೧೯೧೦ರ ಜುಲೈ ೧೦ ರಂದು ಬೆಳಗಿನ ಜಾವ. ಫ್ರಾನ್ಸ್ ದೇಶದ ಮಾರ್ಸೇಲ್ಸ್ ಬಂದರು ಕಟ್ಟೆಯ ಹತ್ತಿರ ಮೊರಿಯಾ ಎಂಬ ಹೆಸರಿನ ಉಗಿಹಡಗು ಲಂಗರುಹಾಕಿ ನಿಂತಿತ್ತು. ಆ ಉಗಿಹಡಗಿನಲ್ಲಿ ಯಾವುದೋ ಯಾಂತ್ರಿಕ ತೊಂದರೆ ಉಂಟಾಗಿದ್ದುದರಿಂದ ಅದನ್ನು ಸರಿಪಡಿಸುವುದರಲ್ಲಿ ಕೆಲಸಗಾರರು ಸರಿಯಾಗುವುದನ್ನು ಕಾಯುತ್ತಿದ್ದರು. ಸಮುದ್ರ ಪ್ರಶಾಂತವಾಗಿತ್ತು. ಪ್ರಯಾಣಿಕರೂ ನಿಶ್ಚಿಂತರಾಗಿದ್ದರು, ನಿರಾಳವಾಗಿದ್ದರು. ಒಬ್ಬ ತರುಣ ಪಯಣಿಗ ಮಾತ್ರ ಮನಸ್ಸಿನಲ್ಲಿಯೇ ಏನೋ ಲೆಕ್ಕ ಹಾಕುತ್ತಿದ್ದ. ಆತ ನಿಶ್ಚಿಂತನಾಗಿರುವುದು ಶಕ್ಯವಿರಲಿಲ್ಲ. ಯಾಕೆಂದರೆ ಆತ ಸೆರೆಹಿಡಿಯಲ್ಪಟ್ಟಿದ್ದ. ಆತ ಆಂಗ್ಲರ ಸೆರೆಯಾಳಾಗಿದ್ದ. ಆತನ ಮೇಲೆ ರಾಜದ್ರೋಹದ ಆಪಾದನೆ ಇತ್ತು. ಆತನನ್ನು ಕಾಯಲೆಂದು ಇಬ್ಬರು ಕಾವಲುಗಾರರು ಕಣ್ಣಲ್ಲಿ ಕಣ್ಣಿಟ್ಟು ಕಾದುಕೊಂಡಿದ್ದರು.

ಈಸಿ ಜೈಸಿದ

“ನಾನು ಶೌಚವಿಸರ್ಜನೆಗೆ ಹೋಗಬೇಕಿದೆ,” ಆ ಸೆರೆಯಾಳು ಕಾವಲುಗಾರರಿಗೆ ಹೇಳಿದ.

“ಸರಿ, ನಡೆ” ಕಾವಲುಗಾರರು ಆತನನ್ನು ಉಗಿಹಡಗಿನ ಶೌಚಾಲಯಕ್ಕೆ ಕರೆದೊಯ್ದರು. ಸೆರೆಯಾಳು ಶೌಚಾಲಯದ ಬಾಗಿಲು ಹಾಕಿಕೊಂಡ. ಬಾಗಿಲಿನ ಹೊರಗೆ ಇಬ್ಬರೂ ಕಾವಲುಗಾರರು ಎದುರ ಬದುರಾಗಿ ಕಾಯುತ್ತಿದ್ದರು. ಬಾಗಿಲಿಗೆ ಗಾಜಿನ ಕಿಟಕಿ ಇದ್ದುದರಿಂದ ಶೌಚಾಲಯ ಸೇರಿದ ಸೆರೆಯಾಳುವಿನ ಮೇಲೆ ದೃಷ್ಟಿಯಿಡಲು ಅನುಕೂಲವಿತ್ತು. ಶೌಚಾಲಯ ಸೇರಿದ ತರುಣ ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡು ಕಿಟಕಿಯ ಮೇಲೆ ತನ್ನ ಮೇಲಂಗಿಯನ್ನು ನೇತುಹಾಕಿದ. ಕಾವಲುಗಾರರ ಕಣ್‌ನೋಟಕ್ಕೆ ಹೀಗೆ ತಡೆ ಹಾಕಿದವನೇ ಆ ತರುಣ ಉಗಿ ಹಡಗಿನ ಕಿಂಡಿಯಲ್ಲಿ ತೂರಿದ. ತಳ ಸೇರಿದ, ಸಮುದ್ರಕ್ಕೆ ಹಾರಿದ. ಸಮುದ್ರದ ಅಲೆಗಳೊಡನೆ ಹೋರಾಡಿದ. ಈಸಿ ದಡ ಸೇರಿದ, ಬಂದರುಕಟ್ಟೆಯ ಗೋಡೆ ಏರಿದ. ಬಿರಬಿರನೇ ಮುಂದೆ ಓಡಿದ.

ಶೌಚಾಲಯದ ಹೊರಗೆ ನಿಂತ ಕಾವಲುಗಾರರು ಸೆರೆಯಾಳು ಇನ್ನೂ ಹೊರಗೆ ಬಂದಿಲ್ಲವಲ್ಲ ಎಂದು ಗಾಬರಿಯಾದರು. ಒಳಗೆ ಏನೋ ಗಡಿಬಿಡಿ ನಡೆದ ಸದ್ದು ಅವರಿಗೆ ಕೇಳಿತ್ತು. ಹಡಗಿನ ಮೇಲ್ಭಾಗಕ್ಕೆ ಬಂದು ನೋಡಿದರು.

ಸಮುದ್ರದ ಅಲೆಗಳೊಡನೆ ಹೋರಾಡಿದ.

ಆ ಸೆರೆಯಾಳು ಸಮುದ್ರಕ್ಕೆ ಹಾರಿದ್ದು ಕಂಡಿತು. ಕಾವಲುಗಾರರು ಕೂಗಿಕೊಂಡರು, “ಸೆರೆಯಾಳು ತಪ್ಪಿಸಿಕೊಂಡಿದ್ದಾನೆ; ಹಿಡಿಯಿರಿ, ಹಿಡಿಯಿರಿ!”

ಇಷ್ಟು ಹೊತ್ತು ನಿರಾಳವಾಗಿ ನೆಲೆನಿಂತ ಉಗಿ ಹಡಗಿನಲ್ಲಿ ಗುಲ್ಲೋ ಗುಲ್ಲು!

“ತಪ್ಪಿಸಿಕೊಂಡ ಸೆರೆಯಾಳುವಿನ ಹೆಸರು ಸಾವರ್ಕರ್!” ಯಾರೋ ಹೇಳಿದರು.

ಈ ಸಾಹಸದ ಕಥೆ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾದಾಗ ಪ್ರಪಂಚವೆಲ್ಲ ಬೆಕ್ಕಸಬೆರಗಾಯಿತು.

ಗಣೇಶ, ವಿನಾಯಕ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಗೂರು ಎಂಬುದು ಒಂದು ಚಿಕ್ಕ ಹಳ್ಳೀ. ೧೮೮೩ ನೇ ಇಸ್ವಿಯ ಮೇ ತಿಂಗಳ ೨೮ ನೇ ತಾರೀಖಿನಂದು ಭಗೂರು ಗ್ರಾಮದಲ್ಲಿಯ ದಾಮೋದರಪಂತ್ ಸಾವರ್ಕರರ ಮನೆಯಲ್ಲಿ ಒಂದು ಗಂಡುಮಗುವಿನ ಜನನವಾಯಿತು. ದಾಮೋದರ ಪಂತರಿಗೆ ಈ ಮೊದಲೇ ಗಣೇಶನೆಂಬ ಮಗನಿದ್ದ. ಗಣೇಶನ ತರುವಾಯ ಹುಟ್ಟಿದ ಈ ಮಗುವಿಗೆ ವಿನಾಯಕ ಎಂಬ ಹೆಸರನ್ನಿಟ್ಟರು.

ಗಣೇಶ, ವಿನಾಯಕ ಎರಡೂ ಒಂದೇ ದೇವರ ಹೆಸರುಗಳಷ್ಟೇ! ಸಮಾನ ಅರ್ಥದ ಹೆಸರುಗಳನ್ನು ಧರಿಸಿದ ಈ ಅಣ್ಣತಮ್ಮಂದಿರು ಮುಂದೆ ಸಮಸಮಾನವಾಗಿ ದೇಶಕಾರ್ಯದಲ್ಲಿ ತಮ್ಮ ದೇಹ ಸವೆಸಿದುದನ್ನು ಕಂಡಾಗ ಈ ನಾಮಕರಣ ಅರ್ಥಪೂರ್ಣವಾಗಿ ಹೊಮ್ಮಿದುದನ್ನು ಕಾಣುತ್ತೇವೆ.

ಮನೆಯವರು ಸಲಿಗೆಯಿಂದ ಗಣೇಶ ಮತ್ತು ವಿನಾಯಕರನ್ನು ಅನುಕ್ರಮವಾಗಿ ‘ಬಾಬಾ’ ಮತ್ತು ‘ತಾತ್ಯಾ’ ಎಂದು ಕರೆಯುತ್ತಿದ್ದರು.

ಶಿಕ್ಷಣ

ವಿನಾಯಕನ ತಾಯಿ ರಾಧಾಬಾಯಿ ತೀರಿದಾಗ ವಿನಾಯಕ ಒಂಬತ್ತು ವರ್ಷದ ಬಾಲಕ. ವಿನಾಯಕ ಮತ್ತು ಗಣೇಶ ತಮ್ಮ  ಶಿಕ್ಷಣಕ್ಕಾಗಿ ನಾಸಿಕಕ್ಕೆ ಹೋಗಿ ಇದ್ದರು. ತಂದೆ ದಾಮೋದರ ಪಂತ್ ಮತ್ತು ಚಿಕ್ಕ ಮಕ್ಕಳಾದ ಮೈನಾ ಮತ್ತು ನಾರಾಯಣ ಭಗೂರು ಹಳ್ಳಿಯಲ್ಲಿ ಉಳಿದರು.

ಭಾರತವು ಆಗ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ೧೮೯೭ನೇ ಇಸ್ವಿಯಲ್ಲಿ ಭಾರತದಾದ್ಯಂತ ವಿಕ್ಟೋರಿಯ ಮಹಾರಾಣಿಯ ಸಿಂಹಾಸನರೋಹಣದ ವಜ್ರ ಮಹೋತ್ಸವ ಆಚರಿಸುವಂತೆ ಬ್ರಿಟಿಷ್ ಸರಕಾರ ಏರ್ಪಾಡು ಮಾಡಿತ್ತು. ಅದೇ ಸಮಯಕ್ಕೆ ಮಹಾರಾಷ್ಟ್ರದಲ್ಲೆಲ್ಲ ಪ್ಲೇಗಿನ ಪಿಡುಗು ಬೇರೆ! ಜನರು ನೊಣಗಳಂತೆ ಪಟಪಟನೇ ಸಾಯುತ್ತಿದ್ದರು. ಎತ್ತ ನೋಡಿದತ್ತ ಪ್ಲೇಗಿನ ಹಾವಳಿ. ಇಂಥ ಸಂದರ್ಭದಲ್ಲಿ  ಆಳರಸಿಯ ಸಿಂಹಾಸನಾರೋಹಣದ ಉತ್ಸವ ಆಚರಿಸಬೇಕೆಂಬ ಒತ್ತಾಯವು ನೋವಿನ ಮೇಲೆ ಬರೆ ಎಳೆದಂತೆ ಆಗಿತ್ತು. ದೇಶಪ್ರೇಮಿ ತರುಣರಿಗೆ ಇಂಥ ಅಪಮಾನ ಸಹಿಸುವುದಾಗಲಿಲ್ಲ. ಚಾಪೇಕರ್ ಸಹೋದರರು ಎಂಬ ದೇಶಭಕ್ತರು ಆಳರಸರ ಈ ಧೋರಣೆಯನ್ನು ಪ್ರತಿಭಟಿಸುವುದಕ್ಕಾಗಿ ಇಬ್ಬರು ಆಂಗ್ಲ ಅಧಿಕಾರಿಗಳನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಸಹೋದರರನ್ನು ಬಂಧಿಸಿ ಆಂಗ್ಲ ಸರಕಾರ ಅವರನ್ನು ಗಲ್ಲಿಗೇರಿಸಿತು. ಚಾಪೇಕರ್ ಸಹೋದರರ ಈ ಸಾಹಸ ಮತ್ತು ಬಲಿದಾನ ಸಾವರ್ಕರ್ ಸಹೋದರರ ಮನಸ್ಸಿನ  ಮೇಲೆ ಅಚ್ಚಳಿಯದ ಪ್ರಭಾವ ಮೂಡಿಸಿದವು.

ನಾವಿದ್ದೇವೆ

ಬಾಲಕ ವಿನಾಯಕನಂತೂ ಚಾಪೇಕರ್ ಸಹೋದರರ ಸಾಹಸ ಮತ್ತು ಬಲಿದಾನದ ವೀರಕವನವನ್ನು ಬರೆದನು. ಆ ಕವನದ ಕೊನೆಯ ನುಡಿ ಹೀಗಿದೆ;

ನೀವು ಕೈಗೊಂಡ ಕಾರ್ಯ ಅರ್ಧಕ್ಕೆ ಉಳಿಯಿತು ಎಂಬ ನಿರಾಸೆ ಹೊಲ್ಲ!

ಅದನ್ನು ಮುಂದುವರಿಸಲು ನಾವಿದ್ದೇವೆ; ಇದಕ್ಕೆ ಸಂದೇಹವಿಲ್ಲ!!

ಬರಿ ಬಾಯಿಮಾತಿನ ಕವಿತೆ ಹೊಸೆದು ಸುಮ್ಮನುಳಿಯಲಿಲ್ಲ ವಿನಾಯಕ. ತಮ್ಮ ಕುಲದೇವಿಯಾಗಿದ್ದ ಅಷ್ಟಭುಜೆ ದುರ್ಗಾಮಾತೆಯ ಎದುರು ವಿನಾಯಕ ಪ್ರತಿಜ್ಞೆ ಮಾಡಿದ.

“ದೇಶಕ್ಕೆ ಸ್ವಾತಂತ್ರ್ಯ ಗಳಿಸಲೋಸುಗ ಸಶಸ್ತ್ರಕ್ರಾಂತಿಯ ಗುಡಿನೆಟ್ಟು ಪ್ರಾಣದ ಹಂಗುದೊರೆದು ಹೋರಾಡುವೆನು ನಾನು!”

ಮಿತ್ರಮೇಳ

ನಾಸಿಕದ ಶಾಲೆಯಲ್ಲಿ ಓರಗೆಯ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಗಣೇಶ ಮತ್ತು ವಿನಾಯಕರು ಮಿತ್ರ ಮೇಳ ಎಂಬ ಸಂಘಟನೆ ಮಾಡಿದ್ದರು. ಮಿತ್ರಮೇಳದ ಕಾರ್ಯಕ್ರಮಗಳೆಂದರೆ ಗರಡಿಸಾಧನೆ, ಸಾರ್ವಜನಿಕ ಗಣೇಶೋತ್ಸವ ಮತ್ತು ಶಿವಾಜಿಯ ಜಯಂತಿ. ಜೊತೆಯವರು ಹಾಡಲೆಂದು ದೇಶಭಕ್ತಿ ಪರ ಪದಗಳನ್ನು ವಿನಾಯಕನೇ ರಚಿಸುತ್ತಿದ್ದ. ಶಿವಾಜಿ, ತಾನಾಜಿ, ವಾಸುದೇವ ಬಲವಂತ ಫಡಕೆ ಮೊದಲಾದವರ ಜೀವನ ಚರಿತ್ರೆಯನ್ನು ವಿನಾಯಕ ಸ್ಪೂರ್ತಿಯುತವಾಗಿ ಹೇಳುತ್ತಿದ್ದ. ಎಳೆಯ ವಯಸ್ಸಿನವರಲ್ಲಿ ದೇಶಪ್ರೀತಿಯನ್ನು, ಸ್ವದೇಶಾಭಿಮಾನವನ್ನು ಹಬ್ಬಿಸುವ ಗರಡಿಯಾಗಿತ್ತು ಮಿತ್ರಮೇಳ.

೧೮೯೯ರಲ್ಲಿ ವಿನಾಯಕನ ತಂದೆ ದಾಮೋದರ ಪಂತರು ಪ್ಲೇಗಿಗೆ ಅಹುತಿಯಾದರು. ಹೀಗಾಗಿ ಇಡೀ ಮನೆತನದ ಭಾರ ಅಣ್ಣ ಗಣೇಶನ ಮೇಲೆ ಬಿದ್ದಿತು. ಗಣೇಶ ಭಗೂರಿನಲ್ಲಿದ್ದ ತನ್ನ ತಂಗಿ ಮತ್ತು ಇನ್ನೊಬ್ಬ ತಮ್ಮನನ್ನು ನಾಸಿಕಕ್ಕೆ ಕರೆಸಿಕೊಂಡ. ಗಣೇಶನ ಮದುವೆ ಯಶೋದೆ ಎಂಬುವವಳೊಡನೆ ಆಗಿತ್ತು. ಗಣೇಶ ಮತ್ತು ಯಶೋದೆಯರು ವಿನಾಯಕ, ಮೈನಾ ಮತ್ತು ನಾರಾಯಣರನ್ನು ಪ್ರೀತಿಯಿಂದ ಕಾಪಾಡಿದರು. ವಿನಾಯಕನಂತೂ ಯಶೋದೆ ಅತ್ತಿಗೆಯಲ್ಲಿ ಕಣ್ಮರೆಯಾದ ತನ್ನ ತಾಯಿಯನ್ನೇ ಕಂಡುಕೊಂಡ.

ವಿನಾಯಕನ ಬುದ್ಧಿ ಮತ್ತು ಶಕ್ತಿಯ ಬಗ್ಗೆ ಗಣೇಶನಿಗೆ ಬಹಳ ಹೆಮ್ಮೆ ಇತ್ತು. ಮನೆತನದ ಭಾರವನ್ನು ತಾನೋಬ್ಬನೇ ಹೊತ್ತುಕೊಂಡು ಅಣ್ಣ ಗಣೇಶ ವಿನಾಯಕರಿಗೆ ಶಿಕ್ಷಣವನ್ನು ಮುಂದುವರಿಸುವಂತೆ ಹುರಿದುಂಬಿಸಿದ.

ಅಭಿನವ ಭಾರತ

ಮಾಧ್ಯಮಿಕ ಶಾಲಾ ಶಿಕ್ಷಣದ ಬಳಿಕ ವಿನಾಯಕ ಪುಣೆಗೆ ಬಂದರು. ಅದೇ ಸಮಯಕ್ಕೆ, ವಿನಾಯಕರ ಮದುವೆ ಭಾವೂಸಾಹೇಬ್ ಚಿಪಳೂಣಕರ್ ಎಂಬುವವರ ಮಗಳೂ ಯಮುನೆಯೊಂದಿಗೆ ಆಗಿತ್ತು.

ವಿನಾಯಕರು ಪುಣೆಯ ಫರ್ಗ್ಯುಸನ್ ಮಹಾ ವಿದ್ಯಾಲಯವನ್ನು ಸೇರಿದರು. ಅವರ ಜೊತೆಗೆ ಅವರ ಮಿತ್ರಮೇಳದ ಕಲ್ಪನೆಯೂ ಮಹಾವಿದ್ಯಾಲಯವನ್ನು ಪ್ರವೇಶಿಸಿತು. ತಮ್ಮ ಯೋಜನೆಗಳನ್ನು ಸಹಪಾಠಿಗಳಿಗೆ ವಿವರಿಸಿ ವಿನಾಯಕರು ಸಹಪಾಠಿಗಳ ಸಂಘಟನೆ ಕೂಡಿಸಿದರು. ಮಹಾವಿದ್ಯಾಲಯದ ವಸತಿಗೃಹದ ಭೋಜನಶಾಲೆಯಲ್ಲಿ ಶಿವಾಜಿಯ ಚಿತ್ರವನ್ನು ವಿನಾಯಕ ಸಾವರ್ಕರ್ ಇಡಿಸಿದರು. ಪ್ರತಿದಿನ ಶಿವಾಜಿಯ ಸ್ತವನ, ವಾರವಾರಕ್ಕೆ ಸಮಾಪದಲ್ಲಿಯೇ ಇದ್ದ ಸಿಂಹಗಡದ ದರ್ಶನಯಾತ್ರೆ, ಶಿವಾಜಿಯ, ಮರಾಠರ, ವಿಜಯನಗರದ ಹಿಂದೂವೀರರ ಚರಿತೆಯ ಪಠಣ, ಪಾರಾಯಣ. ತಮ್ಮ ಈ ಸಂಘಟನೆಯ ಚಟುವಟಿಕೆಗಳಿಂದ ಹುರುಪುಗೊಂಡ ವಿನಾಯಕ ಅಣ್ಣ ಗಣೇಶರಿಗೆ ಪತ್ರ ಬರೆದರು.

“ಬಾಬಾ, ಬೇಸಿಗೆಯ ಬಿಡುವಿನಲ್ಲಿ ನಮ್ಮ ಸಂಘಟನೆಯ ಸದಸ್ಯರ ಸಮ್ಮಿಲನವನ್ನು ನಾಸಿಕದಲ್ಲಿ ಏರ್ಪಡಿಸುವ ಯೋಚನೆ ಇದೆ. ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರ್ಯದ ಮುಂದಿನ ಹೆಜ್ಜೆ ಇಡಬೇಕಾಗಿದೆ. ನಿನ್ನ ವಿಚಾರ ತಿಳಿಸು.”

ಗಣೇಶರಿಗೆ ತಮ್ಮನ ಪತ್ರ ಓದಿ ಆನಂದವಾಯಿತು. ಬೇಸಿಗೆಯ ರಜೆಯಲ್ಲಿ ನಾಸಿಕದಲ್ಲಿ ಸ್ನೇಹಿತರ ಸಮ್ಮಿಲನ ನಡೆಯಿತು. ಗಣೇಶ ಮತ್ತು ವಿನಾಯಕ ಅಂದರೆ ಬಾಬಾ ಮತ್ತು ತಾತ್ಯಾ, ಸದಸ್ಯರೊಡನೆಲ್ಲ ಚರ್ಚಿಸಿ ದೇಶ ಕಾರ್ಯಕ್ಕಾಗಿ ಏನೇನೋ ಲೆಕ್ಕ ಹಾಕಿದರು. ಏನೇನೋ ಹಂಚಿಕೆ ಹೂಡಿದರು. ಸ್ವಂತ ರಕ್ತದ ತಿಲಕವನ್ನು ಪರಸ್ಪರರ ಹಣೆಗೆ ಹಚ್ಚಿ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಕ್ರಾಂತಿಯನ್ನು ಹೂಡವ ಕಂಕಣ ತೊಟ್ಟರು. ಈ ಸಂಘಟನೆಗೆ ‘ಅಭಿನವ ಭಾರತ’ ಎಂಬ ಹೆಸರನ್ನು ಕೊಟ್ಟರು.

ವಿದೇಶಿ ವಸ್ತ್ರಗಳ ಹೋಳಿ

ಪುಣೆಗೆ ಮರಳಿ ಬಂದ ಬಳಿಕ ಅಭಿನವ ಭಾರತದ ಚಟುವಟಿಕೆಗಳು ಹರುಪಿನಿಂದ ಮುಂದುವರಿದವು. ಇದೇ ಸುಮಾರಿಗೆ ಭಾರತದಲ್ಲಿ ಸರ್ಕಾರ ಬಂಗಾಳವನ್ನು ಎರಡು ಭಾಗ ಮಾಡಿತ್ತು. ಇದರ ವಿರುದ್ಧ ಜನರ ಚಳುವಳಿ ನಡೆಯುತ್ತಿತ್ತು. ವಂಗಭಂಗದ ಪ್ರತಿಭಟನಾರ್ಥ ಒಂದು ಹೊಸ ಉಪಾಯ ಯೋಜಿಸಿದರು. ಬರೀ ಪ್ರತಿಭಟನಾ ಸಭೆ, ಮೆರವಣಿಗೆಗಿಂತ ಬೇರೆ ವಿಧದದ ಪ್ರತಿಭಟನೆಯಾಗಿತ್ತು ಅವರ ಯೋಚನೆ. ಸಾರ್ವಜನಿಕ ಸ್ಥಳದಲ್ಲಿ ಪರದೇಶದ ಬಟ್ಟೆಗಳ ಸಾಮೂಹಿಕ ದಹನ ಮಾಡುವುದೇ ಆ ಯೋಜನೆ. ಲೋಕಮಾನ್ಯ ತಿಲಕರು ಉರಿಯುತ್ತಿದ್ದ ವಿದೇಶಿ ವಸ್ತ್ರಗಳನ್ನು ನೋಡುತ್ತ ಅಂದರು. “ಹಿಂದೂಸ್ತಾನದಲ್ಲಿ ಹೊತ್ತಿದ ಪ್ರತಿಭಟನೆಯ ಈ ಕಿಡಿ ಇದೇ ಮೊದಲನೆಯದು. ಇದರ ಬೆಳಕು ಹರಡುತ್ತ ಹರಡುತ್ತ ಸ್ವಲ್ಪ ಕಾಲದಲ್ಲಿಯೇ ಇಂಗ್ಲೆಂಡ್ ದೇಶವನ್ನು ಹರಡುತ್ತದೆ.”

ಅಭಿನವ ಭಾರತದ ಈ ವಿದೇಶಿ ವಸ್ತ್ರದ ಹೋಳಿಯ ಕಾರ್ಯಕ್ರಮದಿಂದಾಗಿ ತಾತ್ಯಾರನ್ನು ಮಹಾವಿದ್ಯಾಲಯದ ವಸತಿಗೃಹದಿಂದ ಹೊರಹಾಕಲಾಯ್ತು. ಅವರು ಗೆಳೆಯನ ಮನೆಯಲ್ಲಿಯೇ ಇದ್ದುಕೊಂಡು ವ್ಯಾಸಂಗ ಮುನ್ನಡೆಸಿದರು. ಪದವಿ ಪರೀಕ್ಷೆಯಲ್ಲಿ ಉತಮ ರೀತಿಯಲ್ಲಿ ಉತ್ತೀರ್ಣರಾದರು.

ಆಂಗ್ಲಭೂಮಿಗೆ ಪಯಣ

ಪದವಿ ಪರೀಕ್ಷೆಯ ನಂತರ ತಾತ್ಯಾ ಮುಂಬಯಿಗೆ ಹೋಗಿ ಕಾನೂನು ವ್ಯಾಸಂಗ ಕೈಗೊಂಡರು. ಜೊತೆಗೆ ಪತ್ರಿಕೆಗಳಲ್ಲಿ ದೇಶಭಕ್ತಿಯ ಬಗೆಗೆ ಲೇಖನಗಳನ್ನು ಬರೆಯುತ್ತಿದ್ದರು. ಲಂಡನಿನಲ್ಲಿ ‘ಭಾರತಭವನ’ ಭಾರತೀಯ ಸ್ವಾತಂತ್ರ್ಯದ ಹೋರಾಟಕ್ಕೆ ಇಂಬುಕೊಡುವ ಸಂಸ್ಥೆಯಾಗಿತ್ತು. ಈ ಕೇಂದ್ರವು ತನ್ನ ಚಟುವಟಿಕೆಗಳಿಗಾಗಿ ಯೋಗ್ಯ ಮತ್ತು ಬುದ್ಧಿವಂತ ತರುಣರನ್ನು ಆಕರ್ಷಿಸುವುದರ ಸಲುವಾಗಿ ವಿದ್ಯಾರ್ಥಿವೇತನಗಳನ್ನು ನೀಡುತ್ತಿತ್ತು. ಈ ವಿದ್ಯಾರ್ಥಿವೇತನದ ನಿವೇದನೆ ದಿನಪತ್ರಿಕೆಯಲ್ಲಿ ಬಂದಿತ್ತು. ವಿನಾಯಕ ಸಾವರ್ಕರ್ ಆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದರು. ವಿದ್ಯಾರ್ಥಿವೇತನ ಸಾವರ್ಕರರಿಗೆ ದಕ್ಕಿತು.

ತಾತ್ಯಾ ತಮ್ಮ ಮಡದಿ ಯಮುನೆಯನ್ನು ಮಾವನ ಮನೆಯಲ್ಲಿ ಬಿಟ್ಟು ಇಂಗ್ಲೆಂಡಿಗೆ ೧೯೦೬ರಲ್ಲಿ ಪ್ರಯಾಣ ಬೆಳೆಸಿದರು.

ಮ್ಯಾಝಿನಿ

ಮ್ಯಾಝಿನಿ (೧೮೦೫-೭೨) ಸಾವರ್ಕರರ ಅತ್ಯಂತ ಹೆಮ್ಮೆಯ ಸ್ವಾತಂತ್ರ್ಯವೀರ. ಇಟಲಿ ದೇಶದ ಈ ದೇಶಭಕ್ತ ತಾತ್ಯಾರ ಆದರ್ಶ ನಾಯಕ.

ತಾತ್ಯಾ ೧೯೦೬ರ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ತಲುಪಿದರು. ತಾತ್ಯಾ ಇಂಗ್ಲೆಂಡ್ ತಲುಪುವುದೊಂದೆ ತಡ ಮ್ಯಾಝಿನಿಯ ಬಗೆಗೆ ಇದ್ದ ಪುಸ್ತಕಗಳನ್ನೆಲ್ಲ ಓದಿ ಮುಗಿಸಿದರು. ಸ್ವಾತಂತ್ರ್ಯವೀರ ಮ್ಯಾಝಿನಿಯ ಚರಿತ್ರೆಯನ್ನು ಭಾರತೀಯರಿಗಾಗಿ ಅಂದರೆ ಭಾರತೀಯರು ತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಪ್ರೇರೇಪಿಸುವಂತೆ, ಪ್ರಚೋದಿಸುವಂತೆ ಅತ್ಯಂತ ವೀರಾವೇಶಯುಕ್ತವಾದ ಭಾಷೆಯಲ್ಲಿ ಬರೆದು ಪ್ರಕಟಣೆಗಾಗಿ ಭಾರತಕ್ಕೆ ಕಳುಹಿಸಿದರು. ಲೋಕಮಾನ್ಯ ತಿಲಕರು ಆ ಪುಸ್ತಕದ ಕೈಬರಹದ ಪ್ರತಿಯನ್ನು ಓದಿದರು. ಮೂಲಚರಿತ್ರೆಯಂತೂ ಸ್ಫೂರ್ತಿಪ್ರದವಾದುದು ಹೌದೇ ಹೌದು; ಆದರೆ ತಾತ್ಯಾರ ಭಾಷೆ ಮತ್ತು ಬರವಣಿಗೆಯ ಶೈಲಿಯು ಅತ್ಯಂತ ಓಜಸ್ಸು ಮತ್ತು ತೇಜಸ್ಸುಗಳಿಂದ ಕೂಡಿ ಎಂಥ ಉತ್ತರಕುಮಾರರನ್ನೂ ಉತ್ತಮ ಸ್ವಾತಂತ್ರ್ಯ ವೀರರನ್ನಾಗಿಸುವಷ್ಟು ಮೊನಚಾಗಿತ್ತು. ತಿಲಕರೆಂದರು, “ಈ ಗ್ರಂಥ ಪ್ರಕಟವಾದರೆ ಬ್ರಿಟಿಷ್ ಸರಕಾರ ಖಂಡಿತವಾಗಿಯೂ ಅದಕ್ಕೆ ಮುಟ್ಟುಗೋಲು ಹಾಕುತ್ತದೆ.”

ತಿಲಕರು ನುಡಿದ ಭವಿಷ್ಯವು ಸತ್ಯವಾಯಿತು. ಸಾವರ್ಕರ್ ಬರೆದ ‘ಮ್ಯಾಝಿನಿ’ ಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು.

೧೮೫೭ರ ಸ್ವಾತಂತ್ರ್ಯ ಸಮರ

ಭಾರತೀಯರಲ್ಲಿ ಸ್ವಾತಂತ್ರ್ಯಕ್ಕಾಗಿ ಸಮರ ಹೂಡವ ಭಾವನೆಯ ಕಿಚ್ಚನ್ನು ಕೆರಳಿಸಲು, ಸಾವರ್ಕರರು ೧೮೫೭ನೇ ವರ್ಷದಲ್ಲಿ ಭಾರತದಲ್ಲಿ ಜರುಗಿದ ಕ್ರಾಂತಿಕಾರ್ಯದ ಸಮಗ್ರ ಇತಿಹಾಸವನ್ನು ಬರೆದರು. ಆ ಪುಸ್ತಕಕ್ಕೆ ೧೮೫೭ನೇ ಸಾಲಿನ ಮೊದಲ ಸ್ವಾತಂತ್ರ್ಯ ಸಂಗ್ರಾಮ” ಎಂದು ಹೆಸರು. ಬ್ರಿಟಿಷರು ಭಾರತೀಯರು ನಡೆಸಿದ್ದ ಆ ಸಂಗ್ರಾಮಕ್ಕೆ ‘ಸಿಪಾಯಿಗಳ ದಂಗೆ’ ಎಂಬ ಹಗುರ ಹೆಸರನ್ನಿಟ್ಟಿದ್ದರಷ್ಟೆ. ಸಾವರ್ಕರ್ ಆ ಆಂದೋಲನದ ನಿಜರೂಪ ಪ್ರಕಟಿಸಿದರು.

೧೮೫೭ನೇ ವರ್ಷದಲ್ಲಿ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಸಮರದ ಐವತ್ತನೇ ವರ್ಷದ ನೆನಪಿಗಾಗಿ ಆಂಗ್ಲ ಸಾಮ್ರಾಜ್ಯದ ರಾಜಧಾನಿಯಾದ ಲಂಡನ್ನಿನಲ್ಲಿಯೇ ಒಂದು ಕಾರ್ಯಕ್ರಮವನ್ನು ಹಾಕಿಕೊಂಡರು. ಸ್ವಾತಂತ್ರ್ಯಸಮರದ ಚಿನ್ನದ ಹಬ್ಬದ ಆಚರಣೆಯ ಬಗೆಗಿನ ತಾತ್ಯಾರ ಯೋಜನೆಗೆ ಒತ್ತಾಸೆಯಾಗಿ ನಿಂತವರು ಬ್ಯಾರಿಸ್ಟರ್ ರಾಣಾ, ಪಂಡಿತ ಶ್ಯಾಮಜಿ ಕೃಷ್ಣವರ್ಮಾ ಮತ್ತು ಮೇಡಮ್ ಕಾಮಾ. ಸ್ವಾತಂತ್ರ್ಯ ಸಮರದ ನೆನಪಿನ ಗೌರವಚಿಹ್ನವನ್ನು ಎದೆಯ ಮೇಲೆ ಧರಿಸಿಕೊಂಡು ಅನೇಕ ಭಾರತೀಯ ವಿದ್ಯಾರ್ಥಿಗಳು ಲಂಡನ್ನಿನಲ್ಲಿ ಅಡ್ಡಾಡಿದರು. ಇಂಥ ಗೌರವ ಚಿಹ್ನವನ್ನು ಅಭಿಮಾನದಿಂದ ಧರಿಸಿ ಲಂಡನ್ನಿನ ಮಹಾವಿದ್ಯಾಲಯದ ಆವರಣದಲ್ಲಿ ಮದನಲಾಲ್ ಧಿಂಗ್ರ ಎಂಬ ತರುಣ ಅಡ್ಡಾಡುತ್ತಿದ್ದಾಗ ಕೆಲವು ಆಂಗ್ಲ ವಿದ್ಯಾರ್ಥಿಗಳು ಕುಚೇಷ್ಟೆ ಮಾಡಲು ಯತ್ನಿಸಿದರು. ಆಗ ಧಿಂಗ್ರ ಸೊಂಟದಲ್ಲಿದ್ದ ಚೂರಿ ತೆಗೆದು ಝಳಪಿಸುತ್ತಲೇ ಕುಚೇಷ್ಟೆಖೋರರು ಕಾಲಿಗೆ ಬುದ್ಧಿ ಹೇಳಿದರು.

೧೮೫೭ನೇ ಸಾಲಿನ ಸ್ವಾತಂತ್ರ್ಯಸಮರದ ಚಿನ್ನದ ಹಬ್ಬದ ಆಚರಣೆಯಿಂದ ಲಂಡನ್ನಿನಲ್ಲಿಯ ಅಭಿನವ ಭಾರತದ ಸಂಘಟನೆ ಒಳ್ಳೆ ಚುರುಕುಗೊಂಡಿತು.

ಈ ಸಂಘಟನೆಯ ಸದಸ್ಯರು ಗುಪ್ತರೀತಿಯಿಂದ ಮದ್ದುಗುಂಡು ತಯಾರಿಸುತ್ತಿದ್ದರು. ಗುರಿ ಇಟ್ಟು ಗುಂಡು ಹೊಡೆಯುವುದನ್ನು ಕಲಿಯುತ್ತಿದ್ದರು.

ಸಾವರ್ಕರರು ಬರೆದ ಮೊದಲನೇ ಸ್ವಾತಂತ್ರ್ಯಸಮರದ ಪುಸ್ತಕದ ಕೈಬರಹದ ಪ್ರತಿ ಭಾರತಕ್ಕೆ ಬಂದಿತು. ತಾತ್ಯಾರ ಅಣ್ಣ ಬಾಬಾ ಆ ಪುಸ್ತಕವನ್ನು ಅಚ್ಚು ಹಾಕಿಸುವ ಸಕಲ ಪ್ರಯತ್ನ ನಡೆಸಿದರು. ಸರಕಾರಕ್ಕೆ ಇದರ ಸುಳಿವು ಸಿಕ್ಕಿತು. ಸಾವರ್ಕರರ ಪುಸ್ತಕ ಎಂದರೆ ದೇಶದ್ರೋಹದ ಹೊತ್ತಿಗೆ ಎಂಬುದೇ ಸರಕಾರದ ಧೋರಣೆಯಾಗಿತ್ತು. ಪುಸ್ತಕದ ಹಸ್ತ ಪ್ರತಿಯನ್ನೂ ಮುಟ್ಟುಗೋಲು ಹಾಕುವುದಕ್ಕಾಗಿ ಮುದ್ರಣಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದವು. ಹೀಗಾಗದರೆ ಒಮ್ಮಿಲ್ಲೊಮ್ಮೆ ಹಸ್ತಪ್ರತಿಯು ಸರಕಾರದ ಕೈಗೆ ಬೀಳಬಹುದು ಎಂಬ ಸಂದೇಹ ಉಂಟಾದುದರಿಂದ ಬಾಬಾ ಆ ಹಸ್ತಪ್ರತಿಯನ್ನು ಫ್ರಾನ್ಸಿಗೆ ರವಾನಿಸಿದರು. ಭಾರತೀಯ ಭಾಷೆಯಲ್ಲಿಯ ಪುಸ್ತಕದ ಮುದ್ರಣಕಾರ್ಯ ಫ್ರಾನ್ಸ್‌ದಲ್ಲಿ ನೆರವೇರುವುದು ಸಾಧ್ಯವಿರಲಿಲ್ಲ. ಆದುದರಿಂದ ಪುಸ್ತಕವನ್ನು ಆಂಗ್ಲಭಾಷೆಗೆ ಪರಿವರ್ತಿಸಿ ಮುದ್ರಿಸಲಾಯಿತು. ಪುಸ್ತಕದ ಪ್ರತಿಗಳು ರಹಸ್ಯವಾಗಿ ಭಾರತಕ್ಕೆ ಬಂದವು. ಸರಕಾರಕ್ಕೆ ಸ್ವಲ್ಪ ಸಮಯದಲ್ಲಿಯೇ ಪ್ರಕಟಿತ ಪುಸ್ತಕದ ಬಗ್ಗೆ ಮಾಹಿತಿ ದೊರಕಿತು. ಪುಸ್ತಕಕ್ಕೆ ಮುಟ್ಟುಗೋಲು ಹಾಕಲಾಯಿತು. ಈ ಸಂಬಂಧದಲ್ಲಿ ಬಾಬಾ ಸಾವರ್ಕರ್‌ರನ್ನು ಬಂಧಿಸಿ ರಾಜದ್ರೋಹದ ಆಪಾದನೆ ಹೊರಿಸಲಾಯಿತು. ಬಾಬಾ ಸಾವರ್ಕರರಿಗೆ ಅಜನ್ಮ ಕಾರಾವಾಸದ ಶಿಕ್ಷೆ ವಿಧಿಸಲ್ಪಟ್ಟಿತು.

ಶೋಕವು ಶ್ಲೋಕವಾಯಿತು

ಲಂಡನ್ನಿನಲ್ಲಿದ್ದ ತಾತ್ಯಾರಿಗೆ ಬಾಬಾ ಸಾವರ್ಕರ್ ಬಂಧಿಸಲ್ಪಟ್ಟ ಮತ್ತು ಅಜನ್ಮ ಕರಿನೀರಿನ ಕಾರಾವಾಸದ ಶಿಕ್ಷೆಯಾದ ಸುದ್ದಿ ಅತ್ತಿಗೆಯ ಪತ್ರದ ಮುಖಾಂತರ ತಿಳಿಯಿತು. ಅಣ್ಣನಿಗೆ ಕರಿನೀರಿನ ಕಾರಾವಾಸ; ತಾನು ದೂರದ ಇಂಗ್ಲೆಂಡಿನಲ್ಲಿ. ಪಾಪ, ಅತ್ತಿಗೆಗೆ ಏನೊಂದು ದುಃಖ, ಎಷ್ಟೊಂದು ಕಷ್ಟ ಎಂದು ಮರುಗಿದರು ಸಾವರ್ಕರ್. ಈ ಶೋಕದಲ್ಲಿ ಅತ್ತಿಗೆಯನ್ನು ಹೇಗೆ ಸಂತೈಸಲಿ, ಎಂದು ತಾತ್ಯಾ ಚಿಂತಿಸಿದರು. ಅವರ ಶೋಕವು ಶ್ಲೋಕರೂಪದಲ್ಲಿ ಅತ್ತಿಗೆಯನ್ನು ಸಂತೈಸುವ ಪತ್ರವಾಯಿತು.

 

ಎಡಚಿತ್ರ: ಅಂಡಮಾನಿನಲ್ಲಿ ಸಾವರ್ಕರರನ್ನು ಗಾಣಕ್ಕೆ ಕಟ್ಟುತ್ತಿದ್ದರು. ಬಲಚಿತ್ರ: ’ಭಾರತದ ರಕ್ಷಣೆಗಾಗಿ ಸದಾ ನಾವು ಶಸ್ತ್ರಸಜ್ಜಿತರಾಗಿರಬೇಕು’.

“ಎಷ್ಟೋ ಹೂಗಳು ಅರಳುತ್ತವೆ. ಹೇಗೋ ಬದುಕಿ ಎತ್ತಲೋ ಬಿದ್ದು ಒಣಗಿ ಹೋಗುತ್ತವೆ. ಆದರೆ ಗಜೇಂದ್ರನ ಸೊಂಡಿಲಿನಿಂದ ಕಿತ್ತುಕೊಳ್ಳಲ್ಪಟ್ಟು ಶ್ರೀ ಹರಿಯ ಚರಣ ಸೇರಿದ ಕಮಲಪುಷ್ಪದ ಜೀವನವೇ ಸಾರ್ಥಕವಲ್ಲವೆ? ನಮ್ಮ ವಂಸದವರೆಲ್ಲ ಅಂಥ ಸಾರ್ಥಕ್ಯ ಪಡೆಯುವ ಹಂತದಲ್ಲಿದ್ದುದು ಎಷ್ಟೊಂದು ಹೆಮ್ಮೆಯ ವಿಷಯ!” ತಾತ್ಯಾ ಮತ್ತು ಅತ್ತಿಗೆಗೆ ಬರೆದ ಶ್ಲೋಕರೂಪಿ ಪತ್ರದ ತಾತ್ಪರ್ಯವಿದು.

ಸೇಡಿನ ಕಿಡಿಗಳು

ಬಾಬಾ ಸಾವರ್ಕರರನ್ನು ಅಜೀವ ಪರ್ಯಂತ ಕಾರಾವಾಸಕ್ಕೆ ಅಟ್ಟಿದ ಸುದ್ದಿಯನ್ನು ಕೇಳುತ್ತಲೇ ಅಭಿನವ ಭಾರತದ ಸದಸ್ಯರಲ್ಲೆಲ್ಲ ಕೋಪದ ಕೆಂಡ ಉರಿಯಿತು.

ಲಂಡನ್ನಿನಲ್ಲಿದ್ದ ಮದನ್‌ಲಾಲ್ ಧಿಂಗ್ರ ಈ ಸೇಡನ್ನು ಯಥಾ ಸೂಕ್ತವಾಗಿ ತೀರಿಸಿಕೊಂಡೇ ತೀರುವೆನು ಎಂದು ಶಪಥ ಮಾಡಿದ. ಲಂಡನ್ನಿನಲ್ಲಿ ವಾಸಿಸುವ ಭಾರತೀಯ ಕ್ರಾಂತಿಕಾರರ ಚಟುವಟಿಕೆಗಳ ಮೇಲೆ ಕಣ್ಣಿಡಲು ನೇಮಕವಾಗಿದ್ದ ಕರ್ಜನ್ ವೈಲಿ ಎಂಬಾತನನ್ನು ಗುಂಡಿಟ್ಟು ಕೊಂದ. ಮದನ್‌ಲಾಲ್ ಧಿಂಗ್ರನನ್ನು ಸೆರೆಹಿಡಿಯಲಾಯಿತು. ಧ್ರಿಂಗ್ರನನ್ನು ನೇಣುಗಂಬಕ್ಕೇರಿಸಿತು. ಆಂಗ್ಲ ಸರ್ಕಾರ.

ಇತ್ತ ಭಾರತದಲ್ಲಿಯೂ ಅದೇ ಕಥೆ. ಸಾವರ್ಕರ್ ಮತ್ತು ಅಭಿನವ ಭಾರತ ಸಂಘಟನೆ ಇಂಗ್ಲೆಂಡದಿಂದ ರಹಸ್ಯವಾಗಿ ಇಲ್ಲಿಯ ಕಾರ್ಯಕರ್ತರಿಗೆ ಮದ್ದು ಗುಂಡು ಶಸ್ತ್ರಗಳನ್ನು ಕಳಿಸುತ್ತಲೇ ಇದ್ದರು. ಬಾಬಾ ಸಾವರ್ಕರ್‌ರಿಗೆ ಕರಿನೀರಿನ ಶಿಕ್ಷೆ ವಿಧಿಸಿದ್ದ ಜ್ಯಾಕ್ಸನ್ ನಾಸಿಕ್ ಜಿಲ್ಲೆಯ ಆಂಗ್ಲ ಅಧಿಕಾರಿ. ಅನಂತ ಕಾನ್ಹೆರೆ ಎಂಬ ತರುಣ ಒಂದು ನಾಟಕಮಂದಿರದಲ್ಲಿ ಗುಂಡು ಹೊಡೆದು ಅವನನ್ನು ಕೊಂದ. ಅನಂತರ ಕಾನ್ಹೆರೆ ಸೆರೆಸಿಕ್ಕ. ಉಳಿದ ಕೆಲ ಕಾರ್ಯಕರ್ತರೂ ಬಂಧಿಸಲ್ಪಟ್ಟರು. ನಾನಾ ರೀತಿಯ ಹಿಂಸೆಗೆ ಈ ಕಾರ್ಯಕರ್ತರನ್ನು ಗುರಿಪಡಿಸಿತು ಆಂಗ್ಲ ಸರಕಾರ.

ಜ್ಯಾಕ್ಸನ್, ಕರ್ಝನ್ ವಾಯಲಿ ಮೊದಲಾದ ಆಂಗ್ಲ ಅಧಿಕಾರಿಗಳ ವಧೆಯ ಹಿಂದೆ ವಿನಾಯಕ ಸಾವರ್ಕರ್‌ರ ಕೈವಾಡ ಇದೆ ಎಂಬುದು ಆಂಗ್ಲ ಸರಕಾರಕ್ಕೆ ಗೊತ್ತಾಯಿತು.

“ಭಾರತೀಯ ಯುವಕರನ್ನು ಕರಿನೀರಿನ ಶಿಕ್ಷೆಗೆ ಗುರಿಪಡಿಸುವುದರ ವಿರುದ್ಧ, ಅವರಿಗೆ ಫಾಸೀ ಶಿಕ್ಷೆ ವಿಧಿಸುವುದರ ವಿರುದ್ಧ ನಮ್ಮ ಪ್ರತಿಭಟನೆ ವ್ಯಕ್ತಪಡಿಸುವುದಕ್ಕೋಸ್ಕರ ಉದ್ದೇಶಪೂರ್ವಕವಾಗಿ ಬ್ರಿಟಿಷರ ರಕ್ತ ಸುರಿಸಲು ಪ್ರಯತ್ನಪಟ್ಟಿದ್ದು ನಿಜ” ಎಂದು ಹುತಾತ್ಮ ಮದನ್‌ಲಾಲ್ ಧಿಂಗ್ರ ಸಾರಿದ್ದ. ಈ ಹೇಳಿಕೆಯ ಒಕ್ಕಣೆ ಸಿದ್ಧಪಡಿಸಿದವರು ತಾತ್ಯಾ ಸಾವರ್ಕರ್. ಈ ಒಕ್ಕಣೆಯು ಸಾವರ್ಕರ್‌ರ ರಾಜಕೀಯ ಧೋರಣೆ ಎಂಬುದು ಆಂಗ್ಲ ಸರಕಾರಕ್ಕೆ ಮನವರಿಕೆಯಾಯಿತು. ಆಂಗ್ಲ ಸರಕಾರ ತಾತ್ಯಾರ ವಿರುದ್ಧ ಕ್ರಮ ಆರಂಭಿಸಿತು.

ಆಹಾ ನೆಗೆತ, ಸಾಹಸದ ಜಿಗಿತ!

ತಾತ್ಯಾ ಭಾರತಕ್ಕೆ ಮರುಳುವ ಸಿದ್ಧತೆಯಲ್ಲಿದ್ದರು. ತಮ್ಮ ಅನೇಕ ಸಹಕಾರಿಗಳು ಸೆರೆಹಿಡಿಯಲ್ಪಟ್ಟಿದ್ದರು. ಧಿಂಗ್ರನಂಥ ಸ್ನೇಹಿತ ಹುತಾತ್ಮನಾಗಿದ್ದ. ಅಣ್ಣ ಬಾಬಾ ಅಂದಮಾನದ ಕಾರಾಗೃಹಕ್ಕೆ ಅಟ್ಟಲ್ಪಟ್ಟಿದ್ದ. ಇಂಥ ಸನ್ನಿವೇಶದಲ್ಲಿ ಸಾವರ್ಕರರಿಗೆ ಲಂಡನ್ನಿನಲ್ಲಿ ಉಳಿದುಕೊಳ್ಳಲು ಮನಸ್ಸಾಗಲಿಲ್ಲ. ಭಾರತಕ್ಕೆ ಮರಳಲು ಅವರು ತಹತಪಿಸುತ್ತಿದ್ದರು.

ಇಷ್ಟೆಲ್ಲ ಚಳುವಳಿ, ರಾಜಕಾರಣದ ನಡುವೆಯೂ ಅವರು ಬ್ಯಾರಿಸ್ಟರ್ ಪರೀಕ್ಷೆಯನ್ನು ಕಟ್ಟಿ ಯಶಸ್ವಿ ಆಗಿದ್ದರು. ತಾತ್ಯಾ ಭಾರತಕ್ಕೆ ಹೊರಡಬೇಕೆಂಬ ಸನ್ನಾಹದಲ್ಲಿದ್ದಾಗಲೇ ಅವರನ್ನು ಲಂಡನ್ನಿನ ವಿಕ್ಟೋರಿಯ ನಿಲ್ದಾಣದಲ್ಲಿ ಬಂಧಿಸಿತು ಆಂಗ್ಲ ಸರಕಾರ. ಅವರ ಮೇಲೆ ರಾಜದ್ರೋಹದ ಆರೋಪ ಮತ್ತು ಆಂಗ್ಲ ಅಧಿಕಾರಿಗಳ ಕೊಲೆಗಳ ಸಂಬಂಧದ ಆಪಾದನೆಗಳನ್ನೂ ಹೊರಿಸಲಾಗಿತ್ತು.

ಹೊರಿಸಲಾದ ಅಪಾದನೆಗಳು ನಡೆದ ಸಮಯದಲ್ಲಿ ತಾವು ಇಂಗ್ಲೆಂಡಿನಲ್ಲಿಯೇ ವಾಸವಾಗಿದ್ದರಿಂದ ಆಪಾದನೆಗಳ ವಿಚಾರಣೆಯನ್ನು ಇಂಗ್ಲೆಂಡಿನಲ್ಲಿಯೇ ನಡೆಸಬೇಕೆಂದು ಸಾವರ್ಕರರ ವಾದವಾಗಿತ್ತು. ಆದರೆ ಸರ್ಕಾರ ಅದನ್ನು ಮನ್ನಿಸಲಿಲ್ಲ. ಸಾವರ್ಕರರನ್ನು ಬಂಧಿಸಿ ಮೊರಿಯಾ ಎಂಬ ಹೆಸರಿನ ಉಗಿಹಡಗದಲ್ಲಿ ಭಾರತಕ್ಕೆ ರವಾನಿಸಿತು.

ಮೊರಿಯಾ ಹಡಗಿನಲ್ಲಿ ಸೆರೆಯಾಳು ಆಗಿ ಭಾರತದೆಡೆಗೆ ಪಯಣ ಸಾಗಿದ್ದಾಗಲೇ ವಿನಾಯಕ ಸಾವರ್ಕರ್ ಮಾರ್ಸೇಲ್ಸ್ ಬಂದರುಕಟ್ಟೆಯ ಬಳಿ ಹಡಗದ ಶೌಚಾಲಯದಿಂದ ಕಿಂಡಿಯ ಮೂಲಕ ಸಮುದ್ರಕ್ಕೆ ಹಾರಿದ್ದರು. ಕಿಂಡಿಯ ಮೂಲಕ ಸಮುದ್ರ ಸೇರಿದ್ದರಿಂದ ಅವರ ಮೈ ತರಚಿ ರಕ್ತ ಹರಿಯುತ್ತಿತ್ತು. ಉಪ್ಪು ನೀರಿನ ಸ್ಪರ್ಶದಿಂದ ಗಾಯಗಳು ಉರಿಯುತ್ತಿದ್ದವು. ಸಾವರ್ಕರ್ ಸಮುದ್ರವನ್ನು ಈಸಿ ಫ್ರಾನ್ಸ್ ದೇಶದ ಭೂದಂಡೆಯನ್ನು ಸೇರಿ ಮಾರ್ಸೇಲ್ಸ್ ಬಂದರದ ಗೋಡೆ ಏರಿ ನಗರ ಪ್ರವೇಶಿಸುತ್ತಿದ್ದಂತೆಯೇ ಉಗಿಹಡಗಿನಲ್ಲಿದ್ದ ಕಾವಲುಗಾರರು ದೋಣಿಯ ಮೂಲಕ ಬಂದರು ಸೇರಿ ಸಾವರ್ಕರರ ಬೆನ್ನಟ್ಟಿ ಹಿಡಿದರು.

“ಫ್ರಾನ್ಸ್ ಭೂಪ್ರದೇಶದಲ್ಲಿ ನನ್ನನ್ನು ಹಿಡಿಯುವ ಅಧಿಕಾರ ನಿಮಗಿಲ್ಲ” ಎಂದು ಸಾವರ್ಕರ್ ಗರ್ಜಿಸಿದರು. ಆದರೆ ಕಾವಲುಗಾರರು ಕೇಳಲಿಲ್ಲ. ಸೆರೆಹಿಡಿದು ತಾತ್ಯಾರನ್ನು ಉಗಿಹಡಗಿಗೆ ಮರಳಿ ತರಲಾಯ್ತು. ಈಗ ಕಾವಲನ್ನು ಭದ್ರಪಡಿಸಿ ಅವರನ್ನು ಭಾರತಕ್ಕೆ ಸಾಗಿಸಲಾಯಿತು.

ಆಂಗ್ಲ ಕಾವಲುಗಾರರು ಅವರನ್ನು ಬೆನ್ನಟ್ಟಿ ಪುನಃ ಬಂಧಿಸಿದರೂ ವಿನಾಯಕ ಸಾವರ್ಕರರು ಎಸಗಿದ ಈ ಅದ್ಭುತ ಸಾಹಸ ಇತಿಹಾಸದಲ್ಲಿ ಅತ್ಯಂತ ರೋಮಾಂಚಕಾರಿ ಘಟನೆಯಾಗಿ ಉಳಿದುಕೊಂಡಿದೆ.

ಎರಡು ಜೀವಾವಧಿ ಶಿಕ್ಷೆಗಳು

ಸಾವರ್ಕರರನ್ನು ಭಾರತಕ್ಕೆ ತಂದು ವಿಚಾರಣೆಗೆ ಗುರಿಪಡಿಸಲಾಯಿತು. ಕ್ರಾಂತಿ ಎಸಗಿ ರಾಜಸತ್ತೆಯನ್ನು ಉರುಳಿಸುವ ಸಂಚು ನಡೆಸಿದ್ದಕ್ಕಾಗಿ ಮತ್ತು ಆಂಗ್ಲ ಅಧಿಕಾರಿಗಳ ಕೊಲೆಗೆ ಪ್ರೇರೇಪಣೆ ನೀಡಿದ್ದಕ್ಕಾಗಿ ಎಂದು ಪ್ರತ್ಯೇಕವಾಗಿ ಎರಡು ಕರಿನೀರಿನ ಜೀವಾವಧಿ ಶಿಕ್ಷೆಗಳು ವಿಧಿಸಲ್ಪಟ್ಟವು.

ಆಂಗ್ಲ ನ್ಯಾಯಾಧೀಶರು ಎರಡು ಜೀವಾವಧಿ ಶಿಕ್ಷೆ ಕೊಟ್ಟಾಗ ತಾತ್ಯಾ ಸಾವರ್ಕರ್ ಉದ್ಗರಿಸಿದರು. “ಹೋ, ಆಂಗ್ಲರಿಗೂ ಹಿಂದೂಗಳ ಪುನರ್ಜನ್ಮದಲ್ಲಿ ನಂಬಿಕೆ ಇದೆ ಎಂದಂತಾಯ್ತು. ಎರಡು ಜೀವಾಮಾನಗಳ ಅವಧಿಯ ಶಿಕ್ಷೆ ವಿಧಿಸಿದುದೇ ಅದಕ್ಕೆ ನಿದರ್ಶನ.”

ಅವರ ಆಸ್ತಿಪಾಸ್ತಿಗಳನ್ನೆಲ್ಲ ಸರಕಾರ ಮುಟ್ಟುಗೋಲು ಹಾಕಿತು. ಎರಡು ಜೀವಾವಧಿ ಶಿಕ್ಷೆ ಎಂದರೆ ಐವತ್ತು ವರ್ಷಗಳ ಕಾಲ ವಿನಾಯಕ ಸಾವರ್ಕರ್ ಅಂದಮಾನಿನ ಕಾರಾಗೃಹದಿಂದ ಕೊಳೆಯಬೇಕಿತ್ತು. ಅಂದಮಾನಿನ ಕಾರಾವಾಸ ಎಂದರೆ ಕರಿನೀರಿನ ಶಿಕ್ಷೆ ಎಂದು ಕುಪ್ರಸಿದ್ಧವಾಗಿತ್ತು.

ಬಂಗಾಳ ಉಪಸಾಗರದಲ್ಲಿ ಅಂದಮಾನ ದ್ವೀಪದಲ್ಲಿಯ ಕಾರಗೃಹ ಅತ್ಯಂತ ಕ್ರೂರ ಶಿಕ್ಷೆಗೆ ಹೆಸರಾಗಿತ್ತು. ಕರಿನೀರಿನ ಶಿಕ್ಷೆಗೆ ಪಾತ್ರರಾಗುವ ಅಪರಾಧಿಗಳನ್ನು ನಾನಾ ರೀತಿಯ ಕಠಿಣ ಕ್ರಮಗಳಿಗೆ ಈಡು ಮಾಡಲಾಗುತ್ತಿತ್ತು. ವಿನಾಯಕ ಸಾವರ್ಕರರನ್ನು ಎಣ್ಣೆ ಹಿಂಡುವ ಗಾಣಕ್ಕೆ ಹೂಡುತ್ತಿದ್ದರು. ಬೆಳಗಿನಿಂದ ಬೈಗಿನವರೆಗೆ ಗಾಣ ಸುತ್ತಿ ಸುತ್ತಿ ತಾತ್ಯಾ ಬಳಲುತ್ತಿದ್ದರು. ಹಗ್ಗ ಹೊಸೆಯುವ ಕೆಲಸವನ್ನೂ ವಿಧಿಸಲಾಗುತ್ತಿತ್ತು. ಚರ್ಮ ಸುಲಿದು ನೆತ್ತರು ಬಸಿಯುತ್ತಿದ್ದರೂ ನಿಗದಿಯಾದ ಪ್ರಮಾಣದಲ್ಲಿ ಇಂಥ ಕೆಲಸಗಳನ್ನು ಪೂರೈಸಲೇಬೇಕಿತ್ತು. ತಪ್ಪಿದಲ್ಲಿ ಬೆತ್ತದ ಏಟು!

ಸಹೋದರರ ಭೇಟಿ, ಸಂಕೇತ ಭಾಷೆ

ಒಂದು ದಿನ ವಿನಾಯಕ ಸಾವರ್ಕರರಿಗೆ ತಮ್ಮ ಅಣ್ಣ ಗಣೇಶ ಸಾವರ್ಕರರ ದರ್ಶನವಾಯಿತು. ಗಣೇಶ ಸಾವರ್ಕರರೂ ಕರಿನೀರಿನ ಶಿಕ್ಷೆ ಅನುಭವಿಸಲು ಈಗಾಗಲೇ ಈ ಕಾರಾಗೃಹದಲ್ಲಿದ್ದರು. ಅವರಿಗೆ ತಮ್ಮ ತಾತ್ಯಾ ಸಹ ಇಲ್ಲಿ ಬಂದದ್ದು ತಿಳಿದಿರಲಿಲ್ಲ. ತಾತ್ಯಾ ಬಾಬಾರನ್ನು ನೋಡಿದರು. ಬಾಬಾ ತಾತ್ಯಾರನ್ನು ನೋಡಿದರೂ ಪರಸ್ಪರ ಮಾತಾನಾಡುವಂತಿರಲಿಲ್ಲ. ಕಾವಲುಗಾರನ ಸಹಾಯದಿಂದ ಬಾಬಾ ತಾತ್ಯಾರಿಗೆ ಒಂದು ಚೀಟಿ ಕಳುಹಿಸಿದರು. “ತಾತ್ಯಾ ನೀನು ಇಲ್ಲಿಗೆ ಹೇಗೆ ಬಂದೆ? ನೀನು ಹೊರಗುಳಿದು ಕ್ರಾಂತಿಕಾರ್ಯ ಮುಂದುವರಿಸಿ ಯಶಸ್ವಿ ಆಗಬಹುದೆಂದು ನಾನು ಬಗೆದಿದ್ದೆನಲ್ಲ! ನೀನೂ ಬಂದುಬಿಟ್ಟೆ, ಇನ್ನು ಮುಂದೆ ಹೇಗೆ?

ತಾತ್ಯಾ ಉತ್ತರ ಕಳುಹಿಸಿದರು. “ಯಶಾಪಯಶಗಳು ಯೋಗಾಯೋದ ಸಂಗತಿಗಳು. ನಿರ್ಭಯರಾಗಿ ಸಂಕಟವನ್ನೆದುರಿಸವುದರಲ್ಲಿಯೇ ನಿಜವಾದ ಕರ್ತೃತ್ವ ಮತ್ತು ಯೋಗ್ಯತೆ ಇರೋದು ಎಂದು ಹೇಳುತ್ತಾರಲ್ಲವೇ! ನೀವು ಮತ್ತು ನಾನು ಹಾಗೂ ಉಳಿದೆಲ್ಲ ನಮ್ಮ ಸಹಕಾರಿಗಳು ಅದನ್ನೇ ಈಗ ಪ್ರಕಟಗೊಳಿಸುತ್ತಿದ್ದೇವೆ.”

ಪರಸ್ಪರ ಮಾತನಾಡಲು, ವಿಚಾರವಿನಿಮಯ ನಡೆಸಲು ಕರಿನೀರಿನ ಕಾರಾವಾಸದಲ್ಲಿ ಶಕ್ಯವಿರಲಿಲ್ಲ. ಕಾವಲುಗಾರರ ಮನ ಒಲಿಸಿ ಚೀಟಿ ಬರೆದು ಕಳುಹಿಸುವುದು ಕೂಡ ಪ್ರತಿಯೊಂದು ಸಲ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಸಾವರ್ಕರ್ ಸಹೋದರರು ತಮ್ಮದೇ ಒಂದು ಉಪಾಯ ಹೂಡಿದರು. ಮುಂಗೈಗೆ ತೊಡಿಸಿದ ಸಂಕೋಲೆಗಳನ್ನು ಒಂದಕ್ಕೊಂಡು ತಟ್ಟಿ ಸಂಕೇತಭಾಷೆಯಲ್ಲಿ ಮಾತನಾಡಿಕೊಳ್ಳುವುದನ್ನು ಕಲಿತರು. ಬರಬರುತ್ತ ಸಂಕೋಲೆಯ ಸಂಕೇತವಾದ ಸಮಸ್ತ ಸೆರೆಯಾಳುಗಳಿಗೆ ಸಂಭಾಷಣೆಯ ಸಾಧನವಾಯಿತು!

ಸಂಕೋಲೆಯ ಸಹಿತ ಸಮಾಜಸೇವೆ

ಸರೀಕರ ಸೆರೆಯಾಳುಗಳು ಕೊಲೆಗಾರರೋ, ಸುಲಿಗೆಗಾರರೋ ಆಗಿದ್ದರೂ ಸಾವರ್ಕರ್ ಅವರೊಡನೆ ಪ್ರೀತಿಯಿಂದ ವರ್ತಿಸಿ ಅವರ ಪ್ರೇಮ, ಅಭಿಮಾನ ಗಳಿಸಿಕೊಂಡಿದ್ದರು. ಜೊತೆಯ ಸೆರೆಯಾಳುಗಳಿಗೆ ಅಕ್ಷರ ಜ್ಞಾನ ಮಾಡಿಕೊಡುತ್ತಿದ್ದರು. ಭಾರತ ಇತಿಹಾಸದ, ಪರಂಪರೆಯ ಕಥೆಗಳನ್ನು ಹೇಳುತ್ತಿದ್ದರು.

ಸೆರೆಯಾಳುಗಳಲ್ಲಿ ಹಿಂದೂಗಳು ಇದ್ದಂತೆ ಮುಸಲ್ಮಾನರೂ ಇದ್ದರು. ಹಿಂದೂ ಸೆರೆಯಾಳು ಅಕಸ್ಮಾತ್ತಾಗಿ ಮುಸಲ್ಮಾನ ಸೆರೆಯಾಳುವಿನ ತಟ್ಟೆ ಮುಟ್ಟಿದನೆಂದರೆ ಉಳಿದ ಹಿಂದೂಗಳೆಲ್ಲ ಮುಸಲ್ಮಾನ ಸೆರೆಯಾಳುವಿನ ತಟ್ಟೆ ಮುಟ್ಟಿದವನನ್ನು ಜಾತಿಬಾಹಿರನನ್ನಾಗಿ ಮಾಡುತ್ತಿದ್ದರು. ಹೀಗಾಗಿ ಅಂಥವರು ಮುಸಲ್ಮಾನರಾದಂತೆ ಹಿಂದೂಗಳಿಂದ ದೂರವಾಗುತ್ತಿದ್ದರು. ಮುಸಲ್ಮಾನರಾಗಿ ಬಿಡುತ್ತಿದ್ದರು! ಕಾರಾಗೃಹದ ಆಂಗ್ಲ ಅಧಿಕಾರಿಗಳು ಸಹ ಹಿಂದೂ ಸೆರೆಯಾಳುಗಳಿಗೆ ಕಠಿಣ ಶ್ರಮ ವಿಧಿಸಿ ಮುಸಲ್ಮಾನ ಸೆರೆಯಾಳುಗಳಿಗೆ ಅನೇಕ ಸಂದರ್ಭಗಳಲ್ಲಿ ಮೃದುವಾಗಿ ವರ್ತಿಸುತ್ತಿದ್ದರು. ಸಾವರ್ಕರರು ಕಾರಾಗೃಹದಲ್ಲಿಯ ಈ ವಿಪರೀತ ಪರಿಸ್ಥಿತಿಯನ್ನು ಬದಲಾಯಿಸಲು ಹೆಣಗಿದರು. ಮುಸಲ್ಮಾನರ ತಟ್ಟೆ ಮುಟ್ಟಿದೊಡನೆ ಹಿಂದುತ್ವ ಹೋಗುವುದು ಎಂಬುದನ್ನು ಅಲ್ಲಗಳೆದು ಹೀಗೆ ಹಿಂದುತ್ವದಿಂದ ಹೊರಗೆ ಹೋದವರನ್ನೆಲ್ಲ ಮತ್ತೆ ಹಿಂದೂಗಳೆಂದು ಅಂಗೀಕರಿಸುವಂತೆ ಜೊತೆಯ ಸೆರೆಯಾಳುಗಳನ್ನು ಒಪ್ಪಿಸಿದರು. ಮುಸಲ್ಮಾನ ಸೆರೆಯಾಳುಗಳಿಗೆ ಸಮಾಜ ಸಲ್ಲಿಸಲು ಅವಕಾಶ ಕೊಡಲಾಗುತ್ತಿತ್ತು. ಸಾವರ್ಕರ್ ಹಿಂದೂ ಸೆರೆಯಾಳುಗಳಿಗೂ ಸ್ತೋತ್ರ, ಪ್ರಾರ್ಥನೆಗಳನ್ನು ಕಲಿಸಿ ನಿತ್ಯ ಪಾರಾಯಣಕ್ಕೆ ಸಮಯ ದೊರಕಿಸಿಕೊಂಡರು. ಮೊದಮೊದಲು ಕಾರಾಗೃಹದ ಅಧಿಕಾರಿಗಳು ಹಿಂದೂಗಳಿಗೆ ಸ್ತೋತ್ರ ಪಠಿಸಲು ಸಮಯಾವಕಾಶ ಕೊಡಲು ನಿರಾಕರಿಸಿದರೂ ಸಾವರ್ಕರರು ಬಿಡಲಿಲ್ಲ. ಸತ್ಯಾಗ್ರಹ ಹೂಡಿ ಸಮಾನಾವಕಾಶ ದಕ್ಕಿಸಿಕೊಂಡರು. ಸಾರ್ವಕರರ ಪ್ರೇರಣೆಯಿಂದ, ಹಿತೋಪದೇಶಗಳಿಂದ ಹಿಂದೂ ಸೆರೆಯಾಳುಗಳಲ್ಲಿ ಉಚ್ಚನೀಚ ಎಂಬ ಜಾತೀಯ ವೃಥಾಭಿಮಾನವು ಹೇಳ ಹೆಸರಿಲ್ಲದಂತಾಯಿತು. ವಿನಾಯಕ ಸಾವರ್ಕರ್ ಕಾರಾವಾಸದಲ್ಲಿಯೂ ಸಾರ್ಥಕ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.

ಕಲಿಯು ಕವಿಯೂ ಹೌದು!

ವಿನಾಯಕ ಸಾವರ್ಕರರು ಕಲಿಯಾದಂತೇ ಹುಟ್ಟಾ ಕವಿಯೂ ಆಗಿದ್ದರು. ಕಾರಾವಾಸದ ಕಾಲದಲ್ಲಿ ತಮ್ಮ ಮನವನ್ನು ಚಿಂತೆಯಲ್ಲಿ ಕೊಳೆಯಗೊಡದೆ ಚಿಂತನ ಮನನಗಳಿಂದ ಒಳ್ಳೊಳ್ಳೆಯ ಕಾವ್ಯವನ್ನು ರಚಿಸುವುದಕ್ಕಾಗಿ ಬಳಸಿದರು. ಅವರ ಶರೀರವನ್ನೋ ಸಂಕೋಲೆಯ ಕಾರಾಗೃಹದಲ್ಲಿ ಬಂಧಿಸಲ್ಪಟ್ಟಿತ್ತು ಆದರೆ ಅವರ ಬುದ್ಧಿ ಕಲ್ಪನಾಶಕ್ತಿಗಳಿಗೆ ಯಾವ ಅಡೆತಡೆ ಇರಲಿಲ್ಲ. ಕಾವ್ಯರಚನೆ ಮಾಡಿ ಕಾರಾಗೃಹದ ಗೋಡೆಗಳ ಮೇಲೆ ಮೊಳೆಯಿಂದ ಬರೆಯುತ್ತಿದ್ದರು. ರಚಿಸಿದ ಕಾವ್ಯಭಾಗವನ್ನು ಓದಿ ಓದಿ ಗಟ್ಟಿಮಾಡಿಕೊಳ್ಳುತ್ತಿದ್ದರು. ಅದು ತಮ್ಮ ನೆನಪಿನ ಪಟಲದ ಮೇಲೆ ಅಚ್ಚಳಿಯದಂತೆ ಒಡಮೂಡಿತೆಂದರೆ ಮುಂದಿನ ರಚನೆ ಕೈಗೊಳ್ಳುತ್ತಿದ್ದರು. ‘ಕಮಲಾ’, ‘ಗೋಮಾಂತಕ’, ‘ಮಹಾಸಾಗರ’ ಎಂಬ ಅನೇಕ ಕಾವ್ಯಗಳನ್ನು ವಿನಾಯಕ ಸಾವರ್ಕರ್ ಈ ರೀತಿಯಲ್ಲಿ ಅಂಡಮಾನದ ಕಾರಾಗೃಹವಾಸದಲ್ಲಿ ಸೃಷ್ಟಿಸಿದರು. ಮಣ್ಣಿನವಾಸನೆಯ ಕಾವ್ಯಗಳು ಅನೇಕರಿಂದ ರಚಿಸಲ್ಪಟ್ಟಿರಬಹುದು. ಆದರೆ ಅಂಡಮಾನದ ಗೋಡೆಗಳ ಕಲ್ಲಿನ ವಾಸನೆಯ ಈ ಕಾವ್ಯಗಳಿಗೆ ಇರುವ ವಿಶೇಷತೆ ಅಪೂರ್ವವೇ!

ರತ್ನಾಗಿರಿಯಲ್ಲಿ ಸ್ಥಾನಬದ್ಧತೆ

ಅಂದಮಾನಿನ ಹವಾಗುಣದಿಂದಾಗಿ ಮತ್ತು ಕಾರಾಗೃಹದ ಆಹಾರದಿಂದಾಗಿ ವಿನಾಯಕ ಸಾವರ್ಕರ್ ರವರ ದೇಹಾರೋಗ್ಯ ಹದಗೆಟ್ಟಿತ್ತು. ೧೯೧೯ರಲ್ಲಿ ವಿನಾಯಕ ಸಾವರ್ಕರರ ತಮ್ಮ ನಾರಾಯಣ ಸಾವರ್ಕರ್ ಮತ್ತು ಪತ್ನಿ ಯಮುನಾಬಾಯಿ ಸಾವರ್ಕರ್‌ರ ಭೇಟಿಗೆ ಅಂದಮಾನಕ್ಕೆ ಬಂದರು. ಬಾಬಾರ ಪತ್ನಿ ಯಶೋದಾಬಾಯಿ ನಿಧನ ಹೊಂದಿದ್ದರು. ಕಾರಾಗೃಹದಲ್ಲಿದ್ದ ಗಂಡ ಬಾಬಾರಿಗೆ ಮತ್ತು ಮೈದುನ ತಾತ್ಯಾರಿಗೆ ಯಶೋದಾಬಾಯಿಯ ಮರಣದ ಸುದ್ದಿ ಈ ಭೇಟಿಯಲ್ಲಿಯೇ ಗೊತ್ತಾದುದು. ಈ ಅಲ್ಪಕಾಲದ ಭೇಟಿಯಿಂದ ಸಮಾಧಾನಕ್ಕಿಂತ ದುಃಖವೇ ಉಂಟಾಯಿತು.

ಕಾರಾಗೃಹದ ಗೋಡೆಯ ಮೇಲೆ ಮೊಳೆಗಳಿಂದ ಬರೆಯುತ್ತಿದ್ದರು

ಸಾವರ್ಕರರ ತೀವ್ರ ಅನಾರೋಗ್ಯದಿಂದ ಭಾರತದಲ್ಲೆಲ್ಲ ಜನಕ್ಕೆ ಕಳವಳವಾಯಿತು. ಎಲ್ಲೆಡೆಯಿಂದಲೂ ಸಾವರ್ಕರರ ಬಿಡುಗಡೆಗಾಗಿ ಒತ್ತಾಯ ಬಂದಿತು. ಕೊನೆಗೊಮ್ಮೆ ಈ ಒತ್ತಾಯಗಳಿಗೆ ಆಳರಸರ ಸರಕಾರ ಮಣಿಯಿತು. ಸಾವರ್ಕರ್ ಸಹೋದರರನ್ನು ಅಂದಮಾನ ಕಾರಾಗೃಹದಿಂದ ೧೯೨೧ರಲ್ಲಿ ಸ್ಥಳಾಂತರಿ ಭಾರತಕ್ಕೆ ತರಲಾಯಿತು. ಕೆಲವು ವರ್ಷಗಳ ಕಾಲ ಭಾರತದಲ್ಲಿಯ ಕಾರಾಗೃಹದಲ್ಲಿ ಇಡಲಾಯಿತು. ೧೯೨೨ ರಲ್ಲಿ ಬಾಬಾ ಸಾವರ್ಕರರನ್ನು ಕಾರಾಗೃಹದಿಂದ ಬಿಡುಗಡೆ ಮಾಡಿದರು. ೧೯೨೪ರಲ್ಲಿ ತಾತ್ಯಾರನ್ನು ಹೊರಬಿಟ್ಟರು; ಆದರೆ ಅವರು ರತ್ನಾಗಿರಿ ಜಿಲ್ಲೆಯನ್ನು ಬಿಟ್ಟು ಹೊರಗೆ ಹೋಗಕೂಡದು ಎಂಬ ನಿರ್ಬಂಧವನ್ನು ಹೇರಲಾಯಿತು. ಅವರು ಯಾವುದೇ ರಾಜಕೀಯ ಕಾರ್ಯವನ್ನು ಕೈಗೊಳ್ಳಕೂಡದು ಎಂಬ ನಿರ್ಬಂಧವೂ ಹಾಕಲ್ಪಟ್ಟಿತ್ತು.

೧೯೨೪ರಿಂದ ೧೯೩೭ರವರೆಗೆ ವಿನಾಯಕ ಸಾವರ್ಕರ್ ರತ್ನಾಗಿರಿಯಲ್ಲಿ ಸ್ಥಾನಬದ್ಧತೆಯಲ್ಲಿದ್ದರು. ಅವರ ಪತ್ನಿ ಯಮುನಾಬಾಯಿ ಅವರೊಂದಿಗೆ ಇದ್ದರು. ಮದುವೆ ೧೯೦೧ ರಲ್ಲಿ ಆಗಿದ್ದರೂ ಸುಮಾರು ೨೪-೨೫ ವರ್ಷಗಳ ಕಾಲ ತಾತ್ಯಾ ಏಕಾಕಿಯಾಗಿ ಇಂಗ್ಲೆಂಡಿನಲ್ಲಿ ಮತ್ತು ಅಂದಮಾನಿನಲ್ಲಿ ಜೀವನ ಸವೆಸಿದ್ದರು. ಈಗ ಪುನರ್ಜನ್ಮ ಪಡೆದು ಹೊಸದಾಗಿ ಸಂಸಾರ ಮಾಡಿದಂತಾಗಿತ್ತು. ತಾತ್ಯಾ ಮತ್ತು ಯಮುನಾಬಾಯಿಯವರಿಗೆ ಪ್ರಭಾತ್ ಎಂಬ ಮಗಳು ಮತ್ತು ವಿಶ್ವಾಸ್ ಎಂಬ ಮಗನು ಹುಟ್ಟಿದರು.

ಸರಕಾರದ ಅನುಮತಿ ಪಡೆದು ಸಾವರ್ಕರ್ ಒಂದು ಸಲ ತಮ್ಮ ಬಾಲ್ಯದ ಕಾರ್ಯಕ್ಷೇತ್ರವಾದ ನಾಸಿಕಕ್ಕೆ ಹೋಗಿಬಂದರು. ಅಲ್ಲಿ ಅವರಿಗೆ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಸಾರ್ವಜನಿಕರು ಒಂದು ಲಕ್ಷ ರೂಪಾಯಿಗಳ ಕಾಣಿಕಿ ಸಲ್ಲಿಸಿದರು. ಆ ಹಣವನ್ನು ಸಮಾಜಸೇವೆಗಾಗಿ ಮುಡುಪಿಟ್ಟು ತಮ್ಮನ್ನೂ ಸಮಾಜದ ಸೇವೆಗಾಗಿಯೇ ಅರ್ಪಿಸಿಕೊಂಡರು.

ಹಿಂದೂಗಳೆಲ್ಲ ಬಂಧುಗಳು

ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಶಾಪವಾಗಿ ಹರಡಿತ್ತು. ಸ್ಪೃಶ್ಯಾಸ್ಪೃಶ್ಯತೆ, ಮೇಲುಜಾತಿ-ಕೀಳುಜಾತಿ ಎಂಬ ಭೇದಭಾವಗಳಿಂದಾಗಿ ಹಿಂದೂಸಮಾಜ ಛಿನ್ನ ವಿಚ್ಛಿನ್ನವಾಗಿತ್ತು. ಹೀಗಾಗಿ ಅನೇಕ ಹಿಂದೂಗಳು ಪರಧರ್ಮಕ್ಕೆ ಮೊರೆಹೋಗುತ್ತಿದ್ದರು. ಸಾವರ್ಕರ್ ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿದರು. ಸತ್ಯಾಗ್ರಹ ಹೂಡಿ ರತ್ನಾಗಿರಿಯ ವಿಠ್ಠಲ ಮಂದಿರಲ್ಲಿ ಕೆಳಜಾತಿಯವರಿಗೂ ಮುಕ್ತಪ್ರವೇಶದ ಅಧಿಕಾರ ದೊರಕಿಸಿಕೊಟ್ಟರು. ರತ್ನಾಗಿರಿಯಲ್ಲಿ ಪತಿತಪಾವನ ಮಂದಿರದ ಸ್ಥಾಪನೆ ಮಾಡಿ ಅದನ್ನು ಶಂಕರಾಚಾರ್ಯರಿಂದ ಉದ್ಘಾಟಿಸಿದರು. ಸ್ಪೃಶ್ಯ-ಅಸ್ಪೃಶ್ಯ ಎಂಬ ಭೇದ ಭಾವನೆಯನ್ನು ತೊರೆದು ಸಮಸ್ತ ಹಿಂದೂಗಳು ಸಹಪಂಕ್ತಿ- ಸಹಭೋಜನದಲ್ಲಿ ಸಹಭಾಗಿಗಳಾಗುವಂತೆ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಶಾಲೆಗಳಿಗೆ ಹೋಗಿ ಜಾತಿ ಭೇದಭಾವವಿಲ್ಲದೇ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿಸುವಂತೆ ಶಾಲಾ ಅಧ್ಯಾಪಕರಿಗೆ ಪ್ರಾರ್ಥಿಸಿದರು. ನಮ್ಮ ಬಂಧುಗಳನ್ನು ನಾವು ಅಸ್ಪೃಶ್ಯರನ್ನಾಗಿ ಕಂಡರೆ ಅವರು ನಮ್ಮಿಂದ ಸಿಡಿದು ನಮಗೆ ಸಿಡಿಲಾಗಿ ಎರಗುತ್ತಾರೆ ಎಂಬುದನ್ನು ಮನಗಾಣಿಸಿಕೊಟ್ಟರು. ಅಷ್ಟೇ ಅಲ್ಲ; ಈಗಾಗಲೇ ಹಿಂದೂ ಧರ್ಮವನ್ನು ತೊರೆದು ಹೊರಹೋದವರನ್ನು  ಪುನಃ ಹಿಂದೂಧರ್ಮಕ್ಕೆ ಈ ಶುದ್ಧೀಕರಣದಿಂದ ಮತ್ತೆ ಮಾತೃಧರ್ಮಕ್ಕೆ ಮರಳಿದರು.

ಸಮಾಜದಲ್ಲಿ ರೂಢವಾದ ಓರೆಕೋರೆಗಳನ್ನು ತಿದ್ದಲು ಮುಂದಾದಂತೇ ವಿನಾಯಕ ಸಾವರ್ಕರರು ಭಾರತೀಯರಲ್ಲಿ ಭಾಷೆಯ ಬಳಕೆಯಲ್ಲಿ ರೂಢವಾಗುತ್ತ ನಡೆದಿದ್ದ ಆಂಗ್ಲಪದಗಳ ವಿರುದ್ಧ ಹೋರಾಟ ಹೂಡಿ ಭಾಷಾಶುದ್ಧಿಯ ಕಾರ್ಯವನ್ನು ಕೈಕೊಂಡರು.

ಹಿಂದೂ ಮಹಾಸಭೆ

೧೯೩೭ರಲ್ಲಿ ಸಾವರ್ಕರರ ಮೇಲಿನ ಎರಡು ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಅನಂತರ ಸಾವರ್ಕರರು ಸಕ್ರಿಯ ರಾಜಕಾರಣದಲ್ಲಿ ಧುಮುಕಿದರು. ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ನಿಜಾಮನ ಸಂಸ್ಥಾನದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿತ್ತು. ಸಾವರ್ಕರರು ನಿಜಾಮಶಾಹಿಯಲ್ಲಿ ಹಿಂದೂಗಳ ಮೇಲೆ ಆಗುತ್ತಿದ್ದ ಅನ್ಯಾಯ, ಅತ್ಯಾಚಾರಗಳ ವಿರುದ್ಧ ಹೋರಾಡಿದರು. ಹಿಂದೂಗಳು ಬಹುಸಂಖ್ಯೆಯಲ್ಲಿ ಸೇನೆಯಲ್ಲಿ ಪ್ರವೇಶ ಪಡೆಯಬೇಕೆಂದು ಪ್ರಚಾರ ನಡೆಸಿದರು. ಪಾಕಿಸ್ತಾನದ ಬೇಡಿಕೆಯ ಕೂಗು ಎದ್ದಾಗ ಅದನ್ನು ತೀವ್ರವಾಗಿ ಖಂಡಿಸಿದರು.

೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು. ಆದರೆ ಪಾಕಿಸ್ತಾನದ ನಿರ್ಮಿತಿಯಿಂದಾಗಿ ಕೋಟ್ಯಂತರ ಹಿಂದುಗಳು ನಿರಾಶ್ರಿತರಾಗಿ ಭಾರತಕ್ಕೆ ಬಂದರು. ಶತಶತಮಾನಗಳಿಂದ ತಾವು ನೆಲೆನಿಂತ ನೆಲದಲ್ಲಿಯೇ ಪರದೇಶಿಗಳೆನಿಸಿಕೊಂಡು ಅಟ್ಟಲ್ಪಟ್ಟ ಈ ಜನರ ರೋದನದಿಂದ ಮನಕರಗದ, ಮನನೋಯದ ಭಾರತೀಯನಾರು? ವಿನಾಯಕ ಸಾವರ್ಕರರ ಮನಸ್ಸು ಈ ವಿಷಮ ಪರಿಸ್ಥಿತಿಯಿಂದಾಗಿ ರೋಸಿದ್ದು ಸಹಜವಷ್ಟೇ!

೧೯೪೭ನೇ ಇಸ್ವಿಯಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆಯಾಯಿತು. ಆ ಸಂದರ್ಭದಲ್ಲಿ ಭಾರತ ಸರಕಾರ ವಿನಾಯಕ ಸಾವರ್ಕರರನ್ನು ಬಂಧಿಸಿತು. ಆದರೆ ವಿಚಾರಣೆ ಪೂರ್ತಿಗೊಂಡಾಗ ಸಾವರ್ಕರರು ನಿರಪರಾಧಿ ಎಂಬುದು ನಿಚ್ಚಳವಾಯಿತು.

ಸ್ವಾತಂತ್ರ್ಯವೀರ ಸಾವರ್ಕರ್

೧೯೫೭ನೇ ಇಸ್ವಿ ಭಾರತಕ್ಕ ಅವಿಸ್ಮರಣೀಯ ವರ್ಷ. ಸ್ವತಂತ್ರ ಭಾರತವು ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಸ್ವಾತಂತ್ರ್ಯ ಹೋರಾಟದ ಅಗ್ರೇಸರ ನಾಯಕ, ವಿನಾಯಕ ಸಾವರ್ಕರರು ರಾಜಧಾನಿ ದಿಲ್ಲಿಯಲ್ಲಿ ನಡೆಸಿದ ಸಮಾರಂಭದಲ್ಲಿ ಹೆಮ್ಮೆಯಿಂದ ಭಾಗವಹಿಸಿ ಒಳ್ಳೇ ವೀರಾವೇಶದಿಂದ ಮೊದಲು ಸ್ವಾತಂತ್ರ್ಯ ಸಂಗ್ರಾಮದ ಇತಿವೃತ್ತವನ್ನು ಬಣ್ಣಿಸಿದರು. ಭಾರತದ ಸ್ವಾತಂತ್ರ್ಯವು ಶಾಶ್ವತವಾಗಿ ಉಳಿಯಬೇಕಿದ್ದರೆ ಸದಾಕಾಲ ನಾವು ಶಶ್ತ್ರಾಸ್ತ್ರಸಜ್ಜಿತರಾಗಿ ಇರಲೇಬೇಕೆಂದು ಪ್ರತಿಪಾದಿಸಿದರು.

೧೯೬೦ನೇ ಇಸ್ವಿಯು ತಾತ್ಯಾರ ಜೀವನದಲ್ಲಿ ಮತ್ತೊಂದು ಸ್ಮರಣೀಯ ವರ್ಷ. ಒಂದು ವೇಳೆ ತಾತ್ಯಾರಿಗೆ ವಿಧಿಸಲಾದ ಶಿಕ್ಷೆಗಳ ಅವಧಿಯು ಮುಗಿಯುವ ಮೊದಲೇ ಅವರನ್ನು ಬಿಡುಗಡೆ ಮಾಡದೇ ಇದ್ದಲ್ಲಿ ತಾತ್ಯಾ ೧೯೬೦ರವರೆಗೆ ಕಾರಾವಾಸದಲ್ಲಿ ಕೊಳೆಯಬೇಕಿತ್ತು. ಆದ್ದರಿಂದ ತಾತ್ಯಾರವರ ಅನುಯಾಯಿಗಳು ೧೯೬೦ರಲ್ಲಿ ‘ಮೃತ್ಯುಂಜಯ ದಿನ’ ವನ್ನು ಆಚರಿಸಿ ವಿನಾಯಕ ಸಾವರ್ಕರರು ಮೃತ್ಯುವಿನ ವಿರುದ್ಧ ಜಯಗಳಿಸಿದ ವೀರರು ಎಂದು ಅಭಿನಂದಿಸಿದರು. ಭಾರತ ಸರಕಾರವು ಅಂದಮಾನದ ಆ ಕಾರಾಗೃಹದಲ್ಲಿ, ತಾತ್ಯಾರನ್ನು ಇಟ್ಟ ಕೋಣೆಯಲ್ಲಿ, ಅವರ ಬಗೆಗೆ ನೆನಪಿನ ಶಾಸನವನ್ನು ಗೋಡೆಯ ಮೇಲೆ ಕಟ್ಟಿಸಿ ಬರೆದಿಟ್ಟು ಆ ಕೋಣೆಯನ್ನು ರಾಷ್ಟ್ರೀಯ ಅಭಿಮಾನದ ಸ್ಮಾರಕವೆಂದು ಸಾರಿತು.

೧೯೬೫ರಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಭಾರತ ಸರಕಾರ ಅವರಿಗೆ ಗೌರವಧನವನ್ನು ಕೊಟ್ಟವು. ವಿನಾಯಕ ಸಾವರ್ಕರರನ್ನು ಅಪ್ರತಿಮ ಸ್ವಾತಂತ್ರ್ಯ ವೀರನೆಂದು ಗೌರವಿಸುವುದಾಗಿ ಸರಕಾರ ಹೇಳಿತು.

ಭಾರತೀಯ ಇತಿಹಾಸದ ಸುವರ್ಣ ಪುಟಗಳು

ತಾತ್ಯಾ ವಯಸ್ಸಿನಿಂದ ಹಣ್ಣಾಗಿದ್ದರು. ಆದರೆ ಅವರ ಬುದ್ಧಿ ಮತ್ತು ಚಿಂತನಶೀಲತೆಗಳು ಇನ್ನೂ ಹಚ್ಚಹಸುರಾಗಿದ್ದವು. ಈ ಇಳಿವಯಸ್ಸಿನಲ್ಲಿ ಸಹ ಅವರು ರಚನಾತ್ಮಕ ಕಾರ್ಯಗಳಿಂದ ವಿಮುಖರಾಗಿರಲಿಲ್ಲ. ‘ಭಾರತೀಯ ಇತಿಹಾಸದಲ್ಲಿಯ ಆರು ಸುವರ್ಣ ಪುಟಗಳು’ ಎಂಬ ಬೃಹತ್ ಐತಿಹಾಸಿಕ ಗ್ರಂಥವನ್ನು ರಚಿಸಿದರು. ಭಾರತೀಯ ಇತಿಹಾಸದಲ್ಲಿಯ ಹೆಮ್ಮೆಯ ಘಟನೆಗಳನ್ನು ಗುರುತಿಸಿ ಭಾರತೀಯರಲ್ಲಿ ಅಭಿಮಾನವನ್ನು ಸ್ಫುರಿಸುವಂತೆ ಈ ಬರವಣಿಗೆ ನೀಡಿದರು. ವಿಶಾಲ ಸಮುದ್ರಕ್ಕೂ ದಂಡೆ ಎಂಬುದು ಇರಲೇಬೇಕಷ್ಟೆ. ದಂಡೆಮೀರಿ ಒತ್ತರಿಸಿದರೆ ಅನಾಹುತ ಸಹಜಸಿದ್ಧ. ಭಾರತೀಯರು ಮನೋವೈಶಾಲ್ಯ, ಕ್ಷಮಾಶೀಲತೆ, ಶತ್ರುವಿಗೂ ಆಶ್ರಯ ಮೊದಲಾದ ಸದ್ಗುಣಗಳಿಗೆ ಇರಬೇಕಾದ ಮಿತಿ, ಮರ‍್ಯಾದೆಗಳನ್ನು ಗುರುತಿಸಿಕೊಳ್ಳುವುದು ಅಗತ್ಯ ಎಂಬುದನ್ನು ಪ್ರತಿಪಾದಿಸಿದರು.

ಕೆಲಸ ಮುಗಿಯಿತು

ವಿನಾಯಕ ಸಾವರ್ಕರರ ಸಹೋದರರಾದ ಗಣೇಶ (ಬಾಬಾ) ಸಾವರ್ಕರ್ ೧೯೪೫ರಲ್ಲಿ ಮತ್ತು ನಾರಾಯಣ ಸಾವರ್ಕರ್ ೧೯೫೦ ರಲ್ಲಿ ಮರಣ ಹೊಂದಿದರು. ಸಾವರ್ಕರರ ಪತ್ನಿ ಯಮುನಬಾಯಿ ೧೯೬೫ ರಲ್ಲಿ ಅಗಲಿದರು. ತಾತ್ಯಾರ ಮಗ ವಿಶ್ವಾಸನ ಮದುವೆಯಾಗಿತ್ತು. ಮಗಳು ಪ್ರಭಾತ್‌ಳ ಮದುವೆಯಾಗಿ ಅವಳೂ ಗಂಡನ ಮನೆಗೆ ಹೋಗಿದ್ದಳು. ಜೀವನದಲ್ಲಿಯ ಇತಿಕರ್ತವ್ಯಗಳೆಲ್ಲ ಕೈಗೂಡಿದ್ದವು. ತಾತ್ಯಾರ ಶರೀರ ಸವೆದಿತ್ತು. ಅನಾರೋಗ್ಯ ಮನೆಮಾಡಿತ್ತು. ಅವರಿಗೆ ಜೀವನದಲ್ಲಿ ಇನ್ನಾವ ಆಸೆ, ಆಕಾಂಕ್ಷೆಗಳು ಉಳಿದಿರಲಿಲ್ಲ. ಹಿಂದೂಗಳಿಗೆ ಹಿಂದೂ ಎಂಬ ಹೆಸರನ್ನು ನೀಡಿದ ಸಿಂಧು ನದಿ, ಹಿಂದೂಗಳಿಗೆ ವೇದಗಳನ್ನಿತ್ತ ಆರ್ಯಾವರ್ತ ಪ್ರದೇಶ ಭಾರತದ ಹೊರಗೆ ಉಳಿದು ಪಾಕಿಸ್ತಾನ ಎಂಬ ಬೇರೆಯೇ ರಾಷ್ಟ್ರ ನಿರ್ಮಾಣವಾದದ್ದು ಅವರಿಗೆ ಸಹ್ಯವಾಗಿರಲಿಲ್ಲ. ಈ ಕೊರಗಿನ ಹೊರತು ಅವರಿಗೆ ಜೀವನದಲ್ಲಿ ಉಳಿದೆಲ್ಲ ವಿಷಯಗಳಲ್ಲಿ ಸಂತೃಪ್ತಿ ಲಭಿಸಿತ್ತು. ತಮ್ಮ ಜೀವನದ ಕೊನೆಗಾಲದಲ್ಲಿ ವಿನಾಯಕ ಸಾವರ್ಕರ್ ಅನ್ನವನ್ನು ವರ್ಜಿಸಿದರು. ೧೯೬೬ರ ಫೆಬ್ರುವರಿ ೨೬ ರಂದು ಅಸುನೀಗಿದರು. ಆಗ ಅವರಿಗೆ ೮೩ ವರ್ಷ.

ಸ್ವಾತಂತ್ರ್ಯದೇವಿಯ ನಿತಾಂತ ಆರಾಧಕ

ಸಾವರ್ಕರರ ಜೀವನ ಅತ್ಯಂತ ಸಂಘರ್ಷಮಯ ಜೀವನವಾಗಿತ್ತು. ಅವರು ಕಲಿಯೂ ಆಗಿದ್ದರು, ಕವಿಯೂ ಆಗಿದ್ದರು. ವಿವಿಧ ಮುಖಗಳಲ್ಲಿ ಹರಿದ ಅವರ ಪ್ರತಿಭೆ ಮಾತ್ರ ಸದಾಸರ್ವದಾ ಒಂದೇ ನಿಟ್ಟಿನಲ್ಲಿ ಗಟ್ಟಿಯಾಗಿ ನೆಟ್ಟಿತ್ತು. ಅವರು ಸ್ವಾತಂತ್ರದಯ ಮಹಾನ್ ಆರಾಧಕರು. ಸ್ವಾತಂತ್ರ್ಯವನ್ನು ಅವರು ದೈವತ್ವದ ಪಟ್ಟಕ್ಕೇರಿಸಿದರು. ಋಷಿಗಳು, ಯಾವುದನ್ನು ಮುಕ್ತಿ, ಮೋಕ್ಷ ಎಂದು ಬಗೆದರೋ; ಯೋಗಿಗಳು, ವೇದಾಂತಿಗಳೂ ಯಾವುದನ್ನು ಪರಬ್ರಹ್ಮ ಎಂದು ಭಾವಿಸಿದರೋ ಆ ಪದಾರ್ಥವೆಂದರೆ ‘ಸ್ವಾತಂತ್ರ್ಯ’ ಎಂದು ಸಾವರ್ಕರ್ ಹಾಡಿದರು. ಸ್ವಾತಂತ್ರ್ಯವೇ ಅವರ ಆರಾಧ್ಯ ದೈವವಾಗಿತ್ತು. ಅದಾವ ರೀತಿಯಲ್ಲಿ ಅವರ ಪ್ರತಿಭೆ ಹರಿದರೂ ಸ್ವಾತಂತ್ರ್ಯ ಎಂಬ (ಮುನ್ನೀರಿನಾಳವನ್ನು) ಸೇರಲೆಂದೇ ಅವುಗಳೆಲ್ಲದರ ಹವಣಿಕೆ, ಹಂಚಿಕೆ. ಯಾವುದು ಔನ್ನತ್ಯದಲ್ಲಿ ಅತಿ ಉನ್ನತವೋ, ಉತ್ತಮತ್ವದಲ್ಲಿ ಅತಿ ಉತ್ತಮವೋ, ಉತ್ತಮತ್ವದಲ್ಲಿ ಅತಿ ಉತ್ತಮವೋ, ಉದಾತ್ತತೆಯಲ್ಲಿ ಮಿಗಿಲಾದ ಉದಾತ್ತತೆಯೋ ಅದಕ್ಕೆಲ್ಲ ಒಂದೇ ಹೆಸರು; ಅದೇ ಸ್ವಾತಂತ್ರ್ಯ ಎಂದು ಅವರು ಹಾಡಿದರು. ಜೀವನದುದ್ದಕ್ಕೂ ಅವರು

ಜಯೋಸ್ತುತೇ ಶ್ರೀ ಮಹನ್ಮಂಗಲೆ! ಶಿವಾಸ್ಪದೆ
ಶುಭದೆ
ಸ್ವತಂತ್ರತೆ ಭಗವತಿ! ತ್ವಾಮಹಂ ಯಶೋ
ಯುತಾಂ ವಂದೇ!!

ಎಂದು ಜಪಿಸಿದರು. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಮತ್ತು ಸ್ವತಂತ್ರ್ಯಪ್ರಾಪ್ತಿಯ ನಂತರ ಅದರ ಉಳಿವಿಗಾಗಿ ಹೆಣಗಿದರು. ಆದ್ದರಿಂದಲೇ ಅವರ ಹೆಸರು ಸ್ವಾತಂತ್ರ್ಯವೀರ ಸಾವರ್ಕರ್ ಎಂದು ಅನ್ವರ್ಥಕವಾಗಿ ಅಜರಾಮರವಾಗಿ ಉಳಿದಿದೆ.