Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದ್ವಾನ್ ಎಂ.ಜಿ. ವೆಂಕಟರಾಘವನ್

ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಅಪ್ರತಿಮೆ ಪ್ರತಿಭೆ ಪ್ರದರ್ಶಿಸುತ್ತಿರುವ ಶ್ರೇಷ್ಠ ಗಾಯಕರು ವಿದ್ವಾನ್ ಎಂ. ಜಿ. ವೆಂಕಟರಾಘವನ್ ಅವರು.
ತಾಯಿ, ಸಂಗೀತ ವಿದುಷಿ ಶ್ರೀಮತಿ ಸಾವಿತ್ರಮ್ಮನವರಿಂದ ಸತತ ೧೫ ವರ್ಷಗಳ ಸಂಗೀತ ಶಿಕ್ಷಣ ಪಡೆದ ಶ್ರೀ ವೆಂಕಟರಾಘವನ್ ಅವರು ತಮ್ಮ ೧೧ನೇ ವಯಸ್ಸಿನಲ್ಲೇ ಕರ್ನಾಟಕ ಸಂಗೀತದ ೭೨ ಮೇಳ ರಾಗಗಳನ್ನು ನಿರರ್ಗಳವಾಗಿ ಹಾಡುತ್ತಿದ್ದ ಅದ್ವಿತೀಯ ಪ್ರತಿಭಾವಂತರು. ಮೇರು ಗಾಯಕ ಡಾ|| ಬಾಲ ಮುರಳಿ ಕೃಷ್ಣರವರಲ್ಲಿ ೬ ವರ್ಷಗಳ ಕಾಲ ಉನ್ನತ ಸಂಗೀತಾಭ್ಯಾಸ. ಬಿ.ಎಸ್‌ಸಿ ಹಾಗೂ ಎಂಜನಿಯರಿಂಗ್ ಪದವೀಧರರು.
ವಿಶ್ವಮಾನವ ಬಸವಣ್ಣ, ಮಹಾತ್ಮ ಏಸು, ಅಭಿಜ್ಞಾನ ಶಾಕುಂತಲ ಮೊದಲಾದ ರಾಷ್ಟ್ರೀಯ ಮಟ್ಟದ ಬ್ಯಾಲೆಗಳಿಗೆ ಸಂಗೀತ ನಿರ್ದೇಶನ ನೀಡಿದ ಹೆಮ್ಮೆ ಇವರದು.
ಕರ್ನಾಟಕದ ಸುಪ್ರಸಿದ್ಧ ‘ಪ್ರಭಾತ್ ಕಲಾವಿದರು’ ಸಂಸ್ಥೆಯ ಅನೇಕ ನೃತ್ಯರೂಪಕಗಳಿಗೆ ಹಿನ್ನೆಲೆ ಗಾಯನ, ವಚನಸಾಹಿತ್ಯ, ದಾಸಸಾಹಿತ್ಯ, ಡಾ| ಡಿವಿಜಿ ಹಾಗೂ ಅನ್ನಮಾಚಾರ್ಯರ ಕೃತಿಗಳಿಗೆ ರಾಗ ಸಂಯೋಜಿಸಿ, ಹಾಡಿದ್ದು ಸಂಗೀತ ಕ್ಷೇತ್ರಕ್ಕೆ ನೀಡಿದ ಅನನ್ಯ ಕಾಣಿಕೆ, ಡಿವಿಜಿಯವರ ‘ಅನ್ತಃಪುರ ಗೀತೆ’ಯನ್ನು ಧಾರಾವಾಹಿಯಾಗಿ ನಿರ್ಮಿಸಿ, ನಿರ್ದೇಶಿಸಿ ಬೆಂಗಳೂರು ದೂರ ದರ್ಶನದ ಮೂಲಕ ಪ್ರಸಾರ ಮಾಡಿ ಅಪಾರ ಖ್ಯಾತಿಗಳಿಸಿದರು.
ಹಂಸಿಕಾ, ಬೃಹತಿ, ಪ್ರಣಯರಾಗಿಣಿ, ಕನ್ನಡ ಹಂಸ, ಮಧುರಕನ್ನಡ ಮೊದಲಾದ ೩೦ ಹೊಸ ರಾಗಗಳನ್ನು ಸೃಷ್ಟಿಸಿ ಪ್ರಚುರ ಪಡಿಸಿದ ಹಿರಿಮೆಗೆ ಪಾತ್ರರು. ಸಂಗೀತ ಲಕ್ಷ ವಿಜ್ಞಾನ, ಸಂಗೀತ ವೈದ್ಯಕೀಯ ಮೌಲ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಲೇಖನ ರಚನೆ, “ನಾದ ಹಂಸ ಅಕಾಡೆಮಿ ಆಫ್ ಮ್ಯೂಸಿಕ್” ಸಂಗೀತ ಶಾಲೆಯ ಮೂಲಕ ಎಳೆಯರಲ್ಲಿ ಪರಂಪರಾಗತ ಸಂಗೀತ ಕಲೆಯನ್ನು ಬೇರೂರಿ, ಚಿಗುರಿಸುತ್ತಿದ್ದಾರೆ.
ಭಾರತ ಸರ್ಕಾರದಿಂದ ಸೀನಿಯರ್ ಫೆಲೊಷಿಪ್ ಗೌರವ, ಗುರುಶಿಷ್ಯ ಪರಂಪರೆ ಯೋಜನೆಯಲ್ಲಿ ಸಂಗೀತ ಗುರುವಾಗಿ ನೇಮಕ, ಬೆಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಮೊದಲಾದ ಗೌರವಗಳು ಇವರ ಪಾಲಾಗಿವೆ.
ಸಂಗೀತಕ್ಕಾಗಿ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡ ವೃತ್ತಿಶೀಲ ಕಲೋಪಾಸಕ ವಿದ್ವಾನ್ ಎಂ.ಜಿ. ವೆಂಕಟರಾಘವನ್
ಅವರು.