ಇವರು ಕನ್ನಡದ ಪ್ರತಿಭಾವಂತ ಕವಿ. ಪಂಡಿತರಾಗಿದ್ದರು ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲಿ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ದಿ, ಪ್ರಸಿದ್ದಿಗಳನ್ನು ಪಡೆದರು. ಇವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ತಮ್ಮ ಹಲವು ಸಾಧನೆ, ಸಿದ್ದಿಗಳಿಂದ ಕನ್ನಡಕ್ಕೆ ಅಂತರರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ, ತಂದುಕೊಟ್ಟ ಇವರು ೧೯೦೯ ರಲ್ಲಿ ಆಗಸ್ಟ್ ೧೦ ರಂದು ಧಾರವಾಡ ಜಿಲ್ಲೆಯ ಸವಣೂರು ಎಂಬ ಊರಿನಲ್ಲಿ ಜನಿಸಿದರು.

ವಿನಾಯಕರ ವಿದ್ಯಾಭ್ಯಾಸ ಸವಣೂರು, ಧಾರವಾಡಗಳಲ್ಲಿ ನಡೆಯಿತು ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸುಮಾಡಿದ ಗೋಕಾಕರು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.

ಇವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಆಕ್ಸ್‌ಫರ್ಡ್‌ವಿಶ್ವ ವಿದ್ಯಾಲಯಕ್ಕೆ ಹೋಗಿ ಅಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಓದಿದರು. ಆಕ್ಸ್‌ಫರ್ಡ್ ನಲ್ಲಿ ಇಂಗ್ಲಿಷ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯ ಭಾರಿಯಾಗಿ ಹೋಗಿ ಬಂದರು. ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ.ಗೋಕಾಕ್ ರ ಬರಹ ತುಂಬ ವಿಫುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ೩೦ ಕ್ಕೂ ಹೆಚ್ಚಿದೆ. ಅವರ ಮೊದಲ ಪ್ರಕಟಿತ ಕೃತಿ ಕಲೋಪಾಸಕರು. ಇವರು ಇಂಗ್ಲೆಂಡ್ ಗೆ ಸಮುದ್ರ ಮೂಲಕ ಹೋಗಿ ಬಂದ ಅನುಭವಗಳ ಆಧರಿಸಿ ರಚಿಸಿದ ‘ಸಮುದ್ರ ಗೀತೆಗಳು, ಒಂದು ಕವನ ಸಂಕಲನ ಆಗಿದೆ. ಅವರ ಸಮುದ್ರ ಗೀತೆಗಳು ನೀರಮೇಲೆ ಕೈಗೊಂಡ ಪ್ರವಾಸಕಥನ ಆಗಿದೆ. ಇದು ಗೋಕಾಕರ ಕಾವ್ಯ ಮಾರ್ಗದಲ್ಲಿ ಮೊದಲ ವಿಶಿಷ್ಟ ಮೈಲಿಗಲ್ಲು. ಸಾಹಿತ್ಯದಲ್ಲಿಯೇ ಸಮುದ್ರವನ್ನು ಕುರಿತ ಅನುಭವ ಇಷ್ಟು ಸೊಗಸಾಗಿ, ಪ್ರಮಾಣಿಕವಾಗಿ ಬಂದದ್ದು ಇದೇ ಮೊದಲು. ಈ ವಸ್ತು ವೈವಿದ್ಯ ಅದನ್ನು ಹಿಡಿದಿರಿಸಿದ ನೂತನ ಛಂದೋ ವೈವಿದ್ಯ ನಿಜವಾಗಿಯೂ ಹೊಸ ಮಾರ್ಗ ನಿರ್ಮಾಣದ ಸಂಕೇತದಂತಿದೆ. ಇವರು ನಾಟಕ ಪ್ರಬಂಧ, ಪ್ರವಾಸ ಕಥನ, ವಿಮರ್ಶೆ, ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ ಸಮರಸವೇ ಜೀವನ, ಗೋಕಾಕ್‌ರ ಕೃತಿ ಜನನಾಯಕ, ಇವರ ಸುಪ್ರಸಿದ್ದ ನಾಟಕ ಭಾರತ ಸಿಂಧು ರಶ್ಮಿ, ಇವರು ರಚಿಸಿದ ಮಹಾಕಾವ್ಯ.

ಗೋಕಾಕರು ಸಾಹಿತ್ಯ ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ, ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಕರ್ನಾಟಕ ವಿ.ವಿ ಮತ್ತು ಕ್ಯಾಲಿಪೋರ್ನಿಯಾದ ಫೆಸಿಪಿಕ್‌ವಿ.ವಿ.ಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲಬಾರಿಗೆ ಸಂದಗೌರವಗಳಾಗಿವೆ. ಅವರ ಮೇರು ಕೃತಿ ‘ಭಾರತ ಸಿಂಧು ರಶ್ಮಿ, ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಇವರ ‘ದ್ಯಾವಪೃಥ್ವಿ, ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಬಿಸಿದೆ.

ಇವರು ತಮ್ಮ ಬರಹ ಭೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ ‘ಗೋಕಾಕ್ ವರದಿ, ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡು ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕ್ ರನ್ನು ಸದಾ ಗೌರವ ಕೃತಜ್ಞತೆಗಳಿಂದ ನೆನೆಯುತ್ತದೆ. ಗೋಕಾಕರು ೧೯೯೨ ರ ಏಪ್ರಿಲ್ ೨೮ ರಂದು ನಿಧನರಾದರು ಕನ್ನಡ ಕಾವ್ಯದಲ್ಲಿ ಹೊಸ ಹಾದಿಗಳನ್ನು ತೆರೆದು, ಹೊಸ ಆಸೆ ಭರವಸೆಗಳನ್ನು ಬೆಳೆಯಿಸಿದ ಉಜ್ವಲ ವ್ಯಕ್ತಿತ್ವ ಗೋಕಾಕರದು.