ಇದುವರೆಗು ಬಿತ್ತಿದ್ದು ಬೆಳೆಯಾಗಿ ತೆನೆದೂಗಲಿಲ್ಲ.
ಬೀಜವೆ ಐಬೊ, ನೆಲದಲ್ಲೆ ಹದವಿಲ್ಲವೋ
ಅಂತೂ ಬಿತ್ತಿದ್ದು ಕೆಳಗೆ ಬೇರೂರಿ, ಮೇಲಕ್ಕೆ
ಗಿಡವಾಗಿ ಪುಟಿದೇಳಲೇ ಇಲ್ಲ.
ಎದ್ದ ಒಂದೆರಡು ಸೆಣಕಲು ಕಡ್ಡಿ ಹುಳು ಹತ್ತಿ
ಹರುಕು ಬಾವುಟವೆತ್ತಿ ಅಲ್ಲಾಡುತಿವೆ.
ನಂದನವನ್ನೆ ಬೆಳೆದೇನೆಂದು ಅಗೆದೂ ಅಗೆದೂ
ಬರೀ ಕಲ್ಲು ಬಂಡೆಯ ನಡುವೆ ಇವನೂ ಒಂದು
ಕಲ್ಲಾಗಿ ಕೂತಿದ್ದಾನೆ.

ದಿನವೂ ಸಂಜೆಯಾದೊಡನೆಯೇ ನಕ್ಷತ್ರಗಳ
ಹೂ ಲಕ್ಷಾಂತರ. ದಿನ ನಿತ್ಯ ರಜತ
ಪುಷ್ಪೋದ್ಯಾನ ಪ್ರದರ್ಶನ. ಹದಿನೈದು
ದಿನಕ್ಕೊಮ್ಮೆ ಅಮಾವಾಸ್ಯೆಯಲ್ಲಿ ಸಣ್ಣಗೆ ಮೊಳೆತು.
ದಿನ ಕಳೆದ ಹಾಗೆ ಗೆರೆಯೇರಿ, ಮೈತುಂಬಿ
ಬಾನಿನ ತುಂಬ ನಗೆ ಚೆಲ್ಲುವುದು ತಿಂಗಳ ಬಿಂಬ.

ಮತ್ತೆ ಯಥಾಪ್ರಕಾರ ನಮೆಯುತ್ತ ನಮೆಯುತ್ತ
ಬಟ್ಟೆಗುಜ್ಜಿದ ಸಾಬೂನಿನಂತೆ ತೆಳ್ಳಗಾಗುತ್ತ
ಸವೆದು ಕಿರುಗೆರೆಯಾಗಿ, ಕತ್ತಲೆಯಲ್ಲಿ ಕೆಸರಲ್ಲಿ
ಬೀಳುವುದು ಚಂದ್ರನ ಬೀಜ – ಮತ್ತೆ
ಹದಿನೈದು ದಿನಕ್ಕೆ ಹಣ್ಣಾಗಿ ತುಂಬಿಕೊಳ್ಳುವ
ತನ್ನ ಸದರಿ ಕಾಯುತ್ತ.

ಆದರಿವನೊಳಗಿನವಕಾಶದಲ್ಲಿ ಬರೀ
ಕತ್ತಲೆಯ ಕೆಸರೋ ಕೆಸರು.
ಇವನು ಬಿತ್ತಿದ್ದು ಮೊಳೆಯುವುದಿಲ್ಲ
ಮೊಳೆದದ್ದು ಬೆಳೆಯುವುದಿಲ್ಲ
ಬೆಳೆದದ್ದು ಉಳಿಯುವುದಿಲ್ಲ.
ಹೀಗಾಗಿ ಈ ಇಲ್ಲಗಳ ಗೆದ್ದಲು ಹತ್ತಿ
ಎಲ್ಲೋ ಮುದುರಿ ಕೂತಿದ್ದಾನೆ
ನಿಟ್ಟುಸಿರ ಮಗ್ಗದ ಮೇಲೆ.
ಇವನೊಬ್ಬ ಏಕಾಂಗಿ ; ಎಂದೋ ಒಮ್ಮೆ
ಯೂಲಿಸಿಸ್ಸಿನ ಹಡಗನ್ನೇರಿ ದಿನ ಬೆಳಗು
ನೂರಾರು ಹೊಸ ಹೊಸಾ ವೈಚಿತ್ರ್ಯಗಳ ಕನಸ
ತುಂಬಿಕೊಂಡಿದ್ದವನು, ಹಡಗೊಡೆದು
ಮರದ ತುಂಡೊಂದನ್ನು ತಬ್ಬಿ, ಹೇಗೋ ತೇಲಿ
ಯಾವುದೋ ನಿರ್ಜನಾರಣ್ಯ ದ್ವೀಪದ ಮೇಲೆ
ಬಂದು ಬಿದ್ದಿದ್ದಾನೆ. ಇವನು ಏಕಾಂಗಿ :
ನಿಶೆಗೆ ನಕ್ಷತ್ರವಿವೆ ಸಹಸ್ರಾರು ; ಆದರೆ ಇವನ
ದುಃಖಧ್ವನಿಗೆ ಮಾತುಗಳಿಲ್ಲ. ಕಣ್ಣೆದುರು
ಚಾಚಿಕೊಂಡಿದೆ ಹೇಮಂತ ಸಂಧ್ಯೆ. ಕೊರೆವ
ಛಳಿಗಾಳಿ. ಒಂದೊಂದೇ ಎಲೆಯುದುರಿ ಬೀಳುವ
ಸದ್ದು ಸುತ್ತಲೂ. ಅಳಿದುಳಿದ ಬೆಳಕಿನೀ
ಬಂಗಾರಜಿಂಕೆಯ ಮೈಯ ನುಂಗುತ್ತ
ಸುತ್ತಿಕೊಳ್ಳುತ್ತಲಿದೆ ಈ ಹೆಬ್ಬಾವು ಕತ್ತಲು.