ವಿದ್ಯಾವತೀದೇವಿ

ನವೆಂಬರ್ ೮, ೧೯೭೦. ಬೆಂಗಳೂರಿನ ಪುರಭವನದಲ್ಲಿ ಕಿಕ್ಕಿರಿದ ಜನಸಂದಣಿ. ಒಮ್ಮೆಗೇ ‘ವೀರಮಾತೆಗೆ – ಜಯವಾಗಲಿ!’, ‘ಕ್ರಾಂತಿಮಾತೆಗೆ-ಜಯಮಾಗಲಿ!’, ‘ಭಾರತ್ ಮಾತಾ ಕೀ ಜಯ್!’ ಘೋಷಣೆ ಗಳಿಂದ ಪುರಭವನ ಅದುರಿತು. ಗಾಲಿಕುರ್ಚಿಯಲ್ಲಿ ಕುಳಿತು ಕೈ ಮುಗಿದುಕೊಂಡೇ ಪುರಭವನ ದ್ವಾರದಿಂದ ವೇದಿಕೆಯವರೆಗೆ ಆಗಮಿಸಿದ ವೃದ್ಧ ಮಾತೆಗೆ ಗೌರವ ಸೂಚಿಸಲು ಸಭಿಕರೆಲ್ಲರೂ ಎದ್ದು ನಿಂತರು.

ವೀರಮಾತೆಗೆ-ಜಯವಾಗಲಿ!

ಅನೇಕರ ಗಂಟಲು ಬಿಗಿಯಿತು. ಕಣ್ಣಂಚಿನಲ್ಲಿ ಹನಿ ಮಿಡಿಯಿತು. ಜೋಡಿಸಿದ ಕರಗಳು, ಜಯಘೋಷಕ್ಕೆಂದು ಮೇಲೆತ್ತಿದ ಕರಗಳು ಹಾಗೆಯೇ ಇದ್ದವು.

ಮುಪ್ಪಿನಿಂದ ಹಣ್ಣಾದ ಶರೀರವಾದರೂ ಸ್ಥೂಲಕಾಯ. ಸುಮಾರು ಎಂಬತ್ತು-ಎಂಬತ್ತೈದು ವಯಸ್ಸು.

ದೇಶಕ್ಕಾಗಿ ತನ್ನ ಹಿರಿಯ ಮಗನನ್ನು ಕ್ರಾಂತಿ ಯಜ್ಞದಲ್ಲಿ ಹವಿಸ್ಸನ್ನಾಗಿ ಅರ್ಪಿಸಿದ ಶೂರ ಮಾತೆ ಈಕೆ- ಮಾತೆ ವಿದ್ಯಾವತಿ.

ರಾಷ್ಟ್ರೋತ್ಥಾನ ಪರಿಷತ್ತಿನಿಂದ ಬೆಂಗಳೂರಿನ ನಾಗರಿಕರಿಗೆ ಈ ಮಹಾತಾಯಿಯ ದರ್ಶನ ಭಾಗ್ಯ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ ‘ಆತ್ಮಾಹುತಿ’ ಗ್ರಂಥವನ್ನು ಬಿಡುಗಡೆ ಮಾಡಲು ಈಕೆ ಒಂದೂಮುಕ್ಕಾಲು ಸಹಸ್ರ ಮೈಲಿ ಪ್ರಯಾಣಮಾಡಿ ನಗರಕ್ಕೆ ಬಂದಿದ್ದು ಕನ್ನಡಿಗರ ಭಾಗ್ಯವಿಶೇಷವಲ್ಲದೆ ಮತ್ತೇನು?

ಗ್ರಂಥ ಬಿಡುಗಡೆ ಮಾಡಿದ ಅನಂತರ ಮಾತಾಜಿಯ ಹೃದಯಾಂತರಾಳದ ಮಾತು. ಮೆಲುದನಿ. ಜೊತೆಗೆ ಕಂಪನ. ಆದರೆ ಮಾತಿನ ಎಳೆಎಳೆಯಲ್ಲೂ ಸ್ಫೂರ್ತಿಧಾರೆ. ಅವರು ಯುವಜನಾಂಗಕ್ಕೆ ನೀಡಿದ್ದು ಅಮರ ಸಂದೇಶ”: “ಸಬ್ ಮಿಲ್ ಕೆ ದೇಶ್ ಕೀ ಸೇವಾ ಕರೇ ಔರ್ ದೇಶ್ ಕೋ ಊಂಚಾ ಕರೇ.” ಎಲ್ಲರೂ ಸೇರಿ ದೇಶಸೇವೆ ಮಾಡೋಣ ಮತ್ತು ದೇಶವನ್ನು ಮೇಲೆತ್ತಿ ಹಿಡಿಯೋಣ.

ಮಾತೆ ವಿದ್ಯಾವತಿಗೆ ಐದು ಜನ ಗಂಡುಮಕ್ಕಳು: ಭಗತ್ ಸಿಂಗ್, ಕುಲಬೀರ್ ಸಿಂಗ್, ಕುಲ್ತಾರ್ ಸಿಂಗ್, ರಣಬೀರ್ ಸಿಂಗ್ ಮತ್ತು ರಾಜೇಂದ್ರ ಸಿಂಗ್. ಅಲ್ಲದೆ ಅಮರ್ ಕೌರ್, ಸುಮಿತ್ರ ಮತ್ತು ಶಕುಂತಲಾ ಎಂಬ ಮೂವರು ಹೆಣ್ಣುಮಕ್ಕಳೂ ಇದ್ದರು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಸೇವಕರೇ. ಅವರ ಕುಟುಂಬವೆಲ್ಲ ದೇಶಕ್ಕಾಗಿಯೆ ಬದುಕಿತು.

ಅಕ್ಷರ ಕಲಿಯದೆ ಅತ್ತೆಮನೆಗೆ? ಉಹುಂ!

ವಿದ್ಯಾವತಿ ಮೋರನ್ ವಾಲಿ ಗ್ರಾಮದಲ್ಲಿ ೧೮೮೭ರಲ್ಲಿ ಜನಿಸಿದಳು. ಈ ಗ್ರಾಮ ಪಂಜಾಬಿನ ಹೋಷಿಯಾರಪುರ ಜಿಲ್ಲೆ ಯಲ್ಲಿದೆ. ಈಕೆಯ ತಂದೆ ವಾರ‍್ಯಾಂ ಸಿಂಗ್ ಮೋರನ್ ವಾಲಿ ಗ್ರಾಮಕ್ಕೇ ಹೆಸರುವಾಸಿ. ಅಂಥ ಗುಣ, ಅಂಥ ಸಹೃದಯತೆ ಅವರಿಗೆ. ವಿದ್ಯಾವತಿ ತಂದೆತಾಯಿಗಳ ಅಚ್ಚುಮೆಚ್ಚಿನ ‘ಇಂದೀ’ ಆಗಿದ್ದಳು. ಇನ್ನೂ ಹನ್ನೊಂದು ವರ್ಷಗಳೂ ತುಂಬಿರಲಿಲ್ಲ, ಅಷ್ಟರಲ್ಲಿ ಮದುವೆಯ ಏರ್ಪಾಟು. ಮದುವೆ ಮಾಡಿಕೊಂಡರೆ ಹೊಸ ಬಟ್ಟೆ, ಹೊಸ ಒಡವೆ ಕೊಡಿಸುವುದಾಗಿ ಮನೆಮಂದಿ ಆಸೆ ತೋರಿಸಿದಾಗ ಮುಗ್ಧ ಇಂದೀ ಒಪ್ಪಕೊಂಡೇಬಿಟ್ಟಳು!

ಜಲಂಧರ್ ಬಳಿಯ ಲಾಯಲ್ ಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಸರ್ದಾರ್ ಅರ್ಜುನ್ ಸಿಂಗ್‌ರೆಂಬ ಕ್ರಾಂತಿಕಾರಿ ಯೊಬ್ಬರು. ಕ್ರಾಂತಿಯ ಅರುಣೋದಯವಾದುದೇ ಇವರಿಂದ ಎನ್ನಬಹುದು. ಇವರ ಮಗನೇ ವಿದ್ಯಾವತಿಯನ್ನು ವರಿಸಿದ ಸರ್ದಾರ್ ಕಿಶನ್ ಸಿಂಗ್. ತಮ್ಮ ಜೀನವದ ಕೊನೆಯ ಗಳಿಗೆ ಯವರೆಗೂ ಒಂದೇ ಸಮನೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಸರ್ದಾರ್ ಕಿಶನ್ ಸಿಂಗ್.

ಮದುವೆಯಾದ ಮೇಲೆ ಹೊಸದೊಂದು ಸಮಸ್ಯೆ ಹುಟ್ಟಿತು. ಇಂದೀ ಗಂಡನ ಮನೆಗೆ ಹೋಗಬೇಕಲ್ಲ? ಅರ್ಜುನ್ ಸಿಂಗ್ ಅವರದು ಓದು ಬರಹ ಬಲ್ಲ ವಂಶ. ಆದರೆ

ಇಂದೀ ಹಳ್ಳಿಯಲ್ಲಿದ್ದಳಾದ್ದರಿಂದ ‘ಅ,ಆ,ಇ,ಈ’ ಸಹ ಕಲಿತಿರ ಲಿಲ್ಲ. ಅವಳಿಗೆ ತಿಳಿದಿದ್ದದ್ದು ಹತ್ತಿ ಬಿಡಿಸುವುದು, ಚರಕದಿಂದ ನೂಲು ತೆಗೆಯುವುದು, ದನಕರುಗಳನ್ನು ಪೋಷಿಸುವುದು ಇತ್ಯಾದಿ ಕೆಲಸಗಳು ಮಾತ್ರ. ಹೀಗಾಗಿ ಮದುವೆಯ ಅನಂತರ ಆಕೆಯ ಮಾವ ತಮ್ಮ ವಂಶದಲ್ಲಿ ಪರಂಪರೆಯಾಗಿ ಬಂದಿದ್ದಂತೆ ಸ್ವಲ್ಪ ಓದುಬರಹ ವಿದ್ಯಾವತಿಗೆ ಬರಲೇಬೇಕೆಂದು ತಕರಾರು ಮಾಡಿದರು.

ತನ್ನನ್ನು ಶಾಲೆಗೆ ಕಳಿಸುತ್ತಾರೆ ಎಂದು ತಿಳಿದಾಗ ವಿದ್ಯಾವತಿ ಅಮ್ಮನ ಕೊರಳಿಗೆ ಜೋತುಬಿದ್ದು ಒಂದೇ ಸಮನೆ ಅತ್ತುಬಿಟ್ಟಳು. ಶಾಲೆಯೆಂದರೆ ಏನೋ ಭಯ.

ಸ್ವಲ್ಪ ದಿನಗಳಾದ ಮೇಲೆ ಕಿಶನ್ ಸಿಂಗ್ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದರು. ಆದರೆ ವಿದ್ಯಾಭ್ಯಾಸದ ವಿಚಾರದಲ್ಲಿ ವಿದ್ಯಾವತಿ ಯಾವ ಪ್ರಗತಿಯನ್ನೂ ತೋರಿಸಿರ ಲಿಲ್ಲ. ಆಕೆಗೆ ಓದು ಬರಲೇ ಬೇಕು ಎಂದರು ಕಿಶನ್ ಸಿಂಗ್; ವಿದ್ಯಾವತಿಯ ತಾಯಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ ಎಂದರು. “ನಿಮ್ಮ ಅಕ್ಷರಸ್ಥ ವಂಶದಲ್ಲಿ ನಿಮ್ಮ ತಾಯಿಗೆಲ್ಲಿ ಓದು ಬರಹ ಬರುತ್ತದೆ?” ಎಂದು ಕಿಶನ್ ಸಿಂಗ್‌ರನ್ನು ಕೇಳಿಯೇ ಬಿಟ್ಟರು! ಅವರಿಗೆ ಅಸಾಧ್ಯ ಕೋಪ ಬಂದು ಒಂಟಿಯಾಗೇ ವಾಪಸು ಹೋಗಿಬಿಟ್ಟರು. ವಿದ್ಯಾವತಿ ತೌರಿನಲ್ಲೇ ಉಳಿಯ ಬೇಕಾಯಿತು.

ಈಗ ಮನೆಯವರಿಗೆ ನಿಜಕ್ಕೂ ಮಗಳದೇ ಚಿಂತೆಯಾಯಿತು. ವಿದ್ಯಾವತಿಗೆ ಸ್ವಲ್ಪ ಓದು ಕಲಿಸಬೇಕೆಂಬ ಸಂಕಲ್ಪ ಮಾಡಿಕೊಂಡರು.

ಆದರೆ ಆ ಹಳ್ಳಿಯಲ್ಲಿ ಯಾವ ಶಾಲೆಯೂ ಇರಲಿಲ್ಲ. ಯಾರಾದರೂ ಸಾಧು, ಸನ್ಯಾಸಿಗಳು ಮನೆಗೆ ಬಂದರೆ ಸಾಕು, ವಿದ್ಯಾವತಿಯ ತಾಯಿ ಈ ಕೂಡಲೇ ಮಗಳನ್ನು ಅವರ ಬಳಿ ಕೂರಿಸಿ, “ಸಾಧೂಜೀ, ನನ್ನ ಮಗಳಿಗೆ ನಾಲ್ಕು ಅಕ್ಷರಗಳನ್ನು ದಯಪಾಲಿಸಿ” ಎಂದು ಬೇಡುತ್ತಿದ್ದಳು. ಅಂತೂ ವಿದ್ಯಾವತಿ ಸ್ವಲ್ಪ ಹಿಂದಿ ಮತ್ತು ಪಂಜಾಬಿ ಕಲಿತಳು.

೧೯೦೦ ರಲ್ಲಿ ಮೊದಲ ಬಾರಿಗೆ ವಿದ್ಯಾವತಿ ಅತ್ತೆಯ ಮನೆ ಸೇರಲು ಹೊರಟಿದ್ದು. ವಿದ್ಯಾವತಿ ಲಾಯಲ್‌ಪುರದಲ್ಲಿ ಎಂಟು ತಿಂಗಳು ಮಾತ್ರವಿದ್ದು ಅನಂತರ ಗಂಡನೊಡನೆ ಲಾಹೋರ್‌ಗೆ ಬಂದಳು.

ಕ್ರಾಂತಿವೀರನ ಕೈ ಹಿಡಿದು

ಕಿಶನ್ ಸಿಂಗ್‌ರಿಗೆ ಸಂಸಾರದ ಬಗ್ಗೆ, ಮಡದಿಯ ಬಗ್ಗೆ ಯೋಚಿಸಲು ಬಿಡುವು ಸಹ ಇರುತ್ತಿರಲಿಲ್ಲ. ಭಾರತ ಬೇರೆ ದೇಶದವರ ಮುಷ್ಟಿಯಲ್ಲಿ ಸಿಕ್ಕಿತ್ತು. ಬಹು ಜನರು ಶಕ್ತಿ ಎಲ್ಲ ಸೋಸಿಹೋದ ಹಾಗೆ ತೆಪ್ಪಗಿದ್ದರು. ಜನರಲ್ಲಿ ದೇಶಪ್ರೇಮ ಅರಳಿಸಬೇಕು, ಆಂಗ್ಲರು ಭಾರತೀಯರಿಗೆ ತೊಡಿಸಿರುವ ದಾಸ್ಯದ ಬೇಡಿಗಳನ್ನು ಕಿತ್ತೊಗೆಯಬೇಕು ಎಂಬುದೇ ಅವರ ಅಖಂಡ ಗುರಿ. ಜನತೆಯಲ್ಲಿ ಜಾಗೃತಿ ಉಂಟುಮಾಡಲು ಹಗಲಿರುಳೂ ಶ್ರಮಿಸುತ್ತಿದ್ದರು.

ವಿದ್ಯಾವತಿಗೆ ಇನ್ನೂ ಎಳೆಯ ವಯಸ್ಸು, ಆಟ ಆಡಿಕೊಂಡಿರುವ ವಯಸ್ಸು. ಆದರೂ ಪತಿ ಕಿಶನ್ ಸಿಂಗ್‌ರಿಗೆ ಸರಿಸಮ ಜೋಡಿ ವಿದ್ಯಾವತಿ. ಅವರ ಕ್ರಾಂತಿಕಾರ್ಯದಲ್ಲೂ ಆಕೆ ಸಹಕರ್ಮಚಾರಿಣಿ. ದೇಶದ ಸ್ವಾತಂತ್ರ್ಯಕ್ಕಾಗಿ, ಬ್ರಿಟಿಷರನ್ನು ಹೊಡೆದೋಡಿಸುವುದಕ್ಕಾಗಿ, ಗುಟ್ಟಾಗಿ ಅನೇಕರು ಕೆಲಸ ಮಾಡುತ್ತಿದ್ದರು. ಅವರನ್ನು ಹಿಡಿಯಬೇಕೆಂದು ಬ್ರಿಟಿಷ್ ಸರ್ಕಾರ ಹಾತೊರೆಯುತ್ತಿತ್ತು. ಬೆನ್ನಟ್ಟಿದ ಬೇತಾಳದಂತೆ ಹಿಂಬಾಲಿಸುತ್ತಿದ್ದ ಪೋಲೀಸರ ಕಣ್ಣು ತಪ್ಪಿಸಿ ಬರುತ್ತಿದ್ದ ಕ್ರಾಂತಿ ಕಾರಿಗಳೆಲ್ಲರಿಗೂ ಈ ಮಾತೆಯ ತೋಳತೆಕ್ಕೆಯ ರಕ್ಷಣೆ ಸದಾ ಸಿದ್ಧ. ಆ ಕೆಲಸ ಸಾಮಾನ್ಯವಾದುದಲ್ಲ. ಸ್ವತಃ ಮಡಿಲಲ್ಲಿ ಬೆಂಕಿ ಧರಿಸಿದಂತೆ. ಸಹಾಯ ಮಾಡಿದ ವಿಷಯ ತಿಳಿದರೆ ಕಠಿಣವಾದ ಶಿಕ್ಷೆ. ಆದರೆ ಈಕೆ ಧೃತಿಗೆಡದೆ ಅವರನ್ನು ರಕ್ಷಿಸಿ ಅನ್ನ-ವಸ್ತ್ರಗಳನ್ನು ನೀಡುತ್ತಿದ್ದಳು.

ಸದಾಕಾಲವೂ ಪತಿ ಕಿಶನ್ ಸಿಂಗ್‌ರ ಮೇಲೆ ಒಂದಲ್ಲ ಒಂದು ಮೊದಕದ್ದಮೆ ಇರುತ್ತಿತ್ತು. ಆಗಿಂದಾಗ್ಯೆ ಸಜಾ ಬೇರೆ. ಅಜಿತ್ ಸಿಂಗ್, ಸ್ವರ್ಣ ಸಿಂಗ್ ಮೈದುನರೂ ಆಗಾಗ ಪೋಲಿಸರ ಬಂಧನಕ್ಕೊಳಗಾಗುತ್ತಿದ್ದರು. ಪೋಲಿಸರ ಬೇಟೆಗೆ

ಸಿಕ್ಕು ಮತ್ತೆ ಮತ್ತೆ ಜೈಲು ಸೇರುತ್ತಿದ್ದ ಸಿಂಹಗಳ ಮನೆಯ ಹಿರಿಯ ಸೊಸೆ ವಿದ್ಯಾವತಿ. ಬಂದ ದಿನದಿಂದಲೂ ಇದೇ  ಬಗೆಯ ಅಸ್ತವ್ಯಸ್ತ ಜೀವನ. ನೆಮ್ಮದೆಯಿಲ್ಲದ ಬದುಕು. ಶಾಂತಿಯಿಲ್ಲದ ಜೀವನ.

೧೯೦೭ ವಿದ್ಯಾವತಿಯ ಜೀವನದಲ್ಲಿ ಒಂದು ಮಹಾ ವರ್ಷ. ಆ ವರ್ಷವೇ ಮುಂದೊಮ್ಮೆ ತನ್ನ ಕ್ರಾಂತಿ ಜ್ವಾಲೆ ಯಿಂದ ಆಂಗ್ಲರ ಸಿಂಹಾಸನಕ್ಕೆ ಕಿಚ್ಚಿಕ್ಕಿದ ಸಿಂಹ ಜನಿಸಿದ್ದು; ದೇಶಕ್ಕಾಗಿ ತನ್ನ ಇಡೀ ದೇಹ ತೇಯ್ದು ಕೊನೆಗೆ ವೀರಮರಣ ವನ್ನಪ್ಪಿದ ಭಗತ್ ಸಿಂಗ್ ಜನಿಸಿದ್ದು!

ಯಾವ ದಿನ ಭಗತ್ ಸಿಂಗ್ ಜನಿಸಿದನೋ ಆ ದಿನ ಎಲ್ಲ ಕಷ್ಟಗಳಿಂದ ಮುಕ್ತಿ ದೊರೆಯಿತೇನೋ ಎನಿಸಿತ್ತು. ಹಿಂದಿನ ದಿನ ತಾನೆ ಕಿಶನ್ ಸಿಂಗ್ ಜೈಲಿನಿಂದ ಬಿಡುಗಡೆ ಪಡೆದು ಮನೆಗೆ ಮೆರಳಿದ್ದರು. ದಿನಗಳು ಕಳೆದಂತೆ, ಮನೆಯ ಗೋಡೆ ಗೋಡೆಗಳ ಮೇಲೆ ಅನೇಕ ವರ್ಷಗಳಿಂದ ಹರಡಿಕೊಂಡಿದ್ದ ಹತಾಶೆ, ಬೇಗುದಿಗಳು ಮಾಯವಾಗಿ ಮನೆಯ ತುಂಬಾ ಮಗುವಿನ ಕಾಲ್ಗೆಜ್ಜೆಯ ಝಲ್ ಝಲ್! ಏನೋ ಉತ್ಸಾಹ, ಸಂತೋಷ.

ಆದರೆ ಈ ಉಲ್ಲಾಸ ಬಹುಕಾಲ ಉಳಿಯಲಿಲ್ಲ. ಕಾಲ್ಗೆಜ್ಜೆಯ ಮಧುರ ನಿನಾದವನ್ನು ಮುಚ್ಚಿಬಿಡುವ ಬೇಡಿಗಳ ರಣ ಝಣತ್ಕಾರ ಮನೆಯಲ್ಲಾಯಿತು. ಆಂಗ್ಲರು ಕಿಶನ್ ಸಿಂಗ್ ರನ್ನು ಪುನಃ ಬಂಧಿಸಿದರು.

ಸಂಘರ್ಷಣೆಯಿಂದಾಗಿ ಪತಿ ಜೈಲಿನಲ್ಲಿ. ಒಬ್ಬ ಮೈದುನ ಗಡಿಯಾಚೆ ದೂರದ ದೇಶದಲ್ಲಿ. ಮತ್ತೊಬ್ಬ ಮೈದುನ ಸೆರೆಮನೆಯ ಘೋರ ಕಷ್ಟಗಳನ್ನು ಅನುಭವಿಸುತ್ತಾ ಖಾಯಿಲೆಗೆ  ತುತ್ತಾಗಿ ಹೋದರು. ಮನೆಯಲ್ಲಿ ವಿದ್ಯಾವತಿ, ಮುಗ್ಧ ಬಾಲಕ ಭಗತ್. ಒಬ್ಬ ಓರಗಿತ್ತಿ ವಿಧವೆ. ಇನ್ನೊಬ್ಬಳ ಗಂಡ  ದೂರದಲ್ಲಿ. ಜೀವನದ ನಾಲ್ಕು ದಿಕ್ಕುಗಳಲ್ಲೂ ಹಾಹಾಕಾರ. ಒಂದು ಗಾಯದಲ್ಲಿ ಎಷ್ಟು ನೋವಿದ್ದರೂ ಸಹಿಸಬಹುದು. ಆದರೆ ಗಾಯದ ಮೇಲೆ ಗಾಯವಾಗುತ್ತ ಹೋದರೆ?

ವಿದ್ಯಾವತಿ ಈ ಕಷ್ಟಗಳ ನಡುವೆ ಮೌನಿ. ಭವಿತವ್ಯದ ಕಡೆಗೆ ಅವಳ ನೋಟ.

ಏಠಿ ಈ ಜಂಜಾಟಗಳು? ನರಕವಾಸ ಅನುಭವಿಸುತ್ತಿರುವ ಭಾರತೀಯರಿಗೆಂದು ಬಿಡುಗಡೆ? ಈ ಸೆರೆಮನೆ, ಈ ಸಂಕೋಲೆ, ಈ ದಬ್ಬಾಳಿಕೆಗಳಿಂದ ಎಂದು ಮುಕ್ತಿ?

ಈ ಎಲ್ಲ ಕಷ್ಟಗಳನ್ನೂ ಕೊನೆಗಾಣಿಸಲು ಭಗತನಿಗೆ ವೀರದೀಕ್ಷೆ ನೀಡಿ ನಾಡಯೋಧನನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡಳು ವಿದ್ಯಾವತಿ. ಒಬ್ಬ ಹುಡುಗನಿಂದ ದೇಶಕ್ಕೆ ಎಷ್ಟು ಮಾತ್ರ ಸಹಾಯವಾಗಬಹುದು? ನಿಜ, ಅವನೊಬ್ಬನೇ ಸ್ವಾತಂತ್ರ್ಯ ತರಲಾರ. ಆದರೆ ತನ್ನಂತೆಯೇ ಭಾರತದ ಎಲ್ಲ ಸ್ತ್ರೀಯರೂ ತಮ್ಮ ಮಕ್ಕಳನ್ನು ಸ್ವಾತಂತ್ರ್ಯ ಚಳವಳಿಗೆ ಧುಮುಕಿಸಿದರೆ ಭಾರತವನ್ನು ದಾಸ್ಯಮುಕ್ತ ಗೊಳಿಸುವುದು ಕಷ್ಟಸಾಧ್ಯವೇನೂ ಅಲ್ಲ ಎಂಬುದು ಆಕೆಯ ಅಭಿಪ್ರಾಯ ವಾಗಿತ್ತು.

ದೇಶದ ಸ್ವಾತಂತ್ರ್ಯಕ್ಕಾಗಿ ವಿದ್ಯಾವತಿ ಯಾವ ಕಷ್ಟ ಬೇಕಾದರೂ ಸಹಿಸಲು ಸಿದ್ಧಳಾಗಿದ್ದಳು. ಮನೆಯ ಗಂಡಸರೆಲ್ಲ ಜೈಲುವಾಸಿಗಳೂ; ಹೆಂಗಸರೆಲ್ಲ ದುಃಖದಲ್ಲಿ ಕೈತೊಳೆ ಯುತ್ತಿರುವವರು. ವಿದ್ಯಾವತಿಗೆ ಸಂತೋಷ ಕೊಡಲು ಇದ್ದವನು ಒಬ್ಬ ಮಗ ಮಾತ್ರ. ತಾಯಿಯಾದವಳು ಸಾಮಾನ್ಯವಾಗಿ ಮಗನಿಗೆ ಐಶ್ವರ್ಯ, ಅದಿಕಾರ, ಸುಖ ಇರಲಿ ಎಂದು ಹರಸುತ್ತಾಳೆ, ಪ್ರಯತ್ನ ಪಡುತ್ತಾಳೆ. ದೇಶ ಗುಲಾಮಗಿರಿಯಲ್ಲಿದ್ದಾಗ, ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಎಂದರೆ ಕಷ್ಟ, ಸೆರೆಮನೆವಾಸ, ಬಡತನ ಎಲ್ಲವನ್ನೂ ಕರೆದು ಬರಮಾಡಿಕೊಂಡ ಹಾಗೆ, ಎಲ್ಲ ತಾಯಿಯರಂತೆಯೇ ವಿದ್ಯಾವತಿಗೂ ತನ್ನ ಮಗ ಐಶ್ವರ್ಯವಂತನಾಗಲಿ, ಅಧಿಕಾರಿ ಯಾಗಲಿ, ಸುಖವಾಗಿರಲಿ ಎಂದು ಆಸೆ ಇರಲಿಲ್ಲವೆ? ಆದರೆ ದೇಶ ಗುಲಾಮಗಿರಿಯಲ್ಲಿದ್ದಾಗ ಇದಾವುದೂ ಅವಳಿಗೆ ಬೇಡವಾಯಿತು.

ಆ ಸಮಯದಲ್ಲಿ ಪಂಜಾಬ್‌ನಲ್ಲಿ ಸ್ವಾತಂತ್ರ್ಯಕ್ಕಾಗಿ ಗದರ್ ಪಕ್ಷದ ಚಳವಳಿ ನಡೆಯುತ್ತಿತ್ತು. ಸರ್ಕಾರವು ತನ್ನ ಪೂರ್ಣ ಶಕ್ತಿ ಪ್ರಯೋಗಿಸಿ ಅದನ್ನು ದಮನ ಮಾಡಿತ್ತು. ವಿದ್ಯಾವತಿಯನ್ನು ತೌರುಮನೆಗೆ ಕಳಿಸಿ ಕಿಶನ್ ಸಿಂಗ್ ತಮ್ಮ ಸ್ವಂತ ಊರಾದ ಬಂಗಾಗೆ ಹೋದರು. ಇದ್ದ ಕೆಲಸವೂ ಹೋಗಿತ್ತು. ರಾಜಕೀಯದ ಬಿರುಗಾಳಿಯ ಕಾರಣ ಮನೆಯ ಪರಿಸ್ಥಿತಿಯೂ ಕೆಟ್ಟಿತ್ತು. ಸಂಪಾದನೆಯಿಲ್ಲದೆ ತಿನ್ನುವುದಾದರೂ ಏನನ್ನು? ಸ್ವಭಾವದಿಂದ ಉಗ್ರರಾಗಿದ್ದ ತಂದೆ ಅರ್ಜುನ ಸಿಂಗ್ ಮಗನ ಮೇಲೆ ಸಿಟ್ಟಾದರು. ಬೇಜಾರು ಮಾಡಿಕೊಂಡ ಕಿಶನ್ ಸಿಂಗ್ ಒಂದೇ ಹೊತ್ತು ಊಟ ಮಾಡುತ್ತ ಇಡೀ ದಿನ ಜಮೀನಿನಲ್ಲಿ ಕಳೆಯತೊಡಗಿದರು. ತಮಗೆ ತಿನ್ನಲು ಇಲ್ಲದಿದ್ದಾಗ ಹೆಂಡತಿಯನ್ನು ಹೇಗೆ ಕರೆಸಿಕೊಂಡಾರು?

ಒಂದು ದೀಪಾವಳಿಯ ಸಂದರ್ಭದಲ್ಲಿ ವಿದ್ಯಾವತಿ ಯನ್ನು ತೌರು ಮನೆಯವರು ಅತ್ತೆ ಮನೆಗೆ ಕಳಿಸಿ ಕೊಟ್ಟರು. ಮನೆಯ ಹೊರಭಾಗದಲ್ಲೇ ಕಿಶನ್ ಸಿಂಗ್ ಆಕೆಯನ್ನು ನೋಡಿದರು. “ನನಗೇ ಉಣ್ಣಲು ಸಿಗದಿರುವಾಗ ನೀನೇಕೆ ಬಂದೆ? ಹೊರಟುಹೋಗು” ಎಂದು ಗದರಿಸಿದರು. ವಿದ್ಯಾ ವತಿಗೆ ಎಂತಹ ವಿಪತ್ತು! ತಂಡನ ಮೆನೆಗೆ ಅದೆಷ್ಟೋ ಆಸೆ ಗಳಿಂದ ಬಂದರೆ ಎಂತಹ ಸ್ವಾಗತ! ಏನು ಮಾಡಲು ತೋಚದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡು ನಿಂತಿದ್ದ ವಿದ್ಯಾವತಿಯನ್ನು ಸ್ವಾಗತಿಸಿ ಅಲ್ಲಿಯೇ ಉಳಿಸಿಕೊಂಡವ ರೆಂದರೆ ಸಹೃದಯಿ ಅತ್ತೆ.

ಸಂತಸದ ಮಿಂಚು, ನೋವಿನ ಕತ್ತಲು

ಇದಾದ ಎರಡು ವರ್ಷದನಂತರ ಕಿಶನ್ ಸಿಂಗ್ ಲಾಹೋರಿಗೆ ಮತ್ತೆ ಹೋಗಿ ಜೀವವಿಮಾ ಕೆಲಸದಲ್ಲಿ ತೊಡಗಿ ದರು. ಅದೃಷ್ಟ ಒಲಿದಿತ್ತು. ಕೈತುಂಬಾ ಹಣ ಬರಲು ಶುರು ವಾಯಿತು. ವಿದ್ಯಾವತಿಯನ್ನು ಅಲ್ಲಿಗೇ ಕರೆಸಿಕೊಂಡರು. ಸ್ವಲ್ಪ ಜಮೀನನ್ನೂ ಕೊಂಡರು. ಈಗ ಜೀವನದ ಸ್ಥಿತಿ ಉತ್ತಮ ಗೊಳ್ಳುತ್ತಾ ಬಂದಿತ್ತು. ಈ ಮಧ್ಯೆ ವಿದ್ಯಾವತಿ ಕುಲಬೀರ್ ಸಿಂಗ್‌ರಿಗೆ ಜನ್ಮ ನೀಡಿದಳು. ಮನೆಯಲ್ಲಿ ಸಂಪತ್ತು ನೆಲೆಸಿತು. ಬಂಗಾರದ ಒಡವೆಗಳನ್ನು ಮಾಡಿಸಿಕೊಂಡು ಧರಿಸಿ ಕೊಂಡಳು. ಸ್ವಲ್ಪ ಆರಾಮವಾಗಿ ಕಳೆದ ಒಂದೆರಡು ದಿನಗಳು ಎಂದರೆ ಈ ಕಾಲವೇ. ಮನೆಗೆಲಸಕ್ಕೂ ಕೆಲಸದಾಳುಗಳಿದ್ದರು. ಅವರಲ್ಲಿ ನಂಬಿಕಸ್ಥನಂತೆ ನಟಿಸುತ್ತಿದ್ದ ಒಬ್ಬ ಕೆಲಸಗಾರ ಒಂದು ದಿನ ಮನೆಯಲ್ಲಿದ್ದ ಎಲ್ಲ ಒಡವೆಗಳನ್ನೂ ಮೂಟೆ ಕಟ್ಟಿಕೊಂಡು ಕದ್ದೊಯ್ದ. ಅದೇ ಕೊನೆ, ಮತ್ತೆಂದೂ ವಿದ್ಯಾವತಿ ಒಡವೆಗಳಿಗೆ ಆಶಿಸಲಿಲ್ಲ, ಧರಿಸಲಿಲ್ಲ.

ಸ್ವಲ್ಪ ವರ್ಷಗಳಾದ ಮೇಲೆ ಬೇಸಾಯದಲ್ಲಿ ಅತೀವ ನಷ್ಟ ಕಾಣಿಸಿಕೊಂಡಿತು. ಶ್ರದ್ಧೆಯಿಂದ ಬೇಸಾಯ ಮುಂದು ವರಿಸಲು ಜಮೀನಿದ್ದ ಹಳ್ಳಿಗೇ ಬಂದರು. ಆದರೆ ಸ್ಥಳ ಬದಲಾಯಿಸಿ ದರೂ ಅವರ ಗುರಿ ಬದಲಾಗಿರಲಿಲ್ಲ. ದಾಸ್ಯದ ಕತ್ತಲೆಯಲ್ಲಿದ್ದ ಭಾರತೀಯರಿಗೆ ಸ್ವಾತಂತ್ರ್ಯದ ಹೊಂಬೆಳಕನ್ನು ಕಾಣಿಸಬೇಕೆಂಬ ಪ್ರಯತ್ನ ದಿನದಿನಕ್ಕೂ ಬಿರುಸಾಗಿ ನಡೆಯುತ್ತಿತ್ತು. ತಂದೆಯ ಹಾದಿಯಲ್ಲೇ ನಡೆದಿದ್ದ ಭಗತ್ ಸಿಂಗ್ ಸರ್ವಶಕ್ತಿಯಿಂದ ಕ್ರಾಂತಿ ಕಾರ್ಯದಲ್ಲಿ ತೊಡಗಿದ್ದ.

ಒಂದು ದಿನ ಭಯಂಕರ ವಾರ್ತೆಯೊಂದು ಸಿಡಿಲಿನಂತೆರಗಿತ್ತು.

ಭಗತ್ ಸಂಗ್‌ನ ದಸ್ತಗಿರಿ!

೧೯೨೭ರ ಬಾಂಬ್ ಪ್ರಕರಣದಲ್ಲಿ ಭಗತ್ ಸಿಂಗನನ್ನು ಬಂಧಿಸಿದ್ದರು. ಕೈ ಹಿಡಿದ ಪತಿ, ಸೋದರರಿಗಿಂತಲೂ ಹೆಚ್ಚು ವಾತ್ಸಲ್ಯದಿಂದ ಕಾಣುತ್ತಿದ್ದ ಮೈದುನರು ದಸ್ತಗಿರಿಯಾಗಿದ್ದುದನ್ನು ವಿದ್ಯಾವತಿ ಕಂಡಿದ್ದಳು. ಆದರೆ ಇಂದು ಕರುಳ ಕುಡಿ ಭಗತ್‌ನ ದಸ್ತಗಿರಿ. ವಿದ್ಯಾವತಿಯ ಜೀವನದಲ್ಲಿ ಅದೊಂದು ದೊಡ್ಡ ಭೂಕಂಪವಾದಂತೆ. ದಾಂಪತ್ಯದ ಸವಿಗನಸುಗಳನ್ನು ಕಂಡು ಪತಿಯ ಮನೆಗೆ ಬಂದಿದ್ದಳು ವಿದ್ಯಾವತಿ. ಆದರೆ ಬಂದ ಕ್ಷಣದಿಂದ ಒಂದೇ ರೀತಿಯ ಕಷ್ಟ, ಒಂದೇ ರೀತಿಯ ದುಃಖ. ಕತ್ತಲೆಯ ಜೀವನದಲ್ಲಿ ಭಗತ್ ಬೆಳಕಾಗಿ ಬಂದಿದ್ದ. ಮಾತೃತ್ವದ ಕರ್ತವ್ಯ ನಿರ್ವಹಣೆಯಿಂದ ಮಗನ ವ್ಯಕ್ತಿತ್ವವನ್ನು ರೂಪಿಸು ವುದರಲ್ಲಿ ಸ್ವಲ್ಪ ನೆಮ್ಮದಿಯನ್ನು ಕಂಡುಕೊಂಡಿದ್ದಳು ವಿದ್ಯಾವತಿ. ಆದರೆ ಎಂದು ಅದೂ ನಾಶವಾಗಿತ್ತು. ಬಾಂಬ್ ಪ್ರಕರಣದಲ್ಲಿ ಸೆರೆ ಸಿಕ್ಕಿದವರಿಗೆ ಗಲ್ಲಿನ ಕುಣಿಕೆ, ತಪ್ಪಿದರೆ ಕರಿನೀರಿನ ಕಾರಾಗೃಹವೇ ಆಸರೆ. ಹೀಗಿರುವಾಗ ಹೇಗೋ ಭಗತ್ ಸಿಂಗ ನಿಗೆ ಕೆಲವು ತಿಂಗಳ ಮಟ್ಟಿಗೆ ಸೆರೆಮನೆಯಾಗಿತ್ತು. ಆದರೆ ಅರವತ್ತು ಸಾವಿರ ರೂಪಾಯಿಗಳ ಜಾಮೀನಿನ ಮೇಲೆ ಭಗತ್ ನನ್ನು ಬಿಡುಗಡೆ ಮಾಡಿ ತರಲು ಶತ ಪ್ರಯತ್ನ ಮಾಡ ಬೇಕಾಯಿತು.

ಮತ್ತೆ ಕೆಲವು ತಿಂಗಳನಂತರ ಒಂದು ದಿನ ಭಗತ್ ನಾಪತ್ತೆಯಾದ. ಸುದ್ದಿ ಬಂದಾಗ ಅವನನ್ನು ದೆಹಲಿಯ ಸೆರೆಮನೆಯಲ್ಲಿಟ್ಟಿದ್ದರು. ಅನಂತರ ಅಲ್ಲಿಂದ ಭಗತ್‌ನನ್ನು  ಮತ್ತೆರಡು ಸೆರೆಮನೆಗಳಿಗೆ ರವಾನಿಸಿ ಕೊನೆಗೆ ಲಾಹೋರ್‌ನ ಸೆರೆಮನೆಯಲ್ಲಿ ತಂದಿಟ್ಟರು. ಮೊಕದ್ದಮೆಯ ಮೇಲೆ ಮೊಕದ್ದಮೆಗಳು.

ಕಣ್ಮಣಿ ಮಗನನ್ನು ಕಾಣುವುದೇ ಕಷ್ಟ

ವಿದ್ಯಾವತಿಗೆ ಸದಾ ಮಗನದೇ ಧ್ಯಾನ. ಊಟ ಮಾಡು ವಾಗಲೆಲ್ಲ ಭಗತ್ ಊಟ ಮಾಡಿದನೋ ಇಲ್ಲವೋ ಎಂಬ ಚಿಂತೆ. ಭಗತ್ ಹಸಿದಿರುವಾಗ ತಾನು ಹೇಗೆ ಊಟ ಮಾಡು ವುದು ಎಂದು ಉಪವಾಸ ಮಾಡಿದ ದಿನಗಳೆಷ್ಟೋ! ಆಗಾಗ ಲಾಹೋರ್‌ಗೆ ಹೋಗಿ ಜೈಲು ಅಧಿಕಾರಿಗಳನ್ನು ಬೇಡಿ ಮಗ ನನ್ನು ಭೇಟಿ ಮಾಡಿ ಬರುತ್ತಿದ್ದಳು. ಮಗನ ಮುಖ ನೋಡ ಬೇಕೆಂಬ ಬಯಕೆ ಕೆರಳಿದರೆ ಲಾಹೋರ್‌ಗೆ ನಡೆದು ಬಿಡುವುದೇ ಕೆಲಸ, ಅದು ಹಗಲಾಗಿರಲಿ, ರಾತ್ರಿಯಾಗಲಿ. ತಾಯಿಯ ಸ್ಥಿತಿ ನೋಡಲಾಗದೆ ಒಂದು ದಿನ ಭಗತ್ ಹೇಳಿಯೇಬಿಟ್ಟ: “ಬೇಬೇಜಿ! ನೀನು ಯಾಕೆ ಹಳ್ಳಿಯಿಂದ ನಿತ್ಯ ನಡೆದು ಬರ್ತೀಯ ನನ್ನ ನೋಡೋಕೆ? ನೀನೂ ಇದೇ ಜೈಲಿಗೇ ಬಂದುಬಿಡು. ಇಬ್ಬರೂ ಹಾಯಾಗಿರೋಣ.”

ಮೊಕದ್ದಮೆ ನಡೆಯುತ್ತಿದ್ದ ಕಾಲದಲ್ಲಿ ಮನೆಮಂದಿ ಎಲ್ಲರ ಯೋಚನೆಗಳ ಕೇಂದ್ರಬಿಂದುವೆಂದರೆ-ಭಗತ್ ಸಿಂಗ್. ಇತರ ಎಲ್ಲ ಕೆಲಸ ಕಾರ್ಯಗಳೂ ಮಾಯವಾಗಿದ್ದವು. ಸರ್ದಾರ್ ಕಿಶನ್ ಸಿಂಗ್ ಸದಾ ವಿಚಾರಣೆ, ಕೋರ್ಟು, ಕಚೇರಿಗಳಲ್ಲಿ. ಉಳಿದ  ಸಮಯದಲ್ಲಿ ಚಳವಳಿಯನ್ನು ಮತ್ತಷ್ಟು ತೀವ್ರ ಮಾಡ ಬೇಕೆಂಬ ಪ್ರಯತ್ನ. ಸಂಪಾದನೆ ಯಿಲ್ಲದಾಗಿ ಸಂಸಾರ ನಿಭಾಯಿ ಸುವುದು ಕಷ್ಟವಾಗುತ್ತಾ ಬಂದಿತು. ದೈನಂದಿನ ಖರ್ಚುಗಳನ್ನು ತೂಗಿಸಲು ಮನೆಯಲ್ಲಿದ್ದ ವಸ್ತುಗಳನ್ನೂ ಕೆಲವು ವೇಳೆ ಮಾರ ಬೇಕಾಗಿ ಬಂದಿತ್ತು.

ಭಗತ್ ಸಿಂಗ್‌ನನ್ನು ಭೇಟಿ ಮಾಡಬೇಕಾದರೆ ಅನೇಕ ಗಂಟೆಗಳವರೆಗೆ ಜೈಲಿನ ಹೊರಬಾಗಿಲಲ್ಲಿ ಕಾಯುತ್ತಾ ಕುಳಿತಿರಬೇಕಿತ್ತು. ಎರಡು ನಿಮಿಷ ಮಗನನ್ನು ಸಂದರ್ಶಿಸಲು ಗಂಟೆಗಟ್ಟಲೆ ಕಾಯಬೇಕು; ಆ ಎರಡು ನಿಮಿಷದ ದರ್ಶನಕ್ಕೂ ಜೈಲಿನಧಿಕಾರಿಗಳ ಕೃಪಾಕಟಾಕ್ಷ ಬೀಳಬೇಕಿತ್ತು. ವಿದ್ಯಾವತಿ ಎಷ್ಟೋ ವೇಳೆ ಮಗನ ಭೇಟಿಗೆ ಅವಕಾಶ ನೀಡದ ಜೈಲಿನ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದೂ ಉಂಟು.

ಭಗತ್ ಸಿಂಗನನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿ ಬಿಟ್ಟಿತು. ಉಳಿದ ಮಕ್ಕಳನ್ನು ನೋಡಿಕೊಂಡು ಸಮಾಧಾನ ಪಡಲೂ ವಿದ್ಯಾವತೀದೇವಿಗೆ ಅವಕಾಶವಿರಲಿಲ್ಲ. ಕುಲಬೀರ್ ಸಿಂಗ್, ಕುಲ್ತಾರ್ ಸಿಂಗರೂ ದೇಶಕ್ಕಾಗಿ ಹೋರಾಡಿ ಮಾಂಟಗುಮರಿ ಸೆರೆಮನೆಯನ್ನು ಸೇರಿದರು.

ಬಂಧಿಗಳಾಗಿದ್ದ ಕ್ರಾಂತಿಕಾರಿಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಆದರೆ ಈ ವಿಷಯ ವಿದ್ಯಾವತಿಗೆ ತಿಳಿಯದು. ಮಕ್ಕಳನ್ನು ಭೇಟಿ ಮಾಡಲು ಸಾಕಷ್ಟು ಸಿಹಿ, ಮಿಠಾಯಿಗಳನ್ನು ತೆಗೆದುಕೊಂಡು ಜೈಲಿಗೆ ಹೋಗಿದ್ದಳು. ಜೈಲಿನ ಬಳಿ ಓಡಾಡುವುದೇ ತಪ್ಪು ಆ ಕಾಲದಲ್ಲಿ; ಜೈಲಿನಲ್ಲಿ ಬಂದಿಗಳಾಗಿದ್ದ ಕ್ರಾಂತಿಕಾರಿಗಳನ್ನು ಭೇಟಿಮಾಡುವುದು ಹೇಗೆ ಸಾಧ್ಯ?

ಮಮತೆಯ ತಾಯಿ-ಸಿಂಹಿಣಿ

ವಿದ್ಯಾವತಿ ಜೈಲಿನಧಿಕಾರಿಯ ಬಳಿಗೆ ಹೋಗಿ, ತಾನು ಮಕ್ಕಳನ್ನು ಭೇಟಿಮಾಡಲು ಬಂದಿರುವುದಾಗಿ ತಿಳಿಸಿದಳು. ಆದರೆ ಆ ಅಧಿಕಾರಿ ಚಿಂತೆಯಲ್ಲಿ ಮುಳುಗಿದ್ದ. ಏಕೆಂದರೆ ಅವನ ಕಿರಿಯ ಮಗ ಕಾಯಿಲೆಯಾಗಿದ್ದ. ಅಧಿಕಾರಿ ಅಂದ: “ನನ್ನ ಚಿಕ್ಕಮಗನಿಗೆ ಕಾಯಿಲೆ. ನನ್ನ ಮನಸ್ಸಿಗೆ ಸ್ವಸ್ಥವಿಲ್ಲ. ದಯವಿಟ್ಟು ಬೇಸರ ಮಾಡಬೇಡಿ. ನೀವು ಎಷ್ಟೇ ಬೇಡಿದರೂ ನಿಮ್ಮ ಮಕ್ಕಳನ್ನು ಕಾಣಲು ಇಂದು ಅನುಮತಿ ದೊರೆಯು ವುದಿಲ್ಲ.”

ವಿದ್ಯಾವತಿ ಸಿಡಿದು ನುಡಿದರು

“ನಿಮ್ಮ ಚಿಕ್ಕ ಮಗ ಕಾಯಿಲೆಯಾಗಿದ್ದಕ್ಕೇ ನೀವಿಷ್ಟು ಚಿಂತೆಯಲ್ಲಿದ್ದರೆ ಉಪವಾಸದಿಂದ ಸಾಯುತ್ತಿರುವ ಎರಡು ಸಿಂಹದ ಮರಿಗಳನ್ನು ಹೊಂದಿರುವ ನನ್ನ ಗತಿಯೇನು?” ಆದರೆ ಆ ಅಧಿಕಾರಿ ಮಣಿಯಲಿಲ್ಲ. ವಿದ್ಯಾವತಿಗೆ ಕೋಪ ಉಕ್ಕಿತು. ಜೈಲಿನ ಹೊರಗಿದ್ದ ಮಂದಿಗೆ ವಿಷಯ ತಿಳಿಸಿದಳು. ಆಕೆಯ ಅಧ್ಯಕ್ಷತೆಯಲ್ಲಿ ಒಂದು ಭಾರೀ ಭೆಯೇ ಆಯಿತೆನ್ನಬಹುದು. ವಿಷಯವನ್ನು ಜನತೆಯ ಮುಂದಿರಿಸಿ ದಳು. ವಿಷಯ ತಿಳಿದು ಕೆರಳಿದ ಜನ ಜೈಲಿನಧಿಕಾರಿಯ ಮನೆಯನ್ನು ಮುತ್ತಿದರು. ಹೊರಗಿನ ಗದ್ದಲಕ್ಕೆ ಒಳಗಿದ್ದ ಕೈದಿಗಳ ಘೋಷಣೆ ಸೇರಿತು. ಒಂದು ಹೆಣ್ಣು ಎಷ್ಟೆಲ್ಲಾ ಮಾಡಬಹುದೆಂದು ಆ ಅಧಿಕಾರಿ ಊಹಿಸಿಯೂ ಇರಲಿಲ್ಲ. ಅವನಂತೂ ತತ್ತರಿಸಿ ಹೋದ. ನಡುಗುತ್ತಾ ಬಂದು ವಿದ್ಯಾವತಿಯಲ್ಲಿ ಕ್ಷಮೆ ಕೇಳಿದ. ಮಕ್ಕಳನ್ನು ಭೇಟಿಮಾಡಲು ಆಕೆಗೆ ಅವಕಾಶ ಮಾಡಿಕೊಟ್ಟ.

ಆಕೆಯ ಈ ರೂಪವನ್ನು ಕಲ್ಪಿಸಿಕೊಂಡಾಗ ಎಲ್ಲರ ಅಂತಃಕರಣದಲ್ಲೂ ಒಂದು ಸಿಂಹಿಣಿಯ ಚಿತ್ರ ಕಾಣಿಸಿ ಕೊಳ್ಳುತ್ತದೆ. ರೋಮಾಂಚನವಾಗುತ್ತದೆ. ಹೀಗೆ ಅನ್ನಿಸುತ್ತದೆ: ಇಂತಹ ಧೀರೆಗಲ್ಲದೆ ಬೇರೆ ಯಾರಿಗೆ ಭಗತ್ ಸಿಂಗನ ತಾಯಿ ಯಾಗುವ ಯೋಗ್ಯತೆ ಇದೆ? ಇಂತಹ ವೀರವನಿತೆಗೆ ಮಗನಾಗಲು ಯೋಗ್ಯವನಾದವನು ಕ್ರಾಂತಿಸಿಂಹ

ಭಗತ್ ಸಿಂಗ್, ದಿಟ್ಟತನದಲ್ಲಿ ವಿದ್ಯಾವತಿ ಯಾವ ಗಂಡಸಿಗೂ ಕಡಿಮೆಯಿರಲಿಲ್ಲ.

 

ಸೆರೆಮನೆಯಲ್ಲಿ ವೀರಪುತ್ರ ನೊಂದಿಗೆ ವೀರಮಾತೆ.

೧೯೩೧ರ ದಿನಗಳು. ಹಿರಿಮಗ ಫಾಸಿಕೋಣೆಯಲ್ಲಿದ್ದ. ಪತಿ ಲೂಧಿಯಾನ ಗಲಭೆಗಳ ಕಾರಣ ಜೈಲು ಸೇರಿದ್ದರು. ಸುಮಯ ಸಾಧಿಸುತ್ತಿದ್ದ ದರೋಡೆಕೋರರು ವಿದ್ಯಾವತಿಯ ಮನೆಯ ಮೇಲೆ ಮುಗಿದುಬಿದ್ದರು. ಆದರೆ ವಿದ್ಯಾವತಿ ಅಳುಕಲಿಲ್ಲ, ಅಂಜಲಿಲ್ಲ. ಹೆಂಗಸಾದರೂ ಮನೆಯ ಹೊರಗೆ ಬಂದು ಕಳ್ಳರನ್ನು ಎದುರಿಸಿದಳು. ಅವರನ್ನು ಥಳಿಸಿ ಹೆಮ್ಮೆಟ್ಟಿ ಸಿದಳು. ಸೌಮ್ಯಮೂರ್ತಿಯಾದ ವಿದ್ಯಾವತೀದೇವಿಯನ್ನು ಈ ರೂಪದಲ್ಲಿ ಕಲ್ಪಿಸಿಕೊಂಡರೆ ಉಮಾದೇವಿಯನ್ನು ಕಾಳಿಕಾ ದೇವಿಯ ರೂಪದಲ್ಲಿ ಕಂಡಂತಾಗುತ್ತದೆ.

ತಾಯಿ ಕರುಳು

ಭಗತ್ ಸಿಂಗನ ವಿಚಾರಣೆ ನಡೆಯುತ್ತಿದ್ದಾಗಲಂತೂ ವಿದ್ಯಾವತಿಗೆ ಹಗಲಿರುಳೂ ಅವನದೇ ಯೋಚನೆ. ಏನಾದರೂ ಮಾಡಿ ಭಗತ್ ಸಿಂಗನನ್ನು ಬಿಡುಗಡೆ ಮಾಡಿಸಿ ಮತ್ತೆ ಚಳವಳಿಯ ಕಡೆಗೆ ದೂಡಬೇಕೆಂಬ ಚಪಲ. ಇದೇ ಸಮಯದಲ್ಲಿ ಬಂಗಾ ಗ್ರಾಮಕ್ಕೆ ಸಾಧುಪುರುಷನೊಬ್ಬ ಬಂದಿದ್ದ. ಒಂದೆರಡು ದಿನಗಳಲ್ಲೇ ಆ ಸಾಧುನವಿನ ವಿಷಯ ಹಳ್ಳಿಯಿಡೀ ಹರಡಿತ್ತು. ಎಂಥ ತೊಂದರೆಗಳಿದ್ದರೂ ನಿವಾರಿಸಿ ಬಿಡಬಲ್ಲವನಾಗಿದ್ದ ಆ ಮಹನೀಯ. ಭಗತ್ ಸಿಂಗನನ್ನು ದಕ್ಕಿಸಿಕೊಳ್ಳಲು ಏನಾದರೂ ಪರಿಹಾರ ಸೂಚಿಸಬಹುದೆಂಬ ಆಸೆಯಿಂದ ವಿದ್ಯಾವತಿಯೂ ಅವನನ್ನು ಭೇಟಿ ಮಾಡಿದ್ದಳು. ಆ ಸಾಧು ಒಂದು ಬಗೆಯ ಭಸ್ಮವನ್ನು ಮಂತ್ರಿಸಿಕೊಟ್ಟು, “ಇದನ್ನು ನಿನ್ನ ಮಗನ ತಲೆಯ ಮೇಲೆ ಹಾಕು; ಅವನು ಕಷ್ಟಗಳಿಂದ ಮುಕ್ತ ನಾಗುತ್ತಾನೆ” ಎಂದು ತಿಳಿಸಿದ.

 

ವಿದ್ಯಾವತೀದೇವಿ ಕಳ್ಳರನ್ನು ಥಳಿಸಿ ಹಿಮ್ಮೆಟ್ಟಿಸಿದಳು.

ವಿದ್ಯಾವತಿ ಭಗತ್ ಸಿಂಗ್‌ನನ್ನು ಭೇಟಿ ಮಾಡಿ ಅವನಿಗೆ ಸಾಧುವಿನ ವಿಷಯ ಮತ್ತು ಭಸ್ಮದ ಮಹಿಮೆಯನ್ನು ತಿಳಿಸಿ ದಳು. ಆ ಭಸ್ಮವನ್ನು ಅವನ ತಲೆಯಮೇಲೆ ಹಾಕುವಷ್ಟರಲ್ಲೇ ಭಗತ್ ಸಿಂಗ್ ಅಮ್ಮನ ಕೈ ಹಿಡಿದುಕೊಂಡು ಹೇಳಿದ: “ಬೇಬೇಜಿ, ದೇಶಕ್ಕಾಗಿ ಪ್ರಾಣ ಅರ್ಪಿಸುವಂತಹ ಒಂದು ಅವಕಾಶ ಬಂದಿದ್ರೆ ಅದನ್ನೂ ಏಕೆ ತಡೆಯುತ್ತಿಯ?

ಇದೇ ಭಸ್ಮಾನ ಕುಲಬೀರ್ ಸಿಂಗ್‌ನ ಮೇಲೆ ಹಾಕು. ಅವನು ಸದಾ ನಿನ್ನ ಜೊತೆಯಲ್ಲಿರಲಿ.”

ವಿದ್ಯಾವತಿ ಮಗನನ್ನು ಅಪ್ಪಿಕೊಂಡು ಗಳಗಳ ಅತ್ತುಬಿಟ್ಟಳು.

ಮತ್ತೊಮ್ಮೆ ಯಾರೋ ಹೇಳಿದ್ದರು- ಯಾವುದಾದರೂ ತಾಯಿಯ ಜ್ಯೇಷ್ಠಪುತ್ರನ ಪುಟ್ಟ ಅಂಗಿಯನ್ನು ಭಗತ್ ಸಿಂಗ್ ಬಳಿ ಇರಿಸಿದರೆ ಅವನಿಗೆ ಕಷ್ಟ ಪರಿಹಾರವಾಗುತ್ತದೆ ಎಂದು.

ವಿದ್ಯಾವತಿಗೆ ಈ ಮೂಢನಂಬಿಕೆಗಳಿರಲಿಲ್ಲ. ಆದರೆ ಹೆತ್ತೊಡಲು, ನಿಜವಿರಬಹುದೋ ಏನೋ ಎಂದು ಯೋಚಿಸಿತ್ತು. ಒಂದು ಪುಟ್ಟ ಅಂಗಿಯನ್ನು ಯಾರಿಂದಲೋ ಪಡೆದು ಜೈಲಿಗೆ ನಡೆದಳು. ಭಗತ್ ಸಿಂಗ್‌ನ ಬಳಿ ಅದನ್ನು ಇಡಲು ಹೋದಾಗ ಭಗತ್ ನಗುತ್ತಾ ಹೇಳಿದ್ದ: “ಬೇಬೇಜಿ, ಈ ಪುಟ್ಟ ಅಂಗಿ ನಿನ್ನಲ್ಲೇ ಇರಲಿ. ಈಗ ಗಲ್ಲಿಗೇರಿದರೂ ಆಂಗ್ಲರನ್ನು ಸದೆಬಡಿಯಲು ನಾನು ಮತ್ತೆ ಭಾರತದಲ್ಲ ಹುಟ್ಟುತ್ತೇನೆ. ಆಗ ಈ ಅಂಗಿ ಬೇಕಾಗುತ್ತೆ” ಎಂದು ಜೋಪಾನ ವಾಗಿರಿಸಿಕೊಳ್ಳಲು ಅಮ್ಮನಿಗೇ ಮರಳಿಸಿದ್ದ.

ತಾಯ್ನಾಡಿಗೆ ತಾಯಿಯ ಜೀವರತ್ನದ ಕಾಣಿಕೆ

ವಿದ್ಯಾವತಿಗೆ ಗಂಟಲು ಒತ್ತರಿಸಿಕೊಂಡು ಬಂತು. ದೇಶಕ್ಕಾಗಿ ಹೋರಾಡಿ, ವೀರಮರಣವನ್ನಪ್ಪಲು ಭಗತ್ ಸಿಂಗ್‌ನಿಗೆ ಆತುರ; ಮಹದಾನಂದ ಬೇರೆ. ಮಗನನ್ನು ನೋಡುತ್ತಿದ್ದಂತೆ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದು ನೋಟ ಮಂಜು ಮಂಜಾಯಿತು.

ಅವನನ್ನು ಹಾಗೆಯೇ ಮಡಿಲಲ್ಲಿ ಹಾಕಿಕೊಂಡು ಜೈಲಿನಿಂದ ಕದ್ದೊಯ್ದುಬಿಡಲೇ ಎನ್ನಿಸಿತು. ಭಾರವಾದ ಹೆಜ್ಜೆಗಳನ್ನು ಊರುತ್ತಾ ಹಳ್ಳಿಗೆ ಹಿಂತಿರುಗಿದಳು.

ಭಗತ್ ಸಿಂಗನಿಗೆ ವಿದೇಶೀ ಸರ್ಕಾರದ ನ್ಯಾಯಾಲಯ ಮರಣಶಿಕ್ಷೆಯನ್ನು ವಿಧಿಸಿತು. ತಾಯ್ನಾಡನ್ನು ಪ್ರೀತಿಸಿ ಹೋರಾಡಿದವನಿಗೆ ಉಡುಗೊರೆ-ಸಾವು.

೧೯೩೧ ರ ಮಾರ್ಚ್ ೨೩ ರಂದು ಭಗತ್ ಸಿಂಗನನ್ನು ಗಲ್ಲಿಗೇರಿಸಲಾಯಿತು. ಅದನ್ನು ಕೇಳುತ್ತಿದ್ದಂತೆಯೇ ತಾಯಿಯ ಹೃದಯ ನುಚ್ಚುನೂರಾಗಿ ಹೋಯಿತು. ಎಲ್ಲೆಲ್ಲೂ ಕತ್ತಲೆ ತುಂಬಿಕೊಂಡಿತು. ಕೈಕಾಲುಗಳಲ್ಲಿದ್ದ ಸತ್ವ ಉಡುಗಿ ತಾನಿನ್ನು ಕುಸಿದುಬಿದ್ದೆ ಎಂಬ ಅನುಭವ. “ಕೊನೆಗೂ ಹೊರಟು ಹೋದೆಯಾ ಮಗು?” ಎಂದು ಅತ್ತಳು.

ಭಗತ್ ಸಿಂಗನ ರಕ್ತದ ಒಂದೊಂದು ಕಣದಲ್ಲೂ ದೇಶಪ್ರೇಮವಿರುವಂತೆ ಮಗನನ್ನು ತಿದ್ದಿ, ರೂಪಿಸಿ, ಕೊನೆಗೆ ದೇಶಕ್ಕೇ ಸಮರ್ಪಿಸಿದಳು ವೀರಮಾತೆ ವಿದ್ಯಾವತಿ. ಹೆತ್ತೊಡಲು ಮಹತ್ವಾಕಾಂಕ್ಷೆ ತಿಳಿದಿದ್ದ ಮಗ ವೀರದೀಕ್ಷೆ ತೊಟ್ಟು ಕ್ರಾಂತಿಜ್ವಾಲೆಯನ್ನು ದೇಶವಿಡೀ ಹರಡಿದ. ತನ್ನ ತಾಯಿಯ ಕನಸನ್ನು ನನಸು ಮಾಡಿದ.

ಸುಪುತ್ರಃ ಕುಲದೀಪಕಃ!

ಒಳ್ಳೆಯ ಮಗನಿದ್ದರೆ ಮಾತ್ರ ಕುಲಕ್ಕೆ ಬೆಳಕು.

ಭಗತ್ ಸಿಂಗ್ ಅವರ ’ಕ್ರಾಂತಿಕಾರೀ ವಂಶ’ಕ್ಕೇ ಕೀರ್ತಿಯ ಕಳಶವಾದ. ಮಾತಾಪಿತೃಗಳು ಹಾಕಿಕೊಟ್ಟ ಚೌಕಟ್ಟಿ ನಲ್ಲಿದ್ದುಕೊಂಡು ಅವರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದು ಧನ್ಯನೆನಿಸಿಕೊಂಡ.

ಭಗತ್ ಸಿಂಗನ ತಾಯಿ ಸಾಹಸಕ್ಕೇ ದೇವಿಯಾಗಿದ್ದಳು. ತನ್ನ ದೀರ್ಘ ಜೀವನಯಾತ್ರೆಯಲ್ಲಿ ಆಕೆ ಕಾಣದಿದ್ದ ಕಷ್ಟ ಉಂಟೆ? ಬದುಕಿನಲ್ಲಿ ಅಡಿಯಿರಿಸುತ್ತಿದ್ದಂತೆಯೇ ತನ್ನ ಕುಟುಂಬವೇ ಛಿನ್ನಭಿನ್ನವಾಗಿದ್ದನ್ನು ಕಂಡಳು. ಒಬ್ಬ ಮೈದುನ ವಿದೇಶಕ್ಕೆ ಹೋದ. ಮತ್ತೊಬ್ಬ ಜೈಲಿನ ಚಿತ್ರಹಿಂಸೆಗೆ ಗುರಿ ಯಾಗಿ ಹುತಾತ್ಮನಾದ. ಪತಿಯಂತೂ ಜೀವನವಿಡೀ ಜೈಲು ಮತ್ತು ನ್ಯಾಯಾಲಯಗಳಲ್ಲೇ ಕಳೆದರು. ಏಕೈಕ ಆಸ್ತಿ ಯೆಂಬಂತಿದ್ದ ಭಗತ್ ಸಿಂಗನಿಗೆ ಫಾಸಿಯಾಯಿತು. ಮತ್ತಿಬ್ಬರು ಮಕ್ಕಳು ಕೂಡ ಮತ್ತೆಮತ್ತೆ ಜೈಲಿನಲ್ಲಿ. ಈ ನಿರಂತರ ಕಷ್ಟನಷ್ಟಗಳಿಗೆ ಗುರಿಯಾಗಿದ್ದ ವಿದ್ಯಾವತಿಯ ಪ್ರಾಣವೂ ಎಷ್ಟೋ ಬಾರಿ ಜೀವನ್ಮರಣಗಳ ನಡುವೆ ಜೋಕಾಲಿಯಾಡಿದೆ.

ಮೃತ್ಯುವಿನ ಉಡಿಯಲ್ಲಿ-ಎಷ್ಟೊಂದು ಬಾರಿ!

೧೯೨೮ನೆಯ ವರ್ಷ. ಭಾರತದಲ್ಲಿ ಸಿಂಹವೀರರು ಸ್ವಾತಂತ್ರ್ಯಕ್ಕೋಸ್ಕರ ಜೀವವನ್ನೇ ಪಣವಾಗಿಟ್ಟು ಹೋರಾಡು ತ್ತಿದ್ದರು. ಆಗ ಭಾರತೀಯರಿಗೆ ಆಡಳಿತದಲ್ಲಿ ಎಷ್ಟು ಪಾಲು  ಕೊಡಬೇಕು ಎಂದು ಪರಿಶೀಲಿಸುವದಕ್ಕೆ ಎಂದು ಬ್ರಿಟಿಷ್ ಸರ್ಕಾರ ಒಂದು ನಿಯೋಗವನ್ನು ಭಾರತಕ್ಕೆ ಕಳುಹಿಸಿತು. ಅದರ ಅಧ್ಯಕ್ಷ ಸರ್ ಜಾನ್ ಸೈಮನ್; ಆದುದರಿಂದ ಇದಕ್ಕೆ ‘ಸೈಮನ್ ಕಮೀಷನ್’ ಎಂದು ಹೆಸರು ಬಂದಿತು. ಲಾಹೋರಿಗೆ ಸೈಮನ್ ಕಮೀಷನ್ ಭೇಟಿ ಕೊಟ್ಟಿದ್ದ ಕಾಲದ ಮಾತು. ಭಗತ್ ಸಿಂಗ್ ಪೊಲೀಸರಿಗೆ ಕಣ್ಣು ಮುಚ್ಚಾಲೆ ಆಡಿಸುತ್ತಿದ್ದ. ವಿದ್ಯಾವತಿದೇವಿ ಭಗತನನ್ನು ಗುಟ್ಟಾಗಿ ನೋಡಿ ಮಾತಾಡಿಸಿ ಹಳ್ಳಿಗೆ ಹಿಂತಿರುಗುತ್ತಿದ್ದಳು. ಕಂಕುಳಲ್ಲಿ ಕೊನೆಯ ಮಗ ರಾಜೇಂದ್ರ ಸಿಂಗ್. ದಟ್ಟ ಮರಗಳ ತೋಪಿಗೆ ಬೈತಲೆ ತೆಗೆದಿದ್ದ ಪುಟ್ಟ ಹಾದಿ. ಹಳ್ಳಿ ಇನ್ನೂ ಸಾಕಷ್ಟು ದೂರವಿತ್ತು. ಅಷ್ಟರಲ್ಲಿ ಪಾದವನ್ನು ಏನೋ ಕಡಿದಂತಾಯಿತು. ಕಣಜ ವಿರಬಹುದೆಂದು ಕೊಂಡಳು. ಆದರೆ ಮುಂದೆ ನಡೆಯಲು ಮನ ಒಪ್ಪಲಿಲ್ಲ. ಹಿಂತಿರುಗಿ ನೋಡಿದಳು. ಹೆಡೆ ಬಿಚ್ಚಿ ಆಡು ತ್ತಿದೆ ಒಂದು ದೊಡ್ಡ ಸರ್ಪ! ಯಾರಾದರೂ ತಲೆ ಹೊಡೆದರೂ ತಿಳಿಯದಂಥ ಗೊಂಡಾರಣ್ಯ. ಆದರೆ ವಿದ್ಯಾವತಿ ಧೃತಿಗೆಡಲಿಲ್ಲ. ಹಳ್ಳಿಯತ್ತ ಸರಸರನೆ ಹೆಜ್ಜೆ ಹಾಕಿದಳು. ಹೆಜ್ಜೆ ಹೆಜ್ಜೆಗೂ ವಿಷವೇರುತ್ತಿತ್ತು. ಮನೆ ಸಮೀಪಿಸುತ್ತಿದ್ದಂತೆಯೇ ಮೃತ್ಯುವೂ ಸಮೀಪಿಸುತ್ತಿತ್ತು. ಮನೆ ತಲುಪುತ್ತಿದ್ದಂತೆಯೇ ಮೂರ್ಛೆ ಬಂದು ಬಿದ್ದುಬಿಟ್ಟಳು. ನಾಲ್ಕು ದಿನಗಳವರೆಗೆ ಒಂದೇ ರೀತಿಯ ಉಬ್ಬಸ. ಅನಂತರವೇ ಆಕೆಗೆ ಪ್ರಜ್ಞೆ ಬಂದಿದ್ದು.

ಈ  ಮಧ್ಯೆ ಪೊಲಿಸರ ತಂಡ ಅಲ್ಲಿಗೆ ಬಂದಿತು. ಮರಣಶಯ್ಯೆಯಲ್ಲಿರುವ ತಾಯಿಯನ್ನು ನೋಡಲು ಭಗತ್ ಸಿಂಗ್ ಅಲ್ಲಿಗೆ ಬಂದೇ ಬಂದಿರುತ್ತಾನೆಂಬ ಎಣಿಕೆ ಅವರದು. ಆದರೆ ಭಗತ್ ತಾಯಿಯ ಆರೋಗ್ಯಸ್ಥಿತಿಯ ಬಗ್ಗೆ ಎಲ್ಲ ವಿಚಾರಗಳನ್ನೂ ಗುಪ್ತವಾಗಿ ತಾನಿದ್ದೆಡೆಗೇ ತರಿಸಿಕೊಂಡಿದ್ದ!

ಮಳೆಗಾಲ. ಹಲಗಲಿರುಳೂ ಧೋ ಎಂದು ಸುರಿಯುವ ಮಳೆ. ಮನೆಯಿಡೀ ಸೋರುತ್ತದೆ. ಮಳೆ ಬಂದರೆ ಮನೆ ಯಾವುದು ರಸ್ತೆ ಯಾವುದು ತಿಳಿಯುವುದಿಲ್ಲ. ಮಾಳಿಗೆಯ ಮೇಲೆ ಸ್ವಲ್ಪ ಮಣ್ಣು ಹಾಕಿ ರಿಪೇರಿ ಮಾಡೋಣವೆಂದು ಮಣ್ಣಿನ ಕುಕ್ಕೆಗೆ ಕೈ ಹಚ್ಚಿದ್ದಾಳೆ. ಕೈ ಬೆರಳನ್ನು ಕಡಿದಿದೆ ಹಾವೊಂದು. ಮತ್ತೊಮ್ಮೆ ವಿದ್ಯಾವತಿಯ ಪ್ರಾಣ ಸಾವು-ಬದುಕುಗಳ ನಡುವೆ ಉಯ್ಯಾಲೆಯಾಡಿತು. ಉಳಿಯುವ ಸೂಚನೆಯೇ ಕಂಡುಬರಲಿಲ್ಲ. ಆದರೆ ಎರಡನೆಯ ಬಾರಿಯೂ ವಿದ್ಯಾವತಿ ಮೃತ್ಯುವನ್ನು ಹೆದರಿಸಿ ಓಡಿಸಿದಳು.

ಇನ್ನೊಮ್ಮೆ ಹಾವು ಕಡಿದಿದ್ದು ದನಗಳ ಕೊಠಡಿಯಲ್ಲಿ ಎಮ್ಮೆಗೆ ಹುಲ್ಲು ಹಾಕುವಾಗ. ವಿದ್ಯಾವತಿ ಈ ಸಲ ಸ್ವಲ್ಪವೂ ಗಾಬರಿಯಾಗಲಿಲ್ಲ. ಕೈಲಿದ್ದ ಮೇವು ಹಾಗೇ ಇತ್ತು. ತನ್ನ ಕೆಲಸ ತಾನು ಮುಂದುವರಿಸಿದಳು.

ಒಂದು ಸಲವಲ್ಲ, ಎರಡು ಸಲವಲ್ಲ, ನಾಲ್ಕು ಬಾರಿ ಹಾವು ಕಡಿದಿದೆ ವಿದ್ಯಾವತಿಗೆ. ಆದರೆ ಆ ಸಿಂಹಿಣಿಯ ಬಳಿ ಸುಳಿಯಲು ಮೃತ್ಯುವಿಗೂ ಹೆದರಿಕೆ. ಒಂದು ಮಧ್ಯಾಹ್ನ ಆಕೆ  ಮಲಗಿದ್ದಾಗ ಒಂದು ಬೃಹತ್ ನಾಗರ ಆಕೆಯ ತಲೆಯ ಬಳಿ ಹೆಡೆ ಬಿಚ್ಚಿ ಆಡುತ್ತಿದೆ. ವಿದ್ಯಾವತಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದಾಳೆ. ಮುಖದಲ್ಲಿ ಸೌಮ್ಯ ಭಾವ. ಮುಗುಳ್ನಗೆ. ಈ ದೃಶ್ಯವನ್ನು ಕಂಡ ಎಷ್ಟೋ ಮಂದಿ ಭಯದಿಂದ ತಲ್ಲಣಿಸಿ ಹೋಗಿದ್ದರು.

’ಇನ್ನಿಬ್ಬರು ಗಂಡು ಮಕ್ಕಳನ್ನೂ ಅರ್ಪಿಸಲೆ?’

ಮೃತ್ಯುವಿನ ಆಕ್ರಮಣವನ್ನೂ ಎದುರಿಸಿದ್ದ ವೀರಮಾತೆ-ವಿದ್ಯಾವತಿ. ಅಂಥ ಸಾಹಸಿಗೆ ಆಂಗ್ಲರ ಆಕ್ರಮಣ ಒಂದು ಆಕ್ರಮಣವೇ ಅಲ್ಲ. ಅವರ ದುರಾಕ್ರಮಣಕ್ಕೆ ಮಂಗಳ ಹಾಡಲು ತನ್ನ ಐವರು ಗಂಡುಮಕ್ಕಳಲ್ಲಿ ಭಗತ್ ಮಾತ್ರ ಸಾಕು ಎಂಬ ಆತ್ಮವಿಶ್ವಾಸ ಆಕೆಗೆ.

ಆದರೆ ಭಗತ್ ಸಿಂಗ್ ಹುತಾತ್ಮನಾದ. ಅವನೊಡನೆಯೇ ಮನೆಯ ಸಂಪತ್ತೂ ಹೊರಟುಹೋಯಿತು. ೧೯೩೧ ರಿಂದ ೧೯೩೪ ರವರೆಗೆ ನಾಲ್ಕು ವರ್ಷಗಳ ಕಾಲ ಅವರ ಕುಟುಂಬ ದಟ್ಟ ದಾರಿದ್ರ್ಯವನ್ನು ಎದುರಿಸಬೇಕಾಗಿ ಬಂತು. ಆ ಸಂಕಟ ಜೈಲುವಾಸಕ್ಕಿಂತಲೂ ಘೋರವಾಗಿತ್ತು.

ಆದರೆ ಕ್ರಮೇಣ ಈ ತೊಂದರೆ ತಾಪತ್ರಯಗಳು ಕಡಿಮೆಯಾಗುತ್ತಾ ಬಂದವು. ೧೯೩೬-೪೦ ರ ವೇಳೆಗೆ ಸಂಸಾರ ಸುಧಾರಿಸಿತೇನೋ ಎಂದುಕೊಳ್ಳುವಷ್ಟರಲ್ಲಿ ಕುಲಬೀರ್ ಸಿಂಗ್ ಮತ್ತು ಕುಲ್ತಾರ್ ಸಿಂಗ್ ಸೆರೆಮನೆಗೆ ಹೋದರು. ಪತಿ ಕಿಶನ್ ಸಿಂಗ್ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದರು. ಅವರೆಲ್ಲರ  ಪಾಲಿನ ಕರ್ತವ್ಯವೂ ಈಗ ವಿದ್ಯಾವತಿಯ ಹೆಗಲಿಗೆ ಬಿದ್ದಿತ್ತು. ಮನೆಯ ಎಲ್ಲ ವ್ಯವಹಾರಗಳನ್ನೂ ನೋಡಿಕೊಳ್ಳಬೇಕು, ಹೊಲಗದ್ದೆ ಕೆಲಸದಲ್ಲಿ ಪೂರ್ಣ ಗಮನ ಹರಿಸಬೇಕು.

ಇಡೀ ಸಂಸಾರದ ಹೊಣೆ ಹೊತ್ತ ಗೃಹಿಣಿಗೆ ತನ್ನ ಕೆಲಸ ಪೂರ್ತಿ ಮಾಡಲು ಸಮಯ ಸಿಕ್ಕುವುದೇ ಕಷ್ಟ, ಶಕ್ತಿ ಉಳಿಯು ವುದು ಕಷ್ಟ. ಜೊತೆಗೆ ಗಲ್ಲಿಗೇರಿದ ಮಗನ ನೆನಪು. ಹಾಸಿಗೆ ಹಿಡಿದ ಗಂಡನ ಆರೈಕೆ, ಯೋಚನೆ. ಸಾಲದೆಂದು ಮಕ್ಕಳು ಸೆರೆಮನೆಯಲ್ಲಿ.

ಉಸಿರು ಸಿಕ್ಕಿಕೊಳ್ಳುವ ಇಂತಹ ಸನ್ನಿವೇಶದಲ್ಲಿ ಒಬ್ಬ ಹೆಂಗಸಿಗೆ ಯಾತರಲ್ಲಿ ಶ್ರದ್ಧೆ, ಆಸಕ್ತಿ ಉಳಿದೀತು?

 

"ದಬ್ಬಾಳಿಕೆ ನಡೆಸುವ ಆಡಳಿತಗಾರರೇ, ಬೇಕಾದರೆ ನನ್ನ ಈ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಹೋಗಿ !"

ಆದರೆ ವಿದ್ಯಾವತಿದೇವಿ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಳು. ಮೆರವಣಿಗೆ ನಡೆದರೆ ಮುಂದಾಳು ಅವಳೇ; ಸಭೆಗಳು ನಡೆದರೆ ಅಧ್ಯಕ್ಷತೆ ವಹಿಸಲು ಹೋಗಬೇಕು. ಈ ಸಾಧ್ವಿಗೆ ಸಮಯ, ಶಕ್ತಿ ಎಲ್ಲಿಂದ ಬಂದುವೋ?

ಲಾಹೋರ್‌ನ ’ಮೋರಿ ಗೇಟ್’ ಬಳಿ ಒಂದು ಸಭೆ ನಡೆಯುತ್ತಿತ್ತು. ವಿದ್ಯಾವತಿಯೇ ಅಧ್ಯಕ್ಷಿಣಿ. ತನ್ನ ಭಾಷಣದಲ್ಲಿ ಆಂಗ್ಲರನ್ನು ಉದ್ದೇಶಿಸಿ ಹೇಳಿದಳು:

“ನನ್ನ ಒಬ್ಬ ಮಗನನ್ನು ಗಲ್ಲಿಗೇರಿಸಿದಿರಿ. ನನ್ನ ಒಬ್ಬ ಮೈದುನನ್ನು ಸೆರೆಮನೆಗೆ ನೂಕಿ, ಚಿತ್ರಹಿಂಸೆ ಕೊಟ್ಟು ರೋಗಗ್ರಸ್ತನನ್ನಾಗಿ ಮಾಡಿದಿರಿ. ಕೊನೆಗೆ ಬಲವಂತವಾಗಿ ಅವನನ್ನು ಜೀವನ್ಮುಕ್ತನನ್ನಾಗಿ ಮಾಡಿದಿರಿ. ಇನ್ನೊಬ್ಬ ಮೈದುನನನ್ನು ಗಡೀಪಾರು ಮಾಡಿ ವಿದೇಶಗಳಲ್ಲಿ ಅಲೆ ದಾಡಿಸಿದಿರಿ. ನನ್ನ ಎರಡು ಮಕ್ಕಳನ್ನು ಅಕಾರಣವಾಗಿ ಈಗ ಬಂಧಿಸಿ ಸೆರೆಮನೆಯಲ್ಲಿ ಕೊಳೆ ಹಾಕಿದ್ದೀರಿ. ನಿಮ್ಮ ಈ ಪೈಶಾಚಿಕ ಕೃತ್ಯಗಳಿಗೆ ನಾನು ಹೆದರಿದೆ ಎಂದು ತಿಳಿದಿರೇನು? ಇನ್ನೂ ಇಬ್ಬರು ಮಕ್ಕಳು ನನ್ನ ಬಳಿಯೇ ಇದ್ದಾರೆ. ದಬ್ಬಾಳಿಕೆ ನಡೆಸುವ ಆಡಳಿತಗಾರರೇ, ನಿಮ್ಮ ದಾಹ ಇನ್ನೂ ತಣಿಯದಿದ್ದ ಪಕ್ಷದಲ್ಲಿ ಇವರಿಬ್ಬರನ್ನೂ ಕೂಡ ತೆಗೆದುಕೊಂಡು ಹೋಗಿ.”

ಇದಾದ ಸ್ವಲ್ಪ ದಿನಗಳನಂತರ ಒಮ್ಮೆ ಆಕೆ ಮಕ್ಕಳನ್ನು ಭೇಟಿ ಮಾಡಲು ಜೈಲಿಗೆ ಹೋಗಿದ್ದಳು. ಕುಲಬೀರ್ ಸಿಂಗ್, ಕುಲ್ತಾರ್ ಸಿಂಗರಿಬ್ಬರೂ ಉಪವಾಸ ಮುಷ್ಕರ ಮಾಡುತ್ತಿದ್ದರು. ಜೈಲಿನಧಿಕಾರಿಗಳನ್ನು ಭೇಟಿಗೆ ಅನುಮತಿ ಕೊಡಿರೆಂದು ಕೇಳಿದಾಗ, ಆ ಕುಟಿಲ ಅಧಿಕಾರಿಗಳು ಅಲ್ಲಿಯೂ ರಾಜಕೀಯ ತಂದೊಡ್ಡಿದರು. ಆಕೆಯ ಮಕ್ಕಳು ಉಪವಾಸ ನಿಲ್ಲಿಸುವ ವರೆಗೂ ಭೇಟಿ ಅಸಾಧ್ಯವೆಂದರು. ಬಂಧಿಗಳ ಉಪವಾಸ ನಿಲ್ಲಿಸಲು ಅವರ ಕೈಲಾಗಿರಲಿಲ್ಲ. ಈಗ ತಾಯಿಯ ಪ್ರೇಮವನ್ನೇ ಬಳಸಿಕೊಳ್ಳಲು ನೋಡಿದರು.

ವಿದ್ಯಾವತಿ ಬಗ್ಗಿದಳೆ? ಅತ್ತು ಗೋಳಿಟ್ಟಳೆ? ಮಕ್ಕಳಿಗೆ ಉಪವಾಸ ನಿಲ್ಲಿಸಿ ಎಂದಳೆ? ಇಲ್ಲ, ಆಕೆಯ ಮೂಲಕ ಅಂದು ಭಾರತೀಯ ಮಾತೃತ್ವ ಮಾತಾಡಿತು. ಆಕೆ ಒಂದು ಸಾರ್ವಜನಿಕ ಸಭೆಯಲ್ಲಿ “ನನ್ನ ಮಕ್ಕಳು ಉಪವಾಸ ಮಾಡಿ ಮಡಿಯಲಿ. ಅದನ್ನು ಸ್ವಾಗತಿಸುವೆನೇ ಹೊರತು ನನ್ನ ಭೇಟಿಗಾಗಿ ಅವರು ಉಪವಾಸ ನಿಲ್ಲಿಸುವುದನ್ನು ನಾನು ಸಹಿಸುವುದಿಲ್ಲ. ಅವರ ಬೇಡಿಕೆಗಳು ಪೂರೈಸುವವರೆಗೂ ಉಪವಾಸ ಮುಂದುವರೆಯಲಿ” ಎಂದು ಆಂಗ್ಲ ಸರಕಾರಕ್ಕೆ ಉತ್ತರ ನೀಡಿದಳು.

೧೯೪೭ ರ ಆಗಸ್ಟ್ ಬಂದಿತು. ಭಾರತದ ಸ್ವಾತಂತ್ರ್ಯ ಲಕ್ಷ್ಮಿ ಬಂಧನಮುಕ್ತಳಾದಳು. ತಾನು ಮುಕ್ತಳಾದೊಡನೆಯೇ ಸೆರೆಮನೆಯ ಸರಳುಗಳ ಹಿಂದಿದ್ದ ಕುಲಬೀರ್ ಸಿಂಗ್, ಕುಲ್ತಾರ್ ಸಿಂಗರನ್ನೂ ಬಿಡುಗಡೆ ಮಾಡಿಸಿದಳು. ಎಲ್ಲೆಲ್ಲೂ ಸಂತಸ ನಲಿದಾಡಿತು. ಎಷ್ಟೋ ವರ್ಷಗಳಿಂದ ನಿರೀಕ್ಷಿಸುತ್ತಿದ್ದ

ಅಜಿತ್ ಸಿಂಗ್ ಸಹ ಮರಳಿದರು. ಆದರೆ ಅವರು ಒಂದೆರಡು ದಿನಗಳಲ್ಲೇ ತೀರಿಹೋದರು.

ಎರಡು ಮೂರು ವರ್ಷಗಳಲ್ಲಿ ಕಿಶನ್ ಸಿಂಗರ ಕುಟುಂಬದವರೂ ಬೇರೆಬೇರೆಯಾಗಬೇಕಾಯಿತು. ಸರ್ದಾರ್ ಕುಲ ಬೀರ್ ಸಿಂಗ್, ಸರ್ದಾರ್ ಕುಲ್ತಾರ್ ಸಿಂಗ್, ಸರ್ದಾರ್ ರಣಬೀರ್ ಸಿಂಗ್ ಮತ್ತು ಸರ್ದಾರ್ ರಾಜೇಂದ್ರ ಸಿಂಗ್-

ಈ ನಾಲ್ಕು ಮಕ್ಕಳೂ ನಾಲ್ಕು ಸಂಸಾರಗಳನ್ನು ಹೂಡಿ ಪಂಜಾಬಿನ ಹೊರಗೆ ಜಮೀನನ್ನು ಕೊಂಡು, ಅಲ್ಲಿ ಹೋಗಿ ನೆಲೆಸಿದರು. ಸಮುದ್ರದ ಅಲೆಗಳಂತೆ ಭೋರ್ಗರೆದು ಬರುತ್ತಿದ್ದ ಕಷ್ಟಗಳ ಸರಪಣಿಗೆ ಸಿಕ್ಕಿದ್ದ ಸರ್ದಾರ್ ಕಿಶನ್ ಸಿಂಗ್ ದಂಪತಿಗಳು ಈಗ ನಿಶ್ಚಿಂತರು. ವಿದ್ಯಾವತಿಯ ಮನ ಈಗ ಪ್ರಶಾಂತ ಸಮುದ್ರದಂತೆ ಗಂಭೀರ. ಪ್ರಯತ್ನಿಸಿದ ಕಾರ್ಯ ಸಫಲವಾಗಿತ್ತು. ಜೀವನವಿಡೀ ಪತಿಯ ಸೇವೆಯಲ್ಲೇ ಕಳೆಯಬೇಕೆಂಬುದೇ ಅವರ ಈಗಿನ ಹಂಬಲ.

ಆದರೆ ೧೯೫೧ ರಲ್ಲಿ ಒಂದು ದಿನ ಸರ್ದಾರ್ ಕಿಶನ್ ಸಿಂಗರ ಹೃದಯ ಸ್ತಬ್ಧವಾಯಿತು.

ಸ್ವಾತಂತ್ರ್ಯ ವೀರರಿಗೆಲ್ಲ ಮಹಾಮಾತೆ

೧೯೬೫ರ ಮಾರ್ಚಿ ೯ ರಂದು ವಿದ್ಯಾವತಿ ಉಜ್ಜಯಿನಿಯ ನಾಗರಿಕರ ಆಮಂತ್ರಣದ ಮೇಲೆ ಅಲ್ಲಿಗೆ ಹೋಗಿದ್ದಳು. ಅವರ ಅಧ್ಯಕ್ಷತೆಯಲ್ಲಿ ಒಂದು ಭಾರೀ ಸಭೆ ನಡೆಯಿತು. ಭಗತ್ ಸಿಂಗನ ಬಗ್ಗೆ ಬರೆದಿದ್ದ ಕವನಗಳು ಹಾಡಲ್ಪಟ್ಟವು. ಈ ಗೀತೆಗಳು ಎಷ್ಟು ಹೃದಯಂಗಮ ವಾಗಿದ್ದವೆಂದರೆ ತಮಗೆ ತಿಳಿಯದಂತೆ ಜನ ಕಣ್ಣೀರಿಡುತ್ತಿದ್ದರು. ಆದರೆ ತನ್ನನ್ನು ಕಂಡು, ತನ್ನ ಮಗನನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಿದ್ದ ಸಭಿಕರಿಗೆ ಬುದ್ಧಿ ಹೇಳಿದರು ವಿದ್ಯಾವತಿ:

“ಏಕೆ ನೀವೆಲ್ಲಾ ಅಳುತ್ತಿದ್ದೀರಿ? ನಿಮಗೆಲ್ಲರಿಗೂ ಇಂದು ಏನಾಗಿದೆ? ನಿಮಗೆ ಗೊತ್ತಿಲ್ಲವೆ, ಇಂದು ನನ್ನ ಮಗನ ಮದುವೆಯ ಶುಭದಿನ. ಎಷ್ಟು ವಿಜೃಂಭಣೆಯಿಂದ ಅವನ ಮದುವೆ ನಡೆಯುತ್ತಿದೆ! ನೋಡಿ, ಈ ಮಂಟಪ ಎಷ್ಟು ಸುಂದರ! ಅದೆಷ್ಟು ಪುಷ್ಪಮಾಲೆಗಳು ಎಲ್ಲೆಲ್ಲೂ ತೂಗಾಡುತ್ತಿವೆ! ಝಗಝಗನೆ ಹೊಳೆಯುತ್ತಿರುವ ದೀಪಗಳು ಪ್ರಭೆಯ ದಿವ್ಯ ಪ್ರವಾಹವನ್ನೇ ಹರಿಸಿವೆ. ಎಷ್ಟು ಸುಮಧುರ ನೀವು ಹಾಡುತ್ತಿರುವ ಗೀತೆ! ಇಂದು ನನ್ನ ಮಗನ ಮದುವೆಯಲ್ಲದೆ ಮತ್ತೇನು? ನನ್ನ ಮಕ್ಕಳೇ! ಅಳಬೇಡಿ. ಇಂದು ಆನಂದದ ದಿನ. ಆನಂದಪಡಿ……”

ಭಗತ್ ಸಿಂಗ್‌ನ ಬಗ್ಗೆ ಮಾತಾಡುವಾಗಲೆಲ್ಲಾ ವಿದ್ಯಾವತಿ ಭಾವಪರವಶಳಾಗುತ್ತಾರೆ.

ಆಕೆ ಉಜ್ಜಯಿನಿಗೆ ಬರುತ್ತಿದ್ದಂತೆಯೇ ಆ ಮಹಾ ಮಾತೆಯ ದರ್ಶನ ಪಡೆಯಲು ಬೀದಿಬೀದಿಗಳಲ್ಲೂ ಜನರ ನೂಕುನುಗ್ಗಲು. ಆಕೆಯನ್ನು ಹೊತ್ತ ವಾಹನ ಮಂದಗತಿಯಲ್ಲಿ ಚಲಿಸುತ್ತಿರುವಾಗ ಜನಸಂದಣಿಯಿಂದ ಹೂಮಳೆ. ಭಗತ್ ಸಿಂಗನ ಬಗ್ಗೆ ಜಯಘೋಷ.

ಶಹೀದ್ ಭಗತ್-ಜಿಂದಾಬಾದ್!

ಜನ ಎಸೆಯುತ್ತಿದ್ದ ಹೂಗಳಿಂದ ಆಕೆಯ ದೇಹಕ್ಕೆ ನೋವಾಗಬಹುದೆಂದು ಕವಿ ಶ್ರೀಕೃಷ್ಣ ‘ಸರಲ’ರಿಗೆ ಅನ್ನಿಸಿತು. ಅವರು ಹೂಮಳೆಗರೆಯುತ್ತಿದ್ದ ಜನರನ್ನು ತಡೆಯಲು ಪ್ರಯತ್ನಿಸಿದರು. ಆಗ ವಿದ್ಯಾವತಿ ಶ್ರೀಕೃಷ್ಣ ‘ಸರಲ’ರಿಗೆ ಹೇಳಿ ದರು: “ಜನರನ್ನು ತಡೆಯಬೇಡಿ. ಅವರಿಗೆ ತಮ್ಮ ಮನದಿಚ್ಛೆ ಪೂರೈಸಿಕೊಳ್ಳಲು ಬಿಡಿ. ಅವರು ಎರಚುತ್ತಿರುವುದು ಹೂಗಳು ತಾನೆ? ಒಂದು ವೇಳೆ ಭಗತ್ ಸಿಂಗನ ಬಗ್ಗೆ ಜಯಘೋಷ ಮಾಡುತ್ತಾ ಜನ ಕಲ್ಲುಗಳು ಎರಚಿದರೂ ನಾನು ಸಂತೋಷ ದಿಂದ ಸ್ವೀಕರಿಸುತ್ತೇನೆ.”

ಈಕೆ ಕ್ರಾಂತಿಕಾರಿಗಳ ವಿಶಾಲ ಪರಿವಾರದ ಮಾತೆಯಂತೆ. ಸುಖದೇವ, ರಾಜಗುರುಗಳೂ ಆಕೆಯ ಮಕ್ಕಳಂತೆಯೇ. ಭಗತ್ ಸಿಂಗನ ಜೀವದ ಗೆಳೆಯ ಕ್ರಾಂತಿರತ್ನ ಚಂದ್ರಶೇಖರ ಆಜಾದನೂ ಆಕೆಯ ಮಗನಂತೆಯೇ.

ಭಗತ್ ಸಿಂಗ್‌ನ ಮೇಲೆ ಗ್ರಂಥ ರಚಿಸಿದ ಕವಿ ಶ್ರೀಕೃಷ್ಣ ‘ಸರಲ’ರಿಗೆ ಈಕೆ ಉಜ್ಜಯಿನಿಗೆ ಬಂದಿದ್ದಾಗ ನೀಡಿದ ಆದೇಶವೇನು?

“ನೀನು ನನ್ನ ಮಗ ಭಗತ್ ಸಿಂಗನ ಮೇಲೆ ಇಷ್ಟು ಬೃಹತ್ ಗ್ರಂಥವನ್ನು ಬರೆದಿದ್ದೀಯೆ. ಆದರೆ ಚಂದ್ರಶೇಖರ ಆಜಾದನ ಮೇಲೆ ಬಹು ಮುಂಚೆಯೇ ಇಂತಹ ಒಂದು ಗ್ರಂಥವನ್ನು ರಚಿಸಬೇಕಾಗಿತ್ತು. ನಿಜ, ಇಂದು ಆಜಾದನ ತಾಯಿ ಇಲ್ಲ. ಅವನ ಮೃತ ಮಾತೆಯ ಸ್ಥಾನದಿಂದ ನಾನು ನಿನಗೆ ಆಜ್ಞಾಪಿಸುತ್ತಿದ್ದೇನೆ. ಚಂದ್ರಶೇಖರ ಆಜಾದನ ಮೇಲೆ ನೀನು ಒಂದು ಗ್ರಂಥ ರಚಿಸು. ಬರೆಯುವೆನೆಂದು ನನಗೆ ವಚನ ನೀಡು……”

ಎಂದು ಕವಿಗೆ ಒತ್ತಾಯ ಮಾಡಿದಳು. ಕವಿಯ ಕಣ್ಣುಗಳಲ್ಲಿ ಕಂಬನಿ ಮಿಡಿಯಿತು. ಕೂಡಲೇ ಕವಿ ತನ್ನ ಹೆಬ್ಬೆರಳು ಕತ್ತರಿಸಿ, ಆಕೆಗೆ ರಕ್ತತಿಲಕವಿಟ್ಟು ಪ್ರಮಾಣ ಮಾಡಿದ. ಅನಂತರ ಗ್ರಂಥವನ್ನು ಬರೆದ. (ಚಂದ್ರಶಖರ ಆಜಾದ್ ಬಾಲ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ. ಅವನನ್ನು ಪೊಲೀಸರು ಗುಂಡಿಟ್ಟು ಕೊಂದರು.) ತನ್ನ ಮಗನೊಂದಿಗೆ ಅಸೆಂಬ್ಲಿಯಲ್ಲಿ ಬಾಂಬು ಸಿಡಿಸಿ ಬಂಧಿತನಾಗಿ ಶಿಕ್ಷೆ ಅನುಭವಿಸಿದ್ದ  ಬಟುಕೇಶ್ವರ ದತ್ ವೃದ್ಧಾಪ್ಯ ಹಾಗೂ ರೋಗದಿಂದ ನರಳುತ್ತಿದ್ದಾಗ ದಿಲ್ಲಿಯಲ್ಲಿ ಅವನ ಮಂಚದ ಬಳಿಗೆ ವಿದ್ಯಾವತಿ ಹಾಜರು.

೧೯೫೭ ರ ಮೇ ೧೨ ರಂದು ದಿಲ್ಲಿಯಲ್ಲಿ ಒಂದು ಭಾರಿ ಉತ್ಸವ ನಡೆಯಿತು. ೧೮೫೭ ರಲ್ಲಿ ಭಾರತದಲ್ಲಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದಾದ ಒಂದು ನೂರು ವರ್ಷಗಳನಂತರ ಸ್ವತಂತ್ರ ಭಾರತ ಅಂದಿನ ವೀರ ಪುರುಷ ರನ್ನು, ವೀರನಾರಿಯರನ್ನು ಕೃತಜ್ಞತೆಯಿಂದ ಸ್ಮರಿಸಿತು. ಈ ವೃದ್ಧೆ ಆ ಉತ್ಸವದಲ್ಲಿ ಇದ್ದರು. ಸ್ವಾತಂತ್ರ್ಯವೀರ ಸಾವರಕರರು ಅಂದು ಮಾತನಾಡಿದರು. ಅವರು, “ಕೆಲವರು ಸ್ವಾತಂತ್ರ್ಯವನ್ನು ತಾವೇ ತಂದುಕೊಟ್ಟುದಾಗಿ ಹೇಳುವುದುಂಟು,. ಅವರು ಇಷ್ಟೊಂದು ಸುಳ್ಳು ಹೇಳಬಾರದು. ಸಶಸ್ತ್ರ ಕ್ರಾಂತಿ ಕಾರಿಗಳಿಂದ ಹಿಡಿದು ನಿಃಶಸ್ತ್ರ ಚಳವಳಿಗಾರರವರೆಗೆ ಎಲ್ಲರ ಹೋರಾಟದ ಅಂತಿಮ ಫಲ ಅದು. ಅವರಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದವರು ಯಾರು ಎಂಬುದಕ್ಕೆ ನಿಮಗೆ ಉತ್ತರ ಬೇಕೆ? ಈ ಮಾತೆಯನ್ನು ಕೇಳಿ” ಎಂದು ಮಾತೆ ವಿದ್ಯಾವತಿಯ ಕಡೆಗೆ ಕೈ ತೋರಿಸಿದರು.

ಮಿರ್ಜಾಪುರದಲ್ಲೋ ಅಲಹಾಬಾದ್‌ನಲ್ಲೋ ದಿಲ್ಲಿ ಯಲ್ಲೋ ಉಜ್ಜಯಿನಿಯಲ್ಲೋ ಕ್ರಾಂತಿಕಾರಿಯೊಬ್ಬನ ಬಗ್ಗೆ ಕಾರ್ಯಕ್ರಮವೆಂದರೆ ಅದು ತನ್ನ ಮಗನ ಕಾರ್ಯವೆಂಬಷ್ಟೇ ಉತ್ಸಾಹ. ಅಲ್ಲಿಗೆ ಧಾವಿಸುವರು ಈಕೆ. ಎಂದೂ ಇಲ್ಲ ಎನ್ನುವವರಲ್ಲ. ಆಕೆಯ ಮುಪ್ಪು, ರೋಗ-ರುಜಿನಗಳು ಈ ಕಾರ್ಯಕ್ರಮಕ್ಕೆ ಅಡ್ಡಿ ಇಲ್ಲ.

ಅದೇ ಕಾರಣ, ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದವರು ಕ್ರಾಂತಿಕಾರಿ ಸ್ವಾತಂತ್ರ್ಯವೀರ ಸಾವರ್‌ಕರರ ಕುರಿತು ಬರೆದ ಗ್ರಂಥದ ಬಿಡುಗಡೆಗೆ ಬರಬೇಕೆಂದು ಮಾತೆ ವಿದ್ಯಾವತಿಯನ್ನು ಪ್ರಾರ್ಥಿಸಿದಾಗ, ಕಾಯಿಲೆಯಿಂದ ಮಲಗಿದ್ದ ಹಾಸಿಗೆಯಿಂದಲೇ ತಕ್ಷಣ ಉತ್ತರ ಕಳುಹಿಸಿದರು: “ನಾನು ಆರೋಗ್ಯವಾಗಿದ್ದರೆ ಖಂಡಿತ ಬರುತ್ತೇನೆ.”

ಅದರಂತೆ ೮೩ ವಸಂತಗಳನ್ನು ಕಂಡ ಮಾತೆ ವಿದ್ಯಾವತಿ ತನ್ನ ನಿತ್ರಾಣಾವಸ್ಥೆಯಲ್ಲೂ ಫಿರೋಜ್ ಪುರದಿಂದ ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಕೊಂಡು ಮನೆಗೆ ಮರಳುತ್ತಿದ್ದ ಜನರ ಕಿವಿಯಲ್ಲಿ ಆಕೆಯ ಮಾತುಗಳೇ ಗುಂಯ್‌ಗುಡುತ್ತಿದ್ದವು.

೧೯೭೩ ರ ಜನವರಿ ೧ನೇ ತಾರೀಖು ಪಂಜಾಬ್ ಸರ್ಕಾರವು ವಿಶೇಷ ಸಮಾರಂಭದಲ್ಲಿ ಈ ವೃದ್ಧಮಾತೆಗೆ ‘ಪಂಜಾಬ್ ಮಾತಾ’ ಬಿರುದು ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಭಗತ್ ಸಿಂಗ್‌ರ ಸಹೋದರ, ಸಹೋದರಿ ಯರನ್ನೂ ಸನ್ಮಾನಿಸಲಾಯಿತು. ಹಣ್ಣುಹಣ್ಣು ಮುದುಕಿ ವಿದ್ಯಾವತೀದೇವಿಗೆ ಆಗ ಮಾತನಾಡಲೂ ಶಕ್ತಿಯಿಕಲ್ಲದಷ್ಟು ನಿತ್ರಾಣ. ಮೌನವಾಗಿಯೆ ಎಲ್ಲ ಅಭಿನಂದನೆಗಳನ್ನೂ ಸ್ವೀಕರಿಸಿದರು.

“ಭಗತ್ ಸಿಂಗ್ ಇಂದು ಈ ಜಗತ್ತಿನಲ್ಲಿ ಇಲ್ಲವೆಂದು ಹೇಳುವವರು ಯಾರು?” ಎಂದು ವಿದ್ಯಾವತಿ ಪ್ರಶ್ನಿಸುತ್ತಿದ್ದರು. ವಿದ್ಯಾವತಿ ತುಂಬಾ ವಿಶ್ವಾಸದಿಂದ ಹೇಳುತ್ತಿದ್ದರು: “ಎಲ್ಲಿಯ ವರೆಗೆ ನಾನು ಜೀವಿಸಿರುವೆನೋ ಅಲ್ಲಿಯವರೆಗೂ ಭಗತ್ ಪ್ರತಿಕ್ಷಣವೂ ನನ್ನ ಬಳಿಯೇ ಇರುತ್ತಾನೆ. ನಾನು ಕಾಲವಾದಾಗ ಅವನ ಬಳಿಗೇ ಹೊರಟುಹೋಗುತ್ತೇನೆ.”

೧೯೭೫ರ ಜೂನ್ ಒಂದರಂದು ವಿದ್ಯಾವತೀದೇವಿ ದೆಹಲಿಯಲ್ಲಿ ತೀರಿಕೊಂಡರು.

ನಲವತ್ತನಾಲ್ಕು ವರ್ಷಗಳ ಹಿಂದೆ ಬ್ರಿಟಿಷರು ಭಗತ್ ಸಿಂಗರ ದೇಹವನ್ನು ಗುಟ್ಟಾಗಿ ಹುಸೇನಿವಾಲ ಎಂಬ ಸ್ಥಳದ ಬಳಿ ಸೆಟ್ಲೆಜ್ ನದಿಯ ತೀರದಲ್ಲಿ ದಹನ ಮಾಡಿದ್ದರು. ವಿದ್ಯಾವತಿಯವರ ದೇಹವನ್ನು ಅಲ್ಲಿಯೇ ಎಲ್ಲ ಸರ್ಕಾರಿ ಮರ್ಯಾದೆಗಳೊಂದಿಗೆ ದಹನ ಮಾಡಲಾಯಿತು.

ಭಾರತದಲ್ಲಿ ಸ್ವಾತಂತ್ರ್ಯದ ಪ್ರೇಮ ಇರುವವರೆಗೂ ವೀರ ಮಾತೆ ವಿದ್ಯಾವತಿ, ಕ್ರಾಂತಿಸಿಂಹ ಭಗತ್ ಸಿಂಗ್ ಅವರು ಭಾರತೀಯರ ಹೃದಯಗಳಲ್ಲಿ ಇದ್ದೇ ಇರುತ್ತಾರೆ.