ವೃತ್ತಿಯಿಂದ ಕೆನರಾ ಬ್ಯಾಂಕ್‌ ಮ್ಯಾನೇಜರ್ ರಾಗಿ, ಪ್ರವೃತ್ತಿಯಿಂದ ಖ್ಯಾತ ಹಿಂದೂಸ್ಥಾನಿ ಗಾಯಕರೆನಿಸಿರುವ ಶ್ರೀ ವಿನಾಯಕ ತೊರವಿಯವರು ಕರ್ನಾಟಕದ ಯುವ ಸಮುದಾಯದ ಹೆಸರಾಂತ ಗಾಯಕರಲ್ಲಿ ಪ್ರಮುಖರು. ಕರ್ನಾಟಕೀ ಸಂಗೀತದ ಭದ್ರಕೋಟೆಯೆನಿಸಿರುವ ಬೆಂಗಳೂರು ಮೊಟ್ರೋ ನಗರದಲ್ಲಿ ಹಿಂದೂಸ್ಥಾನಿ ಸಂಗೀತದ ಕಂಪನ್ನು ವ್ಯಾಪಕವಾಗಿ ಹರಡುವಂತೆ ಮಾಡಿದ ಪ್ರಮುಖರಲ್ಲೊಬ್ಬರು.

ಪಂ. ವಿನಾಯಕ ತೊರವಿಯವರು ಜನಿಸಿದ್ದು ೧೯೪೮ರ ಸೆಪ್ಟೆಂಬರ್ ೪ ರಂದು ವಿಜಾಪುರ ಜಿಲ್ಲೆಯ ತೊರವಿ ಎಂಬ ಗ್ರಾಮದಲ್ಲಿ ಅವರದು ಕೀರ್ತನಕಾರರ ಮನೆತನ. ತಂದೆ ಶ್ರೀ ಮಲ್ಹಾರರಾವ್‌ ತೊರವಿಯವರು ಮುಂಬೈ ಕರ್ನಾಟಕದ ಹೆಸರಾಂತ ಕೀರ್ತನಕಾರರು. ಕೀರ್ತನ-ಸಂಗೀತದ ವಾತಾವರಣದಲ್ಲಿ ಬೆಳೆದ ವಿನಾಯಕರಿಗೆ ಬಾಲ್ಯದಲ್ಲಿಯೇ ಸಂಗೀತ ಸೆಳೆಯಿತು. ತಮ್ಮ ಹತ್ತನೇ ವಯಸ್ಸಿನಲ್ಲಿಯೇ ತಂದೆಯ ಕೀರ್ತನಕ್ಕೆ ಹಾರ್ಮೋನಿಯಂ ಸಾಥ್‌ ಮಾಡಿ ಸಂಗೀತ ಲೋಕದಲ್ಲಿ ಪಾದಾರ್ಪಣೆ ಮಾಡಿದರು.

ತಮ್ಮಣ್ಣ ಗುರವ, ನಾರಾಯಣರಾವ ಮುಜುಂದಾರ ಹಾಗೂ ನಾರಾಯಣಾಚಾರ ದಂಡಾಪುರ ಅವರಲ್ಲಿ ಸಂಗೀತ ಕಲಿತು ಮುಂದೆ ಗ್ವಾಲಿಯರ ಘರಾಣೆಯ ಹೆಸರಾಂತ ಗಾಯಕ ಪಂ.. ಗುರುರಾವ ದೇಶಪಾಂಡೆಯವರ ಶಿಷ್ಯತ್ವ ವಹಿಸಿ ಗುರುಕುಲ ಪದ್ಧತಿಯಲ್ಲಿ ಹನ್ನೆರಡು ವರ್ಷ ಹಿಂದೂಸ್ಥಾನಿ ಸಂಗೀತದ ತಾಲೀಮು ಪಡೆದು, ನಿರಂತರ ರಿಯಾಜ್‌ ಮಾಡಿದ ಪ್ರಬುದ್ಧ ಗಾಯಕರೆನಿಸಿರುವ ಪಂ. ವಿನಾಯಕ ತೊರವಿಯವರು ಬಿ.ಕಾಂ., ಹಾಗೂ ಸಂಗೀತ ಎಂ.ಎ. ಪದವೀಧರರು.

ಕೆನರಾ ಬ್ಯಾಂಕ್‌ ಉದ್ಯೋಗಿಯಾಗಿ ೧೯೭೯ರಲ್ಲಿ ಬೆಂಗಳೂರಿಗೆ ಆಗಮಿಸಿ, ಬ್ಯಾಂಕಿನ ಮ್ಯಾನೇಜರ್ ರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಸದಾ ಸಂಗೀತದ್ದೇ ಗುಂಗು. ಬೆಂಗಳೂರಿನ ಸಾರ್ಕ್ ಶೃಂಗ ಸಮ್ಮೇಳನ ಪುಣೆಯ ಸವಾಯ್‌ ಗಂಧರ್ವ ಸಂಗೀತೋತ್ಸವ, ಕುಂದಗೋಳ ಸಂಗೀತೋತ್ಸವ, ತಿರುವನಂತಪುರದಲ್ಲಿ ನಡೆದ ಸೂರ್ಯ ಹ್ಯಾಂಡ್‌ ಸ್ವಾತಿ ತಿರುನಾಳ್‌ ಸಂಗೀತೋತ್ಸವ ಮುಂತಾದ ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ತಮ್ಮ ಗಾಯನ ಕಛೇರಿ ನೀಡಿ ಸಂಗೀತ ಲೋಕದಲ್ಲಿ ಹೆಸರು ಗಳಿಸಿದ್ದಾರೆ. ಖ್ಯಾಲ ಮೊದಲ್ಗೊಂಡು, ತರಾನಾ, ಅಭಂಗ, ದಾಸ-ವಚನ ಸಂಗೀತದಲ್ಲಿ ಅವರು ತುಂಬ ನಿಷ್ಣಾತರಾಗಿದ್ದಾರೆ.

ಅವರ ಸಂಗೀತ ಸಾಧನೆಗೆ ಅನೇಕ ಪ್ರಶಸ್ತಿ ಬಂದಿವೆ. ಅಂಥವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೦), ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಿಸರ್ಚ್ ಫೆಲೋಶಿಪ್‌, ಮುಂಬೈನ ಸೂರಸಿಂಗಾರ್ ಸಂಸದ್‌ ನೀಡಿರುವ ‘ಸುರಮಣಿ’ ಪ್ರಶಸ್ತಿ, ಕರ್ನಾಟಕ ಸಂಗೀತ ರತ್ನ ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ (೧೯೯೪-೯೫) ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ.

೧೯೮೪ ರಿಂದ ಬೆಂಗಳೂರಿನಲ್ಲಿ ತಮ್ಮ ಗುರು ಪಂ. ಗುರುರಾವ ದೇಶಪಾಂಡೆ ಸಂಗೀತ ಸಭಾ ಟ್ರಸ್ಟ್‌ ವತಿಯಿಂದ ಅಹೋರಾತ್ರಿ ಸಂಗೀತ ಸಮಾರಾಧನೆ ನಡೆಸುತ್ತ ಬಂದಿದ್ದಾರೆ. ದೇಶದ ಮಹಾನ್‌ ಸಂಗೀತಗಾರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ತೊರವಿಯವರು ಹೊಸ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬ್ಯಾಂಕ್‌ ಉದ್ಯೋಗಿಗಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅನೇಕ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವ ಅವರ ಈ ಕಾರ್ಯ ಅನುಕರಣೀಯವಾಗಿದೆ.