ವಿನೂ ಮಂಕಡ್ಜಗತ್ತಿನ ಶ್ರೇಷ್ಠ ‘‘ಆಲ್ ರೌಂಡರು ಗಳಲ್ಲಿ ಒಬ್ಬರೆಂದು ಹೆಸರಾದ ಕ್ರಿಕೆಟ್ ಆಟಗಾರ. ಶ್ರದ್ಧೆಯ ಅಭ್ಯಾಸ ಅವರ ಯಶಸ್ಸಿಗೆ ಒಂದು ಕಾರಣ. ತರುಣ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ಕೊಡುವುದರಲ್ಲಿ ಅವರಿಗೆ ತುಂಬಾ ಆಸಕ್ತಿ.

ವಿನೂ ಮಂಕಡ್

ಯಾವುದೇ ಆಟಗಾರನ ಶ್ರೇಷ್ಠತೆಯನ್ನು ಅವನು ಗಳಿಸಿದ ರನ್ನು ಅಥವಾ ಪಡೆದ ವಿಕೆಟ್ಟುಗಳಿಂದಲೇ ಅಳೆಯುವುದು ಸಾಧ್ಯವಿಲ್ಲ. ಅವು ಕೇವಲ ಅವನ ಸಾಧನೆಯನ್ನು ಗುರುತಿಸಬಲ್ಲವು. ಆದರೂ ಸಾಧನೆಯು ಪ್ರತಿಭೆಯ ಮುಖ್ಯ ಅಳತೆಗೋಲುಗಳಲ್ಲಿ ಒಂದೆಂಬುದು ನಿಜ. ಒಬ್ಬ ಆಟಗಾರ  ಎಷ್ಟೇ ಪ್ರತಿಭಾವಂತನಾಗಿದ್ದರೂ, ಮೈದಾನದಲ್ಲಿ ಆತನ ಸಾಧನೆ ಸೊನ್ನೆಯಾದರೆ, ಅವನು ಯಾರ ಮನ್ನಣೆಯನ್ನೂ ಗಳಿಸಲಾರ.

ವಿನೂ ಮಂಕಡ್ ಅವರ ಘನತೆಯನ್ನು ನಾವು ಗುರುತಿಸುವಾಗ, ಅವರು ಕ್ರೀಡಾಂಗಣದಲ್ಲಿ ಸಾಧಿಸಿದ್ದನ್ನಷ್ಟೇ ಗಣನೆಗೆ ತೆಗೆದುಕೊಳ್ಳದೆ, ಪರಿಸ್ಥಿತಿ ಸ್ವಲ್ಪ ಅನುಕೂಲವಾಗಿದ್ದರೆ, ಅದೃಷ್ಟ ಅಷ್ಟು ಕೆಟ್ಟಿಲ್ಲದಿದ್ದರೆ, ಅವರು ಇನ್ನೂ ಎಷ್ಟು ಎತ್ತರಕ್ಕೆ ಹೋಗುವ ಸಾಧ್ಯತೆ ಇತ್ತು ಎಂಬುದನ್ನೂ ಗಮನಿಸಬೇಕು.

ಜಗತ್ತಿನ ಯಾವುದೇ ಕ್ರಿಕೆಟ್ ತಂಡಕ್ಕೆ ಅರ್ಹ

ಮಂಕಡ್ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರಂಭಿಸಿದ್ದು ೧೯೩೫-೩೬ ರಲ್ಲಿ ‘ಪಶ್ಚಿಮ ಭಾರತ’ ತಂಡಕ್ಕೆ ರಣಜಿ ಟ್ರೋಫಿಯಲ್ಲಿ ಆಡಿದಂದಿನಿಂದಲೇ. ಅದರ ಮುಂದಿನ ವರ್ಷ ಲಾರ್ಡ್ ಟೆನಿಸನ್ ನಾಯಕತ್ವದ ಇಂಗ್ಲಿಂಡಿನ ಕ್ರಿಕೆಟ್ ತಂಡ ಭಾರತಕ್ಕೆ ಭೇಟಿ ನೀಡಿತು. ಅವರು ಭಾರತದ ವಿರುದ್ಧ ಆಡಿದ ನಾಲ್ಕು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲೂ ಆಡುವ ಅವಕಾಶ ಮಂಕಡ್‌ಗೆ ಲಭಿಸಿತು. ಆ ಸರಣಿಯಲ್ಲಿ ಅತ್ಯುತ್ತಮ ‘ಆಲ್‌ರೌಂಡ್’ ಪ್ರದರ್ಶನ ನೀಡಿದ ಮಂಕಡ್, ಬ್ಯಾಟಿಂಗ್ (೬೨.೬೬) ಮತ್ತು ಬೌಲಿಂಗ್ (೧೪.೫೩) ಸರಾಸರಿಯಲ್ಲಿ ಎರಡೂ ತಂಡಗಳ ಉಳಿದ ಆಟಗಾರರನ್ನು ಮೀರಿಸಿದರು. ಅಲ್ಲದೆ ಹತ್ತು ಒಳ್ಳೆಯ ಕ್ಯಾಚ್‌ಗಳನ್ನೂ ಹಿಡಿದರು. ಆಗ ಕೇವಲ ಇಪ್ಪತ್ತು ವರ್ಷದ ತರುಣರಾಗಿದ್ದ ಮಂಕಡರ ಆಟವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಟೆನಿಸನ್ ಅವರು, ‘‘ಜಗತ್ತಿನ ಯಾವುದೇ ಕ್ರಿಕೆಟ್ ತಂಡದಲ್ಲಿ ಸ್ಥಾನಗಳಿಸಲು ಈತ ಅರ್ಹ’’ ಎಂದು ಸಾರಿದರು.

ಆದರೆ ಮಂಕಡರ ದುರದೃಷ್ಟಕ್ಕೆ ಮುಂದಿನ ಒಂಬತ್ತು ವರ್ಷಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿಲ್ಲ. ಕಾರಣ: ಎರಡನೇ ಮಹಾ ಯುದ್ಧ. ಅಷ್ಟು ಸಣ್ಣ ವಯಸ್ಸಿನಲ್ಲೇ ಪ್ರತಿಭೆಯ ಮೇರೆಯನ್ನು ತಲುಪಿದ್ದ ಯಾವುದೇ ಆಟಗಾರನಿಗೆ ಭ್ರಮನಿರಸನವಾಗಬಹುದಾಗಿದ್ದ ಸಂದರ್ಭ. ಆದರೆ ವಿನೂ ಮಂಕಡ್ ಅವರದು ಗಟ್ಟಿ ಮನಸ್ಸು; ಅವರು ತಾಳ್ಮೆಯ ಪ್ರತಿರೂಪ.

ವಿಶಿಷ್ಟ ಸಾಧನೆ

ಸೀನಿಯರ್ ಪಟೌಡಿ ಅವರ ನಾಯಕತ್ವದಲ್ಲಿ ೧೯೪೬ ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತದ ಟೀಮಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಂಕಡ್, ತಮ್ಮ ೨೯ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣ ಮಾಡಿದರು. ಅಲ್ಲಿಂದ ಮುಂದೆ ೧೩ ವರ್ಷಗಳ ಕಾಲ ಕ್ರಿಕೆಟ್ ದಿಗಂತದಲ್ಲಿ ಧ್ರುವತಾರೆಯಂತೆ ಮೆರೆದು ‘‘ಭಾರತದ ಸರ್ವಶ್ರೇಷ್ಠ ಆಲ್‌ರೌಂಡರ್’ ಎಂಬ ಖ್ಯಾತಿ ಗಳಿಸಿದರು. ಕ್ರೀಡಾಸಾಮರ್ಥ್ಯದ ಶಿಖರದಲ್ಲಿ ತಾವಿದ್ದಾಗ ವ್ಯರ್ಥವಾದ ಕಾಲವನ್ನು ತುಂಬಿಕೊಳ್ಳಲೋ ಎಂಬಂತೆ, ಕೇವಲ ೨೩ ಟೆಸ್ಟ್‌ಗಳಲ್ಲಿ ೧,೦೦೦ ರನ್ ಮತ್ತು ೧೦೦ ವಿಕೆಟ್‌ಗಳನ್ನು ಪೂರೈಸಿ ನೂತನ ವಿಶ್ವದಾಖಲೆ ಸ್ಥಾಪಿಸಿದರು.ಇದೇ ಸಾಧನೆಗೆ ಅವರ ಪ್ರತಿಸ್ಪರ್ಧಿಗಳಾದ ಎಂ.ಎ. ನೋಬಲ್ ಮತ್ತು ಕೀತ್ ಮಿಲ್ಲರ್ ಅವರಿಗೆ ಕ್ರಮವಾಗಿ ೨೭ ಮತ್ತು ೩೩ ಪಂದ್ಯಗಳು ಬೇಕಾದವು ಎಂಬುದನ್ನು ನೋಡಿದಾಗ ಮಂಕಡರ ಹಿರಿಮೆ ಬೆಳಕಿಗೆ ಬರುತ್ತದೆ.

ಒಟ್ಟು ೪೪ ಅಧಿಕೃತ ಟೆಸ್ಟ್ ಪಂದ್ಯಗಳನ್ನು ಭಾರತದ ಪರವಾಗಿ ಆಡಿದ ವಿನೂ ಮಂಕಡ್, ೭೨ ಇನ್ನಿಂಗ್ಸ್ ಗಳಲ್ಲಿ ೨,೧೦೯ ರನ್ (ಸರಾಸರಿ: ೩೧.೪೭) ಹೊಡೆದುದಲ್ಲದೆ, ೧೬೨ ವಿಕೆಟ್‌ಗಳನ್ನೂ (ಸರಾಸರಿ : ೩೨.೩೧) ಪಡೆದರು.

ಈ ಸಾಧನೆಯೇ ಮಂಕಡರನ್ನು ಜಗತ್ತಿನ ಅತ್ಯುನ್ನತ ಆಲ್‌ರೌಂಡರ್‌ಗಳಾದ ಗ್ಯಾರಿ ಸೋಬರ‍್ಸ್ ಮತ್ತು ಕೀತ್ ಮಿಲ್ಲರ್ ಅವರ ಸಾಲಿಗೆ ಸೇರಿಸುತ್ತದೆ. ಆದರೆ, ಅವರು ಇನ್ನೊಂದು ೪೦ ವರ್ಷ ತಡವಾಗಿ ಹುಟ್ಟಿದ್ದರೆ ಏನೆಲ್ಲ ಸಾಧಿಸಬಹುದಿತ್ತು ಎಂಬುದು ಊಹೆಗೆ ಬಿಟ್ಟ ವಿಚಾರ. ಈಗಿನ ಕ್ರಿಕೆಟ್ ಆಟಗಾರರು ವರ್ಷಕ್ಕೆ ಹತ್ತು ಟೆಸ್ಟ್‌ಗಳಿಗೆ ಕಡಿಮೆ ಇಲ್ಲದಂತೆ ಆಡುತ್ತಿರುವುದನ್ನು ನೋಡಿದರೆ, ಮಂಕಡ್‌ಗೆ ಅಷ್ಟು ಅವಕಾಶ ಸಿಕ್ಕಿದ್ದರೆ ಖಂಡಿತವಾಗಿಯೂ ಇನ್ನೂ ಹೆಚ್ಚು ಕೀರ್ತಿ ಗಳಿಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ.

ಬಾಲ್ಯ, ಶಿಕ್ಷಣ

ಸ್ವಾತಂತ್ರ್ಯಪೂರ್ವದ ಭಾರತ ಒಂದು ಒಡೆದ ಕನ್ನಡಿ. ನೂರಾರು ಪ್ರಾಂತಗಳು, ಪ್ರತಿಯೊಂದಕ್ಕೂ ಒಬ್ಬೊಬ್ಬ ಸಾಮಂತರಾಜ ಅಥವಾ ಗವರ‍್ನರ್. ಇಂಥ ಪ್ರಾಂತಗಳಲ್ಲಿ ಒಂದಾದ ಜಾಮ್‌ನಗರದಲ್ಲಿ ೧೯೧೭ ರ ಏಪ್ರಿಲ್ ೧೨ ರಂದು ಮುಲವಂತರಾಯ್ ಹಿಮ್ಮತರಾಯ್ ಮಂಕಡ್ ಅವರ ಜನನ. ಅಷ್ಟೇನೂ ಸಂಪ್ರದಾಯವಾದಿಗಳಲ್ಲದ ಮಧ್ಯಮವರ್ಗದ ಸಂಸಾರ. ವಿನೂ ಮಂಕಡ್ ತಂದೆ ಡಾಕ್ಟರ್ ಹಿಮ್ಮತಲಾಲ್ ದುಲಾಪ್‌ಜಿ ಮಂಕಡ್ ಅವರಿಗೆ ಸರ್ಕಾರಿ ಕೆಲಸ. ಮಗನೂ ತಮ್ಮಂತೆ ವೈದ್ಯನಾಗಬೇಕೆಂದು ತಂದೆಯ ಆಶಯ; ಆದರೆ ಮಗನ ಆಸಕ್ತಿ ಎಲ್ಲಾ ಚೆಂಡು-ದಾಂಡಿನ ಮೇಲೆ.

ಮಂಕಡ್‌ರ ತಂದೆಗೆ ಸರ್ಕಾರಿ ಕೆಲಸವಾಗಿದ್ದರಿಂದ, ಅವರಿಗೆ ಆಗಾಗ್ಗೆ ವರ್ಗವಾಗುತ್ತಿತ್ತು. ಶಿಕ್ಷಣವನ್ನು ನಿರಾತಂಕವಾಗಿ ಮುಂದುವರಿಸುವ ನೆಪದಿಂದ ವಿನೂ, ತಮ್ಮ ಚಿಕ್ಕಪ್ಪ ಇಂದೂಲಾಲ್ ಧೋಲಾಕಿಯ ಅವರ ಮನೆಯಲ್ಲೇ ಉಳಿದುಕೊಂಡಿದ್ದರು.

ಮಂಕಡ್ ಸೇರಿದ್ದ ನವಾನಗರ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಕ್ರಿಕೆಟ್ ಆಟವನ್ನೇ ಆಡುತ್ತಿದ್ದರು. ಅವರೂ ಸಹಜವಾಗಿ ಆ ಕ್ರೀಡೆಯಲ್ಲಿ ಆಸಕ್ತರಾದರು. ಆಸಕ್ತಿಯೊಂದಿಗೆ ಪ್ರತಿಭೆಯೂ ಕೂಡಿ, ಮಂಕಡ್ ಅತಿ ಶೀಘ್ರದಲ್ಲಿ ತಮ್ಮ ಸಹ ಆಟಗಾರರ ಕಣ್ಮಣಿಯಾದರು. ಮನೆಯಲ್ಲಿ ಚಿಕ್ಕಪ್ಪ ಧೋಲಾಕಿಯ ಅವರ ಪ್ರೋತ್ಸಾಹವೂ ದೊರಕಿದುದರಿಂದ ಮಂಕಡ್‌ರ ಏಳಿಗೆಗೆ ಪುಟ ಕೊಟ್ಟಂತಾಯಿತು.

ಕ್ರಿಕೆಟ್ ಪ್ರವೇಶ

ಸೌರಾಷ್ಟ್ರದಲ್ಲಿನ ಶಾಲೆಗಳಿಗಾಗಿ, ಅಂತರಶಾಲಾ ಹಿಲ್‌ಷೀಲ್ಡ್ ಪಂದ್ಯಾವಳಿಗಳು ನಡೆಯುತ್ತಿದ್ದು ಅದರಲ್ಲಿ ನವಾನಗರ್ ಹೈಸ್ಕೂಲ್ ಸಹ ಭಾಗವಹಿಸುತ್ತಿತ್ತು. ೧೯೩೨-೩೩ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿ ಭಾರತದ ಮಾಜಿ ಟೆಸ್ಟ್ ಆಟಗಾರ ಎಸ್.ಎಚ್.ಎಂ.ಕೋಲಾ ಅವರನ್ನು ನೇಮಿಸಲಾಯಿತು. ಮಂಕಡ್ ಕೂಡ ಕೋಲಾ ಅವರಿಂದ ಕ್ರಿಕೆಟ್‌ನ ಓನಾಮ ಗಳನ್ನು ಕಲಿತರು.

ಹಿಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದ ಮಂಕಡ್, ತರಗತಿಗಿಂತ ಹೆಚ್ಚಾಗಿ ಕ್ರಿಕೆಟ್ ಮೈದಾನದಲ್ಲಿ ಪ್ರತಿಭೆ ತೋರಿದರು. ಅವರಿಗೆ ಪಾಠ ಪ್ರವಚನಗಳಿಗಿಂತ ಕ್ರಿಕೆಟ್‌ನಲ್ಲಿ ಅತೀವ ಆಸಕ್ತಿ. ಹಾಗೆಂದು ಅವರೇನೂ ತರಗತಿಗಳಿಗೆ ಚಕ್ಕರ್ ಹೊಡೆಯುತ್ತಿರಲಿಲ್ಲ.

ಮೆಟ್ರುಕ್ಯುಲೇಶನ್ ಓದುತ್ತಿದ್ದಾಗ ಮಂಕಡ್ ೧೮-೧೯ ರ ತರುಣ. ಈಗಾಗಲೇ ನವಾನಗರದ ಪರ ರಣಜಿ ಟ್ರೋಫಿಯಲ್ಲಿ ಆಡಲಾರಂಭಿಸಿದ್ದರು. ಕಿರಿಯ ವಯಸ್ಸಿನ ಭರವಸೆಯ ಆಟಗಾರ ಎಂಬ ಕಾರಣಕ್ಕಾಗಿ ಅವರನ್ನು ೧೯೩೭-೩೮ ರಲ್ಲಿ ಭಾರತಕ್ಕೆ ಭೇಟಿ ನೀಡಿದ ಲಾರ್ಡ್ ಟೆನಿಸನ್ ತಂಡದ ವಿರುದ್ಧ ಆಡಿಸಲಾಯಿತು. ಆ ಸರಣಿಯಲ್ಲಿ ಅದ್ಭುತವಾಗಿ ಆಡಿದ ಮಂಕಡ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಒಳ್ಳೆಯ ಪ್ರದರ್ಶನ ನೀಡಿದರು. ಅವರ ಕ್ರಿಕೆಟ್ ಉಚ್ಛ್ರಾಯಕ್ಕೆ ಬರುತ್ತಿದ್ದಂತೆ ಓದು ಹಿಂದೆ ಬಿದ್ದಿತು. ಅವರಿಗೆ ಮೆಟ್ರಿಕ್ಯುಲೇಶನ್ ಪರೀಕ್ಷೆ ತೆಗೆದುಕೊಳ್ಳಲಾಗಲಿಲ್ಲ. ಅಲ್ಲಿಗೇ ಅವರ ಶಾಲಾಭ್ಯಾಸವೂ ಮುಕ್ತಾಯವಾಯಿತು.

ವಿನೂ

ಶಾಲೆಯ ದಿನಗಳಲ್ಲಿ ಕ್ರಿಕೆಟ್ ಬಿಟ್ಟು ಬೇರೇನೂ ಆಡಿದವನಲ್ಲ. ಬೆಳಗಿನಿಂದ ಸಂಜೆಯವರೆಗೂ ಒಂದೇ ರೀತಿಯ ಹುಚ್ಚು. ಮಾಂತ್ರಿಕನ ಸೆರೆಸಿಕ್ಕ ಮಂತ್ರ ಮುಗ್ಧ ಬಾಲಕನಂತೆ. ಜೊತೆ ಹುಡುಗರಿಗೆಲ್ಲಾ ಅಚ್ಚು ಮೆಚ್ಚು. ಬಾಲಂಗೋಚಿಯಂಥ ಹೆಸರನ್ನು ಸಣ್ಣದು ಮಾಡಿ ‘ಮಿನೂ’ ಎಂದು (ಮುಲವಂತರಾಯ್ ಬದಲು) ಕರೆದರು.ಈ ‘ಮಿನೂ’ ಹೋಗಿ ವಿನೂ ಆದದ್ದು ಹೇಗೆ ಎಂಬುದು ಒಂದು ಸಮಸ್ಯೆಯೇ. ಬಹುಶಃ ಮಂಕಡರ ಆಂಗ್ಲ ಕೋಚ್ ವೆಂಸ್ಲೆ ಅಪಾರ್ಥ ಮಾಡಿಕೊಂಡು ‘ಮಿನೂ’ ಬದಲು ‘ವಿನೂ, ವಿನೂ’, ಎಂದು ಕರೆಯುತ್ತಿದ್ದರೆಂದು ಕೆಲವರ ಸಂದೇಹ. ಒಟ್ಟಿನಲ್ಲಿ, ಕ್ರೀಡಾ ಪ್ರಪಂಚಕ್ಕೆ, ದಾಖಲೆ ಪುಸ್ತಕಗಳಲ್ಲಿ ವಿನೂ ಮಂಕಡ್ ಎಂದೇ ನಾಮಾಂಕಿತ.

ದುಲೀಪ್ ಸಿನ್ಹಜಿಯವರ ಪ್ರೋತ್ಸಾಹ

ಮಂಕಡರನ್ನು ‘ಕಡೆಯದ ವಜ್ರ’ ಎಂದು ಗುರುತಿಸಿ ಬೆಳಕಿಗೆ ತಂದು, ಎಲ್ಲ ರೀತಿಯ ಪ್ರೋತ್ಸಾಹ ನೀಡಿದವರೆಂದರೆ ನವಾನಗರದ ಯುವರಾಜ ದುಲೀಪ್‌ಸಿನ್ಹಜಿ ಅವರು. ಮಂಕಡರ ಏಳಿಗೆಯೂ, ನವಾನಗರದಲ್ಲಿ ಕ್ರಿಕೆಟ್‌ನ ಬೆಳವಣಿಗೆಯೂ ಹಾಸುಹೊಕ್ಕಾಗಿರುವುದರಿಂದ ಅದರ ಪೂರ್ವ ಪರಿಚಯ ಅಗತ್ಯ.

ಭಾರತದ ಕ್ರಿಕೆಟ್‌ನ ಪಿತಾಮಹ ರಣಜಿತ್‌ಸಿನ್ಹಜಿ ಅವರ ರಾಜ್ಯವಾದ ನವಾನಗರ, ಉಳಿದ ಕಾಥೇವಾಡ ಪ್ರಾಂತದಿಂದ ಬೇರೆಯಾಗಿತ್ತು. ಈಗಾಗಲೇ ಪ್ರಾರಂಭವಾಗಿದ್ದ ‘ರಣಜಿ ಟ್ರೋಫಿ’ ಯಲ್ಲಿ ನವಾನಗರದ ಆಟಗಾರರು, ಪಶ್ಚಿಮ ಭಾರತ ರಾಜ್ಯ ತಂಡದೊಂದಿಗೇ ಆಡುತ್ತಿದ್ದರು. ೧೯೩೩ ರಲ್ಲಿ ಪಟ್ಟಕ್ಕೆ ಬಂದ ದಿಗ್ವಿಜಯ ಸಿನ್ಹಜಿ ಅವರು ಕ್ರಿಕೆಟ್ ಅಭಿಮಾನಿಗಳು. ನವಾನಗರದ್ದೇ ಒಂದು ಪ್ರತ್ಯೇಕ ತಂಡ ಇರಬೇಕೆಂದು ಅವರ ಅಭಿಲಾಷೆ.

ಜನವರಿ ೧೯೩೬ ರಲ್ಲಿ ಲಂಡನಿನಿಂದ ಸ್ವದೇಶಕ್ಕೆ ಮರಳಿದ ದುಲೀಪ್‌ಸಿನ್ಹಜಿ ಅವರು ಅಣ್ಣನ ಆಸೆಯನ್ನು ನೆರವೇರಿಸುವುದರಲ್ಲಿ ತೊಡಗಿದರು. ಇಂಗ್ಲೆಂಡಿನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದ ದುಲೀಪ್ ಅವರ ಆಕಾಂಕ್ಷೆಯೂ ಅದೇ ಆಗಿತ್ತಲ್ಲದೆ, ಈ ಕಾರ್ಯವನ್ನು ಒಂದು ಸವಾಲಾಗಿ ಸ್ವೀಕರಿಸಿದರು. ಸಸೆಕ್ಸ್‌ನಲ್ಲಿ ಸಹ ಆಟಗಾರರಾಗಿದ್ದ ಎ.ಎಫ್.ಆಲ್ಬರ್ಟ್ ವೆಂಸ್ಲೆ ಅವರನ್ನು ಬರಮಾಡಿಕೊಂಡು ಪ್ರತಿಭಾ ಬೇಟೆಗೆ ಹೊರಟರು.

ಶಿಕ್ಷಣ-ನಿಷ್ಠೆ

ಪಶ್ಚಿಮ ಭಾರತ ರಾಜ್ಯ ತಂಡದಲ್ಲಿ ಹನ್ನೊಂದನೆಯ ಆಟಗಾರನಾಗಿ ಆಡುತ್ತಿದ್ದ ತರುಣ ಮಂಕಡ್, ದುಲೀಪ್ ಅವರ ಕಣ್ಣಿಗೆ ಬಿದ್ದರು. ಸರಿಯಾದ ‘ಬೇಟೆ’ ಯನ್ನೇ ಹಿಡಿದಿದ್ದರು. ಈತ ಒಳ್ಳೆಯ ಆರಂಭ ಆಟಗಾರನಾಗಬಲ್ಲ ಎಂದು ಅವರಿಗೆ ಎನಿಸಿತು. ಸರಿ, ಹತ್ತೊಂಬತ್ತು ವರ್ಷದ ಮಂಕಡ್‌ನನ್ನು ತಮ್ಮ ಬಳಿಗೆ ಕರೆದುಕೊಂಡು ತರಬೇತಿ ನೀಡಲಾರಂಭಿಸಿದರು. ವೇಗದ ಬೌಲಿಂಗ್ ಆಡುವಾಗ ಲೆಗ್‌ಸ್ಟಂಪಿನ ಮೇಲೆ ಬರುವ ಚೆಂಡನ್ನು ಮಂಕಡ್ ಅಂಜಿ ಆಡುತ್ತಿದ್ದುದನ್ನು ನೋಡಿ ಅದನ್ನು ಹೇಗೆ ಎದುರಿಸಬೇಕು ಎಂದು ನಿರಂತರ ಅಭ್ಯಾಸ ನೀಡಿದರು. ವೇಗದ ಬೌಲಿಂಗ್ ಬಗ್ಗೆ ಮಂಕಡ್‌ಗೆ ಇದ್ದ ಚಳಿಜ್ವರ ಬಿಟ್ಟು ಹೋಗುವವರೆಗೂ ಬಂಪರ್ ದಾಳಿ ನಡೆಯಿತು. ಅಷ್ಟರಲ್ಲಿ ಮಂಕಡ್ ಸಾಕಷ್ಟು ‘ಹದ’ ಆಗಿದ್ದರು!

ಯಾರು ಎಷ್ಟೇ ಹೇಳಿಕೊಟ್ಟರೂ ವೈಯಕ್ತಿಕ ಪ್ರಯತ್ನವಿಲ್ಲದೆ ಯಾವುದೂ ಕೈಗೂಡುವುದಿಲ್ಲ. ದುಲೀಪ್ ಸಿನ್ಹಜಿ ಮತ್ತು ವೆಂಸ್ಲೆ ತರಬೇತಿದಾರರಾಗಿದ್ದರೆಂಬ ಮಾತ್ರಕ್ಕೆ ಮಂಕಡ್ ಸಕಲವಿದ್ಯಾ ಪಾರಂಗತರಾಗಿಯೇ ಆಗುತ್ತಾರೆ ಎಂಬುದು ಖಂಡಿತವಾಗಿರಲಿಲ್ಲ. ಮಂಕಡ್‌ಗೆ ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ; ಕಲಿಯಬೇಕೆಂಬ ಶ್ರದ್ಧೆ. ಪ್ರತಿ ದಿನವೂ ಬೆಳಗಿನ ಜಾವದಲ್ಲಿ ಎದ್ದು ಓಡುವುದು, ಹಾರುವುದು, ಸೈಕಲ್ ತುಳಿತ ಮುಂತಾದ ವ್ಯಾಯಾಮ ಮಾಡಿ ಗಂಟೆಗಟ್ಟಲೆ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಿದ್ದರು.

ಶಾಲಾ ದಿನಗಳಲ್ಲಿ ಮಂಕಡ್ ಮಧ್ಯಮ ವೇಗದ ಬೌಲರ್ ಆಗಿದ್ದರು. ಆದರೆ ಒಳ್ಳೆ ಮೈಕಟ್ಟಿನ ಮಂಕಡ್ ಸ್ಪಿನ್ ಬೌಲಿಂಗಿಗೆ ಹೆಚ್ಚು ಸಮರ್ಪಕ ಎಂದು ವೆಂಸ್ಲೆ, ಅವರನ್ನು ಎಡಗೈ ಸ್ಪಿನ್ನರ್ ಮಾಡಿದರು. ಚೆಂಡನ್ನು ತಿರುಗಿಸುವ, ಹಾರಿಸುವ, ವೇಗ ಮತ್ತು ದಿಕ್ಕು ಬದಲಿಸುವ ಎಲ್ಲ ತಂತ್ರಗಳನ್ನೂ ಮಂಕಡ್ ಕಲಿತರು.

ಕಲಿತದ್ದು ರಕ್ತಗತವಾಗಲು ಸಾಧನೆ ಆರಂಭವಾಯಿತು. ಆರು ತಿಂಗಳ ಕಾಲ ಅದೊಂದು ನಿರಂತರ ಸಾಧನೆ, ಘೋರ ತಪಸ್ಸು. ಮನಸ್ಸಿಗೆ ತೃಪ್ತಿ ಆಗುವವರೆಗೂ, ಆತ್ಮವಿಶ್ವಾಸ ಬೆಳೆಯುವವರೆಗೂ ಎಡೆಬಿಡದ ದುಡಿತ. ಮಂಕಡರ ಸಾಧನೆಯನ್ನು ‘ಹಿಸ್ಟರಿ ಆಫ್ ಇಂಡಿಯನ್ ಕ್ರಿಕೆಟ್’ ನಲ್ಲಿ ವರ್ಣಿಸುತ್ತಾ ಎಡ್ವರ್ಡ್ ಡಾಕರ್ ಹೀಗೆ ಹೇಳುತ್ತಾರೆ: ‘‘ಅವರೊಬ್ಬ ಭಾರತದ ಮಣ್ಣಿನ ಮಗನಂತೆ. ರೈತ ತನ್ನ ಭೂಮಿಗೆ ಕಟ್ಟುಬಿದ್ದಂತೆ, ಮಂಕಡ್‌ಗೆ ಕ್ರಿಕೆಟ್ ಪಿಚ್ಚು ಬಿಡಿಸಲಾಗದ ನಂಟು. ನೇಗಿಲಿಗೆ ಒತ್ತಾಗಿ ಹಿಡಿದ ಮೂಗಿನಿಂದ ಮಣ್ಣಿನ ಕಣಕಣದ ವಾಸನೆಯನ್ನು ಪೌಷ್ಟಿಕದಂತೆ ಹೀರಿ ಬೆಳೆಯುವ ರೈತನಂತೆ, ಮಂಕಡ್‌ಗೆ ಕ್ರಿಕೆಟ್ ಗಂಧವೇ ಅಪ್ಯಾಯಮಾನ. ತನ್ನ ನೆಲದ ಪ್ರತಿ ಹಿಡಿ ಮಣ್ಣನ್ನೂ ಬಲ್ಲ ಬೇಸಾಯಗಾರನಂತೆ, ಮಂಕಡ್‌ಗೆ ಕ್ರಿಕೆಟ್ ಪಿಚ್ಚುಗಳ ಒಂದೊಂದು ಹುಲ್ಲೂ ಚಿರಪರಿಚಿತ.’’

ಮೊದಲ ರಣಜಿ ಪಂದ್ಯ

ಹಲಕೆಲವು ಹಳೆಯ ಆಟಗಾರರೊಂದಿಗೆ ಹೊಸಬರನ್ನು ಸೇರಿಸಿ ನವಾನಗರದ ಕ್ರಿಕೆಟ್ ತಂಡ ಹನ್ನೆರಡು ತಿಂಗಳುಗಳಲ್ಲಿ ಸಿದ್ಧವಾಯಿತು. ಸಿಂಧ್ ಪ್ರಾಂತದ ವಿರುದ್ಧ ೧೯೩೬ ರ ಡಿಸೆಂಬರ್ ೪ ರಂದು ಅಹಮದಾಬಾದಿನಲ್ಲಿ ತಮ್ಮ ಪ್ರಥಮ ರಣಜಿ ಪಂದ್ಯ ಆಡಿದ ನವಾನಗರ ಶುಭಾರಂಭವನ್ನೇ ಮಾಡಿತು. ಸಿಂಧ್ ೨೫೨ ರನ್ನಿನಿಂದ ಸೋತಿತು. ನವಾನಗರದ ಪರ ಅಮರಸಿಂಗ್ ಅವರು ೭೫ ನಿಮಿಷಗಳಲ್ಲಿ ಸೆಂಚುರಿ ಬಾರಿಸಿದರೆ, ತರುಣ ಆರಂಭ ಆಟಗಾರ ವಿನೂ ಮಂಕಡ್ ೮೬ ರನ್ ಹೊಡೆದರು. ಪಂದ್ಯದಲ್ಲಿ ಅಮರಸಿಂಗ್ ೮೩ ರನ್ನಿಗೆ ೧೦ ವಿಕೆಟ್ಸ್ ಹಾಗೂ ಮಂಕಡ್ ೨೩ ರನ್ನಿಗೆ ೩ ವಿಕೆಟ್ಸ್ ಪಡೆದರು. ಬಂಗಾಳದ ವಿರುದ್ಧ ಫೈನಲ್‌ನಲ್ಲಿ ೧೮೫ ರನ್ ಹೊಡೆದ ಮಂಕಡ್, ನವಾನಗರ ಆಡಿದ ಪ್ರಥಮ ವರ್ಷವೇ ರಣಜಿ ಟ್ರೋಫಿ ಗೆಲ್ಲುವಂತೆ ಮಾಡಿದರು.

ವಿವಾಹ

೧೯೪೫ ರಲ್ಲಿ ಮಂಕಡ್‌ಗೆ ಕಂಕಣಬಲ ಕೂಡಿ ಬಂತು. ಆ ವರ್ಷ ಭಾರತ ಪ್ರವಾಸ ಮಾಡಿದ ಆಸ್ಟ್ರೇಲಿಯನ್ ಸರ್ವಿಸಸ್ ತಂಡದ ಮೇಲೆ ಮುಂಬಯಿ ಮತ್ತು ಕಲ್ಕತ್ತಗಳಲ್ಲಿ ಆಡಿ ಒಳ್ಳೆಯ ಸ್ಕೋರು ಮಾಡಿದ್ದರು. ಸರಣಿಯ ಮೂರನೆ ಪಂದ್ಯದ ಸಮಯದಲ್ಲೇ ಮಂಕಡ್‌ರ ಮದುವೆಯೂ ನಿಶ್ಚಯವಾಗಿತ್ತು.

೧೯೪೫ ರಲ್ಲಿ ಡಿಸೆಂಬರ್ ೬ ರಂದು ಮಂಕಡ್, ಮುಂಬಯಿನ ಶಾಲಾ ಅಧ್ಯಾಪಕಿ ಮನೋರಮಾ ವಸರಾಜನಿ ಅವರನ್ನು ಜಾಮ್‌ನಗರದಲ್ಲಿ ಮದುವೆಯಾದರು. ಇದು ಅವರ ಎರಡನೇ ಮದುವೆ. ಮೊದಲಾಕೆ ತೀರಿಕೊಂಡಿದ್ದರು.

ಮನೋರಮಾ ಮಂಕಡ್‌ಗೆ ಎಲ್ಲಾ ರೀತಿಯಿಂದಲೂ ಅನುರೂಪದ ಮಡದಿಯಾಗಿದ್ದರು. ಅವರ ನೋವು, ನಲಿವುಗಳನ್ನು ಹಂಚಿಕೊಳ್ಳಲು ಆದಷ್ಟು ಕಾಲ ಮಂಕಡ್ ಬಳಿಯೇ ಇರುತ್ತಿದ್ದರು. ಮಂಕಡ್ ಇಂಗ್ಲಿಷ್ ಲೀಗಿನಲ್ಲಿ ಆಡಲು ಹೋದಾಗಲೆಲ್ಲಾ ತಮ್ಮ ಪತ್ನಿಯನ್ನೂ ಕರೆದೊಯ್ಯುತ್ತಿದ್ದರು.

ಇಂಗ್ಲೆಂಡ್ ಪ್ರವಾಸ

ಸ್ವದೇಶದಲ್ಲಿ ದೊರಕಿದ ಅನುಭವ ಮಂಕಡ್‌ಗೆ ೧೯೪೬ರ ಇಂಗ್ಲೆಂಡ್ ಪ್ರವಾಸದಲ್ಲಿ ಅಮೂಲ್ಯವಾಯಿತು. ಪ್ರವಾಸದುದ್ದಕ್ಕೂ ಅತ್ಯುತ್ತಮವಾಗಿ ಆಡಿದ ಅವರು ೧೧೨೦ ರನ್ ಹೊಡೆದು, ೧೨೯ ವಿಕೆಟ್ ಪಡೆದು ‘ಡಬ್ಬಲ್’ ಗಳಿಸಿದರು. ಆವರೆಗೆ ಈ ವಿಕ್ರಮವನ್ನು ಯಾವ ಭಾರತೀಯನೂ ಸಾಧಿಸಿರಲಿಲ್ಲ. ಅಲ್ಲದೆ ಮಂಕಡ್ ೧೮ ವರ್ಷಗಳ ಹಿಂದಿನ ಲ್ಯಾರಿ ಕಾನ್‌ಸ್ಟನ್‌ಟೈನ್ ಅವರ ದಾಖಲೆಯನ್ನು ಉತ್ತಮಪಡಿಸಿದರು. ಇಂಗ್ಲೆಂಡಿನ ಪ್ರಖ್ಯಾತ ಪ್ರಕಟಣೆಯಾದ ‘ವಿಸ್ಡನ್’  ಮಂಕಡರನ್ನು ವರ್ಷದ ಐವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಹೆಸರಿಸಿ ಗೌರವಿಸಿತು. ಮಂಕಡ್‌ಗೆ ಇಂಗ್ಲಿಷ್ ಕೌಂಟಿಗಳ ಆಹ್ವಾನದ ಸುರಿಮಳೆಯಾಯಿತು. ೧೯೪೭ ರಿಂದ ೧೯೬೨ ರ ವರೆಗೆ ಲ್ಯಾಂಕಷೈರ್ ಲೀಗಿನಲ್ಲಿ ಆಡಿದ ಮಂಕಡ್ ಹಲವು ದಾಖಲೆಗಳನ್ನು ನಿರ್ಮಿಸಿದರು. ಅವರ ಪ್ರೊಫೆಷನಲ್ ರೀತಿಯನ್ನು ಈಗಲೂ ಹಾಡಿಹರಸುವವರಿದ್ದಾರೆ. (‘‘ಪ್ರೊಫೆಷನಲ್’  ಎಂದರೆ ಹಣಕ್ಕಾಗಿ ಸಂಬಳಕ್ಕಾಗಿ ಕೆಲಸ ಮಾಡುವವರು, ಆಡುವವರು.)

ಬೌಲರ್ ಮಂಕಡ್

ಅಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ಪ್ರಪ್ರಥಮ ಜಯ ಒದಗಿಸಿದ ಕೀರ್ತಿ ಮಂಕಡ್‌ಗೆ ಸಲ್ಲುತ್ತದೆ. ಇಂಗ್ಲೆಂಡ್ ವಿರುದ್ಧ ೧೯೫೧-೫೨ ರ ಸರಣಿಯಲ್ಲಿ ಮದರಾಸಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ತನ್ನ ರಜತೋತ್ಸವ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿತು. ಇಂಗ್ಲೆಂಡಿನ ಆಟಗಾರರು ಮಂಕಡರ ಬೌಲಿಂಗಿಗೆ ನಿರುತ್ತರರಾದರು. ಪಂದ್ಯದಲ್ಲಿ ಒಟ್ಟು ೨೪ ಮೇಡನ್‌ಗಳಿದ್ದ ೬೯.೩ ಓವರುಗಳನ್ನು ಬೌಲ್ ಮಾಡಿದ ಮಂಕಡ್ ಕೇವಲ ೧೦೮ ರನ್ ನೀಡಿ ೧೨ ವಿಕೆಟ್ ಗಳಿಸಿದರು. ಆ ಸರಣಿಯಲ್ಲಿ ಎಲ್ಲ ಸೇರಿ ೩೪ ವಿಕೆಟ್ ಪಡೆದ ಮಂಕಡ್ ಹೊಸ ದಾಖಲೆಯೊಂದನ್ನು ನಿರ್ಮಿಸಿದರು. ಅದರ ಮುಂದಿನ ವರ್ಷ ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್‌ನಲ್ಲಿ ೧೩ ವಿಕೆಟ್ ಪಡೆದು ಭಾರತದ ಮತ್ತೊಂದು ಜಯಕ್ಕೆ ಕಾರಣರಾದರು.

ಬೌಲರುಗಳಿಗೆ ಸಹಾಯಕವಾಗದ ಪಿಚ್ ಮೇಲೂ ಉತ್ತಮವಾಗಿ ಬೌಲ್ ಮಾಡುತ್ತಿದ್ದುದು ಮಂಕಡರ ವೈಶಿಷ್ಟ್ಯ. ತಮ್ಮ ಬೌಲಿಂಗ್ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದ್ದಾರೆ: ‘‘ನಾನು ಬೌಲ್ ಮಾಡಬೇಕಾಗಿ ಬಂದ ಪಿಚ್‌ಗಳ ಮೇಲೆ ಬೇರೆಬೇರೆ ರೀತಿಗಳಲ್ಲಿ ಬೌಲ್ ಮಾಡಬೇಕಾಗುತ್ತಿತ್ತು. ಇಲ್ಲದಿದ್ದರೆ ಉಳಿಗಾಲವಿರಲಿಲ್ಲ. ನಾನು ಪ್ರತಿಯೊಂದು ಬಾಲನ್ನೂ ಬೇರೆ ಬೇರೆ ರೀತಿಯಲ್ಲಿ ಬಿಡಲು ಪ್ರಯತ್ನಿಸುತ್ತಿದ್ದೆ….ಸತತವಾಗಿ ಮಿಡ್ಲ್ ಮತ್ತು ಆಫ್ ಸ್ಟಂಪಿಗೆ ಎಸೆಯುವುದು ನನ್ನ ಗುರಿ. ಹಾಗೆ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ತಪ್ಪಿಗೆ ಸಿಕ್ಕಿಸಲು ಅವಕಾಶವಾಗುತ್ತದೆ.’’

ಮಂಕಡ್ ಹೇಳಿದುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಒಮ್ಮೆ ಓವಲ್ ಮೈದಾನದಲ್ಲಿ ಆಟದ ಪ್ರಥಮ ದಿನ ಹಟ್ಟನ್ ಮತ್ತು ಷೆಪರ್ಡ್‌ರಿಗೆ ಬೌಲ್ ಮಾಡುತ್ತಿದ್ದ ಮಂಕಡ್ ಸತತವಾಗಿ ೧೩ ಓವರುಗಳಲ್ಲಿ ಕೇವಲ ಒಂದು ರನ್ ನೀಡಿದ್ದರು. ಪ್ರೇಕ್ಷಕರು ತಮ್ಮ ಅಸಮಾಧಾನ ಸೂಚಿಸಲು ನಿಧಾನ ಚಪ್ಪಾಳೆಗೆ ತೊಡಗಿದಾಗ, ಹಟ್ಟನ್ ನೆರೆದಿದ್ದವರಿಗೆ ಬ್ಯಾಟ್ ತೋರಿಸಿ ‘‘ಇಂಥ ಬೌಲರ್ ವಿರುದ್ಧ ನೀವೇನು ಮಾಡಬಲ್ಲಿರೋ ನೋಡೋಣ’’ ಎಂದು ಸಂಜ್ಞೆ ಮಾಡಿದರು. ಮಂಕಡ್ ಯಾವುದೇ ವಿಕೆಟ್ ಮೇಲೆ ಎಂಥ ಅಸಾಧಾರಣ ಬೌಲರ್ ಆಗಿದ್ದರು ಎಂಬುದಕ್ಕೆ ಈ ಒಂದು ನಿದರ್ಶನ ಸಾಕು.

ಮಂಕಡರ ಬೌಲಿಂಗ್‌ನಲ್ಲಿ ವೈವಿಧ್ಯ ಇತ್ತು. ಕೌಶಲ ಇತ್ತು. ಸರಳವಾದ ಆದರೆ ರಮ್ಯವಾದ ವಿಧಾನವನ್ನು ಮೈಗೂಡಿಸಿಕೊಂಡಿದ್ದ ಮಂಕಡರ ಬೌಲಿಂಗ್‌ಅನ್ನು ಸುಲಭವಾಗಿ ಎದುರಿಸಬಹುದು ಎಂದು ತೋರುತ್ತಿತ್ತು. ಆದರೆ ಅದನ್ನು ಎದುರಿಸಬೇಕಾದ ಆಟಗಾರನಿಗೆ ಒಗಟಾಗುತ್ತಿತ್ತು. ಬ್ಯಾಟ್ಸ್‌ಮನ್ ಮುಂದೆ ಎಂತಹ ಬಾಲ್ ಬರುವುದೋ ಎಂದು ಸದಾಕಾಲ ಚಿಂತಿಸುವಂತೆ ಮಾಡುತ್ತಿದ್ದ ಮಂಕಡ್, ಬ್ಯಾಟ್ಸ್‌ಮನ್ ಬಹು ಎಚ್ಚರಿಕೆಯಿಂದ, ಯೋಚಿಸಿ ಆಡುವಂತೆ ಮಾಡುತ್ತಿದ್ದರು. ಮಂಕಡ್ ಪ್ರಪಂಚದ ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯುತ್ತಮ ಎಡಗೈ ಸ್ಪಿನ್ನರುಗಳಲ್ಲಿ ಒಬ್ಬರು ಎನ್ನುವ ಬಗ್ಗೆ ಎರಡು ಮಾತಿಲ್ಲ. ಆಗ ಭಾರತದ ಕ್ಲೋಸ್-ಇನ್-ಫೀಲ್ಡಿಂಗ್ ಈಗಿನಷ್ಟು ಉತ್ತಮವಾಗಿದ್ದರೆ ಮಂಕಡ್ ಇನ್ನಷ್ಟು ವಿಕೆಟ್‌ಗಳನ್ನು ಪಡೆಯುತ್ತಿದ್ದುದರಲ್ಲಿ ಅನುಮಾನವಿಲ್ಲ.

ಕ್ರಿಕೆಟ್ ಬೋರ್ಡಿನ ಧೋರಣೆ

ಭಾರತ ತಂಡ ೧೯೫೨ ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡುವುದಿತ್ತು. ಇಂಗ್ಲಿಷ್ ಕೌಂಟಿಯಲ್ಲಿ ತಮ್ಮ ಪರ ಆಡಲು  ಹೆಸ್ಲಿಂಗ್‌ಡನ್ ತಂಡದವರು ಮಂಕಡ್‌ರನ್ನು ಆಹ್ವಾನಿಸಿದ್ದರು. ಮಂಕಡ್ ವೃತ್ತಿಗಾರ (ಪ್ರೊಫೆಷನಲ್) ಆಟಗಾರರಾಗಿದ್ದರು. ಕ್ರಿಕೆಟ್ ಆಡುವುದೇ ಅವರ ಉದ್ಯೋಗ. ಹೀಗಾಗಿ ಭಾರತದ ತಂಡ ಇಂಗ್ಲೆಂಡಿಗೆ ಹೋಗುವ ಸಂದರ್ಭದಲ್ಲಿ ಮಂಕಡ್ ಪೇಚಿನಲ್ಲಿ ಸಿಕ್ಕಿಬಿದ್ದರು. ದೇಶಕ್ಕೆ ಆಡುವುದೋ, ಕೌಂಟಿಗೆ ಆಡುವುದೋ ತಿಳಿದಿರಲಿಲ್ಲ. ಕೊನೆಗೆ ೧೯೫೧ ರ ನವೆಂಬರ್ ತಿಂಗಳಲ್ಲಿ ಭಾರತದ ಕ್ರಿಕೆಟ್ ಬೋರ್ಡ್‌ಗೆ ಪತ್ರ ಬರೆದು ತಮ್ಮನ್ನು ಭಾರತದ ತಂಡದಲ್ಲಿ ಸೇರಿಸುವ ಆಶ್ವಾಸನೆ ನೀಡಿದಲ್ಲಿ ಕೌಂಟಿಯೊಂದಿಗೆ ಕರಾರು ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಆದರೆ ಅಂಥ ಆಶ್ವಾಸನೆ ನೀಡಲು ಬೋರ್ಡ್ ನಿರಾಕರಿಸಿತು.

ಕ್ರಿಕೆಟನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ ಒಬ್ಬ ಆಟಗಾರನಿಗೆ ಸಹಜವಾದ ರೀತಿಯಲ್ಲಿ ಮಂಕಡ್ ಭರವಸೆ ಕೇಳಿದ್ದರು. ಭಾರತದ ತಂಡಕ್ಕೆ ಆಡುವುದು ಲಾಭದಾಯಕವಲ್ಲದಿದ್ದರೂ, ದೇಶಕ್ಕೆ ಆಡುವ ಹೆಮ್ಮೆಯ ಅವಕಾಶವನ್ನು ಸ್ವೀಕರಿಸಲು ಅವರು ತಯಾರಿದ್ದರು. ಆದರೆ ಅವರು ಹೆಸ್ಲಿಂಗ್‌ಡನ್‌ನ ಆಹ್ವಾನವನ್ನು ತಿರಸ್ಕರಿಸಿದ ಮೇಲೆ ಭಾರತದ ತಂಡಕ್ಕೆ ಆಯ್ಕೆಯಾಗದಿದ್ದರೆ ಏನು ಮಾಡಬೇಕು? ಆಯ್ಕೆದಾರರ ಅಸ್ಥಿರ ಮನೋಭಾವವನ್ನು ತಿಳಿದಿದ್ದ ಅವರು ‘ಇಲ್ಲೂ ಸಲ್ಲದೆ ಅಲ್ಲೂ ಸಲ್ಲದಂತಾಗದಿರಲಿ’  ಎಂದು ಪತ್ರ ಬರೆದಿದ್ದರು. ಇದು ಆಯ್ಕೆದಾರರನ್ನು ಕೆರಳಿಸಿತು. ವಿಜಯ ಹಜಾರೆಯನ್ನು ನಾಯಕನಾಗಿ ಆರಿಸಿದ ಆಯ್ಕೆಸಮಿತಿ, ವಿನೂ ಮಂಕಡ್ ಅವರನ್ನು ಆಯ್ಕೆಗೇ ಪರಿಗಣಿಸಬಾರದೆಂದು ನಿರ್ಧರಿಸಿತು.

‘‘ಮಂಕಡ್ ಆಡದಿದ್ದರೆ ದೇಶಕ್ಕೆ ನಷ್ಟವೇನಿಲ್ಲ’’ ಎಂದು ತಿಳಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಸಿ.ಕೆ. ನಾಯ್ಡು ಅವರು, ‘‘ಮಂಕಡರಂಥ ಡಜನ್‌ಗಟ್ಟಲೆ ಆಟಗಾರರನ್ನು ಭಾರತ ಸೃಷ್ಟಿಸಬಲ್ಲದು’ ಎಂದರು. ಸಿ.ಕೆ. ನಾಯ್ಡು ರವರಂತಹ ಪ್ರಮುಖ ಆಟಗಾರರೊಬ್ಬರು ಮಂಕಡ್ ಬಗ್ಗೆ ಅಷ್ಟು ಬೇಜವಾಬ್ದಾರಿತನದ ಮಾತು ಆಡಿದ್ದು ಸ್ವಲ್ಪ ಆಶ್ಚರ್ಯದ ವಿಷಯ. ಆದರೆ ಮಂಕಡ್ ಕ್ರಿಕೆಟ್ ರಂಗದಿಂದ ನಿವೃತ್ತಿಯಾಗಿ ಇಪ್ಪತ್ತು ವರ್ಷಗಳ ನಂತರವೂ ಅವರೊಂದಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ವ್ಯಕ್ತಿ ಭಾರತದ ಕ್ರಿಕೆಟ್ ದಿಗಂತದಲ್ಲಿ ಎಲ್ಲೂ ಇಲ್ಲ ಎಂಬುದು ಅವರ ಹಿರಿಮೆಯನ್ನು ಎತ್ತಿ ಹಿಡಿಯುವ ಸಂಗತಿ.

ಮಂಕಡ್ ಇಲ್ಲದ ತಂಡ

ಇಂಗ್ಲೆಂಡ್ ಪ್ರವಾಸ ಆರಂಭಿಸಿದ ಹಜಾರೆ ತಂಡ ಸೋಲಿನ ಮೇಲೆ ಸೋಲು ಅನುಭವಿಸಿತು. ಕೌಂಟಿ ಪಂದ್ಯಗಳಲ್ಲೇ ಕಳಪೆಯಾಗಿ ಆಡುತ್ತಿದ್ದು, ಟೆಸ್ಟ್‌ಗಳಲ್ಲಿ ಇಂಗ್ಲೆಂಡಿನ ಘಟಾನುಘಟಿಗಳನ್ನು ಎದುರಿಸುವುದು ಹೇಗೆಂದು ಯೋಚಿಸುವಂತಾಯಿತು. ತಂಡಕ್ಕೆ ಸ್ಫೂರ್ತಿ ನೀಡುವಂಥ ಒಬ್ಬನೇ ಒಬ್ಬ ಆಟಗಾರನೂ ಇರಲಿಲ್ಲ. ಲೀಡ್ಸ್ ನಲ್ಲಿ ನಡೆದ ಪ್ರಥಮ ಟೆಸ್ಟ್‌ನಲ್ಲಿ ಭಾರತದ ತಂಡಕ್ಕೆ ‘ಭೂತದರ್ಶನ’ ಆರಂಭವಾಯಿತು. ಆ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ನಮ್ಮ ನಾಲ್ವರು ಆಟಗಾರರು ಔಟಾದಾಗ ಸ್ಕೋರ್‌ಬೋರ್ಡ್ ನೋಡುವಂತಿತ್ತು. ಸೊನ್ನೆ ರನ್ನಿಗೆ ನಾಲ್ಕು ವಿಕೆಟ್! ಅದೊಂದು ರೀತಿಯ ವಿಶ್ವದಾಖಲೆಯೆ! ಆ ಟೆಸ್ಟ್ ಭಾರಿ ಅಂತರದಿಂದ ಸೋತ ಭಾರತದ ತಂಡ ಏನಾದರೂ ಮಾಡದಿದ್ದರೆ ‘ಈ ಬಚ್ಚಾಗಳೊಂದಿಗೆ ನಾವು ಆಡುವುದಿಲ್ಲ’ ಎಂದು ಇಂಗ್ಲೆಂಡ್ ನಿರಾಕರಿಸುವ ಸಂಭವ ಇತ್ತು.

ಟೀಮಿನ ಮ್ಯಾನೇಜರ್ ಪಂಕಜ್ ಗುಪ್ತ ಚಡಪಡಿಸುತ್ತಿದ್ದರು. ಲೀಡ್ಸ್ ಟೆಸ್ಟಿಗೆ ಮೊದಲೇ ಮಂಕಡರನ್ನು ಕರೆಸಿಕೊಳ್ಳುವ ಸಂಧಾನ ನಡೆಸುವುದಕ್ಕಾಗಿ ಬೋರ್ಡ್‌ನ ಅನುಮತಿ ಕೇಳಿ ಪತ್ರ ಬರೆದಿದ್ದರು. ಆಲ್‌ರೌಂಡರ್ ಮಂಕಡರನ್ನು ಒಂದು ಟೆಸ್ಟಿಗಿಂತ ಹೆಚ್ಚಾಗಿ ಬಿಟ್ಟುಕೊಡಲು ಹೆಸ್ಲಿಂಗ್‌ಡನ್ ನಿರಾಕರಿಸಿತು. ಮೊದಲ ಟೆಸ್ಟಿನಲ್ಲಿ ಅನುಭವಿಸಿದ ಮಹತ್ತರ ಸೋಲು ಗುಪ್ತರನ್ನು ಇನ್ನಷ್ಟು ಪೇಚಿಗೆ ಸಿಕ್ಕಿಸಿತು.

ತಮ್ಮ ಸ್ನೇಹಿತರಾದ ಗ್ಲಾಮರ್‌ಗನ್ ಕೌಂಟಿಯ ಅಧ್ಯಕ್ಷ ಸರ್ ಹರ್ಬರ‍್ಟ್ ಮೆರೆಟ್ ಅವರ ಮೊರೆ ಹೊಕ್ಕರು. ಮೆರೆಟ್ ಅವರು ಹೆಸ್ಲಿಂಗ್‌ಡನ್ ಒಂದಿಗೆ ಸಂಧಾನ ನಡೆಸಿ, ಸಾಕಷ್ಟು ದೊಡ್ಡ ಮೊತ್ತವನ್ನು ಕೊಟ್ಟ ಮೇಲೆಯೇ, ಮಂಕಡ್‌ಗೆ ಉಳಿದ ಮೂರೂ ಟೆಸ್ಟ್‌ಗಳಲ್ಲಿ ಭಾರತದ ಪರ ಆಡುವ ಅನುಮತಿ ದೊರೆಯಿತು. ಅಂತೂ ‘‘ಡಜನ್ ಗಟ್ಟಲೆ’’ ಆಟಗಾರರನ್ನು ಬಿಟ್ಟು ಮಂಕಡರನ್ನು ಬೇಡುವಂತಾಯಿತು.

ಮಂಕಡ್ ವರ್ಸಸ್ ಇಂಗ್ಲೆಂಡ್

ಲಾರ್ಡ್ಸ್‌ನಲ್ಲಿ ನಡೆಯಲಿದ್ದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ತಂಡವನ್ನು ಸೇರಿದ ಮಂಕಡ್ ಬಗ್ಗೆ ಉಳಿದ ಆಟಗಾರರಿಗೆ ಅಸೂಯೆ, ಅಸಮಾಧಾನ ಉಂಟಾಯಿತು. ಅವರು ಹಣಕ್ಕಾಗಿ ಆಡುವವರೆಂದು ತಿರಸ್ಕಾರದಿಂದ ಒಳಗೊಳಗೇ ಹಲವರು ಕುದಿಯುತ್ತಿದ್ದರು.

ಆದರೆ ಲಾರ್ಡ್ಸ್‌ನಲ್ಲಿ ಪಂದ್ಯ ಆರಂಭವಾದಾಗ ಮಂಕಡ್ ವಿಷಯದಲ್ಲಿದ್ದ ಎಲ್ಲ ಅಸಮಾಧಾನಗಳನ್ನೂ ಮರೆಯುವಂತಾಯಿತು. ಏನು ಆಟ! ಏನು ಸಾಮರ್ಥ್ಯ! ಮಂಕಡರು ಸಿಂಹದ ಬಾಯನ್ನು ಬಿಡಿಸಿ ಅದರ ಹಲ್ಲು ಕೀಳುವ ಸಾಹಸ ತೋರಿದರು. ಭಾರತದ ತಂಡ ಸೋಲಿನ ದವಡೆಯಲ್ಲಿದ್ದರೂ ವೀರ ಅಭಿಮನ್ಯುವಿನಂತೆ ಹೋರಾಡಿ ದರು.

ಇಪ್ಪತ್ತೆ ದು ಗಂಟೆಗಳ ಈ ಟೆಸ್ಟ್‌ನಲ್ಲಿ ಇಪ್ಪತ್ತು ಗಂಟೆ ಕಾಲ ಮಂಕಡ್ ಮೈದಾನದಲ್ಲೇ ಇದ್ದರು. ಟ್ರೂಮನ್, ಬೆಡ್ಸರ್, ಸ್ಟಾಥಮ್, ಲೇಕರ್ ಮತ್ತು ಜೆನ್‌ಕಿನ್ಸ್ ಅವರ ಬೌಲಿಂಗಿಗೆ ತತ್ತರಿಸಿದ ಭಾರತದ ಆಟಗಾರರು ತರಗೆಲೆಗಳಂತೆ ಉರುಳುತ್ತಿದ್ದರೆ, ಮಂಕಡ್ ಒಬ್ಬರೇ ಧೈರ್ಯವಾಗಿ ಆಡಿ ೭೨ ರನ್ ಮಾಡಿದರು. ಇಂಗ್ಲೆಂಡ್ ಆಡಿದಾಗ ಒಟ್ಟು ೯೭ ಓವರ್ ಬೌಲ್ ಮಾಡಿ ಐದು ವಿಕಟ್ಸ್ ಪಡೆದ ಮಂಕಡ್, ಅನಂತರ ಭಾರತದ ಇನ್ನಿಂಗ್ಸ್ ಆರಂಭಿಸಬೇಕಾಯಿತು ವಿರಾಮವೇ ಇಲ್ಲದೆ.

ಮೊದಲ ಇನ್ನಿಂಗ್ಸ್ ನಲ್ಲಿ ೩೦೨ ರನ್ ಹಿಂದೆ ಉಳಿದ ಭಾರತಕ್ಕೆ ಆ ಪಂದ್ಯದಲ್ಲಿ ಯಾವುದೇ ಆಸೆ ಉಳಿದಿರಲಿಲ್ಲ. ಆದರೆ ಮತ್ತೊಮ್ಮೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಂಕಡ್ ೧೮೪ ರನ್ ಬಾರಿಸಿ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಈ ಪಂದ್ಯದಲ್ಲಿ ಭಾರತ ಸೋತರೂ, ಮಂಕಡರ ಆಟವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಬ್ರಿಟಿಷ್ ಪತ್ರಿಕೆಗಳು ‘‘ಮಂಕಡ್ ವರ್ಸಸ್ ಇಂಗ್ಲೆಂಡ್ ಟೆಸ್ಟ್’’ ಎಂದು ಕರೆದವು.

ಹೊಸ ದಾಖಲೆ

೧೯೫೫-೫೬ ರಲ್ಲಿ ಭಾರತ ಪ್ರವಾಸ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಮಂಕಡ್ ತಮ್ಮ ಬ್ಯಾಟಿಂಗ್ ಚುರುಕು ಮುಟ್ಟಿಸಲು ನಿರ್ಧರಿಸಿದ್ದರೆಂದು ತೋರುತ್ತದೆ. ಮುಂಬೈನ ಎರಡನೇ ಟೆಸ್ಟ್ ನಲ್ಲಿ  ೨೨೩ ರನ್ ಹೊಡೆದಿದ್ದ ಮಂಕಡ್, ಮದ್ರಾಸಿನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಮತ್ತೆ ಎದುರಾಳಿಗಳು ತತ್ತರಿಸುವಂತೆ ಮಾಡತೊಡಗಿದರು. ಪಂಕಜರಾಯ್ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದ ಮಂಕಡ್ ಔಟಾಗುವ ಕುರುಹೇ ತೋರಲಿಲ್ಲ. ಇಬ್ಬರೂ ರನ್ ಪೇರಿಸುತ್ತಾ ನಾನೂರರ ಗಡಿ ದಾಟಿದಾಗ, ಇದೇನು ಎಂದೂ ಮುಗಿಯದ ಬೇತಾಳನ ಕಥೆಯಂತೆಯೋ ಎಂದು ಎದುರಾಳಿಗಳು ಬೆರಗಾಗುವಂತಾಯಿತು.

ಅಂತೂ ೪೧೩ ರನ್‌ಗಳಾದ ನಂತರ ಪಂಕಜರಾಯ್ ಔಟಾದಾಗ, ಇಬ್ಬರೂ ಮೊದಲ ವಿಕೆಟ್‌ಗೆ ವಿಶ್ವದಾಖಲೆ ಸ್ಥಾಪಿಸಿದ್ದರು. ಮಂಕಡ್ ಮತ್ತೊಂದು ಡಬ್ಬಲ್ ಸೆಂಚುರಿ ಬಾರಿಸಿ ೨೩೧ ಕ್ಕೆ ಔಟಾದರು. ಇದು ಭಾರತದ ಪರ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರು. ಅಲ್ಲದೆ, ಅವರು ಒಂದೇ ಸರಣಿಯಲ್ಲಿ ಎರಡು ಡಬ್ಬಲ್ ಸೆಂಚುರಿ ಹೊಡೆದ ಪ್ರಥಮ ಭಾರತೀಯ. ಇಡೀ ಜಗತ್ತಿನಲ್ಲಿ ಡಾನ್ ಬ್ರಾಡ್‌ಮನ್ ಮತ್ತು ವಾಲ್ಟರ್ ಹ್ಯಾಮಂಡ್ ಮಾತ್ರ ಈ ಸಾಧನೆ ಮಾಡಿರುವುದು ಆಲ್‌ರೌಂಡರ್ ಮಂಕಡರ ಪ್ರಾಬಲ್ಯದ ಕುರುಹು.

ಬ್ಯಾಟ್ಸ್‌ಮನ್ ಮಂಕಡ್

ವೇಗದ ಬೌಲಿಂಗ್ ಆಡುವುದರಲ್ಲಿ ಒಳ್ಳೆಯ ಪರಿಣತಿ ಪಡೆದಿದ್ದ ಅವರು ‘ಬಂಪರ್’ ಗಳಿಗೆ ಎಂದೂ ಹೆದರಿದವರಲ್ಲ. ಎಷ್ಟೇ ವೇಗವಾಗಿ ಚೆಂಡನ್ನು ಅವರತ್ತ ಎಸೆದರೂ, ವಿಚಲಿತಗೊಳ್ಳದೆ ಆಡುತ್ತಿದ್ದರು. ಒಂದು ವೈಶಿಷ್ಟ್ಯವೆಂದರೆ, ಮಂಕಡರ ಎಲ್ಲ ಅತ್ಯುತ್ತಮ ಇನ್ನಿಂಗ್ಸ್‌ಗಳೂ ಆ ಕಾಲದ ಶ್ರೇಷ್ಠ ಬಿರುಸಿನ ಬೌಲರುಗಳ ವಿರುದ್ಧವೇ ಬಂದಿವೆ. ಆಸ್ಟ್ರೇಲಿಯಾದ ೧೯೪೭-೪೮ ರ ಪ್ರವಾಸ ಕಾಲದಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಮತ್ತು ಐದನೇ ಟೆಸ್ಟ್‌ಗಳೆರಡರಲ್ಲೂ ಮಂಕಡ್ ಸೆಂಚುರಿ ಬಾರಿಸಿದರು. ಎರಡನೇ ಮಹಾಯುದ್ಧದ ನಂತರದ ಅತ್ಯಂತ ಸಮರ್ಥ ವೇಗದ ಬೌಲಿಂಗ್ ಜೋಡಿ ಎಂದು ಹೆಸರಾಗಿರುವ ರೇ ಲಿಂಡ್‌ವಾಲ್ ಮತ್ತು ಕೀತ್ ಮಿಲ್ಲರ್ ಅವರ ಬೌಲಿಂಗ್‌ನ್ನು ಲೀಲಾಜಾಲವಾಗಿ ಆಡಿದ ಅವರು, ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದುಕೊಂಡರು.

ಮಂಕಡರ ಬ್ಯಾಟಿಂಗಿನಲ್ಲಿ ದೃಢತೆ ಇರಲಿಲ್ಲ, ಅವರು ಅನೇಕ ವೇಳೆ ಕಳಪೆ ಬೌಲಿಂಗಿಗೆ ಔಟಾಗುತ್ತಿದ್ದರು ಎಂಬುದು ಒಂದು ಸಾಮಾನ್ಯವಾಗಿ ಕೇಳಿಬರುವ ಆಕ್ಷೇಪಣೆ. ಆದರೆ ಆಲ್‌ರೌಂಡ್ ಆಟಗಾರನಾದವನು ಅನುಭವಿಸುವ ದೈಹಿಕ ಮತ್ತು ಮಾನಸಿಕ ಆಯಾಸವನ್ನು ನಾವು ಗಮನದಲ್ಲಿಡಬೇಕು. ಅದರಲ್ಲೂ ಮಂಕಡ್ ಸುಮಾರು ೫೦-೬೦ ಓವರ್‌ಗಳನ್ನು ಬೌಲ್ ಮಾಡಿ, ಅನಂತರ ಸ್ವಲ್ಪವೂ ವಿಶ್ರಾಂತಿಗೆ ಅವಕಾಶವಿಲ್ಲದೆ ಭಾರತದ ಬ್ಯಾಟಿಂಗ್ ಆರಂಭಿಸಬೇಕಿತ್ತು. ಬ್ಯಾಟಿಂಗಿಗೆ ಪ್ರತಿ ನಿಮಿಷವೂ ಏಕಾಗ್ರತೆ, ಮಾನಸಿಕ ಎಚ್ಚರ ಅಗತ್ಯವಾದ್ದರಿಂದ ಮಂಕಡ್ ಒಮ್ಮೊಮ್ಮೆ ಚೆನ್ನಾಗಿ ಆಡಿರದಿದ್ದರೆ ಅದು ಸಹಜವೇ.

ಮಂಕಡರ ಸಮಕಾಲೀನರಲ್ಲಿ ಪ್ರತಿಭಾವಂತ ಆಟ ಗಾರರೇ ಸೇರಿದ್ದರು. ಹ್ಯಾಮಂಡ್, ಬ್ರಾಡ್‌ಮನ್, ಹಟ್ಟನ್, ಕಾಂಪ್ಟನ್, ಮೋರಿಸ್, ಹ್ಯಾಸೆಟ್, ವೀಕ್ಸ್ ಮತ್ತು ವಾಲ್ಕಾಟ್‌ರಂಥ ದಿಗ್ಗಜಗಳಿಗೆ ಮಂಕಡ್ ತಮ್ಮ ಬೌಲಿಂಗ್ ಚಳಕ ತೋರಿಸಿದರು. ಅವರು ಗಳಿಸಿದ ರನ್ನುಗಳೂ ಅಸಮಾನ್ಯ ಬೌಲರುಗಳನ್ನು ಎದುರಿಸಿಯೇ. ಟ್ರೂಮನ್, ಬೆಡ್‌ಸರ್, ರೈಟ್, ಲಿಂಡ್‌ವಾಲ್, ಮಿಲ್ಲರ್, ಜಾನ್‌ಸ್ಟನ್, ಲಾಕ್ ಮತ್ತು ಲೇಕರ್‌ರಂಥ ಶ್ರೇಷ್ಠ ಬೌಲರುಗಳ ವಿರುದ್ಧ ರನ್ ಗಳಿಸಿದರು. ಆದ್ದರಿಂದಲೇ ವಿನೂ ಮಂಕಡರ ಸಾಧನೆ ಅತ್ಯಂತ ಪ್ರಶಂಸನೀಯ.

ಅನ್ಯಾಯವನ್ನು ಅನುಭವಿಸಿದರು.

ಅಷ್ಟು ಪ್ರತಿಭಾವಂತ ಆಟಗಾರನಾಗಿದ್ದರೂ ನಾಯಕತ್ವದ ವಿಷಯದಲ್ಲಿ ಮಂಕಡ್‌ಗೆ ನ್ಯಾಯಸಲ್ಲಲಿಲ್ಲ ಎಂದೇ ಹೇಳಬೇಕು. ಪಾಕಿಸ್ತಾನದ ವಿರುದ್ಧ ಒಂದು ಸರಣಿಯಲ್ಲಿ ನಾಯಕತ್ವ ವಹಿಸಿದ್ದು ಬಿಟ್ಟರೆ, ಅವಕಾಶ ಸಿಕ್ಕಿದ್ದು ಇನ್ನು ಒಂದೆರಡು ಟೆಸ್ಟ್‌ಗಳಲ್ಲಿ ಮಾತ್ರ. ವೆಸ್ಟ್ ಇಂಡೀಸ್ ವಿರುದ್ಧ ೧೯೫೮-೫೯ರ ಸರಣಿಯಲ್ಲಿ ತಮ್ಮ ಕ್ರಿಕೆಟ್ ಜೀವನದ ಕೊನೆಯ ಟೆಸ್ಟ್ ಆಡಿದ ಮಂಕಡ್ ಅದರಲ್ಲಿ ಭಾರತದ ಕ್ಯಾಪ್ಟನ್ ಆಗಿದ್ದರು. ಅವರಿಗೆ ನಾಯಕತ್ವ ಒದಗಿಸಿದ ಆ ಸಂದರ್ಭವನ್ನು ವಿವರಿಸಿದರೆ, ತೆರೆಮರೆಯಲ್ಲಿ ಅಧಿಕಾರಿಗಳು ನಡೆಸುವ ನಾಟಕದ ಬಗ್ಗೆ ಯಾರಿಗಾದರೂ ಹೇಸಿಗೆಯಾಗುತ್ತದೆ.

ಮದರಾಸಿನಲ್ಲಿ ನಡೆದ ಆ ಪಂದ್ಯಕ್ಕೆ ಕೊನೆಗಳಿಗೆಯಲ್ಲಿ ಮಂಜ್ರೇಕರ್ ಆಡುವುದಿಲ್ಲ ಎಂದು ತಿಳಿಸಿದರು. ಅವರ ಸ್ಥಾನಕ್ಕೆ ಅರ್ಹರಾದವರನ್ನು ತುಂಬುವ ಕೆಲಸವನ್ನು ನಾಯಕ ಉಮ್ರೀಗರ್ ಮತ್ತು ಆಯ್ಕೆದಾರರಿಗೆ ಬಿಡುವ ಬದಲು, ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷರು ಮಧ್ಯೆ ಪ್ರವೇಶಿಸಿದರು. ಮಂಜ್ರೇಕರ್ ಬದಲು ಒಬ್ಬ ಬ್ಯಾಟ್ಸ್‌ಮನ್ ಆದ ಸೇನ್ ಗುಪ್ತ ಅವರನ್ನು ಆಡಿಸಬೇಕೆಂದು ನಾಯಕ ಉಮ್ರೀಗರ್ ಪಟ್ಟು ಹಿಡಿದರು. ಕ್ರಿಕೆಟ್ ಬೋರ್ಡ್ ನಿರಾಕರಿಸಿದಾಗ, ಉಮ್ರೀಗರ್ ನಾಯಕತ್ವಕ್ಕೆ ರಾಜೀನಾಮೆ ನೀಡಿದರು.

ಅನಂತರ ಉಮ್ರೀಗರ್ ಅವರನ್ನು ಎಷ್ಟು ಒಲಿಸಿದರೂ ಅವರು ರಾಜೀನಾಮೆ ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. ಪಂದ್ಯ ಆರಂಭವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳಿದ್ದುದರಿಂದ ಮಂಕಡ್ ಅವರನ್ನು ನಾಯಕರಾಗಲು ಕೇಳಿಕೊಳ್ಳಲಾಯಿತು. ಎಲ್ಲ ಸಂಧಾನಗಳೂ ಮುಗಿಯುವ ವೇಳೆಗೆ ಬೆಳಗಿನ ಜಾವವಾಗಿತ್ತು.

ಕೆಲವೇ ಗಂಟೆಗಳ ನಂತರ ತಮ್ಮ ಸಾವಿರಾರು ಅಭಿಮಾನಿಗಳ ಮುಂದೆ ಪ್ರದರ್ಶನ ನೀಡುವ ಆಟಗಾರರು ರಾತ್ರಿಯೆಲ್ಲ ನಿದ್ರೆ ಇಲ್ಲದೆ ಕಳೆದರು. ಯಾರು ಯಾರು ಆಡುತ್ತಾರೆ, ಏನು ನಡೆಯುತ್ತಿದೆ ಎಂದು ಒಬ್ಬರಿಗೂ ತಿಳಿದಿರಲಿಲ್ಲ. ಕ್ಯಾಪ್ಟನ್ ರೂಮಿನಿಂದ ಜೋರು ಜೋರು ಮಾತುಕತೆ ಕೇಳುತ್ತಿದ್ದರೂ ಯಾವುದೂ ಸ್ಪಷ್ಟವಾಗಿರಲಿಲ್ಲ. ಆಟಗಾರರು ಸಮಯಕ್ಕೆ ಸರಿಯಾಗಿ ಪ್ರದರ್ಶನ ನೀಡುವ ಸರ್ಕಸ್ಸಿನ ಪ್ರಾಣಿಗಳೆಂದು ಕ್ರಿಕೆಟ್ ಬೋರ್ಡ್ ಅಧಿಕಾರಿಗಳು ತಿಳಿದಿರಲಿಕ್ಕೂ ಸಾಕು.

ಆ ಪಂದ್ಯದ ನಂತರ ವಿನೂ ಮಂಕಡ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಆಗ ಅವರಿಗೆ ೪೧ ವರ್ಷ. ಇನ್ನೂ ಎರಡು ದಶಕಗಳ ಕಾಲ ಬದುಕಿದ್ದ ಮಂಕಡ್, ಭಾರತದ ಕ್ರಿಕೆಟ್‌ಗೆ ಸಲ್ಲಿಸಿದ ಅಪಾರ ಸೇವೆಯ ಕುರುಹಾಗಿ ಕ್ರಿಕೆಟ್ ಆಡಳಿತದಲ್ಲಾಗಲೀ, ಆಯ್ಕೆದಾರರಾಗಿಯಾಗಲೀ ಸ್ಥಾನ ನೀಡಿ ಗೌರವಿಸಬಹುದಿತ್ತು. ಆದರೆ ನಿವೃತ್ತಿಯ ನಂತರ ಜನರಿಗೆ ಮಂಕಡ್ ಹೆಚ್ಚು ಕಡಿಮೆ ಮರತೇ ಹೋಗಿದ್ದರು – ಅವರು ಸಾಯುವವರೆಗೂ.

ಯುವಕರಿಗೆ ತರಬೇತಿ

ಆದರೆ ಇನ್ನೊಂದು ವಿಧದಿಂದ, ಮಂಕಡ್‌ಗೆ ‘‘ಯಾವುದೇ ಜವಾಬ್ದಾರಿ ಹೊರೆಸದಿದ್ದದ್ದು ಒಳ್ಳೆಯದೇ ಆಯಿತು. ಅವರು ನಿವೃತ್ತಿಯ ನಂತರ ತಮ್ಮ ಪೂರ್ಣ ಕಾಲವನ್ನು ಯುವಕರಿಗೆ ತರಬೇತಿ ನೀಡುವುದರಲ್ಲೇ ಕಳೆದರು. ತುಂಬ ಸೌಜನ್ಯದ ಸ್ವಭಾವದ ವಿನೂ ಮಂಕಡ್ ಅವರು, ಕಿರಿಯ ಆಟಗಾರರಿಗೆ ತಮ್ಮ ಕೌಶಲ ಮತ್ತು ಅನುಭವವನ್ನು ಧಾರೆ ಎರೆಯುವುದರಲ್ಲಿ ಸ್ವಲ್ಪವೂ ಹಿಂದೇಟು ಹಾಕುತ್ತಿರಲಿಲ್ಲ. ತರಬೇತಿ ನೀಡುತ್ತಿದ್ದ ಹುಡುಗರೊಂದಿಗೆ ಹುಡುಗರಾಗಿ ಬೆರೆಯುತ್ತಿದ್ದ ಮಂಕಡ್, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದಾದರೂ ವಿಷಯದಲ್ಲಿ ಚರ್ಚೆ ಆರಂಭಿಸುತ್ತಿದ್ದರು. ಆ ಚರ್ಚೆಯ ಮೂಲಕ ಅನೇಕ ಪ್ರಮುಖ ಆಟಗಾರರ ಪರಿಚಯ ಮಾಡಿಕೊಡುತ್ತಿದ್ದರಲ್ಲದೆ, ಆಟದ ಹಲವು ಸೂಕ್ಷ್ಮಗಳನ್ನು ತಿಳಿಸಿ ಕೊಡುತ್ತಿದ್ದರು.

ಕ್ರಿಕೆಟ್ ವಿದ್ಯಾರ್ಥಿಗಳಿಗೆ ಅಗತ್ಯವಾದ ಉದ್ದೀಪನ ನೀಡುವುದೇ ಅವರ ಉದ್ದೇಶವಾಗಿತ್ತು. ‘ಅವನಂತೆ ನಾನಾಗಬೇಕು’ ಎನ್ನುವ ಮಹಾತ್ವಾಕಾಂಕ್ಷೆಯ ಬೀಜವನ್ನು ಬಿತ್ತುತ್ತಿದ್ದರು. ಅವರಿಂದ ತರಬೇತಿ ಪಡೆದವರು ನೂರಾರು ಮಂದಿ. ಎಲ್ಲರಿಗೂ ಸಮಾನ ಅವಕಾಶ ನೀಡುತ್ತಿದ್ದರಾದರೂ ಪ್ರತಿಭಾವಂತರಿಗೆ ವಿಶೇಷ ಗಮನ ಕೊಡುವುದನ್ನು ಮರೆಯುತ್ತಿರಲಿಲ್ಲ. ಅವರಿಗೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡಿ, ಮುಂದೆ ಬರಲು ಹುರಿದುಂಬಿಸುತ್ತಿದ್ದರು. ಹೀಗೆ ಮಂಕಡರ ತರಬೇತಿ, ಬೆಂಬಲ, ಆಶೀರ್ವಾದಗಳಿಂದ ಪ್ರಸಿದ್ಧಿಗೆ ಬಂದವರಲ್ಲಿ ದಿಲೀಪ್ ಸರ್ದೇಸಾಯಿ, ರಾಮನಾಥ್ ಪಾರ್ಕರ್, ಸಲೀಮ್ ದುರಾನಿ, ಅಶೋಕ್ ಮಂಕಡ್, ಕೈಲಾಸ್ ಘಟ್ಟಾನಿ ಮತ್ತು ಮಾದವ ಆಪ್ಟೆ ಪ್ರಮುಖರು.

ಮಾಧವ ಆಪ್ಟೆ ಮುಂಬಯಿ ಎಲ್‌ಫಿನ್‌ಸ್ಟೋನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಆತನ ಪ್ರತಿಭೆಯನ್ನು ಮಂಕಡ್ ಗುರುತಿಸಿದ್ದರು. ಆತನಲ್ಲಿ ಆರಂಭ ಆಟಗಾರನಿಗೆ ಬೇಕಾದ ಲಕ್ಷಣಗಳನ್ನು ಕಂಡು, ವಿಶೇಷ ತರಬೇತಿ ನೀಡುತ್ತಿದ್ದರು. ಆದರೆ  ವೇಗದ ಬೌಲಿಂಗ್ ಎದುರಿಸುವಾಗ ಸ್ವಲ್ಪ ವಿಕೆಟ್ ಬಿಟ್ಟು ಆಡುವುದನ್ನು ಗಮನಿಸಿ ಎಚ್ಚರಿಸುತ್ತಿದ್ದರೂ, ಅವರ ಕಾಲುಗಳು ಸ್ವಾಭಾವಿಕವಾಗಿ ಹಿಂದೆ ಹೋಗುತ್ತಿದ್ದವು. ಆಗ ಮಂಕಡ್ ವಿಶೇಷ ತಂತ್ರವೊಂದನ್ನು ನಿರೂಪಿಸಿ, ಆಪ್ಟೆಯ ಕಾಲುಗಳು ಹಿಂದೆ ಸರಿಯದಂತೆ ಮಾಡಿದರು. ಕಾಲಾನುಕ್ರಮದಲ್ಲಿ ಮಾಧವ ಅಪ್ಟೆ ಅವರು ಭಾರತದ ಉತ್ತಮ ಆರಂಭ ಆಟಗಾರರಲ್ಲಿ ಒಬ್ಬರಾಗಿ, ವೆಸ್ಟ್ ಇಂಡೀಸ್‌ನ ಹೆಸರಾಂತ ವೇಗದ ಬೌಲರುಗಳನ್ನು ಲೀಲಾಜಾಲವಾಗಿ ಎದುರಿಸಿದರೆಂಬುದು ಮಂಕಡರ ತರಬೇತಿಗೆ ಸಲ್ಲುವ ಗೌರವ.

ತರಬೇತಿ ಶಿಬಿರದ ನಿರ್ದೇಶಕರು

ತಾವು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದಾಗಿನಿಂದಲೂ ಹಲವಾರು ಕಾಲೇಜು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಮಂಕಡರನ್ನು, ೧೯೭೦ ರ ದಶಕದಲ್ಲಿ  ಪಿ.ಜೆ. ಹಿಂದೂ ಜಮಖಾನದವರು ಥೇರ‍್ಸೆ ಅವರ ಸ್ಮರಣಾರ್ಥ ಆರಂಭಿಸಿದ ಪ್ರತಿಷ್ಠಿತ ತರಬೇತಿ ಶಿಬಿರದ ಮೇಲ್ವಿಚಾರಣೆ ವಹಿಸಲು ಕೇಳಿಕೊಳ್ಳಲಾಯಿತು. ಮಂಕಡ್‌ಗೆ ೫೫ ವರ್ಷ ಮೀರಿದ್ದರೂ ಉತ್ಸಾಹ, ಆಟದಲ್ಲಿ ನಿಷ್ಠೆ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.

ಶಿಬಿರಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಮಂಕಡ್ ಕೆಲವು ಷರತ್ತುಗಳನ್ನು ಹಾಕಿದರು. ಶ್ರೀಮಂತ ವರ್ಗದವರ ಯಾವುದೇ ರೀತಿಯ ಒತ್ತಡಗಳಿಗೂ ಸೊಪ್ಪು ಹಾಕದೆ, ಕೇವಲ ಅರ್ಹತೆ ಮೇಲೆ ಆಯ್ಕೆ ಮಾಡಿದರು. ಜಾತಿ, ಕುಲ, ಗೋತ್ರ, ಧನಬಲಗಳನ್ನು ಲೆಕ್ಕಿಸದೆ ಎಳೆಯ ಪ್ರತಿಭಾವಂತರಿಗೆ ಅವಕಾಶ ಮಾಡಿಕೊಟ್ಟರು.

ಶಿಸ್ತಿನ ಸಿಪಾಯಿಯಾಗಿದ್ದ ಮಂಕಡ್ ಶಿಬಿರದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬರುವಂತೆ ಆಗ್ರಹ ಪಡಿಸುತ್ತಿದ್ದರಲ್ಲದೆ, ಎಲ್ಲರಿಗಿಂತ ಮೊದಲು ತಾವೇ ಬರುತ್ತಿದ್ದರು. ಶುಭ್ರ ಬಿಳಿಯ ಬಟ್ಟೆ ಧರಿಸಿರಬೇಕೆಷ್ಟೇ ಅಲ್ಲ; ಬೂಟಿನ ಒಂದು ಮೊಳೆ ಬಿದ್ದು ಹೋಗಿದ್ದರೂ ಅವರು ಸಹಿಸುತ್ತಿರಲಿಲ್ಲ. ತರಬೇತಿ ಕಾಲದಲ್ಲಿ ಅವರು ಫೀಲ್ಡಿಂಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಕೇವಲ ಬ್ಯಾಟ್ಸ್‌ಮನ್ ಅಥವಾ ಬೌಲರ್ ಆಗಿದ್ದರೆ ಸಾಲದು, ಪ್ರತಿಯೊಬ್ಬನೂ ಒಳ್ಳೆಯ ಫೀಲ್ಡರ್ ಆಗಿರಬೇಕು ಎಂಬುದು ಮಂಕಡ್ ದೃಢವಾಗಿ ನಂಬಿದ್ದ ಸಿದ್ಧಾಂತ.

ಮಂಕಡ್ ತರಬೇತಿ ವಿಧಾನವೂ ಅನುಕರಣೀಯ ವಾಗಿತ್ತು. ಅವರು ಯಾವುದೇ ಆಟಗಾರನ ಸಹಜ ವೈಖರಿಯನ್ನು ಬದಲಿಸುತ್ತಿರಲಿಲ್ಲ. ಪ್ರತಿಯೊಬ್ಬನೂ ತನ್ನದೇ ಆದ ರೀತಿಯಲ್ಲಿ ಆಡಲು ಪ್ರೋತ್ಸಾಹಿಸುತ್ತಿದ್ದರು. ಅವರಿಗೆ ಕ್ರಿಕೆಟ್ ಆಡುವ ಯಂತ್ರಗಳನ್ನು ಸೃಷ್ಟಿಸುವುದು ಬೇಡವಾಗಿತ್ತು. ಆದ್ದರಿಂದ ತಪ್ಪುಗಳನ್ನಷ್ಟೇ ತಿದ್ದಿ ಸಹಜ ಬೆಳವಣಿಗೆಗೆ ಗಮನ ನೀಡುತ್ತಿದ್ದರು.

ವಿನೂ ಮಂಕಡ್ ಅಸಾಧಾರಣ ಕ್ರಿಕೆಟ್ ಕೋಚ್ ಆಗಿದ್ದರೆಂಬುದರಲ್ಲಿ ಸಂದೇಹವಿಲ್ಲ. ಆಟವನ್ನು ಆಡುವು ದಷ್ಟೇ ಅಲ್ಲ, ಅದನ್ನು ಹೇಳಿಕೊಡುವ ಕಲೆಯೂ ಅವರಿಗೆ ಚೆನ್ನಾಗಿ ಕರಗತವಾಗಿತ್ತು. ಬಹುಶಃ, ಅವರು ತಾವು ಕಲಿತ ವೆಂಸ್ಲೆ ಮತ್ತು ದುಲೀಪ್‌ಸಿನ್ಹಜಿ ಅವರಿಂದಲೇ ಈ ವಿದ್ಯೆಯನ್ನು ಅರಿತಿದ್ದರು. ಕ್ರೀಡಾಪ್ರಪಂಚಕ್ಕೆ ಆಟಗಾರನಾಗಿ ತಾವು ನೀಡಿದ ಪ್ರದರ್ಶನಕ್ಕಿಂತ ತರಬೇತಿದಾರನಾಗಿ ನೀಡಿದ ಕೊಡುಗೆಯೇ ಹೆಚ್ಚೆಂದು ಅವರು ಭಾವಿಸಿದ್ದುದರಲ್ಲಿ ಅಸಹಜವೇನಿಲ್ಲ.

ಜೊತೆಯವರಿಗೆ ನೆರವು

ಸಹ ಆಟಗಾರರಿಗೆ ತಮ್ಮ ಕೈಲಾದ ಸಹಾಯ ಮಾಡುವುದರಲ್ಲಿ ಮಂಕಡ್ ಎಂದೂ ಹಿಂದೇಟು ಹಾಕುತ್ತಿರಲಿಲ್ಲ. ಕಿರಿಯ, ಅನನುಭವಿ ಆಟಗಾರರಿಗೆ ಸಲಹೆ ನೀಡುವುದರಲ್ಲಿ, ಸೌಜನ್ಯ ತೋರುವುದರಲ್ಲಿ ಅವರ ದೊಡ್ಡತನ ವ್ಯಕ್ತವಾಗುತ್ತಿತ್ತು.

ಲ್ಯಾಂಕಷೈರ್ ಲೀಗಿನಲ್ಲಿ ರಿಪ್ಟನ್ ಕ್ಲಬ್ ಪರ ಆಡಲು ೧೯೫೨ರಲ್ಲಿ ಸೇರಿದ ರಂಗ ಸೊಹಾನಿಗೆ ಅಪರಿಚಿತ ವಾತಾವರಣದಲ್ಲಿ ಕಕ್ಕಾಬಿಕ್ಕಿಯಾಗಿತ್ತು. ಮಂಕಡ್ ಆಡುತ್ತಿದ್ದ ಹೆಸ್ಲಿಂಗ್‌ಡನ್ ತಂಡದ ಮೇಲೆ ಆಡಿದಾಗ, ಆರಂಭ ಆಟಗಾರನಾಗಿ ಬಂದ ಮಂಕಡ್, ಸೊಹಾನಿಯ ಬೌಲಿಂಗನ್ನು ಇಷ್ಟ ಬಂದಂತೆ ಬಾರಿಸಿ ಅರ್ಧ ಶತಕ ಗಳಿಸಿದರು. ಪಂದ್ಯದ ನಂತರ ಸೊಹಾನಿಯನ್ನು ಹತ್ತಿರ ಕೂಡಿಸಿಕೊಂಡು, ಇಂಗ್ಲಿಷ್ ಲೀಗಿನ ವಿವಿಧ ತೆರನ ಪಿಚ್‌ಗಳ ಮೇಲೆ ಹೇಗೆ ಬೌಲ್ ಮಾಡಬೇಕೆಂದು ತೋರಿಸಿಕೊಟ್ಟರು. ‘‘ರಂಗ, ನೋಡು, ಇಲ್ಲಿನ ಪಿಚ್‌ಗಳ ಮೇಲೆ ಜೋರಾಗಿ ಬೌಲ್ ಮಾಡಿ ದಣಿಯಬೇಕಾಗಿಲ್ಲ. ಮಿತವಾದ ವೇಗದಿಂದ ಮಾಡಿ, ಸ್ವಿಂಗ್‌ಗೆ ಹೆಚ್ಚು ಗಮನ ಕೊಡು. ಬ್ಯಾಟಿಂಗ್ ಮಾಡುವಾಗ ಆದಷ್ಟು ಬ್ಯಾಕ್‌ಫುಟ್ ನಲ್ಲಿ ಆಡುವುದನ್ನು ಅಭ್ಯಾಸ ಮಾಡು’’ ಎಂದು ಸಲಹೆ ನೀಡಿದರು.

ಅತಿಥಿ ಸತ್ಕಾರ

ಮಂಕಡ್ ದಂಪತಿಗಳು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಅದರಲ್ಲೂ ಭಾರತದಿಂದ ಹೋಗಿ ಒಬ್ಬಂಟಿಗರಾಗಿರು ವವರನ್ನು ಆದರದಿಂದ ತಮ್ಮ ಮನೆಗೆ ಊಟ- ಉಪಚಾರಕ್ಕೆ ಕರೆಯುತ್ತಿದ್ದರು. ಇಂಗ್ಲಿಷ್ ಕೌಂಟಿಯಲ್ಲಿ ಆಡುತ್ತಿದ್ದ ರಂಗ ಸೊಹಾನಿ, ಹೇಮು ಅಧಿಕಾರಿ, ವಿಜಯ ಹಜಾರೆ, ‘ಪಾಲಿ’ ಉಮ್ರೀಗರ್, ದತ್ತು ಫಡ್ಕರ್, ಗುಲ್ ಮೊಹಮದ್ ಇವರೆಲ್ಲ ಮಂಕಡ್ ಮನೆಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದ ಅತಿಥಿಗಳು.

ವೆಸ್ಟ್ ಇಂಡೀಸಿನ ಫ್ರಾಂಕ್ ವೊರೆಲ್, ಎವರ್ಟನ್ ವೀಕ್ಸ್ ಮತ್ತು ಸೋನಿ ರಾಮಧಿನ್ ಅವರೂ, ಆಸ್ಟ್ರೇಲಿ ಯಾದ ರೇ ಲಿಂಡ್‌ವಾಲ್, ಸೆಸಿಲ್ ಪೆಪ್ಪರ್ ಹಾಗೂ ಜಾಕ್ ಪೆಟ್ಟಿಫರ್ಡ್ ಅವರೂ, ಪಾಕಿಸ್ತಾನದ ಅಲೀ ಮುದ್ದೀನ್ ಅವರೂ ಮಂಕಡ್ ದಂಪತಿಗಳ ಆತಿಥ್ಯ ಸ್ವೀಕರಿಸುತ್ತಿದ್ದ ಗಣ್ಯರು. ಈ ವಿಶೇಷ ಸಂದರ್ಭಗಳಲ್ಲಿ ಮನೋರಮಾ ಅವರು ರುಚಿಕಟ್ಟಾದ ಅಚ್ಚ ಭಾರತೀಯ ಪದಾರ್ಥಗಳನ್ನು ತಯಾರಿಸಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದರು.

ಅಶೋಕ್, ರಾಹುಲ್ ಮತ್ತು ಅತುಲ್- ವಿನೂ ಮಂಕಡ್ ಕ್ರಿಕೆಟ್ ಪ್ರಪಂಚಕ್ಕೆ ಬಿಟ್ಟು ಹೋಗಿರುವ ಕೊಡುಗೆಗಳು. ಮೂರು ಮಕ್ಕಳೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರಾದರೂ, ಅಶೋಕ್ ಒಬ್ಬರೇ ಟೆಸ್ಟ್ ಆಟಗಾರ.

೧೯೭೮ ರ ಆಗಸ್ಟ್ ೨೧ ರಂದು ಮುಂಬೈನಲ್ಲಿ ನಿಧನರಾದ ವಿನೂ ಮಂಕಡ್, ಕಡೇ ಬಾರಿಗೆ ಕಣ್ಣಿಗೆ ಕಾಣದ ‘ಪೆವಿಲಿಯನ್’ ಗೆ ಹಿಂತಿರುಗಿದ್ದಾರೆ. ಅವರಂಥ ಪ್ರತಿಭಾನ್ವಿತ ಆಟಗಾರ ಹುಟ್ಟಿಬರುವುದು ಇನ್ನೆಂದಿಗೋ?