂಹಲಿಗಳನ್ನು ಕೈ ಬೀಸಿ ಕರೆವಂತೆಯೇ, ಜಿಲ್ಲೆಯ ಇತಿಹಾಸ ಅಧ್ಯಯನೀಯರ ಕುತೂಹಲವನ್ನು ಕೆರಳಿಸುತ್ತದೆ. ಚಿತ್ರದುರ್ಗದ ಗಾಢಛಾಯೆ ಇದ್ದರೂ ಇದೀಗ ಸ್ವತಂತ್ರ ಹಾಗೂ ಸುಂದರವಾದ ಜಿಲ್ಲೆ.

ಹತ್ತಿ ಬೆಳೆಗೆ ಪ್ರಸಿದ್ಧವಾದ ದಾವಣಗೆರೆ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಪ್ರಸಿದ್ದವಾದದ್ದು. ಇಂದು ದಾವಣಗೆರೆ ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರ ಕೊಡುಗೈ ದಾನಿಗಳ, ಕಟ್ಟಾಳು ಯುವಕರ ಜಿಲ್ಲೆ ಇಲ್ಲಿನ ವಾಣಿಜ್ಯ ವಹಿವಾಟಿನಂತೆಯೇ, ಇಲ್ಲಿನ ಧರ್ಮ ಪ್ರವರ್ತಕರು, ಧನಿಕ ದಾನಿಗಳೂ ಕೂಡ ಲೋಕ ಪ್ರಸಿದ್ಧರು. ಶಿಕ್ಷಣ, ವೈದ್ಯಕೀಯ ಆಧ್ಯಾತ್ಮ ಕ್ಷೇತ್ರಗಳಿಗೆ ತಮ್ಮ ತನು ಮನ ಧನದಿಂದ ಸೇವೆ ಮಾಡಿದ ನಿರ್ವ್ಯಾಜ ಮಾನವ ಪ್ರೇಮಿಗಳ ತವರೂರು ದಾವಣಗೆರೆ.
ದಾವಣಗೆರೆಯಿಂದ ರಾಜ್ಯದ ಮುಖ್ಯಮಂತ್ರಿಗಳು

ಶ್ರೀ.ಎಸ್.ನಿಜಲಿಂಗಪ್ಪನವರು.

ಶ್ರೀಯುತರು ದಾವಣಗೆರೆ ಹಳೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದರು ಇಲ್ಲಿಯ ಹೆಣ್ಣನ್ನೆ ಮದುವೆಯಾಗಿ ಇಲ್ಲಿಯ ಅಳಿಯರಾಗಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆದರ್ಶ ವ್ಯಕ್ತಿತ್ವವನ್ನು ಮೆರೆದವರು.

ಶ್ರೀ.ಜೆ.ಹೆಚ್.ಪಟೇಲರು :-

ಇವರು ಚನ್ನಗಿರಿ ತಾಲೂಕಿನ ಕಾರಿಗನೂರಿನವರು. ದಾವಣಗೆರೆ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿಸಿ ಆದೇಶ ಹೊರಡಿಸಿದ ಮುಖ್ಯ ಮಂತ್ರಿಗಳು.

೧೯೬೭ರಲ್ಲಿ ಲೋಕಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಥಮರೆನಿಸಿದರು. ಇವರು ಶ್ರೀರಾಮ ಮನೋಹರ ಲೋಹಿಯಾರವರ ಅನುಯಾಯಿ. ಅಬಕಾರಿ, ವಿದ್ಯುತ್, ಬೃಹತ್ ಕೈಗಾರಿಕೆ ಸಚಿವರಾಗಿ, ಉಪಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ರಾಜ್ಯದ ಆಡಳಿತ ನಡೆಸಿದರು. ವ್ಯಂಗ್ಯ, ತಮಾಷೆ, ಹಾಸ್ಯಭರಿತ ಭಾಷಾ ವೈಖರಿ ಹೊಂದಿದ್ದ ಇವರು ೧೨-೧೨-೨೦೦೦ ದಲ್ಲಿ ವಿಧಿವಶರಾದರು. ಇವರ ಸಮಾಧಿ ಚನ್ನಗಿರಿ ತಾಲ್ಲೂಕು ಕಾರಿಗನೂರಿನಲ್ಲಿದೆ.

ಜಿಲ್ಲೆಯ ಉದ್ಯಮ :-

ಬಟ್ಟೆ ಗಿರಣಿ, ಸಕ್ಕರೆ ಉತ್ಪಾದನೆ, ಡೈರಿ ಉದ್ಯಮ, ಕೈಮಗ್ಗ, ವ್ಯಾಪಾರ, ಖಾದ್ಯ ಎಣ್ಣೆ ತಯಾರಿಕೆ, ಗೃಹ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಕೈಮಗ್ಗದ ಹತ್ತಿ ಬಟ್ಟೆ, ಸುಣ್ಣ, ಬಿದಿರಿನ ಕೈಗಾರಿಕೆ, ಮರಗೆಲಸ, ಚಾಪೆ ತಯಾರಿಕೆ, ಕೃಷಿ ಉಪಕರಣ, ಚರ್ಮದ ವಸ್ತುಗಳು, ಮಣ್ಣಿನ ವಸ್ತುಗಳ ತಯಾರಿಕೆ, ಭತ್ತದ ಮಿಲ್ಲುಗಳು, ಪಾದರಕ್ಷೆ ತಯಾರಿಕೆ, ಗಣಿಗಾರಿಕೆ ಇತ್ಯಾದಿ ಈ ಜಿಲ್ಲೆಯ ಉದ್ಯಮಗಳಾಗಿವೆ.

ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳು:-

ಕವಿ ಹೆಚ್.ಎಸ್. ವೆಂಕಟೇಶ ಮೂರ್ತಿ, ಜಾನಪದ ತಜ್ಞ ದಿ|| ಮುದೇನೂರು ಸಂಗಣ್ಣ, ಈ ಜಿಲ್ಲೆಯ ಇತಿಹಾಸವನ್ನು ಬೃಹತ್ ಗ್ರಂಥದಲ್ಲಿ ದಾಖಲಿಸಿ ಹಾಗೂ ಹಲವಾರು ಕೃತಿಗಳನ್ನು ರಚಿಸಿರುವ ಶ್ರೀಮತಿ ಟಿ. ಗಿರಿಜ, ಜಾನಪದ ತಜ್ಞ ಶ್ರೀ ಎಂ.ಜಿ. ಈಶ್ವರಪ್ಪ, ಇತಿಹಾಸ ತಜ್ಞ ಕುಂ.ಭಾ. ಸದಾಶಿವಪ್ಪ, ನೇತ್ರ ತಜ್ಞರಾದ ಡಾ|| ಮೋದಿಯವರೂ, ಖ್ಯಾತ ವೈದ್ಯ ಡಾ|| ಎಸ್.ಎಂ. ಎಲಿ, ವಿಚಾರವಾದಿ ಶ್ರೀ ಬಿ.ವಿ. ವೀರಭದ್ರಪ್ಪ. ಹಿರಿಯರಾದ ಶ್ರೀ ಅ.ರಾ. ಶಂಕರಯ್ಯ. ಹಾಸ್ಯ ಬರಹಗಾರರಾದ ಅ.ರಾ. ಸೇತುರಾಮ್, ಪಂಡಿತ ಕೆ.ಎ. ಕೊಟ್ರಪ್ಪ, ಬೀಚಿ, ಕಾನೂನು ತಜ್ಞ ಶ್ರೀ ಎಸ್.ಹೆಚ್. ಪಟೇಲ್, ಡಾ|| ಹೆಚ್.ಎಂ. ಚನ್ನಯ್ಯ, ಪ್ರಸಿದ್ದ ರಾಜಕಾರಣಿ ಶ್ರೀ ಎಂ.ಪಿ. ಪ್ರಕಾಶ್, ಶ್ರೀಮತಿ ನಾಗಮ್ಮ ಕೇಶವಮೂರ್ತಿ, ಚನ್ನಯ್ಯ ಒಡೆಯರ್. ಜಗಳೂರು ಇಮಾಮ್ ಸಾಹೇಬರು, ಎಸ್.ಎ. ರವೀಂದ್ರನಾಥ್. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ದಿ|| ಜಿ. ಮಲ್ಲಿಕಾರ್ಜುನಪ್ಪ, ಶ್ರೀ ಸಿದ್ದೇಶ್ವರ, ಶ್ರೀ. ಹೆಚ್. ಶಿವಪ್ಪ, ಡಾ|| ಎಂ.ಚಿದಾನಂದ ಮೂರ್ತಿ, ಶ್ರೀ.ಹತ್ತೂರು ಪಂಡಿತ, ಶ್ರೀ ಬಿ.ಎಸ್. ಭರಮೇಗೌಡರು, ಶ್ರೀ ಅಶ್ವತ್ಥರೆಡ್ಡಿ, ಶ್ರೀ ಬಿಜೋಗಟ್ಟೆ ಕೃಷ್ಣಪ್ಪರೆಡ್ಡಿ, ಹೆಚ್.ವಿ. ಶಿವಶಂಕರ್, ಪೋಲಂಕಿ ರಾಮಮೂರ್ತಿ, ನಾಡಿಗೇರ ಕೃಷ್ಣರಾಯರು, ಯುಗಧರ್ಮ ರಾಮಣ್ಣ, ಜಿ.ಎಸ್. ದೀಕ್ಷಿತ್, ಗುರುರಾಯ ಕಲಮದಾನಿಗಳು, ಶ್ರೀಮತಿ ಲಲಿತಮ್ಮ, ಡಾ|| ಚಂದ್ರಶೇಖರ್, ಬಸವನಗೌಡರು, ಡಾ|| ವೈ. ನಾಗಪ್ಪ, ಚಿಂದೋಡಿ ಲೀಲಾ, ಕಿರುವಾಡಿ ಸರಸ್ವತಿ ಹೀಗೆ ಅನೇಕ ಪ್ರಸಿದ್ಧ ವ್ಯಕ್ತಿಗಳು ದಾವಣಗೆರೆಯ ಹೆಮ್ಮೆಯ ಖನಿಗಳು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ :-

ದಾವಣಗೆರೆಯಲ್ಲಿ ೧೯೨೨ ರಂದು ೮ನೇ ಅಖಿಲ ಭಾರತ ಸಮ್ಮೇಳನ ಶ್ರೀ ವೆಂಕಟ ಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ವೈಭವದಿಂದ ನಡೆದಿದೆ. ೧೯೪೭ ರಲ್ಲಿ ೩೦ ನೇ ಸಾಹಿತ್ಯ ಸಮ್ಮೇಳನ ಶ್ರೀ.ಕೆ ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ಹರಪನಹಳ್ಳಿಯಲ್ಲಿ ನಡೆದಿದೆ. ೧೯೯೧ ರಲ್ಲಿ ೬೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಷ್ಟ್ರಕವಿ ಶ್ರೀ.ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ನೆರವೇರಿತ್ತು.