ವಿದ್ಯುಚ್ಚೋರನೆಂಬ ರಿಸಿಯ ಕಥೆಯಂ ಪೇೞ್ವೆಂ :

ಗಾಹೆ || ದಂಸೇಹಿಯ ಮಸಕೇಹಿಯ ಖಜ್ಜಂತೋ ವೇದಣಂ ಪರಮಘೋರಂ
ವಿಜ್ಜುಚ್ಚೋರೋ ಅಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

*ದಂಸೇಹಿಯ – ಚಿಕ್ಕುಟುಗಳಿಂದಂ, ಮಸಕೇಹಿಯ – ಗುಂಗುಱುಗಳಿಂದಂ, ಖಜ್ಜಂತೋ – ತಿನೆಪಡುತಿರ್ದೊನಾಗಿ, ವೇದಣಂ – ವೇದನೆಯಂ, ಪರಮಘೋರಂ – ಆದಮಾನುಂ ಕಂಡಿದಪ್ಪುದಂ, ವಿಜ್ಜುಚ್ಚೋರೋ – ವಿದ್ಯುಚ್ಚೋರನೆಂಬ ರಿಸಿ, ಅಯಾಸಿಯ – ಲೇಸಾಗಿ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಗಳಾರಾಧನೆಯುಂ*

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವಿದೇಹಮೆಂಬುದು ನಾಡಲ್ಲಿ ಮಿಥಿಳೆಯೆಂಬುದು ಪೊೞಲದನಾಳ್ವೊಂ ಪದ್ಮರಥನೆಂಬೊನರಸನ ಸಂತತಿಯಿಂ ಬಂದ ವಾಮರಥ ನೆಂಬೊನರಸನಾತನ ಮಹಾದೇವಿ ಬಂಧುಮತಿಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಾ ಪೊೞಲೊಳ್ ಯಮದಂಡನೆಂಬೊಂ ತಳಾಱಂಮತ್ತಲ್ಲಿ ಇರ್ಪ್ಪೊಂ ವಿದ್ಯುಚ್ಚೋರನೆಂಬೊಂ ಕಳ್ಳನಾತಂ ಜೃಂಭಿನಿ ಸ್ತಂಭಿನಿ ಮೋಹಿನಿ ಸರ್ಷಪಿ ತಾಳೋದ್ಟಾಟಿಸಿ ವಿದ್ಯಾಮಂತ್ರಂ ಚೂರ್ಣ ಯೋಗ ಘುಟಕಾಂಜನಮೆಂದಿವು ಮೊದಲಾಗೊಡೆಯ ತಸ್ಕರಶಾಸ್ತ್ರಂಗಳೊಳಾದಮಾನುಂ ಕುಶಲನಂತಪ್ಪ ಕಳ್ಳಂ ಪೊೞಲ ಕಸವರಂಗಳನಿರುಳ್ ಕಳ್ದು ಪೊೞಲ್ಗೆ

ವಿದ್ಯುಚ್ಚೋರನೆಂಬ ಋಷಿಯ ಕಥೆಯನ್ನು ಹೇಳುವೆನು : (ವಿದ್ಯುಚ್ಚೋರನೆಂಬ ಋಷಿ ಚಿಗಟ (ಗೊರಜು)ಗಳಿಂದಲೂ ಗುಂಗಾಡಿ ಹುಳು (ದೊಡ್ಡನೊಣ)ಗಳಿಂದಲೂ ಕಚ್ಚಿ ತಿನ್ನಲ್ಪಡುತ್ತಿದ್ದವನಾಗಿ ಅತ್ಯಂತ ಕಠಿನವಾದ ನೋವನ್ನು ಸಹಿಸಿ, ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರ ಎಂಬ ರತ್ನತ್ರಯದ ಆರಾಧನೆಯನ್ನು ಆಚರಿಸಿದನು) ಅದು ಹೇಗೆಂದರೆ: ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವಿದೇಹ ಎಂಬ ಹೆಸರುಳ್ಳ ನಾಡು ಇದೆ. ಆ ನಾಡಿನಲ್ಲಿ ಮಿಥಿಳೆ ಎಂಬ ಪಟ್ಟಣವಿದೆ. ಅದನ್ನು ಪದ್ಮರಥನೆಂಬ ಅರಸನ ಸಂತತಿಯಿಂದ ಬಂದ ವಾಮರಥನೆಂಬ ಅರಸನು ಆಳುತ್ತಿದ್ದನು. ಅವನ ರಾಣಿ ಬಂಧುಮತಿ ಎಂಬವಳು. ಅಂತೂ ಅವರು ತಮ್ಮ ತಮ್ಮ ಮೆಚ್ಚಿನ ವಿಷಯದ ಬಯಕೆಯ ಸುಖಗಳನ್ನು ಅನುಭವಿಸುತ್ತ ಹೀಗೆಯೇ ಹಲವು ಕಾಲಕಳೆಯಿತು. ಆ ಪಟ್ಟಣದಲ್ಲಿ ಯಮದಂಡನೆಂಬ ತಳಾರ (ನಗರದ ಕಾವಲುಗಾರ)ನಿದ್ದನು; ಮತ್ತು ವಿದ್ಯುಚ್ಚೋರನೆಂಬ ಕಳ್ಳನೂ ಇದ್ದನು. ಆತನು ಕಳವಿನ ಶಾಸ್ತ್ರಗಳಲ್ಲಿ ಬಹಳ ಪ್ರವೀಣನಾಗಿದ್ದನು. ಜೃಂಭಿನಿ (ಪ್ರತ್ಯಕ್ಷವಾಗುವುದು ಮತ್ತು ಮಾಯವಾಗುವುದು), ಸ್ತಂಭಿನಿ (ಗತಿನಿರೋಧ) ಮೋಹಿನಿ (ಮೂರ್ಛೆಯುಂಟು ಮಾಡುವುದು), ಸರ್ಷಪಿ (ವಿಷಪ್ರಯೋಗ), ತಾಳೋದ್ಘಾಟಿನಿ ವಿದ್ಯಾ (ಬೀಗ ತೆಗೆಯುವ ವಿದ್ಯೆ), ಮಂತ್ರಪ್ರಯೋಗ, ಚೂರ್ಣ (ಪುಡಿ ಎರಚುವುದು) ಯೋಗ (ವಂಚನೆ, ಇಂದ್ರಜಾಲ, ಗುಪ್ತಚಾರತ್ವ – ಮುಂತಾದವು), ಗುಳಿಗೆ, ಅಂಜನ(ಕಣ್ಣಿಗೆ ಹಚ್ಚುವ ಲೇಪನ) – ಎಂದಿವೇ ಮೊದಲಾಗಿ ಉಳ್ಳ ತಸ್ಕರ ವಿದ್ಯೆಗಳನ್ನು ಬಲ್ಲ ಅವನು ರಾತ್ರಿಯಲ್ಲಿ ಕಳವು ಮಾಡುತ್ತಿದ್ದನು. ಆ ಪಟ್ಟಣಕ್ಕೆ ಬಹಳ ದೂರದಲ್ಲಿ ಒಂದು ಪರ್ವತವಿದೆ. ಅಲ್ಲಿ

ನಾಡೆಯಂತರದೊಳೊಂದು ಪರ್ವತಮುಂಟಲ್ಲಿ ಪಿರಿದೊಂದು ಗುಹೆಯುಂಟದಱೊಳಗೆ ಕಳ್ದ ಕಸವರಂಗಳೆಲ್ಲಮಂ ಪೊೞಟ್ಟು ಗುಹೆಯ ಬಾಗಿಲಂ ಪಿರಿದೊಂದು ಸಿಲೆಯಂ ತಂದಿಟ್ಟು ಮುಚ್ಚಿ ಬಂದು ಪಗಲೆಲ್ಲಂ ಪಾೞ್ದೇಗುಲದೊಳಂಜನಮನೆಚ್ಚಿ ತಾಂ ತೊನ್ನನಾಗಿ ಮುರುಂಟಿದ ಕೈಯುಂ ಕಾಲುಂ ಬೆರಸು ಮೂಗೊಳಗರ್ದು ರಸಿಗೆ ಸುರಿಯೆ ನೊೞವುಗಳ್ ಮುಸುಱೆಕೊಂಡು ತಿನೆ ಪೇಸಿದನಾಗಿ ಲೋಗರ ಮನೆಗಳೊಳ್ ಭೈಕ್ಷಮಂ ಬೇಡಿ ಮನೆಮನೆಯಂ ತೊೞಲ್ದು ತನ್ನ ತೊನ್ನುಗೊಂಡಿರ್ಪುದನಱೆಪುತ್ತುಮಿಂತು ಪಗಲೆಲ್ಲಮಿರ್ದಿರುಳಪ್ಪಾಗಳ್ ದಿವ್ಯಮಪ್ಪ ತನ್ನ ಸ್ವಾಭಾವಿಕಮಪ್ಪ ಮುನ್ನಿನ ರೂಪಂ ಕೈಕೊಂಡು ಪುಟ್ಟಿಗೆಯನುಟ್ಟು ಮೆಯ್ಯಂ ಪೂಸಿ ಪೂವಂ ಮುಡಿದು ಕರ್ಪೂರ ಸಮ್ಮಿಶ್ರಿತಮಪ್ಪ ತಂಬುಲಂದಿನುತ್ತುಂ ಸೂಳೆಗೇರಿಗಳಂ ತೊೞಲ್ದು ತನ್ನಂ ಮೆಱೆಯುತ್ತಂ ಮನಕ್ಕೆವಂದಗ್ಗಳದೊಳ್ಪೆಂಡಿರೊಳೊತ್ತೆಯನಿಟ್ಟು ಭೋಗೋಪಭೋಗಂಗಳ್ಗೆ ಕಸವರಮಂ ಕೊಟ್ಟನುಭವಿಸುತ್ತಮಾರುಮಱಯದಂತಿರ್ದು ಬಚ್ಚರ ದೂಸಿಗರ ನಿಯೋಗಿಗಳ ಅಗ್ಗಯಿಲೆಯರಪ್ಪ ಸೂಳೆಯರ ಸಾಮಂತರ ಕಸವರಂಗಳೆಲ್ಲಮಂ ಕಳ್ದು ಮತ್ತೊಂದು ದಿವಸಂ ಪದ್ಮರಥಮ್ಗೊಸೆದಚ್ಯುತೇಂದ್ರನಟ್ಟಿದ ದಿವ್ಯಮಪ್ಪ ಸರ್ವರುಜಾಪಹಾರಮೆಂಬ ಹಾರುಂ ಸಂತತಿಯಂ ವಾಮರಥಂಗೆ ಬಂದುದಂ ವಾಮರಥಂ ಕರುಮಾಡದೇೞನೆಯ ನೆಲೆಯೊಳ್ ತನ್ನ ಲುಂದು

ದೊಡ್ಡದಾದ ಒಂದು ಗುಹೆಯಿದೆ. ವಿದ್ಯುಚ್ಚೋರನು ಕಳವು ಮಾಡಿದ ಹೊನ್ನುಗಳನ್ನೆಲ್ಲ ಆ ಗುಹೆಯೊಳಗೆ ಹೂಳಿಟ್ಟು ಗುಹೆಯ ಬಾಗಿಲನ್ನು ದೊಡ್ಡದಾದ ಒಂದು ಬಂಡೆ ಕಲ್ಲು ತಂದು ಇಟ್ಟು ಮುಚ್ಚಿ ಬಂದು ಹಗಲೆಲ್ಲಾ ಹಾಳು ದೇವಾಲಯದಲ್ಲಿ ಅಂಜನ ಹಚ್ಚಿ ತಾನು ತೊನ್ನುರೋಗದವನಾಗಿ ಕಾಣಿಸಿಕೊಳ್ಳುತ್ತಿದ್ದನು. ಮುದುಡಿದ ಕೈಕಾಲುಗಳುಳ್ಳವನಾಗಿ, ಮೂಗು ಒಳಕ್ಕೆ ಕುಸಿದು ಕೀವು ಸುರಿಯುತ್ತಿರಲು ನೊಣಗಳು ಕವಿದುಕೊಂಡು ತಿನ್ನುತ್ತಿರಲು ಅಸಹ್ಯ ಪಟ್ಟುಕೊಂಡ ಜನರ ಮನೆಗಳಿಗೆ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದನು. ಮನೆಮನೆಗಳಿಗೆ ಸುತ್ತಾಡುತ್ತ ತನಗೆ ತೊನ್ನುರೋಗ ಬಂದಿರುವುದನ್ನು ತಿಳಿಸುತ್ತ ಹೀಗೆ ಹಗಲೆಲ್ಲಾ ಇರುತ್ತಿದ್ದನು. ರಾತ್ರಿಯಾಗುವ ವೇಳೆಗೆ ದಿವ್ಯವಾದ ತನ್ನ ಸ್ವಾಭಾವಿಕ ವಾದ ಹಿಂದಿನ ರೂಪವನ್ನು ಧರಿಸುತ್ತಿದ್ದನು. ವಸ್ತ್ರವನ್ನುಟ್ಟು, ಮೈಗೆ ಸುಗಂಧಲೇಪನವನ್ನು ಮಾಡಿ, ಹೂವನ್ನು ಮುಡಿದು ಕರ್ಪೂರದಿಂದ ಬೆರಕೆಯಾದ ತಾಂಬೂಲವನ್ನು ತಿನ್ನುತ್ತ ಸೂಳೆಯರ ಬೀದಿಗಳಲ್ಲಿ ಸುತ್ತಾಡಿ, ತನ್ನನ್ನು ಮೆರೆಯಿಸುತ್ತ ತನ್ನಮನಸ್ಸಿಗೆ ಬಂದ ಶ್ರೇಷ್ಠರಾದ ಒಳ್ಳೆಯ ಹೆಂಗುಸರಲ್ಲಿ ಮುಂಗಡವಾಗಿ ದ್ರವ್ಯವನ್ನು ಕೊಟ್ಟು, ವಿಧವಿಧವಾದ ಸುಖಭೋಗಗಳಿಗಾಗಿ ಹೊನ್ನನ್ನು ಕೊಟ್ಟು ಸುಖವನ್ನು ಅನುಭವಿಸುತ್ತ ಯಾರೂ ತಿಳಿಯದ ಹಾಗೆ ಇದ್ದನು. ವೈಶ್ಯರು, ಬಟ್ಟೆಯ ವ್ಯಾಪಾರಿಗಳು, ಅಕಾರಿಗಳು, ಹೆಚ್ಚು ಹಣ ತೆಗೆದುಕೊಳ್ಳುವವರಾದ ಸೂಳೆಯರು, ಸಾಮಂತರು – ಇವರ ದ್ರವ್ಯಗಳನ್ನೆಲ್ಲ ಕದ್ದುಕೊಂಡನು. ಮತ್ತೊಂದು ದಿವಸ ಅಚ್ಯುತೇಂದ್ರನು ಪದ್ಮರಥನಿಗೆ ಪ್ರೀತಿಯಿಂದ ಕಳುಹಿಸಿದ ದಿವ್ಯವಾಗಿರತಕ್ಕ ‘ಸರ್ವರುಜಾಪಹಾರ* (ಎಲ್ಲ ರೋಗಗಳನ್ನೂ ನಾಶಮಾಡುವಂಥದು) ಎಂಬ ಹೆಸರುಳ್ಳ ಮತ್ತು ವಂಶಪರಂಪರೆಯಿಂದ ವಾಮರಥನಿಗೆ ಬಂದಿದ್ದ ಮಾಲೆಯನ್ನು ವಾಮರಥನು ತನ್ನ ಅರಮನೆಯ ಏಳನೆಯ ಉಪ್ಪರಿಗೆಯ ನೆಲೆಯಲ್ಲಿ ತಾನು ಮಲಗುವ ಕೊಠಡಿಯಲ್ಲಿ

ವೋವರಿಗೆಯ ಪುಡಿಕೆಯೊಳಿಟ್ಟೆಲ್ಲಾಕಾಲಮುಂ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂದರ್ಚಿಸುತ್ತುಂ ಪೊಡೆಮಡುತ್ತಮಿರ್ಕ್ಕುಮಿಂತಪ್ಪ ಹಾರಮಂ ವಿದ್ಯುಚ್ಚೋರನಂಜನಮಂ ಕಣ್ಣೊಳೆಚ್ಚಿ ಯಾರುಂ ತನ್ನಂ ಕಾಣದಂತಾಗಿರೆ ಅರಮನೆಯಂ ಪೊಕ್ಕರಸನ ಮಱಲುಂದುವೋವರಿಯಂ ಪೊಕ್ಕು ತಲೆ ದೆಸೆಯೊಳರ್ಚಿಸಿರ್ದ ಪುಡಿಕೆಯಂ ತೆಱೆದು ಹಾರಮಂ ಕೊಂಡರಮನೆಯಿಂ ಪೊಱಮಟ್ಟು ಪೋಗಿ ಪೊಱವೊೞಲ ಗುಹೆಯೊಳ್ ಪೂೞಟ್ಟು ಪೊೞಲ್ಗೆವಂದು ಮುನ್ನಿನಂತೆ ತೊನ್ನರೂಪಂ ಕೈಕೊಂಡಿರ್ದಂ ಮತ್ತಿತ್ತರಸಂ ನೇಸರ್ಮೂಡೆ ಹಾರಮಂ ಕಾಣದೆ ಆಸ್ಥಾನ ಮಂಟಪದೊಳ್ ಸಿಂಹಾಸನ ಮಸ್ತಕಸ್ಥಿತನಾಗಿರ್ದು ತಳಾಱನಪ್ಪ ಯಮದಂಡಂಗೆ ಬೞಯಟ್ಟಿವರಿಸಿ ಇಂತೆಂದನೆಲವೋ ಯಮದಂಡಾ ಪೊೞಲ ಪಾರ್ವರ ಪರದರ ಸೂಳೆಯರ ಒಕ್ಕಲ ಮಕ್ಕಳ ಕಸವರಮೆಲ್ಲಮಂ ಕಳ್ದೊಡಮಾರಯ್ಯದೆ ಕೆಮ್ಮಗಿರ್ಪೆಯಲ್ಲದೆಯುಮೆಮ್ಮ ಸೆಜ್ಜೆಯೋವರಿಯಂ ಕಳ್ಳಂ ಪೊಕ್ಕು ಪುಡಿಕೆಯಂ ತೆಱೆದಚ್ಯುತೇಂದ್ರನಿತ್ತ ಕುಲಧನಮಪ್ಪ ಹಾರಮಂ ಕೊಂಡು ಪೋದುಂ ಕಳ್ಳನನಾರಯ್ದು ಹಾರಮಂ ಕೊಂಡು ಬಾ ಅಲ್ಲದಾಗಳ್ ಕಳ್ಳಂಗೆ ತಕ್ಕ ನಿಗ್ರಹಮಂ ನಿನಗೆ ಮಾಡಿದಪ್ಪೆನೆಂದೊಡೆ ತಳಾಱನೆಂದಂ ದೇವಾ ಏಱುದಿವಸಮೆನಗೆಡೆಯನೀವುದೇಱುದಿವಸದಿಂದೊಳಗೆ ಕಳ್ಳನನಾರಯ್ಯಲಾಱದಾಗಳ್ ದೇವರೆನ್ನಂ ಮೆಚ್ಚುಕೆಯ್ವುದೆಂದೊಡರಸನೆಂತೆಯ್ಯೆಂದೊಡರಮನೆಯಿಂದಂ ಪೊಱಮಟ್ಟು ಪೊೞಲೊಳಗೆ

ಪೆಟ್ಟಿಗೆಯಲ್ಲಟ್ಟು ಎಲ್ಲಾ ಕಾಲದಲ್ಲಿಯೂ ಗಂಧ – ಪುಷ್ಪ – ದೀಪ – ಧೂಪ – ಅಕ್ಷತೆಗಳಿಂದ ಪೂಜಿಸುತ್ತ ಸಾಷ್ಟಾಂಗ ವಂದಿಸುತ್ತ ಇರುತ್ತಿದ್ದನು. ಹೀಗಿರತಕ್ಕ ಮಾಲೆಯನ್ನು ವಿದ್ಯಚ್ಚೋರನು ಕದ್ದನು. ಅವನು ತನ್ನ ಕಣ್ಣಿಗೆ ಅಂಜನ ಹಚ್ಚಿ ಯಾರೂ ತನ್ನನ್ನು ಕಾಣದ ಹಾಗೆ ಅರಮನೆಯನ್ನು ಹೊಕ್ಕು ಅರಸನು ನಿದ್ರಿಸುವ ಕೊಠಡಿಯನ್ನು ಹೊಕ್ಕು, ಅವನ ತಲೆಯ ಕಡೆ ಪೂಹೆಮಾಡಿದ್ದ ಪೆಟ್ಟಿಗೆಯನ್ನು ತೆರೆದು ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರಟು ಹೋಗಿ ಪಟ್ಟಣದ ಹೊರಗಿನ ಗುಹೆಯಲ್ಲಿ ಹೂಳಿಟ್ಟು ಪಟ್ಟಣಕ್ಕೆ ಬಂದು ಹಿಂದಿನ ರೀತಿಯಲ್ಲಿ ತೊನ್ನು ರೋಗಿಯ ರೂಪವನ್ನು ತಾಳಿಕೊಂಡಿದ್ದನು. ಆಮೇಲೆ ಇತ್ತ ರಾಜ ವಾಮರಥನು ಸೂರ್ಯನುದಯಿಸುವ ವೇಳೆಗೆ ಮಾಲೆಯನ್ನು ಕಾಣದೆ ಆಸ್ಥಾನಮಂಟಪಕ್ಕೆ ಬಂದು ಸಿಂಹಾಸನದ ಮೇಲೆ ಕುಳಿತನು. ನಗರದ ಕಾವಲುಗಾರನಾದ ಯಮದಂಡನ ಬಳಿಗೆ ದೂತನನ್ನು ಕಳುಹಿಸಿ ಅವನನ್ನು ಬರಮಾಡಿ ಅವನೊಡನೆ ಹೀಗೆಂದನು – “ಎಲ್ಲವೋ ಯಮದಂಡಾ, ನಮ್ಮ ಪಟ್ಟಣದ ಬ್ರಾಹ್ಮಣರು, ವರ್ತಕರು, ವೇಶೈಯರು, ಒಕ್ಕಲಿನವರು ಮಕ್ಕಳು – ಮುಂತಾದವರ ಹೊನ್ನನ್ನೆಲ್ಲ ಕದ್ದರೂ ನೀನು ವಿಚಾರಿಸದೆ ಸುಮ್ಮನಿರುವೆಯಲ್ಲ! ನನ್ನ ಮಲಗುವ ಮನೆಯ ಕೊಠಡಿಯನ್ನು ಕಳ್ಳನು ನುಗ್ಗಿ ಪೆಟ್ಟಿಗೆ ತೆರೆದು, ಅಚ್ಯುತೇಂದ್ರನು ಕೊಟ್ಟ ಕುಲಧನವಾಗಿರುವ ಮಾಲೆಯನ್ನು ಕೊಂಡುಹೋಗಿದ್ದಾನೆ. ಕಳ್ಳನನ್ನು ಕಂಡುಹಿಡಿದು ಮಾಲೆಯನ್ನು ತೆಗೆದುಕೊಂಡು ಬಾ, ಅದಲ್ಲವಾದರೆ, ಕಳ್ಳನಿಗೆ ತಕ್ಕುದಾದ ದಂಡನೆಯನ್ನು ನಿನಗೆ ಮಾಡುತ್ತೇನೆ.* ಹೀಗೆ ರಾಜನು ಹೇಳಿದಾಗ, ಯಮದಂಡನು – “ಪ್ರಭುವೇ, ನನಗೆ ಏಳುದಿವಸದ ಸಮಯವನ್ನು ಕೊಡಬೇಕು. ಏಳುದಿವಸದೊಳಗಾಗಿ ಕಳ್ಳನನ್ನು ಕಂಡುಹಿಡಿಯಲು ಸಾಧ್ಯವಾಗದೆ ಹೋದರೆ, ಪ್ರಭುಗಳು ನನ್ನ ಏನು ಬೇಕೋ ಹಾಗೆ ಮಾಡಬಹುದು* ಎಂದನು. ಅದಕ್ಕೆ ರಾಜನು ‘ಹಾಗೆಯೇ ಮಾಡು’ ಎಂದನು. ಯಮದಂಡನು ಅರಮನೆಯಿಂದ ಹೊರಟು ಪಟ್ಟಣದಲ್ಲಿ ಸೂಳೆಯರ ಬೀದಿಗಳಲ್ಲಿಯೂ

ಸೂಳೆಗೇರಿಗಳೊಳಮಂಗಡಿಗಳೊಳಂ ಬಸದಿಗಳೊಳಂ ವಿಹಾರಂಗಳೊಳಂ ಕೇರಿಗಳೊಳಮಾರಮೆಗಳೊಳಂ ದೇವಾಲಯಂಗಳೊಳಂ ಪೊಱವೊೞಲೊಳಂ ಕೆಲದ ಪೊೞಲ್ಗಳೊಳಮಾಱುಂ ದಿವಸಂ ನಿರಂತರಮಾರಯ್ದೆಲ್ಲಿಯುಂ ಕಾಣದೇೞನೆಯ ದಿವಸದಂದು ಪಾೞ್ದೇಗುಲದೊಳಿರ್ದು ತೊನ್ನಂ ಪೋಪಾಗಳಳಿಱುವಳ್ಳಮಂ ಕಂಡದಂ ವಿದ್ಯಾಧರಕರಣದಿಂ ಲಂಘಿಸಿ ಪೋಪುದಂ ಯಮದಂಡಂ ಗೆಂಟಱೊಳಿರ್ದು ಕಂಡಿವನೆ ಕಳ್ಳನೆಂದು ನಿಶ್ಚಯಿಸಿ ಪಿಡಿದರಮನೆಗೆ ಪುಯ್ಯಲಿಡೆಯಿಡೆ ಕೊಂಡುಪೋಗಿಯರಸಮಗೆ ಕಳ್ಳನಂ ತಂದೆನೆಂದು ತೋಱ ಈತಂ ಕಳ್ಳನೆಂದರಸಂಗೆ ವೇೞ್ದೊಡೆ ತೊನ್ನನಿಂತೆಂದಂ ದೇವಾ ನಾಂ ಕಳ್ಳನಲ್ಲದುದರ್ಕ್ಕೆ ಪೊೞಲೆಲ್ಲಮಱಗುಂ ಕಳ್ಳನನಾರಯ್ಯಲಾಱದೆನ್ನಂ ತನ್ನ ಸಾವಿಂಗಂಜಿ ಬಡವನಂ ದೇಸಿಗನಂ ಪೊೞಲೊಳ್ ಬೈಕಂದಿರಿದುಂಡು ಬಾೞ್ವನಂ ಪಿಡಿದು ಕೊಂಡು ಬಂದು ಕೊಲಿಸಿದಪ್ಪನೆಂದೊಡೆ ತಳಾಱಂ ಕಳ್ಳರನಾರಯ್ವ ಶಾಸ್ತ್ರಂಗಳೊಳಾದಮಾನುಂ ಕುಶಲನಪ್ಪುದಱಂದರಸಂಗಿಂತೆಂದನೀತಂ ತನ್ನ ರೂಪುಗರೆದಿರುಳ್ ಪೊೞಲೆಲ್ಲಮಂ ಕಳ್ನು ದಿವಸಕ್ಕೀ ಪಾಂಗಿನೊಳ್ ತೊನ್ನನಾಗಿರ್ಪೊಂ ನೀಮುಂ ನಂಬದಾಗಳ್ ಪ್ರತ್ಯಯಮಂ ಮಾಡಿ ತೋರ್ಪೆನೆಂದಾಗಳ್ ಪ್ರತಿಘುಟಿಕಾಂಜಂಗಳಂ ತೊನ್ನನ ಕಣ್ಣಿನೊಳೆಚ್ಚಿದೊಡೆ ದಿವ್ಯಮಪ್ಪ ತನ್ನ ಮುನ್ನಿನ ರೂಪಾಗಿರ್ದಿಂತೆಂದನೀತಂ ಘುಟಕಾಂಜನ ಕುಹಕಂ ಇಂದ್ರಜಾಲಂಗಳಂ ಬಲ್ಲೊನಪ್ಪುದಱಂದೆಲ್ಲಾ

ಅಂಗಡಿಗಳಲ್ಲಿಯೂ ಜಿನಾಲಯಗಳಲ್ಲಿಯೂ ವಿನೋದವಾಟಿಕೆಗಳಲ್ಲಿಯೂ ಬೀದಿಗಳಲ್ಲಿಯೂ ಉದ್ಯಾನಗಳಲ್ಲಿಯೂ ದೇವಾಲಯಗಳಲ್ಲಿಯೂ ಪಟ್ಟಣದ ಹೊರಗಡೆಯಲ್ಲಿಯೂ ಅಕ್ಕಪಕ್ಕದ ಪಟ್ಟಣಗಳಲ್ಲಿಯೂ ಆರುದಿವಸ ಎಡಿಬಿಡದೆ ವಿಚಾರಿಸಿದರೂ ಎಲ್ಲಿಯೂ ಕಾಣಲಿಲ್ಲ. ಏಳನೆಯ ದಿವಸದಂದು ಹಾಳು ದೇವಾಲಯದಲ್ಲಿದ್ದು ತೊನ್ನನು ಹೋಗುವಾಗ ಕೆಸರಿನ ಹಳ್ಳವನ್ನು ಕಂಡು ವಿದ್ಯಾಧರರು ವಿದ್ಯಾಬಲದಿಂದ ಹಾರಿ, ದಾಟಿ ಹೋಗುವುದನ್ನು ಯಮದಂಡನು ದೂರದಲ್ಲಿದ್ದು ಕಂಡನು. ‘ಇವನೇ ಕಳ್ಳನು’ ಎಂದು ನಿರ್ಣಯಿಸಿ ಅವನನ್ನು ಹಿಡಿದನು. ಕಳ್ಳನು ಕೂಗಿಕೊಳ್ಳುತ್ತದ್ದಂತೆಯೇ ಅವನನ್ನು ಅರಮನೆಗೆ ಕೊಂಡುಹೋಗಿ ‘ಕಳ್ಳನನ್ನು ತಂದೆನು’ ಎಂದು ಅರಸನಿಗೆ ತೋರಿಸಿ ‘ಈತನು ಕಳ್ಳನು* ಎಂದು ಅರಸನಿಗೆ ಹೇಳಿದನು. ಆಗ ತೊನ್ನನು ಹೀಗೆಂದನು – “ದೇವಾ, ನಾನು ಕಳ್ಳನಲ್ಲ ಎಂಬುದನ್ನು ಈ ಪಟ್ಟಣವೆಲ್ಲವೂ ತಿಳಿದಿದೆ. ಈ ತಳಾರನು ಕಳ್ಳನನ್ನು ಕಂಡುಹಿಡಿಯಲು ಅಸಮರ್ಥನಾಗಿ, ತನ್ನ ಸಾವಿಗೆ ಹೆದರಿ, ಬಡವನೂ ದಿಕ್ಕಿಲ್ಲದವನೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಜೀವಿಸುತ್ತಿರುವವನೂ ಅದ ನನ್ನನ್ನು ಹಿಡಿದುಕೊಂಡು ಬಂದು ಕೊಲ್ಲಿಸುತ್ತಿದ್ದಾನೆ*. ಹೀಗೆನ್ನಲು, ತಳಾರನು ಕಳ್ಳರನ್ನು ಕಂಡುಹಿಡಿವ ಶಾಸ್ತ್ರಗಳಲ್ಲಿ ಬಹು ಪ್ರವೀಣನಾಗಿರುವುದರಿಂದ ರಾಜನಿಗೆ ಹೀಗೆಂದನು – “ಈತನು ತನ್ನ ರೂಪವನ್ನು ಮರೆಮಾಡಿ ರಾತ್ರಿಯವೇಳೆ ಪಟ್ಟಣದಲ್ಲೆಲ್ಲ ಕಳವು ಮಾಡಿ ಹಗಲಿನ ವೇಳೆ ಈ ರೀತಿಯಲ್ಲಿ ತೊನ್ನನಂತೆ ಕಾಣಿಸುತ್ತಿರುವನು. ನೀವು ನಂಬುವುದಿಲ್ಲವಾದರೆ ನಂಬಿಕೆ ಬರುವಂತೆ ಮಾಡಿ ತೋರಿಸುವೆನು.* ಹೀಗೆ ಹೇಳಿ ಯಮದಂಡನು ಆಗಲೇ ವಿರುದ್ದವಾದ ಗುಳಿಗೆ ಕಾಡಿಗೆಗಳನ್ನು ತೊನ್ನಿನ ಕಣ್ಣಿಗೆ ಹಚ್ಚಿದನು. ಆಗ ದಿವ್ಯವಾದ ತನ್ನ ಹಿಂದಿನ ರೂಪಗೊಂಡು – “ಈತನು ಗುಳಿಗೆ ಅಂಜನಗಳ ಕಪಟವನ್ನೂ ಇಂದ್ರಾಜಾಲವನ್ನೂ ಬಲ್ಲವನಾಗಿರುವುದರಿಂದ ಯಾವ

ರೂಪುಗಳಂ ಮಾಡಲ್ ಬಲ್ಲೊನೆಂದೊಡೆ ತಳಾಱನೆಂದಂ ಪೆಱರ್ಗ್ಗೆ ಮಾಡೀ ಪ್ರತ್ಯಯಮಂ ತೋರ್ಪೆನೆಂದರಸನನುಮತದಿಂದರಸಿಯರ ಸೂಳೆಯರ ಕಣ್ಗಳೊಳ್ ಘುಟಿಕಾಂಜನಂಗಳನೆಚ್ಚಿದೊಡ ನಿಬರುಂ ತೊನ್ನೆಯರಾಗಿರ್ಪ್ಪನ್ನೆಗಂ ಮತ್ತಂ ಬೞಕ್ಕೆ ಪ್ರತಿಘುಟಿಕಾಂಜನಂಗಳನೆಚ್ಚಿದೊಡೆ ಸ್ವಾಭಾವಿಕಮಪ್ಪ ತಮ್ಮ ಮುನ್ನಿನ ರೂಪುಗಳಂ ಕೈಕೊಂಡಿರ್ದ್ದೊರಾಗಳರಸಂಗೆ ನಂಬುಕೆಯಾಗಿ ನೆಟ್ಟನಿವಂ ಕಳ್ಳನಪ್ಪೊನೀತನಂ ದಂಡಿಸೆಂದು ಯಮದಂಡಂಗೆ ಬೆಸವೇೞ್ದೊಡಾತನಂತೆ ಗೆಯ್ಯೆನೆಂದಾತನಂ ತನ್ನ ಮನೆಗೊಡಗೊಂಡು ಪೋಗಿ ಮಾಘಮಾಸದಿರುಳ್ ಕಡುಸೀತದೊಳ್ ಘೋರಮಪ್ಪ ಮೂವತ್ತೆರಡು ದಂಡಣೆಗಳಿಂ ನೀಡುಂ ದಂಡಿಸೆಯನಿತುಮಂ ಬಾೞೆವಾೞೆ ಅವಯವದೆ ಸೈರಿಸಿಯುಂ ಕಳ್ಳನಲ್ಲೆನಯ್ಯೊ ಬಲ್ಲಾಳ್ತನದಿಂದೆನ್ನಂ ತಳಾಱಂ ಕೊಂದಪ್ಪನೆಂದೊಳಱ ಪುಯ್ಯಲಿಡೆ ತಳಾಱಂಗೆ ಕಳ್ಳನೀತಲ್ಲೆಂಬುದೊಂದು ನಂಬುಗೆಯಾಗಿ ನೇಸಱ್ ಮೂಡೆಯರಮನೆಗೆ ಪೋಗಿ ಅರಸಂಗಿಂತೆಂದು ಬಿನ್ನಪಂಗೆಯ್ದುಂ ದೇವಾ ಮೂವತ್ತೆರಡು ಘೋರಮಪ್ಪ ದಂಡಣೆಗಳಿಂದಂ ಶ್ಮಶಾನದ ಸೂಲದೊಳ್ ಯಮದಂಡನ ನಿಕ್ಕಿಮೆಂದಾಳ್ಗಳ್ಗೆ ಬೆಸವೇೞ್ದೊಡವರುಮಾತನಂ ಶ್ವಶಾನಕ್ಕೆೞೆದುಕೊಂಡು ಪೋಗಿ ದರ್ಕ್ಕಂ ಬಸಿದು

ರೂಪವನ್ನು ಬೇಕಾದರೂ ಮಾಡಬಲ್ಲನು* ಎಂದನು. ಆಗ ತಳಾರನು – “ಇದನ್ನು ನಾನು ಬೇರೆಯವರಿಗೆ ಮಾಡಿ ನಂಬಿಕೆಯುಂಟುಮಾಡುವೆನು* ಎಂದು ಹೇಳೀ ರಾಜನ ಒಪ್ಪಿಗೆಯಿಂದ ರಾಣಿಯರ ಮತ್ತು ಸೇವಕಿಯರ ಕಣ್ಣುಗಳಿಗೆ ಗುಳಿಗೆ ಅಂಜನಗಳನ್ನು ಹಚ್ಚಿದನು. ಆಗ ಅವರೆಲ್ಲರೂ ತೊನ್ನುರೋಗದವರಾಗಿ ಕಾಣಿಸಿದರು. ಹೀಗಿರಲು, ಮತ್ತೆ ವಿರುದ್ದದ ಗುಳಿಗೆ ಆಂಜನಗಳನ್ನು ಹಚ್ಚಿದಾಗ ಸಹಜವಾದ ತಮ್ಮ ಹಿಂದಿನ ರೂಪಗಳನ್ನು ತಾಳಿದವರಾಗಿದ್ದರು. ಆಗ ರಾಜನಿಗೆ ನಂಬುಗೆಯಾಯಿತು. “ಇವನು ಸ್ಪಷ್ಟವಾಗಿ ಕಳ್ಳನಾಗಿರುತ್ತಾನೆ. ಇವನನ್ನು ದಂಡಿಸು* ಎಂದು ರಾಜನು ಯಮದಂಡನಿಗೆ ಆಜ್ಞೆಮಾಡಿದನು. ತಳಾರನು ‘ಹಾಗೆಯೇ ಮಾಡುವೆನು’ ಎಂದು ವಿದ್ಯುಚ್ಚೋರನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಮಾಘಮಾಸದ ಚಳಿಯಳ್ಳ ರಾತ್ರಿಯಲ್ಲಿ ಕಡುತಂಪಿನಲ್ಲಿ ಭಯಂಕರವಾದ ಮೂವತ್ತೆರಡು ವಿಧದ ಶಿಕ್ಷೆಗಳಿಂದ ಅತಿಶಯವಾಗಿ ದಂಡಿಸಿದನು. ಕಳ್ಳನು ಅವೆಲ್ಲವನ್ನೂ ಜೀವಿಸುತ್ತಿದ್ದಂತೆಯೇ ಸುಲಭವಾಗಿ ಸಹಿಸಿಕೊಂಡು – ಅಯ್ಯೋ, ನಾನು ಕಳ್ಳನಲ್ಲದವನಾಗಿರುವೆನು. ತಳಾರನು ನನ್ನನ್ನು ತನ್ನ ಬಲದರ್ಪದಿಂದ ಕೊಲ್ಲುತ್ತಿದ್ದಾನೆ !* ಎಂದು ಕೂಗಿ ಬೊಬ್ಬಿಡುತ್ತಿದ್ದನು. ಇದರಿಂದ ಈತನು ಕಳ್ಳನಲ್ಲವೆಂದು ತಳಾರನಿಗೆ ನಂಬಿಕೆಯುಂಟಾಗಿ ಸೂರ್ಯೋದಯವಾದೊಡನೆ ಅರಮನೆಗೆ ಹೋಗಿ ಅರಸನಿಗೆ ಹೀಗೆ ಬಿನ್ನವಿಸಿದನು – ‘ದೇವಾ, ನಾನು ಕಳ್ಳನನ್ನು ಮೂವತ್ತೆರಡು ಬಗೆಯ ಉಗ್ರಶಿಕ್ಷೆಗಳಿಂದ ದಂಡಿಸಿ ನೋಡಿದೆನು. ಆತನು ನಿಶ್ಸಯವಾಗಿಯೂ ಕಳ್ಳನಲ್ಲ. ಪ್ರಭುವು ನನ್ನನ್ನು ಬೇಕಾದಂತೆ ಮಾಡಬಹುದು’ ಎಂದನು. ಆಗ ರಾಜನು “ ಯಮದಂಡನನ್ನು ಶ್ಮಶಾನದ ಶೂಲಕ್ಕೆ ಹಾಕಿ* ಎಂದು ಸೇವಕರಿಗೆ ಆಜ್ಞೆ ಮಾಡಿದನು. ಅವರು ಯಮದಂಡನನ್ನು ಶ್ಮಶಾನಕ್ಕೆ ಎಳೆದುಕೊಂಡು ಹೋದರು. ಶೂಲದ ಮೊಳೆಯನ್ನು ಹರಿತಮಾಡಿ, ಶೂಲದಲ್ಲಿ ಅವನನ್ನು ಹಾಕುವಾಗ ತೊನ್ನನೂ ಅವರೊಡನೆ ಹೋಗಿ

ಸೂಲದೊಳಿಕ್ಕುವಾಗಳವರೊಡವೋಗಿ ತೊನ್ನಂ ರೂಪಪರಾವರ್ತನಂಗೆಯ್ದು ತನ್ನ ಸ್ವಾಭಾಮಿಕಮಪ್ಪ ವಿದ್ಯುಚ್ಚೋರನಪ್ಪ ದಿವ್ಯರೂಪಂ ಕೈಕೊಂಡು ಸೂಲದೊಳಿಕ್ಕಲೀಯದೆ ಅಡ್ಡಮಾಗಿರ್ದರಸನ ಕಾಪಿನವನೆಂದನೆಲೆಯಣ್ಣಗಳಿರಾ ನೀಮೀತನಂ ಕೊಂದಿರೀತನುಂ ಸೂಲದೊಳಿಕ್ಕೆಪಟ್ಟನಾಗಿ ಸತ್ತವನೆಂದವರೊಳ್ ನುಡುದು ತಳಾಱನನಿಂತೆಂದನೆಲೆ ಗಳಾ ಯಮದಂಡಾ ನೀನುಮಾನುಂ ಕಿಱಯಂದೊರ್ವರುಪಾಧ್ಯಾಯರ ಪಕ್ಕದೊಳೋದುವಂದು ನಂದನವನದೊಳಗೆ ನೀನೆನ್ನ ಪೂಣ್ದ ಪ್ರತಿಜ್ಞೆಯಂ ನೆನೆದಾ ಒಂದುಂ ದೋಷಮಿಲ್ಲದೆ ನಿನ್ನಂ ಕೊಲಿಸಿದೆನೊ ಕೊಲಿಸೆನೊ ಪುಣ್ಯ ಪ್ರತಿಜ್ಞೆಯಂ ನೆನೆವೆಯೊ ನೆನೆಯೆಯೊ ಎನೆ ಯಮದಂಡನೊಳ್ಳಿತ್ತಾಗಿ ನೆನೆದೆನೆಂದೊಡೆ ವಿದ್ಯುಚ್ಚೋರನಿಂತೆಂದು ಮತ್ತೀಗಳ್ ನೀನೇನ್ ಸತ್ತೆಯೊ ಸಾಯೆಯೊ ಮತ್ತೇನೊ ಎಂದಾಗಳ್ ಯಮದಂಡನೆಂದಂ ದೇವ ನೀಂ ಗೆಲ್ದೆಯಾಂ ಸೋಲ್ತೆನುಂ ಸತ್ತೆನುಮಂದಿರ್ವರ್ ಪದಿರಿನಿಂ ನುಡಿವ ಸೂೞ್ಮೂತುಗಳಂ ಕಾಪಿನವರುಂ ಪೊೞಲ ಜನಮುಂ ಕೇಳ್ದು ಚೋದ್ಯಂಬಟ್ಟು ಬೆಱಗಾಗಿರ್ದೊಡೆ ವಿದ್ಯುಚ್ಚೋರಂ ಕಾಪಿನವರನಿಂತೆಂದನೆನ್ನುಮನೀತನುಮನರಸನಲ್ಲಿಗೆ ಕೊಂಡು ಪೋಗಿಮರಸನ ಮುಂದೀತಂಗಮೆನಗಂ ಮಾತುಂಟಲ್ಲಿ ನುಡಿದ ಬೞಕ್ಕರಸನೀತನಂ ಮೆಚ್ಚುಕೆಯ್ಗೆ ಎಂತುಂ ಕೊಲವೇೞ್ದೊಡಂ ಮೂಱು ಸೂೞ್ ಬೆಸಗೊಂಡಲ್ಲದೆ ಕೊಲಲಾಗದೆಂದು ನೀತಿಶಾಸ್ತ್ರದೊಳ್

ರೂಪಾಂತರ ವಿದ್ಯೆಯಿಂದ ತನ್ನ ರೂಪವನ್ನು ಪರಿವರ್ತನಗೊಳಿಸಿ ತನ್ನ ಸ್ವಾಭಾವಿಕವಾದ ವಿದ್ಯುಚ್ಚೋರನಾಗಿರುವ ದಿವ್ಯರೂಪವನ್ನು ತಾಳಿಕೊಂಡು ಬಂದು ಯಮದಂಡನನ್ನು ಶೂಲಕ್ಕೆ ಹಾಕಲು ಬಿಡದಂತೆ ಅಡ್ಡವಾಗಿ ನಿಂತು ರಾಜನ ಕಾವಲುಗಾರರೊಡನೆ ಹೀಗೆ ಹೇಳಿದನು – “ಎಲೈ ಅಣ್ಣಂದಿರಾ ನೀವು ಇವನನ್ನು ಕೊಂದಿರಿ, ಈತನು ಶೂಲಕ್ಕೆ ಹಾಕಲ್ಪಟ್ಟವನಾಗಿ ಸತ್ತವನಾಗಿದ್ದಾನೆ* ಎಂದು ಅವರಲ್ಲಿ ಹೇಳಿ, ತಳಾರನೊಡನೆ ಹೀಗೆಂದನು – “ಎಲೈ ತಿಳಿಯತೇ ಯಮದಂಡಾ, ನೀನೂ ನಾನೂ ಚಿಕ್ಕಂದಿನಲ್ಲಿ ಒಬ್ಬರೇ ಉಪಾಧ್ಯಾಯರ ಬಳಿ ವಿದ್ಯಾಭ್ಯಾಸ ಮಾಡುವಂದು ನಂದನವೆಂಬ ಉದ್ಯಾನದಲ್ಲಿ ನಾನು ಶಪಥ ಮಾಡಿದುದನ್ನು ನೀನು ನೆನಪಿಟ್ಟಿರುವೆಯಾ? ಅದರಂತೆ ಒಂದೂ ದೋಷವಿಲ್ಲದೆ ನಿನ್ನನ್ನು ನಾನು ಕೊಲಿಸಿದೆನೊ ಕೊಲಿಸಲಿಲ್ಲವೋ? ಮಾಡಿದ ಪ್ರತಿಜ್ಞೆಯನ್ನು ಸ್ಮರಿಸುವೆಯೋ? ಸ್ಮರಿಸೆಯೋ?* ಎಂದು ಕೇಳಿದನು. ಯಮದಂಡನು “ಚೆನ್ನಾಗಿ ನೆನಪಿಟ್ಟುರುವೆನು* ಎಂದನು. ಆಗ ವಿದ್ಯುಚ್ಚೋರನು – “ಮತ್ತೆ ಈಗ ನೀನೇನು ಸತ್ತೆಯೋ? ಸಾಯೆಯೋ ? ಮತ್ತೇನು?* ಎಂದಾಗ ಯಮದಂಡನು ಹೀಗೆಂದನು – “ದೇವಾ, ನೀನು ಗೆದ್ದವನಾಗಿರುವೆ. ನಾನು ಸೋತವನೂ ಸತ್ತವನೂ ಆಗಿರುವೆನು* – ಎಂದು ಇಬ್ಬರೂ ಒಗಟಿನಂತಹ ರೀತಿಯಿಂದ ಹೇಳುವ ಉತ್ತರ ಪ್ರತ್ಯುತ್ತರಗಳನ್ನು ಕಾವಲಿನವರೂ ಪಟ್ಟಣದ ಜನರೂ ಕೇಳಿ, ಆಶ್ಚರ್ಯಪಟ್ಟು ಬೆರಗಾಗಿದ್ದರು. ವಿದ್ಯುಚ್ಚೋರನು ಕಾವಲುಗಾರರೊಡನೆ – “ನೀವು ನನ್ನನ್ನೂ ಇವನನ್ನೂ ಅರಸರಲ್ಲಿಗೆ ಕೊಂಡುಹೋಗಿರಿ. ಅರಸನ ಮುಂದೆ ಈತನಿಗೂ ನನಗೂ ಹೇಳತಕ್ಕ ಮಾತಿದೆ. ಅಲ್ಲಿ ನಾವು ಮಾತಾಡಿದನಂತರ ರಾಜನು ಇವನನ್ನು ತನಗೆ ಮೆಚ್ಚಿದಂತೆ ಮಾಡುವನು. ಹೇಗಿದ್ದರೂ, ಕೊಲ್ಲಲು ಆಜ್ಞಾಪಿಸಿದರೂ ಮೂರು ಬಾರಿ ಕೇಳದೆ ಕೊಲ್ಲಬಾರದೆಂದು ನೀತಿಶಾಸ್ತ್ರದಲ್ಲಿ ಹೇಳಿರುವುದರಿಂದ, ನಮ್ಮಿಬ್ಬರನ್ನೂ ಅರಮನೆಗೆ

ಪೇೞ್ದುದಱಂದೆಮ್ಮಿರ್ವರುಮನರಮನೆಗೆ ಕೊಂಡು ಪೋಗಿ ಅರಸಂಗೆ ತೋಱಮೆಂದೊಡಾ ಕಾಪಿನವರಿರ್ವರುಮನರಸನಲ್ಲಿಗೆ ಕೊಂಡು ಪೋಗಿ ಇಂತೆಂದು ಬಿನ್ನಪಂಗೆಯ್ದರ್ ದೇವಾ ಈತಂ ಯಮದಂಡನಂ ಕೊಲಲೀಯದೆ ಬಾರಿಸಿದನೆಂದು ವಿದ್ಯುಚ್ಚೋರನಂ ತೋಱ ನುಡಿದೊಡರಸನೇಕೆ ನೀಂ ಬಾರಿಸಿದೆಯೆಂದು ಬೆಸಗೊಂಡೊಡೆ ವಿದ್ಯುಚ್ಚೋರನೆಂದಂ ಯಮದಂಡಂಗೇನುಂ ಪೊಲ್ಲಮೆಯುಂ ದೋಷಮುಮಿಲ್ಲ ನಿಮ್ಮ ದೇವತಾರಕ್ಷಿತಮಪ್ಪ ಸರ್ವರುಜಾಪಹಾರಮೆಂಬುದು ಮೊದಲಾಗಿ ಪೊೞಲ ಕಸವರಮನಿರುಳೀ ರೂಪಿನೊಳ್ ಕಳ್ದು ಪಗಲೆಲ್ಲಂ ತೊನ್ನನಾಗಿ ಪಾೞ್ದೇಗುಲದೊಳಿರ್ಪೆನದಱಂದೆನ್ನಂ ಕೊಲ್ಲಿಮೀತಂಗೇನುಂ ದೋಷಮಿಲ್ಲೆಂದೊಡರಸನೆಂದನಾ ಕಳ್ದ ಕಸವರಮನೆಲ್ಲಮನೇಗೆಯ್ದೆಯೆಂದು ಬೆಸಗೊಂಡೊಡನಿತುವಿರ್ದುವಯ್ಸಾಸಿರಮಱುಸಾಸಿರ ದೀನಾರಮೆನ್ನ ಸೂಳೆಗೆ ಬಿಯಾಮಾದುದುೞದುವೆಲ್ಲಂ ವಣ್ಣಂ ಚಳಿಯದಿರ್ದುದೆಂದೊಡರಸಂ ವಿದುಚ್ಚೋರನಂ ಹಾರಮಂ ಕೊಂಡು ಬಾ ಪೊೞಲವರ್ಗ್ಗಂ ಕಸವರಮಂ ಮಡಗಿದೆಡೆಯಂ ತೋಱೆಂದಾತನೊಡನೆ ಪೂೞಲ ಜನಮುಮನಟ್ಟೆ ಕಾಪುವೆರಸು ಪೋಗಿ ಪೊೞಲ್ಗೆ ನಾಡೆಯಂತರದೊಳ್ ಪಿರಿದೊಂದು ಪರ್ವತಮುಂಟಲ್ಲಿಯೊಂದು ವಿಸ್ತೀರ್ಣ ಗುಹೆಯುಂಟದಱ ಬಾಗಿಲಂ ಮುಚ್ಚಿರ್ದ ಪಿರಿಯ ಸಿಲೆಯಂ ಕಳೆದದಱೊಳಗೆ ಪೊಕ್ಕು ಹಾರಮಂ ಕೊಂಡು ಪೊೞಲ ಜನಮೆಲ್ಲಮನೆಂದಂ ನಿಮ್ಮ ನಿಮ್ಮ ಕಸವರಮಪ್ಪುದನಾರಯ್ದು ಪಲ್ಲಟಿಸಲೀಯದೆ

ಕೊಂಡುಹೋಗಿ ಅರಸನಿಗೆ ತೋರಿಸಿ* ಎಂದನು. ಅದರಂತೆ ಕಾವಲುಗಾರರು ಇಬ್ಬರನ್ನೂ ಅರಸನಲ್ಲಿಗೆ ಕೊಂಡುಹೋಗಿ ಈ ರೀತಿಯಾಗಿ ವಿಜ್ಞಾಪನೆ ಮಾಡಿದರು – “ದೇವಾ ಈತನು ಯಮದಂಡನನ್ನು ಕೊಲ್ಲಲು ಬಿಡದೆ, ನಮ್ಮನ್ನು ತಡೆದನು* ಎಂದು ವಿದ್ಯುಚ್ಚೋರನನ್ನು ತೋರಿಸಿ ಹೇಳಿದನು. ಆಗ ‘ರಾಜನು ನೀನು ಯಾಕೆ ತಡೆದೆ?’ ಎಂದು ಕೇಳಲು ವಿದ್ಯುಚ್ಚೋರನು ಹೀಗೆ ಹೇಳಿದನು – “ಯಮದಂಡನಲ್ಲಿ ಯಾವುದೊಂದು ತಪ್ಪಾಗಲೀ ದೋಷವಾಗಲೀ ಇಲ್ಲ. ನಿಮ್ಮದಾಗಿರುವ ದೇವತೆಗಳಿಂದ ರಕ್ಷಿಸಲ್ಪಡುವ ಸರ್ವರುಜಾಪಹಾರವೆಂಬ ಮಾಲೆಯೇ ಮುಂತಾಗಿ ಪಟ್ಟಣದ ಹೊನ್ನನ್ನು ರಾತ್ರಿಯಲ್ಲಿ ಈ ರೂಪದಲ್ಲಿ ನಾನೇ ಕಳವು ಮಾಡಿ ಹಗಲೆಲ್ಲ ತೊನ್ನು ರೋಗದವನಂತೆ ಕಾಣಿಸಿಕೊಂಡು ಪಾಳುಬಿದ್ದ ದೇವಾಲಯದಲ್ಲಿ ಇರುತ್ತೇನೆ. ಆದುದರಿಂದ ನನ್ನನ್ನು ಕೊಲ್ಲಿರಿ, ಈತನಲ್ಲಿ ಏನೂ ದೋಷವಿಲ್ಲ* – ವಿದ್ಯುಚ್ಚೋರನು ಹೀಗೆನ್ನಲು ರಾಜನು – ಅವನೊಡನೆ – “ಆ ಕದ್ದ ಹೊನ್ನನ್ನೆಲ್ಲ ಏನು ಮಾಡಿದೆ* ಎಂದು ಕೇಳಿದನು, ವಿದ್ಯುಚ್ಚೋರನು – “ಅಷ್ಟೂ ಇದ್ದುವು. ಅವುಗಳಲ್ಲಿ ಐದು ಸಾವಿರ ಆರುಸಾವಿರ ದೀನಾರನಾಣ್ಯ ನನ್ನ ಸೂಳೆಗೆ ಕೊಟ್ಟು ವೆಚ್ಚವಾಗಿದೆ. ಉಳಿದುದೆಲ್ಲ ಬಣ್ಣವಳಿಯದೆಯೇ ಇದೆ* ಎಂದು ಹೇಳಿದನು. ರಾಜನು ವಿದ್ಯುಚ್ಚೋರನೊಂದಿಗೆ – ‘ಹಾರವನ್ನು ತೆಗೆದುಕೊಂಡು ಬಾ, ಪಟ್ಟಣಿಗರಿಗೆ ಹೊನ್ನನ್ನು ಇಟ್ಟ ಸ್ಥಳವನ್ನು ತೋರಿಸು, ಎಂದು ಹೇಳೀ, ಆತನೊಂದಿಗೆ ಪಟ್ಟಣದ ಜನರನ್ನು ಕಳುಹಿಸಿದನು. ವಿದ್ಯುಚ್ಚೋರನು ಕಾವಲಿನವರೊಂದಿಗೆ ಹೋದನು. ಆ ಪಟ್ಟಣಕ್ಕೆ ಬಹಳ ದೂರದಲ್ಲಿ ದೊಡ್ಡದೊಂದು ಬೆಟ್ಟವಿದೆ. ಆ ಬೆಟ್ಟದಲ್ಲಿ ಒಂದು ವಿಶಾಲವಾದ ಗವಿಯಿದೆ. ಅದರ ಬಾಗಲನ್ನು ದೊಡ್ಡ ಕಲ್ಲಿನಿಂದ ಮುಚ್ಚಿತ್ತು. ವಿದ್ಯುಚ್ಚೋರನು ಆ ಕಲ್ಲನ್ನು ತೆಗೆದು ಅದರ ಒಳಗೆ ಹೊಕ್ಕು ಮಾಲೆಯನ್ನು ತಂದು, ಪಟ್ಟಣದ ಜನರನ್ನೆಲ್ಲ ಸಂಬೋಸಿ ಹೇಳಿದನು – “ನಿಮ್ಮ ನಿಮ್ಮದಾಗಿರುವ ದ್ರವ್ಯ ಯಾವುದೆಂದು ಪರಿಶೀಲಿಸಿ, ಒಬ್ಬರದು

ನೋಡಿಕೊಳ್ಳಿಮೆಂದು ತೋಱದೊಡವರುಂ ತಂತಮ್ಮ ಕಸವರಮನೆಲ್ಲಮನಾರಯ್ದು ಕೊಂಡರ್ ಮತ್ತೆ ವಿದ್ಯುಚ್ಚೋರನುಂ ಹಾರಮಂ ಕೊಂಡು ಪೋಗಿಯರಸಂಗೊಪ್ಪಿಸಿದೊಡರಸನಿಂತೆಂದು ವಿದ್ಯುಚ್ಚೋರನಂ ಬೆಸಗೊಂಡಂ ಮಾಘಮಾಸದಿರುಳಿನ ಸೀತದೊಳ್ ನಾಲ್ಕು ಜಾವಮುಂ ಮೂವತ್ತೆರಡು ಘೋರಮಪ್ಪ ದಂಡಣೆಯನೆಂತು ಸೈರಿಸಿದೆಯೆಂದೊಡಾತನಿಂತೆಂದರಸಂಗೆ ಪೇೞ್ಗುಂ ದೇವಾ ಒಂದು ದಿವಸಂ ಸಹಸ್ರಕೂಟ ಚೈತ್ಯಾಲಯಕ್ಕೆ ಕಿಱಯಂದೆನ್ನನೋದಿಸುವೋಜರುಮಾನುಂ ಪೋಗಿ ಓಜಂ ದೇವರಂ ಬಂದಿಸುವನ್ನೆಗಂ ಚರಿತಪುರಾಣಂಗಳಂ ವಖ್ಖಾಣಿಸುತ್ತಿರ್ದ ಶಿವಗುಪ್ತರೆಂಬಾಚಾರ್ಯರ ಪಕ್ಕದೆ ಕುಳ್ಳಿರ್ದು ವಖ್ಖಾಣೆಯಂ ಕೇಳುತ್ತಿರ್ಪನ್ನೆಗಂ ನರಕವ್ಯಾವರ್ಣನೆಯನಾ ಭಟಾರರಿಂತೆಂದು ಪೇೞ್ವುದಂ ಕೇಳ್ದೆಂ ವ್ರತ ಶೀಲ ಚಾರತ್ರ ಗುಣಂಗಳನಿಲ್ಲದವರುಂ ಜೀವಂಗಳಂ ಕೊಲ್ವರುಂ ಬೇಂಟೆಯಾಡುವರುಂ ರಾಗದ್ವೇಷಲೋಭಂ ಕಾರಣಮಾಗಿ ಪುಸಿ ನುಡಿದು ಜೀವಂಗಳ್ಗೆ ಸಂತಾಪಮಂ ವಧೆಯುಮಂ ಮಾಡಿಸುವರುಮಾಱಡಿಗೊಳ್ವರುಂ ಕಳ್ವೊರುಂ ಪೆಱರ ಪೆಂಡಿರೊಳ್ ಮಱೆವಾೞ್ವರುಮಪರಿಮಿತ ಪರಿಗ್ರಹಮಂ ನೆರಪುವರುಂ ಮತ್ತಂ ಮಧುಮದ್ಯ ಮಾಂಸಂಗಳುಮಯ್ದು ಪಾಲ್ಮರದ ಪಣ್ಗಳುಮಾಳಂಬೆಯುಂ ಸಣಂಬಿನ ಪೂವುಮೆಂದಿವಂ ಸೇವಿಸುವರುಂ ಮತ್ತಮಮೋಘಮಪೇಯ

ಮತ್ತೊಬ್ಬರಿಗಾಗದಂತೆ ನೋಡಿಕೊಳ್ಳಿ* ಎಂದು ತೋರಿಸಿದನು. ಅವರು ತಮ್ಮ ತಮ್ಮ ದ್ರವ್ಯವೆಲ್ಲವನ್ನೂ ಪರೀಕ್ಷಿಸಿ ನೋಡಿ ತೆಗೆದುಕೊಂಡರು. ಆಮೇಲೆ ವಿದ್ಯುಚ್ಚೋರನು ಮಾಲೆಯನ್ನು ತೆಗೆದುಕೊಂಡು ಹೋಗಿ ರಾಜನಿಗೆ ಒಪ್ಪಿಸಿದನು. ಆಗ ರಾಜನು ವಿದ್ಯುಚ್ಚೋರನೊಡನೆ – “ನೀನು ಮಾಘಮಾಸದ ರಾತ್ರಿಯ ಶೀತದಲ್ಲಿ ನಾಲ್ಕು ಜಾವದಷ್ಟು ಹೊತ್ತು ಮೂವತ್ತೆರಡು ವಿಧವಾದ ಕಠಿನವಾದ ಶಿಕ್ಷೆಯನ್ನು ಹೇಗೆ ಸಹಿಸಿಕೊಂಡೆ?* ಎಂದು ಕೇಳಲು, ಅವನು ಅರಸನಿಗೆ ಹೀಗೆಂದನು – “ದೇವಾ, ನಾನು ಚಿಕ್ಕವನಾಗಿದ್ದಾಗ ನನಗೆ ಉಪಾಧ್ಯಾಯರೂ ನಾನೂ ಸಹಸ್ರಕೂಟ ಜಿನಾಲಯಕ್ಕೆ ಹೋಗಿದ್ದೆವು. ನನ್ನ ಉಪಾಧ್ಯಾಯರು ದೇವರನ್ನು ನಮಸ್ಕರಿಸುತ್ತಿದ್ದಾಗ ಪುರಾಣಗಳನ್ನೂ ವೈಖ್ಯಾನಮಾಡುತ್ತಿದ್ದ ಶಿವಗುಪ್ತರೆಂಭ ಆಚಾರ್ಯರ ಬಳಿಯಲ್ಲಿ ನಾನು ಕುಳಿತು ವ್ಯಾಖ್ಯಾನವನ್ನು ಕೇಳುತ್ತಿದ್ದೇನು. ಆ ಸಂದರ್ಭದಲ್ಲಿ ಆ ಋಷಿಗಳು ನರಕದ ವಿಶೇಷ ವರ್ಣನೆಯನ್ನು ಈ ರೀತಿಯಾಗಿ ಹೇಳುವುದನ್ನು ಕೇಳಿದೆನು – “ವ್ರತ – ಶೀಲ – ಚಾರಿತ್ರ್ಯ – ಗುಣಗಳಿಲ್ಲದವರೂ ಪ್ರಾಣಿವಧೆಯನ್ನು ಮಾಡುವವರೂ ಬೇಟೆಯಾಡುವವರೂ ಒಲವು ಹಗೆತನ – ಜಿಪುಣತನಗಳೇ ಕಾರಣವಾಗಿ ಸುಳ್ಳು ಹೇಳಿ ಜೀವಿಗಳಿಗೆ ದುಃಖವನ್ನುಂಟು ಮಾಡುವವರೂ ಹತ್ಯೆಮಾಡುವವರೂ ಹಿಂಸೆಮಾಡುವವರೂ ಕಳವು ಮಾಡುವವರೂ ಪರಸ್ತ್ರೀಯರಲ್ಲಿ ಜಾರತ್ವದಿಂದ ರಹಸ್ಯವಾಗಿ ಬಾಳುವವರೂ ಮಿತಿಯಿಲ್ಲದೆ ವಸ್ತುಸಂಗ್ರಹವನ್ನು ಕೂಡಿಡುವವರೂ ಅದಲ್ಲದೆ, ಸಾರಾಯಿ – ಹೆಂಡ – ಮಾಂಸಗಳನ್ನು, ಆಲ – ಆಶ್ವತ್ಥ – ಅತ್ತಿ – ಇಪ್ಪೆ – ಗೋಳಿ ಎಂಬ ಐದು ಬಗೆಯ ಹಾಲು ಮರಗಳ ಹಣ್ಣುಗಳನ್ನು, ಅಣಬೆಯನ್ನು, ಸಣಬಿನ ಹೂವನ್ನು ಸೇವನೆ ಮಾಡುವವರೂ ಇವೂ ಅಲ್ಲದೆ ಕುಡಿಯಬಾರದುದನ್ನು ಕುಡಿಯುವುದು, ತಿನ್ನುಬಾರದುದನ್ನು ತಿನ್ನುವುದು ಎಂಬಿವನ್ನು

ಪೇಯಮಭಕ್ಷ್ಯ ಭಕ್ಷಮೆಂದಿವಱೊಳ್ ನೆಗೞ್ವರುಂ ಪಂಚಮಹಾಪಾತಕಂಗಳಂ ಗೆಯ್ದೊರುಮಿವರೆಲ್ಲಂ ನಿವೃತ್ತಿಪರಿಣಾಮಮಿಲ್ಲದೆ ಕಾಲಂಗೆಯ್ದೇೞುಂ ನರಕಂಗಳೊಳ್ ಪುಟ್ಟಿ ದುಃಖಂಗಳನೆಯ್ದುವರ್

ಗಾಹೆ || ಅಚ್ಛಿಣಿಮೀಳಣ ಮೆತ್ತಂ ಣತ್ಥಿಸುಹಂ ದುಖ್ಖಮೇವ ಅನುಬದ್ಧಂ
ಣಿರಯೇ ಣಿರಯಿಯಾಣಂ ಅಹಣ್ಣಿಸಂ ಪಚ್ಚಮಾಣಾಣಂ ||

ವೃ || ಕರಜನಿವೇಶಿತ ತೀಕ್ಷ್ಣಶಲಾಕಾಃ
ಕ್ರಕಚ ವಿಪಾಟತ ಭಿನ್ನ ಶರೀರಾಃ
ನರಕ ಭವೇ ವಿರಸಾ ವಿಷಹಂತೇ
ಚಿರಮಪಿ ತತ್ಕ್ಷಣ ದುಃಖವಿಷಾದಂ ||
ಮತ್ತಂ

ಕಂದ || ಇಱಕಿಱದನೊದಱ ಕೈರಂ
ದಱ ಮುಱ ನಿಟ್ಟೆಲ್ವನರಿದು ನೆಱನೆಡೆಗಳ್ ಬಾ
ಯ್ದೆಱೆಯೆ ಪೊಸವುಣ್ಗಳೊಳ್ ಪೊಯ್
ಮಱುಗುವಿನಂ ಲೋಹವಾರಿಯಂ ಮಱುಗುವಿನಂ ||
ಕಡಿ ಕಟಿವಮನುಡಿ ಕೊಡೆಯಂ
ನಡನಡನಡುಗುವಿನಮಡಸಿ ತಡೆಯದೆ ಖಳನಂ
ಪಿಡಿದುಡಿಯೆ ಕಟ್ಟು ಮಿಡ ಮಿಡ
ಮಿಡುಕುವಿನಂ ಬಡಿಯೊಳೊಡೆಯೆ ಪೊಡೆ ಪೆಡತಲೆಯಂ |

ಮಾಡುವವರೂ ಬ್ರಹ್ಮಹತ್ಯೆ, ಸುರಾಪಾನ, ಸ್ತೇಯ, ಗುರುಪತ್ನೀ ಗಮನ, ಮತ್ತು ಈ ಪಾಪಗಳನ್ನು ಮಾಡಿದವರ ಒಡನಾಟ – ಎಂಬ ಪಂಚ ಮಹಾಪಾತಕಗಳನ್ನು ಮಾಡಿದವರೂ – ಇವರೆಲ್ಲರೂ ಹಿಂದಿರುಗುವ ಅವಕಾಶವೇ ಇಲ್ಲದೆ ಸತ್ತು, ಏಳು ನರಕಗಳಲ್ಲಿ ಹುಟ್ಟಿ ದುಃಖಗಳನ್ನು ಹೊಂದುವರು. (ನರಕದಲ್ಲಿ ಹಗಲೂ ರಾತ್ರಿಯೂ ಬೇಯಿಸಲ್ಪಡುತ್ತಿರುವ ನರಕದಜೀವಿಗಳಿಗೆ ಕಣ್ಣರೆಪ್ಪೆ ಹೊಡೆಯುವಷ್ಟು ಕಾಲ ಕೂಡ ಸುಖವಿಲ್ಲ. ಅವರಿಗೆ ಕಟ್ಟಿಟ್ಟದ್ದು ದುಃಖವೋಂದೇ.) ನರಕದಲ್ಲಿ ಹುಟ್ಟಿಬಂದವರ ಉಗುರಗಳಲ್ಲಿ ಹರಿತವಾದ ಸಲಾಕೆಗಳನ್ನು ಹೊಗಿಸುತ್ತಾರೆ. ಶರೀರವನ್ನು ಕತ್ತರಿಸಿ ಗರಗಸದಿಂದ ಸೀಳುತ್ತಾರೆ. ನಾರಕಿಗಳು ಸಂತೋಷವಿಲ್ಲದವರು. ಒಡನೆಯೇ ಉಂಟಾದ ದುಃಖೋದ್ವೇಗಗಳನ್ನು ಬಹುಕಾಲ ಅನುಭವಿಸುತ್ತಾರೆ. ಅದಲ್ಲದೆ, ತಿವಿದು ಕೆರೆದು ಒದರಿ ಕಾಜಿನಂತೆ ಚೂರುಚೂರು ಮಾಡಿ, ಮುರಿದು, ನೀಳವಾದ ಮೂಳೆಗಳನ್ನು ತುಂಡು ಮಾಡಿ ಮರ್ಮಸ್ಥಳಗಳು ಬಾಯಿ ತೆರೆಯುವಂತೆ ಹೊಸಹುಣ್ಣುಗಳ ಮೇಲೆ ಹೊಯಿ ಎನ್ನುತ್ತ ನರಕದಲ್ಲಿ ಶಿಕ್ಷಿಸುತ್ತಾರೆ. ‘ಸೊಂಟವನ್ನು ಕತ್ತರಿಸು. ತೊಡೆಯನ್ನು ಮುರಿ. ಗಡಗಡ ನಡುಗುವಂತೆ ಮೇಲೆ ಬಿದ್ದು ತಡಮಾಡದೆ ಪಾಪಿಯನ್ನು ಹಿಡಿದು ಮುರಿಯುವ ಹಾಗೆ ತಟ್ಟು. ವಿಲಿವಿಲಿ ಒದ್ದಾಡಲು ಹೆಡತಲೆ ಒಡೆಯುವಂತೆ ದೊಣ್ಣೆಯಲ್ಲಿ ಬಡಿ’ ಎನ್ನುತ್ತಾರೆ. ‘ಬಡಿ, ಕೊಲ್ಲು, ಕಟ್ಟು, ತಿವಿ, ಮುರಿ, ಕಡಿ, ಸೊಂಟ, ಕತ್ತರಿಸು, ಕುತ್ತಿ ಕರುಳನ್ನು ಹೊರ ತೆಗೆ, ಮುಖಕ್ಕೆ ಬೆಂಕಿ ಹಾಕು, ಹಿಡಿ, ಹೊಡೆ, ನೇರವಾಗಿ ತಿವಿ, ಬಯ್ಯು, ಉತ್ಸಾಹದಿಂದ

ಬಡಿ ಕೊಲ್ ಕಟ್ಟಿಱ ಮುಱ ಕಡಿ
ನಡುವಂ ಕೊಱೆ ಕುತ್ತಿಕರುಳ್ಗಳಂ ತೆಗೆ ಮೊಗಮಂ
ಸುಡು ಪಿಡಿ ಬಡಿ ನಿಮಿರ್ದಿಱ ಬಯ್
ಕಡಂಗಿ ನುಂಗೆಂದು ಮುಸುಱ ನಾರಕರಾಗಳ್ ||

ಮತ್ತಂ ಕೊಂತಂಗಳಿಂದಮಿಟ್ಟಗಳಿಂದಂ ಕುತ್ತಿಸಿಱಂದಂ ಕರುಳ್ಮಾಲೆಗಳ್ ನೆಲದೊಳ್ ಸುರಿಯೆ ಕುತ್ತುವುದುಂ ಮುಟ್ಟಗೆಗಳೊಳಿಟ್ಟು ತೆಗಪುವುದುಂ ಕರಗಸಂಗಳಿಂದಂ ಮರನಂ ಪೋೞ್ವಂತೆ ಕೆಯ್ಯಂ ಕಾಲನಗಲ್ಚಿ ಪಿಡಿದಡಸಿ ಕಟ್ಟಿಯುದ್ದಂಬಿಡಿದು ಪೋೞ್ವುದುಮಿಂತಿವು ಮೊದಲಾಗೊಡೆಯ ದುಃಖಂಗಳಂ ಕಣ್ಣಿಮೆಯಿಕ್ಕುವನಿತು ಪೊೞ್ತಪ್ಪೊಡಮುಸಿರ್ ಪತ್ತಿಲ್ಲದುತ್ಕೃಷ್ಟದಿಂದಮೇೞನೆಯ ನರಕದೊಳ್ ಮೂವತ್ತುಮೂಱು ಸಾಗರೋಪಮಕಾಲಂಬರೆಗಂ ದುಃಖಂಗಳನೆಯ್ದುವರ್ ಮತ್ತಂ ದಾನ ಪೂಜೆ ಶೀಲೋಪವಾಸಮೆಂದಿಂತು ಚತುರ್ವಿಧಮಪ್ಪ ಶ್ರಾವಕಧರ್ಮದೊಳ್ ನೆಗೞ್ವವರುಂ ತಪಂಗೆಯ್ವರುಂ ಸ್ವರ್ಗಾಪವರ್ಗ ಸುಖಂಗಳನೆಯ್ದುವರೆಂದಿಂತು ಪೇೞೆ ಕೇಳ್ದು ಭಟಾರರ ಪಕ್ಕದೆ ಅನಣುವ್ರತ ಗುಣವ್ರತ ಶಿಕ್ಷಾವ್ರತಮೆಂದಿಂತು ದ್ವಾದಶವಿಧಮಪ್ಪ ಶ್ರಾವಕಧರ್ಮಮುಮನರ್ಹಂತ ಪರಮದೇವರೆ ದೇವರ್ ಕೊಲ್ಲದುದೆ ಧರ್ಮಂ ಬಾಹ್ಯಾಭ್ಯಂತರ ಪರಿಗ್ರಹಮಿಲ್ಲದುದೆ ತಪಮರ್ಹಂತ ಪರಮ ದೇವರಾಗಮದೊಳ್ ಪೇೞೆಪಟ್ಟ ಜೀವಾಜೀವ ಪುಣ್ಯಪಾಪಾಸ್ರವ ಸಂವರ ನಿರ್ಜರ ಬಂಧ

ನುಂಗಿಬಿಡು’ – ಎಂದು ನರಕದವರು ಮುತ್ತಿಕೊಳ್ಳುತ್ತಾರೆ. ಅದಲ್ಲದೆ, ಒನಕೆಗಳಿಂದ ಈಟಿಗಳಿಂದ ಚುಚ್ಚುವ ಕೋಡುಗಳಿಂದ ಕರುಳಿನ ಮಾಲೆಗಳು ನೆಲದಲ್ಲಿ ಸುರಿಯುವಂತೆ ಕುತ್ತುವುದು, ಸೌದೆಗಳಿಂದ ಹೊಡೆದು ಎಳೆಯುವುದು ಕರಗಸಗಳಿಂದ ಮರವನ್ನು ಸೀಳುವಂತೆ ಕೈಯನ್ನೂ ಕಾಲನ್ನೂ ಅಗಲಿಸಿ ಹಿಡಿದು ಬಿಗಿಚಿiiಗಿ ಕಟ್ಟಿ ಉದ್ದಕ್ಕೆ ಹಿಡಿದು ಸೀಳುವುದು – ಇಂತು ಇವೇ ಮೊದಲಾಗಿ ಉಳ್ಳ ದುಃಖಗಳನ್ನು ಕಣ್ಣರೆಪ್ಪೆ ಮುಚ್ಚಿ ತೆರೆಯುವಷ್ಟು ಹೊತ್ತು ಕೂಡ ದುಃಖವಿಲ್ಲದ ಉಸಿರು ಬಿಡಲು ಅವಕಾಶವಿಲ್ಲದಿರುವ ಅತ್ಯಂತ ಕಠಿಣಕರವಾದ ಏಳನೆಯ ನರಕದಲ್ಲಿ ಮೂವತ್ತಮೂರು ಸಾಗರ ಸಮಾನವಾದ ಕಾಲದವರೆಗೆ ನಾರಕಿಗಳು ದುಃಖವನ್ನು ಅನುಭವಿಸುವರು. ಮತ್ತೇನೆಂದರೆ, ದಾನ – ಪೂಜೆ – ಶೀಲ – ಉಪವಾಸ ಎಂದು ಈ ರೀತಿ ನಾಲ್ಕು ವಿಧವಾಗಿರುವ ಶ್ರಾವಕಧರ್ಮದಲ್ಲಿ ವರ್ತಿಸುವವರೂ ತಪವನ್ನು ಆಚರಿಸುವವರು ಸ್ವರ್ಗ – ಮೋಕ್ಷಗಳ ಸುಖಕ್ಕೆ ಭಾಗಿಗಳಾಗುವರು ಎಂದು ಈ ರೀತಿಯಾಗಿ ಶಿವ ಗುಪ್ತಾಚಾರ್ಯರು ಹೇಳುತ್ತಿದ್ದರು. ಅದನ್ನು ನಾನು ಕೇಳಿ ಋಷಿಗಳ ಬಳಿಯಲ್ಲಿ ಅನುವ್ರತ (ಅಹಿಂಸೆ, ಸತ್ಯ, ಆಚೌರ್ಯ, ಬ್ರಹ್ಮಚರ್ಯ, ಆಪರಿಗ್ರಹ) ಗುಣವ್ರತ(ದಿಗ್ವ್ರತ, ದೇಶವ್ರತ, ಅನರ್ಥದಂಡವ್ರತ), ಶಿಕ್ಷಾವ್ರತ (ಸಾಮಾಯಿಕವ್ರತ ಪ್ರೋಷಧೋಪವಾಸವ್ರತ, ಭೋಗ ಪರಿಭೋಗ ಪರಮಾಣುವ್ರತ, ಅತಿಥಿಸಂವಿಭಾಗವ್ರತ) – ಎಂಬೀ ಹನ್ನೆರಡು ಬಗೆಯ ಶ್ರಾವಕ ಧರ್ಮವನ್ನೂ ಜಿನೇಶ್ವರನೇ ದೇವರು, ಕೊಲ್ಲದಿರುವುದೇ (ಅಹಿಂಸೆಯೆ) ಧರ್ಮ, ಹತ್ತು ಬಗೆಯ ಬಾಹ್ಯ ಪರಿಗ್ರಹವೂ ಹತ್ತು ಬಗೆಯ ಅಂತರಂಗ ಪರಿಗ್ರಹವೂ ಇಲ್ಲದಿರುವುದೇ ತಪಸ್ಸು, ಜೈನಧರ್ಮ ಶಾಸ್ತ್ರದಲ್ಲಿ ಹೇಳಿರುವ ಜೀವ – ಅಜೀವ – ಪುಣ್ಯ – ಪಾಪ – ಅಸ್ರವ – ಸಂವರ – ನಿರ್ಜರ – ಬಂಧ – ಮೋಕ್ಷ

ಮೋಕ್ಷಮೆಂದಿಂತು ನವಪದಾರ್ಥಂಗಳುಮಂ ಪಂಚಾಸ್ತಿಕಾಯಂಗಳುಮಂ ಷಡ್ದ್ರವ್ಯಂಗಳುಮಂ ನಂಬುವುದು ಸಮ್ಯಕ್ತ್ವಮೆಂಬುದಕ್ಕುಮಾ ಸಮ್ಯಕ್ತ್ವದತಿಚಾರಂಗಳ್ ಶಂಕಾದ್ಯಷ್ಟಮಳಂಗಳುಮೆಂಟು ಮದಂಗಳುಂ ಮೂಱುಮೂಢಮುಮಾಱನಾಯತನ ಸೇವೆಗಳುಮೆಂದಿಂತಿರ್ಪ್ಪತ್ತಯ್ದಕ್ಕುಮವಂ ಪಿಂಗಿಸಿ ನಿಶ್ಯಂಕಾದ್ಯಷ್ಟಗುಣಂಗಳಿಂ ಕೂಡಿದ ಶುದ್ಧಮಪ್ಪ ಸಮ್ಯಕ್ತ್ವಪೂರ್ವಕಂ ವ್ರತಂಗಳನೇಱಸಿಕೊಂಡು ಮತ್ತೆ ನರಕಂಗಳ ದುಃಖಂಗಳಂ ಕೇಳ್ವವಱ ಶತಸಹಸ್ರಭಾಗಕ್ಕಪ್ಪೊಡಮೀ ದುಃಖಮಿಲ್ಲೆಂದು ಮನದೊಳ್ ಬಗೆದು ಮೂವತ್ತೆರಡುಂ ದಂಡಣಿಗಳಂ ಸೈರಿಸಿದೆನೆಂದೊಡರಸಂ ಕೇಳ್ದು ನಿನಗೊಸೆದೆಂ ಬೇಡಿಕೊಳ್ ನಿನ್ನ ಬೇಡಿದುದೆಲ್ಲಮಂ ಕುಡುವೆನೆಂದೊಡೆ ಪೆಱತೇನುಮನೊಲ್ಲೆನೆನ್ನ ಕೆಳೆಯನಪ್ಪ ಯಮದಂಡಂಗೆ ಕ್ಷಮಿಯಿಸುವುದನೆ ಬೇಡಿದೆನೆಂದೊಡರಸನಿಂತೆಂದು ಬೆಸಗೊಂಡಂ ಯಮದಂಡಂ ನಿನಗೆಂತು ಕೆಳೆಯನಾದಂ ಮತ್ತೆ ನೀಂ ಶ್ರಾವಕವ್ರತಂಗಳಂ ಕೈಕೊಂಡೆಯಪ್ಪೊಡೇಕೆ ಕಳ್ವೆಯೆಂದು ಬೆಸಗೊಂಡೊಡಾತನಿಂತೆಂದು ಯಮದಂಡನೆನಗೆ ಕೆಳೆಯನಪ್ಪುದುಮಂ ನಿಮ್ಮ ಪೊೞಲ ಕಸವರಮಂ ಕಳ್ದುದರ್ಕೆ ಕಾರಣಮುಮಂ ಪೇೞ್ವೆಂ ಕೇಳರಸಾ ಎಂದು ವಿದ್ಯುಚ್ಚೋರನಿಂತೆಂದು ಪೇೞಲ್ತೊಡಂಗಿದಂ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ತಿಲಕಮನೆ ಪೋಲ್ವುದು ದಕ್ಷಿಣಾಪಥದೊಳಾಭೀರಮೆಂಬುದು ನಾಡಲ್ಲಿ ವರ್ಣೆಯೆಂಬ ತೊಱೆಯಾ ತಡಿಯೊಳ್ ವೇಣಾತಟಮೆಂಬುದು ಪೊೞಲದು ಪೊೞಲಗುಣಂಗಳಿನಾದಮಾನುಂ ರಮ್ಯಮಪ್ಪುದು ಸ್ವರ್ಗಮನೆ ಪೋಲ್ವುದದನಾಳ್ವೊಂ

ಎಂಬೀ ಒಂಬತ್ತು ಪದಾರ್ಥಗಳನ್ನೂ ಪಂಚಾಸ್ತಿಕಾಯಗಳನ್ನೂ ಆರು ಬಗೆಯ ದ್ರವ್ಯಗಳನ್ನೂ ನಂಬುವುದು ಸಮ್ಯಕ್ತ್ವವೆನಿಸುವುದು. ಆ ಸಮ್ಯಕ್ತ್ವದ ಉಲ್ಲಂಘನೆಯ ವರ್ತನೆಗಳು – ಶಂಕೆ ಮೊದಲಾದ ಎಂಟು ಮಲಗಳು, ಎಂಟು ಮದಗಳು, ಮೂರು ಮೂಢಗಳು, ಆರು ಅನಾಯತನ ಸೇವೆಗಳು – ಎಂಬೀ ಇಪ್ಪತ್ತೈದಾಗಿವೆ. ಅವನ್ನೆಲ್ಲ ಹಿಂಗಿಸಿ ನಿಶ್ಯಂಕೆ ಮೊದಲಾದ ಎಂಟು ಗುಣಗಳಿಂದ ಕೂಡಿದ ಶುದ್ಧವಾದ ಸಮ್ಯಕ್ತ್ವದೊಡನೆ ವ್ರತಗಳನ್ನು ಸ್ವೀಕರಿಸಿ, ನರಕಗಳ ದುಃಖಗಳನ್ನು ಕೇಳಿ ಅವುಗಳ ಲಕ್ಷದಲ್ಲಿ ಒಂದು ಭಾಗದಷ್ಟು ಕೂಡ ದುಃಖವೂ ಇಲ್ಲವೆಂದು ಮನಸ್ಸಿನಲ್ಲಿ ಭಾವಿಸಿ ಮೂವತ್ತೆರಡು ಶಿಕ್ಷೆಗಳನ್ನು ನಾನು ಸಹಿಸಿದೆನು* ಎಂದು ವಿದ್ಯುಚ್ಚೋರನು ಹೇಳಿದನು. ಅದನ್ನು ಕೇಳಿ ರಾಜನು ” ನಿನಗೆ ನಾನು ಒಲಿದಿದ್ದೇನೆ. ಬೇಡಿಕೋ ; ನೀನು ಬೇಡಿದುದೆಲ್ಲವನ್ನೂ ಕೊಡುವೆನು” ಎಂದು ಹೇಳಿದನು. ” ನನಗೆ ಬೇರೆ